Video: ನೀಟ್ ಪರೀಕ್ಷಾ ಅಕ್ರಮ; ‘ಹಕ್ಕುಗಳಿಗಾಗಿ ಹೋರಾಡಿ, ಆದರೆ ವಿವೇಚನೆ ಕಳೆದುಕೊಳ್ಳಬೇಡಿ’ – ರವಿಶಂಕರ್ ಗುರೂಜಿ – Kannada News | Sri Sri Ravi Shankar Urges Calm Amidst NEET UG Protests: Peaceful Talks Key

ದೆಹಲಿ, ಜು.25: ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿರುವ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆ ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿರುವ ಆಕ್ರೋಶದ ಕುರಿತು ಪ್ರತಿಕ್ರಿಯಿಸಿರುವ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು, ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿರುವುದು ಸಮಂಜಸವಾಗಿದ್ದರೂ, ಆವೇಶದ ನಡುವೆ ವಿವೇಚನೆ ಮತ್ತು ಸಮಾಧಾನವನ್ನು ಕಳೆದುಕೊಳ್ಳಬಾರದೆಂದು ಕರೆ ನೀಡಿದ್ದಾರೆ. ಪ್ರತಿಭಟನೆಗಳ ಸನ್ನಿವೇಶವನ್ನು ಅಸಾಮಾಜಿಕ ಹಾಗೂ ದೇಶವಿರೋಧಿ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಅಪಾಯವಿರುವುದರಿಂದ ಪ್ರತಿಯೊಬ್ಬರೂ ಅತ್ಯಂತ ಜಾಗರೂಕರಾಗಿರಬೇಕು ಎಂದು ಅವರು ಎಚ್ಚರಿಸಿದ್ದಾರೆ. ಯಾವುದೇ ಸಮಸ್ಯೆಯಾಗಿದ್ದರೂ ಸರ್ಕಾರದೊಂದಿಗೆ ಶಾಂತಿಯುತ ಮಾತುಕತೆಯ ಮೂಲಕವೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಆದ್ದರಿಂದ ಯುವಜನತೆ ಆಕ್ರೋಶದ ರಭಸದಲ್ಲಿ ಅಶಾಂತಿಗೆ ಆಸ್ಪದ ನೀಡದೆ ಸಂಯಮದಿಂದ ಶಾಂತಿಯುತ ಮಾರ್ಗವನ್ನು ಅನುಸರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​​​ ಮಾಡಿ

Source link

‘ಜಾನಕಿ ಅಮ್ಮನ ಸಂಗೀತ ನಮನಕ್ಕೆ ನಾವು ಬಿಡಿಗಾಸೂ ಪಡೆದಿಲ್ಲ‘; ಸ್ಪಷ್ಟನೆ ನೀಡಿದ ಅನುರಾಧಾ ಭಟ್ – Kannada News | Singer Anuradha Bhat Hits Back at Trolls Over Controversial Remarks on Janaki Amma Musical Tribute

ಕನ್ನಡ ಚಿತ್ರರಂಗದ ಹೆಸರಾಂತ ಗಾಯಕಿ ಅನುರಾಧಾ ಭಟ್ ಇತ್ತೀಚೆಗೆ ತಮಗೆ ಎದುರಾದ ಸಾರ್ವಜನಿಕ ಟೀಕೆಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ನಡೆದ ಗಾನಕೋಗಿಲೆ ಜಾನಕಿ ಅಮ್ಮನವರ (S Janaki) ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಾಯಕಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವಹೇಳನಕಾರಿ ಮಾತುಗಳನ್ನಾಡಿದ್ದರು. ಈ ಕುರಿತು ಸುದೀರ್ಘ ಪೋಸ್ಟ್ ಬರೆದಿರುವ ಅನುರಾಧಾ, ಟೀಕಾಕಾರರ ಸೌಜನ್ಯ ಹಾಗೂ ಸಂಸ್ಕಾರವನ್ನು ಖಡಕ್ ಪದಗಳಲ್ಲಿ ಪ್ರಶ್ನಿಸಿದ್ದಾರೆ.

ಸಾಮಾನ್ಯವಾಗಿ ತಾವು ಯಾವುದೇ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಉತ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅನುರಾಧಾ ಭಟ್, ಈ ಬಾರಿ ತಮ್ಮ ಗುರುಸ್ಥಾನದಲ್ಲಿರುವ ಜಾನಕಿ ಅಮ್ಮನವರ ವಿಷಯ ಬಂದಿದ್ದಕ್ಕೆ ಮೌನ ಮುರಿದಿರುವುದಾಗಿ ಹೇಳಿದ್ದಾರೆ. ‘ಮೈಸೂರಿನಲ್ಲಿ ನಡೆದ ಜಾನಕಿ ಅಮ್ಮನವರ 12ನೇ ದಿನದ ಪುಣ್ಯಸ್ಮರಣೆ ಮತ್ತು ಸಂಗೀತ ನಮನ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ಕೆಲವರು ತಮ್ಮ ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ಪ್ರಶ್ನಿಸುತ್ತಿರುವುದು ಅತ್ಯಂತ ಬೇಜವಾಬ್ದಾರಿಯುತ ಹಾಗೂ ವಿಷಾದನೀಯ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ‘ಮೆಟ್ಟಲ್ಲಿ ಹೊಡಿಬೇಕು’, ‘ವೇದಿಕೆ ಹತ್ತೋಕೆ ಬಿಡಬಾರದು’ ಎಂಬಂತಹ ಅತಿ ನಿಕೃಷ್ಟ ಮಾತುಗಳನ್ನು ಆಡಲಾಗಿದೆ ಎಂದು ಅನುರಾಧಾ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಕೆಲವು ಅನಿವಾರ್ಯ ಕಾರಣಗಳಿಂದಾಗಿ ತಮಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ದುಃಖ, ಪ್ರೀತಿ ಮತ್ತು ಗೌರವವನ್ನು ಕೇವಲ ಅಂತ್ಯಸಂಸ್ಕಾರದ ಹಾಜರಾತಿಯಿಂದಾಗಲಿ ಅಥವಾ ಫೇಸ್‌ಬುಕ್ ಫೋಟೋಗಳಿಂದಾಗಲಿ ಅಳೆಯಲು ಸಾಧ್ಯವಿಲ್ಲ ಎಂದು ಅವರು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಈ ಸಂಗೀತ ನಮನ ಕಾರ್ಯಕ್ರಮವನ್ನು ‘ಟಿಆರ್​​ಪಿ’ ಅಥವಾ ಹಣಕ್ಕಾಗಿ ಮಾಡಿದ ನಾಟಕ ಎಂದು ಬಿಂಬಿಸುತ್ತಿರುವವರ ವಿರುದ್ಧ ಕಿಡಿಕಾರಿರುವ ಅವರು, ‘ಅಂದು ಭಾಗವಹಿಸಿದ ಯಾವುದೇ ಗಾಯಕರು ಕನಿಷ್ಠ ಒಂದು ರೂಪಾಯಿಯನ್ನೂ ಸಂಭಾವನೆಯಾಗಿ ಪಡೆದಿಲ್ಲ. ಕೇವಲ ಪ್ರೀತಿಯಿಂದ ಸಂಗೀತ ಸೇವೆ ಸಲ್ಲಿಸಿದ್ದೇವೆ’ ಎಂದು ಸತ್ಯಾಂಶ ಬಿಚ್ಚಿಟ್ಟಿದ್ದಾರೆ. ಜಾನಕಿ ಅಮ್ಮನವರ ಅಮರ ಗೀತೆಗಳನ್ನು ತಾವು ಮುಂದೆಯೂ ಅತ್ಯಂತ ಹೆಮ್ಮೆಯಿಂದ ಹಾಡುವುದಾಗಿ ಮತ್ತು ಅದಕ್ಕಾಗಿ ಯಾರ ಮುಂದೆಯೂ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಎಸ್. ಜಾನಕಿ ನಿಧನದ ಬೆನ್ನಲ್ಲೇ ಮೊಮ್ಮಗಳಿಗೆ ಟ್ರೋಲ್ ಕಾಟ; ಕಣ್ಣೀರು ಹಾಕಿಲ್ಲ ಎಂದವರಿಗೆ ಅಪ್ಸರಾ ಸ್ಪಷ್ಟನೆ

‘ತಮ್ಮನ್ನು ಜಾನಕಿ ಅಮ್ಮನವರ ಅಭಿಮಾನಿಗಳು ಎಂದು ಕರೆದುಕೊಳ್ಳುವವರು, ಅವರ ಹೆಸರಿನಲ್ಲಿ ಮತ್ತೊಬ್ಬರನ್ನು ಅವಮಾನಿಸುವ ಮೊದಲು ಜಾನಕಿ ಅಮ್ಮನವರ ಸರಳತೆ, ವಿನಯ ಮತ್ತು ಮಾನವೀಯತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ’ ಎಂದು ಅನುರಾಧಾ ಭಟ್ ಕಿವಿಮಾತು ಹೇಳಿದ್ದಾರೆ. ಕೆಲವು ಬಾಂಧವ್ಯಗಳು ಸಾಮಾಜಿಕ ಜಾಲತಾಣಗಳ ಪ್ರದರ್ಶನಕ್ಕಲ್ಲ, ಅವು ಹೃದಯದಲ್ಲಿ ಉಳಿಯುವಂಥವು ಎಂದು ಬರೆಯುವ ಮೂಲಕ ತಮ್ಮ ಭಾವನಾತ್ಮಕ ಪೋಸ್ಟ್ ಅನ್ನು ಕೊನೆಗೊಳಿಸಿದ್ದಾರೆ.

ಪ್ರಶ್ನೆ: ಎಸ್​ ಜಾನಕಿ ನಿಧನ ಹೊಂದಿದ್ದು ಯಾವಾಗ?
ಉತ್ತರ: ಜುಲೈ 11

ಪ್ರಶ್ನೆ: ಎಸ್​ ಜಾನಕಿ ನಿಧನ ಹೊಂದಿದ್ದು ಹೇಗೆ?
ಉತ್ತರ: ಹೃದಯಾಘಾತದಿಂದ

ಪ್ರಶ್ನೆ: ಎಸ್​ ಜಾನಕಿ ಅವರಿಗೆ ಎಷ್ಟು ವಯಸ್ಸಾಗಿತ್ತು?
ಉತ್ತರ: 88 ವರ್ಷ

Source link

ಬೆಂಗಳೂರಲ್ಲಿ ಗೂಂಡಾ ಕಾಯ್ದೆಯಡಿ ರೌಡಿ ಶೀಟರ್ ವಿಘ್ನೇಶ್ ಬಂಧನ – Kannada News | Bengaluru Notorious Rowdy Sheeter Vignesh Arrested Under Goondas Act

ಬೆಂಗಳೂರು, ಜುಲೈ 25: ನಗರದಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ಕುಖ್ಯಾತ ರೌಡಿಶೀಟರ್ ವಿಘ್ನೇಶ್ ಅಲಿಯಾಸ್ ವಿಕ್ಕಿ ಎಂಬಾತನನ್ನು ಕೆಂಗೇರಿ ಪೊಲೀಸ್ ಠಾಣೆ ಸಿಬ್ಬಂದಿ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.

11ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿ

ಬಂಧಿತ ರೌಡಿಶೀಟರ್ ವಿಘ್ನೇಶ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಅತ್ಯಾಚಾರ, ದರೋಡೆ, ಭೀಕರ ಹಲ್ಲೆ ಸೇರಿದಂತೆ ಸುಮಾರು 11ಕ್ಕೂ ಹೆಚ್ಚು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಮುಂಚೆ ಹಲವು ಪ್ರಕರಣಗಳಲ್ಲಿ ಬಂಧಿತನಾಗಿದ್ದ ಈತ, ಜಾಮೀನಿನ ಮೇಲೆ ಹೊರಬಂದ ನಂತರವೂ ತನ್ನ ಪುಂಡಾಟಿಕೆಯನ್ನು ಮುಂದುವರಿಸಿದ್ದ ಎನ್ನಲಾಗಿದೆ.

ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ರೌಡಿ

ಸಾಮಾನ್ಯ ಜನರ ಮೇಲೆ ಹಲ್ಲೆ ನಡೆಸುವುದು, ಜೀವ ಬೆದರಿಕೆ ಹಾಕುವುದು ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಕೆಂಗೇರಿ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಭಯದ ವಾತಾವರಣ ನಿರ್ಮಿಸಿದ್ದ. ಈತನ ನಿರಂತರ ಅಪರಾಧ ಕೃತ್ಯಗಳಿಂದಾಗಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಧಕ್ಕೆಯುಂಟಾಗಿತ್ತು.

ಕಮಿಷನರ್ ಆದೇಶದನ್ವಯ ಕಠಿಣ ಕ್ರಮ

ಸಮಾಜದ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಈತನ ಪುಂಡಾಟಿಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಕಮಿಷನರ್ ಆದೇಶದನ್ವಯ ಕಾರ್ಯಪ್ರವೃತ್ತರಾದ ಕೆಂಗೇರಿ ಪೊಲೀಸರು ರೌಡಿಯನ್ನು ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಅಟ್ಟಿದ್ದಾರೆ.

ಇದನ್ನೂ ಓದಿ ಸರ್ಕಾರಿ ಕೆಲಸದ ಆಮಿಷ ಒಡ್ಡಿ ಬೆಂಗಳೂರಿನ ವ್ಯಕ್ತಿಗೆ 26 ಲಕ್ಷ ರೂ. ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್!

ನಗರದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವ, ರೌಡಿಸಂ ಪ್ರದರ್ಶಿಸುವ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ವಿರುದ್ಧ ಇಂತಹ ಕಠಿಣ ಕಾನೂನು ಕ್ರಮಗಳು ಮುಂದುವರೆಯಲಿವೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಪದಕದ ಖಾತೆ ತೆರೆದ ಝಂಡು ಕುಮಾರ್ – Kannada News | Jhandu Kumar wins India’s first medal in Commonwealth Games 2026

ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕದ ಖಾತೆ ತೆರೆದಿದೆ. ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಝಂಡು ಕುಮಾರ್ ಭರ್ಜರಿ ಪ್ರದರ್ಶನ ನೀಡಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಗೌರವ ತಂದುಕೊಟ್ಟಿದ್ದಾರೆ.

ರೋಚಕ ಹೋರಾಟ ಮತ್ತು ಕಠಿಣ ಪೈಪೋಟಿ:

ಸ್ಪರ್ಧೆಯುದ್ದಕ್ಕೂ ಝಂಡು ಕುಮಾರ್ ಅತ್ಯಂತ ಸ್ಥಿರವಾದ ಪ್ರದರ್ಶನ ನೀಡಿದರು. ಈ ಮೂಲಕ ನೈಜೀರಿಯಾದ ರಿಲುವಾನ್ ಇದ್ರಿಸ್​ಗೆ ಭರ್ಜರಿ ಪೈಪೋಟಿ ನೀಡಿದ್ದರು.

  • ಮೊದಲ ಯತ್ನ: ಝಂಡು ಕುಮಾರ್ ಅವರು ಯಶಸ್ವಿಯಾಗಿ 181 ಕೆಜಿ ಭಾರ ಎತ್ತುವ ಮೂಲಕ ಶುಭಾರಂಭ ಮಾಡಿದರು.
  • ಎರಡನೇ ಯತ್ನ: ಕಠಿಣ ಸವಾಲನ್ನು ಮೀರಿ 190 ಕೆಜಿ ಭಾರವನ್ನು ಎತ್ತಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
  • ಮೂರನೇ ಯತ್ನ: ಝಂಡು ಕುಮಾರ್ ಅವರು ಮೂರನೇ ಯತ್ನದಲ್ಲಿ 196 ಕೆಜಿ ಭಾರ ಎತ್ತಿ ಕಾಮನ್‌ವೆಲ್ತ್ ಗೇಮ್ಸ್ ದಾಖಲೆ ಬರೆಯಲು ಯತ್ನಿಸಿದರು. ಆದರೆ ಬಾರ್‌ಬೆಲ್ ರ‍್ಯಾಕ್‌ನಲ್ಲಿ ಸಿಲುಕಿದ ಕಾರಣ ಅದನ್ನು ‘ನೋ ಲಿಫ್ಟ್’ ಎಂದು ಘೋಷಿಸಲಾಯಿತು.
  • ಅಂತಿಮ ಅಂಕಗಳು: ಝಂಡು ಕುಮಾರ್ ಅಂತಿಮವಾಗಿ ಒಟ್ಟು 130.9 ಅಂಕಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಈ ಸ್ಪರ್ಧೆಯಲ್ಲಿ ನೈಜೀರಿಯಾದ ರಿಲುವಾನ್ ಇದ್ರಿಸ್ (132.8 ಅಂಕ) ಚಿನ್ನದ ಪದಕ ಗೆದ್ದರೆ, ಇಂಗ್ಲೆಂಡ್‌ನ ಮ್ಯಾಥ್ಯೂ ಹಾರ್ಡಿಂಗ್ (131.0 ಅಂಕ) ಬೆಳ್ಳಿ ಪದಕ ಪಡೆದರು.

ಝಂಡು ಕುಮಾರ್ ಅವರ ಈ ಐತಿಹಾಸಿಕ ಸಾಧನೆಗೆ ದೇಶಾದ್ಯಂತ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದ ಇತರೆ ಅಥ್ಲೀಟ್‌ಗಳಿಗೆ ಇದು ದೊಡ್ಡ ಸ್ಫೂರ್ತಿಯಾಗಲಿದ್ದಾರೆ.

ಏನಿದು ಪ್ಯಾರಾ ಪವರ್‌ಲಿಫ್ಟಿಂಗ್?

ಪ್ಯಾರಾ ಪವರ್‌ಲಿಫ್ಟಿಂಗ್ ಎಂಬುದು ದೈಹಿಕ ದೌರ್ಬಲ್ಯ ಅಥವಾ ವಿಕಲಚೇತನ ಹೊಂದಿರುವ ಕ್ರೀಡಾಪಟುಗಳಿಗಾಗಿ ನಡೆಸಲಾಗುವ ಒಂದು ಅತ್ಯುನ್ನತ ಕ್ರೀಡೆಯಾಗಿದೆ. ಇದು ಪ್ಯಾರಾಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಯಾರೆಲ್ಲಾ ಭಾಗವಹಿಸಬಹುದು?

ಕೆಳಭಾಗದ ಅಂಗವೈಕಲ್ಯ, ಪೋಲಿಯೊ, ಬೆನ್ನುಹುರಿಯ ಗಾಯ, ಅಥವಾ ಕಾಲುಗಳಿಲ್ಲದ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸುತ್ತಾರೆ.

ಕ್ರೀಡಾಪಟುಗಳನ್ನು ಅವರ ದೈಹಿಕ ತೂಕದ ಆಧಾರದ ಮೇಲೆ ಬೇರೆ ಬೇರೆ ತೂಕದ ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ.

ಅಂಕಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಕ್ರೀಡಾಪಟು ಎತ್ತಿದ ತೂಕ  ಮತ್ತು ಅವರ ದೇಹದ ತೂಕವನ್ನು ಲೆಕ್ಕ ಹಾಕಿ, ಒಂದು ವಿಶೇಷ ಸೂತ್ರದ ಮೂಲಕ ಅಂಕಗಳನ್ನು ನಿರ್ಧರಿಸಲಾಗುತ್ತದೆ. ಯಾರಿಗೆ ಹೆಚ್ಚು ಅಂಕ ಸಿಗುತ್ತದೆಯೋ ಅವರು ವಿಜೇತರಾಗುತ್ತಾರೆ.

ಇದನ್ನೂ ಓದಿ: ಭಾರತದಲ್ಲಿ ಕಣಕ್ಕಿಳಿಯಲಿದೆ ‘ಬ್ರೆಝಿಲ್’

ಸಾಮಾನ್ಯ ಪವರ್‌ಲಿಫ್ಟಿಂಗ್‌ಗೂ ಇದಕ್ಕೂ ಏನು ವ್ಯತ್ಯಾಸ?

ಸಾಮಾನ್ಯ ಪವರ್‌ಲಿಫ್ಟಿಂಗ್‌ನಲ್ಲಿ ಸ್ಕ್ವಾಟ್, ಡೆಡ್‌ಲಿಫ್ಟ್ ಮತ್ತು ಬೆಂಚ್ ಪ್ರೆಸ್ ಎಂಬ ಮೂರು ವಿಧಗಳಿರುತ್ತವೆ. ಆದರೆ, ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕೇವಲ ಬೆಂಚ್ ಪ್ರೆಸ್ ಒಂದನ್ನು ಮಾತ್ರ ಅಧಿಕೃತ ಸ್ಪರ್ಧೆಯಾಗಿ ನಡೆಸಲಾಗುತ್ತದೆ.

Source link

“ನನಗೆ ಟೈಫಾಯ್ಡ್ ಆಗಿದೆ, ಆದರೆ ಪ್ರತಿಭಟನೆ ನಿಲ್ಲಲ್ಲ”: ವೀಡಿಯೋ ಸಂದೇಶದ ಮೂಲಕ CJP ಮುಖ್ಯಸ್ಥ ಅಭೀಜಿತ್ ದೀಪ್ಕೆ ಎಚ್ಚರಿಕೆ – Kannada News | Abhijit Deepke with Typhoid: NEET Scam Protest continues until Dharmendra Pradhan resigns

ದೆಹಲಿ, ಜು.25: ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭೀಜಿತ್ ದೀಪ್ಕೆ ಅವರಿಗೆ ಟೈಫಾಯ್ಡ್ (Typhoid)  ದೃಢಪಟ್ಟಿದೆ. ಆದರೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವರು ಎಕ್ಸ್​​​​​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ (X)ನಲ್ಲಿ ವೀಡಿಯೊ ಸಂದೇಶ ಹಂಚಿಕೊಂಡಿರುವ ಅಭೀಜಿತ್ ದೀಪ್ಕೆ, ತಮ್ಮ ಅನಾರೋಗ್ಯದ ಸ್ಥಿತಿ ಪ್ರಸ್ತುತ ನಡೆಯುತ್ತಿರುವ ಹೋರಾಟದ ಮೇಲೆ ಯಾವುದೇ ಪರಿಣಾಮ ಬೀರಲಾರದು ಎಂದು ತಿಳಿಸಿದ್ದಾರೆ. ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಯಶಸ್ವಿಯಾಗಿರುವುದಕ್ಕೆ ಬೆಂಬಲಿಗರು ಮತ್ತು ಪ್ರತಿಭಟನಾಕಾರರಿಗೆ ದೀಪ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

“ನನಗೆ ಟೈಫಾಯ್ಡ್ ಇರುವುದು ದೃಢಪಟ್ಟಿದೆ. ಆದರೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ದೇಶಾದ್ಯಂತ ಅತ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ, ಈ ಚಳವಳಿಯನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಹಾಗೂ ಅಭಿನಂದನೆಗಳು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಡೀಲ್ ಮಾಡಲು ಯಾರಾದರೂ 26 ದಿನ ಹಸಿವಿನಿಂದ ಇರುತ್ತಾರಾ?’: ಟೀಕಿಸಿದವರಿಗೆ ಖಡಕ್​​ ಉತ್ತರ ನೀಡಿದ ಸೋನಂ ವಾಂಗ್ಚುಕ್

ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ತಮ್ಮ 26 ದಿನಗಳ ಸುದೀರ್ಘ ಉಪವಾಸ ಮುಷ್ಕರವನ್ನು ಹಿಂಪಡೆದಿರುವುದಕ್ಕೆ ಅಭೀಜಿತ್ ದೀಪ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. “ಸೋನಮ್ ವಾಂಗ್‌ಚುಕ್ ಸರ್ ತಮ್ಮ ಉಪವಾಸ ಹಿಂಪಡೆದಿರುವುದು ನಮಗೆ ತೀವ್ರ ಸಮಾಧಾನ ತಂದಿದೆ. ಆದರೆ, ಪರೀಕ್ಷಾ ಅಕ್ರಮಗಳ ವಿರುದ್ಧ ಹೊಣೆಗಾರಿಕೆ ನಿಗದಿಪಡಿಸುವ ನಮ್ಮ ಬೇಡಿಕೆ ಜೀವಂತವಾಗಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಸಿಜೆಪಿ ಹೋರಾಟ ನಿಲ್ಲುವುದಿಲ್ಲ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಕಣಕ್ಕಿಳಿಯಲಿದೆ ‘ಬ್ರೆಝಿಲ್’ – Kannada News | Brazil Football Team Set for Historic Kolkata Debut in October

ವಿಶ್ವ ಫುಟ್‌ಬಾಲ್ ಜಗತ್ತಿನ ದೈತ್ಯ ತಂಡವಾದ ಬ್ರೆಝಿಲ್, ಮುಂಬರುವ ಅಕ್ಟೋಬರ್‌ನಲ್ಲಿ ಭಾರತದ ಫುಟ್‌ಬಾಲ್ ಕಾಶಿ ಖ್ಯಾತಿಯ ಕೋಲ್ಕತಾದಲ್ಲಿ ಐತಿಹಾಸಿಕ ಸೌಹಾರ್ದ ಪಂದ್ಯವನ್ನು ಆಡಲಿದೆ. ಈ ಸ್ನೇಹಪರ ಪಂದ್ಯಕ್ಕಾಗಿ ಬ್ರೆಝಿಲ್ ಫುಟ್‌ಬಾಲ್ ಕಾನ್ಫೆಡರೇಶನ್ (CBF) ಭಾರತದ ಸಂಘಟಕರೊಂದಿಗೆ ಅಂತಿಮ ಹಂತದ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ವರದಿಯಾಗಿದೆ.

ಐತಿಹಾಸಿಕ ಕ್ರೀಡಾಂಗಣ:

ಈ ಮಹತ್ವದ ಪಂದ್ಯವು ಕೋಲ್ಕತಾದ ಪ್ರಸಿದ್ಧ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ (ಯುವ ಭಾರತಿ ಕ್ರೀಡಾಂಗಣ) ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ.

ಪ್ರಸ್ತುತ ಮಾಹಿತಿ ಪ್ರಕಾರ, ಸೆಪ್ಟೆಂಬರ್ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳನ್ನು ಆಡಿದ ನಂತರ, ಬ್ರೆಝಿಲ್ ತಂಡವು ಅಕ್ಟೋಬರ್ ಆರಂಭದಲ್ಲಿ ಭಾರತಕ್ಕೆ ಪ್ರವಾಸ ಬೆಳೆಸಲಿದೆ.

ಸ್ಟಾರ್ ಆಟಗಾರರ ಆಗಮನ:

ಈ ಒಪ್ಪಂದವು ಅಧಿಕೃತಗೊಂಡರೆ, ವಿಶ್ವದ ಅತ್ಯಂತ ದುಬಾರಿ ಮತ್ತು ಜನಪ್ರಿಯ ಆಟಗಾರರಾದ ವಿನೀಶಿಯಸ್ ಜೂನಿಯರ್ ಸೇರಿದಂತೆ ಬ್ರೆಝಿಲ್​ನ ಹಲವು ಪ್ರಮುಖ ತಾರೆಗಳು ಕೋಲ್ಕತಾ ಮೈದಾನದಲ್ಲಿ ಕಣಕ್ಕಿಳಿಯಲಿದ್ದಾರೆ.

ಪ್ರತಿಸ್ಪರ್ಧಿ ಯಾರು?

ಬ್ರೆಝಿಲ್ ತಂಡವು ಯಾರ ವಿರುದ್ಧ ಕಣಕ್ಕಿಳಿಯಲಿದೆ ಎಂಬುದು ಇನ್ನೂ ಅಧಿಕೃತವಾಗಿ ನಿರ್ಧಾರವಾಗಿಲ್ಲ. ಆದರೆ ಅತ್ತ ಏಷ್ಯಾದ ಪ್ರವಾಸದ ಭಾಗವಾಗಿ ಬ್ರೆಝಿಲ್ ತಂಡವು ಅಕ್ಟೋಬರ್‌ನಲ್ಲಿ ಏಷ್ಯಾದ ಪ್ರಮುಖ ತಂಡಗಳ ವಿರುದ್ಧ ಆಡಲು ಯೋಜಿಸುತ್ತಿದೆ. ಮೂಲಗಳ ಪ್ರಕಾರ, ಆಸ್ಟ್ರೇಲಿಯಾ ಸರಣಿಯ ನಂತರ ಕೋಲ್ಕತಾದಲ್ಲಿ ಜಪಾನ್ ತಂಡದ ವಿರುದ್ಧ ಬ್ರೆಝಿಲ್ ಸೆಣಸಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಕೆಲವು ವರದಿಗಳು ಸೂಚಿಸಿವೆ.

ಕೋಲ್ಕತಾ ಆಯ್ಕೆಯಾಗಲು ಕಾರಣವೇನು?

ಇತ್ತೀಚೆಗೆ ಮುಕ್ತಾಯಗೊಂಡ 2026ರ ಫಿಫಾ ವಿಶ್ವಕಪ್ ವೇಳೆ ಕೋಲ್ಕತಾದಲ್ಲಿ ಬ್ರೆಝಿಲ್ ತಂಡಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ಮತ್ತು ಅಲ್ಲಿನ ಅಭಿಮಾನಿಗಳ ಕ್ರೇಝ್ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಬಾಂಗ್ಲಾದೇಶ್ ಮತ್ತು ಸಿಂಗಾಪುರ ದೇಶಗಳು ಸಹ ಈ ಪಂದ್ಯವನ್ನು ಆಯೋಜಿಸಲು ಆಸಕ್ತಿ ತೋರಿಸಿದ್ದವು. ಆದರೆ ಅಂತಿಮವಾಗಿ ಭಾರತದ ಸಂಘಟಕರೊಂದಿಗೆ ಮಾತುಕತೆಗಳು ಯಶಸ್ವಿ ಹಂತವನ್ನು ತಲುಪಿವೆ ಎಂದು ವರದಿಯಾಗಿದೆ. ಹೀಗಾಗಿ ಅಕ್ಟೋಬರ್​ನಲ್ಲಿ ಬ್ರೆಝಿಲ್ ಪಡೆ ಕೊಲ್ಕತ್ತಾದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.

ಅರ್ಜೆಂಟೀನಾ ಕಣಕ್ಕಿಳಿದಿತ್ತು!

2011ರಲ್ಲಿ ವಿಶ್ವದ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ರಾಷ್ಟ್ರೀಯ ತಂಡ ಕೋಲ್ಕತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ವೆನೆಜುವೆಲಾ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು ಆಡಿತ್ತು. ಈ ವೇಳೆ ಮೆಸ್ಸಿ ಅವರ ಅದ್ಭುತ ಆಟವನ್ನು ಕಣ್ಣುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು.

ಇದನ್ನೂ ಓದಿ: ಒಂದೇ ಒಂದು ಪಂದ್ಯ ಆಡದಿದ್ದರೂ ಭಾರತಕ್ಕೆ ಕಂಚಿನ ಪದಕ ಖಚಿತವಾಗಿದ್ದು ಹೇಗೆ?

ಹಾಗೆಯೇ ಜರ್ಮನಿಯ ದೈತ್ಯ ಕ್ಲಬ್ ಬಾಯರ್ನ್ ಮ್ಯೂನಿಚ್ ಭಾರತದಲ್ಲಿ ಎರಡು ಬಾರಿ ಪಂದ್ಯಗಳನ್ನು ಆಡಿದೆ. 2008ರಲ್ಲಿ ಜರ್ಮನಿಯ ಪೌರಾಣಿಕ ಗೋಲ್‌ಕೀಪರ್ ಒಲಿವರ್ ಕಾನ್ ಅವರ ವಿದಾಯದ ಪಂದ್ಯವನ್ನು ಕೋಲ್ಕತಾದಲ್ಲಿ ಮೋಹನ್ ಬಾಗನ್ ತಂಡದ ವಿರುದ್ಧ ಆಯೋಜಿಸಲಾಗಿತ್ತು.

2012ರಲ್ಲಿ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾರತ ರಾಷ್ಟ್ರೀಯ ತಂಡದ ವಿರುದ್ಧ ಬಾಯರ್ನ್ ಮ್ಯೂನಿಚ್ ಪ್ರದರ್ಶನ ಪಂದ್ಯವನ್ನು ಆಡಿತ್ತು. ಇದೀಗ ಬ್ರೆಝಿಲ್ ತಂಡಕ್ಕೆ ವೇದಿಕೆ ಒದಗಿಸಲು ಸಂಘಟಕರು ಮುಂದಾಗಿದ್ದಾರೆ.

Source link

ಅಪರೂಪದ ಅವಕಾಶ ಮಿಸ್ ಮಾಡಿಕೊಂಡ ದಳಪತಿ ವಿಜಯ್; ಕಾರಣವೇನು? – Kannada News | Vijay’s Last Film Jana Nayagan Misses 100 Cr Milestone Due to Divided Box Office Response

ದಳಪತಿ ವಿಜಯ್ (Vijay) ನಟನೆಯ ಬಹುನಿರೀಕ್ಷಿತ ಹಾಗೂ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 25 ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಆದರೆ ಚಿತ್ರಕ್ಕೆ ಆರಂಭದಲ್ಲೇ ಪ್ರೇಕ್ಷಕರಿಂದ ನೆಗೆಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳು ಆವೃತ್ತಿಗೆ ಉತ್ತಮ ಓಪನಿಂಗ್ ಸಿಕ್ಕಿದ್ದರೂ, ತೆಲುಗು, ಹಿಂದಿ ಪ್ರೇಕ್ಷಕರಿಂದ ಮಾತ್ರ ಧನಾತ್ಮಕ ವಿಮರ್ಶೆ ವ್ಯಕ್ತವಾಗಿಲ್ಲ. ಇದು ಈಗ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಸಿನಿಮಾ ಮೊದಲ ದಿನ ಎಲ್ಲಾ ಭಾಷೆಗಳಿಂದ ಸೇರಿ ಒಟ್ಟು 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಜಯ್ ಅವರ ಕೊನೆಯ ಚಿತ್ರವಾದ್ದರಿಂದ ಮೊದಲ ದಿನವೇ 100 ಕೋಟಿ ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಲಿದೆ ಎಂದು ಫ್ಯಾನ್ಸ್ ಕಾಯುತ್ತಿದ್ದರು. ಆದರೆ ಚಿತ್ರಕ್ಕೆ ಸಿಕ್ಕ ನೆಗೆಟಿವ್ ಟಾಕ್‌ನಿಂದಾಗಿ ಈ ಮಹತ್ತರ ಮೈಲಿಗಲ್ಲನ್ನು ಸಿನಿಮಾ ಮಿಸ್ ಮಾಡಿಕೊಂಡಿದೆ. ಈ ಮೂಲಕ ಅಪರೂಪದ ಸಾಧನೆ ಮಿಸ್ ಆಗಿದೆ. ಈ ಮೊದಲು ರಿಲೀಸ್ ಆದ ವಿಜಯ್ ನಟನೆಯ ‘ಲಿಯೋ’ ಹಾಗೂ ‘ಗೋಟ್’ ಸಿನಿಮಾ ಮೊದಲ ದಿನ ನೂರು ಕೋಟಿ ರೂಪಾಯಿ ಗಳಿಕೆ ಮಾಡಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.

‘ಜನ ನಾಯಗನ್’ ಸಿನಿಮಾ ಬಾಲಕೃಷ್ಣ ನಟನೆಯ ಸೂಪರ್ ಹಿಟ್ ‘ಭಗವಂತ್ ಕೇಸರಿ’ ಚಿತ್ರದ ರಿಮೇಕ್ ಎಂದು ತಿಳಿದ ಮೇಲೆ ಪ್ರೇಕ್ಷಕರು ಚಿತ್ರದ ಮೇಲಿನ ಆಸಕ್ತಿ ಕಳೆದುಕೊಂಡಿದ್ದರು. ಕಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ ಎಂದು ನಿರ್ದೇಶಕ ವಿನೋದ್ ಪ್ರಚಾರ ಮಾಡಿದ್ದರು. ಆದರೂ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ರೆಸ್ಪಾನ್ಸ್ ಸಿಕ್ಕಿಲ್ಲ.

ಸಿನಿಮಾದಲ್ಲಿ ಮಾಡಲಾದ ಬದಲಾವಣೆಗಳೇ ಚಿತ್ರಕ್ಕೆ ಮೈನಸ್ ಪಾಯಿಂಟ್ ಆಗಿವೆ ಎಂದು ಪ್ರೇಕ್ಷಕರು ದೂರಿದ್ದಾರೆ. ಮೂಲ ಚಿತ್ರವನ್ನು ಇದ್ದ ಹಾಗೆಯೇ ಮಾಡಿದ್ದರೆ ಸಿನಿಮಾ ಗೆಲ್ಲುತ್ತಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ದ್ವಿತೀಯಾರ್ಧದಲ್ಲಿ ಅನಗತ್ಯವಾಗಿ ಸೇರಿಸಲಾದ ರಾಜಕೀಯ ಅಂಶಗಳು ಸಿನಿಮಾದ ಮಜಲನ್ನೇ ಹಾಳು ಮಾಡಿವೆ.

ಇದನ್ನೂ ಓದಿ: ‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ

ಇದರ ನಡುವೆ ಸಿನಿಮಾ ರಿಲೀಸ್​ಗೂ ಮೊದಲೇ ಆನ್‌ಲೈನ್‌ನಲ್ಲಿ ಲೀಕ್ ಆಗಿ ಪೈರಸಿ ಸೈಟ್‌ಗಳಿಗೆ ಲಗ್ಗೆ ಇಟ್ಟಿದೆ. ಇದು ಕೂಡ ಚಿತ್ರಮಂದಿರಗಳ ಕಲೆಕ್ಷನ್ ಕುಸಿಯಲು ಪ್ರಮುಖ ಕಾರಣವಾಗಿದೆ. ಚಿತ್ರದಲ್ಲಿ ನಾಯಕಿಯರಾಗಿ ಪೂಜಾ ಹೆಗ್ಡೆ ಮತ್ತು ಮಮಿತಾ ಬೈಜು ನಟಿಸಿದ್ದು, ಎಚ್. ವಿನೋದ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:07 am, Sat, 25 July 26

Source link

ವಿದ್ಯುತ್ ಕಣ್ಣಾಮುಚ್ಚಾಲೆಗೆ ಬಲಿಯಾಯ್ತು ಬಂಗಾರದಂತಹ ಬೆಳೆ: ಜೆಸ್ಕಾಂ ವಿರುದ್ಧ ಸಿಟ್ಟಿಗೆದ್ದು ಪಪ್ಪಾಯ ತೋಟವನ್ನೇ ನಾಶ ಮಾಡಿದ ರೈತ! – Kannada News | Power Crisis Ruins Papaya Crop; Frustrated Yadgir Farmer Destroys Plantation

ಜೆಸ್ಕಾಂ ವಿರುದ್ಧ ಸಿಟ್ಟಿಗೆದ್ದು ಪಪ್ಪಾಯ ತೋಟವನ್ನೇ ನಾಶ ಮಾಡಿದ ರೈತ!

ಯಾದಗಿರಿ, ಜುಲೈ 25: ಒಂದು ಕಡೆ ಕೈಕೊಟ್ಟ ಮಳೆರಾಯ, ಇನ್ನೊಂದೆಡೆ ಜೆಸ್ಕಾಂ (GESCOM) ಇಲಾಖೆಯ ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆ. ಜಮೀನಿನಲ್ಲಿ ಬೋರ್‌ವೆಲ್ ಇದ್ದರೂ ಬೆಳೆಗೆ ನೀರು ಹಾಯಿಸಲಾಗದೆ, ಕಣ್ಣೆದುರೇ ಒಣಗಿ ಹೋಗುತ್ತಿದ್ದ ಬಂಗಾರದಂತಹ ಪಪ್ಪಾಯ ಬೆಳೆಯನ್ನು ಕಂಡು ಮನನೊಂದ ರೈತನೊಬ್ಬ ತಾನೇ ಕೊಡಲಿ ಹಾಗೂ ಕೊಡುಗೋಲಿನಿಂದ ಗಿಡಗಳನ್ನು ಕತ್ತರಿಸಿ ನಾಶಪಡಿಸಿರುವ ಭಾವುಕ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನಡೆದಿದೆ. ಶಹಾಪುರದ ರೈತ ಅಮರೇಶ್ ಎಂಬುವರೇ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಸಂಪೂರ್ಣ ಪಪ್ಪಾಯ ಬೆಳೆಯನ್ನು ಕತ್ತರಿಸಿ ಆಕ್ರೋಶ ಹೊರಹಾಕಿದ ನಿರ್ಭಾಗ್ಯ ಅನ್ನದಾತ.

ವರ್ಷಪೂರ್ತಿ ಪಟ್ಟ ಶ್ರಮ ನೀರುಪಾಲು

ರೈತ ಅಮರೇಶ್ ಅವರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಸಾಲ-ಸೋಲ ಮಾಡಿ, ಒಂದು ವರ್ಷದಿಂದ ಪಪ್ಪಾಯ ಬೆಳೆಯನ್ನು ಜೀವಕ್ಕಿಂತ ಹೆಚ್ಚಾಗಿ ಸಾಕಿ ಬೆಳೆಸಿದ್ದರು. ಆರಂಭದಲ್ಲಿ ಬೇಸಿಗೆಯ ಅತಿಯಾದ ಬಿಸಿಲಿನ ಬೇಗೆಯನ್ನು ತಡೆದುಕೊಂಡು ಬೆಳೆಯನ್ನು ರಕ್ಷಿಸಿಕೊಂಡಿದ್ದರು. ಇನ್ನು ಕೇವಲ 15 ದಿನಗಳು ಕಳೆದಿದ್ದರೆ ಪಪ್ಪಾಯ ಕೊಯ್ಲಿಗೆ ಬಂದು ಕೈತುಂಬಾ ಲಾಭ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಕಡೆಯ ಕ್ಷಣದಲ್ಲಿ ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಸೂಕ್ತ ಸಮಯಕ್ಕೆ ವಿದ್ಯುತ್ ಪೂರೈಸದ ಕಾರಣ ಗಿಡಗಳಲ್ಲಿದ್ದ ಕಾಯಿಗಳೆಲ್ಲ ನೀರಿಲ್ಲದೆ ಒಣಗಿ ಹಾಳಾಗತೊಡಗಿದವು.

ಜೆಸ್ಕಾಂ ವಿರುದ್ಧ ಕಣ್ಣೀರಿಟ್ಟ ಅನ್ನದಾತ

“ನಮ್ಮ ಜಮೀನಿನಲ್ಲಿ ಬೋರ್‌ವೆಲ್ ಇದ್ದರೂ ಕರೆಂಟ್ ಇಲ್ಲದೆ ಬೆಳೆಗೆ ನೀರುಣಿಸಲು ಸಾಧ್ಯವಾಗಲಿಲ್ಲ. ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸಾಲು ಸಾಲು ಮನವಿಗಳನ್ನು ಮಾಡಿ, ಕಾಲಿಗೆ ಬಿದ್ದು ಗೋಗರೆದರೂ ಅವರು ನಮ್ಮ ನೋವಿಗೆ ಸ್ಪಂದಿಸಲಿಲ್ಲ. ಇನ್ನೇನು ಕೈಗೆ ಬಂದ ಬೆಳೆ ಕಣ್ಣೆದುರೇ ಹಾಳಾಗುತ್ತಿರುವುದನ್ನು ನೋಡಲಾಗದೆ, ಬೇಸರ ಮತ್ತು ಜೆಸ್ಕಾಂ ಮೇಲಿನ ಸಿಟ್ಟಿನಿಂದ ಗಿಡಗಳನ್ನು ಕತ್ತರಿಸಿ ಹಾಕಿದ್ದೇನೆ” ಎಂದು ರೈತ ಅಮರೇಶ್ ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತನಿಗೆ ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ ತಕ್ಷಣವೇ ಸೂಕ್ತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನೀಟ್ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ 400 ಮಂದಿ ಭಾಗಿಯಾಗಿರೋದು ಪತ್ತೆ! – Kannada News | NEET Protest: Delhi Police Identify 400 Criminals Amidst Ongoing Demonstrations

ದೆಹಲಿ, ಜು.25: ರಾಷ್ಟ್ರ ರಾಜಧಾನಿ ಯಲ್ಲಿ ನಡೆಯುತ್ತಿರುವ ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ, ಅಪರಾಧ ಹಿನ್ನೆಲೆಯುಳ್ಳ 400 ಮಂದಿ ಭಾಗಿಯಾಗಿರುವುದು ಪತ್ತೆಯಾಗಿರುವುದು ಕಳವಳ ಮೂಡಿಸಿದೆ. ದೆಹಲಿ ಪೊಲೀಸರು ಮುಖ ಗುರುತಿಸುವಿಕೆ ವ್ಯವಸ್ಥೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿ ಪ್ರತಿಭಟನೆಯಲ್ಲಿ ಭಾಗಿಯಾದ ಅಪರಾಧಿಗಳನ್ನು ಪತ್ತೆಹಚ್ಚುತ್ತಿದ್ದಾರೆ. ಸಾಹಿಲ್ ಸೈಫಿ, ಮನೋಜ್ ಕುಮಾರ್, ರೂಬಲ್ ಸೇರಿದಂತೆ ಹಲವರ ವಿರುದ್ಧ ಆರೋಪಗಳಿವೆ. ಈ ಮಧ್ಯೆ, ನೀಟ್ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಪ್ರಹಾರ ಮತ್ತು ದೆಹಲಿ ಪೊಲೀಸರ ಕ್ರಮಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದ್ದು, ಜುಲೈ 27ರಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಇದರ ವಿಚಾರಣೆ ನಡೆಸಲಿದೆ. ದೆಹಲಿಯಲ್ಲಿ ಭದ್ರತಾ ಕಾರಣಗಳಿಗಾಗಿ 18 ಮೆಟ್ರೋ ನಿಲ್ದಾಣಗಳನ್ನು ನಾಲ್ಕು ದಿನಗಳ ಕಾಲ ಬಂದ್ ಮಾಡಲಾಗಿದ್ದು, ನಗರದ ಜನಜೀವನಕ್ಕೆ ಅಡಚಣೆಯುಂಟಾಗಿದೆ. ಪ್ರತಿಭಟನೆಗಳು ಇಂದಿಗೂ ಮುಂದುವರಿದಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​​​ ಮಾಡಿ

 

 

Source link

ನೆಲಮಂಗಲದಲ್ಲಿ 8ನೇ ಶತಮಾನದ ಅಪರೂಪದ ‘ಹುಲಿ ವೀರಗಲ್ಲು’ ಶಾಸನ ಪತ್ತೆ – Kannada News | Rare Ganga Era Hero Stone in Byrasandra: Sivamarenadi’s Tiger Fight Uncovered

ನೆಲಮಂಗಲ, ಜು.25: ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ೮ನೇ ಶತಮಾನದ ಗಂಗರ ಕಾಲದ ಅಪರೂಪದ ಶಿಲಾ ಶಾಸನ ಹಾಗೂ ವೀರಗಲ್ಲು ಪತ್ತೆಯಾಗಿದೆ. ಜಮೀನೊಂದರಲ್ಲಿ ಕೃಷಿ ಕೆಲಸ ಮಾಡುವಾಗ ಈ ಪವಿತ್ರ ಹಾಗೂ ಐತಿಹಾಸಿಕ ಪಳೆಯುಳಿಕೆ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ರಂಗಸ್ವಾಮಯ್ಯ ಎಂಬುವವರ ಜಮೀನಿನಲ್ಲಿ ಈ ಶಾಸನ ಪತ್ತೆಯಾಗಿದ್ದು, ಇದನ್ನು ಪ್ರಸಿದ್ಧ ಇತಿಹಾಸ ತಜ್ಞ ಬಾಲಸುಬ್ರಹ್ಮಣ್ಯ ರಾವ್ ಅವರು ಪರಿಶೀಲಿಸಿ ಇದರ ಮಹತ್ವವನ್ನು ದೃಢೀಕರಿಸಿದ್ದಾರೆ. ಪತ್ತೆಯಾಗಿರುವ ಈ ವೀರಗಲ್ಲಿನಲ್ಲಿ ಗಂಗರ ಕಾಲದ ಹಳೆಯ ಕನ್ನಡ ಅಕ್ಷರಗಳಲ್ಲಿ ಸಾಲುಗಳನ್ನು ಕೆತ್ತಲಾಗಿದೆ. ಇದಕ್ಕೆ ಇತಿಹಾಸ ನಂಟಿದೆ. 8ನೇ ಶತಮಾನದಲ್ಲಿ ಗಂಗರ ಪ್ರಮುಖ ರಾಜಧಾನಿಯಾಗಿ ‘ಮಣ್ಣೆ’ (ಮಾನ್ಯಪುರ) ಮೆರೆಯುತ್ತಿತ್ತು. ತ್ತಂಣೀಯರಟ್ಟಮ್ಮರೊಡೆಯನ ಮಗನಾದ ಸಿವಮರೆನಾದಿ ಎಂಬುವವನು ಮಣ್ಣೆನಾಡಿನ ನಾಡಗೌಡನಾಗಿದ್ದ ಮಾರಮ್ಮನ ಸೇವಕನಾಗಿದ್ದನು. ಕ್ರೂರ ಹುಲಿಯೊಂದು ದಾಳಿ ಮಾಡಿದಾಗ ಸಿವಮರೆನಾದಿಯು ಜನರನ್ನು ರಕ್ಷಿಸಲು ಹುಲಿಯೊಂದಿಗೆ ವೀರಾವೇಶದಿಂದ ಹೋರಾಡಿ ಪ್ರಾಣತ್ಯಾಗ ಮಾಡಿದ್ದನು. ವೀರಗಲ್ಲಿನಲ್ಲಿ ಕೇವಲ ಬರಹ ಮಾತ್ರವಲ್ಲದೆ, ಕಲಾತ್ಮಕವಾದ ಶಿಲ್ಪಕಲೆಯನ್ನೂ ಕೆತ್ತಲಾಗಿದೆ. ವೀರನು ತನ್ನ ಒಂದು ಕೈಯಲ್ಲಿ ಹುಲಿಯನ್ನು ಗಟ್ಟಿಯಾಗಿ ಹಿಡಿದು, ಮತ್ತೊಂದು ಕೈಯಲ್ಲಿ ಕತ್ತಿಯನ್ನು ಬೀಸುತ್ತಾ ಸೆಳೆದಾಡುತ್ತಿರುವ ಕಲ್ಪನಾತೀತ ದೃಶ್ಯವನ್ನಿಲ್ಲಿ ಚಿತ್ರಿಸಲಾಗಿದೆ. ನಾಡಿನ ರಕ್ಷಣೆಗೆ ಪ್ರಾಣ ತೆತ್ತ ಈ ವೀರನ ಆತ್ಮವನ್ನು ದೇವಲೋಕದ ಅಪ್ಸರೆಯರು ಗೌರವದಿಂದ ಕರೆದೊಯ್ಯುತ್ತಿರುವ ದೃಶ್ಯವನ್ನೂ ಕಲ್ಲಿನಲ್ಲಿ ಕೆತ್ತಲಾಗಿದೆ. ಈ ಶಾಸನವು ಗಂಗರ ಕಾಲದ ಆಡಳಿತ, ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಆ ಕಾಲದಲ್ಲಿದ್ದ ವೀರರ ತ್ಯಾಗ ಮನೋಭಾವಕ್ಕೆ ಸಾಕ್ಷಿಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Exit mobile version