ಕರ್ನಾಟಕದ ಈ ಜಿಲ್ಲೆಗಳಲ್ಲಿ 5 ದಿನ ಮಳೆ ಮುನ್ಸೂಚನೆ, ಬಿರುಗಾಳಿ ಸಾಧ್ಯತೆ: ಐಎಂಡಿ ಎಚ್ಚರಿಕೆ – Kannada News | Karnataka Weather and Monsoon rain forecast Alert: IMD Predicts Rain and Strong Winds in Coastal, Malnad, Interior Districts

ಬೆಂಗಳೂರು, ಜುಲೈ 13: ಕರ್ನಾಟಕದಲ್ಲಿ ಮುಂಗಾರು ತುಸು ದುರ್ಬಲವಾಗಿದ್ದರೂ, ಹಲವು ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಯ ಬೆಂಗಳೂರು ಹವಾಮಾನ ಕೇಂದ್ರ ಬಿಡುಗಡೆ ಮಾಡಿರುವ ಮುನ್ಸೂಚನೆ ಪ್ರಕಾರ, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿಯೂ ಬೀಸಲಿದೆ.

ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆ

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇಂದು (ಜುಲೈ 13) ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಹಾಗೂ ಸಮುದ್ರ ತೀರ ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಉತ್ತರ ಒಳನಾಡಿನಲ್ಲಿ ಎಲ್ಲೆಲ್ಲಿ ಮಳೆ?

ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಇಂದು ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿಯೂ ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲೂ ಮಳೆ

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮೊದಲ ದಿನ ಈ ಭಾಗಗಳಲ್ಲಿಯೂ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಬಿರುಗಾಳಿಯ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರಕ್ಕೆ ಬ್ರೇಕ್! ಉತ್ತರ ಕರ್ನಾಟಕದಲ್ಲಿ ಒಣ ಹವೆಯ ಮುನ್ಸೂಚನೆ

ಒಟ್ಟಾರೆ, ಮುಂದಿನ ಐದು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಆಯ್ದ ಜಿಲ್ಲೆಗಳಲ್ಲಿ ಮಳೆ ಮತ್ತು ಬಿರುಗಾಳಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಮತ್ತೊಂದೆಡೆ ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವೆಡೆ ಬರದ ಪರಿಸ್ಥಿತಿ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಸ್ರೇಲ್​ನಲ್ಲಿ ಅಕ್ಟೋಬರ್ 27ಕ್ಕೆ ಚುನಾವಣೆ, 40 ವರ್ಷಗಳ ಬಳಿಕ ಪೂರ್ಣಾವಧಿ ಮುಗಿಸಿದ ನೆತನ್ಯಾಹು ಸರ್ಕಾರ – Kannada News | Israel Election 2026: Netanyahu’s Fate and Gaza War Impact on October 27 Polls

ಟೆಲ್ ಅವಿವ್, ಜುಲೈ 13: ಇಸ್ರೇಲ್(Israel) ದೇಶವು ಗಾಜಾ ಹಾಗೂ ಲೆಬನಾನ್‌ನಲ್ಲಿ ತನ್ನ ಭೀಕರ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸಿರುವ ನಡುವೆಯೇ, ದೇಶದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಗಳು ಅಕ್ಟೋಬರ್ 27 ರಂದು ನಡೆಯಲಿವೆ ಎಂದು ಇಸ್ರೇಲ್ ಸಂಸತ್ತು ಅಧಿಕೃತವಾಗಿ ಪ್ರಕಟಿಸಿದೆ. ಇಸ್ರೇಲ್ ರಾಜಕೀಯ ಇತಿಹಾಸದಲ್ಲಿ ಬರೋಬ್ಬರಿ 40 ವರ್ಷಗಳ (1988 ರ ನಂತರ) ಬಳಿಕ, ಯಾವುದೇ ಮಧ್ಯಂತರ ವಿಸರ್ಜನೆ ಇಲ್ಲದೆ ಸರ್ಕಾರವೊಂದು ತನ್ನ ಪೂರ್ಣ 4 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿ ಚುನಾವಣೆಗೆ ಹೋಗುತ್ತಿರುವುದು ಇದೇ ಮೊಟ್ಟಮೊದಲ ಬಾರಿಯಾಗಿದೆ.

ಪ್ರಸ್ತುತ ನೆಸ್ಸೆಟ್ ಜುಲೈ 17 ರಂದು ತನ್ನ ಅಧಿಕೃತ ಅವಧಿಯನ್ನು ಪೂರ್ಣಗೊಳಿಸಲಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಬಲಪಂಥೀಯ ಒಕ್ಕೂಟವು ದೇಶದ ನಾಗರಿಕರಿಗಾಗಿ ನೂರಾರು ಕಾನೂನುಗಳು ಹಾಗೂ 9 ಬಜೆಟ್‌ಗಳನ್ನು ಯಶಸ್ವಿಯಾಗಿ ಅಂಗೀಕರಿಸಿದೆ ಎಂದು ಒಕ್ಕೂಟದ ಸಚೇತಕ ಓಫಿರ್ ಕಾಟ್ಜ್ ಹೆಮ್ಮೆಯಿಂದ ಘೋಷಿಸಿದ್ದಾರೆ.

ನೆತನ್ಯಾಹು 7ನೇ ಅವಧಿಗೆ ಆಯ್ಕೆಯಾಗುವರೇ? ಸಮೀಕ್ಷೆಗಳು ಹೇಳುವುದೇನು?

ಇಸ್ರೇಲ್ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ 76 ವರ್ಷದ ಬೆಂಜಮಿನ್ ನೆತನ್ಯಾಹು ಅವರು ಈಗಾಗಲೇ 6 ಅವಧಿಗಳನ್ನು ಪೂರೈಸಿದ್ದು, ಇದೀಗ 7ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಆದರೆ, ಈ ಬಾರಿ ಅವರ ಹಾದಿ ಅಷ್ಟು ಸುಲಭವಿಲ್ಲ ಎಂಬುದು ಜಾಗತಿಕ ಸಮೀಕ್ಷೆಗಳಿಂದ ಬಹಿರಂಗವಾಗಿದೆ.

ಸರಳ ಬಹುಮತದ ಕೊರತೆ: ಇಸ್ರೇಲ್‌ನ ಒಟ್ಟು 120 ಸೀಟುಗಳ ಸಂಸತ್ತಿನಲ್ಲಿ ಮ್ಯಾಜಿಕ್ ನಂಬರ್ 61 ಆಗಿದೆ. ಪ್ರಸಿದ್ಧ ‘ದಿ ಎಕನಾಮಿಸ್ಟ್’ ಪತ್ರಿಕೆ ಪ್ರಕಟಿಸಿರುವ ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ನೆತನ್ಯಾಹು ಅವರ ಲಿಕುಡ್ ಪಕ್ಷ ಸೇರಿದಂತೆ ಪ್ರಸ್ತುತ ಆಡಳಿತಾರೂಢ 5 ಪಕ್ಷಗಳ ಬಲಪಂಥೀಯ ಒಕ್ಕೂಟವು ಕೇವಲ 54 ಸ್ಥಾನಗಳನ್ನು ಗೆಲ್ಲಲಷ್ಟೇ ಶಕ್ತವಾಗಬಹುದು. ಮತ್ತೊಂದೆಡೆ, ನೆತನ್ಯಾಹು ವಿರೋಧಿ ಬಣದ ವಿರೋಧ ಪಕ್ಷಗಳು ಒಟ್ಟಾಗಿ 65 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೇರಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಮತ್ತಷ್ಟು ಓದಿ: ಹತ್ಯೆಗೆ ಸೇಡು ತೀರಿಸಿಕೊಳ್ಳುತ್ತೇವೆ; ತಂದೆಯ ಅಂತ್ಯಕ್ರಿಯೆ ಬಳಿಕ ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಶಪಥ

ಸರ್ಕಾರವನ್ನು ಕಿತ್ತೊಗೆಯುತ್ತೇವೆ

ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಭೀಕರ ದಾಳಿಯನ್ನು ತಡೆಯುವಲ್ಲಿ ನೆತನ್ಯಾಹು ಅವರ ಭದ್ರತಾ ವಿಫಲತೆ ಹಾಗೂ ಗಾಜಾ-ಲೆಬನಾನ್ ಯುದ್ಧ ನೀತಿಗಳ ವಿರುದ್ಧ ಇಸ್ರೇಲ್ ನಾಗರಿಕರಲ್ಲಿ ವ್ಯಾಪಕ ಅಸಮಾಧಾನವಿದೆ. ಇದನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿರುವ ವಿರೋಧ ಪಕ್ಷದ ನಾಯಕ ಹಾಗೂ ‘ಇಸ್ರೇಲ್ ಬೀಟೆನು’ ಪಕ್ಷದ ಮುಖ್ಯಸ್ಥ ಅವಿಗ್ದರ್ ಲಿಬರ್‌ಮನ್, ಬರುವ ಅಕ್ಟೋಬರ್ 27 ರಂದು ನಾವು ಅಕ್ಟೋಬರ್ 7 ರ ಹತ್ಯಾಕಾಂಡಕ್ಕೆ ಕಾರಣವಾದ ಈ ವಿಫಲ ಸರ್ಕಾರವನ್ನು ಬದಲಾಯಿಸಿ, ದೇಶವನ್ನು ಪುನರ್ನಿರ್ಮಿಸುವ ನಿಜವಾದ ಜಿಯೋನಿಸ್ಟ್ ಸರ್ಕಾರವನ್ನು ಸ್ಥಾಪಿಸುತ್ತೇವೆ ಎಂದು ಗುಡುಗಿದ್ದಾರೆ

ಈ ಚುನಾವಣೆ ಜಾಗತಿಕವಾಗಿ ಏಕೆ ಮುಖ್ಯ?

ಯುದ್ಧದ ಭವಿಷ್ಯ ಮತ್ತು ಕದನ ವಿರಾಮ: ಇರಾನ್ ಬೆಂಬಲಿತ ಹಮಾಸ್ ಮತ್ತು ಹೆಜ್ಬೊಲ್ಲಾ ಸಂಘಟನೆಗಳ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧವು ಜಾಗತಿಕ ತೈಲ ಮಾರುಕಟ್ಟೆ ಹಾಗೂ ವಿಶ್ವದ ಆರ್ಥಿಕತೆಯ ಮೇಲೆ ಭಾರಿ ಪ್ರಭಾವ ಬೀರಿದೆ. ನೆತನ್ಯಾಹು ಅಧಿಕಾರ ಕಳೆದುಕೊಂಡರೆ ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಏರ್ಪಡಬಹುದು ಎಂಬ ನಿರೀಕ್ಷೆ ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳಿಗಿದೆ.

ಭಾರತದ ಮೇಲಾಗುವ ಪ್ರಭಾವ: ಭಾರತಕ್ಕೆ ಇಸ್ರೇಲ್ ಅತ್ಯಂತ ಆಪ್ತ ರಕ್ಷಣಾ ಮತ್ತು ತಂತ್ರಜ್ಞಾನ ಪಾಲುದಾರ ರಾಷ್ಟ್ರವಾಗಿದೆ . ಭಾರತವು ಇಸ್ರೇಲ್‌ನಿಂದ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಇಸ್ರೇಲ್‌ನಲ್ಲಿ ಸ್ಥಿರ ಸರ್ಕಾರ ಅಧಿಕಾರಕ್ಕೆ ಬರುವುದು ಭಾರತದ ರಕ್ಷಣಾ ಹಿತಾಸಕ್ತಿ ಹಾಗೂ ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಯೋಜನೆಗಳ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಸದ್ಯ ಇಡೀ ವಿಶ್ವದ ಕಣ್ಣು ಅಕ್ಟೋಬರ್ 27ರ ಇಸ್ರೇಲ್ ರಣಕಳದ ಮೇಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೆ ಲಕ್ಷಾಂತರ ರೂ. ವಂಚನೆ: ಕಿಂಗ್‌ಪಿನ್ ರಾಹುಲ್ ಅರೆಸ್ಟ್! – Kannada News | Shimogga Fake Gold Loan Scam: Two Brothers Arrested for Defrauding Banks

ಶಿವಮೊಗ್ಗ, ಜುಲೈ 13: ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ವಿವಿಧ ಸಹಕಾರಿ ಸಂಘಗಳಿಗೆ ನಕಲಿ ಚಿನ್ನವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಭಾರಿ ವಂಚನೆ ಜಾಲವನ್ನು ದೊಡ್ಡಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಭಾನುವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಲೋಕೇಶ್‌ ಎಂಬ ಆರೋಪಿಯನ್ನು ಬಂಧಿಸಿದ್ದರು. ಆದರೆ ವಂಚನೆಯ ಕಿಂಗ್‌ಪಿನ್‌ ಎನ್ನಲಾದ ರಾಹುಲ್ ಸೇರಿದಂತೆ ಸುಧಾ, ರವಿಶಂಕರ್ ಮತ್ತು ಶರತ್ ನಾಪತ್ತೆಯಾಗಿದ್ದರು. ಇದೀಗ ರಾಹುಲ್ ಸಹ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನಕಲಿ ಹಾಲ್ ಮಾರ್ಕ್​ ಹಾಕಿ ವಂಚನೆ!

ತೀರ್ಥಹಳ್ಳಿಯ ಬಗ್ಗೋಡಿ ಗ್ರಾಮದ ರಾಹುಲ್ ಮತ್ತು ಲೋಕೇಶ್ ಎಂಬ ಸಹೋದರರು ಈ ಇಡೀ ದಂಧೆಯ ಸೂತ್ರಧಾರರು. ಆರೋಪಿಗಳು ರಾಷ್ಟ್ರೀಕೃತ ಬ್ಯಾಂಕ್‌ಗಳು, ಡಿಸಿಸಿ ಬ್ಯಾಂಕ್ ಹಾಗೂ ಸ್ಥಳೀಯ ಸೌಹಾರ್ದ ಸಹಕಾರಿ ಸಂಘಗಳನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದರು. ಇವರು ಬ್ಯಾಂಕ್‌ಗಳಿಗೆ ತರುತ್ತಿದ್ದ ಚಿನ್ನಾಭರಣಗಳ ಮೇಲೆ ಕೇವಲ ಶೇಕಡಾ 10 ರಿಂದ 30 ರಷ್ಟು ಮಾತ್ರ ಅಸಲಿ ಚಿನ್ನದ ಲೇಪನ ಇರುತ್ತಿತ್ತು. ಮೇಲ್ನೋಟಕ್ಕೆ ಇದು ಅಸಲಿ ಚಿನ್ನದಂತೆಯೇ ಕಾಣುವಂತೆ ಮಾಡಲು ವಂಚಕರು ಇವುಗಳ ಮೇಲೆ ನಕಲಿ ‘ಹಾಲ್‌ಮಾರ್ಕ್’ (Hallmark) ಮುದ್ರೆಯನ್ನು ಸಹ ಹಾಕಿಸಿದ್ದರು. ಇದರಿಂದಾಗಿ ಬ್ಯಾಂಕ್ ಸಿಬ್ಬಂದಿ ಹಾಗೂ ಅಪ್ರೈಸರ್‌ಗಳಿಗೆ ಯಾವುದೇ ಅನುಮಾನ ಬಾರದಂತೆ ಸಲೀಸಾಗಿ ಸಾಲ ಮಂಜೂರಾಗುತ್ತಿತ್ತು.

ವಂಚಕರು ರಾಹುಲ್, ಲೋಕೇಶ್, ಸುಧಾ ಮತ್ತು ರಾಜೇಶ್ ಎಂಬ ಹೆಸರುಗಳಲ್ಲಿಯೇ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುತ್ತಿದ್ದರು. ಶಿವಮೊಗ್ಗದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಗೋಪಾಳ ಮತ್ತು ವಿದ್ಯಾನಗರದ ಡಿಸಿಸಿ ಬ್ಯಾಂಕ್ ಶಾಖೆಗಳು, ಅಲ್ಕೋದ ಸಿರಿ ಸೌಹಾರ್ದ ಸೊಸೈಟಿ, ಸರಸ್ವತಿ ಸಹಕಾರ ಸಂಘ ಹಾಗೂ ಅನ್ನಪೂರ್ಣೇಶ್ವರಿ ಜ್ಯುವೆಲ್ಲರಿ ಸೇರಿದಂತೆ ಹಲವೆಡೆ ಸುಮಾರು 700 ಗ್ರಾಂ ನಕಲಿ ಚಿನ್ನವಿಟ್ಟು 40 ರಿಂದ 50 ಲಕ್ಷ ರೂಪಾಯಿ ವಂಚಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬ್ಯಾಂಕ್‌ಗಳಿಂದ ಲೂಟಿ ಮಾಡಿದ ಸಾರ್ವಜನಿಕರ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ನಿಂದ ಫ್ಲೈಟ್‌ನಲ್ಲಿ ಬರುತ್ತಿತ್ತು ನಕಲಿ ಚಿನ್ನ!

ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಈ ದಂಧೆಯ ಹಿಂದೆ ಅಂತರರಾಜ್ಯ ಜಾಲವಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ತೀರ್ಥಹಳ್ಳಿಯ ಮೃಗವಧೆ ಮೂಲದ ಶರತ್ ಎಂಬಾತನೇ ಈ ಇಡೀ ಸ್ಕ್ಯಾಮ್‌ನ ಅಸಲಿ ಮಾಸ್ಟರ್‌ಮೈಂಡ್. ಈತ ಪಂಜಾಬ್‌ನ ಅಮೃತಸರದಿಂದ ಇಂತಹ ನಕಲಿ ಕೋಟಿಂಗ್ ಚಿನ್ನಾಭರಣಗಳನ್ನು ವಿಮಾನದ ಮೂಲಕ ತರುತ್ತಿದ್ದ. ಶರತ್ ಅತ್ಯಂತ ಚಾಣಾಕ್ಷನಾಗಿದ್ದು, ಬ್ಯಾಂಕ್‌ಗಳಿಗೆ ನೇರವಾಗಿ ಹೋಗದೆ ಕೇವಲ ತೆರೆಮರೆಯಲ್ಲಿ ನಿಂತು ರಾಹುಲ್ ಹಾಗೂ ಲೋಕೇಶ್ ಸಹೋದರರನ್ನು ದಾಳವಾಗಿ ಬಳಸಿಕೊಂಡಿದ್ದ. ಸದ್ಯ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಡೆದ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕ್ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.

ಇದನ್ನೂ ಓದಿ ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ

ಮಾಸ್ಟರ್ ಮೈಂಡ್​ಗಾಗಿ ಹುಡುಕಾಟ

ದೊಡ್ಡಪೇಟೆ ಪೊಲೀಸರು ಈಗಾಗಲೇ ಲೋಕೇಶ್ ಹಾಗೂ ಕಿಂಗ್‌ಪಿನ್ ರಾಹುಲ್ ಇಬ್ಬರನ್ನೂ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ರಾಹುಲ್ ತೀರ್ಥಹಳ್ಳಿಯ ಸರಸ್ವತಿ ಸೌಹಾರ್ದ ಸೊಸೈಟಿಯಲ್ಲಿ 165 ಗ್ರಾಂ ನಕಲಿ ಚಿನ್ನವಿಟ್ಟು 10.68 ಲಕ್ಷ ರೂ. ಹಾಗೂ ಅನ್ನಪೂರ್ಣೇಶ್ವರಿಯಲ್ಲಿ 50 ಸಾವಿರ ರೂ. ಸಾಲ ಪಡೆದಿರುವುದು ಖಚಿತಪಟ್ಟಿದೆ. ಸದ್ಯ ತಲೆಮರೆಸಿಕೊಂಡಿರುವ ಶರತ್ ಪತ್ತೆಯಾದರೆ ಇನ್ನಷ್ಟು ಬ್ಯಾಂಕ್ ವಂಚನೆ ಪ್ರಕರಣಗಳು ಹೊರಬರುವ ಸಾಧ್ಯತೆಯಿದೆ ಎಂದು ಶಿವಮೊಗ್ಗ ಎಸ್ಪಿ ನಿಖಿಲ್ ಬಿ. ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಡೀ ಬೆಂಗಳೂರಿಗೆ ಒಂದು ನಿಯಮ, ಜಿಬಿಎಗೆ ಮತ್ತೊಂದು ನಿಯಮ? ಕಚೇರಿ ಆವರಣದಲ್ಲೇ ಇರುವ ಅನಾಥ ವಾಹನಗಳ ವಿರುದ್ಧ ಮೌನ! – Kannada News | Bengaluru GBA Faces Questions Over Abandoned Vehicles Inside Its Own Office While Cracking Down Across City

ಜಿಬಿಎ ಕಚೇರಿ ಆವರಣದಲ್ಲೇ ಇರುವ ಅನಾಥ ವಾಹನಗಳುImage Credit source: tv9

ಬೆಂಗಳೂರು, ಜುಲೈ 13: ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ರಸ್ತೆ ಬದಿಯಲ್ಲಿ ದೀರ್ಘಕಾಲ ನಿಂತಿರುವ ಅನಾಥ ಹಾಗೂ ಬಳಕೆಯಲ್ಲದ ವಾಹನಗಳನ್ನು ಗುರುತಿಸಿ, ಅವುಗಳಿಗೆ ಎಚ್ಚರಿಕೆ ಸ್ಟಿಕ್ಕರ್ ಅಂಟಿಸಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಜಿಬಿಎ (GBA) ನಡೆಸುತ್ತಿದೆ. ನಿಯಮ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಿಲ್ಲಿಸಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಇದೇ ನಿಯಮ ಜಿಬಿಎ ತನ್ನದೇ ಕಚೇರಿ ಆವರಣದಲ್ಲಿ ಅನ್ವಯಿಸುತ್ತಿಲ್ಲವೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಜಿಬಿಎ ಮುಖ್ಯ ಕಚೇರಿ ಆವರಣದಲ್ಲೇ ಬಳಕೆಯಲ್ಲದ ಕಾರುಗಳು!

ಬಳಕೆಯಲ್ಲದ ಸ್ಥಿತಿಯಲ್ಲಿ ಕಾರುಗಳು ಜಿಬಿಎ ಮುಖ್ಯ ಕಚೇರಿ ಆವರಣದಲ್ಲಿ ಹಲವು ದಿನಗಳಿಂದ ನಿಂತಿರುವುದು ಕಂಡುಬಂದಿದೆ. ಕೆಲವು ವಾಹನಗಳ ಟೈರ್‌ಗಳು ಪಂಕ್ಚರ್ ಆಗಿದೆ. ಧೂಳು ಆವರಿಸಿರುವುದರಿಂದ ಅವು ಬಹಳ ದಿನಗಳಿಂದ ಬಳಸಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಕರ್ನಾಟಕ ನೋಂದಣಿ ಹೊಂದಿರುವ ವಾಹನಗಳ ಜೊತೆಗೆ ಅನ್ಯರಾಜ್ಯದ ನೋಂದಣಿ ಸಂಖ್ಯೆಯ ಕಾರುಗಳೂ ಕಚೇರಿ ಆವರಣದಲ್ಲಿ ದೀರ್ಘಕಾಲದಿಂದ ನಿಂತಿವೆ.

ಜಿಬಿಎ ನಡೆಗೆ ಸಾರ್ವಜನಿಕರಿಂದ ಅಸಮಾಧಾನ

ನಗರದ ರಸ್ತೆಗಳಲ್ಲಿ ನಿಂತಿರುವ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿ ನೋಟಿಸ್ ನೀಡುವ ಅಧಿಕಾರಿಗಳು, ತಮ್ಮದೇ ಕಚೇರಿ ಆವರಣದಲ್ಲಿ ಇರುವ ಬಳಕೆಯಲ್ಲದ ವಾಹನಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ. ನಿಯಮ ಎಂದರೆ ಎಲ್ಲರಿಗೂ ಒಂದೇ ಆಗಬೇಕು. ಮೊದಲು ತಮ್ಮ ಕಚೇರಿ ಆವರಣದಲ್ಲಿ ಇರುವ ವಾಹನಗಳ ಪರಿಶೀಲನೆ ನಡೆಸಿ, ನಂತರ ನಗರದ ಜನರಿಗೆ ನಿಯಮ ಪಾಲನೆ ಬಗ್ಗೆ ಹೇಳಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಚಿವ ಕೃಷ್ಣಭೈರೇಗೌಡ ನೈಟ್ ರೌಂಡ್ಸ್: ಇಂಜಿನಿಯರ್‌ಗಳಿಗೆ ಕ್ಲಾಸ್ 

ಸಾರ್ವಜನಿಕರ ಆರೋಪಗಳಿಗೆ ಜಿಬಿಎ ಯಾವ ರೀತಿಯ ಸ್ಪಷ್ಟನೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಜೊತೆಗೆ, ನಗರದಾದ್ಯಂತ ನಡೆಯುತ್ತಿರುವ ಕಾರ್ಯಾಚರಣೆಯ ಮಾದರಿಯಲ್ಲೇ ತನ್ನ ಕಚೇರಿ ಆವರಣದಲ್ಲಿರುವ ಬಳಕೆಯಲ್ಲದ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಂಕಾಕ್ ನೈಟ್​ಕ್ಲಬ್​ನಲ್ಲಿ ಅಗ್ನಿ ಅವಘಡ, 27 ಮಂದಿ ಸಾವು, ಬಾತ್​ ರೂಂ ಸೇರಿಯೂ ಬದುಕುಳಿಯಲಿಲ್ಲ ಜೀವಗಳು – Kannada News | Bangkok Nightclub Tragedy: 27 Dead, Safety Lapses Under Scrutiny

ಬ್ಯಾಂಕಾಕ್, ಜುಲೈ 13:ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ಸೋಮವಾರ ಬೆಳಗಿನ ಜಾವ ಭೀಕರ ದುರಂತವೊಂದು ಸಂಭವಿಸಿದೆ. ಅಲ್ಲಿನ ಅತ್ಯಂತ ಜನಪ್ರಿಯ ಪಬ್​ವೊಂದರಲ್ಲಿ ಮಧ್ಯರಾತ್ರಿ ಆಕಸ್ಮಿಕವಾಗಿ ಕಾಣಿಸಿಕೊಂಡ ಭಾರಿ ಬೆಂಕಿ(Fire) ಮತ್ತು ವಿಷಕಾರಿ ಹೊಗೆಯೊಳಗೆ ಸಿಲುಕಿ ಕನಿಷ್ಠ 27 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹರಿದಾಡುತ್ತಿವೆ. ನೈಟ್‌ಕ್ಲಬ್‌ನ ಮುಖ್ಯ ಬಾಗಿಲಿನಿಂದ ರಕ್ಕಸ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆ ಆಕಾಶ ಮುಟ್ಟುತ್ತಿರುವುದು ಹಾಗೂ ಪ್ರಾಣ ಉಳಿಸಿಕೊಳ್ಳಲು ಯುವಕ-ಯುವತಿಯರು ದಿಕ್ಕಾಪಾಲಾಗಿ ಓಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಾತ್​ರೂಮ್​ನಲ್ಲೇ ಕೊನೆಯುಸಿರೆಳೆದ ದುರ್ದೈವಿಗಳು

ಬ್ಯಾಂಕಾಕ್‌ನ ಚತುಚಕ್ ಜಿಲ್ಲೆಯ ಉತ್ತರ ಭಾಗದಲ್ಲಿರುವ ‘ನಾ ಲಾಡ್‌ಪ್ರಾವ್’ ಪಬ್‌ನಲ್ಲಿ ಈ ಕರಾಳ ಘಟನೆ ನಡೆದಿದೆ. ಮಧ್ಯರಾತ್ರಿ ಪಬ್ ಸಡಗರದಿಂದ ಕೂಡಿದ್ದಾಗ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಕತ್ತಲ ಕೋಣೆಯಂತಿದ್ದ ಪಬ್‌ನೊಳಗೆ ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ.

ಉಸಿರುಗಟ್ಟಿಸುವ ದಟ್ಟ ಹೊಗೆಯಿಂದ ಪಾರಾಗಲು ದಾರಿ ತಿಳಿಯದ ಗ್ರಾಹಕರು, ಪ್ರಾಣ ಉಳಿಸಿಕೊಳ್ಳಲು ಪಬ್‌ನ ಹಿಂಭಾಗದಲ್ಲಿದ್ದ ಶೌಚಾಲಯ ಮತ್ತು ಸ್ನಾನಗೃಹಗಳ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ, ದುರಂತವೆಂದರೆ ಆ ಕಿರಿದಾದ ಜಾಗಕ್ಕೂ ವಿಷಕಾರಿ ಹೊಗೆ ತಲುಪಿದ್ದರಿಂದ, ಬಹುತೇಕ ಬಲಿಪಶುಗಳು ಅಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಥಾಯ್ ಪ್ರಧಾನಿ ಅನುಟಿನ್ ಚಾರ್ನ್‌ವಿರಕುಲ್ ಅತ್ಯಂತ ಭಾವುಕರಾಗಿ ತಿಳಿಸಿದ್ದಾರೆ.

ಕೇವಲ ಅರ್ಧ ಗಂಟೆಯಲ್ಲಿ ಸರ್ವನಾಶ

ಮಧ್ಯರಾತ್ರಿ ಸುಮಾರು 12 ಗಂಟೆಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದವು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೇವಲ 30 ನಿಮಿಷಗಳಲ್ಲೇ ಬೆಂಕಿಯನ್ನು ನಿಯಂತ್ರಣಕ್ಕೆ ತಂದರಾದರೂ, ಅಷ್ಟರಲ್ಲೇ ಇಡೀ ಪಬ್ ಸುಟ್ಟು ಕರಕಲಾಗಿತ್ತು.

ಮತ್ತಷ್ಟು ಓದಿ: ಲಕ್ನೋ ಕೋಚಿಂಗ್ ಸೆಂಟರ್​​ನಲ್ಲಿ ಭೀಕರ ಬೆಂಕಿ ದುರಂತ; ಕಿಟಕಿಯಿಂದ ಹಾರಿದ ವಿದ್ಯಾರ್ಥಿಗಳು

ಪಬ್‌ನಲ್ಲಿ ಲೈವ್ ಮ್ಯೂಸಿಕ್ ಪ್ರದರ್ಶನ ನೀಡುತ್ತಿದ್ದ ಗಾಯಕನೊಬ್ಬ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ವೇದಿಕೆಯ ಪಕ್ಕದಲ್ಲಿದ್ದ ಮೇನ್ ಸರ್ಕ್ಯೂಟ್ ಬ್ರೇಕರ್‌ನಿಂದ ಮೊದಲು ಸಣ್ಣದಾಗಿ ಹೊಗೆ ಬರುತ್ತಿರುವುದು ಕಂಡುಬಂದಿದೆ. ಮರುಕ್ಷಣದಲ್ಲೇ ಇಡೀ ಪಬ್‌ನ ವಿದ್ಯುತ್ ಸಂಪರ್ಕ ಕಡಿತಗೊಂಡು ದೊಡ್ಡ ಸ್ಫೋಟದ ಶಬ್ದ ಕೇಳಿಸಿದೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಇಡೀ ಜಾಗ ಕಪ್ಪು ಹೊಗೆಯಿಂದ ತುಂಬಿಹೋಗಿತ್ತು ಎಂದು ಆತ ಭೀತಿಯಿಂದ ಹೇಳಿದ್ದಾನೆ.

ಹಳೆಯ ಕರಾಳ ನೆನಪುಗಳನ್ನು ಮರುಕಳಿಸಿದ ದುರಂತ

ಥೈಲ್ಯಾಂಡ್‌ನ ನೈಟ್‌ಕ್ಲಬ್‌ಗಳಲ್ಲಿ ಇಂತಹ ಭೀಕರ ಅಗ್ನಿ ದುರಂತಗಳು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸುರಕ್ಷತಾ ನಿಯಮಗಳ ನಿರ್ಲಕ್ಷ್ಯದಿಂದಾಗಿ ನೂರಾರು ಜೀವಗಳು ಬಲಿಯಾಗಿವೆ.

2022ರ ಮ್ಯೂಸಿಕ್ ಪಬ್ ದುರಂತ: ಥೈಲ್ಯಾಂಡ್‌ನ ಪೂರ್ವ ಭಾಗದ ಮ್ಯೂಸಿಕ್ ಪಬ್ ಒಂದರಲ್ಲಿ ನಡೆದ ಅಗ್ನಿ ಅವಘಡದಲ್ಲಿ 14 ಯುವಕರು ಮೃತಪಟ್ಟಿದ್ದರು.

2009ರ ಸಂತಿಕಾ ನೈಟ್‌ಕ್ಲಬ್ : ಜಾಗತಿಕವಾಗಿ ಸದ್ದು ಮಾಡಿದ್ದ ಈ ದುರಂತ ಜನವರಿ 1, 2009 ರ ಹೊಸ ವರ್ಷದ ಪಾರ್ಟಿ ವೇಳೆ ನಡೆದಿತ್ತು. ಕ್ಲಬ್ ಒಳಗಡೆ ಇನ್ಡೋರ್ ಪಟಾಕಿ ಹಾರಿಸಿದ ಕಾರಣ ಇಡೀ ಕಟ್ಟಡಕ್ಕೆ ಬೆಂಕಿ ಬಿದ್ದು 66 ಜನರು ಸಾವನ್ನಪ್ಪಿದ್ದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಯಾವುದೇ ಒಳಾಂಗಣ ಪಬ್ ಅಥವಾ ಕ್ಲಬ್‌ಗಳಲ್ಲಿ ತುರ್ತು ನಿರ್ಗಮನ ದ್ವಾರಗಳು ಮತ್ತು ಅಗ್ನಿಶಾಮಕ ಉಪಕರಣಗಳು ಕಡ್ಡಾಯವಾಗಿ ಇರಬೇಕು ಎಂಬ ನಿಯಮವಿದ್ದರೂ, ಇವುಗಳನ್ನು ಗಾಳಿಗೆ ತೂರುತ್ತಿರುವುದರಿಂದಲೇ ಇಂತಹ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಒಂದೊಳ್ಳೆ ಚಿತ್ರ ತುಳಿದ ಕಾಣದ ಕೈಗಳು; ‘ಮದರ್ ಪ್ರಾಮಿಸ್’ಚಿತ್ರಕ್ಕೆ ಸಂಕಷ್ಟ – Kannada News | Mother Promise Movie: Negative Ratings Impact Dhananjaya Film and Box Office

ಯಾವುದೇ ಸಿನಿಮಾ ರಿಲೀಸ್ ಆದರೂ ಉತ್ತಮವಾಗಿದೆ ಅಥವಾ ಉತ್ತಮವಾಗಿಲ್ಲ ಎಂದು ನಿರ್ಧಾರ ಆಗೋದು ರೇಟಿಂಗ್ ಮೇಲೆ. ಇದನ್ನು ಆಧರಿಸಿಯೇ ಜನರು ಸಿನಿಮಾಗೆ ತೆರಳುತ್ತಾರೆ. ಸದ್ಯದ ಮಟ್ಟಿಗೆ ಟ್ರೆಂಡಿಂಗ್ ರೇಟಿಂಗ್ ಆ್ಯಪ್ ಎಂದರೆ ಬುಕ್ ಮೈ ಶೋ. ಈ ಆ್ಯಪ್ ಮೂಲಕ ಸಿನಿಮಾ ಟಿಕೆಟ್ ಬುಕ್ ಮಾಡಿ, ಆ ಬಳಿಕ ರೇಟಿಂಗ್ ಕೊಡಬಹುದು. ಡಾಲಿ ಧನಂಜಯ್ ನಟಿಸಿ, ನಿರ್ಮಿಸಿರೋ ‘ಮದರ್ ಪ್ರಾಮಿಸ್’ ಸಿನಿಮಾಗೆ (Mother Promise Movie ) ಈ ರೇಟಿಂಗ್​​ಗಳೇ ಮುಳುವಾಗಿವೆ.

ಇತ್ತೀಚಿನ ದಿನಗಳಲ್ಲಿ ಕೆಲವು ಸಿನಿಮಾಗಳು ವಿಮರ್ಶೆ ಆಯ್ಕೆಯನ್ನೇ ಆಫ್ ಮಾಡುತ್ತಿವೆ. ರಿಲೀಸ್ ಬಳಿಕ ಕೆಲವರು ದುರುದ್ದೇಶದಿಂದ ಸಿನಿಮಾಗೆ ಕೆಟ್ಟ ರೇಟಿಂಗ್ ಕೊಡುತ್ತಾರೆ. ‘ಮದರ್ ಪ್ರಾಮಿಸ್’ ಸಿನಿಮಾ ಹಾಸ್ಯದ ಅಲೆಯಲ್ಲಿ ಪ್ರೇಕ್ಷಕರನ್ನು ತೇಲಿಸೋ ತಾಕತ್ತು ಹೊಂದಿದೆ. ಆದರೆ, ಇದಕ್ಕೆ ಕೆಲವರು ಹತ್ತಕ್ಕೆ ಒಂದು ರೇಟಿಂಗ್ ಕೊಟ್ಟು ಸಿನಿಮಾನ ತುಳಿಯೋ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ವಿಮರ್ಶೆಗೆ ಹೆಚ್ಚು ಲೈಕ್ಸ್ ಸಿಗುವಂತೆ ಮಾಡಿ, ಅದು ಮೊದಲಿಗೆ ಎದ್ದು ಕಾಣುವಂತೆ ಮಾಡಿದ್ದಾರೆ.

ಹಾಸ್ಯದ ಶೈಲಿಯ ಸಿನಿಮಾಗಳನ್ನು ನೋಡುವ ವರ್ಗ ದೊಡ್ಡದಿದೆ. ಆದರೆ, ಉದ್ದೇಶಪೂರ್ವಕವಾಗಿ ಹಬ್ಬಿಸಿದ ನೆಗೆಟಿವ್ ವಿಮರ್ಶೆ ಕಾರಣದಿಂದ ಚಿತ್ರದ ಗಳಿಕೆ ಕುಗ್ಗಿದೆ. ಮೂರು ದಿನಕ್ಕೆ ಸಿನಿಮಾ ಕೇವಲ ಒಂದೂವರೆ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಚಿತ್ರತಂಡದ ಆತಂಕ ಹೆಚ್ಚಿಸಿದೆ.

ಧನಂಜಯ್ ಅವರು ಎಲ್ಲಾ ಹಿರೋಗಳ ಜೊತೆಯೂ ಉತ್ತಮವಾಗಿದ್ದಾರೆ. ಅವರಿಗೆ ಯಾವುದೇ ಶತ್ರುಗಳಿಲ್ಲ ಎಂದೇ ಹೇಳಬಹುದು. ಆದಾಗ್ಯೂ ಸಿನಿಮಾ ಬಗ್ಗೆ ಈ ರೀತಿ ನೆಗಟಿವ್ ವಿಮರ್ಶೆ ಹಬ್ಬಿಸಿದವರು ಯಾರು ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಡಾಲಿ ಧನಂಜಯ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬೇಸರ ಹೊರಹಾಕಿದ್ದಾರೆ. ದಯವಿಟ್ಟು ಸಿನಿಮಾ ನೋಡುವಂತೆ ಅವರು ಅಭಿಮಾನಿಗಳ ಬಳಿ ಕೋರಿಕೊ0ಡಿದ್ದಾರೆ.

ಇದನ್ನೂ ಓದಿ: ‘ಮದರ್ ಪ್ರಾಮಿಸ್’ ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ, ಡಾಲಿ ಬೇಸರ

‘ಮದರ್ ಪ್ರಾಮಿಸ್’ ಚಿತ್ರಕ್ಕೆ ಪೂರ್ಣಚಂದ್ರ ಮೈಸೂರು ನಿರ್ದೇಶನ ಮಾಡಿದ್ದಾರೆ. ಡಾಲಿ ನಿರ್ಮಿಸಿದ್ದಾರೆ. ಈ ಚಿತ್ರದ ಹಾಡುಗಳು ಗಮನ ಸೆಳೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರಿಗರೇ ನಿರಾಳವಾಗಿ ಉಸಿರಾಡಿ! ಮೆಜೆಸ್ಟಿಕ್ ಸೇರಿದಂತೆ ನಗರದ ಹಲವೆಡೆ ವಾಯು ಗುಣಮಟ್ಟ ಸೂಪರ್ – Kannada News | Karnataka AQI Today: Bengaluru Air Quality Improves Post Monsoon Rains

ಬೆಂಗಳೂರಿಗರೇ ನಿರಾಳವಾಗಿ ಉಸಿರಾಡಿ!

ಬೆಂಗಳೂರು, ಜುಲೈ 13: ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಮತ್ತು ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ತೃಪ್ತಿದಾಯಕ ಹಾಗೂ ಸಾಧಾರಣ ಮಟ್ಟದಲ್ಲಿದೆ. ಮುಂಗಾರು ಮಳೆಯ ಪ್ರಭಾವದಿಂದಾಗಿ ವಾತಾವರಣದಲ್ಲಿನ ಮಾಲಿನ್ಯಕಾರಕ ಕಣಗಳು ಕಡಿಮೆಯಾಗಿದ್ದು, ರಾಜ್ಯದ ಬಹುತೇಕ ನಗರಗಳ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ಹೇಗಿದೆ?

ಬೆಂಗಳೂರಿನಲ್ಲಿ ಇಂದಿನ ಸರಾಸರಿ AQI 61 ರಿಂದ 69ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದನ್ನು ಸಾಧಾರಣ ಅಥವಾ ಕೆಲವು ಪ್ರದೇಶಗಳಲ್ಲಿ ಉತ್ತಮ ಎಂದು ವರ್ಗೀಕರಿಸಲಾಗಿದೆ. ಬೆಂಗಳೂರಿನ ಇಂದಿನ ಹವಾಮಾನವು ಸುಮಾರು 28°C ತಾಪಮಾನ ಹೊಂದಿದ್ದು, ತಾಜಾ ಗಾಳಿಯೊಂದಿಗೆ ಹೊರಾಂಗಣ ಚಟುವಟಿಕೆಗಳಿಗೆ ಅತ್ಯಂತ ಸೂಕ್ತವಾಗಿದೆ.

ನಗರದ ಪ್ರಮುಖ ವಲಯಗಳ ವಿವರ

  • ಹೆಬ್ಬಾಳ ಮತ್ತು ಪೀಣ್ಯ: ಕೈಗಾರಿಕಾ ಮತ್ತು ಸಂಚಾರ ದಟ್ಟಣೆ ಹೆಚ್ಚಿರುವ ಈ ಪ್ರದೇಶಗಳಲ್ಲಿ AQI 60 ರ ಆಸುಪಾಸಿನಲ್ಲಿದ್ದು, ನಿಯಂತ್ರಣದಲ್ಲಿದೆ. PM2.5 ಮತ್ತು PM10 ಕಣಗಳ ಪ್ರಮಾಣವು ಅಪಾಯಕಾರಿ ಮಟ್ಟಕ್ಕಿಂತ ತೀರಾ ಕಡಿಮೆಯಿದೆ.
  • ಮೆಜೆಸ್ಟಿಕ್ (ಸಿಟಿ ರೈಲ್ವೆ ನಿಲ್ದಾಣ): ಸದಾ ಜನನಿಬಿಡವಾಗಿರುವ ಈ ಭಾಗದಲ್ಲೂ ಗಾಳಿಯ ಗುಣಮಟ್ಟ ಉತ್ತಮವಾಗಿದ್ದು, ಸೂಚ್ಯಂಕವು 55 ರಿಂದ 62 ರ ಒಳಗಿದೆ.
  • ಐಟಿ ವಲಯಗಳು: ಇಲ್ಲಿ ವಾಯು ಮಾಲಿನ್ಯದ ಪ್ರಮಾಣವು 65 ರಷ್ಟಿದ್ದು, ಉಸಿರಾಟದ ತೊಂದರೆ ಇರುವವರಿಗೆ ಹೊರತುಪಡಿಸಿ ಉಳಿದ ಜನ ಸಾಮಾನ್ಯರಿಗೆ ಯಾವುದೇ ಆರೋಗ್ಯದ ಅಪಾಯವಿಲ್ಲ.

ಕರ್ನಾಟಕದ ಇತರೆ ಪ್ರಮುಖ ನಗರಗಳ AQI ಸ್ಥಿತಿ

ಮಡಿಕೇರಿ ಮತ್ತು ಮಂಗಳೂರು ಸೇರಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಇಲ್ಲಿನ AQI 35 ರಿಂದ 53ರಷ್ಟಿದ್ದು, ಅತ್ಯಂತ ಉತ್ತಮ ಹಾಗೂ ಶುದ್ಧವಾದ ಗಾಳಿ ದಾಖಲಾಗಿದೆ. ಉತ್ತರ ಕರ್ನಾಟಕದ ದಾವಣಗೆರೆ ಮತ್ತು ಕೊಪ್ಪಳ ಭಾಗಗಳಲ್ಲಿ ಸೂಚ್ಯಂಕವು 53 ರಿಂದ 60ರಷ್ಟಿದ್ದು, ವಾಯು ಗುಣಮಟ್ಟವು ತೃಪ್ತಿದಾಯಕವಾಗಿದೆ. ಬೆಂಗಳೂರಿಗೆ ಹತ್ತಿರವಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ AQI 60 ರಿಂದ 66 ರ ಆಸುಪಾಸಿನಲ್ಲಿದ್ದು, ಹವಾಮಾನವು ಸಂಪೂರ್ಣವಾಗಿ ಆರೋಗ್ಯಕರವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡಿ – Kannada News | Daily Horoscope Today: Sun and Moon Transit in Mithuna Rashi, Daily Astrology Predictions for 12 Zodiac Signs

ಈ ದಿನ ಸೂರ್ಯ ಮತ್ತು ಚಂದ್ರ ಇಬ್ಬರೂ ಮಿಥುನ ರಾಶಿಯಲ್ಲಿ ಸಂಚರಿಸುತ್ತಿದ್ದು, ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸದ ಕೃಷ್ಣಪಕ್ಷ ಚತುರ್ದಶಿ, ಆರ್ದ್ರಾ ನಕ್ಷತ್ರ ಮತ್ತು ಧ್ರುವ ಯೋಗ ಇರುವ ದಿನವಾಗಿದೆ. ರಾಹುಕಾಲವು ಬೆಳಗ್ಗೆ 7:36 ರಿಂದ 9:12 ರವರೆಗೆ ಇದ್ದು, ಸಂಕಲ್ಪ ಕಾಲವು 9:12 ರಿಂದ 10:49 ರವರೆಗೆ ಇರುತ್ತದೆ. ಪ್ರತಿಯೊಂದು ರಾಶಿಯವರ ಆರೋಗ್ಯ, ವೃತ್ತಿಜೀವನ, ಆರ್ಥಿಕ ಪರಿಸ್ಥಿತಿ, ಸಂಬಂಧಗಳು, ಪ್ರೀತಿ-ಪ್ರೇಮ ಮತ್ತು ಕುಟುಂಬ ಜೀವನದ ಮೇಲೆ ಈ ಗ್ರಹಗಳ ಸಂಚಾರದ ಪ್ರಭಾವವನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9 ಕನ್ನಡ ಡಿಜಿಟಲ್’ ದಿನಭವಿಷ್ಯ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಅಲ್ಲದೆ, ಪ್ರತಿಯೊಂದು ರಾಶಿಯವರಿಗೆ ಅದೃಷ್ಟ ಸಂಖ್ಯೆ, ಶುಭ ಬಣ್ಣ, ಪ್ರಯಾಣದ ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ.

Source link

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಸವಾಲಿನ ದಿನ; ಬರೀ ಮಾತು ಬಿಟ್ಟು, ಕೆಲಸ ಮಾಡಿ ತೋರಿಸಬೇಕಾಗುವುದು – Kannada News | Daily Horoscope for July 13, 2026: Monday Astrology Predictions, Uttarayan, Greeshma Ritu and Jyeshtha Krishna Paksha

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ನಿಜ ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ವೃದ್ಧಿ, ಕರಣ : ವಣಿಜ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:38 – 09:14, ಯಮಗಂಡ ಕಾಲ 10:49 – 12:25, ಗುಳಿಕ ಕಾಲ 14:01 – 15:37

​ಮೇಷ ರಾಶಿ: ​ಮೇಷ ರಾಶಿಯವರಿಗೆ ಈ ದಿನವು ಮಿಶ್ರಫಲದಿಂದ ಕೂಡಿರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಒತ್ತಡ ಸ್ವಲ್ಪ ಹೆಚ್ಚಾಗಬಹುದು, ಆದರೆ ನಿಮ್ಮ ಕಠಿಣ ಪರಿಶ್ರಮಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಆರ್ಥಿಕವಾಗಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಉದ್ಯಮಿಗಳಿಗೆ ಹೊಸ ಹೂಡಿಕೆಗೆ ಇದು ಸೂಕ್ತ ಸಮಯವಲ್ಲ. ಕೌಟುಂಬಿಕವಾಗಿ ಸಂಗಾತಿಯ ಬೆಂಬಲ ನಿಮಗೆ ಧೈರ್ಯ ತುಂಬುತ್ತದೆ. ಆರೋಗ್ಯದ ದೃಷ್ಟಿಯಿಂದ ಹಳೆಯ ಮೂಳೆ ಅಥವಾ ಕೀಲು ನೋವಿನ ಸಮಸ್ಯೆ ಕಾಡಬಹುದು, ಎಚ್ಚರ ವಹಿಸಿ.

ವೃಷಭ ರಾಶಿ: ​ವೃಷಭ ರಾಶಿಯವರಿಗೆ ಇಂದು ಅತ್ಯಂತ ಸಕಾರಾತ್ಮಕ ದಿನವಾಗಿದೆ. ವೃತ್ತಿಜೀವನದಲ್ಲಿ ದೀರ್ಘಕಾಲದಿಂದ ನಿರೀಕ್ಷಿಸುತ್ತಿದ್ದ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಆರ್ಥಿಕ ಸ್ಥಿತಿ ಗಟ್ಟಿಯಾಗಲಿದ್ದು, ಹಳೆಯ ಬಾಕಿ ಹಣ ಕೈಸೇರುವ ಸಾಧ್ಯತೆ ಇದೆ. ಸಣ್ಣ ಪ್ರಮಾಣದ ವ್ಯವಹಾರಸ್ಥರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರಲಿದ್ದು, ಮಕ್ಕಳ ಪ್ರಗತಿ ನಿಮಗೆ ಸಂತೋಷ ತರಲಿದೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ನಿಯಂತ್ರಣವಿರಲಿ.

ಮಿಥುನ ರಾಶಿ: ​ಮಿಥುನ ರಾಶಿಯವರಿಗೆ ಈ ದಿನ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಕಾಲ. ನಿಮ್ಮ ಮಾತಿನ ಚಾತುರ್ಯ ಮತ್ತು ಸಮಯಪ್ರಜ್ಞೆಯಿಂದ ಕಚೇರಿಯಲ್ಲಿ ಎಲ್ಲರ ಗಮನ ಸೆಳೆಯುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಕೆಲಸದ ಆಫರ್ ಸಿಗುವ ಯೋಗವಿದೆ. ಆರ್ಥಿಕವಾಗಿ ಆದಾಯ ಮತ್ತು ಖರ್ಚು ಸಮಾನವಾಗಿರಲಿದೆ. ಭೂಮಿ ಅಥವಾ ವಾಹನ ಖರೀದಿಯ ಆಲೋಚನೆಗಳು ಮುಂಚೂಣಿಗೆ ಬರಲಿವೆ. ಕಣ್ಣಿನ ಕಿರಿಕಿರಿ ಅಥವಾ ತಲೆನೋವಿನಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕರ್ಕಾಟಕ ರಾಶಿ: ​ಚಂದ್ರನ ಪ್ರಭಾವದಿಂದ ಕರ್ಕಾಟಕ ರಾಶಿಯವರು ಇಂದು ಭಾವನಾತ್ಮಕವಾಗಿ ಯೋಚಿಸುತ್ತಾರೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಿವಾದಗಳಿಗೆ ಇಳಿಯಬೇಡಿ, ನಿಮ್ಮ ಕೆಲಸದ ಕಡೆಗೆ ಮಾತ್ರ ಗಮನ ಹರಿಸಿ. ವ್ಯಾಪಾರಸ್ಥರಿಗೆ ಸಾಧಾರಣ ಪ್ರಗತಿ ಇರಲಿದೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಹಗುರವೆನಿಸಬಹುದು. ಕೌಟುಂಬಿಕವಾಗಿ ತಾಯಿಯ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸುವುದು ಅಗತ್ಯ. ಹಠಾತ್ ಕೋಪವನ್ನು ನಿಯಂತ್ರಿಸಿಕೊಳ್ಳುವುದು ಇಂದಿನ ಯಶಸ್ಸಿನ ಸೂತ್ರ.

ಸಿಂಹ ರಾಶಿ: ​ಸಿಂಹ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಿರುವ ದಿನವಿದು. ಎಂತಹ ಕಠಿಣ ಸವಾಲುಗಳು ಎದುರಾದರೂ ನಿಮ್ಮ ನಾಯಕತ್ವ ಗುಣದಿಂದ ಅವುಗಳನ್ನು ಸುಲಭವಾಗಿ ನಿಭಾಯಿಸುತ್ತೀರಿ. ಉದ್ಯೋಗಸ್ಥರಿಗೆ ಸಂಬಳದ ಹೆಚ್ಚಳ ಅಥವಾ ಬಡ್ತಿಯ ಶುಭ ವಾರ್ತೆ ಕೇಳಿಬರಬಹುದು. ಹೊಸ ವ್ಯವಹಾರವನ್ನು ವಿಸ್ತರಿಸಲು ಈ ದಿನ ಪೂರಕವಾಗಿದೆ. ಒಡಹುಟ್ಟಿದವರೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಲಿವೆ. ಅತಿಯಾದ ರಕ್ತದೊತ್ತಡ ಇರುವವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.

ಕನ್ಯಾ ರಾಶಿ: ​ಕನ್ಯಾ ರಾಶಿಯವರಿಗೆ ಆರ್ಥಿಕವಾಗಿ ಅತ್ಯಂತ ಲಾಭದಾಯಕ ದಿನವಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು, ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಹೆಚ್ಚಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಉತ್ತಮ ದಿನ. ನೂತನ ಆಸ್ತಿ ಅಥವಾ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ನಿಮ್ಮ ಆಸೆ ಕೈಗೂಡಬಹುದು. ಕೌಟುಂಬಿಕ ವಾತಾವರಣವು ಆನಂದಮಯವಾಗಿರುತ್ತದೆ. ದಿನದ ಕೊನೆಯಲ್ಲಿ ಸಣ್ಣ ಆಯಾಸ ಕಾಡಬಹುದು.

ತುಲಾ ರಾಶಿ: ​ತುಲಾ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಮತ್ತು ಸಹೋದ್ಯೋಗಿಗಳಿಂದ ಉತ್ತಮ ಬೆಂಬಲ ಸಿಗಲಿದೆ. ನಿಮ್ಮ ಯೋಜಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದ್ದು, ಅವಿವಾಹಿತರಿಗೆ ಕಲ್ಯಾಣ ಯೋಗ ಕೂಡಿಬರಬಹುದು. ಅನಗತ್ಯ ದೂರದ ಪ್ರಯಾಣಗಳನ್ನು ತಪ್ಪಿಸುವುದು ಒಳ್ಳೆಯದು, ಇಲ್ಲದಿದ್ದರೆ ಧನನಷ್ಟ ಹಾಗೂ ಆಯಾಸವಾಗಬಹುದು. ಆರೋಗ್ಯ ಸ್ಥಿರವಾಗಿರುತ್ತದೆ, ಆದರೆ ಯೋಗ-ಧ್ಯಾನಕ್ಕೆ ಸಮಯ ನೀಡಿ.

ವೃಶ್ಚಿಕ ರಾಶಿ: ​ವೃಶ್ಚಿಕ ರಾಶಿಯವರು ಹಣಕಾಸಿನ ವಿಷಯದಲ್ಲಿ ಇಂದು ಅತ್ಯಂತ ಜಾಗರೂಕರಾಗಿರಬೇಕು. ಪರಿಚಯಸ್ಥರಿದ್ದರೂ ಯಾರಿಗೂ ದೊಡ್ಡ ಮೊತ್ತದ ಸಾಲವನ್ನು ನೀಡಲು ಹೋಗಬೇಡಿ. ವ್ಯವಹಾರದಲ್ಲಿ ಹೊಸ ಪಾಲುದಾರಿಕೆ ಮಾಡಿಕೊಳ್ಳುವ ಮುನ್ನ ಯೋಚಿಸುವುದು ಒಳಿತು. ಕಚೇರಿಯಲ್ಲಿ ರಾಜಕೀಯದಿಂದ ದೂರವಿರಿ. ಕುಟುಂಬದಲ್ಲಿ ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚಾಗುವ ಸಂಭವವಿದೆ. ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

ಧನು ರಾಶಿ: ​ಧನು ರಾಶಿಯವರಿಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕೌಟುಂಬಿಕ ಸಮಸ್ಯೆಗಳು ಹಿರಿಯರ ಮಧ್ಯಸ್ಥಿಕೆಯಿಂದ ಬಗೆಹರಿಯಲಿವೆ. ವೃತ್ತಿರಂಗದಲ್ಲಿ ನಿಮ್ಮ ಜವಾಬ್ದಾರಿಗಳು ಬದಲಾಗಬಹುದು, ಇದು ಭವಿಷ್ಯಕ್ಕೆ ಒಳ್ಳೆಯದು. ತೀರ್ಥಯಾತ್ರೆ ಅಥವಾ ದೂರದ ಪ್ರಯಾಣದಿಂದ ಮಾನಸಿಕ ನೆಮ್ಮದಿ ಮತ್ತು ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನ ದೊರೆಯುತ್ತದೆ.

ಮಕರ ರಾಶಿ: ​ಮಕರ ರಾಶಿಯವರಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಉತ್ತಮ ಫಲ ಸಿಗುವ ದಿನವಿದು. ಉದ್ಯೋಗದಲ್ಲಿ ನಿಮ್ಮ ಶ್ರಮವನ್ನು ಸಂಸ್ಥೆಯು ಗುರುತಿಸಲಿದೆ. ಕೃಷಿ ಅಥವಾ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವವರಿಗೆ ಉತ್ತಮ ಲಾಭಾಂಶ ದೊರೆಯಲಿದೆ. ಆರೋಗ್ಯದಲ್ಲಿ ಹಳೆಯ ಕಿರಿಕಿರಿಗಳು ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಸಿಗುವ ಲಕ್ಷಣಗಳಿವೆ. ಸಂಗಾತಿಯೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳುವ ನಿರ್ಧಾರಗಳು ಕುಟುಂಬದ ಏಳಿಗೆಗೆ ಕಾರಣವಾಗಲಿವೆ.

ಕುಂಭ ರಾಶಿ: ​ಸೃಜನಶೀಲ, ಸಾಹಿತ್ಯ ಮತ್ತು ಕಲಾತ್ಮಕ ಕ್ಷೇತ್ರಗಳಲ್ಲಿ ತೊಡಗಿರುವ ಕುಂಭ ರಾಶಿಯವರಿಗೆ ಇದು ಅತ್ಯುತ್ತಮ ದಿನ. ನಿಮ್ಮ ನವೀನ ಆಲೋಚನೆಗಳಿಗೆ ಮನ್ನಣೆ ಸಿಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದರೆ, ಕೌಟುಂಬಿಕ ಜೀವನದಲ್ಲಿ ಸಂಗಾತಿಯೊಂದಿಗೆ ಸಣ್ಣಪುಟ್ಟ ವೈಚಾರಿಕ ಭಿನ್ನಾಭಿಪ್ರಾಯಗಳು ಬರಬಹುದು, ಶಾಂತವಾಗಿ ಮಾತನಾಡಿ ಬಗೆಹರಿಸಿಕೊಳ್ಳಿ. ಗಂಟಲು ನೋವು ಅಥವಾ ಶೀತದ ಸಮಸ್ಯೆ ಕಾಡಬಹುದು.

ಮೀನ ರಾಶಿ: ​ಮೀನ ರಾಶಿಯವರು ಇಂದು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರಪಡದೆ, ಹಿರಿಯರ ಸಲಹೆ ಪಡೆಯುವುದು ಸೂಕ್ತ. ಕೌಟುಂಬಿಕ ವಾತಾವರಣವು ಹಬ್ಬದಂತೆ ಸಂತೋಷದಿಂದ ಕೂಡಿರುತ್ತದೆ. ವ್ಯಾಪಾರದಲ್ಲಿ ಸಾಲ ಕೊಡುವುದನ್ನು ಆದಷ್ಟು ತಪ್ಪಿಸಿ. ದಿನಸಿ, ಧಾನ್ಯ ಅಥವಾ ದಿನಬಳಕೆಯ ವಸ್ತುಗಳ ವ್ಯಾಪಾರಿಗಳಿಗೆ ಉತ್ತಮ ವಹಿವಾಟು ನಡೆಯಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಸಾಧಾರಣವಾಗಿದ್ದು, ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳಾಗದಂತೆ ಹಿತಮಿತವಾದ ಊಟವಿರಲಿ.

ಲೋಹಿತ್ ಹೆಬ್ಬಾರ್ – 8762924271 (what’s app only)

Published On – 12:30 am, Mon, 13 July 26

Source link

ರಾಜಕೀಯ ಪಕ್ಷವಾಗಲಿದೆ ತಮ್ಮ ಜನಾಂದೋಲನ; ಧರ್ಮ ರಾಜಕಾರಣಕ್ಕೆ ಅವಕಾಶ ಇಲ್ಲ: ಕೆ ಅಣ್ಣಾಮಲೈ – Kannada News | Annamalai says We The Leaders will become political party

ಚೆನ್ನೈ, ಜುಲೈ 12: ತಮ್ಮ ಹೊಸ ಜನಾಂದೋಲನವು ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷವಾಗಿ ರೂಪುಗೊಳ್ಳಲಿದೆ ಎಂದು ಮಾಜಿ ಬಿಜೆಪಿ ನಾಯಕ ಕೆ ಅಣ್ಣಾಮಲೈ (K Annamalai) ಹೇಳಿದ್ದಾರೆ. ತಮಿಳುನಾಡಿನ ಪೊಲ್ಲಾಚಿಯಲ್ಲಿ ಡ್ರಗ್ ಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ‘ವೀ ದಿ ಲೀಡರ್ಸ್’ (We The Leaders- ನಾವು ನಾಯಕರು) ಸಂಘಟನೆಯ ತತ್ವದ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. “ಧರ್ಮ ನಮ್ಮ ವ್ಯಾಪ್ತಿಯಿಂದ ಹೊರಗಿದೆ, ‘ವೀ ದಿ ಲೀಡರ್ಸ್’ ರಾಜಕೀಯ ಪಕ್ಷವಾಗಲಿದೆ” ಎಂದಿದ್ದಾರೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ನಾಯಕತ್ವದ ಬದಲಾವಣೆಗಳು ಅಥವಾ ಹೊಸ ಸಂಘಟನೆ/ಪಕ್ಷ ರಚನೆಯ ಚರ್ಚೆಗಳ ನಡುವೆ ಅಣ್ಣಾಮಲೈ ಅವರು ರಾಜಕೀಯ ಮತ್ತು ಧರ್ಮದ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ನಾಯಕರು ಧಾರ್ಮಿಕ ವಿಷಯಗಳಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುವ ಬದಲು ಸಾರ್ವಜನಿಕ ನೀತಿ ಮತ್ತು ಆಡಳಿತದತ್ತ ಗಮನ ಹರಿಸಬೇಕು ಎಂಬುದನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಕತಾರ್ ಮಾಜಿ ದೊರೆ ಶೇಖ್ ಹಮದ್ ಬಿನ್ ಖಲೀಫ ಅಲ್ ಥಾನಿ ನಿಧನ; ಗೌರವಾರ್ಥವಾಗಿ ಭಾರತದಿಂದ ಒಂದು ದಿನ ರಾಷ್ಟ್ರೀಯ ಶೋಕಾಚರಣೆ

“ಧರ್ಮ ನಮ್ಮ ವ್ಯಾಪ್ತಿಯಿಂದ ಹೊರಗಿದೆ”

ಅಣ್ಣಾಮಲೈ ಅವರು ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳು ವೈಯಕ್ತಿಕ ಹಾಗೂ ಸಾಮಾಜಿಕ ಧಾರ್ಮಿಕ ಸಂಸ್ಥೆಗಳಿಗೆ ಬಿಟ್ಟದ್ದು ಎಂದು ಪ್ರತಿಪಾದಿಸಿದ್ದಾರೆ. ರಾಜಕೀಯ ನಾಯಕರು ಧರ್ಮವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು ಅಥವಾ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಬಾರದು, ಬದಲಿಗೆ ಧರ್ಮವು ರಾಜಕೀಯ ಚಟುವಟಿಕೆಗಳ ಅಧಿಕೃತ ವ್ಯಾಪ್ತಿಯಿಂದ ಹೊರಗಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ವೀ ದಿ ಲೀಡರ್ಸ್, ರಾಜಕೀಯ ಪಕ್ಷವಾಗಲಿದೆ”

ರಾಜಕೀಯ ಸಂಘಟನೆ ಅಥವಾ ಹೊಸ ಪರ್ಯಾಯ ಶಕ್ತಿಯನ್ನು ಕಟ್ಟುವ ಕುರಿತು ಮಾತನಾಡುತ್ತಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರು ಜನರ ಧ್ವನಿಯಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಕೇವಲ ವೈಯಕ್ತಿಕ ನಾಯಕರಾಗಿ ಉಳಿಯುವ ಬದಲು, ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಒಂದು ವ್ಯವಸ್ಥಿತ ರಾಜಕೀಯ ಪಕ್ಷವಾಗಿ ಅಥವಾ ಸಂಘಟಿತ ಶಕ್ತಿಯಾಗಿ ಹೊರಹೊಮ್ಮುವುದು ಅನಿವಾರ್ಯ ಎಂಬ ಮುನ್ಸೂಚನೆಯನ್ನು ಅವರು ಈ ಮೂಲಕ ನೀಡಿದ್ದಾರೆ.

ತಮಿಳುನಾಡು ಮತ್ತು ರಾಷ್ಟ್ರೀಯ ರಾಜಕೀಯದ ಮೇಲಿನ ಪರಿಣಾಮ

ಅಣ್ಣಾಮಲೈ ಅವರ ಈ ತತ್ವ ಆಧಾರಿತ ಮಾತುಗಳು ತಮಿಳುನಾಡು ಹಾಗೂ ಒಟ್ಟಾರೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಜಾತಿ, ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುವ ಪಕ್ಷಗಳಿಗೆ ಪರ್ಯಾಯವಾಗಿ, ಕೇವಲ ನಾಯಕತ್ವ, ಅಭಿವೃದ್ಧಿ ಮತ್ತು ಜನಕಲ್ಯಾಣವನ್ನು ಮುಂದಿಟ್ಟುಕೊಂಡು ಮುನ್ನಡೆಯುವ ರಾಜಕೀಯ ಪಕ್ಷದ ಅಗತ್ಯತೆಯನ್ನು ಅವರು ಒತ್ತಿಹೇಳಿದ್ದಾರೆ.

ಇದನ್ನೂ ಓದಿ: ನಿನ್ನೆ ಕೆಂಪು ಕೋಟೆ, ಇವತ್ತು ತಾಜ್ ಹೋಟೆಲ್; ಎರಡು ದಿನದಲ್ಲಿ ಎರಡು ಹುಸಿ ಬಾಂಬ್ ಬೆದರಿಕೆ

ಕರ್ನಾಟಕ ಕೇಡರ್​ನ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಕೆಲ ವರ್ಷ ಕಾಲ ಬಿಜೆಪಿ ಪಕ್ಷವನ್ನು ಮುನ್ನಡೆಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದನ್ನು ವಿರೋಧಿಸಿ ಅವರು ಪಕ್ಷದಿಂದ ಹೊರಬಂದಿದ್ದಾರೆ. ಈಗ ‘ವೀ ದಿ ಲೀಡರ್ಸ್’ ಎನ್ನುವ ಹೊಸ ಜನಾಂದೋಲನ ಕಟ್ಟುತ್ತಿದ್ದಾರೆ. ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಿಗೆ ಪರ್ಯಾಯವಾದ ಶಕ್ತಿ ಕಟ್ಟುವ ಗುರಿ ಅವರದ್ದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version