ಬೋಲಾಂಗೀರ್, ಜುಲೈ 13: ಯಾರ ಸಾವು ಹೇಗಾಗಬೇಕೆಂದು ದೇವರು ನಿರ್ಧರಿಸಿರುತ್ತಾನೋ ಯಾರಿಗೂ ಗೊತ್ತಿಲ್ಲ. ಕೆಲವೊಮ್ಮೆ ಕಲ್ಲುಬಂಡೆಯೇ ಮೈಮೇಲೆ ಬಿದ್ದರೂ ಅದೃಷ್ಟವಶಾತ್ ಪಾರಾಗಿಬಿಡುತ್ತಾರೆ. ಇನ್ನು ಕೆಲವೊಮ್ಮೆ ತಲೆಗೆ ಮೊಬೈಲ್ (Mobile) ತಾಗಿದರೂ ಸಾವನ್ನಪ್ಪಿಬಿಡುತ್ತಾರೆ! ನಂಬಲು ಕಷ್ಟವಾದರೂ ಇದು ಸತ್ಯ. ಒಡಿಶಾದಲ್ಲಿ ಕೌಟುಂಬಿಕ ಕಲಹದ ವೇಳೆ ಪತ್ನಿ ತನ್ನ ಮೊಬೈಲ್ ಫೋನ್‌ನಿಂದ ಗಂಡನ ತಲೆಗೆ ಹೊಡೆದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಪತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಜಗಳದ ವೇಳೆ ಮೊಬೈಲ್‌ನಿಂದ ಹಲ್ಲೆ:
ಪ್ರಾಥಮಿಕ ವರದಿಗಳ ಪ್ರಕಾರ, ಶನಿವಾರ ದಂಪತಿಯ ನಡುವೆ ತಮ್ಮ ಮನೆಯಲ್ಲಿ ಸಣ್ಣದಾಗಿ ಆರಂಭವಾದ ಕೌಟುಂಬಿಕ ಜಗಳ ತಾರಕಕ್ಕೇರಿತ್ತು. ಈ ತೀವ್ರ ಮಾತಿನ ಚಕಮಕಿಯ ನಡುವೆ, ಕೋಪಗೊಂಡ ಪತ್ನಿ ತನ್ನ ಕೈಯಲ್ಲಿದ್ದ ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಇದರಿಂದಾಗಿ ಪತಿಯ ತಲೆಗೆ ಗಂಭೀರ ಪೆಟ್ಟಾಗಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದರು.
ಗಾಯಗೊಂಡಿದ್ದ ವ್ಯಕ್ತಿಯನ್ನು ಕುಟುಂಬಸ್ಥರು ತಕ್ಷಣವೇ ಬೋಲಾಂಗೀರ್‌ನಲ್ಲಿರುವ ಜಿಲ್ಲಾ ಕೇಂದ್ರ ಆಸ್ಪತ್ರೆಗೆ (DHH) ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದನ್ನು ಗಮನಿಸಿದ ವೈದ್ಯರು, ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದರು. ಆದರೆ, ಆಸ್ಪತ್ರೆಯಿಂದ ಮನೆಗೆ ತಲುಪಿದ ಕೆಲವೇ ದಿನಗಳಲ್ಲಿ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಅವರನ್ನು ಮತ್ತೆ ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವೈದ್ಯರು ಅವರನ್ನು ಉಳಿಸಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ನಡೆಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಘಟನೆಯ ನಂತರ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತ್ನಿ ಮೊಬೈಲ್‌ನಿಂದ ತಲೆಗೆ ಹೊಡೆದ ಆಘಾತದಿಂದಲೇ ಆಂತರಿಕ ರಕ್ತಸ್ರಾವವಾಗಿ ವ್ಯಕ್ತಿ ಮೃತಪಟ್ಟಿದ್ದಾರೆಯೇ ಅಥವಾ ಸಾವಿಗೆ ಬೇರೆನಾದರೂ ಕಾರಣವಿದೆಯೇ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟಿ20 ಟ್ರೋಫಿ ಐದನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಶಿವಮೊಗ್ಗ ಯೋಧಾಸ್ ತಂಡಗಳು ಮುಖಾಮುಖಿಯಾಗಿದ್ದವು. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಬೆಂಗಳೂರು ತಂಡ ಲೀಗ್ ಹಂತದಲ್ಲಿ ಆಡಿದ್ದ 10 ಪಂದ್ಯಗಳಲ್ಲಿ 9 ರಲ್ಲಿ ಗೆದ್ದು ಫೈನಲ್ಗೇರಿತ್ತು. ಇತ್ತ ಶಿವಮೊಗ್ಗ ತಂಡ ಕೇವಲ 5 ಪಂದ್ಯಗಳನ್ನು ಗೆದ್ದು ಆ ಬಳಿಕ ಪ್ಲೇಆಫ್ನಲ್ಲಿ ಮಂಗಳೂರು ತಂಡವನ್ನು ಮಣಿಸಿ ಫೈನಲ್ಗೇರಿತ್ತು. ಶಿವಮೊಗ್ಗ ತಂಡಕ್ಕೆ ಹೋಲಿಸಿದರೆ, ಬೆಂಗಳೂರು ತಂಡ ಬಲಿಷ್ಠವಾಗಿ ಕಾಣುತ್ತಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ತಂಡದ ಸಾಂಘಿಕ ಪ್ರದರ್ಶನ ಬೆಂಗಳೂರು ತಂಡದ ಚಾಂಪಿಯನ್ ಕನಸನ್ನು ಭಗ್ನಗೊಳಿಸಿತು. ಬೆಂಗಳೂರು ತಂಡದ ಪರ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಏಕಾಂಗಿ ಹೋರಾಟ ನೀಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಇತರರಿಂದ ನೆರವು ಸಿಗಲಿಲ್ಲ.
ಸಮಿತ್ ದ್ರಾವಿಡ್ ಏಕಾಂಗಿ ಹೋರಾಟ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 185 ರನ್ ಗಳಿಸಿತು. ತಂಡದ ಪರ ಅತ್ಯಧಿಕ ಇನ್ನಿಂಗ್ಸ್ ಆಡಿದ ಸಮಿತ್ ದ್ರಾವಿಡ್ 37 ಎಸೆತಗಳಲ್ಲಿ 37 ರನ್ ಗಳಿಸುವುದರ ಜೊತೆಗೆ ನಾಯಕ ಶುಭಾಂಗ್ ಹೆಗ್ಡೆ (31) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 56 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಕೊನೆಯಲ್ಲಿ ವಾಹಿದ್ ಫೈಜಾನ್ ಖಾನ್ 29 ರನ್ ಹಾಗೂ ರೋಹನ್ ನವೀನ್ 25 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ತಂಡಕ್ಕೆ ಉತ್ತಮ ಆರಂಭ ಸಿಕ್ಕಿದ್ದರೆ, ತಂಡದ ಮೊತ್ತ 200 ರನ್‌ಗಳ ಗಡಿಯನ್ನು ಸುಲಭವಾಗಿ ದಾಟುತ್ತಿತ್ತು.
ಲುವ್ನಿತ್ ಸಿಸೋಡಿಯಾ 87 ರನ್
ಈ ಗುರಿ ಬೆನ್ನಟ್ಟಿದ ಶಿವಮೊಗ್ಗ ತಂಡ ಕೂಡ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಕೊನೆಯ ಓವರ್ನಲ್ಲಿ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ತಂಡದ ಪರ ನಾಯಕ ಲುವ್ನಿತ್ ಸಿಸೋಡಿಯಾ 9 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 87 ರನ್ ಗಳಿಸಿದರೆ, ಮೊದಲಿಗೆ ನವೀನ್ ಎಂಜಿ ಅವರೊಂದಿಗೆ 68 ರನ್‌ಗಳ ಜೊತೆಯಾಟ, ಆ ನಂತರ ಅನೀಶ್ ಕೆವಿ ಅವರೊಂದಿಗೆ ಕೇವಲ 22 ಎಸೆತಗಳಲ್ಲಿ 53 ರನ್‌ಗಳನ್ನು ಗಳಿಸಿ ಶಿವಮೊಗ್ಗದ ಗೆಲುವನ್ನು ಖಚಿತಪಡಿಸಿದರು. ಕೊನೆಯಲ್ಲಿ, ಅನೀಶ್ ಕೆವಿ 19 ಎಸೆತಗಳಲ್ಲಿ 38 ರನ್ ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
4 ವಿಕೆಟ್ ಕಬಳಿಸಿದ ಸಮಿತ್ ದ್ರಾವಿಡ್
ಈ ಪಂದ್ಯದಲ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಮಿಂಚಿದ ಸಮಿತ್ ದ್ರಾವಿಡ್ 3.4 ಓವರ್ಗಳನ್ನು ಬೌಲ್ ಮಾಡಿ 36 ರನ್‌ಗಳನ್ನು ಬಿಟ್ಟುಕೊಟ್ಟು ಅತ್ಯಧಿಕ 4 ವಿಕೆಟ್‌ಗಳನ್ನು ಕಬಳಿಸಿದರು. ಆದರೆ ಅವರಿಗೆ ಇತರರಿಂದ ಬೆಂಬಲ ಸಿಗಲಿಲ್ಲ. ಇದರ ಪರಿಣಾಮವಾಗಿ ಬೆಂಗಳೂರು ತಂಡ ಕೊನೆಯ ಓವರ್ನಲ್ಲಿ ಸೋಲೊಪ್ಪಿಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಾಮರಾಜನಗರ, ಜುಲೈ 13: ವಿಪಕ್ಷ ನಾಯಕ ಆರ್. ಅಶೋಕ್ಗೆ ರೈತರು ಘೇರಾವ್ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಕೇವಲ SIR ಕುರಿತು ಮಾತನಾಡಲು ಚಾಮರಾಜನಗರಕ್ಕೆ ಬಂದಿದ್ದೀರಿ. ಆದ್ರೆ ಮಳೆ ಬಾರದ ಬಗ್ಗೆ ಜಿಲ್ಲೆಯಲ್ಲಿ ಬರ ಅಧ್ಯಯನ ಮಾಡಿಲ್ಲ. ವಿಪಕ್ಷ ನಾಯಕರಾಗಿ ಸರ್ಕಾರಕ್ಕೆ ಕಣ್ಣು ತೆರೆಸುವ ಕೆಲಸ ಮಾಡ್ಬೇಕು. ಬಿಜೆಪಿ ಸಂಸದರು ಬರ ಕುರಿತು ಕೇಂದ್ರಕ್ಕೆ ಮಾಹಿತಿ ನೀಡಬೇಕು ಎಂದು ಅಶೋಕ್ ವಾಹನ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮನವಿಗೆ ವಿರೋಧ ಪಕ್ಷದ ನಾಯಕರು ಕೂಡ ಸ್ಪಂದಿಸಿದ್ದಾರೆ.
ರಾಮನಗರ, ಜುಲೈ 13: ಬಿಡದಿ ಟೌನ್‌ಶಿಪ್ (Bidadi Township) ಯೋಜನೆಗೆ ಈಗಾಗಲೇ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳು ಮಾಡಲಾಗುತ್ತಿದೆ. ರೈತರ ಈ ತೀವ್ರ ವಿರೋಧದ ನಡುವೆಯೂ ಇಂದು ಜಂಟಿ ಅಳತೆ ಕಾರ್ಯಕ್ಕೆ (ಜೆಎಂಸಿ) ಮುಂದಾದ ಅಧಿಕಾರಿಗಳ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ (ramanagara) ತಾಲೂಕಿನ ಮಂಡಲಹಳ್ಳಿ ಗ್ರಾಮಸ್ಥರು ಸಿಡಿದೆದಿದ್ದಾರೆ. ಸರ್ವೆ ಕಾರ್ಯ ಮಾಡಲು ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆಯಿಂದ ಹೊಡೆದಿದ್ದಾರೆ. ಅಷ್ಟೇ ಅಲ್ಲದೆ ಎರಡು ಕಾರುಗಳನ್ನು ಜಖಂಗೊಳಿಸಿದ್ದಾರೆ.
ನಡೆದಿದ್ದೇನು?
ಬಿಡದಿ ಟೌನ್‌ಶಿಪ್ ಯೋಜನೆ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಯೋಜನೆ ವಿರೋಧಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹೀಗಿರುವಾಗ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ಇಂದು ಅಧಿಕಾರಿಗಳು ಸರ್ವೆಗೆ ಆಗಮಿಸಿದ್ದಾರೆ. ಇದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದ್ದು, ದೊಡ್ಡ ಹೈಡ್ರಾಮವೇ ನಡೆದಿದೆ.
ಅಧಿಕಾರಿಗಳಿಗೆ ಮಹಿಳೆಯರು ಪೊರಕೆ ಸೇವೆ
ವಿರೋಧದ ನಡುವೆಯೂ ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆ ಸೇವೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಟ್ಟಿಗೆಯಿಂದ ಹೊಡೆದು ಎರಡು ಕಾರುಗಳನ್ನ ಹಾನಿಗೊಳಿಸಿದ್ದಾರೆ. ‘ಯಾವುದೇ ಕಾರಣಕ್ಕೂ ಸರ್ವೆ ಕಾರ್ಯ ನಡೆಸಬಾರದು’ ಎಂದು ಪಟ್ಟುಹಿಡಿಯಲಾಗಿದ್ದು, ಈ ವೇಳೆ ರೈತ ಮುಖಂಡರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ಕೂಡ ನಡೆದಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು, ಅಧಿಕಾರಿಗಳನ್ನು ತಮ್ಮ ಭದ್ರತೆಯಲ್ಲಿ ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಕೆಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಂಡಲಹಳ್ಳಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಟೌನ್‌ಶಿಪ್ ಪರ-ವಿರೋಧದ ಎರಡೂ ಗುಂಪುಗಳು ಮುಖಾಮುಖಿ
ಇನ್ನು ಇತ್ತೀಚೆಗೆ ಟೌನ್‌ಶಿಪ್ ಪರ-ವಿರೋಧದ ಎರಡೂ ಗುಂಪುಗಳು ಮುಖಾಮುಖಿಯಾಗಿದ್ದು ಈ ವೇಳೆ ಕೂಡ ಹೈಡ್ರಾಮಾವೇ ನಡೆದಿತ್ತು. ಟೌನ್‌ಶಿಪ್ ಯೋಜನೆ ವಿರೋಧಿ ಪ್ರತಿಭಟನೆಗೆ ಆಗಮಿಸ್ತಿದ್ದ ರೈತರ ಬಸ್, ಕಾರುಗಳನ್ನು ಯೋಜನೆ ಪರ ಇರುವ ರೈತರು ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಹೊರ ಜಿಲ್ಲೆಗಳಿಂದ ರೈತರನ್ನು ಕರೆತಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ 2 ಗುಂಪಿನವರನ್ನ ಸಮಾಧಾನಪಡಿಸಿದ್ದರು. ಹೀಗಾಗಿ ರಾಮನಗರ ತಾಲೂಕಿನ ಬೈರಮಂಗಲದಲ್ಲಿ ಇಡೀ ದಿನ ಬಿಗುವಿನ ವಾತವರಣ ನಿರ್ಮಾಣವಾಗಿತ್ತು.
ಬೆಂಗಳೂರು, ಜು.13: ರಾಜ್ಯ ರಾಜಧಾನಿ ಮತ್ತು ಹೈದರಾಬಾದ್ ನಡುವಿನ ಸಂಪರ್ಕವನ್ನು ಮತ್ತಷ್ಟು ವೇಗಗೊಳಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೇವಲ 8 ಗಂಟೆ 15 ನಿಮಿಷಗಳಲ್ಲಿ ಸುಮಾರು 610 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ದೇಶದ 29ನೇ ವಂದೇ ಭಾರತ್ ಸೇವೆಯಾಗಿರುವ ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 24, 2023 ರಂದು ಚಾಲನೆ ನೀಡಿದ್ದರು. ಈ ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ರೈಲು ಬುಧವಾರ ಹೊರತುಪಡಿಸಿ ವಾರದ ಉಳಿದ ಆರೂ ದಿನಗಳೂ ಸೇವೆ ಒದಗಿಸುತ್ತದೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ (ರೈಲು ಸಂಖ್ಯೆ: 20703)
ಹೊರಡುವ ಸಮಯ: ಕಾಚಿಗುಡದಿಂದ (Kacheguda) ಮುಂಜಾನೆ 5:45 ಕ್ಕೆ ಹೊರಡುತ್ತದೆ.
ತಲುಪುವ ಸಮಯ: ಯಶವಂತಪುರ ಜಂಕ್ಷನ್‌ಗೆ (Yesvantpur) ಅಂದೇ ಮಧ್ಯಾಹ್ನ 2:00 ಕ್ಕೆ ತಲುಪುತ್ತದೆ.
ಬೆಂಗಳೂರಿನಿಂದ ಹೈದರಾಬಾದ್‌ಗೆ (ರೈಲು ಸಂಖ್ಯೆ: 20704)
ಹೊರಡುವ ಸಮಯ: ಯಶವಂತಪುರದಿಂದ ಮಧ್ಯಾಹ್ನ 2:45 ಕ್ಕೆ ಹೊರಡುತ್ತದೆ.
ತಲುಪುವ ಸಮಯ: ಕಾಚಿಗುಡ ನಿಲ್ದಾಣಕ್ಕೆ ಅಂದೇ ರಾತ್ರಿ 11:00 ಕ್ಕೆ ತಲುಪುತ್ತದೆ.
ಪ್ರಮುಖ ನಿಲ್ದಾಣಗಳು:
ಈ ರೈಲು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಮಹಬೂಬ್‌ನಗರ, ಕರ್ನೂಲ್ ಸಿಟ, ಅನಂತಪುರ, ಧರ್ಮಾವರಂ ಜಂಕ್ಷನ್, ಹಿಂದೂಪುರ ಒಟ್ಟು ಐದು ನಿಲ್ದಾಣಗಳಲ್ಲಿ ಇದು ನಿಲ್ಲುತ್ತದೆ. ನೈಋತ್ಯ ರೈಲ್ವೆಯು ಡಿಸೆಂಬರ್ 2025 ರ ಕೊನೆಯಲ್ಲಿ ಹಿಂದೂಪುರದಲ್ಲಿ 2 ನಿಮಿಷಗಳ ಪ್ರಾಯೋಗಿಕ ನಿಲ್ದಾಣವನ್ನು ಪರಿಚಯಿಸಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಹೈದರಾಬಾದ್ ಕಡೆಗೆ ಹೋಗುವ ರೈಲು ಮಧ್ಯಾಹ್ನ 12:17 ಕ್ಕೆ ಹಿಂದೂಪುರ ತಲುಪಿ 12:19 ಕ್ಕೆ ಅಲ್ಲಿಂದ ಹೊರಡುತ್ತದೆ.
ಪ್ರಯಾಣಿಕರ ಭಾರಿ ಬೇಡಿಕೆಯ ಹಿನ್ನೆಲೆಯಲ್ಲಿ, ಜುಲೈ 10, 2025 ರಿಂದ ಜಾರಿಗೆ ಬರುವಂತೆ ಈ ರೈಲಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗಿದೆ. ಮೊದಲು ಕೇವಲ 8 ಬೋಗಿಗಳನ್ನು ಹೊಂದಿದ್ದ ಈ ರೈಲಿಗೆ ಈಗ 16 ಬೋಗಿಗಳ ಅತ್ಯಾಧುನಿಕ ರೇಕ್ ಅಳವಡಿಸಲಾಗಿದೆ. ಇದರಲ್ಲಿ ಎರಡು ವರ್ಗದ ಆಸನ ವ್ಯವಸ್ಥೆಗಳಿವೆ. ಒಂದು ಎಸಿ ಚೇರ್ ಕಾರ್, ಇನ್ನೊಂದು ಎಕ್ಸಿಕ್ಯೂಟಿವ್ ಚೇರ್ ಕಾರ್. ಕಾಚಿಗುಡದಿಂದ ಯಶವಂತಪುರ ನಡುವಿನ ಪೂರ್ಣ ಪ್ರಯಾಣಕ್ಕೆ ಒಂದು ಬದಿಯ ಟಿಕೆಟ್ ದರ ಎಸಿ ಚೇರ್ ಕಾರ್ಗೆ 1600 ರೂ. ಎಕ್ಸಿಕ್ಯೂಟಿವ್ ಚೇರ್ ಕಾರ್ 2,915 ರೂ. ಆಗುತ್ತದೆ ಎಂದು ಹೇಳಲಾಗಿದೆ.
ದಾವಣಗೆರೆ, ಜುಲೈ 13: ಪೋಕ್ಸೋ ಕೇಸ್ ಸಂಬಂಧ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗೆ ಕೊಂಚ ರಿಲೀಫ್ ಸಿಕ್ಕಿದ್ದು, ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕೆಲವು ಷರತ್ತು ವಿಧಿಸಿ ನ್ಯಾ. ಶ್ರೀರಾಮ ನಾರಾಯಣ ಹೆಗಡೆ ಈ ಸಂಬಂಧ ಆದೇಶ ನೀಡಿದ್ದಾರೆ. ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ರದ್ದು ಮಾಡಿ ರೆಗ್ಯುಲರ್ ಬೇಲ್ ಪಡೆಯುವಂತೆ ಜೂ.25ರಂದು ಸ್ವಾಮೀಜಿಗೆ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆ ಜೂನ್ 27ರಂದು ಜಿಲ್ಲಾ ವಿಶೇಷ ಪೋಕ್ಸೋ ಕೋರ್ಟ್ಗೆ ವಚನಾನಂದ ಶ್ರೀ ಅಜರ್ಜ ಸಲ್ಲಿಸಿದ್ದರು. ಎರಡು ಕಡೆಯವರ ವಾದವನ್ನು ಈಗಾಗಲೇ ಆಲಿಸಿದ್ದ ನ್ಯಾಯಾಲಯ ಸ್ವಾಮೀಜಿಗೆ ರೆಗ್ಯುಲರ್ ಬೇಲ್ ನೀಡಿದೆ.
ಈಗಾಗಲೇ ವಚನಾನಂದ ಶ್ರೀ ವಿರುದ್ಧ 7 ಮಕ್ಕಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದ್ದು, ಮಕ್ಕಳನ್ನು ಸ್ನಾನದ ಕೋಣೆ ಹಾಗೂ ಮಲಗುವ ರೂಂಗೆ ಕರೆದು ಲೈಂಗಿಕ ಕಿರುಕುಳ ನೀಡಿರುವ ಆರೋಪ ಸ್ವಾಮೀಜಿ ಮೇಲಿದೆ. ಸಂತ್ರಸ್ತರ ಪರ ವಕೀಲ ರಮೇಶ್ ಕಲಾಲ್ ಮತ್ತು ವಚನಾನಂದಶ್ರೀ ಪರ ವಕೀಲ ಎಸ್.ವಿ.ಪಾಟೀಲ್ ವಾದ ಮಂಡನೆ ಮಾಡಿದ್ದರು. ಆ ಬಳಿಕ ವಚನಾನಂದಶ್ರೀಗೆ ಜಾಮೀನು ಸಂಬಂಧ ಅಂತಿಮ ತೀರ್ಪನ್ನು ಇಂದಿಗೆ ಕಾಯ್ದಿರಿಸಿರೋದಾಗಿ ಜುಲೈ 6ರಂದು ವಿಶೇಷ ಪೋಕ್ಸೋ ಕೋರ್ಟ್ ಹೇಳಿತ್ತು.
ಪೋಕ್ಸೋ ಪ್ರಕರಣಕ್ಕೆ ರೀಕ್ಷಣಾ ಜಾಮೀನು ಪಡೆದಿದ್ದ ವಚನಾನಂದ ಸ್ವಾಮೀಜಿಗೆ ಹೈಕೋರ್ಟ್ ಈ ಹಿಂದೆ ಬಿಗ್ ಶಾಕ್ ಕೊಟ್ಟಿತ್ತು. ಪ್ರಕರಣ ದಾಖಲಾಗುವ ಮುನ್ನವೇ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದನ್ನು ಪ್ರಶ್ನಿಸಿ ಬಾಲಕನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೇಸ್ ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ನೀಡಿದ್ದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ ಶ್ರೀಗಳ ನಿರೀಕ್ಷಣಾ ಜಾಮೀನು ರದ್ದುಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿತ್ತು. ಹೀಗಿದ್ದರೂ ರೆಗ್ಯುಲರ್ ಬೇಲ್ಗೆ ಅರ್ಜಿ ಸಲ್ಲಿಸಲು ಸ್ವಾಮೀಜಿಗೆ 3 ವಾರಗಳ ಕಾಲಾವಕಾಶ ನೀಡಿ, ಅಲ್ಲಿಯವರೆಗೂ ನಿರೀಕ್ಷಣಾ ಜಾಮೀನಿನ ರಕ್ಷಣೆ ಮುಂದುವರಿಕೆಗೆ ಕೋರ್ಟ್ ಸೂಚಿಸಿತ್ತು.
ಟಾಟಾ ಮೋಟರ್ಸ್ ಉದ್ಯೋಗಿಗಳುImage Credit source: Tata Group
ಬೆಂಗಳೂರು, ಜುಲೈ 13: ಭಾರತೀಯ ಯುವ ಪೀಳಿಗೆಯ ಸಾಧನೆ ಮತ್ತು ಆಕಾಂಕ್ಷೆಗಳಿಗೆ ರೆಕ್ಕೆ ನೀಡುವ ನಿಟ್ಟಿನಲ್ಲಿ ಪ್ರತಿಷ್ಠಿತ ಟಾಟಾ ಮೋಟಾರ್ಸ್ (Tata Motors) ಸಂಸ್ಥೆಯ ‘ಕೌಶಲ್ಯ ಯೋಜನೆ’ ಭರ್ಜರಿ ಯಶಸ್ಸು ಗಳಿಸಿದೆ. ವಿಶ್ವ ಯುವ ಕೌಶಲ ದಿನದ ಸಂದರ್ಭದಲ್ಲಿ ಸಂಸ್ಥೆಯು ಈ ಮಹತ್ವದ ಮೈಲಿಗಲ್ಲನ್ನು ಪ್ರಕಟಿಸಿದೆ. ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾದ ಈ ಯೋಜನೆಯು, ಉದ್ಯಮ ರಂಗದ ನೇರ ನೇತೃತ್ವದಲ್ಲಿ ದೇಶದಲ್ಲಿ ನಡೆಯುತ್ತಿರುವ ಅತಿ ದೊಡ್ಡ ಕೌಶಲಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಯೋಜನೆಯ ಮುಖ್ಯಾಂಶಗಳು:
ಇದುವರೆಗೆ 23,000ಕ್ಕೂ ಹೆಚ್ಚು ಯುವಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ತರಬೇತಿ ಮುಗಿಸಿದ 5,000ಕ್ಕೂ ಹೆಚ್ಚು ಪದವೀಧರರಿಗೆ 100% ಉದ್ಯೋಗ ಕಲ್ಪಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಉದ್ಯೋಗಾವಕಾಶಗಳನ್ನು ಒದಗಿಸಲಾಗಿದೆ.
ತರಬೇತಿ ಪಡೆದವರಲ್ಲಿ ಶೇ. 21 ರಷ್ಟು ಮಹಿಳೆಯರು ಹಾಗೂ ಶೇ. 25 ರಷ್ಟು ಮಂದಿ ಸಮಾಜದ ಹಿಂದುಳಿದ ಮತ್ತು ವಂಚಿತ ವರ್ಗಗಳಿಗೆ ಸೇರಿದವರಾಗಿದ್ದಾರೆ.
ಭವಿಷ್ಯದ ತಂತ್ರಜ್ಞಾನಕ್ಕೆ ಪೂರಕ ತರಬೇತಿ
2021ರಲ್ಲಿ ಆರಂಭಗೊಂಡ ಈ ಕೌಶಲ್ಯ ಯೋಜನೆಯು ಪ್ರಸ್ತುತ ಪುಣೆ, ಜಮ್‌ಶೆಡ್‌ಪುರ, ಲಕ್ನೋ, ಪಂತ್‌ನಗರ, ಸಾನಂದ್ ಮತ್ತು ಕರ್ನಾಟಕದ ಧಾರವಾಡದಲ್ಲಿರುವ ಟಾಟಾ ಮೋಟಾರ್ಸ್ ನ ಉತ್ಪಾದನಾ ಘಟಕಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಟಾಟಾ ಮೋಟರ್ಸ್ ಉದ್ಯೋಗಿಗಳು
ಈ ಯೋಜನೆಯಡಿ ಯುವಜನತೆಗೆ ಸಂಪೂರ್ಣ ಪ್ರಾಯೋಜಿತ ಮೆಕಾಟ್ರಾನಿಕ್ಸ್ ಡಿಪ್ಲೊಮಾವನ್ನು ‘ಕಲಿಯಿರಿ ಮತ್ತು ಗಳಿಸಿ’ (Earn While You Learn) ಮಾದರಿಯಲ್ಲಿ ನೀಡಲಾಗುತ್ತದೆ. ಇಲ್ಲಿ ತರಬೇತಿ ಪಡೆಯುವವರು ಈ ಕೆಳಗಿನ ಆಧುನಿಕ ತಂತ್ರಜ್ಞಾನಗಳಲ್ಲಿ ವಿಶೇಷ ಕೌಶಲಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ:
ಆಟೊಮೊಬೈಲ್ ಎಂಜಿನಿಯರಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ
ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕಾಟ್ರಾನಿಕ್ಸ್
ಆಟೊಮೇಷನ್, ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮತ್ತು ಇಂಡಸ್ಟ್ರಿ 4.0
ಪ್ರಮುಖ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ
ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಟಾಟಾ ಮೋಟಾರ್ಸ್ ನ ಡೀಲರ್‌ಶಿಪ್‌ಗಳು, ವೆಂಡರ್‌ಗಳು, ಟಾಟಾ ಗ್ರೂಪ್‌ನ ಇತರ ಕಂಪನಿಗಳು ಸೇರಿದಂತೆ ದೇಶದ ಪ್ರಖ್ಯಾತ ಸಂಸ್ಥೆಗಳಾದ ಟಾಟಾ ಸ್ಟೀಲ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಜೈಡಸ್, ಜೆಎಸ್‌ಡಬ್ಲ್ಯೂ ಗ್ರೀಂಟೆಕ್, ಸುಬ್ರೋಸ್, ಸ್ಪಿನ್ನಿ ಮತ್ತು ವಿಪ್ರೋ ಕಂಪನಿಗಳಲ್ಲಿ ಉದ್ಯೋಗ ಸಿಕ್ಕಿದೆ. ಇದರ ಜೊತೆಗೆ, 50 ಪದವೀಧರರು ಸ್ಲೋವಾಕಿಯಾದ ನಿಟ್ರಾದಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್ (JLR) ಘಟಕದಲ್ಲಿ ಅಂತರರಾಷ್ಟ್ರೀಯ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಟಾಟಾ ಮೋಟರ್ಸ್ ಉದ್ಯೋಗಿ
ಕೌಶಲ್ಯವಂತ ಯುವಕರಿಗೆ ಉತ್ತಮ ವೃತ್ತಿ ಅವಕಾಶ: ಟಾಟಾ ಮೋಟರ್ಸ್ ಅಧಿಕಾರಿ
“ಭಾರತದ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆಯು ಇಲ್ಲಿನ ಉದ್ಯೋಗಿಗಳ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆ. ಕೌಶಲ್ಯ ಯೋಜನೆಯ ಮೂಲಕ ನಾವು ತಾಂತ್ರಿಕ ಶಿಕ್ಷಣ ಮತ್ತು ನೈಜ ಕಾರ್ಯಾನುಭವವನ್ನು ಒಟ್ಟುಗೂಡಿಸಿ, ಮುಂದಿನ ಪೀಳಿಗೆಯ ನುರಿತ ವೃತ್ತಿಪರರನ್ನು ರೂಪಿಸುತ್ತಿದ್ದೇವೆ. ವೇಗವಾಗಿ ಬದಲಾಗುತ್ತಿರುವ ಆಟೊಮೊಬೈಲ್ ಉದ್ಯಮಕ್ಕೆ ಅಗತ್ಯವಿರುವ ನುರಿತ ಪ್ರತಿಭೆಗಳನ್ನು ಒದಗಿಸುವ ಜೊತೆಗೆ, ಯುವಕರು ಅರ್ಥಪೂರ್ಣ ವೃತ್ತಿಜೀವನವನ್ನು ಕಂಡುಕೊಳ್ಳಲು ಈ ಯೋಜನೆ ನೆರವಾಗುತ್ತಿದೆ. ಶೈಕ್ಷಣಿಕ ವಲಯ ಮತ್ತು ಉದ್ಯಮ ರಂಗದ ನಡುವಿನ ಈ ಸಹಭಾಗಿತ್ವವನ್ನು ನಾವು ಮತ್ತಷ್ಟು ವಿಸ್ತರಿಸಲಿದ್ದೇವೆ” ಎಂದು ಟಾಟಾ ಮೋಟರ್ಸ್ನ ಮುಖ್ಯ ಎಚ್ ಆರ್ ಆಫೀಸರ್ ಸೀತಾರಾಮ್ ಕಂಡಿ ಹೇಳುತ್ತಾರೆ.
ಟಾಟಾ ಮೋಟರ್ಸ್ ಯುವ ಸಾಧಕರ ಯಶೋಗಾಥೆ
“ಮಹಾರಾಷ್ಟ್ರದ ಗ್ರಾಮೀಣ ಭಾಗದ ಬುಡಕಟ್ಟು ಹಳ್ಳಿಯೊಂದರಿಂದ ಬಂದ ನನಗೆ, ಆಟೋಮೊಬೈಲ್ ಉದ್ಯಮದಲ್ಲಿ ಜಾಗತಿಕ ಮಟ್ಟದ ವೃತ್ತಿಜೀವನವನ್ನು ರೂಪಿಸಿಕೊಳ್ಳುವುದು ಒಂದು ಕಾಲದಲ್ಲಿ ಅಸಾಧ್ಯದ ಮಾತಾಗಿತ್ತು. ಆದರೆ ಟಾಟಾ ಮೋಟಾರ್ಸ್ ನ ಕೌಶಲ್ಯ ಯೋಜನೆಯು ನನಗೆ ಕೌಶಲ ಮತ್ತು ಆತ್ಮವಿಶ್ವಾಸ ನೀಡಿತು. ಇಂದು ನನ್ನ ಇಡೀ ಹಳ್ಳಿಯಲ್ಲೇ ಪಾಸ್‌ಪೋರ್ಟ್ ಪಡೆದ ಹಾಗೂ ವಿದೇಶದಲ್ಲಿ ವೃತ್ತಿಜೀವನ ಆರಂಭಿಸಿದ ಮೊದಲ ಯುವತಿ ನಾನೇ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ” ಎಂದು ಉದ್ಯೋಗಿ ಅನಿತಾ ಕೆಂಡೆ ಬೆಥೇಕರ್ ತಿಳಿಸುತ್ತಾರೆ. ಇವರು ಟಾಟಾ ಗ್ರೂಪ್ಗೆ ಸೇರಿದ, ಮತ್ತು ಸ್ಲೊವಾಕಿಯಾದಲ್ಲಿರುವ ಜೆಎಲ್ಆರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಬುಡಕಟ್ಟು ಯುವತಿ.
ಟಾಟಾ ಮೋಟರ್ಸ್ ಉದ್ಯೋಗಿ
ಟಾಟಾ ಮೋಟರ್ಸ್ನ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಆಗಿರುವ ಸೋಹಮ್ ರವೀಂದ್ರ ಮನ್ಮೋಡೆ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. “ಸಣ್ಣ ಪಟ್ಟಣದ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ನನಗೆ ಆಟೊಮೊಬೈಲ್ ರಂಗ ಒಂದು ದೂರದ ಕನಸಾಗಿತ್ತು. ಆದರೆ ಕೌಶಲ್ಯ ಯೋಜನೆಯು ಒಂದೇ ಸಮಯದಲ್ಲಿ ಕಲಿಯಲು, ಗಳಿಸಲು ಮತ್ತು ನೈಜ ಉದ್ಯಮದ ಅನುಭವವನ್ನು ಪಡೆಯಲು ನೆರವಾಗುವ ಮೂಲಕ ನನ್ನ ಬದುಕನ್ನೇ ಬದಲಾಯಿಸಿತು. ಇಂದು ನನ್ನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಲು ನನಗೆ ಹೆಮ್ಮೆಯಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ 5,000ಕ್ಕೂ ಹೆಚ್ಚು ತರಬೇತಿ ನಿರತರನ್ನು ಉದ್ಯಮ ರಂಗಕ್ಕೆ ಸಿದ್ಧಗೊಳಿಸುವ ಗುರಿ ಹೊಂದಿರುವ ಕೌಶಲ್ಯ ಯೋಜನೆಯು, ಭಾರತದ ಆಟೊಮೊಬೈಲ್ ಮತ್ತು ಉತ್ಪಾದನಾ ವಲಯಕ್ಕೆ ನಿರಂತರವಾಗಿ ನುರಿತ ಪ್ರತಿಭೆಗಳನ್ನು ಒದಗಿಸುತ್ತಿದೆ. ಇಡೀ ವಾಹನ ಉದ್ಯಮವು ಇಲೆಕ್ಟ್ರಿಕ್ (EV) ಮತ್ತು ಆಧುನಿಕ ಸಾಫ್ಟ್‌ವೇರ್ ತಂತ್ರಜ್ಞಾನದತ್ತ ಮುಖ ಮಾಡುತ್ತಿರುವ ಈ ಸಂದರ್ಭದಲ್ಲಿ, ಯುವಕರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಭಾರತದ ಕೈಗಾರಿಕಾ ಪ್ರಗತಿಗೆ ಕೊಡುಗೆ ನೀಡಲು ಟಾಟಾ ಮೋಟಾರ್ಸ್ ಬದ್ಧವಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಇದೇ ಜುಲೈ 14 ರಿಂದ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯಕ್ಕೆ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನ ಆತಿಥ್ಯವಹಿಸುತ್ತಿದೆ. ಈ ಪಂದ್ಯದೊಂದಿಗೆ ಟೀಂ ಇಂಡಿಯಾದ ಹಲವು ದಿಗ್ಗಜ ಆಟಗಾರರು ಏಕದಿನ ಕ್ರಿಕೆಟ್ಗೆ ಮರಳುತ್ತಿದ್ದಾರೆ. ವಿಶೇಷವೆಂದರೆ ಟೀಂ ಇಂಡಿಯಾದ ಈ ಮೂವರು ಅನುಭವಿ ಆಟಗಾರರು ಒಟ್ಟಿಗೆ ಆಡಿ 2ವರ್ಷಕ್ಕೂ ಹೆಚ್ಚು ಸಮಯವಾಗಿತ್ತು. ಇದೀಗ ಈ ಮೂವರು ಒಟ್ಟಿಗೆ ಆಡುವುದನ್ನು ಕಾಣಬಹುದಾಗಿದೆ (PC-PTI).
ಇಂಗ್ಲೆಂಡ್ ವಿರುದ್ಧದ ಈ ಏಕದಿನ ಸರಣಿಗೆ 15 ಸದಸ್ಯರ ಭಾರತ ಏಕದಿನ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ನಾಯಕತ್ವ ಎಂದಿನಂತೆ ಶುಭ್ಮನ್ ಗಿಲ್ ಕೈಯಲಿದೆ. ಉಳಿದಂತೆ ಈ ತಂಡದಲ್ಲಿ ಅನುಭವಿಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 967 ದಿನಗಳ ನಂತರ ಅಂದರೆ 32 ತಿಂಗಳುಗಳ ನಂತರ ಒಟ್ಟಿಗೆ ಆಡಲಿದ್ದಾರೆ (PC-PTI).
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಕೊನೆಯದಾಗಿ ನವೆಂಬರ್ 19, 2023 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಒಟ್ಟಿಗೆ ಆಡಿದ್ದರು. ಆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಭಾರತವನ್ನು ಸೋಲಿಸಿ ಚಾಂಪಿಯನ್ ಆಯಿತು. ಆ ಪಂದ್ಯದ ಬಳಿಕ ಈ ಮೂವರು ಒಟ್ಟಿಗೆ ಏಕದಿನ ಪಂದ್ಯವನ್ನು ಆಡಿರಲಿಲ್ಲ (PC-PTI).
2023 ರ ಏಕದಿನ ವಿಶ್ವಕಪ್ ನಂತರ ಈ ಮೂವರು ಏಕದಿನ ಪಂದ್ಯಗಳಲ್ಲಿ ಒಟ್ಟಿಗೆ ಆಡದಿರಲು ಕಾರಣ ಕೆಲವೊಮ್ಮೆ ಗಾಯ ಮತ್ತು ಕೆಲವೊಮ್ಮೆ ಕೆಲಸದ ಹೊರೆ ನಿರ್ವಹಣೆ. ಇದೀಗ 967 ದಿನಗಳ ನಂತರ, ಈ ಮೂವರು ಮತ್ತೊಮ್ಮೆ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಡುವುದನ್ನು ಕಾಣಬಹುದು. ಈ ಮೂವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದರೆ, ಟೀಂ ಇಂಡಿಯಾ ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಬಹುದಾಗಿದೆ (PC-PTI).
ಅಯೋಧ್ಯೆ, ಜುಲೈ 13: ಅಯೋಧ್ಯೆ ರಾಮ ಮಂದಿರ ದೇಣಿಗೆ ಅಕ್ರಮದ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಮ ಮಂದಿರ ಟ್ರಸ್ಟ್, ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (SIT) ನಡೆಸಿರುವ ತನಿಖೆಯ ಪ್ರಗತಿ ವರದಿಯನ್ನು ಒಂದು ವಾರದೊಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿದಾರರು ತನಿಖಾ ವರದಿಯನ್ನು ನೋಡಲು ಬಯಸಿದ್ದು, ಈ ಹಿನ್ನೆಲೆಯಲ್ಲಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸೂಚಿಸಲಾಗಿದೆ.
ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಲು ಸಿದ್ಧ ಎಂದು ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿದೆ. ಈ ಮಧ್ಯೆ, ಎಸ್ಐಟಿ ಇದುವರೆಗೆ ಎಷ್ಟು ಜನರ ವಿಚಾರಣೆ ನಡೆಸಿದೆ ಮತ್ತು ಏನು ಕಂಡುಕೊಂಡಿದೆ ಎಂಬ ಸಂಪೂರ್ಣ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಕೊಲ್ಕತ್ತಾ, ಜುಲೈ 13: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಬಿಕ್ಕಟ್ಟು ಎದುರಾಗಿದೆ. ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಮಸೀದಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿರುವ ಕ್ರಮ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆದರೆ, ಸರ್ಕಾರದ ಈ ನಿರ್ಧಾರವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಏನಿದು ಮಸೀದಿ ವಿವಾದ?:
ಕೊಲ್ಕತ್ತಾ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಬರುವ ಮಸೀದಿಗೆ ಹೊರಗಿನ ಸಾರ್ವಜನಿಕರು ಮುಕ್ತವಾಗಿ ಪ್ರವೇಶಿಸುವುದನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಇತ್ತೀಚೆಗೆ ನಿರ್ಬಂಧಿಸಿದ್ದಾರೆ. ವಿಮಾನ ನಿಲ್ದಾಣದ ಒಳಭಾಗದ ಭದ್ರತೆಗೆ ಯಾವುದೇ ಧಕ್ಕೆ ಬರಬಾರದು ಎಂಬ ಕಾರಣಕ್ಕೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮ ತೀವ್ರ ವಿವಾದಕ್ಕೆ ಕಾರಣವಾಗಿದೆ.
ವಿಮಾನ ನಿಲ್ದಾಣದ ರನ್‌ವೇ ಆವರಣದೊಳಗೆ ಸುಮಾರು 136 ವರ್ಷಗಳಷ್ಟು ಹಳೆಯದಾದ ಗೌರಿಪುರ ಜಮಾ ಮಸೀದಿ (ಇದನ್ನು ‘ಬಾಕ್ರಾ ಮಸೀದಿ’ ಎಂದೂ ಕರೆಯಲಾಗುತ್ತದೆ) ಇದೆ. ಇದು ವಿಮಾನ ನಿಲ್ದಾಣದ ಎರಡನೇ ರನ್‌ವೇಗೆ ಅತ್ಯಂತ ಹತ್ತಿರದಲ್ಲಿದೆ. ಮಸೀದಿಯ ನವೀಕರಣದ ಕಾರಣ ನೀಡಿ ಶನಿವಾರದಿಂದ ಅಲ್ಲಿ ನಮಾಜ್ ಮಾಡುವುದನ್ನು ವಿಮಾನ ನಿಲ್ದಾಣ ಪ್ರಾಧಿಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹಾಗೇ, ಹೊರಗಿನವರಿಗೆ ನೀಡಲಾಗುತ್ತಿದ್ದ ಪ್ರವೇಶ ಪಾಸ್‌ಗಳನ್ನು ರದ್ದುಗೊಳಿಸಿದೆ. ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ವಿಮಾನ ನಿಲ್ದಾಣದ ಮುಖ್ಯ ರನ್‌ವೇ ದುರಸ್ತಿಗಾಗಿ ಮುಚ್ಚಿದಾಗ, ಈ ಮಸೀದಿಯ ಕಾರಣದಿಂದಾಗಿ ದೊಡ್ಡ ವಿಮಾನಗಳು ಎರಡನೇ ರನ್‌ವೇನಲ್ಲಿ ಇಳಿಯಲು ಮತ್ತು ಟೇಕ್-ಆಫ್ ಆಗಲು ತೊಂದರೆಯಾಗುತ್ತಿತ್ತು. ರನ್‌ವೇ ವಿಸ್ತರಣೆ ಕಾರ್ಯ ಮತ್ತು ಅತ್ಯಾಧುನಿಕ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಅಳವಡಿಕೆಯೂ ಇದರಿಂದಾಗಿ ವಿಳಂಬವಾಗಿತ್ತು ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಸುವೇಂದು ಅಧಿಕಾರಿ ಹೇಳೋದೇನು?:
ಸರ್ಕಾರದ ಈ ನಿರ್ಧಾರದ ಕುರಿತು ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಯಾವುದೇ ದೇಶದಲ್ಲಿ ಎಲ್ಲದಕ್ಕಿಂತಲೂ ರಾಷ್ಟ್ರೀಯ ಭದ್ರತೆಯೇ ಮೊದಲ ಆದ್ಯತೆಯಾಗಿರಬೇಕು. ವಿಮಾನ ನಿಲ್ದಾಣಗಳು ದೇಶದ ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದು, ಅಲ್ಲಿಗೆ ಯಾರು ಬರುತ್ತಾರೆ ಮತ್ತು ಹೋಗುತ್ತಾರೆ ಎಂಬುದರ ಮೇಲೆ ಹೆಚ್ಚು ನಿಗಾ ಇಡುವುದು ಅತ್ಯಗತ್ಯ. ವಿಮಾನ ನಿಲ್ದಾಣದ ಅಧಿಕಾರಿಗಳು ತೆಗೆದುಕೊಂಡಿರುವ ಈ ತಾಂತ್ರಿಕ ಮತ್ತು ಭದ್ರತಾ ನಿರ್ಧಾರಕ್ಕೆ ಯಾವುದೇ ಧರ್ಮ ಅಥವಾ ರಾಜಕೀಯದ ಬಣ್ಣ ಬಳಿಯಬಾರದು” ಎಂದು ಹೇಳಿದ್ದಾರೆ.
“ಕೊಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಜಾಗ ಅತ್ಯಂತ ಸೂಕ್ಷ್ಮವಾಗಿದೆ. ಏಕೆಂದರೆ ಚೀನಾ ಮತ್ತು ಬಾಂಗ್ಲಾದೇಶ ಎರಡೂ ದೇಶಗಳು ಇಲ್ಲಿಗೆ ಹತ್ತಿರದಲ್ಲಿವೆ. ಆದ್ದರಿಂದ ಹೊರಗಿನವರಿಗಾಗಿ ವಿಮಾನ ನಿಲ್ದಾಣದ ಗೇಟ್‌ಗಳನ್ನು ಮುಕ್ತವಾಗಿಡಲು ಸಾಧ್ಯವಿಲ್ಲ. ನಾವು ಯಾರನ್ನೂ ಧಾರ್ಮಿಕ ಆಚರಣೆಗಳಿಂದ ತಡೆದಿಲ್ಲ. ಕಾನೂನನ್ನು ಗೌರವಿಸಿ ಉತ್ತಮ ನಾಗರಿಕರಾಗಿ ನಡೆದುಕೊಳ್ಳಿ. ಧರ್ಮವನ್ನು ವೈಯಕ್ತಿಕ ವಿಷಯವಾಗಿ ಆಚರಿಸಿ, ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬೇಡಿ. ಆಗ ಎಲ್ಲವೂ ಸುಗಮವಾಗಿ ನಡೆಯುತ್ತದೆ” ಎಂದು ಸಿಎಂ ಹೇಳಿದ್ದಾರೆ.
ವಿರೋಧ ಪಕ್ಷಗಳ ಆಕ್ಷೇಪ:
ಮತ್ತೊಂದೆಡೆ, ಮಸೀದಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿರುವುದನ್ನು ತೃಣಮೂಲ ಕಾಂಗ್ರೆಸ್ (TMC) ಸೇರಿದಂತೆ ಕೆಲವು ಸ್ಥಳೀಯ ಸಂಘಟನೆಗಳು ಮತ್ತು ವಿರೋಧ ಪಕ್ಷದ ನಾಯಕರು ವಿರೋಧಿಸಿದ್ದಾರೆ. ಇದು ಹಲವು ವರ್ಷಗಳಿಂದ ಇದ್ದ ಪದ್ಧತಿಯಾಗಿದ್ದು, ಇದ್ದಕ್ಕಿದ್ದಂತೆ ನಿಷೇಧ ಹೇರಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ