ಸಿಎಜಿ ವರದಿಯಲ್ಲಿ ಗೃಹಲಕ್ಷ್ಮೀ ಯೋಜನೆ ಕಳ್ಳಾಟ ಬಯಲು: ಲೋಪಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸ್ಪಷ್ಟನೆ – Kannada News | Gruha Lakshmi CAG Report: Women and Child Development Department Clarifies Bank Account Issues Affecting Beneficiaries

ಗೃಹಲಕ್ಷ್ಮೀ ಯೋಜನೆImage Credit source: karnataka.gov.in

ಬೆಂಗಳೂರು, ಜೂನ್​​ 25: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ (gruhalakshmi) ಯೋಜನೆಯಲ್ಲಿ 225 ಕೋಟಿಯಷ್ಟು ಅಕ್ರಮ ನಡೆದಿದೆ ಎಂದು ಸಿಎಜಿ ವರದಿ ಬಹಿರಂಗ ಬೆನ್ನಲ್ಲೇ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸ್ಪಷ್ಟೀಕರಣ ನೀಡಲಾಗಿದೆ. ಇಲಾಖೆಯು ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಮೂರು ತಾಂತ್ರಿಕ ಅಂಶಗಳನ್ನು ಪತ್ತೆಹಚ್ಚಿದ್ದು, ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಮೂಲಕವೇ ಗೃಹಲಕ್ಷ್ಮೀ ಹಣ ವಿತರಿಸಲಾಗುತ್ತಿದೆ ಎಂದು ತಿಳಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪತ್ತೆ ಹಚ್ಚಿರುವ ಮೂರು ಅಂಶಗಳು ಯಾವವು?

  • ಒಂದೇ ಬ್ಯಾಂಕ್​​ ಖಾತೆ ಸಂಖ್ಯೆಯನ್ನು ಹೊಂದಿರುವ ಬಹು ಫಲಾನುಭವಿಗಳು

ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವ ಬಹು ಫಲಾನುಭವಿಗಳು ಎಬಿಪಿಎಸ್​​ ವ್ಯವಸ್ಥೆಯಲ್ಲಿ ಆಧಾರ್ ಸಂಖ್ಯೆಯನ್ನು ಹಣಕಾಸಿನ ವಿಳಾಸವಾಗಿ ಬಳಸಲಾಗುತ್ತದೆ. ಪಾವತಿ ಕಡತದಲ್ಲಿರುವ ಆಧಾರ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಸಂಬಂಧಿತ ಬ್ಯಾಂಕ್‌ಗೆ ಕಳುಹಿಸಲಾಗುತ್ತದೆ. ಬ್ಯಾಂಕ್ ತನ್ನ ಸಿಬಿಎಸ್​ ವ್ಯವಸ್ಥೆಯಲ್ಲಿ ಆಧಾರ್ ಜೋಡಣೆಯನ್ನು ಪರಿಶೀಲಿಸಿ, ಫಲಾನುಭವಿಯ ಖಾತೆಗೆ ಹಣವನ್ನು ಜಮೆ ಮಾಡಿ, ಪ್ರತಿಕ್ರಿಯಾ ಕಡತದ ಭಾಗವಾಗಿ ಬ್ಯಾಂಕ್ ಖಾತೆಗಳ ವಿವರಗಳನ್ನು ಹಂಚಿಕೊಳ್ಳುತ್ತದೆ.

ಇದನ್ನೂ ಓದಿ: ವಿವರಗಳೇ ಇಲ್ಲದ 23,262 ಖಾತೆಗಳಿಗೆ 46.52 ಕೋಟಿ ರೂ. ಪಾವತಿ: ಸಿಎಜಿ ವರದಿ ತೆರೆದಿಟ್ಟ ಪ್ರಲ್ಹಾದ ಜೋಶಿ

ಇನ್ನು ಒಂದೇ ಬ್ಯಾಂಕ್ ಖಾತೆ ಸಂಖ್ಯೆಯಡಿ ಬಹು ಫಲಾನುಭವಿಗಳು ಕಂಡುಬರುವುದಕ್ಕೆ ಎರಡು ಕಾರಣಗಳಿರಬಹುದು. ಮೊದಲನೇಯದು ಜಂಟಿ ಬ್ಯಾಂಕ್ ಖಾತೆಯಿದ್ದಲ್ಲಿ ಒಂದೇ ಬ್ಯಾಂಕ್ ಖಾತೆಗೆ ಒಂದಕ್ಕಿಂತ ಹೆಚ್ಚು ಫಲಾನುಭವಿಗಳ ಸರ್ಕಾರಿ ಸೌಲಭ್ಯ ಜಮೆಯಾಗಿರಬಹುದು. ಎರಡನೇಯದು ಫಲಾನುಭವಿಯು ಖಾತೆ ಹೊಂದಿರುವ ಬ್ಯಾಂಕ್‌ನ ತಾಂತ್ರಿಕ ದೋಷದಿಂದ ತಪ್ಪಾದ ಬ್ಯಾಂಕ್ ಖಾತೆ ವಿವರಗಳು ಪ್ರತಿಕ್ರಿಯಾ ಕಡತದಲ್ಲಿ ಹಂಚಿಕೆಯಾಗಿರಬಹುದು.

ಈ ಎರಡು ಕಾರಣಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪರಿಶೀಲನೆ ಮಾಡಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಇಂತಹ ಪ್ರಕರಣಗಳ ಕುರಿತು ಅಧಿಕಾರಿಗಳ ಮೂಲಕ ಭೌತಿಕವಾಗಿ ಕ್ಷೇತ್ರ ಭೇಟಿ ನಡೆಸಿ ಪರಿಶೀಲನೆ ಜಂಟಿ ಖಾತೆ ಇರುವಂತಹ ಫಲಾನುಭವಿಗಳ ಉದಾಹರಣಗೆ ಅತ್ತೆ-ಸೊಸೆ, ತಾಯಿ-ಮಗಳ ಬ್ಯಾಂಕ್ ಖಾತೆಗೆ ಅನುದಾನ ಪಾವತಿಯಾಗಿರುವುದು ಕಂಡುಬಂದಿದೆ. ಸದರಿ ಫಲಾನುಭವಿಗಳು ಬೇರೆ ಬೇರೆ ಪಡಿತರ ಚೀಟಿ ಹೊಂದಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿರುವುದರಿಂದ ಇಬ್ಬರು ಫಲಾನುಭವಿಗಳ ಧನಸಹಾಯ ಮೊತ್ತವು ಒಂದೇ ಖಾತೆಗೆ ಪಾವತಿಯಾಗಿದೆ.

  • ಒಂದಕ್ಕಿಂತ ಹೆಚ್ಚು ಬ್ಯಾಂಕ್​ ಖಾತೆಗಳನ್ನ ಹೊಂದಿರುವ ಫಲಾನುಭವಿಗಳು

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಫಲಾನುಭವಿಗಳು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸುವ ಜವಾಬ್ದಾರಿಯೂ ಅವರದ್ದೇ. ಫಲಾನುಭವಿ ಸರ್ಕಾರಿ ಸೌಲಭ್ಯ ಪಡೆಯಲು ತಾನು ಬಯಸುವ ಯಾವುದೇ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬಹುದು. ಅಗತ್ಯವಿದ್ದಲ್ಲಿ ಲಿಖಿತ ಒಪ್ಪಿಗೆಯ ಮೂಲಕ ಆಧಾರ್ ಜೋಡಣೆಯನ್ನು ಮತ್ತೊಂದು ಬ್ಯಾಂಕ್ ಖಾತೆಗೆ ಬದಲಾಯಿಸಬಹುದು. NPCI Mapperನಲ್ಲಿ ಈ ಬದಲಾವಣೆ ನವೀಕರಿಸಿದ ನಂತರ ಸರ್ಕಾರಿ ಸೌಲಭ್ಯ ಹೊಸದಾಗಿ ಜೋಡಿಸಲಾದ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಬ್ಯಾಂಕ್ ಮೇಲ್ಕಂಡ ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಅನುಸರಿಸಿ ಈ ಬದಲಾವಣೆ ಮಾಡುತ್ತದೆ. ಇದರಲ್ಲಿ ಸರ್ಕಾರ ಅಥವಾ ಇಲಾಖೆಯ ಯಾವುದೇ ಪಾತ್ರ ಇರುವುದಿಲ್ಲ. ಒಂದೇ ಫಲಾನುಭವಿಯ ವಿವಿಧ ಖಾತೆಗಳಿಗೆ ಬೇರೆ ಬೇರೆ ತಿಂಗಳ ಹಣ ಪಾವತಿ ಮಾಡುವ ಅವಕಾಶವಿದೆ. ಆದರೆ ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿಲ್ಲ ಎಂದು ತಿಳಿಸಿದೆ.

  • ಬ್ಯಾಂಕ್​ ಖಾತೆ ವಿವರಗಳಿಲ್ಲದ ಫಲಾನುಭವಿಗಳಿಗೆ ಪಾವತಿ

ABPS ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆ ವಿವರಗಳು ಪ್ರತಿಕ್ರಿಯಾ ಕಡತದ ಭಾಗವಾಗಿ ಲಭ್ಯವಾಗಬೇಕು. ಆದರೆ ಕೆಲವೊಮ್ಮೆ ಫಲಾನುಭವಿಗಳ ಬ್ಯಾಂಕಿನ ತಾಂತ್ರಿಕ ಸಮಸ್ಯೆಯಿಂದ ಖಾತೆ ವಿವರಗಳಿಲ್ಲದ ಪ್ರತಿಕ್ರಿಯೆ ಕಳುಹಿಸಬಹುದು. ಈ ಕುರಿತು ಪರಿಶೀಲನೆಗಳನ್ನು ನಡೆಸಿದಾಗ, ನಂತರದ ತಿಂಗಳುಗಳಲ್ಲಿ ಬ್ಯಾಂಕ್ ಖಾತೆ ವಿವರಗಳೊಂದಿಗೆ ಪ್ರತಿಕ್ರಿಯಾ ಕಡತವನ್ನು ಬ್ಯಾಂಕ್ ಒದಗಿಸಿರುವುದು ಕಂಡುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅನುಕೂಲಕರ ಟ್ಯಾರಿಫ್ ದರ ಇಲ್ಲದೇ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಇಲ್ಲ: ವಾಣಿಜ್ಯ ಸಚಿವ ಪಿಯೂಷ್ ಗೋಯಲ್ – Kannada News | Piyush Goyal says, no trade deal with USA until having tariff advantage

ನವದೆಹಲಿ, ಜೂನ್ 25: ಭಾರತದ ರಫ್ತಿಗೆ ಹಿನ್ನಡೆಯಾಗುವಂತಹ ರೀತಿಯ ವ್ಯಾಪಾರ ಒಪ್ಪಂದವನ್ನು ಅಮೆರಿಕದೊಂದಿಗೆ ಮಾಡಿಕೊಳ್ಳುವುದಿಲ್ಲ ಎಂದು ವಾಣಿಜ್ಯ ಸಚಿವ ಪಿಯೂಶ್ ಗೋಯಲ್ (Piyush Goyal) ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಭಾರತದ ರಫ್ತು ಪ್ರತಿಸ್ಪರ್ಧಿ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಅನುಕೂಲಕರ ಸುಂಕದ ವ್ಯವಸ್ಥೆ (Comparative Tariff Advantage) ಖಾತ್ರಿಯಾಗುವವರೆಗೂ ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿಸುವುದಿಲ್ಲ ಎಂದು ಕೈಗಾರಿಕಾ ಸಚಿವರೂ ಆದ ಗೋಯಲ್ ಹೇಳಿದ್ದಾರೆ. ದೆಹಲಿಯಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಜೇಮಿಸನ್ ಗ್ರೀರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಅವರು ಈ ಮಹತ್ವದ ಹೇಳಿಕೆ ನೀಡಿದ್ದಾರೆ.

ಭಾರತದ ಕಠಿಣ ನಿಲುವು

“ಪ್ರತಿಸ್ಪರ್ಧಿ ದೇಶಗಳಿಗಿಂತ ಭಾರತಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಅನುಕೂಲಕರ ಸುಂಕದ ಸೌಲಭ್ಯ ಸಿಗುವ ಚೌಕಟ್ಟು ಅಂತಿಮವಾಗುವವರೆಗೆ ನಾವು ಅಮೆರಿಕದೊಂದಿಗೆ ಒಪ್ಪಂದಕ್ಕೆ ಬರಲು ಸಾಧ್ಯವಿಲ್ಲ,” ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ. ವಿಯೆಟ್ನಾಂ, ಥೈಲ್ಯಾಂಡ್, ಫಿಲಿಪೈನ್ಸ್, ಚೀನಾ, ಮಲೇಷ್ಯಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತಹ ಪ್ರತಿಸ್ಪರ್ಧಿ ಉತ್ಪಾದನಾ ದೇಶಗಳಿಗಿಂತ ಭಾರತೀಯ ರಫ್ತುಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಹೆಚ್ಚಿನ ಆದ್ಯತೆ ಮತ್ತು ಸುಂಕ ವಿನಾಯಿತಿ ಸಿಗಬೇಕು ಎಂಬುದು ಭಾರತದ ಪ್ರಮುಖ ಬೇಡಿಕೆಯಾಗಿದೆ.

ಅಂತಿಮ ಹಂತದಲ್ಲಿ ಭಾರತ ಅಮೆರಿಕ ವ್ಯಾಪಾರ ಒಪ್ಪಂದ

ಇದೇ ವೇಳೆ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಅಂತಿಮ ಹಂತಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ. ಫೆಬ್ರವರಿ 6 ರಂದೇ ಉಭಯ ದೇಶಗಳು ಒಪ್ಪಂದದ ಸ್ಥೂಲ ರೂಪರೇಖೆಗಳಿಗೆ ಸಮ್ಮತಿಸಿದ್ದು, ಅಂದಿನಿಂದ ಉಭಯ ದೇಶಗಳ ಅಧಿಕಾರಿಗಳ ತಂಡಗಳು ಇದರ ಸೂಕ್ಷ್ಮ ತಾಂತ್ರಿಕ ವಿವರಗಳ ಮೇಲೆ ಕೆಲಸ ಮಾಡುತ್ತಿವೆ. ವಾಷಿಂಗ್ಟನ್ ಯಾವ ಕಾನೂನು ಮತ್ತು ನೀತಿ ವ್ಯವಸ್ಥೆಯ ಮೂಲಕ ಭಾರತಕ್ಕೆ ಈ ಸ್ಪರ್ಧಾತ್ಮಕ ಸುಂಕದ ಸೌಲಭ್ಯವನ್ನು ನೀಡಬಹುದು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ: ಅಮೆರಿಕನ್ ಡಾಲರ್ ಎದುರು ರುಪಾಯಿ 16 ಪೈಸೆ ಚೇತರಿಕೆ; 94.39 ಮಟ್ಟದಲ್ಲಿ ಕೊನೆಗೊಂಡ ಭಾರತೀಯ ಕರೆನ್ಸಿ ಮೌಲ್ಯ

ಅಮೆರಿಕದ ತಾತ್ಕಾಲಿಕ ಶೇಕಡಾ 10 ರಷ್ಟು ಸುಂಕದ ವ್ಯವಸ್ಥೆಯು ಜುಲೈ 24 ರಂದು ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮುನ್ನವೇ ಉಭಯ ದೇಶಗಳು ಈ ಮಧ್ಯಂತರ ವ್ಯಾಪಾರ ಒಪ್ಪಂದವನ್ನು (Interim Trade Pact) ಪೂರ್ಣಗೊಳಿಸಲು ತರಾತುರಿಯಲ್ಲಿ ಕೆಲಸ ಮಾಡುತ್ತಿವೆ.

ಉನ್ನತ ಮಟ್ಟದ ಪರಿಶೀಲನಾ ಸಭೆ

ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಮತ್ತು ಪಿಯೂಷ್ ಗೋಯಲ್ ನಡುವೆ ನಡೆದ ಸಭೆಯಲ್ಲಿ ಪ್ರಸ್ತಾವಿತ ಒಪ್ಪಂದದ ಮೊದಲ ಹಂತದ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ಈ ಒಪ್ಪಂದವು ಡಿಜಿಟಲ್ ವ್ಯಾಪಾರ, ಮಾರುಕಟ್ಟೆ ಪ್ರವೇಶ, ಬಲಿಷ್ಠ ಪೂರೈಕೆ ಜಾಲ (Supply Chains), ಸುಂಕ ರಹಿತ ಅಡೆತಡೆಗಳ ಕಡಿತ ಮತ್ತು ಆಯಕಟ್ಟಿನ ವಲಯಗಳಲ್ಲಿನ ಸಹಕಾರವನ್ನು ಒಳಗೊಂಡಿರುತ್ತದೆ. ಈ ಒಪ್ಪಂದವು ಉಭಯ ದೇಶಗಳ ಉದ್ಯಮಿಗಳು, ರೈತರು ಮತ್ತು ಗ್ರಾಹಕರಿಗೆ ಸಮಾನ ಪ್ರಯೋಜನ ನೀಡುವಂತಿರಬೇಕು ಎಂದು ಇಬ್ಬರೂ ಸಚಿವರು ಪುನರುಚ್ಚರಿಸಿದ್ದಾರೆ.

ಅಮೆರಿಕಕ್ಕೆ ಭಾರತ ನೀಡುತ್ತಿರುವ ಭಾರಿ ಆಫರ್

ವ್ಯಾಪಾರ ಒಪ್ಪಂದದಲ್ಲಿ ಅಮೆರಿಕಕ್ಕೆ ತೃಪ್ತಿಯಾಗುವ ರೀತಿಯಲ್ಲಿ ಭಾರತವು ದೊಡ್ಡ ಆಫರ್ ಅನ್ನು ಮುಂದಿಟ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ಇಂಧನ ಉತ್ಪನ್ನಗಳು (Energy products), ವಿಮಾನಗಳು ಮತ್ತು ಅದರ ಬಿಡಿಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು ಮತ್ತು ಕೋಕಿಂಗ್ ಕೋಲ್ (Coking Coal) ಅನ್ನು ಖರೀದಿಸಲು ಭಾರತ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಬಿಟ್​ಕಾಯಿನ್ ಭಾರಿ ಕುಸಿತ; ಎಂಟು ತಿಂಗಳಲ್ಲಿ ಅರ್ಧದಷ್ಟು ಮೌಲ್ಯ ನಷ್ಟ; ಕ್ರಿಪ್ಟೋ ಬಜಾರಿನಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣಗಳೇನು?

2025-26ರ ಹಣಕಾಸು ವರ್ಷದಲ್ಲಿ ಅಮೆರಿಕವು ಭಾರತದ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿ ಮುಂದುವರಿದಿದೆ. ಹೆಚ್ಚಿನ ಸುಂಕಗಳ ಹೊರತಾಗಿಯೂ, ಕಳೆದ ಹಣಕಾಸು ವರ್ಷದಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಶೇ. 0.92 ರಷ್ಟು ಹೆಚ್ಚಳವಾಗಿ 87.3 ಬಿಲಿಯನ್ ಡಾಲರ್‌ಗೆ ತಲುಪಿದೆ. ಅದೇ ಸಮಯದಲ್ಲಿ, ಅಮೆರಿಕದಿಂದ ಭಾರತದ ಆಮದು ಶೇ. 15.95 ರಷ್ಟು ಏರಿಕೆಯಾಗಿ 52.9 ಬಿಲಿಯನ್ ಡಾಲರ್‌ಗೆ ತಲುಪಿದೆ. ಇದರಿಂದಾಗಿ ಭಾರತದ ವ್ಯಾಪಾರ ಬಾಕಿ (Trade Surplus) ಹಿಂದಿನ ವರ್ಷದ 40.89 ಬಿಲಿಯನ್ ಡಾಲರ್‌ನಿಂದ 34.4 ಬಿಲಿಯನ್ ಡಾಲರ್‌ಗೆ ಕುಸಿದಿದೆ ಎಂದು ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಿವರಾಜ್ ಸಿಂಗ್ ಚೌಹಾಣ್ ಮಗನ ವಿರುದ್ಧದ ಹೇಳಿಕೆಗೆ ಕ್ಷಮೆ ಕೇಳಿದ ರಾಹುಲ್ ಗಾಂಧಿ – Kannada News | Rahul Gandhi expresses regret in Shivraj Singh Chouhan son defamation case know details

ಜಬಲ್ಪುರ, ಜೂನ್ 25: ಕೇಂದ್ರ ಸಚಿವ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ ಸಿಂಗ್ ಚೌಹಾಣ್ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಲಿಖಿತ ಹೇಳಿಕೆ ನೀಡಿ ವಿಷಾದ ವ್ಯಕ್ತಪಡಿಸಿದ್ದಾರೆ. ತಪ್ಪು ತಿಳುವಳಿಕೆ ಮತ್ತು ತಪ್ಪು ಮಾಹಿತಿಯ ಆಧಾರದ ಮೇಲೆ ಆ ಹೇಳಿಕೆ ನೀಡಲಾಗಿತ್ತು ಎಂದು ರಾಹುಲ್ ಗಾಂಧಿ ಕೋರ್ಟ್‌ಗೆ ತಿಳಿಸಿದ್ದಾರೆ. ಈ ರೀತಿ ರಾಹುಲ್ ಗಾಂಧಿ ಕ್ಷಮೆ ಯಾಚನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಅವರು ಇದೇ ರೀತಿ ಕ್ಷಮೆ ಕೋರಿದ್ದರು.

ಪ್ರಸ್ತುತ ಪ್ರಕರಣದ ದೂರುದಾರರಾದ ಕಾರ್ತಿಕೇಯ ಚೌಹಾಣ್ ಅವರ ಪರ ವಕೀಲರು ರಾಹುಲ್ ಗಾಂಧಿ ಅವರ ವಿಷಾದವನ್ನು ಸ್ವೀಕರಿಸಲು ಮತ್ತು ಪ್ರಕರಣವನ್ನು ಮುಕ್ತಾಯಗೊಳಿಸಲು ಒಪ್ಪಿಗೆ ಸೂಚಿಸಿದ್ದು, ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಏನಿದು ವಿವಾದ?:

2018ರ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ, ಝಬುವಾದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡಿದ್ದ ‘ಪನಾಮಾ ಪೇಪರ್ಸ್ ಹಗರಣ’ದಲ್ಲಿ (Panama Papers Leak) ಆಗಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ ಸಿಂಗ್ ಅವರ ಹೆಸರು ಕೇಳಿಬಂದಿದೆ ಎಂದು ಆರೋಪಿಸಿದ್ದರು. ಈ ಆರೋಪವನ್ನು ನಿರಾಕರಿಸಿದ ಕಾರ್ತಿಕೇಯ ಚೌಹಾಣ್, ತಮಗೂ, ತಮ್ಮ ಕುಟುಂಬಕ್ಕೂ, ಆ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ. ರಾಹುಲ್ ಗಾಂಧಿ ಅವರ ಸುಳ್ಳು ಹೇಳಿಕೆಯಿಂದ ತಮ್ಮ ಸಾಮಾಜಿಕ ಗೌರವಕ್ಕೆ ಧಕ್ಕೆಯಾಗಿದೆ ಎಂದು ಭೋಪಾಲ್‌ನ ವಿಶೇಷ ಸಂಸದ ಮತ್ತು ಶಾಸಕರ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇದನ್ನೂ ಓದಿ: ‘ರಫೇಲ್ ಯುದ್ಧ ವಿಮಾನಗಳ ಬಗ್ಗೆ ಪಾಕಿಸ್ತಾನದ ಸುಳ್ಳು ಬಯಲು’; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಹೈಕೋರ್ಟ್‌ನಲ್ಲಿ ರಾಹುಲ್ ಗಾಂಧಿ ಸ್ಪಷ್ಟನೆ:

ವಿಶೇಷ ನ್ಯಾಯಾಲಯವು ತಮಗೆ ನೀಡಿದ್ದ ಸಮನ್ಸ್ ಅನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜಬಲ್ಪುರ ಹೈಕೋರ್ಟ್ ಪೀಠದ ಮುಂದೆ ರಾಹುಲ್ ಗಾಂಧಿ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿ ಸ್ಪಷ್ಟನೆ ನೀಡಿದ್ದರು. “ಭಾಷಣ ಮಾಡಿದ ಮರುದಿನವೇ ನನಗೆ ತಮ್ಮ ತಪ್ಪಿನ ಅರಿವಾಗಿತ್ತು. ಛತ್ತೀಸ್‌ಗಢದ ಅಂದಿನ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಮಗನ ಹೆಸರನ್ನು ಉಲ್ಲೇಖಿಸುವ ಬದಲು ತಪ್ಪಾಗಿ ಕಾರ್ತಿಕೇಯ ಚೌಹಾಣ್ ಅವರ ಹೆಸರನ್ನು ಹೇಳಿದ್ದೆ. ಈ ಕುರಿತು ಮರುದಿನವೇ (ಅಕ್ಟೋಬರ್ 30, 2018ರಂದು) ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿದ್ದೆ. ಆ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದಿದ್ದರು. ಈ ಕ್ಷಮೆಗೆ ಕಾರ್ತಿಕ್ ಒಪ್ಪಿದ್ದರಿಂದ ಈ ಪ್ರಕರಣ ಮುಕ್ತಾಯವಾಗಿದೆ.

ಹಿಂದೆಯೂ ಇದೇ ರೀತಿ ಎಡವಟ್ಟು ಮಾಡಿದ್ದರು ರಾಹುಲ್ ಗಾಂಧಿ. ಆ ಘಟನೆಗಳ ಮಾಹಿತಿ ಇಲ್ಲಿದೆ.

‘ಚೌಕಿದಾರ್ ಚೋರ್ ಹೈ’ ಎಂದಿದ್ದ ರಾಹುಲ್:

ರಾಹುಲ್ ಗಾಂಧಿ ಅವರ ರಾಜಕೀಯ ಜೀವನದಲ್ಲೇ ಅತ್ಯಂತ ದೊಡ್ಡ ಕಾನೂನು ಹಿನ್ನಡೆ ಮತ್ತು ಕ್ಷಮೆಯಾಚನೆ ನಡೆದಿದ್ದು ರಫೇಲ್ ಯುದ್ಧ ವಿಮಾನ ಹಗರಣದ ಆರೋಪದ ಸಂದರ್ಭದಲ್ಲಿ. 2019ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ “ಚೌಕಿದಾರ್ ಚೋರ್ ಹೈ” (ಕಾವಲುಗಾರನೇ ಕಳ್ಳ) ಎಂಬ ಘೋಷಣೆಯನ್ನು ಬಳಸಿದ್ದರು. ಈ ನಡುವೆ ರಫೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ತಪ್ಪಾಗಿ ಉಲ್ಲೇಖಿಸಿದ ರಾಹುಲ್ ಗಾಂಧಿ, “ಈಗ ಸುಪ್ರೀಂ ಕೋರ್ಟ್ ಕೂಡ ಚೌಕಿದಾರ್ ಚೋರ್ ಹೈ ಎಂದು ಒಪ್ಪಿಕೊಂಡಿದೆ” ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಆತ್ಮನಿರ್ಭರ ಭಾರತವನ್ನು ಲೇವಡಿ ಮಾಡಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಸುಪ್ರೀಂ ಕೋರ್ಟ್ ಹೆಸರನ್ನು ರಾಜಕೀಯಕ್ಕೆ ಎಳೆದಿದ್ದಕ್ಕಾಗಿ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಅವರು ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದರು. ಸುಪ್ರೀಂ ಕೋರ್ಟ್ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದಾಗ, ರಾಹುಲ್ ಗಾಂಧಿ ಮೊದಲು ವಿಷಾದ ವ್ಯಕ್ತಪಡಿಸಿದರು. ಆದರೆ, ಕೋರ್ಟ್ ಅದನ್ನು ಒಪ್ಪದಿದ್ದಾಗ, ಅಂತಿಮವಾಗಿ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮಾಪಣಾ ಪತ್ರವನ್ನು ಸಲ್ಲಿಸಿದರು. ಇನ್ನೆಂದೂ ನ್ಯಾಯಾಲಯದ ಆದೇಶಗಳನ್ನು ರಾಜಕೀಯಕ್ಕೆ ಬಳಸುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ ನಂತರ ಕೋರ್ಟ್ ಅವರಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಕೈಬಿಟ್ಟಿತು.

ಆರ್​ಎಸ್​ಎಸ್​ ಮತ್ತು ಗಾಂಧೀಜಿ ಹತ್ಯೆ ವಿವಾದ:

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಘಟನೆಯ ವಿರುದ್ಧ ನೀಡಿದ ಹೇಳಿಕೆಗಾಗಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು. 2014ರ ಚುನಾವಣಾ ರ‍್ಯಾಲಿಯೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ಆರ್​ಎಸ್​ಎಸ್​ ಕಾರ್ಯಕರ್ತರೇ ಮಹಾತ್ಮ ಗಾಂಧೀಜಿಯವರನ್ನು ಕೊಂದಿದ್ದು” ಎಂದು ಆರೋಪಿಸಿದ್ದರು. ಇದರ ವಿರುದ್ಧ ಆರ್​ಎಸ್​ಎಸ್​ ಕಾರ್ಯಕರ್ತ ರಾಜೇಶ್ ಕುಂಟೆ ಅವರು ಮಹಾರಾಷ್ಟ್ರದ ಭಿವಾಂಡಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಈ ಪ್ರಕರಣ ಸುಪ್ರೀಂ ಕೋರ್ಟ್ ತಲುಪಿದಾಗ, ಇಡೀ ಸಂಘಟನೆಯನ್ನು ಹತ್ಯೆಯೊಂದಿಗೆ ಜೋಡಿಸುವುದು ತಪ್ಪು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವಾಗ ರಾಹುಲ್ ಗಾಂಧಿ “ನಾನು ಆರ್​ಎಸ್​ಎಸ್​ ಸಂಘಟನೆಯನ್ನು ಒಟ್ಟಾರೆಯಾಗಿ ದೂಷಿಸಿಲ್ಲ, ಕೇವಲ ಅದಕ್ಕೆ ಸಂಬಂಧಿಸಿದ ಕೆಲವು ವ್ಯಕ್ತಿಗಳನ್ನು ಮಾತ್ರ ಉಲ್ಲೇಖಿಸಿದ್ದೇನೆ” ಎಂದು ಯು-ಟರ್ನ್ ಹೊಡೆದರು. ಇಡೀ ಸಂಘಟನೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ಆರೋಪಕ್ಕೆ ನ್ಯಾಯಾಲಯದ ಸಲಹೆಯಂತೆ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಬೇಕಾಯಿತು.

‘ಮೋದಿ ಉಪನಾಮ’ದ ಮಾನನಷ್ಟ ಪ್ರಕರಣ:

ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ನೇರವಾಗಿ ಕ್ಷಮೆಯಾಚಿಸದಿದ್ದರೂ, ಕ್ಷಮೆಯಾಚಿಸಲು ನಿರಾಕರಿಸಿದ್ದರಿಂದಲೇ ಅವರ ಸಂಸತ್ ಸದಸ್ಯತ್ವ ರದ್ದಾಗುವ ಸ್ಥಿತಿ ಬಂದಿತ್ತು. 2019ರ ಕರ್ನಾಟಕದ ಕೋಲಾರದ ಚುನಾವಣಾ ಭಾಷಣದಲ್ಲಿ “ಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮವೇ ಏಕಿರುತ್ತದೆ?” ಎಂದು ಪ್ರಶ್ನಿಸಿದ್ದರು. ಈ ವೇಳೆ ಲಲಿತ್ ಮೋದಿ, ನೀರವ್ ಮೋದಿ ಹೆಸರನ್ನು ಉಲ್ಲೇಖಿಸಿದ್ದರು. ಈ ಪ್ರಕರಣದಲ್ಲಿ 2023ರಲ್ಲಿ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯ ಪರಿಣಾಮವಾಗಿ, ನಿಯಮಾವಳಿಗಳ ಪ್ರಕಾರ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು 2023ರ ಮಾರ್ಚ್ 24ರಂದು ರದ್ದುಗೊಳಿಸಲಾಯಿತು 2023ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಈ ಶಿಕ್ಷೆಗೆ ತಡೆಯಾಜ್ಞೆ ನೀಡಿ, ಅವರ ಸಂಸತ್ ಸದಸ್ಯತ್ವವನ್ನು ಮರುಸ್ಥಾಪಿಸಿತು. ಈ ರೀತಿ ಹಲವು ಪ್ರಕರಣಗಳಲ್ಲಿ ರಾಹುಲ್ ಗಾಂಧಿ ತಾವು ನೀಡಿದ ಹೇಳಿಕೆಗೆ ವಿಷಾದ ಹಾಗೂ ಕ್ಷಮೆ ವ್ಯಕ್ತಪಡಿಸಿದ ಉದಾಹರಣೆಗಳಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕನ್ ಡಾಲರ್ ಎದುರು ರುಪಾಯಿ 16 ಪೈಸೆ ಚೇತರಿಕೆ; 94.39 ಮಟ್ಟದಲ್ಲಿ ಕೊನೆಗೊಂಡ ಭಾರತೀಯ ಕರೆನ್ಸಿ ಮೌಲ್ಯ – Kannada News | Indian Rupee recovers 16 paise against USD to end with 94.39 level on June 25th

ನವದೆಹಲಿ, ಜೂನ್ 25: ದೇಶೀಯ ಷೇರು ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ವಾತಾವರಣ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಸೂಚ್ಯಂಕ (Dollar Index) ತುಸು ದುರ್ಬಲಗೊಂಡ ಹಿನ್ನೆಲೆಯಲ್ಲಿ ಭಾರತ ಕರೆನ್ಸಿ ಪುಟಿದೆದ್ದಿದೆ. ಗುರುವಾರದ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ (US dollar) ಎದುರು 16 ಪೈಸೆಗಳಷ್ಟು ಚೇತರಿಕೆ ಕಂಡು 94.39 ಮಟ್ಟದಲ್ಲಿ ಮುಕ್ತಾಯಗೊಂಡಿದೆ.

ಗುರುವಾರ (ಜೂನ್ 25) ಬೆಳಗ್ಗೆ ವಿದೇಶಿ ವಿನಿಮಯ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ರೂಪಾಯಿ ಮೌಲ್ಯವು ಡಾಲರ್ ಎದುರು 94.48 ಮಟ್ಟದಲ್ಲಿ ಬಲವಾಗಿ ವಹಿವಾಟು ಆರಂಭಿಸಿತು. ದಿನದ ವಹಿವಾಟಿನ ಅವಧಿಯಲ್ಲಿ ಇದು ಗರಿಷ್ಠ 94.35 ಮತ್ತು ಕನಿಷ್ಠ 94.52 ರ ಮಟ್ಟವನ್ನು ತಲುಪಿತ್ತು. ಅಂತಿಮವಾಗಿ, ಹಿಂದಿನ ದಿನದ ಮುಕ್ತಾಯದ ಮೌಲ್ಯವಾದ 94.55 ಕ್ಕೆ ಹೋಲಿಸಿದರೆ 16 ಪೈಸೆಗಳಷ್ಟು ಲಾಭ ದಾಖಲಿಸಿ 94.39 ರ ಮಟ್ಟದಲ್ಲಿ ಸ್ಥಿರವಾಯಿತು.

ಇದನ್ನೂ ಓದಿ: ಬಿಟ್​ಕಾಯಿನ್ ಭಾರಿ ಕುಸಿತ; ಎಂಟು ತಿಂಗಳಲ್ಲಿ ಅರ್ಧದಷ್ಟು ಮೌಲ್ಯ ನಷ್ಟ; ಕ್ರಿಪ್ಟೋ ಬಜಾರಿನಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣಗಳೇನು?

ರೂಪಾಯಿ ಚೇತರಿಕೆಗೆ ಪ್ರಮುಖ ಕಾರಣಗಳು

  • ಷೇರು ಮಾರುಕಟ್ಟೆಯ ಗೂಳಿ ಓಟ: ದೇಶಿ ಷೇರು ಮಾರುಕಟ್ಟೆಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಉತ್ತಮ ಲಾಭದೊಂದಿಗೆ ವಹಿವಾಟು ನಡೆಸುತ್ತಿರುವುದು ರೂಪಾಯಿ ಮೌಲ್ಯಕ್ಕೆ ಹೆಚ್ಚಿನ ಬೆಂಬಲ ನೀಡಿದೆ.
  • ವಿದೇಶಿ ಬಂಡವಾಳದ ಒಳಹರಿವು: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮುಂದುವರಿಸಿರುವುದು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆಯನ್ನು ಹೆಚ್ಚಿಸಿದೆ.
  • ಕಚ್ಚಾ ತೈಲ ಬೆಲೆ ಸ್ಥಿರತೆ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆಗಳು ನಿಯಂತ್ರಣದಲ್ಲಿ ಇರುವುದು ಭಾರತದಂತಹ ಆಮದು ಅವಲಂಬಿತ ದೇಶದ ಕರೆನ್ಸಿಗೆ ಸಕಾರಾತ್ಮಕ ಅಂಶವಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ

ಡಾಲರ್ ಇಂಡೆಕ್ಸ್ ಕಥೆ?

ವಿಶ್ವದ ಪ್ರಮುಖ ಆರು ಕರೆನ್ಸಿಗಳ ಎದುರು ಅಮೆರಿಕನ್ ಡಾಲರ್‌ನ ಬಲವನ್ನು ಅಳೆಯುವ ‘ಡಾಲರ್ ಸೂಚ್ಯಂಕ’ವು ಶೇಕಡಾ 0.15 ರಷ್ಟು ಕುಸಿತ ಕಂಡು 104.20 ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಡಾಲರ್ ಜಾಗತಿಕವಾಗಿ ಹಿನ್ನಡೆ ಹೊಂದಿರುವುದು ರೂಪಾಯಿ ಸೇರಿದಂತೆ ಏಷ್ಯಾದ ಇತರ ಕರೆನ್ಸಿಗಳು ಚೇತರಿಸಿಕೊಳ್ಳಲು ಸಹಕಾರಿಯಾಯಿತು.

ಜಾಗತಿಕ ಆರ್ಥಿಕ ವಿದ್ಯಮಾನಗಳು ಮತ್ತು ಯುಎಸ್ ಫೆಡರಲ್ ರಿಸರ್ವ್‌ನ ಮುಂಬರುವ ನಿರ್ಧಾರಗಳ ಮೇಲೆ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ರೂಪಾಯಿ ಮೌಲ್ಯವು ಪ್ರತಿ ಡಾಲರ್ ಎದುರು 94.20 ರಿಂದ 94.80 ರ ವ್ಯಾಪ್ತಿಯಲ್ಲಿ ವಹಿವಾಟು ಮುಂದುವರಿಸುವ ಸಾಧ್ಯತೆಯಿದೆ ಎಂದು ಫಾರೆಕ್ಸ್ ತಜ್ಞರು ಅಂದಾಜಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬೆನ್ನಲ್ಲೇ ಪಿಂಚಣಿ ಫಲಾನುಭವಿಗಳ ಸರ್ಜರಿಗೆ ಮುಂದಾದ ರಾಜ್ಯ ಸರ್ಕಾರ – Kannada News | Karnataka Launches Verification Drive; Over 16 Lakh Pensions Temporarily Stopped

ಬೆಂಗಳೂರು, ಜೂನ್​​ 25: ಅನರ್ಹರೂ ಪ್ರಯೋಜನ ಪಡೆಯುತ್ತಿರುವ ಹಿನ್ನೆಲೆ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಪರಿಷ್ಕರಣೆಗೆ ಮುಂದಾಗಿದ್ದ ರಾಜ್ಯ ಸರ್ಕಾರವೀಗ ಪಿಂಚಣಿ ಫಲಾನುಭವಿಗಳ ಪರಿಶೀಲನೆಗೂ ಮುಂದಾಗಿದೆ. ಸಂಯೋಜನೆ ಆ್ಯಪ್ ಮೂಲಕ ಸಂದೇಹಾಸ್ಪದ ಖಾತೆಗಳ ಪರಿಶೀಲನೆ ನಡೆಸುವ ಮೂಲಕ ಪಾರದರ್ಶಕತೆ, ಅರ್ಹತೆ ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆ. ಜೊತೆಗೆ ಅನರ್ಹರ ಪಿಂಚಣಿ ಸ್ಥಗಿತಕ್ಕೆ ಕ್ರಮಕ್ಕೆ ಸೂಚಿಸಿದೆ.

23,13,664 ಫಲಾನುಭವಿಗಳ ವಿವರದ ಬಗ್ಗೆ ಸಂಶಯ

ಎಲ್ಲ ಬಗೆಯ ಪಿಂಚಣಿಗಳು ಸೇರಿ ರಾಜ್ಯದಲ್ಲಿ ಒಟ್ಟು 83,11,493 ಫಲಾನುಭವಿಗಳು ಇದ್ದಾರೆ. ಪ್ರಾಥಮಿಕ ತಪಾಸಣೆಯಲ್ಲಿ ಈ ಪೈಕಿ 23,13,664 ಫಲಾನುಭವಿಗಳ ವಿವರದ ಬಗ್ಗೆ ಸಂಶಯ ಮೂಡಿದೆ ಎ್ನಲಾಗಿದೆ. ಹೀಗಾಗಿ ಸಂದೇಹಾಸ್ಪದ ಖಾತೆಗಳನ್ನು ಸಂಯೋಜನೆ ಌಪ್ ಮೂಲಕ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಮಾತ್ರ ಪಿಂಚಣಿ ಪಾವತಿಗೆ ಸರ್ಕಾರ ಮುಂದಾಗಿದೆ. 23,13,664 ಸಂಶಯಾಸ್ಪದ ಫಲಾನುಭವಿಗಳ ಪೈಕಿ 3,35,610 ಫಲಾನುಭವಿಗಳು ಪಿಂಚಣಿಗೆ ಅರ್ಹರೆಂದು ಪರಿಶೀಲನೆ ಬಳಿಕ ಗ್ರಾಮ ಆಡಳಿತಾಧಿಕಾರಿಗಳು ವರದಿ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಡಿಕೆಶಿ ಕನಸಿನ ಭೂ ಗ್ಯಾರಂಟಿಗೆ ಭರ್ಜರಿ ರೆಸ್ಪಾನ್ಸ್; 6ನೇ ಸುತ್ತಿನ ನನ್ನ ಖಾತೆ ನನ್ನ ಹಕ್ಕು ಅಭಿಯಾನ ಯಶಸ್ವಿ

ಮೇ ತಿಂಗಳಲ್ಲಿ ಒಟ್ಟು 63,04,554 ಫಲಾನುಭವಿಗಳಿಗೆ ಪಿಂಚಣಿ ಪಾವತಿ ಮಾಡಲಾಗಿದ್ದು, ಅನರ್ಹರು ಮತ್ತು ತಪ್ಪು ದಾಖಲೆ ನೀಡಿದವರಿಗೆ ಪಿಂಚಣಿ ರದ್ದಾಗಿದೆ. ಪಿಂಚಣಿ ಮಂಜೂರಾತಿ ಸಮಯದಲ್ಲಿ ವಯಸ್ಸಿನ ದೃಢೀಕರಣದ ಬಗ್ಗೆ ತಪ್ಪು ಮಾಹಿತಿ, ನಕಲಿ ದಾಖಲೆ ಸಲ್ಲಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಆಡಳಿತ ಅಧಿಕಾರಿ ಪರಿಶೀಲನೆ ವೇಳೆ ಯಾವುದೇ ದಾಖಲೆ ಸಲ್ಲಿಸದ, ವಿಳಾಸದಲ್ಲಿ ವಾಸವಿಲ್ಲದ, ಆದಾಯ ಪ್ರಮಾಣಪತ್ರ ಸಲ್ಲಿಸದ 16,42,303 ಫಲಾನುಭವಿಗಳ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಈ ಸಂಬಂಧ ಸೂಕ್ತ ತಿಳಿವಳಿಕೆ ಪತ್ರವನ್ನು ನೀಡಲು ಕಂದಾಯ ಇಲಾಖೆಗೆ ಆದೇಶಿಸಲಾಗಿದೆ. ಸಂಬಂಧಪಟ್ಟ ತಹಶೀಲ್ದಾರ್ ಮೂಲಕ ಫಲಾನುಭವಿಗಳಿಗೆ ನೋಟಿಸ್ ಸಿಗಲಿದ್ದು, ಅಂತವರು 30 ದಿನದೊಳಗೆ ಅರ್ಹತಾ ದಾಖಲೆ ಸಲ್ಲಿಸಬೇಕು ಎಂದು ಕಂದಾಯ ಇಲಾಖೆ ಜಂಟಿ ನಿರ್ದೇಶಕರು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:34 pm, Thu, 25 June 26

Source link

ಮನೆಯಲ್ಲಿಯೇ ತಯಾರಿಸಬಹುದು ಶುದ್ಧ ಕೊಬ್ಬರಿ ಎಣ್ಣೆ; ಅದು ಹೇಗೆ ಅಂತೀರಾ? – Kannada News | You can make pure coconut oil at home; here’s how

ದಕ್ಷಿಣ ಭಾರತದ ಹೆಚ್ಚಿನ ಕಡೆ ಅಡುಗೆಗಳಿಗೆ ತೆಂಗಿನ ಎಣ್ಣೆಯನ್ನೇ (coconut oil) ಬಳಸಲಾಗುತ್ತದೆ. ಈ ಎಣ್ಣೆ ಅಡುಗೆಗೆ ಉತ್ತಮ ಘಮ ನೀಡುವುದು ಮಾತ್ರವಲ್ಲದೆ  ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ತೆಂಗಿನ ಎಣ್ಣೆ ನೈಸರ್ಗಿಕವಾಗಿರುವುದಲ್ಲದೆ, ಪೋಷಕಾಂಶಗಳಿಂದ ಕೂಡ ಸಮೃದ್ಧವಾಗಿದೆ. ಅಲ್ಲದೆ ಇದು ಲಾರಿಕ್ ಆಮ್ಲದ ಅತ್ಯಂತ ಶ್ರೀಮಂತ ನೈಸರ್ಗಿಕ ಮೂಲವಾಗಿದ್ದು, ಇದು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಇತ್ತೀಚಿನ ದಿನಗಳಲ್ಲಂತೂ ಮಾರುಕಟ್ಟೆಯಲ್ಲಿ ತೆಂಗಿನ ಎಣ್ಣೆ ಸುಲಭವಾಗಿ ಲಭ್ಯವಿದ್ದರೂ, ಈ ಎಣ್ಣೆಗಳಲ್ಲಿ ಕಲಬೆರಕೆ ಅಂಶಗಳು ಇರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ನೀವು ತೆಂಗಿನ ಎಣ್ಣೆಯ ನಿಜವಾದ ಪ್ರಯೋಜನಗಳನ್ನು ಪಡೆಯಲು ಬಯಸಿದರೆ, ನೀವು ಮನೆಯಲ್ಲಿಯೇ ಶುದ್ಧ ಕೊಬ್ಬರಿ ಎಣ್ಣೆಯನ್ನು ತಯಾರಿಸಬಹುದು. ಮನೆಯಲ್ಲಿಯೇ ಪರಿಶುದ್ಧ ತೆಂಗಿನ ಎಣ್ಣೆಯನ್ನು ತಯಾರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಮನೆಯಲ್ಲಿಯೇ ಶುದ್ಧ ತೆಂಗಿನ ಎಣ್ಣೆಯನ್ನು ತಯಾರಿಸುವುದು ಹೇಗೆ?

ತೆಂಗಿನಕಾಯಿಗಳು ಸುಲಭವಾಗಿ ಲಭ್ಯವಿದ್ದು, ಸ್ವಲ್ಪ ಬಿಡುವು ಮಾಡಿಕೊಂಡು ಇದರಿಂದ ನೀವು ಶುದ್ಧ ಕೊಬ್ಬರಿ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಬಹುದು. ತೆಂಗಿನ ಎಣ್ಣೆ ತಯಾರಿಸುವ ಈ ಸುಲಭ ವಿಧಾನವನ್ನು ಭಾಗ್ಯಶ್ರೀ ಪಟವರ್ಧನ್‌ (Bhagyashri Patwardhan) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ತೆಂಗಿನ ಎಣ್ಣೆ ತಯಾರಿಸಲು ಸುಲಭವಾದ ತಯಾರಿ ಹೀಗಿರಲಿ:

ಒಣ ಕೊಬ್ಬರಿ ಅಥವಾ ತೆಂಗಿನಕಾಯಿ ಈ ಎರಡರಿಂದಲೂ ತೆಂಗಿನೆಣ್ಣೆಯನ್ನು ತಯಾರಿಸಬಹುದು. ಅದಕ್ಕಾಗಿ 3 ರಿಂದ 5 ತೆಂಗಿನಕಾಯಿಯನ್ನು ತೆಗೆದುಕೊಂಡು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಇದರಿಂದ ಅವುಗಳನ್ನು ಪುಡಿ ಮಾಡಲು ಸುಲಭವಾಗುತ್ತದೆ. ಈಗ, ಈ ತುಂಡುಗಳನ್ನು ಸುಮಾರು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಇದು ತೆಂಗಿನಕಾಯಿಯನ್ನು ಸ್ವಲ್ಪ ಮೃದುಗೊಳಿಸುತ್ತದೆ ಮತ್ತು ಮಿಕ್ಸರ್‌ನಲ್ಲಿ ನುಣ್ಣಗೆ ಪುಡಿ ಮಾಡಲು ಅನುವು ಮಾಡಿಕೊಡುತ್ತದೆ.

ವಿಡಿಯೋ ಇಲ್ಲಿದೆ ನೋಡಿ:‌

ಮಿಕ್ಸಿಯಲ್ಲಿ ತೆಂಗಿನಕಾಯಿ ರುಬ್ಬುವ ಸರಿಯಾದ ವಿಧಾನ:

ತುಂಡರಿಸಿದ  ತೆಂಗಿನಕಾಯಿಯನ್ನು ತೆಗೆದುಕೊಂಡು ಸರಿಸುಮಾರು ಅದೇ ಪ್ರಮಾಣದ ಬೆಚ್ಚಗಿನ ನೀರನ್ನು ಸೇರಿಸಿ. ಈ ಮಿಶ್ರಣವನ್ನು ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ಮತ್ತು ತುಂಬಾ ತೆಳುವಾದ ಪೇಸ್ಟ್/ಪ್ಯೂರಿ ತಯಾರಿಸಿ. ಈಗ ಒಂದು ಸ್ವಚ್ಛವಾದ ಹತ್ತಿ ಅಥವಾ ಮಸ್ಲಿನ್ ಬಟ್ಟೆಯನ್ನು ತೆಗೆದುಕೊಳ್ಳಿ. ಅದರಲ್ಲಿ ತುರಿದ ತೆಂಗಿನಕಾಯಿಯನ್ನು ಹಾಕಿ ಬಿಗಿಯಾಗಿ ಹಿಂಡಿ. ಇದರಿಂದ ದಪ್ಪ ತೆಂಗಿನ ಹಾಲು ಹೊರಬರುತ್ತದೆ. ತೆಂಗಿನಕಾಯಿ ಸಂಪೂರ್ಣವಾಗಿ ಮುಗಿಯುವವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ರೆಡಿಯಾದ ತೆಂಗಿನ ಹಾಲನ್ನು ಮುಚ್ಚಿ ಸ್ವಲ್ಪ ಹೊತ್ತು ಕೋಣೆಯ ಉಷ್ಣಾಂಶದಲ್ಲಿಟ್ಟು ನಂತರ 12-24 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಟ್ಟುಬಿಡಿ. ಈ ರೀತಿ ಮಾಡುವುದರಿಂದ ಕೆನೆ ಪದರ ರೂಪುಗೊಳ್ಳುತ್ತದೆ.

ಇದನ್ನೂ ಓದಿ: ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ? ಅದರ ಪ್ರಯೋಜನಗಳೇನು?

ತೆಂಗಿನ ಹಾಲಿನಿಂದ ಎಣ್ಣೆ ತೆಗೆಯುವ ಪ್ರಕ್ರಿಯೆ: 

ತೆಂಗಿನ ಹಾಲಿನಿಂದ ರೂಪುಗೊಂಡಂತಹ ತೆಂಗಿನ ಕೆನೆಯನ್ನು ಮೆಲ್ಲಗೆ ತೆಗೆದು ಇನ್ನೊಂದು ಪ್ಯಾನ್‌ಗೆ ಹಾಕಿ, ಅದನ್ನು ಮಧ್ಯಮ ಉರಿಯಲ್ಲಿ ನಿಧಾನವಾಗಿ ಬಿಸಿ ಮಾಡಿ, ನಿರಂತರವಾಗಿ ಬೆರೆಸಿ ಮತ್ತು ಈ ಸಮಯದಲ್ಲಿ ಎಣ್ಣೆ ಕೆನೆಯಿಂದ ಬೇರ್ಪಡಲು ಪ್ರಾರಂಭಿಸುತ್ತದೆ. ಎಣ್ಣೆ ಸಂಪೂರ್ಣವಾಗಿ ಬೇರ್ಪಟ್ಟಾಗ, ಸ್ಟೌವ್‌ ಆಫ್‌ ಮಾಡಿ.

ತಯಾರಿಸಿದ ಎಣ್ಣೆ ತಣ್ಣಗಾದ ಬಳಿಕ ಅದನ್ನು ಫಿಲ್ಟರ್‌ ಮಾಡಿ ಒಂದು ಗಾಜಿನ ಜಾರ್‌ನಲ್ಲಿ ಸಂಗ್ರಹಿಸಿ. ಈ ಶುದ್ಧ ತೆಂಗಿನ ಎಣ್ಣೆಯನ್ನು ನೀವು6-12 ತಿಂಗಳುಗಳವರೆಗೆ ಬಳಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:25 pm, Thu, 25 June 26

Source link

‘ಮುನ್ನಾ ಬಾಯ್’ ಅಭಿಮಾನಿಗಳಿಗೆ ಸಿಹಿಸುದ್ದಿ, ರೆಡಿ ಇವೆ ಮೂರು ಚಿತ್ರಕತೆ – Kannada News | Rajkumar Hirani says Munna Bhai 3 is not shelved, he has three scripts

‘ಮುನ್ನಾಭಾಯಿ’ ಮತ್ತು ‘ಲಗೆರಹೊ ಮುನ್ನಾಭಾಯಿ’ ಸಿನಿಮಾಗಳು ಬಾಲಿವುಡ್​​ನ (Bollywood) ಕಲ್ಟ್ ಕ್ಲಾಸಿಕ್ ಹಾಸ್ಯ ಪ್ರಧಾನ ಸಿನಿಮಾಗಳು. ಹಾಸ್ಯದ ಜೊತೆಗೆ ಸಂದೇಶ, ಡ್ರಾಮಾ, ಸೆಂಟಿಮೆಂಟ್ ಸರಿಯಾದ ಪ್ರಮಾಣದ ಬೆರೆತ ಸಿನಿಮಾಗಳವು. ಈ ಸಿನಿಮಾ ಸರಣಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಸತತ ಫ್ಲಾಪ್, ಜೈಲು ವಾಸ ಇನ್ನೂ ಏನೇನೋ ಎದುರಿಸಿದ್ದ ಸಂಜಯ್ ದತ್ ಅವರಿಗೆ ಮರು ಜನ್ಮ ನೀಡಿದ ಸಿನಿಮಾಗಳಿವು. ‘ಮುನ್ನಾಭಾಯಿ’ ಸರಣಿಯ ಎರಡನೇ ಸಿನಿಮಾ ‘ಲಗೆ ರಹೊ ಮುನ್ನಾಭಾಯಿ’ ಬಿಡುಗಡೆ ಆಗಿ 20 ವರ್ಷಗಳಾಗಿವೆ. 2006 ರಲ್ಲಿ ಆ ಸಿನಿಮಾ ರಿಲೀಸ್ ಆಗಿತ್ತು. ಆಗಾಗ್ಗೆ ಈ ಸಿನಿಮಾದ ಮೂರನೇ ಸರಣಿ ಬಗ್ಗೆ ಮಾತುಗಳು ಕೇಳಿ ಬರುತ್ತಿರುತ್ತವೆ. ‘ಮುನ್ನಾಭಾಯಿ’ ಸರಣಿ ನಿಂತು ಹೋಗಿದೆ ಎಂಬ ಸುದ್ದಿಯೂ ಸಹ ಹರಿದಾಡಿತ್ತು. ಆದರೆ ಸಿನಿಮಾದ ನಿರ್ದೇಶಕ ರಾಜ್​​ಕುಮಾರ್ ಹಿರಾನಿ ಖುದ್ದು ಈ ಬಗ್ಗೆ ಖಾತ್ರಿ ನೀಡಿದ್ದು, ಸಿನಿಮಾ ಸರಣಿ ನಿಂತಿಲ್ಲ ಎಂದಿದ್ದಾರೆ.

ಕಳೆದ ಹಲವು ವರ್ಷಗಳಿಂದ ಪ್ರೇಕ್ಷಕರು ಒಂದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ, ‘ಮುನ್ನಾ ಬಾಯ್ 3 ಯಾವಾಗ ಬರುತ್ತದೆ?’ ಮೂರನೇ ಭಾಗದ ಬಗ್ಗೆ ಹಲವು ವದಂತಿಗಳು ಮತ್ತು ಊಹಾಪೋಹಗಳ ನಡುವೆಯೂ, ಬಹುನಿರೀಕ್ಷಿತ ಈ ಚಿತ್ರ ಇದುವರೆಗೆ ಕೈಗೂಡಿರಲಿಲ್ಲ. ಇದೀಗ, ಚಲನಚಿತ್ರ ನಿರ್ಮಾಪಕ ರಾಜಕುಮಾರ್ ಹಿರಾನಿ ಮತ್ತು ನಟ ಅರ್ಷದ್ ವಾರ್ಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ನಿರ್ದೇಶಕ ರಾಜ್​ಕುಮಾರ್ ಹಿರಾನಿ, ‘ಮುನ್ನಾಭಾಯಿ 3’ ಸಿನಿಮಾಕ್ಕೆ ಹಲವು ಆವೃತ್ತಿಯ ಕತೆಗಳು ಈಗಾಗಲೇ ತಯಾರಾಗಿವೆ. ಚಿತ್ರದ ಮೊದಲ ಎರಡು ಭಾಗಗಳಷ್ಟೇ ಅದ್ಭುತವಾದ ಚಿತ್ರವನ್ನು ರೂಪಿಸಲು, ಚಿತ್ರಕತೆಯನ್ನು ಹೆಚ್ಚು ಸುಂದರವಾಗಿ ರೂಪಿಸುವುದೇ ಈಗಿರುವ ಸವಾಲು. ನಿಮಗೆ ಮುನ್ನಾ ಬಾಯ್ ಚಿತ್ರ ಕೇವಲ ಇಂಟರ್ವಲ್ ವರೆಗೆ ಮಾತ್ರ ಬೇಕೆಂದಿದ್ದರೆ, ನಾನು ಈಗಲೇ ಐದು ಚಿತ್ರಗಳನ್ನು ಮಾಡಬಲ್ಲೆ. ದ್ವಿತೀಯಾರ್ಧದ ಕತೆ ನನ್ನ ಬಳಿ ಇಲ್ಲ’ ಎಂದಿದ್ದಾರೆ.

ಇದನ್ನೂ ಓದಿ:‘ಯಶ್ ಸಿನಿಮಾ ಎಂದರೆ ಏನೋ ಒಂದು ಅದ್ಭುತ ವಿಷಯ ಇರುತ್ತೆ’; ‘ಟಾಕ್ಸಿಕ್’ ಬಗ್ಗೆ ಪ್ರಿಯಾ ಆನಂದ್ ಮಾತು

‘ನಾನು ನಿಜಕ್ಕೂ ಒಂದು ಚಿತ್ರವನ್ನು ಮಾಡಲು ಬಯಸುತ್ತೇನೆ. ಬೇರೆ ಯಾರಾದರೂ ನನ್ನ ಜಾಗದಲ್ಲಿದ್ದರೆ, ‘ಯಾವುದಾದರೂ ಸ್ಕ್ರಿಪ್ಟ್ ಬರೆಯಿರಿ, ಅದು ಭರ್ಜರಿ ಓಪನಿಂಗ್ ಪಡೆಯುತ್ತದೆ ಮತ್ತು ಹಣ ಗಳಿಸುತ್ತದೆ’ ಎಂದು ಹೇಳಿರಬಹುದು. ಆದರೆ, ನಾನು ಹಾಗೆ ಮಾಡಲು ಬಯಸುವುದಿಲ್ಲ. ನಾವು ಎರಡು ಅದ್ಭುತ ಚಿತ್ರಗಳನ್ನು ಮಾಡಿದ್ದೇವೆ; ನಾನು ಹಣದ ಬಗ್ಗೆ ಮಾತ್ರ ಯೋಚಿಸಿದ್ದರೆ, ನಾನು ಈಗಾಗಲೇ ನಾಲ್ಕೈದು ಆವೃತ್ತಿಗಳನ್ನು ಮಾಡುತ್ತಿದ್ದೆ. ಆ ಚಿತ್ರವು ನಾವು ಈಗಾಗಲೇ ಮಾಡಿರುವ ಚಿತ್ರಗಳ ಗುಣಮಟ್ಟಕ್ಕೆ ಸಮನಾಗಿರಬೇಕು. ಅಲ್ಲೇ ನಾನು ಸಿಲುಕಿಕೊಂಡಿದ್ದೇನೆ, ಅದಕ್ಕೆ ‘ಮುನ್ನಾಭಾಯಿ 3’ ತಡವಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ನಟ ಅರ್ಷದ್ ವಾರ್ಸಿ ಮಾತನಾಡಿ, ‘ವಾಸ್ತವವಾಗಿ, ಮೂರು ಅಪೂರ್ಣವಾದ ಸ್ಕ್ರಿಪ್ಟ್‌ಗಳು ಇವೆ. ಮತ್ತು ಅವುಗಳಲ್ಲಿ ಮೂರೂ ನಾನು ಕೇಳಿದ ಹೆಚ್ಚಿನ ಸ್ಕ್ರಿಪ್ಟ್‌ಗಳಿಗಿಂತ ಉತ್ತಮವಾಗಿವೆ. ಪ್ರತಿಯೊಂದೂ ತಕ್ಷಣವೇ ಗಮನ ಸೆಳೆಯುವ ಅಂಶಗಳನ್ನು ಹೊಂದಿವೆ. ಆಲೋಚನೆಗಳು ಮತ್ತು ದೃಶ್ಯಗಳು ಅದ್ಭುತವಾಗಿವೆ. ಆದರೆ ಅದಕ್ಕೆ ಆ ಒಂದು ಸಣ್ಣ ಕೊಂಡಿ ಇಲ್ಲ. ಅದೆಲ್ಲ ಬಿಡಿ-ಬಿಡಿ ಆಗಿವೆ. ಒಮ್ಮೆ ಅದು ಸರಿಯಾದ ಜಾಗದಲ್ಲಿ ಕೂತರೆ, ನಾವು ಸಿನಿಮಾ ಮಾಡಲು ರೆಡಿ ಆಗಬಹುದು’ ಎಂದು ಅವರು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪುರುಷರು ಮದುವೆಗೂ ಮುನ್ನ ಸಂಗಾತಿಯ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು – Kannada News | Men should know these things about their partner before agreeing to marriage

ಲೋನಾವಾಲದ ಲೋಹಗಢ ಕೋಟೆಯಲ್ಲಿ ಯುವ ಉದ್ಯಮಿ ಕೇತನ್‌ ಅಗರ್ವಾಲ್‌ ಅವರನ್ನು  ಭಾವಿ ಪತ್ನಿ ಸಿಯಾ ಗೋಯಲ್‌ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ ಆಘಾತಕಾರಿ ಸುದ್ದಿ ಇದೀಗ ಭಾರಿ ಸುದ್ದಿಯಲ್ಲಿದೆ. ಇದೇ ರೀತಿ ಒಂದು ವರ್ಷಕ್ಕೂ ಮುನ್ನ ಹನಿಮೂನ್‌ಗೆ ಹೋದ ಸಂದರ್ಭದಲ್ಲಿ ಮಹಿಳೆಯೊಬ್ಬಳು ಲವರ್‌ ಜೊತೆ ಸೇರಿ ಪತಿಯ ಕಥೆಯನ್ನೇ ಮುಗಿಸಿರುವ ಘಟನೆಯೂ ನಡೆದಿತ್ತು. ಇದಲ್ಲದೆ ಜೀವನ ಸಂಗಾತಿಯ (Life Partner) ಆಯ್ಕೆಯಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡು ಜೀವನದಲ್ಲಿ ನೆಮ್ಮದಿಯನ್ನು ಕಳೆದುಕೊಂಡವರು ಹಲವರಿದ್ದಾರೆ. ಇಂತಹ ಆಘಾತಕಾರಿ ಘಟನೆಗಳನ್ನು ನೋಡಿ ಮದುವೆಯಾಗೋದು ತುಂಬಾ ಡೇಂಜರ್‌ ಎಂದು ಅನೇಕ ಯುವಕರು ಮದುವೆಯಾಗೋದಕ್ಕೆ ಭಯಪಟ್ಟುಕೊಳ್ಳುತ್ತಿದ್ದಾರೆ. ಹಾಗಾಗಿ ಜೀವನ ಹಾಳಾಗಬಾರದು, ಮದುವೆಯ ಬಳಿಕ ನೆಮ್ಮದಿಯ ಜೀವನ ನಡೆಸಲು ಮದುವೆಯಾಗುವುದಕ್ಕೂ ಮುಂಚೆ ಜೀವನ ಸಂಗಾತಿಗೆ ಸಂಬಂಧಿಸಿದ ಈ ಕೆಲವೊಂದಿಷ್ಟು ವಿಚಾರಗಳನ್ನು ತಿಳಿಯಲೇಬೇಕು.

ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:

ವೈಯಕ್ತಿಕ ವಿಚಾರಗಳ ಬಗ್ಗೆ ತಿಳಿಯಿರಿ: ನೀವು ಯಾವ ಹುಡುಗಿಯೊಂದಿಗೆ ಮದುವೆಯಾಗಲು ನಿರ್ಧರಿಸುತ್ತೀರೋ ಆಕೆ ಯಾವ ರೀತಿಯ ಹುಡುಗಿ, ಆಕೆಯ ಕುಟುಂಬ ಹಿನ್ನೆಲೆಯೇನು ಇವೆಲ್ಲದನ್ನು ಕೇಳಿ ತಿಳಿದುಕೊಳ್ಳಬೇಕು. ಎಲ್ಲವೂ ಸರಿಯಿದೆ ಎಂದಾಗ ಮಾತ್ರ ಮದುವೆಗೆ ಒಪ್ಪಿಗೆ ನೀಡಿ.

ಗುಣ ಹೇಗಿದೆ ನೋಡಿ: ಕೇವಲ ಮುಖದ ಸೌಂದರ್ಯ ನೋಡಿ ಹುಡುಗಿಯೊಬ್ಬಳನ್ನು ಮದುವೆಯಾಗಬಾರದು, ಬದಲಾಗಿ ಆಕೆಯ ಗುಣಕ್ಕೆ ಮಹತ್ವ ನೀಡಬೇಕು.  ಆಕೆ ಗುಣ ಉತ್ತಮವಾಗಿದೆಯೇ, ಹಿರಿಯರಿಗೆ ಗೌರವ ನೀಡುತ್ತಾಳೆಯೇ, ಕುಟುಂಬಸ್ಥರನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆಯೇ ಈ ರೀತಿಯ ಸಣ್ಣಪುಟ್ಟ ವಿಚಾರದ ಬಗ್ಗೆಯೂ ತಿಳಿದುಕೊಳ್ಳಬೇಕು. ಗುಣವಂತ ಹೆಣ್ಣು ಜೀವನ ಸಂಗಾತಿಯಾಗಿ ಬಂದರೆ ಖಂಡಿತವಾಗಿಯೂ ಜೀವನ ಸುಂದರವಾಗಿರುತ್ತದೆ.

ನಡತೆಯ ಬಗ್ಗೆಯೂ ಪರೀಕ್ಷಿಸಬೇಕು: ನೀವು ಮದುವೆಯಾಗಲು ಬಯಸುವ ಹುಡುಗಿ ಇತರರನ್ನು ಗೌರವಿಸುತ್ತಾಳೆಯೇ, ಆಕೆ ಇತರರೊಂದಿಗೆ ಹೇಗೆ ಸಂವಹನ ನಡೆಸುತ್ತಾಳೆ ಮತ್ತು ಆಕೆಗೆ ಯಾವ ರೀತಿಯ ಸ್ನೇಹಿತರಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ಅಂಶಗಳು ಹುಡುಗಿ ಹೇಗಿದ್ದಾಳೆ ಎಂಬುದನ್ನು ತಿಳಿದುಕೊಳ್ಳಲು ಸಹಾಯಕ.  ಅಲ್ಲದೆ ಸದ್ಗುಣಶೀಲ ಮಹಿಳೆ ಕಠಿಣ ಸಂದರ್ಭಗಳಲ್ಲಿ ತನ್ನ ಕುಟುಂಬವನ್ನು ಬೆಂಬಲಿಸಬಹುದು ಮತ್ತು ಅವರನ್ನು ತೊಂದರೆಯಿಂದ ಹೊರತರಬಹುದು.

ಕೋಪದ ಬಗ್ಗೆಯೂ ತಿಳಿದುಕೊಳ್ಳಿ: ಅತಿಯಾದ ಕೋಪವು ಸಂಬಂಧ ಮತ್ತು ಕುಟುಂಬದ ನೆಮ್ಮದಿಯನ್ನೇ ಹಾಳು ಮಾಡುತ್ತದೆ. ಹಾಗಾಗಿ ಆಕೆ ಅತಿಯಾಗಿ ಕೋಪ ಮಾಡಿಕೊಳ್ಳುವ ಹೆಣ್ಣೇ ಎಂಬುದನ್ನು ತಿಳಿದುಕೊಳ್ಳಿ. ಒಂದು ಕ್ಷಣದ ಕೋಪ ಸಂಬಂಧವೇ ಹಾಳು ಮಾಡುತ್ತದೆ. ಅದೇ ತಾಳ್ಮೆ ಇರುವ ಹೆಣ್ಣು ಇಡೀ ಕುಟುಂಬವನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಾಳೆ.

ಇದನ್ನೂ ಓದಿ: ಚಾಣಕ್ಯರ ಪ್ರಕಾರ ಮದುವೆಯಾಗುವ ಗಂಡು-ಹೆಣ್ಣಿನ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು ಗೊತ್ತಾ?

ಸುಳ್ಳು ಹೇಳುವ ಮಹಿಳೆಯರನ್ನು ನಂಬಬಾರದು: ಪ್ರತಿಯೊಂದು ಅವರನ್ನು ನಿಮ್ಮ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುವುದು ಅಪಾಯಕಾರಿ. ಏಕೆಂದರೆ ಅವರ ಸುಳ್ಳುಗಳು ಕುಟುಂಬಕ್ಕೆ ಹಾನಿಕಾರಕವಾಗಬಹುದು. ಹಾಗಾಗಿ ಎಂದಿಗೂ ಸುಳ್ಳುಗಾರರನ್ನು ಜೀವ ಸಂಗಾತಿಯಾಗಿ ಆಯ್ಕೆ ಮಾಡಬೇಡಿ.

ಇದರ ಹೊರತಾಗಿ ಸ್ವತಃ ನೀವು ಮದುವೆಯಾಗಬೇಕು ಎಂಬ ಬಯಸಿದ ಯುವತಿಯ ಬಳಿ ಆಕೆಗೆ ನೀವು ನಿಜವಾಗಿಯೂ ಇಷ್ಟವಿದ್ದೀರೋ ಅಥವಾ ಮನೆಯವರ ಒತ್ತಾಯಕ್ಕೆ ಮದುವೆಗೆ ಒಪ್ಪಿಕೊಂಡಿದ್ದೋ, ಬೇರೆ ಯಾರನ್ನಾದರೂ ಪ್ರೀತಿ ಮಾಡುತ್ತಿದ್ದೀರೋ ಎಂಬ ಈ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವುದು ಕೂಡ ತುಂಬಾನೇ ಮುಖ್ಯ. ಆಕೆಗೆ ನೀವು ಮನಸಾರೆ ಇಷ್ಟವಾಗಿದ್ದರೆ ಮಾತ್ರ ಮದುವೆಯ ಹಂತಕ್ಕೆ ಮುಂದುವರೆಯಿರಿ, ಏಕೆಂದರೆ ಇಷ್ಟವಿಲ್ಲದ ಮದುವೆಯಿಂದ ನಿಮ್ಮ ಜೀವನ ಹಾಳಾಗುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಟ್​ಕಾಯಿನ್ ಭಾರಿ ಕುಸಿತ; ಎಂಟು ತಿಂಗಳಲ್ಲಿ ಅರ್ಧದಷ್ಟು ಮೌಲ್ಯ ನಷ್ಟ; ಕ್ರಿಪ್ಟೋ ಬಜಾರಿನಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣಗಳೇನು? – Kannada News | Bitcoin price falls below 60,000 USD, as Crypto currency market gets shaking

ನವದೆಹಲಿ, ಜೂನ್ 25: ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಭಾರಿ ಏರುಪೇರು ಕಂಡುಬಂದಿದ್ದು, ಪ್ರಮುಖ ಕ್ರಿಪ್ಟೋಕರೆನ್ಸಿ ಆದ ಬಿಟ್‌ಕಾಯಿನ್ (Bitcoin) ತೀವ್ರ ಕುಸಿತದ ಹಾದಿ ಹಿಡಿದಿದೆ. ಎಂಟು ತಿಂಗಳ ಹಿಂದೆ $1.26 ಲಕ್ಷ ಇದ್ದ ಬಿಟ್‌ಕಾಯಿನ್ ಮೌಲ್ಯವು ಸದ್ಯ $60,000 (ಅಂದಾಜು ₹56 ಲಕ್ಷ) ಮಟ್ಟಕ್ಕಿಂತ ಕೆಳಕ್ಕೆ ಜಾರಿದ್ದು, ಹಲವು ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಬಿಟ್‌ಕಾಯಿನ್ ಜೊತೆಗೆ ಎಥೆರಿಯಮ್ (Ethereum), ಸೋಲಾನಾ (Solana) ಸೇರಿದಂತೆ ಇತರ ಪ್ರಮುಖ ಆಲ್ಟ್‌ಕಾಯಿನ್‌ಗಳು ಸಹ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸುತ್ತಿವೆ. ಕ್ರಿಪ್ಟೋ ಮಾರುಕಟ್ಟೆ ದಿಢೀರ್ ಆಗಿ ಹೀಗೆ ಕುಸಿಯಲು ಪ್ರಮುಖ ಕಾರಣಗಳೇನಿರಬಹುದು?

ಜಾಗತಿಕ ಮಾರುಕಟ್ಟೆಯ ಅಸ್ಥಿರತೆ ಮತ್ತು ಬಡ್ಡಿದರಗಳ ಆತಂಕ

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ‘ಫೆಡರಲ್ ರಿಸರ್ವ್’ (US Fed) ಬಡ್ಡಿದರಗಳನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಮುಂದೂಡಬಹುದು ಎಂಬ ಮುನ್ಸೂಚನೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿವೆ. ಹಣದುಬ್ಬರದ ಒತ್ತಡದಿಂದಾಗಿ ಬಡ್ಡಿದರಗಳು ದೀರ್ಘಕಾಲದವರೆಗೆ ಗರಿಷ್ಠ ಮಟ್ಟದಲ್ಲೇ ಉಳಿಯಲಿವೆ ಎಂಬ ಭಯದಿಂದ ಹೂಡಿಕೆದಾರರು ಕ್ರಿಪ್ಟೋಕರೆನ್ಸಿಯಂತಹ ಅಪಾಯಕಾರಿ ಆಸ್ತಿಗಳಿಂದ (Risky Assets) ತಮ್ಮ ಹಣವನ್ನು ಹಿಂಪಡೆಯುತ್ತಿದ್ದಾರೆ.

ಇದನ್ನು ಓದಿ: ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ

ಮೌಂಟ್ ಗ್ಯಾಕ್ಸ್​ನಿಂದ ಬಿಟ್‌ಕಾಯಿನ್ ಮರುಪಾವತಿಯಾಗುವ ಭೀತಿ

ಕಳೆದ ಒಂದು ದಶಕದ ಹಿಂದೆ ದಿವಾಳಿಯಾಗಿದ್ದ ಜಪಾನ್ ಮೂಲದ ಪ್ರಮುಖ ಕ್ರಿಪ್ಟೋ ಎಕ್ಸ್‌ಚೇಂಜ್ ‘ಮೌಂಟ್ ಗ್ಯಾಕ್ಸ್’ (Mt. Gox), ತನ್ನ ಗ್ರಾಹಕರಿಗೆ ಬಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಮರುಪಾವತಿ ಮಾಡಲು ಸಿದ್ಧತೆ ನಡೆಸಿದೆ. ಈ ಬಿಟ್‌ಕಾಯಿನ್‌ಗಳು ಮಾರುಕಟ್ಟೆಗೆ ಒಮ್ಮೆಲೇ ಬಂದರೆ, ಗ್ರಾಹಕರು ತಮಗ ಸಿಕ್ಕ ಚಿನ್ನದಂತಹ ಲಾಭವನ್ನು ನಗದೀಕರಿಸಲು ಭಾರಿ ಪ್ರಮಾಣದಲ್ಲಿ ಮಾರಾಟ (Panic Selling) ಮಾಡಬಹುದು. ಇದು ಮಾರುಕಟ್ಟೆಯಲ್ಲಿ ಭಾರಿ ಪೂರೈಕೆಯನ್ನು (Over-supply) ಸೃಷ್ಟಿಸಿ ಬೆಲೆ ಮತ್ತಷ್ಟು ಕುಸಿಯಲು ಕಾರಣವಾಗಬಹುದು ಎಂಬ ಭೀತಿ ಹೂಡಿಕೆದಾರರನ್ನು ಕಾಡುತ್ತಿದೆ. ಹೀಗಾಗಿ, ಹಲವರು ಕ್ರಿಪ್ಟೋ ಅಸೆಟ್​ಗಳನ್ನು ಮಾರಲು ಮುಂದಾದ ಕಾರಣ ಬೆಲೆ ಕಡಿಮೆ ಆಗುತ್ತಿದೆ.

ಸರ್ಕಾರಗಳ ಕಠಿಣ ನಿಯಂತ್ರಣಗಳು ಮತ್ತು ತೆರಿಗೆ ನೀತಿಗಳು

ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವು ದೇಶಗಳು ಕ್ರಿಪ್ಟೋ ವಹಿವಾಟಿನ ಮೇಲೆ ಕಠಿಣ ಕಾನೂನುಗಳು ಮತ್ತು ಹೆಚ್ಚಿನ ತೆರಿಗೆಯನ್ನು ವಿಧಿಸುತ್ತಿವೆ. ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ಸಹ ಪ್ರಮುಖ ಕ್ರಿಪ್ಟೋ ಸಂಸ್ಥೆಗಳ ಮೇಲೆ ಕಾನೂನು ಕ್ರಮಗಳನ್ನು ಬಿಗಿಗೊಳಿಸುತ್ತಿರುವುದು ಸಾಂಸ್ಥಿಕ ಹೂಡಿಕೆದಾರರು (Institutional Investors) ಸದ್ಯಕ್ಕೆ ಮಾರುಕಟ್ಟೆಯಿಂದ ದೂರ ಉಳಿಯುವಂತೆ ಮಾಡಿದೆ.

ಬಿಟ್‌ಕಾಯಿನ್ ಇಟಿಎಫ್‌ಗಳಿಂದ (ETFs) ಹೊರಹರಿವು

ಇತ್ತೀಚೆಗಷ್ಟೇ ಅಮೆರಿಕದಲ್ಲಿ ಆರಂಭವಾದ ಬಿಟ್‌ಕಾಯಿನ್ ಸ್ಪಾಟ್ ಇಟಿಎಫ್‌ಗಳಿಂದ ಭಾರಿ ಪ್ರಮಾಣದಲ್ಲಿ ಹಣ ಹೊರಹೋಗುತ್ತಿದೆ (Outflows). ನಿರಂತರವಾಗಿ ಹೂಡಿಕೆದಾರರು ಇಟಿಎಫ್ ಫಂಡ್‌ಗಳನ್ನು ಮಾರಾಟ ಮಾಡುತ್ತಿರುವುದು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಒತ್ತಡವನ್ನು ತಂದಿದೆ.

ಇದನ್ನು ಓದಿ: ವಾಹನ ಕ್ಷೇತ್ರದಲ್ಲಿ ಚೀನಾವನ್ನು ಭಾರತ ಹೇಗೆ ಹಿಂದಿಕ್ಕಬಹುದು? ಸೀಕ್ರೆಟ್ ತಿಳಿಸಿದ ಟಾಟಾ ಮೋಟರ್ಸ್​ನ ಶ್ವೆನ್ ಪಟುಶ್ಕಾ

ಬಿಟ್​ಕಾಯಿನ್ ಬೆಲೆ ಮತ್ತಷ್ಟು ಕುಸಿಯುತ್ತಾ?

ಬಿಟ್​ಕಾಯಿನ್ ಬೆಲೆಗೆ ಇದ್ದ ಸಪೋರ್ಟ್ ಲೆವೆಲ್​ಗೆ ಭಂಗಗೊಂಡಿದೆ. ತಜ್ಞರ ಪ್ರಕಾರ, ಬಿಟ್‌ಕಾಯಿನ್​ನ ಸಪೋರ್ಟ್ ಲೆವೆಲ್ ಎಂದು ಪರಿಗಣಿಸಲಾಗಿದ್ದ $60,000 ಮಟ್ಟವನ್ನು ಕಳೆದುಕೊಂಡಿರುವುದು ತಾಂತ್ರಿಕವಾಗಿ ಮಾರುಕಟ್ಟೆ ಮತ್ತಷ್ಟು ದುರ್ಬಲಗೊಳ್ಳುವ ಸಂಕೇತವಾಗಿದೆ. ಇದು ಮುಂದಿನ ದಿನಗಳಲ್ಲಿ $56,000 ಅಥವಾ $52,000 ಮಟ್ಟಕ್ಕೆ ಕುಸಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಆಲ್ಟ್‌ಕಾಯಿನ್‌ಗಳೂ ಮಕಾಡೆ

ಬಿಟ್‌ಕಾಯಿನ್ ಕುಸಿತದ ನೇರ ಪರಿಣಾಮ ಇತರೆ ಸಣ್ಣ ಕ್ರಿಪ್ಟೋಕರೆನ್ಸಿಗಳ ಮೇಲೆ ಬೀರಿದ್ದು, ಅವು ಶೇಕಡಾ 10 ರಿಂದ 20 ರಷ್ಟು ಮೌಲ್ಯ ಕಳೆದುಕೊಂಡಿವೆ.

(ಗಮನಿಸಿ: ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಅತ್ಯಂತ ಅಸ್ಥಿರತೆಯಿಂದ (Highly Volatile) ಕೂಡಿದ್ದಾಗಿದೆ. ಇಲ್ಲಿನ ಬೆಲೆ ಏರಿಳಿತಗಳು ಯಾವುದೇ ಮುನ್ಸೂಚನೆ ಇಲ್ಲದೆ ಸಂಭವಿಸುವುದರಿಂದ, ಹೂಡಿಕೆದಾರರು ಸಂಪೂರ್ಣ ಸಂಶೋಧನೆ ಮತ್ತು ತಜ್ಞರ ಸಲಹೆ ಪಡೆದ ನಂತರವೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs BAN: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತ ಭಾರತ; ಪ್ಲೇಯಿಂಗ್​ 11ನಲ್ಲಿ 2 ಬದಲಾವಣೆ – Kannada News | ICC Women’s T20 World Cup 2026: India W vs Bangladesh W Semifinal Decider and Playing XI

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 (ICC Women’s T20 World Cup 2026) ರ 23 ನೇ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು (India Women vs Bangladesh Women) ಎದುರಿಸಲಿದೆ. ಲೀಗ್ ಹಂತದಲ್ಲಿ ಇದು ಎರಡೂ ತಂಡಗಳ ನಾಲ್ಕನೇ ಮತ್ತು ನಿರ್ಣಾಯಕ ಪಂದ್ಯವಾಗಿದೆ. ಎರಡೂ ತಂಡಗಳು ಆಡಿರುವ 3 ಪಂದ್ಯಗಳಲ್ಲಿ ತಲಾ 2 ಪಂದ್ಯಗಳನ್ನು ಗೆದ್ದಿವೆ. ಉಳಿದಂತೆ ತಲಾ ಒಂದೊಂದು ಪಂದ್ಯವನ್ನು ಸೋತಿವೆ. ಆದ್ದರಿಂದ, ಸೆಮಿಫೈನಲ್‌ ಕನಸನ್ನು ಜೀವಂತವಾಗಿರಸಬೇಕೆಂದರೆ ಉಭಯ ತಂಡಗಳಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಅದರಲ್ಲೂ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಇರಾದೆಯಲ್ಲಿರುವ ಭಾರತ ಮಹಿಳಾ ತಂಡ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದ್ದರಿಂದ, ಈ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶದ ವಿರುದ್ಧ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಮಧ್ಯಮ ಕ್ರಮಾಂಕ ಲಯದಲ್ಲಿಲ್ಲ

ಅದರಲ್ಲೂ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಲಯ ಕಂಡುಕೊಳ್ಳದೆ ಇರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದರೂ, ಭಾರತ ತಂಡವು ತನ್ನ ಅತ್ಯುತ್ತಮ ಆಡುವ XI ಅನ್ನು ಇನ್ನೂ ಅಂತಿಮಗೊಳಿಸಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ, ಶ್ರೇಯಾಂಕ ಪಾಟೀಲ್ ಅವರ ಗಾಯ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದೆ. ಹೀಗಿರುವಾಗ ಬಾಂಗ್ಲಾದೇಶವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. ಏಕೆಂದರೆ ಬಾಂಗ್ಲಾದೇಶ ಕಳೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ. ಇದರ ಜೊತೆಗೆ ಸೆಮಿಫೈನಲ್‌ ರೇಸ್​ನಲ್ಲೂ ಉಳಿದಿದೆ. ಹೀಗಾಗಿ ಈ ಪಂದ್ಯದಲ್ಲಾದರೂ ಟೀಂ ಇಂಡಿಯಾ ತನ್ನೆಲ್ಲ ನ್ಯೂನತೆಗಳನ್ನು ಸರಿಪಡಿಸಿಕೊಂಡು ಆಡಬೇಕಿದೆ.

ಟಾಸ್ ಗೆದ್ದ ಬಾಂಗ್ಲಾದೇಶ

ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡುತ್ತಿದೆ. ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಬಾಂಗ್ಲಾದೇಶ ತನ್ನ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇತ್ತ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ರಾಧಾ ಯಾದವ್ ಹಾಗೂ ರೇಣುಕಾ ಸಿಂಗ್ ಠಾಕೂರ್​ಗೆ ಮೊದಲ ಬಾರಿಗೆ ಆಡಲು ಅವಕಾಶ ನೀಡಲಾಗಿದೆ.

IND W vs SA W: ಮಹಿಳಾ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾಕ್ಕೆ ಮೊದಲ ಸೋಲು

ಉಭಯ ತಂಡಗಳು

ಬಾಂಗ್ಲಾದೇಶ ತಂಡ:ಬಾಂಗ್ಲಾದೇಶ ತಂಡ: ಜುವೈರಿಯಾ ಫೆರ್ಡೌಸ್, ದಿಲಾರಾ ಅಖ್ತರ್, ಶರ್ಮಿನ್ ಅಖ್ತರ್, ನಿಗರ್ ಸುಲ್ತಾನಾ (ನಾಯಕಿ), ಸೋಭಾನಾ ಮೊಸ್ತರಿ, ಶೋರ್ನಾ ಅಖ್ತರ್, ರಿತು ಮೋನಿ, ನಹಿದಾ ಅಖ್ತರ್, ರಬೆಯಾ ಖಾನ್, ಮಾರುಫಾ ಅಖ್ತರ್ ಮತ್ತು ಸಂಜಿದಾ ಅಖ್ತರ್ ಮೇಘಲಾ..

ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ರಾಧಾ ಯಾದವ್ (ಪ್ರೇಮಾ ರಾವತ್ ಬದಲಿಗೆ), ಶ್ರೀ ಚರಣಿ, ನಂದಿನಿ ಶರ್ಮಾ ಮತ್ತು ರೇಣುಕಾ ಸಿಂಗ್ ಠಾಕೂರ್ (ಅರುಂಧತಿ ರೆಡ್ಡಿ ಬದಲಿಗೆ).

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:43 pm, Thu, 25 June 26

Source link

Exit mobile version