ಮಳೆ ಕೊರತೆಯಿಂದ ಬತ್ತಿದ ತುಂಗಭದ್ರಾ ನದಿ: ನೀರಿಲ್ಲದೆ ಸಾವಿರಾರು ಮೀನುಗಳು ಸಾವು – Kannada News | Tungabhadra river dries up due to rainfall deficit thousands of fish die in koppal raising epidemic fears

ನೀರಿಲ್ಲದೆ ಸಾವಿರಾರು ಮೀನುಗಳು ಸಾವು

ಕೊಪ್ಪಳ, ಜುಲೈ 20: ಸಮರ್ಪಕ ಮಳೆಯ ಕೊರತೆಯಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗಿದ್ದು, ಕೊಪ್ಪಳ ಜಿಲ್ಲೆಯ ಕೆಲ ಭಾಗಗಳಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಕಾರಟಗಿ ತಾಲೂಕಿನ ಸಿದ್ದಾಪುರ ಹೋಬಳಿಯ ಕಕ್ಕರಗೋಳ ಹಾಗೂ ನಂದಿಹಳ್ಳಿ ಗ್ರಾಮಗಳ ಸಮೀಪ ತುಂಗಭದ್ರಾ ನದಿಯ ಪಾತ್ರ ಬಹುತೇಕ ಒಣಗಿದ್ದು, ಅಲ್ಲಲ್ಲಿ ಕೆಸರುಮಯ ಹಾಗೂ ನಿಂತ ನೀರಿನ ಗುಂಡಿಗಳು ಮಾತ್ರ ಉಳಿದಿವೆ. ಪರಿಣಾಮ ನದಿಯ ದಡದಲ್ಲಿ ಸತ್ತ ಮೀನುಗಳು ಮತ್ತು ಒಣಗಿದ ಪಾಚಿಗಳು ಕಾಣಿಸಿಕೊಂಡಿವೆ.

ಸಾಂಕ್ರಾಮಿಕ ರೋಗದ ಆತಂಕ

ನೀರಿನ ಮಟ್ಟ ತೀವ್ರವಾಗಿ ಕುಸಿದ ಪರಿಣಾಮ ಉಳಿದಿರುವ ಕಲುಷಿತ ನೀರಿನ ಗುಂಡಿಗಳಲ್ಲಿ ಮೀನುಗಳು ಬದುಕುಳಿಯಲು ಪರದಾಡುತ್ತಿವೆ. ಹೆಚ್ಚಿದ ತಾಪಮಾನ ಹಾಗೂ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದ ಕಾರಣ ಮೀನುಗಳು ಉಸಿರುಗಟ್ಟಿ ಸಾವನ್ನಪ್ಪಿವೆ ಎಂದು ಪರಿಸರವಾದಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದ ಮೀನುಗಳಿಂದ ದುರ್ವಾಸನೆ ವ್ಯಾಪಿಸಿದ್ದು, ಸಮೀಪದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಕಾಗೆಗಳು ಹಾಗೂ ಇತರ ಪಕ್ಷಿಗಳು ಸತ್ತ ಮೀನುಗಳನ್ನು ತಿನ್ನಲು ನದಿಯತ್ತ ಆಗಮಿಸುತ್ತಿದ್ದು, ಪರಿಸರ ವ್ಯವಸ್ಥೆಗೆ ಉಂಟಾಗಿರುವ ಹಾನಿಯನ್ನು ಇದು ಬಿಂಬಿಸುತ್ತಿದೆ.

ಇದನ್ನೂ ಓದಿ: 4 ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಡ್ಯಾಂ ಖಾಲಿ ಖಾಲಿ, ರೈತರ ಬೆಳೆಗಳಿಗಿಲ್ಲ ನೀರು!

ಜಲಾಶಯದಿಂದ ನದಿಗೆ ನೀರು ಹರಿಸುವಂತೆ ಆಗ್ರಹ

ತುಂಗಭದ್ರಾ ಜಲಾಶಯದಿಂದ ನದಿಗೆ ಕನಿಷ್ಠ ಪ್ರಮಾಣದ ನೀರಿನ ಹರಿವು ಕಾಪಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಪರಿಸರ ಹೋರಾಟಗಾರರು ಆರೋಪಿಸಿದ್ದಾರೆ. ಕೂಡಲೇ ಜಲಾಶಯದಿಂದ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ‘ಸೇವ್ ತುಂಗಭದ್ರಾ’ ಅಭಿಯಾನದ ಸ್ಥಳೀಯ ಸಂಚಾಲಕ ವಿಷ್ಣುತೀರ್ಥ ಜೋಶಿ ಮಾತನಾಡಿ, ಮುಂಗಾರು ಅವಧಿಯಲ್ಲಿಯೂ ನದಿಯಲ್ಲಿ ಕನಿಷ್ಠ ನೀರಿನ ಹರಿವು ಇರುವಂತೆ ತುಂಗಭದ್ರಾ ಜಲಾಶಯದಿಂದ ತಕ್ಷಣವೇ ನೀರು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಾಟ್ಸಾಪ್​ನಲ್ಲಿ ಬರುವ APK ಲಿಂಕ್ ಮೇಲೆ ಕ್ಲಿಕ್ ಮಾಡುವ ಮುನ್ನ ಎಚ್ಚರ! ಕ್ಷಣಾರ್ಧದಲ್ಲಿ ನಿಮ್ಮ ಅಕೌಂಟ್ ಖಾಲಿ ಮಾಡ್ತಾರೆ ಕದೀಮರು – Kannada News | Bengaluru Cyber Fraud: Forest Officer Loses Rs 10 Lakh After Clicking Malicious APK File

ಬೆಂಗಳೂರು, ಜುಲೈ 20: ನಿಮ್ಮ ವಾಟ್ಸಾಪ್‌ಗೆ ಸ್ನೇಹಿತರಿಂದ ಅಥವಾ ಆತ್ಮೀಯರಿಂದ ಮದುವೆ ಇಲ್ಲವೇ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆಯ ಲಿಂಕ್ ಅಥವಾ ಫೈಲ್ ಬಂದಿದೆಯೇ? ಹಾಗಿದ್ದರೆ ಅದನ್ನು ಓಪನ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಏಕೆಂದರೆ, ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಕೇವಲ ಒಂದು ಕ್ಲಿಕ್‌ನಿಂದಾಗಿ ಬರೋಬ್ಬರಿ 10 ಲಕ್ಷ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದಾರೆ.

ನಡೆದಿದ್ದೇನು?

ಯಶವಂತಪುರ ನಿವಾಸಿಯಾದ, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ (DRFO) ರಮೇಶ್ ಬಾಬು ಬಿ. ಅವರಿಗೆ ಜುಲೈ 13 ರಂದು ವಾಟ್ಸಾಪ್‌ನಲ್ಲಿ ಅವರ ಸ್ನೇಹಿತರೊಬ್ಬರ ನಂಬರ್‌ನಿಂದ ಮೆಸೇಜ್ ಬಂದಿತ್ತು. ಅದರಲ್ಲಿ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ಎಂದು ಬರೆದು ಕೆಳಗೆ ಒಂದು ‘.APK’ ಫೈಲ್ ಕಳುಹಿಸಲಾಗಿತ್ತು. ಕಳುಹಿಸಿದ್ದು ಸ್ವತಃ ಸ್ನೇಹಿತನೇ ಆಗಿದ್ದರಿಂದ, ಯಾವುದೇ ಅನುಮಾನವಿಲ್ಲದೆ ರಮೇಶ್ ಅವರು ಜುಲೈ 14 ರ ಮಧ್ಯಾಹ್ನ ಆ ಫೈಲ್ ಮೇಲೆ ಕ್ಲಿಕ್ ಮಾಡಿದ್ದಾರೆ.

ಅರ್ಧ ಗಂಟೆಯಲ್ಲೇ ಬ್ಯಾಂಕ್ ಅಕೌಂಟ್ ಖಾಲಿ!

ಕ್ಲಿಕ್ ಮಾಡಿದ ಕೇವಲ 30 ನಿಮಿಷಗಳ ಒಳಗೆ ಅವರ ಬ್ಯಾಂಕ್ ಖಾತೆಯಿಂದ ಸರಣಿ ಹಣ ವರ್ಗಾವಣೆಯ ಮೆಸೇಜ್‌ಗಳು ಬರಲಾರಂಭಿಸಿದವು. ಆರಂಭದಲ್ಲಿ ಅವು ಜಾಹೀರಾತು ಮೆಸೇಜ್ ಇರಬಹುದೆಂದು ನಿರ್ಲಕ್ಷಿಸಿದ ಅಧಿಕಾರಿ, ನಂತರ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದಾಗ ಶಾಕ್ ಕಾದಿತ್ತು. ಕೇವಲ 7 ಟ್ರಾನ್ಸಾಕ್ಷನ್‌ಗಳಲ್ಲಿ ಬರೋಬ್ಬರಿ 9,96,659 ರೂಪಾಯಿ ಅವರ ಅಕೌಂಟ್‌ನಿಂದ ಮಾಯವಾಗಿತ್ತು.

ಹಣ ದೋಚಿದ ತಕ್ಷಣ ವಂಚಕರು ಹ್ಯಾಕ್ ಆಗಿದ್ದ ಆಪ್ ಮೂಲಕ ಫೋನಿನಲ್ಲಿದ್ದ ಎಪಿಕೆ ಫೈಲ್‌ಗಳನ್ನೆಲ್ಲಾ ಡಿಲೀಟ್ ಮಾಡಿ ಸಾಕ್ಷಿ ನಾಶಪಡಿಸಿದ್ದರು. ನಂತರ ವಿಚಾರಿಸಿದಾಗ ತಿಳಿದುಬಂದಿದ್ದೇನೆಂದರೆ, ಅವರ ಸ್ನೇಹಿತನ ವಾಟ್ಸಾಪ್ ಅಕೌಂಟ್ ಹ್ಯಾಕ್ ಆಗಿತ್ತು ಮತ್ತು ಅದೇ ನಂಬರ್‌ನಿಂದ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿದ್ದ ಕನಿಷ್ಠ 10 ಕ್ಕೂ ಹೆಚ್ಚು ಜನರಿಗೆ ಇಂತಹದೇ ಲಿಂಕ್ ಕಳುಹಿಸಲಾಗಿತ್ತು. ಪ್ರಸ್ತುತ ಈ ಬಗ್ಗೆ ಈಶಾನ್ಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೆಚ್ಚಿದ ‘APK’ ವಂಚನೆ: ನೀವೇನು ಮಾಡಬೇಕು?

ವಾಟ್ಸಾಪ್, ಎಸ್‌ಎಂಎಸ್ ಅಥವಾ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಯಾವುದೇ ಆಮಂತ್ರಣ ಪತ್ರಿಕೆ, ಉದ್ಯೋಗದ ಆಫರ್ ಹೆಸರಿನ ‘.APK’ ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಮಾಡಬೇಡಿ ಅಥವಾ ಕ್ಲಿಕ್ ಮಾಡಬೇಡಿ. ನಿಮ್ಮ ಆಪ್ತರು ಅಥವಾ ಸ್ನೇಹಿತರೇ ಇಂತಹ ಫೈಲ್ ಕಳುಹಿಸಿದ್ದರೂ, ಮೊದಲು ಅವರಿಗೆ ಫೋನ್ ಮಾಡಿ ನೀವೇ ಕಳುಹಿಸಿದ್ದೀರಾ? ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಅವರ ಅಕೌಂಟ್ ಹ್ಯಾಕ್ ಆಗಿರುವ ಸಾಧ್ಯತೆ ಇರುತ್ತದೆ.

ಬ್ಯಾಂಕ್‌ನಿಂದ ಬರುವ ಯಾವುದೇ ಒಟಿಪಿ (OTP) ಅಥವಾ ಡೆಬಿಟ್ ಮೆಸೇಜ್‌ಗಳನ್ನು ತಕ್ಷಣವೇ ಗಮನಿಸಿ. ಒಂದು ವೇಳೆ ನೀವೇನಾದರೂ ಸೈಬರ್ ವಂಚನೆಗೆ ಒಳಗಾದರೆ ತಕ್ಷಣವೇ ಸೈಬರ್ ಹೆಲ್ಪ್‌ಲೈನ್ ನಂಬರ್ 1930ಗೆ ಕರೆ ಮಾಡಿ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೀ5 ಕಡೆಯಿಂದ ಗುಡ್ ನ್ಯೂಸ್; ಕನ್ನಡ ಸೇರಿ 7 ಭಾಷೆಯಲ್ಲಿ ವೆಬ್ ಸಿರೀಸ್, ಸಿನಿಮಾ ಘೋಷಣೆ – Kannada News | Zee5 Announces Massive Content Slate In 7 Languages Kannada Streaming Details

ಭಾರತದ ಪ್ರಮುಖ ಒಟಿಟಿ ಸಂಸ್ಥೆಯಾದ ಜೀ5 ಸಿನಿಪ್ರೇಮಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪ್ರಾದೇಶಿಕ ಕಥೆಗಳಿಗೆ ಮೊದಲ ಆದ್ಯತೆ ನೀಡಿರುವ ಜೀ5 (Zee5), ಏಳು ಭಾಷೆಗಳಲ್ಲಿ ತನ್ನ ಹೊಸ ಸಿನಿಮಾಗಳು ಹಾಗೂ ವೆಬ್ ಸರಣಿಗಳ ಹೆಸರನ್ನು ಅನಾವರಣಗೊಳಿಸಿದೆ. ಒಂದೇ ವೇದಿಕೆಯಡಿಯಲ್ಲಿ ಸಿನಿಮಾ, ವೆಬ್ ಸರಣಿ, ಲೈವ್ ಸ್ಪೋರ್ಟ್ಸ್, ಆನಿಮೇಷನ್ ಹಾಗೂ ಎಐ ತಂತ್ರಜ್ಞಾನ ಆಧಾರಿತ ಕಥೆಗಳನ್ನು ಪರಿಚಯಿಸಲು ಈ ಒಟಿಟಿ ಮುಂದಾಗಿದೆ.

ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ ಮತ್ತು ಬಂಗಾಳಿ ಭಾಷೆಗಳ ಪ್ರಮುಖ ನಿರ್ಮಾಣ ಸಂಸ್ಥೆಗಳೊಂದಿಗೆ ಜೀ5 ಕೈಜೋಡಿಸಿದೆ. ಈ ಬಗ್ಗೆ ಜೀ5 ಮುಖ್ಯ ಕಂಟೆಂಟ್ ಅಧಿಕಾರಿ ರಾಘವೇಂದ್ರ ಹುಣ್ಸೂರ್ ಮಾತನಾಡಿ, ‘ವೀಕ್ಷಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಅರ್ಥಪೂರ್ಣ ಹಾಗೂ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದಿದ್ದಾರೆ.

ಕನ್ನಡದಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಚಿತ್ರ, ಸರಣಿಗಳು:

ಕನ್ನಡ ವೀಕ್ಷಕರಿಗೆ ಜೀ5 ಈ ಬಾರಿ ವಿಶೇಷ ಉಡುಗೊರೆ ನೀಡಿದೆ. ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳಾದ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಬಹಾವಾ ಎಂಟರ್ಟೈನ್ಮೆಂಟ್ ಜೊತೆ ಜೀ5 ಒಪ್ಪಂದ ಮಾಡಿಕೊಂಡಿದೆ. ರಾಜ್ ಬಿ. ಶೆಟ್ಟಿ ಹಾಗೂ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ‘ಕರಾವಳಿ’ ಸಿನಿಮಾ ಥಿಯೇಟರ್​ನಲ್ಲಿ ಪ್ರದರ್ಶನ ಕಂಡ ಬಳಿಕ ಜೀ5 ವೇದಿಕೆಗೆ ಬರಲಿದೆ. ಜನಪ್ರಿಯ ಸರಣಿ ‘ಅಯ್ಯನ ಮನೆ’ ಹೊಸ ಸೀಸನ್ ಮೂಲಕ ವೀಕ್ಷಕರನ್ನು ರಂಜಿಸಲಿದೆ.

ಹಿಂದಿ ಸಿನಿಮಾ, ಸರಣಿ ವಿವರ

ಹಿಂದಿಯಲ್ಲಿ ಜಿಯೋ ಸ್ಟುಡಿಯೋಸ್, ಮ್ಯಾಡಾಕ್ ಫಿಲ್ಮ್ಸ್ ಸೇರಿದಂತೆ ದೊಡ್ಡ ಬ್ಯಾನರ್‌ಗಳ ಜೊತೆ ಜೀ5 ಒಪ್ಪಂದ ಮಾಡಿಕೊಂಡಿದೆ. ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಜೀವನ ಆಧಾರಿತ ‘ಕಾಂಬ್ಳಿ’ ಸರಣಿ, ದಿ ಸ್ಕ್ಯಾಮ್: ಲೀಕ್ಡ್, ಕಾಫಿ ಕಿಂಗ್, ಜೀನಾ ಇಸಿ ಕಾ ನಾಮ್ ಹೈ 2.0 (ಆರ್. ಮಾಧವನ್ ನಟನೆ) ಹಾಗೂ ಮೋಹಿತ್ ರೈನಾ ನಟನೆಯ ರಂಗಬಾಜ್ ಸೀಸನ್ 4 ಬಿಡುಗಡೆಯಾಗಲಿವೆ.

ಸಿನಿಮಾಗಳು: ವರುಣ್ ಧವನ್ ಮತ್ತು ಪೂಜಾ ಹೆಗ್ಡೆ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’, ಬಾಬಿ ಡಿಯೋಲ್ ನಟನೆಯ ‘ಬಂದರ್’ ಹಾಗೂ ಕಂಗನಾ ರಣಾವತ್ ಚಿತ್ರಗಳು ಜೀ5ನಲ್ಲಿ ರಿಲೀಸ್ ಆಗಲಿವೆ. ಇನ್ನು ವಾಣಿ ಕಪೂರ್, ಅರ್ಷದ್ ವಾರ್ಸಿ ನಟನೆಯ ‘ಘಮಸಾನ್’ ಮತ್ತು ಜಿತೇಂದ್ರ ಕುಮಾರ್ ನಟನೆಯ ‘ಡಾಲಿಂಬ್’ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿವೆ.

ದಕ್ಷಿಣ ಭಾರತದ ಇತರ ಭಾಷೆಗಳ ಧಮಾಕಾ:

ತೆಲುಗು: ನಿವೇತಾ ಥಾಮಸ್ ಅವರ ‘ಶ್ರೀಮತಿ’, ಶ್ರೀಕಾಂತ್ ನಟನೆಯ ‘ಆಬ್ಜೆಕ್ಷನ್ ಮೈಲಾರ್ಡ್’, ವೆಂಕಿ ಅನಿಲ್ 5, NBK111 ಮತ್ತು ವೃಷಕರ್ಮ ಚಿತ್ರಗಳು ಜೀ 5 ಮೂಲಕ ಪ್ರಸಾರ ಕಾಣಲಿವೆ.

ತಮಿಳು: ನಯನತಾರಾ ಮತ್ತು ಕವಿನ್ ನಟನೆಯ ‘ಹಾಯ್!’, ಬಹುನಿರೀಕ್ಷಿತ ‘ಡಿಮೋಂಟೆ ಕಾಲೋನಿ 3’ ಮತ್ತು ‘ರಾವಡಿ’ ಚಿತ್ರಗಳು ಬರಲಿವೆ. ಸರಣಿಗಳಲ್ಲಿ ‘ಕೂಸ್ ಮುನಿಸಾಮಿ ವೀರಪ್ಪನ್’ ಹೊಸ ಸೀಸನ್ ಹಾಗೂ ‘ಥೀ ಕುರಲ್’ ಹೆಸರಿನ ರಾಪ್ ಬ್ಯಾಟಲ್ ಶೋ ಗಮನ ಸೆಳೆಯಲಿವೆ.

ಇದನ್ನೂ ಓದಿ: ಜೀ5ನಲ್ಲಿ ಪ್ರಸಾರ ಕಾಣಲಿದೆ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ; ಇಲ್ಲಿದೆ ಮಾಹಿತಿ

ಮಲಯಾಳಂ: ಈ ವರ್ಷದ ಸೂಪರ್ ಹಿಟ್ ಚಿತ್ರ ‘ಬಾಲನ್ ದಿ ಬಾಯ್’, ‘ಎ ಕ್ವೀನ್’, ‘ಮಲಬಾರ್ ಕಪ್’ ಮತ್ತು ಮಲಯಾಳಂನ ಮೊದಲ ಸ್ವತಂತ್ರ ರಾಪ್ ಬ್ಯಾಟಲ್ ಶೋ ‘ಕೇರಳ ಅಂಡರ್‌ಗ್ರೌಂಡ್’ ಜೀ5ನಲ್ಲಿ ಪ್ರಸಾರವಾಗಲಿವೆ.

ಇವುಗಳ ಜೊತೆಗೆ ಮರಾಠಿಯ ಸೂಪರ್ ಹಿಟ್ ‘ತುಂಬಾಡ್ಚಿ ಮಂಜುಳಾ’ (ಸು ಫ್ರಮ್ ಸೋ ರಿಮೇಕ್) ಮತ್ತು ಬಂಗಾಳಿ ಭಾಷೆಯ ಜನಪ್ರಿಯ ಸರಣಿ ‘ಲಾಲ್‌ಬಜಾರ್’ ಹೊಸ ಸೀಸನ್‌ಗಳು ಕೂಡ ಜೀ5ನಲ್ಲಿ ಅಬ್ಬರಿಸಲು ಸಜ್ಜಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಂಸತ್ತಿಗೆ ಮೆರವಣಿಗೆ ಹೊರಟ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ – Kannada News | Tension Mounts as Police Intervene Ahead of CJP’s Parliament March

ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ, ನವದೆಹಲಿ ವ್ಯಾಪಕ ಉದ್ವಿಗ್ನತೆಗೆ ಸಾಕ್ಷಿಯಾಯಿತು. ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಆಯೋಜಿಸಿದ್ದ “ಚಲೋ ಸಂಸದ್” ಮೆರವಣಿಗೆಯನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಭಾರಿ ಘರ್ಷಣೆ ಸಂಭವಿಸಿತು.

ನೀಟ್ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಬೆಂಬಲಿಗರು ಜಂತರ್ ಮಂತರ್‌ನಿಂದ ಸಂಸತ್ತಿನತ್ತ ಮೆರವಣಿಗೆ ಹೊರಟಿದ್ದರು. ಆದರೆ, ಭದ್ರತೆಯ ದೃಷ್ಟಿಯಿಂದ ದೆಹಲಿ ಪೊಲೀಸರು ಈ ಮೆರವಣಿಗೆಗೆ ಯಾವುದೇ ಪೂರ್ವಾನುಮತಿ ನೀಡಿರಲಿಲ್ಲ. ಪ್ರತಿಭಟನಾ ಪ್ರದೇಶ ಹೊರತುಪಡಿಸಿ, ಐದಕ್ಕಿಂತ ಹೆಚ್ಚು ಜನರು ಒಟ್ಟುಗೂಡುವುದನ್ನು ಮತ್ತು ಮೆರವಣಿಗೆ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಈ ಆದೇಶವನ್ನು ಉಲ್ಲಂಘಿಸಿ ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪರಿಸ್ಥಿತಿ ಕೈಮೀರಿ, ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡಲು ನಾಗರಿಕರು ಅನಧಿಕೃತ ಪ್ರತಿಭಟನೆಗಳಲ್ಲಿ ಭಾಗವಹಿಸಬಾರದು ಹಾಗೂ ಪೋಲಿಸರೊಂದಿಗೆ ಸಹಕರಿಸಬೇಕೆಂದು ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತಾಯಿ ಚೆನ್ನಮ್ಮ ಪಾರ್ಥಿವ ಶರೀರದ ಎದುರು ಶ್ಲೋಕ ಪಠಿಸುತ್ತಲೇ ಪುತ್ರಿ ಅನಸೂಯಾ ಭಾವುಕ – Kannada News | Anusuya Breaks Down While Reciting Shlokas Beside Mother Chennamma’s Mortal Remains

ಹಾಸನ, ಜುಲೈ 20: ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದಿಂದ ದೇವೇಗೌಡ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ಚೆನ್ನಮ್ಮ ಅವರ ಅಂತಿಮ ಸಂಸ್ಕಾರ ನಡೆಯಲಿದ್ದು, ಇದಕ್ಕೂ ಮುನ್ನ ನಡೆದ ಸಾರ್ವಜನಿಕ ಅಂತಿಮ ದರ್ಶನದ ವೇಳೆ ಚೆನ್ನಮ್ಮ ಅವರ ಪುತ್ರಿ ಅನಸೂಯಾ ತಾಯಿಯ ಪಾರ್ಥಿವ ಶರೀರದ ಎದುರು ಶ್ಲೋಕಗಳನ್ನು ಪಠಿಸುವ ಮೂಲಕ ಭಾವುಕರಾದ ಪ್ರಸಂಗ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನ್ಯಾಯಕ್ಕಾಗಿ ಹೆತ್ತ ತಾಯಿಯ ಕೊಳೆತ ಶವವನ್ನೇ ಬೈಕ್​ನಲ್ಲಿ ತಂದ ಮಕ್ಕಳು! ಎಫ್​ಐಆರ್ ದಾಖಲು – Kannada News | Davanagere Shocking Incident: Sons Dig Up Mother’s Grave, Ride Bike with Corpse for Re Autopsy

ನ್ಯಾಯಕ್ಕಾಗಿ ಹೆತ್ತ ತಾಯಿಯ ಕೊಳೆತ ಶವವನ್ನೇ ಬೈಕ್​ನಲ್ಲಿ ತಂದ ಮಕ್ಕಳು! ​

ದಾವಣಗೆರೆ, ಜುಲೈ 20: ನ್ಯಾಯಕ್ಕಾಗಿ ಆಗ್ರಹಿಸಿ ಹೆತ್ತ ತಾಯಿಯ ಕೊಳೆತ ಶವವನ್ನು ಸಮಾಧಿಯಿಂದ ಹೊರತೆಗೆದು, ಬಟ್ಟೆಯಲ್ಲಿ ಸುತ್ತಿಕೊಂಡು ರಾತ್ರೋರಾತ್ರಿ ಬೈಕ್ ಮೇಲೆ ಆಸ್ಪತ್ರೆಗೆ ಹೊತ್ತೊಯ್ದ ಆಘಾತಕಾರಿ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಅದಾಪುರ ಗ್ರಾಮದಲ್ಲಿ ನಡೆದಿದೆ. ಸುಮಾರು 79 ದಿನಗಳ ಹಿಂದೆ ಮೃತಪಟ್ಟಿದ್ದ ತಾಯಿಯ ಸಾವು ಸಹಜವಲ್ಲ, ಅದೊಂದು ಕೊಲೆ ಎಂದು ಆರೋಪಿಸಿ ಮಕ್ಕಳು ನಡೆಸಿದ ಈ ಭೀಕರ ಬೈಕ್ ಯಾತ್ರೆ ಈಗ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

ಏನಿದು ಘಟನೆ?

ಅದಾಪುರ ಗ್ರಾಮದ ಈರಮ್ಮ (58) ಎಂಬ ಮಹಿಳೆ ಕಳೆದ ಏಪ್ರಿಲ್ 29 ರಂದು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ವೈದ್ಯರು ಇದೊಂದು ಆತ್ಮಹತ್ಯೆ ಎಂದು ವರದಿ ನೀಡಿದ್ದರಿಂದ, ಮಕ್ಕಳು ದುಃಖದಲ್ಲೇ ಶವ ಸಂಸ್ಕಾರ ನೆರವೇರಿಸಿದ್ದರು. ಆದರೆ, ಗ್ರಾಮದಲ್ಲಿ ಈ ಸಾವಿನ ಕುರಿತು ಹತ್ತಾರು ಅನುಮಾನಗಳು ಕೇಳಿಬರಲಾರಂಭಿಸಿದವು. ಗ್ರಾಮದಲ್ಲಿ ಬಾಕ್ಸ್ ಚರಂಡಿ ನಿರ್ಮಾಣದ ವಿಚಾರವಾಗಿ ಸಂಬಂಧಿಕರಾದ ಕರಿಯಪ್ಪ, ಭದ್ರಾ, ಶಕುಂತಲಾ ಸೇರಿದಂತೆ ಸುಮಾರು 10 ಜನರ ಜೊತೆ ಈರಮ್ಮ ಜಗಳವಾಡಿದ್ದರು. ಅವರೇ ತಾಯಿಯನ್ನು ಹೊಡೆದು ಕೊಲೆ ಮಾಡಿ, ನಂತರ ನೇಣು ಹಾಕಿದ್ದಾರೆ ಎಂದು ಮಕ್ಕಳು ಗಂಭೀರವಾಗಿ ಆರೋಪಿಸಿದ್ದಾರೆ. ತಾಯಿಯ ಮೈಮೇಲೆ ಗಾಯದ ಗುರುತುಗಳಿದ್ದವು ಎಂದು ಹಿರಿಯ ಮಗ ಮಂಜುನಾಥ್ ಹಾಗೂ ಕಿರಿಯ ಮಗ ವೆಂಕಟೇಶ್ ದೂರಿದ್ದಾರೆ.

ರಾತ್ರೋರಾತ್ರಿ ಶವದೊಂದಿಗೆ ಬೈಕ್ ಜರ್ನಿ

ತಮ್ಮ ತಾಯಿಯ ಸಾವಿಗೆ ನ್ಯಾಯ ಸಿಗಬೇಕು ಮತ್ತು ಮರು ಮರಣೋತ್ತರ ಪರೀಕ್ಷೆ ಆಗಬೇಕು ಎಂದು ಮಕ್ಕಳು ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಸೂಕ್ತ ತನಿಖೆ ನಡೆಸದ ಕಾರಣ, ಹಗಲು ಸಮಾಧಿ ಅಗೆದರೆ ತೊಂದರೆಯಾಗಬಹುದೆಂದು ಭಾವಿಸಿದ ಸಹೋದರರು, ತಡರಾತ್ರಿ ತಾಯಿಯ ಸಮಾಧಿ ಅಗೆದಿದ್ದಾರೆ. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಬೈಕ್ ಮಧ್ಯೆ ಇರಿಸಿಕೊಂಡು ದಾವಣಗೆರೆ ಜಿಲ್ಲಾ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಆದರೆ ಶಾಮನೂರು ರಸ್ತೆಯ ಬಳಿ ನಿಯಂತ್ರಣ ತಪ್ಪಿ ಬೈಕ್ ಬಿದ್ದಾಗ ಸಾರ್ವಜನಿಕರು ಸೇರಿದ್ದು, ಶವ ಪತ್ತೆಯಾದಾಗ ಇಡೀ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೊ ನಂಬಿ 6.88 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ! ನಕಲಿ ಹೂಡಿಕೆ ಜಾಹೀರಾತುಗಳ ಬಗ್ಗೆ ಎಚ್ಚರ

ಮಕ್ಕಳ ವಿರುದ್ಧವೇ ಎಫ್‌ಐಆರ್!

ತಾಯಿಯ ಸಾವಿನ ರಹಸ್ಯ ಬಯಲು ಮಾಡಲು ಹೊರಟ ಮಕ್ಕಳು ಈಗ ಕಾನೂನಿನ ಇಕ್ಕಟ್ಟಿಗೆ ಸಿಲುಕಿದ್ದಾರೆ. ನಿಯಮಗಳ ಪ್ರಕಾರ ಹೂತ ಶವವನ್ನು ನ್ಯಾಯಾಲಯ ಅಥವಾ ತಹಶೀಲ್ದಾರ್ ಅನುಮತಿ ಇಲ್ಲದೆ ಹೊರತೆಗೆಯುವಂತಿಲ್ಲ. ಕಾನೂನು ಉಲ್ಲಂಘಿಸಿ ಶವ ತೆಗೆದ ಹಿನ್ನೆಲೆಯಲ್ಲಿ ಮಲೇಬೆನ್ನೂರು ಪೊಲೀಸರು ಇಬ್ಬರು ಪುತ್ರರನ್ನು ವಶಕ್ಕೆ ಪಡೆದು, ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಶವದ ಖಚಿತತೆಗಾಗಿ ಡಿಎನ್ಎ (DNA) ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Dam Water Level: ಇನ್ನೂ 100 ಅಡಿ ದಾಟಿಲ್ಲ KRS, ಆಲಮಟ್ಟಿಗೆ ಒಳಹರಿವು ಹೆಚ್ಚಳ; ಪ್ರಮುಖ ಡ್ಯಾಂಗಳ ನೀರಿನ ಮಟ್ಟ ವಿವರ – Kannada News | Karnataka Dam Water Levels on July 20, 2026: KRS Yet to Cross 100 Feet, Almatti Dam inflow increased

ತುಂಗಭದ್ರಾ ಡ್ಯಾಂ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜುಲೈ 20: ಕರ್ನಾಟಕದಲ್ಲಿ ಮುಂಗಾರು (Monsoon Rain) ತುಸು ಚುರುಕುಗೊಂಡಿದ್ದರೂ, ಪ್ರಮುಖ ಜಲಾಶಯಗಳ ನೀರಿನ ಮಟ್ಟ (Dam Water Level) ನಿರೀಕ್ಷಿತ ಪ್ರಮಾಣಕ್ಕೆ ಏರಿಕೆಯಾಗಿಲ್ಲ. ಅದರಲ್ಲೂ ಬೆಂಗಳೂರಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ನೀರಿನ ಮಟ್ಟ ಜುಲೈ ಅಂತ್ಯ ಸಮೀಪಿಸುತ್ತಿದ್ದರೂ ಇನ್ನೂ 100 ಅಡಿ ಗಡಿ ದಾಟಿಲ್ಲ. ಸದ್ಯ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ 92.61 ಅಡಿಯಷ್ಟೇ ಇದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಲಾಶಯದ ಸ್ಥಿತಿ ಆತಂಕ ಮೂಡಿಸುವಂತಿದೆ. ಇನ್ನು ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದರೆ, ತುಂಗಭದ್ರಾ ಮತ್ತು ಕಬಿನಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ.

ಕೃಷ್ಣರಾಜ ಸಾಗರ ಜಲಾಶಯ ನೀರಿನ ಮಟ್ಟ

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 92.61 ಅಡಿ
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 17.554 ಟಿಎಂಸಿ
  • ಲೈವ್ ಸ್ಟೋರೇಜ್: 9.175 ಟಿಎಂಸಿ
  • ಒಳಹರಿವು: 828 ಕ್ಯೂಸೆಕ್
  • ಹೊರಹರಿವು: 2,148 ಕ್ಯೂಸೆಕ್ (ಕಾಲುವೆ ಹಾಗೂ ಕುಡಿಯುವ ನೀರು ಸೇರಿ)

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 517.78 ಮೀಟರ್
  • ಒಳಹರಿವು: 40,173 ಕ್ಯೂಸೆಕ್
  • ಹೊರಹರಿವು: 16,458 ಕ್ಯೂಸೆಕ್

ತುಂಗಭದ್ರಾ ಜಲಾಶಯ ನೀರಿನ ಮಟ್ಟ

  • ಗರಿಷ್ಠ ಮಟ್ಟ: 1633.00 ಅಡಿ
  • ಇಂದಿನ ನೀರಿನ ಮಟ್ಟ: 1603.08 ಅಡಿ
  • ಗರಿಷ್ಠ ಸಾಮರ್ಥ್ಯ: 105.788 ಟಿಎಂಸಿ
  • ಇಂದಿನ ಸಂಗ್ರಹ: 25.766 ಟಿಎಂಸಿ
  • ಸರಾಸರಿ ಒಳಹರಿವು (24 ಗಂಟೆ): 1,017 ಕ್ಯೂಸೆಕ್
  • ಪ್ರಸ್ತುತ ಒಳಹರಿವು: 1,050 ಕ್ಯೂಸೆಕ್
  • ಸರಾಸರಿ ಹೊರಹರಿವು (24 ಗಂಟೆ): 3,547 ಕ್ಯೂಸೆಕ್
  • ಕಾಲುವೆಗೆ ಬಿಡುಗಡೆ: 3,547 ಕ್ಯೂಸೆಕ್

ಕಬಿನಿ ಡ್ಯಾಂ ನೀರಿನ ಮಟ್ಟ

  • ಇಂದಿನ ನೀರಿನ ಮಟ್ಟ: 71.77 ಅಡಿ
  • ಜಲಾಶಯದಲ್ಲಿರುವ ನೀರು: 12.56 ಟಿಎಂಸಿ
  • ಒಳಹರಿವು: 2,818 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್
  • ಕಳೆದ 24 ಗಂಟೆಗಳಲ್ಲಿ ದಾಖಲಾಗಿರುವ ಮಳೆ: 5 ಮಿ.ಮೀ.

ಕಳೆದ ವರ್ಷದ ಇದೇ ದಿನ ಕಬಿನಿ ಜಲಾಶಯದ ನೀರಿನ ಮಟ್ಟ 83.33 ಅಡಿ ಹಾಗೂ ಸಂಗ್ರಹ 19.08 ಟಿಎಂಸಿ ಇತ್ತು. ಆಗ ಜಲಾಶಯಕ್ಕೆ 15,206 ಕ್ಯೂಸೆಕ್ ಒಳಹರಿವು ದಾಖಲಾಗಿದ್ದರೆ, ನದಿಗೆ 8,833 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿತ್ತು. ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ ಮತ್ತು ಒಳಹರಿವು ಎರಡೂ ಗಣನೀಯವಾಗಿ ಕಡಿಮೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಜಿತ್ ಹೆಗಡೆ ಕಂಠದಲ್ಲಿ ಮೂಡಿಬಂತು ‘ಸಿಟಿ ಲೈಟ್ಸ್’ ಚಿತ್ರದ ‘ಕಂದಮ್ಮ’ ಹಾಡು – Kannada News | Vinay Rajkumar and Monisha Starrer City Lights Movie Song Sanjith Hegde Kandamma Kandamma Song Released

ದುನಿಯಾ ವಿಜಯ್ (Duniya Vijay) ನಟನೆಯ ಜೊತೆಗೆ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಈಗ ಅವರ ನಿರ್ದೇಶನದ ಮೂರನೇ ಸಿನಿಮಾ ‘ಸಿಟಿಲೈಟ್ಸ್‌’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮೊದಲು ‘ಸಲಗ’ ಮತ್ತು ‘ಭೀಮ’ ಚಿತ್ರದ ಮೂಲಕ ರೌಡಿಸಂ ಹಾಗೂ ಡ್ರಗ್ಸ್ ಕಥೆ ಹೇಳಿದ್ದ ದುನಿಯಾ ವಿಜಯ್ ಈ ಬಾರಿ ಒಂದು ಸುಂದರ ಪ್ರೇಮಕಥೆ ಕಟ್ಟಿಕೊಡುವ ಪ್ರಯತ್ನದಲ್ಲಿ ಇದ್ದಾರೆ. ಈಗ ಈ ಚಿತ್ರದ ‘ಕಂದಮ್ಮ, ಕಂದಮ್ಮ..’ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು ಗಮನ ಸೆಳೆದಿದೆ.

‘ಸಿಟಿ ಲೈಟ್ಸ್’ ಚಿತ್ರದಲ್ಲಿ ವಿನಯ್ ರಾಜ್​ಕುಮಾರ್ ಹೀರೋ ಆದರೆ, ದುನಿಯಾ ವಿಜಿ ಅವರ ಪುತ್ರಿ ಮೋನಿಷಾ ನಾಯಕಿ. ಇಬ್ಬರ ಸುಂದರ ಪ್ರೇಮಕಥೆಯನ್ನು ಈ ಹಾಡು ತೆರೆದಿಟ್ಟಿದೆ. ರಾಮ್ ಚರಣ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡು ಗಮನ ಸೆಳೆದಿದೆ. ಈ ಮೊದಲು ರಿಲೀಸ್ ಆಗಿದ್ದ ‘ಬಾವ ಬಾವ’ ಹಾಡು ಗಮನ ಸೆಳೆದಿತ್ತು. ಈಗ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಆಗಿದ್ದು, ‘ಸಿಟಿ ಲೈಟ್ಸ್’ ಸಿನಿಮಾ ಮ್ಯೂಸಿಕಲಿ ಹಿಟ್ ಆಗುವ ಸೂಚನೆ ಸಿಕ್ಕಿದೆ.

‘ಕಂದಮ್ಮ ಕಂದಮ್ಮ..’ ಹಾಡನ್ನು ಸಂಜಿತ್ ಹೆಗಡೆ ಅವರು ಹಾಡಿದ್ದಾರೆ. ಅವರ ಕಂಠವು ಹಾಡಿನ ತೂಕ ಹೆಚ್ಚಿಸಿದೆ. ನಾಗಾರ್ಜುನ ಶರ್ಮ ಅವರ ಸಾಹಿತ್ಯ ಹಾಡನ್ನು ಮತ್ತಷ್ಟು ಮುದ್ದಾಗಿಸಿದೆ. ಆನಂದ್ ಆಡಿಯೋ ಯೂಟ್ಯೂಬ್​ ಚಾನೆಲ್ ಮೂಲಕ ವಿಡಿಯೋ ಸಾಂಗ್ ಬಿಡುಗಡೆ ಕಂಡಿದೆ.

ಇದನ್ನೂ ಓದಿ:  ‘ಸಿಟಿಲೈಟ್ಸ್‌’ ಹಾಡು ಬಿಡುಗಡೆ: ಹೊಸ ಪ್ರತಿಭೆಗೆ ದುನಿಯಾ ವಿಜಿ ಬೆಂಬಲ

ಹಳ್ಳಿಯಿಂದ ನಗರಕ್ಕೆ ವಲಸೆ ಬರುವ ಕಥಾ ನಾಯಕ ಹಾಗೂ ನಾಯಕಿ ಎದುರಿಸುವ ಸವಾಲುಗಳೇ ಚಿತ್ರದ ಕಥೆ. ‘ಸಿಟಿ ಲೈಟ್ಸ್’ ಚಿತ್ರಕ್ಕೆ ಶಿವಸೇನಾ ಅವರ ಛಾಯಾಗ್ರಹಣ ಇದೆ, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ದೀಪು ಎಸ್. ಕುಮಾರ್ ಎಡಿಟಿಂಗ್ ಚಿತ್ರಕ್ಕಿದೆ. ದುನಿಯಾ ಟಾಕೀಸ್ ಮತ್ತು ಯಂತ್ರೋದ್ದಾರಕ ಬ್ಯಾನರ್ ಅಡಿಯಲ್ಲಿ ವಿಜಯ್ ಕುಮಾರ್ ಹಾಗೂ ವಿಕ್ರಂ ಆರ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾನು 56 ವರ್ಷದ ಯುವಕನ ಬಗ್ಗೆ ಮಾತನಾಡ್ತಿಲ್ಲ, ಸ್ಕೈರೂಟ್ ಸಾಧನೆ ಶ್ಲಾಘನೆ ಬೆನ್ನಲ್ಲೇ ರಾಹುಲ್ ಗಾಂಧಿ ಕಾಲೆಳೆದ ಮೋದಿ – Kannada News | Modi Taunts Rahul Gandhi as 56 Year Old Youth Amid Skyroot Praise

ನವದೆಹಲಿ, ಜುಲೈ 20: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ(Narendra Modi), ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರ ಸಾಧಿಸಿದ ಯಶಸ್ಸನ್ನು ಕೊಂಡಾಡುತ್ತಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಾರ್ವಜನಿಕವಾಗಿ ಟೀಕೆ ಮಾಡಿದ್ದಾರೆ.

ಹೈದರಾಬಾದ್ ಮೂಲದ ‘ಸ್ಕೈರೂಟ್ ಏರೋಸ್ಪೇಸ್’ ನವೋದ್ಯಮದ ಯುವ ವಿಜ್ಞಾನಿಗಳ ತಂಡವನ್ನು ಶ್ಲಾಘಿಸಿದ ಪ್ರಧಾನಿ, ಈ ದೇಶದ ಬಾಹ್ಯಾಕಾಶ ಯಶಸ್ಸು ಕೇವಲ 28 ವರ್ಷ ವಯಸ್ಸಿನ ನೈಜ ನವೋದ್ಯಮಿಗಳಿಗೆ ಸೇರಿದೆ. ನಾನು 56 ವರ್ಷ ವಯಸ್ಸಿನ ಯುವಕನ ಬಗ್ಗೆ ಮಾತನಾಡ್ತಿಲ್ಲ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯವರನ್ನು ಲೇವಡಿ ಮಾಡಿದ್ದಾರೆ. ಭಾರತೀಯ ರಾಜಯದಲ್ಲಿ 56 ವರ್ಷದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಹಲವು ವಿಪಕ್ಷ ನಾಯಕರು ‘ಯುವ ನಾಯಕ’ ಎಂದೇ ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡು ಪ್ರಧಾನಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.

ನಮ್ಮ ಯುವಕರ ಆಕಾಂಕ್ಷೆ ಬಾಹ್ಯಾಕಾಶದಷ್ಟೇ ಅಪರಿಮಿತ

ಸ್ಕೈರೂಟ್‌ನ ಯುವ ತಂಡ ನಡೆಸಿದ ಯಶಸ್ವಿ ರಾಕೆಟ್ ಉಡಾವಣೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ದೇಶದ ಯುವ ಶಕ್ತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ರತದ ಯುವಪಡೆ ಇಂದು ಬಾಹ್ಯಾಕಾಶಕ್ಕೆ ಹೊಸ ಪ್ರಯಾಣವನ್ನು ಆರಂಭಿಸಿದೆ. ನನಗೆ ಸಿಕ್ಕ ಮಾಹಿತಿಯಂತೆ ಸ್ಕೈರೂಟ್ ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುವ ಇಡೀ ತಂಡದ ಸರಾಸರಿ ವಯಸ್ಸು ಕೇವಲ 28 ವರ್ಷಗಳು.

ನಿಜವಾದ ಯುವಕರು ಇಂತಹ ಮಹಾನ್ ಸಾಧನೆಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ನಾನು 56 ವರ್ಷದ ಯುವಕರ ಬಗ್ಗೆ ಮಾತನಾಡುತ್ತಿಲ್ಲ. ದೇಶದ ನೈಜ ಯುವಶಕ್ತಿಯ ಆಕಾಂಕ್ಷೆಗಳು ಬಾಹ್ಯಾಕಾಶದಷ್ಟೇ ಅಪರಿಮಿತವಾಗಿವೆ ಎಂಬುದಕ್ಕೆ ಈ ಯಶಸ್ಸೇ ಬಲವಾದ ಸಾಕ್ಷಿ ಎಂದು ಮೋದಿ ಹೇಳಿದರು.

ಜಾಗತಿಕ ಮಟ್ಟದಲ್ಲಿ ರಾರಾಜಿಸುತ್ತಿದೆ ಭಾರತದ ಹೆಜ್ಜೆಗುರುತು

ಕಳೆದ ವರ್ಷದ ಅಧಿವೇಶನದ ವೇಳೆಗೆ ಭಾರತೀಯ ನಾಗರಿಕನೊಬ್ಬ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿ ಇತಿಹಾಸ ಬರೆದಿದ್ದರು. ಜಗತ್ತಿನ ಕೆಲವೇ ಕೆಲವು ಆಯ್ದ ದೇಶಗಳು ಮಾತ್ರ ಸಾಧಿಸಿರುವ ಖಾಸಗಿ ರಾಕೆಟ್ ಉಡಾವಣೆಯ ಮಹತ್ಸಾಧನೆಯನ್ನು ಇಂದು ಭಾರತದ ಯುವ ಉದ್ಯಮಿಗಳು ಮಾಡಿ ತೋರಿಸಿದ್ದಾರೆ. ಇದು ಕಾಕತಾಳೀಯವಲ್ಲ, ಭಾರತದ ತಂತ್ರಜ್ಞಾನದ ಹೆಗ್ಗುರುತು ಎಂದು ಪ್ರಧಾನಿ ಬಣ್ಣಿಸಿದರು.

ಮತ್ತಷ್ಟು ಓದಿ: ಬಿಜೆಪಿಯಿಂದ ಮಾತ್ರ ಪಂಜಾಬ್​​ನಲ್ಲಿ ಅಭಿವೃದ್ಧಿ ಸಾಧ್ಯ; ಆಪ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಪ್ರಗತಿದಾಯಕ ಮುಂಗಾರು ಅಧಿವೇಶನದ ಆಶಯ

ಅಧಿವೇಶನದ ಕುರಿತು ಮಾತನಾಡಿದ ಪ್ರಧಾನಿ, ಮಳೆಗಾಲ ಮತ್ತು ಸಂಸತ್ತಿನ ಕಲಾಪಗಳೆರಡನ್ನೂ ಹೋಲಿಸಿದರು.ಸಮಯಕ್ಕೆ ಸರಿಯಾಗಿ ಮಳೆಯಾದರೆ ಹೇಗೆ ಕೃಷಿ ಮತ್ತು ದೇಶದ ಕಲ್ಯಾಣಕ್ಕೆ ಅನುಕೂಲವಾಗುತ್ತದೆಯೋ, ಹಾಗೆಯೇ ಸಂಸತ್ತಿನ ಅಧಿವೇಶನವೂ ಯಾವುದೇ ಗೊಂದಲಗಳಿಲ್ಲದೆ ಉತ್ಪಾದಕವಾಗಿ ಹಾಗೂ ಸುಗಮವಾಗಿ ನಡೆದರೆ ದೇಶಕ್ಕೆ ಅಷ್ಟೇ ದೊಡ್ಡ ಮಟ್ಟದ ಪ್ರಯೋಜನವಾಗುತ್ತದೆ ಎಂದು ಆಶಿಸಿದರು.

ವಿಡಿಯೋ:

ಖಾಸಗಿ ರಂಗಕ್ಕೆ ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಿದ ನಂತರ ಭಾರತೀಯ ಸ್ಟಾರ್ಟ್‌ಅಪ್‌ಗಳು ತಂತ್ರಜ್ಞಾನ ವಲಯದಲ್ಲಿ ದೇಶದ ಕೀರ್ತಿಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸುತ್ತಿರುವುದನ್ನು ಪ್ರಧಾನಿ ಮೋದಿ ಈ ವೇಳೆ ವಿಶೇಷವಾಗಿ ಸ್ಮರಿಸಿದರು.

ಸ್ಕೈರೂಟ್ ಏರೋಸ್ಪೇಸ್ ಹಿನ್ನೆಲೆ: ಸ್ಕೈರೂಟ್ ಸಂಸ್ಥೆಯನ್ನು ಇಸ್ರೋದ (ISRO) ಮಾಜಿ ವಿಜ್ಞಾನಿಗಳಾದ ಪವನ್ ಕುಮಾರ್ ಚಂದ್ನಾ ಮತ್ತು ನಾಗಾ ಭರತ್ ಡಾಕಾ ಸ್ಥಾಪಿಸಿದ್ದರು. ಭಾರತ ಸರ್ಕಾರ ಬಾಹ್ಯಾಕಾಶ ರಂಗವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದ ನಂತರ ಈ ಮಟ್ಟದ ಜಾಗತಿಕ ಯಶಸ್ಸು ಸಾಧಿಸಿದ ಮೊದಲ ಭಾರತೀಯ ಸ್ಟಾರ್ಟ್‌ಅಪ್ ಇದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದಾಂಡೇಲಿಯ ರೆಸಾರ್ಟ್​​ನಲ್ಲಿ ಜಿಪ್‌ಲೈನ್ ದುರಂತ: 40 ಅಡಿ ಎತ್ತರದಿಂದ ಬಿದ್ದು ಪ್ರವಾಸಿಗನಿಗೆ ಗಂಭೀರ ಗಾಯ – Kannada News | Dandeli Zipline Horror: Tourist Critically Injured After 40 Foot Fall Due to Safety Lock Failure

ದಾಂಡೇಲಿ, ಜುಲೈ 20: ಜಿಪ್‌ಲೈನ್ ಸವಾರಿ ವೇಳೆ ಸೇಫ್ಟಿ ಲಾಕ್ ವೈಫಲ್ಯಗೊಂಡ ಪರಿಣಾಮ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಪ್ರವಾಸಿಗ ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ರೆಸಾರ್ಟೊಂದರಲ್ಲಿ ನಡೆದಿದೆ. ಗಾಯಾಳುವನ್ನು ವಿಜಯಪುರದ ಕುಬೇರ ಸುರಪುರ ಎಂದು ಗುರುತಿಸಲಾಗಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಹಸ ಪ್ರವಾಸೋದ್ಯಮ ಕೇಂದ್ರಗಳ ಸುರಕ್ಷತಾ ಮಾನದಂಡಗಳ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ.

ಕೈ ಮತ್ತು ಕಾಲಿನ ಮೂಳೆಗಳ ಮುರಿತ

ಕುಬೇರ ಅವರ ಕುಟುಂಬದವರ ಪ್ರಕಾರ, ಗಾಳಿಯಲ್ಲಿ ತೂಗುತಿದ್ದ ವೇಳೆ ಜಿಪ್‌ಲೈನ್‌ನ ಸುರಕ್ಷತಾ ಲಾಕ್ ಕೈಕೊಟ್ಟ ಪರಿಣಾಮ ಅವರು ನೆಲಕ್ಕೆ ಬಿದ್ದಿದ್ದಾರೆ. ಈ ದುರಂತದಲ್ಲಿ ಅವರ ಕೈ ಮತ್ತು ಕಾಲುಗಳಿಗೆ ಹಲವು ಕಡೆ ಮುರಿತಗಳಾಗಿದ್ದು, ನರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಕುಬೇರ ಅವರನ್ನು ಮೊದಲು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ವಿಜಯಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ನಂತರ ಅವರನ್ನು ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಆರೋಗ್ಯ ಇಲಾಖೆ ವಸತಿಗೃಹಗಳು; ಮಜಾ ಮಾಡಲು ಹುಡುಗ-ಹುಡುಗಿಯರು ಬರ್ತಾರೆ

ರೆಸಾರ್ಟ್​​ ವಿರುದ್ಧ ಕುಟುಂಬಸ್ಥರ ಆರೋಪ

ರೆಸಾರ್ಟ್ ನಿರ್ವಹಣೆಯ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಜಿಪ್‌ಲೈನ್ ಉಪಕರಣಗಳು ತುಕ್ಕು ಹಿಡಿದಿದ್ದವು ಹಾಗೂ ಸಮರ್ಪಕ ನಿರ್ವಹಣೆ ಮಾಡಲಾಗಿರಲಿಲ್ಲ ಎಂದು ದೂರಿದ್ದಾರೆ. ಸೂಕ್ತ ನಿರ್ವಹಣೆ ಮತ್ತು ಸುರಕ್ಷತಾ ತಪಾಸಣೆ ನಡೆದಿದ್ದರೆ ಈ ಘಟನೆ ತಪ್ಪಿಸಬಹುದಾಗಿತ್ತು ಎಂದು ಅವರು ಹೇಳಿದ್ದಾರೆ.

ನೆಟ್ಟಿಗರ ಆಕ್ರೋಶ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಹಸ ಕ್ರೀಡೆಗಳ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಪರಿಶೀಲನೆ, ನಿಯಮಿತ ಉಪಕರಣಗಳ ನಿರ್ವಹಣೆ ಹಾಗೂ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಒಬ್ಬರು, ಇದು ಅತ್ಯಂತ ಕಳಪೆ ಜಿಪ್‌ಲೈನ್ ವಿನ್ಯಾಸ. ವ್ಯಕ್ತಿ ಹಗ್ಗವನ್ನು ಬಿಟ್ಟರೂ ಕೆಳಗೆ ಬೀಳದಂತೆ ಸುರಕ್ಷತಾ ಬೆಲ್ಟ್ ದೇಹಕ್ಕೆ ಭದ್ರವಾಗಿ ಜೋಡಿಸಿರಬೇಕು. ಇಂತಹ ವ್ಯವಸ್ಥೆಗೆ ಅನುಮತಿ ಹೇಗೆ ಸಿಕ್ಕಿತು? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ಕೆಲವು ದಿನಗಳ ರೆಸಾರ್ಟ್ ಬಂದ್, ಸಣ್ಣ ದಂಡ ವಿಧಿಸಿ ಮತ್ತೆ ಕಾರ್ಯಾಚರಣೆಗೆ ಅವಕಾಶ ನೀಡುತ್ತಾರೆ. ನ್ಯಾಯ ಎಲ್ಲಿದೆ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version