ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ರಾಹುಲ್ ದ್ರಾವಿಡ್ ಹೊಸ ಕೋಚ್?  – Kannada News | Rahul Dravid A Candidate For England Test Team Coach’s Job

ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-2 ಅಂತರದ ಆಘಾತಕಾರಿ ಸೋಲಿನ ಬೆನ್ನಲ್ಲೇ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರನ್ನು ಟೆಸ್ಟ್ ಕೋಚಿಂಗ್ ಹುದ್ದೆಯಿಂದ ವಜಾಗೊಳಿಸಿದೆ.
ಮೆಕಲಮ್ ನಿರ್ಗಮನದಿಂದ ತೆರವಾಗಿರುವ ಈ ಪ್ರತಿಷ್ಠಿತ ಸ್ಥಾನಕ್ಕೆ ಭಾರತೀಯ ಕ್ರಿಕೆಟ್ ದಂತಕಥೆ, ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಹೆಸರು ಮುಂಚೂಣಿಗೆ ಬಂದಿದೆ.

ಬ್ರಿಟಿಷ್ ಪತ್ರಿಕೆ ದಿ ಡೈಲಿ ಟೆಲಿಗ್ರಾಫ್ ವರದಿಯ ಪ್ರಕಾರ, ಇಂಗ್ಲೆಂಡ್ ಮಂಡಳಿ ಸಿದ್ಧಪಡಿಸಿರುವ ಶಾರ್ಟ್‌ಲಿಸ್ಟ್‌ನಲ್ಲಿ ರಾಹುಲ್ ದ್ರಾವಿಡ್ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಭಾರತೀಯ ಲೆಜೆಂಡ್ ಆಂಗ್ಲರ ಪಡೆಯ ಕೋಚ್ ಆಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ ಎಂದು ತಿಳಿಸಿದೆ.

ದ್ರಾವಿಡ್ ಮೇಲೇಕೆ ಇಂಗ್ಲೆಂಡ್ ಕಣ್ಣು?

ರಾಹುಲ್ ದ್ರಾವಿಡ್ ಕ್ಲಾಸಿಕ್ ಟೆಸ್ಟ್ ಕ್ರಿಕೆಟಿಗ. ಅಷ್ಟೇ ಅಲ್ಲದೆ ಈ ಹಿಂದೆ ಕೋಚ್ ಆಗಿ ಭಾರತ ತಂಡವನ್ನು ಟೆಸ್ಟ್​ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಫೈನಲ್​ಗೆ ಮುನ್ನಡೆಸಿದ್ದರು.

ಅವರ ಶಿಸ್ತುಬದ್ಧ ನಡೆ, ಗಂಭೀರ ಯೋಜನೆಗಳು ಮತ್ತು ಯುವ ಆಟಗಾರರನ್ನು ಬೆಳೆಸುವ ಕಲೆ ಇಂಗ್ಲೆಂಡ್ ಮಂಡಳಿಗೆ ಭಾರಿ ಆಕರ್ಷಕವಾಗಿ ಕಂಡಿದೆ.

ಇತ್ತೀಚಿನ ದಿನಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ರಾಹುಲ್ ದ್ರಾವಿಡ್ ಅವರ ರಕ್ಷಣಾತ್ಮಕ ಮತ್ತು ತಾಂತ್ರಿಕ ಮಾರ್ಗದರ್ಶನ ಅಗತ್ಯವಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಭಾವಿಸಿದೆ.

ದ್ರಾವಿಡ್ ಅಂಗಳದಲ್ಲಿ ಚೆಂಡು!

ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ಅವರಿಗೆ ಸದ್ಯಕ್ಕೆ ಯಾವುದೇ ಪೂರ್ಣ ಪ್ರಮಾಣದ ರಾಷ್ಟ್ರೀಯ ಕೋಚಿಂಗ್ ಜವಾಬ್ದಾರಿ ವಹಿಸಿಕೊಳ್ಳಲು ಇಷ್ಟವಿಲ್ಲ. ಆದರೆ, ಇಂಗ್ಲೆಂಡ್‌ನ ವಿಭಜಿತ ಕೋಚಿಂಗ್ ವ್ಯವಸ್ಥೆ ಅವರಿಗೆ ಸೂಕ್ತವಾಗಬಹುದು.

ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ವೈಟ್-ಬಾಲ್ (ಏಕದಿನ, ಟಿ20) ತಂಡಕ್ಕೆ ಕೋಚ್ ಆಗಿ ಮುಂದುವರಿಯಲಿದ್ದು, ಕೇವಲ ಟೆಸ್ಟ್ ತಂಡಕ್ಕೆ ಮಾತ್ರ ಹೊಸ ಕೋಚ್ ಹುಡುಕಾಟ ನಡೆಯುತ್ತಿದೆ. ಹೀಗಾಗಿ ರಾಹುಲ್ ದ್ರಾವಿಡ್ ಅವರಿಗೆ ವರ್ಷದ ಬಹುಪಾಲು ಸಮಯ ಮನೆಯಲ್ಲೇ ಕಳೆಯಲು ಮತ್ತು ತಮ್ಮ ನೆಚ್ಚಿನ ಟೆಸ್ಟ್ ಕ್ರಿಕೆಟ್‌ಗೆ ಮಾತ್ರ ಕೊಡುಗೆ ನೀಡಲು ಉತ್ತಮ ಅವಕಾಶ ಸಿಗಲಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ನ ಈ ಆಫರ್​ ಅನ್ನು ಒಪ್ಪಿಕೊಂಡರೂ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ: ವಾಟ್ ಎ ಕ್ಯಾಚ್: ರಾಕೆಟ್ ವೇಗದಲ್ಲಿ ಬಂದ ಚೆಂಡನ್ನು ಹಿಡಿದ ರಿಚಾ ಘೋಷ್

ಆ್ಯಶಸ್​ಗೂ ಮುನ್ನ ಹೊಸ ಕೋಚ್:

ಮುಂದಿನ ವರ್ಷ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಪ್ರತಿಷ್ಠಿತ ಆ್ಯಶಸ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಶೀಘ್ರದಲ್ಲೇ ಹೊಸ ಕೋಚ್ ಹೆಸರನ್ನು ಅಂತಿಮಗೊಳಿಸಲಿದೆ. ರಾಹುಲ್ ದ್ರಾವಿಡ್ ಈ ಆಫರ್ ಒಪ್ಪಿಕೊಂಡರೆ, ಅದು ವಿಶ್ವ ಕ್ರಿಕೆಟ್‌ನ ಅತ್ಯಂತ ರೋಚಕ ತಿರುವುಗಳಲ್ಲಿ ಒಂದಾಗಲಿದೆ. ಅಲ್ಲದೆ ದ್ರಾವಿಡ್​ ಎಂಟ್ರಿಯಿಂದ ಅತ್ತ ಆ್ಯಶಸ್ ಸರಣಿಗೂ ಮುನ್ನವೇ ಆಸ್ಟ್ರೇಲಿಯಾಗೆ ಚಿಂತೆ ಶುರುವಾಗಲಿದೆ.

Source link

ಅಪ್ರಾಪ್ತ ಬಾಲಕಿಗೆ ಕಿರುಕುಳ; ಪೋಕ್ಸೋ ಕಾಯ್ದೆಯಡಿ ಕಿರುತೆರೆ ನಟ ಅರೆಸ್ಟ್ – Kannada News | TV Star Rohit Chandel Held for Minor Harassment and Assault POCSO Case Filed

ಹಿಂದಿ ಕಿರುತೆರೆಯ ಪ್ರಸಿದ್ಧ ನಟ ರೋಹಿತ್ ಚಂದೇಲ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 16 ವರ್ಷದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪ ಇವರ ಮೇಲಿದೆ. ಬಾಲಕಿಯನ್ನು ಹಿಂಬಾಲಿಸುವುದು ಮತ್ತು ಹಲ್ಲೆ ನಡೆಸಿದ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ. ನಟನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಕಸ್ಟಡಿಗೆ ನಟ

ರೋಹಿತ್ ಚಂದೇಲ್ ಅವರಿಗೆ ಈಗ 29 ವರ್ಷ ವಯಸ್ಸು. ಇವರು ‘ಪಾಂಡ್ಯ ಸ್ಟೋರ್’ ಮತ್ತು ‘ಕಾಶಿಬಾಯಿ ಬಾಜೀರಾವ್ ಬಲ್ಲಾಳ್’ ಧಾರಾವಾಹಿಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಪಂತ್ ನಗರ ಪೊಲೀಸರು ಇವರನ್ನು ದಹಿಸರ್‌ನಲ್ಲಿರುವ ಮನೆಯಿಂದ ಬಂಧಿಸಿದ್ದಾರೆ. ನಂತರ ಅವರನ್ನು ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ನ್ಯಾಯಾಲಯವು ನಟನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ದೂರಿನಲ್ಲಿ ಏನಿದೆ?

ನಟ ರೋಹಿತ್ ತಮ್ಮ ವೈಯಕ್ತಿಕ ನಂಬರ್‌ನಿಂದ ಬಾಲಕಿಗೆ ಪದೇ ಪದೇ ಫೋನ್ ಮಾಡುತ್ತಿದ್ದರು. ಬೇರೆ ಬೇರೆ ನಂಬರ್‌ಗಳಿಂದಲೂ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಇದರಿಂದ ಬಾಲಕಿ ತೀವ್ರ ಮಾನಸಿಕ ಅಸಮಾಧಾನಕ್ಕೆ ಒಳಗಾಗಿದ್ದಳು. ಜುಲೈ 5 ರಂದು ಮುಂಬೈನ ಉಪನಗರದಲ್ಲಿ ಬಾಲಕಿಯಿದ್ದ ಜಾಗಕ್ಕೆ ನಟ ಬಂದಿದ್ದನು. ಆಕೆಯನ್ನು ಹಿಂಬಾಲಿಸಿ ಗಲಾಟೆ ಮಾಡಿದ್ದನು. ಅಲ್ಲದೆ ಬಾಲಕಿಗೆ ಬೈದು ಕೈಯಿಂದ ಹಲ್ಲೆ ನಡೆಸಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಅಂದು ಮುದ್ದು ಕಂದಮ್ಮ, ಇಂದು ಕಿರುತೆರೆ ಸುಂದರಿ: ಧೂಳೆಬ್ಬಿಸಿದ ಭವ್ಯಾ ಗೌಡ ಬಾಲ್ಯದ ಫೋಟೋ

ಭಾರತೀಯ ನ್ಯಾಯ ಸಂಹಿತೆಯಡಿ ಕೇಸ್

ಪೊಲೀಸ್ ಅಧಿಕಾರಿಗಳು ಅರೆಸ್ಟ್ ಖಚಿತಪಡಿಸಿದ್ದಾರೆ. ನಟ ಮತ್ತು ಬಾಲಕಿಗೆ ಮೊದಲೇ ಪರಿಚಯ ಇತ್ತು ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಪೊಲೀಸರು ಈ ಇಡೀ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ KSTDC 2 ದಿನಗಳ ಪ್ರೀಮಿಯಂ ಪ್ಯಾಕೇಜ್; ಕಡಿಮೆ ದರದಲ್ಲಿ ವಿಐಪಿ ದರ್ಶನ, ರೂಮ್ ಸೌಲಭ್ಯದ ಕಂಪ್ಲೀಟ್ ವಿವರ ಇಲ್ಲಿದೆ – Kannada News | KSTDC Karnataka Pilgrimage: 2 Day Premium Dharmasthala, Kukke Subramanya Package

ಬೆಂಗಳೂರು, ಜು.13: ಈ ಸಮಯದಲ್ಲಿ ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಹೋಗುವವರಿಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ಸುವರ್ಣ ಅವಕಾಶವೊಂದನ್ನು ನೀಡಿದೆ. ಸಿಲಿಕಾನ್ ಸಿಟಿಯಿಂದ ಕರಾವಳಿಯ ಅತ್ಯಂತ ಪವಿತ್ರ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ 2 ದಿನಗಳ ಆಕರ್ಷಕ ‘ಪ್ರೀಮಿಯಂ ಪ್ರವಾಸ ಪ್ಯಾಕೇಜ್’ ಅನ್ನು ಪ್ರಕಟಿಸಿದೆ. ಈ ಮೂಲಕ ಕಡಿಮೆ ದರದಲ್ಲಿ ಎರಡು ದಿನದ ಪ್ರವಾಸಕ್ಕೆ ಉತ್ತಮ ಅವಕಾಶ ನೀಡಿದೆ.

ಆರಾಮದಾಯಕ ಎಸಿ ಡಿಲಕ್ಸ್ ಕೋಚ್ (AC Deluxe Coach) ಮೂಲಕ ಸಾಗುವ ಈ ಪ್ರವಾಸದ ಸಂಪೂರ್ಣ ವಿವರಗಳು ಮತ್ತು ದರ ಪಟ್ಟಿ ಇಲ್ಲಿದೆ ನೋಡಿ:

ಪ್ರವಾಸದ ಪ್ರಮುಖ ಆಕರ್ಷಣೆಗಳು:

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ (ವಿಐಪಿ ಸ್ಪೆಷಲ್ ದರ್ಶನ)

ಸೌತಡ್ಕ ಮಹಾ ಗಣಪತಿ ದೇವಸ್ಥಾನ ಭೇಟಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಆದಿ ಸುಬ್ರಹ್ಮಣ್ಯ ದೇವಸ್ಥಾನ ದರ್ಶನ

ಆದಿಚುಂಚನಗಿರಿ ಕ್ಷೇತ್ರ ಮತ್ತು ಐತಿಹಾಸಿಕ ಮಂಜರಾಬಾದ್ ಕೋಟೆ ವೀಕ್ಷಣೆ

2 ದಿನಗಳ ಪ್ರವಾಸ:

ದಿನ 1: ಬೆಂಗಳೂರಿನಿಂದ ಧರ್ಮಸ್ಥಳ ಪ್ರಯಾಣ ಮತ್ತು ದೃಶ್ಯವೀಕ್ಷಣೆ

ಬೆಳಿಗ್ಗೆ 07:00 – ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಟಿಟಿಎಂಸಿ (BMTC TTMC) ಬಸ್ ನಿಲ್ದಾಣದಲ್ಲಿರುವ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್ ಬಳಿ ವರದಿ ಮಾಡಿಕೊಳ್ಳುವುದು.

ಬೆಳಿಗ್ಗೆ 07:30 – ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಎಸಿ ಬಸ್ ಮೂಲಕ ರಸ್ತೆ ಪ್ರಯಾಣ ಆರಂಭ.

ಬೆಳಿಗ್ಗೆ 09:30 – ಮಾರ್ಗಮಧ್ಯೆ ಉಪಹಾರ/ರಿಫ್ರೆಶ್‌ಮೆಂಟ್ ಬ್ರೇಕ್ (ಸ್ವಂತ ವೆಚ್ಚದಲ್ಲಿ).

ಬೆಳಿಗ್ಗೆ 10:30 – ಪವಿತ್ರ ಆದಿಚುಂಚನಗಿರಿ ದೇವಸ್ಥಾನಕ್ಕೆ ಭೇಟಿ ಮತ್ತು ದರ್ಶನ.

ಮಧ್ಯಾಹ್ನ 01:30 – ಮಾರ್ಗಮಧ್ಯೆ ಮಧ್ಯಾಹ್ನದ ಊಟಕ್ಕೆ ನಿಲುಗಡೆ.

ಸಂಜೆ 04:30 – ಹಸನ್ಮುಖಿ ನಿಸರ್ಗದ ಮಡಿಲಲ್ಲಿರುವ ಐತಿಹಾಸಿಕ ಮಂಜರಾಬಾದ್ ಕೋಟೆಗೆ ಭೇಟಿ.

ಸಂಜೆ 06:30 – ಧರ್ಮಸ್ಥಳಕ್ಕೆ (ನಿಡ್ಲೆ) ಆಗಮನ, ಹೋಟೆಲ್‌ಗೆ ಚೆಕ್-ಇನ್ ಮತ್ತು ರಾತ್ರಿ ತಂಗುವಿಕೆ.

ದಿನ 2: ಪುಣ್ಯಕ್ಷೇತ್ರಗಳ ದರ್ಶನ ಮತ್ತು ಮರಳಿ ಬೆಂಗಳೂರಿಗೆ ಪ್ರಯಾಣ

ಬೆಳಿಗ್ಗೆ 07:30 – ಹೋಟೆಲ್‌ನಲ್ಲಿ ಉಚಿತ ಉಪಾಹಾರ ಸೇವನೆ.

ಬೆಳಿಗ್ಗೆ 08:30 – ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಮತ್ತು ವಿಶೇಷ ವಿಐಪಿ ದರ್ಶನ.

ಬೆಳಿಗ್ಗೆ 10:00 – ಸುಂದರ ಶ್ರೀ ರಾಮಮಂದಿರಕ್ಕೆ (ರಾಮ ಕ್ಷೇತ್ರ) ಭೇಟಿ.

ಬೆಳಿಗ್ಗೆ 11:00 – ಸೂರ್ಯನಾರಾಯಣ ದೇವಸ್ಥಾನ ವೀಕ್ಷಣೆ.

ಮಧ್ಯಾಹ್ನ 12:00 – ಬೆಳ್ತಂಗಡಿಯ ಪ್ರಸಿದ್ಧ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ (ಶಿಶಿಲ) ಭೇಟಿ.

ಮಧ್ಯಾಹ್ನ 01:30 – ಮುಕ್ತ ಆವರಣದಲ್ಲಿರುವ ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನಕ್ಕೆ ಭೇಟಿ ಮತ್ತು ಅಲ್ಲಿಯೇ ಮಧ್ಯಾಹ್ನದ ಊಟ.

ಸಂಜೆ 06:00 – ನಾಗದೇವನ ಪವಿತ್ರ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಆದಿ ಸುಬ್ರಹ್ಮಣ್ಯದಲ್ಲಿ ವಿಶೇಷ ದರ್ಶನ.

ಸಂಜೆ 07:30 – ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಾತ್ರಿಯ ಭೋಜನ.

ರಾತ್ರಿ 08:30 – ಎಲ್ಲಾ ದೃಶ್ಯವೀಕ್ಷಣೆ ಮುಗಿಸಿ ಬೆಂಗಳೂರಿನ ಕಡೆಗೆ ಪ್ರಯಾಣ ಆರಂಭ.

ರಾತ್ರಿ 10:30 – ಮಾರ್ಗಮಧ್ಯೆ ರಿಫ್ರೆಶ್‌ಮೆಂಟ್ ಬ್ರೇಕ್.

ದಿನ 3: ಬೆಂಗಳೂರಿಗೆ ಆಗಮನ

ಬೆಳಿಗ್ಗೆ 05:30 – ಬೆಂಗಳೂರಿಗೆ ಆಗಮನ ಮತ್ತು ಕೆಎಸ್‌ಟಿಡಿಸಿ ಪ್ರವಾಸ ಮುಕ್ತಾಯ.

ಇದನ್ನೂ ಓದಿ: ಬೈಕಿನಲ್ಲಿ ಸಾಗಿಸುತ್ತಿದ್ದ 20 ಕೆಜಿ ಗಾಂಜಾ ಜಪ್ತಿ; ಕರ್ನಾಟಕದಲ್ಲಿ ಹೆಚ್ಚಿದ ಕೋವಿಡ್ ಆತಂಕ, ಪ್ರಮುಖ ಸುದ್ದಿಗಳು ಇಲ್ಲಿದೆ

ಪ್ಯಾಕೇಜ್‌ನಲ್ಲಿ ಏನೇನಿದೆ?

ಎಸಿ ಡಿಲಕ್ಸ್ ಬಸ್ ಪ್ರಯಾಣ ವೆಚ್ಚ.

ದೇವಾಲಯಗಳ ವಿಶೇಷ ಶೀಘ್ರ ದರ್ಶನ ಟಿಕೆಟ್‌ಗಳು.

ಧರ್ಮಸ್ಥಳದಲ್ಲಿ ಉತ್ತಮ ವಸತಿ ಸೌಲಭ್ಯ .

ಎರಡನೇ ದಿನದ ಬೆಳಗಿನ ಉಪಹಾರ

ಇದನ್ನು ನೀಡಲಾಗುವುದಿಲ್ಲ:

ಮಧ್ಯಾಹ್ನ ಮತ್ತು ರಾತ್ರಿಯ ಊಟದ ವೆಚ್ಚಗಳು.

ವೈಯಕ್ತಿಕ ಖರೀದಿ ಮತ್ತು ಇತರೆ ವೆಚ್ಚಗಳು.

ವೇಳಾಪಟ್ಟಿಯಲ್ಲಿ ಉಲ್ಲೇಖಿಸದ ಯಾವುದೇ ಹೆಚ್ಚುವರಿ ಸ್ಥಳಗಳ ಭೇಟಿ.

ಪ್ರಯಾಣಿಕರಿಗೆ ಪ್ರಮುಖ ಸೂಚನೆಗಳು:

ಪ್ರವಾಸದ ವೇಳೆ ಅತಿಥಿಗಳು ತಮ್ಮ ಮಾನ್ಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಜೊತೆಯಲ್ಲಿಟ್ಟುಕೊಳ್ಳಬೇಕು.

ದೇವಸ್ಥಾನಗಳಿಗೆ ಭೇಟಿ ನೀಡುವಾಗ ಸಾಂಪ್ರದಾಯಿಕ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು.

ಸಂಚಾರ ಮತ್ತು ದೇವಾಲಯದ ಭಕ್ತರ ದಟ್ಟಣೆಯನ್ನು ಅವಲಂಬಿಸಿ ಸಮಯಗಳು ಬದಲಾಗಬಹುದು. ಅನಿರೀಕ್ಷಿತ ವಿಳಂಬಗಳಿಗೆ KSTDC ಜವಾಬ್ದಾರರಾಗಿರುವುದಿಲ್ಲ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:39 am, Mon, 13 July 26

Source link

ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಹೊಳೆನರಸೀಪುರದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ – Kannada News | Woman Arrested With 7 Kg Ganja Near Holenarasipura in Hassan; One Accused Escapes

ಹಾಸನ, ಜುಲೈ 13: ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಬ್ಬೂರು ಗ್ರಾಮದ ಸಮೀಪ ಸ್ಕೂಟಿಯಲ್ಲಿ ಬಂದು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಹಿಳೆಯನ್ನು ಹಳ್ಳಿಮೈಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯನ್ನು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮೇಲೂರು ಗ್ರಾಮದ ನಿವಾಸಿ ಶೀಲಾ ಎಂದು ಗುರುತಿಸಲಾಗಿದೆ. ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಹಳ್ಳಿಮೈಸೂರು ಠಾಣೆ ಪೊಲೀಸರು ಕಬ್ಬೂರು ಸಮೀಪ ದಾಳಿ ನಡೆಸಿದ್ದರು. ಈ ವೇಳೆ ಒಬ್ಬ ಆರೋಪಿ ಕಾರಿನಲ್ಲಿ ಬಂದಿದ್ದರೆ, ಮಹಿಳೆ ಸ್ಕೂಟಿಯಲ್ಲಿ ಬಂದು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರೆಂಬುದು ಬೆಳಕಿಗೆ ಬಂದಿದೆ.

ಪೊಲೀಸರು ದಾಳಿ ನಡೆಸುತ್ತಿದ್ದಂತೆ ಜಬೀ ಎಂಬ ಆರೋಪಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳದಲ್ಲಿದ್ದ ಶೀಲಾಳನ್ನು ಪೊಲೀಸರು ಬಂಧಿಸಿ, ಆಕೆಯ ಬಳಿಯಿದ್ದ 7 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಸ್ಕೂಟಿ ಹಾಗೂ ಕಾರನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ. ಪರಾರಿಯಾಗಿರುವ ಆರೋಪಿ ಜಬೀಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದೆ. ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎರಡು ಟ್ರಕ್​ಗಳ ನಡುವೆ ಸಿಲುಕಿ ಪಿಕಪ್ ವ್ಯಾನ್ ನಜ್ಜುಗುಜ್ಜು, ಮದುವೆ ಮನೆಯಿಂದ ಬರುತ್ತಿದ್ದ 13 ಮಂದಿ ಸಾವು – Kannada News | Indonesia Road Accident: 13 Dead as Pickup Van Crushed Between Two Trucks

ಜಕಾರ್ತಾ, ಜುಲೈ 13: ಮದುವೆ(Marriage) ಮನೆಯ ಸಂಭ್ರಮ ಮುಗಿಸಿ ಮನೆಗೆ ಮರಳುತ್ತಿದ್ದ ಅತಿಥಿಗಳ ಪಾಲಿಗೆ ಹೆದ್ದಾರಿಯೇ ಮೃತ್ಯುಕೂಪವಾಗಿ ಮಾರ್ಪಟ್ಟಿತ್ತು. ಇಂಡೋನೇಷ್ಯಾದ ಜಾವಾ ದ್ವೀಪದ ಜನನಿಬಿಡ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 13 ಜನರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಎರಡು ಬೃಹತ್ ಟ್ರಕ್‌ಗಳ ನಡುವೆ ಮದುವೆ ಅತಿಥಿಗಳಿದ್ದ ಪಿಕಪ್ ವ್ಯಾನ್ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ  ಐವರನ್ನು ಬಿಟ್ಟು ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ.

ಯು-ಟರ್ನ್ ತೆಗೆದುಕೊಳ್ಳಲು ಹೋದಾಗ ಸಂಭವಿಸಿದ ಅವಘಡ
ಇಂದ್ರಮಾಯು ರೀಜೆನ್ಸಿಯ ಕಿಯಾಜರನ್ ಕುಲೋನ್ ಗ್ರಾಮದ ಬಳಿಯ ಉತ್ತರ ಕರಾವಳಿ ಹೆದ್ದಾರಿಯಲ್ಲಿ ಈ ದುರಂತ ನಡೆದಿದೆ. ಮೃತಪಟ್ಟವರೆಲ್ಲರೂ ನೆರೆಯ ಪರೇನ್ ಗ್ರಾಮದಲ್ಲಿ ನಡೆದಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಹಳ್ಳಿಗೆ ಹಿಂತಿರುಗುತ್ತಿದ್ದರು.

ಸ್ಥಳೀಯ ಸಂಚಾರ ಪೊಲೀಸ್ ಮುಖ್ಯಸ್ಥ ಉಂಡಾಂಗ್ ಸಯಾರಿಫ್ ಹಿದಾಯತ್ ನೀಡಿರುವ ಮಾಹಿತಿ ಪ್ರಕಾರ, ಅತಿಥಿಗಳು ತೆರೆದ ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಹೆದ್ದಾರಿಯ ಮಧ್ಯದಲ್ಲಿದ್ದ ಕಟಿಂಗ್ ಬಳಿ ವಾಹನವನ್ನು ಯು-ಟರ್ನ್ ಮಾಡಲು ಚಾಲಕ ಗಾಡಿಯನ್ನು ನಿಧಾನಗೊಳಿಸಿದ್ದಾನೆ. ಇದೇ ವೇಳೆ ಅದೇ ದಿಕ್ಕಿನಲ್ಲಿ ಅತಿ ವೇಗವಾಗಿ ಬಂದ ದೊಡ್ಡ ವಿಂಗ್-ಬಾಕ್ಸ್ ಲಾರಿಯೊಂದು ಪಿಕಪ್ ವ್ಯಾನ್‌ನ ಹಿಂಭಾಗಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಮೊದಲ ಲಾರಿ ಹೊಡೆದ ಡಿಕ್ಕಿಯ ರಭಸಕ್ಕೆ ಪಿಕಪ್ ವ್ಯಾನ್ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ದಾಟುತ್ತಾ ವಿರುದ್ಧ ದಿಕ್ಕಿನ ಲೇನ್‌ಗೆ ತೂರಿ ಹೋಗಿದೆ. ದುರಾದೃಷ್ಟವೆಂದರೆ ಅದೇ ಕ್ಷಣದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಲಾರಿ ಪಿಕಪ್ ವ್ಯಾನ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.

ಮತ್ತಷ್ಟು ಓದಿ: ದುಬೈ ರಸ್ತೆ ಅಪಘಾತ: ಸಂತ್ರಸ್ತ ಕುಟುಂಬಗಳ ಕಣ್ಣೀರು ಒರೆಸಿದ ಉದ್ಯಮಿ ಡಾ. ಶಮ್ಶೀರ್, 2.6 ಕೋಟಿ ರೂ. ಪರಿಹಾರ

ಎರಡು ಬದಿಗಳಿಂದ ಬಿದ್ದ ಭೀಕರ ಹೊಡೆತಕ್ಕೆ ಪಿಕಪ್ ವ್ಯಾನ್‌ನ ಹಿಂಭಾಗದಲ್ಲಿದ್ದ ಒಂದು ಡಜನ್‌ಗೂ ಹೆಚ್ಚು ಜನರು ಗಾಳಿಯಲ್ಲಿ ತೂರಿ ಬಂದು ಹೆದ್ದಾರಿಯ ಕಾಂಕ್ರೀಟ್ ರಸ್ತೆಯ ಮೇಲೆ ಬಿದ್ದಿದ್ದಾರೆ. ತಲೆ ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿದ್ದರಿಂದ 13 ಜನರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಐವರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂಡೋನೇಷ್ಯಾದಲ್ಲಿ ಹೆಚ್ಚುತ್ತಿದೆ ಅಪಘಾತ ಪ್ರಮಾಣ
ಆಗ್ನೇಯ ಏಷ್ಯಾ ರಾಷ್ಟ್ರವಾದ ಇಂಡೋನೇಷ್ಯಾದಲ್ಲಿ ಇಂತಹ ಭೀಕರ ರಸ್ತೆ ಅಪಘಾತಗಳು ತೀರಾ ಸಾಮಾನ್ಯ ಎಂಬಂತಾಗಿದೆ.

ತೆರೆದ ವಾಹನಗಳ ಬಳಕೆ: ಹಳ್ಳಿಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ಸರಕು ಸಾಗಿಸುವ ತೆರೆದ ಪಿಕಪ್ ವ್ಯಾನ್ ಅಥವಾ ಟ್ರಕ್‌ಗಳಲ್ಲೇ ಸಾಮೂಹಿಕವಾಗಿ ಪ್ರಯಾಣಿಸುತ್ತಾರೆ. ಇಂತಹ ವಾಹನಗಳಲ್ಲಿ ಯಾವುದೇ ಸುರಕ್ಷತಾ ಬೆಲ್ಟ್ ಅಥವಾ ಏರ್‌ಬ್ಯಾಗ್ ಇರುವುದಿಲ್ಲ.
ಅತಿಯಾದ ವೇಗ, ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಳ್ಳುವುದು ಮತ್ತು ರಸ್ತೆಗಳ ಕಳಪೆ ವಿನ್ಯಾಸದಿಂದಾಗಿ ಇಂಡೋನೇಷ್ಯಾದ ಹೆದ್ದಾರಿಗಳಲ್ಲಿ ಪ್ರತಿ ವರ್ಷ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಸದ್ಯ ಪೊಲೀಸರು ಎರಡೂ ಲಾರಿಗಳ ಚಾಲಕರನ್ನು ವಶಕ್ಕೆ ಪಡೆದಿದ್ದು, ಘಟನೆಯ ತನಿಖೆ ಮುಂದುವರೆಸಿದ್ದಾರೆ. ಮದುವೆಯ ಸಡಗರದಲ್ಲಿದ್ದ ಇಡೀ ಹಳ್ಳಿ ಈಗ ಸೂತಕದ ಮನೆಯಾಗಿ ಮಾರ್ಪಟ್ಟಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

TV9 Kannada News Live: ಬೈಕಿನಲ್ಲಿ ಸಾಗಿಸುತ್ತಿದ್ದ 20 ಕೆಜಿ ಗಾಂಜಾ ಜಪ್ತಿ; ಕರ್ನಾಟಕದಲ್ಲಿ ಹೆಚ್ಚಿದ ಕೋವಿಡ್ ಆತಂಕ, ಪ್ರಮುಖ ಸುದ್ದಿಗಳು ಇಲ್ಲಿದೆ – Kannada News | Breaking News in TV9 Kannada Live 13 July 2026 Politics, Weather, Cinema Latest News Updates

Breaking News Today Live Updates in Kannada: ಹರಿಹರ ತಾಲೂಕಿನ ಹನಗವಾಡಿ ಬಳಿಯ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರಿಗೆ ನಿಯಮಿತ ಜಾಮೀನು (Regular Bail) ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ದಾವಣಗೆರೆಯ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯವು ಇಂದು (ಜುಲೈ 13) ತನ್ನ ಮಹತ್ವದ ಅಂತಿಮ ತೀರ್ಪನ್ನು ಪ್ರಕಟಿಸಲಿದೆ. ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಡೆದ ಅತ್ಯಂತ ರಹಸ್ಯ ‘ಕ್ಯೂಆರ್ ಕೋಡ್ ಮತ್ತು ಡಿಕಾಯ್ಸ್ ಸ್ಕ್ವಾಡ್’ ಕಾರ್ಯಾಚರಣೆಯ ಮೂಲಕ 20 ಲಕ್ಷ ರೂಪಾಯಿ ಮೌಲ್ಯದ 20 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಅಂತರಜಿಲ್ಲಾ ದಂಧೆಕೋರರನ್ನು ಹೆಡೆಮುರಿ ಕಟ್ಟಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸಂಪೂರ್ಣ ಸೈಲೆಂಟ್ ಆಗಿದ್ದ ಹೆಮ್ಮಾರಿ ಕೊರೊನಾ ವೈರಸ್ (Covid-19) ಮತ್ತೆ ಆತಂಕ ಮೂಡಿಸಲು ಆರಂಭಿಸಿದೆ. ನೆರೆರಾಜ್ಯ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಸೋಮವಾರ ಬೆಳಗಿನ ಜಾವ ಘೋರ ದುರಂತವೊಂದು ಸಂಭವಿಸಿದೆ. ಹೀಗೆ ರಾಜ್ಯ, ದೇಶ, ವಿದೇಶಗಳ ಪ್ರಮುಖ ಸುದ್ದಿಗಳು ಇಲ್ಲಿದೆ ನೋಡಿ.

Source link

ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ: ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು! – Kannada News | Karnataka Drought Crisis: Dried Lakes and Crop Damages Worries Farmers Across Bengaluru, Ballari

ಬೆಂಗಳೂರು, ಜುಲೈ 13: ರಾಜ್ಯದಲ್ಲಿ ಭಾರಿ ಮಳೆಯಿಂದ ತತ್ತರಿಸಿದ ಜನತೆ ಒಂದೆಡೆಯಾದರೆ, ಜುಲೈ ತಿಂಗಳಿನಲ್ಲೂ ಬೇಸಿಗೆಯನ್ನು ಮೀರಿಸುವ ರಣಬಿಸಿಲು ನೋಡಿ ತಲೆ ಮೇಲೆ ಕೈಹೊತ್ತು ಕುಳಿತವರು ಇನ್ನೊಂದೆಡೆ. ಬಳ್ಳಾರಿಯಲ್ಲಂತೂ ಮಳೆಗಾಲವೋ ಅಥವಾ ಬೇಸಿಗೆ ಕಾಲವೋ ಎಂದು ಗುರುತಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕರ್ನಾಟಕದ ಹಲವೆಡೆ ಭೀಕರ ಬರಗಾಲ ಆವರಿಸುವ ಸೂಚನೆ ಎದ್ದು ಕಾಣುತ್ತಿದೆ. ಬಳ್ಳಾರಿಯಲ್ಲಿ ನದಿ-ಕೆರೆಗಳು ಸಂಪೂರ್ಣ ಬತ್ತಿಹೋಗುತ್ತಿದ್ದರೆ, ಬೀದರ್ ಮುಂತಾದೆಡೆ ಜೀವನಾಡಿಯಾಗಬೇಕಿದ್ದ ಬೆಳೆಗಳು ಕಣ್ಣಮುಂದೆಯೇ ಒಣಗುತ್ತಿರುವುದು ಅನ್ನದಾತನನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.

ಬತ್ತಿ ಹೋದ 20 ಎಕರೆಯ ಕುಡುತಿನಿ ಕೆರೆ

ಬಳ್ಳಾರಿ ಜಿಲ್ಲೆಯ ಕುಡುತಿನಿ ಪಟ್ಟಣದಲ್ಲಿ ಬರಗಾಲದ ತೀವ್ರತೆ ಮಿತಿಮೀರಿದೆ. ಸರಿಸುಮಾರು 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಪಟ್ಟಣಕ್ಕೆ ಕುಡಿಯುವ ನೀರಿನ ಪ್ರಮುಖ ಆಧಾರವಾಗಿದ್ದ 20 ಎಕರೆ ವಿಸ್ತೀರ್ಣದ ಕುಡುತಿನಿ ಕೆರೆ ಕಳೆದ ಎರಡು ತಿಂಗಳಿನಿಂದ ಸಂಪೂರ್ಣ ಬತ್ತಿ ಬರಡಾಗಿದೆ. ಈ ಕೆರೆಗೆ ಹತ್ತಿರದ ಮೂರು ಹಳ್ಳಗಳಿಂದ ನೀರು ಹರಿದು ಬರುತ್ತಿತ್ತು. ಆದರೆ ಅದಕ್ಕೆ ಅಡ್ಡಲಾಗಿ ಜೆಎಸ್‌ಡಬ್ಲ್ಯು (JSW) ಕಂಪನಿಯು ಕಾಂಪೌಂಡ್ ನಿರ್ಮಿಸಿರುವುದರಿಂದ ಕೆರೆಗೆ ನೀರು ಬರುವುದು ಸ್ಥಗಿತಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

2004 ರಲ್ಲಿ ಅಂದಿನ ಜನಸಂಖ್ಯೆಗೆ ತಕ್ಕಂತೆ ನಿರ್ಮಾಣವಾಗಿದ್ದ ಈ ಕೆರೆ, ಇಂದಿನ ಜನಸಂಖ್ಯೆಗೆ ಸಾಲುತ್ತಿಲ್ಲ. ಹೀಗಾಗಿ ಕೆರೆಯನ್ನು ವಿಸ್ತರಿಸಬೇಕು ಹಾಗೂ ಟಿಬಿ (ತುಂಗಭದ್ರಾ) ಡ್ಯಾಂನಿಂದ ತಕ್ಷಣ ನೀರು ಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸದ್ಯ ಪಟ್ಟಣಕ್ಕೆ ಟ್ಯಾಂಕರ್ ಹಾಗೂ ಬೋರ್‌ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ.

ಚಿತ್ರದುರ್ಗ, ಬೀದರ್ ಹಾಗೂ ಕೊಡಗಿನಲ್ಲೂ ಮಳೆ ಇಲ್ಲದೆ ಬೆಳೆ ನಾಶ!

ಕೋಟೆನಾಡು ಚಿತ್ರದುರ್ಗದಲ್ಲಿ ವರುಣದೇವ ಸಂಪೂರ್ಣ ಕೈಕೊಟ್ಟಿದ್ದು, ಹಿಂದೆಂದೂ ಕಾಣದ ಬರ ಆವರಿಸಿದೆ. ರೈತರು ಸಾಲ ಮಾಡಿ ಬಿತ್ತಿದ್ದ ತೊಗರಿ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬೆಳೆಗಳು ಮೊಳಕೆಯೊಡೆಯುವ ಹಂತದಲ್ಲೇ ಒಣಗಿ ಕಪ್ಪಾಗುತ್ತಿವೆ.

ಗಡಿ ಜಿಲ್ಲೆ ಬೀದರ್‌ನಲ್ಲಿ ಹೆಸರು, ಉದ್ದು ಮತ್ತು ಸೋಯಾಬೀನ್ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಬೋರ್‌ವೆಲ್ ಹಾಗೂ ಬಾವಿಗಳಿಂದ ಕೊಡಗಳಲ್ಲಿ ನೀರು ತಂದು ಹರಿಸುತ್ತಿದ್ದಾರೆ. ಕೃಷಿ ಮಾತ್ರವಲ್ಲದೆ ಪಶುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ.

ಇದನ್ನೂ ಓದಿ ರಾಜ್ಯದ ಒಂದೆಡೆ ವರುಣನ ಆರ್ಭಟ: ರಾಯಚೂರು, ಕೊಪ್ಪಳದಲ್ಲಿ ಮಳೆ ಇಲ್ಲದೆ ಕಂಗಾಲಾದ ರೈತರು

ಮಲೆನಾಡು ಕೊಡಗಿನಲ್ಲೂ ಇದೇ ರೀತಿಯ ಪರಿಸ್ಥಿತಿ ಇರುವುದು ಆತಂಕ ಸೃಷ್ಟಿಸಿದೆ. ಜೂನ್‌ನಲ್ಲಿ ಆರಂಭದಲ್ಲಿ ಭರವಸೆ ಮೂಡಿಸಿದ್ದ ಮಳೆ ಈಗ ಕಣ್ಮರೆಯಾಗಿ ರಣಬಿಸಿಲು ಬಡಿಯುತ್ತಿದೆ. ಪ್ರತಿ ವರ್ಷ ಈ ಅವಧಿಗೆ 35 ಸಾವಿರ ಹೆಕ್ಟೇರ್‌ನಲ್ಲಿ ನಡೆಯುತ್ತಿದ್ದ ಭತ್ತದ ನಾಟಿ, ಈ ಬಾರಿ ಕೇವಲ 12 ಸಾವಿರ ಹೆಕ್ಟೇರ್‌ಗೆ ಸೀಮಿತಗೊಂಡಿದೆ. ಗದ್ದೆಗಳು ನೀರಿಲ್ಲದೆ ಬಿರುಕು ಬಿಟ್ಟಿವೆ.

ರಾಯಚೂರಿನಲ್ಲಿ ಮಳೆಗಾಗಿ ಕಪ್ಪೆಗಳ ಮದುವೆ, ಢೋಣಿ ಪೂಜೆ!

ಮಳೆಯಿಲ್ಲದೆ ಕಂಗೆಟ್ಟಿರುವ ರಾಯಚೂರಿನ ಮಕ್ತಲ್ ಪೇಟೆಯ ಜನತೆ ಮತ್ತು ರೈತರು ಈಗ ದೈವದ ಮೊರೆ ಹೋಗಿದ್ದಾರೆ. ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಲಿ ಎಂದು ಪ್ರಾರ್ಥಿಸಿ, ಶಾಸ್ತ್ರೋಕ್ತವಾಗಿ ಕಪ್ಪೆಗಳ ಮದುವೆ ಮಾಡಿ ಇಡೀ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ್ದಾರೆ. ಇದರೊಂದಿಗೆ ಸಾಂಪ್ರದಾಯಿಕ ಢೋಣಿ ಪೂಜೆ ನೆರವೇರಿಸಿ ಮಳೆರಾಯನ ಕೃಪೆಗಾಗಿ ಮಂಡಿಯೂರಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬರ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕುಡಿಯುವ ನೀರು ಹಾಗೂ ರೈತರ ಬೆಳೆ ನಷ್ಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು – Kannada News | Ram Mandir Scam: Santosh Dubey Faces SIT Inquiry, Key Evidence Due Today

ಅಯೋಧ್ಯೆ, ಜುಲೈ 13: ಅಯೋಧ್ಯೆ ರಾಮ ಮಂದಿರ(Ram Mandir)ದ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಮಂದಿರದೊಳಗಿನ ಭ್ರಷ್ಟಾಚಾರ ಮತ್ತು ಕಾಣಿಕೆ ಲೂಟಿಯನ್ನು ಸಾರ್ವಜನಿಕವಾಗಿ ಬಯಲಿಗೆಳೆದು ದೇಶಾದ್ಯಂತ ಸಂಚಲನ ಮೂಡಿಸಿದ್ದ ಹಿಂದೂ ಧರ್ಮ ಸೇನೆಯ ಮುಖ್ಯಸ್ಥ ಸಂತೋಷ್ ದುಬೆ ಅವರನ್ನು ಎಸ್​ಐಟಿ ತಂಡ (SIT) ತೀವ್ರ ವಿಚಾರಣೆಗೆ ಒಳಪಡಿಸಿದೆ.

ಅಯೋಧ್ಯೆಯ ನಗರ ಪೊಲೀಸ್ ಮುಖ್ಯಸ್ಥರ ಸಮ್ಮುಖದಲ್ಲಿ ಸಿಓ  ಸಿಟಿ ಕಚೇರಿಗೆ ಸಂತೋಷ್ ದುಬೆ ಅವರನ್ನು ಕರೆಸಲಾಗಿತ್ತು. ಅಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೂವರು ಹಿರಿಯ ಎಸ್‌ಐಟಿ ಸದಸ್ಯರು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ತಾವು ಮಾಡಿರುವ ಭ್ರಷ್ಟಾಚಾರದ ಆರೋಪಗಳಿಗೆ ಸೂಕ್ತ ಪುರಾವೆಗಳನ್ನು ನೀಡುವಂತೆ ಎಸ್‌ಐಟಿ ಸೂಚಿಸಿದ್ದು, ಸಾಕ್ಷ್ಯಗಳನ್ನು ಹಾಜರುಪಡಿಸಲು ಸೋಮವಾರದವರೆಗೆ ಮಾತ್ರ ಕಾಲಾವಕಾಶ ನೀಡಲಾಗಿದೆ.

ಯಾರು ಈ ಸಂತೋಷ್ ದುಬೆ?

ರಾಮ ಮಂದಿರ ಚಳವಳಿಯ ಇತಿಹಾಸದಲ್ಲಿ ಸಂತೋಷ್ ದುಬೆ ಅತ್ಯಂತ ಪರಿಚಿತ ಹಾಗೂ ಪ್ರಭಾವಿ ಹೆಸರು. ಡಿಸೆಂಬರ್ 6, 1992 ರಂದು ಅಯೋಧ್ಯೆಯ ವಿವಾದಿತ ಬಾಬ್ರಿ ರಚನೆಯನ್ನು ಕೆಡವಿದ ಪ್ರಕರಣದಲ್ಲಿ ಸಿಬಿಐ (CBI) ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ಸಂತೋಷ್ ದುಬೆ ಅವರನ್ನು ಪ್ರಮುಖ ಆರೋಪಿಗಳಲ್ಲಿ ಒಬ್ಬರೆಂದು ಹೆಸರಿಸಲಾಗಿತ್ತು.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ:ಬೆಳಗ್ಗೆ ಫೋನ್ ಕಾಲ್, ಮಧ್ಯಾಹ್ನ ಕೋಟಿ ಕಳ್ಳತನ, ಏನೇನೆಲ್ಲಾ ನಡೀತು?

ದಶಕಗಳ ಕಾಲ ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ಇವರು, ಪ್ರಸ್ತುತ ಮಂದಿರದ ಆಡಳಿತ ಮಂಡಳಿಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ ಪ್ರಮುಖ ದೂರುದಾರರಾಗಿದ್ದಾರೆ.

ಹಗರಣದ ತನಿಖೆಗೆ ಒತ್ತಾಯಿಸಿದ್ದ ಧೀಮಂತ ನಾಯಕ

ರಾಮ ಮಂದಿರದ ಕಾಣಿಕೆ ಕೌಂಟರ್‌ನಲ್ಲಿ ಬ್ಯಾಂಕ್ ನೌಕರರು ಮತ್ತು ಟ್ರಸ್ಟ್‌ನ ಕೆಲವರ ಸಮ್ಮತಿಯೊಂದಿಗೆ ಕೋಟ್ಯಂತರ ರೂಪಾಯಿ ನಗದು ಲೂಟಿಯಾಗುತ್ತಿದೆ ಎಂದು ದೇಶದ ಮಾಧ್ಯಮಗಳ ಮುಂದೆ ಮೊದಲು ಗಂಭೀರ ಆರೋಪ ಮಾಡಿದ್ದೇ ಸಂತೋಷ್ ದುಬೆ.

ಅಷ್ಟಕ್ಕೇ ನಿಲ್ಲದೆ, ಇವರು ಅಯೋಧ್ಯೆಯ ರಾಮ ಜನ್ಮಭೂಮಿ ಪೊಲೀಸ್ ಠಾಣೆಗೆ ಖುದ್ದಾಗಿ ಭೇಟಿ ನೀಡಿ ಲಿಖಿತ ದೂರನ್ನು ದಾಖಲಿಸಿದ್ದರು. ಈ ಮೆಗಾ ಹಗರಣದ ಸತ್ಯಾಸತ್ಯತೆ ಹೊರಬರಬೇಕಾದರೆ ಸಿಕ್ಕಿಬಿದ್ದಿರುವ ಆರೋಪಿಗಳಿಗೆ ಕೇವಲ ಸಾಧಾರಣ ತನಿಖೆ ಸಾಲದು, ಅವರ ಮೇಲೆ ‘ಪಾಲಿಗ್ರಾಫ್ ಪರೀಕ್ಷೆ’ ನಡೆಸಬೇಕೆಂದು ಅವರು ಪಟ್ಟು ಹಿಡಿದಿದ್ದರು. ಇವರ ದೂರಿನ ತೀವ್ರತೆಯನ್ನು ಪರಿಗಣಿಸಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.

ಭಕ್ತರ ಭಾವನೆ ಮತ್ತು ಕಾಣಿಕೆಯ ಪವಿತ್ರತೆ

ವಿಶ್ವದ ಮೂಲೆ ಮೂಲೆಗಳಿಂದ ಬರುವ ಕೋಟ್ಯಂತರ ರಾಮಭಕ್ತರು ತಮ್ಮ ಬೆವರಿನ ದುಡಿಮೆಯ ಹಣವನ್ನು ಅತ್ಯಂತ ಭಕ್ತಿಯಿಂದ ಅಯೋಧ್ಯೆಯ ರಾಮನ ಪಾದಕ್ಕೆ ಸಮರ್ಪಿಸುತ್ತಾರೆ. ಅಂತಹ ಪವಿತ್ರ ಕಾಣಿಕೆಯನ್ನು ಮಂದಿರದ ಒಳಗಿರುವ ನೌಕರರೇ ವ್ಯವಸ್ಥಿತ ಸ್ಕೆಚ್ ಹಾಕಿ ಕದಿಯುತ್ತಿರುವುದು ದೇಶದಾದ್ಯಂತ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ.

ಈ ಹಿನ್ನೆಲೆಯಲ್ಲಿ ಸಂತೋಷ್ ದುಬೆ ಅವರು ಎಸ್‌ಐಟಿಗೆ ನೀಡಲಿರುವ ಇಂದಿನ ಸಾಕ್ಷ್ಯಗಳು ಅತ್ಯಂತ ನಿರ್ಣಾಯಕವಾಗಿದ್ದು, ಟ್ರಸ್ಟ್‌ನ ಒಳಗಿರುವ ದೊಡ್ಡ ತಲೆಗಳು ದೂಳೀಪಟವಾಗುವ ಸಾಧ್ಯತೆಯಿದೆ. ಜುಲೈ 22 ರಂದು ನಡೆಯಲಿರುವ ರಾಮ ಮಂದಿರ ಟ್ರಸ್ಟ್‌ನ ಮಹಾಸಭೆಯ ಮೇಲೂ ಈ ತನಿಖೆಯ ವರದಿ ಭಾರಿ ಪ್ರಭಾವ ಬೀರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಿರಾಡಿಘಾಟ್‌ನಲ್ಲಿ ಭೂಕುಸಿತ ತಡೆಗೆ ‘ಸಾಯಿಲ್ ನೈಲಿಂಗ್’! ಹೊಸ ತಾಂತ್ರಿಕ ಕಾಮಗಾರಿ ಶುರು – Kannada News | Soil Nailing Technology Introduced to Prevent Shiradi Ghat Landslides on Bengaluru Mangaluru highway NH 75 in Karnataka

ಬೆಂಗಳೂರು, ಜುಲೈ 13: ಬೆಂಗಳೂರು–ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-75 ರಾಜ್ಯದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ, ವಿಶೇಷವಾಗಿ ಹಾಸನ ಜಿಲ್ಲೆಯ ಸಕಲೇಶಪುರದಿಂದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಗುಂಡ್ಯವರೆಗೆ ವ್ಯಾಪಿಸಿರುವ ಶಿರಾಡಿ ಘಾಟ್ (Shiradi Ghat) ಪ್ರದೇಶದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಭೂಕುಸಿತದಿಂದ ತೀವ್ರ ಸಮಸ್ಯೆ ಎದುರಾಗುತ್ತದೆ. ಕಳೆದ ಹಲವು ವರ್ಷಗಳಿಂದ ಮಳೆ ಬಂದಾಗ ರಸ್ತೆ ಸಂಚಾರ ಅಸ್ತವ್ಯಸ್ತವಾಗುವುದು ಸಾಮಾನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಭೂಕುಸಿತ ನಿಯಂತ್ರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ತಾಂತ್ರಿಕ ವಿಧಾನವನ್ನು ಅಳವಡಿಸಿಕೊಂಡಿದೆ.

ಹೇಗೆ ಮಾಡುತ್ತಾರೆ ಸಾಯಿಲ್ ನೈಲಿಂಗ್?

ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಗುಡ್ಡಗಳ ಇಳಿಜಾರು ಪ್ರದೇಶಗಳಲ್ಲಿ ಸಾಯಿಲ್ ನೈಲಿಂಗ್ ತಂತ್ರಜ್ಞಾನ ಬಳಸಲಾಗುತ್ತದೆ. ಇಂಥ ಪ್ರದೇಶಗಳಲ್ಲಿ ಸುಮಾರು 12 ಮೀಟರ್ (36 ಅಡಿ) ಆಳದ ರಂಧ್ರಗಳನ್ನು ಕೊರೆಯಲಾಗುತ್ತದೆ. ಎರಡು ಅಡಿ ಅಂತರದಲ್ಲಿ ರಂಧ್ರಗಳನ್ನು ನಿರ್ಮಿಸಿ, ಸುಮಾರು 37 ಅಡಿ ಉದ್ದದ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗುತ್ತದೆ. ಬಳಿಕ ಅವುಗಳನ್ನು ಸಿಮೆಂಟ್ ಮೂಲಕ ಭದ್ರಪಡಿಸಿ, ಕಬ್ಬಿಣದ ಜಾಲರಿಯನ್ನು ಅಳವಡಿಸಲಾಗುತ್ತದೆ. ಅದರ ಮೇಲೆ ಹೈಡ್ರೋ ಮಲ್ಚಿಂಗ್ ತಂತ್ರದ ಮೂಲಕ ಹುಲ್ಲಿನ ಬೀಜಗಳನ್ನು ಬಿತ್ತನೆ ಮಾಡಿ, ಗುಡ್ಡದ ಮೇಲ್ಮೈಯಲ್ಲಿ ಹುಲ್ಲು ಬೆಳೆಯುವಂತೆ ಮಾಡುವ ಮೂಲಕ ಮಣ್ಣಿನ ಸವೆತ ಮತ್ತು ಭೂಕುಸಿತವನ್ನು ತಡೆಯುವ ಯೋಜನೆ ರೂಪಿಸಲಾಗಿದೆ.

ಶಿರಾಡಿ ಘಾಟ್ ಪ್ರದೇಶದ ಭೂಕುಸಿತಕ್ಕೆ ಕಾರಣ ಏನು?

ಸಕಲೇಶಪುರದಿಂದ ಮಾರನಹಳ್ಳಿವರೆಗಿನ ಚತುಷ್ಪಥ ರಸ್ತೆ ನಿರ್ಮಾಣದ ವೇಳೆ ಗುಡ್ಡಗಳನ್ನು ಅಗೆದಿರುವುದೇ ಭೂಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಮಣ್ಣು ಮೆದುವಾಗಿರುವುದರಿಂದ ಮಳೆಗಾಲದಲ್ಲಿ ಮಣ್ಣು ಸಡಿಲಗೊಂಡು ಕುಸಿಯುವ ಅಪಾಯ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಭೂಕುಸಿತದ ಅಪಾಯ ಹೆಚ್ಚಿರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾಯಿಲ್ ನೈಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಎಲ್ಲೆಲ್ಲಿ ಸಾಯಿಲ್ ನೈಲಿಂಗ್?

ಸಕಲೇಶಪುರ–ಮಾರನಹಳ್ಳಿ ಮಾರ್ಗದ ಕಪ್ಪಳ್ಳಿ, ದೊಡ್ಡತಪ್ಲು, ಹೆಗ್ಗದ್ದೆ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದು ಯಶಸ್ವಿಯಾದರೆ ಶಿರಾಡಿಘಾಟ್‌ನಲ್ಲಿ ಮಳೆಗಾಲದ ಭೂಕುಸಿತದ ಆತಂಕ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಭೀತಿ: ದೊಡ್ಡತಪ್ಲು ಬಳಿ ಮುಗಿಯದ ಕಾಮಗಾರಿ, ಪ್ರವಾಸಿಗರಿಗೆ ತಾಲೂಕು ಆಡಳಿತದ ಎಚ್ಚರಿಕೆ

ಶಿರಾಡಿಘಾಟ್ ಮಾರ್ಗವು ದಕ್ಷಿಣ ಕನ್ನಡ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಆದ್ದರಿಂದ ಈ ಮಾರ್ಗದಲ್ಲಿ ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಹೊಸ ತಂತ್ರಜ್ಞಾನದಿಂದ ಭೂಕುಸಿತ ನಿಯಂತ್ರಣ ಸಾಧ್ಯವಾದರೆ ಸಾವಿರಾರು ವಾಹನ ಸವಾರರಿಗೆ ನಿರಾಳ ಪ್ರಯಾಣ ಸಾಧ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾಟ್ ಎ ಕ್ಯಾಚ್: ರಾಕೆಟ್ ವೇಗದಲ್ಲಿ ಬಂದ ಚೆಂಡನ್ನು ಹಿಡಿದ ರಿಚಾ ಘೋಷ್ – Kannada News | Richa Ghosh held on to an absolute blinder at silly mid off

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಣ ಟೆಸ್ಟ್ ಪಂದ್ಯದ ಮೂರನೇ ದಿನದಾಟವು ರೋಚಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದ ಮೂರನೇ ದಿನದಾಟದ ಕೊನೆಯ ಅವಧಿಯಲ್ಲಿ, ಭಾರತದ ಯುವ ಆಟಗಾರ್ತಿ ರಿಚಾ ಘೋಷ್ ಅದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.

ಈ ಪಂದ್ಯದಲ್ಲಿ ಭಾರತ ನೀಡಿದ್ದ 457 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ, ಕೇವಲ 59 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಒಂದಾದ ಆಮಿ ಜೋನ್ಸ್ ಮತ್ತು ಮ್ಯಾಡಿ ವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಭಾರತೀಯ ಬೌಲರ್‌ಗಳನ್ನು ದಂಡಿಸುತ್ತಾ 67 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಈ ಜೋಡಿ, ಪಂದ್ಯವನ್ನು ನಾಲ್ಕನೇ ದಿನಕ್ಕೆ ಕೊಂಡೊಯ್ಯುವ ಎಲ್ಲಾ ಸೂಚನೆ ನೀಡಿದ್ದರು. ಹೀಗಾಗಿಯೇ ಟೀಮ್ ಇಂಡಿಯಾಗೆ ಈ ಜೋಡಿಯನ್ನು ಬೇರ್ಪಡಿಸುವುದು ಅತ್ಯಂತ ಅಗತ್ಯವಾಗಿತ್ತು.

ರಿಚಾ ಘೋಷ್ ಕಮಾಲ್:

ದಿನದಾಟ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, ಆಫ್-ಸ್ಪಿನ್ನರ್ ಸ್ನೇಹ್ ರಾಣಾ ಕೈಗೆ ಚೆಂಡನ್ನು ನೀಡಿದರು. ಬ್ಯಾಟರ್ ಮೇಲೆ ಒತ್ತಡ ಹೇರಲು ನಿಯಮಿತ ವಿಕೆಟ್ ಕೀಪರ್ ಆದ ರಿಚಾ ಘೋಷ್ ಅವರನ್ನು ಹೆಲ್ಮೆಟ್ ಧರಿಸಿ ಬ್ಯಾಟರ್‌ನ ತೀರ ಹತ್ತಿರದ ‘ಸಿಲ್ಲಿ ಮಿಡ್-ಆಫ್’  ಸ್ಥಾನದಲ್ಲಿ ನಿಲ್ಲಿಸಲಾಯಿತು. ಅಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ ಆ ಪವಾಡ ಘಟಿಸಿತು.

ಸ್ನೇಹ್ ರಾಣಾ ಎಸೆದ ಚೆಂಡನ್ನು ಇಂಗ್ಲೆಂಡ್‌ನ ಮ್ಯಾಡಿ ವಿಲಿಯರ್ಸ್ ಅತ್ಯಂತ ಬಲವಾಗಿ ಮತ್ತು ಪೂರ್ಣ ಶಕ್ತಿಯಿಂದ ಮುಂದಕ್ಕೆ ಬಂದು ಡ್ರೈವ್ ಮಾಡಿದರು.

ಬ್ಯಾಟ್‌ಗೆ ತಗುಲಿದ ಚೆಂಡು ರಾಕೆಟ್ ವೇಗದಲ್ಲಿ ನೇರವಾಗಿ ಸಿಲ್ಲಿ ಮಿಡ್-ಆಫ್‌ನಲ್ಲಿದ್ದ ರಿಚಾ ಘೋಷ್ ಕಡೆಗೆ ಚಿಮ್ಮಿತು. ಯಾರಾದರೂ ಸಾಮಾನ್ಯ ಫೀಲ್ಡರ್ ಆಗಿದ್ದರೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು.

ಆದರೆ ರಿಚಾ ಘೋಷ್, ವಿಕೆಟ್ ಕೀಪಿಂಗ್ ಗ್ಲೌಸ್ ಇಲ್ಲದಿದ್ದರೂ, ಮೊಣಕಾಲಿನ ಎತ್ತರಕ್ಕೆ ಬಂದ ಆ ಬುಲೆಟ್ ವೇಗದ ಚೆಂಡನ್ನು ತಮ್ಮ ಬರಿಗೈಗಳಿಂದಲೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡರು.  ಚೆಂಡನ್ನು ಅಷ್ಟು ಬಲವಾಗಿ ಹೊಡೆದರೂ ಅದು ಕ್ಯಾಚ್ ಆಗಿದ್ದನ್ನು ಕಂಡ ಬ್ಯಾಟರ್ ಮ್ಯಾಡಿ ವಿಲಿಯರ್ಸ್ ನಂಬಲಾಗದೆ, ಪಿಚ್ ಮೇಲೆಯೇ ದಿಗ್ಭ್ರಮೆಯಿಂದ ಕೆಲಕಾಲ ನಿಂತುಬಿಟ್ಟರು.

ಚೆಂಡಿನ ತೀವ್ರ ಹೊಡೆತಕ್ಕೆ ರಿಚಾ ಘೋಷ್ ಅವರ ಕೈ ಬೆರಳುಗಳಿಗೆ ತೀವ್ರ ನೋವಾಗಿದ್ದರೂ, ತಂಡಕ್ಕೆ ಸಿಕ್ಕ ಅತಿ ದೊಡ್ಡ ಬ್ರೇಕ್‌ಥ್ರೂ ಸಂಭ್ರಮದಲ್ಲಿ ಅವರು ಆ ನೋವನ್ನು ಮರೆತರು.

ಇದನ್ನೂ ಓದಿ: ‘ವರ್ಲ್ಡ್ ಕ್ಲಬ್ ಟಿ20 ಚಾಂಪಿಯನ್‌ಶಿಪ್’ ಆರಂಭಿಸಲು ಐಸಿಸಿ ಮಾಸ್ಟರ್ ಪ್ಲ್ಯಾನ್!

ಈ ಅದ್ಭುತ ಕ್ಯಾಚ್‌ನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ರಿಚಾ ಅವರ ಧೈರ್ಯಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Source link

Exit mobile version