Tirupati Darshan Alert: ತಿರುಮಲ ಶ್ರೀವಾರಿ ಭಕ್ತರಿಗೆ ಪ್ರಮುಖ ಸೂಚನೆ; SSD ದರ್ಶನ ಟೋಕನ್ ವಿತರಣೆಯಲ್ಲಿ ವ್ಯತ್ಯಯ! – Kannada News | Tirupati Darshan Alert: TTD Halts SSD Tokens Amidst Massive Devotee Rush

ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿImage Credit source: gemini ai

ನೀವೇನಾದರೂ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳಲು ಯೋಜಿಸುತ್ತಿದ್ದರೆ, ಈ ಮಾಹಿತಿ ನಿಮಗಾಗಿ. ತಿರುಮಲದಲ್ಲಿ ಅತಿಯಾದ ಭಕ್ತರ ದಟ್ಟಣೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (TTD) ಸರ್ವ ದರ್ಶನ ಟೋಕನ್ (SSD) ವಿತರಣೆಯಲ್ಲಿ ಪ್ರಮುಖ ಬದಲಾವಣೆ ಮಾಡಿದೆ.

ಪ್ರಸ್ತುತ ದರ್ಶನ ವ್ಯವಸ್ಥೆಯ ಪ್ರಮುಖ ಮುಖ್ಯಾಂಶಗಳು:

ಹೆಚ್ಚುತ್ತಿರುವ ಜನಸಂದಣಿಯನ್ನು ನಿಯಂತ್ರಿಸಲು TTD ಬುಧವಾರ ನೀಡಲಾಗುತ್ತಿದ್ದ ‘ಸ್ಲಾಟೆಡ್ ಸರ್ವ ದರ್ಶನ’ (SSD) ಟೋಕನ್‌ಗಳ ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಸಾಮಾನ್ಯವಾಗಿ ಮರುದಿನದ ದರ್ಶನಕ್ಕಾಗಿ ಹಿಂದಿನ ದಿನವೇ ಟೋಕನ್‌ಗಳನ್ನು ಶ್ರೀನಿವಾಸಂ, ವಿಷ್ಣು ನಿವಾಸಂ ಮತ್ತು ಭೂದೇವಿ ಸಂಕೀರ್ಣಗಳಲ್ಲಿ ನೀಡಲಾಗುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಿಂದಾಗಿ ಗುರುವಾರ ದರ್ಶನಕ್ಕೆ ನೀಡಬೇಕಿದ್ದ ಬುಧವಾರದ ಟೋಕನ್‌ಗಳನ್ನು ನೀಡಿಲ್ಲ. ಶುಕ್ರವಾರ ಸ್ವಾಮಿಯ ದರ್ಶನ ಪಡೆಯಲು ಬಯಸುವ ಭಕ್ತರಿಗೆ ಗುರುವಾರ ಮಧ್ಯಾಹ್ನದಿಂದ ಮತ್ತೆ ಎಂದಿನಂತೆ ಟೋಕನ್‌ಗಳನ್ನು ನೀಡಲಾಗುವುದು ಎಂದು TTD ಸ್ಪಷ್ಟಪಡಿಸಿದೆ.

ತಿರುಮಲದಲ್ಲಿ ಹೆಚ್ಚಿದ ಭಕ್ತರ ದಂಡು:

ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಮಳೆ ಹಾಗೂ ಶಾಲಾ-ಕಾಲೇಜುಗಳು ಪ್ರಾರಂಭವಾಗುವುದರಿಂದ ತಿರುಮಲದಲ್ಲಿ ಜನಸಂದಣಿ ಕಡಿಮೆಯಿರುತ್ತದೆ. ಆದರೆ, ಕಳೆದ ಎರಡು ವಾರಗಳಿಂದ ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ದರ್ಶನಕ್ಕೆ ಎಷ್ಟು ಸಮಯ ಬೇಕಾಗಬಹುದು?

ಪ್ರಸ್ತುತ ಸಾಮಾನ್ಯ ದರ್ಶನಕ್ಕೆ 12 ರಿಂದ 24 ಗಂಟೆಗಳ ಕಾಲ ಸಮಯ ತಗಲುತ್ತಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್-2 ರ 31 ಕಂಪಾರ್ಟ್‌ಮೆಂಟ್‌ಗಳು ಹಾಗೂ ನಾರಾಯಣಗಿರಿಯ 9 ಕಂಪಾರ್ಟ್‌ಮೆಂಟ್‌ಗಳು ಭಕ್ತರಿಂದ ಸಂಪೂರ್ಣವಾಗಿ ತುಂಬಿ ತುಳುಕುತ್ತಿವೆ. ಸತತ ನಾಲ್ಕನೇ ವಾರವೂ ಈ ರೀತಿ SSD ಟೋಕನ್ ವಿತರಣೆಯನ್ನು ಮಧ್ಯದಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಂಗಳವಾರ ಬೆಳಿಗ್ಗೆ 5 ಗಂಟೆಗೆ ವಿತರಣೆ ಆರಂಭವಾದ ಕೇವಲ ಒಂದು ಗಂಟೆಯಲ್ಲೇ ಎಲ್ಲಾ ಟೋಕನ್‌ಗಳು ಖಾಲಿಯಾಗಿದ್ದರಿಂದ, ದೂರದೂರುಗಳಿಂದ ಬಂದ ಭಕ್ತರು ತೊಂದರೆ ಅನುಭವಿಸುವಂತಾಯಿತು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ:

ತಿರುಪತಿಯ ಪ್ರಸಿದ್ಧ ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ಜುಲೈ 24 ರಿಂದ 26 ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಶ್ರೀದೇವಿ ಮತ್ತು ಭೂದೇವಿ ಸಮೇತ ಶ್ರೀ ಗೋವಿಂದರಾಜಸ್ವಾಮಿಯ ವಿಗ್ರಹಗಳಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ‘ವಿಧ್ಯುಕ್ತ ಅಭಿಷೇಕ’ ನಡೆಯಲಿದೆ.

ಭಕ್ತರಲ್ಲಿ TTD ಮನವಿ:

ತಿರುಮಲಕ್ಕೆ ಆಗಮಿಸುವ ಭಕ್ತರು ಪ್ರಸ್ತುತ ಪರಿಸ್ಥಿತಿ ಮತ್ತು TTD ಅಧಿಕೃತವಾಗಿ ನೀಡುವ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಬೇಕು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಕನ್ನಡ: ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ! ಮುಚ್ಚುವ ಭೀತಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು – Kannada News | Uttara Kannada Govt Schools Facing Closure After 35 Record Zero Admissions

ಉತ್ತರ ಕನ್ನಡ, ಜುಲೈ 22: ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ದಿನದಿಂದ ದಿನಕ್ಕೆ ಚಿಂತಾಜನಕವಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2024-25) ಉತ್ತರ ಕನ್ನಡ ಜಿಲ್ಲೆಯ ಸುಮಾರು 35 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಂದೇ ಒಂದು ಹೊಸ ವಿದ್ಯಾರ್ಥಿಯೂ ಸೇರ್ಪಡೆಯಾಗದೆ ‘ಶೂನ್ಯ ದಾಖಲಾತಿ’ (Zero Admissions) ದಾಖಲಾಗಿದೆ. ಈ ಘಟನೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕನ್ನಡ ಪ್ರೇಮಿಗಳಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಆತಂಕಕಾರಿ ಮಟ್ಟಕ್ಕೆ ಕುಸಿದ ವಿದ್ಯಾರ್ಥಿಗಳ ಸಂಖ್ಯೆ

ಶಿಕ್ಷಣ ಇಲಾಖೆ ತಿಳಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ, ಕುಮಟಾ, ಅಂಕೋಲಾ ಸೇರಿದಂತೆ ವಿವಿಧ ತಾಲೂಕುಗಳ ಗ್ರಾಮೀಣ ಭಾಗಗಳಲ್ಲಿರುವ ಈ ಸರ್ಕಾರಿ ಶಾಲೆಗಳು ಇದೀಗ ಮುಚ್ಚುವ ಭೀತಿಯನ್ನು ಎದುರಿಸುತ್ತಿವೆ. ಸೂಕ್ತ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲದಿರುವುದರಿಂದ ಇಂತಹ ಶಾಲೆಗಳನ್ನು ಸಮೀಪದ ಇತರ ಸರ್ಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಲು (Merge) ಅಥವಾ ತಾತ್ಕಾಲಿಕವಾಗಿ ಮುಚ್ಚಲು ಇಲಾಖೆ ಚಿಂತನೆ ನಡೆಸಿದೆ.

ಶೂನ್ಯ ದಾಖಲಾತಿಗೆ ಕಾರಣಗಳೇನು?

  • ಆಂಗ್ಲ ಮಾಧ್ಯಮದ ಕಡೆಗೆ ಒಲವು: ಪೋಷಕರು ತಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸಲು ಆಸಕ್ತಿ ತೋರಿಸುತ್ತಿರುವುದು ಕನ್ನಡ ಮಾಧ್ಯಮ ಶಾಲೆಗಳಿಗೆ ಶಾಪವಾಗಿ ಪರಿಣಮಿಸಿದೆ.
  • ಗ್ರಾಮೀಣ ಭಾಗದಿಂದ ವಲಸೆ: ಉತ್ತಮ ಉದ್ಯೋಗ ಮತ್ತು ಜೀವನ ಶೈಲಿಯನ್ನು ಅರಸಿ ಗ್ರಾಮೀಣ ಪ್ರದೇಶದ ಕುಟುಂಬಗಳು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದರಿಂದ ಹಳ್ಳಿಗಳಲ್ಲಿ ಮೌಲಿಕವಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.
  • ಖಾಸಗಿ ಶಾಲೆಗಳ ಪೈಪೋಟಿ: ಗ್ರಾಮೀಣ ಭಾಗಗಳಲ್ಲೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಜಾಲ ವಿಸ್ತರಿಸಿದ್ದು, ಪ್ರೈವೇಟ್ ಶಾಲೆಗಳಲ್ಲಿ ಸಾರಿಗೆ ವ್ಯವಸ್ಥೆಯೂ ಲಭ್ಯವಿರುವುದರಿಂದ ಪೋಷಕರು ಖಾಸಗಿ ಸಂಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ.
  • ಶಿಕ್ಷಕರ ಕೊರತೆ ಹಾಗೂ ಮೂಲಸೌಕರ್ಯ: ಕೆಲವು ಶಾಲೆಗಳಲ್ಲಿ ನಿಕೃಷ್ಟ ಮೂಲಸೌಕರ್ಯ ಮತ್ತು ಕಾಯಂ ಶಿಕ್ಷಕರ ಅಭಾವವಿರುವುದು ವಿದ್ಯಾರ್ಥಿಗಳ ಸಂಖ್ಯೆ ಕುಸಿಯಲು ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ ದಾಂಡೇಲಿಯ ರೆಸಾರ್ಟ್​​ನಲ್ಲಿ ಜಿಪ್‌ಲೈನ್ ದುರಂತ: 40 ಅಡಿ ಎತ್ತರದಿಂದ ಬಿದ್ದು ಪ್ರವಾಸಿಗನಿಗೆ ಗಂಭೀರ ಗಾಯ

ಇಲಾಖೆಯ ಮುಂದಿರುವ ಸವಾಲುಗಳು

ಯಾವುದೇ ಶಾಲೆಯಲ್ಲಿ ಕನಿಷ್ಠ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ ಅಂತಹ ಶಾಲೆಗಳನ್ನು ನಡೆಸುವುದು ಇಲಾಖೆಗೆ ನಿರ್ವಹಣಾ ದೃಷ್ಟಿಯಿಂದ ಸವಾಲಾಗಿ ಪರಿಣಮಿಸುತ್ತದೆ. ಆದರೆ, ಶಾಲೆಗಳನ್ನು ಮುಚ್ಚುವುದರಿಂದ ಸ್ಥಳೀಯವಾಗಿ ಬಡ ಮತ್ತು ಹಿಂದುಳಿದ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯವಿದೆ. ಹೀಗಾಗಿ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಬಲಪಡಿಸುವ ಹಾಗೂ ಮೂಲಸೌಕರ್ಯ ಸುಧಾರಿಸುವ ಮೂಲಕ ವಿದ್ಯಾರ್ಥಿಗಳನ್ನು ಮತ್ತೆ ಆಕರ್ಷಿಸಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ವಾರಾಂತ್ಯಕ್ಕೆ ಪ್ರಕಟವಾಗಲಿದೆ ಸಚಿವ ಸಂಪುಟ ವಿಸ್ತರಣೆ ಅಂತಿಮ ಪಟ್ಟಿ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 22 July 2026 Monsoon Session, Cabinet expansion, CM DK Shivakumar, IMD Weather, Rain Latest Updates in Kannada

Breaking News Today Live Updates in Kannada: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗಿದೆ. ಹೈಕಮಾಂಡ್ ನಾಯಕರ ಲಭ್ಯತೆ ಇಲ್ಲದ ಕಾರಣ ಪ್ರಕ್ರಿಯೆ ವಿಳಂಬವಾಗಿದ್ದು, ವಾರಾಂತ್ಯದಲ್ಲಿ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮತ್ತೊಂದೆಡೆ, ರಾಜ್ಯದ ಕರಾವಳಿ ಹಾಗೂ ವಿವಿಧೆಡೆ ಇಂದಿನಿಂದ (ಜುಲೈ 22) ಇನ್ನೆರಡು ದಿನ ಸಾಧಾರಣ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ 40-50 ಕಿ.ಮೀ ವೇಗದ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು, ನೀಟ್ ಪರೀಕ್ಷೆ ಸೋರಿಕೆ ಖಂಡಿಸಿ 32ನೇ ದಿನವೂ ಪ್ರತಿಭಟನೆ ಕಾಯ್ದುಕೊಂಡಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಹೈಕೋರ್ಟ್ ಆದೇಶದಂತೆ ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್​: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ – Kannada News | BCCI Introduces Strict 10 New Rules in Domestic Cricket

ಭಾರತೀಯ ದೇಶಿ ಕ್ರಿಕೆಟ್‌ನಲ್ಲಿ ಇನ್ಮುಂದೆ ಬೌಲರ್‌ಗಳು ತಪ್ಪು ಮಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ. ಮುಂಬರುವ 2026–27ರ ದೇಶಿಯ ಕ್ರಿಕೆಟ್ ಸೀಸನ್‌ನಿಂದ ಜಾರಿಗೆ ಬರುವಂತೆ, ಬಿಸಿಸಿಐ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಯಾವುದೇ ಬೌಲರ್ ಉದ್ದೇಶಪೂರ್ವಕವಾಗಿ ಫ್ರಂಟ್-ಫುಟ್ ನೋ-ಬಾಲ್ ಅಥವಾ ಬೀಮರ್ ಎಸೆದರೆ, ಅವರನ್ನು ಇಡೀ ಪಂದ್ಯದಿಂದಲೇ ಬೌಲಿಂಗ್ ಮಾಡದಂತೆ ಅಮಾನತುಗೊಳಿಸಲಾಗುತ್ತದೆ.

ಹಳೆಯ ನಿಯಮದ ಪ್ರಕಾರ, ಇಂತಹ ತಪ್ಪು ಮಾಡಿದ ಬೌಲರ್‌ಗೆ ಕೇವಲ ಆ ನಿರ್ದಿಷ್ಟ ಇನ್ನಿಂಗ್ಸ್‌ನಲ್ಲಿ ಮಾತ್ರ ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಗುತ್ತಿತ್ತು. ಆದರೆ ಪಂದ್ಯದ ಪಾವಿತ್ರ್ಯತೆ ಕಾಪಾಡಲು ಬಿಸಿಸಿಐ ಈಗ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿದೆ. ಇದರ ಜೊತೆಗೆ ಬಿಸಿಸಿಐ ಮತ್ತಷ್ಟು ಹೊಸ ನಿಯಮಗಳನ್ನು ಕೂಡ ಪರಿಚಯಿಸಿದ್ದಾರೆ.

ದೇಶಿ ಕ್ರಿಕೆಟ್‌ನ ಹೊಸ ನಿಯಮಗಳು:

ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (MCC) ಶಿಫಾರಸುಗಳ ಆಧಾರದ ಮೇಲೆ ಬಿಸಿಸಿಐ ಈ ಕೆಳಗಿನ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮುಂಬರುವ ದುಲೀಪ್ ಟ್ರೋಫಿ ಟೂರ್ನಿಯಿಂದಲೇ ಈ ನಿಯಮಗಳು ಜಾರಿಗೆ ಬರಲಿವೆ.

  1. ನೋ-ಬಾಲ್ ನಿಯಮ: ಬೌಲರ್ ಎಸೆದ ಫ್ರಂಟ್-ಫುಟ್ ನೋ-ಬಾಲ್ ಅಥವಾ ಬೀಮರ್ (ಡೇಂಜರಸ್ ಫುಲ್ ಟಾಸ್) ಬೇಕಂತಲೇ ಎಸೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಸಂಪೂರ್ಣ ಹಕ್ಕು ಆನ್-ಫೀಲ್ಡ್ ಅಂಪೈರ್‌ಗಳಿಗೆ ಇರುತ್ತದೆ. ಅಂಪೈರ್ ಅದನ್ನು ‘ಉದ್ದೇಶಪೂರ್ವಕ’ ಎಂದು ಘೋಷಿಸಿದರೆ ಆ ಬೌಲರ್ ಆ ಪಂದ್ಯದಲ್ಲಿ ಮತ್ತೆ ಬೌಲಿಂಗ್ ಮಾಡುವಂತಿಲ್ಲ.
  2. ಓವರ್ ಪೂರ್ಣಗೊಳಿಸುವುದು ಕಡ್ಡಾಯ: ಬಹುದಿನಗಳ ಪಂದ್ಯಗಳಲ್ಲಿ (ಉದಾಹರಣೆಗೆ ರಣಜಿ, ದುಲೀಪ್ ಟ್ರೋಫಿ), ದಿನದ ಕೊನೆಯ ಓವರ್ ನಡೆಯುತ್ತಿರುವಾಗ ವಿಕೆಟ್ ಬಿದ್ದರೂ ಸಹ ಆ ಓವರ್ ಅನ್ನು ಪೂರ್ತಿಯಾಗಿ ಮುಗಿಸಬೇಕು. ತಡವಾದ ಸಂಜೆ ಹೊಸ ಬ್ಯಾಟರ್ ಕ್ರೀಸ್‌ಗೆ ಬರುವುದನ್ನು ತಪ್ಪಿಸಲು ಸ್ಟಂಪ್ಸ್ ಘೋಷಿಸುವ ಹಳೇ ಪದ್ಧತಿಯನ್ನು ಕೈ ಬಿಡಲಾಗಿದೆ.
  3. ಕೃತಕ ಫಲಿತಾಂಶಗಳಿಗೆ ತಡೆ: ಪಂದ್ಯದಲ್ಲಿ ಕೃತಕ ಅಥವಾ ಮೊದಲೇ ನಿರ್ಧರಿಸಿದ ಫಲಿತಾಂಶವನ್ನು ತರಲು ಯಾವುದೇ ತಂಡ ಕೊನೆಯ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡುವಂತಿಲ್ಲ ಅಥವಾ ಬಿಟ್ಟುಕೊಡುವಂತಿಲ್ಲ. ಈ ಹಿಂದೆ ಡ್ರಾ ಆಗುವಂತಹ ಪಂದ್ಯಗಳಲ್ಲಿ ಫಲಿತಾಂಶ ನಿರ್ಧರಿಸಲು ಬೇಕೆಂದೇ ಡಿಕ್ಲೇರ್ ಘೋಷಿಸಿ ಕೊನೆಯ 10 ಓವರ್​ಗಳಲ್ಲಿ ಇಂತಿಷ್ಟು ರನ್​ಗಳ ಗುರಿ ನೀಡಲಾಗುತ್ತಿತ್ತು. ಇಂತಹ ನಿರ್ಧಾರಗಳನ್ನು ಎರಡು ತಂಡಗಳ ಕೋಚ್ ಅಥವಾ ನಾಯಕರುಗಳು ಚರ್ಚಿಸಿ ತೆಗೆದುಕೊಳ್ಳುತ್ತಿದ್ದರು. ಇದೀಗ ಈ ರೀತಿಯ ಅನುಕೂಲಕರ ಕೃತಕ ಫಲಿತಾಂಶ ರೂಪಿಸುವುದಕ್ಕೂ ಬಿಸಿಸಿಐ ತಡೆ ನೀಡಿದೆ.
  4. ವಿಕೆಟ್ ಕೀಪರ್ ನಿಯಮ: ಬೌಲರ್ ಓಡಿ ಬರುವಾಗ ವಿಕೆಟ್ ಕೀಪರ್ ಹೇಗೆ ಬೇಕಾದರೂ ಕದಲಬಹುದು ಅಥವಾ ಅವರ ಗ್ಲೌಸ್ ಸ್ಟಂಪ್‌ಗಿಂತ ಸ್ವಲ್ಪ ಮುಂದೆ ಬಂದರೂ ಸಹ ಅದನ್ನು ತಪ್ಪು ಎಂದು ಪರಿಗಣಿಸಲಾಗುವುದಿಲ್ಲ. ಈ ಹಿಂದೆ ಬೌಲರ್ ತನ್ನ ರನ್-ಅಪ್ ಆರಂಭಿಸಿದ ಕ್ಷಣದಿಂದ ಹಿಡಿದು ಚೆಂಡನ್ನು ಎಸೆಯುವವರೆಗೆ, ವಿಕೆಟ್ ಕೀಪರ್‌ನ ಗ್ಲೌಸ್‌ಗಳು (ಕೈಗಳು) ಅಥವಾ ದೇಹದ ಯಾವುದೇ ಭಾಗವು ಸ್ಟಂಪ್‌ಗಿಂತ ಮುಂದೆ ಬರುವಂತಿರಲಿಲ್ಲ. ಅಲ್ಲದೆ ಈ ತಪ್ಪಿಗೆ ಪೆನಾಲ್ಟಿ ರನ್​ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ ಬೌಲರ್ ರನ್ ಅಪ್ ವೇಳೆ ವಿಕೆಟ್ ಕೀಪರ್ ಹೇಗೆ ಬೇಕಾದರೂ ಇರಬಹುದು ಎಂದು ತಿಳಿಸಲಾಗಿದೆ. ಅಲ್ಲದೆ ಚೆಂಡು ಹಿಡಿಯುವಾಗ ಮಾತ್ರ ವಿಕೆಟ್ ಕೀಪರ್ ಗ್ಲೌಸ್ ವಿಕೆಟ್​ನ ಹಿಂದೆ ಇರಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.
  5. ಕೋಚ್‌ಗಳಿಗೆ ಮೈದಾನ ಪ್ರವೇಶ: ದೇಶಿಯ ಏಕದಿನ ಪಂದ್ಯಗಳಲ್ಲಿ ಸ್ಟ್ರಾಟಜಿಕ್ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ಹೆಡ್ ಕೋಚ್‌ಗಳು ಮೈದಾನದೊಳಗೆ ಬಂದು ಆಟಗಾರರೊಂದಿಗೆ ಚರ್ಚಿಸಲು ಅವಕಾಶ ನೀಡಲಾಗಿದೆ.
  6. ಲೆಗ್-ಸೈಡ್ ವೈಡ್ ಲೈನ್: ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ವೈಡ್ ಬಾಲ್ ನಿರ್ಧಾರಗಳನ್ನು ನಿಖರವಾಗಿ ತೆಗೆದುಕೊಳ್ಳಲು ಅಂಪೈರ್‌ಗಳ ಸಹಾಯಕ್ಕಾಗಿ ಲೆಗ್ ಸೈಡ್‌ನಲ್ಲಿ ಪ್ರತ್ಯೇಕವಾದ ಗೆರೆಯನ್ನು ಪೇಂಟ್ ಮಾಡಲಾಗುತ್ತದೆ.
  7. ಓವರ್​ ಥ್ರೋ ನಿಯಮ: ಹಿಂದೆ ಫೀಲ್ಡರ್ ಎಸೆದ ಚೆಂಡು ವಿಕೆಟ್‌ಗೆ ತಾಗದೆ ಅಥವಾ ಯಾರ ಕೈಗೂ ಸಿಗದೆ ದೂರ ಹೋದಾಗ, ಅದನ್ನು ಸಾಮಾನ್ಯವಾಗಿ ‘ಓವರ್‌ ಥ್ರೋ’ ಎಂದೇ ಪರಿಗಣಿಸಲಾಗುತ್ತಿತ್ತು. ಇದರಿಂದಾಗಿ ಫೀಲ್ಡರ್‌ನ ಉದ್ದೇಶ ಏನೇ ಇದ್ದರೂ ರನ್‌ಗಳ ಲೆಕ್ಕಾಚಾರದಲ್ಲಿ ಕೆಲವೊಮ್ಮೆ ಗೊಂದಲ ಉಂಟಾಗುತ್ತಿತ್ತು. ಹೊಸ ತಿದ್ದುಪಡಿಯ ಪ್ರಕಾರ, ಕೇವಲ ಚೆಂಡು ಕೈತಪ್ಪಿ ಹೋದರೆ ಅದು ಓವರ್‌ ಥ್ರೋ ಆಗುವುದಿಲ್ಲ. ಅಂಪೈರ್‌ಗಳು ಓವರ್‌ ಥ್ರೋ ಎಂದು ಘೋಷಿಸಬೇಕಾದರೆ, ಅದು ರನೌಟ್ ಮಾಡಲು ಎಸೆದ ಥ್ರೋ ಆಗಿರಬೇಕು ಅಥವಾ ರನ್ ಓಡುವುದನ್ನು ತಡೆಯಲು ಎಸೆದ ಥ್ರೋ ಆಗಿರಬೇಕು ತಿಳಿಸಲಾಗಿದೆ.
  8. ಡೆಡ್ ಬಾಲ್ ನಿಯಮ: ಚೆಂಡು ಸಂಪೂರ್ಣವಾಗಿ ಯಾರಾದರೂ ಒಬ್ಬ ಫೀಲ್ಡರ್ ಕೈ ಸೇರಿದರೆ ಅಥವಾ ಮೈದಾನದಲ್ಲಿ ಒಂದೆಡೆ ಚಲನೆ ಇಲ್ಲದೆ ನಿಂತರೆ, ಅಂಪೈರ್ ಅದನ್ನು ‘ಡೆಡ್ ಬಾಲ್’ ಎಂದು ಘೋಷಿಸಬಹುದು. ಚೆಂಡು ಕಡ್ಡಾಯವಾಗಿ ವಿಕೆಟ್ ಕೀಪರ್ ಅಥವಾ ಬೌಲರ್ ಕೈಗೇ ಬರಬೇಕು ಎಂಬ ಹಳೇ ನಿಯಮವನ್ನು ಇಲ್ಲಿ ಸಡಿಲಗೊಳಿಸಲಾಗಿದೆ.
  9. ಫೀಲ್ಡಿಂಗ್ ನಿಯಮ: ಬೌಲರ್ ಚೆಂಡನ್ನು ಎಸೆಯುವ ನಿಖರ ಕ್ಷಣದಲ್ಲಿ ಮೈದಾನದಲ್ಲಿರುವ ಎಲ್ಲಾ ಫೀಲ್ಡರ್‌ಗಳು ಕಡ್ಡಾಯವಾಗಿ ಬೌಂಡರಿ ಗೆರೆಯ ಒಳಗೇ ಇರಬೇಕು. ಬೌಂಡರಿ ಗೆರೆಯ ಹೊರಗೆ ನಿಂತು ಅಥವಾ ಗೆರೆಯನ್ನು ದಾಟಿ ಓಡಿ ಬಂದು ಫೀಲ್ಡಿಂಗ್ ಮಾಡುವಂತಿಲ್ಲ. ಕ್ರಿಕೆಟ್ ಆಟವು ಸಂಪೂರ್ಣವಾಗಿ ಬೌಂಡರಿ ಗೆರೆಯ ಒಳಗಡೆಯೇ ನಡೆಯಬೇಕು ಎಂಬ ಉದ್ದೇಶದಿಂದ ಲೋಪದೋಷವನ್ನು ಸರಿಪಡಿಸಲಾಗಿದೆ.
  10. ಸ್ಟ್ರೈಕರ್ ಚೇಂಜ್ ನಿಯಮ: ಬ್ಯಾಟರ್ ಯಾರಾದರೂ ಫೀಲ್ಡರ್ ಕ್ಯಾಚ್ ಹಿಡಿಯುವುದಕ್ಕೆ ಅಡ್ಡ ಬಂದು ಔಟ್ ಆದಾಗ, ಕ್ರೀಸ್‌ನಲ್ಲಿ ಉಳಿಯುವ ಇನ್ನೊಬ್ಬ ಬ್ಯಾಟರ್ ಮುಂದಿನ ಎಸೆತವನ್ನು ಎದುರಿಸಬೇಕೇ (ಸ್ಟ್ರೈಕ್ ತಗೋಬೇಕೇ) ಅಥವಾ ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ಇರಬೇಕೇ ಎಂಬುದನ್ನು ಫೀಲ್ಡಿಂಗ್ ತಂಡದ ನಾಯಕನೇ ನಿರ್ಧರಿಸಬಹುದು.

ಇದನ್ನೂ ಓದಿ: 3 ಖಂಡಗಳ 6 ದೇಶಗಳಲ್ಲಿ ಮುಂದಿನ ಫಿಫಾ ವಿಶ್ವಕಪ್​!

2026-27ರ ದೇಶೀಯ ಕ್ರಿಕೆಟ್​ ಸೀಸನ್‌ನಿಂದ ಜಾರಿಗೆ ಬರಲಿರುವ ಈ ಕಠಿಣ ನಿಯಮಗಳು ಮೈದಾನದಲ್ಲಿ ಶಿಸ್ತನ್ನು ಹೆಚ್ಚಿಸುವುದರ ಜೊತೆಗೆ, ಕ್ರಿಕೆಟ್ ಆಟವನ್ನು ಇನ್ನು ಹೆಚ್ಚಿನ ತಾಂತ್ರಿಕ ನಿಖರತೆ ಹಾಗೂ ಪಾರದರ್ಶಕತೆಯತ್ತ ಕೊಂಡೊಯ್ಯಲಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

Source link

Sikkim Tunnel Collapse: ಸಿಕ್ಕಿಂ ಸುರಂಗ ದುರಂತ: ಮೀಥೇನ್ ಅನಿಲ ಸ್ಫೋಟಕ್ಕೆ ಬಲಿಯಾದ ಕಾರ್ಮಿಕರ ಸಂಖ್ಯೆ 20ಕ್ಕೆ ಏರಿಕೆ, ಕುಟುಂಬಕ್ಕೆ ಪ್ರಧಾನಿ ಪರಿಹಾರ – Kannada News | Sikkim Tunnel Tragedy: Methane Gas Explosion Kills 20 Workers, PM Announces Aid

ಗ್ಯಾಂಗ್‌ಟಾಕ್, ಜುಲೈ 22: ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಮೀಥೇನ್ ಅನಿಲ ಸ್ಫೋಟಗೊಂಡು ಸಂಭವಿಸಿದ ಭೂಕುಸಿತ(Landslide)ದಿಂದಾಗಿ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಜುಲೈ20ರಂದು ಮಧ್ಯಾಹ್ನ ಸಮರ್ದುಂಗ್​ನಲ್ಲಿರುವ ಎನ್​ಎಚ್​ಪಿಸಿ ತೀಸ್ತಾ ಹಂತ VI ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದ ಪರಿಣಾಮ 25 ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದರು. ಒಳಗೆ ಸಿಲುಕಿದ್ದ 25 ಮಂದಿ ಪೈಕಿ 20 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಸ್ಫೋಟಕ್ಕೆ ಕಾರಣವೇನು?

ಎನ್‌ಎಚ್‌ಪಿಸಿ ನೀಡಿರುವ ಮಾಹಿತಿಯ ಪ್ರಕಾರ, ಸುರಂಗದ ಒಳಗಿದ್ದ ಬಂಡೆಗಳ ನಡುವಿದ್ದ ಮೀಥೇನ್ ಅನಿಲವು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಸುರಂಗದೊಳಗೆ ದಟ್ಟವಾದ ವಿಷಕಾರಿ ಹೊಗೆ ಮತ್ತು ಅನಿಲ ಆವರಿಸಿಕೊಂಡು ಕಾರ್ಮಿಕರು ಉಸಿರುಗಟ್ಟಿ ಹಾಗೂ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಪ್ರಧಾನಿ ಮೋದಿ ಸಾಂತ್ವನ, ಪರಿಹಾರ ಘೋಷಣೆ

ಘಟನೆಯ ಕುರಿತು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪರಿಸ್ಥಿತಿಯ ಪೂರ್ಣ ವಿವರ ಪಡೆದುಕೊಂಡರು ಹಾಗೂ ಕೇಂದ್ರದಿಂದ ಅಗತ್ಯವಿರುವ ಎಲ್ಲಾ ನೆರವು ನೀಡುವ ಭರವಸೆ ನೀಡಿದರು. ಪ್ರಧಾನಿ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ. ಸಿಕ್ಕಿಂ ಮುಖ್ಯಮಂತ್ರಿ ತಮಾಂಗ್ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ.ಪರಿಹಾರ ಘೋಷಿಸಿದ್ದಾರೆ.

ಮತ್ತಷ್ಟು ಓದಿ: ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ತಮಾಂಗ್, ಸುರಂಗದೊಳಗಿನ ಆಕ್ಸಿಜನ್ ಕೊರತೆ ನಿವಾರಣೆ ಮತ್ತು ವಿಷಕಾರಿ ಅನಿಲವನ್ನು ತೆರವುಗೊಳಿಸಲು ನೆರೆಯ ಪಶ್ಚಿಮ ಬಂಗಾಳದಿಂದ ‘ವಿಶೇಷ ಗಣಿಗಾರಿಕೆ ರಕ್ಷಣಾ ತಂಡ’ ಕರೆಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಈ ಸ್ಫೋಟದ ನಿಖರ ಕಾರಣವನ್ನು ಪತ್ತೆಹಚ್ಚಲು ವಿಶೇಷ ತನಿಖಾ ಸಮಿತಿ ರಚಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಡಿಯೋ

ದುರಂತದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ಆತ್ಮಕ್ಕೆ ಶಾಂತಿ ಕೋರಿ ಸಿಕ್ಕಿಂ ಶಾಸನಸಭೆಯಲ್ಲಿ ಮಂಗಳವಾರ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು. ಮೃತಪಟ್ಟ ಕಾರ್ಮಿಕರಲ್ಲಿ ಹೆಚ್ಚಿನವರು ಹೊರರಾಜ್ಯದವರಾಗಿರುವುದರಿಂದ, ಅವರ ಮೃತದೇಹಗಳ ಪತ್ತೆ ಹಾಗೂ ಕುಟುಂಬಸ್ಥರಿಗೆ ಹಸ್ತಾಂತರಿಸಲು ರಂಗ್ಪೋದಲ್ಲಿ ವಿಶೇಷ ಕೇಂದ್ರವನ್ನು ಸ್ಥಾಪಿಸಲು ನಾಮ್ಚಿ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.

ವಿಡಿಯೋ

ಸಿಕ್ಕಿಂ ಸರ್ಕಾರದ ಮುಖ್ಯ ಕಾರ್ಯದರ್ಶಿ ರವೀಂದ್ರ ತೆಲಂಗ್ ಮತ್ತು ಪೊಲೀಸ್ ಮಹಾನಿರ್ದೇಶಕ ಅಕ್ಷಯ್ ಸಚ್‌ದೇವ ಅವರು ಎನ್‌ಎಚ್‌ಪಿಸಿ ಮತ್ತು ಕಾಮಗಾರಿ ನಡೆಸುತ್ತಿರುವ ‘ಪಟೇಲ್ ಎಂಜಿನಿಯರಿಂಗ್’ ಸಂಸ್ಥೆಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಆಮ್ಲಜನಕ ಪೂರೈಕೆಯೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಶೀಘ್ರ ಪೂರ್ಣಗೊಳಿಸಲು ನಿರ್ದೇಶಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ: ಕಾರಣ ಕೊಟ್ಟ ಸಿಎಂ ಡಿಕೆ ಶಿವಕುಮಾರ್ – Kannada News | Karnataka Cabinet Expansion Delayed Again: High Command Yet to Finalise Minister List, Oath Likely This Week

ದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್Image Credit source: tv9

ಬೆಂಗಳೂರು, ಜುಲೈ 22: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮತ್ತೆ ಒಂದೆರಡು ದಿನ ಮುಂದೂಡಿಕೆಯಾಗಿದೆ. ಬುಧವಾರವೇ ನೂತನ ಸಚಿವರ ಪ್ರಮಾಣವಚನ ನಡೆಯುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಮೂಡಿದ್ದರೂ, ಹೈಕಮಾಂಡ್ ನಾಯಕರ ಲಭ್ಯತೆ ಕೊರತೆಯಿಂದ ಪ್ರಕ್ರಿಯೆ ಮುಂದಕ್ಕೆ ಸರಿದಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು (ಜುಲೈ 22) ಬೆಂಗಳೂರಿಗೆ ಮರಳಲಿದ್ದು, ವಾರಾಂತ್ಯದಲ್ಲಿ ಮತ್ತೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಸುತ್ತಿನ ಚರ್ಚೆ ನಡೆಸುವ ಸಾಧ್ಯತೆ ಇದೆ.

ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಯ ಕರ್ನಾಟಕ ಭವನದಲ್ಲಿ ಮಂಗಳವಾರ ರಾತ್ರಿ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಂಧನದ ಬೆಳವಣಿಗೆಯಿಂದ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಸಂಪುಟ ವಿಸ್ತರಣೆಯನ್ನು ಮುಂದೂಡಲು ಇಷ್ಟವಿಲ್ಲ. ಆದರೂ, ಅಂತಿಮ ತೀರ್ಮಾನವು ಹೈಕಮಾಂಡ್ ಲೆಕ್ಕಾಚಾರದಂತೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.

ಹಿರಿಯರು, ಕಿರಿಯರಿಗೆ ಸಮಾನ ಅವಕಾಶ: ಡಿಕೆಶಿ

ಸಂಪುಟ ವಿಸ್ತರಣೆ ವೇಳೆ ಹಿರಿಯರು ಮತ್ತು ಕಿರಿಯರಿಗೆ ಸಮಾನ ಅವಕಾಶ ಕಲ್ಪಿಸಲಾಗುವುದು ಎಂದು ಸಿಎಂ ತಿಳಿಸಿದರು. ಸಚಿವ ಸ್ಥಾನಕ್ಕೆ ಅರ್ಹರಾದ ಅನೇಕರು ಇದ್ದು, ಸಾಧ್ಯವಾದಷ್ಟು ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಆಶಯವಿದೆ ಎಂದೂ ಅವರು ಹೇಳಿದರು.

ಡಿಕೆ ಶಿವಕುಮಾರ್ ಮಂಗಳವಾರ ರಾತ್ರಿ ಮಾತನಾಡಿರುವ ವಿಡಿಯೋ


ಕೊನೇ ಕ್ಷಣದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ ಮುಂದೂಡಿಕೆಯಾಗಿದ್ದೇಕೆ?

ಸಚಿವ ಸಂಪುಟ ವಿಸ್ತರಣೆ ಕುರಿತು ರಾಜ್ಯ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಸಭೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಕೆಲವು ಸುತ್ತಿನ ಮಾತುಕತೆಗಳೂ ನಡೆದಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ಬೆಳವಣಿಗೆಗಳು ಬದಲಾಗಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ಸಭೆ ನಡೆಸುವ ಯೋಜನೆ ಹೊಂದಿದ್ದರು. ಆದರೆ ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಟ್ ಅಕ್ರಮದ ವಿರುದ್ಧದ ಪ್ರತಿಭಟನೆಗೆ ತೆರಳಿದ್ದರಿಂದ ಹೈಕಮಾಂಡ್‌ನ ಸಂಪೂರ್ಣ ಗಮನ ಆ ಬೆಳವಣಿಗೆಯತ್ತ ಕೇಂದ್ರೀಕೃತವಾಯಿತು. ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ತಡರಾತ್ರಿವರೆಗೂ ರಾಹುಲ್ ಗಾಂಧಿ ಪೊಲೀಸರ ವಶದಲ್ಲಿದ್ದ ಹಿನ್ನೆಲೆ, ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಿ, ನಂತರ ಮತ್ತೊಮ್ಮೆ ದಿನಾಂಕ ನಿಗದಿಪಡಿಸಿ ರಾಜ್ಯ ನಾಯಕರನ್ನು ದೆಹಲಿಗೆ ಕರೆಯಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಡಿ.ಕೆ. ಶಿವಕುಮಾರ್ ಅವರು ಶನಿವಾರ ಅಥವಾ ಸೋಮವಾರ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಸಚಿವ ಸ್ಥಾನ: ಸಂಭಾವ್ಯರು ಯಾರೆಲ್ಲ?

‘ಟಿವಿ9’ಗೆ ಲಭ್ಯವಾದ ಮಾಹಿತಿಯ ಪ್ರಕಾರ, ಹೊಸ ಮುಖಗಳು ಮತ್ತು ಅನುಭವಿ ನಾಯಕರಿಗೆ ಸಮಾನ ಆದ್ಯತೆ ನೀಡುವ ಸಾಧ್ಯತೆ ಇದೆ. ಸುಮಾರು 10 ಹೊಸಬರು ಮತ್ತು 10 ಹಿರಿಯರಿಗೆ ಸಚಿವ ಸಂಪುಟದಲ್ಲಿ ಅವಕಾಶ ದೊರೆಯಬಹುದು. ಮುಸ್ಲಿಂ ಸಮುದಾಯದಿಂದ ರಿಜ್ವಾನ್ ಅರ್ಷದ್, ಜಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್, ಸಲೀಂ ಅಹ್ಮದ್ ಹಾಗೂ ಖನೀಜ್ ಫಾತಿಮಾ ಹೆಸರುಗಳು ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು, ಇವರಲ್ಲಿ ಮೂವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಲಿಂಗಾಯತ ಸಮುದಾಯದಿಂದ ಅಶೋಕ್ ಪಟ್ಟಣ, ಲಕ್ಷ್ಮಣ ಸವದಿ, ಕಾಶಪ್ಪನವರ್, ಬಸವರಾಜ ರಾಯರೆಡ್ಡಿ, ಹಂಪನಗೌಡ ಬಾದರ್ಲಿ, ಯಶವಂತ್ ರಾಯಗೌಡ ಹಾಗೂ ಅಪ್ಪಾಜಿ ನಾಡಗೌಡ ಹೆಸರುಗಳು ಕೇಳಿಬರುತ್ತಿದ್ದು, ಮೂವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಕ್ಕಲಿಗ ಸಮುದಾಯದಿಂದ ಶರತ್ ಬಚ್ಚೇಗೌಡ, ಮಾಗಡಿ ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ್ (ವಾಸು), ಶಿವಲಿಂಗೇಗೌಡ, ಚಲುವರಾಯಸ್ವಾಮಿ ಹಾಗೂ ಪ್ರಿಯಾ ಕೃಷ್ಣ ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ. ಇವರಲ್ಲಿ ಮೂವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮಹಿಳಾ ಕೋಟಾದಲ್ಲಿ ಯಾರಿಗೆಲ್ಲ ಸ್ಥಾನ?

ಮಹಿಳಾ ಕೋಟಾದಲ್ಲೂ ಈ ಬಾರಿ ಎರಡು ಅಥವಾ ಮೂರು ಸ್ಥಾನಗಳನ್ನು ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಎಂಎಲ್‌ಸಿ ಆರತಿ ಕೃಷ್ಣ, ಲಕ್ಷ್ಮೀ ಹೆಬ್ಬಾಳ್ಕರ್, ಉಮಾಶ್ರೀ ಹಾಗೂ ನಯನಾ ಮೋಟಮ್ಮ ಅವರ ಹೆಸರುಗಳು ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿವೆ.

ಇದನ್ನೂ ಓದಿ: ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ

ಒಟ್ಟಾರೆ, ಸಚಿವ ಸಂಪುಟ ವಿಸ್ತರಣೆ ಈ ವಾರದೊಳಗೆ ನಡೆಯುವ ಸಾಧ್ಯತೆ ಇದ್ದು, ಅಂತಿಮವಾಗಿ ಹೈಕಮಾಂಡ್ ಯಾರಿಗೆ ಸಚಿವ ಸ್ಥಾನ ನೀಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:25 am, Wed, 22 July 26

Source link

ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ – Kannada News | Priyanka Upendra Son Ayush Upendra Movie To release This Year

ಪ್ರಿಯಾಂಕಾ ಹಾಗೂ ಉಪೇಂದ್ರ ದಂಪತಿ ಮಗ ಆಯುಷ್ ಅವರು ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಪ್ರಿಯಾಂಕಾ ಅವರು ಎಗ್ಸೈಟ್ ಆಗಿದ್ದಾರೆ. ಇತ್ತೀಚೆಗೆ ಅವರು ಸಿನಿಮಾ ಸೆಟ್​​ಗೆ ಭೇಟಿ ಕೊಟ್ಟು ಮೇಲ್ವಿಚಾರಣೆ ಮಾಡಿದ್ದಾರೆ. ‘ಮಗ ಕಿಂಡರ್​ಗಾರ್ಡನ್​ ಅಲ್ಲಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದಾಗ ಖುಷಿಯಿಂದ ಕಣ್ಣಿರು ಬರುತ್ತಿತ್ತು. ಈಗ ಅವನು ಹೀರೋ ಆಗುತ್ತಿದ್ದಾನೆ. ಹೀಗಾಗಿ, ಎಮೋಷನಲ್ ಆಗುತ್ತೇನೆ’ ಎಂದು ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

3 ಖಂಡಗಳ 6 ದೇಶಗಳಲ್ಲಿ ಮುಂದಿನ ಫಿಫಾ ವಿಶ್ವಕಪ್​! – Kannada News | Fifa world cup 2030 host country list

ಫಿಫಾ ವಿಶ್ವಕಪ್​ನ 23ನೇ ಆವೃತ್ತಿಗೆ ತೆರೆಬಿದ್ದಿದೆ. ಈ ಬಾರಿ ಅರ್ಜೆಂಟೀನಾ ತಂಡವನ್ನು ಮಣಿಸಿ ಸ್ಪೇನ್ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಮುಂದಿನ ಬಾರಿ ಸ್ಪೇನ್ ಫಿಫಾ ವಿಶ್ವಕಪ್​ಗೆ ಜಂಟಿ ಆತಿಥ್ಯವಹಿಸಲಿದೆ. ಅಂದರೆ 2030ರ ಫಿಫಾ ವಿಶ್ವಕಪ್​ಗಾಗಿ ಈಗಾಗಲೇ ಆತಿಥೇಯ ರಾಷ್ಟ್ರಗಳ ಡ್ರಾ ಪ್ರಕ್ರಿಯೆ ನಡೆದಿದೆ. ಈ ಡ್ರಾನಂತೆ ಮುಂದಿನ ಬಾರಿಯ ವಿಶ್ವಕಪ್​ 3 ಖಂಡಗಳ 6 ದೇಶಗಳಲ್ಲಿ ನಡೆಯಲಿದೆ.

ವಿಶ್ವಕಪ್ ಶತಮಾನೋತ್ಸವ:

ಫಿಫಾ ವಿಶ್ವಕಪ್ ಶುರುವಾಗಿ 96 ವರ್ಷಗಳಾಗಿವೆ. ಅಂದರೆ ಮುಂದಿನ ವಿಶ್ವಕಪ್​ ನಡೆಯುವುದು 100ನೇ ವರ್ಷದಲ್ಲಿ.  1930ರಲ್ಲಿ ಜಗತ್ತಿನ ಮೊದಲ ಫಿಫಾ ಪುರುಷರ ವಿಶ್ವಕಪ್ ಪಂದ್ಯಾವಳಿ ನಡೆದಿತ್ತು. ಅದರ ನೆನಪಿಗಾಗಿ 2030ರಲ್ಲಿ ನಡೆಯಲಿರುವ 24ನೇ ಆವೃತ್ತಿಯನ್ನು ಶತಮಾನೋತ್ಸವದ ವರ್ಷವೆಂದು ಆಚರಿಸಲಾಗುತ್ತದೆ.

3 ಖಂಡಗಳು, 6 ದೇಶಗಳು:

ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಂದ್ಯಾವಳಿಗಳು ಮೂರು ವಿಭಿನ್ನ ಖಂಡಗಳ ಆರು ದೇಶಗಳಲ್ಲಿ ನಡೆಯಲಿವೆ. ಫಿಫಾ ವಿಶ್ವಕಪ್​ನ ಶತಮಾನೋತ್ಸವನ್ನು ಅದ್ಧೂರಿಯಾಗಿ ಆಯೋಜಿಸುವ ಸಲುವಾಗಿ 6 ದೇಶಗಳಿಗೆ ಆತಿಥ್ಯದ ಹಕ್ಕನ್ನು ನೀಡಲಾಗಿದೆ. ಅದರಂತೆ ಮುಂದಿನ ವಿಶ್ವಕಪ್​ ಈ ಕೆಳಗಿನ ದೇಶಗಳಲ್ಲಿ ನಡೆಯಲಿವೆ.

  • ಮುಖ್ಯ ಆತಿಥೇಯರು (ಯುರೋಪ್ ಮತ್ತು ಆಫ್ರಿಕಾ): ಟೂರ್ನಿಯ ಬಹುಪಾಲು ಪಂದ್ಯಗಳು ಸ್ಪೇನ್, ಪೋರ್ಚುಗಲ್ ಮತ್ತು ಮೊರಾಕೊ ದೇಶಗಳಲ್ಲಿ ಜಂಟಿಯಾಗಿ ನಡೆಯಲಿವೆ.
  • ಶತಮಾನೋತ್ಸವದ ಪಂದ್ಯಗಳು (ಸೌತ್ ಅಮೆರಿಕಾ): 1930ರ ಮೊದಲ ವಿಶ್ವಕಪ್ ನೆನಪಿಗಾಗಿ, ಟೂರ್ನಿಯ ಮೊದಲ ಮೂರು ಪಂದ್ಯಗಳನ್ನು ಸೌತ್ ಅಮೆರಿಕಾದ ಉರುಗ್ವೆ, ಅರ್ಜೆಂಟೀನಾ ಮತ್ತು ಪರಾಗ್ವೆ ದೇಶಗಳಲ್ಲಿ ಆಡಿಸಲಾಗುತ್ತದೆ. ಏಕೆಂದರೆ ಮೊದಲ ವಿಶ್ವಕಪ್ ಪಂದ್ಯವು ಸೌತ್ ಅಮೆರಿಕಾದ ಉರುಗ್ವೆಯಲ್ಲಿ ನಡೆದಿತ್ತು.

ಅಂದರೆ ಮುಂದಿನ ವಿಶ್ವಕಪ್​ ಯುರೋಪ್ (ಸ್ಪೇನ್, ಪೋರ್ಚುಗಲ್), ಆಫ್ರಿಕಾ (ಮೊರಾಕೊ) ಹಾಗೂ ಸೌತ್ ಅಮೆರಿಕಾ (ಉರುಗ್ವೆ, ಅರ್ಜೆಂಟೀನಾ, ಪರಾಗ್ವೆ) ಖಂಡಗಳಲ್ಲಿ ನಡೆಯಲಿದೆ.

ವಿಶ್ವಕಪ್ 2030 ದಿನಾಂಕ:

ಫಿಫಾ ಪ್ರಕಟಿಸಿರುವ ತಾತ್ಕಾಲಿಕ ದಿನಾಂಕದಂತೆ 2030ರ ವಿಶ್ವಕಪ್​ ಜೂನ್ 8 ರಿಂದ ಜುಲೈ 21 ರವರೆಗೆ ಒಟ್ಟು ಆರು ವಾರಗಳ ಕಾಲ ಜರುಗಲಿದೆ.

  • ಜೂನ್ 8 ಮತ್ತು 9 ರಂದು ಸೌತ್ ಅಮೆರಿಕಾದಲ್ಲಿ ಶತಮಾನೋತ್ಸವದ ಭಾಗವಾಗಿ ವಿಶೇಷ ಉದ್ಘಾಟನಾ ಪಂದ್ಯಗಳು ನಡೆಯಲಿದೆ.
  • ಜೂನ್ 13 ರಿಂದ 14 ರವರೆಗೆ ಪ್ರಮುಖ ಆತಿಥೇಯ ರಾಷ್ಟ್ರಗಳಾದ ಸ್ಪೇನ್, ಪೋರ್ಚುಗಲ್ ಮತ್ತು ಮೊರಾಕೊದಲ್ಲಿ ಅಧಿಕೃತ ಉದ್ಘಾಟನಾ ಸಮಾರಂಭ ಮತ್ತು ಪಂದ್ಯಗಳು ಜರುಗಲಿವೆ.
  • ಜುಲೈ 21 ರಂದು ಫೈನಲ್ ಮ್ಯಾಚ್ ಅನ್ನು ಆಯೋಜಿಸಲು ನಿರ್ಧರಿಸಲಾಗಿದೆ.

48 ತಂಡಗಳು:

ಈ ಬಾರಿಯಂತೆ ಮುಂದಿನ ವಿಶ್ವಕಪ್​ನಲ್ಲೂ 48 ತಂಡಗಳನ್ನೇ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಇದರಲ್ಲಿ 6 ದೇಶಗಳು ಆತಿಥೇಯ ರಾಷ್ಟ್ರಗಳಾಗಿ ನೇರವಾಗಿ ಟೂರ್ನಿಗೆ ಅರ್ಹತೆ ಪಡೆಯಲಿದೆ. ಇನ್ನುಳಿದ 42 ದೇಶಗಳು ಅರ್ಹತಾ ಸುತ್ತಿನ ಪಂದ್ಯಗಳನ್ನಾಡಬೇಕಾಗುತ್ತದೆ.

ಕ್ರೀಡಾಂಗಣಗಳು ಮತ್ತು ಸಿದ್ಧತೆ:

ಸ್ಪೇನ್‌ನ ಪ್ರಸಿದ್ಧ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಕ್ಲಬ್‌ಗಳ ಮೈದಾನಗಳು ಸೇರಿದಂತೆ ಮೊರಾಕೊ ಮತ್ತು ಪೋರ್ಚುಗಲ್‌ನ ಅತ್ಯಾಧುನಿಕ ಕ್ರೀಡಾಂಗಣಗಳನ್ನು ಈ ಪಂದ್ಯಾವಳಿಗೆ ಸಜ್ಜುಗೊಳಿಸಲಾಗುತ್ತಿದೆ. ಪರಿಸರ ಸ್ನೇಹಿ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಫಿಫಾ ತಿಳಿಸಿದೆ.

ಇದನ್ನೂ ಓದಿ: ದಿ ಹಂಡ್ರೆಡ್ ಲೀಗ್​ನಿಂದ ಜೇಕಬ್ ಬೆಥೆಲ್ ಔಟ್

ಒಟ್ಟಾರೆಯಾಗಿ ಹೇಳುವುದಾದರೆ, 2030ರ ಫಿಫಾ ವಿಶ್ವಕಪ್ ಕೇವಲ ಒಂದು ಕ್ರೀಡಾಕೂಟವಾಗಿ ಉಳಿಯದೆ, ಭೌಗೋಳಿಕ ಗಡಿಗಳನ್ನು ಮೀರಿ ಇಡೀ ಜಗತ್ತನ್ನು ಬೆಸೆಯುವ ಮಹಾನ್ ಉತ್ಸವವಾಗಲಿದೆ. ಕಾಲ್ಚೆಂಡಿನ ನೂರು ವರ್ಷಗಳ ಭವ್ಯ ಇತಿಹಾಸಕ್ಕೆ ಗೌರವ ಸಲ್ಲಿಸುತ್ತಾ, ಮೂರು ಖಂಡಗಳ ಮೈದಾನದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗುತ್ತಿರುವ ಈ ‘ಶತಮಾನದ ಮಹಾಸಮರ’ವನ್ನು ಕಣ್ಣುಂಬಿಕೊಳ್ಳಲು ಇನ್ನೂ 4 ವರ್ಷ ಕಾಯಲೇಬೇಕು.

Source link

ಕೆಪಿಎಸ್‌ಸಿ ನೇಮಕಾತಿ ಅಕ್ರಮ: ರಾಜ್ಯ ಸರ್ಕಾರ, ಸಿಬಿಐಗೆ ಕರ್ನಾಟಕ ಹೈಕೋರ್ಟ್ ನೋಟಿಸ್ – Kannada News | KPSC Recruitment Scam: Karnataka High Court Issues Notice to State, CBI on Plea Seeking CBI Probe

ಕರ್ನಾಟಕ ಹೈಕೋರ್ಟ್ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಜುಲೈ 22: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಸಿಬಿಐಗೆ (CBI) ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಅಮಾನತುಗೊಂಡ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಪುತ್ರಿಯರ ಆಯ್ಕೆ ಸೇರಿದಂತೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಜುಲೈ 29ರೊಳಗೆ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ಸೂಚಿಸಿದ್ದಾರೆ. ಈ ನಡುವೆ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಪ್ರಕರಣವನ್ನು ವರ್ಗಾಯಿಸಲು ಮುಂದಾದರೆ, ಅರ್ಜಿದಾರರು ಮತ್ತೆ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅರ್ಜಿದಾರರ ವಾದವೇನು?

ಜುಲೈ 3ರಂದು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ವಿಧಾನದೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಅದು ಕೇವಲ ಮೇಲ್ನೋಟದ ಕ್ರಮವಾಗಿದೆ. ಮೂಲ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಸಾರ್ವಜನಿಕರ ಆಕ್ರೋಶ ತಣಿಸಲು ಸರ್ಕಾರ ಎಸ್‌ಐಟಿ ರಚಿಸುವ ಸಾಧ್ಯತೆಯೂ ಇದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಕೆಪಿಎಸ್​ಸಿ ವಿರುದ್ಧದ ಆರೋಪಗಳೇನು?

ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರು ನೇಮಕಾತಿ ಪ್ರಕ್ರಿಯೆಯಲ್ಲಿ ಹಿತಾಸಕ್ತಿ ಸಂಘರ್ಷ ಉಂಟುಮಾಡುವ ರೀತಿಯಲ್ಲಿ ವರ್ತಿಸಿ, ತಮ್ಮ ಇಬ್ಬರು ಪುತ್ರಿಯರ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅಲ್ಲದೆ, 3ಬಿ ಮೀಸಲಾತಿ ಪಡೆಯಲು ಅಗತ್ಯವಾಗಿರುವ ಆದಾಯ ಪ್ರಮಾಣಪತ್ರದಲ್ಲಿ ಅವರ ವಾರ್ಷಿಕ ಆದಾಯವನ್ನು ಕೇವಲ 40 ಸಾವಿರ ರೂಪಾಯಿ ಎಂದು ತೋರಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಉಲ್ಲೇಖಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 29ಕ್ಕೆ ನಿಗದಿಯಾಗಿದೆ.

ಇದನ್ನೂ ಓದಿ: ಮಗಳ ಸರ್ಕಾರಿ ನೌಕರಿಗಾಗಿ ಸಾಹುಕಾರ್ ಅಕ್ರಮ ಎಸಗಿರೋದು ಅಕ್ಷಮ್ಯ ಅಪರಾಧ; ಕೆಪಿಎಸ್‌ಸಿ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಲು ಯತ್ನಾಳ್ ಆಗ್ರಹ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಸ್ಪತ್ರೆಯಲ್ಲೇ ಸೋನಮ್ ವಾಂಗ್ಚುಕ್ ಭೇಟಿಯಾದ ಜೆಪಿ ನಡ್ಡಾ, ಜಿತೇಂದ್ರ ಸಿಂಗ್ – Kannada News | NEET Protest: JP Nadda and Jitendra Singh Visit Sonam Wangchuk at Medanta Hospital

ನವದೆಹಲಿ, ಜುಲೈ 22: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ನವದೆಹಲಿಯಲ್ಲಿ ಯುವಕರು ನಡೆಸುತ್ತಿರುವ ಪ್ರತಿಭಟನೆ 32 ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ದೆಹಲಿ ಹೈಕೋರ್ಟ್ ಆದೇಶದಂತೆ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಾಗಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್(Sonam Wangchuk) ಅವರ ಆರೋಗ್ಯ ವಿಚಾರಿಸಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಪಿಎಮ್‌ಒ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಮೇದಾಂತ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸಫ್ದರ್ಜಂಗ್‌ನಿಂದ ಮೇದಾಂತ ಆಸ್ಪತ್ರೆಗೆ ವಾಂಗ್ಚುಕ್ ಸ್ಥಳಾಂತರ

ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ ಹಿನ್ನೆಲೆಯಲ್ಲಿ, ಅವರ ಪತ್ನಿ ಗೀತಾಂಜಲಿ ಆಂಗ್ಮೋ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಸೂಚನೆಯ ಮೇರೆಗೆ ವಾಂಗ್ಚುಕ್ ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಿಂದ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ತಕ್ಷಣ ಭಾರಿ ಭದ್ರತೆಯ ನಡುವೆ ರವಾನಿಸಲಾಯಿತು.

ಹಿರಿಯ ವೈದ್ಯೆ ಡಾ. ಸುಶೀಲಾ ಕಟಾರಿಯಾ ಅವರ ಮೇಲ್ವಿಚಾರಣೆಯಲ್ಲಿ ವಾಂಗ್ಚುಕ್ ಅವರಿಗೆ ಮೇದಾಂತದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಹಾಸಿಗೆಯಲ್ಲಿದ್ದರೂ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.

ಇನ್ಮುಂದೆ ಸರ್ಕಾರಿ ಕಚೇರಿಗೆ ಹೋಗಿ ಮಾತುಕತೆ ನಡೆಸಲ್ಲ

ಸೋಮವಾರ ಸಂಸತ್ ಚಲೋ ವೇಳೆ ಪೋಲಿಸ್ ಲಾಠಿಚಾರ್ಜ್ ಮತ್ತು ನೂಕಾಟ ನಡೆದಿದ್ದರೂ, ಮಂಗಳವಾರ 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಮತ್ತೆ ಜಂತರ್ ಮಂತರ್ ತಲುಪಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಮತ್ತಷ್ಟು ಒದಿ: ದೆಹಲಿ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ; ಉಪವಾಸ ಸತ್ಯಾಗ್ರಹ ಮುಂದುವರಿಸಲು ಸೋನಮ್ ವಾಂಗ್ಚುಕ್ ನಿರ್ಧಾರ

ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಾತನಾಡಿ, ‘‘ನಾವು ಇನ್ಮುಂದೆ ಸರ್ಕಾರದ ಸಚಿವರ ನಿವಾಸಕ್ಕೆ ಹೋಗಿ ಯಾವುದೇ ಮಾತುಕತೆ ನಡೆಸುವುದಿಲ್ಲ. ಚರ್ಚೆ ನಡೆಸಲು ಇಚ್ಛಿಸುವ ಯಾರೇ ನಾಯಕರಾಗಿದ್ದರೂ, ಅವರೇ ನಮ್ಮ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ಗೆ ಬರಬೇಕು.” ಎಂದಿದ್ದಾರ5ಎ.

ಬೀದಿಯಿಂದ ಸಂಸತ್ತಿನವರೆಗೆ, ತೀವ್ರಗೊಂಡ ನೀಟ್ ವಿವಾದ

ಒಂದೆಡೆ ಜಂತರ್ ಮಂತರ್‌ನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸಂಸತ್ತಿನಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಸರಣಿ ವಾಗ್ದಾಳಿ ನಡೆಸುತ್ತಿವೆ. ವಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಪರೀಕ್ಷಾ ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವ ಕೇಂದ್ರ ಸರ್ಕಾರ, ವಿರೋಧ ಪಕ್ಷಗಳು ಈ ಸೂಕ್ಷ್ಮ ವಿಷಯವನ್ನು ರಾಜಕೀಯಗೊಳಿಸಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿವೆ ಎಂದು ಪ್ರತ್ಯಾರೋಪ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version