ಮೊದಲ ಡೆಂಗ್ಯೂ ಲಸಿಕೆಗೆ ಭಾರತ ಅನುಮೋದನೆ: ವ್ಯಾಕ್ಸಿನ್ ಪರಿಣಾಮಕಾರಿತ್ವ, ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ – Kannada News | India’s First Dengue Vaccine Approved: Takeda’s QDENGA Gets CDSCO Nod

ದೆಹಲಿ, ಜುಲೈ 20: ಭಾರತದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಜಪಾನ್‌ನ ಔಷಧ ಕಂಪನಿ ಟಕೆಡಾ (Takeda) ಅಭಿವೃದ್ಧಿಪಡಿಸಿರುವ QDENGA ಲಸಿಕೆಗೆ ಅನುಮೋದನೆ ನೀಡಿದೆ. ಇದರೊಂದಿಗೆ ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಡೆಂಗ್ಯೂ ಲಸಿಕೆ ಎಂಬ ಹೆಗ್ಗಳಿಕೆಗೆ QDENGA ಪಾತ್ರವಾಗಿದೆ. ಜಪಾನ್‌ನ ಟಕೆಡಾ ಫಾರ್ಮಾಸ್ಯೂಟಿಕಲ್ಸ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದು ಡೆಂಗ್ಯೂ ವೈರಸ್‌ನ ನಾಲ್ಕೂ ವಿಧಗಳ ವಿರುದ್ಧ ರೋಗನಿರೋಧಕ ಶಕ್ತಿ ಬೆಳೆಸುವಲ್ಲಿ ಸಮರ್ಥವಾಗಿದೆ.

ಈ ಲಸಿಕೆಯ ವಿಶೇಷತೆ ಏನು?

ಈ ಹಿಂದೆ ಲಭ್ಯವಿದ್ದ Dengvaxia ಲಸಿಕೆ ಪಡೆಯುವ ಮೊದಲು ವ್ಯಕ್ತಿಗೆ ಹಿಂದೆ ಡೆಂಗ್ಯೂ ಸೋಂಕಾಗಿದೆಯೇ ಎಂಬುದನ್ನು ರಕ್ತ ಪರೀಕ್ಷೆಯ ಮೂಲಕ ದೃಢಪಡಿಸಬೇಕಾಗುತ್ತಿತ್ತು. ಆದರೆ QDENGAಗೆ ಅಂತಹ ಪರೀಕ್ಷೆಯ ಅಗತ್ಯವಿಲ್ಲ. ಹಿಂದೆ ಡೆಂಗ್ಯೂ ಬಂದಿರಲಿ ಅಥವಾ ಬರದಿರಲಿ, ಎರಡೂ ವರ್ಗದವರಿಗೆ ಈ ಲಸಿಕೆ ನೀಡಬಹುದಾಗಿದೆ. ಇದು ದೊಡ್ಡ ಪ್ರಮಾಣದ ಲಸಿಕಾ ಅಭಿಯಾನಗಳಿಗೆ ಅನುಕೂಲಕರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಡೆಂಗ್ಯೂ ಸೋಂಕು ಹೆಚ್ಚಿರುವ ದೇಶಗಳಲ್ಲಿ, ಸೊಳ್ಳೆ ನಿಯಂತ್ರಣ ಹಾಗೂ ಇತರೆ ಸಾರ್ವಜನಿಕ ಆರೋಗ್ಯ ಕ್ರಮಗಳ ಜೊತೆಗೆ QDENGA ಬಳಕೆಯನ್ನು ಶಿಫಾರಸು ಮಾಡಿದೆ.

ಇದನ್ನೂ ಓದಿ: ಹೊಟ್ಟೆ ಸರಿಯಾಗಿ ಕ್ಲೀನ್ ಆಗದಿದ್ದರೆ ರಾತ್ರಿ ಮಲಗುವ ಮುನ್ನ ಈ ಒಂದು ಅಭ್ಯಾಸ ರೂಢಿಸಿಕೊಂಡು ಮಲಬದ್ಧತೆಗೆ ಗುಡ್‌ಬೈ ಹೇಳಿ!

ಭಾರತಕ್ಕೆ ಈ ಅನುಮೋದನೆ ಏಕೆ ಮಹತ್ವದ್ದು?

ವರದಿಗಳ ಪ್ರಕಾರ, ಜಗತ್ತಿನ ಒಟ್ಟು ಡೆಂಗ್ಯೂ ಸೋಂಕುಗಳಲ್ಲಿ ಸುಮಾರು ಮೂರನೇ ಒಂದು ಭಾಗ ಭಾರತದಲ್ಲೇ ದಾಖಲಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಡೆಂಗ್ಯೂ ಪ್ರಕರಣಗಳು 11 ಪಟ್ಟು ಹೆಚ್ಚಾಗಿದ್ದು, ವಿಶೇಷವಾಗಿ ಮಳೆಗಾಲ ಹಾಗೂ ಮಳೆಗಾಲದ ನಂತರ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಸಂಖ್ಯೆ ಬಗಳ ಹೆಚ್ಚಿದೆ. ಹೀಗಾಗಿ ಈ ಲಸಿಕೆ ಭಾರದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ವರದಾನವಾಗು ನಿರೀಕ್ಷೆ ಇದೆ.

ಯಾರು ಈ ಲಸಿಕೆ ಪಡೆಯಬಹುದು?

ಇತರ ದೇಶಗಳಲ್ಲಿ ಈ ಲಸಿಕೆಯನ್ನು ಮಕ್ಕಳು ಹಾಗೂ ವಯಸ್ಕರಿಗೆ ಅನುಮೋದಿಸಲಾಗಿದೆ. ಆದರೆ ಭಾರತದಲ್ಲಿ ಇನ್ನೂ ಈ ಬಗ್ಗೆ ತೀರ್ಮಾನವಾಗಿಲ್ಲ. ಅಂತಿಮ ಮಾರ್ಗಸೂಚಿಯನ್ನು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮತ್ತು ಜಪಾನ್‌ನ ಔಷಧ ಕಂಪನಿ ಟಕೆಡಾ ಪ್ರಕಟಿಸಬೇಕಿದೆ.

ಲಸಿಕೆಯ ಪರಿಣಾಮಕಾರಿತ್ವ ಎಷ್ಟು?

ಎಂಟು ಡೆಂಗ್ಯೂ ಪೀಡಿತ ದೇಶಗಳಲ್ಲಿ 20,000ಕ್ಕೂ ಹೆಚ್ಚು ಮಕ್ಕಳು ಹಾಗೂ ಹದಿಹರಿಯದವರನ್ನು ಒಳಗೊಂಡ TIDES Phase-III ಅಧ್ಯಯನದಲ್ಲಿ ಲಸಿಕೆಯ ಪರಿನಾಮಕಾರಿತ್ವ ಎಷ್ಟೆಂಬುದು ಬಹಿರಂಗಗೊಂಡಿದೆ. ಡೆಂಗ್ಯೂ ಕಾರಣ ಆಸ್ಪತ್ರೆ ಸೇರುವ ಅಪಾಯವನ್ನು ಶೇ. 84ರಷ್ಟು ಇದು ಕಡಿಮೆ ಮಾಡಿದ್ದು, ಒಟ್ಟಾರೆ ಡೆಂಗ್ಯೂ ಸೋಂಕಿನ ವಿರುದ್ಧ ಸುಮಾರು ಶೇ.61ರಷ್ಟು ರಕ್ಷಣೆ ನೀಡಿರೋ ಬಗ್ಗೆ ಅಂಕಿ-ಅಂಶಗಳು ದೊರೆತಿವೆ.

ಭಾರತದಲ್ಲಿ ಬೆಲೆ ಎಷ್ಟು?

ಭಾರತದಲ್ಲಿ ಇನ್ನೂ ಲಸಿಕೆಯ ಅಧಿಕೃತ ಬೆಲೆ ಪ್ರಕಟಿಸಲಾಗಿಲ್ಲ. ಆದರೆ ಹೈದರಾಬಾದ್‌ನ ಬಯಾಲಾಜಿಕಲ್​​ ಇ ಸಂಸ್ಥೆಯೊಂದಿಗೆ ಟಕೆಡಾ ಉತ್ಪಾದನಾ ಒಪ್ಪಂದ ಮಾಡಿಕೊಂಡಿದ್ದು, ದೇಶದಲ್ಲೇ ವರ್ಷಕ್ಕೆ 5 ಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಯೋಜನೆಯಿದೆ. ಹೀಗಾಗಿ ಕಡಿಮೆ ಬೆಲೆಯಲ್ಲಿಯೇ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸ್ವಾಮಿಯ ಸಾನ್ನಿಧ್ಯಕ್ಕೆ ಕಳಿಸಿಕೊಡುತ್ತೇನೆ: ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು – Kannada News | HD Devegowda talks about Demise Wife Chennamma During final Rites

ಹಾಸನ, (ಜುಲೈ 20): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (HD Devegowda) ಪತ್ನಿ ಚೆನ್ನಮ್ಮ ವಿಧಿವಶರಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂತ್ರಕ್ರಿಯೆ ಆಗಲಿದೆ. ಇದಕ್ಕೂ ಮುನ್ನ ಪತಿ ದೇವೇಗೌಡ ಮಾತನಾಡಿ, ಪತ್ನಿ ಬಗ್ಗೆ ಭಾವುಕ ಮಾತುಳನ್ನಾಡಿದ್ದಾರೆ. ರಂಗನಾಥನ ಸಾನ್ನಿಧ್ಯದಲ್ಲಿ ಸಮಾಧಿ ಮಾಡಲು ಮಕ್ಕಳ ನಿರ್ಧಾರ. ಪಡುವಲಹಿಪ್ಪೆಯಲ್ಲಿ ಅಂತ್ಯಕ್ರಿಯೆ ಮಾಡಬೇಕೆನ್ನುವುದು ಇಚ್ಛೆಯಾಗಿತ್ತು. ಆದರೆ, ನಮ್ಮ ಮಕ್ಕಳ ತೀರ್ಮಾನದಂತೆ ಇಲ್ಲಿ ಅಂತ್ಯಕ್ರಿಯೆ ಮಾಡಲಾಗ್ತಿದೆ. ಈ ಜಮೀನನ್ನು ಕ್ರಯಕ್ಕೆ ಬರೆಸಿಕೊಂಡು ಅಂತ್ಯಕ್ರಿಯೆ ಮಾಡಲಾಗ್ತಿದೆ. ರಂಗನಾಥನ ಆಶೀರ್ವಾದದಿಂದ ನಾನು ಪ್ರಧಾನಿ ಆಗುವಂತಾಯ್ತು. ನಾನು ಪ್ರಧಾನಿಯಾಗಲು ಪತ್ನಿಯೂ ಕಾರಣವೆಂದು ಭಾವುಕರಾದರು.

ನಾನು ಕಣ್ಣೀರು ಹಾಕಲ್ಲ ಮಾತನಾಡುತ್ತೇನೆ, ನನಗೆ ಶಕ್ತಿ ತುಂಬಿದ್ದೇ ಪತ್ನಿ. ನನ್ನ ಸ್ನೇಹಿತರಾದ ಡಾ.ಕೃಷ್ಣ, ಹೆಣ್ಣುಮಕ್ಕಳು, ಅಳಿಯಂದಿರು ಇದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಬೇಕೆಂದು ತೀರ್ಮಾನ ಮಾಡಿದರು. ಮಳೆ ಬರುತ್ತೆ ಅಂದುಕೊಂಡಿದ್ದರು, ಎಳ್ಳಷ್ಟು ತೊಂದರೆ ಆಗಲ್ಲ ಎಂದಿದ್ದೆ. ನನ್ನ ರಾಜಕೀಯ ಬೆಳವಣಿಗೆಗೆ ಶಕ್ತಿಕೊಟ್ಟವನು ರಂಗನಾಥಸ್ವಾಮಿ. ಒಂದೆಡೆ ರಂಗನಾಥ, ಮತ್ತೊಂದೆಡೆ ಕುಲದೇವರು ದೇವೇಶ್ವರನ ಆಶೀರ್ವಾದ. ನನ್ನ ಬೆಳವಣಿಗೆಗೆ ನಮ್ಮ ಕುಟುಂಬದ ಎಲ್ಲರೂ ಕಾರಣ. ನನ್ನ ಪತ್ನಿ ಚೆನ್ನಮ್ಮ ಅನ್ನಪೂರ್ಣೆ ಎಂದು ಉತ್ಪ್ರೇಕ್ಷೆಯಿಂದ ಹೇಳಲ್ಲ. ಅವರನ್ನು ಸ್ವಾಮಿಯ ಸಾನ್ನಿಧ್ಯಕ್ಕೆ ಕಳಿಸಿಕೊಡುತ್ತೇನೆ. ನನ್ನ ಬೆಳವಣಿಗೆಗೆ ಪ್ರತಿ ಹಂತದಲ್ಲೂ ಪತ್ನಿ ಚೆನ್ನಮ್ಮ ನೆರವಾದರು. ಇದನ್ನು ವಿಶ್ಲೇಷಣೆ ಮಾಡುವುದು ಕಷ್ಟ ಎಂದು ಗದ್ಗದಿತರಾದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಚ್ಚಗಿನ ನೀರಿಗೆ ಕರಿಮೆಣಸು, ಅರಿಶಿನ ಸೇರಿಸಿ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ! – Kannada News | Turmeric Water Every Morning: Benefits, Side Effects & Best Time to Drink

ಆಯುರ್ವೇದದಲ್ಲಿ ಅರಿಶಿನಕ್ಕೆ ವಿಶೇಷ ಸ್ಥಾನವಿದೆ. ಅಡುಗೆ ಮನೆಯಲ್ಲೇ ಸಿಗುವ ಈ ಮಸಾಲೆ ಕೇವಲ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲ, ಆರೋಗ್ಯಕ್ಕೂ ಹಲವು ರೀತಿಯಲ್ಲಿ ನೆರವಾಗುತ್ತದೆ. ವಿಶೇಷವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ಅರಿಶಿನ ಮತ್ತು ಚಿಟಿಕೆ ಕರಿಮೆಣಸಿನ ಪುಡಿ ಸೇರಿಸಿ ಕುಡಿಯುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅರಿಶಿನದಲ್ಲಿರುವ ಕರ್ಕುಮಿನ್ (Curcumin) ಎಂಬ ನೈಸರ್ಗಿಕ ಸಂಯುಕ್ತವು ಉರಿಯೂತ ನಿವಾರಕ (Anti-inflammatory), ಆ್ಯಂಟಿಆಕ್ಸಿಡೆಂಟ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದರೆ ಕರ್ಕುಮಿನ್ ದೇಹದಲ್ಲಿ ಸುಲಭವಾಗಿ ಹೀರಿಕೊಳ್ಳುವುದಿಲ್ಲ. ಇದೇ ಕಾರಣಕ್ಕೆ ಕರಿಮೆಣಸಿನಲ್ಲಿರುವ ಪೈಪರಿನ್ (Piperine) ಇದರ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡಬಹುದು ಎಂದು ಹಲವು ಅಧ್ಯಯನಗಳು ಸೂಚಿಸಿವೆ. ಹಾಗಾದರೆ ಇದನ್ನು ಯಾವ ಸಮಯದಲ್ಲಿ ಕುಡಿಯಬೇಕು, ಇದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ಅರಿಶಿನ ನೀರು ಕುಡಿಯುವುದರಿಂದ ಸಿಗಬಹುದಾದ ಆರೋಗ್ಯ ಪ್ರಯೋಜನಗಳು:

ಜೀರ್ಣಕ್ರಿಯೆ ಸುಧಾರಿಸಬಹುದು: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿರುವ ಅರಿಶಿನ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಚುರುಕಾಗಿ ಕಾರ್ಯ ನಿರ್ವಹಿಸಲು ಸಹಾಯವಾಗಬಹುದು. ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಕಡಿಮೆಯಾಗಲು ನೆರವಾಗಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ: ಅರಿಶಿನದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸಬಹುದು. ಮಳೆಗಾಲ ಹಾಗೂ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಕೆಲವು ಸೋಂಕುಗಳಿಂದ ರಕ್ಷಣೆ ಪಡೆಯಲು ಸಹಾಯಕವಾಗಬಹುದು.

ಕೀಲು ನೋವು ಮತ್ತು ಉರಿಯೂತ ಕಡಿಮೆ ಮಾಡಲು ನೆರವಾಗುತ್ತದೆ: ಕರ್ಕುಮಿನ್ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಆದ್ದರಿಂದ ಸಂಧಿವಾತ (Arthritis), ಕೀಲು ನೋವು ಅಥವಾ ಸ್ನಾಯು ಉರಿಯೂತ ಇರುವವರಿಗೆ ವೈದ್ಯರ ಸಲಹೆಯೊಂದಿಗೆ ಇದನ್ನು ಬಳಸಬಹುದು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಕೆಲವು ಅಧ್ಯಯನಗಳ ಪ್ರಕಾರ ಕರ್ಕುಮಿನ್ ರಕ್ತನಾಳಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡಬಹುದು. ಜೊತೆಗೆ ಸಮತೋಲನ ಆಹಾರ ಹಾಗೂ ನಿಯಮಿತ ವ್ಯಾಯಾಮದೊಂದಿಗೆ ಇದನ್ನು ಸೇವಿಸಿದರೆ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಬಹುದು.

ಚರ್ಮದ ಕಾಂತಿ ಹೆಚ್ಚಿಸಲು ನೆರವಾಗಬಹುದು: ಅರಿಶಿನದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮದ ಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಇದರಿಂದ ಚರ್ಮ ಆರೋಗ್ಯಕರವಾಗಿ ಹಾಗೂ ಕಾಂತಿಯುತವಾಗಿ ಕಾಣಲು ನೆರವಾಗಬಹುದು.

ಮೆದುಳಿನ ಆರೋಗ್ಯ ಕಾಪಾಡಲು ಸಹಕಾರಿ: ಕೆಲವು ಸಂಶೋಧನೆಗಳು ಕರ್ಕುಮಿನ್ ಮೆದುಳಿನ ಕೋಶಗಳ ಕಾರ್ಯಕ್ಷಮತೆಯನ್ನು ಬೆಂಬಲಿಸಬಹುದು ಎಂದು ಸೂಚಿಸುತ್ತವೆ. ಆದರೆ ಅಲ್ಝೈಮರ್ಸ್ ಅಥವಾ ಮರೆವಿನ ಕಾಯಿಲೆ ತಡೆಯುತ್ತದೆ ಎಂಬುದಕ್ಕೆ ಇನ್ನೂ ಸಾಕಷ್ಟು ವೈಜ್ಞಾನಿಕ ಸಾಕ್ಷ್ಯಗಳ ಅಗತ್ಯವಿದೆ.

ಇದನ್ನು ಯಾವ ಸಮಯದಲ್ಲಿ ಕುಡಿಯುವುದು ಉತ್ತಮ?

ತಜ್ಞರ ಅಭಿಪ್ರಾಯದಂತೆ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಉಪಾಹಾರಕ್ಕೆ 20–30 ನಿಮಿಷ ಮೊದಲು ಕುಡಿಯುವುದು ಉತ್ತಮ. ಆದರೆ ಅಲ್ಸರ್ ಅಥವಾ ಅತಿಯಾದ ಆಸಿಡ್ ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು.

ಇನ್ನಷ್ಟು ಆರೋಗ್ಯಕರ ಸಲಹೆಗಳು

  • ಅರಿಶಿನದೊಂದಿಗೆ ಆರೋಗ್ಯಕರ ಆಹಾರವೂ ಮುಖ್ಯ.
  • ದಿನವೂ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ.
  • ಸಾಕಷ್ಟು ನೀರು ಕುಡಿಯಿರಿ.
  • ಅರಿಶಿನ ನೀರನ್ನು ಮಾತ್ರ ಅವಲಂಬಿಸಿ ಯಾವುದೇ ರೋಗಕ್ಕೆ ಚಿಕಿತ್ಸೆ ಪಡೆಯಬೇಡಿ.
  • ಇದು ಆರೋಗ್ಯಕರ ಜೀವನಶೈಲಿಯ ಒಂದು ಭಾಗವಾಗಿರಬೇಕು.

ಇದನ್ನೂ ಓದಿ: ಹೊಟ್ಟೆ ಸರಿಯಾಗಿ ಕ್ಲೀನ್ ಆಗದಿದ್ದರೆ ರಾತ್ರಿ ಮಲಗುವ ಮುನ್ನ ಈ ಒಂದು ಅಭ್ಯಾಸ ರೂಢಿಸಿಕೊಂಡು ಮಲಬದ್ಧತೆಗೆ ಗುಡ್‌ಬೈ ಹೇಳಿ

ಯಾರು ಎಚ್ಚರಿಕೆಯಿಂದ ಇರಬೇಕು?

  • ಪಿತ್ತಕೋಶದಲ್ಲಿ ಕಲ್ಲಿರುವವರು
  • ರಕ್ತ ತೆಳುವಾಗಿಸುವ ಔಷಧ ಸೇವಿಸುವವರು
  • ಗರ್ಭಿಣಿಯರು
  • ಅಲ್ಸರ್ ಇರುವವರು
  • ಶಸ್ತ್ರಚಿಕಿತ್ಸೆಗೆ ಸಿದ್ಧರಾಗಿರುವವರು

ಅರಿಶಿನವನ್ನು ಅತಿಯಾಗಿ ಸೇವಿಸಿದರೆ ಏನಾಗಬಹುದು?

  • ಹೊಟ್ಟೆನೋವು
  • ಅಜೀರ್ಣ
  • ಆಸಿಡ್ ಸಮಸ್ಯೆ
  • ವಾಂತಿ
  • ಅತಿಸಾರ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.

ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ಎರಡೂ ಅರಿಶಿನದಲ್ಲಿರುವ ಕರ್ಕುಮಿನ್ ಆರೋಗ್ಯಕ್ಕೆ ಉಪಯುಕ್ತವಾಗಬಹುದು ಎಂದು ಒಪ್ಪಿಕೊಂಡಿದ್ದರೂ, ಇದು ಯಾವುದೇ ರೋಗಕ್ಕೆ ಶಾಶ್ವತ ಚಿಕಿತ್ಸೆ ಅಲ್ಲ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಹಾಗೂ ವೈದ್ಯರ ಸಲಹೆಯೊಂದಿಗೆ ಮಾತ್ರ ಉತ್ತಮ ಆರೋಗ್ಯ ಸಾಧ್ಯ.

ಗಮನಿಸಿ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ದೀರ್ಘಕಾಲದ ಕಾಯಿಲೆ, ಔಷಧೋಪಚಾರ ಅಥವಾ ವಿಶೇಷ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆಯ ಮೇರೆಗೆ ಮಾತ್ರ ಅರಿಶಿನ ನೀರನ್ನು ನಿಯಮಿತವಾಗಿ ಸೇವಿಸಬೇಕು. ಯಾವುದೇ ಮನೆಮದ್ದು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರ ಸಚಿವ ಜೆ.ಪಿ. ನಡ್ಡಾಗೆ 3 ಬೇಡಿಕೆಗಳನ್ನು ಸಲ್ಲಿಸಿದ ಸಿಜೆಪಿ ನಾಯಕರು; ರಾಜೀನಾಮೆ ಕೊಡ್ತಾರಾ ಧರ್ಮೇಂದ್ರ ಪ್ರಧಾನ್? – Kannada News | CJP Leaders Meet Union Health Minister JP Nadda Submitted 3 Demands Letter details here

ನವದೆಹಲಿ, ಜುಲೈ 20: ಸಂಸತ್ ಭವನದಲ್ಲಿ ಇಂದಿನಿಂದ ಮುಂಗಾರು ಅಧಿವೇಶನ (Parliament Monsoon Session) ಶುರುವಾಗಿದೆ. ಇದೇ ದಿನ ದೆಹಲಿಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು (NEET UG Paper Leak) ಖಂಡಿಸಿ ಸಿಜೆಪಿ ನೇತೃತ್ವದಲ್ಲಿ ಚಲೋ ಸಂಸದ್ (Chalo Sansad) ಎಂಬ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಸಾವಿರಾರು ಯುವಕ-ಯುವತಿಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಜಂತರ್​ಮಂತರ್​​ನಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿದೆ. ಈ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಒಂದೆಡೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮೂರೂವರೆ ಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದ್ದಾರೆ. ಇನ್ನೊಂದೆಡೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಾಯಕರು ತಮ್ಮ ಬೇಡಿಕೆಗಳ ಪತ್ರವನ್ನು ಸಲ್ಲಿಸಿದ್ದಾರೆ.

ಕೊನೆಗೂ ಪ್ರತಿಭಟನಾಕಾರರ ಜೊತೆ ಮಾತುಕತೆಗೆ ಒಪ್ಪಿರುವ ಕೇಂದ್ರ ಸರ್ಕಾರ ಸಿಜೆಪಿ ವಕ್ತಾರರು ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿದೆ. ಮತ್ತೊಂದೆಡೆ, ನೀಟ್ ಪರೀಕ್ಷೆ ಹಗರಣದ ಮಾನಸಿಕ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ ನೀಟ್ ವಿದ್ಯಾರ್ಥಿಯೊಬ್ಬರ ತಂದೆಯ ವಿಶೇಷ ವಿನಂತಿಯ ಮೇರೆಗೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ.

ಇದನ್ನೂ ಓದಿ: ಸಂಸತ್ ಮುಂಗಾರು ಅಧಿವೇಶನ: ನೀಟ್, ರಾಮಮಂದಿರ ಹಗರಣಗಳ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು, ಉಭಯ ಸದನಗಳಲ್ಲಿ ತೀವ್ರ ಗದ್ದಲ

ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ ನಂತರ ಜುಲೈ 18ರಿಂದ ಅಭಿಜೀತ್ ಉಪವಾಸ ಆರಂಭಿಸಿದ್ದರು. ವಾಂಗ್ಚುಕ್ ಅವರ ಮನವಿ ಮತ್ತು ಮೃತ ವಿದ್ಯಾರ್ಥಿಯ ತಂದೆಯ ಮಧ್ಯಸ್ಥಿಕೆಯ ನಂತರ ಅವರು ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ. ಆದರೆ, ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿಜೆಪಿಯ 3 ಬೇಡಿಕೆಗಳೇನು?:

ಸಿಜೆಪಿ (CJP) ವಕ್ತಾರರಾದ ಸೌರವ್ ದಾಸ್ ಮತ್ತು ಮತ್ತೊಬ್ಬ ವಕ್ತಾರರಾದ ಅಶುತೋಷ್ ರಂಕಾ ಅವರು ಸಚಿವ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಸುಮಾರು 10 ನಿಮಿಷಗಳ ಕಾಲ ಭೇಟಿಯಾಗಿ ಬೇಡಿಕೆಗಳ ಪತ್ರವನ್ನು ಹಸ್ತಾಂತರಿಸಿದ್ದಾರೆ. ಸಿಜೆಪಿಯ 3 ಪ್ರಮುಖ ಬೇಡಿಕೆಗಳೆಂದರೆ,

  • ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
  • ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರಿಗೆ ಆಸ್ಪತ್ರೆಯಿಂದ ಜಂತರ್ ಮಂತರ್​ನಲ್ಲಿ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿಗೆ ಆಗಮಿಸಲು ಅನುಮತಿ ನೀಡಬೇಕು.
  • ನೀಟ್ ಪರೀಕ್ಷೆ ಹಗರಣ ಹಾಗೂ ಮಾನಸಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು.

ಜೆಪಿ ನಡ್ಡಾ ಹೇಳಿದ್ದೇನು?:

ಪ್ರತಿಭಟನಾಕಾರರು ಮಾತುಕತೆಗೆ ಮುಂದಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಸಿಜೆಪಿ (CJP) ನಾಯಕರ ನಡುವಿನ ಸಭೆಯು ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ನಡೆದಿದೆ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಇಂದು ಬೆಳಿಗ್ಗೆಯಿಂದಲೇ ಆರಂಭವಾದ ಚರ್ಚೆಯು ಸತತ ಹಲವು ಗಂಟೆಗಳ ಕಾಲ ಮುಂದುವರಿದಿತ್ತು. ಪ್ರತಿಭಟನಾಕಾರರ ಕಡೆಯಿಂದಲೇ ಇಂದು ಬೆಳಿಗ್ಗೆ ಮಾತುಕತೆಗಾಗಿ ಮೊದಲ ಪ್ರಸ್ತಾವನೆ ಬಂದಿತ್ತು. ಇಂದು ಬೆಳಿಗ್ಗೆ 11.50ಕ್ಕೆ ಆರಂಭಿಕ ಮೌಖಿಕ ಚರ್ಚೆಯೊಂದಿಗೆ ಮಾತುಕತೆ ಶುರುವಾಯಿತು. ನಂತರ ಪ್ರತಿಭಟನಾಕಾರರ ನಿಯೋಗದೊಂದಿಗೆ ಸುದೀರ್ಘ ಸಭೆ ನಡೆಯಿತು. ಇಂದು ಸಂಜೆ 4 ಗಂಟೆಗೆ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನೊಳಗೊಂಡ ಅಧಿಕೃತ ಲಿಖಿತ ಮನವಿ ಪತ್ರವನ್ನು ನನಗೆ ನೀಡಿದ್ದಾರೆ.” ಎಂದು ನಡ್ಡಾ ಹೇಳಿದ್ದಾರೆ.

ಇದನ್ನೂ ಓದಿ: ಭಾರತವನ್ನು ಅಸ್ಥಿರಗೊಳಿಸುವ ಶಕ್ತಿಗಳ ಬಿ-ಟೀಮ್; ಸಿಜೆಪಿ ವಿರುದ್ಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಸಾವಿರಾರು ವಿದ್ಯಾರ್ಥಿಗಳು, ಯುವ ಸಂಘಟನೆಗಳು ಮತ್ತು ಬೆಂಬಲಿಗರು ಜಂತರ್ ಮಂತರ್‌ನಲ್ಲಿ ಒಟ್ಟಾಗಿ ಸೇರಿ ಸಂಸತ್ತಿನತ್ತ ‘ಚಲೋ ಸಂಸದ್’ ಮೆರವಣಿಗೆ ನಡೆಸಿದ್ದರಿಂದ ಇಡೀ ದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಏನಿದು ಕಾಕ್ರೋಚ್ ಜನತಾ ಪಾರ್ಟಿ (CJP)?:

ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಒಂದು ರಾಜಕೀಯ ವ್ಯಂಗ್ಯಚಿತ್ರ ಅಥವಾ ವಿಡಂಬನೆಯಾಗಿ ಸೃಷ್ಟಿಯಾಗಿದ್ದ ಈ ಗುಂಪನ್ನು ಬೋಸ್ಟನ್ ವಿಶ್ವವಿದ್ಯಾಲಯದ ಪಬ್ಲಿಕ್ ರಿಲೇಶನ್ಸ್ ಪದವೀಧರರಾದ ಅಭಿಜೀತ್ ದಿಪ್ಕೆ ಅವರು ಸ್ಥಾಪಿಸಿದ್ದಾರೆ. ಇವರು ಈ ಹಿಂದೆ ಆಮ್ ಆದ್ಮಿ ಪಾರ್ಟಿಯ (AAP) ಸೋಷಿಯಲ್ ಮೀಡಿಯಾ ತಂಡದಲ್ಲೂ ಕೆಲಸ ಮಾಡಿದ್ದರು ಎಂಬುದು ಗಮನಾರ್ಹ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:31 pm, Mon, 20 July 26

Source link

ರೋಹಿತ್- ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ? ಇಲ್ಲಿದೆ ಏಕದಿನ ಸರಣಿಗಳ ವೇಳಾಪಟ್ಟಿ – Kannada News | Team India’s ODI Future: Rohit Kohli’s Key Role and Next Series vs West Indies, NZ

ಟೀಂ ಇಂಡಿಯಾದ (Team India) ಇಂಗ್ಲೆಂಡ್ ಪ್ರವಾಸ ಅಂತ್ಯಗೊಂಡಿದೆ. ಉಭಯ ತಂಡಗಳ ನಡುವೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆತಿಥೇಯ ಇಂಗ್ಲೆಂಡ್‌ 2-1 ಅಂತರದಿಂದ ಗೆದ್ದುಕೊಂಡಿದೆ. ಟೀಂ ಇಂಡಿಯಾ ಈ ಸರಣಿ ಸೋತರೂ ತಂಡದ ಇಬ್ಬರು ಅನುಭವಿ ಬ್ಯಾಟ್ಸ್‌ಮನ್​ಗಳಾದ ರೋಹಿತ್ ಶರ್ಮಾ (Rohit Sharma ) ಮತ್ತು ವಿರಾಟ್ ಕೊಹ್ಲಿ (Virat Kohli) ಅತ್ಯುತ್ತಮ ಪ್ರದರ್ಶನ ನೀಡಿದ್ದು ಅಭಿಮಾನಿಗಳಿಗೆ ಸಮಾಧಾನ ತಂದುಕೊಟ್ಟಿತು. ರೋಹಿತ್ ಶರ್ಮಾ 110 ಎಸೆತಗಳಲ್ಲಿ 138 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಕೂಡ 60 ಎಸೆತಗಳಲ್ಲಿ 74 ರನ್​ಗಳ ಇನ್ನಿಂಗ್ಸ್ ಆಡಿದರು. ಆದಾಗ್ಯೂ, ತಂಡಕ್ಕೆ ಗೆಲುವು ಧಕ್ಕಲಿಲ್ಲ. ಈ ಸರಣಿಯ ಅಂತ್ಯದ ನಂತರ, ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಪ್ರಶ್ನೆ ಇದೆ. ಅದೆನೆಂದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೆ ನೀಲಿ ಜೆರ್ಸಿಯಲ್ಲಿ ಯಾವಾಗ ಕಾಣಿಸಿಕೊಳ್ಳುತ್ತಾರೆ?

ಮುಂದಿನ ಏಕದಿನ ಸರಣಿ ಯಾವಾಗ?

ರೋಹಿತ್ ಮತ್ತು ಕೊಹ್ಲಿ ಈಗ ಟೀಂ ಇಂಡಿಯಾ ಪರ ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಏಕೆಂದರೆ ಇಬ್ಬರೂ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಹೀಗಾಗಿ ಇವರಿಬ್ಬರನ್ನು ನೋಡಬೇಕೆಂದರೆ ತಂಡದ ಏಕದಿನ ಸರಣಿವರೆಗೂ ಅಭಿಮಾನಿಗಳು ಕಾಯಬೇಕಾಗುತ್ತದೆ. ಆದ್ದರಿಂದ ಇವರಿಬ್ಬರನ್ನು ಮೈದಾನದಲ್ಲಿ ನೋಡಬೇಕೆಂದರೆ ಅಭಿಮಾನಿಗಳು ಇನ್ನು ಎರಡು ತಿಂಗಳು ಕಾಯಬೇಕಾಗುತ್ತದೆ. ಭಾರತ ತಂಡ ಸೆಪ್ಟೆಂಬರ್‌ನಲ್ಲಿ ತನ್ನ ಮುಂದಿನ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ತಂಡವನ್ನು ತನ್ನ ತವರಿನಲ್ಲಿ ಎದುರಿಸಲಿದೆ. ಈ ಸರಣಿಯು ಸೆಪ್ಟೆಂಬರ್ 27 ರಂದು ಪ್ರಾರಂಭವಾಗಿ ಅಕ್ಟೋಬರ್ 3 ರವರೆಗೆ ನಡೆಯಲಿದ್ದು, ಒಟ್ಟು ಮೂರು ಏಕದಿನ ಪಂದ್ಯಗಳು ನಡೆಯಲಿವೆ.

ಏಕದಿನ ಸರಣಿ ವೇಳಾಪಟ್ಟಿ

  • ಮೊದಲ ಏಕದಿನ ಪಂದ್ಯ: ಸೆಪ್ಟೆಂಬರ್ 27 (ತಿರುವನಂತಪುರಂ)
  • ಎರಡನೇ ಏಕದಿನ ಪಂದ್ಯ: ಸೆಪ್ಟೆಂಬರ್ 30 (ಗುವಾಹಟಿ)
  • ಮೂರನೇ ಏಕದಿನ ಪಂದ್ಯ: ಅಕ್ಟೋಬರ್ 3 (ನ್ಯೂ ಚಂಡೀಗಢ)

IND vs ENG: ಲಾರ್ಡ್ಸ್‌ನಲ್ಲಿ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ರೋಹಿತ್

ಭಾರತದ ನ್ಯೂಜಿಲೆಂಡ್ ಪ್ರವಾಸ

ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಏಕದಿನ ಸರಣಿ ಮುಗಿದ ಬಳಿಕ ಭಾರತ ತಂಡವು ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಟೀಂ ಇಂಡಿಯಾ ಕಿವೀಸ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. 2027 ರ ಐಸಿಸಿ ವಿಶ್ವಕಪ್‌ಗೆ ಮುಂಚಿತವಾಗಿ ಈ ಸರಣಿ ರೋಹಿತ್ ಮತ್ತು ವಿರಾಟ್ ಕೊಹ್ಲಿಗೆ ನಿರ್ಣಾಯಕವಾಗಿರುತ್ತದೆ. ನಂತರ, ಡಿಸೆಂಬರ್‌ನಲ್ಲಿ, ಭಾರತ ಮತ್ತೊಮ್ಮೆ ಶ್ರೀಲಂಕಾವನ್ನು ತವರು ಸರಣಿಯಲ್ಲಿ ಆತಿಥ್ಯ ವಹಿಸಲಿದೆ. ಈ ಅವಧಿಯಲ್ಲಿ, ಎರಡೂ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೀತಿಯ ಚುಂಬನ: ಪುತ್ರ ರೇವಣ್ಣರಿಂದ ತಾಯಿಗೆ ಅಂತಿನ ನಮನ – Kannada News | HD Revanna Gives Last Kiss To His Mother Chennamma, watch video

ಹಾಸನ, (ಜುಲೈ 20): ಮಾಜಿ ಪ್ರಧಾನಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಚೆನ್ನಮ್ಮನವರ ಅಂತ್ಯಕ್ರಿಯೆ ನಡೆದಿದ್ದು, ಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಸಚಿವರು, ಶಾಸಕರು ಸೇರಿದಂತೆ ಸ್ವಾಮೀಜಿಗಳು ಚೆನ್ನಮ್ಮರಿಗೆ ಪುಷ್ಪ ನಮನ ಸಲ್ಲಿಸಿದರು. ಇನ್ನು ಪುತ್ರ ಹೆಚ್​​​​​ಡಿ ರೇವಣ್ಣ ಅವರು ಸಹ ಪ್ರೀತಿಯ ತಾಯಿಯ ಕೆನ್ನೆಗೆ ಅಂತಿಮ ಮುತ್ತಿಟ್ಟು ಕಣ್ಣೀರಿಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧ್ರುವ್ ವಿಕ್ರಮ್ ಜತೆ ನಟಿ ಅನುಪಮಾ ಪರಮೇಶ್ವರನ್ ಬ್ರೇಕಪ್‌? ವೈರಲ್ ಆಯ್ತು ಹೊಸ ಪೋಸ್ಟ್ – Kannada News | Anupama Parameswaran Dhruv Vikram Breakup rumours viral Instagram posts

ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಮತ್ತು ತಮಿಳು ನಟ ಧ್ರುವ್ ವಿಕ್ರಮ್ (Dhruv Vikram) ನಡುವಿನ ಪ್ರೀತಿ ಹಾಗೂ ಬ್ರೇಕಪ್ ವದಂತಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ. ಕಳೆದ ಕೆಲವು ತಿಂಗಳುಗಳಿಂದ ಇನ್‌ಸ್ಟಾಗ್ರಾಮ್‌ನಿಂದ ದೂರವಿದ್ದ ಅನುಪಮಾ, ಈಗ ಹಂಚಿಕೊಂಡಿರುವ ಸಾಲು ಸಾಲು ಪೋಸ್ಟ್‌ಗಳು ಇಬ್ಬರ ನಡುವಿನ ಬ್ರೇಕಪ್‌ (Anupama Parameswaran Breakup) ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.

ಕ್ಯಾಪ್ಷನ್‌ನಲ್ಲಿ ಅಡಗಿದೆ ದೊಡ್ಡ ಸುಳಿವು

ತಮ್ಮ ಪೋಸ್ಟ್ ಒಂದರಲ್ಲಿ ಅನುಪಮಾ ಕ್ಯಾಪ್ಷನ್ ನೀಡಿದ್ದು ಗಮನ ಸೆಳೆದಿದೆ. ‘ಫೋಟೋಗಳನ್ನು ಶೇರ್ ಮಾಡದೇ ಇರುವುದಕ್ಕೆ ಕ್ಷಮಿಸಿ. ಆದರೆ ಇನ್ನೊಬ್ಬರ ಅನುಮತಿಗಾಗಿ, ಹಾಡಿನ ಆಯ್ಕೆಗಾಗಿ ಅಥವಾ ಮತ್ತೊಬ್ಬರು ಬರೆದುಕೊಡುವ ಕ್ಯಾಪ್ಷನ್‌ಗಾಗಿ ಕಾಯುವ ಅಗತ್ಯವಿಲ್ಲದಿದ್ದಾಗ ಪೋಸ್ಟ್ ಮಾಡುವುದು ತುಂಬಾ ಖುಷಿ ಕೊಡುತ್ತದೆ’ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ‘ಕೆಲವೊಮ್ಮೆ ನಮ್ಮ ಶಾಂತಿಗಾಗಿ ಮುಚ್ಚಿಹೋದ ದಾರಿಗಳನ್ನು ಬಿಟ್ಟು ಮುಂದೆ ಸಾಗಬೇಕಾಗುತ್ತದೆ. ಇಂದು ನನಗೆ ಆ ಶಾಂತಿ ಸಿಕ್ಕಿದೆ’ ಎಂದು ಬರೆದಿದ್ದಾರೆ.

ಇನ್ಮುಂದೆ ಯಾರ ಅನುಮತಿಯೂ ಬೇಕಾಗಿಲ್ಲ

ಅಷ್ಟಕ್ಕೇ ನಿಲ್ಲದ ಅನುಪಮಾ ಮತ್ತೊಂದು ಪೋಸ್ಟ್‌ನಲ್ಲಿ ಇನ್ನಷ್ಟು ವೈಯಕ್ತಿಕವಾಗಿ ಬರೆದುಕೊಂಡಿದ್ದು, ‘ಇಂದಿನಿಂದ ನಾನು ನನ್ನ ಧ್ವನಿಯನ್ನು, ನನ್ನ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಇನ್ಮುಂದೆ ಯಾವುದೇ ಅನುಮತಿಗಳು ಬೇಕಿಲ್ಲ, ಯಾವುದೇ ಭಯವಿಲ್ಲ. ನನ್ನನ್ನು ನಾನು ಹುಡುಕಿಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದೇನೆ. ತುಂಬಾ ದಿನಗಳಿಂದ ನಾನು ಹೇಳಲು ಬಯಸಿದ್ದ, ಆದರೆ ಹೇಳಲು ನನಗೆ ಅನುಮತಿ ಇಲ್ಲದ ಒಂದು ಮಾತನ್ನು ಇಂದು ಹೇಳುತ್ತಿದ್ದೇನೆ. ನಾನು ನಿಮ್ಮನ್ನೆಲ್ಲ ಪ್ರೀತಿಸುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಅನುಪಮಾ ಪರಮೇಶ್ವರನ್​​ಗೆ ಕಿರುಕುಳ ನೀಡಿದ 20 ವರ್ಷದ ಹುಡುಗಿ; ಕೇಸ್ ಜಡಿದ ನಟಿ

‘ನನ್ನನ್ನು ನಂಬಿದ ಮತ್ತು ನನ್ನ ಕಷ್ಟದ ಸಮಯದಲ್ಲಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನನ್ನನ್ನು ನನಗೇ ಮರಳಿ ತಂದುಕೊಟ್ಟ ಯೂನಿವರ್ಸ್​ಗೆ ಧನ್ಯವಾದಗಳು. ಇದು ನನ್ನ ಹೀಲಿಂಗ್ ಹಾಗೂ ಸ್ವಾತಂತ್ರ್ಯದ ಸಮಯ’ ಎಂದು ಅನುಪಮಾ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು, ಅನುಪಮಾ ಅವರು ಧ್ರುವ್ ವಿಕ್ರಮ್ ಅವರಿಂದ ದೂರಾಗಿ, ತಮ್ಮ ಸ್ವತಂತ್ರ ಜೀವನವನ್ನು ಸಂಭ್ರಮಿಸುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಲವ್ ರಹಸ್ಯ ಬಯಲಾಗಿದ್ದು ಹೇಗೆ?

2025ರ ಆರಂಭದಲ್ಲಿ ಮಾರಿ ಸೆಲ್ವರಾಜ್ ನಿರ್ದೇಶನದ ‘ಬೈಸನ್’ ಸಿನಿಮಾದ ಶೂಟಿಂಗ್ ಸಮಯದಲ್ಲಿ ಧ್ರುವ್ ಮತ್ತು ಅನುಪಮಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿ ಹಬ್ಬಿತ್ತು. ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಇಬ್ಬರ ನಡುವಿನ ಕೆಮಿಸ್ಟ್ರಿ ಗಮನ ಸೆಳೆದಿತ್ತು. ವೇದಿಕೆಯ ಮೇಲೆ ಧ್ರುವ್ ಹುಟ್ಟುಹಬ್ಬದ ಶುಭ ಕೋರಿದಾಗ ಅನುಪಮಾ ನಾಚಿ ನೀರಾಗಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಿಂದ ಇಬ್ಬರೂ ಪರಸ್ಪರ ದೂರ ಉಳಿದಿದ್ದು, ಇದೀಗ ಅನುಪಮಾ ಅವರ ಪೋಸ್ಟ್‌ಗಳು ಇಬ್ಬರ ಬ್ರೇಕಪ್ ಅನ್ನು ಬಹುತೇಕ ಖಚಿತಪಡಿಸಿವೆ ಎನ್ನುತ್ತಿದ್ದಾರೆ ನೆಟ್ಟಿಗರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚೆನ್ನಮ್ಮರ ಅಂತಿಮ ವಿಧಿವಿಧಾನ ಕಾರ್ಯ ನೆರವೇರಿಸುವವರು ಇವರೇ ನೋಡಿ – Kannada News | Son Dr Ramesh performs His Mother Chennamma Devegowda last rites

ಹಾಸನ, (ಜುಲೈ 20): ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಚೆನ್ನಮ್ಮನವರ ಅಂತ್ಯಕ್ರಿಯೆ ನಡೆಯಲಿದ್ದು, ಈಗಾಗಲೇ ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಆರಂಭವಾಗಿವೆ. ಸಮಾಧಿ ಸ್ಥಳದಲ್ಲಿ ಮಂತ್ರಘೋಷಗಳು ಮೊಳಗುತ್ತಿದ್ದು, ಸಮಾದಿ ಸ್ಥಳಕ್ಕೆ ಕುಮಾರಸ್ವಾಮಿ ಸೇರಿದಂತೆ ಕುಟುಂಬಸ್ಥರು ಆಗಮಿಸಿದ್ದಾರೆ. ಇನ್ನು ಕಿರಿಯ ಪುತ್ರ ಡಾ ರಮೇಶ್ ಅವರು ತಾಯಿ ಚೆನ್ನಮ್ಮನವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Update: ಬೆಂಗಳೂರಿಗರಿಗೆ ತಂಪೆರೆದ ವರುಣ, ಅರ್ಧ ಕರ್ನಾಟಕಕ್ಕೆ ನಾಳೆ ಯೆಲ್ಲೋ ಅಲರ್ಟ್​ – Kannada News | Bengaluru Rain: Heavy Downpour Lashes City; IMD Issues Yellow Alert for Half of Karnataka Tomorrow

ಬೆಂಗಳೂರು, ಜುಲೈ 20: ಕಳೆದ 3-4 ದಿನಗಳಿಂದ ಬೆಂಗಳೂರಲ್ಲಿ (Bengaluru) ಮಳೆಯಾಗುತ್ತಿದ್ದು, ಇಂದು ಕೂಡ ನಗರದ ವಿವಿಧೆಡೆ ಉತ್ತಮ ವರ್ಷಧಾರೆಯಾಗಿದೆ. ಬಸವನಗುಡಿ, ಶಾಂತಿನಗರ, ಟೌನ್​ಹಾಲ್, ಮೆಜೆಸ್ಟಿಕ್, ಜಯನಗರ, ಮಲ್ಲೇಶ್ವರಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಮಳೆ ಹಿನ್ನೆಲೆ ದ್ವಿಚಕ್ರ ವಾಹನಗಳ ಸವಾರರು ಮತ್ತು ಪಾದಚಾರಿಗಳು ಪರದಾಟ ನಡೆಸಿದ್ದು, ಬಸ್​​ ನಿಲ್ದಾಣ ಮತ್ತು ಅಂಗಡಿಮುಂಗಟ್ಟುಗಳ ಬಳಿ ನಿಂತು ಆಶ್ರಯ ಪಡೆದಿದ್ದಾರೆ.

ಅರ್ಧ ಕರ್ನಾಟಕಕ್ಕೆ ನಾಳೆ ಯೆಲ್ಲೋ ಅಲರ್ಟ್​

ಈ ನಡುವೆ ಹವಾಮಾನ ಇಲಾಖೆ ನಾಳೆ ಅರ್ಧ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್​​ ಘೊಷಿಸಿದೆ. ಬೀದರ್​​, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ವಿವಿಧೆಡೆ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ:

ಬೈಂದೂರಿನ ಕೆರ್ಗಾಳುವಿನಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ

ಉಡುಪಿ ಜಿಲ್ಲೆಯ ಬೈಂದೂರಿನ ಕೆರ್ಗಾಳುವಿನಲ್ಲಿ ನಿನ್ನೆ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 160.5 ಮಿ.ಮೀ. ಮಳೆಯಾಗಿದೆ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಆಗುಂಬೆ 1ರಲ್ಲಿ 155 ಮಿ.ಮೀ. , ದಕ್ಷಿಣ ಕನ್ನಡದ ಬೆಳ್ತಂಗಡಿಯ ಮುಂಡಾಜೆಯಲ್ಲಿ 98.5 ಮಿ.ಮೀ. , ಮಡಿಕೇರಿಯ ಪೆರಾಜೆ ಮತ್ತು ಯಾದಗಿರಿಯ ಸುರಪುರದ ಮಾಲಗತ್ತಿಯಲ್ಲಿ ತಲಾ 64.5 ಮಿ.ಮೀ. , ರಾಯಚೂರಿನ ಪೂರ್ತಿಪ್ಲಿಯಲ್ಲಿ 59 ಮಿ.ಮೀ., ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ದೊಡ್ಮನೆಯಲ್ಲಿ 57.5 ಮಿ.ಮೀ. ಮತ್ತು ಬೆಳಗಾವಿಯ ಬೆಳವಟ್ಟಿಯಲ್ಲಿ 56 ಮಿ.ಮೀ. ಮಳೆಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ತೀವ್ರ ಪ್ರತಿಭಟನೆ; ಅಮಿತ್ ಶಾ- ಧರ್ಮೇಂದ್ರ ಪ್ರಧಾನ್ ತುರ್ತು ಸಭೆ – Kannada News | Education Minister Dharmendra Pradhan meets Amit Shah as CJPs Chalo Sansad protest reaches parliament

ನವದೆಹಲಿ, ಜುಲೈ 20: ನೀಟ್ (NEET UG 2026) ಪರೀಕ್ಷೆಯ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹಮ್ಮಿಕೊಂಡಿರುವ ಬೃಹತ್ ‘ಚಲೋ ಸಂಸದ್’ ಪ್ರತಿಭಟನಾ ಮೆರವಣಿಗೆಯಿಂದಾಗಿ ದೆಹಲಿಯಲ್ಲಿ ಭಾರಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಪ್ರತಿಭಟನಾಕಾರರು ಸಂಸತ್​ ಭವನದ ಬಳಿ ತಲುಪಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದೇ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.  ಇದರ ನಡುವೆ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಸಂಸತ್ ಭವನದ ಸಂಕೀರ್ಣದಲ್ಲಿರುವ ಕೇಂದ್ರ ಗೃಹ ಸಚಿವರ ಕಚೇರಿಯಲ್ಲಿ ಈ ತುರ್ತು ಸಭೆ ನಡೆದಿದ್ದು, ಇದರಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳ ವಿವರಗಳು ಇನ್ನು ಅಧಿಕೃತವಾಗಿ ಹೊರಬಂದಿಲ್ಲ ಎಂದು ಪಿಟಿಐ ವರದಿ ಮಾಡಿದೆ. ಸಂಸತ್ ಭವನದ ಸಮೀಪವಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಟ್ಟಡದ ಬಳಿ ‘ಸಂಸದ್ ಚಲೋ’ ಮೆರವಣಿಗೆಯಲ್ಲಿದ್ದ ಕನಿಷ್ಠ 7 ಸಿಜೆಪಿ (CJP) ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಭಿಜೀತ್ ದಿಪ್ಕೆ ನೇತೃತ್ವದ ಸಿಜೆಪಿ (CJP) ಸಂಘಟನೆಯು ನೀಟ್ ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಮತ್ತು ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜೂನ್ 20ರಿಂದಲೇ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿತ್ತು. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಜುಲೈ 20ರಂದು ‘ಚಲೋ ಸಂಸದ್’ ನಡೆಸುವುದಾಗಿ ಸಂಘಟನೆ ಕರೆ ನೀಡಿತ್ತು. ಅದರಂತೆ ಇಂದು ಬೆಳಿಗ್ಗೆ ಜಂತರ್ ಮಂತರ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಂಸತ್ ಭವನದತ್ತ ನುಗ್ಗಲು ಯತ್ನಿಸಿದರು.

ಇದನ್ನೂ ಓದಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ, ಮಸೂದೆಗಳ ಮಂಡನೆ,ನೀಟ್ ಪೇಪರ್ ಸೋರಿಕೆ ಕುರಿತು ಗದ್ದಲ ಸಾಧ್ಯತೆ

ನೀಟ್-ಯುಜಿ (NEET-UG) ಸೇರಿದಂತೆ ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಾವಿರಾರು ಪ್ರತಿಭಟನಾಕಾರರು ಸಂಸತ್ತಿನತ್ತ ನುಗ್ಗಿದ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ಸಂಸತ್ತಿನ ಮುಖ್ಯ ಗೇಟ್‌ಗಳನ್ನು ಮುಚ್ಚಿದ್ದಾರೆ. ಈ ಪ್ರತಿಭಟನೆಗೆ ಸುಮಾರು 5,000 ಜನರು ಬರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದರು. ಆದರೆ, ಜಂತರ್ ಮಂತರ್‌ನಲ್ಲಿ ಜಮಾಯಿಸಿದವರ ಸಂಖ್ಯೆ 12,000ಕ್ಕೂ ಅಧಿಕವಾಗಿತ್ತು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದಿಂದ ಸಂಧಾನ?:

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರವು ಪ್ರತಿಭಟನಾಕಾರರನ್ನು ಮಾತುಕತೆಗೆ ಕರೆದಿದೆ ಎಂದು ಸಿಜೆಪಿ ಮೂಲಗಳು ತಿಳಿಸಿವೆ. ಸಂಘಟನೆಯ ಇಬ್ಬರು ವಕ್ತಾರರು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರ ಮೇಲೆ ಕಲ್ಲುತೂರಾಟ:

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ. ಕಾಕ್ರೋಚ್ ಜನತಾ ಪಾರ್ಟಿಯಿಂದ ಸಂಸತ್ ಭವನ ಚಲೋ ನಡೆದಿದೆ. ಜಂತರ್‌ ಮಂತರ್‌ನಲ್ಲಿ ಪೊಲೀಸರ ಮೇಲೆ ಪ್ರತಿಭಟನಾಕಾರರಿಂದ ಭಾರಿ ಕಲ್ಲುತೂರಾಟ ನಡೆದಿದೆ. ಹಲವು ಪೊಲೀಸರಿಗೆ ಗಾಯವಾಗಿದ್ದು, ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಲಾಠಿಚಾರ್ಜ್‌ ನಡೆಸಿ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸುತ್ತಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸತ್ ಭವನದ ಬಳಿ ಪೊಲೀಸ್​ ಬಂದೋಬಸ್ತ್​ ಹೆಚ್ಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಕಾಕ್ರೋಚ್ ಜನತಾ ಪಕ್ಷದ ‘ಚಲೋ ಸಂಸತ್’ ಮೆರವಣಿಗೆಗೆ ನಿರ್ಬಂಧ, ದಿಲ್ಲಿ ಪೊಲೀಸ್ ಖಡಕ್ ಎಚ್ಚರಿಕೆ

ದೆಹಲಿಯಲ್ಲಿ ಟ್ರಾಫಿಕ್ ಜಾಮ್:

ದೆಹಲಿಯಲ್ಲಿ ಮೆಟ್ರೋ ನಿಲ್ದಾಣಗಳು ಬಂದ್ ಆಗಿವೆ. ಮೆಟ್ರೋ ನಿಲ್ದಾಣಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಜಂತರ್​ ಮಂತರ್​​ನಿಂದ 4 ಕಿ.ಮೀ.ವರೆಗೆ ಟ್ರಾಫಿಕ್​ ಜಾಮ್ ಉಂಟಾಗಿದೆ. ದೆಹಲಿಯ ಜಂತರ್​ ಮಂತರ್​​ ಮೈದಾನದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಸಿಜೆಪಿ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ಸಿಜೆಪಿ ಪ್ರತಿಭಟನೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ.

ಲಾಠಿಚಾರ್ಜ್​ಗೆ ಕೇಜ್ರಿವಾಲ್ ಖಂಡನೆ:

ಪ್ರತಿಭಟನಾನಿರತರ ಮೇಲಿನ ಪೊಲೀಸ್ ಲಾಠಿಚಾರ್ಜ್​ಗೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಂತರ್‌ ಮಂತರ್‌ನಲ್ಲಿ ಲಕ್ಷಾಂತರ ಯುವಕರು ಸೇರಿದ್ದಾರೆ. ಆ ಯುವಕರ ಮಾತು ಕೇಳುವ ಬದಲು ಲಾಠಿಜಾರ್ಜ್‌ ಮಾಡಿದ್ದಾರೆ. ಇವರು ನಮ್ಮದೇ ದೇಶದ ಮಕ್ಕಳು. ನ್ಯಾಯಕ್ಕಾಗಿ ಬೀದಿಗಿಳಿದಿದ್ದಾರೆ. ದುರಹಂಕಾರವನ್ನು ಬದಿಗಿಟ್ಟು ಯುವಕರ ಮನವಿಯನ್ನು ಆಲಿಸಿ ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:40 pm, Mon, 20 July 26

Source link

Exit mobile version