Karnataka Weather Forecast: ಬೆಂಗಳೂರಿನಲ್ಲಿಂದು ವರುಣನ ಆರ್ಭಟ ಜೋರು! 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರಿನಲ್ಲಿಂದು ವರುಣನ ಆರ್ಭಟ ಜೋರು!

ಬೆಂಗಳೂರು, ಜೂನ್ 01: ರಾಜ್ಯದಲ್ಲಿ ಮುಂಗಾರು ಪೂರ್ವ ಮಾರುತಗಳು ಹಾಗೂ ಚಂಡಮಾರುತದ ಸುಳಿಗಾಳಿ ಪ್ರಭಾವ ತೀವ್ರಗೊಂಡಿದ್ದು, ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ವ್ಯಾಪಕ ಮಳೆಯಾಗುವ (Weather) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದ 7 ಪ್ರಮುಖ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಭಾರಿ ಮಳೆಯ ಯೆಲ್ಲೋ ಅಲರ್ಟ್.
  • ಉತ್ತರ ಒಳನಾಡಿನಲ್ಲಿ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆ.
  • ಗುಡುಗು-ಮಿಂಚಿನ ಸಂದರ್ಭದಲ್ಲಿ ಮರ ಮತ್ತು ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಸಾರ್ವಜನಿಕರಿಗೆ ಸೂಚನೆ.

7 ಜಿಲ್ಲೆಗಳಿಗೆ ಭಾರಿ ಮಳೆ ಮುನ್ನೆಚ್ಚರಿಕೆ

ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಂಭವವಿದೆ. ಈ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ. ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಈ ಏಳೂ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಜಾರಿಗೊಳಿಸಿದೆ. ಇದಲ್ಲದೆ, ಶಿವಮೊಗ್ಗ ಹಾಗೂ ಮಾಂಡ್ಯ ಜಿಲ್ಲೆಗಳಲ್ಲೂ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಉಳಿದ ಭಾಗಗಳಲ್ಲಿ ಒಣ ಹವಾಮಾನ ಇರಲಿದೆ.

ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳ ಸ್ಥಿತಿ

ಕರಾವಳಿ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರವಾದ ಮಳೆ ಅಥವಾ ಗುಡುಗು ಸಹಿತ ಮಳೆ ಆಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಹವಾಮಾನ ಮುಂದುವರಿಯಲಿದೆ.

ಸಾರ್ವಜನಿಕರಿಗೆ ಸೂಚನೆ

ಮಳೆ ಹಾಗೂ ಬಲವಾದ ಗಾಳಿ ಬೀಸುವ ಸಮಯದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಪ್ರಮುಖವಾಗಿ ರೈತರು ಮತ್ತು ಸಾರ್ವಜನಿಕರು ಗುಡುಗು-ಮಿಂಚಿನ ಸಂದರ್ಭದಲ್ಲಿ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಹಾಗೂ ಜಾಗರೂಕರಾಗಿರುವಂತೆ ಹವಾಮಾನ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಮಂಡಳಿ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಕ್ಕನ ಮದುವೆ ಒಂದು ದಿನ ಬಾಕಿ ಇರುವಾಗ, ತಂದೆಯ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ಮೊರಾದಾಬಾದ್, ಜೂನ್ 1: ಅಕ್ಕನ ಮದುವೆ ಒಂದು ದಿನ ಬಾಕಿ ಇರುವಾಗ ತಂದೆಯ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಜಿಲ್ಲೆಯ ಕುಂದರ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಕ್‌ಫಜ್‌ಪುರ ಗ್ರಾಮದಲ್ಲಿ ಹಬ್ಬ ಮತ್ತು ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಭೀಕರ ದುರಂತ ಸಂಭವಿಸಿದೆ. ಆರು ಸಹೋದರರಲ್ಲಿ ಕಿರಿಯವನಾದ ಫರತ್ ಅಲಿ (20) ಎಂಬ ಯುವಕ, ತನ್ನ ತಂದೆಯ ಪರವಾನಗಿ ಪಡೆದ (Licensed) ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಂಜಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ಫರಾತ್, ನಾಲ್ಕು ದಿನಗಳ ಹಿಂದೆಯಷ್ಟೇ ಈದ್ ಹಬ್ಬ ಆಚರಿಸಲು ಮತ್ತು ಇನ್ನೆಂಟು ದಿನಗಳಲ್ಲಿ ನಡೆಯಬೇಕಿದ್ದ ತನ್ನ ಸಹೋದರಿಯ ಮದುವೆಗಾಗಿ ಮನೆಗೆ ಮರಳಿದ್ದ.

ಘಟನೆ ನಡೆದಿದ್ದು ಹೇಗೆ?
ಶನಿವಾರ ರಾತ್ರಿ 9.30ರ ಸುಮಾರಿಗೆ ಫರಾತ್ ತನ್ನ ಕೋಣೆಯಲ್ಲಿದ್ದ ತಂದೆಯ ಬಂದೂಕಿನಿಂದ ಶೂಟ್ ಮಾಡಿಕೊಂಡಿದ್ದಾನೆ. ಗುಂಡಿನ ಶಬ್ದ ಕೇಳಿ ಕುಟುಂಬಸ್ಥರು ಓಡಿಬಂದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದನು. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ.

ವಿಡಿಯೋ ಮಾಡಿ ಆತ್ಮಹತ್ಯೆ?
ಘಟನೆಗೆ ಕೆಲವೇ ಕ್ಷಣಗಳ ಮುನ್ನ ಫರಾತ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ನನ್ನ ಸಾವಿನ ನಂತರ ನನ್ನ ಕುಟುಂಬಕ್ಕೆ ಯಾರೂ ಕಿರುಕುಳ ನೀಡಬಾರದು ಎಂಬ ಸಂದೇಶವಿದೆ ಎನ್ನಲಾಗಿದೆ.

ಮತ್ತಷ್ಟು ಓದಿ: ತನ್ನ ಬಳಿ ಚಿಕಿತ್ಸೆಗೆಂದು ಬಂದಿದ್ದ ಹುಚ್ಚನನ್ನೇ ಪ್ರೀತಿಸಿ ಮದುವೆಯಾಗಿದ್ದ ಮನೋವೈದ್ಯೆ ಆತ್ಮಹತ್ಯೆ

ಪೊಲೀಸ್ ತನಿಖೆ: ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಘಟನೆಗೆ ಬಳಸಲಾದ ಬಂದೂಕು ಮತ್ತು ಮೃತನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಯುವಕ ತೀವ್ರ ಮಾನಸಿಕ ಒತ್ತಡದಲ್ಲಿದ್ದನೇ ಅಥವಾ ಯಾವುದೇ ವೈಯಕ್ತಿಕ ವಿವಾದಗಳನ್ನು ಎದುರಿಸುತ್ತಿದ್ದನೇ ಎಂಬ ಬಗ್ಗೆ ಮತ್ತು ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ತಿಳಿಯಲು ಪೊಲೀಸರು ಡಿಜಿಟಲ್ ಪುರಾವೆಗಳ ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿನಿಮಾ ಸೋತಿದ್ದಕ್ಕೆ ಪ್ರೇಕ್ಷಕರನ್ನು ದೂಷಿಸಿದ ನಯನತಾರಾ ಪತಿ; ಇದು ಸರಿ ಅಲ್ಲ ಎಂದ ಫ್ಯಾನ್ಸ್

ವಿಘ್ನೇಶ್​-ನಯನಾತಾರImage Credit source: Nayanthara Instagram

ತಮಿಳು ನಿರ್ದೇಶಕ, ನಯನತಾರಾ ಪತಿ ವಿಘ್ನೇಶ್ ಶಿವನ್ (Vignesh Shivan) ಆ್ಯಕ್ಷನ್ ಕಟ್ ಹೇಳಿದ್ದ ‘ಲವ್ ಇನ್ಶೂರೆನ್ಸ್ ಕಂಪನಿ’ (LIK) ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಫಲವಾಗಿತ್ತು. ಪ್ರದೀಪ್ ರಂಗನಾಥನ್, ಎಸ್.ಜೆ. ಸೂರ್ಯ ಹಾಗೂ ಕೃತಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರ ದೊಡ್ಡ ಸೋಲು ಕಂಡಿತ್ತು. ಆದರೆ, ಇತ್ತೀಚೆಗಷ್ಟೇ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ವಿಘ್ನೇಶ್ ಹೇಳಿಕೊಂಡಿದ್ದಾರೆ. ಪ್ರೇಕ್ಷಕರು ತಮ್ಮ ಕೈ ಹಿಡಿದಿಲ್ಲ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.

‘ಎಲ್​ಐಕೆ’ ಚಿತ್ರವನ್ನು ಬರೋಬ್ಬರಿ 190 ಕೋಟಿ ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಪ್ರದೀಪ್ ರಂಗನಾಥ್ ಅವರ ಸಿನಿಮಾಗಳಿಗೆ ದೊಡ್ಡ ಗೆಲುವು ಸಿಗುತ್ತಿರುವುದರಿಂದ ಇಷ್ಟು ಹೂಡಿಕೆ ಮಾಡಲಾಗಿತ್ತು. ಆದರೆ ಆನ್‌ಲೈನ್ ನೆಗೆಟಿವಿಟಿ ಹಾಗೂ ಕಳಪೆ ವಿಮರ್ಶೆಗಳ ಕಾರಣದಿಂದಾಗಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೇವಲ 66 ಕೋಟಿ ಮಾತ್ರ ಗಳಿಸಲು ಶಕ್ತವಾಗಿ ಭಾರಿ ನಷ್ಟ ಅನುಭವಿಸಿತ್ತು.

ಒಟಿಟಿಯಲ್ಲಿ ಸಿನಿಮಾ ನೋಡಿದ ಹಲವರು ಚಿತ್ರವನ್ನು ಮೆಚ್ಚಿಕೊಳ್ಳುತ್ತಿರುವುದನ್ನು ಕಂಡು ವಿಘ್ನೇಶ್ ಶಿವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಚಿತ್ರದ ಸೋಲಿನ ಹಿಂದಿನ ಅಸಲಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಅಸಮಾಧಾನ ಹೊರಹಾಕಿರುವ ವಿಘ್ನೇಶ್ ಶಿವನ್, ‘ಸಿನಿಮಾ ಒಟಿಟಿಗೆ ಬಂದ ಮೇಲೆ ನನಗೆ ಸಾಕಷ್ಟು ಮೆಸೇಜ್‌ಗಳು ಬರುತ್ತಿವೆ. ಆನ್‌ಲೈನ್‌ನಲ್ಲಿ ಹರಡಿದ್ದ ವಿಪರೀತ ನೆಗೆಟಿವ್ ರಿವ್ಯೂಗಳನ್ನು ನೋಡಿ ನಾವು ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಅವಕಾಶ ಮಿಸ್ ಮಾಡಿಕೊಂಡೆವು ಎಂದು ಜನರು ಹೇಳುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

‘ಕೆಲವು ಸಿನಿಮಾಗಳು ನೆಗೆಟಿವ್ ರಿವ್ಯೂಗಳ ಮಧ್ಯೆಯೂ ಗೆಲ್ಲುತ್ತವೆ. ಆದರೆ ಇನ್ನು ಕೆಲವು ಸಿನಿಮಾಗಳಿಗೆ ಅದು ಸಾಧ್ಯವಾಗುವುದಿಲ್ಲ. ಚಿತ್ರರಂಗದವರಿಂದ ಬೆಂಬಲ ಸಿಗದೇ ಹೋದಾಗ, ಸಾರ್ವಜನಿಕರ ಅಭಿಪ್ರಾಯ ಬದಲಾಗುತ್ತದೆ ಮತ್ತು ಅದು ಚಿತ್ರದ ಭವಿಷ್ಯವನ್ನೇ ಬದಲಾಯಿಸಿಬಿಡುತ್ತದೆ. ಕೇವಲ ತಮ್ಮ ಬುದ್ಧಿವಂತಿಕೆ ಮತ್ತು ಅಹಂ ಪ್ರದರ್ಶಿಸಲು ಬರೆಯುವ ಇಂತಹ ವಿಮರ್ಶೆಗಳು ಚಿತ್ರವನ್ನು ಹತ್ತಿಕ್ಕುವುದಲ್ಲದೆ, ಮಹತ್ವಾಕಾಂಕ್ಷೆಯ ಸಿನಿಮಾ ನಿರ್ದೇಶಕರ ಕನಸುಗಳನ್ನು ಹೊಸಕಿ ಹಾಕುತ್ತವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಸಿನಿಮಾ ಪ್ರದರ್ಶನ ಚೆನ್ನಾಗಿಯೇ ಇತ್ತು. ಆದರೆ ಆ ನಂತರ ದಿಢೀರನೆ ಸಿನಿಮಾದ ಬಗ್ಗೆ ನೆಗೆಟಿವ್ ಟ್ರೆಂಡ್ ಸೃಷ್ಟಿಸಲಾಯಿತು. ಈ ಆಘಾತದಿಂದ ನಾನಿನ್ನೂ ಪೂರ್ತಿಯಾಗಿ ಹೊರಬರಲು ಸಾಧ್ಯವಾಗಿಲ್ಲ. ಸಿನಿಮಾ ಮಾಡುವಾಗ ಮತ್ತು ಅದನ್ನು ರಿಲೀಸ್ ಮಾಡುವಾಗ ಎದುರಿಸಿದ ಕಷ್ಟಗಳ ನಂತರ ಇಂತಹ ಫಲಿತಾಂಶ ಬಂದಿರುವುದು ನಿಜಕ್ಕೂ ನೋವು ತಂದಿದೆ. ಕಷ್ಟಪಟ್ಟು ಮಾಡುವ ತಮಿಳು ಸಿನಿಮಾಗಳಿಗೆ ಪ್ರೇಕ್ಷಕರು ಸ್ವಲ್ಪ ಉದಾರತೆ ತೋರಿಸಬೇಕು’ ಎಂದು ಅವರು ವಿನಂತಿಸಿದ್ದಾರೆ.

ಇದನ್ನೂ ಓದಿ: ವಿವಾಹಕ್ಕೂ ಮೊದಲು ನಯನತಾರಾ-ವಿಘ್ನೇಶ್ ಮಧ್ಯೆ ಆಗಿತ್ತು ಒಪ್ಪಂದ; ಇನ್ನೂ ಇದೆ ಆ ಡೀಲ್

ವಿಘ್ನೇಶ್ ಮಾತನ್ನು ಅನೇಕರು ಟೀಕಿಸಿದ್ದಾರೆ. ಜನರು ಹಣ ಕೊಟ್ಟು ನೋಡಿದ ಮೇಲೆ ಸಿನಿಮಾ ಹೇಗಿದೆ ಎಂಬುದನ್ನು ಹೇಳುವ ಹಕ್ಕು ಇರುತ್ತದೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:33 am, Mon, 1 June 26

Source link

ಸಂಭ್ರಮಾಚರಣೆ ಭರದಲ್ಲಿ RCB ಫ್ಯಾನ್ಸ್ ಹುಚ್ಚಾಟ, ಲಾರಿ ಏರಿ ಮೈಮೇಲೆ ಪಟಾಕಿ ಹಾಕೊಂಡು ಮೊಂಡಾಟ: ಲಾಠಿ ಚಾರ್ಜ್

ಸಂಭ್ರಮಾಚರಣೆ ಭರದಲ್ಲಿ RCB ಫ್ಯಾನ್ಸ್ ಹುಚ್ಚಾಟImage Credit source: tv9

ಬೆಂಗಳೂರು, ಜೂನ್ 1: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ ಟಿ20 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (GT) ತಂಡವನ್ನು ಮಣ್ಣುಮುಕ್ಕಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಗರ್ಜನೆ ಹಾಗೂ ರೆಡ್ ಆರ್ಮಿ ಆರ್ಭಟಕ್ಕೆ ಸಿಕ್ಕ ಜಯದ ಬೆನ್ನಲ್ಲೇ ಕರ್ನಾಟಕದಲ್ಲಿ ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಆದರೆ, ಈ ಗೆಲುವಿನ ಸಂಭ್ರಮ ಆಚರಿಸುವ ಭರದಲ್ಲಿ ರಾಜ್ಯದ ಹಲವೆಡೆ ಆರ್‌ಸಿಬಿ ಅಭಿಮಾನಿಗಳು ಅತಿರೇಕದ ವರ್ತನೆ ಹಾಗೂ ಹುಚ್ಚಾಟ ಪ್ರದರ್ಶಿಸಿದ್ದು, ಇವರನ್ನು ಹತೋಟಿಗೆ ತರಲು ಪೊಲೀಸರು ಹಲವು ಕಡೆ ಲಾಠಿ ಬೀಸಬೇಕಾದ ಪ್ರಸಂಗ ಎದುರಾಯಿತು.

ಮುಖ್ಯಾಂಶಗಳು

  • ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸತತ 2ನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು.
  • ಮಧ್ಯರಾತ್ರಿ ನಡುರಸ್ತೆಯಲ್ಲಿ ಲಾರಿ ಏರಿ, ಮೈಮೇಲೆ ಪಟಾಕಿ ಹಾಕಿಕೊಂಡು ಹುಚ್ಚಾಟ ಮೆರೆದ ಆರ್‌ಸಿಬಿ ಅಭಿಮಾನಿಗಳಿಗೆ ಪೊಲೀಸರಿಂದ ಲಾಠಿ ಏಟು.
  • ರಾಜ್ಯಾದ್ಯಂತ ಹೆಜ್ಜೆ ಹೆಜ್ಜೆಗೂ ಬಿಗಿ ಪೊಲೀಸ್ ಭದ್ರತೆ.

ಬೆಂಗಳೂರಿನಲ್ಲಿ ಪೊಲೀಸ್ ಕಣ್ಗಾವಲು, ಕಬ್ಬನ್ ಪಾರ್ಕ್ ಬಳಿ ಹೈಡ್ರಾಮಾ

ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಆರ್‌ಸಿಬಿ ಅಭಿಮಾನಿಗಳ ದಂಡೇ ನೆರೆದಿತ್ತು. ಪಬ್ ಹಾಗೂ ರೆಸ್ಟೋರೆಂಟ್‌ಗಳಿಗೆ ಬಂದಿದ್ದ ಸಹಸ್ರಾರು ಜನ ರಸ್ತೆಗೆ ಇಳಿದು ಜೈಕಾರ ಹಾಕಿದರು. ಕಬ್ಬನ್ ಪಾರ್ಕ್ ಬಳಿ ಕೆಲವು ಯುವಕರು ಚಲಿಸುತ್ತಿದ್ದ ಕಾರುಗಳ ಸನ್‌ರೂಫ್ ಮೇಲೆ ನಿಂತು ಆರ್‌ಸಿಬಿ ಬಾವುಟ ಪ್ರದರ್ಶಿಸುತ್ತಾ ಸಂಚಾರಕ್ಕೆ ಅಡ್ಡಿಪಡಿಸಿದರು. ಕಳೆದ ಬಾರಿ ಕಪ್ ಗೆದ್ದ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ್ದ ಕಾಲ್ತುಳಿತ ದುರಂತವನ್ನು ನೆನಪಿನಲ್ಲಿಟ್ಟುಕೊಂಡಿದ್ದ ಪೊಲೀಸರು, ಈ ಬಾರಿ ಹೆಜ್ಜೆ ಹೆಜ್ಜೆಗೂ ಭದ್ರತಾ ಬೇಲಿ ಹಾಕಿ ಹದ್ದಿನ ಕಣ್ಣಿಟ್ಟಿದ್ದರು. ಅತಿರೇಕವಾಗಿ ವರ್ತಿಸಿದ ಯುವಕರಿಗೆ ಖಡಕ್ ವಾರ್ನಿಂಗ್ ನೀಡಿ ಮನೆಗೆ ಕಳುಹಿಸಿದರು.

ಉತ್ತರ ಕರ್ನಾಟಕದಲ್ಲಿ ಲಾಠಿ ರುಚಿ ತೋರಿಸಿದ ಪೊಲೀಸರು

ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮೊಂಡಾಟ ಮುಂದುವರಿಸಿದ ಅಭಿಮಾನಿಗಳಿಗೆ ಪೊಲೀಸರು ಸಣ್ಣ ಪ್ರಮಾಣದ ಲಾಠಿ ರುಚಿ ತೋರಿಸಿದರು. ಬೆಳಗಾವಿಯ ಆರ್‌.ಪಿ.ಡಿ ವೃತ್ತದಲ್ಲಿ ನೂರಾರು ಯುವಕರು ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಬಾಗಲಕೋಟೆಯ ವಿದ್ಯಾಗಿರಿ ಇಂಜಿನಿಯರಿಂಗ್ ವೃತ್ತದಲ್ಲಿ ತಡರಾತ್ರಿವರೆಗೂ ರಸ್ತೆ ತಡೆದು ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿಗಳು ಮನೆಗೆ ಹೋಗಲು ನಿರಾಕರಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಬೀದರ್‌ನ ಅಂಬೇಡ್ಕರ್ ವೃತ್ತ ಹಾಗೂ ಕಲಬುರಗಿಯ ಎಸ್‌ವಿಪಿ ವೃತ್ತಗಳಲ್ಲೂ ‘‘ಜೈ ಆರ್‌ಸಿಬಿ’’, ‘‘ಕಿಂಗ್ ಕೊಹ್ಲಿಗೆ ಜೈ’’ ಎಂಬ ಘೋಷಣೆಗಳು ಮಧ್ಯರಾತ್ರಿವರೆಗೂ ಕೇಳಿಬಂತು.

ಹೆದ್ದಾರಿಯಲ್ಲಿ ಲಾರಿಗಳ ಮೇಲೆ ಹತ್ತಿ ಅಭಿಮಾನಿಗಳ ಅತಿರೇಕ


ಸಕ್ಕರೆ ನಾಡು ಮಂಡ್ಯದ ಸಂಜಯ ವೃತ್ತದಲ್ಲಿ ಸೇರಿದ ಅಭಿಮಾನಿಗಳು ಹಳೆಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಲಾರಿಗಳ ಮೇಲೆ ಏರಿ ಮೊಂಡಾಟ ಮೆರೆದರು. ಬಳ್ಳಾರಿಯ ರಾಯಲ್ ಸರ್ಕಲ್ ಬಳಿಯೂ ಇದೇ ರೀತಿಯ ಘಟನೆ ನಡೆದಿದ್ದು, ಸಂಭ್ರಮಾಚರಣೆ ನಡುವೆ ಬಂದ ಲಾರಿಗೆ ಅಡ್ಡ ನಿಂತು ಯುವಕರು ಹುಚ್ಚಾಟ ನಡೆಸಿದರು.

ಇದನ್ನೂ ಓದಿ: ಸತತ 2ನೇ ಟ್ರೋಫಿ; ಸಿಎಸ್​​ಕೆ, ಮುಂಬೈ ದಾಖಲೆ ಸರಿಗಟ್ಟಿದ ಆರ್​ಸಿಬಿ

ಲಾರಿಗೆ ದಾರಿ ಬಿಡದೆ, ಅದರ ಮೇಲಕ್ಕೇರಲು ಯತ್ನಿಸಿದ ಯುವಕರನ್ನು ಪೊಲೀಸರು ಕೆಳಗಿಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರಲ್ಲದೆ, ಸಾರ್ವಜನಿಕರ ಜೀವಕ್ಕೆ ಆಪತ್ತು ತಂದ ಕೆಲವು ಅಭಿಮಾನಿಗಳಿಗೆ ಲಾಠಿ ಏಟಿನ ರುಚಿ ತೋರಿಸಿದರು. ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲೂ ರಸ್ತೆಯಲ್ಲೇ ಪಟಾಕಿ ಸಿಡಿಸುತ್ತಿದ್ದ ಯುವಕರನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:38 am, Mon, 1 June 26

Source link

ಎರಡು ವರ್ಷದ ಮಗುವಿಗೆ ಚಿತ್ರಹಿಂಸೆ ಕೊಟ್ಟು, ಹೊಡೆದು ಚರಂಡಿಗೆ ಎಸೆದ ತಂದೆ

ಲಕ್ನೋ, ಜೂನ್ 1: ಎರಡೂವರೆ ವರ್ಷದ ತನ್ನ ಪುಟ್ಟ ಹೆಣ್ಣುಮಗಳ ಮೇಲೆ ಅತಿಮಾನುಷವಾಗಿ ಹಲ್ಲೆ ನಡೆಸಿ, ರಸ್ತೆ ಬದಿಯ ಚರಂಡಿಗೆ ತಳ್ಳಿ ಕೊಲ್ಲಲು ಯತ್ನಿಸಿದ ತಂದೆಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೋನು ಅಲಿಯಾಸ್ ಯೋಗೇಂದ್ರ ಸಿಂಗ್ (50) ಎಂದು ಗುರುತಿಸಲಾಗಿದೆ. ಶನಿವಾರ ನಡೆದ ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.

ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ವಿಡಿಯೋ
ಮೇ 30 ರಂದು ಮಧ್ಯಾಹ್ನ 2.30 ರ ಸುಮಾರಿಗೆ ಈ ಅತಿಮಾನುಷ ಘಟನೆ ಸಂಭವಿಸಿದೆ. ವೈರಲ್ ಆಗಿರುವ ದೃಶ್ಯಗಳಲ್ಲಿ, ಪಾಪಿ ತಂದೆ ಸಿಂಗ್ ಮಗುವನ್ನು ಕಾಲಿನಿಂದ ಒದ್ದು, ಕೈಯಿಂದ ಗುದ್ದುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಪ್ರಾಣಭಯದಿಂದ ಕಿರುಚುತ್ತಿದ್ದ ಮಗುವನ್ನು ಪದೇ ಪದೇ ರಸ್ತೆ ಬದಿಯ ಚರಂಡಿಗೆ ಎಸೆದು, ಮುಳುಗಿಸಿ ಕೊಲ್ಲಲು ಯತ್ನಿಸುತ್ತಿರುವುದು ಸೆರೆಯಾಗಿತ್ತು.

ಸ್ಥಳೀಯರ ಸಮಯಪ್ರಜ್ಞೆ: ಮಗುವಿನ ಕಿರುಚಾಟ ಕೇಳಿ ಓಡಿಬಂದ ಕೆಲವು ಸ್ಥಳೀಯ ನಿವಾಸಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಆತನ ಕೈಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ಆರೋಪಿ ಆಕ್ರಮಣಕಾರಿಯಾಗಿ ವರ್ತಿಸಿ ಹತ್ತಿರದ ಮನೆಯ ಬಾಗಿಲನ್ನು ಬಲವಂತವಾಗಿ ಮುರಿಯಲು ಯತ್ನಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ.

ಪೊಲೀಸರ ತಕ್ಷಣದ ಕ್ರಮ
ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ಸುಲ್ತಾನಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ವಿಡಿಯೋ ಸಾಕ್ಷ್ಯ ಹಾಗೂ ಸ್ಥಳೀಯರ ಹೇಳಿಕೆಗಳ ಆಧಾರದ ಮೇಲೆ ಆರೋಪಿ ಯೋಗೇಂದ್ರ ಸಿಂಗ್ ವಿರುದ್ಧ ಕಠಿಣ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆತನನ್ನು ಜೈಲಿಗಟ್ಟಿದ್ದಾರೆ.

ನ್ಯಾಯಾಂಗ ಬಂಧನ: ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸದ್ಯ ಮಗು ಸುರಕ್ಷಿತವಾಗಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡು ಹಂತಕ ತಂದೆಯನ್ನು ಸಲಾಕೆಯ ಹಿಂದೆ ತಳ್ಳಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳು ಪರಿಹಾರವಾಗಲಿವೆ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಜೂನ್ 1, ಸೋಮವಾರದ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಕೃಷ್ಣ ಪಕ್ಷ, ಜೇಷ್ಠ ನಕ್ಷತ್ರದ ಈ ದಿನದ ಮಹತ್ವವನ್ನು ತಿಳಿಸಲಾಗಿದೆ. ಇಂದು ವಿಶ್ವ ಪೋಷಕರ ದಿನ ಮತ್ತು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನಗಳಂದು ಹಾಲನ್ನು ದಾನ ಮಾಡುವುದು ಮಂಗಳಕರ ಎಂದು ಗುರೂಜಿ ಹೇಳಿದ್ದಾರೆ.

 

 

 

Source link

ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಲು ಮುಂದಾದ್ರಾ ಬಿಜೆಪಿ ನಾಯಕ ಅಣ್ಣಾಮಲೈ?

ಚೆನ್ನೈ, ಜೂನ್ 1: ತಮಿಳುನಾಡು ರಾಜಕಾರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗುವ ಮುನ್ಸೂಚನೆ ದೊರೆತಿದೆ. ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ(K Annamalai) ಹೊಸ ಪಕ್ಷ ಕಟ್ಟಲು ಸಿದ್ಧತೆ ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಮಾನ ಮನಸ್ಕ ಜನರನ್ನು ಒಗ್ಗೂಡಿಸುವುದು ಮತ್ತು ತಳಮಟ್ಟದಲ್ಲಿ ಬಲಿಷ್ಠ ಸ್ವಯಂಸೇವಕರ ಪಡೆಯನ್ನು ನಿರ್ಮಿಸುವುದು ಈ ಆಂದೋಲನದ ಮುಖ್ಯ ಉದ್ದೇಶ ಎನ್ನಲಾಗಿದೆ. ಈ ಹೊಸ ಚಳವಳಿಗೆ “ಮಕ್ಕಳ್ ಶಕ್ತಿ ಇಯಕ್ಕಂ” (ಜನಶಕ್ತಿ ಆಂದೋಲನ) ಎಂದು ಹೆಸರಿಡಬಹುದು ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಕೇಂದ್ರದ ನೀತಿ ವಿರುದ್ಧವೇ ಧ್ವನಿ ಎತ್ತಿದ್ದ ಅಣ್ಣಾಮಲೈ

ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯ ಕುರಿತು ಉಂಟಾದ ಭಿನ್ನಾಭಿಪ್ರಾಯಗಳ ಬೆನ್ನಲ್ಲೇ ಅಣ್ಣಾಮಲೈ ಅವರ ಈ ಹೊಸ ನಡೆ ತೀವ್ರ ಕುತೂಹಲ ಮೂಡಿಸಿದೆ.

ವಿದ್ಯಾರ್ಥಿಗಳ ಪರ ನಿಲುವು: ಸಿಬಿಎಸ್‌ಇ (CBSE) ಶಾಲೆಗಳಲ್ಲಿ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸಿ ಇತ್ತೀಚೆಗೆ ಹೊರಡಿಸಲಾದ ಆದೇಶವನ್ನು ಹಿಂಪಡೆಯಬೇಕೆಂದು ಅಣ್ಣಾಮಲೈ ಬಹಿರಂಗವಾಗಿ ಒತ್ತಾಯಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಟೀಕೆ: ಈ ಕಡ್ಡಾಯ ನಿಯಮವು ತಮಿಳುನಾಡಿನ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅನಗತ್ಯ ಮಾನಸಿಕ ಒತ್ತಡ ಉಂಟುಮಾಡುತ್ತದೆ ಎಂದು ಆಕ್ಷೇಪಿಸಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಕೇಂದ್ರದ ನಿರ್ಧಾರವನ್ನು ಮುಕ್ತವಾಗಿ ಟೀಕಿಸಿದ್ದರು.

ತಮಿಳುನಾಡು ಬಿಜೆಪಿಯಲ್ಲಿ ಅಣ್ಣಾಮಲೈ ಹಾದಿ

ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ 2020ರಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದರು. ಆಡಳಿತದ ಶೈಲಿ ಮತ್ತು ಪ್ರಾಮಾಣಿಕ ವ್ಯಕ್ತಿತ್ವದಿಂದಾಗಿ ಅವರು 2021ರಲ್ಲಿ ಎಲ್ ಮುರುಗನ್ ನಂತರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಪಕ್ಷದ ಪುನರುಜ್ಜೀವನ: 2021ಎಇಂದ 2025ರವರೆಗೆ ಪಕ್ಷ ಮುನ್ನಡೆಸಿದ ಅಣ್ಣಾಮಲೈ, ತಮ್ಮ ಆಕ್ರಮಣಕಾರಿ ಭಾಷಣ ಶೈಲಿ ಮೂಲಕತಮಿಳುನಾಡಿನಲ್ಲಿ ಬಿಜೆಪಿಗೆ ಹೊಸ ರಂಗು ತಂದಿದ್ದರು. ಇವರ ದೃಢ ನಿಲುವುಗಳಿಂದಾಗಿ ಕೇಂದ್ರ ನಾಯಕತ್ವವೂ ಇವರ ಧ್ವನಿಗೆ ವಿಶೇಷ ಮನ್ನಣೆ ನೀಡಿತ್ತು.

ಮೈತ್ರಿಯಲ್ಲಿ ಬಿರುಕು ಮತ್ತು ನಾಯಕತ್ವ ಬದಲಾವಣೆ: ಆದರೆ, ತಮಿಳುನಾಡಿನ ದ್ರಾವಿಡ ನಾಯಕರಾದ ಸಿ.ಎನ್. ಅಣ್ಣಾದೊರೈ ಮತ್ತು ಮಾಜಿ ಸಿಎಂ ಜೆ. ಜಯಲಲಿತಾ ಅವರ ಕುರಿತಾದ ಇವರ ಕೆಲವು ವಿವಾದಾತ್ಮಕ ಹೇಳಿಕೆಗಳು ಮಿತ್ರಪಕ್ಷವಾದ ಎಐಎಡಿಎಂಕೆ (AIADMK) ಅನ್ನು ಕೆರಳಿಸಿತ್ತು. ಇದರಿಂದ ಮೈತ್ರಿ ಮುರಿದುಬಿದ್ದು, ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟ ಭರ್ಜರಿ ಜಯ ಗಳಿಸಿತ್ತು.

ಇತ್ತೀಚಿನ ಬೆಳವಣಿಗೆ: ತಮಿಳುನಾಡಿನಲ್ಲಿ ಮತ್ತೆ ಮೈತ್ರಿ ನವೀಕರಿಸಲು ಮುಂದಾದಾಗ, ಎಐಎಡಿಎಂಕೆ ಮುಖ್ಯಸ್ಥ ಇ. ಪಳನಿಸ್ವಾಮಿ ಅವರು ಬಿಜೆಪಿ ರಾಜ್ಯ ನಾಯಕತ್ವವನ್ನು ಬದಲಾಯಿಸಬೇಕೆಂಬ ಕಟ್ಟುನಿಟ್ಟಿನ ಷರತ್ತು ವಿಧಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಅಣ್ಣಾಮಲೈ ಅವರ ಬದಲಿಗೆ ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಇದುವರೆಗೆ ಲೋಕಸಭೆ ಅಥವಾ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸದ ಅಣ್ಣಾಮಲೈ, ಈಗ ನೇರವಾಗಿ ಜನರ ನಡುವೆ ಹೋಗಿ ಸಂಘಟನೆ ಕಟ್ಟಲು ‘ಜನಶಕ್ತಿ ಆಂದೋಲನ’ದ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವುದು ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಸಾಯುವ ಮುನ್ನ ಮನುಷ್ಯನ 5 ನಿಮಿಷಗಳು ಹೇಗಿರುತ್ತೆ?

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಾಯುವ ಮುನ್ನ ಮನುಷ್ಯನ 5 ನಿಮಿಷಗಳು ಹೇಗಿರುತ್ತೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲೂ ಮರಣ ಅನಿವಾರ್ಯ. “ಜಾತಸ್ಯ ಮರಣಂ ಧ್ರುವಂ” ಎಂಬಂತೆ, ಜನಿಸಿದ ಪ್ರತಿಯೊಬ್ಬರೂ ಒಂದು ದಿನ ಮರಣ ಹೊಂದಲೇಬೇಕು. ಆದರೆ, ಈ ಅಂತಿಮ ಕ್ಷಣಗಳಲ್ಲಿ, ವಿಶೇಷವಾಗಿ ಪ್ರಾಣ ದೇಹವನ್ನು ತೊರೆಯುವ ಕೊನೆಯ ಐದು ನಿಮಿಷಗಳಲ್ಲಿ ಏನಾಗುತ್ತದೆ ಎಂಬುದು ಅನೇಕರಿಗೆ ಕುತೂಹಲದ ವಿಷಯ. ಗ್ರಂಥಗಳು, ಅನುಭವಿಗಳು ಮತ್ತು ಮಹಾತ್ಮರು ಈ ಕುರಿತು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಾವಿನ ಸಮೀಪದಲ್ಲಿ, ವ್ಯಕ್ತಿಯ ಪಂಚೇಂದ್ರಿಯಗಳು (ಕಣ್ಣು, ಮೂಗು, ಕಿವಿ, ಬಾಯಿ) ಒಂದೊಂದಾಗಿ ತಮ್ಮ ಕಾರ್ಯವನ್ನು ನಿಲ್ಲಿಸುತ್ತವೆ. ಕಣ್ಣುಗಳು ಮಂಪರಾಗುತ್ತವೆ, ಕಿವಿಗಳು ಕೇಳಿಸುವುದನ್ನು ನಿಲ್ಲಿಸುತ್ತವೆ, ಮತ್ತು ಮಾತು ನಿಂತುಹೋಗುತ್ತದೆ. ಇದಲ್ಲದೆ, ಮರಣೋನ್ಮುಖ ವ್ಯಕ್ತಿಗೆ ತನ್ನ ಪೂರ್ವಜರು ಮತ್ತು ಹಿಂದಿನವರು ನೆನಪಾಗುತ್ತಾರೆ ಎಂದು ಹಿರಿಯರು ಹೇಳುತ್ತಾರೆ.

ಗರುಡ ಪುರಾಣದ ಪ್ರಕಾರ, ಉಸಿರಾಟವು ಭಾರವಾಗುತ್ತದೆ ಮತ್ತು ಆತ್ಮವು ದೇಹದ ನವದ್ವಾರಗಳ ಮೂಲಕ ಹೊರಡುತ್ತದೆ. ಈ ಐದು ನಿಮಿಷಗಳ ಅನುಭವವು ವ್ಯಕ್ತಿ ತನ್ನ ಜೀವನದಲ್ಲಿ ಮಾಡಿದ ಕರ್ಮಗಳ ಮೇಲೆ ಅವಲಂಬಿತವಾಗಿರುತ್ತದೆ. ಧರ್ಮದಿಂದ ಬದುಕಿದವರಿಗೆ ಈ ಕ್ಷಣಗಳು ಶಾಂತಿ, ಸಂತೋಷ ಮತ್ತು ತೃಪ್ತಿಯಿಂದ ಕೂಡಿರುತ್ತವೆ. ಆದರೆ, ದುಷ್ಟ ವ್ಯಕ್ತಿಗಳಿಗೆ ಭಯ ಮತ್ತು ಆತಂಕ ಆವರಿಸಿಕೊಳ್ಳುತ್ತದೆ ಎಂದು ಗ್ರಂಥಗಳು ತಿಳಿಸುತ್ತವೆ.

 

 

Source link

‘ಕರುಪ್ಪು’ ಸಿನಿಮಾ ಗೆದ್ದ ಖುಷಿಯಲ್ಲಿ ತಂಡದವರಿಗೆ ಕಾರು ಗಿಫ್ಟ್ ಕೊಟ್ಟ ನಟ ಸೂರ್ಯ

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಅವರಿಗೆ (Suriya) ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿರಲಿಲ್ಲ. ಈ ಗೆಲುವನ್ನು ಮತ್ತೆ ಮರಳಿಸಿ ಕೊಟ್ಟಿದ್ದು ‘ಕರುಪ್ಪು’ ಚಿತ್ರ. ತ್ರಿಷಾ ಜೊತೆ ನಟಿಸಿದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ದಿನದಿಂದಲೇ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆದುಕೊಂಡಿರುವ ಈ ಚಿತ್ರ, ಈಗ ಕೇವಲ ಮೂರನೇ ವಾರದಲ್ಲೇ ವಿಶ್ವದಾದ್ಯಂತ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ನಟ ಸೂರ್ಯ ಅವರು ಚಿತ್ರದ ಯಶಸ್ಸಿನ ಹಿಂದಿರುವ ಪ್ರಮುಖ ತಂತ್ರಜ್ಞರಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ದೊಡ್ಡ ಗುಣವನ್ನು ಮೆರೆದಿದ್ದಾರೆ.

‘ಕರುಪ್ಪು’ ಚಿತ್ರದ ಭರ್ಜರಿ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಇಬ್ಬರು ಯುವ ತಂತ್ರಜ್ಞರಿಗೆ ಸೂರ್ಯ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ‘ಕರುಪ್ಪು’ ಸಿನಿಮಾದ ಛಾಯಾಗ್ರಹಣಕ್ಕೆ ಮೆಚ್ಚುಗೆ ಸಿಕ್ಕಿತ್ತು. ಈ ಕೆಲಸ ಮಾಡಿದ ಜಿ.ಕೆ. ವಿಷ್ಣು ಅವರಿಗೆ ಸೂರ್ಯ ಹೊಸ ‘ಮಹೀಂದ್ರಾ BE6 ಬ್ಯಾಟ್‌ಮ್ಯಾನ್ ಎಡಿಷನ್’ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಖುಷಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಷ್ಣು, ‘ಇದೆಲ್ಲಾ ದೇವರ ಆಟ. ಧನ್ಯವಾದಗಳು ಸೂರ್ಯ ಸರ್, ನಿಮ್ಮದು ತುಂಬಾ ದೊಡ್ಡ ಹೃದಯ’ ಎಂದು ಬರೆದುಕೊಂಡಿದ್ದಾರೆ.

ಅದೇ ರೀತಿ, ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತದ ಮೂಲಕ ಚಿತ್ರಮಂದಿರಗಳಲ್ಲಿ ಹೊಸ ಅಲೆ ಸೃಷ್ಟಿಸಿದ ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಅವರಿಗೂ ಸೂರ್ಯ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದು, ಸಾಯಿ ಕೂಡ ಸೂರ್ಯ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಚಿತ್ರ ಬಿಡುಗಡೆಯಾದ ಮರುದಿನವೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಸೂರ್ಯ, ಚಿತ್ರದ ಯಶಸ್ಸಿಗೆ ಕಾರಣರಾದ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದ್ದರು. ವಿಶೇಷವಾಗಿ ಎಡಿಟರ್ ಕಲೈವಾನನ್, ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಹಾಗೂ ಡಿಒಪಿ ಜಿ.ಕೆ. ವಿಷ್ಣು ಅವರ ಕಠಿಣ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಸಂಸ್ಥೆಗೂ ಅವರು ಧನ್ಯವಾದ ಅರ್ಪಿಸಿದ್ದರು.

ಇದನ್ನೂ ಓದಿ: ಸೂರ್ಯ ನಟನೆಯ ಹಿಟ್ ಸಿನಿಮಾಕ್ಕೆ ‘ಕಾಂತಾರ’, ‘ಸಪ್ತ ಸಾಗರದಾಚೆ’ ಸ್ಪೂರ್ತಿ

ಚಿತ್ರದಲ್ಲಿ ಸೂರ್ಯ ಅವರು ‘ಕರುಪ್ಪುಸಾಮಿ’ ಎಂಬ ಪವರ್‌ಫುಲ್ ವಕೀಲನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ನಾಯಕಿಯಾಗಿ ತ್ರಿಷಾ ಕೃಷ್ಣನ್ ಹಾಗೂ ಖಳನಾಯಕನಾಗಿ ಬಾಲಾಜಿ ನಟಿಸಿದ್ದಾರೆ. ಈ ಬಿಗ್ ಬಜೆಟ್ ಚಿತ್ರವನ್ನು ಆರ್.ಜೆ. ಬಾಲಾಜಿ ನಿರ್ದೇಶಿಸಿದ್ದು, ಅಶ್ವಿನ್ ರವಿಚಂದ್ರನ್ ಸೇರಿದಂತೆ ನಾಲ್ಕು ಜನರ ತಂಡ ಚಿತ್ರಕಥೆ ಸಿದ್ಧಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Commercial LPG cylinder Price Hike: ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ (ಸಾಂದರ್ಭಿಕ ಚಿತ್ರ)Image Credit source: PTI

ನವದೆಹಲಿ, ಜೂನ್ 1: ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ದೇಶದಲ್ಲಿ ಮತ್ತೆ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ (Commercial LPG cylinder) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 42 ರೂ. ಹೆಚ್ಚಳವಾಗಿದೆ. ಪರಿಷ್ಕೃತ ದರ ಇಂದಿನಿಂದಲೇ (ಜೂನ್ 1) ಅಸ್ತಿತ್ವಕ್ಕೆ ಬಂದಿದೆ. ಈ ಪರಿಷ್ಕರಣೆಯೊಂದಿಗೆ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ರಿಟೇಲ್ ದರ 3,113.50 ರೂ.ಗೆ ಏರಿಕೆಯಾಗಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಉದ್ಯಮಗಳಿಗೆ ಈ ದರ ಏರಿಕೆ ಇನ್ನಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ.

ಮುಖ್ಯಾಂಶಗಳು

  • ಜೂನ್ 1 ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ.
  • ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
  • ತೈಲ ಕಳ್ಳಸಂತೆ ಮತ್ತು ಕಾಳದಂಧೆ ತಡೆಯಲು ದೇಶಾದ್ಯಂತ ಬಿಗಿ ಕ್ರಮ.

ಸದ್ಯ ಕೋಲ್ಕತ್ತಾದಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ಬರೋಬ್ಬರಿ 53.50 ರೂ. ಹೆಚ್ಚಳವಾಗಿದ್ದು, 3,255.50 ಕ್ಕೆ ತಲುಪಿದೆ. ಇದರೊಂದಿಗೆ, 5 ಕೆಜಿ ತೂಕದ ಫ್ರೀ ಟ್ರೇಡ್ ಎಲ್‌ಪಿಜಿ (FTL) ಸಿಲಿಂಡರ್‌ಗಳ ಬೆಲೆಯನ್ನೂ ಸಹ 11 ರೂ.ನಷ್ಟು ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಇದರ ನೂತನ ದರ 821.50 ರೂ. ಆಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಆದರೆ, ಸಾಮಾನ್ಯ ಜನರು ಬಳಸುವ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್ ದರ ಏರಿಕೆ ವಿವರ

ಮೇ 1 ರಂದು ಸಹ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಅತ್ಯಂತ ಹೆಚ್ಚು, ಅಂದರೆ ಬರೋಬ್ಬರಿ 993 ರೂ.ನಷ್ಟು ದರ ಹೆಚ್ಚಳ ಮಾಡಿದ್ದವು. ಆ ನಂತರ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 3,152 ರೂ.ಗೆ ತಲುಪಿತ್ತು.

30 ದಿನಗಳ ಇಂಧನ ದಾಸ್ತಾನು ಕಾಯ್ದುಕೊಳ್ಳಲು ತೈಲ ಕಂಪನಿಗಳಿಗೆ ಸೂಚನೆ

ದೇಶದ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಅಗತ್ಯ ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳನ್ನು ಕಾಯ್ದುಕೊಳ್ಳಲು ಸರ್ಕಾರ ನಿರಂತರ ಶ್ರಮಿಸುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಕನಿಷ್ಠ 30 ದಿನಗಳ ಕಾಲ ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಇಂಧನ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ.

ಪ್ರಸ್ತುತ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ದಾಸ್ತಾನು ಸಮರ್ಪಕವಾಗಿದ್ದು, ರಿಫೈನರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ದೇಶೀಯವಾಗಿ ಎಲ್‌ಪಿಜಿ ಉತ್ಪಾದನೆಯು ದಿನಕ್ಕೆ ದಾಖಲೆಯ 90 ಡಿಎಂಟಿ (DMT) ತಲುಪಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಮರ್ಷಿಯಲ್ ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಪ್ರಧಾನಿ ಮೋದಿಗೆ ಪತ್ರ

ಪೆಟ್ರೋಲ್, ಡೀಸೆಲ್, ಎಲ್​ಪಿಜಿ ಕಳ್ಳಸಾಗಣೆ, ಅಕ್ರಮ ಮಾರಾಟ ಇತ್ಯಾದಿಗಳನ್ನು ತಡೆಯಲು ಕಳೆದ ನಾಲ್ಕು ದಿನಗಳಲ್ಲಿ ದೇಶಾದ್ಯಂತ ಎಲ್‌ಪಿಜಿ ವಿತರಣಾ ಕೇಂದ್ರಗಳ ಮೇಲೆ ಒಟ್ಟು 6,500 ಕಡೆ ದಾಳಿಗಳನ್ನು ನಡೆಸಲಾಗಿದ್ದು, 5 ಎಫ್‌ಐಆರ್ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ. ಹಾಗೆಯೇ, 900ಕ್ಕೂ ಹೆಚ್ಚು ಕಡೆ ಪೆಟ್ರೋಲ್ ಬಂಕ್‌ಗಳಲ್ಲಿ ನಡೆದ ತಪಾಸಣೆಗಳ ವೇಳೆ 417 ಲೀಟರ್ ಪೆಟ್ರೋಲ್ ಹಾಗೂ 75,715 ಲೀಟರ್ ಡೀಸೆಲ್ ಜಪ್ತಿ ಮಾಡಲಾಗಿದ್ದು, 12 ಎಫ್‌ಐಆರ್ ದಾಖಲಿಸಿ 15 ಜನರನ್ನು ಜೈಲಿಗಟ್ಟಲಾಗಿದೆ. ಪ್ರಸ್ತುತ ದೇಶದಲ್ಲಿ ನಿತ್ಯ 72 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಬೇಡಿಕೆ ಇದ್ದು, ದೇಶೀಯ ರಿಫೈನರಿಗಳು 50 ರಿಂದ 52 ಸಾವಿರ ಮೆಟ್ರಿಕ್ ಟನ್ ಉತ್ಪಾದಿಸುತ್ತಿವೆ. ಪೂರೈಕೆ ನಿರ್ವಹಣೆಯನ್ನು ಉತ್ತಮಗೊಳಿಸಿದ್ದರಿಂದ ಗ್ಯಾಸ್ ಬ್ಯಾಕ್‌ಲಾಗ್ ಅವಧಿಯನ್ನು 4.5 ದಿನಗಳಿಗೆ ಇಳಿಸಲಾಗಿದೆ ಎಂದು ಸುಜಾತಾ ಶರ್ಮಾ ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 6:48 am, Mon, 1 June 26

Source link

Exit mobile version