ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಸ್ಫೋಟ: ಇಬ್ಬರು ಸಾವು, ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಸ್ಥಳೀಯ ನಾಯಕ – Kannada News | Pakistan Explosion: 2 Dead in Khyber Pakhtunkhwa; Local Leader Escapes TTP Attack

ಇಸ್ಲಾಮಾಬಾದ್, ಜುಲೈ 26: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಪ್ರಬಲ ಸ್ಫೋಟ(Blast)ದಲ್ಲಿ ಕನಿಷ್ಠ ಇಬ್ಬರು ಸ್ಥಳೀಯರು ಮೃತಪಟ್ಟಿದ್ದಾರೆ. ಇನ್ನು ಈ ದಾಳಿಯ ವೇಳೆ ಸ್ಥಳೀಯ ನಾಯಕರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಜೌರ್ ಜಿಲ್ಲೆಯ ಸಲರ್ಜೈ ತಹಸಿಲ್‌ನಲ್ಲಿರುವ ‘ತಾಲಿ ಬ್ಯಾಂಡ್’ ಪ್ರದೇಶದ ಬಳಿ ಈ ಸ್ಫೋಟ ಸಂಭವಿಸಿದೆ. ಮೃತರನ್ನು ಸುಲೇಮಾನ್ ಖಾರಿ ಹಾಗೂ ಗುಲಾಮ್ ಎಂದು ಗುರುತಿಸಲಾಗಿದ್ದು, ಅವರ ಮೃತದೇಹಗಳನ್ನು ಹತ್ತಿರದ ಖಾರ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸ್ಫೋಟದ ತೀವ್ರತೆಗೆ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಭೀತಿ ಆವರಿಸಿದ್ದು, ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ತನಿಖೆ ಆರಂಭಿಸಿವೆ. ಇದುವರೆಗೆ ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಈ ಸ್ಫೋಟ ಸಂಭವಿಸುವ ಕೇವಲ ಎರಡು ದಿನಗಳಷ್ಟೇ ಮುಂಚಿತವಾಗಿ (ಜುಲೈ 24), ಇದೇ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ಭೀಕರ ಆತ್ಮಾಹುತಿ ದಾಳಿ ನಡೆದಿತ್ತು. ಸ್ಫೋಟಕ ತುಂಬಿದ ವಾಹನವನ್ನು ಭದ್ರತಾ ತಪಾಸಣಾ ಕೇಂದ್ರಕ್ಕೆ ಡಿಕ್ಕಿ ಹೊಡೆಸಿದ್ದರಿಂದ 12 ಸೈನಿಕರು, ಇಬ್ಬರು ಪೊಲೀಸರು ಹಾಗೂ ಓರ್ವ ಅಧಿಕಾರಿ ಸೇರಿ ಒಟ್ಟು 15 ಭದ್ರತಾ ಸಿಬ್ಬಂದಿ ಬಲಿಯಾಗಿದ್ದರು. ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬಜೌರ್ ಜಿಲ್ಲೆಯು ದಶಕಗಳಿಂದ ತಾಲಿಬಾನ್ ಮತ್ತು ಇತರೆ ಉಗ್ರಗಾಮಿ ಗುಂಪುಗಳ ತಾಣವಾಗಿದೆ. ಜುಲೈ 2023 ರಲ್ಲಿ ಇದೇ ಬಜೌರ್‌ನಲ್ಲಿ ರಾಜಕೀಯ ಸಮಾವೇಶವೊಂದರ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ನವೆಂಬರ್ 2022 ರಲ್ಲಿ ಪಾಕಿಸ್ತಾನ ಸರ್ಕಾರದೊಂದಿಗಿನ ಕದನ ವಿರಾಮ ಒಪ್ಪಂದವನ್ನು ರದ್ದುಗೊಳಿಸಿದ ನಂತರ, ನಿಷೇಧಿತ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (TTP) ಸಂಘಟನೆಯು ಭದ್ರತಾ ಪಡೆಗಳು ಹಾಗೂ ಸ್ಥಳೀಯ ನಾಯಕರನ್ನು ಗುರಿಯಾಗಿಸಿಕೊಂಡು ಸರಣಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ.

ಮತ್ತಷ್ಟು ಓದಿ: ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!: 8ಕ್ಕೂ ಹೆಚ್ಚು ಕಾರ್ಮಿಕರಿಗೆ ಗಂಭೀರ ಗಾಯ

ಪಾಕಿಸ್ತಾನ ಸರ್ಕಾರವು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಮೇಲೆ ವಾಗ್ದಾಳಿ ನಡೆಸುತ್ತಿದ್ದು, ಅಫ್ಘಾನ್ ಮಣ್ಣನ್ನು ಬಳಸಿಕೊಂಡು ಟಿಟಿಪಿ ಉಗ್ರರು ಪಾಕಿಸ್ತಾನದೊಳಗೆ ದಾಳಿಗಳನ್ನು ಸಂಘಟಿಸುತ್ತಿದ್ದಾರೆ ಎಂದು ಆರೋಪಿಸುತ್ತಿದೆ. ಆದರೆ ಈ ಆರೋಪಗಳನ್ನು ಕಾಬುಲ್ ಆಡಳಿತ ನಿರಾಕರಿಸುತ್ತಾ ಬಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮುಲ್ಲಾಗಳಿಗೆ ಎದೆ ಸೀಳಿದ್ರೆ 3 ಅಕ್ಷರ ಬರಲ್ಲ ಹೇಳಿಕೆ ಕೇಸ್: ಸಿಟಿ ರವಿ ನಿವಾಸಕ್ಕೆ ನೋಟಿಸ್​ ಅಂಟಿಸಿದ ಪೊಲೀಸ್ – Kannada News | Chikkamagakuru Police Notice to BJP MLC CT Ravi Over Derogatory remarks On Muslim

ಚಿಕ್ಕಮಗಳೂರು, (ಜುಲೈ 26): ಅವಹೇಳನಕಾರಿ ಹೇಳಿಕೆ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜುಲೈ 26) ಭಾನುವಾರ ಪೊಲೀಸರು, ಚಿಕ್ಕಮಗಳೂರಿನ (Chikkamagaluru) ಸಿಟಿ ರವಿ ಅವರ ಮನೆಗೆ ನೋಟಿಸ್ ನೀಡಲು ಬಂದ ವೇಳೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಚಿಕ್ಕಮಗಳೂರು ನಗರ ಠಾಣೆಯ ಇನ್ಸ್​ಪೆಕ್ಟರ್​ ಅಭಯ್ ಪ್ರಕಾಶ್ ಅವರು ಸಿಟಿ ರವಿ ಅವರಿಗೆ ನೋಟಿಸ್ ನೀಡಲು​ ಮುಂದಾಗಿದ್ದಾರೆ. ಆದ್ರೆ, ಸಿಟಿ ರವಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದು, ಬಳಿಕ 27 ರಂದು 11 ಗಂಟೆಗೆ ತನಿಖೆಗೆ ಬರುವಂತೆ ನೋಟಿಸ್​ ಅನ್ನು ಮನೆಯ ಗೋಡೆಗೆ ಅಂಟಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು, ನೋಟಿಸ್ ಕಿತ್ತೆಸೆದು ಪೊಲೀಸರಿಗೆ ಧಿಕ್ಕಾರ ಕೂಗಿದರು.

ಸಿ.ಟಿ. ರವಿ ಹೇಳಿದ್ದೇನು?

ಈ ವೇಳೆ ಪೊಲೀಸರ ಜತೆ ಮಾತನಾಡಿದ ಸಿ.ಟಿ. ರವಿ, ತಾವು ಮಾಡಿದ ಭಾಷಣದಲ್ಲಿ ಯಾವುದೇ ಸಮುದಾಯದ ವಿರುದ್ಧ ದ್ವೇಷ ಅಥವಾ ಅವಹೇಳನಕಾರಿ ಅಂಶಗಳಿಲ್ಲ. ನಾನು ಬೆಂಕಿ ಹಚ್ಚಲು ಬಂದ ವ್ಯಕ್ತಿಯ ಬಗ್ಗೆ ಮಾತನಾಡಿದ್ದೇನೆ. ಎಫ್‌ಐಆರ್‌ನಲ್ಲಿ ಮುಸ್ಲಿಂ ಸಮುದಾಯದ ಅವಹೇಳನ ಎಲ್ಲಿದೆ? ಎಂದು ಪ್ರಶ್ನಿಸಿದರು.

ಇದನ್ನೂ ನೋಡಿ: ಎದೆ ಸೀಳಿದರೆ ಮೂರು ಅಕ್ಷರ ಇಲ್ಲದ ಮುಲ್ಲಾಗಳಿಗೂ, ನೀಟ್ ಪರೀಕ್ಷೆಗೂ ಏನು ಸಂಬಂಧ?: ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ

ಯಾರೇ ದೂರು ನೀಡಿದರೂ ತಕ್ಷಣ ಎಫ್‌ಐಆರ್‌ ದಾಖಲಿಸಿ ಬಂಧನ ಮಾಡುತ್ತೀರಾ? ದೂರು ನೀಡಿದವರು ಯಾರು, ದೂರಿನ ಸ್ವರೂಪ ಏನು ಎಂಬುದನ್ನು ಪರಿಶೀಲಿಸಬೇಕಲ್ಲವೇ? ನನ್ನ ಭಾಷಣದಲ್ಲಿ ‘ಧರ್ಮ’ ಎಂಬ ಪದವೇ ಇಲ್ಲ. ‘ಮುಲ್ಲಾ’ ಎಂದರೆ ‘ಮುಸ್ಲಿಂ’ ಎಂಬ ಅರ್ಥವೇ? ಬೆಂಕಿ ಹಚ್ಚಲು ಬಂದ ವ್ಯಕ್ತಿಯನ್ನು ಉಲ್ಲೇಖಿಸಿ ಮಾತನಾಡಿದ್ದೇನೆ. ನಾಳೆಯೂ ಅದನ್ನೇ ಹೇಳುತ್ತೇನೆ ಎಂದರು.

ಕಾರ್ಯಕರ್ತರ ಪ್ರತಿಭಟನೆ, ಇನ್ಸ್‌ಪೆಕ್ಟರ್ ವಾಪಸ್

ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, “ನಾವು ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ದೂರು ನೀಡಿದ್ದೇವೆ. ಆ ಪ್ರಕರಣದಲ್ಲಿ ಎಷ್ಟು ಕ್ರಮ ಕೈಗೊಂಡಿದ್ದೀರಿ? ನಮ್ಮ ದೂರಿನ ಬಗ್ಗೆ ಏನು ಕ್ರಮವಾಗಿದೆ?” ಎಂದು ಪೊಲೀಸರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್, ನೋಟಿಸ್​ ನೀಡಲು ಬಂದಿದ್ದೇವೆ, ನಾವು ಬಂಧನ ಮಾಡಲು ಬಂದಿಲ್ಲ. ತನಿಖೆ ಮಾಡುತ್ತೇವೆ ಅಷ್ಟೇ ಎಂದರು. ಆದರೂ ಸುಮ್ಮನಾಗದ ಕಾರ್ಯಕರ್ತರು, ಪೊಲೀಸರನ್ನು ಸುತ್ತುವರೆದು ಪ್ರತಿಭಟನೆ ಮಾಡುತ್ತ ಧಿಕ್ಕಾರ ಕೂಗಿದ್ದಾರೆ. ಇದರಿಂದ ಕೋಪಗೊಂಡ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್, ಇಲ್ಲಿಯವರೆಗೆ ಯಾರು ಈ ತರಹ ಮಾಡಿಲ್ಲ. ಇದು ತಪ್ಪು. ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದೀರಿ ಎಂದು ಹೇಳಿ ಅಲ್ಲಿಂದ ತೆರಳಿದರು.

ಸಿಟಿ ರವಿ ವಿರುದ್ಧ ಎಫ್​​​ಐಆರ್

ದೇಶಾದ್ಯಂತ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ನಡೆದ ನೀಟ್ ಪತ್ರಿಕೆ ಸೋರಿಕೆ ಪ್ರತಿಭಟನೆಗಳ ಕುರಿತು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಚಿಕ್ಕಮಗಳೂರು ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ.  ಜಮಿಯಾ ಸಮಿತಿ ಅಧ್ಯಕ್ಷ ಮುದಾಸಿರ್ ಪಾಷ ನೀಡಿದ್ದ ದೂರಿನ ಮೇರೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:19 pm, Sun, 26 July 26

Source link

ಸಿನಿಮಾ ಆಗಲಿದೆ ರಜನೀಕಾಂತ್ ಅವರ ಜೀವನ ಕತೆ – Kannada News | Rajinikanth planning to make movie on his own life

ರಜನೀಕಾಂತ್ (Rajinikanth), ಭಾರತದ ಅತಿ ದೊಡ್ಡ ಸೂಪರ್ ಸ್ಟಾರ್. ಕಳೆದ 40 ವರ್ಷಗಳಿಂದಲೂ ಅವರು ಸೂಪರ್ ಸ್ಟಾರ್ ಪಟ್ಟದಲ್ಲಿದ್ದಾರೆ. ಅವರ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬೆಂಗಳೂರಿನ ಗಲ್ಲಿಯೊಂದರಲ್ಲಿ ಹುಟ್ಟಿ ವಿಶ್ವವೇ ಗುರುತಿಸುವ ಸೂಪರ್ ಸ್ಟಾರ್ ಆಗಿ ಬೆಳೆದವರು ರಜನೀಕಾಂತ್. ನಟ ರಜನೀಕಾಂತ್ ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಜೊತೆಗೆ ತಮ್ಮ ಜೀವನದ ಕತೆಯನ್ನು ಪುಸ್ತಕ ರೂಪಕ್ಕೆ ಇಳಿಸುತ್ತಿದ್ದಾರೆ. ರಜನೀಕಾಂತ್ ಅವರು ಕಳೆದ ಕೆಲ ವರ್ಷಗಳಿಂದ ತಮ್ಮ ಆಟೋ ಬಯೋಗ್ರಫಿ ಬರೆಯುತ್ತಿದ್ದಾರೆ. ಇದೀಗ ಅದನ್ನು ಸಿನಿಮಾ ಮಾಡುವ ಯೋಜನೆಯನ್ನೂ ಮಾಡಿದ್ದಾರೆ.

ಜೀವನದಲ್ಲಿ ಹಲವಾರು ಏಳು-ಬೀಳು. ಅವಮಾನ, ಬಹುಮಾನ, ಪ್ರೀತಿ-ದ್ವೇಷ ಎಲ್ಲವನ್ನೂ ಕಂಡಿರುವ ನಟ ರಜನೀಕಾಂತ್ ಇದೀಗ ಅದೆಲ್ಲವನ್ನೂ ದಾಖಲಿಸಲು ಮುಂದಾಗಿದ್ದಾರೆ. ರಜನೀಕಾಂತ್ ಅವರು ತಮ್ಮ ಜೀವನದ ಕತೆಯನ್ನು ಅಕ್ಷರ ರೂಪಕ್ಕೆ ಇಳಿಸುತ್ತಿದ್ದಾರೆ. ರಜನೀಕಾಂತ್ ಅವರ ಆಟೊಬಯೋಗ್ರಫಿ ಬಹುತೇಕ ಅಂತಿಮ ಹಂತದಲ್ಲಿದೆ. ಆದರೆ ಇದೀಗ ರಜನೀಕಾಂತ್ ಅವರಿಗೆ ಹೊಸ ಐಡಿಯಾ ಬಂದಿದ್ದು, ಇದೇ ಕತೆಯನ್ನು ಸಿನಿಮಾ ಸಹ ಮಾಡಲು ಮುಂದಾಗಿದ್ದಾರೆ.

ಈಗಾಗಲೇ ಹಲವು ಸಿನಿಮಾ ನಟ, ನಟಿಯರ ಜೀವನ ಸಿನಿಮಾ ಆಗಿದೆ. ಎನ್​​ಟಿಆರ್ ಸೇರಿದಂತೆ ಹಲವು ಮಹಾನ್ ನಟರುಗಳ ಕತೆಗಳು ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿವೆ. ಆದರೆ ರಜನೀಕಾಂತ್ ಅವರು ತಮ್ಮದೇ ಜೀವನದ ಕತೆಯನ್ನು ಖುದ್ದು ತಾವೇ ನಿರ್ಮಿಸಲು ಮುಂದಾಗಿದ್ದು, ಈ ಕುರಿತು ಚರ್ಚೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ವರ್ಷಾಂತ್ಯದ ವೇಳೆಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ:ಚುನಾವಣೆ ಗೆದ್ದರು ಸಿಎಂ ಆಗುತ್ತಿರಲಿಲ್ಲ ರಜನೀಕಾಂತ್, ಯೋಜನೆ ಏನಾಗಿತ್ತು?

ರಜನಿಕಾಂತ್ ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಜನೀಕಾಂತ್ ನಟನೆಯ ‘ಜೈಲರ್ 2’ ಕೆಲವೇ ವಾರಗಳಲ್ಲಿ ಬಿಡುಗಡೆ ಆಗಲಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಎಸ್‌ಜೆ ಸೂರ್ಯ, ಸೂರಜ್ ವೆಂಜಾರಮೂಡು ಮತ್ತು ವಿದ್ಯಾ ಬಾಲನ್ ಕೂಡ ನಟಿಸುತ್ತಿದ್ದಾರೆ. ರಮ್ಯಾ ಕೃಷ್ಣನ್, ಮಿರ್ನಾ ಮತ್ತು ಯೋಗಿ ಬಾಬು ಅವರು ಮೊದಲ ಭಾಗದಲ್ಲಿದ್ದ ತಮ್ಮ ಪಾತ್ರಗಳನ್ನೇ ಮುಂದುವರಿಸಲಿದ್ದಾರೆ. ಶಿವರಾಜ್ ಕುಮಾರ್, ಹೃತಿಕ್ ರೋಷನ್, ಮೋಹನ್​​ಲಾಲ್, ವಿಜಯ್ ಸೇತುಪತಿ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಜೈಲರ್ 2’ ನಂತರ, ರಜನೀಕಾಂತ್ ಅವರು ‘ಧರ್ಮನ್’ ಚಿತ್ರದಲ್ಲಿ ನಟಿಸಲಿದ್ದಾರೆ. ಅಶ್ವತ್ ಮಾರಿಮುತ್ತು ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಜನಿಕಾಂತ್ ವೈದ್ಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಕಮಲ್ ಹಾಸನ್ ಸಹ-ನಿರ್ಮಾಣ ಮಾಡುತ್ತಿರುವ ಈ ಪ್ರಾಜೆಕ್ಟ್‌ನಲ್ಲಿ ಸಿಮ್ರನ್, ರಾಶಿ ಖನ್ನಾ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾಗಳ ಬಳಿಕ ಕಮಲ್ ಹಾಸನ್ ಮತ್ತು ರಜನೀಕಾಂತ್ ಒಟ್ಟಿಗೆ ಒಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಆ ಸಿನಿಮಾವನ್ನು ನೆಲ್ಸನ್ ದಿಲೀಪ್ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೇಕೆದಾಟು ಯೋಜನೆಗೆ ವಿರೋಧ: ಅತ್ತಿಬೆಲೆ ಗಡಿಯಲ್ಲಿ ಖಾಲಿ ಕೊಡ ಚಳವಳಿ; ತಮಿಳುನಾಡು ವಾಹನಗಳಿಗೆ ನಿರ್ಬಂಧ – Kannada News | Opposition to Mekedatu Project: Empty Pot Protest at Attibele Border; Restrictions on Tamil Nadu Vehicles

ಆನೇಕಲ್​, ಜುಲೈ 26: ಮೇಕೆದಾಟು ಕುಡಿಯುವ ನೀರಿನ ಯೋಜನೆ (Mekedatu project) ಜಾರಿಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ, ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಹೆದ್ದಾರಿ ತಡೆ ಬೃಹತ್ ಖಾಲಿ ಕೊಡ ಚಳವಳಿ (Empty Pot protest) ಮಾಡಲಾಯಿತು.

ರಾಜಕೀಯ ದುರುದ್ದೇಶದ ವಿರುದ್ಧ ಆಕ್ರೋಶ

ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಜಲಾಶಯಗಳು ಖಾಲಿಯಾಗಿವೆ. ಬೆಂಗಳೂರು ನಗರ ಸೇರಿದಂತೆ ಹಲವೆಡೆ ಕುಡಿಯುವ ನೀರಿಗೆ ಅಭಾವ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡು ಸರ್ಕಾರ ರಾಜಕೀಯ ದುರುದ್ದೇಶದಿಂದ ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾವೇರಿ ಜಲ ವಿವಾದ: ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ; ಜುಲೈ 22ರಂದು CWMA ಮೀಟಿಂಗ್​

ಇನ್ನು ಪ್ರತಿಭಟನೆ ವೇಳೆ ಹೊಸೂರು ಹೆದ್ದಾರಿಯಲ್ಲಿ ಕುಳಿತು ರಸ್ತೆ ತಡೆಯಲು ಮತ್ತು ವಾಹನಗಳನ್ನು ತಡೆಯಲು ಹೋರಾಟಗಾರರು ಮುಂದಾದರು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಿದ ಅತ್ತಿಬೆಲೆ ಪೊಲೀಸರು, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವ ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದುಕೊಂಡು ಹೋದರು.

ತಮಿಳುನಾಡು ಸಾರಿಗೆ ಬಸ್‌ಗಳ ಸಂಚಾರ ನಿರ್ಬಂಧ

ಇನ್ನು ಅತ್ತಿಬೆಲೆ ಗಡಿಯಲ್ಲಿ ಚಳವಳಿ ತೀವ್ರಗೊಂಡ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹೊಸೂರಿನಿಂದ ಕರ್ನಾಟಕಕ್ಕೆ ಆಗಮಿಸುವ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹಾಗೂ ವಾಹನಗಳ ಸಂಚಾರವನ್ನು ಹೊಸೂರು ಪೊಲೀಸರು ಬೆಳಗಿನಿಂದಲೇ ನಿರ್ಬಂಧಿಸಿದ್ದರು. ಪ್ರತಿಭಟನೆ ಮುಕ್ತಾಯಗೊಂಡು ಪರಿಸ್ಥಿತಿ ತಿಳಿಯಾದ ಬಳಿಕ ವಾಹನಗಳ ಸಂಚಾರ ಎಂದಿನಂತೆ ಪುನರಾರಂಭಗೊಂಡಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

NEET UG 2026: ಲಕ್ಷಕ್ಕೂ ಹೆಚ್ಚು MBBS ಸೀಟುಗಳು; ಇಲ್ಲಿದೆ ಕೌನ್ಸೆಲಿಂಗ್ ಪ್ರಕ್ರಿಯೆ ಮತ್ತು ಟಾಪ್ 10 ವೈದ್ಯಕೀಯ ಕಾಲೇಜುಗಳ ಮಾಹಿತಿ! – Kannada News | NEET UG Counseling 2026: MCC Dates, 1.36 Lakh+ MBBS Seats and Top Colleges List

ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ವೈದ್ಯರಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು NEET UG ಪರೀಕ್ಷೆಯನ್ನು ಬರೆದಿದ್ದಾರೆ. ಪರೀಕ್ಷೆ ಮುಗಿದ ತಕ್ಷಣವೇ ಅಭ್ಯರ್ಥಿಗಳ ಗಮನವು ಈಗ ವೈದ್ಯಕೀಯ ಸಮಾಲೋಚನಾ ಸಮಿತಿ (MCC) ನಡೆಸುವ ಕೌನ್ಸೆಲಿಂಗ್ ಪ್ರಕ್ರಿಯೆಯತ್ತ ನೆಟ್ಟಿದೆ. ಈ ಕೌನ್ಸೆಲಿಂಗ್ ಮೂಲಕ ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ದೊರೆಯಲಿದ್ದು, ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆ ಮತ್ತು ಲಭ್ಯವಿರುವ ಸೀಟುಗಳ ಸ್ಪಷ್ಟ ಚಿತ್ರಣವನ್ನು ಹೊಂದಿರುವುದು ಅಗತ್ಯವಾಗಿದೆ.

1.36 ಲಕ್ಷಕ್ಕೂ ಹೆಚ್ಚು MBBS ಸೀಟುಗಳಿಗೆ ತೀವ್ರ ಸ್ಪರ್ಧೆ:

2026-27ನೇ ಶೈಕ್ಷಣಿಕ ವರ್ಷಕ್ಕೆ ದೇಶದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಬೃಹತ್ ಪ್ರಮಾಣದ ಸೀಟುಗಳು ಲಭ್ಯವಿವೆ. ಪ್ರಸ್ತುತ ದೇಶಾದ್ಯಂತ ಇರುವ 823 ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 1,36,000ಕ್ಕೂ ಹೆಚ್ಚು MBBS ಸೀಟುಗಳನ್ನು ಭರ್ತಿ ಮಾಡಲಾಗುತ್ತಿದೆ. ಇವುಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 63,296 ಸೀಟುಗಳಿದ್ದರೆ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 73,643 ಸೀಟುಗಳು ಲಭ್ಯವಿವೆ. ಇದರ ಜೊತೆಗೆ, 319 ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 27,868 BDS ಸೀಟುಗಳಿಗೂ ಕೌನ್ಸೆಲಿಂಗ್ ನಡೆಯಲಿದೆ. ಪ್ರತಿ ವರ್ಷ 20 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುವುದರಿಂದ, ಈ ಸೀಟು ಗಿಟ್ಟಿಸಿಕೊಳ್ಳಲು ತೀವ್ರ ಪೈಪೋಟಿ ಏರ್ಪಡುತ್ತದೆ.

MCC ಕೌನ್ಸೆಲಿಂಗ್ ಮತ್ತು ಪ್ರವೇಶದ ವ್ಯಾಪ್ತಿ:

ವೈದ್ಯಕೀಯ ಸಮಾಲೋಚನಾ ಸಮಿತಿಯು (MCC) ಶೀಘ್ರದಲ್ಲೇ ತನ್ನ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಈ ಕೌನ್ಸೆಲಿಂಗ್ ಪ್ರಕ್ರಿಯೆಯು ದೇಶದಾದ್ಯಂತ ಇರುವ ಸರ್ಕಾರಿ ಕಾಲೇಜುಗಳ ಶೇಕಡಾ 15 ರಷ್ಟು ಅಖಿಲ ಭಾರತ ಕೋಟಾ (AIQ) ಸೀಟುಗಳಿಗೆ ಅನ್ವಯಿಸುತ್ತದೆ. ಇದಲ್ಲದೆ, ದೆಹಲಿಯ AIIMS, BHU (ಬನಾರಸ್ Hindu ವಿಶ್ವವಿದ್ಯಾಲಯ), JIPMER, ಮತ್ತು AMU ನಂತಹ ದೇಶದ ಅತ್ಯಂತ ಪ್ರಮುಖ ಕೇಂದ್ರೀಯ ಸಂಸ್ಥೆಗಳ ಶೇಕಡಾ 100 ರಷ್ಟು ಸೀಟುಗಳ ಭರ್ತಿಯು ಈ ಎಂಸಿಸಿ ಕೌನ್ಸೆಲಿಂಗ್ ಮೂಲವೇ ನಡೆಯುತ್ತದೆ.

ದೇಶದ ಟಾಪ್ 10 ವೈದ್ಯಕೀಯ ಕಾಲೇಜುಗಳು:

ಇತ್ತೀಚೆಗೆ ಬಿಡುಗಡೆಯಾದ NIRF 2026 ಶ್ರೇಯಾಂಕದ ಪ್ರಕಾರ, ನವದೆಹಲಿಯ AIIMS ಸಂಸ್ಥೆಯು ಮತ್ತೊಮ್ಮೆ ದೇಶದ ಅತ್ಯುತ್ತಮ ವೈದ್ಯಕೀಯ ಸಂಸ್ಥೆಯಾಗಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಲಕ್ಷಾಂತರ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಬಯಸುವ ದೇಶದ ಟಾಪ್ 10 ವೈದ್ಯಕೀಯ ಸಂಸ್ಥೆಗಳ ಪಟ್ಟಿ ಇಲ್ಲಿದೆ:

  • AIIMS, ನವದೆಹಲಿ (ಪ್ರಥಮ ಸ್ಥಾನ)
  • PGIMER, ಚಂಡೀಗಢ
  • ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು (CMC), ವೆಲ್ಲೂರು (ತಮಿಳುನಾಡು)
  • JIPMER, ಪುದುಚೇರಿ
  • ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ (SGPGIMS), ಲಕ್ನೋ
  • ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU), ವಾರಣಾಸಿ
  • ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS), ಬೆಂಗಳೂರು
  • ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (KGMU), ಲಕ್ನೋ
  • ಅಮೃತ ವಿಶ್ವ ವಿದ್ಯಾಪೀಠಂ, ಕೊಯಮತ್ತೂರು
  • ಕಸ್ತೂರ್ಬಾ ವೈದ್ಯಕೀಯ ಕಾಲೇಜು (KMC), ಮಣಿಪಾಲ

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳುವುದು ಹೇಗೆ?

NEET UG ಫಲಿತಾಂಶ ಪ್ರಕಟವಾದ ನಂತರ ಪ್ರವೇಶ ಪ್ರಕ್ರಿಯೆಯು ಹಂತ-ಹಂತವಾಗಿ ನಡೆಯುತ್ತದೆ. ಮೊದಲಿಗೆ, ಅರ್ಹ ಅಭ್ಯರ್ಥಿಗಳು ಎಂಸಿಸಿ (MCC) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮುಗಿದ ನಂತರ, ತಮ್ಮ ರ್ಯಾಂಕ್‌ಗೆ ಅನುಗುಣವಾಗಿ ಆದ್ಯತೆಯ ಕಾಲೇಜುಗಳು ಮತ್ತು ಕೋರ್ಸ್‌ಗಳನ್ನು ಆಯ್ಕೆ (Choice Filling) ಮಾಡಬೇಕಾಗುತ್ತದೆ.

ಅಭ್ಯರ್ಥಿಗಳ ಮೇರಿಟ್ ಮತ್ತು ಆದ್ಯತೆಗಳ ಆಧಾರದ ಮೇಲೆ ಸೀಟು ಹಂಚಿಕೆ (Seat Allotment) ಮಾಡಲಾಗುತ್ತದೆ. ಸೀಟು ಲಭ್ಯವಾದ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆಯಾ ವೈದ್ಯಕೀಯ ಕಾಲೇಜಿಗೆ ಖುದ್ದಾಗಿ ವರದಿ ಮಾಡಬೇಕು. ಅಲ್ಲಿ ಮೂಲ ದಾಖಲೆಗಳ ಪರಿಶೀಲನೆ (Document Verification) ನಡೆಸಿ, ಅಗತ್ಯವಿರುವ ಕೋರ್ಸ್ ಶುಲ್ಕವನ್ನು ಪಾವತಿಸುವ ಮೂಲಕ ತಮ್ಮ ಪ್ರವೇಶವನ್ನು ಅಂತಿಮಗೊಳಿಸಬಹುದು.

ಮುಖ್ಯ ಸೂಚನೆ: ಸಮಾಲೋಚನಾ ಪ್ರಕ್ರಿಯೆಯಲ್ಲಿ ಯಾವುದೇ ಪ್ರಮುಖ ದಿನಾಂಕಗಳು ಮತ್ತು ನವೀಕರಣಗಳನ್ನು ತಪ್ಪಿಸಿಕೊಳ್ಳದಿರಲು ವಿದ್ಯಾರ್ಥಿಗಳು ಹಾಗೂ ಪೋಷಕರು ನಿಯಮಿತವಾಗಿ ಎಂಸಿಸಿಯ ಅಧಿಕೃತ ವೆಬ್‌ಸೈಟ್ ಅನ್ನು ವೀಕ್ಷಿಸಲು ಸಲಹೆ ನೀಡಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ಖಡಕ್ ಸಲಹೆ ಸೂಚನೆಗಳನ್ನ ನೀಡಿದ ಪ್ರಲ್ಹಾದ ಜೋಶಿ – Kannada News | Pralhad Joshi Holds First Education Ministry Review Meeting After Taking Charge

ನವದೆಹಲಿ, (ಜುಲೈ 26): ಕೇಂದ್ರ ನೂತನ ಶಿಕ್ಷಣ ಸಚಿವರಾಗಿ ಬಿಜೆಪಿ ಹಿರಿಯ ನಾಯಕ ಪ್ರಲ್ಹಾದ ಜೋಶಿ (Pralhad Joshi) ನವದೆಹಲಿಯ ಕರ್ತವ್ಯ ಭವನದಲ್ಲಿ ಇಂದು (ಜುಲೈ 26) ಸರಳವಾಗಿ ಅಧಿಕಾರ ಸ್ವೀಕರಿಸಿದರು.   ಬಳಿಕ ಶಿಕ್ಷಣ ಸಚಿವಾಲಯದ (Education Ministry) ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಇಲಾಖೆಗೆ ಸಂಬಂಧಪಟ್ಟಂತೆ ಸಹಜ ಚರ್ಚೆ ನಡೆಸಿದರು. ಈ ವೇಳೆ ಇತ್ತೀಚಿನ ಬೆಳವಣಿಗೆಗಳ ಕುರಿತೂ ಗಹನ ಚರ್ಚೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷದ ಸಮರ್ಥ ಆಡಳಿತ ಹಾಗೂ ಧರ್ಮೇಂದ್ರ ಪ್ರಧಾನ್ ಅವರ ಸಾರಥ್ಯದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ದೇಶಾದ್ಯಂತ ಶೈಕ್ಷಣಿಕ ಸುಧಾರಣೆಗೆ ಹೊಸ ಶಿಕ್ಷಣ ನೀತಿಯಡಿ ಕ್ರಾಂತಿಕಾರಿ ಹೆಜ್ಜೆ ಇರಿಸಲಾಗಿದೆ. ಮುಂದೆಯೂ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಒತ್ತು ನೀಡಿ, ಪಾರದರ್ಶಕವಾಗಿ ಮತ್ತಷ್ಟು ವೇಗದ ಹೆಜ್ಜೆಯಿಡೋಣವೆಂದು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.

ಇದನ್ನೂ ಓದಿ: ಆಗಸ್ಟ್​ 30ರಂದು ಪಿಜಿ ನೀಟ್ ಪರೀಕ್ಷೆ: ನೂತನ ಸಚಿವ ಪ್ರಲ್ಹಾದ್ ಜೋಶಿ ಮುಂದಿರುವ ಹೊಸ ಸವಾಲುಗಳು

ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ವಿಶ್ವಾಸವಿರಿಸಿ ಶಿಕ್ಷಣ ಇಲಾಖೆ ಹೆಚ್ಚುವರಿ ಜವಾಬ್ದಾರಿ ವಹಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದಗಳು ಎಂದ ಜೋಶಿ, ಇದೇ ವೇಳೆ ಸಚಿವಾಲಯದ ಉನ್ನತ ಅಧಿಕಾರಿಗಳ ಸಹಕಾರ ಕೋರಿದರು.

ಪ್ರಶ್ನೆ ಪತ್ರಿಕೆ ಲಿಕ್ ವಿರುದ್ಧ ಕಠಿಣ ಕ್ರಮ

ಪ್ರಸ್ತುತ ಎದುರಾಗಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಪ್ರಧಾನಿ ಅವರು ಫಾಸ್ಟ್ ಟ್ರ್ಯಾಕ್ ಕೋರ್ಟ್, 10 ವರ್ಷ ಸಜೆ, ಕೋಟ್ಯಂತರ ರೂಪಾಯಿ ದಂಡದಂಥ ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

ದೇಶದ ಶೈಕ್ಷಣಿಕ ವ್ಯವಸ್ಥೆ ಸುಧಾರಣೆ, ಸುರಕ್ಷತೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆಯತ್ತ ನಿಗಾ ವಹಿಸೋಣ ಮತ್ತು ಯಾವುದೇ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಕಟ್ಟೆಚ್ಚರ ವಹಿಸಬೇಕು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತ್ವರಿತ ಫಲಿತಾಂಶ ಪ್ರಕಟಣೆ, ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಕೇಂದ್ರದ ಶಿಕ್ಷಣ ರಾಜ್ಯ ಸಚಿವರಾದ ಜಯಂತ್ ಚೌಧರಿ ಮತ್ತು ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇದು ಪ್ರಾಮಾಣಿಕತೆ… ರಿವ್ಯೂ ಪಡೆದು ವಿಕೆಟ್ ಒಪ್ಪಿಸಿದ ಸ್ಯಾಂಟ್ನರ್! – Kannada News | Mitchell Santner Hilariously Asks Umpire To Check His Own Run Out

ಕ್ರಿಕೆಟ್ ಜಗತ್ತಿನಲ್ಲಿ ಕ್ರೀಡಾ ಸ್ಫೂರ್ತಿಗೆ ನ್ಯೂಝಿಲೆಂಡ್ ಆಟಗಾರರು ಯಾವಾಗಲೂ ಹೆಸರುವಾಸಿ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ, ನ್ಯೂಝಿಲೆಂಡ್‌ನ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ತಮ್ಮ ಅತಿಯಾದ ಪ್ರಾಮಾಣಿಕತೆಯಿಂದಾಗಿ ತಾವೇ ರನ್ ಔಟ್ ಆಗಿ ಹೊರನಡೆದ ಅಪರೂಪದ ಘಟನೆ ನಡೆದಿದೆ. ‘ದಿ ಹಂಡ್ರೆಡ್ 2026′ ಟೂರ್ನಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಈಗ ಜಾಗತಿಕವಾಗಿ ಭಾರಿ ವೈರಲ್ ಆಗಿದೆ.

ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ಮತ್ತು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡಗಳ ನಡುವೆ ಎಡ್ಜ್‌ಬಾಸ್ಟನ್‌ನಲ್ಲಿ ಪಂದ್ಯ ನಡೆಯುತ್ತಿತ್ತು. ಟ್ರೆಂಟ್ ರಾಕೆಟ್ಸ್ ಪರ ಬ್ಯಾಟಿಂಗ್ ಮಾಡುತ್ತಿದ್ದ ಮಿಚೆಲ್ ಸ್ಯಾಂಟ್ನರ್, ಎರಡನೇ ರನ್ ಪೂರ್ಣಗೊಳಿಸಲು ಡೈವ್ ಮಾಡಿದರು.

ಇತ್ತ ಫೀಲ್ಡಿಂಗ್ ತಂಡವು ರನೌಟ್​ಗೆ ಮನವಿ ಮಾಡಿರಲಿಲ್ಲ. ಹೀಗಾಗಿ ಆನ್‌ಫೀಲ್ಡ್ ಅಂಪೈರ್‌ಗಳು ಮೂರನೇ ಅಂಪೈರ್ ಪರಿಶೀಲನೆಗೆ ಮನವಿ ಮಾಡದೆ ಸುಮ್ಮನಿದ್ದರು.

ಈ ವೇಳೆ ಅಂಪೈರ್ ಬಳಿ ಹೋದ ಸ್ಯಾಂಟ್ನರ್, “ಒಮ್ಮೆ ಟಿವಿ ರಿಪ್ಲೇ ಪರಿಶೀಲಿಸಿ” ಎಂದು ಸ್ವತಃ ಕೇಳಿಕೊಂಡರು. ಅವರ ಮನವಿಯಂತೆ ಅಂಪೈರ್ ತೃತೀಯ ಅಂಪೈರ್ ಸಹಾಯ ಪಡೆದಾಗ, ಸ್ಯಾಂಟ್ನರ್ ಬ್ಯಾಟ್ ಕ್ರೀಸ್ ತಲುಪದೇ ಇರುವುದು ಸ್ಪಷ್ಟವಾಗಿ ಕಂಡುಬಂದಿತು. ಇದರ ಪರಿಣಾಮವಾಗಿ ಅವರು ಕೇವಲ 7 ರನ್‌ಗಳಿಗೆ ಔಟ್ ಎಂದು ಘೋಷಿಸಲ್ಪಟ್ಟರು.

ಕಮೆಂಟೇಟರ್‌ಗಳ ಹಾಸ್ಯಭರಿತ ಪ್ರತಿಕ್ರಿಯೆ:

ಸ್ಯಾಂಟ್ನರ್ ಅವರ ಈ ವಿಲಕ್ಷಣ ಮತ್ತು ಪ್ರಾಮಾಣಿಕ ನಡವಳಿಕೆಯನ್ನು ಕಂಡು ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಮಾಜಿ ಆಟಗಾರರು ಆಶ್ಚರ್ಯಚಕಿತರಾದರು.

  • ಸೈಮನ್ ಡೌಲ್ (ನ್ಯೂಝಿಲೆಂಡ್ ಮಾಜಿ ವೇಗಿ): “ಕಿವೀಸರು (ನ್ಯೂಝಿಲೆಂಡ್​ನವರು) ತುಂಬ ಒಳ್ಳೆಯವರು! ಅವರು ಅಲ್ಲಿ ಏನು ಯೋಚಿಸುತ್ತಿದ್ದರು ಎಂಬುದು ನನಗೆ ತಿಳಿಯುತ್ತಿಲ್ಲ. ಅವರು ಸುಮ್ಮನೆ ಇರಬೇಕಾಗಿತ್ತು!” ಎಂದು ನಗುತ್ತಾ ಹೇಳಿದರು.
  • ರವಿಶಾಸ್ತ್ರಿ (ಭಾರತದ ಮಾಜಿ ಕೋಚ್): “ನೀವು ಇದನ್ನು ನಂಬುತ್ತೀರಾ? ಬ್ಯಾಟರ್ ತಾನೇ ರಿವ್ಯೂ ಕೇಳಿ, ತನ್ನ ವಿಕೆಟ್ ಅನ್ನು ತಾನೇ ಕೈಚೆಲ್ಲಿದರು!” ಎಂದು ಉದ್ಗರಿಸಿದರು

ಪಂದ್ಯದ ಫಲಿತಾಂಶ:

ಈ ಪಂದ್ಯದಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ನೀಡಿದ್ದ 214 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸ್ಯಾಂಟ್ನರ್ ಅವರ ‘ಟ್ರೆಂಡ್ ರಾಕೆಟ್ಸ್’ ತಂಡ, ಅಂತಿಮವಾಗಿ 10 ರನ್‌ಗಳ ರೋಚಕ ಸೋಲು ಅನುಭವಿಸಿತು.

ಇದನ್ನೂ ಓದಿ: ಸ್ಕ್ವಾಷ್ ಚಾಂಪಿಯನ್‌ಶಿಪ್​ನಲ್ಲಿ ಹೊಸ ಇತಿಹಾಸ ಬರೆದ ಅನಾಹತ್ ಸಿಂಗ್

ಸ್ಯಾಂಟ್ನರ್ ಅವರ ಈ ಪ್ರಾಮಾಣಿಕ ನಡೆಗೆ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಇವರ ಕ್ರೀಡಾ ಮನೋಭಾವವನ್ನು ಕೊಂಡಾಡುತ್ತಿದ್ದಾರೆ.

Source link

ಆಂಧ್ರಪ್ರದೇಶದಲ್ಲೂ ‘ಡಿಎಸ್‌ಸಿ’ ಪರೀಕ್ಷೆ ಅಕ್ರಮದ ಕಾವು: ಶಿಕ್ಷಣ ಸಚಿವ ನಾರಾ ಲೋಕೇಶ್ ರಾಜೀನಾಮೆಗೆ ಜಗನ್ ಒತ್ತಾಯ – Kannada News | AP DSC Scam: Lokesh Resignation Demanded Amidst Teacher Recruitment Irregularities

ಅಮರಾವತಿ, ಜುಲೈ 26: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಅವರು ನೀಟ್ ಅಕ್ರಮದ ಹೊಣೆ ಹೊತ್ತು ರಾಜೀನಾಮೆ ನೀಡಿದ ಬೆನ್ನಲ್ಲೇ, ಆಂಧ್ರಪ್ರದೇಶದಲ್ಲೂ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ರಾಜಕೀಯ ಕಾವೇರಿದೆ. ‘ಮೆಗಾ ಡಿಎಸ್‌ಸಿ-2025’ (Mega DSC-2025) ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (YSRCP), ರಾಜ್ಯ ಶಿಕ್ಷಣ ಸಚಿವ ನಾರಾ ಲೋಕೇಶ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ.

ಜಗನ್ ಮೋಹನ್ ರೆಡ್ಡಿ ಸರ್ಕಾರಕ್ಕೆ ಸವಾಲು
ಕೇಂದ್ರದ ಉದಾಹರಣೆಯನ್ನು ಉಲ್ಲೇಖಿಸಿ ಮಾತನಾಡಿರುವ ವೈಎಸ್‌ಆರ್‌ಸಿಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ, “ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ ಎನ್‌ಡಿಎ ಸರ್ಕಾರದಲ್ಲಿ ರಾಜಕೀಯ ಹೊಣೆಗಾರಿಕೆಗೆ ಹೊಸ ಮಾನದಂಡ ಸೃಷ್ಟಿಸಿದ್ದಾರೆ. ಹಾಗಿದ್ದಾಗ, 3.5 ಲಕ್ಷ ಅಭ್ಯರ್ಥಿಗಳ ಭವಿಷ್ಯದ ಜೊತೆ ಆಟವಾಡಿದ ಡಿಎಸ್‌ಸಿ ಅಕ್ರಮದ ಹೊಣೆ ಹೊತ್ತು ಆಂಧ್ರ ಶಿಕ್ಷಣ ಸಚಿವ ನಾರಾ ಲೋಕೇಶ್ ರಾಜೀನಾಮೆ ನೀಡುತ್ತಾರೆಯೇ? ಅಥವಾ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಮಗನನ್ನು ರಕ್ಷಿಸುತ್ತಾರೆಯೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ವೈಎಸ್‌ಆರ್‌ಸಿಪಿ ಪ್ರಮುಖ ಆರೋಪಗಳು

ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಮತ್ತು ಪರೀಕ್ಷೆ ನಡೆಸುವುದು ಎರಡನ್ನೂ ಒಂದೇ ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಅಲ್ಲದೆ, ರಹಸ್ಯ ಪತ್ರಿಕೆ ಅಪ್‌ಲೋಡ್ ಮಾಡುವ ಹೊರಗುತ್ತಿಗೆ ಸಿಬ್ಬಂದಿ ಮತ್ತು ಅವರ ಆಪ್ತರೇ ಪರೀಕ್ಷೆಯಲ್ಲಿ ಉನ್ನತ ರ‍್ಯಾಂಕ್ ಪಡೆದಿದ್ದಾರೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಹೀಗಾಗಿ ಹೈಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ (CBI) ತನಿಖೆ ನಡೆಯಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ಮತ್ತಷ್ಟು ಓದಿ: ನೀಟ್ ಪತ್ರಿಕೆ ಸೋರಿಕೆ : ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ದೇಶ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯೇ ನಮಗೆ ಮುಖ್ಯ ಎಂದ ಅಮಿತ್ ಶಾ

ಲೋಕೇಶ್ ಅವರ ರಾಜೀನಾಮೆ, ಸಿಬಿಐ ತನಿಖೆ ಹಾಗೂ ನಿರುದ್ಯೋಗ ಭತ್ಯೆ ಬಿಡುಗಡೆಗೆ ಒತ್ತಾಯಿಸಿ ಜುಲೈ 28 ರಂದು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ YSRCP ಘೋಷಿಸಿದೆ.

ವೈಎಸ್‌ಆರ್‌ಸಿಪಿ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಮೆಗಾ ಡಿಎಸ್‌ಸಿ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ನಡೆಸಲಾಗಿದೆ ಎಂದು ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜ್ ಬಿ. ಶೆಟ್ಟಿ ಹೋದಲ್ಲೆಲ್ಲ ‘ಕರಾವಳಿ’ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ; ವಿಡಿಯೋ ನೋಡಿ – Kannada News | Raj B Shetty starrer Karavali movie team shares glimpse of audience response

ಕಂಬಳದ ಕಥೆ ಹೊಂದಿರುವ ‘ಕರಾವಳಿ’ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ (Raj B Shetty) ಅವರು ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿರುವ ಈ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹಲವು ಚಿತ್ರಮಂದಿರಗಳಿಗೆ ಚಿತ್ರತಂಡ ಭೇಟಿ ನೀಡುತ್ತಿದೆ. ರಾಜ್ ಬಿ. ಶೆಟ್ಟಿ ಅವರು ಹೋದಲ್ಲೆಲ್ಲ ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. 2ನೇ ದಿನ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ತಿಳಿಸಲು ‘ಕರಾವಳಿ’ ಚಿತ್ರತಂಡ ಈ ವಿಡಿಯೋವನ್ನು ಹಂಚಿಕೊಂಡಿದೆ. ಸಿನಿಮಾ ಹೇಗಿದೆ ಎಂಬ ವಿಮರ್ಶೆಯನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಗುರುದತ್ ಗಾಣಿಗ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕರಾವಳಿ ಭಾಗದ ಕಥೆಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ವೀಕೆಂಡ್​ನಲ್ಲಿ ಹಲವು ಕಡೆಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ದಂಪತಿ ಮೇಲೆ ಹಲ್ಲೆ: ವೈದ್ಯನ ಬಂಧನ – Kannada News | Bengaluru Doctor Arrested for Assaulting Bangladeshi Couple in Bellandur

ಬೆಂಗಳೂರು, ಜುಲೈ 26: ಬೆಳ್ಳಂದೂರಿನಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ದಂಪತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸ್ಥಳೀಯ ವೈದ್ಯರೊಬ್ಬರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಸಾಯಿ ಕ್ಲಿನಿಕ್‌ನ ಡಾ. ನಾಗೇಂದ್ರ ಬಂಧಿತ ವೈದ್ಯ. ವೈಟ್ ಫೀಲ್ಡ್ ಸಮೀಪದ ಬೆಟ್ಟದಾಸಪುರದಲ್ಲಿ ವಾಸವಾಗಿರುವ ಬಾಂಗ್ಲಾದೇಶ ಮೂಲದ ನಸ್ರೀನಾ ಬಿಲಾಲ್ (23) ಎಂಬ ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ನಡೆದಿದ್ದೇನು?

ನಸ್ರೀನಾ ಬಿಲಾಲ್ ಹಾಗೂ ಅವರ ಪತಿ ಮಹಮ್ಮದ್ ಬಿಲಾಲ್ (ಚಾಲಕ) ಅವರು ಬಾಂಗ್ಲಾದೇಶದ ನಿವಾಸಿಗಳು ಎಂಬ ಕಾರಣಕ್ಕೆ ಡಾ. ನಾಗೇಂದ್ರ ಅವರು ದಂಪತಿಯ ಪೌರತ್ವವನ್ನು ಪ್ರಶ್ನಿಸಿ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ವೈದ್ಯ ನಾಗೇಂದ್ರ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಆಧಾರದ ಮೇಲೆ ಬೆಳ್ಳಂದೂರು ಪೊಲೀಸರು ಡಾ. ನಾಗೇಂದ್ರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಅಧಿಕಾರಿಗಳು ಹೇಳಿದ್ದೇನು?

ಸಂತ್ರಸ್ತರು ಬಾಂಗ್ಲಾದೇಶಿ ಮೂಲದವರಾಗಿದ್ದು, ಪ್ರದೇಶದಲ್ಲಿ ಅಕ್ರಮ ವಲಸಿಗರು ಹೆಚ್ಚಾಗಿದ್ದಾರೆಂಬ ಭಾವೋದ್ವೇಗದಿಂದ ವೈದ್ಯರು ಈ ರೀತಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. “ದಂಪತಿ ಬಾಂಗ್ಲಾದೇಶದವರಾಗಿದ್ದರೂ ಅವರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ, ವೈದ್ಯರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಬದಲು ನಮಗೆ ಮಾಹಿತಿ ನೀಡಬೇಕಿತ್ತು” ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ದಂಪತಿಯ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version