ಸುಪ್ರೀಂ ಕೋರ್ಟ್‌ಗೆ ಮತ್ತಷ್ಟು ಶಕ್ತಿ: ನ್ಯಾಯಮೂರ್ತಿಗಳ ಸಂಖ್ಯೆ 38ಕ್ಕೆ ಹೆಚ್ಚಿಸಲು ಲೋಕಸಭೆಯಲ್ಲಿ ಮಸೂದೆ ಮಂಡನೆ – Kannada News | Supreme Court Judges Strength to Rise to 38: Lok Sabha Bill Aims to Clear Case Backlog

ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನ(Parliament Monsoon Session)ದ ಮೊದಲ ದಿನವಾದ ಇಂದು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ತಿದ್ದುಪಡಿ ಮಸೂದೆ, 2026’ ಅನ್ನು ಯಶಸ್ವಿಯಾಗಿ ಮಂಡಿಸಿದರು. ಈ ಮಸೂದೆಯು 1956 ರ ಸುಪ್ರೀಂ ಕೋರ್ಟ್ ಕಾಯ್ದೆಗೆ ತಿದ್ದುಪಡಿ ತರಲಿದ್ದು, ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ಸೇರಿದಂತೆ ಸುಪ್ರೀಂ ಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 34 ರಿಂದ 38 ಕ್ಕೆ ಹೆಚ್ಚಿಸಲಿದೆ.

ಸುಗ್ರೀವಾಜ್ಞೆಯ ಬದಲಿಗೆ ಶಾಶ್ವತ ಕಾಯ್ದೆ
ಕಳೆದ ಮೇ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟವು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿತ್ತು. ನಂತರ  ರಾಷ್ಟ್ರಪತಿ ಈ ಕುರಿತು ವಿಶೇಷ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದರು. ಈಗ ಆ ತಾತ್ಕಾಲಿಕ ಸುಗ್ರೀವಾಜ್ಞೆಯ ಜಾಗದಲ್ಲಿ ಸಂಸತ್ತಿನ ಶಾಶ್ವತ ಕಾಯ್ದೆಯನ್ನು ತರಲು ಈ ಮಸೂದೆಯನ್ನು ಪರಿಚಯಿಸಲಾಗಿದೆ.

ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ಸೇರಿದಂತೆ 32 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹೊಸ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡರೆ, ಪೂರ್ಣಪ್ರಮಾಣದ ಕಾರ್ಯನಿರ್ವಾಹಕ ಬಲ 38 ಕ್ಕೆ ಏರಿಕೆಯಾಗಲಿದೆ.

ಸಂವಿಧಾನದ ನಿಯಮ ಮತ್ತು ಇತಿಹಾಸ

ಭಾರತೀಯ ಸಂವಿಧಾನದ 124 ನೇ ವಿಧಿಯ ಪ್ರಕಾರ, ಸುಪ್ರೀಂ ಕೋರ್ಟ್‌ಗೆ ಅಗತ್ಯವಿರುವ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಕಾನೂನಿನ ಮೂಲಕ ಹೆಚ್ಚಿಸುವ ಸಂಪೂರ್ಣ ಅಧಿಕಾರ ಸಂಸತ್ತಿಗೆ ಇದೆ. ಈ ಹಿಂದೆ 2019 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂತರ್ತಗಳ ಸಂಖ್ಯೆಯನ್ನು 31 ರಿಂದ 34 ಕ್ಕೆ  ಹೆಚ್ಚಿಸಲಾಗಿತ್ತು. ಇದೀಗ 7 ವರ್ಷಗಳ ನಂತರ ಮತ್ತೆ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ.

ಮತ್ತಷ್ಟು ಓದಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ, ಮಸೂದೆಗಳ ಮಂಡನೆ,ನೀಟ್ ಪೇಪರ್ ಸೋರಿಕೆ ಕುರಿತು ಗದ್ದಲ ಸಾಧ್ಯತೆ

ಈ ಮಸೂದೆಯನ್ನು ಜಾರಿಗೆ ತರಲು ಸಂವಿಧಾನಕ್ಕೆ ಯಾವುದೇ ತಿದ್ದುಪಡಿ ಮಾಡುವ ಅಗತ್ಯವಿಲ್ಲ. ಸಂಸತ್ತಿನಲ್ಲಿ ‘ಸರಳ ಬಹುಮತ’ ದೊರೆತರೆ ಸಾಕು ಇದು ಕಾಯ್ದೆಯಾಗಿ ರೂಪುಗೊಳ್ಳುತ್ತದೆ.

ಸಾಮಾನ್ಯ ಜನರಿಗೆ ಇದರಿಂದ ಏನು ಲಾಭ?

ಸಾಮಾನ್ಯವಾಗಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ವಿಚಾರಣೆಗೆ ಕಾಯುತ್ತಾ ವರ್ಷಗಟ್ಟಲೆ ಬಾಕಿ ಉಳಿಯುವುದು ದೊಡ್ಡ ಸಮಸ್ಯೆಯಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾಗುವುದರಿಂದ ಹೆಚ್ಚಿನ ಸಂಖ್ಯೆಯ ಪೀಠಗಳನ್ನು ರಚಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಾಮಾನ್ಯ ನಾಗರಿಕರ ಅರ್ಜಿಗಳು ಮತ್ತು ಪ್ರಮುಖ ಸಂವಿಧಾನಾತ್ಮಕ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥಗೊಳ್ಳಲಿವೆ.

ಸಾಲು ಸಾಲು ಪ್ರಕರಣಗಳ ವಿಚಾರಣೆಯಿಂದ ಜಜ್ಜಡುತ್ತಿರುವ ನ್ಯಾಯಮೂರ್ತಿಗಳ ಮೇಲಿನ ಭಾರಿ ಕೆಲಸದ ಒತ್ತಡ ಕಡಿಮೆಯಾಗಿ, ಮತ್ತಷ್ಟು ಗುಣಮಟ್ಟದ ಹಾಗೂ ಆಳವಾದ ತೀರ್ಪುಗಳನ್ನು ನೀಡಲು ಸಹಕಾರಿಯಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಒಂದು ದಿನದ ವೀಕೆಂಡ್‌ ಪ್ರವಾಸಕ್ಕೆ ಇದು ಒಳ್ಳೆಯ ಪ್ಯಾಕೇಜ್: ಕೆಎಸ್‌ಟಿಡಿಸಿಯಿಂದ ಕಡಿಮೆ ದರದಲ್ಲಿ ಜಲಪಾತಕ್ಕೆ ಟೂರ್ – Kannada News | Escape Bengaluru: KSTDC One Day Hogenakkal and Krishnagiri Dam Tour from Bangalore

ಬೆಂಗಳೂರು, ಜು.20: ವೀಕೆಂಡ್‌ನಲ್ಲಿ ಬೆಂಗಳೂರಿನ ಜಂಜಾಟದಿಂದ ದೂರ ಉಳಿದು ಪ್ರಕೃತಿಯ ಮಡಿಲಲ್ಲಿ ಒಂದು ದಿನ ಕಳೆಯಲು ಬಯಸುವ ಪ್ರವಾಸಿಗರಿಗಾಗಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ಅತ್ಯಾಕರ್ಷಕ ಪ್ರವಾಸ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. ಬೆಂಗಳೂರಿನಿಂದ ಹೊರಟು ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೃಷ್ಣಗಿರಿ ಅಣೆಕಟ್ಟು (Krishnagiri Dam) ಮತ್ತು ಹೊಗೇನಕಲ್ ಜಲಪಾತಕ್ಕೆ (Hogenakkal Falls) ಕೇವಲ 1,480 ರೂ ದರದಲ್ಲಿ ಒಂದು ದಿನದ ಪ್ರವಾಸವನ್ನು ಕೈಗೊಳ್ಳಬಹುದಾಗಿದೆ.

ಪ್ರವಾಸದ ದಿನಗಳು

ಪ್ರತಿ ವಾರ ರೂಟಿನ್ ಆಗಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ಪ್ರವಾಸ ಲಭ್ಯವಿರುತ್ತದೆ. ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಕೆಎಸ್‌ಟಿಡಿಸಿ (KSTDC) ಬುಕಿಂಗ್ ಕೌಂಟರ್​​ನಲ್ಲಿ ಬಸ್​​ ವ್ಯವಸ್ಥೆ ಮಾಡಲಾಗಿರುತ್ತದೆ. ಬೆಳಗ್ಗೆ 6.00 ಗಂಟೆಗೆ ಹೊರಡಬೇಕಾಗುತ್ತದೆ. ತಲಾ ಒಬ್ಬರಿಗೆ 1480 ದರವನ್ನು ನಿಗದಿ ಮಾಡಲಾಗಿದೆ.

ಇದನ್ನೂ ಓದಿ; ಕಡಿಮೆ ವೆಚ್ಚದಲ್ಲಿ ವಿಶ್ವಪ್ರಸಿದ್ಧ ಜೋಗ ಜಲಪಾತ ಕಣ್ತುಂಬಿಕೊಳ್ಳಿ: ಪ್ರವಾಸಿಗರಿಗಾಗಿ KSTDC ಬಿಡುಗಡೆ ಮಾಡಿದೆ ಅತ್ಯಾಕರ್ಷಕ ಟೂರ್ ಪ್ಯಾಕೇಜ್

ಒಂದು ದಿನದ ಪ್ರವಾಸದ ಸಂಪೂರ್ಣ ವೇಳಾಪಟ್ಟಿ: 

ಸಮಯ  ಭೇಟಿ ನೀಡುವ ಸ್ಥಳ
ಬೆಳಿಗ್ಗೆ 06:00 ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ಬಸ್ ನಿರ್ಗಮನ.
ಬೆಳಿಗ್ಗೆ 09:00 – 09:30 ಮಾರ್ಗಮಧ್ಯೆ ರುಚಿಕರವಾದ ಉಪಹಾರಕ್ಕಾಗಿ (Breakfast) ಬಿಡುವು.
ಬೆಳಿಗ್ಗೆ 10:00 – 11:00 ಸುಂದರವಾದ ಕೃಷ್ಣಗಿರಿ ಅಣೆಕಟ್ಟು (Krishnagiri Dam) ವೀಕ್ಷಣೆ ಮತ್ತು ಭೇಟಿ.
ಮಧ್ಯಾಹ್ನ 01:00 – 02:00 ಮಧ್ಯಾಹ್ನದ ಊಟದ (Lunch) ಸಮಯ.
ಮಧ್ಯಾಹ್ನ 02:00 – ಸಂಜೆ 05:00 ಭಾರತದ ನಯಾಗರಾ ಎಂದೇ ಪ್ರಸಿದ್ಧಿಯಾಗಿರುವ ಹೊಗೇನಕಲ್ ಜಲಪಾತದ (Hogenakkal Falls) ಅದ್ಭುತ ವೀಕ್ಷಣೆ.
ಸಂಜೆ 05:00 – ರಾತ್ರಿ 09:00 ಹೊಗೇನಕಲ್‌ನಿಂದ ಹೊರಟು ಮರಳಿ ಬೆಂಗಳೂರಿಗೆ ಆಗಮನ ಮತ್ತು ಪ್ರವಾಸ ಮುಕ್ತಾಯ.

ಕಡಿಮೆ ವೆಚ್ಚದಲ್ಲಿ, ಯಾವುದೇ ಆಯಾಸವಿಲ್ಲದೆ ಒಂದೇ ದಿನದಲ್ಲಿ ಸುಂದರ ಜಲಪಾತ ಹಾಗೂ ಅಣೆಕಟ್ಟನ್ನು ಕಣ್ತುಂಬಿಕೊಳ್ಳಲು ಈ ವೀಕೆಂಡ್ ಪ್ಯಾಕೇಜ್ ಅತ್ಯುತ್ತಮ ಅವಕಾಶವಾಗಿದೆ. ಪ್ರವಾಸದ ಹೆಚ್ಚಿನ ವಿವರ ಹಾಗೂ ಬುಕಿಂಗ್‌ಗಾಗಿ ಸಾರ್ವಜನಿಕರು ಕೆಎಸ್‌ಟಿಡಿಸಿ ಅಧಿಕೃತ ವೆಬ್‌ಸೈಟ್ ಅಥವಾ ಯಶವಂತಪುರ ಕೌಂಟರ್ ಅನ್ನು ಸಂಪರ್ಕಿಸಬಹುದಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಟ್‌ಫ್ಲಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ‘ಧುರಂಧರ್’; ಜಾಗತಿಕ ಮಟ್ಟದಲ್ಲಿ ದಾಖಲೆ ಬರೆದ ರಣವೀರ್ ಸಿನಿಮಾ – Kannada News | Ranveer Singh Dhurandhar Becomes Netflix Most Watched Non English Film Internationally

ರಣವೀರ್ ಸಿಂಗ್ (Ranveer Singh) ನಟನೆಯ ಸೂಪರ್ ಹಿಟ್ ಸಿನಿಮಾ ‘ಧುರಂಧರ್’ ನೆಟ್‌ಫ್ಲಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ನೆಟ್‌ಫ್ಲಿಕ್ಸ್ ತನ್ನ ಇತ್ತೀಚಿನ ವರದಿಯಲ್ಲಿ ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಬರೋಬ್ಬರಿ 37 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್‌ಫ್ಲಿಕ್ಸ್‌ನ ಇಂಗ್ಲಿಷೇತರ ಚಿತ್ರಗಳ ವಿಭಾಗದಲ್ಲಿ ಇದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಎನಿಸಿಕೊಂಡಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಆರ್ ಮಾಧವನ್, ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಧುರಂಧರ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ 5ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಭಾರತದ ವ್ಯಕ್ತಿಯೋರ್ವ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿ, ಅಲ್ಲಿ ಸ್ಪೈ ಆಗುವ ಕಥೆಯನ್ನು ಇದು ಹೊಂದಿದೆ. ಈ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ಈ ಚಿತ್ರಕ್ಕೆ ಸೀಕ್ವೆಲ್ ಬಂದಿದ್ದು, ಅದು ಕೂಡ ದಾಖಲೆ ಬರೆದಿದೆ.

ಭಾರತದ ಇತರ ಒರಿಜಿನಲ್ ಸರಣಿಗಳ ಹವಾ

ನೆಟ್‌ಫ್ಲಿಕ್ಸ್ ಇಂಡಿಯಾದ ಒರಿಜಿನಲ್ ಕಂಟೆಂಟ್ ವಿಭಾಗದಲ್ಲೂ ಭಾರತೀಯ ಸರಣಿಗಳು ಭರ್ಜರಿ ಪ್ರದರ್ಶನ ನೀಡಿವೆ.

ಅಕ್ಯೂಸ್ಡ್: ಅನುಭೂತಿ ಕಶ್ಯಪ್ ನಿರ್ದೇಶನದ ಈ ಸರಣಿಯು 19 ಮಿಲಿಯನ್ ವೀಕ್ಷಣೆಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕೊಂಕಣ ಸೇನ್ ಶರ್ಮಾ ಮತ್ತು ಪ್ರತಿಭಾ ರಾಂಟಾ ಇದರಲ್ಲಿ ಮುಖ್ಯ ಪಾತ್ರಗಳಲ್ಲಿದ್ದಾರೆ.

ಮೇಡ್ ಇನ್ ಕೊರಿಯಾ: ಪ್ರಿಯಾಂಕಾ ಮೋಹನ್ ನಟನೆಯ ಈ ಸಿನಿಮಾ 18 ಮಿಲಿಯನ್ ವೀಕ್ಷಣೆಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ತಮಿಳುನಾಡಿನ ಯುವತಿಯೊಬ್ಬಳು ದಕ್ಷಿಣ ಕೊರಿಯಾದ ಸಿಯೋಲ್‌ಗೆ ಪ್ರಯಾಣಿಸುವ ಕಥೆ ಇದರಲ್ಲಿದೆ.

ತಸ್ಕರಿ : ಇಮ್ರಾನ್ ಹಶ್ಮಿ ನಟನೆಯ ಈ ಸರಣಿಯು 16 ಮಿಲಿಯನ್ ವೀಕ್ಷಣೆಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ. ಕಸ್ಟಮ್ಸ್ ಅಧಿಕಾರಿಗಳು ಸ್ಮಗ್ಲಿಂಗ್ ದಂಧೆಯನ್ನು ಮಟ್ಟಹಾಕುವ ಕಥಾಹಂದರವನ್ನು ಇದು ಹೊಂದಿದೆ.

ಇದನ್ನೂ ಓದಿ: ‘ಡಾನ್ 3’ ವಿವಾದ: ರಣವೀರ್ ಸಿಂಗ್ ದೊಡ್ಡ ನಿರ್ಧಾರ; 18 ತಿಂಗಳು ಯಾರಿಗೂ ಸಿಗಲ್ಲ ನಟ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಪ್ ಸಿನಿಮಾಗಳು

ಜಾಗತಿಕ ಮಟ್ಟದ ಅಂತಾರಾಷ್ಟ್ರೀಯ ಚಿತ್ರಗಳ ವಿಭಾಗದಲ್ಲಿ ‘ವಾರ್ ಮೆಷಿನ್’ ಸಿನಿಮಾ 147 ಮಿಲಿಯನ್ ವೀಕ್ಷಣೆಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದರ ಬೆನ್ನಲ್ಲೇ ‘ದಿ ಆರ್‌ಐಪಿ’ (136 ಮಿಲಿಯನ್), ‘ಸ್ವಾಪ್ಡ್’ (131 ಮಿಲಿಯನ್), ‘ಕೆ-ಪಾಪ್ ಡೆಮನ್ ಹಂಟರ್ಸ್’ (130 ಮಿಲಿಯನ್) ಮತ್ತು ‘ಅಪೆಕ್ಸ್’ (129 ಮಿಲಿಯನ್) ಚಿತ್ರಗಳು ಭರ್ಜರಿ ವೀಕ್ಷಣೆ ಪಡೆದಿವೆ. ವೆಬ್ ಸರಣಿಗಳ ವಿಭಾಗದಲ್ಲಿ ‘ಹಿಸ್ ಅಂಡ್ ಹರ್ಸ್’ ಸರಣಿಯು 104 ಮಿಲಿಯನ್ ವೀಕ್ಷಣೆಗಳೊಂದಿಗೆ ನಂಬರ್ ಒನ್ ಸ್ಥಾನದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇದು ಕೊನೆಯ ತುತ್ತು ತಿನ್ನಮ್ಮ, ನನಗೆ ಬೇಡ ಸಾಕು: ಕಣ್ಣೀರು ತರಿಸ್ತಿದೆ ದೇವೇಗೌಡ – ಚೆನ್ನಮ್ಮ ಈ ಅಪೂರ್ವದ ದೃಶ್ಯ – Kannada News | Chennamma Deve Gowda Demise: Emotional Viral Video of Deve Gowda Feeding Wife

ಬೆಂಗಳೂರು, ಜು.20: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ನೆರಳಾಗಿ, ಸುದೀರ್ಘ ರಾಜಕೀಯ ಏಳುಬೀಳುಗಳ ಪಯಣದಲ್ಲಿ ಸದಾ ಜೊತೆಯಾಗಿ ನಿಂತಿದ್ದ ಅವರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳು ಸಕಲ ಗೌರವಗಳೊಂದಿಗೆ ನೆರವೇರುತ್ತಿವೆ. ಬರೋಬ್ಬರಿ ಏಳು ದಶಕಗಳ ಕಾಲ ಸಾರ್ಥಕ ದಾಂಪತ್ಯ ಜೀವನವನ್ನು ನಡೆಸಿದ ಚೆನ್ನಮ್ಮ ಅವರು, ಇದೀಗ ದೊಡ್ಡಗೌಡರನ್ನು ಒಬ್ಬಂಟಿ ಮಾಡಿ ಅನಂತ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ದುಃಖದ ಸಂದರ್ಭದಲ್ಲಿ ದೇವೇಗೌಡರು ಮತ್ತು ಚೆನ್ನಮ್ಮ ಅವರ ಅಪೂರ್ವ ಪ್ರೀತಿ ಹಾಗೂ ದಾಂಪತ್ಯದ ಕೊನೆಯ ದಿನಗಳ ಅತ್ಯಂತ ಭಾವುಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕಣ್ಣೀರು ತರಿಸುತ್ತಿದೆ. ಈ ಬಗ್ಗೆ ಜೆಡಿಎಸ್ ಕರುನಾಡು ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಚೆನ್ನಮ್ಮ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವಾಗ ಹೆಚ್.ಡಿ. ದೇವೇಗೌಡರು ತಾವೇ ಸ್ವತಃ ಕೈಯಾರೆ ಪತ್ನಿಗೆ ಪ್ರೀತಿಯಿಂದ ಊಟ ಮಾಡಿಸುತ್ತಿರುವ ದೃಶ್ಯವಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಮೇಲಿನ ಕಾಳಜಿಯಿಂದ ಗೌಡರು ಅತ್ಯಂತ ಮಮತೆಯಿಂದ ತುತ್ತು ನೀಡುತ್ತಿದ್ದರೆ, ಚೆನ್ನಮ್ಮ ಅವರು ಕಿರುಧ್ವನಿಯಲ್ಲಿ ‘ನನಗೆ ಸಾಕು’ ಎಂದು ಹೇಳುತ್ತಿದ್ದಾರೆ. ಹಳ್ಳಿಯ ಸಾಮಾನ್ಯ ಕೃಷಿ ಕುಟುಂಬದಿಂದ ಹಿಡಿದು ದೇಶದ ಅತ್ಯುನ್ನತ ಪ್ರಧಾನಿ ನಿವಾಸದವರೆಗೂ ಸಾಗಿದ ಇವರ 70 ವರ್ಷಗಳ ದಾಂಪತ್ಯದ ಕೊನೆಯ ದಿನಗಳು ಈ ರೀತಿ ಇರಬಹುದು ಎಂದು ಕ್ರೀಡಾಲೋಕ ಮತ್ತು ರಾಜಕೀಯ ವಲಯ ಎಂದೂ ಊಹಿಸಿರಲಿಲ್ಲ. ವಿಡಿಯೋ ವೀಕ್ಷಿಸಿದ ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲೂ ನೀರು ತರಿಸುವಂತಿದೆ ಈ ಅಪೂರ್ವ ಕ್ಷಣ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೂಗಲ್ ಮ್ಯಾಪ್ ನಂಬಿ ಹೋಗಿ, ಸೇತುವೆ ನಿರ್ಮಾಣಕ್ಕೆಂದು ಅಗೆದಿದ್ದ ಹೊಂಡಕ್ಕೆ ಬಿದ್ದ ಕಾರು – Kannada News | Google Maps Leads Car into Tirupati Construction Ditch: Highway Safety Negligence Exposed

ತಿರುಪತಿ, ಜುಲೈ 20: ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೆಲವೊಮ್ಮೆ ಕಣ್ಣು ಮುಚ್ಚಿ ನಂಬಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದಕ್ಕೆ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಗೂಗಲ್ ಮ್ಯಾಪ್(Google Map) ತೋರಿಸಿದ ಮಾರ್ಗವನ್ನೇ ಅಂತಿಮ ಎಂದು ನಂಬಿ ಪ್ರಯಾಣಿಸುತ್ತಿದ್ದ ಕಾರೊಂದು, ಸೇತುವೆ ನಿರ್ಮಾಣಕ್ಕಾಗಿ ಅಗೆಯಲಾಗಿದ್ದ ಬೃಹತ್ ಹೊಂಡಕ್ಕೆ ಬಿದ್ದ ಆಘಾತಕಾರಿ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಕಾರು ವೆಂಕಟಗಿರಿಯಿಂದ ತಿರುಪತಿ ಜಿಲ್ಲೆಯ ದಕ್ಕಿಲಿಯ ಕಡೆಗೆ ಕಡೆಗೆ ಹೊರಟಿತ್ತು. ಎರ್ಪೇಡು-ಪೆಂಚಲಕೋಣ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಿಂಗಸಮುದ್ರಂ ಎಂಬಲ್ಲಿ ಪ್ರಸ್ತುತ ಹೊಸ ಸೇತುವೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಕಾರಣಕ್ಕಾಗಿ ಹಳೆಯ ರಸ್ತೆಯನ್ನು ಮುಚ್ಚಿ, ವಾಹನಗಳ ಸಂಚಾರವನ್ನು ಬೇರೊಂದು ಮಾರ್ಗಕ್ಕೆ ತಿರುಗಿಸಲಾಗಿತ್ತು.

ಆದರೆ, ಕಾರು ಚಾಲಕ ಗೂಗಲ್ ನಕ್ಷೆಯನ್ನು ಆಧರಿಸಿ ಪ್ರಯಾಣಿಸುತ್ತಿದ್ದರಿಂದ, ನಕ್ಷೆಯಲ್ಲಿ ತೋರಿಸಿದ ಹಳೆಯ ನೇರ ಮಾರ್ಗದಲ್ಲೇ ಕಾರು ಚಲಾಯಿಸಿದ್ದಾರೆ. ಮುಂಭಾಗದ ರಸ್ತೆಯ ಸ್ಥಿತಿಯನ್ನು ಗಮನಿಸದ ಪರಿಣಾಮ, ಕಾರು ನೇರವಾಗಿ ಸೇತುವೆಗಾಗಿ ಅಗೆಯಲಾಗಿದ್ದ ಆಳವಾದ ಹೊಂಡಕ್ಕೆ ಬಿದ್ದಿದೆ.

ಕಾರು ಹೊಂಡಕ್ಕೆ ಬೀಳುತ್ತಿದ್ದಂತೆ ಭಾರಿ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ತಕ್ಷಣವೇ ಚಾಲಕನನ್ನು ಹೊರತೆಗೆದು ಪ್ರಥಮ ಚಿಕಿತ್ಸೆಗೆ ರವಾನಿಸಿದ್ದಾರೆ. ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ತೀವ್ರವಾಗಿ ಜಖಂಗೊಂಡಿದೆ.

ಮತ್ತಷ್ಟು ಓದಿ: “ನನಗೆ ಕೆಲಸ ತೊರೆಯುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ”: ಇದು ನನ್ನ ಜೀವನದ ಕಹಿ ಕ್ಷಣ ಎಂದ ಬೆಂಗಳೂರಿನ ಯುವಕ

ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ
ಈ ಅಪಘಾತಕ್ಕೆ ಕೇವಲ ಗೂಗಲ್ ಮ್ಯಾಪ್ಸ್ ಮಾತ್ರವಲ್ಲದೆ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣ ಎಂದು ಸ್ಥಳೀಯರು ಕಡಾಖಂಡಿತವಾಗಿ ಆರೋಪಿಸಿದ್ದಾರೆ. ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ರಸ್ತೆ ತಿರುವು ಇರುವ ಕುರಿತು ಯಾವುದೇ ಸೂಚನಾ ಫಲಕಗಳು ಅಥವಾ ರಾತ್ರಿ ವೇಳೆ ಹೊಳೆಯುವ ರಿಫ್ಲೆಕ್ಟರ್‌ಗಳನ್ನು ಅಳವಡಿಸಿರಲಿಲ್ಲ.

ಸುರಕ್ಷತಾ ಲೋಪ: ಕನಿಷ್ಠ ತಡೆಗೋಡೆ ಅಥವಾ ಸೂಚನಾ ಫಲಕಗಳನ್ನು ಹಾಕಿದ್ದರೆ ಈ ದುರಂತವನ್ನು ತಡೆಯಬಹುದಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ತಕ್ಷಣ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಂಡೀಪುರದಲ್ಲಿ ಏಕಾಏಕಿ ಕಾರುಗಳ ಮೇಲೆ ಕಾಡಾನೆ ದಾಳಿ, ಬೆಚ್ಚಿಬಿದ್ದ ಪ್ರಯಾಣಿಕರು: ವಿಡಿಯೋ ವೈರಲ್ – Kannada News | Bandipur Elephant Vegetable King Returns, Charges at Cars; Viral Video Sparks Concern

ಚಾಮರಾಜನಗರ, ಜುಲೈ 20: ಹಲವು ದಿನಗಳಿಂದ ಸೈಲೆಂಟಾಗಿದ್ದ ಬಂಡೀಪುರದ ‘ತರಕಾರಿ ರಾಜ’ ಕಾಡಾನೆ ಮತ್ತೆ ರಸ್ತೆಗೆ ಇಳಿದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ-ಕೆಕ್ಕನಹಳ್ಳ ರಸ್ತೆಯಲ್ಲಿ ಆಹಾರ ಅರಸಿ ಬಂದ ಆನೆ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರುಗಳ ಬಳಿ ತೆರಳಿ ದಾಳಿ ನಡೆಸಿದೆ. ತರಕಾರಿ ಸಾಗಿಸುವ ವಾಹನಗಳನ್ನು ಗುರಿಯಾಗಿಸಿಕೊಂಡು ನಡುರಸ್ತೆಯಲ್ಲೇ ನಿಲ್ಲುವ ಈ ಕಾಡಾನೆ, ಈ ಬಾರಿ ಕಾರುಗಳ ಬಳಿಗೂ ತೆರಳಿ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಈ ಕಾಡಾನೆ ಲಾರಿಯೊಂದರ ಮೇಲೆ ದಾಳಿ ಮಾಡಿದ್ದು, ಆ ವಿಡಿಯೋ ಸಹ ವೈರಲ್ ಆಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಸತ್ ಮುಂಗಾರು ಅಧಿವೇಶನ: ನೀಟ್, ರಾಮಮಂದಿರ ಹಗರಣಗಳ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು, ಉಭಯ ಸದನಗಳಲ್ಲಿ ತೀವ್ರ ಗದ್ದಲ – Kannada News | Parliament Monsoon Session: Opposition Sparks Uproar Over NEET and Ram Mandir Issues

ದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ತೀವ್ರ ಗದ್ದಲ ಉಂಟಾಗಿದೆ. ವಿಪಕ್ಷ ಸದಸ್ಯರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಮತ್ತು ಅಯೋಧ್ಯೆ ರಾಮಮಂದಿರ ಕಾಣಿಕೆ ಕಳ್ಳತನದ ವಿಷಯಗಳ ಬಗ್ಗೆ ಚರ್ಚೆಗೆ ಪಟ್ಟು ಹಿಡಿದ ಪರಿಣಾಮ ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲ ಸೃಷ್ಟಿಯಾಗಿ, ಉಭಯ ಸದನಗಳ ಕಲಾಪ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಪ್ರಸ್ತಾಪಿಸಿದ್ದು, ಈ ಹಗರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಜಂತರ್‌ಮಂತರ್‌ನಲ್ಲಿ ನಡೆದ ಲಾಠಿಚಾರ್ಜ್ ಘಟನೆಯನ್ನು ಖಂಡಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಅವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಸರ್ಕಾರ ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ವಿಪಕ್ಷಗಳಿಂದ ತೀವ್ರ ಗದ್ದಲದ ಹಿನ್ನೆಲೆ ಅಂತಿಮವಾಗಿ ಉಭಯ ಸದನಗಳ ಕಲಾಪಗಳನ್ನು ಮುಂದೂಡಿದ ಪ್ರಸಂಗ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ: ತರಬೇತಿ ನಿರತ ಐಪಿಎಸ್ ಅಧಿಕಾರಿ ಉದಯ್ ಕೃಷ್ಣಾ ರೆಡ್ಡಿ ಆತ್ಮಹತ್ಯೆಗೆ ಯತ್ನ – Kannada News | Trainee IPS Officer Uday Krishna Reddy Hospitalised Amid Serious Harassment Allegations

ಹೈದರಾಬಾದ್, ಜುಲೈ 20: ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (NPA) ತರಬೇತಿ ಪಡೆಯುತ್ತಿದ್ದ ಐಪಿಎಸ್ (IPS) ಅಧಿಕಾರಿ ಉದಯ್ ಕೃಷ್ಣಾ ರೆಡ್ಡಿ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕರ್ನಾಟಕ ಮೂಲದ ತರಬೇತಿ ನಿರತ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳನೀಡಿದ್ದ ಆರೋಪ ಎದುರಿಸುತ್ತಿರುವ ಉದಯ್ ಇತ್ತೀಚೆಗೆ ಅಮಾನತುಗೊಂಡಿದ್ದರು. ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಅವರನ್ನು ಎಸ್.ಆರ್. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಕರ್ನಾಟಕದ ಮಹಿಳಾ ಐಪಿಎಸ್ ಅಧಿಕಾರಿಯಿಂದ ದೂರು
ಕರ್ನಾಟಕ ಮೂಲದ ವಿವಾಹಿತ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಉದಯ್ ಕೃಷ್ಣಾ ರೆಡ್ಡಿ ವಿರುದ್ಧ ದೂರು ನೀಡಿದ್ದರು. ಉದಯ್ ತನಗೆ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ. ಕೋಣೆಯಲ್ಲಿ ಕೂಡಿಹಾಕಿ, ಕೂದಲು ಹಿಡಿದು ಕುತ್ತಿಗೆ ಹಿಸುಕಲು ಯತ್ನಿಸಿ ಚಾಕುವಿನಿಂದ ಬೆದರಿಕೆ ಹಾಕಿದ್ದ.

ಸಂತ್ರಸ್ತೆಯ ಖಾಸಗಿ ವೀಡಿಯೊವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ, ಅದನ್ನು ಆಕೆಯ ಪತಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರಿನ ಮೇರೆಗೆ ಅತ್ತಾಪುರ ಪೊಲೀಸರು ‘ಭಾರತೀಯ ನ್ಯಾಯ ಸಂಹಿತಾ’ (BNS) ಮತ್ತು ಐಟಿ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ಓದಿ: ಐಎಎಸ್ ಅಧಿಕಾರಿಗೆ ಹೈಕೋರ್ಟ್ ಶಾಕ್; ಮಾನನಷ್ಟ ಪ್ರಕರಣದಲ್ಲಿ ರೋಹಿಣಿ ಸಿಂಧೂರಿಗೆ ಹಿನ್ನಡೆ

ಅಮಾನತು ಹಾಗೂ ಸಿಸಿಟಿವಿ ಸಾಕ್ಷ್ಯ
ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ (NPA) ಆಂತರಿಕ ತನಿಖಾ ಸಮಿತಿಯು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿದೆ. ಆರೋಪಗಳಲ್ಲಿ ಸತ್ಯಾಂಶವಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಕಾಡೆಮಿಯು ಉದಯ್ ಕೃಷ್ಣಾ ರೆಡ್ಡಿ ಅವರನ್ನು ತರಬೇತಿಯಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು . ಪೊಲೀಸರು ಇವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

ಉದಯ್ ಕೃಷ್ಣಾ ರೆಡ್ಡಿ ಅವರ ಜೀವನ ಪ್ರಯಾಣ ಆಂಧ್ರಪ್ರದೇಶದ ಅನೇಕ ಯುವಕರಿಗೆ ಪ್ರೇರಣೆಯಾಗಿತ್ತು. ಅನಾಥರಾಗಿದ್ದ ಇವರನ್ನು ಅಜ್ಜಿ ಕೂಲಿ ಕೆಲಸ ಮಾಡಿ ಸಾಕಿ ಬೆಳೆಸಿದ್ದರು. 2013 ರಲ್ಲಿ ಕಾನ್‌ಸ್ಟೆಬಲ್ ಆಗಿ ಆಯ್ಕೆಯಾಗಿದ್ದ ಉದಯ್, ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಯುಪಿಎಸ್‌ಸಿ (UPSC) ಪರೀಕ್ಷೆಗೆ ಸಿದ್ಧರಾಗಿದ್ದರು.

4 ಬಾರಿ ವಿಫಲರಾದರೂ, 5ನೇ ಪ್ರಯತ್ನದಲ್ಲಿ ದೇಶಕ್ಕೆ 360 ನೇ ರ್ಯಾಂಕ್ ಗಳಿಸಿ ಐಪಿಎಸ್ ಅಧಿಕಾರಿಯಾಗಿದ್ದರು. ಆದರೆ, ಈ ಗಂಭೀರ ಆರೋಪಗಳ ತನಿಖಾ ವರದಿ ಹೊರಬಿದ್ದ ಬೆನ್ನಲ್ಲೇ, ಉದಯ್ ಕೃಷ್ಣಾ ರೆಡ್ಡಿ ಭಾನುವಾರ ತಮ್ಮ ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ “ನಾನು ಯಾವುದೇ ತಪ್ಪು ಮಾಡಿಲ್ಲ” ಎಂದು ಪೋಸ್ಟ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ಮುಂದಿನ ತನಿಖೆ ಮುಂದುವರೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸೋಲಿನ ಬೆನ್ನಲ್ಲೇ ಮೆಸ್ಸಿ ನಿವೃತ್ತಿ ಘೋಷಿಸಿದ್ರಾ? ಇಲ್ಲಿದೆ ಇನ್​ಸೈಡ್ ಸ್ಟೋರಿ – Kannada News | Did Lionel Messi Retire After World Cup Loss? Here’s the Truth

FIFA World Cup 2026: ಫಿಫಾ ವಿಶ್ವಕಪ್​ ಫೈನಲ್ ಸೋಲಿನ ಬೆನ್ನಲ್ಲೇ ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರಾ? ಜಾಗತಿಕವಾಗಿ ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ನ್ಯೂಜೆರ್ಸಿಯ ಮೆಟ್​ಲೈಫ್ ಸ್ಟೇಡಿಯಂನಲ್ಲಿ ಕಂಡು ಬಂದ ಆ ಭಾವುಕ ದೃಶ್ಯ. ಸ್ಪೇನ್ ವಿರುದ್ಧ ಮುಖಭಂಗ ಅನುಭವಿಸಿದ ತಕ್ಷಣ ಮೆಸ್ಸಿ ಮೈದಾನದಲ್ಲೇ ಕಣ್ಣೀರು ಹಾಕುತ್ತಾ ಹೊರನಡೆದಿದ್ದರು. ಈ ಕಣ್ಣೀರಿನ ಧಾರೆ ಕಂಡು, ಮೆಸ್ಸಿ ಅವರ ಅದ್ಭುತ ವೃತ್ತಿಜೀವನ ಇಲ್ಲಿಗೇ ಅಂತ್ಯವಾಯಿತು ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದ್ದವು. ಆದರೆ, ಈ ವದಂತಿಗಳಿಗೆ ಯಾವುದೇ ಅಧಿಕೃತ ಆಧಾರವಿಲ್ಲ ಮತ್ತು ಮೆಸ್ಸಿ ತಮ್ಮ ನಿವೃತ್ತಿಯ ಬಗ್ಗೆ ಇದುವರೆಗೆ ಯಾವುದೇ ಪ್ರಕಟಣೆ ಹೊರಡಿಸಿಲ್ಲ.

ಮೆಸ್ಸಿ ನಿವೃತ್ತಿ ಘೋಷಿಸಿದ್ದಾರೆಯೇ?

ಇಲ್ಲ, ಲಿಯೋನೆಲ್ ಮೆಸ್ಸಿ ಇದುವರೆಗೆ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸಿಲ್ಲ. ಸ್ಪೇನ್ ವಿರುದ್ಧದ ಸೋಲಿನ ನಂತರ ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್ (AFA) ಮೆಸ್ಸಿಗೆ ಗೌರವ ಸಲ್ಲಿಸಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದೆಯೇ ಹೊರತು, ಮೆಸ್ಸಿ ಆಗಲಿ ಅಥವಾ ಮಂಡಳಿಯಾಗಲಿ ಅವರ ನಿವೃತ್ತಿಯ ಬಗ್ಗೆ ಯಾವುದೇ ಅಧಿಕೃತ ನಿರ್ಧಾರವನ್ನು ಪ್ರಕಟಿಸಿಲ್ಲ.

ಫೈನಲ್ ಪಂದ್ಯಕ್ಕೂ ಮುನ್ನ ಮೆಸ್ಸಿ ಹೇಳಿದ್ದೇನು?

ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಮೆಸ್ಸಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಸುದೀರ್ಘ ಸಂದೇಶ ಮತ್ತು ಅವರ ವಿಶೇಷ ಬೂಟುಗಳಿಗೆ ನೀಡಲಾಗಿದ್ದ ‘ದಿ ಲಾಸ್ಟ್ ಟ್ಯಾಂಗೋ’ (The Last Tango) ಎಂಬ ಹೆಸರು ಈ ವದಂತಿಗಳಿಗೆ ಮುಖ್ಯ ಕಾರಣವಾಗಿತ್ತು. ತಮ್ಮ ಪೋಸ್ಟ್‌ನಲ್ಲಿ ಮೆಸ್ಸಿ ಹೀಗೆ ಬರೆದುಕೊಂಡಿದ್ದರು:

“ಇಷ್ಟು ವರ್ಷಗಳ ನಮ್ಮ ಪಯಣದಲ್ಲಿ ಕೇವಲ ಪ್ರಶಸ್ತಿಗಳು ಮಾತ್ರ ಸುಂದರವಾಗಿರಲಿಲ್ಲ, ಬದಲಿಗೆ ನಾವು ಸಾಗಿಬಂದ ದಾರಿಯೇ ಅದ್ಭುತವಾಗಿತ್ತು. ಈ ತಂಡದೊಂದಿಗೆ ಪ್ರತಿದಿನವನ್ನು ಕಳೆಯುವುದು, ಒಟ್ಟಿಗೆ ಸ್ಪರ್ಧಿಸುವುದು, ಕಠಿಣ ಸಂದರ್ಭಗಳಲ್ಲಿ ಪರಸ್ಪರ ಬೆಂಬಲವಾಗಿ ನಿಲ್ಲುವುದು ಮತ್ತು ಪ್ರತಿ ಹೆಜ್ಜೆಯನ್ನೂ ಆನಂದಿಸುವುದು ನನಗೆ ಹೆಮ್ಮೆ ತಂದಿದೆ. ನಾಳೆ ಏನಾದರೂ ಆಗಲಿ, ಈ ತಂಡ ಈಗಾಗಲೇ ಯಾರೂ ಅಳಿಸಲಾಗದ ಇತಿಹಾಸವನ್ನು ಬರೆದಿದೆ.”

ಮೆಸ್ಸಿ ಈ ಟೂರ್ನಿಯನ್ನು ತಮ್ಮ ಕೊನೆಯ ವಿಶ್ವಕಪ್ ಎಂದು ಪದೇ ಪದೇ ಉಲ್ಲೇಖಿಸಿದ್ದಾರಾದರೂ, ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರವಾಗಿ ಸಂಪೂರ್ಣವಾಗಿ ಆಡುವುದನ್ನು ನಿಲ್ಲಿಸುವ ಬಗ್ಗೆ ಎಲ್ಲಿಯೂ ಖಚಿತಪಡಿಸಿಲ್ಲ.

ಮೆಸ್ಸಿ ಅವರ ನಡೆ ಏನು?

ವಿಶ್ವಕಪ್ ಮುಕ್ತಾಯಗೊಂಡಿದ್ದರೂ ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನ ಇನ್ನೂ ಬಾಕಿ ಇದೆ. ಅದರಲ್ಲೂ ಅವರು ಕ್ಲಬ್ ಫುಟ್​ಬಾಲ್​ನಲ್ಲಿ ಕಣಕ್ಕಿಳಿಯುವುದು ಖಚಿತ.

ಮೆಸ್ಸಿ ಸದ್ಯ ಅಮೆರಿಕದ ಇಂಟರ್ ಮಿಯಾಮಿ ಕ್ಲಬ್‌ ಪರ ಆಡುತ್ತಿದ್ದಾರೆ. ಈ ಕ್ಲಬ್​ ಜೊತೆ 2028ರ ಡಿಸೆಂಬರ್‌ವರೆಗೆ ಒಪ್ಪಂದವನ್ನು ಹೊಂದಿದ್ದಾರೆ. ಹಾಗಾಗಿ ಅವರು ಕ್ಲಬ್ ಫುಟ್‌ಬಾಲ್‌ನಲ್ಲಿ ಮುಂದುವರಿಯಲಿರುವುದು ಖಚಿತ ಎಂದೇ ಹೇಳಬಹುದು.

ಕೊನೆಯ ಪಂದ್ಯವಲ್ಲ!

ಇನ್ನು ಟಿವೈಸಿ ಸ್ಪೋರ್ಟ್ಸ್ ವರದಿಗಾರ ಗ್ಯಾಸ್ಟನ್ ಎಡುಲ್ ಅವರ ಪ್ರಕಾರ, ಸ್ಪೇನ್ ವಿರುದ್ಧದ ಫೈನಲ್ ಪಂದ್ಯವು ಮೆಸ್ಸಿ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಲ್ಲ. ಅವರು ಮುಂಬರುವ ಕೋಪಾ ಅಮೆರಿಕಾ ಟೂರ್ನಿಯವರೆಗಾದರೂ ಅರ್ಜೆಂಟೀನಾ ಪರ ಆಡಲಿದ್ದಾರೆ ಎನ್ನಲಾಗಿದೆ.

ಇದಾಗ್ಯೂ 2030ರ ವಿಶ್ವಕಪ್ ವೇಳೆಗೆ ಮೆಸ್ಸಿಗೆ 43 ವರ್ಷ ತುಂಬುವುದರಿಂದ ಮತ್ತೊಂದು ವರ್ಲ್ಡ್​​ಕಪ್ ಆಡುವುದು ಕಷ್ಟಸಾಧ್ಯ ಎಂದು ಅವರೇ ಈ ಹಿಂದೆ ಹೇಳಿದ್ದಾರೆ. ಆದರೆ, ಅವರು ತಮ್ಮ ಭವಿಷ್ಯದ ಬಗ್ಗೆ “ದಿನದಿಂದ ದಿನಕ್ಕೆ, ಪಂದ್ಯದಿಂದ ಪಂದ್ಯಕ್ಕೆ” ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಸೋಲಿಗೆ ಇದುವೇ ಪ್ರಮುಖ ಕಾರಣ: ಶುಭ್​​ಮನ್ ಗಿಲ್ ಬೇಸರ

ಹೀಗಾಗಿ ಮುಂಬರುವ ಕೋಪಾ ಅಮೆರಿಕ ಟೂರ್ನಿಯವರೆಗೆ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ಪರ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

Source link

ಯಲಬುರ್ಗಾ: ರೈತರ ಮೇಲೆ ಪಿಎಸ್​ಐ ಗುರುರಾಜ್​ ದೌರ್ಜನ್ಯ ಆರೋಪ, ವಿಡಿಯೋ ವೈರಲ್ – Kannada News | Koppal PSI Gururaj Accused of Misbehaving with Farmers During Power Station Dispute, Video goes viral

ಕೊಪ್ಪಳ, ಜುಲೈ 20: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದುರಿಮೋತಿ ಗ್ರಾಮದಲ್ಲಿ ವಿದ್ಯುತ್ ಸ್ಥಾವರ ಅಳವಡಿಕೆ ವಿಚಾರವಾಗಿ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ, ಬೇವೂರು ಪೊಲೀಸ್ ಠಾಣೆಯ ಪಿಎಸ್‌ಐ ಗುರುರಾಜ್ ರೈತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರೈತರನ್ನು ಏಕವಚನದಲ್ಲಿ ನಿಂದಿಸಿ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಿಎಸ್‌ಐ ಗುರುರಾಜ್ ಈ ಹಿಂದೆ ಕುಕನೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದ ಪ್ರಕರಣದಲ್ಲಿ ಅಮಾನತುಗೊಂಡಿದ್ದರು. ಬಳಿಕ ಇತ್ತೀಚೆಗೆ ಬೇವೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು. ಇದೀಗ ಮತ್ತೆ ರೈತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version