ಶಾಸಕಾಂಗ ಸಭೆಯಲ್ಲಿ ಅಚ್ಚರಿ ಬೆಳವಣಿಗೆ, ಒಂದು ಕ್ಷಣ ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ

ಬೆಂಗಳೂರು, (ಮೇ 30): ಕಾಂಗ್ರೆಸ್ (Congress) ಶಾಸಕಾಂಗ ಸಭೆ ಅಂತ್ಯವಾಗಿದ್ದು,ನೂತನ ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಆದ್ರೆ, ಸಭೆಯಲ್ಲಿ ಗೊಂದಲ, ಅಚ್ಚರಿ ವಿದ್ಯಮಾನವೊಂದು ನಡೆದಿದೆ. ಹೌದು.. ಸಭೆ ಆರಂಭದಲ್ಲಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪಿಸಿ ಒನ್ ಲೈನ್ ನಿರ್ಣಯ ಮಂಡಿಸಿದರು. ಇದಕ್ಕೆ ಪರಮೇಶ್ವರ್ ಅವರು ಅನುಮೋದನೆ ನೀಡಿದರು. ಆದ್ರೆ, ಶಾಸಕರು ಒಪ್ಪಿಗೆ ಸೂಚಿಸಿದೇ, ಎಐಸಿಸಿ ಹೇಳಿದವರಿಗೆ ನಮ್ಮ ಬೆಂಬಲ ಎಂದಿದ್ದಾರೆ. ಇದರಿಂದ ಕೆಲ ಕಾಲ ಗೊಂದಲ ಉಂಟಾಗಿದ್ದು, ಸಭೆಗೆ ಐದು ನಿಮಿಷ ಬ್ರೇಕ್ ನೀಡಲಾಯ್ತು.

ಶಾಸಕರು ಹೈಕಮಾಂಡ್ ಹೆಗಲಿ ಹಾಕುತ್ತಿದ್ದಂತೆಯೇ ಸಂಪ್ರದಾಯದಂತೆ ಸಿದ್ದರಾಮಯ್ಯನವರು ಸಭೆಯಿಂದ ನೇರವಾಗಿ ಮುಖ್ಯಮಂತ್ರಿ ಕಚೇರಿಗೆ ತೆರಳಿ ಸುರ್ಜೆವಾಲ ಜತೆ ಮಾತುಕತೆ ನಡೆಸಿ ಬಳಿಕ ಸಭೆಗೆ ಆಗಮಿಸಿದ್ದು, ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಇಲ್ಲೇ ಮತ್ತು ಇಂದೇ ಆಯ್ಕೆ ಪ್ರಕ್ರಿಯೆ ಮಾಡುವಂತೆ ಸಿದ್ದರಾಮಯ್ಯನವರನ್ನು ಮನವೊಲಿಸಿದರು. ಬಳಿಕ ಹೈಕಮಾಂಡ್, ಸಿದ್ದರಾಮಯ್ಯ ಮೂಲಕವೇ ಡಿಕೆ ಶಿವಕುಮಾರ್ ಅವರ ಹೆಸರು ಸೂಚಿಸಿತು. ಇದರೊಂದಿಗೆ ಸಿದ್ದರಾಮಯ್ಯ ಮನವೊಲಿಕೆ ನಂತರ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು.

2023ರ ಚುನಾವಣೆ ನಂತರ ಸರ್ಕಾರ ರಚನೆ ವೇಳೆ ಡಿಕೆ ಶಿವಕುಮಾರ್ ಅವರು CLP ನಾಯಕನ ಹೆಸರು ಹೇಳದೆ ಹೈಕಮಾಂಡ್ ಹೆಸರೇಳಿ ನಿರ್ಗಮಿಸಿದ್ದರು. ಇದೀಗ ಸಿದ್ದರಾಮಯ್ಯನವರು ಸಹ ಅದೇ ಮಾದರಿ ಅನುಸರಿಸಿ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.

Source link

ಜೈಲರ್ 2: ಶಾರುಖ್ ಬದಲು ಮತ್ತೊಬ್ಬ ಬಾಲಿವುಡ್ ಸ್ಟಾರ್, ರಜನಿಗೆ ಹಳೆ ಪರಿಚಯ

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಬಹು ನಿರೀಕ್ಷಿತ ‘ಜೈಲರ್ 2’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರದಲ್ಲಿದೆ. 2023 ರಲ್ಲಿ ಬಿಡುಗಡೆ ಆಗಿದ್ದ ‘ಜೈಲರ್’ ಚಿತ್ರ ದೊಡ್ಡ ಹಿಟ್ ಆಗಿತ್ತು. ಆ ಸಿನಿಮಾನಲ್ಲಿ ರಜನೀಕಾಂತ್ ಅವರಷ್ಟೆ ಇತರೆ ಅತಿಥಿ ಪಾತ್ರಗಳು ಸಹ ಸಖತ್ ಆಗಿ ಮಿಂಚಿದ್ದವು. ಶಿವರಾಜ್ ಕುಮಾರ್, ಮೋಹನ್​​ಲಾಲ್, ಜಾಕಿ ಶ್ರಾಫ್ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಈ ಬಾರಿಯೂ ಸಹ ಅದೇ ಅತಿಥಿ ಪಾತ್ರದ ಹವಾ ಮುಂದುವರೆಸಲಾಗಿದ್ದು, ಇನ್ನೂ ಒಂದು ಹೆಜ್ಜೆ ಮುಂದು ಹೋಗಲೆಂದು, ಬಾಲಿವುಡ್ ಬಾದ್​ಶಾ ಶಾರುಖ್ ಖಾನ್ ಅವರನ್ನು ಅತಿಥಿ ಪಾತ್ರಕ್ಕೆ ಕೇಳಲಾಗಿತ್ತು. ಆದರೆ ಅವರು ನಿರಾಕರಿಸಿದ್ದರು. ಇದೀಗ ಶಾರುಖ್ ಖಾನ್ ಬದಲು ಮತ್ತೊಬ್ಬ ಬಾಲಿವುಡ್ ಸೂಪರ್ ಸ್ಟಾರ್ ಅವರನ್ನು ಕರೆತರಲಾಗಿದೆ. ಆದರೆ ರಜನೀಕಾಂತ್​​ ಜೊತೆಗೆ ಅವರದ್ದು ಹಳೆಯ ಪರಿಚಯ.

ಶಾರುಖ್ ಖಾನ್ ನಿರಾಕರಿಸಿದ ಅತಿಥಿ ಪಾತ್ರದಲ್ಲಿ ಬಾಲಿವುಡ್​​ನ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರು ನಟಿಸಲಿದ್ದಾರೆ. ಹೃತಿಕ್ ರೋಷನ್ ಅವರು ಕಳೆದ ವರ್ಷ, ತೆಲುಗಿನ ಸ್ಟಾರ್ ನಟ ಜೂ ಎನ್​​ಟಿಆರ್ ಜೊತೆಗೆ ‘ವಾರ್ 2’ ಸಿನಿಮಾನಲ್ಲಿ ನಟಿಸಿದ್ದರು. ಇದೀಗ ರಜನೀಕಾಂತ್ ಅವರ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಅಂದಹಾಗೆ ರಜನೀಕಾಂತ್ ಮತ್ತು ಹೃತಿಕ್ ರೋಷನ್ ಒಟ್ಟಿಗೆ ನಟಿಸಲಿರುವುದು ಇದು ಮೊದಲೇನೂ ಅಲ್ಲ. ದಶಕಗಳ ಹಿಂದೆಯೇ ಈ ಜೋಡಿ ಒಟ್ಟಿಗೆ ನಟಿಸಿತ್ತು ಎಂಬುದು ಹಲವರಿಗೆ ಗೊತ್ತಿಲ್ಲ.

ಇದನ್ನೂ ಓದಿ:ಸಿಎಂ ಅನ್ನೇ ರಸ್ತೆಯಲ್ಲಿ ನಿಲ್ಲಿಸಿದ್ದ ರಜನೀಕಾಂತ್: ಯಾವ ಸಿನಿಮಾ ಸೀನ್​​ಗೂ ಕಮ್ಮಿ ಇಲ್ಲ

ರಜನಿಕಾಂತ್ ಮತ್ತು ಹೃತಿಕ್ ರೋಷನ್ ಈ ಹಿಂದೆಯೂ ಒಟ್ಟಿಗೆ ಸಿನೆಮಾದಲ್ಲಿ ನಟಿಸಿದ್ದಾರೆ. ಹೃತಿಕ್ ರೋಷನ್ ಅವರು ಬಾಲನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು 1986 ರ ‘ಭಗವಾನ್ ದಾದಾ’ ಎಂಬ ಹಿಂದಿ ಚಿತ್ರದ ಮೂಲಕ. ಆ ಸಿನಿಮಾನಲ್ಲಿ ರಜನಿಕಾಂತ್ ನಾಯಕ. ಆ ಸಿನಿಮಾದಲ್ಲಿ ಹೃತಿಕ್ ರೋಷನ್, ರಜನಿಕಾಂತ್ ಅವರ ಸಾಕು ಮಗನಾಗಿ ನಟಿಸಿದ್ದರು ಮತ್ತು ಹೃತಿಕ್ ತಮ್ಮ ಸಂದರ್ಶನಗಳಲ್ಲಿ ಆ ನೆನಪುಗಳ ಬಗ್ಗೆ ಆಗಾಗ ಅತ್ಯಂತ ಪ್ರೀತಿಯಿಂದ ಮಾತನಾಡಿದ್ದಾರೆ. ಈಗ 40 ವರ್ಷಗಳ ಬಳಿಕ ರಜನೀಕಾಂತ್ ಮತ್ತು ಹೃತಿಕ್ ರೋಷನ್ ಒಟ್ಟಿಗೆ ನಟಿಸುತ್ತಿದ್ದಾರೆ. ವಿಶೇಷವೆಂದರೆ ‘ಜೈಲರ್ 2’ ಸಿನಿಮಾನಲ್ಲೂ ಹೃತಿಕ್ ಅವರು ರಜನೀಕಾಂತ್ ಅವರ ಸಾಕು ಮಗನಾಗಿಯೇ ನಟಿಸಲಿದ್ದಾರಂತೆ.

ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಮತ್ತು ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರವು ಈಗಾಗಲೇ ಗೋವಾ, ಕೇರಳ ಮತ್ತು ಚೆನ್ನೈನಲ್ಲಿ ಪ್ರಮುಖ ಶೂಟಿಂಗ್ ಹಂತಗಳನ್ನು ಪೂರ್ಣಗೊಳಿಸಿದೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ನಿರ್ದೇಶನವಿರುವ ಈ ಸಿನಿಮಾನಲ್ಲಿ ಶಿವರಾಜ್ ಕುಮಾರ್, ಮೋಹನ್​​ಲಾಲ್ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ಮುಂದುವರೆದಿದ್ದಾರೆ. ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಓರಲ್ ಹೆಲ್ತ್ ಚೆನ್ನಾಗಿಲ್ಲ ಅಂದ್ರೆ ಬಂಜೆತನದ ಅಪಾಯ ಹೆಚ್ಚಾಗುತ್ತಾ? ಏನ್ ಹೇಳುತ್ತೆ ಸಂಶೋಧನೆ?

ಸಾಮಾನ್ಯವಾಗಿ ಬಾಯಿ ಆರೋಗ್ಯ (Oral Health) ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಇದು ನಮ್ಮ ಅರಿವಿಗೆ ಬಾರದಂತೆ ನಾನಾ ರೀತಿಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ಇದಕ್ಕೆ ಪೂರಕವೆಂಬಂತೆ ಇತ್ತೀಚಿನ ಅಧ್ಯಯನವೊಂದು ಬಾಯಿ ಆರೋಗ್ಯ ಮತ್ತು ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯದ ನಡುವೆ ಸಂಬಂಧ ಇರಬಹುದೆಂಬ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಹೌದು, ಕೇಳುವುದಕ್ಕೆ ಸ್ವಲ್ಪ ಆಶ್ಚರ್ಯಕರವಾಗಿದ್ದರೂ ಕೂಡ ಇದನ್ನು ನಂಬಲೇಬೇಕು. ಹಾಗಾದರೆ ಸಂಶೋಧನೆ ಹೇಗೆ ನಡೆಸಲಾಗಿದೆ, ಯಾವ ಆಧಾರದ ಮೇಲೆ ಓರಲ್ ಹೆಲ್ತ್ ಮತ್ತು ಫರ್ಟಿಲಿಟಿ (Fertility) ನಡುವೆ ಸಂಬಂಧವಿದೆ ಎಂದು ಹೇಳಲಾಗುತ್ತಿದೆ ಜೊತೆಗೆ ನಾವು ಬಾಯಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಧ್ಯಯನದ ಪ್ರಕಾರ, ಬಾಯಿಯಲ್ಲಿ ದೀರ್ಘಕಾಲದವರೆಗೆ ಇರುವ ಉರಿಯೂತ (Inflammation) ದೇಹದ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸಬಹುದು. ಈ ಉರಿಯೂತ ಕೇವಲ ಹಲ್ಲುಗಳಿಗೆ ಸೀಮಿತವಾಗದೆ, ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಅಂಡಾಶಯಗಳ (Ovaries) ಕಾರ್ಯಕ್ಷಮತೆಯಲ್ಲಿ ಬದಲಾವಣೆ ಉಂಟಾಗಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಸಂಶೋಧನೆಯಲ್ಲಿ, ನಿರಂತರ ಬಾಯಿ ಸೋಂಕು ಮತ್ತು ಉರಿಯೂತದ ಪರಿಣಾಮವಾಗಿ ಅಂಡಾಣುಗಳ (Eggs) ಗುಣಮಟ್ಟ ಕುಸಿಯುವ ಸಾಧ್ಯತೆ ಕಂಡುಬಂದಿದೆ. ಅಲ್ಲದೆ, ಅಂಡಾಣು ಬೆಳೆಯುವ ಫಾಲಿಕಲ್ಸ್‌ಗಳ ಬೆಳವಣಿಗೆಯಲ್ಲೂ ವ್ಯತ್ಯಾಸಗಳು ಕಂಡುಬಂದಿವೆ. ಇದರಿಂದ ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಈ ಅಧ್ಯಯನವನ್ನು ಪ್ರಾಣಿಗಳ ಮೇಲೆ ನಡೆಸಲಾಗಿದ್ದು, ಮಾನವರಲ್ಲಿ ಇದೇ ಪರಿಣಾಮ ಉಂಟಾಗುತ್ತದೆಯೇ ಎಂಬುದನ್ನು ಖಚಿತಪಡಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಆದರೂ ಉತ್ತಮ ಬಾಯಿ ಆರೋಗ್ಯ ಕಾಪಾಡಿಕೊಳ್ಳುವುದು ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರಾತ್ರಿ ಹಲ್ಲುಜ್ಜದೇ ಮಲಗ್ತೀರಾ? ಇದು ನಿಮ್ಮ ಹೃದಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ?

ಬಾಯಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

  • ದಿನಕ್ಕೆ ಕನಿಷ್ಠ ಎರಡು ಬಾರಿ ಹಲ್ಲು ಉಜ್ಜುವುದು.
  • ನಿಯಮಿತವಾಗಿ ಫ್ಲಾಸ್ ಬಳಸಿ.
  • ಹಲ್ಲುಗಳಲ್ಲಿ ಉರಿಯೂತ, ರಕ್ತಸ್ರಾವ ಅಥವಾ ನೋವು ಕಂಡುಬಂದರೆ ನಿರ್ಲಕ್ಷಿಸಬೇಡಿ.
  • ಹೆಚ್ಚು ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ.
  • ಸಮತೋಲಿತ ಆಹಾರ ಸೇವಿಸಿ.
  • ನಿಯಮಿತವಾಗಿ ದಂತ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ.

ತಜ್ಞರ ಪ್ರಕಾರ, ಉತ್ತಮ ಬಾಯಿ ಆರೋಗ್ಯವು ಕೇವಲ ಹಲ್ಲುಗಳನ್ನು ಮಾತ್ರವಲ್ಲ, ದೇಹದ ಸಮಗ್ರ ಆರೋಗ್ಯ ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನೂ ಕಾಪಾಡಲು ಸಹಾಯಕವಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:10 pm, Sat, 30 May 26

Source link

Chanakya Niti: ಈ ತಪ್ಪುಗಳು ವ್ಯಕ್ತಿಯ ಜೀವನವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ

ಪ್ರತಿಯೊಬ್ಬರೂ ಸಹ ಜೀವನದಲ್ಲಿ ಉದ್ಧಾರವಾಗಬೇಕು, ಯಶಸ್ಸನ್ನು (Success) ಸಾಧಿಸಬೇಕು, ನಾಲ್ಕು ಜನ ನಮ್ಮನ್ನು ಕೊಂಡಾಡುವ ಹಾಗೆ ಬದುಕಬೇಕು ಎಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ನಾವು ತಿಳಿದೋ ತಿಳಿಯದೆಯೋ ಮಾಡುವಂತಹ ಕೆಲವೊಂದು ತಪ್ಪುಗಳು ನಮ್ಮ ಸಂಪೂರ್ಣ ಜೀವನವನ್ನೇ ಹಾಳು ಮಾಡುತ್ತದೆ. ಆದ್ದರಿಂದ, ಜೀವನದಲ್ಲಿ ಯಶಸ್ವಿಯಾಗಲು, ಪ್ರತಿಯೊಬ್ಬ ವ್ಯಕ್ತಿಯು ಈ ನಾಲ್ಕು ತಪ್ಪುಗಳನ್ನು ಎಂದಿಗೂ ಮಾಡಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ದರೆ ವ್ಯಕ್ತಿಯ ಜೀವನವನ್ನು ಹಾಳು ಮಾಡುವಂತಹ ಆ ಅಭ್ಯಾಸಗಳು, ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಈ ತಪ್ಪುಗಳಿಂದ ನಿಮ್ಮ ಜೀವನ ಹಾಳಾಗಬಹುದು:

ಸೋಮಾರಿತನ: ಸೋಮಾರಿತನವು ಜೀವನದ ಪ್ರಗತಿಗೆ, ಯಶಸ್ಸಿಗೆ ಅಡ್ಡಿಯಾಗುತ್ತದೆ, ಅಲ್ಲದೆ ಸೋಮಾರಿತನವು ವ್ಯಕ್ತಿಯ ಬಹುದೊಡ್ಡ ಶತ್ರು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಏಕೆಂದರೆ ಇದು ಪ್ರಗತಿಯಲ್ಲಿರುವ ಕೆಲಸವನ್ನು ಸಹ ಹಾಳುಮಾಡುತ್ತದೆ. ಜೊತೆಗೆ ಸೋಮಾರಿ ವ್ಯಕ್ತಿಯೂ ಎಂದಿಗೂ ಜೀವನದಲ್ಲಿ ಮುಂದೆ ಬರಲು ಸಾಧ್ಯವೇ ಇಲ್ಲ. ಜೀವನದಲ್ಲಿ ಉದ್ಧಾರವಾಗಲು ಬಯಸುವವರು ಮೊದಲಿಗೆ ಸೋಮಾರಿತನವನ್ನು ಬಿಡಬೇಕು. ಆಗ ಮಾತ್ರ ಅಂದುಕೊಂಡ ಕೆಲಸವನ್ನು ಸಾಧಿಸಲು ಸಾಧ್ಯವಾಗೋದು.

ಯೋಚಿಸದೆ ವರ್ತಿಸುವುದು: ಯೋಚಿಸದೆ ಯಾವುದೇ ಕಾರ್ಯಗಳನ್ನು ಕೈಗೊಳ್ಳಬಾರದು ಮತ್ತು ಯೋಚಿಸದೆ ಎಂದಿಗೂ ವರ್ತಿಸಬಾರದು, ಇದು ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಜೀವನದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಅದರ ಫಲಿತಾಂಶದ ವಿವಿಧ ಅಂಶಗಳನ್ನು ಪರಿಗಣಿಸಬೇಕು. ಆಗ ಮಾತ್ರ ಅಂದುಕೊಂಡ ಕಾರ್ಯವನ್ನು ಸಾಧಿಸಲು ಹಾಗೂ ಯಶಸ್ಸನ್ನು ಗಳಿಸಲು ಸಾಧ್ಯ.

ಇದನ್ನೂ ಓದಿ: ಅಭ್ಯಾಸಗಳು ವ್ಯಕ್ತಿಯ ಗೌರವವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ

ಕೆಟ್ಟವರ ಸಹವಾಸ: ಕೆಟ್ಟ ಜನರ ಸಹವಾಸದಿಂದ ಆದಷ್ಟು ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಒಬ್ಬ ವ್ಯಕ್ತಿಯು ಒಳ್ಳೆಯ ಜನರೊಂದಿಗೆ ಸಹವಾಸ ಮಾಡಿದರೆ, ಅವರ ಜೀವನವು ಉತ್ತಮವಾಗಿರುತ್ತದೆ. ಅದೇ ಆತ  ಕೆಟ್ಟವರ ಸಹವಾಸ ಮಾಡಿದರೆ, ಆತನೂ ಆ ಕೆಟ್ಟ ಗುಣಗಳನ್ನು ತನ್ನೊಳಗೆ ಅಳವಡಿಸಿಕೊಳ್ಲುತ್ತಾನೆ. ಇದು ಆತನ ಜೀವನವನ್ನೇ ಹಾಳು ಮಾಡುತ್ತದೆ, ಆದ್ದರಿಂದ ಯಾವಾಗಲೂ ಸಕಾರಾತ್ಮಕ ಜನರೊಂದಿಗೆ ಬೆರೆಯಬೇಕು. ಉತ್ತಮ ಜನರ ಸಹವಾಸ ಮಾಡಿದರೆ ನೀವು ಕೂಡ ಜೀವನದಲ್ಲಿ ಏಳಿಗೆ ಗಳಿಸಲು ಸಾಧ್ಯ.

ಸಮಯ ವ್ಯರ್ಥ ಮಾಡುವುದು: ಆಚಾರ್ಯ ಚಾಣಕ್ಯರು ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸುವಂತೆ ಸಲಹೆ ನೀಡಿದ್ದಾರೆ. ಏಕೆಂದರೆ ಈ ಒಂದು ತಪ್ಪು ಸಂಪೂರ್ಣ ಜೀವನವನ್ನೇ ಹಾಳು ಮಾಡುತ್ತದೆ. ಕಳೆದುಹೋದ ಹಣವನ್ನು ಕಠಿಣ ಪರಿಶ್ರಮದ ಮೂಲಕ ಮರಳಿ ಪಡೆಯಬಹುದು, ಆದರೆ ಒಮ್ಮೆ ಸಮಯ ಕಳೆದುಹೋದರೆ ಅದನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ. ಹಾಗಗಿ ಸಿಕ್ಕ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಆಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಇಂದು ನಮಗೆ ಅತ್ಯಂತ ಭಾವುಕ ದಿನ’: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ವೇಣುಗೋಪಾಲ್ ಭಾವುಕ ಮಾತು

ಬೆಂಗಳೂರು, ಮೇ 30: ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಿಎಲ್​ಪಿ ಸಭೆ ರಾಜಕೀಯ ಬೆಳವಣಿಗೆಗಳ ಮಧ್ಯೆ ಕೆಲ ಅದ್ಭುತ ಕ್ಷಣಗಳಿಗೂ ಸಾಕ್ಷಿಯಾಗಿದೆ. ಈ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​ ಭಾವುಕ ಮಾತುಗಳನ್ನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ರಾಜ್ಯಕ್ಕೆ ಭಾವುಕ‌ ದಿನ. ಸಿದ್ದರಾಮಯ್ಯ ಅವರು ನಮಗೆಲ್ಲರಿಗಾಗಿ ನಿಂತು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರೇ ನಾವು ನಿಮಗೆ ವಿಶ್ರಾಂತಿ ನೀಡೋದಿಲ್ಲ. ನಿಮ್ಮ ಸೇವೆ ಕರ್ನಾಟಕದ ಜೊತೆ ರಾಷ್ಟ್ರೀಯ ಮಟ್ಟದಲ್ಲೂ ನಿಮ್ಮ ಅಗತ್ಯತೆ ಇದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯನ್ನು ಸಿದ್ದರಾಮಯ್ಯನವರು ದಾರಿ ಸುಗಮಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿಯು ಈ ಪ್ರಕ್ರಿಯೆ ಸುಲಭವಲ್ಲ ಎಂದು ಭಾವಿಸಿತ್ತು. ಆದರೆ ಕಾಂಗ್ರೆಸ್‌ನ ಒಗ್ಗಟ್ಟಿನಿಂದ ಬಿಜೆಪಿಯ ನಿರೀಕ್ಷೆಗೆ ತಣ್ಣೀರು ಎರಚಲಾಯಿತು ಎಂದು ವೇಣುಗೋಪಾಲ್ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026 Final: ಆರ್​ಸಿಬಿ- ಗುಜರಾತ್ ನಡುವೆ ಫೈನಲ್ ಫೈಟ್; ಮುಖಾಮುಖಿ ದಾಖಲೆ ಹೇಗಿದೆ?

2026 ರ ಐಪಿಎಲ್ (IPL 2026) ಫೈನಲ್​ಗೆ ಕ್ಷಣಗಣನೆ ಶುರುವಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (GT vs RCB) ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಹೈವೋಲ್ಟೇಜ್ ಕದನ ಭಾನುವಾರ ಸಂಜೆ 7:30 ಕ್ಕೆ ಆರಂಭವಾಗಲಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳು ಅಮೋಘ ಪ್ರದರ್ಶನ ನೀಡಿದ್ದು, ಯಾವ ತಂಡಕ್ಕೆ ಟ್ರೋಫಿ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಒಂದೆಡೆ ಆರ್​ಸಿಬಿ ಇದೇ ಗುಜರಾತ್ ತಂಡವನ್ನು ಕ್ವಾಲಿಫೈಯರ್ 1 ರಲ್ಲಿ ಸೋಲಿಸಿ ಫೈನಲ್​ಗೆ ಅರ್ಹತೆ ಪಡೆದಿದ್ದರೆ, ಇತ್ತ ಆರ್​ಸಿಬಿ ವಿರುದ್ಧ ಸೋತಿದ್ದ ಗುಜರಾತ್, ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಫೈನಲ್​ಗೇರಿದೆ. ಹೀಗಾಗಿ ಗುಜರಾತ್​ಗೆ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿದ್ದರೆ, ಇತ್ತ ಆರ್​ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಇರಾದೆಯಲ್ಲಿದೆ. ಆದ್ದರಿಂದ ಐಪಿಎಲ್‌ನಲ್ಲಿ ಎರಡು ತಂಡಗಳು ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ನೋಡೋಣ..

ಮುಖಾಮುಖಿ ದಾಖಲೆ

ಐಪಿಎಲ್ ಇತಿಹಾಸದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ಒಟ್ಟು ಒಂಬತ್ತು ಪಂದ್ಯಗಳು ನಡೆದಿವೆ. ಈ 9 ಪಂದ್ಯಗಳಲ್ಲಿ ಆರ್​ಸಿಬಿ ಐದು ಪಂದ್ಯಗಳನ್ನು ಗೆದ್ದಿದ್ದರೆ, ಗುಜರಾತ್ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಇದರರ್ಥ ಉಭಯ ತಂಡಗಳ ಮುಖಾಮುಖಿಯಲ್ಲಿ ನಿಕಟ ಸ್ಪರ್ಧೆ ನಡೆದಿರುವುದನ್ನು ನಾವು ಕಾಣಬಹುದು. ಹೀಗಾಗಿ ಫೈನಲ್ ಪಂದ್ಯದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಆದಾಗ್ಯೂ ಕ್ವಾಲಿಫೈಯರ್ 1ರಲ್ಲಿ ಗುಜರಾತ್ ವಿರುದ್ಧ ಗೆದ್ದಿರುವುದು ಆರ್​ಸಿಬಿಯ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಆದರೆ ಫೈನಲ್ ಪಂದ್ಯ ಗುಜರಾತ್ ಟೈಟಾನ್ಸ್ ತಂಡದ ತವರು ನೆಲವಾದ ಅಹಮದಾಬಾದ್‌ನಲ್ಲಿ ನಡೆಯುವುದರಿಂದ ಗುಜರಾತ್​ಗೆ ತವರಿನ ಲಾಭ ಸಿಗುವ ಆತಂಕ ಆರ್​ಸಿಬಿಗಿದೆ.

ಅಹಮದಾಬಾದ್‌ನಲ್ಲಿ ದಾಖಲೆ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸಮಬಲದ ಹೋರಾಟ ನೀಡಿವೆ. ಈ ಮೈದಾನದಲ್ಲಿ ಎರಡೂ ತಂಡಗಳು ಮೇಲುಗೈ ಸಾಧಿಸಲು ಸಾಧ್ಯವಾಗಿಲ್ಲ. ಈ ಮೈದಾನದಲ್ಲಿ ಎರಡೂ ತಂಡಗಳ ನಡುವೆ ಕೇವಲ ಎರಡು ಐಪಿಎಲ್ ಪಂದ್ಯಗಳು ನಡೆದಿದ್ದು, ಎರಡೂ ಪಂದ್ಯಗಳಲ್ಲಿ, ಚೇಸಿಂಗ್ ತಂಡವು ಏಕಪಕ್ಷೀಯವಾಗಿ ಗೆದ್ದಿದೆ.

RCB vs GT: ಐಪಿಎಲ್ ಪ್ಲೇಆಫ್‌ನಲ್ಲಿ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಜೋಶ್ ಹ್ಯಾಜಲ್‌ವುಡ್, ರಸಿಖ್ ಸಲಾಂ ದಾರ್.

ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಾಹುಲ್ ತೆವಾಟಿಯಾ, ರಶೀದ್ ಖಾನ್ , ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ , ಪ್ರಸಿದ್ಧ್ ಕೃಷ್ಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

17 ವರ್ಷಗಳ ಬಳಿಕ ಕಾಂಗ್ರೆಸ್​​ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ

ಬೆಂಗಳೂರು, ಮೇ 30: ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸತತ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸಿದ್ದರಾಮಯ್ಯ ಅವರೀಗ ಪಟ್ಟ ತ್ಯಾಗ ಮಾಡಿದ್ದಾರೆ. ಅವರ ನಂತರ ಹೊಸ ನಾಯಕರಾಗಿ ಡಿಕೆ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ಮುಂಚಿತವಾಗಿ, ಶಾಸಕರು ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಯಾರ ಹೆಸರನ್ನು ಸೂಚಿಸುತ್ತದೋ ಅದಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳುವ ಮೂಲಕ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಟ್ಟರು. ಇದರಿಂದಾಗಿ ಹೈಕಮಾಂಡ್ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮನವೊಲಿಸುವ ಸವಾಲು ಎದುರಾಯಿತು. ಎಐಸಿಸಿ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಸಿದ್ದರಾಮಯ್ಯ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಈ ಮಧ್ಯಸ್ಥಿಕೆಯ ನಂತರ, ಶಾಸಕರು ಕೂಡ ಒಪ್ಪಿಗೆ ನೀಡಿದ್ದರಿಂದ ಡಿಕೆ ಶಿವಕುಮಾರ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಎಲ್​​​ಪಿ ಸಭೆಗೂ ಮುನ್ನವೇ ವಿಧಾನಸೌಧದಲ್ಲಿ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

ಬೆಂಗಳೂರು, ಮೇ 30): ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲಿ ಇಂದು (ಮೇ 30) ತೀವ್ರ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಪಕ್ಷದ ಮಹತ್ವದ ಶಾಸಕಾಂಗ ಸಭೆಗೂ ಮುನ್ನವೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ತಮ್ಮ ಕೊಠಡಿಯಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು… ರಾಜಕೀಯದ ಪ್ರಮುಖ ನಿರ್ಧಾರಗಳು ಹೊರಬೀಳುವ ಮುನ್ನ ಡಿ.ಕೆ. ಶಿವಕುಮಾರ್ ಅವರು ನೊಣವಿನಕೆರೆ ಅಜ್ಜಯ್ಯ ನೀಡಿದ ಸಲಹೆ ಸೂಚನೆಗಳನ್ನ ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ. ಹೌದು… ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ತಮ್ಮ ಕೊಠಡಿಯಲ್ಲಿದ್ದ ಆಪ್ತರು, ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಹೊರಗೆ ಕಳುಹಿಸಿ, ಸಂಪೂರ್ಣವಾಗಿ ಏಕಾಂಗಿಯಾಗಿ ಈ ಪೂಜೆಯನ್ನು ನೆರವೇರಿಸಿದರು. ಯಾವುದೇ ಗದ್ದಲವಿಲ್ಲದೆ, ಏಕಾಗ್ರತೆಯಿಂದ ದೇವತಾ ಆರಾಧನೆಯಲ್ಲಿ ತೊಡಗಿಸಿಕೊಳ್ಳಲು ಅವರು ಬಯಸಿದ್ದರಿಂದ ಕೊಠಡಿಯ ಬಾಗಿಲು ಮುಚ್ಚಿ ರಹಸ್ಯವಾಗಿ ಪ್ರಾರ್ಥನೆ ಸಲ್ಲಿಸಿದರು.

Source link

ಟಿಕೆಟ್ ದರ ಹೆಚ್ಚಳ: ತೆಲಂಗಾಣ ಸರ್ಕಾರಕ್ಕೆ ಹಾಕಿದ್ದ ಅರ್ಜಿ ಹಿಂಪಡೆದ ‘ಪೆದ್ದಿ’, ಕಾರಣವೇನು?

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಅದ್ಧೂರಿಯಾಗಿ ಮಾಡುತ್ತಿದೆ. ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್, ಜಾನ್ಹವಿ ಸಹ ನಟಿಸಿರುವ ಈ ಸಿನಿಮಾಕ್ಕೆ ಭಾರಿ ಬಜೆಟ್ ಅನ್ನು ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಹೂಡಿದೆ. ಇದೀಗ ಸಿನಿಮಾ ಬಿಡುಗಡೆ ದಿನ ಆದಷ್ಟು ಹೆಚ್ಚು ಗಳಿಕೆ ಮಾಡಲೆಂದು ಸಿನಿಮಾದ ಪ್ರೀಮಿಯರ್ ಶೋ, ಫ್ಯಾನ್ಸ್ ಶೋಗಳನ್ನು ಆಯೋಜಿಸಲಾಗಿದ್ದು, ಸಿನಿಮಾದ ಟಿಕೆಟ್ ದರವನ್ನು ಸಹ ದೊಡ್ಡ ಮಟ್ಟದಲ್ಲಿ ಹೆಚ್ಚಿಸಲಾಗುತ್ತಿದೆ.

ರಾಮ್ ಚರಣ್ ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿ ಆಗಿರುವ ಆಂಧ್ರ ಪ್ರದೇಶದಲ್ಲಿ ಸುಲಭವಾಗಿ ಸರ್ಕಾರದ ಅನುಮತಿ ಪಡೆದುಕೊಂಡು ‘ಪೆದ್ದಿ’ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚು ಮಾಡಲಾಗಿದೆ. ಅಂತೆಯೇ ತೆಲಂಗಾಣ ಸರ್ಕಾರಕ್ಕೂ ಸಹ ಸಿನಿಮಾ ಟಿಕೆಟ್ ದರ ಹೆಚ್ಚಿಸುವಂತೆ ‘ಪೆದ್ದಿ’ ಚಿತ್ರತಂಡ ಅರ್ಜಿ ಹಾಕಿಕೊಂಡಿತ್ತು. ಆದರೆ ಇದೀಗ ಖುದ್ದು ಚಿತ್ರತಂಡವೇ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದೆ.

ಸಿನಿಮಾ ಟಿಕೆಟ್ ಹೆಚ್ಚಳದ ಬಗ್ಗೆ ತೆಲಂಗಾಣ ಹೈಕೋರ್ಟ್ ಈ ಹಿಂದೆ ಕೆಲವು ಬಾರಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಟಿಕೆಟ್ ದರ ಹೆಚ್ಚಿಸಲು ಅನುಮತಿ ಕೊಡಬಾರದು ಎಂದಿತ್ತು. ಇದೀಗ ‘ಪೆದ್ದಿ’ ಸಿನಿಮಾ ತಂಡವು ಸರ್ಕಾರಕ್ಕೆ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕಾಗಿ ಮನವಿ ಸಲ್ಲಿಸುವ ಜೊತೆಗೆ ನ್ಯಾಯಾಲಯಕ್ಕೂ ಸಹ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಈಗಾಗಲೇ ಕೆಲವಾರು ಸಿನಿಮಾಗಳು ಇದೇ ವಿಷಯವಾಗಿ ಅರ್ಜಿ ಸಲ್ಲಿಸಿ, ಅವುಗಳ ಅರ್ಜಿಗಳು ಇತ್ಯರ್ಥ ಆಗದೇ ಇರುವ ಕಾರಣ ಹಾಗೂ ಕೆಲ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ಸಿಗದ ಕಾರಣ. ಕೋರ್ಟ್​​ನಲ್ಲಿ ವೃಥಾ ಸಮಯ ವ್ಯರ್ಥ ಮಾಡುವುದು ಬೇಡವೆಂದು ನಿರ್ಧರಿಸಿ ಅರ್ಜಿಯನ್ನು ಹಿಂಪಡೆಯಲಾಗಿದೆ.

ಇದನ್ನೂ ಓದಿ:ರಾಮ್ ಚರಣ್ ಹೊಸ ಬಾಡಿಗಾರ್ಡ್ ಯಾರು ಗೊತ್ತಾ? ದಿನದ ಸಂಬಳ ಎಷ್ಟು?

ತೆಲಂಗಾಣ ರಾಜ್ಯದಲ್ಲಿ ಟಿಕೆಟ್ ಬೆಲೆ ಹೆಚ್ಚಳದ ಬಗ್ಗೆ ಸಾಕಷ್ಟು ವಿರೋಧ ಮೊದಲಿನಿಂದಲೂ ಇದೆ. ಖುದ್ದು ಸಿಎಂ ರೇವಂತ್ ರೆಡ್ಡಿ ಅವರೇ ಟಿಕೆಟ್ ದರ ಹೆಚ್ಚಳವನ್ನು ಪರೋಕ್ಷವಾಗಿ ವಿರೋಧಿಸಿದ್ದರು. ಜೊತೆಗೆ ರಾಜ್ಯ ಹೈಕೋರ್ಟ್ ಸಹ ಟಿಕೆಟ್ ದರ ಹೆಚ್ಚಳದ ಬಗ್ಗೆ ಅಸಮಾಧಾನ ಹೊರಹಾಕಿತ್ತು. ಇನ್ನು ‘ಪೆದ್ದಿ’ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚಿಸಬಾರದು ಎಂದು ತೆಲಂಗಾಣ ರಾಜ್ಯ ಪ್ರದರ್ಶಕರ ಸಂಘವು ಸರ್ಕಾರಕ್ಕೆ ಪತ್ರವನ್ನೂ ಸಹ ಬರೆದು ಒತ್ತಾಯ ಮಾಡಿತ್ತು. ಇದೆಲ್ಲದರ ನಡುವೆ ಇದೀಗ ಖುದ್ದು ‘ಪೆದ್ದಿ’ ಚಿತ್ರತಂಡವೇ ಅರ್ಜಿಯನ್ನು ಹಿಂಪಡೆದು ಟಿಕೆಟ್ ದರ ಹೆಚ್ಚಳದ ಆಸೆಯನ್ನು ಕೈಬಿಟ್ಟಿದೆ.

‘ಪೆದ್ದಿ’ ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದು, ಸಿನಿಮಾನಲ್ಲಿ ರಾಮ್ ಚರಣ್, ಕ್ರಿಕೆಟ್ ಆಟಗಾರನಾಗಿ, ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್, ಕುಸ್ತಿ ಹೇಳಿಕೊಡುವ ಗುರುವಾಗಿ ನಟಿಸಿದ್ದಾರೆ. ಜಾನ್ಹವಿ ಕಪೂರ್ ಸಿನಿಮಾದ ನಾಯಕಿ. ಶ್ರುತಿ ಹಾಸನ್ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತವಿದೆ. ಸಿನಿಮಾದ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡದಲ್ಲಿ ಘೋರ ದುರಂತ: ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು ಜಲಸಮಾಧಿ

ಧಾರವಾಡ, ಮೇ 30: ಬಿಸಿಲಿನ ಬೇಗೆಯಿಂದ ಬಸವಳಿದು ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು (Boys) ಮುಳುಗಿ ದುರ್ಮರಣ (death) ಹೊಂದಿರುವಂತಹ ದಾರುಣ ಘಟನೆ ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ನಡೆದಿದೆ. ಮೃತರನ್ನು ಸಿಂಗನಹಳ್ಳಿ ಗ್ರಾಮದ ನಿವಾಸಿಗಳಾದ ಅಬ್ಬಾಸ್ ವಟ್ನಾಳ್ (12), ಅಸ್ಲಂ ವಟ್ನಾಳ್ (10) ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಸುಭಾನಿ ಬಾಗೋಜಿಕೊಪ್ಪ (10) ಎಂದು ಗುರುತಿಸಲಾಗಿದೆ. ಗದಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರ ದುರ್ಮರಣ
  • ಮುಗಿಲು‌ ಮುಟ್ಟಿದ ಕುಟುಂಬಸ್ಥರ ಆಕ್ರಂದನ
  • ಗದಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

ನಡೆದಿದ್ದೇನು?

ಬೇಸಿಗೆಯ ಕಡು ಬಿಸಿಲಿನ ತಾಪ ತಾಳಲಾರದೆ ಮೂವರು ಅಪ್ರಾಪ್ತ ಬಾಲಕರು ಧಾರವಾಡ ತಾಲೂಕಿನ ಸಿಂಗನಹಳ್ಳಿ ಬಳಿಯ ಕೆರೆಯಲ್ಲಿ ಈಜಲು ಹೋಗಿದ್ದಾರೆ. ಆದರೆ ಈ ವೇಳೆ ಕೆರೆಯಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾರೆ. ಮೃತರಲ್ಲಿ ಅಬ್ಬಾಸ್ ಮತ್ತು ಅಸ್ಲಂ ಸಹೋದರರು. ಸದ್ಯ ಮೂವರು ಬಾಲಕರ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಹೊರತೆಗೆದಿದ್ದಾರೆ.

ಇದನ್ನೂ ಓದಿ: ಭಟ್ಕಳ ದುರಂತ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ

ಇನ್ನು ಘಟನಾ ಸ್ಥಳಕ್ಕೆ ಧಾರವಾಡ ಎಸ್​​ಪಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲಿಸಿದರು. ಮೃತ ಬಾಲಕರ ದೇಹಗಳನ್ನು ನೋಡಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಸಿಂಗನಹಳ್ಳಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ನಿಯಂತ್ರಣ ತಪ್ಪಿ ಡಿಕ್ಕೆ ಹೊಡೆದ ಟಾಟಾ ಏಸ್​: ಇಬ್ಬರು ಪಾದಚಾರಿಗಳು ಸಾವು

ನಿಯಂತ್ರಣ ತಪ್ಪಿದ ಟಾಟಾ ಏಸ್​​ ವಾಹನಕ್ಕೆ ಇಬ್ಬರು ಪಾದಚಾರಿಗಳು ಬಲಿಯಾಗಿರುವಂತಹ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಬಸ್ ನಿಲ್ದಾಣದ ಬಳಿ ತಡರಾತ್ರಿ ನಡೆದಿದೆ. ನವೀನ್ (18) ಮತ್ತು ನಕುಲ್ (17)ಮೃತ ದುರ್ದೈವಿಗಳು. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಂಕೋಲಾ-ಯಲ್ಲಾಪುರ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೀಬರ್ಡ್ ಬಸ್ ಪಲ್ಟಿ: ಓರ್ವ ಸಾವು, 21 ಪ್ರಯಾಣಿಕರಿಗೆ ಗಾಯ

ಗೌರಿಬಿದನೂರಿಂದ ಮಧುಗಿರಿಯತ್ತ ತೆರಳುತಿದ್ದ ಟಾಟಾ ಏಸ್​​ ವಾಹನ ನಿಯಂತ್ರಣ ತಪ್ಪಿ ಇಬ್ಬರು ಪ್ರಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಪಾದಚಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಪಕ್ಕದಲ್ಲೇ ಇದ್ದ ಹೋಟೆಲ್​​​ಗೂ ಟಾಟಾ ಏಸ್ ವಾಹನ ನುಗ್ಗಿದ್ದು, ಹೋಟೆಲ್ ಒಳಗಿದ್ದ ಕೆಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version