ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೈಸೂರಿನ ಬಾಲಕಿ – Kannada News | Mysuru girl wins gold medal at state level competition

ಮೈಸೂರು, ಆಗಸ್ಟ್​​ 13: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 2026ರ ರಾಜ್ಯಮಟ್ಟದ ಕ್ರೀಡಾಕೂಟದ 16 ವರ್ಷದೊಳಗಿನವರ (U-16) ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಮೈಸೂರಿನ (Mysuru) ಪ್ರತಿಭಾನ್ವಿತ ಬಾಲಕಿ ಯುಕ್ತಿ ಕೆ. ಅತ್ಯದ್ಭುತ ಸಾಧನೆ ಮಾಡುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಹೊಸ ‘ಮೀಟ್ ದಾಖಲೆ’ ನಿರ್ಮಿಸಿ ಸುವರ್ಣ ಪದಕಕ್ಕೆ ಮುತ್ತಿಕ್ಕಿದ್ದಾಳೆ.

ಅಭಿನಂದನೆಗಳ ಸುರಿಮಳೆ

ಮೈಸೂರಿನ ಕಿಶೋರ್ ದಂಪತಿಯ ಪುತ್ರಿ ಯುಕ್ತಿ ಕೆ. ಕ್ರೀಡಾ ಕೋಚ್ ಪ್ರಭಾಕರ್ ಅವರ ಗರಡಿಯಲ್ಲಿ ಯುಕ್ತಿ  ತರಬೇತಿ ಪಡೆಯುತ್ತಿದ್ದಾರೆ. ಕೋಚ್ ಮಾರ್ಗದರ್ಶನ ಹಾಗೂ ನಿರಂತರ ಅಭ್ಯಾಸದಿಂದ ಈ ಅಭೂತಪೂರ್ವ ಯಶಸ್ಸು ಸಾಧಿಸಿರುವ ಯುಕ್ತಿಗೆ ಮೈಸೂರಿನ ಕ್ರೀಡಾಭಿಮಾನಿಗಳು, ತರಬೇತುದಾರರು ಹಾಗೂ ಹಿತೈಷಿಗಳಿಂದ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಇದನ್ನೂ ಓದಿ: ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​ ವೇಳೆ ದುರಂತ ಅಂತ್ಯಕಂಡ ಕ್ರೀಡಾಪಟು: ಹೃದಯಾಘಾತದಿಂದ ಸಾವು?

ಈಗಾಗಲೇ ರಾಜ್ಯಮಟ್ಟದಲ್ಲಿ ದಾಖಲೆ ನಿರ್ಮಿಸುವ ಮೂಲಕ ಕ್ರೀಡಾಪಟುಗಳ ಗಮನ ಸೆಳೆದಿರುವ ಯುಕ್ತಿ, ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೇಶಕ್ಕೆ ಮತ್ತು ನಾಡಿಗೆ ಮತ್ತಷ್ಟು ಕೀರ್ತಿ ತರಲಿದ್ದಾರೆ ಎಂಬ ನಿರೀಕ್ಷೆ ಕ್ರೀಡಾ ವಲಯಲ್ಲಿ ಮೂಡಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೈಸೂರಿನ ಪ್ಯಾರಾ ಅಥ್ಲೀಟ್ ಕೆಎಸ್​​ ಶಿಲ್ಪಾ ಸಾಧನೆ

ಇನ್ನು ಇತ್ತೀಚೆಗೆ ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ನಗರದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶಾಟ್‌ಪುಟ್ (ಗುಂಡು ಎಸೆತ) ವಿಭಾಗದಲ್ಲಿ ಮೈಸೂರು ಮೂಲದ ಪ್ಯಾರಾ ಅಥ್ಲೀಟ್ ಕೆಎಸ್​ ಶಿಲ್ಪಾ ಕಂಚಿನ ಪದಕ ತಮ್ಮದಾಗಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ: ಅನುದಾನ ದುರುಪಯೋಗ, ಲೈಂಗಿಕ ದೌರ್ಜನ್ಯ ಆರೋಪ: ಮೈಸೂರು ವಿವಿ ಕುಲಸಚಿವರ ಹುದ್ದೆಗೆ ಪ್ರೊ ಬಿಕೆ ಕೆಂಪೇಗೌಡ ನೇಮಕಕ್ಕೆ ವಿರೋಧ

36 ವರ್ಷದ ಕೆ.ಎಸ್. ಶಿಲ್ಪಾ ಅವರು, ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಕಂಚುಗಾರಕೊಪ್ಪಲು ಮೂಲದ ಕೃಷಿಕ ದಂಪತಿ ಶೈಲ ಹಾಗೂ ಶಾಂತಾ ಅವರ ಪುತ್ರಿ. ಮಹಿಳೆಯರ F-57 ಸ್ಪರ್ಧಾ ವಿಭಾಗದಲ್ಲಿ ಭಾಗವಹಿಸಿದ್ದ ಇವರು 7.26 ಮೀಟರ್ ದೂರಕ್ಕೆ ಗುಂಡು ಎಸೆಯುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿ ವಿನಯ್ ಕುಮಾರ್ ನೇಮಕ – Kannada News | Ex India Pacer Vinay Kumar Appointed Karnataka Cricket Head Coach

ರಣಜಿ ಟ್ರೋಫಿಯ ಹಾಲಿ ರನ್ನರ್ ಅಪ್ ಆಗಿರುವ ಕರ್ನಾಟಕ ತಂಡ (Karnataka Ranji team) ಮುಂಬರುವ ದೇಶೀಯ ಸೀಸನ್​ಗೆ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದು, ಅದರ ಭಾಗವಾಗಿ ತಂಡಕ್ಕೆ ಮುಖ್ಯ ಕೋಚ್ ಅನ್ನು ನೇಮಕ ಮಾಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಟೀಂ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ವಿನಯ್ ಕುಮಾರ್ (Vinay Kumar) ಅವರನ್ನು ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. ಕರ್ನಾಟಕದ ಅತ್ಯಂತ ಯಶಸ್ವಿ ನಾಯಕರಾಗಿದ್ದ 42 ವರ್ಷದ ವಿನಯ್ ಕುಮಾರ್ ಅವರನ್ನು ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನಿಲ್ ಜೋಶಿ, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಅವರನ್ನೊಳಗೊಂಡ ಕ್ರಿಕೆಟ್ ಆಡಳಿತ ಸಮಿತಿ ಮುಖ್ಯ ಕೋಚ್ ಹುದ್ದೆಗೆ ಆಯ್ಕೆ ಮಾಡಿದೆ.

ಮುಖ್ಯ ಕೋಚ್ ಆಗಿ ವಿನಯ್ ಕುಮಾರ್ ನೇಮಕ

ಈ ಮೊದಲು ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿ ಯೆರೆ ಗೌಡ್ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಆ ಸ್ಥಾನವನ್ನು ತುಂಬಲಿದ್ದಾರೆ. ವಿನಯ್ ಕುಮಾರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸುವುದರ ಜೊತೆಗೆ ಕರ್ನಾಟಕದ ಮಾಜಿ ಬ್ಯಾಟ್ಸ್‌ಮನ್ ದೀಪಕ್ ಚೌಗುಲೆ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದೆ.

ಆಟಗಾರನಾಗಿ ಟೀಂ ಇಂಡಿಯಾದಲ್ಲಿ ಹಾಗೂ ರಾಜ್ಯ ತಂಡದಲ್ಲಿ ಸಾಕಷ್ಟು ಪಂದ್ಯಗಳನ್ನಾಡಿದ್ದ ವಿನಯ್ ಕುಮಾರ್ ಕೊಚ್ ಆಗಿಯೂ ಅನುಭವ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿರುವ ವಿನಯ್, ಐಎಲ್‌ಟಿ 20 ಯಲ್ಲಿ ಎಂಐ ಎಮಿರೇಟ್ಸ್‌ ತಂಡದ ಬೌಲಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಅನುಭವಿ ವೀಕ್ಷಕ ವಿವರಣೆಗಾರರಾಗಿರುವ ವಿನಯ್, ಮುಂಬರುವ ರಣಜಿ ಸೀಸನ್​ನಲ್ಲಿ ತಂಡವನ್ನು ತಮ್ಮ ನೇತೃತ್ವದಲ್ಲಿ ಮುನ್ನಡೆಸಲಿದ್ದಾರೆ. ರಣಜಿ ಟ್ರೋಫಿಯಲ್ಲಿ ಹಾಲಿ ರನ್ನರ್ ಅಪ್ ಆಗಿರುವ ಕರ್ನಾಟಕ ತಂಡ ಅಕ್ಟೋಬರ್ 11 ರಂದು ಆಂಧ್ರ ವಿರುದ್ಧದ ಪಂದ್ಯದೊಂದಿಗೆ ಈ ಆವೃತ್ತಿಯ ರಣಜಿ ಸೀಸನ್ ಆರಂಭಿಸಲಿದೆ.

Auqib Nabi: ರಣಜಿ ಹೀರೋ ಆಕಿಬ್ ನಬಿ ಶೀಘ್ರದಲ್ಲೇ ಟೀಂ ಇಂಡಿಯಾಗೆ ಎಂಟ್ರಿ

ವಿನಯ್ ಕುಮಾರ್ ವೃತ್ತಿಜೀವನ

ಇನ್ನು ವಿನಯ್ ಕುಮಾರ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಟೀಂ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ. ಅದರಂತೆ ತಂಡದ ಪರ ಒಂದು ಟೆಸ್ಟ್‌ ಪಂದ್ಯವನ್ನಾಡಿರುವ ವಿನಯ್ ಒಂದು ವಿಕೆಟ್ ಪಡೆದಿದ್ದರೆ, 31 ಏಕದಿನ ಪಂದ್ಯಗಳಲ್ಲಿ 38 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಂಬತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿರುವ ವಿನಯ್, ಕರ್ನಾಟಕ ಪರ 139 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು ಅದರಲ್ಲಿ 504 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ ರಣಜಿ ಟ್ರೋಫಿಯಲ್ಲಿ 442 ವಿಕೆಟ್‌ಗಳನ್ನು ಪಡೆಯುವ ಮೂಲಕ ಈ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ವೇಗದ ಬೌಲರ್ ಎಂಬ ದಾಖಲೆಯನ್ನು ಹೊಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:29 pm, Thu, 13 August 26

Source link

IND vs SL: ಭಾರತ- ಲಂಕಾ ಮೊದಲ ಟೆಸ್ಟ್ ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಯಾವಾಗ ಆರಂಭ? – Kannada News | India vs Sri Lanka 1st Test: Live Streaming, Match Date, Time and Venue Details

ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇನ್ನೇರಡು ದಿನಗಳಲ್ಲಿ ಆರಂಭವಾಗಿದೆ. ಈಗಾಗಲೇ ನಡೆದ ಅಭ್ಯಾಸ ಪಂದ್ಯವನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಇದೀಗ ಸರಣಿಯ ಮೊದಲ ಪಂದ್ಯವನ್ನು ಗೆದ್ದು, ಸರಣಿಯಲ್ಲಿ ಮುನ್ನಡೆ ಪಡೆದುಕೊಳ್ಳಲು ಪ್ರಯತ್ನಿಸಲಿದೆ. ಆದಾಗ್ಯೂ ಟೀಂ ಇಂಡಿಯಾಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿರುವುದು ನಾಯಕ ಶುಭ್​ಮನ್ ಗಿಲ್​ಗೆ ಕೊಂಚ ತಲೆನೋವುಂಟು ಮಾಡಿದೆ. ಆದಾಗ್ಯೂ ಪ್ರಸ್ತುತ ತಂಡದಲ್ಲಿರುವ ಆಟಗಾರರು ಲಂಕಾ ತಂಡವನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸವಿದೆ. ಆದರೆ ಅದಕ್ಕೂ ಮೊದಲು ಸರಣಿಯ ಮೊದಲ ಟೆಸ್ಟ್ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ. ಅಲ್ಲದೆ, ನೀವು ಈ ಪಂದ್ಯವನ್ನು ಟಿವಿ ಮತ್ತು ಮೊಬೈಲ್‌ನಲ್ಲಿ ಹೇಗೆ ವೀಕ್ಷಿಸಬಹುದು? ಎಂಬುದರ ಪೂರ್ಣ ವಿವರನ್ನು ನಾವು ನಿಮಗೆ ನೀಡಲಿದ್ದೇವೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 15 ರ ಶನಿವಾರ ಆರಂಭವಾಗಲಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವು ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಬೆಳಿಗ್ಗೆ 10:00 ಗಂಟೆಗೆ ಆರಂಭವಾಗಲಿದ್ದು, ಟಾಸ್ ಬೆಳಿಗ್ಗೆ 9:30 ಕ್ಕೆ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಟಿವಿಯಲ್ಲಿ ಎಲ್ಲಿ ನೋಡಬಹುದು?

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ನೀವು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಮೊಬೈಲ್‌ನಲ್ಲಿ ನೋಡುವುದು ಹೇಗೆ?

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ನೀವು ಸೋನಿ ಲಿವ್ ಅಪ್ಲಿಕೇಶನ್ ಬಳಸಿ ನಿಮ್ಮ ಮೊಬೈಲ್​ನಲ್ಲಿ ವೀಕ್ಷಿಸಬಹುದು.

IND vs SL: ಟೆಸ್ಟ್‌ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ

ಉಭಯ ತಂಡಗಳು

ಟೆಸ್ಟ್ ಸರಣಿಗೆ ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸರನ್ಶ್ ಜೈನ್, ಔಕಿಬ್ ನಬಿ, ಸರ್ಫರಾಜ್ ಖಾನ್.

ಗಾಲೆ ಟೆಸ್ಟ್ ಪಂದ್ಯಕ್ಕೆ ತಂಡ: ಧನಂಜಯ ಡಿ ಸಿಲ್ವ(ನಾಯಕ), ಲಹಿರು ಉದಾನ, ನಿಶಾನ್ ಮದುಷ್ಕ, ಕಮಿಂದು ಮೆಂಡಿಸ್, ದಿನೇಶ್ ಚಾಂಡಿಮಲ್, ಪಸಿಂದು ಸೂರಿಯಬಂಡಾರ, ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ, ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ಕೇಶರ ನುವಂತ, ಮಿಲನ್ ರತ್ನಾಯಕೆ, ಅಸಿತ ಫೆರ್ನಾಂಡೋ, ಲಹಿರು ಕುಮಾರ, ವಿಶ್ವ ಫೆರ್ನಾಂಡೋ, ದಿಲ್ಶನ್ ಮಧುಶಂಕ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:05 pm, Thu, 13 August 26

Source link

‘ಲವ್ ಯೂ ಗಿಲ್ಲಿ’ ಚಿತ್ರ ಸೆಟ್ಟೇರುವುದು ತಡ ಆಗಿದ್ದು ಏಕೆ? ಉತ್ತರಿಸಿದ ನಿರ್ದೇಶಕ – Kannada News | BBK 12 Winner Gilli Nata Love You Gilli movie delayed director Arya clarification

ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮೊದಲೇ ಒಂದು ಸಿನಿಮಾ ಒಪ್ಪಿಕೊಂಡಿದ್ದರು. ಆ ಚಿತ್ರಕ್ಕೆ ‘ಲವ್ ಯೂ ಗಿಲ್ಲಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಆದರೆ ಆ ಚಿತ್ರ ಶುರು ಆಗುವುದಕ್ಕೂ ಮುನ್ನ ಅವರು ‘ಪಳಾರ್’ ಸಿನಿಮಾದ ಕೆಲಸ ಶುರು ಮಾಡಿದರು. ಹಾಗಾಗಿ ‘ಲವ್ ಯೂ ಗಿಲ್ಲಿ’ ಚಿತ್ರ ಸೆಟ್ಟೇರುವುದು ತಡವಾಯಿತು. ಆ ಬಗ್ಗೆ ನಿರ್ದೇಶಕ ಆರ್ಯ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ಸಿನಿಮಾದ ಮಾತುಕಥೆ ಆರಂಭ ಆಗಿದ್ದು ಯಾವಾಗ? ಕಥೆಯನ್ನು ರಚಿಸಿದ್ದು ಹೇಗೆ? ಮೊದಲು ಸೆಟ್ಟೇರಬೇಕಿದ್ದ ಈ ಸಿನಿಮಾ ತಡ ಆಗಿದ್ದಕ್ಕೆ ಕಾರಣ ಏನು? ಈ ಎಲ್ಲ ವಿಷಯಗಳ ಬಗ್ಗೆ ನಿರ್ದೇಶಕ ಆರ್ಯ ಅವರು ಮಾತನಾಡಿದ್ದಾರೆ. ನಾಯಕನಾಗಿ ಗಿಲ್ಲಿ ನಟ ಅವರ 2ನೇ ಚಿತ್ರವಾಗಿ ‘ಲವ್ ಯೂ ಗಿಲ್ಲಿ’ ಸಿನಿಮಾ ಮೂಡಿಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಿರುಪತಿ ದೇವಸ್ಥಾನಕ್ಕೆ ಭಕ್ತರು ನೀಡುವ ಚಿನ್ನಾಭರಣವನ್ನು ಬಿಸ್ಕತ್ ಮಾಡಲು ಟಿಟಿಡಿ ನಿರ್ಧಾರ – Kannada News | TTD decision on Lord Venkateswara Hundi Gold Ornaments

ತಿರುಮಲ, ಆಗಸ್ಟ್ 13: ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಕಲಿಯುಗದ ಜೀವಂತ ದೇವರು ವೆಂಕಟೇಶ್ವರನಿಗೆ ಭಕ್ತರು ಅರ್ಪಿಸುವ ಹುಂಡಿ ಕಾಣಿಕೆಗಳಲ್ಲಿ ಪ್ರಮುಖ ಬದಲಾವಣೆಗಳಿಗೆ ತಿರುಮಲ ತಿರುಪತಿ ದೇವಸ್ಥಾನಗಳು (TTD) ಪ್ರಸ್ತಾವನೆಗಳನ್ನು ಸಿದ್ಧಪಡಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಹುಂಡಿಗೆ ಬರುವ ಚಿನ್ನದ ಕಾಣಿಕೆಗಳನ್ನು ನೇರವಾಗಿ ಮಾರಾಟ ಮಾಡದಿರಲು ನಿರ್ಧರಿಸಿದೆ. ಅವುಗಳನ್ನು ಚಿನ್ನದ ಬಿಸ್ಕತ್ತುಗಳಾಗಿ ಪರಿವರ್ತಿಸಿ ಬ್ಯಾಂಕುಗಳಲ್ಲಿ ಚಿನ್ನದ ಠೇವಣಿಯಾಗಿ ಇಡಲು ಉದ್ದೇಶಿಸಿದೆ. ಹಾಗೇ, ಚಿನ್ನದ ಆಭರಣಗಳಲ್ಲಿರುವ ರತ್ನಗಳು ಮತ್ತು ಅಮೂಲ್ಯ ಕಲ್ಲುಗಳನ್ನು ಬೇರ್ಪಡಿಸಿ ಹರಾಜು ಹಾಕಲಿದೆ.

ಭಕ್ತರು ತಮ್ಮ ಕಾಣಿಕೆಗಳನ್ನು ನೀಡುವಾಗ ಹುಂಡಿಯಲ್ಲಿ ತಮಗೆ ಬೇಕಾದ ಆಭರಣ ಮತ್ತು ಚಿನ್ನದ ವಸ್ತುಗಳನ್ನು ಕೂಡ ಹಾಕುತ್ತಾರೆ. ಭಗವಂತನಿಗೆ ಅರ್ಪಿಸುವ ಈ ಉಡುಗೊರೆಗಳು ಟಿಟಿಡಿಯ ಆದಾಯದ ಪ್ರಮುಖ ಭಾಗವಾಗಿದೆ. ಆದರೆ, ಅವುಗಳ ನಿರ್ವಹಣೆ, ಭದ್ರತೆ ಮತ್ತು ಸರಿಯಾದ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಟಿಟಿಡಿ ನಿಯಮಗಳಲ್ಲಿ ಬದಲಾವಣೆಗಳನ್ನು ಪರಿಗಣಿಸುತ್ತಿದೆ.

ಪ್ರಸ್ತಾವನೆಯ ಪ್ರಕಾರ, ಹುಂಡಿ ಮೂಲಕ ಪಡೆದ ಹೆಚ್ಚುವರಿ ಚಿನ್ನವನ್ನು ಚಿನ್ನದ ಬಿಸ್ಕತ್ತುಗಳಾಗಿ ಪರಿವರ್ತಿಸಿ, ಮಾರಾಟ ಮಾಡುವ ಬದಲು ಚಿನ್ನದ ಠೇವಣಿ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗುತ್ತದೆ. ಅಗತ್ಯವಿದ್ದಾಗ ಈ ಚಿನ್ನವನ್ನು ಧಾರ್ಮಿಕ ವಿಗ್ರಹ ಆಭರಣಗಳು, ಮಂಗಳಸೂತ್ರಗಳು ಮತ್ತು ಇತರ ದೇವಾಲಯದ ಅಗತ್ಯಗಳಿಗೆ ಬಳಸಲು ಲಭ್ಯವಿರುತ್ತದೆ. ಟಿಟಿಡಿ ಈಗಾಗಲೇ ಬೃಹತ್ ಚಿನ್ನದ ನಿಕ್ಷೇಪವನ್ನು ಹೊಂದಿದೆ ಮತ್ತು ಅವುಗಳಿಂದ ಬಡ್ಡಿ ಆದಾಯವನ್ನು ಗಳಿಸುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಇದನ್ನೂ ಓದಿ: ತಿರುಪತಿಯಲ್ಲಿ ಮತ್ತೊಂದು ಹಗರಣ, ರೇಷ್ಮೆ ಎಂದು ಪಾಲಿಸ್ಟರ್ ದುಪಟ್ಟಾ, ಶಾಲುಗಳ ಮಾರಾಟ, ವಂಚನೆ ಬಯಲಿಗೆಳೆದ ಟಿಟಿಡಿ

ಅದೇ ಸಮಯದಲ್ಲಿ, ರತ್ನಗಳು, ವಜ್ರಗಳು ಮತ್ತು ಇತರ ಅಮೂಲ್ಯ ಕಲ್ಲುಗಳಿಂದ ತುಂಬಿದ ಆಭರಣಗಳನ್ನು ಬೇರ್ಪಡಿಸಿ ಹರಾಜು ಹಾಕಲು ಪ್ರಸ್ತಾಪಿಸಲಾಗಿದೆ. ಹರಾಜಿನಿಂದ ಬರುವ ಹಣವನ್ನು ಟಿಟಿಡಿ ಖಾತೆಗಳಲ್ಲಿ ನಗದು ರೂಪದಲ್ಲಿ ಇಡಬಾರದು, ಬದಲಾಗಿ ಚಿನ್ನದ ಬಿಸ್ಕತ್ತುಗಳಲ್ಲಿ ಮರುಖರೀದಿ ಮಾಡಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡಬೇಕು ಎಂಬುದು ಪ್ರಸ್ತಾವನೆಯಾಗಿದೆ. ಹೀಗಾಗಿ, ಹುಂಡಿ ಮೂಲಕ ಪಡೆದ ಸಂಪತ್ತನ್ನು ಚಿನ್ನದ ರೂಪದಲ್ಲಿ ಸಂಗ್ರಹಿಸಲು ಟಿಟಿಡಿ ನಿರ್ಧರಿಸಿದೆ.

ಹರಾಜಾಗುವ ಆಭರಣಗಳ ಮೌಲ್ಯವನ್ನು ಟಿಟಿಡಿ ಮೌಲ್ಯಮಾಪಕರು, ಮಾನ್ಯತೆ ಪಡೆದ ರತ್ನಶಾಸ್ತ್ರಜ್ಞರು ಮತ್ತು ಸರ್ಕಾರಿ ಟಂಕಸಾಲೆಯ ತಜ್ಞರು ಜಂಟಿಯಾಗಿ ಅಂದಾಜು ಮಾಡಬೇಕೆಂದು ಪ್ರಸ್ತಾಪಿಸಲಾಗಿದೆ. ಟಿಟಿಡಿ ಆಭರಣ ತಾಂತ್ರಿಕ ಸಲಹಾ ಸಮಿತಿಯ ಅನುಮೋದನೆಯ ನಂತರ, ನಿವೃತ್ತ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸಮಿತಿಯ ಸಮ್ಮುಖದಲ್ಲಿ ವರ್ಷಕ್ಕೊಮ್ಮೆ ಹರಾಜು ನಡೆಸಲು ನಿಯಮಗಳನ್ನು ರೂಪಿಸಲು ಯೋಜಿಸಲಾಗಿದೆ.

ಇದನ್ನೂ ಓದಿ: ತಿರುಪತಿ ದೇವಸ್ಥಾನದ ಆಡಳಿತದಿಂದ ಹಿಂದೂಯೇತರರು ಹೊರಕ್ಕೆ: ಟಿಟಿಡಿ ನಿರ್ಧಾರ

ಈ ಬದಲಾವಣೆಗಳಿಗಾಗಿ ಸರ್ಕಾರ ನೇಮಿಸಿದ ತಜ್ಞರ ಸಮಿತಿಯ ಶಿಫಾರಸುಗಳನ್ನು ಸಹ ಗಣನೆಗೆ ತೆಗೆದುಕೊಂಡಿದೆ ಎಂದು ಟಿಟಿಡಿ ಹೇಳಿದೆ. ಹುಂಡಿ ಚಿನ್ನದ ಬಳಕೆ, ಆಭರಣಗಳ ನಿರ್ವಹಣೆ ಮತ್ತು ಚಿನ್ನದ ಮೀಸಲು ಹೂಡಿಕೆಯಂತಹ ವಿಷಯಗಳ ಬಗ್ಗೆ ನಿಯಮಗಳನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಹಿಂದೆ ಸಲಹೆಗಳು ಬಂದಿವೆ.

ಆದರೆ, ಟಿಟಿಡಿಯ ಈ ಪ್ರಸ್ತಾವನೆಗೆ ಆಕ್ಷೇಪಣೆಗಳು ವ್ಯಕ್ತವಾಗುತ್ತಿವೆ. ಭಕ್ತರು ದೇವರಿಗೆ ಕಾಣಿಕೆಯಾಗಿ ಅರ್ಪಿಸುವ ಚಿನ್ನದ ಉಡುಗೊರೆಗಳಲ್ಲಿನ ರತ್ನಗಳು ಮತ್ತು ಕಲ್ಲುಗಳನ್ನು ಹರಾಜು ಹಾಕುವ ಅಧಿಕಾರ ಟಿಟಿಡಿಗೆ ಎಷ್ಟರ ಮಟ್ಟಿಗೆ ಇದೆ ಎಂಬ ಪ್ರಶ್ನೆಗಳು ಎದ್ದಿವೆ. ಭಕ್ತರು ನಂಬಿಕೆಯಿಂದ ನೀಡುವ ಉಡುಗೊರೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ಹೆಚ್ಚಿನ ಸ್ಪಷ್ಟತೆ ಮತ್ತು ಕಾನೂನು ಪರಿಶೀಲನೆಯ ಅಗತ್ಯವಿದೆ ಎಂಬ ಟೀಕೆಗಳಿವೆ. ಇದಲ್ಲದೆ, 2026ರಲ್ಲಿ ದೇಶಾದ್ಯಂತ ದೇವಾಲಯಗಳ ಚಿನ್ನದ ನಿಕ್ಷೇಪಗಳನ್ನು ಸರ್ಕಾರ ಹಣಗಳಿಸಲಿದೆ ಎಂಬ ಪ್ರಚಾರವನ್ನು ಕೇಂದ್ರ ಹಣಕಾಸು ಸಚಿವಾಲಯ ನಿರಾಕರಿಸಿತು. ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳು ಹೊಂದಿರುವ ಚಿನ್ನಕ್ಕಾಗಿ ಕೇಂದ್ರವು ಹೊಸ ಹಣಗಳಿಸುವ ಯೋಜನೆಯನ್ನು ತರುತ್ತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಭಕ್ತರು ದಾನ ಮಾಡಿದ ಇತರ ವಸ್ತುಗಳನ್ನು ನಿಯಮಗಳ ಪ್ರಕಾರ ಟಿಟಿಡಿ ಈಗಾಗಲೇ ಹರಾಜು ಮಾಡುತ್ತಿದೆ. ಉದಾಹರಣೆಗೆ, 2026ರಲ್ಲಿ ಭಕ್ತರು ದಾನ ಮಾಡಿದ ಬಟ್ಟೆಗಳನ್ನು ಆನ್‌ಲೈನ್ ಹರಾಜಿನ ಮೂಲಕ ಮಾರಾಟ ಮಾಡಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದೆ. ಒಟ್ಟಾರೆಯಾಗಿ, ವೆಂಕಣ್ಣ ಹುಂಡಿಯಲ್ಲಿರುವ ಚಿನ್ನದ ಉಡುಗೊರೆಗಳ ಮೌಲ್ಯವನ್ನು ಮಾರಾಟ ಮಾಡುವ ಬದಲು ಭವಿಷ್ಯದ ದೇವಾಲಯದ ಅಗತ್ಯತೆಗಳು ಮತ್ತು ಬ್ಯಾಂಕ್ ಠೇವಣಿಗಳ ಮೂಲಕ ಆದಾಯಕ್ಕಾಗಿ ಬಳಸುವುದು ಟಿಟಿಡಿಯ ಪ್ರಸ್ತಾಪದ ಮುಖ್ಯ ಉದ್ದೇಶವಾಗಿದೆ. ಆದರೆ, ರತ್ನಗಳು ಮತ್ತು ಅಮೂಲ್ಯ ಕಲ್ಲುಗಳ ಹರಾಜಿನ ಕುರಿತು ಅಂತಿಮ ನಿರ್ಧಾರವು ಸರ್ಕಾರ ಅನುಮೋದನೆ ನೀಡಿದ ನಂತರ ಮತ್ತು ನಿಯಮಗಳನ್ನು ಸ್ಪಷ್ಟಪಡಿಸಿದ ನಂತರವೇ ಜಾರಿಗೆ ಬರುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಪೇಂದ್ರ ನಟನೆಯ ‘ನೆಕ್ಸ್ಟ್ ಲೆವೆಲ್’ ಸಿನಿಮಾಗೆ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿ – Kannada News | Upendra Next Level movie Malashree Daughter Aaradhana Ram Female Lead

ಖ್ಯಾತ ನಟ ‘ರಿಯಲ್ ಸ್ಟಾರ್’ ಉಪೇಂದ್ರ (Upendra) ಅವರು ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ಅವರು ಹೊಸ ಸಿನಿಮಾ ‘ನೆಕ್ಸ್ಟ್ ಲೆವೆಲ್’ (Next Level) ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿದೆ. ದೊಡ್ಡ ಬಜೆಟ್​​ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಇತ್ತೀಚೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಬೆಂಗಳೂರಿನ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ಮಾಡಲಾಗಿದೆ. ಈ ಸಿನಿಮಾಗೆ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ (Aaradhana Ram) ಅವರು ಹೀರೋಯಿನ್ ಎಂಬುದು ವಿಶೇಷ.

‘ನೆಕ್ಸ್ಟ್ ಲೆವೆಲ್’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡದ ಜೊತೆ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಉಪೇಂದ್ರ ಅವರ ಪುತ್ರ ಆಯುಷ್ ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಶುಭಕೋರಿದರು. ಪ್ರಿಯಾಂಕಾ ಉಪೇಂದ್ರ ಮತ್ತು ಹಿರಿಯ ನಟಿ ಮಾಲಾಶ್ರೀ ಕೂಡ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಅವರು ‘ಕಾಟೇರ’ ಸಿನಿಮಾದ ಮೂಲಕ ಗಾಂಧಿನಗರಕ್ಕೆ ಪಾದಾರ್ಪಣೆ ಮಾಡಿ ದೊಡ್ಡ ಯಶಸ್ಸು ಕಂಡರು. ಆ ಬಳಿಕ ಅವರು ಒಪ್ಪಿಕೊಂಡಿದ್ದೇ ‘ನೆಕ್ಸ್ಟ್ ಲೆವೆಲ್’ ಸಿನಿಮಾ. ‘ಕಾಟೇರ’ ಸಿನಿಮಾದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದ ಆರಾಧನಾ ಅವರು ಈಗ ಉಪೇಂದ್ರ ಜೊತೆಗಿನ ಚಿತ್ರದಲ್ಲಿ ತೀರಾ ಭಿನ್ನವಾದ ಬೋಲ್ಡ್ ಮತ್ತು ಗ್ಲಾಮರಸ್ ಪಾತ್ರ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯ ಮಗಳ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾದದಲ್ಲಿ ಮತ್ತೊಂದು ವಿಶೇಷತೆಯಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೆ ಅವರ ಸಹೋದರನ ಮಗ, ನಟ ನಿರಂಜನ್ ಸುಧೀಂದ್ರ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಂದೇ ಸಿನಿಮಾದಲ್ಲಿ ಚಿಕ್ಕಪ್ಪ-ಮಗನ ಜುಗಲ್‌ಬಂದಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ‘ನೆಕ್ಸ್ಟ್ ಲೆವೆಲ್’ ಚಿತ್ರ ಕೌತುಕ ಮೂಡಿಸಿದೆ.

ಇದನ್ನೂ ಓದಿ: ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ

‘ನೆಕ್ಸ್ಟ್ ಲೆವೆಲ್’ ಸಿನಿಮಾಗೆ ‘ವಿಕ್ಟರಿ 2’ ಮತ್ತು ‘ಛೂ ಮಂತರ್’ ಖ್ಯಾತಿಯ ನಿರ್ಮಾಪಕ ತರುಣ್ ಶಿವಪ್ಪ ಅವರು ತಮ್ಮದೇ ‘ತರುಣ್ ಸ್ಟುಡಿಯೋಸ್’ ಬ್ಯಾನರ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಅರವಿಂದ್ ಕೌಶಿಕ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಉಪೇಂದ್ರ ಅವರ ಹಳೆಯ ಸಿನಿಮಾಗಳಾದ ‘ಎ’, ‘ಉಪೇಂದ್ರ’, ‘ರಕ್ತಕಣ್ಣೀರು’ ಶೈಲಿಯಲ್ಲಿ ‘ನೆಕ್ಸ್ಟ್ ಲೆವೆಲ್’ ಸಿನಿಮಾ ಇರಲಿದೆ ಎಂದು ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಂತ್ರದಲ್ಲಿ ಸಿಲುಕಿದ ಅಡುಗೆ ಸಿಬ್ಬಂದಿಯ ಕೈಬೆರಳು: ಭಾರೀ ಅವಘಡ ತಪ್ಪಿಸಿದ ವಿದ್ಯಾರ್ಥಿ; ಎಲ್ಲೆಡೆ ಮೆಚ್ಚುಗೆ – Kannada News | Student Averts Major Accident After Kitchen Staff Member’s Finger Gets Caught in Machine

ವಿದ್ಯಾರ್ಥಿ ಮನ್ವಿತ್‌Image Credit source: CMofKarnataka

ಮಂಗಳೂರು, ಆಗಸ್ಟ್​​ 13: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಓರ್ವ ವಿದ್ಯಾರ್ಥಿ (student) ಅಡುಗೆ ಸಿಬ್ಬಂದಿಯನ್ನು ಪ್ರಾಣಾಪಾಯದಿಂದ ಕಾಪಾಡಿರುವಂತಹ ಘಟನೆ ನಡೆದಿದೆ. ಸದ್ಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಶಿಕ್ಷಕರು ಸೇರಿದಂತೆ ಸಿಎಂ ಡಿಕೆ ಶವಿಕುಮಾರ್ (DK Shivakumar) ಕೂಡ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಡೆದಿದ್ದೇನು?

ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಅಕ್ಷರ ದಾಸೋಹ ಸಿಬ್ಬಂದಿಯೊಬ್ಬರು ವಿದ್ಯುತ್ ಚಾಲಿತ ಯಂತ್ರದಲ್ಲಿ ತೆಂಗಿನಕಾಯಿ ತುರಿಯುತ್ತಿದ್ದಾಗ, ಆಕಸ್ಮಿಕವಾಗಿ ಅವರ ಕೈಬೆರಳು ಚಾಲನೆಯಲ್ಲಿದ್ದ ಯಂತ್ರದೊಳಗೆ ಸಿಲುಕಿಕೊಂಡಿತು. ನೋವಿನ ತೀವ್ರತೆಗೆ ಸಿಬ್ಬಂದಿ ಕಿರುಚಾಡಲು ತೊಡಗಿದರು.

ಸಿಎಂ ಡಿಕೆ ಶಿವಕುಮಾರ್​ ಟ್ವೀಟ್​

ಈ ಕ್ಷಣದಲ್ಲಿ ಸ್ವಲ್ಪ ತಡವಾದರೂ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಆದರೆ, ಅಲ್ಲಿಗೆ ಬಂದ ಮನ್ವಿತ್, ಪರಿಸ್ಥಿತಿಯ ಗಂಭೀರತೆ ಅರಿತು ಎದೆಗುಂದದೆ ಧಾವಿಸಿ ಹೋಗಿ ತಕ್ಷಣ ವಿದ್ಯುತ್​ ಸಂಪರ್ಕ ಕಡಿತಗೊಳಿಸುವ ಮೂಲಕ ಮುಂದಾಗಬಹುದಿದ್ದ ಭಾರೀ ಅನಾಹುತ್​ವೊಂದನ್ನು ತಪ್ಪಿಸಿದ್ದಾನೆ. ಸದ್ಯ ವಿದ್ಯಾರ್ಥಿ ಮನ್ವಿತ್ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿದ್ಯಾರ್ಥಿ ಮನ್ವಿತ್​​ ಸಾಹಸಕ್ಕೆ ಸಿಎಂ ಡಿಕೆ ಶಿವಕುಮಾರ್​ ಮೆಚ್ಚುಗೆ

ಇನ್ನು ವಿದ್ಯಾರ್ಥಿ ಮನ್ವಿತ್​​ ಸಾಹಸಕ್ಕೆ ಸಿಎಂ ಡಿಕೆ ಶಿವಕುಮಾರ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯ ನಿಜಕ್ಕೂ ಹೃದಯಸ್ಪರ್ಶಿ ಮತ್ತು ಶ್ಲಾಘನೀಯ. ಅಡುಗೆ ಸಿಬ್ಬಂದಿಯನ್ನು ಅಪಾಯದಿಂದ ಕಾಪಾಡಿದ ಮನ್ವಿತ್‌ಗೆ ಹೃದಯಪೂರ್ವಕ ಅಭಿನಂದನೆಗಳು’ ಎಂದಿದ್ದಾರೆ.

‘ವಿದ್ಯುತ್‌ ಚಾಲಿತ ಕಾಯಿ ತುರಿಯುವ ಯಂತ್ರದಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯ ಕೈಬೆರಳು ಸಿಲುಕಿಕೊಂಡು ಅವರು ನೋವಿನಿಂದ ಕಿರುಚುತ್ತಿದ್ದಾಗ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ ಮನ್ವಿತ್‌, ತಕ್ಷಣ ವಿದ್ಯುತ್‌ ಸ್ವಿಚ್‌ ಆಫ್‌ ಮಾಡುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ್ದಾನೆ’.

ಇದನ್ನೂ ಓದಿ: ರಸ್ತೆ ಗುಂಡಿಯಲ್ಲಿ ‘ಕೆರೆ-ದಂಡೆ’ ಆಟ: ಹಾಳಾದ ರಸ್ತೆ ವಿರುದ್ಧ ಯುವಕರ ವಿಶಿಷ್ಟ ಪ್ರತಿಭಟನೆ

‘ಬಾಲಕನ ಒಂದು ಕ್ಷಣದ ಜಾಗರೂಕತೆ, ಸರಿಯಾದ ನಿರ್ಧಾರವೊಂದು ಅಡುಗೆ ಸಿಬ್ಬಂದಿಯ ಕೈಬೆರಳನ್ನು ಉಳಿಸಿದೆ. ಮನ್ವಿತ್‌ನ ಈ ಮಾನವೀಯ ಕಾಳಜಿ, ಧೈರ್ಯ ಮತ್ತು ಸಮಯಪ್ರಜ್ಞೆ ಎಲ್ಲರಿಗೂ ಮಾದರಿಯಾಗಲಿ. ಬಾಲಕನ ಮುಂದಿನ ಭವಿಷ್ಯ ಉಜ್ವಲವಾಗಲಿ, ಸಮಾಜದ ಒಳಿತಿಗಾಗಿ ಸದಾ ಸ್ಪಂದಿಸುವ ಉತ್ತಮ ಪ್ರಜೆಯಾಗಿ ಬೆಳೆದು ನಾಡಿಗೆ ಕೀರ್ತಿ ತರಲಿ’ ಎಂದು ಸಿಎಂ ಡಿಕೆ ಶಿವಕುಮಾರ್​ ಹಾರೈಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs AFG: ಭಾರತ-ಅಫ್ಘಾನಿಸ್ತಾನ ಟಿ20 ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ – Kannada News | India vs Afghanistan T20 Schedule: ACB Plans Sep 14 Match for Ganesh Chaturthi

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವೆ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಯ ವಿಶೇಷತೆ ಏನೆಂದರೆ, ಟೀಂ ಇಂಡಿಯಾಕ್ಕೆ ಭಾರತದಲ್ಲಿ ಅಫ್ಘಾನಿಸ್ತಾನ ಆತಿಥ್ಯವಹಿಸುತ್ತಿದೆ. ಅಂದರೆ ಟೀಂ ಇಂಡಿಯಾ ತನ್ನ ತವರಿನಲ್ಲಿ ಪ್ರವಾಸಿ ತಂಡವಾಗಿ ಆಡಲಿದೆ. ಇತ್ತ ಅಫ್ಘಾನಿಸ್ತಾನ ಆತಿಥೇಯ ತಂಡವಾಗಿ ಆಡಲಿದೆ. ಈ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು. ಆದರೆ ಆ ವೇಳಾಪಟ್ಟಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ವರದಿಯ ಪ್ರಕಾರ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಸೆಪ್ಟೆಂಬರ್ 14 ರಂದು ಸರಣಿಯ ಎರಡನೇ ಟಿ20 ಪಂದ್ಯವನ್ನು ನಡೆಸಲು ಪರಿಗಣಿಸುತ್ತಿದೆ.

2ನೇ ಪಂದ್ಯದ ದಿನಾಂಕ ಬದಲಾವಣೆ

ಈಗ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಸೆಪ್ಟೆಂಬರ್ 13 ರಂದು ನಡೆಯಲಿದ್ದು, ಎರಡನೇ ಪಂದ್ಯ ಸೆಪ್ಟೆಂಬರ್ 15 ರಂದು ನಡೆಯಲಿದೆ. ಆದರೆ ಇದೀಗ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಅಫ್ಘಾನ್ ಕ್ರಿಕೆಟ್ ಮಂಡಳಿಯು ಎರಡನೇ ಟಿ20 ಪಂದ್ಯವನ್ನು ಸೆಪ್ಟೆಂಬರ್ 14 ರಂದು ನಡೆಸಲು ಬಯಸಿದೆ. ಇದಕ್ಕೆ ಕಾರಣ, ಸೆಪ್ಟೆಂಬರ್ 14 ರಂದು ಭಾರತದಲ್ಲಿ ಗಣೇಶ ಚತುರ್ಥಿ ಹಬ್ಬವಿದೆ. ಈ ದಿನ ಸರ್ಕಾರಿ ರಜೆಯಾಗಿರುವ ಕಾರಣ ಪ್ರೇಕ್ಷಕರು ಪಂದ್ಯವನ್ನು ನೋಡಲು ಕ್ರೀಡಾಂಗಣಕ್ಕೆ ಬರುತ್ತಾರೆ ಎಂಬುದು.

ವೇಳಾಪಟ್ಟಿ ಬದಲಾಗಲು ಕಾರಣ

ಇದೇ ಕಾರಣಕ್ಕಾಗಿ ಅಫ್ಘಾನ್ ಮಂಡಳಿಯು ಸೆಪ್ಟೆಂಬರ್ 14 ರಂದು ಟಿ20 ಪಂದ್ಯವನ್ನು ಆಯೋಜಿಸುವ ಬಗ್ಗೆ ಯೋಚಿಸುತ್ತಿದೆ. ಸೆಪ್ಟೆಂಬರ್ 13 ಭಾನುವಾರವಾಗಿರುವ ಕಾರಣ ಪ್ರೇಕ್ಷಕರು ಖಚಿತವಾಗಿ ಕ್ರೀಡಾಂಗಣಕ್ಕೆ ಬರುತ್ತಾರೆ. ಸೆಪ್ಟೆಂಬರ್ 14 ಸೋಮವಾರವಾದರೂ, ಅಂದು ಗಣೇಶ ಚತುರ್ಥಿ ಇರುವ ಕಾರಣ ಅಂದು ಕೂಡ ಸರ್ಕಾರಿ ರಜೆ ಇರಲಿದೆ. ಹೀಗಾಗಿ ಹೆಚ್ಚಿನ ಪ್ರೇಕ್ಷಕರು ಮೈದಾನಕ್ಕೆ ಬರಲಿದ್ದಾರೆ. ಇದರಿಂದ ಟಿಕೆಟ್ ಮಾರಾಟ ಹೆಚ್ಚಳವಾಗುವುದರಿಂದ ಅಫ್ಘಾನ್ ಕ್ರಿಕೆಟ್ ಮಂಡಳಿಗೆ ಹೆಚ್ಚಿನ ಆದಾಯವನ್ನು ತಂದುಕೊಡುತ್ತದೆ. ಅದಕ್ಕಾಗಿಯೇ ಎಸಿಬಿ ಈ ನಿರ್ಧಾರಕ್ಕೆ ಬಂದಿದೆ. ಆದಾಗ್ಯೂ, ಇದಕ್ಕೆ ಬಿಸಿಸಿಐ ಅನುಮೋದನೆಯೂ ಅಗತ್ಯವಾಗಿರುತ್ತದೆ.

ICC Rankings: ಏಕದಿನ, ಟೆಸ್ಟ್, ಟಿ20 ಮಾದರಿಯಲ್ಲೂ ಭಾರತೀಯರದ್ದೇ ಪಾರುಪತ್ಯ

ಪ್ರಸ್ತುತ ವೇಳಾಪಟ್ಟಿ

ಈ ಸರಣಿ ಸೆಪ್ಟೆಂಬರ್ 13 ರಿಂದ 17 ರವರೆಗೆ ನಡೆಯಲಿದೆ. ಮೂರೂ ಪಂದ್ಯಗಳು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಅಫ್ಘಾನಿಸ್ತಾನವು ಭಾರತದ ನೆಲದಲ್ಲಿ ಟೀಂ ಇಂಡಿಯಾಕ್ಕೆ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್‌ನಂತಹ ತಂಡಗಳಿಗೆ ಭಾರತದಲ್ಲಿ ಆತಿಥ್ಯ ನೀಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:17 pm, Thu, 13 August 26

Source link

ಏರ್ ಇಂಡಿಯಾದ ಎಲ್ಲ ಪೈಲಟ್‌ಗಳಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ – Kannada News | Air India mandatory Drugs tests for all pilots after after Phuket Delhi Incident

ನವದೆಹಲಿ, ಆಗಸ್ಟ್ 13: ಆಕಾಶದಲ್ಲಿ ಹಾರಾಡುವಾಗಲೇ ತೀವ್ರ ಗಾಳಿಯ ಅಡಚಣೆಗೆ (ಟರ್ಬುಲೆನ್ಸ್) ಒಳಗಾಗಿದ್ದ ಏರ್ ಇಂಡಿಯಾ (Air India) ವಿಮಾನದ ಮುಖ್ಯ ಪೈಲಟ್ ಡ್ರಗ್ಸ್ ಸೇವಿಸಿ ವಿಮಾನ ಹಾರಿಸುತ್ತಿದ್ದರು ಎಂಬ ಶಾಕಿಂಗ್ ವಿಷಯ ಹೊರಬಿದ್ದ ಬೆನ್ನಲ್ಲೇ, ಏರ್ ಇಂಡಿಯಾ ತನ್ನ ಎಲ್ಲಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಸೇವನೆ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಪ್ರಯಾಣಿಕರ ಭದ್ರತೆ ಮತ್ತು ವೈಮಾನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಏರ್ ಇಂಡಿಯಾ ಆಡಳಿತ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎರಡೂ ಸಂಸ್ಥೆಗಳು ತಮ್ಮ ಪೈಲಟ್‌ಗಳಿಗೆ ಆಂತರಿಕ ಸಂದೇಶ ರವಾನಿಸಿದ್ದು, ವಿಮಾನಯಾನ ರಂಗದ ಪ್ರಸ್ತುತ ನಿಯಮಾವಳಿಗಳ ಅಡಿಯಲ್ಲಿ ಅನುಮತಿಸದ ಯಾವುದೇ ಮಾದಕ ವಸ್ತುಗಳು ಅಥವಾ ಔಷಧಗಳ ಸೇವನೆಗೆ ಸಂಬಂಧಿಸಿದಂತೆ ಸ್ಕ್ರೀನಿಂಗ್ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿವೆ. ಈ ಪರೀಕ್ಷೆಗಳು ಕಡ್ಡಾಯವಾಗಿದ್ದು, ಆಗಸ್ಟ್ 13ರಿಂದ ಆರಂಭವಾಗಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಆಕಾಶದಿಂದ 300 ಅಡಿ ಕುಸಿದ ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ; 14 ಜನರಿಗೆ ಗಾಯ

ವಿಮಾನಯಾನ ಸಚಿವಾಲಯದ ನಿಯಮಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಪ್ರತಿ ವರ್ಷ ತಮ್ಮ ಒಟ್ಟು ವಿಮಾನ ಸಿಬ್ಬಂದಿಯಲ್ಲಿ ಕನಿಷ್ಠ ಶೇ. 10ರಷ್ಟು ಸಿಬ್ಬಂದಿಗೆ ಸೈಕೋಆಕ್ಟಿವ್ ಮಾದಕದ್ರವ್ಯ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ. ವಿಮಾನಯಾನ ಕ್ಷೇತ್ರದ ಸುರಕ್ಷತಾ ಮಾನದಂಡಗಳನ್ನು ಎತ್ತಿಹಿಡಿಯಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಮತ್ತು ಇತರ ಪಾಲುದಾರರಲ್ಲಿ ವಿಶ್ವಾಸ ಮೂಡಿಸಲು ಈ ನಿರ್ಧಾರ ಅಗತ್ಯವಾಗಿತ್ತು ಎಂದು ಏರ್ ಇಂಡಿಯಾ ಹೇಳಿದೆ.

ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾದ A320neo ವಿಮಾನ ಹಾರಾಟದ ಮಧ್ಯದಲ್ಲಿಯೇ ಇದ್ದಕ್ಕಿದ್ದಂತೆ ಸುಮಾರು 300 ಅಡಿ ಎತ್ತರದಿಂದ ಕೆಳಕ್ಕೆ ಕುಸಿದಿತ್ತು. ಈ ವಿಮಾನದ ಕ್ಯಾಪ್ಟನ್ ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಹೀಗಾಗಿ, ಏರ್ ಇಂಡಿಯಾ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ; ವಿಮಾನದ ಇಂಧನ ಸ್ವಿಚ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಸಂಸತ್​ಗೆ ಸರ್ಕಾರ ಮಾಹಿತಿ

ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ದೇಹದಲ್ಲಿ ಅಪಾಯಕಾರಿ ಮಟ್ಟದ ಡ್ರಗ್ಸ್ ಅಂಶಗಳು ಪತ್ತೆಯಾದ ತಕ್ಷಣವೇ ಅವರ ಹಾರಾಟದ ಲೈಸೆನ್ಸ್ ರದ್ದುಗೊಳಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಸ್ತುತ ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಈ ಗಂಭೀರ ಲೋಪದ ನಂತರ ಏರ್ ಇಂಡಿಯಾ ತನ್ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಪೈಲಟ್ (ಕ್ಯಾಪ್ಟನ್ ಹಾಗೂ ಕೋ-ಪೈಲಟ್)ಗೂ ಮಾದಕ ದ್ರವ್ಯ ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ಹಾರಾಟಕ್ಕೂ ಮುನ್ನ ಮತ್ತು ನಂತರ ನಡೆಸುವ ಆಲ್ಕೋಹಾಲ್ ಪರೀಕ್ಷೆಯ ಜೊತೆಗೆ ಇನ್ಮುಂದೆ ಅತ್ಯಾಧುನಿಕ ಟಾಕ್ಸಿಕಾಲಜಿ ಡ್ರಗ್ ಟೆಸ್ಟ್ ಕಡ್ಡಾಯವಾಗಲಿದೆ.

ಈ ಘಟನೆಯ ಕುರಿತು ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ತನಿಖೆಯನ್ನು ಚುರುಕುಗೊಳಿಸಿದ್ದು, ಒಂದು ತಿಂಗಳೊಳಗೆ ಮಧ್ಯಂತರ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ. ಫ್ರೆಂಚ್ ತನಿಖಾ ಸಂಸ್ಥೆ (BEA) ಹಾಗೂ ಏರ್‌ಬಸ್ ಕಂಪನಿಯ ನೆರವಿನೊಂದಿಗೆ ಬ್ಲ್ಯಾಕ್ ಬಾಕ್ಸ್ (FDR ಹಾಗೂ CVR) ದತ್ತಾಂಶಗಳನ್ನು ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಕಾಯ್ದೆಯೊಂದಿಗೆ ಕರ್ನಾಟಕದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ಯಾ? – Kannada News | Governmnet To Plan Break RSS activities With New Bill Karnataka State Public Places and Access Regulation Bill 2026

ಬೆಂಗಳೂರು, (ಆಗಸ್ಟ್ 13):  ಕರ್ನಾಟಕದಲ್ಲಿ ಕಾಂಗ್ರೆಸ್ (Karnataka) ವರ್ಸಸ್ ಆರ್​​​​ಎಸ್​​​ಎಸ್​​​ (RSS) ಸಂಘರ್ಷಕ್ಕೆ ಮತ್ತೊಂದು ವೇದಿಕೆ ಸಿದ್ಧವಾಗುವ ಲಕ್ಷಣಗಳು ಕಾಣುತ್ತಿವೆ. ಹೌದು…  ‘ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ–2026’ ಕಾಯ್ದೆಯನ್ನು (Karnataka State Public Places and Access Regulation Bill 2026) ಜಾರಿಗೆ ತರಲು ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಕಾಯ್ದೆ ಕುರಿತು ಇಂದಿನ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದು, ವಿಧೇಯಕಕ್ಕೆ ಅನುಮೋದನೆ ಸಹ ದೊರೆತಿದೆ. ಹೌದು….ಇದೆ ಅಧಿವೇಶನಲ್ಲಿ ವಿಧೇಯಕ ಮಂಡನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ವಿಧೇಯಕದ ಮೂಲಕ ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ಸಂಘಟನೆ ಅಥವಾ ಸಂಸ್ಥೆ ಕಾರ್ಯಕ್ರಮ ಆಯೋಜಿಸುವ ಸಂದರ್ಭದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರೊಂದಿಗೆ ಸಾರ್ವಜನಿಕವಾಗಿ ಆರ್ ಎಸ್ ಎಸ್ ನಡೆಸುವ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ವರ್ಸಸ್ ಆರ್​​ಎಸ್​​​​​​ಎಸ್​​ ನಡುವಿನ ಕಾಳಗ ಶುರುವಾಗುವ ಸಾಧ್ಯತೆಗಳಿವೆ.

ಏನಿದು ವಿಧೇಯಕ?

ವಿಶೇಷವಾಗಿ ಆರ್‌ಎಸ್‌ಎಸ್‌ನ ಪಥಸಂಚಲನ, ಸಾರ್ವಜನಿಕ ಕಾರ್ಯಕ್ರಮಗಳು, ಸಭೆಗಳು ಹಾಗೂ ಇತರೆ ಚಟುವಟಿಕೆಗಳಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಈ ವಿಧೇಯಕ ಮಹತ್ವ ಪಡೆದುಕೊಂಡಿದೆ. ಸಾರ್ವಜನಿಕ ಸ್ಥಳಗಳ ಬಳಕೆ, ಕಾರ್ಯಕ್ರಮಗಳ ಆಯೋಜನೆ ಮತ್ತು ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣಾಧಿಕಾರ ನೀಡುವ ಅಂಶಗಳು ವಿಧೇಯಕದಲ್ಲಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: RSS ಚಟುವಟಿಕೆ ನಿರ್ಬಂಧಿಸಲು ಮುಂದಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ: ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ಆಯೋಜನೆಗೆ ಅನುಮತಿ ನಿರಾಕರಿಸಿದ ವಿಚಾರ ಈ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಅನುಮತಿ ನಿರಾಕರಣೆಯನ್ನು ಪ್ರಶ್ನಿಸಿ ಆರ್‌ಎಸ್‌ಎಸ್‌ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿತ್ತು. ನಂತರ ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ಪಥಸಂಚಲನಕ್ಕೆ ಅವಕಾಶ ನೀಡಿತ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಸಂಘಟನೆಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ವ್ಯವಸ್ಥೆ ಕುರಿತು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ಚರ್ಚೆ ತೀವ್ರಗೊಂಡಿತ್ತು. ಸಾರ್ವಜನಿಕ ಆಸ್ತಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಕಾರ್ಯಕ್ರಮ ನಡೆಸುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 2025ರಲ್ಲೇ ಆದೇಶ ಹೊರಡಿಸಿತ್ತು. ಈ ಆದೇಶದಡಿ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿ ಪಡೆಯುವ ವ್ಯವಸ್ಥೆ ಜಾರಿಗೊಂಡಿತ್ತು.

ವಿಧೇಯಕದ ಮೂಲಕ RSS ಚಟುವಟಿಕೆಗಳಿಗೆ ಬ್ರೇಕ್?

ಇದೀಗ ಕಾನೂನು ರೂಪ ನೀಡುವ ನಿಟ್ಟಿನಲ್ಲಿ ‘ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ–2026’ ತರಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು, ಸಂಚಾರಕ್ಕೆ ಅಡ್ಡಿಯಾಗದಂತೆ ನಿಯಂತ್ರಿಸುವುದು ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವುದು ವಿಧೇಯಕದ ಪ್ರಮುಖ ಉದ್ದೇಶಗಳಾಗಿರಬಹುದು. ಆದ್ರೆ, ಆರ್‌ಎಸ್‌ಎಸ್‌ ಚಟುವಟಿಕೆಗಳ ಹಿನ್ನೆಲೆಯಲ್ಲಿ ವಿಧೇಯಕದ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ. ವಿಧೇಯಕವು ಕೇವಲ ಆರ್‌ಎಸ್‌ಎಸ್‌ಗೆ ಮಾತ್ರ ಅನ್ವಯವಾಗುತ್ತದೆಯೇ ಅಥವಾ ಎಲ್ಲಾ ಸಂಘಟನೆಗಳು, ಸಂಸ್ಥೆಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಮಾನವಾಗಿ ಅನ್ವಯವಾಗುತ್ತದೆಯೇ ಎಂಬುದು ವಿಧೇಯಕದ ಅಂತಿಮ ರೂಪದ ಬಳಿಕ ಸ್ಪಷ್ಟವಾಗಲಿದೆ.

ಇದೇ ಅಧಿವೇಶನಲ್ಲಿ ವಿಧೇಯಕ ಮಂಡನೆಗೆ ಸಂಪುಟ ಒಪ್ಪಿಗೆ

ಇಂದಿನ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕದ ಪ್ರಮುಖ ಅಂಶಗಳ ಕುರಿತು ಚರ್ಚೆ ಆಗಿದ್ದು, ಇದೇ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹೀಗಾಗಿ ವಿಧೇಯಕದ ಅಂತಿಮ ಸ್ವರೂಪ, ಸಾರ್ವಜನಿಕ ಪ್ರದೇಶಗಳ ವ್ಯಾಪ್ತಿ ಹಾಗೂ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ನಿಯಮಗಳ ಬಗ್ಗೆ ಸಭೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ, ಆರ್ ಎಸ್ ಎಸ್ ಬಗ್ಗೆಯೇ ಪೂರ್ವಾಗ್ರಹ ಪೀಡಿತವಾಗಿ ಇದು ಮಾಡುವಂತಹದ್ದು. ಆ ವಿಧೇಯಕ ಬಂದ ಬಳಿಕ ಅದರಲ್ಲಿ ಏನೇನು ಅಂಶಗಳಿವೆ ಅಂತಾ ನೋಡಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ಇಂದು ಶಾಖೆಗಳು ನಡೆಯುತ್ತಿವೆ. ದೇಶಭಕ್ತ ಪ್ರಜೆಗಳನ್ನು ನಿರ್ಮಿಸುವ, ಸಂಸ್ಕಾರ ಕೊಡುವ ಕೆಲಸ ಆರ್ ಎಸ್ ಎಸ್ ಮಾಡುತ್ತಿದೆ. ದೇಶದಲ್ಲಿ ಬಾಂಬ್ ಹಾಕುವ, ಚಳವಳಿ ಮಾಡಲು ಪ್ರೇರೇಪಿಸುವ ಜನರ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಇಲ್ಲ. ಒಂದು ಒಳ್ಳೆಯ ಕೆಲಸ ಮಾಡಲು ಅಡಚಣೆ ಮಾಡುವ ಹಿನ್ನೆಲೆಯಲ್ಲಿ ಈ ವಿಧೇಯಕ ತರುತ್ತಿದ್ದಾರೆ ಖಂಡಿತವಾಗಿಯೂ ಆ ವಿಧೇಯಕಕ್ಕೆ ನಾವು ವಿರೋಧ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version