ಮೆಷೀನ್​ಗಿಂತ ಮನುಷ್ಯರೇ ವಾಸಿ; ಎಐ ಕಾರಣ ನೀಡಿ ಮನೆಗೆ ಕಳುಹಿಸಿದ್ದ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡ ದೊಡ್ಡ ಕಂಪನಿಗಳು – Kannada News | Automation not matching humans, Companies realizing the fact, starts rehiring people they sacked

ನವದೆಹಲಿ, ಜುಲೈ 3: ಎಐ ಹೈಪ್ ವಿಪರೀತವಾಗಿ ಹೆಚ್ಚುತ್ತಿದೆ. ಕೃತಕ ಬುದ್ಧಿಮತ್ತೆಯ ಮಾದರಿಗಳನ್ನು ಅಳವಡಿಸಿ, ಇಡೀ ಕಂಪನಿ ಕೆಲಸವನನ್ನು ಆಟೊಮೇಶನ್ ಮಾಡಿ ಯಂತ್ರದ ಶಕ್ತಿಗೆ ಒಪ್ಪಿಸುವ ದೊಡ್ಡ ಕನಸು ಕಾರ್ಪೊರೇಟ್ ಜಗತ್ತಿನಲ್ಲಿ ಮನೆ ಮಾಡುತ್ತಿದೆ. ಮನುಷ್ಯ ಕಾರ್ಮಿಕರೆಲ್ಲರ ಕೆಲಸಗಳನ್ನು ಯಂತ್ರಗಳೇ ಮಾಡಿಬಿಡಬಲ್ಲುವು ಎಂಬ ನಂಬಿಕೆಯಿಂದ ಅನೇಕ ಕಾರ್ಪೊರೇಟ್ ಕಂಪನಿಗಳು ಲೇಆಫ್ ಮೇಲೆ ಲೇ ಆಫ್ ಮಾಡುತ್ತಲೇ ಇವೆ. ಈ ಮಧ್ಯೆ, ಯಂತ್ರಗಳಿಗಿಂತ ಮನುಷ್ಯ ಕಾರ್ಮಿಕರೇ ಎಷ್ಟೋ ವಾಸಿ ಎಂದು ಜ್ಞಾನೋದಯ ಹೊಂದುತ್ತಿರುವ ಕಂಪನಿಗಳು ಒಂದೊಂದಾಗಿ ಹೆಚ್ಚುತ್ತಿವೆ. ಸಿಎನ್​ಬಿಸಿ ವರದಿ ಪ್ರಕಾರ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದಿಂದಾಗಿ ಕೆಲಸ ಕಳೆದುಕೊಂಡಿದ್ದ ಉದ್ಯೋಗಿಗಳನ್ನು ಕೆಲ ಕಂಪನಿಗಳು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಿವೆ.

ಕಳೆದ ಕೆಲವು ಸಮಯದಿಂದ ಎಐ ತಂತ್ರಜ್ಞಾನದ ಹಾವಳಿಯಿಂದಾಗಿ ಜಗತ್ತಿನಾದ್ಯಂತ ಹಲವು ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದವು. ಆದರೆ, ಈಗ ಸ್ವಯಂಚಾಲಿತ ತಂತ್ರಜ್ಞಾನಗಳು (automation) ಅಂದುಕೊಂಡಷ್ಟು ಯಶಸ್ಸು ನೀಡದ ಕಾರಣ, ಫೋರ್ಡ್ (Ford), ಐಬಿಎಂ (IBM) ಮತ್ತು ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ (CBA) ನಂತಹ ಪ್ರಮುಖ ಸಂಸ್ಥೆಗಳು ತಾವು ತೆಗೆದುಹಾಕಿದ್ದ ಉದ್ಯೋಗಿಗಳನ್ನು ಮತ್ತೆ ಕೆಲಸಕ್ಕೆ ಕರೆಸಿಕೊಳ್ಳುತ್ತಿವೆ ಎಂದು ಈ ವರದಿ ಹೇಳುತ್ತಿದೆ.

ಇದನ್ನೂ ಓದಿ: ಬಲಿಷ್ಠ ಆರ್ಥಿಕ ಸೂಚಕಗಳು: ಭಾರತದ ಬೆಳವಣಿಗೆಯ ಹಾದಿ ಇನ್ನಷ್ಟು ಸುದೃಢ

ಫೋರ್ಡ್​ನಲ್ಲಿ ದೋಷ ಪತ್ತೆಹಚ್ಚಲು ಅನುಭವಿ ಎಂಜಿನಿಯರುಗಳೇ ಬರಬೇಕಾಯ್ತು…

ವಾಹನಗಳ ಗುಣಮಟ್ಟವನ್ನು ಪರಿಶೀಲಿಸಲು ಫೋರ್ಡ್ ಸಂಸ್ಥೆಯು (Ford) ಎಐ ತಂತ್ರಜ್ಞಾನವನ್ನು ಬಳಸಿತ್ತು. ಆದರೆ ತಂತ್ರಜ್ಞಾನವು ಗುಣಮಟ್ಟದ ದೋಷಗಳನ್ನು ಪತ್ತೆಹಚ್ಚಲು ವಿಫಲವಾದಾಗ, ಕಂಪನಿಯು ಕಳೆದ ಮೂರು ವರ್ಷಗಳಲ್ಲಿ 350 ಕ್ಕೂ ಹೆಚ್ಚು ಅನುಭವಿ ಇಂಜಿನಿಯರ್‌ಗಳನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಂಡಿದೆ. ಈ ಅನುಭವಿಗಳು ಬಂದ ನಂತರ ಎಐ ಪರಿಕರಗಳನ್ನು ಸುಧಾರಿಸಿದ್ದಲ್ಲದೆ, ಕಂಪನಿಗೆ ಕೋಟ್ಯಂತರ ರೂಪಾಯಿ ವಾರಂಟಿ ಮತ್ತು ವಾಹನ ಮರುಕರೆಸಿಕೊಳ್ಳುವ (recall) ವೆಚ್ಚವನ್ನು ಉಳಿಸಿಕೊಟ್ಟಿದ್ದಾರೆ.

ಸಿಬಿಎ ಗ್ರಾಹಕರನ್ನು ನಿಭಾಯಿಸಲು ವಿಫಲಗೊಂಡ ವಾಯ್ಸ್ ಬೋಟ್

ಕಳೆದ ವರ್ಷ ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ (CBA) ತನ್ನ ಗ್ರಾಹಕ ಸೇವಾ ವಿಭಾಗದ (Customer Service) 40 ಕ್ಕೂ ಹೆಚ್ಚು ಉದ್ಯೋಗಿಗಳನ್ನು ತೆಗೆದುಹಾಕಿ, ಅವರ ಜಾಗಕ್ಕೆ ಎಐ ವಾಯ್ಸ್ ಬೋಟ್ (AI voice bot) ಅನ್ನು ನಿಯೋಜಿಸಿತ್ತು. ಆದರೆ, ಈ ತಂತ್ರಜ್ಞಾನವು ಗ್ರಾಹಕರ ಒತ್ತಡ ಮತ್ತು ವಿನಂತಿಗಳನ್ನು ನಿಭಾಯಿಸಲು ಸಾಧ್ಯವಾಗದೆ ಕರೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಇದರಿಂದಾಗಿ ಬ್ಯಾಂಕ್ ತನ್ನ ನಿರ್ಧಾರವನ್ನು ಬದಲಾಯಿಸಿ, ಉದ್ಯೋಗಿಗಳನ್ನು ಮತ್ತೆ ಕೆಲಸಕ್ಕೆ ತಂದಿದೆ.

ಐಬಿಎಂ: ಎಥಿಕಲ್ ಜಡ್ಜ್​ಮೆಂಟ್​ನಲ್ಲಿ ಅಸಮರ್ಪಕ ಎನಿಸಿದ ಎಐ

ಅಮೆರಿಕದ ಚಿಪ್ ಕಂಪನಿಯಾದ ಐಬಿಎಂನಲ್ಲಿ (IBM) ಮಾನವ ಸಂಪನ್ಮೂಲ (HR) ವಿಭಾಗದಲ್ಲಿ ಎಐ ವ್ಯವಸ್ಥೆಯನ್ನು ಜಾರಿಗೆ ತಂದಾಗ, ಅದು ಶೇ. 94 ರಷ್ಟು ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿತು. ಆದರೆ ನೈತಿಕ ನಿರ್ಧಾರಗಳು (ethical judgment) ಬೇಕಾಗುವ ಬಾಕಿ ಉಳಿದ ಶೇ. 6 ರಷ್ಟು ಪ್ರಮುಖ ಸಂದರ್ಭಗಳನ್ನು ನಿಭಾಯಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಜೊತೆಗೆ, ಆರಂಭಿಕ ಹಂತದ (entry-level) ಉದ್ಯೋಗಿಗಳನ್ನು ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನುರಿತ ಉದ್ಯೋಗಿಗಳ ಕೊರತೆ ಎದುರಾಗುತ್ತದೆ ಎಂಬುದನ್ನು ಅರಿತು, ಐಬಿಎಂ ಈಗ ಹೊಸಬರ ನೇಮಕಾತಿಯನ್ನು ಮೂರು ಪಟ್ಟು ಹೆಚ್ಚಿಸಲು ನಿರ್ಧರಿಸಿದೆ.

ಇದನ್ನೂ ಓದಿ: ತೈಲ ಬೆಲೆ ಇಳಿದರೂ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ ಯಾಕೆ? ಕಾರಣ ಬಿಚ್ಚಿಟ್ಟ ಸಚಿವ ಹರ್ದೀಪ್

ಮೆಷಿನ್​ಗಿಂತ ಮನುಷ್ಯರೇ ವಾಸಿ ಎಂದು ದೃಢೀಕರಿಸಿದ ಸಂಶೋಧನಾ ವರದಿಗಳ ಮಾಹಿತಿ

‘Robert Half’ ಎಂಬ ಸ್ಟಾಫಿಂಗ್ ಸಂಸ್ಥೆಯ ದತ್ತಾಂಶದ ಪ್ರಕಾರ, ಅಮೆರಿಕಾದಲ್ಲಿ ಎಐ ಕಾರಣ ನೀಡಿ ಉದ್ಯೋಗಿಗಳನ್ನು ತೆಗೆದುಹಾಕಿದ್ದ ಪ್ರತಿ ಮೂವರು ಹೈರಿಂಗ್ ಮ್ಯಾನೇಜರ್‌ಗಳಲ್ಲಿ ಒಬ್ಬರು, ಅದೇ ಹುದ್ದೆಗೆ ಅಥವಾ ಅದಕ್ಕೆ ಸಮನಾದ ಹುದ್ದೆಗೆ ಮತ್ತೆ ಮನುಷ್ಯರನ್ನೇ ನೇಮಕ ಮಾಡಿಕೊಂಡಿದ್ದಾರೆ.

‘Orgvue’ ವರದಿಯ ಪ್ರಕಾರ, ಎಐ ತಂತ್ರಜ್ಞಾನ ಅಳವಡಿಕೆಯಿಂದಾಗಿ ಉದ್ಯೋಗ ಕಡಿತ ಮಾಡಿದ್ದ ಶೇ. 55 ರಷ್ಟು ಉದ್ಯಮ ಮುಖ್ಯಸ್ಥರು, ತಾವು ಮಾಡಿದ ನಿರ್ಧಾರ ತಪ್ಪು ಎಂದು ಒಪ್ಪಿಕೊಂಡಿದ್ದಾರೆ.

ಒಟ್ಟಾರೆಯಾಗಿ, ಎಐ ತಂತ್ರಜ್ಞಾನವು ಮನುಷ್ಯರ ಬುದ್ಧಿವಂತಿಕೆ ಮತ್ತು ಅನುಭವಕ್ಕೆ ಸಂಪೂರ್ಣ ಪರ್ಯಾಯವಾಗಲು ಸಾಧ್ಯವಿಲ್ಲ ಎಂಬುದು ಈಗ ದೊಡ್ಡ ಕಂಪನಿಗಳಿಗೆ ಮನವರಿಕೆಯಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 12:19 pm, Fri, 3 July 26

Source link

ರಾಜಾ ರಘುವಂಶಿ ಕೊಲೆ ಪ್ರಕರಣ: ಪತ್ನಿ ಸೋನಮ್ ಜಾಮೀನಿಗೆ ತಡೆ ನೀಡಲು ಸುಪ್ರೀಂ ನಕಾರ – Kannada News | Supreme Court Refuses to Stay Sonam Raghuvanshi’s Bail in Raja Raghuvanshi death case

ನವದೆಹಲಿ, ಜುಲೈ 03: ಕಳೆದ ವರ್ಷ ಮೇಘಾಲಯದ ಪ್ರವಾಸಿ ತಾಣ ಸೊಹ್ರಾದಲ್ಲಿ ನಡೆದ ಇಂದೋರ್ ಮೂಲದ ರಾಜಾ ರಘುವಂಶಿ(Raja Raghuvanshi) ಕೊಲೆ ಪ್ರಕರಣದ ಪ್ರಮುಖ ಆರೋಪಿ, ಅವರ ಪತ್ನಿ ಸೋನಮ್​ಗೆ ಸಿಕ್ಕಿರುವ ಜಾಮೀನಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮೇಘಾಲಯ ಹೈಕೋರ್ಟ್ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರ ಪೀಠವು ಈ ಆದೇಶ ನೀಡಿದೆ.

ಆರೋಪಿ ಈಗಾಗಲೇ ಜೈಲಿನಿಂದ ಬಿಡುಗಡೆಯಾಗಿರುವುದರಿಂದ ಈ ಹಂತದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ಕೋರ್ಟ್ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?
ಕಳೆದ ವರ್ಷ ಮೇ ತಿಂಗಳಲ್ಲಿ ಮಧ್ಯಪ್ರದೇಶದ ಇಂದೋರ್ ನಿವಾಸಿಗಳಾದ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಮೇಘಾಲಯಕ್ಕೆ ಹನಿಮೂನ್‌ಗೆ ಹೋಗಿದ್ದಾಗ ನಾಪತ್ತೆಯಾಗಿದ್ದರು. 9 ದಿನಗಳ ನಂತರ ರಾಜಾ ಅವರ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ಇದು ಪೂರ್ವನಿಯೋಜಿತ ಕೊಲೆ ಎಂದು ಆರೋಪಿಸಿ, ಕಳೆದ ವರ್ಷ ಜೂನ್‌ನಲ್ಲಿ ಪತ್ನಿ ಸೋನಮ್‌ರನ್ನು ಪೊಲೀಸರು ಬಂಧಿಸಿದ್ದರು.

ಜಾಮೀನು ಸಿಗಲು ಕಾರಣವಾದ ‘ಪೊಲೀಸರ ತಪ್ಪು’
ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಸೋನಮ್‌ಗೆ ಜಾಮೀನು ನೀಡಲು ಪೊಲೀಸರ ಬೇಜವಾಬ್ದಾರಿತನವೇ ಪ್ರಮುಖ ಕಾರಣವಾಗಿದೆ,

ಮತ್ತಷ್ಟು ಓದಿ: ಮೇಘಾಲಯ ಹನಿಮೂನ್ ಕೊಲೆ ಪ್ರಕರಣ; ಸೋನಂ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ ಮೊರೆಹೋದ ಮೃತನ ಕುಟುಂಬಸ್ಥರು!

ತಪ್ಪು ಸೆಕ್ಷನ್ ದಾಖಲು: ಪೊಲೀಸರು ಬಂಧನದ ದಾಖಲೆಗಳಲ್ಲಿ ಕೊಲೆ ಅಪರಾಧಕ್ಕೆ ಸಂಬಂಧಿಸಿದ ಸೆಕ್ಷನ್ 103(1) ಬದಲಿಗೆ, ತಪ್ಪು ಸೆಕ್ಷನ್ ಆದ 403(1) ಅನ್ನು ಉಲ್ಲೇಖಿಸಿದ್ದರು. ಬಂಧನಕ್ಕೆ ನಿಖರ ಕಾರಣ ಏನೆಂಬುದನ್ನು ಆರೋಪಿಗೆ ಸರಿಯಾಗಿ ತಿಳಿಸಿಲ್ಲ. ಪೊಲೀಸರು ಯಾವುದೇ ಯೋಚನೆ ಮಾಡದೆ ಕೇವಲ ರೆಡಿಮೇಡ್ ಟೆಂಪ್ಲೇಟ್‌ಗಳನ್ನು ಕಾಪಿ-ಪೇಸ್ಟ್ ಮಾಡಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ-ವಿವಾದ
ಮೇಘಾಲಯ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದೊಂದು ಗಂಭೀರ ಕೊಲೆ ಪ್ರಕರಣ. ಕೇವಲ ಟೈಪಿಂಗ್ ದೋಷದಿಂದಾಗಿ ಆರೋಪಿಗೆ ಜಾಮೀನು ನೀಡಿರುವುದು ಆಘಾತಕಾರಿ. ಪ್ರಕರಣದಲ್ಲಿ ಇನ್ನೂ 94 ಸಾಕ್ಷಿಗಳ ವಿಚಾರಣೆ ಬಾಕಿ ಇದೆ ಎಂದು ವಾದಿಸಿದರು.

ವಾದದ ವೇಳೆ ತುಷಾರ್ ಮೆಹ್ತಾ ಅವರು, ಇತ್ತೀಚೆಗೆ ಪತಿಯ ವಿಗ್ ವಿಷಯಕ್ಕಾಗಿ ಪತ್ನಿಯೇ ಕೊಲೆ ಮಾಡಿದ ಮತ್ತೊಂದು ವಿಚಿತ್ರ ಪ್ರಕರಣವನ್ನು ಉದಾಹರಣೆಯಾಗಿ ಕೋರ್ಟ್ ಗಮನಕ್ಕೆ ತಂದರು. ಹೈಕೋರ್ಟ್ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಪ್ರಾಥಮಿಕ ಆಕ್ಷೇಪ ವ್ಯಕ್ತಪಡಿಸಿದ್ದು, ಸದ್ಯ ಜಾಮೀನಿಗೆ ತಡೆ ನೀಡದಿದ್ದರೂ, ತನಿಖೆಯ ಪ್ರಗತಿಯನ್ನು ಗಮನಿಸುವುದಾಗಿ ಹೇಳಿದೆ. ಜೊತೆಗೆ ಆರೋಪಿ ಸೋನಮ್‌ಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಜುಲೈ 10 ಕ್ಕೆ ಮುಂದೂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಮನಗರ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ: ನಿಷ್ಪಕ್ಷಪಾತ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – Kannada News | Ramanagara Voter List Rigging: Pralhad Joshi Demands Impartial Probe Over SIR Scam

ನವದೆಹಲಿ, ಜುಲೈ 03: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಬಗೆದ ದ್ರೋಹವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಿಎಲ್‌ಒ ಅಧಿಕಾರಿಗಳ ದುರ್ಬಳಕೆ

ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿರುವ ವಿಶೇಷ ನಿಯಮಾವಳಿ ಹಾಗೂ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಈ ಪರಿಷ್ಕರಣೆ ಪ್ರಕ್ರಿಯೆ ನಡೆಸಲಾಗಿದೆ. ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ರಾಜಕೀಯವಾಗಿ ದುರುಪಯೋಗಪಡಿಸಿಕೊಂಡಿದ್ದು, ಈ ಇಡೀ ಪ್ರಕ್ರಿಯೆಯೇ ಕಾನೂನುಬಾಹಿರ ಮತ್ತು ನಿಯಮಬಾಹಿರವಾಗಿದೆ ಎಂದು ಸಚಿವರು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರದಿಂದ ವ್ಯವಸ್ಥಿತ ಸಂಚು?

ಸ್ವತಂತ್ರವಾಗಿ ನಡೆಯಬೇಕಾದ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡಿದೆ ಎಂದು ಜೋಶಿ ದೂರಿದ್ದಾರೆ. ಕೇವಲ ರಾಜಕೀಯ ಲಾಭಕ್ಕಾಗಿ, ಮತದಾರರ ಪಟ್ಟಿಯನ್ನು ತಮಗೆ ಅನುಕೂಲವಾಗುವಂತೆ ತಿರುಚಲು ಸರ್ಕಾರದ ಉನ್ನತ ಮಟ್ಟದಿಂದಲೇ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ. ಈ ಪರಿಷ್ಕರಣೆಯು ರಾಜಕೀಯ ಪ್ರಭಾವದಿಂದ ಕೂಡಿದ್ದು, ಸ್ಥಳೀಯ ಆಡಳಿತದ ಮೇಲೆ ತೀವ್ರ ಒತ್ತಡ ಹೇರಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಜಯನಗರದ ಮಸೀದಿ ಒಳಗೆ ಎಸ್ಐಆರ್!: ಸ್ಫೋಟಕ ಆರೋಪ ಮಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ

ಪಾರದರ್ಶಕ ತನಿಖೆಗೆ ಒತ್ತಾಯ

ಸಾಮಾನ್ಯ ಮತದಾರರ ಧ್ವನಿಯನ್ನು ಹತ್ತಿಕ್ಕಲು ನಡೆಸಿರುವ ಈ ಬೃಹತ್ ಹಗರಣದ ಹಿಂದೆ ಯಾರ ಹಿತಾಸಕ್ತಿಗಳು ಅಡಗಿವೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಸಾಂವಿಧಾನಿಕ ವ್ಯವಸ್ಥೆಯ ಹಸ್ತಕ್ಷೇಪವು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ಪಾವಿತ್ರ್ಯಕ್ಕೆ ಧಕ್ಕೆ ತರುತ್ತದೆ. ಹೀಗಾಗಿ, ತಕ್ಷಣವೇ ನಿಷ್ಪಕ್ಷಪಾತ, ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SIR: ಬಿಎಲ್‌ಒಗಳು ಕಡ್ಡಾಯವಾಗಿ ಮನೆ ಮನೆಗೆ ಹೋಗಿ ಫಾರಂ ನೀಡಬೇಕು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಖಡಕ್ ಸೂಚನೆ – Kannada News | Karnataka SIR Process: Chief Electoral Officer V Anbukkumar Orders BLOs to Conduct Door to Door Survey

ಬೆಂಗಳೂರು, ಜುಲೈ 3: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯಕ್ರಮದಲ್ಲಿ ಬಿಎಲ್‌ಒಗಳು (ಬೂತ್ ಮಟ್ಟದ ಅಧಿಕಾರಿಗಳು) ನಿಯಮಾವಳಿಗಳನ್ನು ಗಾಳಿಗೆ ತೂರಿ ಕಚೇರಿ ಹಾಗೂ ಇತರೆಡೆ ಕುಳಿತು ಫಾರಂ ವಿತರಿಸುತ್ತಿದ್ದಾರೆ ಎಂಬ ಗಂಭೀರ ದೂರುಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಐಎಎಸ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಜುಲೈ 2 ರಂದು ಬಂದಿರುವ ದೂರುಗಳನ್ನು ಆಧರಿಸಿ ಇಂದು (ಜುಲೈ 3) ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು, ಡೆಪ್ಯುಟಿ ಕಮಿಷನರ್‌ಗಳು ಹಾಗೂ ಜಿಬಿಎ ಮುಖ್ಯ ಆಯುಕ್ತರಿಗೆ ಅಧಿಕೃತ ಸುತ್ತೋಲೆ ರವಾನಿಸಿರುವ ಸಿಇಒ, ಭಾರತೀಯ ಚುನಾವಣಾ ಆಯೋಗದ (ECI) ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಡಕ್ ಸೂಚನೆ ನೀಡಿದ್ದಾರೆ.

ಕಚೇರಿಗಳಲ್ಲಿ ಕೂತು ಫಾರಂ ಹಂಚುವಂತಿಲ್ಲ: ಸಿಇಒ ಖಡಕ್ ಎಚ್ಚರಿಕೆ

ಭಾರತೀಯ ಚುನಾವಣಾ ಆಯೋಗದ ನಿರ್ದೇಶನ ಹಾಗೂ ವೇಳಾಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ ಜೂನ್ 30 ರಿಂದಲೇ ಮತದಾರರಿಗೆ ಎನ್ಯೂಮರೇಶನ್ ಫಾರಂಗಳನ್ನು (Enumeration Forms) ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಫಾರಂ ಹಂಚುವ ಬದಲು, ಕಚೇರಿಗಳಲ್ಲೇ ಕುಳಿತು ವಿತರಿಸುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಸಿಇಒ ವಿ. ಅನ್ಬುಕುಮಾರ್, ‘ಎಲ್ಲಾ ಬಿಎಲ್‌ಒಗಳು ಕಡ್ಡಾಯವಾಗಿ ಪ್ರತಿಯೊಬ್ಬ ಮತದಾರನ ಮನೆ ಬಾಗಿಲಿಗೆ ಭೇಟಿ ನೀಡಿ ಫಾರಂ ವಿತರಿಸಬೇಕು. ವಿಶೇಷ ತೀವ್ರ ಪರಿಷ್ಕರಣೆಯ ಎಲ್ಲಾ ಹಂತಗಳಲ್ಲೂ ಇಸಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳು ಅಗತ್ಯ ನಿರ್ದೇಶನ ನೀಡಬೇಕು’ ಎಂದು ಆದೇಶಿಸಿದ್ದಾರೆ.

ಇದೇ ವೇಳೆ, ಫಾರಂ ತುಂಬಲು ಕಷ್ಟಪಡುವ ಮತದಾರರು ‘ಮತದಾರರ ಸಹಾಯ ಕೇಂದ್ರಗಳಿಗೆ (Voter Facilitation Centers)’ ಭೇಟಿ ನೀಡಿ ನೆರವು ಪಡೆಯಬಹುದು, ಈ ಕೇಂದ್ರಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದ್ದಾರೆ.

ರಾಮನಗರದಲ್ಲಿ ಎಸ್ಐಆರ್ ಅಕ್ರಮ ಆರೋಪ

ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಗುರುವಾರ ಗಂಭೀರ ಆರೋಪ ಮಾಡಿದ್ದರು. ಬಿಎಲ್‌ಒಗಳು ಮನೆ ಮನೆಗೆ ಹೋಗಿ ಪರಿಶೀಲನೆ ನಡೆಸುವ ಬದಲು, ರಾಮನಗರದ ಕಲ್ಯಾಣ ಮಂಟಪವೊಂದರಲ್ಲಿ (ಚೌಲ್ಟ್ರಿ) ಜನರನ್ನು ಕೂರಿಸಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ‘ಕೈ’ ಸರ್ಕಾರದ ಸೂಚನೆಯಂತೆ ಬಾಂಗ್ಲಾದೇಶದ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಲು ನಕಲಿ ಐಡಿ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಜಯನಗರ ಮಸೀದಿಯಲ್ಲಿ ಎಸ್​ಐಆರ್: ವಿಜಯೇಂದ್ರ ಆರೋಪ

ಈ ಎಲ್ಲ ಬೆಳವಣಿಗೆಗಳ ನಡುವೆ, ಬೆಂಗಳೂರಿನ ಜಯನಗರದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಮಸೀದಿಯ ಒಳಗಡೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರವು ಬಿಎಲ್‌ಒಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ನಿಯಮಬಾಹಿರವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಯನಗರದ ಮಸೀದಿ ಒಳಗೆ ಎಸ್ಐಆರ್!: ಸ್ಫೋಟಕ ಆರೋಪ ಮಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ಷಯ್ ಸಿನಿಮಾನಲ್ಲಿ ನಟಿಸಿ ಅವರಿಗೇ ಟಾಂಗ್ ಕೊಟ್ಟ ರವೀನಾ ಟಂಡನ್ – Kannada News | Raveena Tandon criticize today’s comedy movies for their portrayal of heroines

ಅಕ್ಷಯ್ ಕುಮಾರ್ (Akshay Kumar) ನಟಿಸಿ ನಿರ್ಮಾಣ ಮಾಡಿರುವ ‘ವೆಲ್ ಕಮ್ ಟು ಜಂಗಲ್’ ಹಾಸ್ಯ ಪ್ರಧಾನ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು 100 ಕೋಟಿಗೂ ಹೆಚ್ಚು ಮೊತ್ತ ಗಳಿಸುವ ಮೂಲಕ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಹಾಸ್ಯಪ್ರಧಾನ ಸಿನಿಮಾನಲ್ಲಿ ಬಾಲಿವುಡ್​​ನ ಹಲವಾರು ಮಂದಿ ನಟ, ನಟಿಯರು ನಟಿಸಿದ್ದಾರೆ. ಭಾರಿ ದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾಕ್ಕಿದೆ. ಸಿನಿಮಾನಲ್ಲಿ ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್, ರವೀನಾ ಟಂಡನ್, ಮಾನುಷಿ ಚಿಲ್ಲರ್, ಲಾರಾ ದತ್ತ ಅಂಥಹಾ ಸ್ಟಾರ್ ನಟಿಯರು ಸಹ ಇದ್ದಾರೆ. ನಟಿ ರವೀನಾ ಟಂಡನ್ ಸಹ ಸಿನಿಮಾನಲ್ಲಿ ನಟಿಸಿದ್ದಾರೆ, ಆದರೆ ಸಿನಿಮಾ ಹಿಟ್ ಆದ ಬಳಿಕ ಸಿನಿಮಾದ ಬಗ್ಗೆ ಟೀಕೆ ಮಾಡಿದ್ದಾರೆ.

‘ವೆಲ್ ಕಮ್ ಟು ಜಂಗಲ್’ ಸಿನಿಮಾನಲ್ಲಿ ರವೀನಾ ಟಂಡನ್ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಆದರೆ ಹಾಸ್ಯ ಸಿನಿಮಾಗಳಲ್ಲಿ ನಟಿಯರನ್ನು ಕೇವಲ ಗ್ಲಾಮರ್​​ಗಾಗಿ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಟೀಕೆ ಮಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ನಟ, ನಿರ್ಮಾಪಕ ಅಕ್ಷಯ್ ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ. ಏಕೆಂದರೆ ಅವರ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಾಯಕಿಯರನ್ನು ಅತಿಯಾಗಿ ಗ್ಲಾಮರ್​​ಗೆ ಬಳಸಿಕೊಳ್ಳಲಾಗುತ್ತದೆ. ‘ವೆಲ್ ಕಮ್ ಟು ಜಂಗಲ್’ ಸಿನಿಮಾನಲ್ಲಿಯೂ ಅದೇ ಸೂತ್ರವನ್ನು ಪುನರಾವರ್ತಿಸಲಾಗಿದೆ.

ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಯರ ಪಾತ್ರದ ಬಗ್ಗೆ ಮಾತನಾಡಿರುವ ರವೀನಾ ಟಂಡನ್, ಮೊದಲೆಲ್ಲ ಹಾಸ್ಯ ಸಿನಿಮಾಗಳಲ್ಲಿ ನಾಯಕಿಯರಿಗೂ ಸಹ ಹಾಸ್ಯ ಮಾಡಲು ಅವಕಾಶ ಇರುತ್ತಿತ್ತು. ಖುದ್ದು ನಾನು (ರವೀನಾ) ‘ಅಂದಾಜ್ ಅಪ್ನಾ ಅಪ್ನಾ’, ‘ಪರದೇಸಿ ಬಹು’, ‘ದೂಲ್ಹೆ ರಾಜ’ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದೇನೆ. ನಟಿಯರು ಅದ್ಭುತವಾಗಿ ಕಾಮಿಡಿ ಮಾಡಬಲ್ಲರು, ಜೂಹಿ ಚಾವ್ಲಾ ಕೆಲವು ನೆನಪುಳಿವ ಹಾಸ್ಯ ದೃಶ್ಯಗಳಲ್ಲಿ ನಟಿಸಿದ್ದಾರೆ. ‘ಮಿಸ್ಟರ್ ಇಂಡಿಯಾ’ ಸಿನಿಮಾನಲ್ಲಿ ಶ್ರೀದೇವಿ ಸಹ ಚಾರ್ಲಿ ಚಾಪ್ಲಿನ್ ಆಗಿ ಕಾಣಿಸಿಕೊಂಡಿದ್ದರು. 90ರ ದಶಕ ಹಾಸ್ಯ ಸಿನಿಮಾಗಳಲ್ಲಿ ನಟಿಯರಿಗೆ ಸುವರ್ಣ ಕಾಲ ಆಗಿತ್ತು’ ಎಂದಿದ್ದಾರೆ.

ಇದನ್ನೂ ಓದಿ:Welcome To The Jungle: 2000 ಕೋಟಿ ರೂ. ನಕಲಿ ಸಿನಿಮಾ; ಫ್ಲಾಪ್ ನಟ ಅಕ್ಷಯ್ ಕುಮಾರ್ ಪರಿಸ್ಥಿತಿ ಇದು

ಆದರೆ ಇತ್ತೀಚೆಗೆ ಹಾಸ್ಯ ಸಿನಿಮಾನಲ್ಲಿ ನಟಿಯರಿಗೆ ಗ್ಲಾಮರ್ ಹೊರತಾಗಿ ಇನ್ಯಾವ ಕೆಲಸವೂ ಇಲ್ಲ. ಕೇವಲ ಗ್ಲಾಮರ್​​ಗಾಗಿ ಮಾತ್ರವೇ ನಟಿಯರನ್ನು ಹಾಸ್ಯ ಸಿನಿಮಾಗಳಿಗೆ ಹಾಕಿಕೊಳ್ಳಲಾಗುತ್ತದೆ. ಅಲ್ಲಿ ಅವರ ಕೆಲಸ ಕೇವಲ ದೇಹ ತೋರಿಸುವುದಷ್ಟೆ’ ಎಂದು ಟೀಕೆ ಮಾಡಿದ್ದಾರೆ ನಟಿ ರವೀನಾ ಟಂಡನ್.

ಈಗ ಅಕ್ಷಯ್ ಕುಮಾರ್ ನಟನೆಯ ‘ವೆಲ್ ಕಮ್ ಟು ಜಂಗಲ್’ ಸಿನಿಮಾನಲ್ಲಿ ಗ್ಲಾಮರ್​​ಗೆ ಹೆಸರಾಗಿರುವ ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್ ಅವರುಗಳನ್ನು ಇದೇ ಕಾರಣಕ್ಕೆ ಹಾಕಿಕೊಳ್ಳಲಾಗಿದೆ. ತಮಗೆ ಕೊಟ್ಟಿರುವ ಕೆಲಸವನ್ನು ಆ ನಟಿಯರು ಸಹ ‘ಚೆನ್ನಾಗಿ ನಿರ್ವಹಿಸಿದ್ದಾರೆ’. ಏನೇ ಆಗಲಿ ಸಿನಿಮಾ ಸೂಪರ್ ಹಿಟ್ ಆಗಿದೆ. ನಿರ್ಮಾಪಕ ಅಕ್ಷಯ್ ಕುಮಾರ್ ಜೇಬು ತುಂಬಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯಶ್ ‘ಟಾಕ್ಸಿಕ್’ ವಿರುದ್ಧ ಸೆಣೆಸಲು ವಿವಾದ ಬಗೆಹರಿಸಿಕೊಂಡ ಶ್ರದ್ಧಾ ಕಪೂರ್ – Kannada News | Shraddha Kapoor Eetha Resolves Title Row, Gears for Toxic Box Office Clash

ಆಗಸ್ಟ್ ತಿಂಗಳ ಕೊನೆಯಲ್ಲಿ ಭಾರತೀಯ ಚಿತ್ರರಂಗದಲ್ಲಿ ಒಂದು ದೊಡ್ಡ ಬಾಕ್ಸ್ ಆಫೀಸ್ ಸಮರ ನಿರೀಕ್ಷಿಸಲಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಪ್ಯಾನ್ ವರ್ಡ್​ ಸಿನಿಮಾ ‘ಟಾಕ್ಸಿಕ್’ (Toxic) ಆಗಸ್ಟ್ 26 ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಆಗಸ್ಟ್ 28ರಂದು ಬಾಲಿವುಡ್ ಸ್ಟಾರ್ ನಟಿ ಶ್ರದ್ಧಾ ಕಪೂರ್ ಮುಖ್ಯಭೂಮಿಕೆಯಲ್ಲಿರುವ ‘ಈಥಾ’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡೂ ಸಿನಿಮಾಗಳ ಮಧ್ಯೆ ಭಾರಿ ಕ್ಲ್ಯಾಶ್ ನಡೆಯುವುದು ಗ್ಯಾರಂಟಿ ಎನ್ನಲಾಗಿದೆ. ‘ಟಾಕ್ಸಿಕ್’ ಎದುರು ಅಖಾಡಕ್ಕೆ ಇಳಿಯುವ ಮುನ್ನವೇ ಶ್ರದ್ಧಾ ಕಪೂರ್ ಅವರ ‘ಈಥಾ’ ಚಿತ್ರಕ್ಕೆ ಒಂದು ದೊಡ್ಡ ವಿಘ್ನ ಎದುರಾಗಿತ್ತು. ಈಗ ಆ ವಿವಾದ ಸಂಪೂರ್ಣವಾಗಿ ಬಗೆಹರಿದಿದ್ದು, ಚಿತ್ರತಂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಚಿತ್ರದ ಶೀರ್ಷಿಕೆಗೆ ವ್ಯಕ್ತವಾಗಿತ್ತು ಭಾರಿ ವಿರೋಧ

‘ಈಥಾ’ ಚಿತ್ರದ ಟೀಸರ್ ಬಿಡುಗಡೆಯಾದಾಗ ಶ್ರದ್ಧಾ ಕಪೂರ್ ಅವರ ಲುಕ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ಮಹಾರಾಷ್ಟ್ರದ ಹೆಸರಾಂತ ಲಾವಣಿ ನೃತ್ಯಗಾರ್ತಿ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಬಯೋಪಿಕ್ ಇದಾಗಿದೆ. ಆದರೆ, ಈ ಚಿತ್ರಕ್ಕೆ ವಿಠಾಬಾಯಿ ಅವರ ಹೆಸರಿಡದೆ ‘ಈಥಾ’ ಎಂದು ಹೆಸರಿಟ್ಟಿರುವುದಕ್ಕೆ ರಾಜಕೀಯ ಪಕ್ಷವಾದ ಎನ್‌ಸಿಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೆ, ವಿಠಾಬಾಯಿ ಅವರ ಕುಟುಂಬದವರಿಗೂ ಈ ಶೀರ್ಷಿಕೆ ಇಷ್ಟವಿಲ್ಲ ಎಂಬ ವದಂತಿಗಳು ಹರಡಿದ್ದವು.

ವಿಘ್ನ ನಿವಾರಿಸಿದ ವಿಠಾಬಾಯಿ ಹಿರಿಯ ಪುತ್ರಿ

ಚಿತ್ರದ ಟೈಟಲ್ ವಿವಾದ ದೊಡ್ಡದಾಗುತ್ತಿದ್ದಂತೆ ಸ್ವತಃ ವಿಠಾಬಾಯಿ ಅವರ ಹಿರಿಯ ಪುತ್ರಿ, 75 ವರ್ಷದ ರಾಷ್ಟ್ರಪ್ರಶಸ್ತಿ ಪುರಸ್ಕೃತ ತಮಾಷಾ ಕಲಾವಿದೆ ಮಂಗಳಾ ಬನ್ಸೋಡೆ ಕರಾವಡಿಕರ್ ಅವರು ಮೌನ ಮುರಿದಿದ್ದಾರೆ. ಚಿತ್ರಕ್ಕಿದ್ದ ವಿಘ್ನವನ್ನು ದೂರ ಮಾಡಿದ್ದಾರೆ.

‘ನಮ್ಮ ತಾಯಿಯ ಬಯೋಪಿಕ್ ಚಿತ್ರದ ಶೀರ್ಷಿಕೆಗೆ ನಮ್ಮ ಯಾವುದೇ ಆಕ್ಷೇಪವಿಲ್ಲ. ಆ ದಿನಗಳಲ್ಲಿ ನನ್ನ ತಾಯಿ ಹಳ್ಳಿಗಳಲ್ಲಿ ಪ್ರದರ್ಶನ ನೀಡಲು ಹೋದಾಗ, ಅಲ್ಲಿನ ಗ್ರಾಮೀಣ ಜನರು ಅವರನ್ನು ಪ್ರೀತಿಯಿಂದ ಈಥಾ ಎಂದೇ ಕರೆಯುತ್ತಿದ್ದರು. ಹಾಗಾಗಿ ಈ ಶೀರ್ಷಿಕೆ ಸೂಕ್ತವಾಗಿದೆ. ಈ ಚಿತ್ರದ ಮೂಲಕ ನನ್ನ ತಾಯಿಯ ಕಲಾ ಸೇವೆ ಜಗತ್ತಿಗೆ ತಿಳಿಯುತ್ತಿರುವುದಕ್ಕೆ ನಮಗೆ ಸಂತೋಷವಿದೆ’ ಎಂದು ಹೇಳುವ ಮೂಲಕ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ಸಿನಿಮಾ ಮಾಡುವ ಮುನ್ನವೇ ಕುಟುಂಬದವರನ್ನು ಸಂಪರ್ಕಿಸಿ ಈ ಹೆಸರನ್ನು ಇಟ್ಟಿದ್ದರು ಎನ್ನಲಾಗಿದೆ. ಈಗ ಕುಟುಂಬಸ್ಥರೇ ಕ್ಲಾರಿಟಿ ಕೊಟ್ಟಿರುವುದರಿಂದ ವಿವಾದ ಸಂಪೂರ್ಣ ಮುಕ್ತಾಯವಾಗಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್​​ನಲ್ಲಿ ಅಷ್ಟು ದೊಡ್ಡ ಎಚ್ಚರಿಕೆ ಕೊಡಲು ಇದೆ ದೊಡ್ಡ ಕಾರಣ

‘ಟಾಕ್ಸಿಕ್’ ಎದುರು ಸೆಣೆಸಲು ಅಖಾಡ ಸಜ್ಜು

ರಣದೀಪ್ ಹೂಡಾ ಮತ್ತು ಮೊಹಮ್ಮದ್ ಜೀಶನ್ ಅಯೂಬ್ ಅವರಂತಹ ಪ್ರತಿಭಾವಂತ ತಾರಾಗಣ ಹೊಂದಿರುವ ‘ಈಥಾ’ ಸಿನಿಮಾ, ಟೈಟಲ್ ವಿವಾದವನ್ನು ಬಗೆಹರಿಸಿಕೊಂಡು ಈಗ ನಿಶ್ಚಿಂತೆಯಾಗಿ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್26 ಕ್ಕೆ ಯಶ್ ಅವರ ‘ಟಾಕ್ಸಿಕ್’ ಭಾರತೀಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಲು ಬರುತ್ತಿದ್ದರೆ, ಆಗಸ್ಟ್ 28 ಕ್ಕೆ ಶ್ರದ್ಧಾ ಕಪೂರ್ ಅವರ ‘ಈಥಾ’ ಬಾಲಿವಿಡ್ ಅಖಾಡದಿಂದ ಕೌಂಟರ್ ಕೊಡಲು ಸಿದ್ಧವಾಗುತ್ತಿದೆ. ಈ ಇಬ್ಬರು ಸ್ಟಾರ್‌ಗಳ ಬಾಕ್ಸ್ ಆಫೀಸ್ ಕ್ಲ್ಯಾಶ್ ಅಲ್ಲಿ ಅಂತಿಮವಾಗಿ ಗೆಲುವು ಯಾರಿಗೆ ಸಿಗುತ್ತದೆ ಎಂಬ ಕುತೂಹಲ ಮೂಡಿದೆ. ‘ಈಥಾ’ ರೇಸ್​ನಿಂದ ಹಿಂದೆ ಸರಿಯುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ – Kannada News | Former Indian Cricketer Rahul Dravid Visits Anjanadri Hills in Koppal with Wife

ಶಿವಕುಮಾರ್ ಪತ್ತಾರ್
| Edited By: ಪ್ರಸನ್ನ ಹೆಗಡೆ|

Updated on: Jul 03, 2026 | 12:29 PM

ಮುಖ್ಯಾಂಶಗಳು

  • ಅಂಜನಾಂದ್ರಿ ಬೆಟ್ಟಕ್ಕೆ ರಾಹುಲ್​ ದ್ರಾವಿಡ್​​ ಭೇಟಿ
  • 575 ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದ ರಾಹುಲ್​​
  • ಸಪತ್ನಿ ಸಮೇತ ಹನುಮನಿಗೆ ವಿಶೇಷ ಪೂಜೆ ಸಲ್ಲಿಕೆ

Rahul Dravid: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಪತ್ನಿ ಜೊತೆ ಕೊಪ್ಪಳದ ಪ್ರಸಿದ್ಧ ಹನುಮನ ದೇಗುಲ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, 575 ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ದೇಗುಲದ ವತಿಯಿಂದ ದ್ರಾವಿಡ್​​ ದಂಪತಿಯನ್ನು ಸನ್ಮಾನಿಸಲಾಗಿದೆ.

Source link

ಥೈಲ್ಯಾಂಡ್: ಯಾತ್ರೆಗೆ ಹೊರಟಿದ್ದ ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾವು – Kannada News | Thailand: 9 Buddhist Monks dies, when 11 Year Old Driver in Tragic Mukdahan Car Crash

ಬ್ಯಾಂಕಾಕ್, ಜುಲೈ 03: ಈಶಾನ್ಯ ಥೈಲ್ಯಾಂಡ್‌ನ ಮುಕ್ದಹಾನ್ ಪ್ರಾಂತ್ಯದಲ್ಲಿ ಅತ್ಯಂತ ಭೀಕರ ಹಾಗೂ ಮನಕಲಕುವ ಅಪಘಾತ(Accident)ವೊಂದು ಸಂಭವಿಸಿದೆ. ಹೆತ್ತವರ ಅನುಮತಿಯಿಲ್ಲದೆ 11 ವರ್ಷದ ಬಾಲಕನೊಬ್ಬ ವಾಹನ ಚಲಾಯಿಸಿಕೊಂಡು , ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೌದ್ಧ ಸನ್ಯಾಸಿಗಳಿಗೆ ಡಿಕ್ಕಿ ಹೊಡೆದಿದೆ. ಈ ಘೋರ ಅಪಘಾತದಲ್ಲಿ ಒಂಬತ್ತು ಬೌದ್ಧ ಸನ್ಯಾಸಿಗಳು ಸಾವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

‘ಬುದ್ಧೋ ಬುದ್ಧೋ’ ಎನ್ನುತ್ತಿದ್ದಾಗಲೇ ಅಪ್ಪಳಿಸಿತು ಸಾವು
ಸುಮಾರು 35 ಸನ್ಯಾಸಿಗಳು ಮತ್ತು ಐದು ಜನ ಸಾಮಾನ್ಯ ಅನುಯಾಯಿಗಳ ಗುಂಪು ಮುಕ್ದಹಾನ್ ಪ್ರಾಂತ್ಯದ ರಸ್ತೆಯ ಮೂಲಕ ತೀರ್ಥಯಾತ್ರೆಗಾಗಿ ನಡೆದುಕೊಂಡು ಹೋಗುತ್ತಿತ್ತು. ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಬದುಕುಳಿದ ಫ್ರಾ ಸೋಂಪಾಂಗ್ ಎಂಬ ಸನ್ಯಾಸಿ ಘಟನೆ ಬಗ್ಗೆ ಮಾತನಾಡಿ, ನಾವೆಲ್ಲರೂ ‘ಬುದ್ಧೋ, ಬುದ್ಧೋ’ ಎಂದು ಧ್ಯಾನ ಮಂತ್ರ ಜಪಿಸುತ್ತಾ ಸಾಗುತ್ತಿದ್ದೆವು. ಈ ವೇಳೆ ಬಾಲಕನೊಬ್ಬ ಓಡಿಸುತ್ತಿದ್ದ  ಕಾರು ನಿಯಂತ್ರಣ ಕಳೆದುಕೊಂಡು ಇದ್ದಕ್ಕಿದ್ದಂತೆ  ವೇಗದಲ್ಲಿ ನಮ್ಮ ಸಾಲಿಗೆ ಡಿಕ್ಕಿ ಹೊಡೆಯಿತು. ಮೊದಲ ಒಂಬತ್ತು ಸನ್ಯಾಸಿಗಳು ಬದುಕುಳಿದರು, ಆದರೆ ಉಳಿದವರು ಕಾರು ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದರು ಎಂದು ಕಣ್ಣೀರಿಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಐವರು ಸನ್ಯಾಸಿಗಳು ಸ್ಥಳದಲ್ಲೇ ಮೃತಪಟ್ಟರೆ, ಇನ್ನು ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೂವರು ಸನ್ಯಾಸಿಗಳ ಸ್ಥಿತಿ  ಗಂಭೀರವಾಗಿದೆ.

ಮತ್ತಷ್ಟು ಓದಿ: ಒಂದೇ ವರ್ಷದಲ್ಲಿ 10 ಕೋಟಿ ರೂ ಟ್ರಾಫಿಕ್ ಫೈನ್: ವಸೂಲಾಗಿದ್ದು 1 ಕೋಟಿ ರೂ. ಮಾತ್ರ

ಮನೆಯಲ್ಲಿ ಯಾರೂ ಇಲ್ಲದಾಗ ಕಾರು ತಂದಿದ್ದ ಬಾಲಕ
ಪೊಲೀಸ್ ತನಿಖೆಯ ಪ್ರಕಾರ, ಅಪಘಾತದ ಸಮಯದಲ್ಲಿ ಬಾಲಕನ ಮನೆಯಲ್ಲಿ ಯಾರೂ ಇರಲಿಲ್ಲ. ಆತ ಅಸ್ವಸ್ಥನಾಗಿದ್ದ ಕಾರಣ ಶಾಲೆಗೆ ಹೋಗದೆ ಮನೆಯಲ್ಲೇ ಉಳಿದಿದ್ದ. ಈ ವೇಳೆ ಹೆತ್ತವರಿಗೆ ತಿಳಿಸದೆ ಕಾರಿನ ಕೀ ತಗೆದುಕೊಂಡು ರಸ್ತೆಗಿಳಿದಿದ್ದಾನೆ. ಕಾರು ಕಾಣೆಯಾಗಿರುವುದನ್ನು ಅರಿತ ಪೋಷಕರು ಪೊಲೀಸರಿಗೆ ದೂರು ನೀಡುವಷ್ಟರಲ್ಲೇ ಈ ಭೀಕರ ದುರಂತ ಸಂಭವಿಸಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ಆತ ವಿಶೇಷ ಅಗತ್ಯವಿರುವ ಬಾಲಕ ಎಂದು ತಿಳಿದುಬಂದಿದ್ದು, ವೈದ್ಯರು ಮತ್ತು ಪೋಷಕರ ತಂಡ ಆತನನ್ನು ನೋಡಿಕೊಳ್ಳುತ್ತಿದೆ.

ಥೈಲ್ಯಾಂಡ್‌ನಲ್ಲಿ ಬೌದ್ಧ ಸನ್ಯಾಸಿಗಳನ್ನು ಅತ್ಯಂತ ಪವಿತ್ರವಾಗಿ ಮತ್ತು ಗೌರವದಿಂದ ಕಾಣಲಾಗುತ್ತದೆ. ಹೀಗಾಗಿ ಈ ಘಟನೆ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಗಾಯಗೊಂಡ ಸನ್ಯಾಸಿಗಳ ಪ್ರಾಣ ಉಳಿಸಲು ಮುಕ್ದಹಾನ್ ಆಸ್ಪತ್ರೆಯು ಸಾರ್ವಜನಿಕರಲ್ಲಿ ತುರ್ತು ರಕ್ತದಾನ ಮಾಡುವಂತೆ ಮನವಿ ಮಾಡಿದೆ.

ಮುಕ್ದಹಾನ್ ಪ್ರಾಂತ್ಯದ ಗವರ್ನರ್ ವೊರಾಯನ್ ಬುನ್ನಾರತ್ ಈ ಕುರಿತು ಮಾತನಾಡಿ, ಈ ಘಟನೆ ಇಡೀ ದೇಶದ ರಸ್ತೆ ಸುರಕ್ಷತೆಗೆ ಒಂದು ದೊಡ್ಡ ಎಚ್ಚರಿಕೆಯಾಗಬೇಕು. ಅಪಘಾತಗಳನ್ನು ತಡೆಗಟ್ಟುವ ವಿಷಯದಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡುವುದು ಎಷ್ಟು ಮುಖ್ಯ ಎಂಬುದಕ್ಕೆ ಇದೊಂದು ಕಣ್ಣು ತೆರೆಸುವ ಪಾಠ ಎಂದು ಹೇಳಿದ್ದಾರೆ. ವಾಹನವನ್ನು ಸದ್ಯ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊಪ್ಪಳದಲ್ಲಿ ಮಳೆಗಾಗಿ ವಿಭಿನ್ನ ಹರಕೆ: ಊಡಚಮ್ಮ ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ – Kannada News | Koppal Prays for Rain: Devotees Hold Overnight Bhajans at Uduchamma Devi Temple

ಕೊಪ್ಪಳ, ಜುಲೈ 03: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಆತಂಕದ ನಡುವೆ, ತಳಬಾಳು ಗ್ರಾಮದ ಜನತೆ ಮಳೆಗಾಗಿ ವಿಭಿನ್ನ ಹರಕೆಯನ್ನು ಪೂರೈಸಿದ್ದಾರೆ. ಬರಗಾಲದ ಪರಿಸ್ಥಿತಿಯನ್ನು ನಿವಾರಿಸಲು, ಗ್ರಾಮಸ್ಥರು ತಳಬಾಳು ಗ್ರಾಮದಿಂದ ಅರಕೇರಾ ಗ್ರಾಮದಲ್ಲಿರುವ ಊಡಚಮ್ಮ ದೇವಿ ದೇಗುಲದವರೆಗೆ ಪಾದಯಾತ್ರೆ ನಡೆಸಿದ್ದಾರೆ. ಪಾದಯಾತ್ರೆ ಮುಗಿದ ನಂತರ, ರಾತ್ರಿಪೂರ್ತಿ ಊಡಚಮ್ಮ ದೇವಿ ದೇಗುಲದ ಮುಂದೆ ಭಜನೆ ಮಾಡುವ ಮೂಲಕ ದೇವರ ಮೊರೆ ಇಟ್ಟಿದ್ದಾರೆ. ಈ ವಿಶಿಷ್ಟ ಪ್ರಾರ್ಥನೆಯು ತಲೆಮಾರುಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಹಿರಿಯರಿಂದ ಬಂದ ಈ ವಾಡಿಕೆಯ ಪ್ರಕಾರ, ಊಡಚಮ್ಮ ದೇವಿ ದರ್ಶನಕ್ಕೆ ಬಂದು ಇಡೀ ರಾತ್ರಿ ಭಜನೆ ಮಾಡಿದರೆ ಮಳೆ ಬರುತ್ತದೆ ಎಂಬ ಅಚಲ ನಂಬಿಕೆ ಗ್ರಾಮಸ್ಥರಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಮನಗರದ ಕಲ್ಯಾಣ ಮಂಟಪದಲ್ಲಿ SIR ನಡೆಸಿದ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಏನಂದ್ರು ನೋಡಿ – Kannada News | Karnataka SIR Controversy: Home Minister Priyank Kharge Clarifies Ramanagara Process

ಬೆಂಗಳೂರು, ಜುಲೈ 3: ರಾಮನಗರದಲ್ಲಿ ಚೌಲ್ಟ್ರಿಗಳಲ್ಲಿ ಜನರನ್ನು ಕೂರಿಸಿ ಎಸ್​ಐಆರ್​ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಆರೋಪಕ್ಕೆ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಇದು ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ವೈಯಕ್ತಿಕ ಹೋರಾಟವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. SIR ಪ್ರಕ್ರಿಯೆಗೆ ನಿರ್ದಿಷ್ಟ ನಿಯಮಗಳು ಮತ್ತು ಮಾರ್ಗಸೂಚಿಗಳಿವೆ. ಅವುಗಳ ಪ್ರಕಾರವೇ ಕಾರ್ಯನಿರ್ವಹಿಸಬೇಕು. ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸುವುದನ್ನು ಬಿಟ್ಟು, ಸಮುದಾಯ ಭವನಗಳಲ್ಲಿ ಪ್ರಕ್ರಿಯೆ ನಡೆಸಲಾಗುತ್ತಿದ್ದರೆ, ಅದು ನಿಯಮ ಉಲ್ಲಂಘನೆಯಾಗಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖರ್ಗೆ ತಿಳಿಸಿದರು. ಯಾವುದೇ ನಾಗರಿಕನ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಪ್ರತಿಯೊಂದು ಕಾರ್ಯವೂ ಸಂವಿಧಾನಬದ್ಧವಾಗಿ ನಡೆಯಬೇಕು ಎಂದು ಅವರು ಒತ್ತಿ ಹೇಳಿದರು.

ಮುಖ್ಯಮಂತ್ರಿಗಳು ರಾಜ್ಯದ ಪ್ರತಿ ಬೂತ್‌ಗಳನ್ನು ವೈಯಕ್ತಿಕವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಸ್ಥಳೀಯ ನಾಯಕರು ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಈ ರೀತಿ ಮಾಡಿರಬಹುದು ಎಂದು ಖರ್ಗೆ ಹೇಳಿದರು. ಚುನಾವಣಾ ಆಯೋಗವು ಈ ವಿಷಯವನ್ನು ಗಮನಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಾವು ಆಯೋಗಕ್ಕೆ ಕೇಳಿದ 12 ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ, ಆ ಬಗ್ಗೆಯೂ ವಿಕಪಕ್ಷಗಳು ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version