ಮತದಾರರ ಪಟ್ಟಿ ಪರಿಷ್ಕರಣೆ: 5.54 ಕೋಟಿ ನಮೂನೆಗಳ ವಿತರಣೆ ಪೂರ್ಣ; ASDDO ಪಟ್ಟಿಯಲ್ಲಿ 52.97 ಲಕ್ಷ ಮತದಾರರು ! – Kannada News | Voter List Revision: 5.54 Crore Forms Distributed in Karnataka; 52.97 Lakh Voters Marked Under ASDDO Category

ಬೆಂಗಳೂರು, ಜುಲೈ 24: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಮಹತ್ವದ ಹಂತ ತಲುಪಿದ್ದು, ರಾಜ್ಯದ ಬೂತ್ ಮಟ್ಟದ ಅಧಿಕಾರಿಗಳು (BLO) 5.54 ಕೋಟಿ ಎಣಿಕೆ ನಮೂನೆಗಳ ಶೇ.100ರಷ್ಟು ವಿತರಣೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ಆದರೆ, 52.97 ಲಕ್ಷ ಮತದಾರರನ್ನು ‘ASDDO’ (Absent, Shifted, Dead, Duplicate and Others) ವಿಭಾಗದಲ್ಲಿ ಗುರುತಿಸಲಾಗಿದ್ದು, ಆಗಸ್ಟ್ 17ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರದು ಎಂದು ತಿಳಿಸಲಾಗಿದೆ. ಒಂದೊಮ್ಮೆ ಪರಿಶೀಲನೆಯಲ್ಲಿ ತಪ್ಪಾಗಿದ್ದರೆ ಕ್ರಮದ ಭರವಸೆಯನ್ನೂ ನೀಡಲಾಗಿದೆ.

ಇನ್ನೂ ಶೇ.69.51 ಮಾಹಿತಿ ಮಾತ್ರ ಡಿಜಿಟಲೀಕರಣ

ಜೂನ್ 29ರಂದು ಆರಂಭವಾದ ಮನೆ-ಮನೆ ಸಮೀಕ್ಷೆಯಲ್ಲಿ 59,050 BLOಗಳು ನಮೂನೆಗಳನ್ನು ವಿತರಿಸಿದ್ದಾರೆ. ಆದರೆ, ಭರ್ತಿ ಮಾಡಿದ ನಮೂನೆಗಳನ್ನು BLO ಆ್ಯಪ್‌ಗೆ ಅಪ್‌ಲೋಡ್ ಮಾಡುವ ಡಿಜಿಟಲೀಕರಣ ಕಾರ್ಯ ಶೇ.69.51ರಷ್ಟೇ ಪೂರ್ಣಗೊಂಡಿದೆ. 2002ರ SIR ದಾಖಲೆಗಳ ಸೆಲ್ಫ್​​ ಮ್ಯಾಪಿಂಗ್​​ ಹಾಗೂ ಪ್ರೊಜೆನಿ ಮ್ಯಾಪಿಂಗ್ ಮಾಹಿತಿ ಪತ್ತೆಹಚ್ಚುವಲ್ಲಿ ಉಂಟಾಗಿರುವ ತೊಂದರೆಯಿಂದ ಡಿಜಿಟಲೀಕರಣ ನಿಧಾನವಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: SIR ಕರ್ತವ್ಯದ ವೇಳೆ ಮತ್ತೊಂದು ದುರಂತ; ಬಿಎಲ್‌ಒ ಶಿಕ್ಷಕಿ ಹೃದಯಾಘಾತದಿಂದ ಸಾವು!

ಆಗಸ್ಟ್ 8ರೊಳಗೆ ನಮೂನೆ ಸಲ್ಲಿಸುವ ಎಲ್ಲ ಮತದಾರರ ಹೆಸರನ್ನು ಆಗಸ್ಟ್ 17ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. SIR ಮ್ಯಾಪಿಂಗ್ ಮಾಹಿತಿ ಇಲ್ಲದಿದ್ದರೆ ಅಥವಾ ಹೊಂದಿಕೆಯಾಗದಿದ್ದರೆ, ಮತದಾರರಿಗೆ ನೋಟಿಸ್ ನೀಡಿ ನಮೂನೆಯ ಹಿಂಭಾಗದಲ್ಲಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸುವಂತೆ ಸೂಚಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 19ರಂದು ಪ್ರಕಟವಾಗುವ ಮೊದಲು ಚುನಾವಣಾ ನೋಂದಣಿ ಅಧಿಕಾರಿ (ERO) ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.

ಸಹಾಯಕ್ಕಾಗಿ BLO ಅಥವಾ BLA ಸಂಪರ್ಕಿಸಬಹುದು

ಡಿಜಿಟಲೀಕರಣ ಕಾರ್ಯ ಆಗಸ್ಟ್ 8ರಂದು ಪೂರ್ಣಗೊಳ್ಳಲಿದೆ. ನಮೂನೆ ಭರ್ತಿ ಮಾಡಲು ಅಥವಾ 2002ರ ದಾಖಲೆಗಳನ್ನು ಪತ್ತೆಹಚ್ಚಲು ತೊಂದರೆ ಇರುವ ಮತದಾರರು ತಮ್ಮ BLO ಅಥವಾ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳಾದ (BLA) ಸಹಾಯ ಪಡೆಯಬಹುದು. ಭರ್ತಿ ಮಾಡಿದ ನಮೂನೆಗಳನ್ನು BLOಗೆ ಸಲ್ಲಿಸಿ, ಅವರಿಂದ ಸಹಿ ಮಾಡಿದ ಸ್ವೀಕೃತಿ ಪತ್ರ ಪಡೆಯುವಂತೆ ಸೂಚಿಸಲಾಗಿದೆ.

3.85 ಕೋಟಿ ನಮೂನೆಗಳು ಸಲ್ಲಿಕೆ

ಇದುವರೆಗೆ 3.85 ಕೋಟಿ ನಮೂನೆಗಳು ಸಲ್ಲಿಕೆಯಾಗಿದ್ದು, 1.56 ಕೋಟಿ ಮತದಾರರು ಸೆಲ್ಫ್​​ ಮ್ಯಾಪಿಂಗ್​​ ಮಾಡಿದ್ದಾರೆ. 1.93 ಕೋಟಿ ಮಂದಿ ಪ್ರೊಜೆನಿ ಮ್ಯಾಪಿಂಗ್ ಪೂರ್ಣಗೊಳಿಸಿದ್ದಾರೆ. 17.19 ಲಕ್ಷ (3.1%) ನಮೂನೆಗಳು ಯಾವುದೇ ಮ್ಯಾಪಿಂಗ್ ಮಾಹಿತಿ ಇಲ್ಲದೆ ಸಲ್ಲಿಕೆಯಾಗಿವೆ. ಮ್ಯಾಪಿಂಗ್ ಮಾಹಿತಿ ಇಲ್ಲದೆ ನಮೂನೆ ಸಲ್ಲಿಸಿರುವ ಮತದಾರರಿಗೆ ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರನ್ನು ಗೌರವಿಸುತ್ತೇನೆ’; ಶುಭ್​ಮನ್ ಗಿಲ್ – Kannada News | NEET Protest Escalates: Shubman Gill and Sachin Tendulkar Urge Peace, Effort

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿರುದ್ಧ ಕಳೆದ ಹಲವು ದಿನಗಳಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳು ( NEET Protest) ನಡೆಯುತ್ತಿವೆ. ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಿಂದ ಕೆರಳಿದ ವಿದ್ಯಾರ್ಥಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದು ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದೀಗ ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭ್​ಮನ್ ಗಿಲ್ (Shubman Gill) ಮೌನ ಮುರಿದಿದ್ದಾರೆ. ಪರಸ್ಪರ ಗೌರವ, ಸಹಾನುಭೂತಿ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಗಳ ಮೇಲೆ ಗಮನಹರಿಸುವಂತೆ ಗಿಲ್ ಮನವಿ ಮಾಡಿದ್ದಾರೆ.

ಭವಿಷ್ಯವನ್ನು ರೂಪಿಸುವ ಶಕ್ತಿ

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಗಿಲ್, ‘ಯುವ ಭಾರತೀಯನಾಗಿ, ನಮ್ಮ ಪೀಳಿಗೆ ಕಲಿಯಲು, ಕನಸು ಕಾಣಲು ಮತ್ತು ಅವರು ಆಶಿಸುವ ಭವಿಷ್ಯವನ್ನು ರೂಪಿಸಲು ಪ್ರತಿಯೊಂದು ಅವಕಾಶಕ್ಕೂ ಅರ್ಹರು ಎಂದು ನಾನು ನಂಬುತ್ತೇನೆ. ತಮ್ಮ ಅಭಿಪ್ರಾಯಗಳನ್ನು ಶಾಂತಿಯುತವಾಗಿ ವ್ಯಕ್ತಪಡಿಸುವಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬ ಯುವಕನನ್ನು ನಾನು ಗೌರವಿಸುತ್ತೇನೆ. ಶಿಕ್ಷಣವು ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ. ನಾವು ಸಹಾನುಭೂತಿ, ಪರಸ್ಪರ ಗೌರವ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಹಿತಾಸಕ್ತಿಗಳೊಂದಿಗೆ ಮುಂದುವರಿಯುತ್ತೇವೆ ಎಂದು ನಾನು ಭಾವಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಫಲಕ್ಕಿಂತ ಶ್ರಮಕ್ಕೆ ಗೌರವ ನೀಡುವ ಸಮಾಜ ನಮಗೆ ಬೇಕು

ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್ ಕೂಡ ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ‘ನನ್ನ ತಂದೆ ಪ್ರಾಧ್ಯಾಪಕರು, ಅನೇಕರಿಗೆ ಮಾರ್ಗದರ್ಶಕರಾಗಿದ್ರು. ಬಾಲ್ಯದಲ್ಲೇ ನನ್ನ ತಂದೆ ಅಮೂಲ್ಯ ಜೀವನ ಪಾಠ ಕಲಿಸಿದ್ದಾರೆ. ವಿಫಲತೆ ತಪ್ಪಲ್ಲ ಆದರೆ, ಮೋಸ ಮಾಡುವುದು ತಪ್ಪು. ಎಂದೂ ಅಡ್ಡದಾರಿ ಹಿಡಿಯಬೇಡ ಎಂದು ನನ್ನ ತಂದೆ ಹೇಳಿದ್ರು. ಸಮಾಜದ ಸಂಸ್ಕೃತಿ ರೂಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಫಲಕ್ಕಿಂತ ಶ್ರಮಕ್ಕೆ ಗೌರವ ನೀಡುವ ಸಮಾಜ ನಮಗೆ ಬೇಕು. ಅರ್ಹತೆಗಿಂತ ಅಡ್ಡದಾರಿ ಹುಡುಕುವ ಮನೋಭಾವ ಬೇಡ.

ನೀಟ್ ಪ್ರತಿಭಟನೆ, ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ

ವಿದ್ಯಾರ್ಥಿಗಳ ನಿರಾಶೆ ಸಹಜ. ಶ್ರಮಕ್ಕೆ ಫಲ ಸಿಗದಿದ್ದಾಗ ಆಗುವ ನೋವು ಅರ್ಥವಾಗುತ್ತೆ. ಈ ನಿರಾಶೆ ಮತ್ತೆ ಬರದಂತೆ ನೋಡಿಕೊಳ್ಳಬೇಕು.​​ ಇದಕ್ಕಾಗಿ ಎಲ್ಲರೂ ಕೂಡಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಯುವ ಭಾರತ ಕನಸು ಮತ್ತು ಉತ್ಸಾಹದಿಂದ ತುಂಬಿದೆ ಯುವಕರೇ ದೇಶದ ಯಶಸ್ಸಿನ ನಿಜವಾದ ಶಕ್ತಿ. ​​ಯುವಕರಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಜವಾಬ್ದಾರಿ. ಪೋಷಕರದ್ದು ಹಾಗೂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಸ್ನೇಹಿತರು, ಬಂಧುಗಳ ಬೆಂಬಲ ಕೂಡ ಅಗತ್ಯ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಸಿಕ್ಕರೂ ಬೆಳಕಿಲ್ಲ! ಕೊಡಗಿನಲ್ಲಿ ಪ್ರವಾಹ ಸಂತ್ರಸ್ತರಿಗೆ ಕತ್ತಲ ಭಾಗ್ಯ – Kannada News | Kodagu Flood Victims Get New Homes After 9 Years, Still Await Electricity

ಪ್ರವಾಹ ಸಂತ್ರಸ್ತರಿಗಾಗಿ ನಿರ್ಮಿಸಿರುವ ಮನೆಗಳುImage Credit source: tv9 kannada

ಕೊಡಗು, ಜುಲೈ 24: ಅವರೆಲ್ಲಾ 2018ರ ಭೀಕರ ಭೂ ಕುಸಿತ ಪ್ರವಾಹದಲ್ಲಿ ಮನೆ, ಮಠ ಕಳೆದುಕೊಂಡವರು (Flood Victims). ಸೂರಿಗಾಗಿ 9 ವರ್ಷಗಳಿಂದ ಕಾದವರು. ಇದೀಗ ಮನೆ ಸಿಕ್ಕಿದೆ. ಖುಷಿ ಖುಷಿಯಾಗಿ ತಮ್ಮ ಹೊಸ ಮನೆಗೆ ಕಾಲಿಟ್ಟ ಜನರಿಗೆ ಶಾಕ್​​ ಎದುರಾಗಿದೆ. ಪ್ರವಾಹ ಸಂತ್ರಸ್ತರಿಗೆ ಚೆಸ್ಕಾಂ ಕತ್ತಲ (Electricity) ಭಾಗ್ಯ ಕರುಣಿಸಿದೆ.

9 ವರ್ಷಗಳ ಬಳಿಕ 200 ಮನೆಗಳ ನಿರ್ಮಾಣ

2018 ಮತ್ತು 19ರಲ್ಲಿ ಸಂಭವಿಸಿದ್ದ ಭೂ ಕುಸಿತ ಮತ್ತು ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಇದೀಗ 200 ಮನೆಗಳನ್ನ ನಿರ್ಮಾಣ ಮಾಡಲಾಗಿದೆ. ಇನ್ಫೋಸಿಸ್ ಪ್ರತಿಷ್ಠಾನ ವತಿಯಿಂದ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ 200 ಮನೆಗಳನ್ನ ನಿರ್ಮಾಣ ಮಾಡಲಾಗಿದೆ. ಕುಂಟುತ್ತಾ ಸಾಗಿದ್ದ ಕಾಮಗಾರಿ ಕೊನೆಗೂ ಪೂರ್ಣವಾಗಿ 9 ವರ್ಷಗಳ ಬಳಿಕ ಮನೆಗಳು ಪೂರ್ಣವಾಗಿವೆ.

ಇದನ್ನೂ ಓದಿ: ಬೆಂಗಳೂರು ಇತಿಹಾಸದಲ್ಲೇ ಅತ್ಯಂತ ಎತ್ತರ ಅಪಾರ್ಟ್ಮೆಂಟ್ ಕಟ್ಟಡ ತೆರವಿಗೆ ಜಿಬಿಎ ತೀರ್ಮಾನ: ಏಕೆ, ಏನಿದು?

ತಿಂಗಳ ಹಿಂದೆ ಈ ಮನೆಗಳನ್ನ ಜಿಲ್ಲಾಡಳಿತ ಪ್ರವಾಹ ಸಂತ್ರಸ್ಥರಿಗೆ ಹಸ್ತಾಂತರಿಸಿದೆ. ಸುಮಾರು 129 ಮನೆಗಳನ್ನ ಹಂಚಲಾಗಿದೆ. ಆದರೆ ವಿಪರ್ಯಾಸ ಅಂದರೆ ಈ ಮನೆಗಳಲ್ಲಿ ವಿದ್ಯುತ್​​ ಸಂಪರ್ಕವೇ ಇಲ್ಲ. ಹಾಗಾಗಿ ಪ್ರವಾಹ ಸಂತ್ರಸ್ತರು ಕತ್ತಲಲ್ಲೇ ಜೀವನ ನಡೆಸುವಂತಾಗಿದೆ.

ವಿದ್ಯುತ್ ಸಂಪರ್ಕ ನೀಡದರಲು ಕಾರಣವೇನು?

ಈ ಮನೆಗಳಲ್ಲಿ ವಾಸಿಸುವರಲ್ಲಿ ವಯಸ್ಸಾದವರು ಸೇರಿದಂತೆ ವಿದ್ಯಾರ್ಥಿಗಳಿದ್ದಾರೆ. ಅವರಿಗೆಲ್ಲಾ ವಿದ್ಯುತ್​​ ಬೇಕೇ ಬೇಕು. ಅಷ್ಟಕ್ಕೂ ಏಕೆ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ ಅಂತ ವಿಚಾರಿಸಿದರೆ ಮನೆಯವರು ಚೆಸ್ಕಾಂನತ್ತ ಬೊಟ್ಟು ತೋರಿಸ್ತಾರೆ. ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ ಅಂತ ಆರೋಪಿಸುತ್ತಿದ್ದಾರೆ. ಇದರ ಬಗ್ಗೆ ಚೆಸ್ಕಾಂ ಅಧಿಕಾರಿಗಳನ್ನ ಕೇಳಿದರೆ ಅವರು ಗುತ್ತಿಗೆದಾರರತ್ತ ಬೊಟ್ಟು  ಮಾಡುತ್ತಿದ್ದಾರೆ.

ಗುತ್ತಿಗೆದಾರರಿಗೆ ಪಾವತಿಯಾಗದ ಮೊತ್ತ?

ಇನ್ನು ಗುತ್ತಿಗೆದಾರರು ಮನೆಗಳನ್ನ ಇನ್ನೂ ಅಧಿಕೃತವಾಗಿ ಹಸ್ತಾಂತರಿಸಿಲ್ಲ, ಹಾಗಾಗಿ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಆದರೆ ಗುತ್ತಿಗೆದಾರರಿಗೆ ಇನ್ನೂ ಉಳಿದ ಮೊತ್ತ ಪಾವತಿಯೇ ಆಗಿಲ್ಲ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರ ಜೀವದ ಜೊತೆ ಚೆಲ್ಲಾಟ: ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿ ತಲುಪಿರುವ ಅಬ್ಬಿ ಫಾಲ್ಸ್‌ನ ವೀಕ್ಷಣಾ ಗೋಪುರ

ಶಾಸಕ ಡಾ ಮಂಥರ್ ಗೌಡ ಮನಸ್ಸು ಮಾಡಿದರೆ ಈ ಸಮಸ್ಯೆಯನ್ನ ಕ್ಷಣಮಾತ್ರದಲ್ಲಿ ಬಗೆಹರಿಸಬಹುದು. ಆದರೆ ಅವರು ಕೂಡ ಯಾಕೋ ಮನಸ್ಸು ಮಾಡುತ್ತಿಲ್ಲ, ಅಧಿಕಾರಿಗಳು, ಚೆಸ್ಕಾಂ, ಗುತ್ತಿಗೆದಾರರ ನಡುವಿನ ಸಮಸ್ಯೆಯಿಂದಾಗಿ ಬಡ ಸಂತ್ರಸ್ತರು ಮಾತ್ರ ಕತ್ತಲಿನಲ್ಲಿಯೇ ಬದುಕುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಅನ್ನಪೂರ್ಣೆ, ಚೈತನ್ಯ ಶಕ್ತಿ…’, ಪತ್ನಿ ಚೆನ್ನಮ್ಮ ಕುರಿತು ಭಾವುಕ ಸಂದೇಶ ಹಂಚಿಕೊಂಡ ದೇವೇಗೌಡರು – Kannada News | ‘She Was the Annapurna of My House’: Former PM HD Deve Gowda Pens Emotional Tribute to Late Wife Chennamma

ಪತ್ನಿ ಚೆನ್ನಮ್ಮ ಕುರಿತು ಭಾವುಕ ಸಂದೇಶ ಹಂಚಿಕೊಂಡ ದೇವೇಗೌಡರುImage Credit source: HD Kumaraswamy X Page

ಬೆಂಗಳೂರು, ಜುಲೈ 24: ಪತ್ನಿ ಚೆನ್ನಮ್ಮ ನಿಧನದ ಬಳಿಕ ಮೊಟ್ಟ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದು, ಭಾವುಕ ಸಂದೇಶವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 72 ವರ್ಷಗಳ ಸುದೀರ್ಘಕಾಲ ತಮ್ಮೊಂದಿಗೆ ಹೆಜ್ಜೆಗೆ ಹೆಜ್ಜೆ ಇರಿಸಿ ನಡೆದಿದ್ದ ಸಹಧರ್ಮಿಣಿ ಚೆನ್ನಮ್ಮ ಅವರು 2026ರ ಜುಲೈ 18ರಂದು ಶನಿವಾರ ಶಿವೈಕ್ಯರಾದರು. ಮನೆಯ ನಂದಾದೀಪ ನಂದಿಹೋದ ಕಷ್ಟಕರ ಸಂದರ್ಭದಲ್ಲಿ ನಮ್ಮ ದುಃಖದಲ್ಲಿ ಭಾಗಿಯಾಗಿ ಸಾಂತ್ವನದ ಚೈತನ್ಯಧಾರೆ ಎರೆದ ಸಮಸ್ತರಿಗೂ ಕೈ ಜೋಡಿಸಿ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ ಎಂದವರು ತಿಳಿಸಿದ್ದಾರೆ.

‘ಚೈತನ್ಯಶಕ್ತಿಯಾಗಿದ್ದ ಚೆನ್ನಮ್ಮ’

ಹಿರಿಯರ ಅಣತಿಯಂತೆ ಪತಿ-ಪತ್ನಿಯರಾಗಿ ಸಪ್ತಪದಿ ತುಳಿದು ಬಾಳಬಂಡಿ ಏರಿದ್ದ ನಾವಿಬ್ಬರು ಸುಖ-ದುಃಖದಲ್ಲಿ ಸಮಭಾಗಿಗಳಾಗಿ ಸಪ್ತದಶಕಗಳ ಕಾಲ ಜೀವನ್ಮುಖಿಗಳಾಗಿ ತುಂಬು ಜೀವನ ನಡೆಸಿದ್ದೇವೆ. ಶಾಸಕನಾಗಿ, ಪ್ರತಿಪಕ್ಷ ನಾಯಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೊನೆಗೆ ಪ್ರಧಾನ ಮಂತ್ರಿಯಾಗಿ ರಾಷ್ಟ್ರಸೇವೆ ಮಾಡುವ ಮಹಾಭಾಗ್ಯ ಸಿಕ್ಕಿತು. ಕೀರ್ತಿ ಪ್ರಖ್ಯಾತಿ ಎಲ್ಲವೂ ನನಗಷ್ಟೇ ಸೇರಿತು. ಅದರ ಹಿಂದಿನ ಚೈತನ್ಯಶಕ್ತಿ ಚೆನ್ನಮ್ಮನವರೇ ಆಗಿದ್ದರು ಎಂದರೆ ಉತ್ಪ್ರೇಕ್ಷೆಯಲ್ಲ. ಗಂಧದ ಕೊರಡು ತನ್ನನ್ನು ತಾನು ತೇಯ್ದುಕೊಂಡು ಪರಿಮಳ ಹೊರಸೂಸುವಂತೆ ಚೆನ್ನಮ್ಮನವರ ಮಮತೆ ಮತ್ತು ತ್ಯಾಗಶೀಲತೆ ತನ್ನ ಬಾಳಿಗೆ ಪರಿಪೂರ್ಣತೆ ತುಂಬಿತು ಎಂದು ದೊಡ್ಡಗೌಡರು ತಿಳಿಸಿದ್ದಾರೆ.

ಇದನ್ನೂ ಓದಿ: ಮರಿ ಮೊಮ್ಮಗಳ ಜೊತೆ ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​

ರಾಜಕೀಯ ಹಿನ್ನೆಲೆಯೇ ಇಲ್ಲದ ನಮ್ಮ ಕುಟುಂಬದ ಸೊಸೆಯಾಗಿ ಬಂದ ಅವರು; ದೈವಭಕ್ತಿ, ಸಾತ್ವಿಕತೆ ಮತ್ತು ಸಾಂಪ್ರದಾಯಿಕ ನಡವಳಿಕೆಯ ಮೂಲಕ ನಮ್ಮ ಮನೆಯನ್ನು ನಂದಗೋಕುಲ ಮಾಡಿದರು. ನಿತ್ಯ ದಾಸೋಹಿಯಾಗಿ ಮನೆಯ ಅನ್ನಪೂರ್ಣೆಯಾದರು. ಮಾನವೀಯ ಮೌಲ್ಯಗಳ ಅನುಸರಣೆ ಹಾಗೂ ಶುದ್ಧ ಅಂತಃಕರಣದ ಮಾತೃಪ್ರೇಮದ ಮೂಲಕ ಎಲ್ಲರ ಪಾಲಿನ ಅಮ್ಮನಾದರು. ಮಾಜಿ ಪ್ರಧಾನಿಯ ಮಡದಿಯಾಗಿದ್ದರೂ ಬದುಕಿನ ಕಟ್ಟಕಡೆಯ ಕ್ಷಣದವರೆಗೂ ಸಾಮಾನ್ಯ ನಾರಿಯಾಗಿ ಬದುಕಿದ ಸಾತ್ವಿಕ ಜೀವಿ ತಮ್ಮ ಧರ್ಮಪತ್ನಿ. ತಮ್ಮ ವ್ಯಕ್ತಿತ್ವ, ಕರುಣೆ, ವಾತ್ಸಲ್ಯಕ್ಕೆ ರಾಜಕೀಯದ ಸೋಂಕು ಸೋಕದಂತೆ ಎಚ್ಚರ ವಹಿಸಿದ್ದ ಅವರು, ಮನುಷ್ಯ ಸಂಬಂಧಗಳಿಗೆ ಅತೀ ಹೆಚ್ಚು ಮಹತ್ವ ನೀಡುತ್ತಿದ್ದರು.

ಹೀಗೆ ನನ್ನ ಮನೆಯನ್ನು ಬೆಳಗಿ ಬೆಳೆಸಿದ ಚನ್ನಮ್ಮನವರು ಶಿವನ ಪಾದ ಸೇರಿದ ಹೊತ್ತಿನಲ್ಲಿ ರಾಜ್ಯದ ಜನರು ತೋರಿದ ಅಂತಃಕರಣಪೂರ್ವಕ ಮಮತೆ, ಗೌರವಕ್ಕೆ ಪರಲೋಕದಲ್ಲಿರುವ ಅವರು, ಇಹದಲ್ಲಿರುವ ನಾನೂ ಧನ್ಯರಾಗಿದ್ದೇನೆ. ಅವರು ಕೊನೇ ಶ್ವಾಸ ಬಿಟ್ಟಾಗಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ಪಾದದ ಬುಡದಲ್ಲಿ ಚಿರನಿದ್ರೆಗೆ ಜಾರುವ ಕ್ಷಣದವರೆಗೂ ಅವರ ಆತ್ಮಕ್ಕಾಗಿ ಮರುಗಿದ ಎಲ್ಲರಿಗೂ ಭಾವಪೂರ್ವಕವಾಗಿ ಧನ್ಯವಾದ ಅರ್ಪಿಸೋದಾಗಿ ದೇವೇಗೌಡರು ಹೇಳಿದ್ದಾರೆ.

‘ಅಭಿಮಾನ, ವಾತ್ಸಲ್ಯಕ್ಕೆ ಮೂಕನಾಗಿದ್ದೇನೆ’

ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಗೌರವಾನ್ವಿತ ಕೇಂದ್ರ ಸಚಿವರುಗಳು, ಮುಖ್ಯಮಂತ್ರಿಗಳು, ವಿವಿಧ ಮಠಗಳ ಪರಮಪೂಜ್ಯ ಪೀಠಾಧೀಶರು, ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು, ಮಾಧ್ಯಮ ಬಂಧುಗಳು, ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಲೆ, ಸಾಹಿತ್ಯ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ರಾಜ್ಯದ ಸರ್ವ ಭಾಗಗಳಿಂದ ಹರಿದುಬಂದ ಜನಸಾಗರ ನನ್ನ ಅರ್ಧಾಂಗಿಯ ಆತ್ಮಕ್ಕೆ ಚಿರಶಾಂತಿಯನ್ನು ಕೋರಿತು. ಇದಕ್ಕೆ ಪ್ರತಿಯಾಗಿ ‘ಕೃತಜ್ಞತೆ ಸಲ್ಲಿಸುವೆ’ ಎನ್ನುವುದು ಬಹಳ ಚಿಕ್ಕ ಮಾತಾಗುತ್ತದೆ. ಅದಕ್ಕೂ ಮೀರಿ ವಿನೀತನಾಗಿ ಎಲ್ಲರಿಗೂ ನಮಿಸುತ್ತೇನೆ. ವಿಶೇಷವಾಗಿ ನಾನು ಜನ್ಮವೆತ್ತಿದ ಹಾಸನ ಜಿಲ್ಲೆಯ ಮಹಾಜನರು ತಮ್ಮಗಳ ಅಕ್ಕರೆಯ ಅಮ್ಮ ಚೆನ್ನಮ್ಮನವರ ಬಗ್ಗೆ ತೋರಿದ ಅಭಿಮಾನ, ವಾತ್ಸಲ್ಯಕ್ಕೆ ಮೂಕನಾಗಿದ್ದೇನೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:57 pm, Fri, 24 July 26

Source link

ಬೆಂಗಳೂರಿಗರೇ ಹುಷಾರ್​​!: ನಗರದಲ್ಲಿ ಶುರುವಾಗಿದೆ ವಾಂತಿ ಗ್ಯಾಂಗ್​​, ಮುಸುಕುಧಾರಿ ಕಳ್ಳರ ಹಾವಳಿ – Kannada News | Bengaluru Crime Alert: Notorious ‘Vomit Gang’ Targeting BMTC Commuters Busted; Masked Thieves Caught on CCTV in Electronic City

ಬೆಂಗಳೂರು, ಜುಲೈ 24: ಸಿಲಿಕಾನ್​​​ ಸಿಟಿ ಬೆಂಗಳೂರಲ್ಲಿ (Bengaluru) ಜನರನ್ನು ಯಾಮಾರಿಸಿ ಕಳ್ಳತನ ಮಾಡೋಕೆ ಖದೀಮರು ನಾನಾ ಮಾರ್ಗಗಳನ್ನು ಹುಡುಕುತ್ತಿದ್ದು, ಬಸ್​​ ಪ್ರಯಾಣಿಕರನ್ನು ಗುರಿಯಾಗಿಸಿ ಕೈಚಳಕ ತೋರುವ ಕೇಸ್​​ಗಳು ಹೆಚ್ಚಿವೆ. ಅದರ ಜೊತೆ ಜೊತೆಗೆ ಮನೆ ಕಳ್ಳತನ ಪ್ರಕರಣಗಳೂ ವರದಿಯಾಗುತ್ತಿವೆ. ವಾಂತಿ ಗ್ಯಾಂಗ್​​, ಮುಸುಕುಧಾರಿ ಕಳ್ಳರ ಹಾವಳಿಗೆ ಸಾರ್ವಜನಿಕರು ಹೈರಾಣಾಗಿದ್ದು, ಈ ಬಗ್ಗೆ ಅದಾಗಲೇ ಅಲರ್ಟ್​​ ಆಗಿರುವ ಪೊಲೀಸರು ಕೆಲ ಆರೋಪಿಗಳನ್ನೂ ಬಂಧಿಸಿದ್ದಾರೆ.

ಏನಿದು ವಾಂತಿ ಗ್ಯಾಂಗ್​​?

ಬಿಎಂಟಿಸಿ ಬಸ್​​ ಪ್ರಯಾಣಿಕರನ್ನೇ ಟಾರ್ಗೆಟ್​​ ಮಾಡಿ ಕಳ್ಳತನ ನಡೆಸುವ ಗ್ಯಾಂಗ್​​ ಇದಾಗಿದೆ. ವಿಂಡೋ ಸೀಟ್ ಪ್ರಯಾಣಿಕರನ್ನ ಟಾರ್ಗೆಟ್ ಮಾಡುವ ಆರೋಪಿಗಳು, ವಾಂತಿ ಬರುತ್ತಿದ್ದೆ ಸೀಟ್ ಬಿಡಿ ಎಂದು ಮನವಿ ಮಾಡುತ್ತಾರೆ. ಸೀಟ್​​ ಬಿಟ್ಟುಕೊಡುವ ವೇಳೆ ತಂಡದ ಸದಸ್ಯರು ರಶ್​​ ಇರುವಂತೆ ವರ್ತಿಸಿ ಮೈ ಮೇಲೆ ಬೀಳುತ್ತಾರೆ. ಈ ವೇಳೆ ಪ್ರಯಾಣಿಕರ ಜೇಬಿನಲ್ಲಿರುವ ಪರ್ಸ್​​, ಮೊಬೈಲ್​​ ಫೋನ್​​ಗಳನ್ನು ಎಗರಿಸಲಾಗುತ್ತೆ. ಬಳಿಕ ಅನುಮಾನವೇ ಬಾರದಂತೆ ಆರೋಪಿಗಳು ಅಲ್ಲಿ ಎಸ್ಕೇಪ್​​ ಆಗುತ್ತಾರೆ.

ಇದನ್ನೂ ಓದಿ: ಚಿಕನ್, ಮಟನ್ ತ್ಯಾಜ್ಯ ವಿಲೇವಾರಿಗೆ ಹೊಸ ರೂಲ್ಸ್​​, ಶುಲ್ಕವೂ ನಿಗದಿ

ಇನ್ನು ಈ ವಾಂತಿ ಗ್ಯಾಂಗ್ ಕೈಚಳಕದ ಬಗ್ಗೆ ನಗರದ ಕೇಂದ್ರ ವಿಭಾಗ ಸೇರಿ ಎರಡು ವಿಭಾಗದಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣಗಳ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮುಬಾರಕ್ ಪಾಶಾ ಮತ್ತು ಅನ್ವರ್ ಪಾಶಾ ಬಂಧಿತರಾಗಿದ್ದಾರೆ. ಆರೋಪಿಗಳ ವಿರುದ್ಧ ನಗರದ ಹಲವು ಕಡೆ ಇಂತಹ ದೂರುಗಳು ದಾಖಲಾಗಿರೋದು ಗೊತ್ತಾಗಿದ್ದು, ಸದ್ಯ ಎಲ್ಲ ಪ್ರಕರಣಗಳನ್ನ ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ತನಿಖೆ ನಡೆಸಲಾಗುತ್ತಿದೆ. ಎಸ್ಕೇಪ್​​ ಆಗಿರುವ ಉಳಿದ ಮೂವರು ಪ್ರಮುಖ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಮುಸುಕುಧಾರಿ ಕಳ್ಳರ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಮತ್ತೊಂದೆಡೆ ಮೈ ಮೇಲೆ ಬೆಡ್‌ಶೀಟ್ ಮತ್ತು ಟವೆಲ್ ಹೊದ್ದು ಬಂದ ಖದೀಮರು ಬೇಗೂರು ಕೊಪ್ಪ, ಮೈಲಸಂದ್ರದಲ್ಲಿ ಮಧ್ಯರಾತ್ರಿ ಕೈಚಳಕ ತೋರಿರುವ ಘಟನೆ ನಡೆದಿದೆ. ‘ಗ್ರೀನ್ ವ್ಯಾಲಿ ಲೇಔಟ್’ ಮನೆಗಳನ್ನ ಟಾರ್ಗೆಟ್ ಮಾಡಿದ್ದ ತಂಡದ ಒಟ್ಟು 8 ಮಂದಿಯ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:32 pm, Fri, 24 July 26

Source link

ಒಂದು ಸಿನಿಮಾಕ್ಕೆ 50 ವ್ಯಾನಿಟಿ ವ್ಯಾನ್, ಅನಗತ್ಯ ದುಂದು ವೆಚ್ಚ ಎಂದ ತುಷಾರ್ – Kannada News | Tusshar Kapoor questioned 50 vanity vans on Welcome to the Jungle movie set

ಸಿನಿಮಾ (Cinema) ನಟ-ನಟಿಯರು ಅನಗತ್ಯ ಖರ್ಚುಗಳನ್ನು ಮಾಡುತ್ತಿರುವ ಬಗ್ಗೆ ಕಳೆದ ಕೆಲ ವರ್ಷಗಳಿಂದ ನಿರ್ಮಾಪಕರು ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ವಿಶೇಷವಾಗಿ ಬಾಲಿವುಡ್ ನಟ-ನಟಿಯರು ತಮಗಾಗಿ ಹೆಚ್ಚುವರಿ ವ್ಯಾನಿಟಿ ವ್ಯಾನ್ ತರಿಸಿಕೊಳ್ಳುತ್ತಾರೆ. ತಮ್ಮೊಟ್ಟಿಗೆ 20-30 ಜನರ ತಂಡವನ್ನು ಕರೆದುಕೊಂಡು ಬರುತ್ತಾರೆ. ಅನಗತ್ಯ ಡಿಮ್ಯಾಂಡುಗಳನ್ನು ಮಾಡುತ್ತಾರೆ ಎಂದೆಲ್ಲ ನಿರ್ಮಾಪಕರು ಆರೋಪಗಳನ್ನು ಮಾಡಿದ್ದರು. ಇದೀಗ ಬಾಲಿವುಡ್ ನಟ ಮತ್ತು ನಿರ್ಮಾಪಕ ಆಗಿರುವ ತುಷಾರ್ ಕಪೂರ್ ಇದೇ ವಿಷಯವಾಗಿ ಮಾತನಾಡಿದ್ದು, ಸಿನಿಮಾದ ಹೆಸರು ಹೇಳಿ, ದುಂದು ವೆಚ್ಚವನ್ನು ಟೀಕೆ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಸೇರಿ ಬಾಲಿವುಡ್​​ನ ಹಲವು ಸ್ಟಾರ್ ನಟಿಯರು ಒಟ್ಟಿಗೆ ನಟಿಸಿರುವ ಹಾಸ್ಯ ಪ್ರಧಾನ ಸಿನಿಮಾ ‘ವೆಲ್​​ಕಮ್ ಟು ದಿ ಜಂಗಲ್’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಸಿನಿಮಾ, ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈ ಸಿನಿಮಾದ ಶೂಟಿಂಗ್ ಸಮಯದಲ್ಲಿ ಒಟ್ಟೊಟ್ಟಿಗೆ 50 ವ್ಯಾನಿಟಿ ವ್ಯಾನುಗಳನ್ನು ನಟ-ನಟಿಯರಿಗಾಗಿ ತರಿಸಲಾಗುತ್ತಂತೆ. ಇದರ ಬಗ್ಗೆ ನಟ ತುಷಾರ್ ಕಪೂರ್ ಮಾತನಾಡಿದ್ದು, ಇದು ಅನಗತ್ಯ ದುಂದು ವೆಚ್ಚ ಎಂದು ಟೀಕೆ ಮಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ತುಷಾರ್, ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದ ಸೆಟ್‌ಗಳಲ್ಲಿ ಪ್ರತಿದಿನ ತಗಲುತ್ತಿದ್ದ ವೆಚ್ಚದ ಬಗ್ಗೆ ತಮಗೆನಿಸಿದ್ದನ್ನು ಹಂಚಿಕೊಂಡಿದ್ದಾರೆ. ‘ನಾನು ಸೆಟ್‌ಗೆ ತಲುಪಿದಾಗ, ನಮ್ಮ ವ್ಯಾನಿಟಿ ವ್ಯಾನ್ ಪಾರ್ಕ್ ಮಾಡಲು ಐದು ನಿಮಿಷ ಹಿಡಿಯುತ್ತಿತ್ತು, ಏಕೆಂದರೆ ನಾವು ವ್ಯಾನ್‌ಗಳ ದೊಡ್ಡ ಸಾಲಿನ ಮೂಲಕ ಹೋಗಬೇಕಾಗುತ್ತಿತ್ತು. ಇಷ್ಟು ವ್ಯಾನ್‌ಗಳು ಮತ್ತು ಎಲ್ಲರ ಸಿಬ್ಬಂದಿಗೆ ಪ್ರತಿದಿನದ ವೆಚ್ಚ ಎಷ್ಟು ಎಂದು ನಾನು ನೋಡುತ್ತಾ ಆಶ್ಚರ್ಯಪಡುತ್ತಿದ್ದೆ. ಇಷ್ಟು ಜನ ನಟರನ್ನು ಕರೆದುಕೊಂಡು ಬರುವುದು ನಿಜಕ್ಕೂ ಅಗತ್ಯವೇ?’ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾಕ್ಕೆ ಎರಡು ವರ್ಷ ತಯಾರಿ, ರಣ್​​ಬೀರ್ ಕಪೂರ್ ಮಾಹಿತಿ

ನಿರ್ದೇಶಕ ಅಹ್ಮದ್ ಅವರ ದೃಷ್ಟಿಕೋನವು ಉತ್ತಮವಾಗಿದೆ, ಅವರು ಭಾರತದಲ್ಲಿ ಹಿಂದೆಂದೂ ಪ್ರಯತ್ನಿಸದ ಹೊಸ ಪ್ರಕಾರವನ್ನು ತರುತ್ತಿದ್ದಾರೆ, ಆದರೆ ಇಷ್ಟು ಜನ ನಟರನ್ನು ಕರೆದುಕೊಂಡು ಬಂದು ಇಷ್ಟು ಖರ್ಚು ಮಾಡುವುದು ನಿಜಕ್ಕೂ ಸಮರ್ಥನೀಯವೇ ಎಂದು ನಾನು ಯೋಚಿಸುತ್ತಿದ್ದೆ. ಎಲ್ಲ ಶಾಟ್ ಗೂ ಎಲ್ಲ ನಟರೂ ಬೇಕು ಎಂದು ಅಹ್ಮದ್ ಪಟ್ಟುಹಿಡಿದಿದ್ದರು. ‘ವೆಲ್ಕಮ್’ ಚಿತ್ರದ ಚಿತ್ರೀಕರಣದಲ್ಲಿ ಒಂದು ವರ್ಷದ ಅಂತರವಿತ್ತು. ಚಿತ್ರವು ಪುನರಾರಂಭಗೊಂಡಾಗ, ಸೆಟ್‌ನಲ್ಲಿ ಲಭ್ಯವಿರುವ ನಟರೊಂದಿಗೆ ಮಾತ್ರ ಚಿತ್ರೀಕರಣ ನಡೆಸಲು ಅವರು ಎಂದಿಗೂ ಯೋಚಿಸಲಿಲ್ಲ. ಅವರು ತಮ್ಮ ಮಾತಿಗೆ ಕಟ್ಟುಬಿದ್ದು ಚಿತ್ರವನ್ನು ಮುಗಿಸಿದರು” ಎಂದು ಅವರು ಹೇಳಿದರು.

ನಟರ ಹೆಚ್ಚುತ್ತಿರುವ ಸಿಬ್ಬಂದಿ ವೆಚ್ಚದ ನಡುವೆ ಸಮತೋಲನವಿರಬೇಕು ಎಂದು ತುಷಾರ್ ಹೇಳಿದ್ದು, ‘ಖರ್ಚಿನಲ್ಲಿ ಸಮತೋಲನ ಇರಬೇಕು. ಹೇರ್ ಸ್ಟೈಲಿಸ್ಟ್, ಮೇಕಪ್ ಮ್ಯಾನ್ ಬೇಕು. ನಿಮಗೆ ಕೆಲವು ಸೌಲಭ್ಯಗಳು ಬೇಕಾಗುತ್ತವೆ. ಒಬ್ಬ ಪ್ರಮುಖ ನಟ ಅಥವಾ ನಟಿ ಅನುಭವಿಸುವ ಒತ್ತಡವನ್ನು ಗಮನಿಸಿದರೆ, ನಿಮ್ಮ ಅತ್ಯುತ್ತಮವಾದದನ್ನು ಹೊರತರಲು ನಿಮಗೆ ಸ್ವಲ್ಪ ಸೌಕರ್ಯ, ಸ್ಥಳ ಮತ್ತು ಐಷಾರಾಮಿ ಅನುಭವ ಬೇಕಾಗುತ್ತದೆ. ಇದು ದೃಶ್ಯ ಮಾಧ್ಯಮವಾಗಿದೆ, ಆದ್ದರಿಂದ ಆ ಸೌಂದರ್ಯವನ್ನು ಹೊರತರಲು ನಿಮಗೆ ಸ್ವಲ್ಪ ಖರ್ಚು ಬೇಕು. ಅದು ಪರವಾಗಿಲ್ಲ. ಆದರೆ ಅದಕ್ಕೊಂದು ಮಿತಿಯಿದೆ. ಅದು ಅಹಂಕಾರ ಅಥವಾ ನಾರ್ಸಿಸಿಸಂ ಆಗಿ ಬದಲಾಗುವ ಹಂತಕ್ಕೆ ವ್ಯಾನಿಟಿಯ ಮೂಲಭೂತ ಅವಶ್ಯಕತೆಯನ್ನು ಮೀರಿ ಹೋಗಬಾರದು. ನಿಮ್ಮ ಅಹಂ ತೃಪ್ತಿಪಡಿಸಲು ಇದನ್ನು ಮಾಡಬಾರದು. ಅದು ಒಳ್ಳೆಯದಲ್ಲ’ ಎಂದು ಕಟುವಾಗಿ ಟೀಕೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ನಾವು ಯಂತ್ರಗಳಾಗುತ್ತಿದ್ದೇವೆ’; ಭಾರತದಲ್ಲಿ ನಶಿಸುತ್ತಿರುವ ಅವಿಭಕ್ತ ಕುಟುಂಬಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ – Kannada News | We Are Becoming Machines; Supreme Court expressed concern About Vanishing Joint Families in India

ನವದೆಹಲಿ, ಜುಲೈ 24: ಭಾರತದ ಪಾರಂಪರಿಕ ಕುಟುಂಬ ವ್ಯವಸ್ಥೆಯು ಕ್ರಮೇಣ ಕ್ಷೀಣಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಕಳವಳ ವ್ಯಕ್ತಪಡಿಸಿದೆ. ಅವಿಭಕ್ತ ಕುಟುಂಬಗಳ ಕಣ್ಮರೆ ಮತ್ತು ಮಕ್ಕಳ ಪಾಲನೆಗಾಗಿ ಪೋಷಕರು ಗ್ಯಾಜೆಟ್‌ಗಳ (ಮೊಬೈಲ್, ಟ್ಯಾಬ್ ಇತ್ಯಾದಿ) ಮೇಲೆ ಹೆಚ್ಚೆಚ್ಚು ಅವಲಂಬಿತರಾಗುತ್ತಿರುವುದು ಭವಿಷ್ಯದಲ್ಲಿ ತೀವ್ರ ಸಾಮಾಜಿಕ ಪರಿಣಾಮಗಳನ್ನು ಬೀರುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ.

ತಮ್ಮ ಹನಿಮೂನ್ ಸಮಯದಲ್ಲಿ ಪತಿ ರಾಜಾ ರಘುವಂಶಿಯ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಸೋನಮ್ ರಘುವಂಶಿಯ ಪ್ರಕರಣದ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ ನಶಿಸುತ್ತಿರುವುದು ಮತ್ತು ಪೋಷಕರು-ಮಕ್ಕಳ ನಡುವಿನ ಬಾಂಧವ್ಯ ಬದಲಾಗುತ್ತಿರುವ ಸ್ವರೂಪದ ಬಗ್ಗೆ ನ್ಯಾಯಪೀಠವು ಬೇಸರ ವ್ಯಕ್ತಪಡಿಸಿತು. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಪೀಠವು, ಈ ಪ್ರಕರಣವು ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ಪ್ರತಿಬಿಂಬವಾಗಿದೆ ಎಂದು ಹೇಳಿತು.

ಯುವಕರು ವಾಟ್ಸಾಪ್​ ಜ್ಞಾನಿಗಳಾಗುತ್ತಿದ್ದಾರೆ:

ಇಂದಿನ ಯುವಪೀಳಿಗೆಯು ಹೆಚ್ಚು ಬುದ್ಧಿವಂತ ಮತ್ತು ಅತಿಯಾದ ಮಾಹಿತಿ ಹೊಂದಿರುವ ಪೀಳಿಗೆಯಾಗಿದೆ. ಆದರೆ, ಮಾನಸಿಕ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದು ಅವರಿಗೆ ತಿಳಿದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಜನರು ವಾಟ್ಸಾಪ್‌ನಲ್ಲಿ ಹರಿದಾಡುವ ಸಂದೇಶಗಳನ್ನೇ ಸಂಪೂರ್ಣ ಜ್ಞಾನವೆಂದು ಭಾವಿಸುತ್ತಿರುವುದು ದುರದೃಷ್ಟಕರ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ‘ಡಾಕ್ಟರ್ ಆಗಲು ನಾಲಾಯಕ್’; 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆಸ್ಪತ್ರೆಗೆ ಸುಪ್ರೀಂ ಕೋರ್ಟ್ ಛೀಮಾರಿ

ಸುಪ್ರೀಂ ಕೋರ್ಟ್‌ನ ಈ ಕಳವಳವನ್ನು ಒಪ್ಪಿಕೊಂಡ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದು ಸಮಾಜದ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಮನುಷ್ಯನ ಸಂಬಂಧಗಳಲ್ಲಿನ ನಂಬಿಕೆ ಕ್ಷೀಣಿಸುತ್ತಿದ್ದು, ಸಹನೆ ಮತ್ತು ಸಹಿಷ್ಣುತೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.

ಕುಟುಂಬದ ಮೌಲ್ಯವೇ ಕಣ್ಮರೆ:

ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳು ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ ಮತ್ತು ಭಾವ-ಮೈದುನರ ನಡುವೆ ಬೆಳೆಯುತ್ತಿದ್ದರು. ಇದರಿಂದಾಗಿ ಅವರಿಗೆ ಕುಟುಂಬದ ಬಾಂಧವ್ಯ, ಪ್ರೀತಿ-ವಾತ್ಸಲ್ಯ ಹಾಗೂ ಜವಾಬ್ದಾರಿಗಳ ಅರಿವು ಸಹಜವಾಗಿಯೇ ಉಂಟಾಗುತ್ತಿತ್ತು. ಆದರೆ ಇಂದಿನ ಆಧುನಿಕ ವಿಭಕ್ತ ಕುಟುಂಬಗಳಲ್ಲಿ, ಉದ್ಯೋಗಸ್ಥ ಪೋಷಕರು ತಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಕಷ್ಟಪಡುತ್ತಿದ್ದಾರೆ. ಮಕ್ಕಳು ತೊಂದರೆ ಕೊಡುತ್ತಾರೆಂದು ಪೋಷಕರು ಮೊಬೈಲ್ ಫೋನ್‌ಗಳು ಹಾಗೂ ಇತರ ಡಿಜಿಟಲ್ ಸಾಧನಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ ಎಂದು ಪೀಠವು ಬೇಸರ ವ್ಯಕ್ತಪಡಿಸಿತು.

ಇದನ್ನೂ ಓದಿ: ವಿಚ್ಛೇದನ ಪ್ರಕರಣದಲ್ಲಿ ಪತಿಯ ಕಂಪನಿ ಮಾಲೀಕರಿಗೆ ಹೆಂಡತಿ ಪತ್ರ ಬರೆಯುವುದೇಕೆ? ಸುಪ್ರೀಂ ಕೋರ್ಟ್ ತರಾಟೆ

ಪೋಷಕರ ಜಾಗಕ್ಕೆ ಮೊಬೈಲ್ ಬರುತ್ತಿದೆ:

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸುಂದರೇಶ್ ಮಾತನಾಡುತ್ತಾ, “ನಾನು ಇತ್ತೀಚೆಗೆ ಹೋಟೆಲ್‌ ಒಂದಕ್ಕೆ ಹೋಗಿದ್ದಾಗ, ಕುಟುಂಬವೊಂದು ತಾವೂ ಊಟ ಮಾಡುವಾಗ ಮಗು ಊಟ ಮಾಡಲು ಬಿಡುವುದಿಲ್ಲವೆಂದು ಅದರ ಕೈಗೆ ಮೊಬೈಲ್ ಕೊಟ್ಟಿರುವುದನ್ನು ನೋಡಿದೆ. ಪೋಷಕರ ಜಾಗವನ್ನು ಗ್ಯಾಜೆಟ್‌ಗಳು ಆಕ್ರಮಿಸಿಕೊಂಡರೆ, ಅದು ದೊಡ್ಡ ವಿನಾಶಕ್ಕೆ ಕಾರಣವಾಗುತ್ತದೆ. ಭವಿಷ್ಯದಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ. ಅವಿಭಕ್ತ ಕುಟುಂಬ ಎಂಬುದು ದೊಡ್ಡ ಆಸ್ತಿ. ಆದರೆ, ಜನರಿಗೆ ಅದರ ಅರಿವಿಲ್ಲ. ಸಂತೋಷ ಎಂಬುದು ಭೌತಿಕ ವಸ್ತುಗಳಿಂದ ಬರುವುದಿಲ್ಲ, ಅದು ಮಾನವೀಯ ಬಾಂಧವ್ಯ ಮತ್ತು ಸಂಬಂಧಗಳಿಂದ ಸಿಗುತ್ತದೆ. ನಾವು ಯಂತ್ರಗಳಂತೆ ಬದಲಾಗುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ – Kannada News | Minister KH Muniyappa Good News For BPL Card Holders for indira kit

ಬೆಂಗಳೂರು, (ಜುಲೈ 24): 10ರಲ್ಲಿ ಐದು ಕಿಲೋ ಅಕ್ಕಿಯ ಬದಲಿಗೆ ಬಿಪಿಎಲ್ ಪಡಿತರ ಚೀಟಿದಾರರಿಗೆ ‘ಇಂದಿರಾ’ ಆಹಾರ ಕಿಟ್ ನೀಡಲು ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿದೆ. ಇನ್ನು ಈ ಬಗ್ಗೆ ಇಂದು (ಜುಲೈ 24) ಆಹಾರ ಸಚಿವ ಕೆಎಚ್​​​ ಮುನಿಯಪ್ಪ ಪ್ರತಿಕ್ರಿಯಿಸಿದ್ದು, ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ನೀಡಲು ನಿರ್ಧಾರ ಮಾಡಿದ್ವಿ. ಆದ್ರೆ, 5 ಕೆಜಿ ಅಕ್ಕಿ ಬದಲು ಹಣವನ್ನು ನೀಡುತ್ತಿದ್ವಿ ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡಿದಾಗ ಅಕ್ಕಿ ನೀಡಿದ್ದೇವೆ. ಅಕ್ಕಿ ಜೊತೆಗೆ ರಾಗಿ ನೀಡಲು 4 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದ್ದೇವೆ. 10 ಕೆಜಿಯಲ್ಲಿ 7 ಕೆಜಿ ಅಕ್ಕಿ, 3 ಕೆಜಿ ರಾಗಿ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಗುಜರಾತ್​ನಲ್ಲಿ ಕೇವಲ 16 ಗಂಟೆಗಳಲ್ಲಿ 1100 ಮಿ.ಮೀ ಮಳೆ, ಗೊಂಬೆಗಳಂತೆ ನೀರಿನಲ್ಲಿ ತೇಲಿದ ಕಾರುಗಳು – Kannada News | Gujarat Deluge: 1,100 mm Rain in 16 Hours Leaves Valsad Under Water

ವಲ್ಸಾದ್, ಜುಲೈ 24: ದಕ್ಷಿಣ ಗುಜರಾತ್‌ನಲ್ಲಿ ವರುಣನ  ಆರ್ಭಟ ಮುಂದುವರೆದಿದ್ದು, ಜಲಪ್ರಳಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ವಲ್ಸಾದ್ ಜಿಲ್ಲೆಯ ಉಂಬರ್‌ಗಮ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆಯವರೆಗೆ ಕೇವಲ 16 ಗಂಟೆಗಳಲ್ಲಿ ಭಾರಿ 1100 ಮಿ.ಮೀ ಮಳೆ(Rain) ಸುರಿದಿದ್ದು, ಇಡೀ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಳೆಯ ಭೀಕರತೆಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

ಪಾರ್ಕಿಂಗ್‌ನಲ್ಲಿದ್ದ ಕಾರುಗಳು ಮುಳುಗಡೆ
ವಲ್ಸಾದ್ ಜಿಲ್ಲೆಯ ವಾಪಿ ಪ್ರದೇಶದ ಬಹುಮಹಡಿ ಕಟ್ಟಡ ಒಂದರ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ, ಕಿಟಕಿಗಳ ಮಟ್ಟಕ್ಕೆ ನೀರು ತಲುಪಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಕಟ್ಟಡಗಳ ಸುತ್ತಮುತ್ತಲಿನ ಪ್ರದೇಶಗಳು ಕೆರೆಯಂತಾಗಿದ್ದು, ವಾಹನಗಳು ನೀರಿನಲ್ಲಿ ತೇಲುತ್ತಿರುವುದು ವರದಿಯಾಗಿದೆ. ನಿರಂತರ ಮಳೆಯಿಂದಾಗಿ ಔರಂಗ, ಪರ್ ಮತ್ತು ದಮನ್‌ಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ವಲ್ಸಾದ್ ಹಾಗೂ ಸೂರತ್ ನಗರಗಳ ತಗ್ಗು ಪ್ರದೇಶಗಳಿಂದ 2,200 ಕ್ಕೂ ಹೆಚ್ಚು ಜನರನ್ನು ರಕ್ಷಣಾ ಪಡೆಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ. ಸಂತ್ರಸ್ತರಿಗಾಗಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ಆಹಾರ, ಕುಡಿಯುವ ನೀರು ಹಾಗೂ ವೈದ್ಯಕೀಯ ನೆರವು ನೀಡಲಾಗುತ್ತಿದೆ.

ವಿಡಿಯೋ

5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಎಚ್ಚರಿಕೆ
ದಕ್ಷಿಣ ಗುಜರಾತ್‌ನ ವಲ್ಸಾದ್, ನವಸಾರಿ, ಡಾಂಗ್ಸ್, ಸೂರತ್ ಮತ್ತು ತಾಪಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (IMD) ಭಾರಿ ಮಳೆಯ ‘ರೆಡ್ ಅಲರ್ಟ್’ ಘೋಷಿಸಿದೆ. ತುರ್ತು ಕೆಲಸಗಳಿದ್ದರೆ ಮಾತ್ರ ಹೊರಬರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ಪರಿಹಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಸಚಿವರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳಿಗೆ ನಿರ್ದೇಶನ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Join Indian Army: ಭಾರತೀಯ ಸೇನೆಯಲ್ಲಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ; B.Tech ಪದವೀಧರರಿಗೆ ಸುವರ್ಣಾವಕಾಶ – Kannada News | Indian Army SSC Tech 2026: Technical Officer Jobs for B.E and B.Tech Engineers

ಎಂಜಿನಿಯರಿಂಗ್ (B.E/B.Tech) ಪದವಿ ಪಡೆದಿರುವ ಅಥವಾ ಅಂತಿಮ ವರ್ಷದ ವ್ಯಾಸಂಗದಲ್ಲಿರುವ ಯುವಕರಿಗೆ ಭಾರತೀಯ ಸೇನೆ (Indian Army) ಉತ್ತಮ ಉದ್ಯೋಗಾವಕಾಶವನ್ನು ಘೋಷಿಸಿದೆ. ಶಾರ್ಟ್ ಸರ್ವಿಸ್ ಕಮಿಷನ್ (SSC-Tech) ಮೂಲಕ ತಾಂತ್ರಿಕ ಅಧಿಕಾರಿಗಳ (Technical Officers) ಹುದ್ದೆಗಳ ನೇಮಕಾತಿಗೆ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದೇಶಸೇವೆಯೊಂದಿಗೆ ಗೌರವಯುತ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಪ್ರಮುಖ ದಿನಾಂಕಗಳು ಇಲ್ಲಿವೆ:

ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ joinindianarmy.nic.in ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 6 ಮತ್ತು ಪುರುಷ ಅಭ್ಯರ್ಥಿಗಳಿಗೆ ಆಗಸ್ಟ್ 7 ಎಂದು ನಿಗದಿಪಡಿಸಲಾಗಿದೆ. ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಭಾರತೀಯ ಸೇನೆ ಸೂಚಿಸಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಈ ನೇಮಕಾತಿಗೆ ಅಧಿಸೂಚಿತ ಎಂಜಿನಿಯರಿಂಗ್ ವಿಭಾಗಗಳಲ್ಲಿ B.E ಮತ್ತು B.Tech ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೊತೆಗೆ, ಪ್ರಸ್ತುತ ಅಂತಿಮ ವರ್ಷದ ವ್ಯಾಸಂಗದಲ್ಲಿರುವ ವಿದ್ಯಾರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳ ವಯೋಮಿತಿ 20 ರಿಂದ 27 ವರ್ಷಗಳ ನಡುವೆ ಇರಬೇಕು. ವಯಸ್ಸಿನ ಲೆಕ್ಕಾಚಾರವನ್ನು 2027ರ ಏಪ್ರಿಲ್ 1ರ ಆಧಾರದ ಮೇಲೆ ಮಾಡಲಾಗುತ್ತದೆ. ಈ ನೇಮಕಾತಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಲಿಖಿತ ಪರೀಕ್ಷೆ ಇಲ್ಲ, ಅಂಕಗಳ ಆಧಾರದ ಮೇಲೆ ಆಯ್ಕೆ:

ಈ ನೇಮಕಾತಿಯ ಪ್ರಮುಖ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ಎಂಜಿನಿಯರಿಂಗ್ ಪದವಿಯಲ್ಲಿ ಪಡೆದಿರುವ ಒಟ್ಟು ಶೇಕಡಾವಾರು ಅಂಕಗಳ (Cumulative Percentage) ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ನೇರವಾಗಿ ಸೇವಾ ಆಯ್ಕೆ ಮಂಡಳಿ (SSB) ಸಂದರ್ಶನಕ್ಕೆ ಕರೆಯಲಾಗುತ್ತದೆ.

5 ದಿನಗಳ SSB ಸಂದರ್ಶನದಲ್ಲಿ ಏನೆಲ್ಲಾ ಪರೀಕ್ಷೆಗಳು?

SSB ಸಂದರ್ಶನವು ಒಟ್ಟು ಐದು ದಿನಗಳ ಕಾಲ ನಡೆಯಲಿದ್ದು, ಎರಡು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

  • ಮೊದಲ ಹಂತದಲ್ಲಿ, ಸ್ಕ್ರೀನಿಂಗ್ ಪರೀಕ್ಷೆ, ಮೌಖಿಕ ಹಾಗೂ ಮೌಖಿಕವಲ್ಲದ ಸಾಮರ್ಥ್ಯ ಪರೀಕ್ಷೆಗಳು ಮತ್ತು ಚಿತ್ರ ಆಧಾರಿತ ಚರ್ಚೆ (PPDT) ನಡೆಸಲಾಗುತ್ತದೆ.
  • ಎರಡನೇ ಹಂತದಲ್ಲಿ, ಮೊದಲ ಹಂತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮನೋವಿಜ್ಞಾನ ಪರೀಕ್ಷೆಗಳು, ವಿವಿಧ ಗುಂಪು ಚಟುವಟಿಕೆಗಳು ಹಾಗೂ ವೈಯಕ್ತಿಕ ಸಂದರ್ಶನವನ್ನು ನಡೆಸಲಾಗುತ್ತದೆ.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಆಯ್ಕೆಯಾದವರಿಗೆ 49 ವಾರಗಳ ತರಬೇತಿ:

SSB ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಬಿಹಾರದ ಗಯಾದಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA Gaya) ಯಲ್ಲಿ 49 ವಾರಗಳ ಮಿಲಿಟರಿ ತರಬೇತಿ ನೀಡಲಾಗುತ್ತದೆ.

ಯಾವ ಹುದ್ದೆಗಳಿಗೆ ನೇಮಕಾತಿ?

ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಭಾರತೀಯ ಸೇನೆಯಲ್ಲಿ ತಾಂತ್ರಿಕ ಅಧಿಕಾರಿಗಳಾಗಿ (Technical Officers) ನೇಮಕ ಮಾಡಲಾಗುತ್ತದೆ. ಅವರು ಸೇನೆಯ ಕಾರ್ಯಾಚರಣೆಯ ನಾಯಕತ್ವ, ಕೋರ್ ಎಂಜಿನಿಯರಿಂಗ್, ಲಾಜಿಸ್ಟಿಕ್ಸ್ ಹಾಗೂ ಸಂಪನ್ಮೂಲ ನಿರ್ವಹಣೆ ಸೇರಿದಂತೆ ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ.

ಅಧಿಕೃತ ವೆಬ್‌ಸೈಟ್:

ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ joinindianarmy.nic.inಗೆ ಭೇಟಿ ನೀಡಬಹುದು. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಸೂಕ್ತ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 3:12 pm, Fri, 24 July 26

Source link

Exit mobile version