ವಸತಿ ಶಾಲೆಯ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ ಭೇದಿ, ಆಸ್ಪತ್ರೆಗೆ ದಾಖಲು! – Kannada News | Food Poisoning Hits Tirthahalli Residential School; Over 50 Students Hospitalised

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ನ್ಯಾಷನಲ್ ರೆಸಿಡೆನ್ಸಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ ಸುಮಾರು 50ರಿಂದ 70 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ವಸತಿ ಶಾಲೆಯಲ್ಲಿ ರಾತ್ರಿ ಅವಲಕ್ಕಿ ಹಾಗೂ ದಾಲ್ ಚಪಾತಿ ತಿಂದಿದ್ದ ವಿದ್ಯಾರ್ಥಿಗಳಲ್ಲಿ ದಿಢೀರ್ ವಾಂತಿ-ಭೇದಿ ಕಾಣಿಸಿಕೊಂಡು ಆರೋಗ್ಯ ಏರುಪೇರಾಗಿತ್ತು. ತಕ್ಷಣವೇ ಅಸ್ವಸ್ಥ ಮಕ್ಕಳನ್ನು ಕೋಣಂದೂರು ಸರ್ಕಾರಿ ಆಸ್ಪತ್ರೆ ಹಾಗೂ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಈ ಪೈಕಿ ತೀವ್ರ ಅಸ್ವಸ್ಥಗೊಂಡಿದ್ದ 11 ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಿಂದ ಪೋಷಕರು ತೀವ್ರ ಆತಂಕಗೊಂಡಿದ್ದು, ವಸತಿ ಶಾಲೆಯ ನೈರ್ಮಲ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಹಂತ ಹಂತವಾಗಿ ಕೆಲವು ವಿದ್ಯಾರ್ಥಿಗಳು ಗುಣಮುಖರಾಗುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Apply Now: ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ; 56 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Shivamogga District Court Peon Recruitment 2026: Apply Online for 56 Vacancies

ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯು ತನ್ನ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ 56 ಜವಾನ (Peon) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆ (ಅಧಿಸೂಚನೆ ಸಂಖ್ಯೆ: ADM.DJS.16342/2026) ಪ್ರಕಾರ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಹುದ್ದೆಯ ವಿವರಗಳು ಮತ್ತು ಅರ್ಜಿ ಸಲ್ಲಿಕೆ ಮಾಹಿತಿ:

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕಾಗಿದೆ. ಅರ್ಜಿಗಳನ್ನು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ shivamogga.dcourts.gov.in/notice-category/recruitments/ ನಲ್ಲಿ ನೀಡಲಾದ ಲಿಂಕ್ ಮೂಲಕ ಸಲ್ಲಿಸಬಹುದು.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ದಿನಾಂಕ ಜುಲೈ 23 ರಿಂದ ಪ್ರಾರಂಭವಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್​​​ 24 ರ ರಾತ್ರಿ 11:59 ರವರೆಗೆ ಸಲ್ಲಿಸಲು ಅವಕಾಶವಿರುತ್ತದೆ. ಕೊನೆಯ ದಿನಾಂಕದ ನಂತರ ಬರುವ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲವಾದ್ದರಿಂದ ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ತಾಯಿಯ ಸ್ಮಾರಕ ನಿರ್ಮಿಸಬೇಕೆಂದು ಹಣ ಕೇಳಿ ಮಹಿಳೆಗೆ 2.3 ಲಕ್ಷ ರೂ. ವಂಚಿಸಿದ ‘ನಕಲಿ ಡಿಆರ್‌ಡಿಒ’ ಅಧಿಕಾರಿ! – Kannada News | Fake DRDO Officer Dupes Bengaluru Woman of Rs 2.3 Lakh

ಬೆಂಗಳೂರು, ಜುಲೈ 25: “ನನ್ನ ತಾಯಿಯ ನೆನಪಿನಲ್ಲಿ ಸ್ಮಾರಕ ಕಟ್ಟಿಸಬೇಕು, ಅದಕ್ಕೆ ಹಣದ ಅಭಾವವಿದೆ” ಎಂದು ಸುಳ್ಳು ಹೇಳಿ, ತಾನು ಡಿಆರ್‌ಡಿಒ (DRDO) ಹಿರಿಯ ಅಧಿಕಾರಿ ಎಂದು ನಂಬಿಸಿ ಮಹಿಳೆಯೊಬ್ಬರಿಗೆ 2.3 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣ ಹಾಗೂ ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ ಮೂಲಕ ಮಹಿಳೆಯ ಪರಿಚಯ ಮಾಡಿಕೊಂಡಿದ್ದ ಆರೋಪಿ, ತಾನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (DRDO) ಉನ್ನತ ಹುದ್ದೆಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದ.

ಸ್ಮಾರಕದ ಹೆಸರಲ್ಲಿ ವಂಚನೆ

ಪರಿಚಯ ಬೆಳೆದಂತೆ ಮಹಿಳೆಯ ವಿಶ್ವಾಸ ಗಿಟ್ಟಿಸಿಕೊಂಡ ವಂಚಕ, ತಾಯಿಯ ಅಗಲಿಕೆಯ ಬಗ್ಗೆ ಭಾವುಕವಾಗಿ ಮಾತನಾಡಿ ಅನುಕಂಪ ಗಿಟ್ಟಿಸಿಕೊಂಡಿದ್ದಾನೆ. “ತಾಯಿಯ ಸವಿನೆನಪಿನಲ್ಲಿ ಬೃಹತ್ ಸ್ಮಾರಕ ಒಂದನ್ನು ನಿರ್ಮಿಸುತ್ತಿದ್ದು, ಸದ್ಯಕ್ಕೆ ತುರ್ತಾಗಿ ಹಣದ ಅಗತ್ಯವಿದೆ. ಕೆಲಸ ಮುಗಿದ ತಕ್ಷಣ ಹಣ ಹಿಂತಿರುಗಿಸುತ್ತೇನೆ” ಎಂದು ನಂಬಿಸಿದ್ದಾನೆ. ಆತನ ಮಾತುಗಳನ್ನು ನಿಜವೆಂದು ನಂಬಿದ ಸಂತ್ರಸ್ತ ಮಹಿಳೆ, ಹಂತ ಹಂತವಾಗಿ ಒಟ್ಟು 2.30 ಲಕ್ಷ ರೂಪಾಯಿಗಳನ್ನು ಆತನ ಖಾತೆಗೆ ವರ್ಗಾಯಿಸಿದ್ದಾರೆ.

ಹಣ ಪಡೆದ ಬಳಿಕ ಮುಖವಾಡ ಬಯಲು!

ಹಣ ಕೈಸೇರಿದ ನಂತರ ಆರೋಪಿ ಮೊಬೈಲ್ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದಾನೆ. ಅನುಮಾನಗೊಂಡು ಆತನ ಹಿನ್ನೆಲೆ ವಿಚಾರಿಸಿದಾಗ ಆತ ಡಿಆರ್‌ಡಿಒ ಅಧಿಕಾರಿಯೂ ಅಲ್ಲ, ಹೇಳಿದ್ದೆಲ್ಲವೂ ಸುಳ್ಳು ಎಂಬ ಕಹಿ ಸತ್ಯ ಮಹಿಳೆಗೆ ಅರಿವಾಗಿದೆ.

ಇದನ್ನೂ ಓದಿ ಬೆಂಗಳೂರಲ್ಲಿ ಗೂಂಡಾ ಕಾಯ್ದೆಯಡಿ ರೌಡಿ ಶೀಟರ್ ವಿಘ್ನೇಶ್ ಬಂಧನ

ತಾನು ವಂಚನೆಗೊಳಗಾಗಿರುವುದನ್ನು ಅರಿತ ಸಂತ್ರಸ್ತೆ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಸುಳಿವು ಪತ್ತೆಹಚ್ಚಲು ಸೈಬರ್ ಕ್ರೈಮ್ ವಿಭಾಗದ ನೆರವಿನೊಂದಿಗೆ ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿದಿನ 12 ಓವರ್​ಗಳು: ಪ್ಲಾಸ್ಟಿಕ್​ ಬಾಲ್​ನಲ್ಲಿ ಪಾಂಡ್ಯ ಮಾಸ್ಟರ್ ಪ್ಲ್ಯಾನ್! – Kannada News | Hardik Pandya’s High Tech Reboot: Plastic Ball Drills & 12 Over Spells at CoE

ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಕ್ರಿಕೆಟ್ ಬದುಕನ್ನು ಮುಂದಿನ 5-6 ವರ್ಷಗಳ ಕಾಲ ವಿಸ್ತರಿಸುವ ಮಹತ್ತರ ಗುರಿಯೊಂದಿಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಕಠಿಣ ತರಬೇತಿ ಆರಂಭಿಸಿದ್ದಾರೆ. ಇದಕ್ಕಾಗಿ ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಪಾಂಡ್ಯ ಅವರು ಪ್ರತಿದಿನ ಬರೋಬ್ಬರಿ 12 ಓವರ್​ಗಳನ್ನು ಬೌಲಿಂಗ್ ಮಾಡುತ್ತಿದ್ದಾರೆ. ಇದರ ಜೊತೆ ಬ್ಯಾಟಿಂಗ್ ಸುಧಾರಣೆಗಾಗಿ ವಿಭಿನ್ನವಾದ ‘ಪ್ಲಾಸ್ಟಿಕ್ ಬಾಲ್’ ತಂತ್ರವನ್ನು ಬಳಸುತ್ತಿದ್ದಾರೆ.

ಪ್ಲಾಸ್ಟಿಕ್ ಬಾಲ್ ಮತ್ತು ಕಾಂಕ್ರೀಟ್ ಪಿಚ್:

ಹಾರ್ದಿಕ್ ಪಾಂಡ್ಯ ಸದ್ಯ ಬೆಂಗಳೂರಿನ CoE ನಲ್ಲಿ ಕಾಂಕ್ರೀಟ್ ಮತ್ತು ಟೈಲ್ಸ್ ಹಾಸಿದ ಮೇಲ್ಮೈಗಳ ಮೇಲೆ ಪ್ಲಾಸ್ಟಿಕ್ ಬಾಲ್‌ಗಳನ್ನು ಬಳಸಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಪ್ಲಾಸ್ಟಿಕ್ ಚೆಂಡುಗಳು ಕಾಂಕ್ರೀಟ್ ಮೇಲೆ ಬಿದ್ದಾಗ ಅತಿ ವೇಗವಾಗಿ ಮತ್ತು ಅನಿರೀಕ್ಷಿತವಾಗಿ ಬೌನ್ಸ್ ಆಗುತ್ತವೆ. ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸುವಾಗ ತಮ್ಮ ರಿಫ್ಲೆಕ್ಸ್‌ಗಳನ್ನು ಚುರುಕುಗೊಳಿಸಲು ಮತ್ತು ಬ್ಯಾಟಿಂಗ್ ತಂತ್ರವನ್ನು ಉತ್ತಮಪಡಿಸಿಕೊಳ್ಳಲು ಅವರು ಈ ವಿಶೇಷ ಹೈ-ಟೆಕ್ ಡ್ರಿಲ್ಸ್ ಮಾಡುತ್ತಿದ್ದಾರೆ.

ಪ್ರತಿ ದಿನ 12 ಓವರ್​ಗಳು:

ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಹಾರ್ದಿಕ್ ಪಾಂಡ್ಯ ತಮ್ಮ ಫಿಟ್‌ನೆಸ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಪ್ರತಿದಿನ ತಡಸಂಜೆ 12 ಓವರ್‌ಗಳವರೆಗೆ ಬೌಲಿಂಗ್ ಮಾಡುತ್ತಿದ್ದಾರೆ. ಸುದೀರ್ಘ ಸ್ಪೆಲ್‌ಗಳಲ್ಲಿ ಬೌಲಿಂಗ್ ಮಾಡುವುದರಿಂದ ಅವರ ಸಾಮರ್ಥ್ಯ  ಹೆಚ್ಚಲಿದ್ದು, ಈ ಮೂಲಕ ಏಕದಿನ ಪಂದ್ಯಗಳಲ್ಲಿ ಪೂರ್ಣ 10 ಓವರ್​ಗಳನ್ನು ಎಸೆಯಲು ಸಿದ್ಧತೆಗಳನ್ನು ಶುರು ಮಾಡಿದ್ದಾರೆ.

ಬೆಂಗಳೂರಿನಲ್ಲೇ ಖಾಯಂ ವಾಸ್ತವ್ಯ:

ತಮ್ಮ ತರಬೇತಿಗೆ ಯಾವುದೇ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ 32 ವರ್ಷದ ಹಾರ್ದಿಕ್ ಪಾಂಡ್ಯ, ಬೆಂಗಳೂರಿನ ಹೊರವಲಯದಲ್ಲಿರುವ CoE ಫೆಸಿಲಿಟಿ ಸಮೀಪವೇ ಬಾಡಿಗೆ ಮನೆ ಪಡೆದು ವಾಸ್ತವ್ಯ ಹೂಡಿದ್ದಾರೆ. ಈ ಮೂಲಕ ಬಿಸಿಸಿಐನ ನೂತನ ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ತಮ್ಮ ಖಾಯಂ ತರಬೇತಿ ಕೇಂದ್ರವನ್ನಾಗಿ ಮಾಡಿಕೊಂಡ ಮೊದಲ ಪ್ರಮುಖ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಾಂಡ್ಯ ಮುಂದಿದೆ ಮಹಾ ಗುರಿ:

ಹಾರ್ದಿಕ್ ಪಾಂಡ್ಯ ಈಗಾಗಲೇ ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಇದಾಗ್ಯೂ ಏಕದಿನ ವಿಶ್ವಕಪ್ ಎಂಬುದು ಅವರ ಬಹುದೊಡ್ಡ ಕನಸು. ಈ ಕನಸನ್ನು ನನಸು ಮಾಡಿಕೊಳ್ಳಲು ಸಿದ್ಧತೆಗಳನ್ನು ಶುರು ಮಾಡಿದ್ದಾರೆ. ಅಂದರೆ 2027ರ ಏಕದಿನ ವಿಶ್ವಕಪ್ ಹಾಗೂ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ಅವರ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಪದಕದ ಖಾತೆ ತೆರೆದ ಝಂಡು ಕುಮಾರ್

ಒಟ್ಟಾರೆಯಾಗಿ ಹೇಳುವುದಾದರೆ ಹಾರ್ದಿಕ್ ಪಾಂಡ್ಯ ಅವರ ಈ ವಿನೂತನ ಪ್ಲಾಸ್ಟಿಕ್ ಬಾಲ್ ತರಬೇತಿ ಮತ್ತು ಕಠಿಣ ವರ್ಕ್‌ಲೋಡ್, ಅವರ ಮುಂಬರುವ ದೀರ್ಘಾವಧಿಯ ಕ್ರಿಕೆಟ್ ಜರ್ನಿಗೆ ಭದ್ರ ಬುನಾದಿಯಾಗಿದೆ. ಗಾಯದ ಸವಾಲುಗಳನ್ನು ಬದಿಗಿಟ್ಟು, ಫಿಟ್‌ನೆಸ್ ಹಾಗೂ ಬ್ಯಾಟಿಂಗ್ ತಂತ್ರವನ್ನು ಸುಧಾರಿಸಿಕೊಳ್ಳಲು ಅವರು ನಡೆಸುತ್ತಿರುವ ಈ ಪರಿಶ್ರಮ ಮುಂಬರುವ ವಿಶ್ವಕಪ್ ಮತ್ತು ಒಲಿಂಪಿಕ್ಸ್‌ನಲ್ಲಿ ಟೀಮ್ ಇಂಡಿಯಾ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.

Published On – 1:40 pm, Sat, 25 July 26

Source link

ಸರ್ಕಾರಿ ಶಾಲೆಗಳನ್ನು ಕಾರ್ಪೊರೇಟ್‌ಗಳಿಗೆ ದತ್ತು ನೀಡಲು ಸರ್ಕಾರದ ನಿರ್ಧಾರ: ಶಿಕ್ಷಣ ತಜ್ಞರು, ಪೋಷಕರಿಂದ ವ್ಯಾಪಕ ವಿರೋಧ – Kannada News | Karnataka Government Schools Privatization Sparks Outcry: Experts and Parents Demand Reversal

ಬೆಂಗಳೂರು, ಜು.25: ರಾಜ್ಯದ ಸರ್ಕಾರಿ ಶಾಲೆಗಳನ್ನು (Karnataka government schools) ಕಾರ್ಪೊರೇಟ್ ಕಂಪನಿಗಳು ಹಾಗೂ ಖಾಸಗಿ ಶಾಲೆಗಳಿಗೆ ದತ್ತು ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಶಿಕ್ಷಣ ತಜ್ಞರು, ಚಿಂತಕರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ಪೋಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಖಾಸಗಿ ಶಾಲೆಗಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಬೇಕು ಎಂದು ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ಈಗ ರಾಜ್ಯಾದ್ಯಂತ ಭಾರಿ ಚರ್ಚೆಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದ ಈ ನಡೆಯನ್ನು ಖಂಡಿಸಿ ಶಿಕ್ಷಣ ತಜ್ಞರು, ಚಿಂತಕರು ಹಾಗೂ ವಿದ್ಯಾರ್ಥಿ ಒಕ್ಕೂಟಗಳು ತುರ್ತು ಸಭೆ ನಡೆಸಿ ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಲಾಭಕ್ಕಾಗಿ ಶಿಕ್ಷಣವನ್ನು ಮಾರಾಟ ಮಾಡುತ್ತಿರುವ ಖಾಸಗಿ ಸಂಸ್ಥೆಗಳಿಗೆ ಸರ್ಕಾರಿ ಶಾಲೆಗಳನ್ನು ಹಸ್ತಾಂತರಿಸುವುದು ಸಾರ್ವಜನಿಕ ಶಿಕ್ಷಣದ ಮೂಲ ಆಶಯಕ್ಕೇ ವಿರುದ್ಧವಾಗಿದೆ. ಇದು ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಲಾಭಕೋರ ಕಂಪನಿಗಳಿಗೆ ವಹಿಸುವ ಹುನ್ನಾರ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಕಟುವಾಗಿ ಖಂಡಿಸಿದೆ.

ಜನರ ತೆರಿಗೆ ಹಣದಿಂದ ನಡೆಯುವ ಸರ್ಕಾರಿ ಶಾಲೆಗಳನ್ನು ಸರ್ಕಾರವೇ ಅಭಿವೃದ್ಧಿಪಡಿಸಬೇಕು. ಅದಕ್ಕಾಗಿ ಮುಂಬರುವ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕೇ ಹೊರತು, ಖಾಸಗಿಯವರ ಕೈಗೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನೆಲಮಂಗಲದಲ್ಲಿ 8ನೇ ಶತಮಾನದ ಅಪರೂಪದ ‘ಹುಲಿ ವೀರಗಲ್ಲು’ ಶಾಸನ ಪತ್ತೆ

“ಸರ್ಕಾರಕ್ಕೆ ಶಾಲೆ ನಡೆಸಲು ಕಷ್ಟವೇ?”: ಪೋಷಕರ ಪ್ರಶ್ನೆ

ಸರ್ಕಾರಿ ಶಾಲೆಗಳನ್ನು ದತ್ತು ನೀಡುವ ಯೋಜನೆಗೆ ಪೋಷಕರ ವಲಯದಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ. “ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಹಾಗೂ ಅರ್ಹ ಶಿಕ್ಷಕರಿದ್ದಾರೆ. ಹೀಗಿರುವಾಗ ಸರ್ಕಾರಕ್ಕೆ ಶಾಲೆಗಳನ್ನು ನಡೆಸಲು ಕಷ್ಟವೇ? ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ, ಗುಣಮಟ್ಟ ಹೆಚ್ಚಿಸುವ ಕೆಲಸವನ್ನು ಸರ್ಕಾರವೇ ಮಾಡಬೇಕು. ಯಾವುದೇ ಕಾರಣಕ್ಕೂ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡಬಾರದು.” ಎಂದು ಪೋಷಕರು ಹೇಳಿದ್ದಾರೆ. ರಾಜ್ಯ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡುವ ಈ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ರೂಪಿಸುವುದಾಗಿ ಶಿಕ್ಷಣ ತಜ್ಞರು ಮತ್ತು ಸಂಘಟನೆಗಳು ಎಚ್ಚರಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Career Horoscope: ಜುಲೈ 26 ರಿಂದ ಆಗಸ್ಟ್​​​ 01 ರವರೆಗಿನ ವಾರದ ಉದ್ಯೋಗ ಭವಿಷ್ಯ ಇಲ್ಲಿದೆ – Kannada News | Weekly Career Horoscope: July 26 Aug 01 – Navigate Work Challenges and Opportunities

ಜುಲೈ 26 ರಿಂದ ಆಗಷ್ಟ್ 01 ರವರೆಗೆ ಐದನೇ ವಾರವಾಗಿದ್ದು ಸಹನೆಯನ್ನು ಕಾಯ್ದುಕೊಳ್ಳುವುದು, ಅತಿಯಾದ ನಿರೀಕ್ಷೆಯಿಂದ ಬೇಸರ, ಪಡೆಯ ಜವಾಬ್ದಾರಿಯನ್ನು ನಿರ್ವಹಿಸುವ ಆತಂಕ, ಲಾಭಕ್ಕಾಗಿ ಕೆಲವನ್ನು ಬಿಡುವುದು ಇದೆಲ್ಲ ಬರಲಿದ್ದು, ಹೊಸ ಹೊಸತನ್ನು ಕಲಿಯುವುದು ಅನಿವಾರ್ಯವೂ ಆಗಲಿದೆ. ಕಳೆದುಹೋದುದರ ಬಗ್ಗೆ ಲೆಕ್ಕಿಸದೇ ವರ್ತಮಾನದಲ್ಲಿ ನೆಮ್ಮದಿಯಿಂದ ಇರುವ ಬಗೆಯನ್ನು ಕಾಣಿರಿ.‌ ಶುಭವಾಗಲಿ.

ಮೇಷ ರಾಶಿ :

ಮೇಷ ರಾಶಿಯವರ ಉದ್ಯೋಗ ಸ್ಥಾನದ ಅಧಿಪತಿಯಾದ ಶನಿಯು ದ್ವಾದಶದಲ್ಲಿದ್ದು, ದ್ವಿತೀಯ ಸ್ಥಾನದಲ್ಲಿ ಮಂಗಳನಿರುವುದರಿಂದ ಕಾರ್ಯಕ್ಷೇತ್ರದಲ್ಲಿ ತೀವ್ರ ಪರಿಶ್ರಮದ ಅಗತ್ಯವಿದೆ. ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಮಿತ ಭಾಷಣೆ ಒಳಿತು. ಸಣ್ಣ ಪ್ರಮಾಣದ ಹಿನ್ನಡೆ ಅಥವಾ ಕೆಲಸದ ಒತ್ತಡ ಕಂಡುಬಂದರೂ ಸಹ ಸಹನೆ ಕಾಯ್ದುಕೊಂಡರೆ ವಾರಾಂತ್ಯಕ್ಕೆ ಯಶಸ್ಸು ದೊರೆಯಲಿದೆ.

ವೃಷಭ ರಾಶಿ:

​ನಿಮ್ಮ ರಾಶಿಯಲ್ಲೇ ಮಂಗಳನ ಸ್ಥಿತಿ ಇರುವುದರಿಂದ ಕೆಲಸದ ಸ್ಥಳದಲ್ಲಿ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ದಶಮ ಸ್ಥಾನದಲ್ಲಿ ಚಂದ್ರ, ಲಗ್ನ ಹಾಗೂ ರಾಹು ಇರುವ ಕಾರಣ ಉದ್ಯೋಗ ಬದಲಾವಣೆಗೆ ಅಥವಾ ಹೊಸ ಅವಕಾಶಗಳಿಗೆ ಇದು ಸೂಕ್ತ ಸಮಯವಾಗಿದೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶುಭ ವರ್ತಮಾನ ಬರಲಿದೆ.

ಮಿಥುನ ರಾಶಿ :

ನಿಮ್ಮ ರಾಶಿಯಲ್ಲಿ ಬುಧನಿದ್ದು, ದಶಮದ ಶನಿಯ ಶುಭ ದೃಷ್ಟಿಯಿಂದಾಗಿ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಹಾಗೂ ಬುದ್ಧಿವಂತಿಕೆಗೆ ತಕ್ಕ ಮನ್ನಣೆ ಸಿಗಲಿದೆ. ವ್ಯಾಪಾರ ಮತ್ತು ಸೇವಾವಲಯದಲ್ಲಿದ್ದವರಿಗೆ ಹೆಚ್ಚಿನ ಲಾಭ. ಸಹೋದ್ಯೋಗಿಗಳ ಬೆಂಬಲದಿಂದ ಬಾಕಿ ಉಳಿದಿದ್ದ ಕ್ಲಿಷ್ಟಕರ ಕೆಲಸಗಳು ಪೂರ್ಣಗೊಳ್ಳಲಿವೆ.

ಕರ್ಕಾಟಕ ರಾಶಿ :

ನಿಮ್ಮ ರಾಶಿಯಲ್ಲಿ ರವಿ ಮತ್ತು ಗುರು ಆಸೀನರಾಗಿದ್ದಾರೆ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಸಪ್ತಮ ಸ್ಥಾನದ ದೃಷ್ಟಿಯಿಂದ ನಿರೀಕ್ಷಿತ ಬಡ್ತಿ ಅಥವಾ ಅಧಿಕಾರದ ಅನುಕೂಲತೆಗಳು ಸೃಷ್ಟಿಯಾಗಬಹುದು. ಮೇಲಧಿಕಾರಿಗಳ ಬೆಂಬಲ ದೊರೆತು ಸಮಾಜದಲ್ಲಿ ವೃತ್ತಿಪರ ಗೌರವ ಹೆಚ್ಚಲಿದೆ.

ಸಿಂಹ ರಾಶಿ :

​ನಿಮ್ಮ ರಾಶಿಯಲ್ಲಿ ಕೇತುವಿನ ಉಪಸ್ಥಿತಿ ಹಾಗೂ ದ್ವಾದಶದಲ್ಲಿ ರವಿ, ಗುರು ಇರುವ ಕಾರಣ ವೃತ್ತಿಪರ ಕೆಲಸಗಳಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ದೂರದ ಪ್ರಯಾಣ ಅಥವಾ ವೃತ್ತಿ ಸಂಬಂಧಿತ ಅಡೆತಡೆಗಳು ಎದುರಾಗಬಹುದು. ಕೆಲಸದಲ್ಲಿ ಸಣ್ಣಪುಟ್ಟ ತಪ್ಪುಗಳಾಗದಂತೆ ಜಾಗ್ರತೆ ವಹಿಸಿ, ಆತುರದಲ್ಲಿ ರಾಜೀನಾಮೆಯ ತೀರ್ಮಾನ ಬೇಡ.

ಕನ್ಯಾ ರಾಶಿ :

​ನಿಮ್ಮ ರಾಶಿಯಲ್ಲಿ ಶುಕ್ರನ ಪ್ರವೇಶವಾಗಿರುವುದು ವೃತ್ತಿರಂಗದಲ್ಲಿ ಹೊಸ ಉತ್ಸಾಹ ಹಾಗೂ ಸೌಕರ್ಯಗಳನ್ನು ನೀಡಲಿದೆ. ದಶಮಾಧಿಪತಿ ಬುಧನ ಶುಭ ಬಲದಿಂದಾಗಿ ಸಾಫ್ಟ್‌ವೇರ್, ಕಲೆ, ಹಾಗೂ ವಾಣಿಜ್ಯ ರಂಗದಲ್ಲಿರುವವರಿಗೆ ಅತ್ಯುತ್ತಮ ಅವಕಾಶಗಳು ಎದುರಾಗಲಿವೆ. ಆದಾಯ ಹೆಚ್ಚಾಗುವ ಸೂಚನೆ ಇದೆ.

ತುಲಾ ರಾಶಿ:

​ದಶಮ ಸ್ಥಾನದಲ್ಲಿ ಗುರು ಮತ್ತು ಸೂರ್ಯರ ಬಲವಿರುವುದರಿಂದ ಉದ್ಯೋಗ ಅನ್ವೇಷಕರಿಗೆ ಶ್ರೇಷ್ಠ ಸಮಯ. ಸರ್ಕಾರಿ ಅಥವಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಸಿಗುವ ಯೋಗವಿದೆ. ಪ್ರಸ್ತುತ ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ವೃತ್ತಿಪರ ಪ್ರಶಂಸೆ ಲಭಿಸಿ ಆರ್ಥಿಕ ಲಾಭವಾಗಲಿದೆ.

ವೃಶ್ಚಿಕ ರಾಶಿ:

​ಭಾಗ್ಯ ಸ್ಥಾನದಲ್ಲಿ ಸೂರ್ಯ, ಗುರುಗಳಿರುವುದರಿಂದ ವೃತ್ತಿಜೀವನದಲ್ಲಿ ಹಿರಿಯರ ಹಾಗೂ ಮಾರ್ಗದರ್ಶಕರ ಸಂಪೂರ್ಣ ಬೆಂಬಲ ಸಿಗಲಿದೆ. ವೃತ್ತಿ ಸಂಬಂಧಿತ ಪ್ರಯಾಣಗಳು ಯಶಸ್ವಿಯಾಗಲಿವೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಇದು ಸೂಕ್ತ ಸಮಯ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ

ಧನು ರಾಶಿ :

​ಅಷ್ಟಮದಲ್ಲಿ ಗುರು, ರವಿ ಹಾಗೂ ತೃತೀಯದಲ್ಲಿ ಚಂದ್ರ, ರಾಹು ಇರುವುದರಿಂದ ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದಿರಬೇಕು. ರಾಜಕೀಯ ಅಥವಾ ಗುಂಪುಗಾರಿಕೆಯಿಂದ ದೂರವಿರಿ. ಸಹೋದ್ಯೋಗಿಗಳ ಜೊತೆ ಅನಗತ್ಯ ವಾಗ್ವಾದ ಬೇಡ. ಶ್ರಮಕ್ಕೆ ತಕ್ಕ ಫಲ ಕೊಂಚ ತಡವಾಗಿ ಸಿಗಲಿದೆ.

ಮಕರ ರಾಶಿ:

​ಸಪ್ತಮದ ಗುರು, ರವಿ ಹಾಗೂ ದ್ವಿತೀಯದ ಕುಂಭ ರಾಶಿಯ ಕೃಪೆಯಿಂದ ವೃತ್ತಿಯಲ್ಲಿ ಭಾಗಿದಾರಿಕೆ ಮತ್ತು ಒಪ್ಪಂದಗಳು ಯಶಸ್ವಿಯಾಗಲಿವೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ. ವ್ಯಾಪಾರ ಮತ್ತು ಸೇವಾ ವಲಯದಲ್ಲಿ ಸಕ್ರಿಯವಾಗಿರುವವರಿಗೆ ಉತ್ತಮ ಪ್ರಗತಿ ಹಾಗೂ ಗೌರವ ಪ್ರಾಪ್ತಿಯಾಗಲಿದೆ.

​ಕುಂಭ ರಾಶಿ :

ನಿಮ್ಮ ರಾಶಿಯಲ್ಲೇ ಲಗ್ನ, ಚಂದ್ರ ಹಾಗೂ ರಾಹು ಇರುವುದರಿಂದ ಕೆಲಸದ ಸ್ಥಳದಲ್ಲಿ ತೀವ್ರ ಮಾನಸಿಕ ಒತ್ತಡ ಅಥವಾ ಗೊಂದಲಗಳು ಉಂಟಾಗಬಹುದು. ಷಷ್ಟದಲ್ಲಿ ರವಿ ಇರುವುದರಿಂದ ಶತ್ರುಗಳ ಮೇಲೆ ಜಯ ಸಿಗಲಿದೆ. ಆತುರ ಪಡದೆ ಸಮಾಧಾನದಿಂದ ಕೆಲಸ ನಿರ್ವಹಿಸಿದರೆ ಜಯ ನಿಮ್ಮದೇ.

ಮೀನ ರಾಶಿ :

ನಿಮ್ಮ ರಾಶಿಯಲ್ಲೇ ಸಾಡೇಸಾತಿ ಪ್ರಭಾವದ ಶನಿ ಇರುವುದರಿಂದ ಉದ್ಯೋಗದಲ್ಲಿ ಪರಿಶ್ರಮ ಹೆಚ್ಚಿರಲಿದೆ. ಆದರೆ ಪಂಚಮದ ಸೂರ್ಯ, ಗುರುಗಳ ದೃಷ್ಟಿಯಿಂದ ನಿಮ್ಮ ಕೌಶಲ್ಯ ಮತ್ತು ಜ್ಞಾನಕ್ಕೆ ಸೂಕ್ತ ಗೌರವ ಸಿಗಲಿದೆ. ಸೃಜನಶೀಲ ರಂಗದಲ್ಲಿದ್ದವರಿಗೆ ಹೊಸ ಕಾರ್ಯಯೋಜನೆಗಳು ಕೈಗೂಡಲಿವೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:06 pm, Sat, 25 July 26

Source link

ಕಲರ್ಸ್ ಕನ್ನಡದಲ್ಲಿ ಜುಲೈ 26ಕ್ಕೆ ‘ಕಲ್ಟ್’ ಸಿನಿಮಾ; ಜೈದ್ ಖಾನ್ ಚಿತ್ರದ ಪ್ರಸಾರದ ಬಗ್ಗೆ ಇಲ್ಲಿದೆ ವಿವರ – Kannada News | Zaid Khan Starrer Cult Set for World Television Premiere on Colors Kannada this Sunday

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಂಡಿದ್ದ ನಟ ಜೈದ್ ಖಾನ್ (Zaid Khan)  ನಟನೆಯ ‘ಕಲ್ಟ್’ ಸಿನಿಮಾ ಈಗ ಕಿರುತೆರೆಗೆ ಲಗ್ಗೆ ಇಡುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಜುಲೈ 26ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಪ್ರಸಾರವಾಗಲಿದೆ. ಸ್ನೇಹ, ಪ್ರೀತಿ, ಕನಸುಗಳು ಹಾಗೂ ಇಂದಿನ ಯುವ ಪೀಳಿಗೆಯ ಜೀವನದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.

ಚಿತ್ರದಲ್ಲಿ ನಟ ಜೈದ್ ಖಾನ್ ಮಾಧವ ಎಂಬ ಪಾತ್ರದಲ್ಲಿ ಲವರ್ ಬಾಯ್ ಹಾಗೂ ಭಗ್ನಪ್ರೇಮಿಯ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ಸೋತು ಕುಡಿತಕ್ಕೆ ದಾಸನಾಗುವ ನಾಯಕನ ಜೀವನದಲ್ಲಿ ಇತಿಹಾಸಿನಿ ಎಂಬ ಯುವತಿಯ ಪ್ರವೇಶವಾದ ಬಳಿಕ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು. ಇದರೊಂದಿಗೆ ಪೋಷಕರ ನಿರೀಕ್ಷೆಗಳು ಮಕ್ಕಳ ಭಾವನಾತ್ಮಕ ನಿರ್ಧಾರಗಳ ಮೇಲೆ ಬೀರುವ ಪ್ರಭಾವ ಸಿನಿಮಾದಲ್ಲಿದೆ.

z

ಅನಿಲ್ ಕುಮಾರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಜೈದ್ ಖಾನ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಮತ್ತು ಮಲೈಕಾ ವಾಸುಪಾಲ್ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದು, ಕಿಶನ್ ಬಿಳಗಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ‘ಅಯ್ಯೋ ಶಿವನೇ’ ಹಾಗೂ ‘ಬ್ಲಡಿ ಲವ್’ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.

ಇದನ್ನೂ ಓದಿ: ‘ಕಲ್ಟ್ ಹಿಟ್ ಸಿನಿಮಾ’; ಚಿತ್ರದ ಕಲೆಕ್ಷನ್ ಲೆಕ್ಕ ಕೊಟ್ಟ ಝೈದ್ ಖಾನ್

‘ಕಲ್ಟ್’ ಸಿನಿಮಾ ಜನವರಿ 23ರಂದು ಥಿಯೇಟರ್​​ನಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಬಗ್ಗೆ ತಂಡ ಮಾಹಿತಿ ನೀಡಿತ್ತು. ಸ್ವತಃ ಝೈದ್ ಖಾನ್ ಅವರು ಕಲೆಕ್ಷನ್ ವಿವರ ನೀಡಿದ್ದರು. ಈ ಚಿತ್ರ ಮೂರು ದಿನಗಳಲ್ಲಿ 3.87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಚಿತ್ರದ ಬಜೆಟ್ ಕಡಿಮೆ ಇದ್ದಿದ್ದರಿಂದ ಸಿನಿಮಾ ತಂಡ ಲಾಭ ಕಂಡಿರೋ ಸಾಧ್ಯತೆ ಅಧಿಕವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಹಾರಾಷ್ಟ್ರ ಪೇಪರ್ ಲೀಕ್ ಮಾಸ್ಟರ್‌ಮೈಂಡ್ ವಿಜಯೇಂದ್ರ ಗುಪ್ತಾ ಬಿಹಾರದಲ್ಲಿ ಬಂಧನ – Kannada News | Thane Police Apprehend Mastermind Behind Maharashtra TET Paper Leak in Bihar

ಮಹಾರಾಷ್ಟ್ರ, ಜು.25: ಇತ್ತೀಚೆಗೆ ನಡೆದ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅದರ ಮಾಸ್ಟರ್‌ಮೈಂಡ್ ವಿಜಯೇಂದ್ರ ಗುಪ್ತಾನನ್ನು ಬಂಧಿಸಲಾಗಿದೆ. ಥಾಣೆ ಪೊಲೀಸರು ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿ, ಪ್ರಕರಣದ ಪ್ರಮುಖ ಆರೋಪಿ ಗುಪ್ತಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಂಧನವು ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ರಾಜ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಇನ್ನು ಮುಂದೆ ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಲಾಗಿದ್ದು, ಇಂತಹ ಪ್ರಕರಣಗಳನ್ನು ನಿಭಾಯಿಸಲು ಹೊಸ ಮಸೂದೆಯೊಂದನ್ನು ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಥಾಣೆ ಪೊಲೀಸರು, ಬಿಹಾರದಲ್ಲಿ ಅಡಗಿಕೊಂಡಿದ್ದ ಮಾಸ್ಟರ್‌ಮೈಂಡ್ ವಿಜಯೇಂದ್ರ ಗುಪ್ತಾನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದ ಮುಂದಿನ ತನಿಖೆಗೆ ಹೊಸ ದಿಕ್ಕು ಸಿಕ್ಕಂತಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ರೋ, ಇಂಟರ್ನೆಟ್ ಬಂದ್ ಮಾಡಬಹುದು, ಆದರೆ ಪೇಪರ್ ಲೀಕ್ ತಡೆಯಲು ಆಗಲ್ಲ!: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ – Kannada News | Rahul Gandhi Slams Centre Over NEET Protest; Demands Education Minister Resignation

ನವದೆಹಲಿ, ಜುಲೈ 25: ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪೇಪರ್ ಲೀಕ್ ಖಂಡಿಸಿ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಖಂಡಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಇಟ್ಟಿರುವ ಮೂರು ಪ್ರಮುಖ ಬೇಡಿಕೆಗಳ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಅಥವಾ ಪ್ರಧಾನಿ ಮೋದಿಯವರು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರಿಗೆ ಬೇರೆ ಇಲಾಖೆಯ ಜವಾಬ್ದಾರಿ ಕೊಟ್ಟರೂ ಅದನ್ನು ನಾವು ಸಹಿಸುವುದಿಲ್ಲ, ಅವರು ಸಚಿವ ಸ್ಥಾನದಲ್ಲೇ ಇರಬಾರದು ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ ಅವರು, ಪ್ರಧಾನಿಯವರು ಯಾರ ಸಲಹೆಗಳನ್ನೂ ಕೇಳದೆ ದೇಶದ ವಿದ್ಯಾರ್ಥಿಗಳ ಬಳಿ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ: ಕಠಿಣ ಖಂಡನೆ

ಧರಣಿನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿದ ರಾಹುಲ್ ಗಾಂಧಿ, ಪ್ರತಿಭಟನಾ ಸ್ಥಳದಿಂದ ವಿದ್ಯಾರ್ಥಿಗಳನ್ನು ಪೊಲೀಸರು ಬಲವಂತವಾಗಿ ಓಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ ಹಾಗೂ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ. ಕೇಂದ್ರ ಸರ್ಕಾರವು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ “ನನಗೆ ಟೈಫಾಯ್ಡ್ ಆಗಿದೆ, ಆದರೆ ಪ್ರತಿಭಟನೆ ನಿಲ್ಲಲ್ಲ”: ವೀಡಿಯೋ ಸಂದೇಶದ ಮೂಲಕ CJP ಮುಖ್ಯಸ್ಥ ಅಭೀಜಿತ್ ದೀಪ್ಕೆ ಎಚ್ಚರಿಕೆ

ಪ್ರತಿಭಟನೆಯನ್ನು ಹತೋಟಿಗೆ ತರಲು ಮೆಟ್ರೋ ರೈಲು ಸೇವೆ ಹಾಗೂ ಇಂಟರ್ನೆಟ್ ಬಂದ್ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ, ಆದರೆ ಪೇಪರ್ ಲೀಕ್ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸುಮನ್ ರಂಗನಾಥನ್ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ’; ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ‘ತದ್ವಿರುದ್ಧ’ ಟೀಂ – Kannada News | Actress Suman Ranganath Faces Complaint in Film Chamber by Tadvirudha Movie Team Over Promotion Issues

ಬಹುಭಾಷಾ ನಟಿ ಸುಮನ್ ರಂಗನಾಥನ್ (Suman Ranganathan) ವಿರುದ್ಧ ‘ತದ್ವಿರುದ್ಧ’ ಸಿನಿಮಾದ ನಿರ್ಮಾಣ ಸಂಸ್ಥೆ ಚಾರ್ಮಿಯನ್ ಮೋಷನ್ ಪಿಕ್ಚರ್ಸ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧಿಕೃತವಾಗಿ ದೂರು ನೀಡಿದೆ. ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದರೂ ನಟಿ ಪ್ರಚಾರ ಕಾರ್ಯಕ್ರಮಗಳಿಗೆ ಸಹಕರಿಸುತ್ತಿಲ್ಲ ಎಂದು ಚಿತ್ರತಂಡ ಗಂಭೀರವಾಗಿ ಆರೋಪಿಸಿದೆ. ನಟಿಗೆ ನೀಡಬೇಕಾದ ಸಂಭಾವನೆಯನ್ನು ಸಂಪೂರ್ಣವಾಗಿ ಚುಕ್ತಾ ಮಾಡಿದ್ದರೂ, ಅವರು ಕಳೆದ ಕೆಲವು ತಿಂಗಳುಗಳಿಂದ ಚಿತ್ರತಂಡಕ್ಕೆ ಸಿಗದೆ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ವಾಣಿಜ್ಯ ಮಂಡಳಿಗೆ ನೀಡಿರುವ ದೂರಿನ ಪತ್ರದಲ್ಲಿ ಚಿತ್ರತಂಡ ಹಲವು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದೆ. 2023ರ ಏಪ್ರಿಲ್ 7 ರಂದು ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ ಸುಮನ್ ರಂಗನಾಥನ್ ಅವರು ನಟನೆ, ಡಬ್ಬಿಂಗ್ ಹಾಗೂ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಕಳೆದ 30 ದಿನಗಳಿಂದ ನಟಿ ಹಾಗೂ ಅವರ ಮ್ಯಾನೇಜರ್ ಶಿವು ಅವರನ್ನು ಸಂಪರ್ಕಿಸಲು ಚಿತ್ರತಂಡ ನಿರಂತರವಾಗಿ ಫೋನ್ ಕರೆ, ವಾಟ್ಸಾಪ್ ಸಂದೇಶಗಳ ಮೂಲಕ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ತದ್ವಿರುದ್ಧ’ ಚಿತ್ರವು ಇದೇ ಜುಲೈ 31ರಂದು ತೆರೆಗೆ ಬರಲು ಸಿದ್ಧವಾಗಿದೆ. ಬಿಡುಗಡೆಗೆ ಮುನ್ನ ಇರುವ ಈ 10 ದಿನಗಳ ಪ್ರಚಾರದ ಅವಧಿಯು ಚಿತ್ರದ ಯಶಸ್ಸಿನ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಇಂತಹ ಸಂದರ್ಭದಲ್ಲಿ ನಟಿಯಿಂದ ಯಾವುದೇ ಸಹಕಾರ ಸಿಗದೇ ಇರುವುದರಿಂದ ಚಿತ್ರಕ್ಕೆ ಹಾಗೂ ನಿರ್ಮಾಣ ಸಂಸ್ಥೆಗೆ ಭಾರಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಚಿತ್ರತಂಡ ಆತಂಕ ಹೊರಹಾಕಿದೆ.

ಇದನ್ನೂ ಓದಿ: ಡಾಲಿ ಧನಂಜಯ್ ಜೊತೆ ತೋತಾಪುರಿ ಚಿತ್ರದಲ್ಲಿ ಸುಮನ್ ರಂಗನಾಥ್ 3 ವಿಭಿನ್ನ ಲುಕ್

ಹೀಗಾಗಿ ಚಿತ್ರದ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಈ ಸಮಸ್ಯೆಯನ್ನು ವಾಣಿಜ್ಯ ಮಂಡಳಿಯು ಮಧ್ಯಸ್ಥಿಕೆ ವಹಿಸಿ ಸೌಹಾರ್ದಯುತವಾಗಿ ಪರಿಹರಿಸಿಕೊಡಬೇಕು ಎಂದು ಚಿತ್ರತಂಡದ ಸದಸ್ಯರು ಒಟ್ಟಾಗಿ ಚೇಂಬರ್ ಮೆಟ್ಟಿಲೇರಿದ್ದಾರೆ. ವಿನೋದ್ ನಿರ್ದೇಶನದ ಈ ಸಿನಿಮಾದಲ್ಲಿ ಮುರಳಿ ಹಾಗೂ ಸುಚೇಂದ್ರ ಪ್ರಸಾದ್ ಸೇರಿದಂತೆ ಹಲವು ಹಿರಿಯ ಕಲಾವಿದರ ದಂಡೇ ಇದೆ. ಸದ್ಯ ಚಿತ್ರತಂಡದ ಈ ಗಂಭೀರ ಆರೋಪಕ್ಕೆ ನಟಿ ಸುಮನ್ ರಂಗನಾಥನ್ ಕಡೆಯಿಂದ ಏನು ಸ್ಪಷ್ಟನೆ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:19 pm, Sat, 25 July 26

Source link

Exit mobile version