Video: ಮೈಸೂರಿನ ಚಾಮುಂಡಿದೇವಿಗೆ ಎರಡನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ವಿಜೃಂಭಣೆಯ ಪೂಜೆ – Kannada News | Special Puja for Chamundidevi on Second Ashada Friday at Mysores Chamundi Hills

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ಎರಡನೇ ಶುಕ್ರವಾರದಂದು ಚಾಮುಂಡಿದೇವಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ಈ ಪುಣ್ಯ ದಿನದಂದು ನಾಡದೇವಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಮೈಸೂರು ನಗರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ

ಎರಡನೇ ವಾರದ ಆಷಾಢ ಮಾಸದ ಶುಕ್ರವಾರದ ಹಿನ್ನೆಲೆಯಲ್ಲಿ, ಬೆಟ್ಟದಲ್ಲಿ ಹಲವಾರು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಭಾಗವಾಗಿ, ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ವಿಶ್ವೇಶ್ವರ ಜೋಯಿ ಮತ್ತು ಅವರ ಪುತ್ರ ಕೃಷ್ಣ ಜೋಯಿ ಅವರು ಈ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದಾರೆ. ವೇದವಾಹಿನಿ ಸಂಸ್ಥೆಯು ಈ ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ನಂಜನಗೂಡಿನಲ್ಲಿ ಪ್ರತಿಯೊಂದು ಕಾರ್ಯಕ್ರಮಕ್ಕೂ ಕಪಿಲಾರತಿ ನಡೆಸುವ ಅವರ ಸೇವೆಯನ್ನು ಉಲ್ಲೇಖಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On – 11:07 am, Fri, 24 July 26

Source link

‘ಅದು ನನ್ನ ಸಿನಿಮಾ ಆಗಿರಲಿಲ್ಲ’; ‘ಬಂದರ್’ ಚಿತ್ರದ ಬಗ್ಗೆ ಅನುರಾಗ್ ಕಶ್ಯಪ್ ಬೇಸರ – Kannada News | Anurag Kashyap Distances Himself from Bandar Says Misogyny and Anti MeToo Criticisms are Valid

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ನಿರ್ದೇಶನದ  ಇತ್ತೀಚಿನ ಚಿತ್ರ ‘ಬಂದರ್’ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಬೆನ್ನಲ್ಲೇ ತೀವ್ರ ವಿವಾದಕ್ಕೆ ಸಿಲುಕಿದೆ. ಈ ಸಿನಿಮಾ ಮಹಿಳಾ ವಿರೋಧಿಯಾಗಿದೆ ಮತ್ತು ‘ಮೀಟೂ ಚಳವಳಿ’ಗೆ ವಿರುದ್ಧವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕುರಿತು ಸ್ವತಃ ಮುಕ್ತವಾಗಿ ಮಾತನಾಡಿರುವ ಅನುರಾಗ್ ಕಶ್ಯಪ್, ಪ್ರೇಕ್ಷಕರು ಮತ್ತು ವಿಮರ್ಶಕರು ಮಾಡುತ್ತಿರುವ ಟೀಕೆಗಳು ನಿಜವಾದವು ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಇದಕ್ಕೆ ಸಂಪೂರ್ಣವಾಗಿ ತಾವೊಬ್ಬರೇ ಕಾರಣವಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಇದು ನನ್ನ ಫೈನಲ್ ಕಟ್ ಅಲ್ಲ

ಕಾಮಿಡಿಯನ್ ಕುನಾಲ್ ಕಮ್ರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅನುರಾಗ್ ಕಶ್ಯಪ್, ‘ನಾನು ಈ ಚಿತ್ರದ ಪ್ರಚಾರಕ್ಕಾಗಿ ಯಾವುದೇ ಇಂಟರ್ವ್ಯೂ ನೀಡಿಲ್ಲ. ಅಷ್ಟೇ ಅಲ್ಲ, ಕುನಾಲ್ ಅವರಿಗೂ ಈ ಸಿನಿಮಾ ನೋಡಬೇಡಿ ಎಂದು ಹೇಳಿದ್ದೆ. ಏಕೆಂದರೆ, ಈಗ ಬಿಡುಗಡೆಯಾಗಿರುವ ಸಿನಿಮಾ ನನ್ನ ಕೊನೆಯ ಕಟ್ ಅಲ್ಲ. ಚಿತ್ರದ ಕೆಲವು ಪ್ರಮುಖ ದೃಶ್ಯಗಳನ್ನು ಎಡಿಟಿಂಗ್ ಸಮಯದಲ್ಲಿ ಕತ್ತರಿಸಲಾಗಿದೆ. ನಾನು ಶೂಟ್ ಮಾಡಿದ ದೃಶ್ಯಗಳನ್ನೇ ಅವರು ತೆಗೆದುಹಾಕಿರುವುದರಿಂದ ಚಿತ್ರದ ಇಡೀ ದೃಷ್ಟಿಕೋನ ಮತ್ತು ಸಂದೇಶವೇ ಬದಲಾಗಿದೆ’ ಎಂದು ಬೇಸರ ಹೊರಹಾಕಿದ್ದಾರೆ.

ಕಾರ್ಪೊರೇಟ್ ವ್ಯವಸ್ಥೆಯ ವಿರುದ್ಧ ಆಕ್ರೋಶ

ಸಿನಿಮಾ ತಡವಾಗಿ ಬಿಡುಗಡೆಯಾದಾಗ ಬಜೆಟ್ ಮತ್ತು ವೆಚ್ಚದ ಸಮಸ್ಯೆ ಎದುರಾಗುತ್ತದೆ. ಆಗ ಚಿತ್ರದ ಸಂಪೂರ್ಣ ಹಕ್ಕುಗಳು ಸ್ಟುಡಿಯೋ ಅಥವಾ ಪ್ರೊಡಕ್ಷನ್ ಹೌಸ್ ಕೈಗೆ ಹೋಗುತ್ತವೆ ಎಂದು ಅವರು ವಿವರಿಸಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ಚಿತ್ರರಂಗ ಕಾರ್ಪೊರೇಟ್‌ಮಯವಾಗಿದೆ. ಚಿತ್ರದ ಕಥೆಯನ್ನು ನಂಬಿ ಸಿನಿಮಾ ಮಾಡುವವರ ಸಂಖ್ಯೆ ಕಡಿಮೆ ಆಗಿದೆ. ಕೇವಲ ಬ್ಯುಸಿನೆಸ್ ಮತ್ತು ಯಶಸ್ಸಿಗಾಗಿ ಸಿನಿಮಾಗಳನ್ನು ಮಾಡಲಾಗುತ್ತಿದೆ. ದೊಡ್ಡ ಸಂಸ್ಥೆಗಳ ಕೈಯಲ್ಲಿ ಅಧಿಕಾರ ಇರುವುದರಿಂದ ಸ್ವತಂತ್ರ ಸಿನಿಮಾಗಳಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ’ ಎಂದು ಚಿತ್ರರಂಗದ ಇಂದಿನ ಪರಿಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಸತ್ಲುಜ್’ ಸಿನಿಮಾ ನೋಡದೆಯೇ ನಿಷೇಧ ಹೇರಿದ ಸೆನ್ಸಾರ್ ಮಂಡಳಿ ಅಧ್ಯಕ್ಷ? ಅನುರಾಗ್ ಕಶ್ಯಪ್ ಆರೋಪ

ಈ ‘ಬಂದರ್’ ಸಿನಿಮಾದಲ್ಲಿ ಬಾಬಿ ಡಿಯೋಲ್, ಸಾನ್ಯಾ ಮಲ್ಹೋತ್ರಾ, ಸಪ್ನಾ ಪಬ್ಬಿ, ಸಬಾ ಆಜಾದ್, ಇಂದ್ರಜಿತ್ ಸುಕುಮಾರನ್ ಹಾಗೂ ಕನ್ನಡದ ಖ್ಯಾತ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ‘ಬಂದರ್’ ಹಾಡು ಹಿಟ್ ಆಗಿದೆ. ಈ ಚಿತ್ರವನ್ನು ಸಾಫ್ರಾನ್ ಮ್ಯಾಜಿಕ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SIR ಕರ್ತವ್ಯದ ವೇಳೆ ಮತ್ತೊಂದು ದುರಂತ: ಬಿಎಲ್‌ಒ ಶಿಕ್ಷಕಿ ಹೃದಯಾಘಾತದಿಂದ ಸಾವು! – Kannada News | Bengaluru: BLO Teacher Dies of Cardiac Arrest Amid SIR Duty Pressure

ಬೆಂಗಳೂರು, ಜುಲೈ 24: ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಬಿಎಲ್‌ಒ (BLO) ಕರ್ತವ್ಯದಲ್ಲಿದ್ದ ಮತ್ತೊಬ್ಬರು ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಶಮಂತಾಕುಮಾರಿ (44) ಮೃತಪಟ್ಟವರಾಗಿದ್ದಾರೆ. ಇತ್ತೀಚೆಗಷ್ಟೇ ಇವರನ್ನು SIR ಪ್ರಕ್ರಿಯೆಯ ಬಿಎಲ್‌ಒ ಡ್ಯೂಟಿಗೆ ನಿಯೋಜಿಸಲಾಗಿತ್ತು. ಈ ಹಿಂದೆ ತುಮಕೂರು ಮೂಲದ ಶಿಕ್ಷಕಿ ಭುವನಾ ಪರಿಷ್ಕರಣೆಗೆ ತೆರಳುತ್ತಿದ್ದ ವೇಳೆ ಅಪಘಾತದಿಂದ ಮೃತಪಟ್ಟಿದ್ದರು.

ಮೇಲಾಧಿಕಾರಿಗಳ ಒತ್ತಡವೇ ಕಾರಣವೆಂದು ಕುಟುಂಬಸ್ಥರ ಆರೋಪ

SIR ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸುವಂತೆ ಮೇಲಾಧಿಕಾರಿಗಳು ತೀವ್ರ ಒತ್ತಡ ಹೇರುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನನಗೆ ಈ ಕೆಲಸದಿಂದ ತೀವ್ರ ಒತ್ತಡವಾಗುತ್ತಿದೆ, ಈ ಕೆಲಸದಿಂದ ನನ್ನನ್ನು ಬಿಡುಗಡೆ ಮಾಡಲು ಸಾಧ್ಯವೇ? ಎಂದು ಮೃತ ಶಿಕ್ಷಕಿ ಶಮಂತಾಕುಮಾರಿ ಅವರು ತಮ್ಮ ಕುಟುಂಬದವರ ಬಳಿ ಅಳಲು ತೋಡಿಕೊಂಡಿದ್ದರೆನ್ನಲಾಗಿದೆ. ಕೆಲಸದ ಒತ್ತಡದಿಂದಾಗಿ ಅವರಲ್ಲಿ ರಕ್ತದೊತ್ತಡ (BP) ಮತ್ತು ಸಕ್ಕರೆ ಕಾಯಿಲೆ (Sugar) ಪ್ರಮಾಣ ಹೆಚ್ಚಾಗಿ, ತೀವ್ರ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಹಿಂದೆಯೂ ಸಂಭವಿಸಿತ್ತು ಇಂತಹುದೇ ದುರಂತ

ಇದೇ ರೀತಿಯ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಕರ್ತವ್ಯದ ವೇಳೆಯಲ್ಲಿಯೇ ಮುಂಚೆ ಮತ್ತೊಂದು ದುರಂತ ಸಂಭವಿಸಿತ್ತು. SIR ಕರ್ತವ್ಯಕ್ಕೆ ತೆರಳುವಾಗ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ವಿಎಒ ಭುವನಾ ಚಿಕಿತ್ಸೆ ಫಲಿಸದೇ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದರು. ಅಂದು ಬೆಳಿಗ್ಗೆ ತುಮಕೂರು ತಾಲೂಕಿನ ಗೂಳೂರು ಬಳಿ ಬೈಕ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆಯ ವಿಎಒ ಸೂಪರ್‌ವೈಸರ್ ಆಗಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿತ್ತು.

ಅಂದು ನಡೆದಿದ್ದೇನು?

ತುಮಕೂರಿನ ಹುಲ್ಲೇನಹಳ್ಳಿಯ ಗ್ರಾಮಲೆಕ್ಕಾಧಿಕಾರಿ ಹಾಗೂ ಟಿ. ಬೇಗೂರು ನಿವಾಸಿಯಾಗಿದ್ದ ಭುವನಾ, ಅಂದು ಬೆಳಿಗ್ಗೆ ಎಸ್ಐಆರ್ ಕರ್ತವ್ಯದ ಸೂಚನೆ ಹಿನ್ನೆಲೆಯಲ್ಲಿ ನಿಯುಕ್ತಿಗೊಂಡ ಸ್ಥಳಕ್ಕೆ ತೆರಳುತ್ತಿದ್ದರು. ಹೀಗಾಗಿ ತುಮಕೂರು ಬಸ್ ನಿಲ್ದಾಣದ ಬಳಿ ನಿಲ್ಲಿಸಿದ ತಮ್ಮ ಬೈಕ್‌ನಲ್ಲಿ ಗೂಳೂರಿನ ನಾಡಕಚೇರಿಗೆ ತೆರಳಿದ್ದರು. ಈ ವೇಳೆ ಕುಣಿಗಲ್ ರಸ್ತೆಯ ಗೂಳೂರು ಬಳಿ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿತ್ತು.

ಇದನ್ನೂ ಓದಿ  ಎಸ್‌ಐಆರ್ ಫಾರ್ಮ್‌ಗಳಲ್ಲಿ 2002ರ ಮಾಹಿತಿ ಕಡ್ಡಾಯವಲ್ಲ; ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟನೆ

ಹೆಲ್ಮೆಟ್ ಧರಿಸಿದ್ದರೂ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸದೇ ಭುವನಾ ಕೊನೆಯುಸಿರೆಳೆದಿದ್ದರು. ಬಳಿಕ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನನ್ನ ಆಟೋ ಪ್ರಯಾಣಿಸುವ ಹೆಣ್ಣು ಮಕ್ಕಳು ಸೇಫ್; ಅದ್ಭುತ ಸಾಲಿನಿಂದಲೇ ಧೈರ್ಯ ತುಂಬಿದ ಆಟೋ ಡ್ರೈವರ್ – Kannada News | An auto rickshaw driver instilled courage through a line written on the back of the seat.

ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ. ಆಟೋ ಹಾಗೂ ಬಸ್ಸಿನಲ್ಲಿ ಒಂಟಿಯಾಗಿ ಓಡಾಡುವುದೇ ಕಷ್ಟ. ಹೀಗಿರುವಾಗ ತನ್ನ ಆಟೋ ಹತ್ತುವ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದ್ದಾನೆ. ಆಟೋ ಡ್ರೈವರ್‌ (auto driver) ತನ್ನ ಸೀಟಿನ ಹಿಂಭಾಗದಲ್ಲಿ ನಿಮ್ಮ ಸುರಕ್ಷತೆ ನನಗೆ ಮುಖ್ಯ, ಯಾವುದೇ ಭಯ ಬೇಡ ಆರಾಮಾಗಿ ಕುಳಿತುಕೊಳ್ಳಿ ಬರೆದಿದ್ದಾನೆ. ಈ ಸಾಲುಗಳು ನೆಟ್ಟಿಗರ ಗಮನ ಸೆಳೆದಿದೆ.

ನೂರ್ಜಹನ್ ಬಿ (Noorjahan B) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಆಟೋ ಹಿಂಬದಿ ಬರೆಯಲಾದ ಅರ್ಥ ಪೂರ್ಣ ಸಾಲುಗಳನ್ನು ನೋಡಬಹುದು. ಇಲ್ಲಿ ನಾನೂ ಒಬ್ಬ ತಂದೆ ಮತ್ತು ಸಹೋದರ. ನಿಮ್ಮ ಸುರಕ್ಷತೆ ನನಗೆ ಮುಖ್ಯ. ಯಾವುದೇ ಭಯ ಬೇಡ, ನನ್ನ ಆಟೋದಲ್ಲಿ ನೀವು ಆರಾಮವಾಗಿ ಕುಳಿತುಕೊಳ್ಳಿ ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಗಲಿದ ಪತ್ನಿಯ ಫೋಟೋ ಆಟೋದಲ್ಲಿಟ್ಟು ದಿನನಿತ್ಯ ಪೂಜಿಸುವ ಬೆಂಗಳೂರಿನ ಆಟೋ ಚಾಲಕ

ಈ ವಿಡಿಯೋ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವಾವ್ಹ್ ಎಂತಹ ಅರ್ಥ ಪೂರ್ಣ ವಾಕ್ಯ ಎಂದಿದ್ದಾರೆ. ಇನ್ನೊಬ್ಬರು, ನಿಮಗೆ ನನ್ನದೊಂದು ಸಲ್ಯೂಟ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಒಳ್ಳೆತನ ಎಂದೆಂದಿಗೂ ನಿಮ್ಮನ್ನು ಕಾಪಾಡುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Spiritual Tips: ಲಕ್ಷ್ಮಿಯ ಕೃಪೆ, ಆರ್ಥಿಕ ಸ್ಥಿರತೆಗಾಗಿ ವೀಳ್ಯದೆಲೆಯ ಮೇಲೆ ದೀಪ ಬೆಳಗಿಸಿ; ಶಾಸ್ತ್ರೋಕ್ತ ವಿಧಾನ ಇಲ್ಲಿದೆ – Kannada News | Betel Leaf Lamp Pooja: Spiritual Benefits for Prosperity and Peace

ಭಾರತೀಯ ಆಧ್ಯಾತ್ಮಿಕ ಸಂಪ್ರದಾಯದಲ್ಲಿ, ಪ್ರತಿಯೊಂದು ಪೂಜಾ ವಸ್ತುವಿಗೂ ತನ್ನದೇ ಆದ ವಿಶೇಷ ಮತ್ತು ಪವಿತ್ರವಾದ ಸ್ಥಾನವಿದೆ. ಅವುಗಳಲ್ಲಿ ‘ವೀಳ್ಯದ ಎಲೆ’ (ತಾಂಬೂಲ) ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ವಿವಾಹ, ವ್ರತ, ಹೋಮ-ಹವನಗಳು ಮತ್ತು ದೇವತೆಗಳ ಆರಾಧನೆಯಂತಹ ಪ್ರತಿಯೊಂದು ಶುಭ ಸಮಾರಂಭಗಳಲ್ಲಿಯೂ ವೀಳ್ಯದ ಎಲೆ ಕಡ್ಡಾಯ. ಅದೇ ರೀತಿ, ವೀಳ್ಯದ ಎಲೆಯ ಮೇಲೆ ದೀಪವನ್ನು ಇಟ್ಟು ಬೆಳಗಿಸುವ ಪದ್ಧತಿಯು ಅತ್ಯಂತ ಪ್ರಾಚೀನ ಹಾಗೂ ಮಂಗಳಕರವಾದ ಆಚರಣೆಯಾಗಿದೆ. ಈ ಪೂಜೆಯು ಮನೆಯಲ್ಲಿ ಶುಭ ಶಕ್ತಿಯನ್ನು ಹೆಚ್ಚಿಸಿ, ಸಂತೋಷ ಮತ್ತು ಶಾಂತಿಯನ್ನು ತರುತ್ತದೆ ಎಂಬುದು ಭಕ್ತರ ದೃಢ ನಂಬಿಕೆ.

ವೀಳ್ಯದೆಲೆ ದೀಪ ಹಚ್ಚುವ ಸರಿಯಾದ ವಿಧಾನ:

ಈ ವಿಶೇಷ ಪೂಜೆಗೆ ಯಾವಾಗಲೂ ತಾಜಾ, ಸ್ವಚ್ಛವಾದ ಹಾಗೂ ಎಲ್ಲೂ ಹರಿಯದ (ಅಖಂಡ) ವೀಳ್ಯದ ಎಲೆಯನ್ನು ಆರಿಸಿಕೊಳ್ಳಬೇಕು. ಎಲೆಯ ಮೇಲೆ ಸಣ್ಣ ಮಣ್ಣಿನ ದೀಪವನ್ನು ಇಟ್ಟು, ಶುದ್ಧ ಹಸುವಿನ ತುಪ್ಪ ಅಥವಾ ಎಳ್ಳೆಣ್ಣೆಯನ್ನು ಬಳಸಿ ದೀಪವನ್ನು ಬೆಳಗಿಸಲಾಗುತ್ತದೆ. ನಂತರ ಆ ದೀಪವನ್ನು ಪೂಜಾ ಮಂದಿರದಲ್ಲಿಟ್ಟು, ಇಷ್ಟದೇವತೆಯನ್ನು ಸಂಪೂರ್ಣ ಭಕ್ತಿಶ್ರದ್ಧೆಗಳಿಂದ ಪ್ರಾರ್ಥಿಸಬೇಕು. ವಿಶೇಷವಾಗಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ಮತ್ತು ಪೌರ್ಣಮಿಯಂತಹ ಪವಿತ್ರ ದಿನಗಳಲ್ಲಿ ಈ ಪೂಜೆಯನ್ನು ಮಾಡುವುದು ಅತ್ಯಂತ ಫಲದಾಯಕ ಎಂದು ಹೇಳಲಾಗುತ್ತದೆ.

ಸಕಾರಾತ್ಮಕ ಶಕ್ತಿ ಮತ್ತು ಮಾನಸಿಕ ಶಾಂತಿ:

ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ವೀಳ್ಯದ ಎಲೆಯ ಮೇಲೆ ದೀಪ ಹಚ್ಚುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ, ಧನಾತ್ಮಕ ಅಥವಾ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಮನೆಯವರಲ್ಲಿರುವ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ ಮಾನಸಿಕ ಪ್ರಶಾಂತತೆ ಲಭಿಸುತ್ತದೆ. ಅಷ್ಟೇ ಅಲ್ಲದೆ, ಕುಟುಂಬದ ಸದಸ್ಯರ ನಡುವೆ ಪ್ರೀತಿ, ವಾತ್ಸಲ್ಯ ಹಾಗೂ ಐಕ್ಯತೆ ಹೆಚ್ಚಿ, ಗೃಹಛಿದ್ರಗಳು ನಿವಾರಣೆಯಾಗುತ್ತವೆ. ಜೀವನದ ದಾರಿಯಲ್ಲಿ ಬರುವ ಅಡೆತಡೆಗಳು ತೊಲಗಿ, ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಧನಲಕ್ಷ್ಮಿ ಕೃಪೆ ಮತ್ತು ಆರ್ಥಿಕ ಸಮೃದ್ಧಿ:

ಹಿಂದೂ ಸಂಪ್ರದಾಯ ಮತ್ತು ಶಾಸ್ತ್ರಗಳ ಪ್ರಕಾರ, ವೀಳ್ಯದ ಎಲೆಯು ಶ್ರೀ ಮಹಾಲಕ್ಷ್ಮಿಯ ವಾಸಸ್ಥಾನವಾಗಿದೆ. ಆದ್ದರಿಂದ ವೀಳ್ಯದೆಲೆಯ ಮೇಲೆ ದೀಪವನ್ನು ಬೆಳಗಿಸಿ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಸ್ಥಿರತೆ, ಸಂಪತ್ತು ಮತ್ತು ಐಶ್ವರ್ಯ ಲಭಿಸುತ್ತದೆ. ವ್ಯಾಪಾರ-ವಹಿವಾಟುಗಳಲ್ಲಿ ಅಭಿವೃದ್ಧಿ, ಉದ್ಯೋಗದಲ್ಲಿ ಬಡ್ತಿ, ಆದಾಯ ವೃದ್ಧಿ ಮತ್ತು ಕುಟುಂಬದ ಸಕಲ ಅಭ್ಯುದಯಕ್ಕಾಗಿ ಅನೇಕ ಭಕ್ತರು ಈ ಪೂಜೆಯನ್ನು ಶ್ರದ್ಧೆಯಿಂದ ನೆರವೇರಿಸುತ್ತಾರೆ.

ಪೂಜೆಯ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು:

  • ಶುದ್ಧತೆಗೆ ಆದ್ಯತೆ: ಪೂಜೆಗೆ ಕೇವಲ ತಾಜಾ, ಕಲೆಯಿಲ್ಲದ ಮತ್ತು ತೊಟ್ಟು ಇರುವ ಪವಿತ್ರ ವೀಳ್ಯದೆಲೆಗಳನ್ನು ಮಾತ್ರ ಬಳಸಬೇಕು.
  • ಪುನರ್ಬಳಕೆ ನಿಷೇಧ: ಒಮ್ಮೆ ಪೂಜೆಗೆ ಬಳಸಿದ ವೀಳ್ಯದ ಎಲೆಯನ್ನು ಮತ್ತೆ ಬಳಸಬಾರದು. ಪೂಜೆಯ ನಂತರ ಅದನ್ನು ಕಾಲ್ತುಳಿತ ಸಿಗದಂತೆ ಗಿಡಗಳ ಬುಡಕ್ಕೆ ಹಾಕಿ ನೈಸರ್ಗಿಕವಾಗಿ ವಿಲೇವಾರಿ ಮಾಡಬೇಕು.
  • ಸುರಕ್ಷತೆ: ದೀಪವನ್ನು ಹಚ್ಚುವಾಗ ಹಾಗೂ ಎಲೆಯ ಮೇಲೆ ಇಡುವಾಗ ಬೆಂಕಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು.
  • ಮನಸ್ಸಿನ ಏಕಾಗ್ರತೆ: ಕೇವಲ ಬಾಹ್ಯ ಪೂಜೆಯಷ್ಟೇ ಅಲ್ಲದೆ, ಪ್ರಾರ್ಥನೆ ಮಾಡುವಾಗ ಮನಸ್ಸು ಶಾಂತವಾಗಿದ್ದು, ಭಕ್ತಿಭಾವದಿಂದ ಕೂಡಿರಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಕಲಿ ಪಿಎಚ್‌ಡಿ ಪ್ರಮಾಣಪತ್ರ ಅಕ್ರಮ: 249 ಅತಿಥಿ ಉಪನ್ಯಾಸಕರ ವಿರುದ್ಧ ಕೇಸ್​ಗೆ ಸೂಚನೆ – Kannada News | Karnataka Fake PhD Certificate Scam: Criminal Cases Ordered Against 249 Guest Lecturers in Government Colleges

ಕಲಬುರಗಿ, ಜುಲೈ 24: ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 249 ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌ಡಿ (PhD) ಪ್ರಮಾಣಪತ್ರಗಳನ್ನು ಸಲ್ಲಿಸಿ ನೇಮಕಾತಿ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿಗೆ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಆಯುಕ್ತರು ಜುಲೈ 21ರಂದು ಈ ಕುರಿತು ಆದೇಶ ಹೊರಡಿಸಿದ್ದು, ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ತಕ್ಷಣ ಸೇವೆಯಿಂದ ಬಿಡುಗಡೆಗೊಳಿಸಿ, ಮುಂದಿನ ಯಾವುದೇ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಬ್ಲ್ಯಾಕ್​ ಲಿಸ್ಟ್​ಗೆ ಸೇರಿಸಲು ನಿರ್ದೇಶನ ನೀಡಿದ್ದಾರೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದಾಖಲೆ ಪರಿಶೀಲನೆ ವೇಳೆ ಬಯಲಾದ ಅಕ್ರಮ

ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆ ದಾಖಲೆಗಳನ್ನು ಪರಿಶೀಲಿಸಿ ನೇಮಕಾತಿ ಆದೇಶ ನೀಡಲಾಗುತ್ತದೆ. ಬಳಿಕ ಪ್ರಮಾಣಪತ್ರಗಳನ್ನು ದೃಢೀಕರಣಕ್ಕಾಗಿ ಸಂಬಂಧಿತ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗುತ್ತದೆ. ಈ ವೇಳೆ 249 ಅಭ್ಯರ್ಥಿಗಳ ಪಿಎಚ್‌ಡಿ ಪ್ರಮಾಣಪತ್ರಗಳು ಅಸಲಿಯಲ್ಲ ಎಂಬುದನ್ನು ವಿಶ್ವವಿದ್ಯಾಲಯಗಳು ದೃಢಪಡಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಿಯಾಂಕ್ ಖರ್ಗೆ ತವರಲ್ಲೇ ಹೆಚ್ಚು ಪ್ರಕರಣ

ಒಟ್ಟು 249 ನಕಲಿ ಪಿಎಚ್‌ಡಿ ಪ್ರಮಾಣಪತ್ರಗಳ ಪೈಕಿ 148 ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪತ್ತೆಯಾಗಿವೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ 33 ಪ್ರಕರಣಗಳು ವರದಿಯಾಗಿವೆ.

ಜಿಲ್ಲಾವಾರು ವಿವರ

  • ಕಲಬುರಗಿ – 33
  • ಯಾದಗಿರಿ – 31
  • ಬೀದರ್ – 28
  • ರಾಯಚೂರು – 24
  • ಕೊಪ್ಪಳ – 13
  • ವಿಜಯನಗರ – 9
  • ಬಳ್ಳಾರಿ – 2

ವರದಿ ಪ್ರಕಾರ, ಬೀದರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 19, ಕಲಬುರಗಿಯ ಸೇಡಂ ರಸ್ತೆಯ ಸ್ವಾಯತ್ತ ಸರ್ಕಾರಿ ಕಾಲೇಜಿನಲ್ಲಿ 17 ಹಾಗೂ ಕಲಬುರಗಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 15 ಮಂದಿ ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿರುವುದು ಪತ್ತೆಯಾಗಿದೆ.

8 ಅಭ್ಯರ್ಥಿಗಳ ದಾಖಲೆ ಮರು ಪರಿಶೀಲನೆ

ಇದೇ ವೇಳೆ, ಕಲಬುರಗಿ, ಕೊಪ್ಪಳ, ವಿಜಯನಗರ ಹಾಗೂ ಬೀದರ್ ಜಿಲ್ಲೆಯ ಕೆಲವು ಕಾಲೇಜುಗಳ ಪ್ರಾಂಶುಪಾಲರು 8 ಅಭ್ಯರ್ಥಿಗಳ ಪ್ರಮಾಣಪತ್ರಗಳು ಅಸಲಿಯಾಗಿವೆ ಎಂದು ಟಿಪ್ಪಣಿ ಸೇರಿಸಿರುವ ಹಿನ್ನೆಲೆಯಲ್ಲಿ, ಆ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಇಲಾಖೆ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏನಿದು ‘ಸೆಕ್ಷನ್ 301’? ಡೊನಾಲ್ಡ್ ಟ್ರಂಪ್ ಇದನ್ನು ಅಸ್ತ್ರವಾಗಿಸಿಕೊಂಡಿದ್ದೇಕೆ? ಒಂದೇ ತಕ್ಕಡಿಯಲ್ಲಿ ಭಾರತ, ಪಾಕಿಸ್ತಾನ – Kannada News | Section 301: Trump’s Trade War and India’s Tariff Challenge. Why India with Pakistan

ವಾಷಿಂಗ್ಟನ್, ಜುಲೈ 24: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ತಮ್ಮ ಅಮೆರಿಕ ಫಸ್ಟ್​ ನೀತಿಯ ಭಾಗವಾಗಿ ಮತ್ತೊಮ್ಮೆ ಸುಂಕ ಯುದ್ಧವನ್ನು ಆರಂಭಿಸಿದ್ದಾರೆ. ಅಮೆರಿಕದ ಹಳೆಯ ವ್ಯಾಪಾರ ಕಾನೂನು ಸೆಕ್ಷನ್ 301 ಅನ್ನು ಬಳಸಿಕೊಂಡು, ಭಾರತ ಸೇರಿದಂತೆ ವಿಶ್ವದ 60ಕ್ಕೂ ಹೆಚ್ಚು ದೇಶಗಳ ರಫ್ತು ಉತ್ಪನ್ನಗಳ ಮೇಲೆ ಶೇಕಡಾ 10ರಿಂದ 12.5ರಷ್ಟು ಹೆಚ್ಚುವರಿ ಆಮದು ಸುಂಕವನ್ನು ವಿಧಿಸಿದ್ದಾರೆ. ಆಶ್ಚರ್ಯಕರವಾಗಿ, ಈ ಸುಂಕ ಪಟ್ಟಿಯಲ್ಲಿ ಭಾರತವನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಸಾಲಿನಲ್ಲಿ (ಶೇ. 10 ರ ಸುಂಕ) ನಿಲ್ಲಿಸಲಾಗಿದ್ದರೆ, ಚೀನಾ, ಬ್ರಿಟನ್ ಮತ್ತು ಜಪಾನ್ ದೇಶಗಳಿಗೆ ಶೇ. 12.5 ರಷ್ಟು ಭಾರಿ ಸುಂಕ ವಿಧಿಸಲಾಗಿದೆ.

ಏನಿದು ‘ಸೆಕ್ಷನ್ 301’?

‘ಸೆಕ್ಷನ್ 301’ ಎನ್ನುವುದು ಅಮೆರಿಕದ 1974 ರ ವ್ಯಾಪಾರ ಕಾಯಿದೆಯ ಒಂದು ನಿಬಂಧನೆಯಾಗಿದೆ. ಯಾವುದೇ ದೇಶವು ಅಮೆರಿಕದ ಕಂಪನಿಗಳ ವಿರುದ್ಧ ಅನ್ಯಾಯದ ಅಥವಾ ತಾರತಮ್ಯದ ವ್ಯಾಪಾರ ನೀತಿಗಳನ್ನು ಅನುಸರಿಸಿದರೆ, ಆ ದೇಶದ ವಿರುದ್ಧ ತನಿಖೆ ನಡೆಸಿ, ಅವರ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ , ದಂಡ ಅಥವಾ ಆಮದು ನಿಷೇಧ ವಿಧಿಸಲು ಈ ಕಾಯಿದೆ ಅಮೆರಿಕ ಅಧ್ಯಕ್ಷರಿಗೆ ಪೂರ್ಣ ಅಧಿಕಾರ ನೀಡುತ್ತದೆ.

ಟ್ರಂಪ್ ಇದನ್ನು ಹೊಸ ‘ಆರ್ಥಿಕ ಅಸ್ತ್ರ’ ಮಾಡಿಕೊಂಡಿದ್ದೇಕೆ?

ಟ್ರಂಪ್ ಈ ಬಾರಿ ‘ಸೆಕ್ಷನ್ 301’ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಬಲವಂತದ ಕಾರ್ಮಿಕ ಪದ್ಧತಿ ಹಾಗೂ ಕಾರ್ಮಿಕರ ಶೋಷಣೆಯ ಆಧಾರದ ಮೇಲೆ ದೇಶಗಳಿಗೆ ದಂಡ ವಿಧಿಸುತ್ತಿದ್ದಾರೆ. ಕಾರ್ಮಿಕರಿಗೆ ಕಡಿಮೆ ಕೂಲಿ ನೀಡಿ ಅಥವಾ ಬಲವಂತವಾಗಿ ಕೆಲಸ ಮಾಡಿಸಿಕೊಂಡು ತಯಾರಿಸುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಲಭ್ಯವಾಗುತ್ತವೆ. ಇದು ಅಮೆರಿಕದ ಸ್ಥಳೀಯ ಉದ್ಯಮಗಳಿಗೆ ಮಾರಕ ಎಂಬುದು ಟ್ರಂಪ್ ಆಡಳಿತದ ವಾದ.

ಭಾರತವನ್ನು ಪಾಕಿಸ್ತಾನ, ಬಾಂಗ್ಲಾದೇಶದ ವರ್ಗಕ್ಕೆ ಸೇರಿಸಿದ್ದೇಕೆ?

ಶ್ವೇತಭವನದ ಸ್ಪಷ್ಟನೆಯ ಪ್ರಕಾರ, ದೇಶಗಳನ್ನು ಎರಡು ಪ್ರಮುಖ ವರ್ಗಗಳಾಗಿ ವಿಂಗಡಿಸಲಾಗಿದೆ.

ಮತ್ತಷ್ಟು ಓದಿ: ನಮ್ಮ ಒಂದೇ ಒಂದು ಸೇತುವೆ ಮುಟ್ಟಿದರೂ ಸುಮ್ಮನಿರಲ್ಲ, ಟ್ರಂಪ್ ಬೆದರಿಕೆಗೆ ಇರಾನ್ ಭಾರಿ ತಿರುಗೇಟು, ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ

ಶೇಕಡಾ 10 ರ ಸುಂಕ ವರ್ಗ (ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ)

ಭಾರತವು ಬಲವಂತದ ಕಾರ್ಮಿಕ ಪದ್ಧತಿಯನ್ನು ತಡೆಯಲು ಕಾನೂನುಗಳನ್ನು ರೂಪಿಸಿದೆ ಮತ್ತು ಬದ್ಧತೆ ಪ್ರದರ್ಶಿಸಿದೆ. ಆದಾಗ್ಯೂ, ಈ ಕಾನೂನುಗಳ ಪರಿಣಾಮಕಾರಿ ಜಾರಿ ಇನ್ನೂ ಸಂಪೂರ್ಣವಾಗಿ ಸಾಧ್ಯವಾಗಿಲ್ಲ. ಆದ್ದರಿಂದ ಭಾರತವನ್ನು ಕನಿಷ್ಠ ಸುಂಕದ ಅಂದರೆ ಶೇ. 10 ರ ವರ್ಗದಲ್ಲುರಿಸಲಾಗಿದೆ.

ಶೇಕಡಾ 12.5 ರ ಭಾರಿ ಸುಂಕ ವರ್ಗ (ಚೀನಾ, ಬ್ರಿಟನ್, ಜಪಾನ್):

ಈ ದೇಶಗಳು ಬಲವಂತದ ಕಾರ್ಮಿಕ ಉತ್ಪನ್ನಗಳನ್ನು ತಡೆಯಲು ಸೂಕ್ತ ಕಾನೂನು ವ್ಯವಸ್ಥೆಯನ್ನೇ ಹೊಂದಿಲ್ಲ ಅಥವಾ ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿವೆ ಎಂದು ಆರೋಪಿಸಿ ಹೆಚ್ಚಿನ ದಂಡ ವಿಧಿಸಲಾಗಿದೆ.

ಭಾರತದ ಮೇಲಾಗುವ ಪರಿಣಾಮಗಳು ಹಾಗೂ ಮುಂದಿನ ಅಪಾಯ

ಶೇ. 10 ರಷ್ಟು ಹೆಚ್ಚುವರಿ ಸುಂಕದಿಂದಾಗಿ ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ಜವಳಿ , ಎಂಜಿನಿಯರಿಂಗ್ ಬಿಡಿಭಾಗಗಳು, ರಾಸಾಯನಿಕಗಳು ಹಾಗೂ ಕೃಷಿ ಉತ್ಪನ್ನಗಳ ಬೆಲೆ ಏರಿಕೆಯಾಗಿ, ರಫ್ತುದಾರರಿಗೆ ನಷ್ಟವಾಗುವ ಭೀತಿಯಿದೆ.

ಅಮೆರಿಕದ ಮಾಧ್ಯಮಗಳ ಪ್ರಕಾರ, ಟ್ರಂಪ್ ಆಡಳಿತವು ಶೀಘ್ರದಲ್ಲೇ ಮತ್ತೊಂದು ಸುತ್ತಿನ ಸುಂಕ ವಿಧಿಸಲಿದೆ. ತಮ್ಮ ದೇಶೀಯ ಕಂಪನಿಗಳಿಗೆ ಸರ್ಕಾರದ ಮೂಲಕ ಭಾರಿ ‘ಸಬ್ಸಿಡಿ’ ನೀಡಿ, ಅಗ್ಗದ ದರದಲ್ಲಿ ವಿದೇಶಗಳಿಗೆ ವಸ್ತುಗಳನ್ನು ರಫ್ತು ಮಾಡುವ ದೇಶಗಳನ್ನು ಮುಂದಿನ ಹಂತದಲ್ಲಿ ಗುರಿಯಾಗಿಸಿಕೊಳ್ಳಲಾಗುವುದು. ಭಾರತ ಸರ್ಕಾರವು ಶೀಘ್ರದಲ್ಲೇ ಅಮೆರಿಕದ ವ್ಯಾಪಾರ ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆ ನಡೆಸಿ ಈ ಸುಂಕ ವಿನಾಯಿತಿಗೆ ಮನವಿ ಮಾಡುವ ನಿರೀಕ್ಷೆಯಿದೆ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ ‘ಸೆಕ್ಷನ್ 301’ ಎಂದರೇನು ಮತ್ತು ಇದು ಅಧ್ಯಕ್ಷರಿಗೆ ಯಾವ ಅಧಿಕಾರವನ್ನು ನೀಡುತ್ತದೆ?

ಉತ್ತರ: ‘ಸೆಕ್ಷನ್ 301’ ಎನ್ನುವುದು ಅಮೆರಿಕದ 1974 ರ ವ್ಯಾಪಾರ ಕಾಯಿದೆಯ ಒಂದು ಪ್ರಮುಖ ನಿಬಂಧನೆಯಾಗಿದೆ. ಅಮೆರಿಕದ ಕಂಪನಿಗಳು ಅಥವಾ ಕೈಗಾರಿಕೆಗಳ ವಿರುದ್ಧ ಯಾವುದೇ ದೇಶವು ಅನ್ಯಾಯದ, ತಾರತಮ್ಯದ ಅಥವಾ ಅನಗತ್ಯ ವ್ಯಾಪಾರ ನೀತಿಗಳನ್ನು ಅನುಸರಿಸಿದರೆ, ಆ ದೇಶದ ವಿರುದ್ಧ ತನಿಖೆ ನಡೆಸಿ, ಅವರ ರಫ್ತು ಉತ್ಪನ್ನಗಳ ಮೇಲೆ ಹೆಚ್ಚುವರಿ ಆಮದು ಸುಂಕ, ದಂಡ ಅಥವಾ ಆಮದು ನಿಷೇಧ ವಿಧಿಸಲು ಇದು ಅಮೆರಿಕ ಅಧ್ಯಕ್ಷರಿಗೆ ಪೂರ್ಣ ಅಧಿಕಾರ ನೀಡುತ್ತದೆ.

ಪ್ರಶ್ನೆ: ಡೊನಾಲ್ಡ್ ಟ್ರಂಪ್ ಅವರು ‘ಸೆಕ್ಷನ್ 301’ ಅನ್ನು ಹೊಸ ಆರ್ಥಿಕ ಅಸ್ತ್ರವಾಗಿ ಹೇಗೆ ಬಳಸುತ್ತಿದ್ದಾರೆ?

ಉತ್ತರ: ಟ್ರಂಪ್ ತಮ್ಮ ‘ಅಮೇರಿಕ ಫಸ್ಟ್’ ನೀತಿಯಡಿಯಲ್ಲಿ ಈ ಕಾಯಿದೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಬಲವಂತದ ಕಾರ್ಮಿಕ ಪದ್ಧತಿ ಹಾಗೂ ಕಾರ್ಮಿಕರ ಶೋಷಣೆಯನ್ನು ಮುಖ್ಯ ಕಾರಣವಾಗಿಸಿಕೊಂಡಿದ್ದಾರೆ. ಕಾರ್ಮಿಕರಿಗೆ ಅತ್ಯಂತ ಕಡಿಮೆ ಕೂಲಿ ನೀಡಿ ಅಥವಾ ಬಲವಂತವಾಗಿ ಕೆಲಸ ಮಾಡಿಸಿಕೊಂಡು ತಯಾರಿಸುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಸಿಗುವುದರಿಂದ, ಅವು ಅಮೆರಿಕದ ಸ್ಥಳೀಯ ಉದ್ಯಮಗಳಿಗೆ ಧಕ್ಕೆ ತರುತ್ತವೆ ಎಂಬ ಕಾರಣ ನೀಡಿ 60 ಕ್ಕೂ ಹೆಚ್ಚು ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲು ಇದನ್ನು ಅಸ್ತ್ರವಾಗಿಸಿಕೊಂಡಿದ್ದಾರೆ.

ಪ್ರಶ್ನೆ: ಭಾರತವನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಸಾಲಿನಲ್ಲಿ (ಶೇ. 10 ಸುಂಕ) ಸೇರಿಸಲು ಕಾರಣವೇನು?

ಉತ್ತರ: ಶ್ವೇತಭವನದ ಪ್ರಕಾರ, ಭಾರತವು ಬಲವಂತದ ಕಾರ್ಮಿಕ ಪದ್ಧತಿಯನ್ನು ತಡೆಯಲು ಸೂಕ್ತ ಕಾನೂನುಗಳನ್ನು ರೂಪಿಸಿದೆ ಮತ್ತು ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಆದರೆ, ಈ ಕಾನೂನುಗಳ ಪರಿಣಾಮಕಾರಿ ಜಾರಿ ಇನ್ನೂ ಸಂಪೂರ್ಣವಾಗಿ ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ ಭಾರತವನ್ನು ಕನಿಷ್ಠ ಅಂದರೆ ಶೇ. 10 ರ ಸುಂಕ ವರ್ಗದಲ್ಲಿ (ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳ ಜೊತೆ) ಇರಿಸಲಾಗಿದೆ. ಅದೇ ಸಮಯಕ್ಕೆ, ಸೂಕ್ತ ಕಾನೂನು ವ್ಯವಸ್ಥೆಯೇ ಇಲ್ಲದ ಚೀನಾ, ಬ್ರಿಟನ್ ಮತ್ತು ಜಪಾನ್ ದೇಶಗಳಿಗೆ ಶೇ. 12.5 ರಷ್ಟು ಹೆಚ್ಚಿನ ಸುಂಕ ವಿಧಿಸಲಾಗಿದೆ.

ಪ್ರಶ್ನೆ: ಈ ಹೆಚ್ಚುವರಿ ಆಮದು ಸುಂಕದಿಂದ ಭಾರತದ ಮೇಲೆ ಉಂಟಾಗುವ ಪರಿಣಾಮಗಳೇನು?

ಉತ್ತರ: ಶೇ. 10 ರಷ್ಟು ಹೆಚ್ಚುವರಿ ಆಮದು ಸುಂಕದಿಂದಾಗಿ ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ಜವಳಿ, ಎಂಜಿನಿಯರಿಂಗ್ ಬಿಡಿಭಾಗಗಳು, ರಾಸಾಯನಿಕಗಳು ಹಾಗೂ ಕೃಷಿ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ. ಇದರಿಂದ ಭಾರತೀಯ ರಫ್ತುದಾರರ ಲಾಭ ಕಡಿಮೆಯಾಗಿ ವ್ಯಾಪಾರದಲ್ಲಿ ನಷ್ಟವಾಗುವ ಭೀತಿಯಿದೆ. ಇದರ ಜೊತೆಗೆ, ಸರ್ಕಾರದಿಂದ ಭಾರಿ ‘ಸಬ್ಸಿಡಿ’ ಪಡೆಯುವ ಉದ್ಯಮಗಳ ಮೇಲೆಯೂ ಮುಂದಿನ ದಿನಗಳಲ್ಲಿ ಮತ್ತೊಂದು ಸುತ್ತಿನ ಸುಂಕ ಬೀಳುವ ಆತಂಕವಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾರಿನಲ್ಲಿ ಹೋಗುತ್ತಿದ್ದಾಗ ಎದುರಾಯ್ತು ಹುಲಿ: ಗುಂಡ್ಲುಪೇಟೆಯಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಚಾಮರಾಜನಗರ, ಜು.24: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಂಗನಾಥಪುರ ಗ್ರಾಮದ ಹೊರವಲಯದಲ್ಲಿ ಕಳೆದೆರಡು ದಿನಗಳಿಂದ ಹುಲಿಯೊಂದು ಬಿಂದಾಸ್ ಆಗಿ ಸಂಚರಿಸುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ರೈತರಲ್ಲಿ ತೀವ್ರ ಭೀತಿ ವಾತಾವರಣ ನಿರ್ಮಾಣವಾಗಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಬಫರ್ ವಲಯದ (Buffer Zone) ವ್ಯಾಪ್ತಿಗೆ ಬರುವ ರಂಗನಾಥಪುರ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಈ ಹುಲಿರಾಯ ಪ್ರತ್ಯಕ್ಷನಾಗಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರೈತರು ಭಯಪಡುವಂತಾಗಿದೆ. ಇಂದು ಬೆಳಿಗ್ಗೆ ರೈತರು ಕಾರಿನಲ್ಲಿ ತಮ್ಮ ಜಮೀನಿನ ಕಡೆಗೆ ತೆರಳುತ್ತಿದ್ದಾಗ, ಮಾರ್ಗಮಧ್ಯದಲ್ಲೇ ಹುಲಿಯು ಜಮೀನಿನ ಹತ್ತಿರ ಹಾಯಾಗಿ ಓಡಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಜಾಗರೂಕರಾದ ರೈತರು, ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಹುಲಿಯ ಬಿಂದಾಸ್ ಓಡಾಟದ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಈ ವೀಡಿಯೊ ಈಗ ಸ್ಥಳೀಯವಾಗಿ ವೈರಲ್ ಆಗುತ್ತಿದೆ. ಗ್ರಾಮದ ತೀರಾ ಹತ್ತಿರದಲ್ಲೇ ಹುಲಿ ಪ್ರತ್ಯಕ್ಷವಾಗುತ್ತಿರುವುದರಿಂದ ಜಾನುವಾರುಗಳನ್ನು ಮೇಯಿಸಲು ಹಾಗೂ ಜಮೀನುಗಳಲ್ಲಿ ಕೆಲಸ ಮಾಡಲು ಹೋಗಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯಾಚರಣೆ ನಡೆಸಿ ಹುಲಿಯನ್ನು ಕೂಡಲೇ ಸೆರೆಹಿಡಿದು ದಟ್ಟ ಅರಣ್ಯಕ್ಕೆ ಅಟ್ಟಬೇಕು ಎಂದು ರಂಗನಾಥಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನ, ಪೂಜೆಗೆ ನಿರ್ಬಂಧ: ಮೂರ್ತಿ ಸಂರಕ್ಷಣೆಗೆ ದತ್ತಿ ಇಲಾಖೆ ಕ್ರಮ – Kannada News | Touch Darshan Restricted at Gokarna Temple Mahaganapathi as Idol Shows Signs of Wear

ಕಾರವಾರ, ಜುಲೈ 24: ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇಗುಲದ ಮಹಾಗಣಪತಿ ಗುಡಿಯಲ್ಲಿ ಇನ್ನುಮುಂದೆ ಭಕ್ತರು ಮೂರ್ತಿಯನ್ನು ಸ್ಪರ್ಶಿಸಿ ದರ್ಶನ ಪಡೆಯುವಂತಿಲ್ಲ. ಅಲ್ಲದೆ, ನೇರವಾಗಿ ಪೂಜೆ, ಪಂಚಾಮೃತ ಅಭಿಷೇಕ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಗಣಪತಿ ಮೂರ್ತಿಯಲ್ಲಿ ಸವಕಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಸುಧಾ ತಳವಾರ ತಿಳಿಸಿದ್ದಾರೆ.

ಸಾವಿರಾರು ಭಕ್ತರು ಪ್ರತಿದಿನ ಸ್ಪರ್ಶ ದರ್ಶನ ಹಾಗೂ ಅಭಿಷೇಕ ನಡೆಸುತ್ತಿದ್ದ ಪರಿಣಾಮ ಮೂರ್ತಿಗೆ ಸವಕಳಿ ಉಂಟಾಗಿದ್ದು, ಇನ್ನುಮುಂದೆ ಅರ್ಚಕರು ಮಾತ್ರ ಪಾಳಿ ಪ್ರಕಾರ ನಿತ್ಯ ಪೂಜೆ ಹಾಗೂ ನೈವೇದ್ಯ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಭಕ್ತರಿಗೆ ದೂರದಿಂದಲೇ ದರ್ಶನ ಪಡೆಯಲು ಅವಕಾಶ ಮುಂದುವರಿಯಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಪುರಾತತ್ವ ಇಲಾಖೆಯ ಅನುಮತಿ ಪಡೆದು ಮುಂದಿನ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಮೈಸೂರು ಆಗಮ ಪಂಡಿತರ ಅಭಿಪ್ರಾಯ ಪಡೆಯಲಾಗಿದ್ದು, ಧಾರ್ಮಿಕವಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, 2015ರಲ್ಲೇ ಸ್ಪರ್ಶ ಪೂಜೆಯನ್ನು ನಿಷೇಧಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪತ್ರ ನೀಡಿದ್ದರು ಎಂಬುದನ್ನೂ ಸುಧಾ ತಳವಾರ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಎರಡನೇ ಆಷಾಢ ಶುಕ್ರವಾರ ಚಾಮುಂಡೇಶ್ವರಿ ತಾಯಿಯ ಅಲಂಕಾರ ಹೇಗಿದೆ ನೋಡಿ – Kannada News | Festive Fervour at Mysurus Chamundeshwari Temple on Second Ashada Friday

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದಂದು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಜೃಂಭಣೆಯ ಪೂಜಾ ಕೈಂಕರ್ಯಗಳು ನೆರವೇರುತ್ತಿದೆ. ದೇವಾಲಯವು ಫಲ-ಪುಷ್ಪಗಳಿಂದ ಕಂಗೊಳಿಸುತ್ತಿದ್ದು, ವಿಶೇಷವಾಗಿ ತೋತಾಪುರಿ ಮಾವು, ಡ್ರ್ಯಾಗನ್ ಫ್ರೂಟ್‌ಗಳು ಹಾಗೂ ವೈವಿಧ್ಯಮಯ ಹೂವುಗಳಿಂದ ಅಲಂಕರಿಸಲಾಗಿದೆ.

ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಪ್ರತಿದಿನ ಸಾವಿರಾರು ಭಕ್ತರು ತಾಯಿಯ ದರ್ಶನಕ್ಕೆ ಆಗಮಿಸುತ್ತಿದ್ದು, ಎರಡನೇ ಶುಕ್ರವಾರದ ಇಂದು ಸರತಿ ಸಾಲಿನಲ್ಲಿ ನಿಂತು ಭಕ್ತರು ಭಕ್ತಿಯಿಂದ ಪ್ರಾರ್ಥಿಸಿರುವುದನ್ನು ಕಾಣಬಹುದು. ಈ ದಿನ ದೇವಾಲಯದಲ್ಲಿ ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಉತ್ಸವ ಮೂರ್ತಿಯು ಭಕ್ತರ ಗಮನ ಸೆಳೆಯಿತ್ತಿದೆ. ಗುಲಾಬಿ ಬಣ್ಣದ ರೇಷ್ಮೆ ಸೀರೆಯುಟ್ಟು, ಸಕಲ ಆಭರಣಗಳನ್ನು ಧರಿಸಿದ್ದ ತಾಯಿಯ ರೂಪ ಕಣ್ತುಂಬಿಸಿಕೊಳ್ಳುವುದೇ ಕಣ್ಣಿಗೊಂದು ಹಬ್ಬ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

Source link

Exit mobile version