ಝೂಮ್ ಕಾಲ್​ನಲ್ಲಿ 900 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದ್ದ ಸಿಇಒಗೆ ಈಗ ಹೋಯ್ತು ಕೆಲಸ – Kannada News | India origin ceo vishal garg who fired 900 employees in zoom call lost job after 5 years

ನ್ಯೂಯಾರ್ಕ್, ಆಗಸ್ಟ್ 17: ಐದು ವರ್ಷದ ಹಿಂದೆ (2021 ರಲ್ಲಿ) ಕೋವಿಡ್ ಪೀಕ್ ಇದ್ದಾಗ ಝೂಮ್ (Zoom) ಕಾಲ್ ಮೂಲಕ ಏಕಾಏಕಿ 900 ಉದ್ಯೋಗಿಗಳನ್ನು ವಜಾಗೊಳಿಸಿದ ಘಟನೆ ಹಲವರಿಗೆ ನೆನಪಿರಬಹುದು. ಆ ಕೆಲಸ ಮಾಡಿದ್ದು ಭಾರತ ಮೂಲದ ವ್ಯಕ್ತಿ ವಿಶಾಲ್ ಗರ್ಗ್ (Vishal Garg). ಅಮೆರಿಕದ ‘ಬೆಟರ್ ಹೋಮ್ & ಫೈನಾನ್ಸ್’ (Better Home & Finance) ಕಂಪನಿಯ ಸಿಇಒ ಆಗಿದ್ದಾಗ ಒಂದು ವಿಡಿಯೋ ಕಾಲ್​ನಲ್ಲಿ 900 ಉದ್ಯೋಗಿಗಳೆಲ್ಲರನ್ನೂ ಟರ್ಮಿನೇಟ್ ಮಾಡಿದ್ದರು. ಕರ್ಮ ರಿಟರ್ನ್ಸ್ ಎನ್ನುವಂತೆ, ಇದೀಗ ಆ ಕಂಪನಿಯ ಮಂಡಳಿ ಸದಸ್ಯರೇ ಸೇರಿಕೊಂಡು ವಿಶಾಲ್ ಗರ್ಗ್ ಅವರನ್ನು ಕೆಲಸದಿಂದ ಟರ್ಮಿನೇಟ್ ಮಾಡಿದ್ದಾರೆ.

ವಿಶಾಲ್ ಗರ್ಗ್ ಅವರನ್ನು ವಜಾ ಮಾಡಲು ಕಾರಣ

ವಿಶಾಲ್ ಗರ್ಗ್ ಅವರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ (judgment), ಸ್ವಭಾವ (temperament) ಮತ್ತು ನಂಬಿಕಾರ್ಹತೆಯ (credibility) ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಕಂಪನಿಯ ಆಡಳಿತ ಮಂಡಳಿಯು (Board of Directors) ಅವರನ್ನು ಹುದ್ದೆಯಿಂದ ವಜಾಗೊಳಿಸಲು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಭಾರತ ಮೂಲದ ಲಕ್ಷ್ಮೀ ಮಿತ್ತಲ್ ಅವರ ಕಾರ್ಖಾನೆ ಮೇಲೆ ರಷ್ಯನ್ ದಾಳಿ; ಇಬ್ಬರು ಬಲಿ

ವಿಶಾಲ್ ಗರ್ಗ್ ನಾಯಕತ್ವದಲ್ಲಿ ಕಂಪನಿಯು 2022 ರಿಂದ $1.5 ಬಿಲಿಯನ್ (ಸುಮಾರು ₹14,000 ಕೋಟಿಗೂ ಹೆಚ್ಚು) ನಿವ್ವಳ ನಷ್ಟ ಅನುಭವಿಸಿದೆ. ಅಲ್ಲದೆ ಕಂಪನಿಯ ಶೇರು ಮೌಲ್ಯವು ಶೇ. 90 ಕ್ಕಿಂತ ಹೆಚ್ಚು ಕುಸಿತ ಕಂಡಿದೆ.

2021 ರ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಹಬ್ಬಕ್ಕೂ ಕೆಲ ದಿನಗಳ ಮುನ್ನ ವಿಶಾಲ್ ಗಾರ್ಗ್ ಕೇವಲ 3 ನಿಮಿಷಗಳ ಝೂಮ್ ವೆಬಿನಾರ್‌ನಲ್ಲಿ 900 ಕ್ಕೂ ಹೆಚ್ಚು ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದ್ದರು. ಈ ಘಟನೆ ಜಾಗತಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕಂಪನಿಯ ಅನೇಕ ಹಿರಿಯರು ಕೂಡ ತೊರೆದುಹೋದರು. ಕಂಪನಿಯ ಬ್ರ್ಯಾಂಡ್ ಇಮೇಜ್​ಗೆ ಧಕ್ಕೆ ಬಂದಿತ್ತು. ವಿಶಾಲ್ ಗರ್ಗ್ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದರೂ ಪ್ರತಿಷ್ಠೆಗೆ ಆಗಿದ್ದ ಧಕ್ಕೆ ಸುಧಾರಿಸಲಿಲ್ಲ. ಬ್ಯುಸಿನೆಸ್ ಕೂಡ ಕುಸಿಯುತ್ತಾ ಬಂದಿತು. ಒಂದೆಡೆ, ವ್ಯವಹಾರ ನಷ್ಟ, ಇನ್ನೊಂದೆಡೆ ಶೇರು ಮೌಲ್ಯ ನಷ್ಟ. ಇವೆರಡೂ ಸೇರಿ ವಿಶಾಲ್ ಗರ್ಗ್ ಅವರಿಗೆ ಕುತ್ತು ತಂದಿದೆ.

ಸಿನಿಮಾ ಥ್ರಿಲ್ಲರ್​ನಂತೆ ಬಂದು ಮಧ್ಯಂತರ ಸಿಇಒ ಆದ ಡೇನಿಯಲ್ ಲೂಯಿಸ್

ಬೆಟರ್ ಹೋಮ್ ಸಂಸ್ಥೆಯು ಡೇನಿಯಲ್ ಲೂಯಿಸ್ (Daniel Lewis) ಎಂಬುವವರನ್ನು ಹಂಗಾಮಿ ಸಿಇಒ ಆಗಿ ನೇಮಿಸಿದೆ. ಈ ಡೇನಿಯಲ್ ಅವರನ್ನು ಕಂಪನಿಯ ಒಳಗೆ ಬಿಟ್ಟುಕೊಂಡಿದ್ದೇ ವಿಶಾಲ್ ಗರ್ಗ್. ಝೂಮ್ ಕಾಲ್ ಘಟನೆ ಬಳಿಕ ಕಂಪನಿಯ ಇಮೇಜ್​ಗೆ ಧಕ್ಕೆಯಾದಾಗ ಡೇನಿಯಲ್ ಅವರು ಸಾರ್ವಜನಿಕವಾಗಿ ಕಂಪನಿ ಬಗ್ಗೆ ಸಕಾರಾತ್ಮಕವಾಗಿ ಮಾತನಾಡುತ್ತಿದ್ದರು. ಹೋಗುತ್ತಾ ಹೋಗುತ್ತಾ ವಿಶಾಲ್ ಗರ್ಗ್ ಅವರ ವಿಶ್ವಾಸ ಕುದುರಿಸಿದ್ದರು. ಬಳಿಕ ಅವರನ್ನು ನಿರ್ದೇಶಕರ ಮಂಡಳಿಗೆ ಸೇರಿಸಿಕೊಳ್ಳಲಾಯಿತು. ನೇಮಕವಾಗಿ ಒಂದು ವಾರಕ್ಕೆ ಇತರ ನಿರ್ದೇಶಕರನ್ನು ಲೂಯಿಸ್ ಅವರು ವಿಶಾಲ್ ಗರ್ಗ್ ಉಚ್ಚಾಟನೆಗೆ ಮನವೊಲಿಸಿಬಿಟ್ಟಿದ್ದರು.

ಇದನ್ನೂ ಓದಿ: 2040ರಲ್ಲಿ ಅಮೆರಿಕ, ಯೂರೋಪ್​ಗಿಂತ ದಕ್ಷಿಣ ಏಷ್ಯಾದಲ್ಲಿ ಕಡಿಮೆ ಬಡವರು?; ವಿಶ್ವಬ್ಯಾಂಕ್ ದತ್ತಾಂಶ ಅಚ್ಚರಿ ಎನಿಸಿದರೂ ಸತ್ಯ

ಇದೀಗ ವಿಶಾಲ್ ಗರ್ಗ್ ತಮ್ಮನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಪ್ರಸಿದ್ಧ ವಕೀಲರನ್ನು ನೇಮಿಸಿಕೊಂಡು ಕಾನೂನು ಸಮರ ಆರಂಭಿಸಿದ್ದಾರೆ. ಕಂಪನಿಯನ್ನು ಲಾಭಕ್ಕೆ ತರುವವರೆಗೆ ವರ್ಷಕ್ಕೆ ಕೇವಲ 1 ಡಾಲರ್ ವೇತನಕ್ಕೆ ಕೆಲಸ ಮಾಡಲು ಸಿದ್ಧವಿರುವುದಾಗಿ ಹೇಳಿ ತಮ್ಮ ಹುದ್ದೆಯನ್ನು ಮರಳಿ ಪಡೆಯಲು ಯತ್ನಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಾಹಿದ್ ನಟನೆಯ ‘ಅಶ್ವತ್ಥಾಮ’ ಸಿನಿಮಾ ನಿಲ್ಲಿಸಿದ ನಿರ್ಮಾಪಕ; ಕಾರಣ ಪ್ರಭಾಸ್? – Kannada News | Is Prabhas Starrer Kalki 2898 AD The Reason Behind Shahid Kapoor Ashwatthama Being Shelved

ಶಾಹೀದ್ ಕಪೂರ್ ಅಭಿನಯದ ‘ಅಶ್ವತ್ಥಾಮ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇತ್ತು. ಆದರೆ ಈ ಸಿನಿಮಾ ಈಗ ಅಧಿಕೃತವಾಗಿ ನಿಂತುಹೋಗಿದೆ. ಇದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ತಂಡದ ಈ ನಿರ್ಧಾರಕ್ಕೆ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾದ ಪ್ರಭಾವವೇ ಮುಖ್ಯ ಕಾರಣ ಎಂದು ವರದಿ ಆಗಿದೆ.

‘ಅಶ್ವತ್ಥಾಮ’ ಸಿನಿಮಾ ನಿಂತುಹೋಗಲು ಹಲವು ಕಾರಣಗಳಿವೆ. ಈ ಬಗ್ಗೆ ನಿರ್ಮಾಪಕ ಜಾಕಿ ಭಗ್ನಾನಿ ಸ್ಪಷ್ಟನೆ ನೀಡಿದ್ದಾರೆ. ‘ವೀಕ್ಷಕರು ಬಜೆಟ್ ನೋಡಿ ಸಿನಿಮಾ ನೋಡುವುದಿಲ್ಲ. ಅವರಿಗೆ ಹೊಸತನ ಬೇಕು. ಕಲ್ಕಿ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರು ಅಶ್ವತ್ಥಾಮ ಪಾತ್ರವನ್ನು ಅದ್ಭುತವಾಗಿ ಮಾಡಿದ್ದರು. ಈ ಪಾತ್ರ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿದೆ’ ಎಂದು ಹೇಳಿದ್ದಾರೆ.

ಇದರಿಂದಾಗಿ ಶಾಹೀದ್ ಕಪೂರ್ ಅವರ ‘ಅಶ್ವತ್ಥಾಮ’ ಸಿನಿಮಾಗೆ ದೊಡ್ಡ ಹಿನ್ನಡೆಯಾಗಿದೆ. ‘ಕಲ್ಕಿ’ ಸಿನಿಮಾ ಗೆದ್ದ ನಂತರ ನಿರ್ಮಾಪಕರು ಮರುಚಿಂತನೆ ನಡೆಸಿದರು. ತಮ್ಮ ಸಿನಿಮಾದಲ್ಲಿ ಹೊಸತನ ಇದೆಯೇ ಎಂದು ಪರಿಶೀಲಿಸಿದರು. ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲು ಸಾಧ್ಯವೇ ಎಂದು ಯೋಚಿಸಿದರು. ಆತುರಪಟ್ಟು ಶೂಟಿಂಗ್ ಆರಂಭಿಸುವುದು ಬೇಡ ಎಂದು ನಿರ್ಧರಿಸಿದರು. ಕೊನೆಗೆ ಸಿನಿಮಾವನ್ನು ತಾತ್ಕಾಲಿಕವಾಗಿ ಕೈಬಿಡಲು ನಿರ್ಮಾಪಕರು ತೀರ್ಮಾನಿಸಿದರು. ಶಾಹೀದ್ ಕಪೂರ್ ಅಭಿಮಾನಿಗಳಿಗೆ ಈ ಸುದ್ದಿ ತೀವ್ರ ನಿರಾಸೆ ತಂದಿದೆ.

ಆದರೆ ಮಾರುಕಟ್ಟೆಯ ಪರಿಸ್ಥಿತಿಗೆ ತಕ್ಕಂತೆ ನಿರ್ಮಾಪಕರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಇಂತಹ ನಿರ್ಧಾರಗಳು ಸಾಮಾನ್ಯ ಎಂಬ ಮಾತು ಕೇಳಿ ಬಂದಿದೆ. ಸಿನಿಮಾದ ಕಥೆಯಲ್ಲಿ ಬದಲಾವಣೆ ತರೋದು ಅಸಾಧ್ಯ. ಅಶ್ವತ್ಥಾಮನ ಕಥೆ ಹೇಗಿದೆಯೋ ಹಾಗೆಯೇ ಹೇಳಬೇಕು. ಆಗ ಎಲ್ಲರೂ ಈ ಸಿನಿಮಾ ಪಾತ್ರವನ್ನು ಅಮಿತಾಭ್ ಬಚ್ಚನ್ ನಟನೆಗೆ ಹೋಲಿಕೆ ಮಾಡುತ್ತಾರೆ. ಇದರಿಂದ ಸಿನಿಮಾಗೆ ಸಾಕಷ್ಟು ಹಿನ್ನಡೆ ಆಗಬಹುದು.

ಇದನ್ನೂ ಓದಿ: ‘ಫರ್ಜಿ’ ವೆಬ್ ಸೀರೀಸ್ ನೋಡಿ ಖೋಟಾ ನೋಟ್ ದಂಧೆ; ಈ ಗ್ಯಾಂಗ್ ಪೊಲೀಸ್​ ಖೆಡ್ಡಾಗೆ ಬಿದ್ದಿದ್ದೆ ರಣರೋಚಕ

ಶಾಹೀದ್ ಕಪೂರ್ ಅವರ ಹೊಸ ಸಿನಿಮಾದ ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಜಾಕಿ ಭಗ್ನಾನಿ ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ಕುತೂಹಲ ಮೂಡಿದೆ. ಮತ್ತೊಂದೆಡೆ ‘ಕಲ್ಕಿ 2’ ಸಿನಿಮಾದ ಕೆಲಸಗಳು ಈಗಾಗಲೇ ಆರಂಭವಾಗಿವೆ. ಶೀಘ್ರದಲ್ಲೇ ಪ್ರಭಾಸ್ ಅವರು ಶೂಟಿಂಗ್‌ಗೆ ಸೇರಿಕೊಳ್ಳಲಿದ್ದಾರೆ. ‘ಕಲ್ಕಿ’ ಸಿನಿಮಾದ ಯಶಸ್ಸು ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

VIDEO: ಗಿಲ್ ಗಿಲಕ್ಕು… ವಾಟ್ ಎ ಕ್ಯಾಚ್! – Kannada News | IND vs SL: Shubman Gill took a stunning catch

ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭ್​ಮನ್ ಗಿಲ್ ಅತ್ಯದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 462 ರನ್​ ಪೇರಿಸಿ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡಕ್ಕೆ ಟೀಮ್ ಇಂಡಿಯಾ ಬೌಲರ್​ಗಳು ಆರಂಭಿಕ ಆಘಾತ ನೀಡಿದ್ದಾರೆ.

ಗಿಲ್ ಗಿಲಕ್ಕು!

ಶ್ರೀಲಂಕಾ ತಂಡದ ಮೊದಲ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ  ಕುಲ್ದೀಪ್ ಯಾದವ್ ಎಸೆದ ಚೆಂಡನ್ನು ಶ್ರೀಲಂಕಾದ ಉಪನಾಯಕ ಕಮಿಂದು ಮೆಂಡಿಸ್ (14 ರನ್) ಎಕ್ಸ್‌ಟ್ರಾ ಕವರ್ ಕಡೆಗೆ ಬಲವಾಗಿ ಹೊಡೆದರು.

ಬೌಂಡರಿಯತ್ತ ಮುನ್ನುಗ್ಗುತ್ತಿದ್ದ ಆ ವೇಗದ ಚೆಂಡನ್ನು ತಡೆಯುವುದು ಅಸಾಧ್ಯ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ಶುಭ್‌ಮನ್ ಗಿಲ್ ತಮ್ಮ ಎಡಭಾಗಕ್ಕೆ ಅದ್ಭುತವಾಗಿ ಡೈವ್ ಮಾಡಿ, ಒಂದೇ ಕೈಯಿಂದ ನೆಲಕ್ಕೆ ತಾಗುವ ಮುನ್ನ ಚೆಂಡನ್ನು ಫ್ಲೈಯಿಂಗ್ ಕ್ಯಾಚ್ ಆಗಿ ಪರಿವರ್ತಿಸಿದರು.

ಇದನ್ನು ನೋಡಿದ ಕಾಮೆಂಟೇಟರ್‌ಗಳಾದ ಸಂಜಯ್ ಮಂಜ್ರೇಕರ್ ಮತ್ತು ಇಯಾನ್ ಬಿಷಪ್ ಆಶ್ಚರ್ಯಚಕಿತರಾದರು. “ಗಿಲ್ ಈ ಕ್ಯಾಚ್ ಹಿಡಿಯಲು ಯಾವುದೇ ಚಾನ್ಸ್ ಇರಲಿಲ್ಲ, ಇದು ನಂಬಲಾಗದ ಸಾಹಸ” ಎಂದು ಗುಣಗಾನ ಮಾಡಿದರು.

ಇದೀಗ ಗಿಲ್ ಗಿಲಕ್ಕು ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಮ್ ಇಂಡಿಯಾ ನಾಯಕನ ಅದ್ಭುತ ಫೀಲ್ಡಿಂಗ್​ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಶ್ರೀಲಂಕಾಗೆ ಆರಂಭಿಕ ಆಘಾತ:

ಭಾರತ ಮೊದಲ ಇನ್ನಿಂಗ್ಸ್: ದೇವದತ್ ಪಡಿಕ್ಕಲ್ ಅವರ ಆಕರ್ಷಕ 167 ರನ್ ಮತ್ತು ಕೆ.ಎಲ್. ರಾಹುಲ್ ಅವರ ಜವಾಬ್ದಾರಿಯುತ 82 ರನ್‌ಗಳ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 462 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.

ಶ್ರೀಲಂಕಾ ಮೊದಲ ಇನ್ನಿಂಗ್ಸ್: ಭಾರತದ ಬೌಲಿಂಗ್ ದಾಳಿಗೆ ನಲುಗಿರುವ ಶ್ರೀಲಂಕಾ ಪಡೆ ಭೋಜನ ವಿರಾಮದ ವೇಳೆಗೆ 99 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದೆ. ಇದೇ ರೀತಿಯ ಮಿಂಚಿನ ದಾಳಿ ಸಂಘಟಿಸಿದರೆ ಟೀಮ್ ಇಂಡಿಯಾ ಇಂದೇ ಶ್ರೀಲಂಕಾ ತಂಡವನ್ನು ಆಲೌಟ್ ಮಾಡಬಹುದು.  ಅಲ್ಲದೆ ಬೃಹತ್ ಮೊತ್ತದ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು.

5 ವಿಕೆಟ್ ಪಡೆದವರು:

  • ಮಾನವ್ ಸುತಾರ್ (ಸ್ಪಿನ್ನರ್)- 2 ವಿಕೆಟ್​
  • ರವೀಂದ್ರ ಜಡೇಜಾ (ಸ್ಪಿನ್ನರ್)- 1 ವಿಕೆಟ್
  • ಕುಲ್ದೀಪ್ ಯಾದವ್ (ಸ್ಪಿನ್ನರ್)- 1 ವಿಕೆಟ್
  • ಮೊಹಮ್ಮದ್ ಸಿರಾಜ್ (ವೇಗಿ)- 1 ವಿಕೆಟ್

ಭಾರತ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ಮಾನವ್ ಸುತಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: 23 ಸೆಕೆಂಡ್ಸ್​​ನಲ್ಲಿ ಗೋಲು… ಹೊಸ ಇತಿಹಾಸ ಬರೆದ ರಿಕಾರ್ಡೊ!

ಶ್ರೀಲಂಕಾ ಪ್ಲೇಯಿಂಗ್ XI: ಲಹಿರು ಉದಾರ, ನಿಶಾನ್ ಮಧುಶಂಕ, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶಾ ಡಿಕ್ವೆಲ್ಲಾ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.

Source link

ಕಾವೇರಿ ವಿವಾದ: ಕರ್ನಾಟಕಕ್ಕೆ ಬಿಗ್ ಶಾಕ್, ತಮಿಳುನಾಡಿಗೆ ನೀರು ಹರಿಸುವ CWMA ಸೂಚನೆ ಪಾಲಿಸಲು ಸುಪ್ರೀಂ ಆದೇಶ – Kannada News | Cauvery Water Dispute: Supreme Court Upholds CWMA Order to Release 12,000 Cusecs to Tamil Nadu

ಕಾವೇರಿ ವಿವಾದ: ಕರ್ನಾಟಕಕ್ಕೆ ಬಿಗ್ ಶಾಕ್ (ಸಾಂದರ್ಭಿಕ ಚಿತ್ರ)Image Credit source: tv9

ನವದೆಹಲಿ, ಆಗಸ್ಟ್ 17: ಕಾವೇರಿ ನೀರು ಹಂಚಿಕೆ (Cauvery Dispute) ವಿಚಾರದಲ್ಲಿ ಕರ್ನಾಟಕಕ್ಕೆ ಬಿಗ್ ಶಾಕ್ ಎದುರಾಗಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಕರ್ನಾಟಕಕ್ಕೆ ಸೂಚಿಸಿದೆ. ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಲಾಗಿದ್ದ ನಿರ್ದೇಶನವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಇದರೊಂದಿಗೆ, ಮುಂಗಾರು ಮಳೆ ಕೊರತೆ ಎದುರಿಸುತ್ತಿರುವ ಕರ್ನಾಟಕಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, CWMA ಆದೇಶ ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ಸುಪ್ರೀಂ ಕೋರ್ಟ್​ನಲ್ಲಿ ತಮಿಳುನಾಡಿನ ವಾದ ಏನು?

CWMA ಕರ್ನಾಟಕದಿಂದ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬರುತ್ತಿಲ್ಲ ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ. ನಿತ್ಯ ಕೇವಲ 5ರಿಂದ 6 ಸಾವಿರ ಕ್ಯೂಸೆಕ್‌ನಷ್ಟು ನೀರು ಬರುತ್ತಿದ್ದು, ಈವರೆಗೆ ಸುಮಾರು 13ರಿಂದ 14 ಟಿಎಂಸಿ ನೀರು ಮಾತ್ರ ಲಭಿಸಿದೆ ಎಂದು ತಮಿಳುನಾಡು ತನ್ನ ವಾದದಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ CWMA ಆದೇಶವನ್ನು ಜಾರಿಗೊಳಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ಕರ್ನಾಟಕದ ವಾದವೇನು?

ಕರ್ನಾಟಕದ ಪರವಾಗಿ, ಈಗಾಗಲೇ 3,500 ಕ್ಯೂಸೆಕ್ ನೀರು ಹರಿಸಲಾಗಿದೆ ಎಂದು ತಿಳಿಸಲಾಗಿದೆ. CWMA ಆದೇಶವನ್ನು ಪಾಲಿಸಲು ರಾಜ್ಯ ಪ್ರಯತ್ನಿಸುತ್ತಿದೆ ಎಂದು ವಾದಿಸಲಾಗಿದೆ. ಬಿಳಿಗುಂಡ್ಲು ಬಳಿ ನೀರಿನ ಪ್ರಮಾಣವನ್ನು ಅಳೆಯಲಾಗುತ್ತದೆ. 12 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಅಲ್ಲಿ ದಾಖಲಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಕರ್ನಾಟಕದ ಪರ ವಾದ ಮಂಡಿಸಲಾಗಿದೆ.

ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪರಿಸ್ಥಿತಿ ಅನಿಶ್ಚಿತವಾಗಿದ್ದು, ಈ ಪ್ರಮಾಣದಲ್ಲಿ ನಿರಂತರವಾಗಿ ನೀರು ಹರಿಸುವುದು ರಾಜ್ಯಕ್ಕೆ ಕಷ್ಟವಾಗುತ್ತಿದೆ. ಆದರೂ CWMA ಆದೇಶ ಪಾಲಿಸಲು ಕರ್ನಾಟಕ ಪ್ರಯತ್ನಿಸುತ್ತಿದೆ ಎಂದು ತಿಳಿಸಲಾಗಿದೆ.

ಮೇಕೆದಾಟು ಯೋಜನೆ ಪ್ರಸ್ತಾಪ

ಈ ಸಂದರ್ಭದಲ್ಲಿ ಮೇಕೆದಾಟು ಆಣೆಕಟ್ಟು ಯೋಜನೆಯ ಅಗತ್ಯತೆಯನ್ನೂ ಕರ್ನಾಟಕದ ಪರವಾಗಿ ಪ್ರಸ್ತಾಪಿಸಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಇಂತಹ ಅನಿಶ್ಚಿತ ಪರಿಸ್ಥಿತಿ ಎದುರಾದಾಗ ಮೇಕೆದಾಟು ಯೋಜನೆ ಸಹಕಾರಿಯಾಗಲಿದೆ ಎಂದು ವಾದಿಸಲಾಗಿದೆ. ಆದರೆ ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಅಂಶವನ್ನೂ ಕರ್ನಾಟಕದ ಪರವಾಗಿ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

ಇದನ್ನೂ ಓದಿ: ಕಾವೇರಿ ನೀರು ವಿವಾದ: CWRC ಶಿಫಾರಸ್ಸು ಎತ್ತಿಹಿಡಿದ CWMA, ಕರ್ನಾಟಕಕ್ಕೆ ಮತ್ತೆ ಬರೆ

ಅಂತಿಮವಾಗಿ, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚಿಸಿದ್ದು, ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವ ನಿರ್ದೇಶನ ಮುಂದುವರಿದಿದೆ. ಪ್ರಕರಣದ ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Dam Water Level: ಭರ್ತಿಯಾಗುವ ಹಂತದಲ್ಲಿದೆ ಆಲಮಟ್ಟಿ; ಕಬಿನಿ, ಭದ್ರಾ, ಲಿಂಗನಮಕ್ಕಿಯಲ್ಲಿ ಎಷ್ಟಿದೆ ನೀರು? – Kannada News | Karnataka Reservoir Water Level on August 17; Alamatti, Kabini, Bhadra and Linganamakki Storage Details

ಬೆಂಗಳೂರು, ಆಗಸ್ಟ್ 17: ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆಯ ಅಭಾವ ಮತ್ತು ಚೇತರಿಕೆಯ ನಡುವೆ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಳಿತ ಕಂಡುಬಂದಿದೆ. ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಒಳಹರಿವು ಇಳಿಕೆಯಾಗಿದ್ದರೆ, ವಿಜಯಪುರದ ಆಲಮಟ್ಟಿ ಜಲಾಶಯವು ಗರಿಷ್ಠ ಮಟ್ಟ ತಲುಪುವ ಹಂತದಲ್ಲಿದ್ದು ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಿಗೂ ಉತ್ತಮ ಒಳಹರಿವು ದಾಖಲಾಗಿದೆ. ರಾಜ್ಯದ ಪ್ರಮುಖ 4 ಡ್ಯಾಂಗಳ ಇಂದಿನ ಪೂರ್ಣ ವಿವರ ಇಲ್ಲಿದೆ.

1. ಕಬಿನಿ ಜಲಾಶಯ

ಗರಿಷ್ಠ ನೀರಿನ ಮಟ್ಟ: 84.00 ಅಡಿ
ಇಂದಿನ ನೀರಿನ ಮಟ್ಟ: 80.02 ಅಡಿ
ಇಂದಿನ ಒಟ್ಟು ಸಂಗ್ರಹ: 17.05 TMC
ಲೈವ್ ಸ್ಟೋರೇಜ್: 7.24 TMC
ಒಳಹರಿವು: 7,747 ಕ್ಯೂಸೆಕ್
ನದಿಗೆ ಹೊರಹರಿವು: 13,600 ಕ್ಯೂಸೆಕ್
ಒಟ್ಟು ಹೊರಹರಿವು: 13,600 ಕ್ಯೂಸೆಕ್

ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಜಲಾಶಯಕ್ಕೆ ಬರುವ ಒಳಹರಿವಿನಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.

2. ಆಲಮಟ್ಟಿ ಜಲಾಶಯ

ಗರಿಷ್ಠ ನೀರಿನ ಮಟ್ಟ: 519.60 ಮೀಟರ್
ಇಂದಿನ ನೀರಿನ ಮಟ್ಟ: 519.57 ಮೀಟರ್
ಒಳಹರಿವು: 30,243 ಕ್ಯೂಸೆಕ್
ಹೊರಹರಿವು: 24,155 ಕ್ಯೂಸೆಕ್

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರವು ಭರ್ತಿಯಾಗುವ ಹಂತದಲ್ಲಿದ್ದು, ಭಾರಿ ಪ್ರಮಾಣದ ಒಳಹರಿವು ಬಂದಿರುತ್ತದೆ.

3. ಭದ್ರಾ ಜಲಾಶಯ

ಗರಿಷ್ಠ ಅಣೆಕಟ್ಟಿನ ಮಟ್ಟ: 186 ಅಡಿ (ಸಮುದ್ರ ಮಟ್ಟಕ್ಕೆ 2158.0)
ಇಂದಿನ ನೀರಿನ ಮಟ್ಟ: 173 ಅಡಿ 5 ಇಂಚು (ಸಮುದ್ರ ಮಟ್ಟಕ್ಕೆ 2145.41)
ಒಟ್ಟು ಸಂಗ್ರಹ ಸಾಮರ್ಥ್ಯ: 71.535 TMC
ಇಂದಿನ ನೀರಿನ ಸಂಗ್ರಹ: 56.609 TMC
ಒಳಹರಿವು: 3,154 ಕ್ಯೂಸೆಕ್
ಹೊರಹರಿವು: 203 ಕ್ಯೂಸೆಕ್

ಆಗಸ್ಟ್ 17ರ ಬೆಳಗಿನ ವರದಿಯಂತೆ ಭದ್ರಾ ಜಲಾಶಯದ ಪ್ರಸ್ತುತ ಸಂಗ್ರಹ ಸಾಮರ್ಥ್ಯ 56.609 ಟಿ.ಎಂ.ಸಿ ತಲುಪಿದೆ.

4. ಲಿಂಗನಮಕ್ಕಿ ಜಲಾಶಯ

ಗರಿಷ್ಠ ನೀರಿನ ಮಟ್ಟ: 1819.00 ಅಡಿ
ಇಂದಿನ ನೀರಿನ ಮಟ್ಟ: 1794.80 ಅಡಿ (ಇಂದು 0.35 ಅಡಿ ಏರಿಕೆ)
ಒಳಹರಿವು: 11,191 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 1813.50 ಅಡಿ ಇತ್ತು.ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕ್ರಮೇಣ ಏರಿಕೆಯಾಗುತ್ತಿದ್ದು, ಪ್ರಸ್ತುತ ಶೇ 55.09 ರಷ್ಟು ಲೈವ್ ಸ್ಟೋರೇಜ್ ಹೊಂದಿದೆ.

Source link

Sunil Gavaskar: ಐಪಿಎಲ್​ ರಹಸ್ಯ ಒಪ್ಪಂದಗಳಿಗೆ ಬ್ರೇಕ್ ಹಾಕಿ! – Kannada News | IPL 2026: Sunil Gavaskar Demands Transparency

ಐಪಿಎಲ್ 2027ರ ಮಿನಿ ಹರಾಜಿಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವ ಬೆನ್ನಲ್ಲೇ, ಭಾರತೀಯ ಕ್ರಿಕೆಟ್‌ನ ದಿಗ್ಗಜ ಸುನಿಲ್ ಗಾವಸ್ಕರ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಪ್ರಮುಖ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಫ್ರಾಂಚೈಸಿಗಳ ನಡುವೆ ನಡೆಯುವ ಬಹುಕೋಟಿ ರೂಪಾಯಿಗಳ ಆಟಗಾರರ ಟ್ರೇಡಿಂಗ್ ಮತ್ತು ವರ್ಗಾವಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಗಾವಸ್ಕರ್ ಒತ್ತಾಯಿಸಿದ್ದಾರೆ.

ತಮ್ಮ ಇತ್ತೀಚಿನ ಅಂಕಣದಲ್ಲಿ ಈ ಬಗ್ಗೆ ಬರೆದಿರುವ ಗವಾಸ್ಕರ್, ಐಪಿಎಲ್‌ನ ಯಶಸ್ಸನ್ನು ನೋಡಿ ಅಸೂಯೆ ಪಡುವವರು ಲೀಗ್‌ನತ್ತ ಬೆರಳು ಮಾಡದಂತೆ ತಡೆಯಲು ಈ ಆಟಗಾರರ ಟ್ರೇಡಿಂಗ್‌ನ ಆರ್ಥಿಕ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

ರಹಸ್ಯ ಹಣಕಾಸು ಒಪ್ಪಂದಗಳಿಗೆ ಬ್ರೇಕ್!

ಪ್ರಸ್ತುತ ನಿಯಮಗಳ ಪ್ರಕಾರ, ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರ ವರ್ಗಾವಣೆಯಾದಾಗ (ಟ್ರೇಡ್) ಅದರ ಆರ್ಥಿಕ ವಿವರಗಳು ಕೇವಲ ಬಿಸಿಸಿಐ, ಸಂಬಂಧಪಟ್ಟ ಆಟಗಾರ ಮತ್ತು ಆ ಎರಡು ಫ್ರಾಂಚೈಸಿಗಳಿಗೆ ಮಾತ್ರ ತಿಳಿದಿರುತ್ತವೆ. ಉಳಿದ ತಂಡಗಳಿಗೆ ಮತ್ತು ಸಾರ್ವಜನಿಕರಿಗೆ ಈ ಮೊತ್ತ ತಿಳಿಯುವುದಿಲ್ಲ. ಇದರಿಂದಾಗಿ ಸ್ಯಾಲರಿ ಕ್ಯಾಪ್ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯೇ ಎಂಬ ಅನುಮಾನ ಮೂಡುತ್ತದೆ. ಆದ್ದರಿಂದ ವರ್ಗಾವಣೆಯ ನಿಖರ ಮೊತ್ತವನ್ನು ಬಹಿರಂಗಪಡಿಸಬೇಕು ಎಂದು ಗಾವಸ್ಕರ್ ಆಗ್ರಹಿಸಿದ್ದಾರೆ.

ಅಸೂಯೆ ಪಡುವವರಿಂದ ರಕ್ಷಿಸಿ:

ಐಪಿಎಲ್ ವಿಶ್ವದ ಅತ್ಯಂತ ಶ್ರೇಷ್ಠ ಟಿ20 ಲೀಗ್ ಆಗಿದೆ. ಇದರ ಯಶಸ್ಸನ್ನು ನೋಡಿ ಅಸೂಯೆ ಪಡುವವರು ಇದರತ್ತ ಬೊಟ್ಟು ಮಾಡಬಾರದು ಎಂದರೆ ಪಾರದರ್ಶಕತೆ ಅತ್ಯಗತ್ಯ. ಹೀಗಾಗಿ ಟ್ರೇಡಿಂಗ್ ವಿಚಾರಗಳು ಮತ್ತು ಆಟಗಾರರ ವರ್ಗಾವಣೆಗೆ ವ್ಯಯಿಸಿದ ಮೊತ್ತವನ್ನು ಬಹಿರಂಗಪಡಿಸಬೇಕು ಎಂದು ಗಾವಸ್ಕರ್ ತಿಳಿಸಿದ್ದಾರೆ.

ಟಾಪ್ ಆಟಗಾರರ ಟ್ರೇಡಿಂಗ್ ಚರ್ಚೆ!

ಇತ್ತೀಚಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್ ಅವರಂತಹ ದೊಡ್ಡ ಆಟಗಾರರ ಫ್ರಾಂಚೈಸಿ ಬದಲಾವಣೆ ಹಾಗೂ ಭವಿಷ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಮತ್ತು ವದಂತಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸುನಿಲ್ ಗಾವಸ್ಕರ್ ಅವರ ಈ ಪಾರದರ್ಶಕತೆಯ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: 23 ಸೆಕೆಂಡ್ಸ್​​ನಲ್ಲಿ ಗೋಲು… ಹೊಸ ಇತಿಹಾಸ ಬರೆದ ರಿಕಾರ್ಡೊ!

ಒಟ್ಟಾರೆಯಾಗಿ ಹೇಳುವುದಾದರೆ, ಸುನಿಲ್ ಗಾವಸ್ಕರ್ ಅವರ ಈ ಸಲಹೆಯು ಐಪಿಎಲ್‌ನ ವಿಶ್ವಾಸಾರ್ಹತೆ ಮತ್ತು ಆರ್ಥಿಕ ಪಾರದರ್ಶಕತೆಯನ್ನು ಕಾಪಾಡುವಲ್ಲಿ ಬಿಸಿಸಿಐಗೆ ನೀಡಿರುವ ಒಂದು ಪ್ರಮುಖ ಎಚ್ಚರಿಕೆಯಾಗಿದೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆ ಹೊಂದಿರುವ ಐಪಿಎಲ್‌ನತ್ತ ಯಾರೂ ಬೊಟ್ಟು ಮಾಡದಂತೆ ನೋಡಿಕೊಳ್ಳಲು ಸಾರ್ವಜನಿಕ ಪಾರದರ್ಶಕತೆ ಅತ್ಯಗತ್ಯ. ಮುಂಬರುವ ಹರಾಜಿನಲ್ಲಿ ಬಿಸಿಸಿಐ ಈ ಕಿವಿಮಾತನ್ನು ಗಂಭೀರವಾಗಿ ಪರಿಗಣಿಸಿ ಹೊಸ ನಿಯಮಗಳನ್ನು ಜಾರಿಗೊಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Published On – 12:11 pm, Mon, 17 August 26

Source link

‘ಉಚಿತ ಎಲೆಕ್ಟ್ರಿಕ್ ಸ್ಟೌ’ ಸುಳ್ಳು ಸಂದೇಶ: ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ – Kannada News | Fake Free Electric Stove Scheme Message: Prahlad Joshi Warns Public Against Fraud

ಸುಳ್ಳು ಸಂದೇಶ ನಂಬಿ ಮೋಸಹೋಗದಂತೆ ಪ್ರಲ್ಹಾದ್ ಜೋಶಿ ಕರೆImage Credit source: PTI

ನವದೆಹಲಿ, ಆಗಸ್ಟ್ 17: ‘ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ಎಂಬುದು ನಕಲಿ ಸಂದೇಶವಾಗಿದ್ದು, ಸಾರ್ವಜನಿಕರು ಇದನ್ನು ನಂಬಿ ಮೋಸ ಹೋಗಬಾರದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ. ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಹೆಸರಿನಲ್ಲಿ ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ, ಸಂದೇಶಗಳನ್ನು ಬಿತ್ತರಿಸಲಾಗುತ್ತಿದೆ. ಈ ಬಗ್ಗೆ ನಾಗರಿಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಕೇಂದ್ರ ನವೀಕರಿಸಬಹುದಾದ ಇಲಾಖೆಯು ‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ಯೋಜನೆಯನ್ನು ಪರಿಚಯಿಸಿಲ್ಲ. ‎ನಾಗರಿಕರನ್ನು ದಾರಿ ತಪ್ಪಿಸುವ, ವಂಚಿಸುವ ಉದ್ದೇಶದಿಂದ ಕೆಲವರು MNRE ಹೆಸರಲ್ಲಿ ಹೀಗೆ ಸುಳ್ಳು ಸಂದೇಶಗಳನ್ನು ಹರಿ ಬಿಡುತ್ತಿದ್ದಾರೆ. ಇದೆಲ್ಲಾ ಫೇಕ್ ಆಗಿರುತ್ತದೆ ಎಂದು ನವೀಕರಿಸಬಹುದಾದ ಇಂಧನ ಸಚಿವರೂ ಆಗಿರುವ ಪ್ರಲ್ಹಾದ ಜೋಶಿ ಅವರೇ ಸ್ಪಷ್ಟಪಡಿಸಿದ್ದಾರೆ.

ಸಚಿವಾಲಯದ ಅಧಿಕೃತ ವೆಬ್​ಸೈಟ್, ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನಷ್ಟೇ ಗಮನಿಸಲು ಕರೆ

ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಹೆಸರಿನಲ್ಲಿ ನಕಲಿ ಸಂದೇಶಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ನಾಗರಿಕರು ಇಂಥ ನಕಲಿ ಸಂದೇಶಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಸಚಿವಾಲಯದ ಅಧಿಕೃತ ವೆಬ್‌ಸೈಟ್ ಮತ್ತು ಪರಿಶೀಲಿತ (Verified) ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಅಧಿಕೃತ ಮಾಹಿತಿಯನ್ನಷ್ಟೇ ನಂಬಬೇಕು ಎಂದು ತಿಳಿಸಿದ್ದಾರೆ.

ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ: ಜೋಶಿ

ಸಾಮಾಜಿಕ ಜಾಲತಾಣಗಳಲ್ಲಿನ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಪರಿಶೀಲಿಸದೇ ಯಾವುದೇ ಸಂದೇಶಗಳನ್ನು ಫಾರ್ವರ್ಡ್ ಮಾಡಬಾರದು ಹಾಗೂ ಬ್ಯಾಂಕಿಂಗ್, ಹಣಕಾಸು ಅಥವಾ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಲೂಬಾರದು ಎಂದು ಎಚ್ಚರಿಸಿದ್ದಾರೆ.

ಯಾವುದೇ ಸುದ್ದಿ, ಸಂದೇಶಗಳ ಬಗೆಗೆ ಅಧಿಕೃತ ವೆಬ್ ಸೈಟ್ ಹಾಗೂ ಸುದ್ದಿ ಸಂಸ್ಥೆಗಳನ್ನಷ್ಟೇ ಅನುಸರಿಸಬೇಕು. ಸರ್ಕಾರದ ಯೋಜನೆಗಳಿಗೆ ಇಲಾಖಾ ಅಧಿಕೃತ ವೆಬ್ ಸೈಟ್, ಜಾಹೀರಾತು, ಮಾಧ್ಯಮ ಪ್ರಕಟಣೆಗಳನ್ನು ಮಾತ್ರ ನಂಬಬೇಕು. ನಕಲಿ ಸಂದೇಶಗಳಿಂದ ಜಾಗರೂಕರಾಗಿರಬೇಕು ಎಂದು ನಾಗರೀಕರಿಗೆ ಪ್ರಲ್ಹಾದ ಜೋಶಿ ಕಿವಿಮಾತು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಟ್ರಾಫಿಕ್ ಕಿರಿಕಿರಿಗೆ ಫುಲ್ ಸ್ಟಾಪ್: ರಸ್ತೆ ಗುಂಡಿ ಪತ್ತೆ ಹಚ್ಚಲು AI ಆ್ಯಪ್ ಅಭಿವೃದ್ಧಿಪಡಿಸಿದ ಟೆಕ್ಕಿ – Kannada News | Bengaluru Engineer Builds AI App to Track Potholes and Identify Authorities

ಬೆಂಗಳೂರಿನ ರಸ್ತೆ ಗುಂಡಿ ಪತ್ತೆಗೆ ಎಐ ಆಪ್ ರೂಪಿಸಿದ ಟೆಕ್ಕಿ

ಬೆಂಗಳೂರು, ಆಗಸ್ಟ್ 17:  ರಸ್ತೆಗಳಲ್ಲಿನ ಗುಂಡಿಗಳು (Potholes) ಹಾಗೂ ಕಳಪೆ ಮೂಲಸೌಕರ್ಯ ಸಾರ್ವಜನಿಕರಿಗೆ ನಿತ್ಯದ ಕಿರಿಕಿರಿಯಾಗಿದೆ. ಆದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನ ಟೆಕಿಯೊಬ್ಬರು ತಂತ್ರಜ್ಞಾನದ ನೆರವು ಪಡೆದು ಹೊಸದೊಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಆಪ್ ಒಂದನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ರಸ್ತೆ ಗುಂಡಿಗಳನ್ನು ಗುರುತಿಸುವುದಷ್ಟೇ ಅಲ್ಲದೆ, ಅದನ್ನು ಯಾವ ಅಧಿಕೃತ ಸಂಸ್ಥೆ ದುರಸ್ತಿಗೊಳಿಸಬೇಕು ಎಂಬುದನ್ನೂ ಪತ್ತೆ ಮಾಡುತ್ತದೆ!

ಹೇಗೆ ಕೆಲಸ ಮಾಡುತ್ತದೆ ಈ ಎಐ ಆಪ್?

ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ರೂಪಿಸಿರುವ ಈ ತಂತ್ರಜ್ಞಾನವು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘X’ (ಟ್ವಿಟರ್) ನಲ್ಲೂ ಸದ್ಯ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಸಾರ್ವಜನಿಕರು ಅಥವಾ ಚಾಲಕರು ರಸ್ತೆಯ ಫೋಟೋ ಅಥವಾ ವಿಡಿಯೋ ಅಪ್‌ಲೋಡ್ ಮಾಡಿದರೆ, ಈ ಆಪ್ ಎಐ ಸಹಾಯದಿಂದ ಗುಂಡಿಯ ಗಾತ್ರ ಹಾಗೂ ತೀವ್ರತೆಯನ್ನು ವಿಶ್ಲೇಷಿಸುತ್ತದೆ. ಪ್ರಮುಖವಾಗಿ, ಆ ರಸ್ತೆ ಅಥವಾ ಜಾಗವು ಬಿಬಿಎಂಪಿ (BBMP), ಬಿಎಂಆರ್‌ಸಿಎಲ್ (BMRCL), ಅಥವಾ ಬಿಡಬ್ಲ್ಯೂಎಸ್ಎಸ್‌ಬಿ (BWSSB) ಸಂಸ್ಥೆಗೆ ಸೇರಿದ್ದೇ ಎಂಬುದನ್ನು ಜಿಯೋ-ಟ್ಯಾಗಿಂಗ್ ಮೂಲಕ ನಿಖರವಾಗಿ ಗುರುತಿಸುತ್ತದೆ. ಈ ಮೂಲಕ ಯಾವ ಅಧಿಕಾರಿಗೆ ಅಥವಾ ಇಲಾಖೆಗೆ ದೂರು ಸಲ್ಲಿಸಬೇಕು ಎಂಬುದನ್ನು ತಕ್ಷಣವೇ ಸುಲಭಗೊಳಿಸುತ್ತದೆ.

ನೆಟ್ಟಿಗರ ಮೆಚ್ಚುಗೆ ಹಾಗೂ ಬೆಂಬಲ

ಸಾಮಾಜಿಕ ಜಾಲತಾಣಗಳಲ್ಲಿ ಈ ಆಪ್ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಬಿಬಿಎಂಪಿಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತಲು ಇದು ಸೂಕ್ತ ಅಸ್ತ್ರವಾಗಲಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ನಗರಾಡಳಿತ ಕೂಡ ಈ ರೀತಿಯ ತಂತ್ರಜ್ಞಾನವನ್ನು ಅಧಿಕೃತವಾಗಿ ಅಳವಡಿಸಿಕೊಂಡು, ಬೆಂಗಳೂರಿನ ರಸ್ತೆಗಳ ಸುಧಾರಣೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:28 am, Mon, 17 August 26

Source link

ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್ ಎಂದ ದರ್ಶನ್; ನಾನೇನು ಮಾಡೋಕೆ ಆಗಲ್ಲ ಎಂದ ಡಿಜಿಪಿ  – Kannada News | Actor Darshan Complains Of Mosquito Menace In Parappana Agrahara Jail, DGP Alok Kumar Responds  

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್‌ಗೆ ಸೊಳ್ಳೆಗಳ ಕಾಟ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜೈಲಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅದರಿಂದ ಮುಕ್ತಿ ನೀಡುವಂತೆ ದರ್ಶನ್ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ರಾಜ್ಯ ಜೈಲುಗಳ ಮಹಾನಿರ್ದೇಶಕರಾದ (ಡಿಜಿಪಿ) ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಪರಿಶೀಲನೆಗಾಗಿ ಭೇಟಿ ನೀಡಿದ್ದರು. ಈ ವೇಳೆ ನಟ ದರ್ಶನ್, ‘ಜೈಲಿನಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಏನಾದರೂ ಪರಿಹಾರ ಮಾಡಿ’ ಎಂದು ಅವರಿಗೆ ಮನವಿ ಮಾಡಿದ್ದಾರೆ.

ಆದರೆ ದರ್ಶನ್ ಅವರ ಈ ಮನವಿಗೆ ಡಿಜಿಪಿ ಅಲೋಕ್ ಕುಮಾರ್ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ‘ಸೊಳ್ಳೆಗಳ ವಿಷಯದಲ್ಲಿ ನಾನೇನು ಮಾಡಲು ಸಾಧ್ಯವಿಲ್ಲ. ಜೈಲಿನ ಮ್ಯಾನ್ಯುವಲ್ ಪ್ರಕಾರ ಬಂದಿಗಳಿಗೆ ಏನೆಲ್ಲಾ ಸೌಲಭ್ಯ ಒದಗಿಸಬೇಕೋ ಅದನ್ನು ಮಾತ್ರ ಕೊಡಲು ಸಾಧ್ಯ. ಮ್ಯಾನ್ಯುವಲ್‌ನಲ್ಲಿ ಇಲ್ಲದಿರುವುದನ್ನು ನೀಡಲು ಬರುವುದಿಲ್ಲ. ಜೈಲು ನಿಯಮಾವಳಿ ಪ್ರಕಾರ ಏನಾದರೂ ಸಮಸ್ಯೆಗಳಿದ್ದರೆ ಹೇಳಿ, ಸೌಲಭ್ಯ ಒದಗಿಸುತ್ತೇವೆ. ಅದನ್ನು ಹೊರತುಪಡಿಸಿ ಸೊಳ್ಳೆಗಳ ಬಗ್ಗೆ ನಾವೇನು ಮಾಡಲು ಆಗುವುದಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rates 17 Aug: ಬಂಗಾರದ ದರ ಮತ್ತಷ್ಟು ಏರಿಕೆ; ಗ್ರಾಮ್​ಗೆ 50 ರೂ ಹೆಚ್ಚಳ – Kannada News | Gold Price Today on 17th August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 17: ಚಿನ್ನದ ಬೆಲೆಯ (Gold Price) ಏರಿಕೆ ಮುಂದುವರಿದಿದೆ. ವಾರಾಂತ್ಯದಲ್ಲಿ ಗ್ರಾಮ್​ಗೆ 205 ರೂ ಏರಿದ್ದ ಬಂಗಾರದ ದರ ಇವತ್ತು 50 ರೂ ಹಿಗ್ಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಅಲ್ಪ ವ್ಯತ್ಯಯಗಳಾಗಿವೆ. ಸ್ಪಾಟ್ ಗೋಲ್ಡ್ (Spot gold) ಮತ್ತು ಸ್ಪಾಟ್ ಸಿಲ್ವರ್ ದರಗಳೂ ತುಸು ಏರಿವೆ. ಈಗಿನ ಒಂದು ಗ್ರಾಮ್ ಸ್ಪಾಟ್ ಗೋಲ್ಡ್ ಬೆಲೆ 141.18 ಡಾಲರ್ (ಸುಮಾರು 13,498 ರೂ) ಇದೆ. ಇನ್ನು, ಬೆಳ್ಳಿ ಬೆಲೆಯಲ್ಲಿ ಇವತ್ತು ಬದಲಾವಣೆಯಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,660 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 25,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 17ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,566
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,270
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,676
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,270 ರೂ
  • ಚೆನ್ನೈ: 14,270 ರೂ
  • ಮುಂಬೈ: 14,270 ರೂ
  • ದೆಹಲಿ: 14,285
  • ಕೋಲ್ಕತಾ: 14,270 ರೂ
  • ಕೇರಳ: 14,270 ರೂ
  • ಅಹ್ಮದಾಬಾದ್: 14,275 ರೂ
  • ಜೈಪುರ್: 14,285
  • ಲಕ್ನೋ: 14,285
  • ಭುವನೇಶ್ವರ್: 14,270 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 141.18 ಡಾಲರ್ (13,498 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 2.106 ಡಾಲರ್ (201 ರುಪಾಯಿ)

ಇದನ್ನೂ ಓದಿ: ನೀವು ಎಟಿಎಂನಲ್ಲಿ ಹಣ ಡ್ರಾ ಮಾತ್ರ ಮಾಡ್ಬಹುದು ಅಂದುಕೊಂಡ್ರಾ? ಈ ಕೆಲ್ಸಗಳನ್ನು ಮಾಡ್ಬಹುದು

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,566 ರುಪಾಯಿ
  • ಮಲೇಷ್ಯಾ: 593 ರಿಂಗಿಟ್ (13,899 ರುಪಾಯಿ)
  • ದುಬೈ: 527.50 ಡಿರಾಮ್ (13,728 ರುಪಾಯಿ)
  • ಅಮೆರಿಕ: 144 ಡಾಲರ್ (13,764 ರುಪಾಯಿ)
  • ಸಿಂಗಾಪುರ: 191.50 ಸಿಂಗಾಪುರ್ ಡಾಲರ್ (14,330 ರುಪಾಯಿ)
  • ಕತಾರ್: 527.50 ಕತಾರಿ ರಿಯಾಲ್ (13,832 ರೂ)
  • ಸೌದಿ ಅರೇಬಿಯಾ: 543 ಸೌದಿ ರಿಯಾಲ್ (13,825 ರುಪಾಯಿ)
  • ಓಮನ್: 56 ಒಮಾನಿ ರಿಯಾಲ್ (13,904 ರುಪಾಯಿ)
  • ಕುವೇತ್: 43.73 ಕುವೇತಿ ದಿನಾರ್ (13,604 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 255 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 255 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 255 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version