Gold Rate: ಎರಡು ದಿನದಲ್ಲಿ 10 ಗ್ರಾಮ್ ಚಿನ್ನದ ಬೆಲೆ 3,350 ರೂ ಇಳಿಕೆ – Kannada News | Gold Price Today on 24th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 24: ಚಿನ್ನದ ಬೆಲೆ ಸತತವಾಗಿ ಇಳಿದಿದೆ. ಎರಡು ದಿನದಲ್ಲಿ ಇದರ ಬೆಲೆ (Gold Rates) 335 ರೂನಷ್ಟು ಕಡಿಮೆಗೊಂಡಿದೆ. ಜೂನ್ ತಿಂಗಳಲ್ಲಿ ಭಾರತದಲ್ಲಿ ಬಂಗಾರದ ದರ ಶೇ. 12ರಷ್ಟು ಕಡಿಮೆಗೊಂಡಿದೆ. ಬೆಳ್ಳಿ ಬೆಲೆ ಶೇ. 15ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಈ ತಿಂಗಳು ಕಡಿಮೆಗೊಂಡಿದೆ. ಬುಧವಾರ ವಿದೇಶಗಳಲ್ಲೂ ಚಿನ್ನದ ಬೆಲೆ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 24ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,433 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,230 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,825 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,433 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,230 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,230 ರೂ
  • ಚೆನ್ನೈ: 13,350 ರೂ
  • ಮುಂಬೈ: 13,230 ರೂ
  • ದೆಹಲಿ: 13,245 ರೂ
  • ಕೋಲ್ಕತಾ: 13,230 ರೂ
  • ಕೇರಳ: 13,230 ರೂ
  • ಅಹ್ಮದಾಬಾದ್: 13,235 ರೂ
  • ಜೈಪುರ್: 13,245 ರೂ
  • ಲಕ್ನೋ: 13,245 ರೂ
  • ಭುವನೇಶ್ವರ್: 13,230 ರೂ

ಇದನ್ನೂ ಓದಿ: ಒರಾಕಲ್​ನಲ್ಲಿ ಒಂದು ವರ್ಷದಲ್ಲಿ ಕೆಲಸ ಕಳೆದುಕೊಂಡ 21,000 ಉದ್ಯೋಗಿಗಳು; ಎಐನಲ್ಲಿ ಹೂಡಿಕೆ ಮಾಡಲಿರುವ ಐಟಿ ದಿಗ್ಗಜ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 559 ರಿಂಗಿಟ್ (12,805 ರುಪಾಯಿ)
  • ದುಬೈ: 498.75 ಡಿರಾಮ್ (12,876 ರುಪಾಯಿ)
  • ಅಮೆರಿಕ: 136 ಡಾಲರ್ (12,900 ರುಪಾಯಿ)
  • ಸಿಂಗಾಪುರ: 180.50 ಸಿಂಗಾಪುರ್ ಡಾಲರ್ (13,193 ರುಪಾಯಿ)
  • ಕತಾರ್: 498.50 ಕತಾರಿ ರಿಯಾಲ್ (12,958 ರೂ)
  • ಸೌದಿ ಅರೇಬಿಯಾ: 512 ಸೌದಿ ರಿಯಾಲ್ (12,924 ರುಪಾಯಿ)
  • ಓಮನ್: 52.20 ಒಮಾನಿ ರಿಯಾಲ್ (12,847 ರುಪಾಯಿ)
  • ಕುವೇತ್: 41.63 ಕುವೇತಿ ದಿನಾರ್ (12,817 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 245 ರೂ
  • ಚೆನ್ನೈ: 250 ರೂ
  • ಮುಂಬೈ: 245 ರೂ
  • ದೆಹಲಿ: 245 ರೂ
  • ಕೋಲ್ಕತಾ: 245 ರೂ
  • ಕೇರಳ: 250 ರೂ
  • ಅಹ್ಮದಾಬಾದ್: 245 ರೂ
  • ಜೈಪುರ್: 245 ರೂ
  • ಲಕ್ನೋ: 245 ರೂ
  • ಭುವನೇಶ್ವರ್: 250 ರೂ
  • ಪುಣೆ: 245

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟುವ ಶಾಲಾ ಮಕ್ಕಳು: ಯಾದಗಿರಿಯ ಲಿಂಗಸನಳ್ಳಿ ತಾಂಡದ ಜನರ ದುಸ್ಥಿತಿ; ಕಣ್ಣು ಮುಚ್ಚಿ ಕುಳಿತ ಜನಪ್ರತಿನಿಧಿಗಳು – Kannada News | Lingasanahalli Tanda: No Bridge Forces Rural Students to Cross Dangerous Stream

ಯಾದಗಿರಿ, ಜೂ.24: ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾರಿಗೆ ಸಂಪರ್ಕ ಮತ್ತು ಸುರಕ್ಷಿತ ರಸ್ತೆ ಕಲ್ಪಿಸಲು ಸರ್ಕಾರ ಮತ್ತು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂಬುದಕ್ಕೆ ಯಾದಗಿರಿ ತಾಲೂಕಿನ ಲಿಂಗಸನಳ್ಳಿ ತಾಂಡದ ಈ ದೃಶ್ಯಗಳೇ ಜೀವಂತ ಸಾಕ್ಷಿ. ಇಲ್ಲಿನ ತಾಂಡದ ಮಕ್ಕಳು ಪ್ರೌಢ ಶಿಕ್ಷಣಕ್ಕಾಗಿ ಹಳ್ಳವೊಂದನ್ನು ಎದ್ನೋ ಬಿದ್ನೋ ಎಂದು ಅಪಾಯಕಾರಿ ಸ್ಥಿತಿಯಲ್ಲಿ ದಾಟಿಕೊಂಡು ಶಾಲೆಗೆ ಹೋಗಬೇಕಾದ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಟಿವಿ9 ಕನ್ನಡ ಒಂದು ಸಂಪೂರ್ಣ ವರದಿಯನ್ನು ನೀಡಿದೆ.

ಲಿಂಗಸನಳ್ಳಿ ತಾಂಡದಲ್ಲಿ ಸದ್ಯ ಒಂದರಿಂದ ಐದನೇ ತರಗತಿಯವರೆಗೆ ಮಾತ್ರ ಪ್ರಾಥಮಿಕ ಶಾಲೆ ಇದೆ. ಐದನೇ ತರಗತಿ ಮುಗಿಸಿದ ನಂತರ ಮುಂದಿನ ಪ್ರೌಢ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಪಕ್ಕದ ಯರಗೋಳ ಗ್ರಾಮಕ್ಕೆ ಬರಬೇಕಾಗುತ್ತದೆ. ತಾಂಡದಿಂದ ಯರಗೋಳ ಗ್ರಾಮಕ್ಕೆ ಕೇವಲ 4 ಕಿಲೋಮೀಟರ್ ದೂರವಿದೆಯಾದರೂ, ಈ ಮಾರ್ಗದ ಮಧ್ಯೆ ಒಂದು ದೊಡ್ಡ ಹಳ್ಳವಿದೆ. ಮಳೆಗಾಲ ಬಂತೆಂದರೆ ಈ ಹಳ್ಳವು ಸಂಪೂರ್ಣವಾಗಿ ತುಂಬಿ ಹರಿಯುತ್ತದೆ. ಹಳ್ಳ ತುಂಬಿ ಹರಿದಾಗ ಜೀವಭಯದಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸುತ್ತಾರೆ. ಇನ್ನು ಮಳೆ ಇಲ್ಲದ ಸಾಮಾನ್ಯ ದಿನಗಳಲ್ಲೂ ಪೋಷಕರೇ ಖುದ್ದಾಗಿ ನಿಂತು ಮಕ್ಕಳನ್ನು ಹಳ್ಳ ದಾಟಿಸಿ ಕಳುಹಿಸಬೇಕಾದ ಅನಿವಾರ್ಯತೆ ಇದೆ.

ಈ ಹಳ್ಳಕ್ಕೆ ಅಡ್ಡಲಾಗಿ ಒಂದು ಸಣ್ಣ ಸೇತುವೆ ನಿರ್ಮಿಸಿಕೊಡುವಂತೆ ತಾಂಡದ ನಿವಾಸಿಗಳು ಹಲವು ಬಾರಿ ಶಾಸಕರಿಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಯಾರೊಬ್ಬರೂ ಈವರೆಗೆ ಇವರ ಮನವಿಗೆ ಸ್ಪಂದಿಸಿಲ್ಲ. ಒಂದು ವೇಳೆ ಮಳೆಗಾಲದಲ್ಲಿ ಹಳ್ಳ ತುಂಬಿದಾಗ ಯರಗೋಳ ಗ್ರಾಮಕ್ಕಾಗಲಿ ಅಥವಾ ತಾಲೂಕು ಕೇಂದ್ರಕ್ಕಾಗಲಿ ತುರ್ತು ಕೆಲಸಗಳಿಗೆ ಹೋಗಬೇಕಾದರೆ ಗ್ರಾಮಸ್ಥರು ಬರೋಬ್ಬರಿ 14 ಕಿಲೋಮೀಟರ್ ಸುತ್ತುವರೆದು ಬರಬೇಕಾಗಿದೆ. 4 ಕಿ.ಮೀ ತಲುಪುವ ಹಾದಿಗೆ ಸೇತುವೆ ಇಲ್ಲದ ಕಾರಣ ಇಡೀ ತಾಂಡದ ಸಂಪರ್ಕವೇ ಕಡಿತಗೊಂಡಿದೆ.

ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್: ಹೆಚ್ಚುವರಿ ಅಬಕಾರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ದಾಳಿ

ಅಧಿಕಾರಿಗಳ ಮತ್ತು ರಾಜಕಾರಣಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ತಾಂಡದ ನಿವಾಸಿಗಳು, ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಿಕೊಡಬೇಕು, ನಮ್ಮ ಮಕ್ಕಳ ಜೀವಕ್ಕೆ ಸುರಕ್ಷತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮನೆ ಖಾಲಿ ಮಾಡ್ತೇನೆ ಎಂದ ಯುವತಿಗೆ ಮನ ಮುಟ್ಟುವಂತೆ ರಿಪ್ಲೈ ಕೊಟ್ಟ ಓನರ್ – Kannada News | Bengaluru: Bengaluru Owner gives heart touching touching reply to young woman

ಬೆಂಗಳೂರು, ಜೂನ್ 24: ಬೆಂಗಳೂರಿಗೆ (Bengaluru) ಶಿಕ್ಷಣ, ಉದ್ಯೋಗ ಎಂದು ಬಂದು ಬಾಡಿಗೆ ಮನೆ, ಪಿಜಿ ಮಾಡಿಕೊಂಡು ಇರುವವರೇ ಹೆಚ್ಚು. ಬಾಡಿಗೆ ಮನೆ ಮಾಡಿಕೊಂಡರೆ ಮನೆಮಾಲೀಕರ ಆಸೆಬುರುಕುತನದಿಂದ ತಿಂಗಳ ಸಂಬಳವೇ ಉಳಿಯಲ್ಲ. ಒಳ್ಳೆಯ ಮನೆ ಓನರ್ ಸಿಕ್ಕಿದ್ರೆ ಅದಕ್ಕಿಂತ ಅದೃಷ್ಟ ಮತ್ತೊಂದಿಲ್ಲ. ಇದೀಗ ಮನೆ ಖಾಲಿ ಮಾಡುತ್ತೇನೆ ಎಂದ ಯುವತಿಗೆ ಓನರ್ ಕೊಟ್ಟ ಉತ್ತರ ಹೃದಯ ಸ್ಪರ್ಶಿಯಾಗಿದೆ. ದಯವಿಟ್ಟು ಹೋಗಬೇಡಿ ಇಲ್ಲೇ ಉಳಿಯಿರಿ ಎನ್ನುವ ಓನರ್ ಮಾತು ನೆಟ್ಟಿಗರ ಹೃದಯ ಗೆದ್ದಿದೆ.

ಕೃತಿಕಾ ಕುಮಾರಿ (Kritika kumari)  ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ ನಾನು ಜುಲೈ ಅಂತ್ಯಕ್ಕೆ ಮನೆ ಖಾಲಿ ಮಾಡುವುದಾಗಿ ನಾನು ನಮ್ಮ ಓನರ್‌ಗೆ ತಿಳಿಸಿದ್ದೆ. ಆದರೆ ನನಗೆ ಬೇರೆ ಫ್ಲ್ಯಾಟ್ ಸಿಗಲಿಲ್ಲ. ಸೆಪ್ಟೆಂಬರ್‌ವರೆಗೆ ಇಲ್ಲೇ ಇರಬಹುದಾ ಎಂದು ಮೆಸೇಜ್ ಮಾಡಿದೆ. ಅದಕ್ಕೆ ಓನರ್ ಉತ್ತರ ಕೊಟ್ಟಿದ್ದು, ದಯವಿಟ್ಟು ಹೋಗಬೇಡಿ. ನೀವು ಇನ್ನೂ ಹೆಚ್ಚು ಕಾಲ ನಮ್ಮ ಮನೆಯಲ್ಲೇ ಬಾಡಿಗೆಗೆ ಇರಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಅಂದು ದ್ವೇಷಿಸುತ್ತಿದ್ದ ಈ ನಗರ ಇಂದು ನಂಗೆ ತುಂಬಾ ಆಪ್ತ; ಬೆಂಗಳೂರನ್ನು ಮೆಚ್ಚಿಕೊಂಡ ಮಹಿಳೆ

ಈ ಪೋಸ್ಟ್ ನಾಲ್ಕುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಓನರ್ ಸಿಕ್ಕರೆ ಯಾರು ಮನೆ ಖಾಲಿ ಮಾಡ್ತೇನೆ ಎಂದಿದ್ದಾರೆ. ಮತ್ತೊಬ್ಬರು, ಇಂಥಾ ಒಳ್ಳೆ ಓನರ್ ಸಿಗೋಕೆ ಪುಣ್ಯ ಮಾಡಿರಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ನನ್ನ ಪ್ರಕಾರ ಇದು ಪ್ರಪೋಸಲ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:26 am, Wed, 24 June 26

Source link

ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್: ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕ ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ – Kannada News | Ayodhya Ram Mandir Bomb Blast Plot: Suspected Terrorist Suhel Arrested in Davanagere Reveals Terrorists attack plans

ಶಂಕಿತ ಉಗ್ರ ಸುಹೇಲ್ ಹಾಗೂ ಅಯೋಧ್ಯೆಯ ರಾಮ ಮಂದಿರImage Credit source: tv9

ದಾವಣಗೆರೆ, ಜೂನ್ 24: ದಾವಣಗೆರೆ (Davanagere) ಜಿಲ್ಲೆಯ ಹರಿಹರದಲ್ಲಿ ಮಂಗಳವಾರ ಬಂಧಿಸಲಾಗಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನ ವಿಚಾರಣೆ ವೇಳೆ ದೇಶವನ್ನೇ ಬೆಚ್ಚಿಬೀಳಿಸುವಂತಹ ಸ್ಫೋಟಕ ಮಾಹಿತಿ ಬಯಲಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾದ 20 ವರ್ಷದ ಶಂಕಿತ ಉಗ್ರ ಸುಹೇಲ್, ತನಿಖಾಧಿಕಾರಿಗಳ ಮುಂದೆ ಅತ್ಯಂತ ಭಯಾನಕ ಸಂಚನ್ನು ಒಪ್ಪಿಕೊಂಡಿದ್ದಾನೆ. ‘ಕೋಟ್ಯಂತರ ಹಿಂದುಗಳ ಆರಾಧ್ಯ ದೈವದ ನೆಲೆಯಾದ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ನಾನು ಬಯಸಿದ್ದೆ’ ಎಂದು ಈತ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ.

ಮುಖ್ಯಾಂಶಗಳು

  • ರಾಮ ಮಂದಿರ ಸ್ಫೋಟಿಸಲು ಉಗ್ರನ ಸ್ಕೆಚ್.
  • ಮೊಬೈಲ್‌ನಲ್ಲಿ ಪಾಕಿಸ್ತಾನದ ಲಿಂಕ್ ಪತ್ತೆ.
  • ಮಾರಕಾಸ್ತ್ರಗಳೊಂದಿಗೆ ಪೋಟೋ ತೆಗೆಸಿಕೊಂಡಿದ್ದ ಸುಹೇಲ್.

ಪ್ಯಾಕ್ಟರಿ ಪೇಂಟರ್ ಸೋಗಿನಲ್ಲಿ ಅಡಗಿದ್ದ ಉಗ್ರ

ಬಂಧಿತ ಶಂಕಿತ ಉಗ್ರ ಸುಹೇಲ್ ಹರಿಹರ ಪಕ್ಕದ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿಯೊಂದರಲ್ಲಿ ಸಾಮಾನ್ಯ ಪೇಂಟಿಂಗ್ ಕೆಲಸಗಾರನಾಗಿ ಸೇರಿಕೊಂಡು ಯಾರಿಗೂ ಅನುಮಾನ ಬಾರದಂತೆ ಅಡಗಿಕೊಂಡಿದ್ದ. ಈತನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಅಂತಾರಾಷ್ಟ್ರೀಯ ಉಗ್ರ ಜಾಲದೊಂದಿಗೆ ನಂಟು

ಪೊಲೀಸರು ಈತನ ಮೊಬೈಲ್ ಫೋನ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅಂತಾರಾಷ್ಟ್ರೀಯ ಉಗ್ರ ಜಾಲದೊಂದಿಗೆ ಹೊಂದಿದ್ದ ಸಂಪರ್ಕದ ಪ್ರಮುಖ ಸುಳಿವುಗಳು ಲಭ್ಯವಾಗಿವೆ. ಈತನ ಫೋನ್‌ನಲ್ಲಿ ಪಾಕಿಸ್ತಾನದ ಕಂಟ್ರಿ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಯೊಂದು ‘ರಾಣಾ ಬಾಯ್’ ಎಂಬ ಹೆಸರಿನಲ್ಲಿ ಸೇವ್ ಆಗಿರುವುದು ಪತ್ತೆಯಾಗಿದೆ.

ಸೋಷಿಯಲ್ ಮೀಡಿಯಾ ಉಗ್ರ ಜಾಲದ ಸದಸ್ಯ

ತನಿಖೆಯ ವೇಳೆ ಸುಹೇಲ್ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುವ ಅಂತರ್ಜಾಲದ ರಹಸ್ಯ ಗುಂಪುಗಳಾದ ‘MEMON & JUTTU- 333’ ಹಾಗೂ ‘RANABHAI 333’ ಗ್ರೂಪ್‌ಗಳಲ್ಲಿ ಸಕ್ರಿಯ ಸದಸ್ಯನಾಗಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ವೃತ್ತಿಪರ ಉಗ್ರರನ್ನು ಹೋಲುವ ರೀತಿಯಲ್ಲಿ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಪೋಸ್ ನೀಡಿ ತೆಗೆಸಿಕೊಂಡಿದ್ದ ಹಲವಾರು ಫೋಟೋಗಳು ಈತನ ಮೊಬೈಲ್ ಗ್ಯಾಲರಿಯಲ್ಲಿ ಪತ್ತೆಯಾಗಿವೆ.

ಇದನ್ನೂ ಓದಿ: ಪಾಕ್​​​​ ಸಂಘಟನೆಗಳ ಜೊತೆ ನಂಟು, ದಾವಣಗೆರೆಯಲ್ಲಿ ಮತ್ತೋರ್ವ ಶಂಕಿತ ಉಗ್ರ ಅರೆಸ್ಟ್

ಭಾರತದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಹಾಗೂ ಸಮಾಜ ಘಾತಕ ಚಟುವಟಿಕೆಗಳನ್ನು ನಡೆಸಿ ಸಾವು-ನೋವು ಸೃಷ್ಟಿಸಲು ಈತ ಮತ್ತು ಈತನ ತಂಡ ಸಂಚು ರೂಪಿಸಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಮಂಗಳವಾರ ಸಂಜೆ ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ ಮಂದಿರ ದೇಣಿಗೆ ಹಗರಣಕ್ಕೆ ಭಾರಿ ತಿರುವು, ಎಸ್‌ಐಟಿಯಿಂದ 15 ಪುಟಗಳ ವರದಿ ಸಲ್ಲಿಕೆ, ಏನೇನಿದೆ? – Kannada News | Ram Mandir Donation Scam: SIT Uncovers Massive Irregularities in Ayodhya Temple Funds

ಅಯೋಧ್ಯೆ, ಜೂನ್ 24: ಅಯೋಧ್ಯೆಯ ಶ್ರೀ ರಾಮ ಮಂದಿರ(Ram Mandir)ದ ಕಾಣಿಕೆ ಹಣದ ದುರುಪಯೋಗ ಮತ್ತು ಕಳ್ಳತನದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತನ್ನ 15 ಪುಟಗಳ ಮೊದಲ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ದೇವಸ್ಥಾನದ ಇಡೀ ದೇಣಿಗೆ ವ್ಯವಸ್ಥೆಯಲ್ಲಿ ನಡೆದಿರುವ ಭೀಕರ ಅಕ್ರಮಗಳನ್ನು ಬಯಲಿಗೆಳೆಯಲಾಗಿದ್ದು, ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳ ನಡೆ ಈಗ ತೀವ್ರ ಸಂಶಯದ ಸುಳಿಗೆ ಸಿಲುಕಿದೆ.

ಎಸ್‌ಐಟಿ ಪತ್ತೆಹಚ್ಚಿದ ದೋಷಗಳು
ಚಿನ್ನ-ಬೆಳ್ಳಿಗೆ ದಾಖಲೆಯೇ ಇಲ್ಲ: ದೇವಸ್ಥಾನದ ಬ್ಯಾಂಕ್ ಖಾತೆಗಳ ಪ್ರಕಾರ, ಪ್ರತಿ ತಿಂಗಳು ಸರಾಸರಿ 25 ಲಕ್ಷ ಭಕ್ತರು ಹಾಗೂ ಕುಂಭಮೇಳದ ಸಮಯದಲ್ಲಿ ಬರೋಬ್ಬರಿ 1 ಕೋಟಿ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಆದರೆ, ಭಕ್ತರು ನೀಡಿದ ಧಾನ್ಯ, ಎಣ್ಣೆ, ತುಪ್ಪ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳಿಗೆ ಟ್ರಸ್ಟ್‌ನಲ್ಲಿ ಯಾವುದೇ ನಿರ್ದಿಷ್ಟ ರಶೀದಿ ಅಥವಾ ಪುರಾವೆಗಳೇ ಸಿಕ್ಕಿಲ್ಲ.

ಹೆಚ್ಚಿದ ಭಕ್ತರು, ಕುಸಿದ ಆದಾಯ: ಹಲವಾರು ತಿಂಗಳುಗಳಲ್ಲಿ ಮಂದಿರಕ್ಕೆ ಬರುವ ಭಕ್ತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದ್ದರೂ, ಬ್ಯಾಂಕಿಗೆ ಜಮೆಯಾದ ಕಾಣಿಕೆ ಹಣ ಮಾತ್ರ ತೀವ್ರವಾಗಿ ಕುಸಿದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಆ ತಿಂಗಳುಗಳಲ್ಲಿ ಭಕ್ತರು ನೋಟುಗಳಿಗಿಂತ ನಾಣ್ಯಗಳನ್ನೇ ಹೆಚ್ಚು ಹಾಕಿದ್ದರು ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ.

ದೇವಸ್ಥಾನದ ಅನೇಕ ಉದ್ಯೋಗಿಗಳು ಯಾವುದೇ ಲಿಖಿತ ಆದೇಶ ಅಥವಾ ಅಧಿಕೃತ ನೇಮಕಾತಿ ಪತ್ರಗಳಿಲ್ಲದೆಯೇ ಹಣಕಾಸಿನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದು ಪತ್ತೆಯಾಗಿದೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆಯಲ್ಲಿ ಭಾರಿ ಲೋಪ ಪ್ರಕರಣ, ಎಸ್‌ಐಟಿ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಸತ್ಯಗಳು ಬಯಲು

ಚಂಪತ್ ರಾಯ್ ಸಮಿತಿಯ ಭಾರಿ ನಿರ್ಲಕ್ಷ್ಯ
ಕಾಣಿಕೆ ಎಣಿಕೆ ಮಾಡುವ ಮತ್ತು ದೇಣಿಗೆಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಹೊತ್ತಿದ್ದ ಸಮಿತಿಯು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ವರದಿ ಹೇಳಿದೆ. ಟ್ರಸ್ಟ್‌ನ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ನೌಕರರ ಪಾತ್ರ ಈ ಹಗರಣದಲ್ಲಿ ಶಂಕಾಸ್ಪದವಾಗಿದೆ ಎಂದು ಎಸ್‌ಐಟಿ ನೇರವಾಗಿ ಬೆರಳು ತೋರಿಸಿದೆ.

ಎಸ್‌ಐಟಿ ಈಗಾಗಲೇ 60 ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ದೇವಸ್ಥಾನದಲ್ಲಿ ಕೆಲಸ ಮಾಡುವ ಹಲವಾರು ಸಾಮಾನ್ಯ ಉದ್ಯೋಗಿಗಳ ಆಸ್ತಿ ಮತ್ತು ವೈಯಕ್ತಿಕ ಆದಾಯ ಕಳೆದ 5 ವರ್ಷಗಳಲ್ಲಿ ದಿಢೀರನೆ ಹಲವು ಪಟ್ಟು ವೇಗವಾಗಿ ಹೆಚ್ಚಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಮುಂದಿನ ನಡೆ: ಟ್ರಸ್ಟ್‌ನ ಆಡಳಿತವನ್ನು ಬಲಪಡಿಸಲು ಹಲವು ಕಟ್ಟುನಿಟ್ಟಿನ ಸಲಹೆಗಳನ್ನು ನೀಡಿರುವ ಎಸ್‌ಐಟಿ, ಕೇವಲ ಒಂದು ವಾರದಲ್ಲಿ ಪ್ರಾಥಮಿಕ ತನಿಖಾ ವರದಿಯನ್ನು ಪೂರ್ಣಗೊಳಿಸಿದ್ದು, ಮುಂದಿನ 15 ದಿನಗಳಲ್ಲಿ ಇಡೀ ಹಗರಣದ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವರನ ಕೊಂದು, ಇಲ್ಲೇ ಎಲ್ಲೋ ಇದ್ದೀಯ ಅದು ನನ್ನ ಹೃದಯಕ್ಕೆ ಗೊತ್ತು ಎಂದು ಇನ್​ಸ್ಟಾಗ್ರಾಂ ಸ್ಟೇಟಸ್ ಹಾಕಿದ್ದ ಭಾವಿ ಪತ್ನಿ – Kannada News | Pune Fort Mystery Unravels After Social Media Post Brings Shocking Truth to Light

ಪುಣೆ, ಜೂನ್ 24: ಯುವತಿ ತನ್ನ ಭಾವಿ ಪತಿಯ ಕೊಲೆ ಮಾಡಿ, ನನ್ನ ಹುಟ್ಟುಹಬ್ಬದಂದೇ ನೀನು ಹೊರಟು ಹೋದೆ, ಇಲ್ಲೇ ಎಲ್ಲೋ ಇದ್ದೀಯ ನನ್ನ ಹೃದಯಕ್ಕೆ ಅದು ಗೊತ್ತು ಎಂದು ಇನ್​ಸ್ಟಾಗ್ರಾಂ ಸ್ಟೇಟಸ್ ಹಾಕಿದ್ದಳು. ಮಹಾರಾಷ್ಟ್ರದ ಲೋಹಗಡ್ ಕೋಟೆಯಲ್ಲಿ 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು 400 ಅಡಿ ಆಳದ  ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಪ್ರಕರಣದಲ್ಲಿ ಸಿಯಾ ಗೋಯಲ್ ಇನ್‌ಸ್ಟಾಗ್ರಾಂ ಸ್ಟೇಟಸ್ ಹಾಕಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ತಾನೇ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿ, ಜಗತ್ತಿನ ಎದುರು ಕಣ್ಣೀರು  ಹಾಕಿದ್ದ ಆಕೆಯ ಇನ್‌ಸ್ಟಾಗ್ರಾಂ ಪೋಸ್ಟ್ ಈಗ ತನಿಖೆಯ ಪ್ರಮುಖ ಸಾಕ್ಷಿಯಾಗಿದೆ.

ಕೊಲೆ ಮಾಡಿದ ದಿನವೇ ಇನ್‌ಸ್ಟಾಗ್ರಾಮ್‌ನಲ್ಲಿ ಕಣ್ಣೀರಿನ ಪೋಸ್ಟ್

ಜೂನ್ 18 ರಂದು ಸಿಯಾ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ ಕೇತನ್‌ನನ್ನು ಕೋಟೆಯಿಂದ ತಳ್ಳಿ ಕೊಂದಿದ್ದಳು. ಆ ದಿನವೇ ಆಕೆಯ ಹುಟ್ಟುಹಬ್ಬವೂ ಆಗಿತ್ತು. ಕೊಲೆ ನಡೆದ ಬೆನ್ನಲ್ಲೇ ತನಗೇನೂ ತಿಳಿಯದಂತೆ ನಾಟಕವಾಡಿದ್ದ ಸಿಯಾ, ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿಕೇತನ್ ಜೊತೆಗಿನ ರೊಮ್ಯಾಂಟಿಕ್ ಡ್ಯಾನ್ಸ್ ವಿಡಿಯೋವನ್ನು ಹಂಚಿಕೊಂಡಿದ್ದಳು.

ನನ್ನ ಹುಟ್ಟುಹಬ್ಬದಂದೇ ನೀನು ನನ್ನನ್ನು ಬಿಟ್ಟು ಹೋದೆ, ನಾವು ಮದುವೆಯಾಗುವ ದಿನ ಹತ್ತಿರ ಬಂದಾಗ ನೀನು ನನ್ನನ್ನು ಏಕೆ ಬಿಟ್ಟು ಹೋದೆ ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ನನ್ನ ಕಣ್ಣುಗಳಲ್ಲಿ ನೂರಾರು ಕನಸುಗಳಿದ್ದವು, ಆದರೆ ಈಗ ಎಂದಿಗೂ ಉತ್ತರ ಸಿಗದ ಪ್ರಶ್ನೆಗಳು ಮಾತ್ರ ಉಳಿದಿವೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೆ, ನೀನು ನನಗೆ ಯಾಕೆ ಹೀಗೆ ಮಾಡಿದೆ? ಎಂದು ಬರೆದಿದ್ದಳು.

ಮತ್ತಷ್ಟು ಓದಿ: ಮೊದಲ ಬಾರಿ ತಳ್ಳಿದಾಗ ಪೊದೆ ಹಿಡಿದು ಬದುಕಿದ್ದ ವರ: ರಹಸ್ಯ ಮುಚ್ಚಿಹಾಕಲು ಹಾವಿನ ಕಥೆ ಕಟ್ಟಿ ಅಪ್ಪಿಕೊಂಡಿದ್ದ ಕಪಟ ಯುವತಿ

ಅಷ್ಟೇ ಅಲ್ಲದೆ, ಆಕೆ ಆ ವಿಡಿಯೋಗೆ ನೀನು ಇಲ್ಲೇ ಎಲ್ಲೋ ಇದ್ದೀಯಾ ಅದು ನನ್ನ ಹೃದಯಕ್ಕೆ ಗೊತ್ತು, ವಾಪಸ್ ಬಂದುಬಿಡು ಎಂದು ಭಾವನಾತ್ಮಕವಾಗಿ ಬರೆದಿದ್ದಳು.

ಇನ್‌ಸ್ಟಾಗ್ರಾಮ್ ಸ್ಟೋರಿಯಿಂದಲೇ ಪೊಲೀಸರಿಗೆ ಬಂದಿತ್ತು ಅನುಮಾನ

ಆರಂಭದಲ್ಲಿ ಸಿಯಾ ಪೊಲೀಸರ ಬಳಿ ಬಂದು, ಕೋಟೆಯ ಮೇಲೆ ಜೋರಾಗಿ ಗಾಳಿ ಬೀಸುತ್ತಿತ್ತು, ಹಾಗಾಗಿ ಕೇತನ್ ಕಾಲು ಜಾರಿ ಬಿದ್ದರು ಎಂದು ಕಥೆ ಕಟ್ಟಿದ್ದಳು. ಪೊಲೀಸರು ಕೂಡ ಆಕಸ್ಮಿಕ ಸಾವು ಎಂದು ಕೇಸ್ ದಾಖಲಿಸಿದ್ದರು. ಆದರೆ, ಕೊಲೆಯಾದ ದಿನವೇ ಇಷ್ಟೊಂದು ಪ್ಲಾನ್ ಮಾಡಿ ಇನ್‌ಸ್ಟಾಗ್ರಾಮ್ ವಿಡಿಯೋ ಎಡಿಟ್ ಮಾಡಿ ಹಾಕಿರುವುದನ್ನು ಗಮನಿಸಿದ ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಮತ್ತು ಅವರ ತಂಡಕ್ಕೆ ಸಿಯಾ ಮೇಲೆ ತೀವ್ರ ಅನುಮಾನ ಮೂಡಿತು.

ಮದುವೆ ಇಷ್ಟ ಇರಲಿಲ್ಲ

ಫೆಬ್ರವರಿಯಲ್ಲಿ ಇಬ್ಬರ ನಿಶ್ಚಿತಾರ್ಥವಾಗಿತ್ತು ಮತ್ತು ನವೆಂಬರ್‌ನಲ್ಲಿ ಉದಯಪುರದ ಅರಮನೆಯಲ್ಲಿ ಅದ್ದೂರಿ ಮದುವೆಗೆ ಸಿದ್ಧತೆ ನಡೆದಿತ್ತು. ಆದರೆ ಸಿಯಾಳಿಗೆ ತನ್ನ ಬಿಸಿನೆಸ್ ಪಾರ್ಟ್‌ನರ್ ಚೇತನ್ ಚೌಧರಿ ಜೊತೆ ಅಕ್ರಮ ಸಂಬಂಧವಿತ್ತು. ಆಕೆಗೆ ಕೇತನ್‌ನನ್ನು ಮದುವೆಯಾಗುವುದು ಇಷ್ಟವಿರಲಿಲ್ಲ.

ಜೂನ್ 18 ರಂದು ಸಿಯಾ ಪ್ಲಾನ್ ಮಾಡಿ ಕೇತನ್‌ನನ್ನು ಐತಿಹಾಸಿಕ ಲೋಹಗಡ್ ಕೋಟೆಗೆ ಕರೆದೊಯ್ದಿದ್ದಾಳೆ. ಅಲ್ಲಿಗೆ ಮೊದಲೇ ಬಂದಿದ್ದ ಪ್ರಿಯಕರ ಚೇತನ್ ಜೊತೆ ಸೇರಿ, ಕೇತನ್‌ನನ್ನು ಹಿಂದಿನಿಂದ ತಳ್ಳಿ ಕೊಂದಿದ್ದಾಳೆ.

ಪ್ರಸ್ತುತ ಮೃತನ ತಂದೆ ವಿಶಾಲ್ ಅಗರ್ವಾಲ್ ನೀಡಿದ ದೂರಿನ ಮೇರೆಗೆ ಪೊಲೀಸರು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಇಬ್ಬರನ್ನೂ ಕೊಲೆ ಹಾಗೂ ಕ್ರಿಮಿನಲ್ ಪಿತೂರಿ ಕಾಯ್ದೆಯಡಿ ಬಂಧಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಟಾಕ್ಸಿಕ್’ ಸಿನಿಮಾನಲ್ಲಿ ‘ಗನ್ ಎಕ್ಸ್​ಪರ್ಟ್’ ಟಿಟಿಯಾನಾ ಹಾಟ್ ಅವತಾರ – Kannada News | Tetiana Gaidar acting in Toxic movie her poster got viral

ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆ ದಿನಾಂಕ ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಯಶ್ ನಾಯಕನಾದರೂ ಈ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ ಎಂಬ ಮಾತುಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ. ಸಿನಿಮಾದ ನಾಯಕಿಯರಾದ ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ನೀಡಿರುವ ಸಂದರ್ಶನಗಳಲ್ಲಿ ಈ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದಾರೆ. ಸಿನಿಮಾನಲ್ಲಿ ಐವರು ನಾಯಕಿಯರಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ. ಇವರುಗಳ ಜೊತೆಗೆ ಕೆಲ ವಿದೇಶಿ ನಟಿಯರು ಸಹ ಇದ್ದು, ಪ್ರಮುಖವಾಗಿ ಹಾಲಿವುಡ್ ನಟಿ ಟಿಟಿಯಾನಾ ‘ಟಾಕ್ಸಿಕ್’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಟಿಟಿಯಾನಾ, ನಟಿ ಮತ್ತು ಕೊರಿಯೋಗ್ರಾಫರ್ ಆಗಿರು ಜೊತೆಗೆ ತಮ್ಮ ಶೂಟಿಂಗ್ ಸ್ಕಿಲ್​​ನಿಂದಲೂ ಜನಪ್ರಿಯರು. ಟಿಟಿಯಾನಾ, ‘ಟಾಕ್ಸಿಕ್’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾದ್ದು ಎನ್ನಲಾದ ಟಿಟಿಯಾನಾ ಅವರ ಪೋಸ್ಟರ್ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟರ್ ಅನ್ನು ಅಧಿಕೃತವಾಗಿ ಕೆವಿಎನ್ ಬಿಡುಗಡೆ ಮಾಡಿಲ್ಲವಾದರೂ ಯಶ್ ಅವರ ಫ್ಯಾನ್ಸ್ ಪೇಜುಗಳಲ್ಲಿ, ‘ಟಾಕ್ಸಿಕ್’ ಸಿನಿಮಾದ ಪೇಜುಗಳಲ್ಲಿ ಹರಿದಾಡುತ್ತಿದೆ. ಪೋಸ್ಟರ್​​ನಲ್ಲಿ ಟಿಟಿಯಾನಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಟಿಟಿಯಾನಾ, ಯಶ್​​ ಅವರ ರಾಯ ಗ್ಯಾಂಗ್​​ನಲ್ಲಿರುವ ವ್ಯಕ್ತಿಯ ಪಾತ್ರದಲ್ಲಿ ಟಿಟಿಯಾನಾ ನಟಿಸಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದಾಗ, ಕಾರಿನಲ್ಲಿ ಯಶ್ ಪಾತ್ರದ ಜೊತೆಗಿದ್ದಿದ್ದು ಇದೇ ಟಿಟಿಯಾನಾ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಆ ನಟಿ ಬೇರೆ. ಟಿಟಿಯಾನಾ, ತಮ್ಮ ಇನ್​​ಸ್ಟಾಗ್ರಾಂ ಬಯೋನಲ್ಲಿ ಸಹ ‘ಟಾಕ್ಸಿಕ್’ ಸಿನಿಮಾದ ನಟಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ

ಅಮೆರಿಕದ ಖಾಸಗಿ ಶೂಟಿಂಗ್ ರೇಂಜ್​​ನಲ್ಲಿ ಅವರು ಟಾರ್ಗೆಟ್ ಶೂಟಿಂಗ್ ಮಾಡಿದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರ ಶೂಟಿಂಗ್​​ ಏರಿಯಾಕ್ಕೆ ಯಶ್ ಸೇರಿದಂತೆ ಹಲವು ಹಾಲಿವುಡ್​ ಸ್ಟಾರ್ ನಟ-ನಟಿಯರು ಭೇಟಿ ಕೊಟ್ಟು ಶೂಟಿಂಗ್ ಮಾಡಿದ್ದಾರೆ. ಒಳ್ಳೆಯ ಶೂಟರ್ ಆಗಿರುವ ಜೊತೆಗೆ ನೃತ್ಯಗಾರ್ತಿ ಮತ್ತು ಕುಂಫು ಪ್ರವೀಣೆ ಸಹ ಆಗಿದ್ದಾರೆ ಟಿಟಿಯಾನಾ.

ಟಿಟಿಯಾನಾ ಕೆಲವು ಹಾಲಿವುಡ್ ಸಿನಿಮಾ ಮತ್ತು ಟಿವಿ ಶೋಗಳಲ್ಲಿ ಸಹ ನಟಿಸಿದ್ದಾರೆ. ‘ರೆಸಿಡೆಂಟ್ ಇವಿಲ್’, ‘ಡೇ ಶಿಫ್ಟ್’, ‘ಗೆಟ್ ದಿ ಗರ್ಲ್’, ‘ಹಂಟರ್ಸ್’, ‘ಬೋಷ್:ಲೆಗಸಿ’ ಇನ್ನೂ ಕೆಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Nirav Modi: ಲಂಡನ್ ಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ ಜಯ, ನೀರವ್ ಮೋದಿಗೆ 100 ಕೋಟಿ ರೂ. ಪಾವತಿಸಲು ಆದೇಶ – Kannada News | UK Court Directs Nirav Modi to Settle Over Rs 100 Crore in Bank Guarantee Dispute

ಲಂಡನ್, ಜೂನ್ 24: ಕೋಟ್ಯಂತರ ರೂಪಾಯಿ ಬ್ಯಾಂಕ್ ಹಗರಣ ನಡೆಸಿ ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ(Nirav Modi)ಗೆ ಲಂಡನ್ ನ್ಯಾಯಾಲಯದಿಂದ ದೊಡ್ಡ ಆಘಾತ ಎದುರಾಗಿದೆ. ಬ್ಯಾಂಕ್ ಆಫ್ ಇಂಡಿಯಾ ದಾಖಲಿಸಿದ್ದ ಸಾಲ ವಸೂಲಾತಿ ಪ್ರಕರಣದಲ್ಲಿ ಬ್ಯಾಂಕ್ ಪರವಾಗಿ ತೀರ್ಪು ಬಂದಿದ್ದು, ನೀರವ್ ಮೋದಿ ಬ್ಯಾಂಕಿಗೆ ಬರೋಬ್ಬರಿ 10.7 ಮಿಲಿಯನ್ ಡಾಲರ್ (ಅಂದರೆ 100 ಕೋಟಿ ರೂಪಾಯಿಗೂ ಹೆಚ್ಚು) ಹಣವನ್ನು ಮರುಪಾವತಿಸಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಸ್ವಂತ ಇ-ಮೇಲ್‌ನಿಂದಲೇ ಸಿಕ್ಕಿಬಿದ್ದ ಕುತಂತ್ರಿ

ಈ ಪ್ರಕರಣದಲ್ಲಿ ನೀರವ್ ಮೋದಿ ತಾನೇ ಬರೆದಿದ್ದ ಹಳೆಯ ಇ-ಮೇಲ್‌ನಿಂದಾಗಿ ಕಾನೂನು ಬಲೆಗೆ ಸಿಲುಕಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ನೀರವ್ ಮೋದಿ, ಬ್ಯಾಂಕ್ ಸಾಲ ವಸೂಲಾತಿ ಮಾಡುವ ಮುನ್ನ ನನಗೆ ಯಾವುದೇ ಸರಿಯಾದ ನೋಟಿಸ್ ಅಥವಾ ಮಾಹಿತಿ ನೀಡಿಲ್ಲ, ಹಾಗಾಗಿ ನನ್ನ ಪರ್ಸನಲ್ ಗ್ಯಾರಂಟಿ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಾದಿಸಿದ್ದರು.

ಆದರೆ ನ್ಯಾ. ಸೈಮನ್ ಟಿಂಕ್ಲರ್ ಅವರು ಫೆಬ್ರವರಿ 17, 2018 ರಂದು ನೀರವ್ ಮೋದಿ ಅವರೇ ಬ್ಯಾಂಕಿಗೆ ಬರೆದಿದ್ದ ಇ-ಮೇಲ್ ಒಂದನ್ನು ಕೋರ್ಟ್‌ನಲ್ಲಿ ಪ್ರದರ್ಶಿಸಿ ಅವರ ಸುಳ್ಳನ್ನು ಬಯಲು ಮಾಡಿದರು. ಆ ಇ-ಮೇಲ್‌ನಲ್ಲಿ ನೀರವ್ ಮೋದಿ, ಪಿಎನ್‌ಬಿ ಹಗರಣದ ನಂತರ ನನ್ನ ಇಡೀ ವ್ಯವಹಾರ ತೀವ್ರ ತೊಂದರೆಯಲ್ಲಿದೆ.

ಮಾಧ್ಯಮಗಳ ಒತ್ತಡ ಹಾಗೂ ತನಿಖಾ ಸಂಸ್ಥೆಗಳ ದಾಳಿಯಿಂದಾಗಿ ನನ್ನ ಫೈರ್‌ಸ್ಟಾರ್ ಕಂಪನಿಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಹೀಗಾಗಿ ನಾನು ಬ್ಯಾಂಕ್ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ಬರೆದುಕೊಂಡಿದ್ದರು. ಈ ಮೂಲಕ ತನಗೆ ಪರಿಸ್ಥಿತಿಯ ಸಂಪೂರ್ಣ ಅರಿವಿತ್ತು ಎಂಬುದನ್ನು ಅವರ ಇ-ಮೇಲ್ ಸಾಬೀತುಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಮತ್ತಷ್ಟು ಓದಿ: ವಾಲ್ಮೀಕಿ ನಿಗಮದ ಹಣದಲ್ಲಿ ಬೆಂಝ್​ ಕಾರು, ಲೋಕಸಭಾ ಚುನಾವಣೆಗೆ 21 ಕೋಟಿ ರೂ.ಬಳಕೆ: ಇಡಿ ತನಿಖೆಯಲ್ಲಿ ಬಹಿರಂಗ

ಜುಲೈ 2012 ರಲ್ಲಿ, ಬ್ಯಾಂಕ್ ಆಫ್ ಇಂಡಿಯಾ ನೀರವ್ ಮೋದಿಯ ಫೈರ್‌ಸ್ಟಾರ್ ಗ್ರೂಪ್‌ನ ದುಬೈ ಮೂಲದ ಕಂಪನಿಗೆ ಭಾರಿ ಮೊತ್ತದ ಸಾಲ ನೀಡಿತ್ತು. ಆಗಸ್ಟ್ 2013 ರಲ್ಲಿ ನೀರವ್ ಮೋದಿ, ಒಂದು ವೇಳೆ ಕಂಪನಿ ಸಾಲ ತೀರಿಸದಿದ್ದರೆ ತನ್ನ ವೈಯಕ್ತಿಕ ಆಸ್ತಿಯಿಂದ ಸಾಲ ಮರುಪಾವತಿಸುವುದಾಗಿ ವೈಯಕ್ತಿಕ ಗ್ಯಾರಂಟಿ ದಾಖಲೆಗೆ ಸಹಿ ಹಾಕಿದ್ದರು. 2018 ರಲ್ಲಿ ಹಗರಣ ಬಯಲಾದಾಗ ಬ್ಯಾಂಕ್ ತನ್ನ ಹಣವನ್ನು ವಾಪಸ್ ಕೇಳಿತ್ತು.

ಭಾರತಕ್ಕೆ ಹಸ್ತಾಂತರಿಸುವುದನ್ನು ತಪ್ಪಿಸಲು ಸದ್ಯ ಲಂಡನ್ ಜೈಲಿನಲ್ಲಿರುವ ನೀರವ್ ಮೋದಿ, ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೂಡಿದ ಮೂರು ತಂತ್ರಗಳನ್ನು ನ್ಯಾಯಮೂರ್ತಿಗಳು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ನಾನು ಭಾರತದಲ್ಲಿ ಇರಲಿಲ್ಲ, ಹಾಗಾಗಿ ಏಪ್ರಿಲ್ 2018 ಮತ್ತು ಅಕ್ಟೋಬರ್ 2025 ರಲ್ಲಿ ಕಳುಹಿಸಲಾದ ಡಿಮ್ಯಾಂಡ್ ನೋಟಿಸ್‌ಗಳು ನನಗೆ ತಲುಪಿಲ್ಲ ಎಂದಿದ್ದರು. ಬ್ಯಾಂಕ್ ನೇರವಾಗಿ ನೀರವ್ ಮೋದಿ ಇರುವ ಲಂಡನ್‌ನ ‘ಥೇಮ್‌ಸೈಡ್ ಜೈಲಿ’ಗೇ ನೋಟಿಸ್‌ಗಳನ್ನು ತಲುಪಿಸಿದೆ, ಹೀಗಾಗಿ ಈ ನೆಪ ನಡೆಯುವುದಿಲ್ಲ.

ಪಿಎನ್‌ಬಿ ಹಗರಣದ ಬಳಿಕ ನೀರವ್ ಮೋದಿಯ ಇಡೀ ಕಂಪನಿಯ ಮೌಲ್ಯ ಶೂನ್ಯವಾಗಿದೆ. ಆದ್ದರಿಂದ ತನ್ನ ಹಣವನ್ನು ಭದ್ರಪಡಿಸಿಕೊಳ್ಳಲು ಬ್ಯಾಂಕ್ ಸಾಲ ಮರುಪಾವತಿಗೆ ಒತ್ತಾಯಿಸಿದ್ದು ನೂರಕ್ಕೆ ನೂರು ಸರಿ ಇದೆ ಎಂದು ಕೋರ್ಟ್​ ಹೇಳಿದೆ.

ನೀರವ್ ಮೋದಿ ಅವರು ತಮ್ಮ ವೈಯಕ್ತಿಕ ಖಾತರಿಯಡಿಯಲ್ಲಿ ಬ್ಯಾಂಕಿಗೆ ಅಸಲು ಮೊತ್ತ 4.1 ಮಿಲಿಯನ್ ಡಾಲರ್ (ಸುಮಾರು 38.9 ಕೋಟಿ ರೂ.) ಮತ್ತು ಅದರ ಮೇಲಿನ ಎಲ್ಲಾ ಬಡ್ಡಿಯನ್ನು (ಒಟ್ಟು 100 ಕೋಟಿ ರೂ. ಹೆಚ್ಚು) ತಕ್ಷಣವೇ ಮರುಪಾವತಿಸಲು ನೇರ ಹೊಣೆಗಾರರಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸೈಮನ್ ಟಿಂಕ್ಲರ್ ಅಂತಿಮ ಆದೇಶ ಪ್ರಕಟಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಜನಿಕಾಂತ್ 173ನೇ ಚಿತ್ರದ ಟೈಟಲ್ ರಿವೀಲ್; ರಕ್ತಸಿಕ್ತ ಚಾಕು ಹಿಡಿದು ಬಂದ ‘ಧರ್ಮನ್’ – Kannada News | Rajinikanth’s ‘Dharman’ Title and First Look Revealed: Thalaivar 173 Poster Trends

ಭಾರತೀಯ ಚಿತ್ರರಂಗದ ಖ್ಯಾತ ನಟ ಸೂಪರ್‌ಸ್ಟಾರ್ ರಜನಿಕಾಂತ್ 75ನೇ ವಯಸ್ಸಿನಲ್ಲೂ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ‘ತಲೈವರ್ 173’ ಸಿನುಮಾ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗ ಸಿನಿಮಾದ ಅಧಿಕೃತ ಶೀರ್ಷಿಕೆ ರಿವೀಲ್ ಆಗಿದೆ. ಈ ಚಿತ್ರಕ್ಕೆ ‘ಧರ್ಮನ್’ ಎಂದು ಹೆಸರಿಡಲಾಗಿದ್ದು, ಪೋಸ್ಟರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿದೆ.

ಬಿಡುಗಡೆ ಆಗಿರುವ ಮೊದಲ ಪೋಸ್ಟರ್‌ನಲ್ಲಿ ರಜನಿಕಾಂತ್ ಅವರು ನೀಲಿ ಬಣ್ಣದ ಡಾಕ್ಟರ್ ಸೂಟ್ ಧರಿಸಿ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ, ಕೈಯಲ್ಲಿ ರಕ್ತಸಿಕ್ತವಾಗಿರುವ ಸರ್ಜಿಕಲ್ ಕತ್ತಿ ಹಿಡಿದು ವಿಭಿನ್ನ ಹಾಗೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಆಪರೇಷನ್ ಥಿಯೇಟರ್‌ನ ಲೈಟ್‌ಗಳಿವೆ. ಒಡೆದು ಹೋದ ಗಾಜಿನ ಕಿಟಕಿಗಳು ಇವೆ. ಇದು ಆ್ಯಕ್ಷನ್ ಎಂಟರ್‌ಟೈನರ್ ಆಗಿರಲಿದೆ ಎಂಬುದಕ್ಕೆ ಪೋಸ್ಟರ್ ಸಾಕ್ಷಿ ನುಡಿಯುತ್ತಿದೆ.

ಇದನ್ನೂ ಓದಿ: ರಜನಿಕಾಂತ್ ಸ್ಟೈಲ್ ಕಾಪಿ ಮಾಡಲು ಹೋಗಿ ಹೀನಾಯ ಸೋಲು ಕಂಡಿದ್ದ ಆರ್. ಮಾಧವನ್

ಈ ಬಿಗ್ ಬಜೆಟ್ ಸಿನಿಮಾವನ್ನು ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ (RKFI) ಸಂಸ್ಥೆ ಅರ್ಪಿಸುತ್ತಿದ್ದು, ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ಅಶ್ವತ್ ಮಾರಿಮುತ್ತು ನಿರ್ದೇಶನವಿದ್ದು, ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಅವರ ಸಂಗೀತ ಹಾಗೂ ಅನ್ಬರಿವ್ ಅವರ ಸಾಹಸ ನಿರ್ದೇಶನವಿದೆ.

ರಜನಿಕಾಂತ್ ಅವರು ‘ಜೈಲರ್ 2’ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರ ಈ ವರ್ಷವೇ ತೆರೆಗೆ ಬರಲಿದೆ. ಇದಾದ ಬಳಿಕ ಅವರು ‘ಧರ್ಮನ್’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ರಜನಿಕಾಂತ್ ಅವರು ಶೀಘ್ರವೇ ಚಿತ್ರರಂಗಕ್ಕೆ ಗುಡ್​ಬೈ ಹೇಳಲಿದ್ದಾರೆ ಎಂಬ ವದಂತಿಯೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಜೈಲಿಗೆ ಹೋಗಲು ಸಿದ್ಧರಾಗಿ’: ಮತ್ತೊಮ್ಮೆ ಶುರುವಾಯ್ತು ಹೆಚ್​ಡಿಕೆ ವಿರುದ್ಧ ಪೋಸ್ಟರ್ ವಾರ್! – Kannada News | HD Kumaraswamy Poster War: Fresh Political Clash Erupts in Karnataka

ಬೆಂಗಳೂರು, ಜೂನ್ 24: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ಪೋಸ್ಟರ್ ಅಭಿಯಾನ ನಡೆಸಿದ್ದಾರೆ. ಬಿಡದಿ ಮತ್ತು ಬೈರಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪೋಸ್ಟರ್‌ಗಳನ್ನು ಹಾಕಲಾಗಿದೆ. ಈ ಪೋಸ್ಟರ್‌ಗಳಲ್ಲಿ ಹಲಗೆವಡೇರಹಳ್ಳಿ ಮತ್ತು ಕೇತಗಾನಹಳ್ಳಿ ಭೂ ಹಗರಣದಲ್ಲಿ ಭಾಗಿಯಾದ ಆರೋಪವನ್ನು ಮಾಡಲಾಗಿದ್ದು, “ಜೈಲಿಗೆ ಹೋಗಲು ಸಿದ್ಧರಾಗಿ” ಎಂಬ ಸಂದೇಶವನ್ನು ಪ್ರಮುಖವಾಗಿ ಪ್ರದರ್ಶಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬ್ರದರ್ ಕುಮಾರಸ್ವಾಮಿ ಎಂದು ಸಂಬೋಧಿಸುತ್ತಾ, ಪಂಚಾಯತಿಯಿಂದ ವಿಧಾನ ಪರಿಷತ್ ಚುನಾವಣೆಯವರೆಗೆ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಹೆಚ್.ಡಿ. ಕುಮಾರಸ್ವಾಮಿ ಎಂದು ಎಲ್ಲರಿಗೂ ಗೊತ್ತು ಎಂದೂ ಪೋಸ್ಟರ್‌ಗಳಲ್ಲಿ ಉಲ್ಲೇಖಿಸಲಾಗಿದೆ. ಪೋಸ್ಟರ್‌ಗಳಲ್ಲಿ ಹಾಸ್ಯ ಮಿಶ್ರಿತ ಸಂಭಾಷಣೆಯನ್ನೂ ಚಿತ್ರಿಸಲಾಗಿದೆ. ಈ ಪೋಸ್ಟರ್ ವಾರ್ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Source link

Exit mobile version