ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ: ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ, ದಲಿತರಿಗೆ ಜಾಗ ಇಲ್ಲ ಎಂದು ಖರ್ಗೆ ಕಿಡಿ – Kannada News | Mallikarjuna Kharge raises Haldwani Shuddhikaran incident in parliament, accuses BJP of untouchability

ನವದೆಹಲಿ, ಆಗಸ್ಟ್ 13: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ರೀತಿಯ ಕೃತ್ಯವು ಹಿಂದೂ ಧರ್ಮಕ್ಕೇ ವಿರುದ್ಧವಾದದ್ದು. ಈ ದೇಶದಲ್ಲಿ ದಲಿತರಿಗೆ ಸ್ಥಾನ ಇಲ್ಲ ಎಂಬುದನ್ನು ತೋರಿಸುತ್ತದೆ” ಎಂದು ಅವರು ಕಿಡಿಕಾರಿದ್ದಾರೆ. ಆದರೆ, ಬಿಜೆಪಿ ನಾಯಕರು ಇದನ್ನು ತಳ್ಳಿಹಾಕಿದ್ದು, ಶುದ್ಧೀಕರಣ ಮಾಡಿದವರು ತಮ್ಮ ಪಕ್ಷಕ್ಕೆ ಸೇರಿದವರಲ್ಲ ಎಂದಿದ್ದಾರೆ.

ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ‘ವಿಜಯ ಶಂಖನಾದ’ ರ್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅದಾದ ಎರಡು ದಿನಗಳ ನಂತರ ‘ಶ್ರೀರಾಮ ಸೇನಾ’ ಸಂಘಟನೆಯ ಸದಸ್ಯರು ಆ ವೇದಿಕೆಯಲ್ಲಿ ‘ಶುದ್ಧೀಕರಣ’ ಹವನ ನಡೆಸಿದ್ದರು. ವಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾದ ಇಂದು ಈ ವಿಚಾರ ಪ್ರಸ್ತಾಪಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಜಾಗತಿಕ ಯುವ ಜನಸಂಖ್ಯೆ ವರದಿ: ಭಾರತ ಪ್ರಥಮ; ಚೀನಾ, ಪಾಕಿಸ್ತಾನ, ಅಮೆರಿಕವನ್ನು ಹಿಂದಿಕ್ಕಿದ ಭಾರತೀಯ ಯುವಕರ ಸಂಖ್ಯೆ

“ನಾನು ದಲಿತ ಸಮುದಾಯಕ್ಕೆ ಸೇರಿದವನೆಂಬ ಕಾರಣಕ್ಕೆ ಹಾಗೂ ದೇಶದಲ್ಲಿ ದಲಿತರಿಗೆ ಸ್ಥಾನವಿಲ್ಲ ಎಂಬ ಮನಸ್ಥಿತಿಯಿಂದ ಈ ರೀತಿ ಮಾಡಲಾಗಿದೆ. ಸಾರ್ವಜನಿಕ ಮೈದಾನದಲ್ಲಿ ಶುದ್ಧೀಕರಣ ಹವನ ಮಾಡುವ ಅಗತ್ಯವೇನಿತ್ತು? ಪ್ರಜಾಪ್ರಭುತ್ವದಲ್ಲಿ ಇದು ಸರಿಯಾದ ಮಾರ್ಗವೇ?” ಎಂದು ಪ್ರಶ್ನಿಸಿದ್ದಾರೆ.

“ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರಿದ್ದರು. ನಾನು ಯಾವುದೇ ಸಮುದಾಯ ಅಥವಾ ಧರ್ಮದ ಹೆಸರನ್ನು ಪ್ರಸ್ತಾಪಿಸಲಿಲ್ಲ. ಸರ್ಕಾರದ ವೈಫಲ್ಯಗಳನ್ನು ಮಾತ್ರ ಪ್ರಶ್ನಿಸಿದ್ದೆ. ನನ್ನ ಭಾಷಣದ ಬಳಿಕ ಬಿಜೆಪಿಯ ಜನರು ವೇದಿಕೆ ಶುದ್ಧೀಕರಣಕ್ಕೆ ಹವನ ಮಾಡಿದ್ದಾರೆ. ನಾನೊಬ್ಬ ವಿಪಕ್ಷ ನಾಯಕ. ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ” ಎಂದು ಖರ್ಗೆ ಕೆಂಡಕಾರಿದ್ದಾರೆ.

ಪಕ್ಷಗಳ ಆರೋಪ-ಪ್ರತ್ಯಾರೋಪ

ಬಿಜೆಪಿ ಮತ್ತು ಸರ್ಕಾರದ ಸ್ಪಷ್ಟನೆ: ರಾಜ್ಯಸಭೆಯಲ್ಲಿ ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಈ ಘಟನೆ ದುರದೃಷ್ಟಕರ ಆದರೆ ಇದರಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಶೀಘ್ರವೇ ಸಿಇಒ ನೇಮಕ: ಕಠಿಣ ಸಂದರ್ಶನ ಪೂರ್ಣಗೊಳಿಸಿದ ಉನ್ನತ ಮಟ್ಟದ ಶೋಧ ಸಮಿತಿ

ಮತ್ತೊಂದೆಡೆ ಬಿಜೆಪಿ ವಕ್ತಾರ ಖಜಾನ್ ದಾಸ್ ಮಾತನಾಡಿ, ರ್ಯಾಲಿಯ ಸಮಯದಲ್ಲಿ ಸನಾತನ ಧರ್ಮ ಹಾಗೂ ಇತರ ಧರ್ಮಗಳಿಗೆ ಸಂಬಂಧಿಸಿದಂತೆ ಕೂಗಲಾದ ಘೋಷಣೆಗಳಿಂದ ಸ್ಥಳೀಯರ ಭಾವನೆಗೆ ಧಕ್ಕೆಯಾಗಿತ್ತು, ಆದ್ದರಿಂದ ಈ ಹವನ ನಡೆದಿದೆಯೇ ಹೊರತು ಜಾತಿಯ ಕಾರಣಕ್ಕಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಆರೋಪ: ಈ ಘಟನೆ ವಿರುದ್ಧ ಹಲವು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುದ್ಧೀಕರಣ ಮಾಡಿದ್ದು ಬಿಜೆಪಿ ಸದಸ್ಯರಲ್ಲ ಎನ್ನುವ ನಡ್ಡಾ ಹೇಳಿಕೆಯನ್ನು ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೊಡಿಯಾಲ್ ಅವರು ತಳ್ಳಿಹಾಕಿದ್ದಾರೆ. ಶುದ್ಧೀಕರಣ ನಡೆಸಿದ ಶ್ರೀರಾಮ ಸೇನೆ ಸಂಘಟನೆಗೆ ಬಿಜೆಪಿ ಬೆಂಬಲವಿದೆ ಮತ್ತು ಖರ್ಗೆ ದಲಿತರಾಗಿರುವುದರಿಂದ ಈ ರೀತಿ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

GATE 2027: GATE ನೋಂದಣಿ ವೇಳಾಪಟ್ಟಿ ಪ್ರಕಟ: ಐಐಟಿ ಮದ್ರಾಸ್‌ನಿಂದ ಅಧಿಕೃತ ಅಧಿಸೂಚನೆ ಬಿಡುಗಡೆ! – Kannada News | GATE 2027 Notification Released: IIT Madras Announces Registration and Exam Dates

2027-28ನೇ ಶೈಕ್ಷಣಿಕ ಸಾಲಿನ ಉನ್ನತ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ (PSUs) ಉದ್ಯೋಗ ನೇಮಕಾತಿಗೆ ಅತ್ಯಂತ ನಿರ್ಣಾಯಕವಾಗಿರುವ ‘ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್’ (GATE 2027) ಪರೀಕ್ಷೆಯ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಈ ಬಾರಿಯ ಪರೀಕ್ಷೆಯನ್ನು ಐಐಟಿ ಮದ್ರಾಸ್ (IIT Madras) ನಡೆಸಲಿದ್ದು, ನೋಂದಣಿ ವೇಳಾಪಟ್ಟಿ ಹಾಗೂ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು 2026ರ ಆಗಸ್ಟ್ 14 ರಿಂದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹೊಸ ವಿಷಯ ಸೇರ್ಪಡೆ ಮತ್ತು ಗೇಟ್ ಅಂಕಗಳ ಮಾನ್ಯತೆ:

ಈ ಬಾರಿಯ ಗೇಟ್ ಪರೀಕ್ಷೆಯಲ್ಲಿ ‘ರೊಬೊಟಿಕ್ಸ್ ಮತ್ತು ಆಟೊಮೇಷನ್ (RA)’ ವಿಷಯದ ಹೊಸ ಪತ್ರಿಕೆಯನ್ನು ಪರಿಚಯಿಸಲಾಗಿದೆ. ಮತ್ತೊಂದೆಡೆ, ಈ ಹಿಂದೆ ಪ್ರತ್ಯೇಕ ಪತ್ರಿಕೆಯಾಗಿದ್ದ ‘ಜವಳಿ ಎಂಜಿನಿಯರಿಂಗ್ ಮತ್ತು ಫೈಬರ್ ಸೈನ್ಸ್’ ಅನ್ನು ‘ಎಂಜಿನಿಯರಿಂಗ್ ವಿಜ್ಞಾನ’ (XE) ಪತ್ರಿಕೆಯ ಅಡಿಯಲ್ಲಿ ಒಂದು ವಿಭಾಗವಾಗಿ ವಿಲೀನಗೊಳಿಸಲಾಗಿದೆ. ಹೀಗಾಗಿ, ಹೊಸ ಪತ್ರಿಕೆ ಸೇರ್ಪಡೆಯಾಗಿದ್ದರೂ ಒಟ್ಟು ಲಭ್ಯವಿರುವ ಪರೀಕ್ಷಾ ಪತ್ರಿಕೆಗಳ ಸಂಖ್ಯೆ 30 ರಲ್ಲೇ ಮುಂದುವರಿಯಲಿದೆ.

ಗೇಟ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳು ಫಲಿತಾಂಶ ಪ್ರಕಟವಾದ ದಿನಾಂಕದಿಂದ ಮೂರು ವರ್ಷಗಳವರೆಗೆ ಮಾನ್ಯತೆಯನ್ನು ಹೊಂದಿರುತ್ತವೆ. ಈ ಅಂಕಗಳನ್ನು ದೇಶದ ಪ್ರತಿಷ್ಠಿತ ಐಐಟಿ, ಐಐಎಸ್‌ಸಿ ಹಾಗೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಂಟೆಕ್, ಪಿಎಚ್‌ಡಿ ಪ್ರವೇಶಕ್ಕಾಗಿ ಮತ್ತು ಪ್ರಮುಖ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (PSUs) ಉದ್ಯೋಗ ನೇಮಕಾತಿಗೆ ಪರಿಗಣಿಸಲಾಗುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ನಿಯಮಗಳು:

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ ಎಂಜಿನಿಯರಿಂಗ್, ತಂತ್ರಜ್ಞಾನ, ವಾಸ್ತುಶಿಲ್ಪ, ವಿಜ್ಞಾನ, ವಾಣಿಜ್ಯ, ಕಲೆ ಅಥವಾ ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಅಥವಾ ಪದವಿ ಕೋರ್ಸ್‌ಗಳ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಥವಾ ಈಗಾಗಲೇ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಪ್ರತಿಯೊಬ್ಬ ಅಭ್ಯರ್ಥಿಯೂ ಕೇವಲ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ಪತ್ರಿಕೆಗಳಿಗೆ (ಗರಿಷ್ಠ 2 ಪತ್ರಿಕೆಗಳು) ಪರೀಕ್ಷೆ ಬರೆಯಲು ಬಯಸುವವರು ಒಂದೇ ಅರ್ಜಿಯಲ್ಲಿಯೇ ಆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರತ್ಯೇಕವಾಗಿ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಅವುಗಳನ್ನು ತಿರಸ್ಕರಿಸಲಾಗುತ್ತದೆ ಹಾಗೂ ಪಾವತಿಸಿದ ಅರ್ಜಿ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ.

ಅರ್ಜಿ ಶುಲ್ಕದ ವಿವರಗಳು:

ಅರ್ಜಿ ಶುಲ್ಕಕ್ಕೆ ಸಂಬಂಧಿಸಿದಂತೆ ಮಹಿಳೆಯರು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ದಿವ್ಯಾಂಗ ಅಭ್ಯರ್ಥಿಗಳು ಪ್ರತಿ ಪರೀಕ್ಷಾ ಪತ್ರಿಕೆಗೆ 1,000 ರೂ. ಪಾವತಿಸಬೇಕಾಗುತ್ತದೆ. ಸಾಮಾನ್ಯ ಹಾಗೂ ಇತರ ವರ್ಗಗಳ ಅಭ್ಯರ್ಥಿಗಳು ಮತ್ತು ವಿದೇಶಿ ವಿದ್ಯಾರ್ಥಿಗಳು ತಲಾ 2,000ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಪರೀಕ್ಷಾ ಮಾದರಿ ಮತ್ತು ಸಮಯ:

ಗೇಟ್ 2027 ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲಾಗುತ್ತದೆ. ಒಟ್ಟು 3 ಗಂಟೆಗಳ ಕಾಲ ನಡೆಯುವ ಈ ಪರೀಕ್ಷೆಯಲ್ಲಿ 100 ಅಂಕಗಳಿಗೆ 65 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರಶ್ನೆ ಪತ್ರಿಕೆಯು ಬಹು ಆಯ್ಕೆಯ ಪ್ರಶ್ನೆಗಳು (MCQs), ಬಹು ಆಯ್ಕೆ ಪ್ರಶ್ನೆಗಳು (MSQs) ಮತ್ತು ಸಂಖ್ಯಾತ್ಮಕ ಉತ್ತರ ಪ್ರಕಾರದ ಪ್ರಶ್ನೆಗಳನ್ನು (NAT) ಒಳಗೊಂಡಿರುತ್ತದೆ. ಈ ಪರೀಕ್ಷೆಯನ್ನು ದಿನಕ್ಕೆ ಎರಡು ಅವಧಿಗಳಲ್ಲಿ ನಡೆಸಲಾಗುತ್ತಿದ್ದು, ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ ಹಾಗೂ ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ಪರೀಕ್ಷೆಗಳು ಜರುಗಲಿವೆ.

ಲಭ್ಯವಿರುವ ಪರೀಕ್ಷಾ ಪತ್ರಿಕೆಗಳು:

ಅಭ್ಯರ್ಥಿಗಳು ಏರೋಸ್ಪೇಸ್, ಕೃಷಿ, ವಾಸ್ತುಶಿಲ್ಪ, ಬಯೋಮೆಡಿಕಲ್, ಜೈವಿಕ ತಂತ್ರಜ್ಞಾನ, ಸಿವಿಲ್, ರಾಸಾಯನಿಕ, ಕಂಪ್ಯೂಟರ್ ವಿಜ್ಞಾನ, ರಸಾಯನಶಾಸ್ತ್ರ, ಡೇಟಾ ಸೈನ್ಸ್ ಮತ್ತು ಎಐ, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಪರಿಸರ ವಿಜ್ಞಾನ, ಭೂವಿಜ್ಞಾನ, ಗಣಿತ, ಮೆಕ್ಯಾನಿಕಲ್, ಗಣಿಗಾರಿಕೆ, ಮೆಟಲರ್ಜಿಕಲ್, ನೌಕಾ ವಾಸ್ತುಶಿಲ್ಪ, ಪೆಟ್ರೋಲಿಯಂ, ಭೌತಶಾಸ್ತ್ರ, ಉತ್ಪಾದನೆ, ರೊಬೊಟಿಕ್ಸ್ ಮತ್ತು ಆಟೊಮೇಷನ್, ಅಂಕಿಅಂಶ, ಎಂಜಿನಿಯರಿಂಗ್ ವಿಜ್ಞಾನ, ಮಾನವಿಕ ಮತ್ತು ಸಮಾಜ ವಿಜ್ಞಾನ ಹಾಗೂ ಜೀವ ವಿಜ್ಞಾನ ಸೇರಿದಂತೆ ಒಟ್ಟು 30 ವಿವಿಧ ಪತ್ರಿಕೆಗಳಲ್ಲಿ ಪರೀಕ್ಷೆಗೆ ಹಾಜರಾಗಬಹುದು.

ಪ್ರಮುಖ ದಿನಾಂಕಗಳು ಮತ್ತು ವೇಳಾಪಟ್ಟಿ:

ಈ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 14 ರಿಂದ ಪ್ರಾರಂಭಗೊಳ್ಳಲಿದೆ. ಸಾಮಾನ್ಯ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು 2026ರ ಸೆಪ್ಟೆಂಬರ್ 21 ಕೊನೆಯ ದಿನಾಂಕವಾಗಿದೆ. ತಡ ಶುಲ್ಕದೊಂದಿಗೆ (Late Fee) ಸೆಪ್ಟೆಂಬರ್ 30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಇನ್ನು ವರ್ಗ, ಪತ್ರಿಕೆ ಅಥವಾ ಪರೀಕ್ಷಾ ಕೇಂದ್ರದಲ್ಲಿ ಬದಲಾವಣೆ ಮಾಡಲು ಅಕ್ಟೋಬರ್ 21, ರವರೆಗೆ ಸಮಯ ನೀಡಲಾಗಿದೆ. ಅಂತಿಮವಾಗಿ ಗೇಟ್ 2027 ಪರೀಕ್ಷೆಗಳು 2027ರ ಫೆಬ್ರವರಿ 6, 7, 13, 14, 20 ಮತ್ತು 21 ರಂದು ವಿವಿಧ ದಿನಾಂಕಗಳಲ್ಲಿ ನಡೆಯಲಿವೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನ ಪರಿಷತ್​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಹೆಸರು ಅಧಿಕೃತ ಘೋಷಣೆ – Kannada News | Dr. Yathindra Siddaramaiah Officially Declared Leader of the House in Karnataka Legislative Council

ಬೆಂಗಳೂರು, ಆಗಸ್ಟ್​​ 13: ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ವಿಧಾನ ಪರಿಷತ್​​ ಕಲಾಪ ಆರಂಭವಾಗುತ್ತಿದ್ದಂತೆ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ನೂತನ ಸಭಾ ನಾಯಕರೆಂದು ಹಂಗಾಮಿ ಸಭಾಪತಿ ಪುಟ್ಟಣ್ಣ ಘೋಷಣೆ ಮಾಡಿದ್ದಾರೆ. ಆ ಬಳಿಕ ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಯತೀಂದ್ರ ಅವರು, ಮೊದಲ ಬಾರಿ ಸಚಿವನಾಗಿ, ಸಭಾನಾಯಕನಾಗಿ ಆಯ್ಕೆ ಆಗಿದ್ದೇನೆ. ಅನುಭವ ಕಡಿಮೆ ಇರುವ ಕಾರಣ ಏನಾದರೂ ತಪ್ಪಾದರೆ ಸರಿಪಡಿಸಿ ಮಾರ್ಗದರ್ಶನ ನೀಡುವಂತೆ ಆಡಳಿತ ಮತ್ತು ವಿಪಕ್ಷ ಸದಸ್ಯರನ್ನು ಅವರು ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾವೇರಿ ಕಿಚ್ಚು: ಬಂದ್‌ಗೆ ಧುಮುಕಿದ್ದ ವಾಟಾಳ್ ನಾಗರಾಜ್ ವಶಕ್ಕೆ, ‘ಪೋಲಿಸ್ ಧಿಕ್ಕಾರ’ ಕೂಗಿ ಪ್ರತಿಭಟನಾಕಾರರ ಅಕ್ರೋಶ – Kannada News | Karnataka Bandh: Vatal Nagaraj Detained Amidst Protests for Cauvery Water

ಬೆಂಗಳೂರು, ಆ.13: ಕಾವೇರಿ ನೀರು ವಿವಾದ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶಗಳನ್ನು ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಈ ಬಂದ್‌ನ ಭಾಗವಾಗಿ, ಪ್ರಮುಖ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ವಾಟಾಳ್ ನಾಗರಾಜ್ ಅವರು ಮೆಜೆಸ್ಟಿಕ್ ಕಡೆಗೆ ತೆರಳಲು ತಮ್ಮ ಮನೆಯಿಂದ ಹೊರಬರುತ್ತಿದ್ದಂತೆಯೇ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಅವರನ್ನು ತಡೆದು ಬಂಧಿಸಿದರು. ಈ ಸಂದರ್ಭದಲ್ಲಿ, ಸ್ಥಳದಲ್ಲಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಲಾಗಿದ್ದು, ಪ್ರತಿಭಟನಾಕಾರರು ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿದ್ದಾರೆ. “ಪೊಲೀಸ್ ಧಿಕ್ಕಾರ” ಎಂಬ ಘೋಷಣೆಗಳು ಕೇಳಿಬಂದವು. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಸ್ ನಿಲ್ದಾಣಗಳಲ್ಲಿ ಹೋರಾಟಗಳು ನಡೆದಿದ್ದು, ವಾಟಾಳ್ ನಾಗರಾಜ್ ಅವರ ಬಂಧನವು ಪ್ರತಿಭಟನೆಯ ಬಿಸಿ ಹೆಚ್ಚಿಸಿದೆ. ಕಲಬುರಗಿಯಂತಹ ಕೆಲವು ಜಿಲ್ಲೆಗಳಲ್ಲಿ ಬಂದ್‌ನ ಬಿಸಿ ಕಡಿಮೆ ಇದ್ದು, ಎಂದಿನಂತೆ ಜನ ಜೀವನ ಸಹಜವಾಗಿತ್ತು. ರಾಜ್ಯದ ಜಲ ಸಂಪನ್ಮೂಲಗಳ ಹಿತಾಸಕ್ತಿ ಕಾಪಾಡಲು ಈ ಬಂದ್ ಆಯೋಜಿಸಲಾಗಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾ ವೇಗಿಗಳ ಮಾರಕ ದಾಳಿಗೆ ಆಸ್ಟ್ರೇಲಿಯಾ ತತ್ತರ! – Kannada News | Bangladesh bowled out Australia for 198 Runs

ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಡಾರ್ವಿನ್​ನ ಮರ್ರಾರ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಬಾಂಗ್ಲಾ ಬೌಲರ್​ಗಳು ಯಶಸ್ವಿಯಾಗಿದ್ದರು. ಮೊದಲಿಗೆ ಜೇಕ್ ವೆದರಾಲ್ಡ್ (23) ವಿಕೆಟ್ ಕಬಳಿಸಿದ ಹಸನ್ ಮಹಮೂದ್ ಆ ಬಳಿಕ ಟ್ರಾವಿಸ್ ಹೆಡ್​ಗೆ (23) ಪೆವಿಲಿಯನ್ ಹಾದಿ ತೋರಿಸಿದರು.

ಇದರ ಬೆನ್ನಲ್ಲೇ ಇಬಾದತ್ ಹೊಸೇನ್ ಮಾರ್ನಸ್ ಲಾಬುಶೇನ್ (1) ವಿಕೆಟ್ ಕಬಳಿಸಿದರು. ಆ ಬಳಿಕ ಬಂದ ಕ್ಯಾಮರೋನ್ ಗ್ರೀನ್ (13) ತಸ್ಕಿನ್ ಅಹ್ಮದ್​ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಸ್ಟೀವ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

ಈ ವೇಳೆ ಮತ್ತೆ ದಾಳಿಗಿಳಿದ ಇಬಾದ್ ಹೊಸೇನ್ ಅಲೆಕ್ಸ್ ಕ್ಯಾರಿ (19) ಯನ್ನು ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ ಬ್ಯೂ ವೆಬ್​ಸ್ಟರ್ (12) ವಿಕೆಟ್ ಎಗರಿಸುವಲ್ಲಿ ತಸ್ಕಿನ್ ಅಹ್ಮದ್ ಯಶಸ್ವಿಯಾದರು.

ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಸ್ಟೀವ್ ಸ್ಮಿತ್ ಆಕರ್ಷಕ ಅರ್ಧಶತಕದೊಂದಿಗೆ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು.  ಇನ್ನು ಪ್ಯಾಟ್ ಕಮಿನ್ಸ್ (9) ಹಾಗೂ ಮಿಚೆಲ್ ಸ್ಟಾರ್ಕ್ (1) ಗೆ ಹಸನ್ ಮಹಮೂದ್ ಪೆವಿಲಿಯನ್ ಹಾದಿ ತೋರಿಸಿದರು.

ಇತ್ತ 109 ಎಸೆತಗಳನ್ನು ಎದುರಿಸಿದ ಸ್ಟೀವ್ ಸ್ಮಿತ್ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 71 ರನ್ ಬಾರಿಸಿ 9 ವಿಕೆಟ್​ವರೆಗೆ ಬ್ಯಾಟಿಂಗ್ ಜೊತೆಯಾಟ ಮುಂದುವರೆಸಿದ್ದರು. ಆದರೆ ಹಸನ್ ಮಹಮೂದ್ ಎಸೆದ 51ನೇ ಓವರ್​ನ 5ನೇ ಎಸೆತವನ್ನು ಗುರುತಿಸುವಲ್ಲಿ ವಿಫಲರಾದ ಸ್ಮಿತ್ (71) ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ನಾಥನ್ ಲಿಯಾನ್​ (7) ರನ್ನು ಔಟ್ ಮಾಡುವಲ್ಲಿ ಹಸನ್ ಮಹಮೂದ್ ಯಶಸ್ವಿಯಾದರು.

ಈ ಮೂಲಕ ಆಸ್ಟ್ರೇಲಿಯಾ ತಂಡವನ್ನು ಕೇವಲ 198 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಬಾಂಗ್ಲಾದೇಶ್ ಯಶಸ್ವಿಯಾಗಿದೆ. ಬಾಂಗ್ಲಾದೇಶ್ ಪರ 17 ಓವರ್​ಗಳನ್ನು ಎಸೆದ ಹಸನ್ ಮಹಮೂದ್ ಕೇವಲ 55 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ತಸ್ಕಿನ್ ಅಹ್ಮದ್ ಹಾಗೂ ಇಬಾದತ್ ಹೊಸೇನ್ ತಲಾ 2 ವಿಕೆಟ್ ಪಡೆದರು.

ಆಸ್ಟ್ರೇಲಿಯಾ ಪ್ಲೇಯಿಂಗ್ 11:  ಜೇಕ್ ವೆದರಾಲ್ಡ್ , ಟ್ರಾವಿಸ್ ಹೆಡ್ , ಮಾರ್ನಸ್ ಲಾಬುಶೇನ್ , ಸ್ಟೀವ್ ಸ್ಮಿತ್ , ಕ್ಯಾಮರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಬ್ಯೂ ವೆಬ್‌ಸ್ಟರ್ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಜೋಶ್ ಹೇಝಲ್​ವುಡ್​.

ಇದನ್ನೂ ಓದಿ: 6,6,6,6,6,6,6,6,6: ಆ್ಯಂಡ್ರೆ ರಸೆಲ್ ಸಿಡಿಲಬ್ಬರ!

ಬಾಂಗ್ಲಾದೇಶ್ ಪ್ಲೇಯಿಂಗ್ 11: ಶಾದ್ಮನ್ ಇಸ್ಲಾಂ , ತಂಝಿದ್ ಹಸನ್ ತಮೀಮ್ , ಮೋಮಿನುಲ್ ಹಕ್ , ನಜ್ಮುಲ್ ಹೊಸೇನ್ ಶಾಂತೊ (ನಾಯಕ) , ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಮುಷ್ಫಿಕರ್ ರಹೀಮ್ , ಮೆಹಿದಿ ಹಸನ್ ಮಿರಾಝ್, ತೈಜುಲ್ ಇಸ್ಲಾಂ , ತಸ್ಕಿನ್ ಅಹ್ಮದ್ , ಹಸನ್ ಮಹಮೂದ್, ಎಬಾದತ್ ಹೊಸೇನ್.

Source link

ಪ್ರದೋಷ್ ಮಾಫಿ ಕೇಸ್: ಕೋರ್ಟ್​ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್‌ – Kannada News | Darshan Moves High Court Challenging CCH Court Order on Approver Petition

ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್‌ಗೆ 59ನೇ ಸಿಸಿಹೆಚ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅವರ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರಿ ಅರ್ಜಿ ಸಲ್ಲಿಸಿದ್ದು, ಈ ಪ್ರಕ್ರಿಯೆಯಲ್ಲಾಗುವ ಲೋಪದೋಷಗಳ ಬಗ್ಗೆ ವಾದಿಸಲು ಅವಕಾಶ ನೀಡಬೇಕೆಂದು ದರ್ಶನ್ ಪರ ವಕೀಲರು ಸಿಸಿಹೆಚ್ ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ದರ್ಶನ್ ಸೇರಿದಂತೆ ಯಾವುದೇ ಆರೋಪಿಗಳ ವಾದ ಆಲಿಸುವ ಅಗತ್ಯವಿಲ್ಲ ಎಂದು ಕೋರ್ಟ್ ಅರ್ಜಿ ತಿರಸ್ಕರಿಸಿತ್ತು. ಸಿಸಿಹೆಚ್ ನ್ಯಾಯಾಲಯದ ಈ ನಿರ್ಧಾರವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಈ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ. ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಪ್ರಕ್ರಿಯೆಯಲ್ಲಿ ತಮಗೆ ವಾದ ಮಂಡಿಸಲು ಅನುಮತಿ ನೀಡದಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮನವಿಯನ್ನು ಆಲಿಸಿದ ಹೈಕೋರ್ಟ್, ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಇಂದು (ಆಗಸ್ಟ್ 13) ಮಧ್ಯಾಹ್ನ 2:30ಕ್ಕೆ ನಿಗದಿಪಡಿಸಿದೆ. ಜೊತೆಗೆ ಈ ವಿಚಾರಣೆಯ ಕುರಿತು ರಾಜ್ಯದ ವಿಶೇಷ ಅಭಿಯೋಜಕರಿಗೆ ಮಾಹಿತಿ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಪ್ರಕರಣದ 14ನೇ ಆರೋಪಿ ಪ್ರದೋಷ್ ಕೊಲೆಯಾದ ದಿನ ನಡೆದ ಸಂಪೂರ್ಣ ಘಟನೆಯನ್ನು ನ್ಯಾಯಾಲಯದ ಮುಂದೆ ತೆರೆದಿಡಲು ಮುಂದಾಗಿದ್ದು, ತನಗೆ ಮಾಫಿ ಸಾಕ್ಷಿಯಾಗಲು ಅವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದನು. ಪ್ರದೋಷ್ ಮಾಫಿ ಸಾಕ್ಷಿಯಾದರೆ ಪ್ರಕರಣಕ್ಕೆ ದೊಡ್ಡ ತಿರುವು ಸಿಗುವ ಸಾಧ್ಯತೆ ಇರುವುದರಿಂದ, ಪ್ರದೋಷ್‌ನನ್ನು ಸಾಕ್ಷಿಯನ್ನಾಗಿ ಪರಿಗಣಿಸುವುದಕ್ಕೂ ಮುಂಚಿತವಾಗಿ ದರ್ಶನ್ ಸೇರಿದಂತೆ ಇತರ ಆರೋಪಿಗಳ ಪರ ವಾದವನ್ನು ಆಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.

ಇದನ್ನೂ ಓದಿ: ದರ್ಶನ್​ಗೆ ದೊಡ್ಡ ಸಂಕಷ್ಟ; ಪ್ರದೋಷ್ ಅರ್ಜಿಗೆ ಆಕ್ಷೇಪಣೆ ಪರಿಗಣಿಸಲು ಕೋರ್ಟ್ ನಕಾರ

ಅಂತಿಮವಾಗಿ 59ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಸುಜಾತಾ ಮಡಿವಾಳಪ್ಪ ಅವರು ಪ್ರದೋಷ್ ಅರ್ಜಿಗೆ ಸಂಬಂಧಿಸಿದಂತೆ ದರ್ಶನ್ ಹಾಗೂ ಇತರೆ ಆರೋಪಿಗಳ ಆಕ್ಷೇಪಣೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಆದೇಶ ನೀಡಿದ್ದರು. ಕೋರ್ಟ್‌ನ ಈ ಆದೇಶದಿಂದ ದರ್ಶನ್‌ಗೆ ಹಿನ್ನಡೆಯಾಗಿದ್ದರಿಂದ, ಅವರು ಸಿಸಿಹೆಚ್ ಕೋರ್ಟ್ ಆದೇಶಕ್ಕೆ ತಡೆ ತರಲು ಹೈಕೋರ್ಟ್‌ನಲ್ಲಿ ಸಮರ ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಜ್ವಲ್​ ರೇವಣ್ಣ ಬ್ಯಾರಕ್​ನಲ್ಲಿ ಮೊಬೈಲ್ ಪತ್ತೆ ಪ್ರಕರಣ ತನಿಖೆಗೆ ಡಿಐಜಿ ನೇತೃತ್ವದಲ್ಲಿ ತಂಡ ರಚನೆ – Kannada News | Prajwal Revanna Jail Mobile Case: DIG Jinendra Khanagavi to Lead Probe, DGP Alok Kumar Seeks Report

ತನಿಖೆಗೆ ಡಿಐಜಿ ನೇತೃತ್ವದಲ್ಲಿ ತಂಡ ರಚನೆ
Image Credit source: Tv9 Kannada

ಬೆಂಗಳೂರು, ಆಗಸ್ಟ್​ 13: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ವೇಳೆ ಪ್ರಜ್ವಲ್​ ರೇವಣ್ಣ ಬ್ಯಾರಕ್​ನಲ್ಲಿ ಮೊಬೈಲ್ ಪತ್ತೆ ಪ್ರಕರಣ ಸಂಬಂಧ ಜೈಲು ಅಧಿಕಾರಿಗಳ ನಿರ್ಲಕ್ಷ್ಯ ಇರೋದು ಸಾಬೀತು ಹಿನ್ನೆಲೆ ತನಿಖೆಗಾಗಿ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದ ತಂಡ ರಚನೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್​ನಲ್ಲಿ ಮೊಬೈಲ್ ಹೇಗೆ ಬಂತು? ಎಂಬ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ. ಈ ಸಂಬಂಧ ಅಲೋಕ್ ಕುಮಾರ್ ಭೇಟಿಯಾಗಿ ಜಿನೇಂದ್ರ ಅವರು ಕೂಡ ಚರ್ಚೆ ನಡೆಸಿದ್ದಾರೆ.

ತನಿಖೆ ನಡೆಸಿ ವರದಿ ನೀಡಲು ಸೂಚನೆ

ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಜಾಮರ್ ಅಳವಡಿಸಲಾಗಿದ್ದು, ಸ್ಥಳೀಯರಿಗೆ ಟವರ್​ ಸಿಗದೆ ನಿತ್ಯ ಪರದಾಡುತ್ತಾರೆ. ಹೀಗಿರುವಾಗ ಜೈಲಿನ ಒಳಗೆ ಏರ್​ಟೆಲ್​​ ಕಂಪನಿಯ ಸಿಮ್ ಬಳಕೆಯಾಗುತ್ತಿದೆ. ಅದರಲ್ಲೂ ಆಂಧ್ರಪ್ರದೇಶದ ಏರ್​ಟೆಲ್​​​ ಸಿಮ್​​ಗಳು ಪತ್ತೆಯಾಗಿವೆ, ಈ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಸಿಮ್​​​​​​ಗಳು ಪತ್ತೆ ಆಗುತ್ತಿವೆ. ಹೀಗಾಗಿ ಈ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ರಾಜ್ಯ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಇಷ್ಟೆಲ್ಲಾ ಭದ್ರತೆ ಇದ್ದರೂ ಜೈಲಿನೊಳಗೆ ಹೇಗೆ ಮೊಬೈಲ್​​​ ಹೋಗ್ತಿದೆ? ಇದರಲ್ಲಿ ಅಧಿಕಾರಿಗಳು ಏನಾದರೂ ಭಾಗಿಯಾಗಿದ್ದಾರೆಂಬ ಬಗ್ಗೆ ತನಿಖೆ ನಡೆಸ್ತೇವೆ. ಅಧಿಕಾರಿಗಳು ಭಾಗಿಯಾಗಿದ್ರೆ ಅಂತವರ ವಿರುದ್ಧ ಕ್ರಮಕ್ಕೆ ಆದೇಶ ಮಾಡೋದಾಗಿ ತಿಳಿಸಿದ್ದಾರೆ. ಪ್ರಜ್ವಲ್ ರೇವಣ್ಣಗೆ ಫೋನ್ ತಂದು ಕೊಟ್ಟವರು ಯಾರು? ಎಷ್ಟು ದಿನಗಳಿಂದ ಮೊಬೈಲ್ ಬಳಕೆ ಮಾಡುತ್ತಿದ್ದಾನೆ? ಇದರಲ್ಲಿ ಯಾರೆಲ್ಲಾ ಕೈವಾಡ ಇದೆ ಎಂಬುದರ ಪತ್ತೆಗೂ ಸೂಚಿಸಲಾಗಿದೆ.

ಇದನ್ನೂ ಓದಿ: ಪ್ರಜ್ವಲ್​​ಗೆ ಜೈಲಲ್ಲಿ ಮೊಬೈಲ್​​ ಕೊಟ್ಟಿದ್ದು ಅಧಿಕಾರಿಗಳು?: ಹೆತ್ತವರ ಹೆಸರನ್ನು ಶಿವಪ್ಪ, ಪಾರ್ವತಿ ಎಂದು ನೋಟ್​​ಬುಕ್​ನಲ್ಲಿ ಬರೆದಿಟ್ಟಿದ್ದ ಮಾಜಿ ಸಂಸದ!

‘ಯಾರೇ ಸಹಕಾರ ಕೊಟ್ಟರು ಅವರ ಮೇಲೆ ಕ್ರಮ’

ಕಾರಾಗೃಹದಲ್ಲಿ ಆಗಬಾರದ ಚಟುವಟಿಕೆಗಳು ನಡೆದಾಗ ಕ್ರಮ ಆಗಬೇಕು. ವೈರಲ್​​ ಆಗಿರುವ ಪ್ರಜ್ವಲ್​​ ವಿಡಿಯೋ ಸ್ವಲ್ಪ ಹಳೆಯದಾಗಿದ್ದು, ಯಾರು ಅದನ್ನು ಮಾಡಿದ್ದಾರೆ ಎಂಬ ಬಗ್ಗೆ ಹೇಳೋಕಾಗುತ್ತಾ ಎಂದು ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಪ್ರಶ್ನಿಸಿದ್ದಾರೆ. ಯಾರು ಕೊಟ್ಟರು, ಏನ್ ಕೊಟ್ಟರು ಎಂಬ ಬಗ್ಗೆ ಹೇಳಲು ಆಗಲ್ಲ. ಆದರೆ ಯಾರೇ ಸಹಕಾರ ಕೊಟ್ಟರು ಅವರ ಮೇಲೆ ಕ್ರಮ ಆಗುತ್ತದೆ. ಪೇದೆಯಿಂದ ಹಿಡಿದು IPS ವರೆಗೆ ಯಾರನ್ನೂ ನನ್ನ ಕಾಲದಲ್ಲಿ ರಕ್ಷಣೆ ಮಾಡಲ್ಲ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:12 pm, Thu, 13 August 26

Source link

6,6,6,6,6,6,6,6,6: ಆ್ಯಂಡ್ರೆ ರಸೆಲ್ ಸಿಡಿಲಬ್ಬರ! – Kannada News | CPL 2026: Andre Russell’s Blitz in Vain as Barbados Edge Jamaica in Thriller

ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) 2026ರ 4ನೇ ಪಂದ್ಯದಲ್ಲಿ ಆ್ಯಂಡ್ರೆ ರಸೆಲ್ ಅಕ್ಷರಶಃ ಅಬ್ಬರಿಸಿದ್ದಾರೆ. ಜಮೈಕಾದ ಸಬೀನಾ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಜಮೈಕಾ ಕಿಂಗ್ಸ್‌ಮೆನ್ ಮತ್ತು ಬಾರ್ಬಡೋಸ್ ಟ್ರೈಡೆಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಜಮೈಕಾ ಕಿಂಗ್ಸ್​ಮೆನ್ ತಂಡದ ನಾಯಕ ರೋವ್​ಮನ್ ಪೊವೆಲ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಬಾರ್ಬಡೋಸ್ ಟ್ರೈಡೆಂಟ್ಸ್ ಪರ ಆರಂಭಿಕ ಆಟಗಾರ ಬ್ರ್ಯಾಂಡನ್ ಕಿಂಗ್ 73 ರನ್ ಬಾರಿಸಿ ತಂಡಕ್ಕೆ ಬಲವಾದ ಅಡಿಪಾಯ ಹಾಕಿಕೊಟ್ಟರೆ, ಕೊನೆಯಲ್ಲಿ ಶೆರ್ಫೇನ್ ರದರ್‌ಫೋರ್ಡ್ ಕೇವಲ 28 ಎಸೆತಗಳಲ್ಲಿ ಅಜೇಯ 50* ರನ್ ಚಚ್ಚಿದರು. ಈ ಮೂಲಕ ಬಾರ್ಬಡೋಸ್ ಟ್ರೈಡೆಂಟ್ಸ್ ತಂಡ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು.

ಜಮೈಕಾಗೆ ಆರಂಭಿಕ ಆಘಾತ!

207 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಜಮೈಕಾ ಕಿಂಗ್ಸ್‌ಮೆನ್ ತಂಡಕ್ಕೆ ಡೇನಿಯಲ್ ಸ್ಯಾಮ್ಸ್ ಆರಂಭಿಕ ಆಘಾತ ನೀಡಿದ್ದರು. ಪರಿಣಾಮ ಕೇವಲ 8 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಜಮೈಕಾ ಪಡೆ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಒಂದು ಹಂತದಲ್ಲಿ 60 ರನ್‌ಗಳಿಗೆ 5 ವಿಕೆಟ್ ಉರುಳಿದಾಗ ಜಮೈಕಾ ಹೀನಾಯವಾಗಿ ಸೋಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ರಸೆಲ್ ಎಂಟ್ರಿಯೊಂದಿಗೆ ಪಂದ್ಯವು ರೋಚಕತೆಯತ್ತ ಸಾಗಿತು.

ರಸೆಲ್ ಸಿಡಿಲಬ್ಬರ:

7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆ್ಯಂಡ್ರೆ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ರಸೆಲ್ ಬಾರ್ಬಡೋಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಮೈದಾನದ ಮೂಲೆ ಮೂಲೆಯಲ್ಲಿ ಸಿಕ್ಸರ್​ಗಳ ಸುರಿಮಳೆಯಾಯಿತು.

ಈ ಸಿಕ್ಸರ್​ಗಳೊಂದಿಗೆ ಏಕಾಂಗಿ ಹೋರಾಟ ಮುಂದುವರೆಸಿದ ರಸೆಲ್ ಕೇವಲ 38 ಎಸೆತಗಳಲ್ಲಿ 68 ರನ್ ಚಚ್ಚಿದರು. ಆದರೆ ತಂಡದ ಮೊತ್ತ 201 ತಲುಪಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾಗಿ ಆ್ಯಂಡ್ರೆ ರಸೆಲ್ ಕ್ಯಾಚ್ ನೀಡಿದರು.

ವಿಶೇಷ ಎಂದರೆ ರಸೆಲ್ ಅವರ ಈ ಆರ್ಭಟದಲ್ಲಿ 9 ಭರ್ಜರಿ ಸಿಕ್ಸರ್​ಗಳು ಮೂಡಿಬಂದಿದ್ದವು. ಇದಾಗ್ಯೂ ಒಂದೇ ಒಂದು ಫೋರ್ ಬಾರಿಸಿರಲಿಲ್ಲ. ಈ ಮೂಲಕ ಫೋರ್ ಬಾರಿಸದೇ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ರಸೆಲ್ ತಮ್ಮದಾಗಿಸಿಕೊಂಡರು.

ಕೊನೆಯ ಓವರ್‌ನ ಹೈ-ಡ್ರಾಮಾ!

ಕೊನೆಯ ಓವರ್‌ನಲ್ಲಿ ಜಮೈಕಾ ಕಿಂಗ್ಸ್​ಮೆನ್ ಗೆಲುವಿಗೆ 15 ರನ್‌ಗಳ ಅಗತ್ಯವಿತ್ತು. ಬಾರ್ಬಡೋಸ್ ಪರ ರಮೋನ್ ಸಿಮಂಡ್ಸ್ ಬೌಲಿಂಗ್ ದಾಳಿಗಿಳಿದರು. ಓವರ್‌ನ ಮಧ್ಯದಲ್ಲಿ ರಸೆಲ್ ತಮ್ಮ 9ನೇ ಸಿಕ್ಸರ್ ಚಚ್ಚಿದಾಗ ಜಮೈಕಾ ಗೆಲುವಿಗೆ ಕೊನೆಯ 3 ಎಸೆತಗಳಲ್ಲಿ ಕೇವಲ 6 ರನ್ ಬೇಕಿತ್ತು. ಆದರೆ, 4ನೇ ಎಸೆತದಲ್ಲಿ ಸಿಮಂಡ್ಸ್ ಅವರು ರಸೆಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್​ಗೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಪ್ರಕಟ

ಇದಾಗ್ಯೂ ಕೊನೆಯ 2 ಎಸೆತಗಳಲ್ಲಿ 6 ರನ್​ಗಳಿಸಿದ್ದರೆ ಜಮೈಕಾ ಕಿಂಗ್ಸ್​ಮೆನ್​ ಗೆಲ್ಲಬಹುದಿತ್ತು. ಆದರೆ ಐದನೇ ಎಸೆತದಲ್ಲಿ ವಿಟೆಲ್ ಲಾವೆಸ್ ರನೌಟ್ ಆದರು. ಇನ್ನು ಕೊನೆಯ ಎಸೆತದಲ್ಲಿ ಸಿಕ್ಸ್ ಬಾರಿಸುವಲ್ಲಿ ಹುನೈನ್ ಶಾ ವಿಫಲರಾದರು. ಪರಿಣಾಮ ಬಾರ್ಬಡೋಸ್ ಟ್ರೈಡೆಂಟ್ಸ್ ತಂಡವು 5 ರನ್​ಗಳ ರೋಚಕ ಜಯ ಸಾಧಿಸಿತು.

Published On – 11:57 am, Thu, 13 August 26

Source link

Karwar Court Jobs 2026: SSLC ಪಾಸಾದವರಿಗೆ ಉದ್ಯೋಗವಕಾಶ; ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ 78 ಹುದ್ದೆಗಳಿಗೆ ಭರ್ಜರಿ ನೇಮಕಾತಿ! – Kannada News | Karwar Court Jobs 2026: SSLC Pass Peon and Process Server Vacancies

ಕಾರವಾರ: ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಎಸ್‌ಎಸ್‌ಎಲ್‌ಸಿ (SSLC) ಪಾಸಾದ ಯುವಕ-ಯುವತಿಯರಿಗೆ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯವು ಉತ್ತಮ ಅವಕಾಶವೊಂದನ್ನು ತಂದಿದೆ. ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವ್ಯಾಪ್ತಿಯಲ್ಲಿ ಖಾಲಿ ಇರುವ ಜವಾನ (Peon) ಹಾಗೂ ಆದೇಶ ಜಾರಿಕಾರ (Process Server) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ ಮತ್ತು ಲಭ್ಯವಿರುವ ಖಾಲಿ ಜಾಗಗಳು:

ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 78 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಜವಾನ (Peon) ಹುದ್ದೆಗೆ 65 ಸ್ಥಾನಗಳು ಹಾಗೂ ಆದೇಶ ಜಾರಿಕಾರ (Process Server) ಹುದ್ದೆಗೆ 13 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಉತ್ತರ ಕನ್ನಡ ಜಿಲ್ಲೆಯ ನ್ಯಾಯಾಲಯ ಘಟಕಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಪಡೆಯಬಹುದು.

ಶೈಕ್ಷಣಿಕ ಅರ್ಹತೆ ಮತ್ತು ವಿಶೇಷ ಷರತ್ತುಗಳು:

ಈ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು. ಜವಾನ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬರುವುದು ಕಡ್ಡಾಯವಾಗಿದೆ. ಅದೇ ರೀತಿ ಆದೇಶ ಜಾರಿಕಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಭಾರಿ ಅಥವಾ ಹಗುರ ವಾಹನ ಚಾಲನಾ ಪರವಾನಗಿ (HMV / LMV Driving License) ಹೊಂದಿರುವವರಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.

ಆಕರ್ಷಕ ವೇತನ ಶ್ರೇಣಿ ಮತ್ತು ಭತ್ಯೆಗಳು:

ನ್ಯಾಯಾಂಗ ಇಲಾಖೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾವಳಿಗಳಂತೆ ಆಕರ್ಷಕ ಮಾಸಿಕ ವೇತನ ದೊರೆಯಲಿದೆ. ಜವಾನ ಹುದ್ದೆಗೆ ಆಯ್ಕೆಯಾಗುವ ನೌಕರರಿಗೆ ಆರಂಭಿಕವಾಗಿ ಮಾಸಿಕ 27,000 ರಿಂದ 46,675 ರೂ. ವರೆಗೆ ವೇತನ ದೊರೆಯಲಿದೆ. ಇನ್ನು ಆದೇಶ ಜಾರಿಕಾರ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹27,300 ರಿಂದ ಗರಿಷ್ಠ ₹61,300 ರವರೆಗೆ ವೇತನ ಶ್ರೇಣಿ ನಿಗದಿಯಾಗಿದೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಜಿಲ್ಲೆ;102 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ ವಿವರಗಳು:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸರ್ಕಾರಿ ನಿಯಮಾವಳಿಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ, ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 45 ವರ್ಷಗಳವರೆಗೆ ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು ಮತ್ತು ಲಿಂಕ್:

ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 17 ರಿಂದ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 16 ರವರೆಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವವರು ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ uttarakannada.dcourts.gov.in ಅಥವಾ ನೇರ ಅರ್ಜಿ ಲಿಂಕ್ uttarakannada.dcourts.gov.in/online-recruitment/ ಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 11:58 am, Thu, 13 August 26

Source link

Gold Rates 13 Aug: ಭಾರತದಲ್ಲಿ ಚಿನ್ನದ ಬೆಲೆ ತುಸು ಹೆಚ್ಚಳ; ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ – Kannada News | Gold Price Today on 13th August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 13: ಚಿನ್ನದ ಬೆಲೆ (Gold Price) ಇಂದು ಗುರುವಾರ ಅಲ್ಪ ಏರಿಕೆಯಾಗಿದೆ. ನಿನ್ನೆ 25 ಗ್ರಾಮ್ ಕಡಿಮೆಗೊಂಡಿದ್ದ ಇದರ ಬೆಲೆ ಇವತ್ತು ಅಷ್ಟೇ ಹೆಚ್ಚಳ ಕಂಡಿದೆ. ಆದರೆ, ಅಂತಾರಾಷ್ಟ್ರೀಯ ಸ್ಟಾಟ್ ಗೋಲ್ಡ್ ಮತ್ತು ಸಿಲ್ವರ್ ಬೆಲೆಗಳು ಇಂದು ಅಲ್ಪ ಇಳಿಕೆ ಕಾಣುತ್ತಿವೆ. ಸ್ಟಾಟ್ ಚಿನ್ನದ ಬೆಲೆ ಗ್ರಾಮ್​​ಗೆ 13,477 ರೂ ಇದ್ದರೆ, ಭಾರತದಲ್ಲಿ ಇದರ ಬೆಲೆ 15,513 ಇದೆ. ಸ್ಪಾಟ್ ಸಿಲ್ವರ್ ಬೆಲೆ 200 ರೂ ಇದ್ದರೆ ಭಾರತದಲ್ಲಿ 255 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 13ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,513 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,220 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,635 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,220 ರೂ
  • ಚೆನ್ನೈ: 14,220 ರೂ
  • ಮುಂಬೈ: 14,220 ರೂ
  • ದೆಹಲಿ: 14,235 ರೂ
  • ಕೋಲ್ಕತಾ: 14,220 ರೂ
  • ಕೇರಳ: 14,220 ರೂ
  • ಅಹ್ಮದಾಬಾದ್: 14,225 ರೂ
  • ಜೈಪುರ್: 14,235 ರೂ
  • ಲಕ್ನೋ: 14,235 ರೂ
  • ಭುವನೇಶ್ವರ್: 14,220 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 141.35 ಡಾಲರ್ (13,477 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 2.102 ಡಾಲರ್ (200 ರುಪಾಯಿ)

ಇದನ್ನೂ ಓದಿ: ಸ್ಮಾಲ್ ಫೈನಾನ್ಸ್ ಬ್ಯಾಂಕ್ vs ಕಾರ್ಪೊರೇಟ್ ಎಫ್​ಡಿ, ಎರಡರಲ್ಲೂ ಶೇ. 8ಕ್ಕಿಂತ ಹೆಚ್ಚು ಬಡ್ಡಿ; ಯಾವುದರಲ್ಲಿ ಹೂಡಿಕೆ ಸೂಕ್ತ?

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,513 ರುಪಾಯಿ
  • ಮಲೇಷ್ಯಾ: 596 ರಿಂಗಿಟ್ (13,900 ರುಪಾಯಿ)
  • ದುಬೈ: 533.25 ಡಿರಾಮ್ (13,846 ರುಪಾಯಿ)
  • ಅಮೆರಿಕ: 145 ಡಾಲರ್ (13,827 ರುಪಾಯಿ)
  • ಸಿಂಗಾಪುರ: 192.50 ಸಿಂಗಾಪುರ್ ಡಾಲರ್ (14,337 ರುಪಾಯಿ)
  • ಕತಾರ್: 533.50 ಕತಾರಿ ರಿಯಾಲ್ (13,956 ರೂ)
  • ಸೌದಿ ಅರೇಬಿಯಾ: 548 ಸೌದಿ ರಿಯಾಲ್ (13,918 ರುಪಾಯಿ)
  • ಓಮನ್: 56.55 ಒಮಾನಿ ರಿಯಾಲ್ (14,007 ರುಪಾಯಿ)
  • ಕುವೇತ್: 44.30 ಕುವೇತಿ ದಿನಾರ್ (13,749 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 255 ರೂ
  • ಚೆನ್ನೈ: 260 ರೂ
  • ಮುಂಬೈ: 255 ರೂ
  • ದೆಹಲಿ: 255 ರೂ
  • ಕೋಲ್ಕತಾ: 255 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 255 ರೂ
  • ಜೈಪುರ್: 255 ರೂ
  • ಲಕ್ನೋ: 255 ರೂ
  • ಭುವನೇಶ್ವರ್: 260 ರೂ
  • ಪುಣೆ: 255

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version