ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರಿಗೆ 1 ಕೋಟಿ ರೂ. ದಂಡ, 10 ವರ್ಷ ಜೈಲು – Kannada News | NEET Paper Leak: New Law Imposes Rs1 Crore Fine, 10 Year Jail for Exam Malpractice

ನವದೆಹಲಿ, ಜುಲೈ 24: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ನೀಟ್ (NEET) ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ಭಾರಿ ತಿದ್ದುಪಡಿಗಳಿಗೆ ಮುಂದಾಗಿದೆ. 2024 ರ ‘ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆ’ಗೆ ಕಠಿಣ ತಿದ್ದುಪಡಿ ತರಲು ಸಿದ್ಧತೆ ನಡೆಸಿದ್ದು, ಶುಕ್ರವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ಬಿಡುಗಡೆ ಮಾಡಿದ ವಿಶೇಷ ವೀಡಿಯೊ ಸಂದೇಶದಲ್ಲಿ, “ಅಪರಾಧಿಗಳಿಗೆ ತ್ವರಿತ ಮತ್ತು ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗುವುದು” ಎಂದು ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪ್ರಸ್ತುತ ಇರುವ ಕಾನೂನು
ಜೈಲು ಶಿಕ್ಷೆ: 3 ರಿಂದ 5 ವರ್ಷಗಳು
ವ್ಯಕ್ತಿಗತ ದಂಡ: 10 ಲಕ್ಷ ರೂ.ವರೆಗೆ
ಏಜೆನ್ಸಿ ಅಥವಾ ಸಂಸ್ಥೆಗಳಿಗೆ ದಂಡ: 1 ಕೋಟಿ ರೂ.ವರೆಗೆ
ವಿಚಾರಣೆ: ಸಾಮಾನ್ಯ ನ್ಯಾಯಾಲಯಗಳು

ಪ್ರಸ್ತಾವಿತ ನೂತನ ತಿದ್ದುಪಡಿ
ಜೈಲು ಶಿಕ್ಷೆ: 5 ರಿಂದ 10 ವರ್ಷಗಳವರೆಗೆ ಹೆಚ್ಚಳ
ಕನಿಷ್ಠ ದಂಡ: 10 ಲಕ್ಷದಿಂದ ನೇರವಾಗಿ 1 ಕೋಟಿ ರೂ.ಗೆ ಏರಿಕೆ
ಸೇವಾ ಪೂರೈಕೆದಾರರಿಗೆ: 1 ಕೋಟಿ ರೂ. ದಂಡದ ಜತೆಗೆ ಕಪ್ಪುಪಟ್ಟಿಗೆ ಸೇರ್ಪಡೆ
ವಿಚಾರಣೆ: ವಿಶೇಷ ‘ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು’

ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆ ಸಾಮಾನ್ಯ ಕೋರ್ಟ್‌ಗಳಲ್ಲಿ ವರ್ಷಗಟ್ಟಲೆ ವಿಳಂಬವಾಗುವುದನ್ನು ತಡೆಯಲು ಪ್ರತ್ಯೇಕ ವಿಶೇಷ ಅಥವಾ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ. ಈ ಕೋರ್ಟ್‌ಗಳಿಗೆ ಶೀಘ್ರ ತನಿಖೆ ಮತ್ತು ತೀರ್ಪು ನೀಡಲು ಹೆಚ್ಚುವರಿ ಅಧಿಕಾರಗಳನ್ನು ನೀಡಲಾಗುತ್ತದೆ.

ಮತ್ತಷ್ಟು ಓದಿ: ನೀಟ್ ವಿವಾದದ ಬೆನ್ನಲ್ಲೇ ಬಿಗ್ ಆ್ಯಕ್ಷನ್: ಉನ್ನತ ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವಜಾ, ನರೇಶ್ ಗಂಗ್ವಾರ್ ನೂತನ ಕಾರ್ಯದರ್ಶಿಯಾಗಿ ನೇಮಕ

ಸೇವಾ ಪೂರೈಕೆದಾರರ ಮೇಲೆ ಕಠಿಣ ಕಣ್ಣು

ಪರೀಕ್ಷೆ ನಡೆಸುವ ಖಾಸಗಿ ಕಂಪನಿಗಳು, ಕಂಪ್ಯೂಟರ್ ಸೆಂಟರ್‌ಗಳು ಅಥವಾ ಸೇವಾ ಪೂರೈಕೆದಾರ ಸಂಸ್ಥೆಗಳು ಅಕ್ರಮದಲ್ಲಿ ಭಾಗಿಯಾದರೆ, ಅವರಿಗೆ 1 ಕೋಟಿ ರೂ.ವರೆಗೆ ದಂಡ ವಿಧಿಸುವುದರ ಜೊತೆಗೆ ಪರೀಕ್ಷೆ ನಡೆಸುವ ಹಕ್ಕನ್ನು ರದ್ದುಗೊಳಿಸಲಾಗುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಸಂಘಟಿತ ಸಿಂಡಿಕೇಟ್ ಅಥವಾ ಮಾಫಿಯಾಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹1 ಕೋಟಿಗಿಂತಲೂ ಅಧಿಕ ದಂಡ ವಿಧಿಸುವ ನಿಬಂಧನೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಹಿನ್ನೆಲೆ ಮತ್ತು ರಾಜಕೀಯ ವಿದ್ಯಮಾನಗಳು

ಕೇಂದ್ರ ಸಂಪುಟ ಸಭೆಯ ಒಪ್ಪಿಗೆ ಸಿಕ್ಕ ನಂತರ, ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಮಳೆಗಾಲದ ಅಧಿವೇಶನದ ಎರಡನೇ ವಾರದಲ್ಲೇ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅಂಗೀಕರಿಸಲು ಸರ್ಕಾರ ನಿರ್ಧರಿಸಿದೆ.

ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸುತ್ತಿದ್ದ ಹೋರಾಟದ ಭಾಗವಾಗಿ, ಖ್ಯಾತ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ನಡೆಸುತ್ತಿದ್ದ 26 ದಿನಗಳ ಸುದೀರ್ಘ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೇಂದ್ರ ಸಚಿವರ ಭರವಸೆಯ ನಂತರ ಹಿಂಪಡೆದಿದ್ದಾರೆ. ಲಕ್ಷಾಂತರ ಯುವಜನತೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಲು ಈ ಕಠಿಣ ತಿದ್ದುಪಡಿ ಮಸೂದೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಸರ್ಕಾರ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಪ್ರತಿಭಟನೆ, ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ – Kannada News | Union Minister Pralhad Joshi Defends NEET Reforms, Says Modi Government Bringing Tough Anti Paper Leak Measures

ಬೆಂಗಳೂರು, ಜುಲೈ 24: ನೀಟ್ ಪರೀಕ್ಷಾ ಅಕ್ರಮ ಮತ್ತು ವಿರೋಧ ಪಕ್ಷಗಳ ಟೀಕೆಗಳ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು. ‘ಟಿವಿ9’ ಜತೆ ಮಾತನಾಡಿದ ಅವರು, 2024ರ ಪರೀಕ್ಷಾ (ಅನುಚಿತ ವಿಧಾನಗಳ ತಡೆ) ಕಾಯಿದೆಯನ್ನು ಉಲ್ಲೇಖಿಸಿ, ಈ ಕಾನೂನು 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ. ದಂಡವನ್ನು ಒಳಗೊಂಡಿದೆ ಎಂದರು.

ಅರವಿಂದ್ ಕೇಜ್ರಿವಾಲ್ ಮತ್ತು ಇತರ ವಿರೋಧ ಪಕ್ಷಗಳು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಜೋಶಿ, ಹಿಂದೆ ಪೇಪರ್ ಲೀಕ್‌ಗಳು ಸಾಮಾನ್ಯವಾಗಿದ್ದಾಗ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಆರೋಪಿಸಿದರು. ಯುಪಿಎ ಅವಧಿಯಲ್ಲಿ 58 ಬಾರಿ, ರಾಜಸ್ಥಾನದಲ್ಲಿ ಐದು ವರ್ಷಗಳಲ್ಲಿ 19 ಬಾರಿ ಪೇಪರ್ ಲೀಕ್ ಆಗಿದ್ದ ಉದಾಹರಣೆಗಳನ್ನು ನೀಡಿದರು. ಆದರೆ ಈಗ ಮೋದಿ ಸರ್ಕಾರ ಹೊಸ ಕಾನೂನುಗಳನ್ನು ಜಾರಿಗೊಳಿಸಿ, ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸಿ, ವ್ಯವಸ್ಥೆಯಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದೆ ಎಂದು ಸಮರ್ಥಿಸಿಕೊಂಡರು.

ಮರು ಪರೀಕ್ಷೆಗಳನ್ನು 38 ದಿನಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಮತ್ತು 11 ಲಕ್ಷ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆಯುತ್ತಿದೆ ಎಂದು ಅವರು ತಿಳಿಸಿದರು. ತಮ್ಮ ಸರ್ಕಾರದ ಮೊದಲ ಆದ್ಯತೆ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸುವುದಾಗಿತ್ತು ಎಂದು ಹೇಳಿದರು. ಇದು ರಾಜೀನಾಮೆಗಳಿಂದ ಬಗೆಹರಿಯುವ ಸಮಸ್ಯೆ ಅಲ್ಲ, ಬದಲಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳುವುದು ಸರ್ಕಾರದ ಗುರಿಯಾಗಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ – Kannada News | Opposition Intensifies Protests for Dharmendra Pradhans Resignation Amidst NEET Controversy

ನವದೆಹಲಿ, ಜುಲೈ 24: ನೀಟ್ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿರೋಧ ಪಕ್ಷಗಳು ತೀವ್ರ ಒತ್ತಾಯ ಮಾಡುತ್ತಿವೆ. ಸಂಸತ್ ಅಧಿವೇಶನ ನಡೆಯುತ್ತಿರುವ ಕಾರಣ ವಿಪಕ್ಷಗಳು ಸಂಸತ್ ಭವನದ ಮಕರ ದ್ವಾರದಲ್ಲಿ ಧರಣಿ ನಡೆಸಿವೆ. ಇಂಡಿ ಒಕ್ಕೂಟದ ಸಂಸದರು ಮತ್ತು ಕಾಂಗ್ರೆಸ್ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಮತ್ತೊಂದೆಡೆ, ವಿದ್ಯಾರ್ಥಿಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಕರೆ ನೀಡಿದೆ. ಮೆಟ್ರೋ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳ ದಂಡು ಜಂತರ್ ಮಂತರ್ ಕಡೆ ಸಾಗುತ್ತಿರುವುದು ಕಂಡುಬಂದಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿಪಕ್ಷಗಳು ಕಟ್ಟುನಿಟ್ಟಾದ ಪಟ್ಟು ಹಿಡಿದಿರುವುದರಿಂದ ಲೋಕಸಭೆ ಕಲಾಪವನ್ನು 12 ಗಂಟೆಯವರೆಗೆ ಮುಂದೂಡಲಾಗಿದೆ. ಬಿಜೆಪಿ ತನ್ನ ಸಂಸದರಿಗೆ ಸದನದಲ್ಲಿರುವಂತೆ ಸೂಚಿಸಿದೆ.

ಇದೇ ವೇಳೆ, ದೇಶದ ಹಲವು ಭಾಗಗಳಲ್ಲಿ ವಿದ್ಯಾರ್ಥಿಗಳು ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಜಮಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೆಟ್ರೋ ನಿಲ್ದಾಣಗಳು, ಬಸ್ ನಿಲ್ದಾಣಗಳು ವಿದ್ಯಾರ್ಥಿಗಳಿಂದ ತುಂಬಿ ಹೋಗಿದ್ದು, ಎಲ್ಲರೂ ಜಂತರ್ ಮಂತರ್ ಕಡೆಗೆ ಸಾಗುತ್ತಿರುವುದು ಕಂಡುಬಂದಿದೆ. ದೇಶಾದ್ಯಂತ ಪ್ರತಿಭಟನೆ ನಡೆಸುವಂತೆ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಕರೆ ನೀಡಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಇತ್ತೀಚೆಗೆ ಇಂಡಿ ಒಕ್ಕೂಟದ ಸಂಸದರ ಸಭೆ ನಡೆದ ನಂತರ ಈ ಹೋರಾಟ ತೀವ್ರಗೊಂಡಿದೆ. ರಾಹುಲ್ ಗಾಂಧಿಯವರು ಗಾಂಧಿ ಸ್ಮೃತಿಗೆ ತೆರಳಿ ಅಹಿಂಸಾತ್ಮಕ ಹೋರಾಟದ ಸಂದೇಶ ನೀಡಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಮಾಯಣ’ ಸಿನಿಮಾಕ್ಕೆ ಎರಡು ವರ್ಷ ತಯಾರಿ, ರಣ್​​ಬೀರ್ ಕಪೂರ್ ಮಾಹಿತಿ – Kannada News | Ranbir Kapoor talks about his preparation for Ramayana movie

ಭಾರತ ಚಿತ್ರರಂಗದ (Indian Cinema) ಈ ವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಎನಿಸಿಕೊಂಡಿದೆ ‘ರಾಮಾಯಣ’ (Ramayana). ಈ ಸಿನಿಮಾದ ಎರಡೂ ಭಾಗಗಳಿಗೆ ಸೇರಿ ಸುಮಾರು 4000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಇದೀಗ ಸಿನಿಮಾದ ಮೊದಲ ಭಾಗ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾ ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದ್ದು, ಸಿನಿಮಾದ ಪ್ರಚಾರವನ್ನು ಚಿತ್ರತಂಡ ಈಗಾಗಲೇ ಆರಂಭಿಸಿದೆ. ಸಿನಿಮಾವನ್ನು ವಿದೇಶಗಳಲ್ಲಿ ಅದರಲ್ಲೂ ಹಾಲಿವುಡ್​ ಸಿನಿಮಾಗಳ ಮಾರುಕಟ್ಟೆ ಇರುವಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಇದೀಗ ಸ್ಯಾನ್​ ಡಿಯಾಗೊ ಕಾಮಿಕಾನ್​​ನಲ್ಲಿ ‘ರಾಮಾಯಣ’ ಚಿತ್ರತಂಡ ಪ್ರಚಾರ ಮಾಡುತ್ತಿದೆ. ಈ ವೇಳೆ ನಟ ರಣ್​​ಬೀರ್ ಕಪೂರ್ ಅವರು ಈ ಸಿನಿಮಾನಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಲು ತಾವು ಮಾಡಿದ ಎರಡು ವರ್ಷಗಳ ತಯಾರಿಯ ಬಗ್ಗೆ ಮಾತನಾಡಿದ್ದಾರೆ.

ಸ್ಯಾನ್ ಡಿಯಾಗೊ ಕಾಮಿಕಾನ್​​ನಲ್ಲಿ ಹಾಲಿವುಡ್​ ಮಾಧ್ಯಮಗಳಿಗೆ ನೀಡಿದ ಸಂದರ್ಶನ ಒಂದರಲ್ಲಿ ಮಾತನಾಡಿರುವ ನಟ ರಣ್​​ಬೀರ್ ಕಪೂರ್, ‘ನಾನು ಈ ಸಿನಿಮಾಕ್ಕಾಗಿ ಸುಮಾರು ಎರಡು ವರ್ಷಗಳ ಕಾಲ ತಯಾರಿ ನಡೆಸಿದೆ. ಶ್ರೀರಾಮನ ಪಾತ್ರ ನಿರ್ವಹಿಸಲು ನಾನು ಸಾಕಷ್ಟು ಓದಿಕೊಂಡೆ. ಸಾಕಷ್ಟು ಅನುಭವಿಗಳನ್ನು, ಪುರಾಣ ನಿಷ್ಣಾತರನ್ನು ಭೇಟಿಯಾಗಿ ಅವರೊಟ್ಟಿಗೆ ಚರ್ಚೆ ಮಾಡಿದೆ. ಯೋಗಾಭ್ಯಾಸವನ್ನು ಸತತ ಎರಡು ವರ್ಷಗಳ ಕಾಲ ನಾನು ಮಾಡಿದೆ. ಸುವೀರ್ ಎಂಬ ಗುರುಗಳೊಂದಿಗೆ ನಾನು ಸಾಕಷ್ಟು ಸಮಯ ಕಳೆದೆ. ಅವರಿಂದ ನಾನು ಶ್ರೀರಾಮನ ವಿಚಾರಗಳನ್ನು ಕಲಿತೆ. ಅವರೊಟ್ಟಿಗೆ ಧ್ಯಾನಗಳನ್ನು ಮಾಡಿದೆ’ ಎಂದಿದ್ದಾರೆ ರಣ್​​ಬೀರ್ ಕಪೂರ್.

ಇದನ್ನೂ ಓದಿ:‘ರಾಮಾಯಣ’ದ ಸೀತೆ ಪಾತ್ರ ಸಾಯಿ ಪಲ್ಲವಿ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವುದೇಕೆ?

ಪಾತ್ರಕ್ಕಾಗಿ ದೈಹಿಕ ಬದಲಾವಣೆಗಳು ಸಹ ಬೇಕಿದ್ದವು ಅವನ್ನೂ ಸಹ ಮಾಡಿಕೊಂಡೆ. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ನಾನು ಶ್ರೀರಾಮನ ಆದರ್ಶಗಳನ್ನು ಕಲಿಯಬೇಕಿತ್ತು, ಅಳವಡಿಸಿಕೊಳ್ಳಬೇಕಿತ್ತು. ನಾನು ಈಗ ಇರುವ ವಯಸ್ಸಿನಲ್ಲಿ ನನಗೆ ಅದು ಕಷ್ಟವಾಗಲಿಲ್ಲ. ರಾಮಾಯಣವನ್ನು ಭಾರತದ ಪ್ರತಿ ಹಳ್ಳಿಯಲ್ಲೂ ಬೇರೆ ಬೇರೆ ಪ್ರಕಾರಗಳಲ್ಲಿ ಪ್ರದರ್ಶಿಸಲಾಗಿದೆ. ಟಿವಿ, ರೇಡಿಯೋ, ನಾಟಕ, ಬೀದಿ ನಾಟಕ, ಸಂಗೀತ ಹೀಗೆ ಹಲವು ಮಾದರಿಗಳಲ್ಲಿ ರಾಮಾಯಣದ ಕತೆ ಹೇಳಲಾಗಿದೆ. ಈಗ ನಾನು ಬಹಳ ದೊಡ್ಡ ಮಟ್ಟದಲ್ಲಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕತೆ ಹೇಳುತ್ತಿದ್ದೇವೆ’ ಎಂದಿದ್ದಾರೆ ರಣ್​​ಬೀರ್ ಕಪೂರ್.

‘ರಾಮಾಯಣ’ ಎನ್ನುವುದು ಭಾರತದ ಇತಿಹಾಸ, ಭಾರತದ ಸಂಸ್ಕೃತಿ. ಇದನ್ನು ನಾವು ವಿಶ್ವ ಸಿನಿಮಾ ವೇದಿಕೆಯಲ್ಲಿ ಪ್ರಸ್ತುತ ಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಕತೆ ನಮ್ಮ ಜೊತೆಗೆ ಸಾವಿರಾರು ವರ್ಷಗಳಿಂದಲೂ ಇದೆ. ನಮಗೆ ಮುಂಚೆ ಲಕ್ಷಾಂತರ ಮಂದಿ ಈ ಕತೆಯನ್ನು ಹೇಳಿದ್ದಾರೆ. ಈಗ ನಾವು ಸಹ ಆ ಪ್ರಯಣದಲ್ಲಿ ಒಬ್ಬರಾಗುತ್ತಿದ್ದೇವೆ. ನಾವು ಬಹಳ ಪ್ರೀತಿ, ಗೌರವ, ಭಕ್ತಿಗಳಿಂದ ಈ ಸಿನಿಮಾ ಮಾಡಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಿರೀಕ್ಷೆ ನಮಗೆ ಇದೆ’ ಎಂದಿದ್ದಾರೆ ರಣ್​​ಬೀರ್ ಕಪೂರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಯರ್ ಬಾಟಲಿಗಳಿದ್ದ ಲಾರಿ ಪಲ್ಟಿ; ರಸ್ತೆ ಪಾಲಾಯ್ತು ಲಕ್ಷಾಂತರ ರೂ. ಮೌಲ್ಯದ ಮದ್ಯ! – Kannada News | Hassan Beer Lorry Overturns: Thousands of Bottles Broken, Locals Rush to Grab Beer

ಹಾಸನ, ಜುಲೈ 24: ಹೊರವಲಯದ ದೊಡ್ಡಪುರ ಗ್ರಾಮದ ಬಳಿ ತಡರಾತ್ರಿ ಟಯರ್ ಬ್ಲಾಸ್ಟ್ ಆದ ಪರಿಣಾಮ 1,100 ಕೇಸ್ ಬಿಯರ್ ಹೊತ್ತೊಯ್ಯುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹಾಸನದ ವುಡ್ ಪಿಕರ್ ಡಿಸ್ಟಿಲರೀಸ್‌ನಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಲಾರಿ ಅಪಘಾತಕ್ಕೀಡಾಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಬಿಯರ್ ಬಾಟಲಿಗಳು ರಸ್ತೆ ಪಾಲಾಗಿವೆ.

ಅಪಘಾತದ ಬೆನ್ನಲ್ಲೇ ಸ್ಥಳೀಯರು ನೂರಾರು ಬಿಯರ್ ಬಾಟಲಿಗಳನ್ನು ಹೊತ್ತೊಯ್ದಿದ್ದು, ಬಳಿಕ ಬಂದ ಪೊಲೀಸರು ಮಾರ್ಗವನ್ನು ಬಂದ್ ಮಾಡಿದ್ದಾರೆ. ಅಳಿದುಳಿದ ಬಾಟಲಿಗಳನ್ನು ಸಂಗ್ರಹಿಸಲು ಟ್ರಾನ್ಸ್‌ಪೋರ್ಟ್‌ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೂಪರ್ ಮಾಮ್ ರಿಯಾಲಿಟಿ ಶೋ ಆಡಿಷನ್ ವಿವರ ಇಲ್ಲಿದೆ – Kannada News | Dance Karnataka Dance Super Mom Auditions Begin in 18 Districts Across Karnataka

ಮಹಿಳೆಯರಿಗಾಗಿ ‘ಸೂಪರ್ ಮಾಮ್’ ಹೆಸರಿನ ರಿಯಾಲಿಟಿ ಶೋನ ಜೀ ಕನ್ನಡ ವಾಹಿನಿ ತರುತ್ತಿದೆ. ಇದಕ್ಕೆ ಕರ್ನಾಟಕದ ಒಟ್ಟು 18 ಪ್ರಮುಖ ಜಿಲ್ಲೆಗಳಲ್ಲಿ ಈ ಆಡಿಷನ್‌ಗಳು ನಡೆಯಲಿವೆ. ಎಲ್ಲೆಲ್ಲಿ ಆಡಿಷನ್ ನಡೆಯಲಿದೆ ಎಂಬ ವಿವರವನ್ನು ಜೀ ಕನ್ನಡ ವಾಹಿನಿ ನೀಡಿದೆ. ಜುಲೈ 24 ಅಂದರೆ ಇಂದು ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಆಡಿಷನ್ ಆಯೋಜಿಸಲಾಗಿದೆ. ಜುಲೈ 25ರಂದು ಮಂಗಳೂರು ಹಾಗೂ ಕೊಪ್ಪಳದ ಭಾಗದಲ್ಲಿ ಆಡಿಷನ್‌ಗಳನ್ನು ಹಮ್ಮಿಕೊಳ್ಳಲಾಗಿದೆ. ಜುಲೈ 26 ಕ್ಕೆ ಉಡುಪಿ ಹಾಗೂ ದಾವಣಗೆರೆಯಲ್ಲಿ ಆಡಿಷನ್ ನಡೆಯಲಿದೆ.

ಆಡಿಷನ್‌ನಲ್ಲಿ ಭಾಗವಹಿಸಲು ಇಚ್ಛಿಸುವ ತಾಯಂದಿರು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ಒಳಗಾಗಿ ನಿಗದಿಪಡಿಸಿದ ಸ್ಥಳಕ್ಕೆ ಭೇಟಿ ನೀಡಬೇಕು. ಆಡಿಷನ್ ನೀಡುವ ಸಮಯದಲ್ಲಿ ಸ್ಪರ್ಧಿಗಳು ತಮ್ಮ ಒಂದು ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಅಡ್ರೆಸ್ ಪ್ರೂಫ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಚ್ಛಿಸುವವರು 9513134434 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಲಮಟ್ಟಿ ಡ್ಯಾಂ ಭರ್ತಿಗೆ ಕೇವಲ 1.02 ಮೀಟರ್ ಬಾಕಿ: 14 ಕ್ರಸ್ಟ್ ಗೇಟ್‌ಗಳು ಓಪನ್​​ – Kannada News | Almatti Dam Just 1.02 Metres Away from Full Capacity; 14 Crest Gates Opened

ವಿಜಯಪುರ, ಜುಲೈ 24: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಮತ್ತೆ ಜೀವಕಳೆ ಬಂದಿದ್ದು, ಆಲಮಟ್ಟಿ ಡ್ಯಾಂ ಭರ್ತಿಗೆ ಕೇವಲ 1.02 ಮೀಟರ್ ಬಾಕಿ ಉಳಿದಿದೆ. ಡ್ಯಾಂನಲ್ಲಿ 518.58 ಮೀಟರ್ ನೀರು ಸಂಗ್ರಹವಾಗಿದ್ದು, 73,162 ಕ್ಯೂಸೆಕ್ ಒಳಹರಿವಿದೆ. ಈ ವರ್ಷದ ಮೊದಲ ಬಾರಿಗೆ ಆಲಮಟ್ಟಿ ಕ್ರಸ್ಟ್ ಗೇಟ್‌ಗಳನ್ನು ಓಪನ್ ಮಾಡಲಾಗಿದ್ದು, 26 ಗೇಟ್‌ಗಳಲ್ಲಿ 14 ಕ್ರಸ್ಟ್ ಗೇಟ್‌ಗಳನ್ನು ತೆರೆಯಲಾಗಿದೆ. ಮಹಾರಾಷ್ಟ್ರ ಹಾಗೂ ಕೃಷ್ಣಾ ಕಣಿವೆಯಲ್ಲಿ ಉತ್ತಮ ಮಳೆ ಪರಿಣಾಮ ನದಿಪಾತ್ರದ ಜನರಿಗೆ ಜಿಲ್ಲಾಡಳಿತದಿಂದ ನದಿಗೆ ಇಳಿಯದಂತೆ, ಜಾನುವಾರುಗಳನ್ನು ಬಿಡದಂತೆ ಸೂಚನೆ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇಸ್ರೇಲ್​ಗೆ ಶೇ 12.5, ಭಾರತಕ್ಕೆ ಶೇ. 10 ಸುಂಕ; ಅಮೆರಿಕದ ಪರಮಮಿತ್ರ ದೇಶಕ್ಕೆ ಹೆಚ್ಚಿನ ಟ್ಯಾರಿಫ್ ಯಾಕೆ? – Kannada News | Us imposes new tariffs on over 60 countries having forced labour system india at lower bracket

ವಾಷಿಂಗ್ಟನ್, ಜುಲೈ 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಲವಂತದ ಕಾರ್ಮಿಕ ಪದ್ಧತಿಯನ್ನು (Forced Labour) ತಡೆಯುವ ಉದ್ದೇಶದಿಂದ ಭಾರತ, ಚೀನಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ 60ಕ್ಕೂ ಹೆಚ್ಚು ದೇಶಗಳ ಮೇಲಿನ ಆಮದುಗಳ ಮೇಲೆ ಶೇ. 10ರಿಂದ ಶೇ. 12.5ರವರೆಗೆ ಹೊಸ ಸುಂಕಗಳನ್ನು (Tariffs) ವಿಧಿಸಿದ್ದಾರೆ. ಬಲವಂತದ ಕಾರ್ಮಿಕರಿಂದ ತಯಾರಾದ ಉತ್ಪನ್ನಗಳ ಆಮದನ್ನು ತಡೆಗಟ್ಟುವಲ್ಲಿ ತಮ್ಮ ವ್ಯಾಪಾರಿ ಪಾಲುದಾರ ದೇಶಗಳು ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕ ಈ ಸುಂಕಗಳನ್ನು ವಿಧಿಸಿದೆ.

ವಿವಿಧ ದೇಶಗಳಿಗೆ ವಿಭಿನ್ನ ದರಗಳು ಯಾಕೆ?

ಭಾರತ, ಯೂರೋಪಿಯನ್ ಒಕ್ಕೂಟ ಇತ್ಯಾದಿ ದೇಶಗಳಿಗೆ ಅಮೆರಿಕ ಶೇ. 10 ಸುಂಕ ವಿಧಿಸಿದೆ. ಚೀನಾ ಮೊದಲಾದ ದೇಶಗಳ ಮೇಲೆ ಶೇ. 12.5 ಟ್ಯಾರಿಫ್ ಹಾಕಿದೆ. ಫೋರ್ಸ್ಡ್ ಲೇಬರ್ ಅನ್ನು ನಿಯಂತ್ರಿಸುವ ಬದ್ಧತೆ ತೋರಿಸಿರುವ ದೇಶಗಳಿಗೆ ರಿಯಾಯಿತಿ ನೀಡಲಾಗಿದೆ. ಅಂತಹ ಕಾನೂನೇ ಇಲ್ಲದ, ಮತ್ತು ಬದ್ಧತೆಯನ್ನೂ ತೋರದ ದೇಶಗಳಿಗೆ ಮಾತ್ರ ಗರಿಷ್ಠ ಟ್ಯಾರಿಫ್ ಹಾಕಲು ಟ್ರಂಪ್ ಸರ್ಕಾರ ನಿರ್ಧರಿಸಿದೆ. ತೈಲ, ಅನಿಲ ಮತ್ತು ಅಮೆರಿಕ-ಮೆಕ್ಸಿಕೋ-ಕೆನಡಾ ಒಪ್ಪಂದದಡಿ ಬರುವ ಉತ್ಪನ್ನಗಳಿಗೆ ಈ ಹೊಸ ಸುಂಕಗಳಿಂದ ವಿನಾಯಿತಿ ನೀಡಲಾಗಿದೆ.

ಅಂತೆಯೇ, ಬಲವಂತದ ಕಾರ್ಮಿಕರಿಂದ ತಯಾರಾಗುವ ಉತ್ಪನ್ನಗಳನ್ನು ನಿಷೇಧಿಸುವ ಕಾನೂನು ಇಲ್ಲದ ಚೀನಾ, ಯುಕೆ, ಜಪಾನ್​ನಂತಹ ದೇಶಗಳ ಮೇಲೆ ಶೇ. 12.5ರಷ್ಟು ಸುಂಕ ವಿಧಿಸಲಾಗಿದೆ. ಇಸ್ರೇಲ್​ಗೂ ಕೂಡ ಅಧಿಕ ಸುಂಕವೇ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಏನಿದು ‘ಸೆಕ್ಷನ್ 301’? ಡೊನಾಲ್ಡ್ ಟ್ರಂಪ್ ಇದನ್ನು ಅಸ್ತ್ರವಾಗಿಸಿಕೊಂಡಿದ್ದೇಕೆ? ಒಂದೇ ತಕ್ಕಡಿಯಲ್ಲಿ ಭಾರತ, ಪಾಕಿಸ್ತಾನ

ಬಲವಂತದ ಕಾರ್ಮಿಕ ಪದ್ಧತಿ ತಡೆಗೆ ಕಾನೂನುಗಳನ್ನು ಜಾರಿಗೆ ತಂದಿರುವ ಅಥವಾ ಬದ್ಧತೆ ಪ್ರದರ್ಶಿಸಿರುವ ಭಾರತ, ಶ್ರೀಲಂಕಾ ಮತ್ತು ಯುರೋಪಿಯನ್ ಯೂನಿಯನ್ (EU), ಹೊಂಡುರಾಸ್, ಕಾಂಬೋಡಿಯಾದಂತಹ ದೇಶಗಳ ಮೇಲೆ ಶೇ. 10ರಷ್ಟು ಸುಂಕ ಜಾರಿಯಲ್ಲಿರುತ್ತದೆ.

ಭಾರತದ ಮೇಲಾಗುವ ಪರಿಣಾಮವೇನು?

ಕಳೆದ ತಿಂಗಳು ಇದ್ದ ಪ್ರಸ್ತಾಪದ ಪ್ರಕಾರ ಭಾರತದ ಮೇಲೂ ಶೇ. 12.5ರಷ್ಟು ಸುಂಕ ಹಾಕಲು ನಿರ್ಧರಿಸಲಾಗಿತ್ತು. ಆದರೆ, ಬಲವಂತದ ಕಾರ್ಮಿಕ ಪದ್ಧತಿಯ ವಿರುದ್ಧ ತೆಗೆದುಕೊಂಡಿರುವ ಕ್ರಮಗಳನ್ನು ಪರಿಗಣಿಸಿ ಅಮೆರಿಕ ಸರ್ಕಾರವು ಭಾರತದ ಮೇಲಿನ ಸುಂಕವನ್ನು ಶೇ. 10ಕ್ಕಷ್ಟೇ ಸೀಮಿತಗೊಳಿಸಿದೆ.

ಸುಂಕ ಶೇ. 12.5ಕ್ಕೆ ಏರದಿದ್ದರೂ, ಶೇ. 10ರಷ್ಟು ಸುಂಕ ಮುಂದುವರಿಯುವುದರಿಂದ ಅಮೆರಿಕಕ್ಕೆ ರಫ್ತು ಮಾಡುವ ಭಾರತೀಯ ಕಂಪನಿಗಳ ಮೇಲಿನ ಒತ್ತಡ ಮುಂದುವರಿಯಲಿದೆ. ಆದರೆ, ಟ್ಯಾರಿಫ್​ನಲ್ಲಿ ಶೇ. 2.5ರ ಅಂತರವು ಭಾರತದ ಪರವಾಗಿರುವುದು ಒಂದಷ್ಟು ಅನುಕೂಲವನ್ನೂ ಕೊಟ್ಟಿದೆ.

ಇದನ್ನೂ ಓದಿ: ನಮ್ಮ ಒಂದೇ ಒಂದು ಸೇತುವೆ ಮುಟ್ಟಿದರೂ ಸುಮ್ಮನಿರಲ್ಲ, ಟ್ರಂಪ್ ಬೆದರಿಕೆಗೆ ಇರಾನ್ ಭಾರಿ ತಿರುಗೇಟು, ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ

ಅಮೆರಿಕದ ಈ ಕ್ರಮವು ಮಾನವೀಯತೆಯ ದೃಷ್ಟಿಯಿಂದಲಾ?

ಬಲವಂತದ ಕಾರ್ಮಿಕ ಪದ್ಧತಿಯಿಂದ ತಯಾರಾಗುವ ಸರಕುಗಳಿಂದ ಅಮೆರಿಕಕ್ಕೆ ಏನು ಹಾನಿ? ಕಾರ್ಮಿಕರ ಬಗ್ಗೆ ಕಾಳಜಿಯಿಂದ ಅಮೆರಿಕವು ಈ ಕ್ರಮ ತೆಗೆದುಕೊಳ್ಳುತ್ತಿದೆಯಾ? ಬಲವಂತ ಕಾರ್ಮಿಕ ಪದ್ಧತಿಯಲ್ಲಿ ಬಹಳ ಕಡಿಮೆ ದಿನಗೂಲಿ ಕೊಟ್ಟು ಕಾರ್ಮಿಕರಿಂದ ಕೆಲಸ ಮಾಡಿಕೊಳ್ಳಲಾಗುತ್ತದೆ. ಇದರಿಂದ ಉತ್ಪಾದನೆ ವೆಚ್ಚ ಕಡಿಮೆ ಇರುತ್ತದೆ. ಆದರೆ, ಕಾರ್ಮಿಕರಿಗೆ ಬಹಳ ಅಧಿಕ ವೇತನ ಇರುವ ಅಮೆರಿಕದಲ್ಲಿ ಅವೇ ಉತ್ಪನ್ನ ತಯಾರಿಸಲು ಅಧಿಕ ವೆಚ್ಚ ಆಗುತ್ತದೆ. ಹೀಗಾಗಿ, ಸರಕುಗಳ ಮಾರಾಟದಲ್ಲಿ ನ್ಯಾಯಯುತ ಸ್ಪರ್ಧೆ ಇರುವುದಿಲ್ಲ ಎನ್ನುವುದು ಅಮೆರಿಕದ ವಾದ. ಹೀಗಾಗಿ, ಹೆಚ್ಚು ಟ್ಯಾರಿಫ್ ಹಾಕುತ್ತಿದೆ.

ಈ ಹೊಸ ಸುಂಕಗಳು ಶುಕ್ರವಾರದಿಂದಲೇ (ಜುಲೈ 24) ಜಾರಿಗೆ ಬಂದಿವೆ. ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಪ್ರಕಾರ, “ಈ ಕ್ರಮವು ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯುವುದರ ಜೊತೆಗೆ ಜಾಗತಿಕವಾಗಿ ಕಾರ್ಮಿಕರ ಹಿತರಕ್ಷಣೆಗೆ ಸಹಕಾರಿಯಾಗಲಿದೆ”.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಖಾಸಗಿ ಹೂಡಿಕೆ ಆಕರ್ಷಿಸಲು ಪ್ರವಾಸೋದ್ಯಮ ನೀತಿ ಸರಳೀಕರಣ: ಸಚಿವ ಕೆ.ಜೆ. ಜಾರ್ಜ್ – Kannada News | Karnataka to Simplify Tourism Policy to Boost Private Investment: Minister KJ George

ಕೆ.ಜೆ. ಜಾರ್ಜ್

ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಹಾಗೂ ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು ಸರ್ಕಾರ ಪ್ರವಾಸೋದ್ಯಮ ನೀತಿಗಳನ್ನು ಮತ್ತಷ್ಟು ಸರಳೀಕರಿಸುತ್ತಿದೆ ಎಂದು ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ನಗರದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ‘ಇಂಡಿಯನ್ ಇಂಟರ್‌ನ್ಯಾಷನಲ್ ಟ್ರಾವೆಲ್ ಮಾರ್ಟ್’ (IITM 2026) ಪ್ರದರ್ಶನದ ವೇಳೆ ಅವರು ಮಾತನಾಡಿ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

ಸರಳೀಕೃತ ವ್ಯವಸ್ಥೆ ಮತ್ತು ಪ್ರೋತ್ಸಾಹಕಗಳು

ಹೂಡಿಕೆದಾರರಿಗೆ ಆಡಳಿತಾತ್ಮಕ ತೊಡಕುಗಳು ಎದುರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಅನಗತ್ಯ ನೌಕರಶಾಹಿ ನಿಯಮಗಳನ್ನು ಸಡಿಲಗೊಳಿಸಿ, ಏಕಗವಾಕ್ಷಿ ಮಂಜೂರಾತಿ (Single-window clearances) ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಜೊತೆಗೆ ನೂತನ ಪ್ರವಾಸೋದ್ಯಮ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಖಾಸಗಿ ಹೂಡಿಕೆದಾರರಿಗೆ ಆಕರ್ಷಕ ಸಬ್ಸಿಡಿ ಮತ್ತು ಪ್ರೋತ್ಸಾಹಕಗಳನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಹೂಡಿಕೆಗೆ ಹೊಸ ರಂಗಗಳು

ಸಾಹಸ ಪ್ರವಾಸೋದ್ಯಮ (Adventure Tourism), ಕರಾವಳಿ ಭಾಗದಲ್ಲಿ ಕ್ರೂಸ್ (ಹಡಗು) ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ ಹಾಗೂ ವಿಶ್ವದರ್ಜೆಯ ರೆಸಾರ್ಟ್‌ಗಳನ್ನು ನಿರ್ಮಿಸಲು ಖಾಸಗಿ ಸಂಸ್ಥೆಗಳಿಗೆ ಮುಕ್ತ ಆಹ್ವಾನ ನೀಡಲಾಗಿದೆ. ಈ ಹೆಜ್ಜೆಯು ಕೇವಲ ಪ್ರವಾಸಿಗರನ್ನು ಆಕರ್ಷಿಸುವುದಷ್ಟೇ ಅಲ್ಲದೆ, ಸ್ಥಳೀಯವಾಗಿ ಲಕ್ಷಾಂತರ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲಿದೆ.ಕರ್ನಾಟಕದಲ್ಲಿ ಪ್ರವಾಸೋದ್ಯಮ ಉದ್ದಿಮೆ ಪ್ರಾರಂಭಿಸಲು ಬಯಸುವ ಹೂಡಿಕೆದಾರರಿಗೆ ಸರ್ಕಾರ ಸಂಪೂರ್ಣ ಆಡಳಿತಾತ್ಮಕ ಬೆಂಬಲ ನೀಡಲಿದೆ ಎಂದು ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಉನ್ನತಾಧಿಕಾರಿಗಳು, 16 ರಾಜ್ಯಗಳ 850ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 26ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಗಳು ಭಾಗವಹಿಸಿದ್ದವು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PMJVK ಯೋಜನೆ ಫಲಾನುಭವಿಗಳು ಯಾರು? ಜಿಲ್ಲಾ ಮಟ್ಟದ ಮಾಹಿತಿ ಇಲ್ಲವೆಂದ ಕೇಂದ್ರ ಸರ್ಕಾರ – Kannada News | PMJVK Scheme: Centre Admits to Lacking District Level Database to Measure Impact of Minority Development Funds

ಜಿ. ಕುಮಾರ ನಾಯಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಕಿರಣ್ ರಿಜಿಜುImage Credit source: PTI

ಬೆಂಗಳೂರು, ಜುಲೈ 24: ಕರ್ನಾಟಕದ ಕಲ್ಯಾಣ ಕರ್ನಾಟಕ ಸೇರಿದಂತೆ ಹಿಂದುಳಿದ ಜಿಲ್ಲೆಗಳ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮ (PMJVK) ಅಡಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದರೂ, ಈ ಯೋಜನೆಯ ಪರಿಣಾಮವನ್ನು ಅಳೆಯಲು ಅಗತ್ಯವಾದ ಜಿಲ್ಲಾ ಮಟ್ಟದ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಒಪ್ಪಿಕೊಂಡಿದೆ.

ರಾಯಚೂರು ಸಂಸದ ಜಿ. ಕುಮಾರ ನಾಯಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, PMJVK ಯೋಜನೆಯಡಿ ಫಲಾನುಭವಿಗಳ ಪ್ರದೇಶ, ಮೂಲಸೌಕರ್ಯ ಕೊರತೆ ಅಥವಾ ಯೋಜನೆಯ ಪರಿಣಾಮವನ್ನು ಅಳೆಯುವ ಪ್ರತ್ಯೇಕ ಜಿಲ್ಲಾ ಮಟ್ಟದ ಡೇಟಾಬೇಸ್‌ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. PMJVK ಯೋಜನೆಯು ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳ ಅಭಿವೃದ್ಧಿ ಕೊರತೆ ನಿವಾರಣೆಗೆ ರೂಪಿಸಿರುವ ಬೇಡಿಕೆ ಆಧಾರಿತ (Demand-Driven) ಯೋಜನೆಯಾಗಿದೆ. ಆದರೆ, ಫಲಾನುಭವಿಗಳ ಪ್ರದೇಶಗಳನ್ನು ಗುರುತಿಸುವುದು, ಸ್ಥಳೀಯ ಮೂಲಸೌಕರ್ಯದ ಕೊರತೆಗಳನ್ನು ದಾಖಲಿಸುವುದು ಅಥವಾ ಯೋಜನೆಯ ಪರಿಣಾಮವನ್ನು ಮೌಲ್ಯಮಾಪನ ಮಾಡುವ ಯಾವುದೇ ಕೇಂದ್ರ ಡೇಟಾಬೇಸ್‌ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಗುಂಡಿ ಬಿದ್ದ ಗುಂಡ್ಲುಪೇಟೆ ಮುಖ್ಯ ರಸ್ತೆಗಳನ್ನು ಸ್ವಂತ ವೆಚ್ಚದಲ್ಲಿ ಮುಚ್ಚಿದ ಕೂಲಿ ಕಾರ್ಮಿಕ

699 ಯೋಜನೆಗಳು, 7 ಕೋಟಿಗೂ ಹೆಚ್ಚು ಅನುದಾನ

ಜನರಿಗಾಗಿ ರೂಪಿಸಲಾದ ಯೋಜನೆಗಳು ನಿಜವಾಗಿಯೂ ಅವರ ಜೀವನದಲ್ಲಿ ಬದಲಾವಣೆ ತಂದಿವೆಯೇ ಎಂಬುದನ್ನು ತಿಳಿಯಲು ಯಾವುದೇ ವ್ಯವಸ್ಥೆ ಇಲ್ಲ. ಸಾರ್ವಜನಿಕ ಹಣ ಅಗತ್ಯವಿರುವ ಸಮುದಾಯಗಳಿಗೆ ತಲುಪುತ್ತಿದೆಯೇ, ಯೋಜನೆಗಳು ಪರಿಣಾಮಕಾರಿಯಾಗಿವೆಯೇ ಎಂಬುದನ್ನು ನಾಗರಿಕರು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2021-22ರಿಂದ 2025-26ರವರೆಗೆ ಕರ್ನಾಟಕದಲ್ಲಿ PMJVK ಅಡಿಯಲ್ಲಿ 699 ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, 7 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಫಲಿತಾಂಶ ಆಧಾರಿತ ಮೇಲ್ವಿಚಾರಣೆ ಇಲ್ಲದ ಕಾರಣ, ಈ ಹೂಡಿಕೆ ಶಿಕ್ಷಣ, ಆರೋಗ್ಯ, ವಸತಿ ಸೇರಿದಂತೆ ಮೂಲಭೂತ ಸೇವೆಗಳ ಸುಧಾರಣೆಗೆ ಎಷ್ಟು ನೆರವಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಕುಮಾರ ನಾಯಕ ಹೇಳಿದ್ದಾರೆ.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಸುಮಾರು ಶೇ.15ರಷ್ಟಿದ್ದು, ಅನೇಕ ಕುಟುಂಬಗಳು ಸರ್ಕಾರಿ ಕಲ್ಯಾಣ ಯೋಜನೆಗಳನ್ನೇ ಅವಲಂಬಿಸಿವೆ. ಜಿಲ್ಲಾ ಮಟ್ಟದ ಮಾಹಿತಿ ಇಲ್ಲದ ಕಾರಣ, ಯಾವ ಪ್ರದೇಶಗಳು ಇನ್ನೂ ಅಭಿವೃದ್ಧಿಯಿಂದ ವಂಚಿತವಾಗಿವೆ ಎಂಬುದನ್ನು ಗುರುತಿಸುವುದು ಹಾಗೂ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಯೋಜನೆ ರೂಪಿಸುವುದು ಕಷ್ಟವಾಗುತ್ತಿದೆ ಎಂದು ತಜ್ಞರೂ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY-G) ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (PMGSY)ಗಳಿಗೆ ಇರುವಂತೆ ಜಿಲ್ಲಾವಾರು ಕಾರ್ಯಕ್ಷಮತೆಯ ಮೇಲ್ವಿಚಾರಣಾ ವ್ಯವಸ್ಥೆಯನ್ನು PMJVKಗೂ ಜಾರಿಗೊಳಿಸಬೇಕು ಎಂದು ಕುಮಾರ ನಾಯಕ ಆಗ್ರಹಿಸಿದ್ದಾರೆ. ಯೋಜನೆಯ ಫಲಿತಾಂಶಗಳನ್ನು ನಿಯಮಿತವಾಗಿ ದಾಖಲಿಸಿ, ಅಭಿವೃದ್ಧಿಯಿಂದ ವಂಚಿತ ಪ್ರದೇಶಗಳನ್ನು ಗುರುತಿಸಿ, ಭವಿಷ್ಯದ ಹೂಡಿಕೆಗಳನ್ನು ಅಗತ್ಯವಿರುವ ಕಡೆಗೆ ಕೇಂದ್ರೀಕರಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಯೋಜನೆಯ ನೈಜ ಲಾಭ ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version