ಪ್ರತಿ ವರ್ಷ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ: ಸಿಎಂ ಡಿಕೆ ಶಿವಕುಮಾರ್ ಘೋಷಣೆ – Kannada News | Kempegowda Jayanti to be Celebrated Across All 28 Bengaluru Assembly Constituencies Annually: CM DK Shivakumar

ಬೆಂಗಳೂರು, ಜೂನ್ 27: ಇನ್ಮುಂದೆ ಪ್ರತಿ ವರ್ಷ ಬೆಂಗಳೂರಿನ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟ್ರಂಪೆಟ್ ಸರ್ಕಲ್ ಬಳಿ ಕೆಂಪೇಗೌಡರ ಗುರುತನ್ನು ಪ್ರತಿಬಿಂಬಿಸುವ ಮತ್ತೊಂದು ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಮುಂದೆ ಕೆಂಪೇಗೌಡ ಜಯಂತಿಯನ್ನು ವಿಧಾನಸೌಧ ಅಥವಾ ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸದೆ, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ವರ್ಷಕ್ಕೊಂದು ಕ್ಷೇತ್ರದ ವ್ಯಾಪ್ತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ವರ್ಷ ಯಶವಂತಪುರ ಕ್ಷೇತ್ರದ ಕೆಂಪೇಗೌಡ ಲೇಔಟ್‌ನಲ್ಲಿ ಜಯಂತಿ ಆಚರಣೆ ಪ್ರಾರಂಭವಾಗಿದ್ದು, ಮುಂದಿನ 28 ವರ್ಷಗಳ ಕಾಲ ಬೇರೆ ಬೇರೆ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಮುಂದುವರಿಯಲಿದೆ. ಜಿಬಿಎ ವತಿಯಿಂದ ಇದಕ್ಕೆ ಹಣಕಾಸಿನ ವ್ಯವಸ್ಥೆ ಮಾಡಲಾಗಿದ್ದು, ಇಡೀ ರಾಜ್ಯದಲ್ಲಿ ಕೆಂಪೇಗೌಡ ಜಯಂತಿಯನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ. ಕೆಂಪೇಗೌಡರ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಬೆಂಗಳೂರಿಗೆ ಹೊಸ ರೂಪ ನೀಡುವ ಚಿಂತನೆ ಇದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಂಬುಚಾ ಜ್ಯೂಸ್ ಅನ್ನು ಬಿಯರ್ ಅಂದುಕೊಂಡು ಮಹಿಳೆಗೆ ಕಿರುಕುಳ: ಚಾಲಕನ ವಿರುದ್ಧ ಎಫ್‌ಐಆರ್! – Kannada News | Bengaluru: Woman Attacked by Uber Driver for Kombucha Mistaken as Beer

ಬೆಂಗಳೂರು,ಜೂ.27: ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕ್ಯಾಬ್‌ನಲ್ಲಿ ಮಹಿಳೆಯೊಬ್ಬರು ಕುಡಿಯುತ್ತಿದ್ದ ಆರೋಗ್ಯಕರ ಜ್ಯೂಸ್ (ಕೊಂಬುಚಾ) ಅನ್ನು ಬಿಯರ್ ಎಂದು ತಪ್ಪಾಗಿ ಭಾವಿಸಿದ 60 ವರ್ಷದ ಉಬರ್ ಕ್ಯಾಬ್ ಚಾಲಕನೊಬ್ಬ, ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದು, ಆಕೆಯ ಕೈ ಎಳೆದು ದೌರ್ಜನ್ಯ ಎಸಗಿರುವ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಚಾಲಕನ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಪ್ರಕಾರ, ಜೂನ್ 21ರ ರಾತ್ರಿ ಮಹಿಳೆಯು ಕೋರಮಂಗಲದ ರೆಸ್ಟೋರೆಂಟ್‌ವೊಂದರಿಂದ ತಮ್ಮ ಮನೆಗೆ ಹೋಗಲು ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಪ್ರಯಾಣದ ಮಧ್ಯೆ, ಭಾರತೀಯ ಕ್ರಿಶ್ಚಿಯನ್ ಸ್ಮಶಾನದ (Indian Christian Cemetery) ಹತ್ತಿರ ತಲುಪಿದಾಗ ಮಹಿಳೆ ತಾವು ತಂದಿದ್ದ ‘ಕೊಂಬುಚಾ (ಒಂದು ರೀತಿಯ ಹುದುಗಿಸಿದ ಪಾನೀಯ) ಬಾಟಲಿಯನ್ನು ತೆಗೆದು ಕುಡಿಯಲು ಯತ್ನಿಸಿದ್ದಾರೆ. ಇದನ್ನು ನೋಡಿದ ಚಾಲಕ ಪರಮೇಶ್ವರ್, ಅದು ಬಿಯರ್ ಬಾಟಲಿ ಎಂದು ತಪ್ಪಾಗಿ ಭಾವಿಸಿ ಮಹಿಳೆಯೊಂದಿಗೆ ಜಗಳಕ್ಕಿಳಿದಿದ್ದಾನೆ ಮತ್ತು ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ ಎಂದು ಹೇಳಲಾಗಿದೆ.

ಚಾಲಕನ ಉದ್ಧಟತನದಿಂದಾಗಿ ಇಬ್ಬರ ನಡುವೆ ಭಾರಿ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಭಯಭೀತರಾದ ಮಹಿಳೆ, ತಕ್ಷಣವೇ ಕಾರನ್ನು ನಿಲ್ಲಿಸುವಂತೆ ಮತ್ತು ಟ್ರಿಪ್ ಕೊನೆಗೊಳಿಸುವಂತೆ ಚಾಲಕನಿಗೆ ಪದೇ ಪದೇ ವಿನಂತಿಸಿದ್ದಾರೆ. ಆದರೆ, ಚಾಲಕ ಕಾರನ್ನು ನಿಲ್ಲಿಸದೆ ಹಾಗೇ ಚಲಾಯಿಸಿಕೊಂಡು ಹೋಗಿದ್ದಾನೆ. ತನ್ನ ಸುರಕ್ಷತೆಯ ಬಗ್ಗೆ ತೀವ್ರ ಆತಂಕಗೊಂಡ ಮಹಿಳೆ, ಚಲಿಸುತ್ತಿದ್ದ ಕಾರಿನ ಬಾಗಿಲನ್ನು ತೆರೆದು ಹೊರಗೆ ಜಿಗಿಯಲು ಯತ್ನಿಸಿದ್ದಾರೆ.

ಈ ವೇಳೆ ಚಾಲಕ ಪರಮೇಶ್ವರ್, ಮಹಿಳೆಯ ಕೈಯನ್ನು ಬಲವಂತವಾಗಿ ಹಿಡಿದು ಎಳೆದು, ಮತ್ತೆ ಕಾರಿನೊಳಗೆ ತಳ್ಳಿದ್ದಾನೆ. ತದನಂತರ ಹೇಗೋ ಕಷ್ಟಪಟ್ಟು ಕಾರಿನಿಂದ ತಪ್ಪಿಸಿಕೊಂಡ ಮಹಿಳೆ ಅಲ್ಲಿಂದ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಚಾಲಕ ಅಲ್ಲಿಂದ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಸದ್ಯ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ, ರಾಯಚೂರಿನಲ್ಲಿ ಕೃತಕ ಶೇಂದಿ ದಂಧೆ: 1,500 ಕೆಜಿ ಮರಣಾಂತಿಕ ಕೆಮಿಕಲ್ ಸೀಜ್ ಮಾಡಿದ ಅಬಕಾರಿ ಇಲಾಖೆ

ಇದೇ ವೇಳೆ ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಮತ್ತೊಂದು ಭೀಕರ ಘಟನೆ ನಡೆದಿದೆ, ಅಸ್ಸಾಂ ಮೂಲದ 27 ವರ್ಷದ ಯುವತಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ 42 ವರ್ಷದ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಮನೆಗೆಲಸ ಮಾಡುವ ಈ ಯುವತಿ ನಾರಾಯಣಪುರದಿಂದ ತನ್ನ ಊರಿಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದರು. ಬುಧವಾರ ತಡರಾತ್ರಿ 12:30 ರಿಂದ 1:40 ರ ನಡುವೆ ಅವಲಹಳ್ಳಿ ಎಂಬ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿದ ಬಳ್ಳಾರಿ ಮೂಲದ (ಪ್ರಸ್ತುತ ಶಾಂತಿನಗರ ನಿವಾಸಿ) ಚಾಲಕ, ಯುವತಿಯ ಮೇಲೆ ದೌರ್ಜನ್ಯ ಎಸಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ ಮಂದಿರ ಹಗರಣ: ಚಂಪತ್ ರಾಯ್ ವಿರುದ್ಧ ತಿರುಗಿದ ಎಸ್‌ಐಟಿ ವರದಿ, ರೋಚಕ ರಹಸ್ಯ ಬಿಚ್ಚಿಟ್ಟ ರಹಸ್ಯ ಕ್ಯಾಮೆರಾ – Kannada News | Ayodhya Ram Mandir Donation Scam: SIT Report Indicts Champat Rai, Hidden Camera Exposes Truth

ಅಯೋಧ್ಯೆ, ಜೂನ್ 27: ಅಯೋಧ್ಯೆ ರಾಮ ಮಂದಿರ(Ram Mandir)ದ ದೇಣಿಗೆ ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಸಿದ್ಧಪಡಿಸಿರುವ ವರದಿಯು ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಿನ್ನೆ ದಿಢೀರ್ ರಾಜೀನಾಮೆ ನೀಡಿದ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ಪಾತ್ರದ ಬಗ್ಗೆ ಎಸ್‌ಐಟಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಇಡೀ ಹಗರಣದಲ್ಲಿ ಇವರ ಆಪ್ತರೇ ಭಾಗಿಯಾಗಿರುವುದು ದೃಢಪಟ್ಟಿದೆ.

40 ದಿನ, 70 ಬಾರಿ ಕಳ್ಳತನ, ಚಂಪತ್ ರಾಯ್‌ಗೆ ತಿಳಿದಿತ್ತೇ?
ಎಸ್‌ಐಟಿ ಅಧಿಕಾರಿಗಳು ಏಪ್ರಿಲ್ 27 ರಿಂದ ಜೂನ್ 5 ರವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ಬೆಚ್ಚಿಬೀಳುವ ಸತ್ಯ ಬಯಲಾಗಿದೆ. ದೇಗುಲದ ಹಣ ಎಣಿಸುವ ಸಿಬ್ಬಂದಿ ಕೇವಲ 40 ದಿನಗಳ ಅವಧಿಯಲ್ಲಿ ಬರೋಬ್ಬರಿ 70 ಬಾರಿ ಕಾಣಿಕೆ ಹಣವನ್ನು ಕದ್ದಿದ್ದಾರೆ.

ಈ ಹಿಂದೆಯೇ ಹಣದ ವ್ಯತ್ಯಾಸದ ಬಗ್ಗೆ ಚಂಪತ್ ರಾಯ್ ಅವರಿಗೆ ದೂರುಗಳು ಬಂದಿದ್ದರೂ, ಅವರು ಪೊಲೀಸರಿಗೆ ದೂರು ನೀಡದೆ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದರು ಎಂದು ವರದಿ ಹೇಳಿದೆ. ಬಂಧಿತ ಎಂಟು ಆರೋಪಿಗಳೂ ಕೂಡ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ನೇರ ಶಿಫಾರಸಿನ ಮೇರೆಗೆ ಬ್ಯಾಕ್ ಗ್ರೌಂಡ್ ವೆರಿಫಿಕೇಶನ್ ಇಲ್ಲದೆ ಕೆಲಸಕ್ಕೆ ಸೇರಿದವರಾಗಿದ್ದಾರೆ.

ಹಗರಣದ ಮುಖ್ಯ ಸೂತ್ರಧಾರಿ ಚಂಪತ್ ರಾಯ್ ಅವರ ಆಪ್ತ ಸಹಾಯಕ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಎಂದು ಎಸ್‌ಐಟಿ ಹೆಸರಿಸಿದೆ. ದೇಣಿಗೆ ಪೆಟ್ಟಿಗೆಗಳ (ಹುಂಡಿ) ಕೀಲಿಗಳು ಇವರ ಬಳಿಯೇ ಇರುತ್ತಿದ್ದವು. ಯಾರನ್ನು ಕೆಲಸಕ್ಕೆ ತರಬೇಕು, ಯಾರಿಗೆ ಹಣ ಎಣಿಸುವ ಜವಾಬ್ದಾರಿ ನೀಡಬೇಕು ಮತ್ತು ದೇವಸ್ಥಾನದ ಆವರಣದಲ್ಲಿ ಪೊಲೀಸರನ್ನು ಎಲ್ಲಿ ನಿಯೋಜಿಸಬೇಕು ಎಂಬುದನ್ನು ಸ್ವತಃ ಇವರೇ ನಿರ್ಧರಿಸುತ್ತಿದ್ದಷ್ಟು ಪ್ರಭಾವಶಾಲಿಯಾಗಿದ್ದರು.

ಮತ್ತಷ್ಟು ಓದಿ: ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ: ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಆಪ್ತ ಸಹಾಯಕ ಸೇರಿ 8 ಮಂದಿ ಬಂಧನ

ಸಿಸಿಟಿವಿ ಆಫ್ ಮಾಡ್ತಿದ್ದರು; ಸಿಕ್ಕಿಬಿದ್ದದ್ದು ಹೇಗೆ?
ಆರೋಪಿಗಳಾದ ಟಿನ್ನು ಯಾದವ್, ಮನೀಶ್, ಲವ್ ಕುಶ್ ಮತ್ತು ಅನುಕಲ್ಪ್ ಅವರಿಗೆ ಎಣಿಕೆ ಕೊಠಡಿಯಲ್ಲಿದ್ದ ಸಾಮಾನ್ಯ ಸಿಸಿಟಿವಿ ಕ್ಯಾಮೆರಾಗಳು ಎಲ್ಲೆಲ್ಲಿವೆ ಮತ್ತು ಅವುಗಳ ಕಣ್ಣು ತಪ್ಪಿಸುವ ‘ಬ್ಲೈಂಡ್ ಸ್ಪಾಟ್‌ಗಳು’ ಯಾವುವು ಎಂಬುದು ಚೆನ್ನಾಗಿ ಗೊತ್ತಿತ್ತು.

ಹಣವನ್ನು ಜೇಬಿಗೆ ಇಳಿಸುವಾಗ ಇವರು ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡುತ್ತಿದ್ದರು ಅಥವಾ ಅದರ ವೀಕ್ಷಣೆಗೆ ಅಡ್ಡಿಪಡಿಸುತ್ತಿದ್ದರು. ಆದರೆ, ತನಿಖಾಧಿಕಾರಿಗಳು ಆ ಕೊಠಡಿಯೊಳಗೆ ಯಾರಿಗೂ ತಿಳಿಯದಂತೆ ಅಳವಡಿಸಿದ್ದ ‘ಗುಪ್ತ ಕಣ್ಗಾವಲು ಕ್ಯಾಮೆರಾ’ (Hidden Spy Camera) ಬಗ್ಗೆ ಆರೋಪಿಗಳಿಗೆ ಸುಳಿವಿರಲಿಲ್ಲ. ಈ ರಹಸ್ಯ ಕ್ಯಾಮೆರಾದಲ್ಲಿ ಇವರು ನಗದು ಕದಿಯುವ ದೃಶ್ಯಗಳು ಡಿಜಿಟಲ್ ಸಾಕ್ಷಿಯಾಗಿ ಸೆರೆಯಾಗಿದ್ದು, ಇಡೀ ಗ್ಯಾಂಗ್ ಜೈಲು ಪಾಲಾಗುವಂತೆ ಮಾಡಿದೆ.

ಬಂಧಿತರಲ್ಲಿ ಟಿನ್ನು ಯಾದವ್ ಮತ್ತು ಸುಭಾಷ್ ಟ್ರಸ್ಟ್‌ನ ನೌಕರರಾದರೆ, ಉಳಿದ ಆರು ಜನ ಎಣಿಕೆಗೆ ಸಹಾಯ ಮಾಡಲು ಬಂದಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ ಸಿಬ್ಬಂದಿಯಾಗಿದ್ದಾರೆ. ಸದ್ಯ ಈ ಆರೋಪಗಳ ಕುರಿತು ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಬರಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:29 pm, Sat, 27 June 26

Source link

ಮತ್ತೆ ಒಂದಾಗಲಿದ್ದಾರೆ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ; ಶೀಘ್ರವೇ ಮುಂಬೈನಲ್ಲಿ ‘ರಾಕಾ’ ಶೂಟಿಂಗ್ ಆರಂಭ – Kannada News | Allu Arjun, Rashmika Mandanna Reunite in Atlee’s ‘Raaka’ 700 Cr Budget Film Details

‘ಪುಷ್ಪ’ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ಈಗ ಮತ್ತೆ ಒಂದಾಗುತ್ತಿದೆ. ಆದರೆ ಈ ಬಾರಿ ಇವರು ಪುಷ್ಪರಾಜ್ ಮತ್ತು ಶ್ರೀವಲ್ಲಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ನಿರ್ದೇಶಕ ಅಟ್ಲಿ ಅವರ ಮುಂದಿನ ಬಹುನಿರೀಕ್ಷಿತ ‘ರಾಕಾ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಮುಂಬೈನಲ್ಲಿ ಆರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ. ಈ ಸುದ್ದಿ ಸದ್ಯ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ.

‘ರಾಕಾ’ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ. ಚಿತ್ರದಲ್ಲಿ ದೀಪಿಕಾ ಜೊತೆ ರಶ್ಮಿಕಾ ಮಂದಣ್ಣ, ಮೃಣಾಲ್ ಠಾಕೂರ್ ಮತ್ತು ಜಾನ್ವಿ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿ ಕೂಡ ಇದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಇತ್ತೀಚೆಗೆ ನಟ ಅಲ್ಲು ಅರ್ಜುನ್ ಅವರ 44ನೇ ಜನ್ಮದಿನದ ಅಂಗವಾಗಿ ‘ರಾಕಾ’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಅವರ ರಗಡ್ ಲುಕ್ ಸಖತ್ ವೈರಲ್ ಆಗಿತ್ತು. ಬೃಹತ್ ಬಜೆಟ್‌ನ ಈ ಚಿತ್ರವನ್ನು ‘ಸನ್ ಪಿಕ್ಚರ್ಸ್’ ಸಂಸ್ಥೆಯು ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿದೆ. ಮುಂಬೈ ಸ್ಟುಡಿಯೋದಲ್ಲಿ ಆರಂಭವಾಗಲಿರುವ ಈ ಚಿತ್ರದ ಶೂಟಿಂಗ್ 2026 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಿರ್ದೇಶಕ ಅಟ್ಲಿ ಅವರ ಈ ಬಿಗ್ ಪ್ರಾಜೆಕ್ಟ್ ಅನ್ನು ಡಿಸೆಂಬರ್ 2027ರಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಮಹಿಳಾ ಪ್ರಧಾನ ಸಿನಿಮಾಗಳತ್ತ ಹೊರಳುತ್ತಿರುವ ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಇವರು, ಫೆಬ್ರವರಿಯಲ್ಲಿ ಮದುವೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಬಗ್ಗೆ ವಿಜಯೇಂದ್ರಗೆ ವರದಿ ಸಲ್ಲಿಸಿ ಸಿ.ಟಿ ರವಿ ಹೇಳಿದ್ದೇನು? – Kannada News | Council Polls: CT Ravi Submits Report to Vijayendra Over 12 Cross Votes

ಬೆಂಗಳೂರು, ಜೂನ್ 27: ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಸಿ.ಟಿ. ರವಿ ನೇತೃತ್ವದ ಸಮಿತಿಯು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಆಂತರಿಕ ವರದಿ ಸಲ್ಲಿಸಿದೆ. ನ್‌ಡಿಎ ಮೈತ್ರಿಕೂಟದ ಒಟ್ಟು 12 ಸದಸ್ಯರು ಕ್ರಾಸ್ ವೋಟಿಂಗ್ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಸೇರಿ ಈ ಅಡ್ಡಮತದಾನ ನಡೆದಿದೆ ಎಂದು ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.

ವರದಿ ಸಲ್ಲಿಕೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಇದು ಆಂತರಿಕ ತನಿಖೆಯ ವರದಿಯಾಗಿದ್ದು, ಸಿದ್ಧಪಡಿಸಿದ ವರದಿಯನ್ನು ರಾಜ್ಯಾಧ್ಯಕ್ಷರಿಗೆ ತಲುಪಿಸಿದ್ದೇವೆ. ಬಿಜೆಪಿ ಭಾಗದಿಂದ ಮೂರು ಮತಗಳು ಕ್ರಾಸ್ ವೋಟ್ ಆಗಿದ್ದು, ಒಂದು ಮತ ಅಸಿಂಧುಗೊಂಡಿದೆ. ಜೆಡಿಎಸ್ ಪಾಲಿನ 22 ಮತಗಳ ಪೈಕಿ ಕೇವಲ 14 ಮತಗಳು ಮಾತ್ರ ಬಂದಿದ್ದು, ಎಂಟು ಮತಗಳು ಕ್ರಾಸ್ ವೋಟ್ ಆಗಿವೆ. ಹೀಗಾಗಿ ಬಿಜೆಪಿ-ಜೆಡಿಎಸ್ ಒಟ್ಟು 12 ಮತಗಳು ಅಡ್ಡಚಲಾವಣೆಯಾಗಿವೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಅನೈತಿಕ ಮಾರ್ಗದಿಂದ ಈ ಅಡ್ಡ ಮತದಾನ ಮಾಡಿಸಿದ್ದು, ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಪಂದ್ಯ, ಮೂರು ತಂಡಗಳ ಸೆಮಿಫೈನಲ್​ ಭವಿಷ್ಯ ನಿರ್ಧಾರ! – Kannada News | Women’s T20 World Cup 2026: How can Team India qualify for the semifinals?

ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳು ಇದೀಗ ರೋಚಕ ಘಟ್ಟಕ್ಕೆ ತಲುಪಿದೆ. ಜೂನ್ 28ರ ಭಾನುವಾರದಂದು ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗ್ರೂಪ್ ‘ಎ’ ಅಂತಿಮ ಲೀಗ್ ಪಂದ್ಯವು ಕೇವಲ ಟೀಮ್ ಇಂಡಿಯಾ ಅದೃಷ್ಟವನ್ನಷ್ಟೇ ಅಲ್ಲ, ಸೌತ್ ಆಫ್ರಿಕಾ ತಂಡದ ಸೆಮಿಫೈನಲ್ ಭವಿಷ್ಯವನ್ನೂ ನಿರ್ಧರಿಸಲಿದೆ. ಅಂದರೆ ಗ್ರೂಪ್- ಎ ಯಿಂದ ಈ ಬಾರಿ ಸೆಮಿಫೈನಲ್​ಗೇರುವ ತಂಡಗಳಾವುವು ಎಂಬುದು ಭಾನುವಾರ ನಿರ್ಧಾರವಾಗಲಿದೆ.

  • ಲೀಗ್ ಹಂತದ ಪಂದ್ಯಗಳ ಮುಕ್ತಾಯದ ಬಳಿಕ ಗ್ರೂಪ್ ಪಟ್ಟಿಯ ಪಾಯಿಂಟ್ಸ್ ಟೇಬಲ್​ನಲ್ಲಿ ಟಾಪ್-2 ನಲ್ಲಿ ಕಾಣಿಸಿಕೊಳ್ಳುವ ತಂಡಗಳು ಸೆಮಿಫೈನಲ್​ಗೇರಲಿದೆ.
  • ಗ್ರೂಪ್ ‘ಎ’ ಅಂಕ ಪಟ್ಟಿಯಲ್ಲಿ ಸದ್ಯ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಭಾರತ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಸೌತ್ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ.

ಟೀಮ್ ಇಂಡಿಯಾದ ಲೆಕ್ಕಾಚಾರ:

ಭಾರತ ತಂಡವು ಸೆಮಿಫೈನಲ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಮ್ಯಾಚ್​ನಲ್ಲಿ ಗೆಲ್ಲಲೇಬೇಕು. ಅತ್ತ ಆಸ್ಟ್ರೇಲಿಯಾ ತಂಡ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್​ಗೇರಲಿದೆ. ಒಂದು ವೇಳೆ ಟೀಮ್ ಇಂಡಿಯಾ ಸೋತರೆ ಸೆಮಿಫೈನಲ್​ ರೇಸ್​ನಿಂದ ಹೊರಬೀಳುವುದಿಲ್ಲ. ಬದಲಾಗಿ ಸೌತ್ ಆಫ್ರಿಕಾ ತಂಡದ ಕೊನೆಯ ಮ್ಯಾಚ್ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಅದರಂತೆ ಟೀಮ್ ಇಂಡಿಯಾದ ಸೆಮಿಫೈನಲ್ ಸಮೀಕರಣ ಈ ಕೆಳಗಿನಂತಿದೆ…

  • ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ: ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾ ಪಡೆಯನ್ನು ಸೋಲಿಸಿದರೆ ಒಟ್ಟು 8 ಅಂಕಗಳನ್ನು ಪಡೆಯಲಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ನೆಟ್ ರನ್ ರೇಟ್ ಮತ್ತಷ್ಟು ಉತ್ತಮಗೊಳ್ಳುವುದರಿಂದ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತವಾಗಲಿದೆ.
  • ಆಸ್ಟ್ರೇಲಿಯಾ ವಿರುದ್ಧ ಸೋತರೆ: ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋತರೆ ಸೆಮಿಫೈನಲ್ ರೇಸ್​ನಿಂದ ಹೊರಬೀಳುವುದಿಲ್ಲ. ಬದಲಾಗಿ ಬಾಂಗ್ಲಾದೇಶ್ ವಿರುದ್ಧ ಸೌತ್ ಆಫ್ರಿಕಾ ತಂಡ ಸೋಲುವುದನ್ನು ಎದುರು ನೋಡಬೇಕು.

ಸೌತ್ ಆಫ್ರಿಕಾ ಲೆಕ್ಕಾಚಾರ:

ಒಂದು ವೇಳೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದರೆ, ಸೌತ್ ಆಫ್ರಿಕಾ ತಂಡವು ಟೂರ್ನಿಯಿಂದ ಹೊರಬೀಳುವ ಸಾಧ್ಯತೆಯಿದೆ. ಏಕೆಂದರೆ ಟೀಮ್ ಇಂಡಿಯಾ ಗೆದ್ದರೆ ಒಟ್ಟು 8 ಅಂಕಗಳನ್ನು ಪಡೆಯಲಿದೆ. ಅತ್ತ ಸೌತ್ ಆಫ್ರಿಕಾ ಬಾಂಗ್ಲಾದೇಶ್ ತಂಡವನ್ನು ಮಣಿಸಿದರೆ ಒಟ್ಟು ಅಂಕಗಳ ಸಂಖ್ಯೆ 8 ಕ್ಕೇರಲಿದೆ.

ಆದರೆ ಇತ್ತ ಟೀಮ್ ಇಂಡಿಯಾದ ನೆಟ್​ ರನ್ ರೇಟ್ ಉತ್ತಮವಾಗಿರುವುದರಿಂದ ಭಾರತ ತಂಡವು ದ್ವಿತೀಯ ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಸೆಮಿಫೈನಲ್​ಗೇರಬಹುದು. ಪ್ರಸ್ತುತ ಮೂರು ತಂಡಗಳ ನೆಟ್​ ರನ್ ರೇಟ್​ ಈ ಕೆಳಗಿನಂತಿದೆ…

  • ಆಸ್ಟ್ರೇಲಿಯಾ: +4.724
  • ಭಾರತ: +2.268
  • ಸೌತ್ ಆಫ್ರಿಕಾ: +0.734

ಭಾರತದ ನೆಟ್ ರನ್ ರೇಟ್ (+2.268) ಗಿಂತ ಸೌತ್ ಆಫ್ರಿಕಾದ ನೆಟ್​ ರನ್ ರೇಟ್ (+0.734) ತೀರಾ ಕಡಿಮೆಯಿದ್ದು, ಹೀಗಾಗಿ ಭಾರತ ಗೆದ್ದರೆ ಸೌತ್ ಆಫ್ರಿಕಾ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚು.

ಅತ್ತ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಸೋತರೂ ಉತ್ತಮ ನೆಟ್ ರನ್ ರೇಟ್ (+4.724) ಕಾರಣದಿಂದಾಗಿ ಅವರು ಅಗ್ರಸ್ಥಾನದಲ್ಲೇ ಉಳಿದು ಸೆಮಿಫೈನಲ್​ಗೇರಲಿದ್ದಾರೆ.

ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಆಸೀಸ್ ಪಡೆಯ ಗೆಲುವನ್ನು ಸೌತ್ ಆಫ್ರಿಕಾ ತಂಡ ಎದುರು ನೋಡಲಿದೆ.

ಒಂದು ವೇಳೆ ಟೀಮ್ ಇಂಡಿಯಾ ಸೋತರೆ, ಸೌತ್ ಆಫ್ರಿಕಾ ತಂಡವು ಕೊನೆಯ ಮ್ಯಾಚ್​ನಲ್ಲಿ ಗೆದ್ದರೆ ಸಾಕು. ಈ ಮೂಲಕ 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರುವ ಮೂಲಕ ಸೆಮಿಫೈನಲ್​ಗೆ ಲಗ್ಗೆಯಿಡಬಹುದು.

ಅಂದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದ ಫಲಿತಾಂಶದೊಂದಿಗೆ ಆಸ್ಟ್ರೇಲಿಯಾ, ಭಾರತ, ಸೌತ್ ಆಫ್ರಿಕಾ ತಂಡಗಳ ಸೆಮಿಫೈನಲ್​ ಭವಿಷ್ಯ ನಿರ್ಧಾರವಾಗಲಿದೆ.

  • ಆಸ್ಟ್ರೇಲಿಯಾ ಗೆದ್ದರೂ, ಸೋತರೂ ನೆಟ್ ರನ್ ರೇಟ್​ ನೆರವಿನಿಂದ ಸೆಮಿಫೈನಲ್​ಗೇರಲಿದೆ.
  • ಭಾರತ ತಂಡ ಗೆದ್ದರೆ 8 ಅಂಕಗಳು + ಉತ್ತಮ ನೆಟ್ ರನ್ ರೇಟ್ ನೆರವಿನೊಂದಿಗೆ ಸೆಮಿಫೈನಲ್​ಗೆ ಪ್ರವೇಶಿಸಲಿದೆ.
  • ಆಸ್ಟ್ರೇಲಿಯಾ ಸೋತು ಸೌತ್ ಆಫ್ರಿಕಾ ತಂಡ ಕೊನೆಯ ಮ್ಯಾಚ್​ನಲ್ಲಿ ಗೆದ್ದರೂ ಸೆಮಿಫೈನಲ್​ಗೇರುವ ಸಾಧ್ಯತೆ ಕಡಿಮೆ.
  • ಭಾರತ ತಂಡ ಸೋತರೆ, ಬಾಂಗ್ಲಾದೇಶ್ ತಂಡವನ್ನು ಮಣಿಸಿ ಸೌತ್ ಆಫ್ರಿಕಾ ತಂಡ ಸೆಮಿಫೈನಲ್​​ಗೆ ಎಂಟ್ರಿ ಕೊಡಲಿದೆ.

ಇದನ್ನೂ ಓದಿ: 96 ವರ್ಷಗಳ ಹಳೆಯ ರೆಕಾರ್ಡ್ ಬ್ರೇಕ್ ಮಾಡಿದ ಲ್ಯಾಥಮ್-ಕಾನ್ವೆ..!

ಒಟ್ಟಾರೆಯಾಗಿ ಹೇಳುವುದಾದರೆ ಮಹಿಳಾ ಟಿ20 ವಿಶ್ವಕಪ್‌ನ ನಿರ್ಣಾಯಕ ಸೆಮಿಫೈನಲ್ ರೇಸ್ ಜೂನ್ 28ರ ಭಾರತ-ಆಸ್ಟ್ರೇಲಿಯಾ ಪಂದ್ಯದ ಮೇಲೆ ಅವಲಂಬಿತವಾಗಿದ್ದು, ಹರ್ಮನ್‌ಪ್ರೀತ್ ಕೌರ್ ಪಡೆಯು ಆಸೀಸ್ ಬಳಗವನ್ನು ಮಣಿಸಿ ನೇರವಾಗಿ ಸೆಮೀಸ್​ಗೆ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿದೆ.

Source link

ಕಲಬುರಗಿ, ರಾಯಚೂರಿನಲ್ಲಿ ಕೃತಕ ಶೇಂದಿ ದಂಧೆ: 1,500 ಕೆಜಿ ಮರಣಾಂತಿಕ ಕೆಮಿಕಲ್ ಸೀಜ್ ಮಾಡಿದ ಅಬಕಾರಿ ಇಲಾಖೆ – Kannada News | Kalyana Karnataka’s Deadly Toddy Menace: Chloral Hydrate Poisons Laborers

ಹುಬ್ಬಳ್ಳಿ, ಜೂ.27: ಕರ್ನಾಟಕದಲ್ಲಿ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ನಕಲಿ ಹಾಗೂ ವಿಷಕಾರಿ ಕೃತಕ ಕಳ್ಳು (Spurious Toddy) ದಂಧೆಯ ವಿರುದ್ಧ ಅಬಕಾರಿ ಇಲಾಖೆ ಭಾರಿ ಕಾರ್ಯಾಚರಣೆ ನಡೆಸಿದೆ. ಕೃತಕ ಕಳ್ಳು ತಯಾರಿಕೆಗೆ ಬಳಸಲಾಗುವ ಅತ್ಯಂತ ಅಪಾಯಕಾರಿ ‘ಕ್ಲೋರಲ್ ಹೈಡ್ರೇಟ್’ (CH) ಎಂಬ 1,500 ಕೆಜಿ ರಾಸಾಯನಿಕ ಪುಡಿಯನ್ನು ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧೆಡೆಯಿಂದ ವಶಪಡಿಸಿಕೊಂಡಿದೆ. ಈ ದಂಧೆಗೆ ಸಂಬಂಧಿಸಿದಂತೆ ಇದುವರೆಗೆ 771 ಜನರನ್ನು ಬಂಧಿಸಲಾಗಿದೆ.

ಅಬಕಾರಿ ಇಲಾಖೆಯ ದಾಖಲೆಗಳ ಪ್ರಕಾರ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಈ ಮಾರಕ ನಕಲಿ ಕಳ್ಳಿನ ಬಳಕೆ ಅತ್ಯಂತ ಹೆಚ್ಚಾಗಿದೆ. ಇದು ನೇರವಾಗಿ ಮನುಷ್ಯನ ಕೇಂದ್ರ ನರಮಂಡಲದ ಮೇಲೆ ದಾಳಿ ಮಾಡಿ ಜರ್ಜರಿತಗೊಳಿಸುತ್ತದೆ. ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈ ದಂಧೆ ಹೆಮ್ಮರವಾಗಿ ಬೆಳೆದಿದೆ. ಅದರಲ್ಲೂ ವಿಶೇಷವಾಗಿ ರಾಯಚೂರು ಜಿಲ್ಲೆಯೊಂದರಲ್ಲೇ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 1,033 ಕೆಜಿ ಕ್ಲೋರಲ್ ಹೈಡ್ರೇಟ್ (CH) ಪುಡಿ ಮತ್ತು 16,905 ಲೀಟರ್ ಕೃತಕ ಕಳ್ಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಹೊರತಾಗಿ ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಈ ವಿಷಕಾರಿ ಪಾನೀಯದ ಹಾವಳಿ ಹೆಚ್ಚಾಗಿದೆ.

ಕಳ್ಳಭಟ್ಟಿ ದಂಧೆಕೋರರು ಕೇವಲ 5 ಗ್ರಾಮ್ ಕ್ಲೋರಲ್ ಹೈಡ್ರೇಟ್ ಪುಡಿಯನ್ನು ಬಳಸಿ 1 ಲೀಟರ್ ಕೃತಕ ಕಳ್ಳನ್ನು ತಯಾರಿಸುತ್ತಾರೆ. ಕಡಿಮೆ ಬೆಲೆಗೆ ಸಿಗುತ್ತದೆ ಮತ್ತು ಅತಿ ಹೆಚ್ಚು ಕಿಕ್ ನೀಡುತ್ತದೆ ಎಂಬ ಕಾರಣಕ್ಕೆ ದಿನಗೂಲಿ ಕಾರ್ಮಿಕರು ಈ ರಾಸಾಯನಿಕ ಮಿಶ್ರಿತ ಕಳ್ಳನ್ನು ಹೆಚ್ಚಾಗಿ ಕುಡಿಯುತ್ತಿದ್ದಾರೆ. ಇದು ಮನುಷ್ಯನ ದೇಹವನ್ನು ನಿಧಾನವಾಗಿ ಕೊಲ್ಲುವ ಸ್ಲೋ ಪಾಯ್ಸನ್ ಆಗಿದೆ. ಇದರ ನಿರಂತರ ಸೇವನೆಯಿಂದ ಅಂಗಾಂಗ ವೈಫಲ್ಯ, ಪಾರ್ಶ್ವವಾಯು ಮತ್ತು ಸಾವು ಸಂಭವಿಸಬಹುದು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ಇಡೀ ಕರ್ನಾಟಕದಲ್ಲಿ ನೈಸರ್ಗಿಕ ಕಳ್ಳು ತೆಗೆಯುವುದು ಮತ್ತು ಮಾರುವುದನ್ನು ಬ್ಯಾನ್ ಮಾಡಲಾಗಿದೆ. ಇನ್ನು ಈ ಕ್ಲೋರಲ್ ಹೈಡ್ರೇಟ್ ರಾಸಾಯನಿಕವನ್ನು ಮನುಷ್ಯನ ಬಳಕೆಗೆ ಮಾರಾಟ ಮಾಡುವುದನ್ನು ‘ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ’ ಅಡಿಯಲ್ಲಿ ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಇನ್ಮೇಲೆ ಪದೇ ಪದೇ ಕರೆಂಟ್ ಹೋಗಲ್ಲ: ವಿದ್ಯುತ್ ಲೈನ್‌ಗಳ ತಪಾಸಣೆಗೆ ಲಗ್ಗೆ ಇಟ್ಟ ಅತ್ಯಾಧುನಿಕ ಡ್ರೋನ್‌ಗಳು; ಶೇ. 85 ರಷ್ಟು ತಗ್ಗಿದ ವಿದ್ಯುತ್ ವ್ಯತ್ಯಯ

ಸಾಮಾನ್ಯವಾಗಿ ಪಶುವೈದ್ಯರು ಜಾನುವಾರುಗಳ ತೀವ್ರ ನರನೋವು ನಿವಾರಿಸಲು ಈ ಕ್ಲೋರಲ್ ಹೈಡ್ರೇಟ್ ಪುಡಿಯನ್ನು ನೋವು ನಿವಾರಕವಾಗಿ ಬಳಸುತ್ತಾರೆ. ಆದರೆ ದಂಧೆಕೋರರು ಇದರ ತೀವ್ರ ಅಮಲೇರಿಸುವ ಗುಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ. ಕರ್ನಾಟಕದಲ್ಲಿ ಕಳ್ಳು ನಿಷೇಧವಿದ್ದರೂ, ನೆರೆ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇದಕ್ಕೆ ಕಾನೂನುಬದ್ಧ ಅವಕಾಶವಿದೆ. ಅಲ್ಲಿಂದಲೇ ರೈಲ್ವೆ ಮಾರ್ಗ ಹಾಗೂ ರಸ್ತೆಗಳ ಮೂಲಕ ಈ ನಿಷೇಧಿತ ಕೆಮಿಕಲ್ ಕರ್ನಾಟಕದ ಗಡಿಯೊಳಗೆ ಬರುತ್ತಿದೆ. ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿದ್ದರೂ ದಂಧೆಕೋರರು ಕಣ್ಣು ತಪ್ಪಿಸಿ ಸಾಗಿಸುತ್ತಿದ್ದಾರೆ. ನೆರೆ ರಾಜ್ಯಗಳು ಈ ಮಾರಕ ಲಿಕ್ಕರ್ ಅನ್ನು ಬ್ಯಾನ್ ಮಾಡದ ಹೊರತು ನಮ್ಮಲ್ಲಿ ಇದನ್ನು ತಡೆಯುವುದು ಕಷ್ಟ. ಆದರೂ, ಈ ಕ್ಲೋರಲ್ ಹೈಡ್ರೇಟ್ ಅನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಡಿಯಲ್ಲಿ ತಂದು ದೇಶಾದ್ಯಂತ ಕಟ್ಟುನಿಟ್ಟಾಗಿ ನಿಯಂತ್ರಿಸಲು ಕರ್ನಾಟಕ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಷುರಿ ಕ್ಯಾರವನ್ ಖರೀದಿಸಿದ ಕಿಚ್ಚ ಸುದೀಪ್; ಇದರ ಬೆಲೆ ಎಷ್ಟು ಕೋಟಿ ಗೊತ್ತಾ? – Kannada News | Kiccha Sudeep’s Rs 6.5 Cr Luxury Caravan: Sandalwood’s Most Expensive Vanity Van

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರಿಗಾಗಿ (Kichcha Sudeep) ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಹಾಗೂ ಐಷಾರಾಮಿ ಕ್ಯಾರವನ್ ಒಂದು ಸಿದ್ಧವಾಗಿ ಬಂದಿದೆ. ಸದ್ಯ ಸ್ಯಾಂಡಲ್‌ವುಡ್ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಬೆಲೆಯ ಕ್ಯಾರವನ್ ಇದಾಗಿದೆ ಎಂದು ಹೇಳಲಾಗುತ್ತಿದೆ. ಈ ಕ್ಯಾರವನ್‌ನ ಒಟ್ಟು ಬೆಲೆ ಬರೋಬ್ಬರಿ ಸುಮಾರು 6.5 ಕೋಟಿ ರೂಪಾಯಿ. ಖ್ಯಾತ ಡಿಸೈನರ್ ದಿಲೀಪ್ ಛಾಬ್ರಿಯಾ ಅವರು ಕ್ರಿಯೇಟ್ ಮಾಡಿರುವ ‘DC2’ ಸಂಸ್ಥೆಯ ಜಿಮ್ ಮಾಡ್ಯುಲರ್ ಕ್ಯಾರವನ್ ಇದಾಗಿದ್ದು, ಸುದೀಪ್ ಅವರ ಇಷ್ಟಕ್ಕೆ ತಕ್ಕಂತೆ ಇದನ್ನು ಕಸ್ಟಮೈಸ್ ಮಾಡಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಕ್ಯಾರವಾನ್ ರೆಡಿ ಆಗಿದೆ.

ಈ ಐಷಾರಾಮಿ ಕ್ಯಾರವನ್‌ನ ಮತ್ತೊಂದು ವಿಶೇಷವೆಂದರೆ, ಇದರ ಮೇಲೆ ಕಿಚ್ಚ ಸುದೀಪ್ ಅವರ ಹೆಸರನ್ನು ಸೂಚಿಸುವ ‘K’ (ಕಿಚ್ಚ) ಎಂಬ ಸಿಂಬಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ನಟ ಸುದೀಪ್ ಅವರು ತಮ್ಮ ಕಾರಿನ ಮೇಲೂ ಇದೇ ರೀತಿಯ ಸಿಂಬಲ್ ಹೊಂದಿದ್ದು, ಈಗ ಅದೇ ಲೋಗೋವನ್ನು ತಮ್ಮ ಹೊಸ ಕ್ಯಾರವನ್ ಮೇಲೂ ಹಾಕಿಸಿಕೊಂಡಿದ್ದಾರೆ. ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ಕ್ಯಾರವನ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

ಇನ್ನು ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷಾ’ ಸಿನಿಮಾದ ಶೂಟಿಂಗ್ ಜೂನ್ 26ರಿಂದ ಭರ್ಜರಿಯಾಗಿ ಕಿಕ್ ಸ್ಟಾರ್ಟ್ ಆಗಿದೆ. ಸುಮಾರು ಒಂದು ವರ್ಷದ ದೀರ್ಘ ಬಿಡುವಿನ ಬಳಿಕ ಈ ಚಿತ್ರದ ಎರಡನೇ ಹಂತದ ಚಿತ್ರೀಕರಣ ಆರಂಭಗೊಂಡಿದೆ. ಕನಕಪುರದ ಬಳಿ ಬೃಹತ್ ಆದ ಸೆಟ್ ಒಂದನ್ನು ನಿರ್ಮಿಸಲಾಗಿದ್ದು, ಅಲ್ಲಿ ಈ ಸಿನಿಮಾದ ಪ್ರಮುಖ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಿಚ್ಚ ಸುದೀಪ್?

‘ಬಿಲ್ಲ ರಂಗ ಬಾಷಾ’ ಚಿತ್ರದ ಶೂಟಿಂಗ್ ಅಡ್ಡಾಗೆ ಸುದೀಪ್ ಅವರ ಈ ಕಾಸ್ಟ್ಲಿ ಕ್ಯಾರವನ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಶೂಟಿಂಗ್ ಸೆಟ್‌ನಲ್ಲಿ ನಿಂತಿರುವ ಈ ಐಷಾರಾಮಿ ವಾಹನದ ಲುಕ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಗಾಂಧಿನಗರದ ಅಂಗಳದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಸುದೀಪ್ ಅವರಿಗೆ ಮೊದಲಿನಿಂದಲೂ ವಾಹನಗಳ ಬಗ್ಗೆ ಕ್ರೇಜ್ ಇದೆ. ಈಗ ಅವರ ಗ್ಯಾರೇಜ್ ಸೇರಿರೋ ಕ್ಯಾರವಾನ್ ಅವರ ಎಲ್ಲ ವಾಹನಗಳನ್ನು ಮೀರಿಸುವಂತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:59 am, Sat, 27 June 26

Source link

ಮಡಿಕೇರಿ: ಎಂಟು ತಿಂಗಳ ಮಗುವಿನ ಗಂಟಲಲ್ಲಿತ್ತು ಎಲ್​ಇಡಿ ಬಲ್ಬ್! – Kannada News | Doctors in Madikeri Successfully Remove LED Bulb Swallowed by 8 Month Old Baby Without Surgery

ಮಡಿಕೇರಿ, ಜೂನ್ 27: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಎಂಟು ತಿಂಗಳ ಮಗುವೊಂದು ಆಟವಾಡುತ್ತಾ ಎಲ್ಇಡಿ ಬಲ್ಬ್ ನುಂಗಿದ ಘಟನೆ ನಡೆದಿದೆ. ಸಕಾಲಿಕ ಚಿಕಿತ್ಸೆಯಿಂದಾಗಿ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಎಲ್ಇಡಿ ಬಲ್ಬ್ ನುಂಗಿದ ಬಳಿಕ ಮಗು ವಿಪರೀತವಾಗಿ ಅಳಲಾರಂಭಿಸಿದ್ದು, ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಮೊದಲು ಎಕ್ಸ್​ ರೇ ಮಾಡಿದರು. ಗಂಟಲಿನಲ್ಲಿ ಲೋಹದ ವಸ್ತುವೊಂದು ಇರುವುದು ಪತ್ತೆಯಾಗಿದ್ದು, ಲ್ಯಾರಿಂಗೋಸ್ಕೋಪ್ ಪರೀಕ್ಷೆ ನಡೆಸಿದಾಗ ಅದು ಎಲ್ಇಡಿ ಬಲ್ಬ್ ಎಂದು ದೃಢಪಟ್ಟಿತು. ಇಎನ್‌ಟಿ ತಜ್ಞೆ ಡಾ. ರಾಜಶ್ರೀ ನೇತೃತ್ವದ ವೈದ್ಯರ ತಂಡವು ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಬಲ್ಬ್ ಅನ್ನು ಯಶಸ್ವಿಯಾಗಿ ಹೊರತೆಗೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೀಜಿಂಗ್‌ನ 109 ಅಂತಸ್ತಿನ ದೈತ್ಯ ಕಟ್ಟಡಕ್ಕೆ ಡಿಕ್ಕಿ ಹೊಡೆದ ವಿಮಾನ – Kannada News | Beijing Plane Crash: Light Aircraft Hits 109 Story China Zun Skyscraper

ಬೀಜಿಂಗ್, ಜೂನ್ 27: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಭೀಕರ ವಿಮಾನ ಅಪಘಾತ(Plane Crash)ವೊಂದು ಸಂಭವಿಸಿದೆ. ನಗರದ ಅತ್ಯಂತ ಎತ್ತರದ ಹೆಗ್ಗುರುತಾಗಿರುವ, 109 ಅಂತಸ್ತಿನ ‘ಚೀನಾ ಜುನ್’ (CITIC Tower) ಸ್ಕೈಸ್ಕ್ರೇಪರ್ ಕಟ್ಟಡಕ್ಕೆ ಲಘು ವಿಮಾನವೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದಾಗಿ ಇಡೀ ನಗರದಲ್ಲಿ ವ್ಯಾಪಕ ಆತಂಕ ಮತ್ತು ಭೀತಿ ಸೃಷ್ಟಿಯಾಗಿದೆ.

ಅಪಘಾತ ಸಂಭವಿಸಿದ ತಕ್ಷಣವೇ ದೈತ್ಯ ಮಹಲಿನ ಮೇಲಿನ ಅಂತಸ್ತುಗಳಿಂದ ಅವಶೇಷಗಳು ಮತ್ತು ಗಾಜಿನ ತುಂಡುಗಳು ನೆಲಕ್ಕೆ ಬೀಳಲು ಆರಂಭಿಸಿದವು. ಘಟನೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿವೆ. ಇದರಲ್ಲಿ ಕಟ್ಟಡದ ಭಾಗಗಳು ಕುಸಿಯುತ್ತಿರುವುದು, ವಿಮಾನದ ಬಾಲದ ತುಂಡು ನೆಲಕ್ಕೆ ಬಿದ್ದಿರುವುದನ್ನು ಕಾಣಬಹುದು.

ತಕ್ಷಣವೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ ಕಟ್ಟಡದೊಳಗಿದ್ದ ನೂರಾರು ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಗೋಪುರದ ದ್ವಾರದ ಬಳಿ ಅಗ್ನಿಶಾಮಕ ದಳ, ಪೊಲೀಸ್ ಮತ್ತು ಆಂಬ್ಯುಲೆನ್ಸ್ ವಾಹನಗಳು ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿವೆ. ಅಪಘಾತಕ್ಕೀಡಾದ ವಿಮಾನವು ಚೀನಾ ದೇಶದಲ್ಲೇ ತಯಾರಾದ ಲಘು ಕ್ರೀಡಾ ವಿಮಾನವಾಗಿದೆ . ಇದನ್ನು ‘ಸನ್‌ವರ್ಡ್ ಎಸ್‌ಎ 60 ಎಲ್ ಅರೋರಾ’ (Sunward SA60L Aurora) ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: ಅಹಮದಾಬಾದ್ ವಿಮಾನ ದುರಂತಕ್ಕೆ ಒಂದು ವರ್ಷ ತುಂಬಿದ್ರೂ ಪ್ರಕಟವಾಗದ ತನಿಖಾ ವರದಿ; ಎಎಐಬಿ ಗಡುವು ಮೀರಿದ ಭಾರತ!

ಈ ವಿಮಾನವನ್ನು ಸ್ಥಳೀಯ ಸಾಮಾನ್ಯ ವಿಮಾನಯಾನ ಕಂಪನಿಯೊಂದು ನಿರ್ವಹಿಸುತ್ತಿತ್ತು ಎನ್ನಲಾಗಿದೆ. ಆದರೆ, ಕಿಕ್ಕಿರಿದು ತುಂಬಿರುವ ನಗರದ ಮಧ್ಯೆ ಈ ವಿಮಾನವು ಗೋಪುರಕ್ಕೆ ಡಿಕ್ಕಿ ಹೊಡೆಯಲು ನಿಖರ ಕಾರಣವೇನು ಎಂಬುದು ಇನ್ನು ನಿಗೂಢವಾಗಿದೆ. ಜಾಗತಿಕ ವಿಮಾನ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ‘Flightradar24’ ಬಿಡುಗಡೆ ಮಾಡಿರುವ ಆರಂಭಿಕ ಮಾಹಿತಿಯ ಪ್ರಕಾರ, ಈ ಲಘು ವಿಮಾನವು ಅಪಘಾತಕ್ಕೂ ಮುನ್ನ ತನ್ನ ನಿಗದಿತ ಸಾಮಾನ್ಯ ಹಾರಾಟದ ಮಾರ್ಗದಿಂದ ಸಂಪೂರ್ಣವಾಗಿ ವಿಮುಖವಾಗಿತ್ತು. ಅದು ಅತ್ಯಂತ ಅಸಾಮಾನ್ಯವಾದ ಬೇರೆ ಮಾರ್ಗದಲ್ಲಿ ಚಲಿಸಿ ಬಂದು ನೇರವಾಗಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ.

ಬೀಜಿಂಗ್‌ನಲ್ಲಿ ಕಠಿಣ ನಿಯಮಗಳ ನಡುವೆಯೂ ದುರಂತ
ವಿಶೇಷವೆಂದರೆ, ಬೀಜಿಂಗ್‌ನಲ್ಲಿ ಸಣ್ಣ ವಿಮಾನ ಹಾಗೂ ಡ್ರೋನ್‌ಗಳ ಹಾರಾಟದ ಮೇಲೆ ಕಟ್ಟುನಿಟ್ಟಿನ ನಿಷೇಧವಿರುವಾಗಲೇ ಈ ಘಟನೆ ನಡೆದಿದೆ.

ವಿಡಿಯೋ

ಹೊಸ ಕಾನೂನಿನ ಪ್ರಕಾರ, ಮೇ 1 ರಿಂದ ಜಾರಿಗೆ ಬರುವಂತೆ ಬೀಜಿಂಗ್ ಅನ್ನು ಡ್ರೋನ್ ಮುಕ್ತ ವಲಯ ಎಂದು ಘೋಷಿಸಲಾಗಿದೆ. ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ವ್ಯಕ್ತಿ ಇಲ್ಲಿ ಡ್ರೋನ್ ಅಥವಾ ಇಂತಹ ಸಣ್ಣ ವಿಮಾನಗಳನ್ನು ಖರೀದಿಸುವಂತಿಲ್ಲ, ಬಾಡಿಗೆಗೆ ಪಡೆಯುವಂತಿಲ್ಲ ಅಥವಾ ಹಾರಿಸುವಂತಿಲ್ಲ. ಇಷ್ಟೆಲ್ಲಾ ಕಾವಲು ಮತ್ತು ಕಠಿಣ ನಿಯಮಗಳ ನಡುವೆಯೂ ವಿಮಾನವು ರಾಜಧಾನಿಯ ಹೃದಯಭಾಗದ ಅತಿ ಎತ್ತರದ ಕಟ್ಟಡಕ್ಕೆ ಅಪ್ಪಳಿಸಿರುವುದು ಚೀನಾ ಆಡಳಿತಕ್ಕೆ ಭಾರಿ ತಲೆನೋವಾಗಿ ಪರಿಣಮಿಸಿದೆ. ಸದ್ಯ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version