ಹಣ ಕೇಳಿದ್ದಕ್ಕೆ ಹಲ್ಲೆ, ಬೆದರಿಕೆ: ‘ಲಾಪತಾ ಲೇಡೀಸ್’ ನಟ ಕಣ್ಣೀರು – Kannada News | Laapataa ladies actor Satendra Soni beaten up by director or asking money

ಚಿತ್ರರಂಗಕ್ಕೆ (Movie Industry) ಎರಡು ಮುಖಗಳಿರುತ್ತವೆ. ಸೂಪರ್ ಸ್ಟಾರ್ ಆದವರಿಗೆ ಅವಶ್ಯಕತೆ ಇಲ್ಲದೆಯೋ ನೂರಾರು ಕೋಟಿ ಹಣ ನೀಡಲಾಗುತ್ತದೆ. ಆದರೆ ಪ್ರತಿಭಾವಂತ ನಟರಿಗೆ ಕೊಡುವ ಹಣ ಕೊಡಲು ಸಹ ಹಿಂದೆ ಮುಂದೆ ನೋಡಲಾಗುತ್ತದೆ. ‘ಲಾಪತಾ ಲೇಡೀಸ್’ ಚಿತ್ರದಲ್ಲಿ ನಟಿಸಿದ ಪ್ರತಿಭಾವಂತ ನಟ ಸತೇಂದ್ರ ಸೋನಿ ಇದೀಗ ಇಂಥಹುದೇ ಒಂದು ಸಂಕಷ್ಟಕ್ಕೆ ಗುರಿ ಆಗಿದ್ದಾರೆ. ಸಿನಿಮಾನಲ್ಲಿ ನಟಿಸಿ, ನಟಿಸಿದ್ದಕ್ಕೆ ಹಣ ಕೇಳಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿರುವ ಜೊತೆಗೆ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಸಹ ಹಾಕಲಾಗಿದೆಯಂತೆ.

ಸತೇಂದ್ರ ಸೋನಿ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಕಣ್ಣೀರು ಹಾಕುತ್ತಿರುವ ನಟ ಸತೇಂದ್ರ ಸೋನಿ, ‘ನಾನು ‘ಪೇಟ್ ಫಾಲ್ಕಿ’ ಹೆಸರಿನ ಸಿನಿಮಾ ಶೂಟಿಂಗ್​​ಗಾಗಿ ಮಧ್ಯ ಪ್ರದೇಶದ ಮಯ್ಯಾರ್​ಗೆ ಬಂದಿದ್ದೆ. 50 ರೂಪಾಯಿ ಸಂಭಾವನೆ ಕೊಡುವುದಾಗಿ ನನಗೆ ಹೇಳಿ ನಿರ್ದೇಶಕ ಪುಷ್ಪೇಂದ್ರ ಸಿಂಗ್ ಸಹಿ ಮಾಡಿಸಿಕೊಂಡಿದ್ದರು. ಎಂಟು ದಿನಗಳ ಶೂಟಿಂಗ್ ಮುಗಿಸಿದ್ದೇನೆ. ಆದರೆ ಬಾಕಿ ಹಣ ಕೇಳಿದ್ದಕ್ಕೆ ನನಗೆ ಬೆದರಿಕೆ ಹಾಕಲಾಗಿದೆ. ಮಾತ್ರವಲ್ಲದೆ ಸಿನಿಮಾದ ನಿರ್ದೇಶಕರು ಅವರ ಪತ್ನಿಯೊಟ್ಟಿಗೆ ಸೇರಿಕೊಂಡು ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ’ ಎನ್ನುತ್ತಾ ಕಣ್ಣೀರು ಹಾಕಿದ್ದಾರೆ.

ಮತ್ತೊಂದು ವಿಡಿಯೋನಲ್ಲಿ ನಟ ಸತೇಂದ್ರ ಸೋನಿ ಇತರೆ ಇಬ್ಬರು ಸಹನಟರೊಟ್ಟಿಗೆ ಮುಂಬೈಗೆ ಬಂದು ತಲುಪಿರುವುದಾಗಿ ಹೇಳಿದ್ದು, ಇದು ಅತ್ಯಂತ ಭಯಾನಕ ಅನುಭವ ಆಗಿತ್ತು. ನಮಗೆ ಮಯ್ಯಾರ್ ಪೊಲೀಸರು, ಅಲ್ಲಿನ ಎಸ್​​ಎಚ್​​ಓ ಇತರೆ ಕೆಲವು ರಾಜಕಾರಣಿಗಳು ಸಹಾಯ ಮಾಡಿದರು. ಇಲ್ಲದೇ ಹೋಗಿದ್ದಿದ್ದರೆ ನಾವು ಇಂದು ಮುಂಬೈಗೆ ಬರುವುದೇ ದುಸ್ತರ ಆಗಿರುತ್ತಿತ್ತು. ನಮಗೆ ಇದು ಇಂಥಹಾ ಮೊದಲ ಅನುಭವ, ಬಹಳ ಕೆಟ್ಟದಾದ ಅನುಭವ ಇದಾಗಿತ್ತು’ ಎಂದಿದ್ದಾರೆ.

ಸತೇಂದ್ರ ಸೋನಿ, ಬಾಲಿವುಡ್​​ನ ಯಶಸ್ವಿ ಸಿನಿಮಾ ‘ಲಾಪತಾ ಲೇಡೀಸ್’ ನಲ್ಲಿ ನಟಿಸಿದ್ದರು. ಸಿನಿಮಾನಲ್ಲಿ ಅವರು ನಾಯಕಿ ಫೂಲ್ ಜೊತೆಗೆ ರೈಲ್ವೆ ಸ್ಟೇಷನ್​​ನಲ್ಲಿ ಜೊತೆಗಿರುವ ಚೋಟು ಎಂಬ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಮತ್ತು ಅವರ ಪಾತ್ರ ದೊಡ್ಡ ಹಿಟ್ ಆಗಿತ್ತು. ಅದರ ನಂತರ ಸತೇಂದ್ರ ಸೋನಿ ಅವರಿಗೆ ಹಲವು ಸಿನಿಮಾಗಳಲ್ಲಿ ಪಾತ್ರಗಳು ಧಕ್ಕುತ್ತಿವೆ. ಆದರೆ ಈಗ ಸಿನಿಮಾ ಒಂದರಲ್ಲಿ ನಟಿಸಲು ಹೋದಾಗ ಅವರ ಮೇಲೆ ದೌರ್ಜನ್ಯ ಎಸಗಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

UPSC Recruitment 2026: ಪರೀಕ್ಷೆಯಿಲ್ಲದೆ ಕೇಂದ್ರ ಸರ್ಕಾರಿ ಹುದ್ದೆ ಪಡೆಯಲು ಸುವರ್ಣಾವಕಾಶ; ಜು. 17 ರೊಳಗೆ ಅರ್ಜಿ ಸಲ್ಲಿಸಿ – Kannada News | UPSC Direct Recruitment 2026: Central Govt Jobs Without Exam Apply Now!

ಕೇಂದ್ರ ಸರ್ಕಾರಿ ಹುದ್ದೆImage Credit source: Getty Images

ನೀವು ಯಾವುದೇ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಿಲ್ಲದೆ, ನೇರವಾಗಿ ಪ್ರತಿಷ್ಠಿತ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಉನ್ನತ ಹುದ್ದೆ ಪಡೆಯುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಕೇಂದ್ರ ಸಾರ್ವಜನಿಕ ಸೇವಾ ಆಯೋಗವು (UPSC) ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳ ಭರ್ತಿಗಾಗಿ ‘ನೇರ ನೇಮಕಾತಿ 2026’ (UPSC Direct Recruitment 2026) ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 27, 2026 ರಿಂದಲೇ ಅಧಿಕೃತವಾಗಿ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಜುಲೈ 17 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ದೇಶದ ಪ್ರಮುಖ ಸಚಿವಾಲಯಗಳಲ್ಲಿ ನೇಮಕಾತಿ:

ಯುಪಿಎಸ್‌ಸಿ ಬಿಡುಗಡೆ ಮಾಡಿರುವ ಅಧಿಕೃತ ಜಾಹೀರಾತು ಸಂಖ್ಯೆ 07/2026 ರ ಅಡಿಯಲ್ಲಿ ದೇಶದ ಪ್ರಮುಖ ಸಚಿವಾಲಯಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ನೇಮಕಾತಿ ಅಭಿಯಾನವು ಮುಖ್ಯವಾಗಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಆಯುಷ್ ಸಚಿವಾಲಯ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA), ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಭಾರತೀಯ ಪುರಾತತ್ವ ಸಮೀಕ್ಷೆ (ASI), ರಕ್ಷಣಾ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳಲ್ಲಿನ ಹುದ್ದೆಗಳನ್ನು ಒಳಗೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ತಜ್ಞತೆ ಮತ್ತು ಕನಿಷ್ಠ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯಾವೆಲ್ಲಾ ಪ್ರಮುಖ ಹುದ್ದೆಗಳು ಖಾಲಿ ಇವೆ?

ಈ ನೇರ ನೇಮಕಾತಿ ಅಡಿಯಲ್ಲಿ ಕೇಂದ್ರ ಸರ್ಕಾರದ ಉನ್ನತ ದರ್ಜೆಯ ವಿವಿಧ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳನ್ನು ಜಂಟಿ ನಿರ್ದೇಶಕರು, ವೈದ್ಯಕೀಯ ಅಧಿಕಾರಿ, ಸಂಶೋಧನಾ ಅಧಿಕಾರಿ (ಸಿದ್ಧ), ಏರೋನಾಟಿಕಲ್ ಅಧಿಕಾರಿ, ಕಾನೂನು ಅಧಿಕಾರಿ ಹಾಗೂ ಕಂಪನಿ ಪ್ರಾಸಿಕ್ಯೂಟರ್ ಹುದ್ದೆಗಳಿಗೆ ನಿಯೋಜಿಸಲಾಗುತ್ತದೆ. ಇದರೊಂದಿಗೆ ಉಪ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ, ಹಿರಿಯ ಛಾಯಾಗ್ರಹಣ ಅಧಿಕಾರಿ, ಛಾಯಾಗ್ರಹಣ ಅಧಿಕಾರಿ, ಸಿವಿಲ್ ಸಹಾಯಕ ಭದ್ರತಾ ಅಧಿಕಾರಿ, ಸ್ಟೋರ್ಸ್ ಆಫೀಸರ್, ಸ್ಪೆಷಲಿಸ್ಟ್ ಗ್ರೇಡ್-III ಮತ್ತು ಸಹಾಯಕ ಪ್ರಾಧ್ಯಾಪಕರಂತಹ ಉನ್ನತ ಹುದ್ದೆಗಳೂ ಈ ಪಟ್ಟಿಯಲ್ಲಿವೆ.

ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಮಾನದಂಡ:

ಇದು ಲಿಖಿತ ಪರೀಕ್ಷೆಯಿಲ್ಲದ ನೇರ ನೇಮಕಾತಿ ಆಧಾರದ ಮೇಲೆ ನಡೆಯುತ್ತಿರುವುದರಿಂದ, ಪ್ರತಿ ಹುದ್ದೆಗೆ ನಿಗದಿಪಡಿಸಲಾದ ಶೈಕ್ಷಣಿಕ ಅರ್ಹತೆ, ಕೆಲಸದ ಅನುಭವ (Work Experience) ಮತ್ತು ವಯೋಮಿತಿಗಳು ವಿಭಿನ್ನವಾಗಿವೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮತ್ತು ಕ್ಷೇತ್ರಕ್ಕೆ ಸೂಕ್ತವಾದ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಯುಪಿಎಸ್‌ಸಿ ಬಿಡುಗಡೆ ಮಾಡಿರುವ ಜಾಹೀರಾತು ಸಂಖ್ಯೆ 07/2026 ರ ವಿವರವಾದ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು, ತಾವೇ ಅರ್ಹರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.

ಇದನ್ನೂ ಓದಿ: ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ ಅಥವಾ ORA (Online Recruitment Application) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೊದಲಿಗೆ ಪೋರ್ಟಲ್‌ಗೆ ಭೇಟಿ ನೀಡಿ, ಹೊಸ ಅಭ್ಯರ್ಥಿಗಳು ಒನ್ ಟೈಮ್ ರಿಜಿಸ್ಟ್ರೇಷನ್ (OTR) ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಲಾಗಿನ್ ಆದ ನಂತರ, ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ ಮತ್ತು ವೃತ್ತಿಪರ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ಫಾರ್ಮ್ ಅನ್ನು ಅಂತಿಮವಾಗಿ ಸಬ್ಮಿಟ್ ಮಾಡುವ ಮುನ್ನ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಮರುಪರಿಶೀಲಿಸುವುದು ಒಳಿತು. ಅರ್ಜಿ ಸಲ್ಲಿಕೆ ಪೂರ್ಣಗೊಂಡ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಪ್ರಿಂಟ್ ಔಟ್ ಪಡೆದು ಸುರಕ್ಷಿತವಾಗಿಟ್ಟುಕೊಳ್ಳಿ. ನೆನಪಿರಲಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 17 ಆಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Vastu Tips: ಮನೆಯ ಗೋಡೆಗೆ ಮೊಳೆ ಹೊಡೆಯುವಾಗ ಈ ತಪ್ಪು ಮಾಡಬೇಡಿ; ವಾಸ್ತು ಸಲಹೆ ಇಲ್ಲಿದೆ – Kannada News | Vastu Tips: Nail Direction for Home Wealth and Positive Energy

ಗೋಡೆಗೆ ಮೊಳೆ ಹೊಡೆಯುವಾಗ ಈ ತಪ್ಪು ಮಾಡಬೇಡಿImage Credit source: Getty Images

ಸಾಮಾನ್ಯವಾಗಿ ಮನೆಗಳಲ್ಲಿ ಫೋಟೋಗಳನ್ನು ತೂಗುಹಾಕಲು, ಗಡಿಯಾರ ಸಿಕ್ಕಿಸಲು ಅಥವಾ ಅಲಂಕಾರಿಕ ವಸ್ತುಗಳನ್ನು ಜೋಡಿಸಲು ಗೋಡೆಗಳಿಗೆ ಮೊಳೆಗಳನ್ನು ಹೊಡೆಯುವುದು ತೀರಾ ಸಹಜ ಪ್ರಕ್ರಿಯೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಗೋಡೆಗೆ ಮೊಳೆ ಹೊಡೆಯುವುದಕ್ಕೂ ಕೆಲವು ನಿರ್ದಿಷ್ಟ ನಿಯಮಗಳಿವೆ ಎಂಬುದು ನಿಮಗೆ ಗೊತ್ತೇ? ಹೌದು, ಗೋಡೆಯ ಯಾವ ದಿಕ್ಕಿನಲ್ಲಿ ಮೊಳೆ ಹೊಡೆಯಬೇಕು ಮತ್ತು ಯಾವ ದಿಕ್ಕಿನಲ್ಲಿ ಹೊಡೆಯಬಾರದು ಎಂಬುದು ಮನೆಯ ಆರ್ಥಿಕ ಪರಿಸ್ಥಿತಿ ಮತ್ತು ನೆಮ್ಮದಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ತಪ್ಪು ದಿಕ್ಕಿನಲ್ಲಿ ಮೊಳೆ ಹೊಡೆದರೆ ಕಷ್ಟಗಳು ಎದುರಾಗಬಹುದು, ಅದೇ ಸರಿಯಾದ ದಿಕ್ಕಿನಲ್ಲಿ ಮೊಳೆ ಹೊಡೆದರೆ ಧನಲಕ್ಷ್ಮಿಯ ಕೃಪೆಯಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಸರಿಯಾದ ದಿಕ್ಕಿನಲ್ಲಿ ಮೊಳೆ ಹೊಡೆದರೆ ಸಕಾರಾತ್ಮಕ ಶಕ್ತಿ:

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಮನೆಯ ಗೋಡೆಗಳಿಗೆ ಸರಿಯಾದ ದಿಕ್ಕಿನಲ್ಲಿ ಮೊಳೆಯನ್ನು ಹೊಡೆಯುವುದರಿಂದ ಮನೆಯೊಳಗೆ ಧನಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ. ಇದು ಕುಟುಂಬದಲ್ಲಿ ನೆಮ್ಮದಿಯನ್ನು ತರುವುದಲ್ಲದೆ, ಆರ್ಥಿಕ ಪ್ರಗತಿಗೂ ದಾರಿ ಮಾಡಿಕೊಡುತ್ತದೆ. ಧನಾಗಮನಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಲು ಇದು ನೆರವಾಗುತ್ತದೆ.

ತಪ್ಪು ದಿಕ್ಕು ತರಬಹುದು ಆರ್ಥಿಕ ಸಂಕಷ್ಟ:

ನಾವು ಸಾಮಾನ್ಯವಾಗಿ ಯಾವುದೇ ಯೋಚನೆ ಮಾಡದೆ ಖಾಲಿ ಇರುವ ಗೋಡೆಗೆ ಮೊಳೆಯನ್ನು ಹೊಡೆದುಬಿಡುತ್ತೇವೆ. ಆದರೆ ವಾಸ್ತು ಪ್ರಕಾರ, ತಪ್ಪು ದಿಕ್ಕಿನಲ್ಲಿ ಗೋಡೆಯನ್ನು ಕೊರೆಯುವುದು ಅಥವಾ ಮೊಳೆ ಹೊಡೆಯುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಅನಗತ್ಯ ಖರ್ಚುಗಳು ಬರಲು ಮತ್ತು ಆರ್ಥಿಕ ನಷ್ಟಗಳು ಎದುರಾಗಲು ಪ್ರೇರೇಪಿಸುತ್ತದೆ.

ಲಕ್ಷ್ಮಿ ದೇವಿಯ ಕೃಪೆಗಾಗಿ ಯಾವ ದಿಕ್ಕು ಶ್ರೇಷ್ಠ?

ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ನೆಲೆಸಬೇಕಾದರೆ, ಮೊಳೆಗಳನ್ನು ಹೊಡೆಯಲು ಅಥವಾ ಫೋಟೋಗಳನ್ನು ತೂಗುಹಾಕಲು ಉತ್ತರ ಮತ್ತು ಪೂರ್ವ ದಿಕ್ಕಿನ ಗೋಡೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ದೇವತೆಗಳ ಮತ್ತು ಸಕಾರಾತ್ಮಕ ಶಕ್ತಿಯ ಕೇಂದ್ರವೆಂದು ನಂಬಲಾಗಿದೆ. ಈ ದಿಕ್ಕಿನ ಗೋಡೆಗಳ ಮೇಲೆ ಸರಿಯಾದ ಕ್ರಮದಲ್ಲಿ ಮೊಳೆ ಹೊಡೆದು ಶುಭ ಚಿತ್ರಗಳನ್ನು ಹಾಕುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮೊಳೆ ಹೊಡೆಯುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ವಾಸ್ತು ನಿಯಮಗಳು:

ಮುರಿದ ಅಥವಾ ಹಳೆಯ ಮೊಳೆಗಳನ್ನು ಬಳಸಬೇಡಿ: ಗೋಡೆಗೆ ಮೊಳೆ ಹೊಡೆಯುವಾಗ ತುಕ್ಕು ಹಿಡಿದ ಅಥವಾ ಬಾಗಿದ ಹಳೆಯ ಮೊಳೆಗಳನ್ನು ಬಳಸಬಾರದು. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ.

  • ಖಾಲಿ ಮೊಳೆಗಳನ್ನು ಹಾಗೇ ಬಿಡಬೇಡಿ: ಗೋಡೆಯಲ್ಲಿ ಯಾವುದೇ ಉಪಯೋಗವಿಲ್ಲದೆ ಖಾಲಿ ಉಳಿದಿರುವ ಮೊಳೆಗಳಿದ್ದರೆ ಅವುಗಳನ್ನು ತಕ್ಷಣವೇ ತೆಗೆದುಹಾಕಿ. ಖಾಲಿ ಮೊಳೆಗಳು ವಾಸ್ತು ದೋಷವನ್ನು ಉಂಟುಮಾಡುತ್ತವೆ ಎನ್ನಲಾಗುತ್ತದೆ.
  • ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಎಚ್ಚರಿಕೆ: ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಗೋಡೆಗಳಿಗೆ ಅತಿಯಾಗಿ ಮೊಳೆ ಹೊಡೆಯುವುದನ್ನು ಅಥವಾ ಭಾರವಿಲ್ಲದ ವಸ್ತುಗಳನ್ನು ತೂಗುಹಾಕುವುದನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು.

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಸಣ್ಣ ಬದಲಾವಣೆಯೂ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಮುಂದಿನ ಬಾರಿ ನಿಮ್ಮ ಮನೆಯ ಗೋಡೆಗೆ ಮೊಳೆ ಹೊಡೆಯುವ ಮುನ್ನ ದಿಕ್ಕಿನ ಕಡೆಗೆ ಒಮ್ಮೆ ಗಮನ ಹರಿಸಿ, ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುವಂತೆ ಮಾಡಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:32 pm, Sun, 28 June 26

Source link

ಗ್ರಾಹಕರ ಹಿತರಕ್ಷಣೆಯೇ ಪ್ರಧಾನ; ಇನ್ಷೂರೆನ್ಸ್ ವಿತರಣೆಯಲ್ಲಿ ಸುಧಾರಣೆಗಳಿಗೆ ಐಆರ್​ಡಿಎಐ ಮುಂದು – Kannada News | Big reforms expected in insurance distribution sector, as IRDAI to bring discussion paper

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಶೀಘ್ರದಲ್ಲೇ ವಿಮಾ ವಿತರಣಾ ವಲಯದಲ್ಲಿ (Insurance Distribution Sector) ದೊಡ್ಡ ಬದಲಾವಣೆಗಳನ್ನು ತರಲು ಹೊರಟಿದೆ. ಈ ಸಂಬಂಧ ಚರ್ಚಾ ಪತ್ರವೊಂದನ್ನು (Discussion Paper) ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಸುಧಾರಣೆಗಳ ಮುಖ್ಯ ಉದ್ದೇಶ “ಗ್ರಾಹಕರ ಹಿತರಕ್ಷಣೆ” ಆಗಿದೆ. ಭಾಗಿದಾರ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಸ್ಪಂದನೆ, ಸಲಹೆಗಳನ್ನು ಎದುರು ನೋಡಲಿದೆ. ವಿಮಾ ವಿತರಕರಿಗೆ ಇನ್ಸೆಂಟಿವ್, ಗ್ರಾಹಕ ಆಯ್ಕೆ, ಬ್ಯಾಂಕ್ ಅಷೂರೆನ್​ಸ್ ಪಾರ್ಟ್ನರ್​ಶಿಪ್ ಇತ್ಯಾದಿ ವಿಮಾ ವಿತರಣಾ ಸಂಬಂಧಿ ಸುಧಾರಣೆಗಳನ್ನು ತರಲು ಪ್ರಸ್ತಾಪಿಸಲಾಗಿದೆ ಎಂದು ಇಟಿ ನೌ ವರದಿಯಲ್ಲಿ ಹೇಳಲಾಗಿದೆ. ವಿಮಾ ವಿತರಣಾ ಕ್ಷೇತ್ರದಲ್ಲಿ ಐಆರ್​ಡಿಎಐ ತರಲಿರುವ ಸುಧಾರಣೆಗಳು ಈ ಕೆಳಕಾಣಿಸಿದಂತಿವೆ:

ಗ್ರಾಹಕರ ಹಿತರಕ್ಷಣೆಯೇ ಮುಖ್ಯ

ಗ್ರಾಹಕರನ್ನು ತಪ್ಪುದಾರಿಗೆ ಎಳೆದು ವಿಮೆ ಮಾರಾಟ ಮಾಡುವುದನ್ನು (Mis-selling) ತಡೆಯುವುದು ಮತ್ತು ಗ್ರಾಹಕರು ಮುಕ್ತ ಮಾರುಕಟ್ಟೆಯಲ್ಲಿ ತಮಗೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವುದು ಈ ಸುಧಾರಣೆಯ ಪ್ರಮುಖ ಗುರಿಯಾಗಿದೆ.

ಬಡ್ತಿ ಮತ್ತು ಕಮಿಷನ್ ಲಿಂಕ್

ವಿಮಾ ಏಜೆಂಟರು ಮತ್ತು ವಿತರಕರಿಗೆ ನೀಡಲಾಗುವ ಕಮಿಷನ್ ಅಥವಾ ಪ್ರೋತ್ಸಾಹಕ ಧನವನ್ನು (Incentives) ಕೇವಲ ಹೊಸ ಪಾಲಿಸಿಗಳನ್ನು ಮಾರಾಟ ಮಾಡುವುದರ ಮೇಲೆ ಮಾತ್ರ ನಿರ್ಧರಿಸದೆ, ಗ್ರಾಹಕರು ಎಷ್ಟು ವರ್ಷಗಳ ಕಾಲ ಆ ಪಾಲಿಸಿಯನ್ನು ಮುಂದುವರಿಸುತ್ತಾರೆ (Persistency) ಎಂಬುದರ ಆಧಾರದ ಮೇಲೆ ಲಿಂಕ್ ಮಾಡಲು ಉದ್ದೇಶಿಸಲಾಗಿದೆ.

ಪಾಲಿಸಿ ಮುಂದುವರಿಕೆಗೆ ಒತ್ತು

ಗ್ರಾಹಕರು ಮಧ್ಯದಲ್ಲೇ ನಿಲ್ಲಿಸಿರುವ ಪಾಲಿಸಿಗಳನ್ನು ಮತ್ತೆ ಸಕ್ರಿಯಗೊಳಿಸಲು ವಿಮಾ ಸಂಸ್ಥೆಗಳು ಜಂಟಿ ಪ್ರಯತ್ನ ನಡೆಸಬೇಕು ಎಂದು ಐಆರ್‌ಡಿಎಐ (IRDAI) ಹೇಳಿದೆ. ಪಾಲಿಸಿದಾರರು ದೀರ್ಘಕಾಲ ಪ್ರೀಮಿಯಂ ಪಾವತಿಸುವಂತೆ ಪ್ರೇರೇಪಿಸುವುದು ಇದರ ಉದ್ದೇಶ.

ಬ್ಯಾಂಕ್ ಅಶೂರೆನ್ಸ್ (Bancassurance) ಮತ್ತು ಮುಕ್ತ ಮಾರುಕಟ್ಟೆ

ಬ್ಯಾಂಕುಗಳ ಮೂಲಕ ವಿಮೆ ಮಾರಾಟ ಮಾಡುವ ವ್ಯವಸ್ಥೆಯ ಮೇಲೆ ಕಠಿಣ ನಿಯಮಗಳನ್ನು ಹೇರುವ ಬದಲು, ಮಾರುಕಟ್ಟೆಯ ಪೈಪೋಟಿಗೇ ಅದನ್ನು ಬಿಡಲು ಪ್ರಾಧಿಕಾರ ಒಲವು ತೋರಿದೆ. ತಪ್ಪು ಮಾರಾಟ ಕೇವಲ ಬ್ಯಾಂಕುಗಳಲ್ಲಿ ಮಾತ್ರವಲ್ಲ, ಬೇರೆ ವಿತರಣಾ ವಾಹಿನಿಗಳಲ್ಲೂ ನಡೆಯುತ್ತಿರುವುದರಿಂದ ಒಟ್ಟಾರೆ ವ್ಯವಸ್ಥೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸರಳ ನಿಯಮಗಳನ್ನು ರೂಪಿಸುವ ಚಿಂತನೆ

ನಿಯಮಗಳನ್ನು ತೀರಾ ಕಟ್ಟುನಿಟ್ಟಾಗಿ ಅಥವಾ ಜಿಡ್ಡಾಗಿ ಮಾಡುವ ಬದಲು, ತತ್ವ ಆಧಾರಿತ (Principles-based) ನಿಯಮಗಳನ್ನು ರೂಪಿಸಲು IRDAI ಯೋಚಿಸುತ್ತಿದೆ. ಇದು ಉತ್ಪನ್ನದ ಸಂಕೀರ್ಣತೆ ಮತ್ತು ಗ್ರಾಹಕರ ಪ್ರೊಫೈಲ್ ಆಧರಿಸಿ ಬದಲಾಗಬಹುದು.

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ 30 ಲಕ್ಷ ರೂ ಹೂಡಿಕೆಯಿಂದ 20,000 ರೂಗೂ ಹೆಚ್ಚು ಮಾಸಿಕ ವರಮಾನ

ಈ ಚರ್ಚಾ ಪತ್ರ ಬಿಡುಗಡೆಯಾದ ನಂತರ, ವಿಮಾ ಕಂಪನಿಗಳು, ಏಜೆಂಟರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪಡೆದು ಅಂತಿಮ ನಿಯಮಗಳನ್ನು ರೂಪಿಸಲಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ವಿಮಾ ಗ್ರಾಹಕರಿಗೆ ಮೋಸವಾಗದಂತೆ ತಡೆದು, ಹೆಚ್ಚು ಪಾರದರ್ಶಕತೆ ತರುವುದು ಈ ಸುಧಾರಣೆಯ ಉದ್ದೇಶವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಭಾಸ್ ಸಿನಿಮಾಕ್ಕೆ ನೋ ಎಂದಿದ್ದ ಕೀರ್ತಿ ಸುರೇಶ್, ‘ಖುಷಿ ಇದೆ’ ಎಂದ ನಟಿ – Kannada News | Keerthy Suresh said she rejected a role in Kalki 2898 AD movie

ಕೀರ್ತಿ ಸುರೇಶ್ (Keerthy Suresh) ದಕ್ಷಿಣ ಭಾರತದ ಪ್ರತಿಭಾವಂತ ನಟಿ, ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಕೀರ್ತಿ ಸುರೇಶ್ ದಕ್ಷಿಣದ ಹಲವಾರು ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ‘ಮಹಾನಟಿ’ ಸಿನಿಮಾದ ನಟನೆಗೆ ಕೀರ್ತಿ ಸುರೇಶ್ ಅವರಿಗೆ ರಾಷ್ಟ್ರಪ್ರಶಸ್ತಿ ದೊರಕಿತ್ತು. ಅಂದಹಾಗೆ ಅದೇ ನಾಗ್ ಅಶ್ವಿನಿ ನಿರ್ದೇಶಿಸಿದ ಭಾರಿ ಬಜೆಟ್​​ನ, ಬಹು ತಾರಾಗಣದ ‘ಕಲ್ಕಿ 2898 ಎಡಿ’ ಸಿನಿಮಾದ ಪ್ರಮುಖ ಪಾತ್ರವೊಂದನ್ನು ಕೀರ್ತಿ ಸುರೇಶ್​​ಗೆ ಆಫರ್ ಮಾಡಲಾಗಿತ್ತು. ಆದರೆ ಆ ಪಾತ್ರವನ್ನು ಕಿರ್ತಿ ಸುರೇಶ್ ನಿರಾಕರಿಸಿದರು.

ಆ ಬಗ್ಗೆ ಮಾತನಾಡಿರುವ ನಟಿ ಕೀರ್ತಿ ಸುರೇಶ್, ‘ನಾಗಿ (ನಾಗ್ ಅಶ್ವಿನ್) ನನಗೆ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪಾತ್ರವನ್ನು ನೀಡಿದ್ದರು, ಆದರೆ ಆ ಪಾತ್ರ ನನಗೆ ತುಂಬಾ ಇಷ್ಟವಾಗಿರಲಿಲ್ಲ, ಪಾತ್ರದಲ್ಲಿ ನಟಿಸುವುದೋ ಬೇಡವೊ ಎಂಬ ಗೊಂದಲದಲ್ಲಿ ಇದ್ದೆ. ಆದರೆ ನಂತರ ಒಂದು ದಿನ ಅವರು ನನಗೆ ಮೆಸೇಜ್ ಮಾಡಿ, ‘ಕನಿಷ್ಠ ಸಿನಿಮಾದ ಯಾವುದಾದರೂ ಒಂದು ದೃಶ್ಯದಲ್ಲಿ ಕಿಟಿಕಿಯಿಂದ ಇಣುಕಿ ನೋಡುವ ದೃಶ್ಯದಲ್ಲಾದರೂ ಮಾಡುತ್ತೀರಾ?’ ಎಂದು ಕೇಳಿದರು. ಅದಕ್ಕೆ ನಾನು, ‘ನಿಮ್ಮ ಚಿತ್ರದಲ್ಲಿ ಕೆಲಸ ಮಾಡಲು ನಾನು ಸಿದ್ಧ’ ಎಂದೆ. ನಾಗಿ ಅವರ ಚಿತ್ರದಲ್ಲಿ ನಾನು ಖಂಡಿತವಾಗಿಯೂ ಯಾವುದಾದರೂ ಪಾತ್ರವನ್ನು ಮಾಡುತ್ತೇನೆ ಎಂದು ನನಗೆ ಗೊತ್ತಿತ್ತು’ ಎಂದು ಕೀರ್ತಿ ಹೇಳಿದ್ದಾರೆ.

‘ನಾಗ್ ಅಶ್ವಿನ್ ಆಗ ನನಗಾಗಿ ನೀಡಿದ್ದ ಪಾತ್ರಕ್ಕೆ ನಾನು ‘ನೋ’ ಅಂದಿದ್ದ ಬಗ್ಗೆ ನನಗೆ ಖುಷಿ ಇದೆ, ಏಕೆಂದರೆ ಅದರ ಬದಲಾಗಿ ನನಗೆ ಬುಜ್ಜಿ ಪಾತ್ರವನ್ನು ಮಾಡಲು ಸಾಧ್ಯವಾಯಿತು. ಅವರು ನನಗೆ ಕರೆ ಮಾಡಿ, ‘ನಾನು ಚಿತ್ರದಲ್ಲಿ ನೀವು ಇರಲೇಬೇಕೆಂದು ಬಯಸುತ್ತೇನೆ’ ಎಂದರು. ನಂತರ ಅವರು, ‘ಸಿನಿಮಾನಲ್ಲಿ ಒಂದು ಆಸಕ್ತಿದಾಯಕ ಪಾತ್ರವಿದೆ, ಅದು ಕೇವಲ ಧ್ವನಿ ಮಾತ್ರ. ಅಂದರೆ ನೀವು ಎಐ ಬಾಟ್‌ಗೆ ಧ್ವನಿ ನೀಡಬೇಕು’ ಎಂದರು. ಮೊದಲಿಗೆ ನನಗೆ ಅದು ಅರ್ಥವಾಗಲಿಲ್ಲ, ಹಾಗಾದರೆ ಶೂಟಿಂಗ್‌ಗೆ ನನ್ನ ಅಗತ್ಯವಿಲ್ಲವೇ? ಎಂದು ಕೇಳಿದೆ. ಅವರು, ‘ಇಲ್ಲ, ನನಗೆ ಕೇವಲ ನಿಮ್ಮ ಧ್ವನಿ ಮಾತ್ರ ಬೇಕು’ ಎಂದರು. ನಾನು ತಕ್ಷಣ ವಾವ್, ಇದು ತುಂಬ ಭಿನ್ನವಾಗಿದೆ, ಖಂಡಿತ ಮಾಡುತ್ತೇನೆ ಎಂದೆ’ ಎಂದು ಕೀರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ:ನಟಿ ಕೀರ್ತಿ ಸುರೇಶ್ ಮನೆ ಎಷ್ಟು ಅದ್ಧೂರಿಯಾಗಿದೆ ನೋಡಿ

ಕೀರ್ತಿ ಸುರೇಶ್ ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳದಿದ್ದರೂ, ‘ಬುಜ್ಜಿ’ ಎಂಬ ಎಐ ಬಾಟ್​​ಗೆಗೆ ಅವರು ಧ್ವನಿ ನೀಡಿದ್ದಾರೆ. ‘ಕಲ್ಕಿ 2898 ಎಡಿ’ ಸಿನಿಮಾದ ಅತ್ಯಂತ ಆಕರ್ಷಕ ಅಂಶಗಳಲ್ಲಿ ಒಂದಾಗಿತ್ತು ಬುಜ್ಜಿ. ಎಐ-ಚಾಲಿತ ವಾಹನದ ತಮಾಷೆಯ ಮಾತುಗಳು, ಭಾವನಾತ್ಮಕ ಕ್ಷಣಗಳು ಮತ್ತು ಪ್ರಭಾಸ್ ಅವರ ಪಾತ್ರದೊಂದಿಗೆ ನಡೆಸುವ ಹಾಸ್ಯ ಚಟಾಕಿಗಳು ಪ್ರೇಕ್ಷಕರ ಮನ ಗೆದ್ದವು. ಕೀರ್ತಿ ಅವರ ಧ್ವನಿಯು ಆ ಬುಜ್ಜಿ ಎಂಬ ಬಾಟ್​​ಗೆ ಜೀವಕಳೆ, ಹಾಸ್ಯ ಮತ್ತು ವ್ಯಕ್ತಿತ್ವವನ್ನು ನೀಡಿತು, ಇದರಿಂದ ವಿಮರ್ಶಕರು ಮತ್ತು ಚಿತ್ರಪ್ರೇಮಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

ಕೀರ್ತಿ ಸುರೇಶ್ ಅವರು ಕೈಯಲ್ಲಿ ಹಲವು ಸಿನಿಮಾಗಳನ್ನು ಹೊಂದಿದ್ದಾರೆ. ‘ಸತ್ಯವಾನ್ ಸಾವಿತ್ರಿ’, ‘ರಫ್ತಾರ್’, ‘ಅಕ್ಕ’, ‘ರೌಡಿ ಜನಾರ್ದನ’ ಮತ್ತು ದಗ್ಗುಬಾಟಿ ವೆಂಕಟೇಶ್ ಅವರೊಂದಿಗೆ ಒಂದು ಮುಂಬರುವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಮಕ್ಕಳ ಯೂನಿಫಾರ್ಮ್, ಪಠ್ಯಪುಸ್ತಕ ಬೆಂಕಿಗಾಹುತಿ – Kannada News | Raichur Government School Set on Fire by Miscreants After Alleged Warning

ರಾಯಚೂರು, ಜೂನ್​​ 28: ಜಿಲ್ಲೆಯ ದೇವದುರ್ಗ ತಾಲೂಕಿನ ಗುಂಟ್ರಾಳ ಗ್ರಾಮದ ಸರ್ಕಾರಿ ಶಾಲೆಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಅನೈತಿಕ ಚಟುವಟಿಕೆ ನಡೆಸದಂತೆ ಬುದ್ಧಿವಾದ ಹೇಳಿದ್ದಕ್ಕೆ ಕೃತ್ಯ ಎಸಗಲಾಗಿದೆ. ಶಾಲೆಯ ಆವರಣದಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನ, ಧೂಮಪಾನ ಚಟುವಟಿಕೆಗಳಲ್ಲಿ ತೊಡಗಿದ್ದರು. ಅಲ್ಲದೆ, ಇತ್ತೀಚೆಗೆ ಶಾಲೆಯ ಬೀಗ ಒಡೆದು ಒಳಗಡೆ ಮಲಗಿದ್ದರು. ಈ ಬಗ್ಗೆ ಶಾಲೆಯ ಎಸ್​ಡಿಎಂಸಿ ಸದಸ್ಯರು ಮತ್ತು ಶಿಕ್ಷಕರು ಅವರಿಗೆ ತಾಕೀತು ಮಾಡಿದ್ದರು. ಈ ಬುದ್ಧಿವಾದವನ್ನು ಸಹಿಸದ ಕಿಡಿಗೇಡಿಗಳು ನಿನ್ನೆ ರಾತ್ರಿ ಶಾಲೆಯ ಬೀಗ ಮುರಿದು ಒಳನುಗ್ಗಿ, ಬೆಂಕಿ ಹಚ್ಚಿದ್ದು ಬಡ ಮಕ್ಕಳ ಸ್ಕೂಲ್ ಸಮವಸ್ತ್ರಗಳು, ಪಠ್ಯಪುಸ್ತಕಗಳು ಬೆಂಕಿಗೆ ಆಹುತಿ ಆಗಿವೆ. ಈ ದುಷ್ಕೃತ್ಯದಿಂದ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಗಬ್ಬೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಧಾನಿ ಮೋದಿಗೆ ಮತ್ತೊಂದು ಜಾಗತಿಕ ಗೌರವ; ಸೆಶೆಲ್ಸ್​ನ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿ ಪ್ರದಾನ – Kannada News | PM Narendra Modi conferred with Seychelles Guardian of the Blue Horizon honour for his Green Vision

ವಿಕ್ಟೋರಿಯಾ, ಜೂನ್ 28: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ನಾಯಕತ್ವಕ್ಕಾಗಿ ಸೆಶೆಲ್ಸ್ ದೇಶದ ಅತ್ಯುನ್ನತ ವಿಶಿಷ್ಟ ಗೌರವವಾದ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ (Guardian of the Blue Horizon) ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು (ಜೂನ್ 28) ಪ್ರದಾನ ಮಾಡಲಾಯಿತು. ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನೀ ಅವರು ಪ್ರಧಾನಿ ಮೋದಿಗೆ (PM Modi) ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ವಿದೇಶಿ ರಾಷ್ಟ್ರವೊಂದರಿಂದ ಪ್ರಧಾನಿ ಮೋದಿಯವರು ಸ್ವೀಕರಿಸುತ್ತಿರುವ 34ನೇ ಅಂತಾರಾಷ್ಟ್ರೀಯ ಗೌರವ ಇದಾಗಿದೆ.

ಸೆಶೆಲ್ಸ್ ಗಣರಾಜ್ಯದ ಇತಿಹಾಸದಲ್ಲಿಯೇ ಅಂತಾರಾಷ್ಟ್ರೀಯ ಗಣ್ಯರೊಬ್ಬರಿಗೆ ಈ ವಿಶಿಷ್ಟ ಪ್ರಶಸ್ತಿಯನ್ನು ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಮುಂಚೆ ಈ ಪ್ರಶಸ್ತಿಯನ್ನು ಯಾರಿಗೂ ನೀಡಿರಲಿಲ್ಲ. ಇದು ಭಾರತ ಮತ್ತು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಭಾರಿ ಮನ್ನಣೆಯಾಗಿದೆ.

ಸೆಶೆಲ್ಸ್ ಕರಾವಳಿ ಕಾವಲು ಪಡೆಯ ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಭಾರತದಲ್ಲೇ ತಯಾರಿಸಲಾದ ವೇಗದ ಗಸ್ತು ನೌಕೆಯನ್ನು ಆ ದೇಶದ ಕರಾವಳಿ ಕಾವಲು ಪಡೆಗೆ ಹಸ್ತಾಂತರಿಸಿದರು. ಇದು ಸೆಶೆಲ್ಸ್​​ನ ಕಡಲ ಭದ್ರತಾ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದೆ.

ಇದನ್ನೂ ಓದಿ: ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ

ಸೆಶೆಲ್ಸ್‌ನಲ್ಲಿ ‘ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್’ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ, ಪ್ರಧಾನಿ ಮೋದಿ ಅವರು ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸಲು ಶ್ರಮಿಸುತ್ತಿರುವ ಎಲ್ಲಾ ರಾಷ್ಟ್ರಗಳಿಗೆ ಈ ಗೌರವವನ್ನು ಸಮರ್ಪಿಸಿದರು. ಸೆಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನೀ ಅವರೊಂದಿಗೆ ಜಂಟಿ ಪತ್ರಿಕಾ ಪ್ರಕಟಣೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿಯನ್ನು ಪಡೆಯುವುದು ತಮಗೆ ಮತ್ತು ಭಾರತದ 140 ಕೋಟಿ ಜನರಿಗೆ ಅಪಾರ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

“ನಾನು ಈ ಗೌರವವನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ ಮತ್ತು ಹವಾಮಾನ ವೈಪರೀತ್ಯದ ಸವಾಲಿನ ವಿರುದ್ಧ ಹೋರಾಡುತ್ತಿರುವ ಹಾಗೂ ಪರಿಸರ ಸಂರಕ್ಷಣೆಯನ್ನು ಭವಿಷ್ಯದ ಪೀಳಿಗೆಯ ಕಡೆಯ ಜವಾಬ್ದಾರಿ ಎಂದು ಪರಿಗಣಿಸುವ ಎಲ್ಲಾ ರಾಷ್ಟ್ರಗಳಿಗೆ ಇದನ್ನು ಸಮರ್ಪಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ಸೆಶೆಲ್ಸ್ ರಾಷ್ಟ್ರೀಯ ದಿನಾಚರಣೆಗೆ ಪ್ರಧಾನಿ ಮೋದಿ ಮುಖ್ಯ ಅತಿಥಿ; ಜೂನ್ 27ರಿಂದ ದ್ವೀಪ ರಾಷ್ಟ್ರಕ್ಕೆ ಪ್ರವಾಸ

ಪ್ರಧಾನಿ ಮೋದಿ ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನೀ ಅವರೊಂದಿಗೆ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಸಹಕಾರದ ಸಂಪೂರ್ಣ ವ್ಯಾಪ್ತಿಯನ್ನು ಪರಾಮರ್ಶಿಸಿದರು. ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡರು. ಉಭಯ ನಾಯಕರು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು.

3 ದಿನಗಳ ಪ್ರವಾಸಕ್ಕಾಗಿ ಶನಿವಾರ ಸೆಶೆಲ್ಸ್‌ಗೆ ತೆರಳಿದ ಪ್ರಧಾನಿ ಮೋದಿಯವರನ್ನು ಸ್ಟೇಟ್ ಹೌಸ್‌ನಲ್ಲಿ ಅಧ್ಯಕ್ಷ ಹರ್ಮಿನೀ ಅವರು ಸ್ವಾಗತಿಸಿದರು. ಅಧ್ಯಕ್ಷ ಹರ್ಮಿನೀ ಅವರ ಆಹ್ವಾನದ ಮೇರೆಗೆ ಸೆಶೆಲ್ಸ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಸೋಮವಾರ ನಡೆಯಲಿರುವ ಸೆಶೆಲ್ಸ್ ರಾಷ್ಟ್ರೀಯ ದಿನಾಚರಣೆಯ ಸುವರ್ಣ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅವರು ಸೆಶೆಲ್ಸ್‌ನ ರಾಷ್ಟ್ರೀಯ ಅಸೆಂಬ್ಲಿಯನ್ನು (ಸಂಸತ್) ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗೇ, ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸಲಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IND vs IRE: ಅಭ್ಯಾಸಕ್ಕೂ ಅವಕಾಶ ನೀಡದ ಮಳೆ; 2ನೇ ಟಿ20 ಪಂದ್ಯ ರದ್ದು? – Kannada News | India vs Ireland 2nd T20: Rain Threatens Series Decider in Belfast

ಭಾರತ ಹಾಗೂ ಐರ್ಲೆಂಡ್ (India vs Ireland) ನಡುವಿನ ಎರಡು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಪಂದ್ಯ ಆರಂಭವಾಗಬೇಕಿದೆ. ಅಂದರೆ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಆದರೆ ಈ ಮೊದಲೇ ಹವಮಾನ ಇಲಾಖೆ ವರದಿಮಾಡಿರುವ ಪ್ರಕಾರ, ಐರ್ಲೆಂಡ್ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ನಿರಂತರವಾಗಿ ಮಳೆ (Belfast weather forecast) ಸುರಿಯುತ್ತಿದೆ. ಇದರಿಂದಾಗಿ ಉಭಯ ತಂಡಗಳು ಅಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅಭ್ಯಾಸದ ಅವಧಿಯನ್ನು ರದ್ದುಗೊಳಿಸಲಾಗಿದೆ. ಇದೀಗ ಮಳೆಯಿಂದಾಗಿ ಪಂದ್ಯ ರದ್ದಾದರೆ, ಟೀಂ ಇಂಡಿಯಾಕ್ಕೆ ಇದು ದೊಡ್ಡ ಆಘಾತವಾಗಲಿದೆ. ಏಕೆಂದರೆ ಭಾರತ ಈಗಾಗಲೇ ಮೊದಲ ಟಿ20 ಪಂದ್ಯವನ್ನು ಸೋತಿರುವ ಕಾರಣ ಈ ಪಂದ್ಯ ರದ್ದಾದರೆ ಸರಣಿಯನ್ನು ಕಳೆದುಕೊಳ್ಳಲಿದೆ.

ಮಳೆಯಿಂದ ಅಭ್ಯಾಸ ರದ್ದು

ಮಳೆಯಿಂದಾಗಿ ಬೆಲ್‌ಫಾಸ್ಟ್‌ನ ಸಂಪೂರ್ಣ ಮೈದಾನವು ಒದ್ದೆಯಾಗಿದ್ದ ಕಾರಣ ಶನಿವಾರದ ತರಬೇತಿ ಶಿಬಿರವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕಾಯಿತು. ಇದೀಗ ಪಂದ್ಯದ ದಿನವೂ ಮಳೆಯಾಗುವ ಸೂಚನೆ ಇದೆ. ಇದು ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಇಂದು ನಡೆಯಬೇಕಿದ್ದ ಎರಡನೇ ಪಂದ್ಯವೂ ಮಳೆಯಿಂದಾಗಿ ರದ್ದಾದರೆ, ಭಾರತ ತಂಡವು ಐರ್ಲೆಂಡ್ ವಿರುದ್ಧ 0-1 ಅಂತರದಲ್ಲಿ ಸರಣಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಐರ್ಲೆಂಡ್‌ನಂತಹ ಸಣ್ಣ ತಂಡದ ವಿರುದ್ಧ ಸರಣಿಯನ್ನು ಕಳೆದುಕೊಳ್ಳುವುದು ಭಾರತಕ್ಕೆ ಕ್ರಿಕೆಟ್ ಇತಿಹಾಸದಲ್ಲಿ ಅನಿರೀಕ್ಷಿತ ಮತ್ತು ದೊಡ್ಡ ಹೊಡೆತವಾಗುತ್ತದೆ.

ಹವಾಮಾನ ವರದಿ

ಹವಾಮಾನ ವರದಿಯ ಪ್ರಕಾರ, ಪಂದ್ಯ ದಿನದಂದು ಬೆಲ್‌ಫಾಸ್ಟ್​ನಲ್ಲಿ ಭಾರಿ ಮಳೆಯಾಗಲಿದೆ ಎಂದು ವರದಿಯಾಗಿದೆ. ಈ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಿದೆ. ಆದರೆ ಟಾಸ್ ನಡೆಯುವುದಕ್ಕೂ ಮುನ್ನವೇ ಮಳೆ ಬೀಳಲಿದೆ ಎಂದು ವರದಿಯಾಗಿದೆ. ಅಲ್ಲದೆ ಮುಂದಿನ ಎರಡು ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಯುಕೆ ಹವಾಮಾನ ಇಲಾಖೆಯ ಪ್ರಕಾರ, ಭಾರತೀಯ ಕಾಲಮಾನ ಸಂಜೆ 5.30 ಕ್ಕೆ ಟಾಸ್ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಶೇ. 70 ರಷ್ಟು ಇದೆ. ಅದಕ್ಕೂ ಒಂದು ಗಂಟೆ ಮೊದಲು ಮಳೆಯಾಗುವ ಸಾಧ್ಯತೆ ಶೇ. 50 ರಷ್ಟು ಇದೆ. ಟಾಸ್ ನಂತರ ಒಂದು ಗಂಟೆಯಲ್ಲಿ ಮಳೆಯಾಗುವ ಸಾಧ್ಯತೆ ಶೇ. 60 ರಷ್ಟು ಇದೆ.

ರಾತ್ರಿ 8:30 ರ ನಂತರ ಮಳೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಪಂದ್ಯವನ್ನು ಕಡಿಮೆ ಓವರ್‌ಗಳಿಗೆ ಸೀಮಿತಗೊಳಿಸುವ ಸಾಧ್ಯತೆ ಇದೆ. ಆದಾಗ್ಯೂ ಪಂದ್ಯವು ಮಳೆಯಿಂದ ರದ್ದಾದರೆ, ಐರ್ಲೆಂಡ್ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಸರಣಿಯನ್ನು ಗೆದ್ದ ಇತಿಹಾಸ ನಿರ್ಮಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:09 pm, Sun, 28 June 26

Source link

ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ವೇಳೆ ಗಲಾಟೆ: ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ – Kannada News | HD Kumaraswamy Urges fans Calm After Chikkaballapur Incident

ಬೆಂಗಳೂರು, ಜೂನ್​​ 28: ಕಾರ್ಯಕರ್ತರು ಉದ್ವೇಗಕ್ಕೆ ಒಳಗಾಗುವುದು ಬೇಡ. ಪ್ರಚೋದನೆ ಮಾಡಲೆಂದೇ ಒಂದು ಗುಂಪು ಕೆಲಸ ಮಾಡುತ್ತಿದೆ. ಹೀಗಾಗಿ ಕಾರ್ಯಕರ್ತರು ಉದ್ವೇಗಕ್ಕೆ ಒಳಗಾಗುವುದು ಬೇಡ. ಚಪ್ಪಲಿ ಎಸೆಯುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ವೇಳೆ ಗಲಾಟೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರ ವಿರುದ್ಧವೂ ಧಿಕ್ಕಾರ ಕೂಗುವುದು ಬೇಡ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು ಬೇಡ. ಇಂಥ ಸಂದರ್ಭದಲ್ಲಿ ಶಾಂತಚಿತ್ತದಿಂದ ಇರುವಂತೆ ಮನವಿ ಮಾಡಿದರು. ಇನ್ನು ಈ ವೇಳೆ ಶಾಸಕ ಪ್ರದೀಪ್ ಈಶ್ವರ್ ನಡವಳಿಕೆಗೆ ನನ್ನ ನಮಸ್ಕಾರ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

‘ಬಾಲಿವುಡ್​​ ಮಾಫಿಯಾ’ ಇದೆ, ಚಿತ್ರರಂಗದ ನೀಚತನದ ಬಗ್ಗೆ ನಟ ಕುನಾಲ್ ಮಾತು – Kannada News | Kunal Khemu talks about dirty side of Bollywood

ಬಾಲಿವುಡ್ (Bollywood)​​ ಹೊರಗಿನಿಂದ ನೋಡುವವರಿಗೆ ಲಕ್ಷಾಂತರ ಕೋಟಿ ರೂಪಾಯಿಯ ಉದ್ಯಮ, ಸಖತ್ ಥಳುಕು-ಬಳುಕು, ನಟ-ನಟಿಯರ ನಡುವೆ ಅಪಾರ ಪ್ರೀತಿ, ಗೌರವ ಕಂಡು ಬರುತ್ತದೆ. ಆದರೆ ಒಳಗಿನ ಕತೆ ಬಲು ಕರಾಳವಾಗಿದೆ. ಬಾಲಿವುಡ್​ನ ನೀಚ ರಾಜಕೀಯ, ನೆಪೊಟಿಸಮ್, ಫೇವರಿಸಮ್, ಉದ್ಯಮದ ಮೇಲೆ ಕೆಲವೇ ವ್ಯಕ್ತಿಗಳ ಹಿಡಿತ, ದ್ವೇಷ, ಅಸೂಯೆಗಳ ಕತೆಗಳು ಬರೆದಷ್ಟೂ ಬಾಲಿವುಡ್​​ನಲ್ಲಿವೆ. ಇದೀಗ ಎರಡು ದಶಕದಿಂದಲೂ ಬಾಲಿವುಡ್​ನ ಭಾಗವಾಗಿರುವ ಖ್ಯಾತ ನಟ ಕುನಾಲ್ ಖೇಮು ಬಾಲಿವುಡ್​​ನ ಈ ನೀಚತನದ ಬಗ್ಗೆ ಮಾತನಾಡಿದ್ದಾರೆ.

ಕುನಾಲ್ ಖೇಮು, 1993 ರಿಂದಲೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಾ ಬಂದವರು. ಬಾಲನಟನಾಗಿ ಹೆಸರು ಮಾಡಿದ್ದ ಕುನಾಲ್ 2005 ರಲ್ಲಿ ಬಿಡುಗಡೆ ಆದ ‘ಕಲ್ಯುಗ್’ ಸಿನಿಮಾ ಮೂಲಕ ನಾಯಕರಾದವರು. ಆ ಬಳಿಕ ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ, ಸಹ ನಾಯಕನಾಗಿ ನಟಿಸಿದ್ದಾರೆ. ಈಗಲೂ ಸಹ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ಕುನಾಲ್ ಖೇಮುಗೆ ಬಲು ಬೇಡಿಕೆ ಇದೆ. ಪ್ರಖ್ಯಾತ ಪಟೌಡಿ ಕುಟುಂಬದ ಅಳಿಯನೂ ಆಗಿರುವ ಕುಮಾನ್ ಖೇಮು, ಇದೀಗ ಬಾಲಿವುಡ್​​ನಲ್ಲಿರುವ ನೀಚತನಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

‘ಮೊದಲೆಲ್ಲ ಬಾಲಿವುಡ್​​ನಲ್ಲಿ ಅತಿಯಾದ ಗುಂಪುಗಾರಿಕೆಗಳು ಇರುತ್ತಿತ್ತು. ಆಗೆಲ್ಲ ಕೆಲವೇ ಕುಟುಂಬಗಳು ಸಿನಿಮಾ ನಿರ್ಮಾಣ ಮಾಡುತ್ತಿದ್ದವು. ಹಾಗಾಗಿ ಕೆಲವೇ ಕುಟುಂಬಗಳ ಕೈಯಲ್ಲಿ ಇಡೀ ಚಿತ್ರರಂಗ ಇರುತ್ತಿತ್ತು. ಫೇವರಿಸಂ ಸಹ ಆಗೆಲ್ಲ ಬಹಳ ಇರುತ್ತಿತ್ತು. ಕೆಲವರು ಉದ್ದೇಶಪೂರ್ವಕವಾಗಿ ಕೆಲವರನ್ನು ತಡೆಯುತ್ತಿದ್ದರು. ಆದರೆ ಕಾರ್ಪೊರೇಟ್​ ಸಂಸ್ಥೆಗಳು ಉದ್ಯಮಕ್ಕೆ ಕಾಲಿಟ್ಟಮೇಲೆ ಆ ಬಿಗಿ ಹಿಡಿತ ತುಸು ಸಡಿಲಿಕೆ ಆಯ್ತು’ ಎಂದಿದ್ದಾರೆ ಕುನಾಲ್ ಖೇಮು. ಮುಂದುವರೆದು ಮಾತನಾಡಿ, ‘ಹಿಂದೆ ಎಲ್ಲ ನೀವು ಚಿತ್ರರಂಗದಲ್ಲಿ ಉಳಿಯಬೇಕೆಂದರೆ ಯಾವುದಾದರೂ ಒಂದು ಕುಟುಂಬದ ಹತ್ತಿರದವರಾಗಿ ಅಥವಾ ಒಂದು ಗುಂಪಿನ ಸದಸ್ಯರಾಗಿ ಗುರುತಿಸಿಕೊಳ್ಳಬೇಕಿತ್ತು. ಇಲ್ಲವಾದರೆ ನೀವು ಚಿತ್ರರಂಗದಲ್ಲಿ ಉಳಿಯುವುದೇ ಕಷ್ಟವಾಗುತ್ತಿತ್ತು’ ಎಂದಿದ್ದಾರೆ ಕುನಾಲ್.

ಇದನ್ನೂ ಓದಿ:ಅಲ್ಲು ಅರ್ಜುನ್ ಜೊತೆ ಸಿನಿಮಾ, ಶೂಟಿಂಗ್​ಗೆ ಹಾಜರಾದ ರಶ್ಮಿಕಾ ಮಂದಣ್ಣ

ಬಾಲಿವುಡ್​​ನಲ್ಲಿ ಇರುವ ಲೆಕ್ಕಾಚಾರದ ಬಗ್ಗೆ ಮಾತನಾಡಿರುವ ಕುನಾಲ್ ಖೇಮು, ‘ನಾವು ಈಗ ಲೆಕ್ಕಾಚಾರದಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಸಿನಿಮಾ ನಿರ್ಮಾಣ ಆಗುತ್ತಿರುವುದು ಸಹ ಪ್ರತಿಭೆ ಮೇಲೆ ಅಲ್ಲ ಬದಲಿಗೆ ಲೆಕ್ಕಾಚಾರದ ಮೇಲೆ, ಹಾಗಾಗಿ ನಾವು ಈಗ ಸಿನಿಮಾ ಮಾಡುತ್ತಿದ್ದೇವೆ ಎನ್ನುತ್ತಿಲ್ಲ ಬದಲಿಗೆ ಪ್ರಾಜೆಕ್ಟ್ ಎಂದು ಕರೆಯುತ್ತಿದ್ದೇವೆ’ ಎಂದು ಕಟು ಸತ್ಯ ಹೇಳಿದರು ನಟ.

ಕುನಾಲ್ ಖೇಮು ಅವರು ‘ಗೂಲ್​​ಮಾಲ್’, ‘ಗೋ ಗೋವಾ ಗಾನ್’, ‘ಲೂಟ್​​ಕೇಸ್’, ‘ಕಲ್ಯುಗ್’, ‘ಮಡಗಾವ್ ಎಕ್ಸ್​​ಪ್ರೆಸ್’ ಇನ್ನೂ ಕೆಲವು ಸಿನಿಮಾಗಳಿಂದ ಜನಪ್ರಿಯರು. ಇದೀಗ ಅವರು ‘ಮಡಗಾಂವ್ ಎಕ್ಸ್​​ಪ್ರೆಸ್’ ಸಿನಿಮಾದ ನಿರ್ದೇಶನವನ್ನೂ ಸಹ ಮಾಡಿದ್ದಾರೆ. ಮುಂದೆ ಅವರು ‘ಗೋಲ್​​ಮಾಲ್ 5’ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version