ರೈತರಿಗೆ ಬ್ಯಾಡ್ ನ್ಯೂಸ್: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಪೂರೈಕೆ ಸ್ಥಗಿತ – Kannada News | Tungabhadra Dam Water Supply Stopped For Canals Due to Severe 42 percent Monsoon Deficit in Karnataka

ತುಂಗಭದ್ರಾ ಜಲಾಶಯದಲ್ಲಿ ನೀರು ಕನಿಷ್ಠ ಮಟ್ಟಕ್ಕೆ ಕುಸಿದಿರುವುದುImage Credit source: tv9

ಕೊಪ್ಪಳ, ಜುಲೈ 3: ಕರ್ನಾಟಕದಲ್ಲಿ ಮುಂಗಾರು ಮಳೆ (Monsoon Rain) ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಇಡೀ ಕಲ್ಯಾಣ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ (TB Dam) ಕಾಲುವೆಗಳಿಗೆ ನೀರು ಹರಿಸುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಸಮೀಪವಿರುವ ತುಂಗಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಒಳಹರಿವು ಇಲ್ಲದೇ ಇರುವುದರಿಂದ ಮುಂಗಾರು ಬೆಳೆಗೆ ನೀರು ಕೊಡಲು ಸಾಧ್ಯವೇ ಇಲ್ಲ ಎಂದು ನೀರಾವರಿ ವಲಯದ ಅಧಿಕಾರಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಕಾಲುವೆಗಳ ನೀರನ್ನು ಬಂದ್ ಮಾಡಲಾಗಿದ್ದು, ಇದು ಅಚ್ಚುಕಟ್ಟು ಪ್ರದೇಶದ ರೈತರ ನಿದ್ದೆಗೆಡಿಸಿದೆ.

ಟಿಬಿ ಡ್ಯಾಂನಲ್ಲಿ ಹತ್ತು ವರ್ಷಗಳಲ್ಲೇ ಅತ್ಯಂತ ಕನಿಷ್ಠ ನೀರಿನ ಮಟ್ಟ

ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಇದು ಕಳೆದ 10 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟದ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ ಬರೋಬ್ಬರಿ 75 ಟಿಎಂಸಿ ನೀರಿತ್ತು. ಆದರೆ ಕಳೆದ ವರ್ಷ ಡ್ಯಾಂನ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದ ಕಾರಣದಿಂದಾಗಿ ರೈತರಿಗೆ ಹಿಂಗಾರು ಬೆಳೆಗೆ ನೀರು ಕೊಡಲು ಸಾಧ್ಯವಾಗಿರಲಿಲ್ಲ. ಈಗ ಈ ಬಾರಿ ಮುಂಗಾರು ಮಳೆಯೇ ಇಲ್ಲದ ಕಾರಣ ಜೂನ್ ತಿಂಗಳಲ್ಲಿ ಡ್ಯಾಂಗೆ ಯಾವುದೇ ಒಳಹರಿವು ಬಂದಿಲ್ಲ. ಪರಿಣಾಮವಾಗಿ ಮುಂಗಾರು ಬೆಳೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.

ನಾಲ್ಕು ಜಿಲ್ಲೆಗಳ ರೈತರು ಕಂಗಾಲು

ತುಂಗಭದ್ರಾ ಜಲಾಶಯದ ನೀರನ್ನೇ ನಂಬಿ ಕೃಷಿ ಚಟುವಟಿಕೆ ಆರಂಭಿಸಲು ಸಜ್ಜಾಗಿದ್ದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳ ಲಕ್ಷಾಂತರ ರೈತರು ಸರ್ಕಾರದ ಈ ನಿರ್ಧಾರದಿಂದ ಕಂಗಾಲಾಗಿದ್ದಾರೆ. ಈಗಾಗಲೇ ಕೃಷಿ ಇಲಾಖೆಯು ರೈತರು ಜಲಾಶಯದ ನೀರನ್ನು ಮಾತ್ರ ನಂಬಿ ಹೆಚ್ಚಿನ ನೀರು ಬೇಡುವ ಬೆಳೆಗಳ ಬಿತ್ತನೆ ಮಾಡಬೇಡಿ ಎಂದು ಎಚ್ಚರಿಸಿದೆ. ಒಂದು ವೇಳೆ ಜುಲೈ ತಿಂಗಳಿನಲ್ಲಾದರೂ ಮಳೆ ಚೇತರಿಸಿಕೊಳ್ಳದಿದ್ದರೆ ಈ ನಾಲ್ಕು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ನಾಶವಾಗಿ ರೈತರು ತೀವ್ರ ಸಾಲದ ಸುಳಿಗೆ ಸಿಲುಕುವ ಭೀತಿ ಎದುರಾಗಿದೆ.

ಇದನ್ನೂ ಓದಿ: ಭೀಕರ ಬರದ ಛಾಯೆ: ಜಿಲ್ಲೆಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಲು ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ

ಸಿಎಂ ಡಿಕೆ ಶಿವಕುಮಾರ್ ಸಹ ಗುರುವಾರದ ಸಚಿವ ಸಂಪುಟ ಸಭೆಯ ಬಳಿಕ ರೈತರಿಗೆ ಕಿವಿ ಮಾತು ಹೇಳಿದ್ದಾರೆ. ರೈತರು ಕೇವಲ ಜಲಾಶಯದ ನೀರನ್ನು ನಂಬಿ ಬಿತ್ತನೆ ಮಾಡಬೇಡಿ ಎಂದು ಸಿಎಂ ಸಲಹೆ ನೀಡಿದ್ದಾರೆ.

ಐದು ದಶಕದಲ್ಲೇ 4ನೇ ಬಾರಿ ಜೂನ್​ನಲ್ಲಿ ಅತ್ಯಂತ ಕಡಿಮೆ ಮಳೆ

ಹವಾಮಾನ ಇಲಾಖೆ ಹಾಗೂ ಪ್ರಮುಖ ವರದಿಗಳ ಪ್ರಕಾರ, ಕರ್ನಾಟಕದಲ್ಲಿ ಈ ವರ್ಷ ಜೂನ್ ತಿಂಗಳಿನಲ್ಲಿ ದಾಖಲೆಯ ಶೇ 42 ರಷ್ಟು ಮುಂಗಾರು ಮಳೆಯ ಕೊರತೆ ಎದುರಾಗಿದೆ. ಕಳೆದ ಐದು ದಶಕಗಳಲ್ಲೇ ಇದು ಜೂನ್ ತಿಂಗಳ ನಾಲ್ಕನೇ ಅತ್ಯಂತ ಕನಿಷ್ಠ ಮಳೆಯ ಅವಧಿಯಾಗಿದೆ. ಸಾಮಾನ್ಯವಾಗಿ ಜೂನ್‌ನಲ್ಲಿ ರಾಜ್ಯಕ್ಕೆ 199 ಮಿಮೀ ಮಳೆಯಾಗಬೇಕಿತ್ತು, ಆದರೆ ಈ ಬಾರಿ ಕೇವಲ 116 ಮಿಮೀ ಮಳೆಯಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯ ಕೊರತೆ ಕ್ರಮವಾಗಿ ಶೇ 52 ಮತ್ತು ಶೇ 49 ರಷ್ಟಿದ್ದು, ಇದು ಜಲಾಶಯಗಳ ನೀರಿನ ಸಂಗ್ರಹದ ಮೇಲೆ ಭೀಕರ ಪರಿಣಾಮ ಬೀರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಕೈಯಲ್ಲಿ ಕಾಲು ಒತ್ತಿಸಿಕೊಳ್ಳುತ್ತಿದ್ದರು, ರಾಮ ಮಂದಿರ ಟ್ರಸ್ಟ್ ಅಧಿಕಾರಿಗಳ ವಿರುದ್ಧ ಮಾಜಿ ಸಿಬ್ಬಂದಿ ಗಂಭೀರ ಆರೋಪ – Kannada News | Ayodhya Ram Mandir Corruption: Ex Staff Alleges Harassment Amid Donation Scam Probe

ಅಯೋಧ್ಯೆ, ಜುಲೈ 03:ಅಯೋಧ್ಯೆ ರಾಮ ಮಂದಿರ(Ram Mandir)ದ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿಶೇಷ ತನಿಖಾ ತಂಡ (SIT) ಈ ದಂಧೆಯ ಆಳ ಜಾಲಾಡುತ್ತಿರುವ ಬೆನ್ನಲ್ಲೇ, ಮಂದಿರದಲ್ಲಿ ಸುಮಾರು 18 ತಿಂಗಳು ಕೆಲಸ ಮಾಡಿದ್ದ ಮಾಜಿ ಉದ್ಯೋಗಿಯೊಬ್ಬರು ನ್ಯೂಸ್ 18 ಇಂಡಿಯಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಟ್ರಸ್ಟ್‌ನ ಉನ್ನತ ಅಧಿಕಾರಿಗಳ ವಿರುದ್ಧ ಗಂಭೀರ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಮಾಡಿರುವುದು ಹೊಸ ಸಂಚಲನ ಮೂಡಿಸಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ಚಾಲಕ ಹಾಗೂ ಸೇವದಾರನಾಗಿದ್ದ ಟಿನ್ನು ಯಾದವ್ ಎಂಬಾತ ದೇವಸ್ಥಾನದ ನೌಕರರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ. ಆತ ಮತ್ತು ಇತರೆ ಅಧಿಕಾರಿಗಳು ಮಂದಿರದ ನೌಕರರು ಹಾಗೂ ಸೇವಕರಿಂದ ತಮ್ಮ ಪಾದಗಳನ್ನು ಒತ್ತಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ.

ಮಾಜಿ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಮತ್ತು ಅಧಿಕಾರಿ ಗೋಪಾಲ್ ರಾಯ್ ಮಂದಿರದ ಒಳಗಿನ ವ್ಯವಹಾರಗಳನ್ನು ತಮಗೆ ಬೇಕಾದಂತೆ ನಡೆಸುತ್ತಾ, ಸಾಮಾನ್ಯ ನೌಕರರಿಗೆ ತೀವ್ರ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಹಲವಾರು ಪ್ರಾಮಾಣಿಕ ಉದ್ಯೋಗಿಗಳು ಕೆಲಸ ಬಿಟ್ಟು ಹೋಗಿದ್ದಾರೆ.

ಮಂದಿರದಲ್ಲಿ ಉದ್ಯೋಗ ಭದ್ರತೆ ಎಂಬುದು ಇರಲಿಲ್ಲ. ಕೇವಲ ಪ್ರಭಾವಿ ವ್ಯಕ್ತಿಗಳ ಸಂಬಂಧಿಕರಿಗೆ ಮಾತ್ರ ಉದ್ಯೋಗ ನೀಡಲಾಗುತ್ತಿತ್ತು. ಅಲ್ಲದೆ, ಮಂದಿರದ ಸಣ್ಣಪುಟ್ಟ ಕಾಮಗಾರಿಗಳ ಕೆಲಸ ಹುಡುಕಿಕೊಂಡು ಬರುವ ಸಣ್ಣ ಕಂಪನಿಗಳಿಂದ ಶೇ. 10 ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿತ್ತು ಎಂದು ಅವರು ದೂರಿದ್ದಾರೆ. ಆದರೆ ಚಂಪತ್ ರಾಯ್ ವಿರುದ್ಧ ತನಗೆ ಯಾವುದೇ ವೈಯಕ್ತಿಕ ದೂರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣದ ತನಿಖೆ ವೇಳೆ ಬಯಲಾಯ್ತು ನಕಲಿ ನೇಮಕಾತಿ ದಂಧೆ, ಸಿಗದ ಉದ್ಯೋಗ ದಾಖಲೆಗಳು

ಶೌಚಾಲಯದಲ್ಲಿ ಹಣ ಅಡಗಿಸಿಡುತ್ತಿದ್ದ ಖದೀಮರು
ಜೈಲು ಸೇರಿರುವ ದೇಣಿಗೆ ಕಳ್ಳತನದ ಆರೋಪಿಗಳ ಬಗ್ಗೆ ಮಾತನಾಡಿದ ಮಾಜಿ ಸಿಬ್ಬಂದಿ, ನಾನು ಅವರನ್ನು ದೇವಸ್ಥಾನದ ಒಳಗಿನ ಟೀ ಕ್ಯಾಂಟೀನ್‌ನಲ್ಲಿ ಆಗಾಗ ಭೇಟಿಯಾಗುತ್ತಿದ್ದೆ. ಅವರ ನಡವಳಿಕೆ ಮೊದಲಿನಿಂದಲೂ ಅತ್ಯಂತ ಅನುಮಾನಾಸ್ಪದವಾಗಿತ್ತು ಎಂದಿದ್ದಾರೆ. ಎಸ್‌ಐಟಿ ತನಿಖೆಯ ಪ್ರಕಾರ, ಆರೋಪಿಗಳು ಸಿಸಿಟಿವಿ ಕ್ಯಾಮೆರಾಗಳ ಕಣ್ಣು ತಪ್ಪಿಸಿ ಭಾರಿ ಪ್ರಮಾಣದ ಕಾಣಿಕೆ ಹಣವನ್ನು ಕದ್ದು, ದೇವಸ್ಥಾನದ ಶೌಚಾಲಯಗಳಲ್ಲಿ ಅಡಗಿಸಿಡುತ್ತಿದ್ದರು ಎಂಬುದು ಬಯಲಾಗಿದೆ.

ತನಿಖೆ ತೀವ್ರ, ಟ್ರಸ್ಟ್‌ಗೆ ಐಎಎಸ್ ಅಧಿಕಾರಿ ನೇಮಕ ಸಾಧ್ಯತೆ
ಪ್ರಕರಣದ ವ್ಯಾಪ್ತಿ ದೊಡ್ಡದಾಗುತ್ತಿರುವುದರಿಂದ ಕಾಣಿಕೆ ಎಣಿಕೆ ಉಸ್ತುವಾರಿ ವಹಿಸಿದ್ದ ವಾರಣಾಸಿ ಮೂಲದ ಭದ್ರತಾ ಸಂಸ್ಥೆಯ ಪಾತ್ರದ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ಇದೇ ವೇಳೆ ಟ್ರಸ್ಟ್‌ನ ಭದ್ರತಾ ವ್ಯವಸ್ಥೆಯ ಕುರಿತು ಚಂಪತ್ ರಾಯ್ ಅವರನ್ನು ಅಧಿಕಾರಿಗಳು ಸುದೀರ್ಘವಾಗಿ ಪ್ರಶ್ನಿಸಿದ್ದಾರೆ.

ಮಂದಿರದ ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಇಂತಹ ಆರ್ಥಿಕ ಅಕ್ರಮಗಳು ಮರುಕಳಿಸದಂತೆ ತಡೆಯಲು, ಇನ್ಮುಂದೆ ಒಬ್ಬರು ನಿವೃತ್ತ ಐಎಎಸ್ (IAS) ಅಧಿಕಾರಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ (CEO) ನೇಮಿಸಲು ಟ್ರಸ್ಟ್ ಗಂಭೀರ ಚಿಂತನೆ ನಡೆಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:07 am, Fri, 3 July 26

Source link

Vastu Tips: ಮನೆಯಲ್ಲಿ ಡಮರು ಇದ್ಯಾ? ಹಾಗಿದ್ರೆ ಈ ವಾಸ್ತು ನಿಯಮ ನಿಮಗೆ ತಿಳಿದಿರಲಿ! – Kannada News | Damaru in Vastu: Boost Positive Energy and Financial Growth at Home

ಭಾರತೀಯ ಸನಾತನ ಸಂಪ್ರದಾಯ ಮತ್ತು ವಾಸ್ತು ಶಾಸ್ತ್ರದಲ್ಲಿ ಶಬ್ದಕ್ಕೆ (ಧ್ವನಿ ತರಂಗಗಳು) ಅತ್ಯಂತ ವಿಶೇಷವಾದ ಸ್ಥಾನವಿದೆ. ಕೆಲವು ಪವಿತ್ರ ಶಬ್ದಗಳು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ, ಸಕಾರಾತ್ಮಕ ವಾತಾವರಣವನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ಅಂತಹ ಪವಿತ್ರ ವಸ್ತುಗಳಲ್ಲಿ ಪರಮ ಶಿವನ ಆಯುಧವಾದ ‘ಡಮರು’ ಮತ್ತು ಪೂಜಾ ಗಂಟೆ ಪ್ರಮುಖವಾದವು. ಇವುಗಳಿಂದ ಹೊರಹೊಮ್ಮುವ ಶಬ್ದವು ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತದೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಈ ಲೇಖನದಲ್ಲಿ ಪೂಜಾ ಮಂಟಪದಲ್ಲಿ ಡಮರು ಇಡುವುದರಿಂದ ಆಗುವ ಪ್ರಯೋಜನಗಳು ಹಾಗೂ ಅವುಗಳನ್ನು ಇಡಬೇಕಾದ ಸರಿಯಾದ ವಾಸ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳಿ.

ಆರ್ಥಿಕ ಪ್ರಗತಿ ಮತ್ತು ಯಶಸ್ಸಿಗೆ ಡಮರು ಪರಿಹಾರ:

ವ್ಯಾಪಾರ, ವ್ಯವಹಾರ ಅಥವಾ ಉದ್ಯೋಗದಲ್ಲಿ ಆಗಾಗ್ಗೆ ಅಡೆತಡೆಗಳನ್ನು ಎದುರಿಸುತ್ತಿರುವವರಿಗೆ ಡಮರು ಅತ್ಯುತ್ತಮ ವಾಸ್ತು ಪರಿಹಾರವಾಗಿದೆ. ವಾಸ್ತು ತಜ್ಞರ ಪ್ರಕಾರ, ಶಿವನನ್ನು ಭಕ್ತಿಯಿಂದ ಸ್ಮರಿಸುತ್ತಾ ಡಮರುಕವನ್ನು ನಿಯಮಿತವಾಗಿ ಬಾರಿಸಿದರೆ, ವೃತ್ತಿ ಜೀವನದ ಅಡೆತಡೆಗಳು ದೂರವಾಗುತ್ತವೆ. ಇದು ಹೊಸ ಹೊಸ ಉದ್ಯೋಗಾವಕಾಶಗಳು ಮತ್ತು ಆದಾಯದ ಮೂಲಗಳು ಹೊರಹೊಮ್ಮಲು ದಾರೀದೀಪವಾಗುತ್ತದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ಪೂಜಾ ಕೋಣೆಯಲ್ಲಿ ಡಮರು ಇಡುವುದರಿಂದ ಆರ್ಥಿಕ ಪ್ರಗತಿ ಸುಲಭವಾಗುತ್ತದೆ.

ಇದನ್ನೂ ಓದಿ: ಸಾನ್ನದ ನೀರಿಗೆ ಒಂದು ಚಿಟಿಕೆ ಕರ್ಪೂರ ಬೆರೆಸಿ; ಇದರ ಚಮತ್ಕಾರಿ ಪ್ರಯೋಜನಗಳು ಇಲ್ಲಿವೆ…

ಡಮರುಕವನ್ನು ಮನೆಯಲ್ಲಿಡುವಾಗ ಪಾಲಿಸಬೇಕಾದ ಮುಖ್ಯ ವಾಸ್ತು ನಿಯಮಗಳು:

ಡಮರುವನ್ನು ಮನೆಯಲ್ಲಿ ಇಡುವಾಗ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದರೆ ಮಾತ್ರ ಅದರ ಪೂರ್ಣ ಶುಭ ಫಲಿತಾಂಶಗಳು ನಮಗೆ ಸಿಗುತ್ತವೆ:

  • ಸರಿಯಾದ ದಿಕ್ಕು: ಡಮರುಗವನ್ನು ಯಾವಾಗಲೂ ಮನೆಯ ಈಶಾನ್ಯ (North-East) ಅಥವಾ ಪೂರ್ವ (East) ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭದಾಯಕ.
  • ನೆಲದ ಮೇಲೆ ಇಡಬೇಡಿ: ಡಮರುಗವನ್ನು ನೇರವಾಗಿ ನೆಲದ ಮೇಲೆ ಇಡಬಾರದು. ಅದನ್ನು ಯಾವಾಗಲೂ ಒಂದು ಸ್ವಚ್ಛವಾದ ಕೆಂಪು ಬಟ್ಟೆ ಅಥವಾ ವಿಶೇಷವಾದ ಸ್ಟ್ಯಾಂಡ್ ಮೇಲೆ ಇರಿಸಬೇಕು.
  • ಶುದ್ಧತೆಗೆ ಆದ್ಯತೆ: ಕೊಳಕು ಅಥವಾ ಅಪವಿತ್ರ ಕೈಗಳಿಂದ ಡಮರುಕವನ್ನು ಮುಟ್ಟಬೇಡಿ. ಪೂಜೆಯ ಸಮಯದಲ್ಲಿ ಮಾತ್ರ ಭಕ್ತಿ ಮತ್ತು ಏಕಾಗ್ರತೆಯಿಂದ ಅದನ್ನು ಬಾರಿಸುವುದು ಸೂಕ್ತ.
  • ಹಾನಿಗೊಳಗಾದ ವಸ್ತುಗಳ ನಿಷೇಧ: ಮನೆಯಲ್ಲಿ ಯಾವುದೇ ಕಾರಣಕ್ಕೂ ಮುರಿದ ಅಥವಾ ಹಾನಿಗೊಳಗಾದ ಡಮರುಗ ಇಡಬಾರದು. ಒಡೆದ ವಸ್ತುಗಳನ್ನು ನಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಮನೆಯಲ್ಲಿ ಪೂಜಾ ಪರಿಕರಗಳನ್ನು ಕೇವಲ ಅಲಂಕಾರಿಕ ವಸ್ತುವಾಗಿ ನೋಡದೆ, ಅವುಗಳಿಗೆ ಪವಿತ್ರ ಸ್ಥಾನ ನೀಡಿ ಗೌರವಿಸಬೇಕು. ನಿಯಮಿತವಾಗಿ ಅವುಗಳನ್ನು ಸ್ವಚ್ಛವಾಗಿಟ್ಟುಕೊಂಡು, ಭಕ್ತಿಯಿಂದ ಬಳಸಿದರೆ ಮನೆಯಲ್ಲಿ ಸುಖ, ಶಾಂತಿ, ಮತ್ತು ಸಮೃದ್ಧಿ ನೆಲೆಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭೀಕರ ಬರದ ಛಾಯೆ: ಜಿಲ್ಲೆಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಲು ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ – Kannada News | Karnataka Drought: CM DK Shivakumar Orders Ministers to Tour Districts; Reservoir Inflow Drops to 20 percent

ಬೆಂಗಳೂರು, ಜುಲೈ 3: ಕರ್ನಾಟಕದಲ್ಲಿ (Karnataka) ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಭೀಕ ಬರಗಾಲದ ಛಾಯೆ ಆವರಿಸಿದ್ದು, ಪರಿಸ್ಥಿತಿಯ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದ 31 ಜಿಲ್ಲೆಗಳಿಗೂ ಭೇಟಿ ನೀಡಿ ಬರ ಪರಿಸ್ಥಿತಿಯ ಪರಾಮರ್ಶೆ ನಡೆಸುವಂತೆ ಸಂಪುಟದ 13 ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ‘ನಾನು ಕೂಡ ರಾಜ್ಯದ ನಾಲ್ಕೂ ಆಡಳಿತ ವಿಭಾಗಗಳಲ್ಲಿ ಪ್ರವಾಸ ಕೈಗೊಂಡು ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿದ್ದೇನೆ’ ಎಂದು ಸಿಎಂ ಹೇಳಿದ್ದಾರೆ.

ಜಲಾಶಯಗಳಲ್ಲಿ ಶೂನ್ಯ ಒಳಹರಿವು: ರೈತರಿಗೆ ಸಿಎಂ ಕಿವಿಮಾತು

ದೇಶಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ ನೀರು ಮತ್ತು ವಿದ್ಯುತ್‌ಗೆ ತೀವ್ರ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಪ್ರಧಾನಮಂತ್ರಿಯವರೇ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ ಎಂದು ಸಿಎಂ ನೆನಪಿಸಿದರು. ಪ್ರಸ್ತುತ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲ್ಮಟ್ಟಿ, ನಾರಾಯಣಪುರ ಮತ್ತು ವಾಣಿವಿಲಾಸ ಸಾಗರ ಜಲಾಶಯಗಳಲ್ಲಿ ಒಳಹರಿವು ಸಂಪೂರ್ಣ ಶೂನ್ಯವಾಗಿದೆ. ಕಾವೇರಿ ಕೊಳ್ಳದಲ್ಲೂ ನೀರಿನ ಒಳಹರಿವು ತೀವ್ರವಾಗಿ ಕುಸಿದಿದೆ. ಕಳೆದ ವರ್ಷ ಹೇಮಾವತಿಯಲ್ಲಿ 88 ಟಿಎಂಸಿ ನೀರಿತ್ತು, ಇಂದು ಅದು 40 ಟಿಎಂಸಿಗೆ ಇಳಿದಿದೆ. ಕೆಆರ್‌ಎಸ್‌ನಲ್ಲಿ ಕಳೆದ ವರ್ಷ 100 ಟಿಎಂಸಿ ಇದ್ದರೆ, ಇಂದು ಕೇವಲ 22 ಟಿಎಂಸಿ ಇದೆ. ಕಬಿನಿಯಲ್ಲಿ ಕಳೆದ ವರ್ಷ 79 ಟಿಎಂಸಿ ಇದ್ದದ್ದು ಇಂದು 26 ಟಿಎಂಸಿಗೆ ಕುಸಿದಿದೆ. ಒಟ್ಟಾರೆಯಾಗಿ ರಾಜ್ಯದ ಜಲಾಶಯಗಳ ಒಳಹರಿವು ಕೇವಲ ಶೇ 20 ರಷ್ಟು ಮಾತ್ರ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ರೈತರು ಕೇವಲ ಜಲಾಶಯದ ನೀರನ್ನು ನಂಬಿ ಬಿತ್ತನೆ ಮಾಡಬೇಡಿ, ನೀರಿಲ್ಲದಿದ್ದರೆ ಕೃಷಿಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿದ್ಯುತ್ ಕೊರತೆ ನೀಗಿಸಲು ಸಿದ್ಧತೆ

ಬರಗಾಲದ ಭೀತಿಯ ಹಿನ್ನೆಲೆಯಲ್ಲಿ ವಿದ್ಯುತ್ ಕೊರತೆ ತಡೆಗಟ್ಟಲು ಕಲ್ಲಿದ್ದಲು ಮತ್ತು ಇತರ ಅಗತ್ಯ ಸಂಪನ್ಮೂಲಗಳನ್ನು ದಾಸ್ತಾನು ಮಾಡಿಕೊಳ್ಳಲು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ತುರ್ತು ಸಂದರ್ಭ ಎದುರಾದರೆ ಬಳಕೆ ಮಾಡಲು ಬೆಂಗಳೂರಿನಲ್ಲಿರುವ ಗ್ಯಾಸ್ ಆಧಾರಿತ ವಿದ್ಯುತ್ ಸ್ಥಾವರವನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಆಗಸ್ಟ್‌ನಲ್ಲಿ 15 ದಿನಗಳ ಮುಂಗಾರು ಅಧಿವೇಶನ

ಸಾಮಾನ್ಯವಾಗಿ ಜುಲೈನಲ್ಲಿ ನಡೆಯಬೇಕಿದ್ದ ಜಂಟಿ ಸದನದ ಮುಂಗಾರು ಅಧಿವೇಶನವನ್ನು ಈ ಬಾರಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕಾರಣದಿಂದಾಗಿ ಆಗಸ್ಟ್‌ಗೆ ಮುಂದೂಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅಲ್ಲಿಯವರೆಗೆ ಶಾಸಕರು ಮತ್ತು ಅಧಿಕಾರಿಗಳು ಅರ್ಹ ಮತದಾರರ ಹೆಸರುಗಳನ್ನು ಉಳಿಸುವ ಪ್ರಕ್ರಿಯೆಯಲ್ಲಿ ನಿರತರಾಗಿರುತ್ತಾರೆ. ಹೀಗಾಗಿ ಯಾರನ್ನೂ ತೊಂದರೆಗೆ ಸಿಲುಕಿಸದೆ, ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ 15 ದಿನಗಳ ಕಾಲ ಮುಂಗಾರು ಅಧಿವೇಶನ ಕರೆಯಲಾಗುವುದು ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

ಬಿಎಲ್‌ಒಗಳು ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಫಾರಂಗಳನ್ನು ವಿತರಿಸಬೇಕು, ಯಾವುದೇ ಶಾಸಕರು ಅಥವಾ ರಾಜಕೀಯ ಕಾರ್ಯಕರ್ತರು ಇವುಗಳನ್ನು ಹಂಚುವಂತಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಮಾದಪಟ್ಟಣ ಕ್ವಾರಿಯಲ್ಲಿ ಏಳು ಕಾರ್ಮಿಕರ ಸಾವು: ಮೂವರು ಆರೋಪಿಗಳ ಬಂಧನ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | Breaking News in TV9 Kannada Live 3 July 2026 Karnataka SIR, Weather Rain Report, Bengaluru Footpath Clearance News Updates

ಕೇಂದ್ರ ಸರ್ಕಾರವು ಆನ್‌ಲೈನ್ ವಂಚನೆ ತಡೆಗೆ ವಾಟ್ಸಾಪ್ ಬೆನ್ನಲ್ಲೇ ಈಗ ಟೆಲಿಗ್ರಾಮ್ ಮತ್ತು ಸಿಗ್ನಲ್ ಆ್ಯಪ್‌ಗಳ ‘ಯೂಸರ್ ನೇಮ್’ ವೈಶಿಷ್ಟ್ಯದ ವಿರುದ್ಧ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ. ಇತ್ತ ಕ್ರಿಕೆಟ್ ಅಂಗಳದಲ್ಲಿ, ಭಾರತ-ಇಂಗ್ಲೆಂಡ್ 2ನೇ ಟಿ20 ಪಂದ್ಯದಲ್ಲಿ ಯುವ ಆಟಗಾರ ವೈಭವ್‌ಗೆ ಅವಕಾಶ ಸಿಗಲ್ಲ, ಸಂಜುಗೇ ಚಾನ್ಸ್ ಎಂದು ದಿನೇಶ್ ಕಾರ್ತಿಕ್ ಭವಿಷ್ಯ ನುಡಿದಿದ್ದಾರೆ. ಇನ್ನು ಸಿನಿಮಾ ರಂಗದಲ್ಲಿ, ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರ ಹೆಸರು ಫ್ರಾನ್ಸ್‌ನ ಪ್ರತಿಷ್ಠಿತ ಲುಮಿಯೆರ್ ಮ್ಯೂಸಿಯಂನ ‘ವಾಲ್ ಆಫ್ ಫಿಲ್ಮ್ ಮೇಕರ್ಸ್’ ಸೇರುವ ಮೂಲಕ ಜಾಗತಿಕ ಗೌರವ ಪಾತ್ರವಾಗಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

‘ಆಲ್ಫಾ’ ಚಿತ್ರಕ್ಕೆ ಮೊದಲ ದಿನ 9 ಸಾವಿರ ಶೋ; ಗಳಿಕೆ ಮಾತ್ರ ಒಂದಂಕಿ? – Kannada News | Alpha Movie First Day Collection: Despite 9K Shows, Disappointing 7 Cr Box Office

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ ‘ಆಲ್ಫಾ’ ಸಿನಿಮಾ ಇಂದು (ಜುಲೈ 3) ತೆರೆಗೆ ಬಂದಿದೆ. ಆಲಿಯಾ ಭಟ್, ಶಾರ್ವರಿ, ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ಸ್ಕ್ರೀನ್‌ಗಳು ಸಿಕ್ಕಿವೆ. ವೈಆರ್‌ಎಫ್ ತನ್ನ ಬಲವನ್ನು ಉಪಯೋಗಿಸಿ ಹೆಚ್ಚಿನ ಥಿಯೇಟರ್ ಪಡೆದುಕೊಂಡಿದೆ. ಈ ಮೂಲಕ ಈ ಚಿತ್ರಕ್ಕೆ ದಾಖಲೆಯ ಬಿಡುಗಡೆಯನ್ನು ತಂದುಕೊಟ್ಟಿದೆ. ಆದಾಗ್ಯೂ ಸಿನಿಮಾದ ಗಳಿಕೆ ಮಾತ್ರ ಒಂದಂಕಿಗೆ ಸೀಮಿತವಾಗಲಿದೆ ಎನ್ನಲಾಗುತ್ತಿದೆ.

‘ಆಲ್ಫಾ’ ಚಿತ್ರವು ಭಾರತದಾದ್ಯಂತ ಒಟ್ಟು 2,750 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಮಹಿಳಾ ಪ್ರಧಾನ ಸಿನಿಮಾ ಒಂದಕ್ಕೆ ಈ ಮಟ್ಟದ ದೊಡ್ಡ ಓಪನಿಂಗ್ ಸಿಕ್ಕಿರುವುದು ಇದೇ ಮೊದಲು ಎನ್ನಲಾಗಿದೆ. ಶಿವ ರವೈಲ್ ನಿರ್ದೇಶನದ ಈ ಚಿತ್ರಕ್ಕೆ ದೇಶಾದ್ಯಂತ ಬರೋಬ್ಬರಿ 9,000 ಶೋಗಳು ಸಿಕ್ಕಿವೆ. ಕಳೆದ ಒಂದು ವರ್ಷದಲ್ಲಿ ತೆರೆಕಂಡ ಹಲವು ದೊಡ್ಡ ಸಿನಿಮಾಗಳಿಗಿಂತಲೂ ಇದು ಅತ್ಯುತ್ತಮ ಶೋ ಕೌಂಟ್ ಆಗಿದೆ.

ಭಾರೀ ಪೈಪೋಟಿ

ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಈ ವಾರ ಭಾರಿ ಪೈಪೋಟಿ ಇದೆ. ‘ವೆಲ್‌ಕಮ್ ಟು ದಿ ಜಂಗಲ್’ ಮತ್ತು ‘ಕಾಕ್‌ಟೇಲ್ 2’ ನಂತಹ ಚಿತ್ರಗಳು ಈಗಾಗಲೇ ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ಇಷ್ಟೊಂದು ಪೈಪೋಟಿ ಇದ್ದರೂ ವೈಆರ್‌ಎಫ್ ತನ್ನ ಪ್ರಭಾವದಿಂದ ‘ಆಲ್ಫಾ’ ಚಿತ್ರಕ್ಕೆ ಹೆಚ್ಚಿನ ಸ್ಕ್ರೀನ್‌ಗಳನ್ನು ಗಿಟ್ಟಿಸಿಕೊಂಡಿದೆ. ವೀಕೆಂಡ್‌ನಲ್ಲಿ ಸಿನಿಮಾ ಕಲೆಕ್ಷನ್ ಹೆಚ್ಚಾಗಲು ಇದು ನೆರವಾಗಲಿದೆ.

ಇದನ್ನೂ ಓದಿ: ‘ಆಲ್ಫಾ’ ಸಿನಿಮಾ ಸಂಭಾವನೆಯಲ್ಲಿ ಎಲ್ಲರನ್ನೂ ಮೀರಿಸಿದ ಆಲಿಯಾ ಭಟ್

ಆದರೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದರೂ ಚಿತ್ರದ ಗಳಿಕೆ ಮಾತ್ರ ನಿರಾಶಾದಾಯಕವಾಗಿದೆ. 9 ಸಾವಿರ ಶೋಗಳು ಸಿಕ್ಕಿದ್ದರೂ ಮೊದಲ ದಿನದ ಕಲೆಕ್ಷನ್ ಕೇವಲ 7 ಕೋಟಿ ರೂಪಾಯಿ ಆಸುಪಾಸಿನಲ್ಲಿರುವ ಮುನ್ಸೂಚನೆ ಇದೆ. ಈಗಾಗಲೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೇವಲ 35 ಸಾವಿರ ಟಿಕೆಟ್‌ಗಳು ಮಾತ್ರ ಮಾರಾಟವಾಗಿವೆ. ಭರ್ಜರಿ ಪ್ರದರ್ಶನ ಕಂಡರೂ ಆರಂಭಿಕ ಗಳಿಕೆ ಇಷ್ಟೊಂದು ಕಡಿಮೆ ಇರುವುದು ಚಿತ್ರರಂಗದಲ್ಲಿ ಅಚ್ಚರಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾಟ್ಸಾಪ್ ಬೆನ್ನಲ್ಲೇ ಟೆಲಿಗ್ರಾಮ್, ಸಿಗ್ನಲ್‌ಗೂ ಕೇಂದ್ರದ ನೋಟಿಸ್ – Kannada News | Govt Notice to Telegram, Signal on Username Feature After WhatsApp Action

ನವದೆಹಲಿ, ಜುಲೈ 03: ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆಯೇ ಚಾಟ್ ಮಾಡಲು ಅನುಕೂಲ ಕಲ್ಪಿಸುವ ‘ಯೂಸರ್​​ನೇಮ್’ (Username) ವೈಶಿಷ್ಟ್ಯದ ಕುರಿತು ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳ ವಿರುದ್ಧ ತನ್ನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ. ಬುಧವಾರವಷ್ಟೇ ವಾಟ್ಸಾಪ್ ಸಂಸ್ಥೆಗೆ ನೋಟಿಸ್ ನೀಡಿದ್ದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈಗ ಪ್ರಮುಖ ಮೆಸೇಜಿಂಗ್ ಆಪ್‌ಗಳಾದ ಟೆಲಿಗ್ರಾಮ್ ಮತ್ತು ಸಿಗ್ನಲ್ (Signal)ಗೂ  ಅಧಿಕೃತ ನೋಟಿಸ್ ಜಾರಿ ಮಾಡಿದೆ.

ಕೇಂದ್ರ ಸರ್ಕಾರದ ಕಳವಳ ಮತ್ತು ಪ್ರಶ್ನೆಗಳೇನು?
ಮೊಬೈಲ್ ಸಂಖ್ಯೆ ಇಲ್ಲದೆಯೇ ಸಂಪರ್ಕ ಸಾಧಿಸಲು ಬಳಕೆದಾರರಿಗೆ ಮುಕ್ತ ‘ಯೂಸರ್ ನೇಮ್’ ನೀಡುತ್ತಿರುವುದಕ್ಕೆ ಸೂಕ್ತ ಕಾರಣಗಳನ್ನು ನೀಡುವಂತೆ ಕೇಳಿದೆ.
ಸಾರ್ವಜನಿಕ ಅಧಿಕಾರಿಗಳು, ಪ್ರಸಿದ್ಧ ವ್ಯಕ್ತಿಗಳು, ಬ್ಯಾಂಕುಗಳು ಹಾಗೂ ಸರ್ಕಾರಿ ಇಲಾಖೆಗಳ ಅಧಿಕೃತ ಹೆಸರುಗಳನ್ನು ಹೋಲುವ ನಕಲಿ ಯೂಸರ್ ನೇಮ್‌ಗಳನ್ನು ಸೃಷ್ಟಿಸಿ ಆನ್‌ಲೈನ್ ವಂಚನೆ ಮಾಡುವುದನ್ನು ತಡೆಯಲು ನೀವು ಕೈಗೊಂಡಿರುವ ಸುರಕ್ಷತಾ ಕ್ರಮಗಳೇನು ಎಂದು ಪ್ರಶ್ನಿಸಿದೆ.

ವಾಟ್ಸಾಪ್ ನೀಡಿದ ವಿವರಣೆ
ಇದೇ ವಿಷಯವಾಗಿ 3 ದಿನಗಳ ಒಳಗೆ ವಿವರಣೆ ನೀಡುವಂತೆ ಮತ್ತು ಸಮಾಲೋಚನೆ ಮುಗಿಯುವವರೆಗೆ ಈ ವೈಶಿಷ್ಟ್ಯವನ್ನು ಭಾರತದಲ್ಲಿ ಬಿಡುಗಡೆ ಮಾಡದಂತೆ ವಾಟ್ಸಾಪ್‌ಗೆ ಸರ್ಕಾರ ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ವಾಟ್ಸಾಪ್, ವಂಚನೆ ತಡೆಯಲು ನಿಖರವಾದ ಯೂಸರ್ ನೇಮ್ ಗೊತ್ತಿರಬೇಕಾದ ನಿಯಮ, ಊಹಿಸುವ ಪ್ರಯತ್ನಗಳಿಗೆ ಬ್ಲಾಕ್ ಹಾಗೂ ಅಪರಿಚಿತ ಸಂದೇಶ ಬಂದಾಗ ಅದು ಯಾವ ದೇಶದ್ದು ಎಂಬ ವಿವರಗಳನ್ನು ಪ್ರದರ್ಶಿಸುವ ಭದ್ರತಾ ಪದರಗಳನ್ನು ಅಳವಡಿಸಿರುವುದಾಗಿ ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: WhatsApp Username: ಯೂಸರ್​ನೇಮ್ ಇಟ್ಟು ಪೋನ್ ನಂಬರ್ ರಹಸ್ಯವಾಗಿಡಿ; ವಾಟ್ಸಾಪ್​ನಲ್ಲಿ ಹೊಸ ಫೀಚರ್

ಟೆಲಿಗ್ರಾಮ್ ಆ್ಯಪ್ ಈಗಾಗಲೇ ಇತ್ತೀಚಿನ ದಿನಗಳಲ್ಲಿ ಸರ್ಕಾರದ ತೀವ್ರ ನಿಗಾದಲ್ಲಿದೆ. ಕಳೆದ ತಿಂಗಳು ನೀಟ್ (NEET) ಪರೀಕ್ಷೆಯ ನಕಲಿ ಪಶ್ನೆಪತ್ರಿಕೆಗಳ ಸೋರಿಕೆ ಮತ್ತು ಪ್ರಸರಣಕ್ಕೆ ಈ ವೇದಿಕೆಯನ್ನು ವ್ಯಾಪಕವಾಗಿ ಬಳಸಲಾದ ಆರೋಪದ ಮೇಲೆ ಟೆಲಿಗ್ರಾಮ್ ಮೇಲೆ ಒಂದು ವಾರದ ಕಾಲ ನಿಷೇಧ ಹೇರಲಾಗಿತ್ತು. ಜೂನ್ 22 ರಂದು ಈ ನಿಷೇಧ ಕೊನೆಗೊಂಡು ಸೇವೆಗಳು ಮರಳಿದ್ದರೂ, ಈಗ ಯೂಸರ್ ನೇಮ್ ವಿವಾದವು ಟೆಲಿಗ್ರಾಮ್ ಮತ್ತು ಸಿಗ್ನಲ್ ಸಂಸ್ಥೆಗಳಿಗೆ ಹೊಸ ತಲೆನೋವು ತಂದಿಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಲಗಿದ್ದಾಗ ಮುಖದ ಮೇಲೆ ಬಿದ್ದ ಬಾವಲಿ, ಕಡಿತದ ಗುರುತಿಲ್ಲದಿದ್ದರೂ ರೇಬೀಸ್‌ನಿಂದ 11 ವರ್ಷದ ಬಾಲಕ ಸಾವು – Kannada News | Rabies Death: Boy Dies After Bat Contact, No Visible Bite Marks Urgent Prevention Needed

ಒಂಟಾರಿಯೊ,ಜುಲೈ 03: ಬಾವಲಿ(Bats)ಗಳ ಕಡಿತದಿಂದ ಹರಡುವ ರೇಬೀಸ್(Rabies) ವೈರಸ್ ಎಷ್ಟು ಅಪಾಯಕಾರಿ ಎಂಬುದಕ್ಕೆ ಕೆನಡಾದಲ್ಲಿ ನಡೆದಿರುವ ಒಂದು ಅತ್ಯಂತ ದುಃಖಕರ ಘಟನೆ ಸಾಕ್ಷಿಯಾಗಿದೆ. ಬಾವಲಿ ಕಚ್ಚಿದ ಅಥವಾ ಗೀಚಿದ ಯಾವುದೇ ಲಕ್ಷಣಗಳು ಹೊರಗಣ್ಣಿಗೆ ಕಾಣಿಸದಿದ್ದರೂ, 11 ವರ್ಷದ ಬಾಲಕನೊಬ್ಬ ರೇಬೀಸ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಬಾವಲಿಗಳ ಒಡನಾಟದಲ್ಲಿ ಅಡಗಿರುವ ಈ ಗುಪ್ತ ಅಪಾಯದ ಬಗ್ಗೆ ವೈದ್ಯಕೀಯ ತಜ್ಞರು ಸಾರ್ವಜನಿಕರಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಕಡಿತದ ಗುರುತಿರಲಿಲ್ಲ, ಕುಟುಂಬದ ನಿರ್ಲಕ್ಷ್ಯ
ವರದಿಗಳ ಪ್ರಕಾರ, ಆ ಬಾಲಕ 2024 ರ ಬೇಸಿಗೆಯ ಸಮಯದಲ್ಲಿ ಉತ್ತರ ಒಂಟಾರಿಯೊದಲ್ಲಿ ತನ್ನ ಕುಟುಂಬದೊಂದಿಗೆ ರಜೆಯಲ್ಲಿದ್ದ. ಒಂದು ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಎಚ್ಚರವಾದಾಗ ಆತನ ಮೂಗು ಮತ್ತು ಬಾಯಿಯ ಮೇಲೆ ಬಾವಲಿಯೊಂದು ಬಿದ್ದಿರುವುದು ಗೊತ್ತಾಗಿದೆ. ಗಾಬರಿಗೊಂಡ ಬಾಲಕ ಅದನ್ನು ಕೈಯಿಂದ ದೂರ ತಳ್ಳಿದ್ದಾನೆ, ಬಳಿಕ ತಂದೆ ಬಾವಲಿಯನ್ನು ಹಿಡಿದು ಹೊರಗೆ ಬಿಟ್ಟಿದ್ದಾರೆ. ಬಾಲಕನ ಮೈಮೇಲೆ ಯಾವುದೇ ಗಾಯ ಅಥವಾ ರಕ್ತದ ಗುರುತುಗಳು ಇಲ್ಲದಿದ್ದರಿಂದ, ಕುಟುಂಬಸ್ಥರು ತಕ್ಷಣಕ್ಕೆ ಯಾವುದೇ ಚಿಕಿತ್ಸೆ ಕೊಡಿಸಿರಲಿಲ್ಲ.

ಘಟನೆ ನಡೆದ ಸುಮಾರು 19 ದಿನಗಳ ನಂತರ ಬಾಲಕನಿಗೆ ನಿರಂತರ ವಾಂತಿ, ಮುಖ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ ತೊಂದರೆಗಳು ಕಾಣಿಸಿಕೊಂಡವು. ಪರಿಸ್ಥಿತಿ ಹದಗೆಟ್ಟಾಗ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಯಿತು. ಆದರೆ, ವೈದ್ಯರು ಅದನ್ನು ರೇಬೀಸ್ ಎಂದು ಪತ್ತೆಹಚ್ಚುವಷ್ಟರಲ್ಲೇ ವೈರಸ್ ಆತನ ಮೆದುಳು ಹಾಗೂ ನರಮಂಡಲಕ್ಕೆ ವ್ಯಾಪಿಸಿತ್ತು. ಎರಡು ವಾರಗಳ ತೀವ್ರ ನಿಗಾ ಘಟಕದ (ICU) ಚಿಕಿತ್ಸೆಯ ನಂತರ ಬಾಲಕ ಕೊನೆಯುಸಿರೆಳೆದಿದ್ದಾನೆ. ಒಂಟಾರಿಯೊ ಪ್ರಾಂತ್ಯದಲ್ಲಿ ಕಳೆದ 50 ವರ್ಷಗಳಲ್ಲೇ ವರದಿಯಾದ ಮೊದಲ ರೇಬೀಸ್ ಸಾವು ಇದಾಗಿದೆ.

ಮತ್ತಷ್ಟು ಓದಿ: Video: ನಾಯಿ ಕಡಿತದಿಂದ 14 ವರ್ಷದ ಬಾಲಕನಿಗೆ ಬಂತು ರೇಬಿಸ್, ಪರಿಸ್ಥಿತಿ ಏನಾಗಿದೆ ನೋಡಿ

ಬಾವಲಿ ಕಡಿತ ಕಣ್ಣಿಗೆ ಕಾಣಿಸುವುದಿಲ್ಲವೇಕೆ?
ವೈದ್ಯರ ಪ್ರಕಾರ, ಬಾವಲಿಗಳ ಹಲ್ಲುಗಳು ಮತ್ತು ಉಗುರುಗಳು ಅತ್ಯಂತ ಸೂಕ್ಷ್ಮ ಹಾಗೂ ಚೂಪಾಗಿರುತ್ತವೆ. ಅವು ಕಚ್ಚಿದಾಗ ಅಥವಾ ಗೀಚಿದಾಗ ಚರ್ಮದ ಮೇಲೆ ಯಾವುದೇ ದೊಡ್ಡ ಗಾಯ ಅಥವಾ ರಕ್ತದ ಗುರುತುಗಳು ಮೂಡುವುದಿಲ್ಲ. ಇದರಿಂದಾಗಿ ತಮಗೆ ಸೋಂಕು ತಗುಲಿದೆ ಎಂಬುದು ಜನರಿಗೆ ತಿಳಿಯುವುದೇ ಇಲ್ಲ. ರೇಬೀಸ್ ಲಕ್ಷಣಗಳು (ಜ್ವರ, ಗೊಂದಲ, ಪಾರ್ಶ್ವವಾಯು, ಆಹಾರ ನುಂಗಲು ತೊಂದರೆ) ಒಮ್ಮೆ ದೇಹದಲ್ಲಿ ಕಾಣಿಸಿಕೊಂಡರೆ, ಆ ವ್ಯಕ್ತಿಯನ್ನು ಬದುಕಿಸುವುದು ಅಸಾಧ್ಯ ಮತ್ತು ಸಾವು ಶೇ.100 ಖಚಿತ.

ವೈದ್ಯರು ನೀಡುವ ಪ್ರಮುಖ ಸಲಹೆಗಳೇನು?
ತಕ್ಷಣದ ಚಿಕಿತ್ಸೆ: ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಚಿಕಿತ್ಸೆ (ಲಸಿಕೆ ಮತ್ತು ಇಮ್ಯೂನ್ ಗ್ಲೋಬ್ಯುಲಿನ್) ಪಡೆದರೆ ರೇಬೀಸ್ ಅನ್ನು ಶೇ.100 ತಡೆಯಬಹುದು. ನೀವು ಮಲಗಿರುವ ಕೋಣೆಯಲ್ಲಿ ಬಾವಲಿ ಪತ್ತೆಯಾದರೆ ಅಥವಾ ಬಾವಲಿಯೊಂದಿಗೆ ನೇರ ಶಾರೀರಿಕ ಸಂಪರ್ಕ ಉಂಟಾದರೆ, ಯಾವುದೇ ಗಾಯದ ಗುರುತು ಇಲ್ಲದಿದ್ದರೂ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ರೇಬೀಸ್ ಲಸಿಕೆ (PEP) ಪಡೆದುಕೊಳ್ಳಬೇಕು.

ಇಂತಹ ದುರಂತ ಮತ್ತೊಬ್ಬರಿಗೆ ಸಂಭವಿಸಬಾರದು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕು ಎಂಬ ಉದ್ದೇಶದಿಂದ ಬಾಲಕನ ಪೋಷಕರು ಈ ಕಥೆಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Air Quality: ಮುಂಗಾರು ಮಳೆಗೆ ಸುಧಾರಿಸಿತು ರಾಜ್ಯದ AQI – Kannada News | Karnataka AQI: Bangalore and Other Major Cities Record ‘Good’ Air Quality Index

ಮುಂಗಾರು ಮಳೆಗೆ ಸುಧಾರಿಸಿತು ರಾಜ್ಯದ AQI

ಬೆಂಗಳೂರು, ಜುಲೈ 03: ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಮತ್ತು ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯುತ್ತಮ ಮಟ್ಟದಲ್ಲಿದೆ. ಮುಂಗಾರು ಮಳೆಯ ಆರ್ಭಟದಿಂದಾಗಿ ವಾತಾವರಣದಲ್ಲಿನ ಮಾಲಿನ್ಯಕಾರಕ ಕಣಗಳು ಗಣನೀಯವಾಗಿ ಕಡಿಮೆಯಾಗಿದ್ದು, ರಾಜ್ಯದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಇಂದಿನ AQI ನ ಸಂಪೂರ್ಣ ವರದಿ ಇಲ್ಲಿದೆ.

ಬೆಂಗಳೂರಿನ ಇಂದಿನ AQI ಮಟ್ಟ

ಇಂದು ಜುಲೈ 3 ರಂದು ಬೆಂಗಳೂರು ನಗರದ ಸರಾಸರಿ AQI 33 ರಿಂದ 48ರ ಆಸುಪಾಸಿನಲ್ಲಿದೆ. ಭಾರತೀಯ ಮಾಪನದ ಪ್ರಕಾರ ಇದು ಉತ್ತಮ ವಾಯು ಗುಣಮಟ್ಟದ ವ್ಯಾಪ್ತಿಗೆ ಬರುತ್ತದೆ.

  • ಸಿಲ್ಕ್ ಬೋರ್ಡ್ ಮತ್ತು ಬಿಟಿಎಂ ಲೇಔಟ್: 46 (Good)
  • ಬಸವನಗುಡಿ: 46 (Good)
  • ಬನಶಂಕರಿ: 55 (Moderate)
  • ಹೆಬ್ಬಾಳ ಮತ್ತು ಜಯನಗರ: 42 (Good)

ನಗರದ ಬಹುತೇಕ ಭಾಗಗಳಲ್ಲಿ ತೇವಾಂಶ ಮತ್ತು ನಿರಂತರ ತಂಗಾಳಿ ಇರುವುದರಿಂದ PM2.5 ಮತ್ತು PM10 ಮಾಲಿನ್ಯಕಾರಕ ಕಣಗಳ ಪ್ರಮಾಣ ತೀರಾ ಕಡಿಮೆ ದಾಖಲಾಗಿದೆ. ಇದು ಉಸಿರಾಟದ ತೊಂದರೆ ಇರುವವರಿಗೂ ಸುರಕ್ಷಿತ ವಾತಾವರಣವಾಗಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ ವಾಯು ಗುಣಮಟ್ಟ

ರಾಜ್ಯದ ಇತರ ನಗರಗಳಲ್ಲೂ ಮುಂಗಾರು ಮಳೆಯ ಪ್ರಭಾವದಿಂದಾಗಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ. ಕರಾವಳಿ ಮತ್ತು ಒಳನಾಡಿನ ನಗರಗಳಲ್ಲಿ ಗಾಳಿಯ ಗುಣಮಟ್ಟ ಹೀಗಿದೆ:

  • ಮಂಗಳೂರು: 65 ಸಾಧಾರಣ
  • ಮೈಸೂರು: 38 ಉತ್ತಮ
  • ಬೆಳಗಾವಿ: 57 ಸಾಧಾರಣ
  • ಬಾಗಲಕೋಟೆ: 46 ಉತ್ತಮ

ಮಂಗಳೂರು ಮತ್ತು ಬೆಳಗಾವಿಯಲ್ಲಿ ತೇವಾಂಶದ ಏರುಪೇರಿನಿಂದಾಗಿ ವಾಯು ಗುಣಮಟ್ಟ ‘ಸಾಧಾರಣ’ ಮಟ್ಟದಲ್ಲಿದ್ದರೆ, ಮೈಸೂರು ಮತ್ತು ಬಾಗಲಕೋಟೆಯಲ್ಲಿ ಗಾಳಿ ಅತ್ಯಂತ ಶುದ್ಧವಾಗಿದೆ. ಒಟ್ಟಾರೆಯಾಗಿ ಇಂದು ಇಡೀ ರಾಜ್ಯದಲ್ಲಿ ಯಾವುದೇ ರೀತಿಯ ವಾಯು ಮಾಲಿನ್ಯದ ಭೀತಿ ಇಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫ್ರಾನ್ಸ್‌ನ ಲುಮಿಯೆರ್ ಮ್ಯೂಸಿಯಂನಲ್ಲಿ ರಾಜಮೌಳಿಗೆ ಗೌರವ: ‘ವಾಲ್ ಆಫ್ ಫಿಲ್ಮ್ ಮೇಕರ್ಸ್’ಗೆ ಸೇರ್ಪಡೆ – Kannada News | SS Rajamouli Honored at Lumiere Museum, Joins Global Filmmakers Wall in France

ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಎಸ್‌ಎಸ್ ರಾಜಮೌಳಿ ( SS Rajamouli) ಫ್ರಾನ್ಸ್‌ನ ಲಿಯಾನ್‌ನಲ್ಲಿರುವ ಲುಮಿಯೆರ್ ಮ್ಯೂಸಿಯಂನಲ್ಲಿ ದೊಡ್ಡ ಗೌರವ ಸಿಕ್ಕಿದೆ. ಮ್ಯೂಸಿಯಂನಲ್ಲಿರುವ ಪ್ರತಿಷ್ಠಿತ ವಾಲ್ ಆಫ್ ಫಿಲ್ಮ್ ಮೇಕರ್ಸ್ ಗೋಡೆಯ ಮೇಲೆ ರಾಜಮೌಳಿ ಅವರ ಹೆಸರಿನ ನಾಮಫಲಕವನ್ನು ಅನಾವರಣಗೊಳಿಸಲಾಗಿದೆ. ಇದಕ್ಕೂ ಮುನ್ನ ಮ್ಯೂಸಿಯಂನ ಚಿತ್ರಮಂದಿರದಲ್ಲಿ ಅವರ ‘ಈಗ’ ಮತ್ತು ‘ಆರ್‌ಆರ್‌ಆರ್‌’ ಸಿನಿಮಾಗಳನ್ನು ಪ್ರದರ್ಶಿಸಲಾಯಿತು. ಈ ಪ್ರದರ್ಶನಕ್ಕೆ ಭಾರಿ ಜನಸ್ತೋಮ ಹರಿದುಬಂದಿತ್ತು.

ಈ ಸಂತೋಷದ ಸುದ್ದಿಯನ್ನು ರಾಜಮೌಳಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫ್ರಾನ್ಸ್‌ನ ಲಿಯಾನ್‌ನಲ್ಲಿ ‘ಈಗ’ ಮತ್ತು ‘ಆರ್‌ಆರ್‌ಆರ್‌’ ಸಿನಿಮಾಗಳ ಪ್ರದರ್ಶನ ವೀಕ್ಷಿಸಿದ್ದಾಗಿ ಅವರು ತಿಳಿಸಿದ್ದಾರೆ. ತಮಗೆ ಸಿಕ್ಕ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಲುಮಿಯೆರ್ ಇನ್‌ಸ್ಟಿಟ್ಯೂಟ್ ಮತ್ತು ಕಾನ್ ಚಲನಚಿತ್ರೋತ್ಸವದ ನಿರ್ದೇಶಕರಾದ ಥಿಯೆರಿ ಫ್ರೆಮಾಕ್ಸ್ ಅವರು ರಾಜಮೌಳಿ ಅವರನ್ನು ಪ್ರೇಕ್ಷಕರಿಗೆ ಪರಿಚಯಿಸಿದರು. ನಂತರ ಅವರು ರಾಜಮೌಳಿ ಅವರನ್ನು ಸಿನಿಮಾ ಹುಟ್ಟಿದ ಐತಿಹಾಸಿಕ ಬೀದಿಗೆ ವಿಶೇಷ ಪ್ರವಾಸ ಕರೆದುಕೊಂಡು ಹೋದರು.

ಈ ನೆನಪನ್ನು ಹಂಚಿಕೊಂಡ ರಾಜಮೌಳಿ, ‘ಥಿಯೆರಿ ಫ್ರೆಮಾಕ್ಸ್ ಅವರು ನನಗೆ ಒಂದು ಸರ್ಪ್ರೈಸ್ ನೀಡಿದರು. ಸಿನಿಮಾ ಹುಟ್ಟಿದ ಬೀದಿಯಲ್ಲಿ ನನ್ನನ್ನು ನಡೆಸಿಕೊಂಡು ಹೋದರು. ಆ ಸಂದರ್ಭದಲ್ಲಿ ನಾನು ತುಂಬಾ ಭಾವುಕನಾಗಿದ್ದೆ’ ಎಂದು ಬರೆದುಕೊಂಡಿದ್ದಾರೆ.

ಜಗತ್ತಿನ ಶ್ರೇಷ್ಠ ನಿರ್ದೇಶಕರ ಸಾಲಿನಲ್ಲಿ ತಮ್ಮ ಹೆಸರಿನ ಫಲಕ ನೋಡಿ ರಾಜಮೌಳಿ ಆಶ್ಚರ್ಯಚಕಿತರಾದರು. ‘ಅಲ್ಲಿ ಮಾರ್ಟಿನ್ ಸ್ಕಾರ್ಸೆಸೆ, ಕ್ಲಿಂಟ್ ಈಸ್ಟ್‌ವುಡ್, ಕ್ವೆಂಟಿನ್ ಟ್ಯಾರಂಟಿನೊ ಅವರಂತಹ ದಿಗ್ಗಜರ ಹೆಸರುಗಳಿದ್ದವು. ಅದರ ಪಕ್ಕದಲ್ಲೇ ಕೆಂಪು ಬಟ್ಟೆಯಿಂದ ಮುಚ್ಚಿದ ಫಲಕ ಇತ್ತು. ಅದನ್ನು ನೋಡಿದಾಗ ನನ್ನ ಮನಸ್ಸು ಶೂನ್ಯವಾಯಿತು’ ಎಂದು ಅವರು ಹೇಳಿದ್ದಾರೆ.

ವಿಶ್ವದ ಮಹಾನ್ ನಿರ್ದೇಶಕರ ಜೊತೆಗೆ ತಮ್ಮ ಹೆಸರನ್ನು ಶಾಶ್ವತವಾಗಿ ಇಟ್ಟಿರುವುದಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ. ‘ಈ ಗೌರವಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಕೇವಲ ಕೃತಜ್ಞತೆಗಳು ಮಾತ್ರ. ನಾನು ತುಂಬಾ ವಿನಮ್ರನಾಗಿದ್ದೇನೆ’ ಎಂದು ರಾಜಮೌಳಿ ಬರೆದಿದ್ದಾರೆ.

ಇದೇ ಪ್ರವಾಸದಲ್ಲಿ ರಾಜಮೌಳಿ ಅವರು ತಮ್ಮ ಮುಂಬರುವ ಚಿತ್ರ ‘ವಾರಣಾಸಿ’ ಸಿನಿಮಾದ ಮೊದಲ ಗ್ಲಿಂಪ್ಸ್ ಅನ್ನು ಆನಿಮೇಟೆಡ್ ಹಬ್ಬದಲ್ಲಿ ಬಿಡುಗಡೆ ಮಾಡಿದ್ದರು. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ವಾರಣಾಸಿ ಚಿತ್ರದ ಬಿಗ್ ಅಪ್ಡೇಟ್ ನೀಡಿದ ರಾಜಮೌಳಿ: ಶೂಟಿಂಗ್ ಮುಗಿಯಲು ಇನ್ನು ಎಷ್ಟು ದಿನ ಬಾಕಿ?

ಕಳೆದ ವರ್ಷ ರಾಜಮೌಳಿ ಅವರು ಈ ಚಿತ್ರದ ಶೀರ್ಷಿಕೆಯನ್ನು ಪ್ರಕಟಿಸಿದ್ದರು. ಅದರಲ್ಲಿ ಮಹೇಶ್ ಬಾಬು ಕೈಯಲ್ಲಿ ತ್ರಿಶೂಲ ಹಿಡಿದು ಎತ್ತಿನ ಮೇಲೆ ಸವಾರಿ ಮಾಡುವ ಲುಕ್ ರಿಲೀಸ್ ಆಗಿತ್ತು. ಈ ಸಿನಿಮಾ 2027 ರ ಏಪ್ರಿಲ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version