CSK vs SRH: ಸಿಎಸ್​ಕೆ ಪ್ಲೇಆಫ್‌ ಕನಸಿಗೆ ಕೊಳ್ಳಿ ಇಟ್ಟ ಸನ್‌ರೈಸರ್ಸ್ ಹೈದರಾಬಾದ್ – Kannada News | IPL 2026: SRH Beats CSK, Secures Playoff Spot; Gujarat Also Qualifies

ಐಪಿಎಲ್ 2026 ರ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯುವಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಯಶಸ್ವಿಯಾಗಿದೆ. ಸಿಎಸ್​ಕೆಯ ತವರು ನೆಲವಾದ ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಈ ಹೈವೋಲ್ಟೇಜ್ ಕದನಲ್ಲಿ ಸಿಎಸ್​ಕೆ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸಿದ ಸನ್‌ರೈಸರ್ಸ್ ಈ ಆವೃತ್ತಿಯಲ್ಲಿ 8ನೇ ಗೆಲುವು ದಾಖಲಿಸುವ ಮೂಲಕ 16 ಅಂಕಗಳೊಂದಿಗೆ ಪ್ಲೇಆಫ್​ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಸನ್‌ರೈಸರ್ಸ್ ವಿರುದ್ಧ ಸೋತ ಸಿಎಸ್​ಕೆ ಪ್ಲೇಆಫ್‌ ರೇಸ್​ನಿಂದ ಭಾಗಶಃ ಹೊರಬಿದ್ದಿದೆ. ಸನ್‌ರೈಸರ್ಸ್ ತಂಡದ ಗೆಲುವಿನೊಂದಿಗೆ ಗುಜರಾತ್ ಕೂಡ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​ಕೆ 180 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸುವ ಮೂಲಕ ಅಮೋಘ ಜಯ ದಾಖಲಿಸಿತು.

ಸಿಎಸ್​ಕೆ ತಂಡಕ್ಕೆ ಆರಂಭಿಕ ಆಘಾತ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​ಕೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅನುಭವಿ ಸಂಜು ಸ್ಯಾಮ್ಸನ್ 27 ರನ್​ಗಳಿಗೆ ಔಟಾದರೆ, ನಾಯಕ ರುತುರಾಜ್ ಗಾಯಕ್ವಾಡ್ ಗೆಲ್ಲಲೇಬೇಕಾದ ಪಂದ್ಯದಲ್ಲಿ 15 ರನ್​ಗಳಿಗೆ ಸುಸ್ತಾದರು. ಊರ್ವಿಲ್ ಪಟೇಲ್ ಇನ್ನಿಂಗ್ಸ್ ಕೂಡ 17 ರನ್​ಗಳಿಗೆ ಅಂತ್ಯವಾಯಿತು. ಈ ಮಧ್ಯದಲ್ಲಿ, ಕಾರ್ತಿಕ್ ಶರ್ಮಾ 32 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಡೆವಾಲ್ಡ್ ಬ್ರೆವಿಸ್ ಕೂಡ 44 ರನ್​ಗಳ ನಿರ್ಣಾಯಕ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 180 ರನ್‌ಗಳಿಗೆ ಕೊಂಡೊಯ್ದರು. ಇತ್ತ ಹೈದರಾಬಾದ್ ಪರ ನಾಯಕ ಪ್ಯಾಟ್ ಕಮ್ಮಿನ್ಸ್ ಗರಿಷ್ಠ ಮೂರು ವಿಕೆಟ್‌ಗಳನ್ನು ಪಡೆದರು.

ನಾಯಕನ ಇನ್ನಿಂಗ್ಸ್ ಆಡಿದ ಕಿಶನ್

ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್‌ಗೂ ಆಘಾತ ಎದುರಾಯಿತು. ಎರಡನೇ ಓವರ್‌ನಲ್ಲಿ ಟ್ರಾವಿಸ್ ಹೆಡ್ ಔಟ್ ಆದರು.ಆದರೆ ಆ ನಂತರ ಬಂದ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ನಿಧಾನವಾಗಿ ಜೊತೆಯಾಟ ಕಟ್ಟಿದರು. ಆದಾಗ್ಯೂ ಅಭಿಷೇಕ್ ಶರ್ಮಾ ಎಂಟನೇ ಓವರ್‌ನಲ್ಲಿ 26 ರನ್ ಬಾರಿಸಿ ಔಟಾದರು. ಆಗ ತಂಡದ ಮೊತ್ತ ಕೇವಲ 56 ರನ್ ಆಗಿತ್ತು.

ಕಿಶನ್- ಕ್ಲಾಸೆನ್ ಜೊತೆಯಾಟ

ಈ ವೇಳೆ ತಂಡಕ್ಕೆ ಆಸರೆಯಾದ ಹೆನ್ರಿಕ್ ಕ್ಲಾಸೆನ್ ನಾಯಕ ಇಶಾನ್ ಕಿಶನ್ ಜೊತೆ 75 ರನ್‌ಗಳ ಜೊತೆಯಾಟ ಕಟ್ಟಿದರು. 47 ರನ್ ಬಾರಿಸಿದ್ದ ಕ್ಲಾಸೆನ್ ಅವರ ವಿಕೆಟ್ ಪಡೆದ ನಂತರ ಚೆನ್ನೈ ತಂಡವು ಮತ್ತೆ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ ಇಶಾನ್ ಕಿಶಾನ್ ಅದ್ಭುತ ಅರ್ಧಶತಕದ ಜೊತೆಗೆ 70 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು 5 ವಿಕೆಟ್‌ಗಳ ಗೆಲುವಿನತ್ತ ಕೊಂಡೊಯ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ‘ಈ ವರ್ಷವೂ ಆರ್‌ಸಿಬಿಯದ್ದೇ ಟ್ರೋಫಿ’; ಭವಿಷ್ಯ ನುಡಿದ ಸೆಹ್ವಾಗ್ – Kannada News | RCB IPL 2026 Playoffs: Sehwag Predicts Champions, GT Major Challenge Ahead

ಹಾಲಿ ಚಾಂಪಿಯನ್ ಆರ್​ಸಿಬಿ 2026 ರ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಮೊದಲ ತಂಡವಾಗಿ ಪ್ಲೇಆಫ್‌ಗೇರಿದೆ. ಆರ್​ಸಿಬಿ ಕಳೆದ ಐಪಿಎಲ್​ನಂತೆ ಈ ಐಪಿಎಲ್​ನಲ್ಲೂ ಎಲ್ಲಾ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಆರ್​ಸಿಬಿಯ ಸಾಂಘಿಕ ಹೋರಾಟವನ್ನು ವೀಕ್ಷಿಸಿರುವ ಹಲವಾರು ಮಾಜಿ ಕ್ರಿಕೆಟಿಗರು ಈ ಬಾರಿಯೂ ಆರ್​ಸಿಬಿಯೇ ಚಾಂಪಿಯನ್ ಎನ್ನುತ್ತಿದ್ದಾರೆ. ಈ ರೀತಿಯಾಗಿ ಭವಿಷ್ಯ ನುಡಿದವರಲ್ಲಿ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರು.

ಆರ್‌ಸಿಬಿಯದ್ದೇ ಟ್ರೋಫಿ

ಕ್ರಿಕ್‌ಬಜ್‌ನಲ್ಲಿ ಆರ್​ಸಿಬಿ ತಂಡದ ಪ್ರದರ್ಶನದ ಕುರಿತು ಮಾತನಾಡಿದ ವೀರೇಂದ್ರ ಸೆಹ್ವಾಗ್, ‘ಚಾಂಪಿಯನ್ ತಂಡವು ಅಗ್ರ ಎರಡು ಸ್ಥಾನಗಳಲ್ಲಿ ಅರ್ಹತೆ ಪಡೆಯಬೇಕು. ಅದರಂತೆ ಆರ್​ಸಿಬಿ ಆಡುತ್ತಿರುವ ರೀತಿಯನ್ನು ನೋಡಿದರೆ, ಈ ವರ್ಷವೂ ಅವರೇ ಟ್ರೋಫಿಯನ್ನು ಎತ್ತಿಹಿಡಿಯುತ್ತಾರೆ ಎಂದು ತೋರುತ್ತದೆ’ ಎಂದಿದ್ದಾರೆ. ಆದಾಗ್ಯೂ, ಆರ್​ಸಿಬಿ ಎದುರಿಸುತ್ತಿರುವ ದೊಡ್ಡ ಸವಾಲನ್ನು ಸಹ ಉಲ್ಲೇಖಿಸಿರುವ ಸೆಹ್ವಾಗ್. ಟ್ರೋಫಿ ಗೆಲುವಿನಲ್ಲಿ ಆರ್‌ಸಿಬಿಗೆ ಕಠಿಣ ಹೋರಾಟ ನೀಡಬಲ್ಲ ತಂಡವೆಂದರೆ ಅದು ಗುಜರಾತ್ ಟೈಟಾನ್ಸ್.

ಒಂದು ವೇಳೆ ಗುಜರಾತ್ ತಂಡ ಕೂಡ ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದರೆ, ಆರ್‌ಸಿಬಿಗೆ ಅದು ಕಷ್ಟಕರವಾಗಿರುತ್ತದೆ. ಏಕೆಂದರೆ ಗುಜರಾತ್ ಟೈಟಾನ್ಸ್ ಕೂಡ ಉತ್ತಮ ಬೌಲಿಂಗ್ ಘಟಕವನ್ನು ಹೊಂದಿದೆ. ಈ ಎರಡೂ ತಂಡಗಳ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಬಲಿಷ್ಠವಾಗಿರುವುದರಿಂದ ಪ್ಲೇಆಫ್‌ನಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗುವುದನ್ನು ನೋಡಲು ಖುಷಿಯಾಗುತ್ತದೆ. ಉಭಯ ತಂಡಗಳ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ ಎಂದು ಸೆಹ್ವಾಗ್ ಎಚ್ಚರಿಸಿದ್ದಾರೆ.

ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡ

ಸೆಹ್ವಾಗ್ ನೀಡಿರುವ ಹೇಳಿಕೆಗೆ ಪೂರಕವಾಗಿ ಆರ್​ಸಿಬಿ ಕೂಡ ಚಾಂಪಿಯನ್ ತಂಡದಂತೆಯೇ ಪ್ರದರ್ಶನ ನೀಡುತ್ತಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 23 ರನ್‌ಗಳಿಂದ ಜಯಗಳಿಸಿದ ಆರ್​ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ಐಪಿಎಲ್ ತಂಡ ೆಎನಿಸಿಕೊಂಡಿದೆ. ಹಾಲಿ ಚಾಂಪಿಯನ್ ಆರ್​ಸಿಬಿ ಈ ಆವೃತ್ತಿಯಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿದ್ದು, ಒಂಬತ್ತು ಪಂದ್ಯಗಳನ್ನು ಗೆದ್ದು ನಾಲ್ಕರಲ್ಲಿ ಸೋತಿದ್ದು, ಒಟ್ಟು 18 ಅಂಕಗಳೊಂದಿಗೆ ಪ್ಲೇಆಫ್​ಗೆ ಅರ್ಹತೆ ಪಡೆದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು? – Kannada News | Kodagu: Dubare Elephant Camp Tragedy: Karnataka Forest Department Tightens Safety Measures

ಕೊಡಗು, ಮೇ 18: ದುಬಾರೆ ಆನೆ ಶಿಬಿರದಲ್ಲಿರುವ ಸಾಕಾನೆಗಳನ್ನ ನೋಡಲು ರಾಜ್ಯಮಾತ್ರವಲ್ಲ, ತಮಿಳುನಾಡು, ಕೇರಳದಿಂದಲೂ ಪ್ರವಾಸಿಗರು ಬರುತ್ತಾರೆ. ಹೀಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಇಂದು ಆನೆಗಳ ಕಾಳಗಕ್ಕೆ ಬಲಿ ಆಗಿದ್ದಾರೆ. ಚೆನ್ನೈ ಮೂಲದ ಜೋಯೆಲ್ ತನ್ನ ಪತ್ನಿ ತುಳಸಿ ಹಾಗೂ ಮೂರು ವರ್ಷದ ಮಗಳ ಜೊತೆ ಇಂದು ಬೆಳಗ್ಗೆ ದುಬಾರೆ ಶಿಬಿರಕ್ಕೆ ಬಂದಿದ್ದಾರೆ. ಈ ವೇಳೆ ಮಾರ್ತಾಂಡ ಆನೆ ಜತೆ ನಿಂತಿದ್ದ ದಂಪತಿ ಫೋಟೋ ತೆಗೆಸಿಕೊಳ್ತಿದ್ರು. ಆಗ ಮದವೇರಿದ ಕಂಜನ್ ಆನೆ ಅಲ್ಲಿಗೆ ಬಂದಿದೆ. ನೋಡ ನೋಡ್ತಿದ್ದಂತೆ ಮಾರ್ತಾಂಡ ಆನೆ ಮೇಲೆ ಕಂಜನ್‌ ದಾಳಿ ಮಾಡಿದೆ. ಏಕಾಏಕಿ ದಾಳಿ ಆಗ್ತಿದ್ದಂತೆ ಮಾರ್ತಾಂಡ ಆನೆ ದಂಪತಿ ಮೇಲೆ ಬಿದ್ದಿದೆ. ತಕ್ಷಣ ಪುತ್ರಿಯನ್ನ ಒಂದು ಕೈಯಲ್ಲಿ ಎತ್ತಿ ನೀರಿನಿಂದ ಮೇಲೆದ್ದ ಜೋಯೆಲ್‌, ಬಳಿಕ ಪತ್ನಿಯನ್ನ ಉಳಿಸಿಕೊಳ್ಳಲು ಯತ್ನಿಸಿದರು. ಆದರೆ ಸಾಧ್ಯವಾಗಿಲ್ಲ. ಅದಾಗಲೇ ಆನೆ ಕೆಳಗೆ ಬಿದ್ದಿದ್ದ ತುಳಸಿ ಮೃತಪಟ್ಟಿದ್ದರು. ಈ ದುರಂತದ ಬಳಿಕ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರವಾಸಿಗರನ್ನು ಆನೆಗಳ ಹತ್ತಿರ ಬಿಡುವ ಅಪಾಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಮೃತರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ. ಅರಣ್ಯ ಸಚಿವರು ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದು, ಇನ್ನು ಮುಂದೆ ಪ್ರವಾಸಿಗರು ಆನೆಗಳಿಂದ ಕನಿಷ್ಠ 100 ಅಡಿ ದೂರದಲ್ಲಿ ನಿಂತು ವೀಕ್ಷಿಸಬೇಕು ಎಂದು ಆದೇಶಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ? – Kannada News | This is what Darshan said when DGP Alok Kumar visits Parappana Agrahara Jail

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ದರ್ಶನ್ ಅವರು ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಇದ್ದಾರೆ. ಅಲ್ಲಿ ತಮಗೆ ಕೆಲವು ಸೌಕರ್ಯಗಳು ಸಿಗುತ್ತಿಲ್ಲ ಎಂದು ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ಸ್ವತಃ ದರ್ಶನ್ ಅವರ ಸೆಲ್​ಗೆ ಭೇಟಿ ನೀಡಿದಾಗ ಅವರು ತೊಂದರೆಗಳ ಬಗ್ಗೆ ಹೆಚ್ಚೇನೂ ಹೇಳಿಕೊಂಡಿರಲಿಲ್ಲ. ಆ ಬಗ್ಗೆ ಟಿವಿ9ಗೆ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ‘ಮೇ 15ರಂದು ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಸಮಸ್ಯೆ ಆಲಿಸಿದ್ದೇನೆ. ಕೆಲವು ದೂರುಗಳು ಇದ್ದವು. ಅದನ್ನೆಲ್ಲ ಪರಿಶೀಲನೆ ಮಾಡಿದೆ. ದರ್ಶನ್ (Darshan) ಇರುವ ಸೆಲ್​ಗೂ ಹೋಗಿದ್ದೆ. ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ಬೇಕು ಮತ್ತು ಫೋನ್ ಮಾಡಲು ಸಮಯ ಕೊಡಬೇಕು ಎಂಬುದನ್ನು ಬಿಟ್ಟರೆ ಬೇರೆ ಏನೂ ಸಮಸ್ಯೆ ಇಲ್ಲ ಎಂದು ಅವರು ಹೇಳಿದರು’ ಎಂದಿದ್ದಾರೆ ಅಲೋಕ್ ಕುಮಾರ್. ಜಾಮೀನು ಪಡೆಯಬೇಕು ಎಂಬ ನಿರೀಕ್ಷೆಯಲ್ಲಿದ್ದ ದರ್ಶನ್ ಅವರಿಗೆ ನಿರಾಸೆ ಆಗಿದೆ. ಸದ್ಯಕ್ಕೆ ಅವರ ಜೈಲುವಾಸ ಮುಂದುವರಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ: ಬಂದ ಆದಾಯದಲ್ಲಿ 85.20 ಕೋಟಿ ರೂ.ವೆಚ್ಚ – Kannada News | Top 11 temples in Karnataka Kukke Subrahmanya earn Rs 602 crore in 2025 26, up Rs 45 cr year after year

ಮಂಗಳೂರು, (ಮೇ 18): ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ (Kukke Subrahmanya temple). ನಾಗದೋಷಕ್ಕೆ ಪರಿಹಾರ ನೀಡುವ ಅತ್ಯಂತ ಪವರ್ ಫುಲ್ ಕ್ಷೇತ್ರ. ದಕ್ಷಿಣಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದ ಮೂಲೆ ಮೂಲೆಯಿಂದ ಭಕ್ತರು ಹರಿದು ಬರ್ತಾರೆ. ಈ ಪ್ರಸಿದ್ದ ಪುಣ್ಯಕ್ಷೇತ್ರ ಇದೀಗ ಮತ್ತೊಮ್ಮೆ ಆದಾಯದಲ್ಲಿ ಇತಿಹಾಸ ನಿರ್ಮಿಸಿದೆ. ಮುಜರಾಯಿ ಇಲಾಖೆಯ ಆಧೀನದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ 167 ಕೋಟಿ 89 ಲಕ್ಷ ರೂಪಾಯಿ ಆದಾಯ ಗಳಿಸಿದೆ. ಕಳೆದ ವರ್ಷ 155 ಕೋಟಿ ರೂಪಾಯಿ ಆದಾಯ ಗಳಿಸಿದ್ದ ದೇವಳ ಈ ಬಾರಿ ಸುಮಾರು 12 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ದಾಖಲಿಸಿದೆ. ಇದೇ ಮೊದಲ ಬಾರಿಗೆ 168 ಕೋಟಿಯ ಗಡಿಗೆ ಸಮೀಪಿಸಿದ ಕುಕ್ಕೆ ದೇವಸ್ಥಾನ ರಾಜ್ಯದ ನಂಬರ್ ಒನ್ ಶ್ರೀಮಂತ ದೇವಾಲಯ ಎಂಬ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

_ದೇವಳದ ಪ್ರಮುಖ ಆದಾಯ ಮೂಲವೇ ಹರಕೆ ಸೇವೆಗಳು. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳಿಂದಲೇ 64 ಕೋಟಿಗೂ ಅಧಿಕ ಆದಾಯ ಬಂದಿದೆ. ಕಾಣಿಕೆ ಹುಂಡಿಯಿಂದ 24 ಕೋಟಿ ರೂಪಾಯಿ, ಸಾಮಾನ್ಯ ಕಾಣಿಕೆಯಿಂದ 5 ಕೋಟಿ ರೂಪಾಯಿ, ಹೂಡಿಕೆ ಮೇಲಿನ ಬಡ್ಡಿಯಿಂದ ಸುಮಾರು 49 ಕೋಟಿ ಆದಾಯ ಬಂದಿದೆ. ಇದಷ್ಟೇ ಅಲ್ಲದೆ ಛತ್ರಗಳ ಬಾಡಿಗೆ, ಕಟ್ಟಡ ಮತ್ತು ಅಂಗಡಿಗಳ ಬಾಡಿಗೆ, ಕೃಷಿ ತೋಟದ ಉತ್ಪನ್ನ, ಅನ್ನಸಂತರ್ಪಣೆ ನಿಧಿ ಹೀಗೆ ಹಲವು ಮೂಲಗಳಿಂದ ದೇವಸ್ಥಾನಕ್ಕೆ ಕೋಟ್ಯಂತರ ರೂಪಾಯಿ ಹರಿದು ಬಂದಿದೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದಾಖಲೆಯ ಆದಾಯ, ಸತತ 15 ವರ್ಷಗಳ ಕಾಲ ನಂ.1

Source link

ಮಹಾರಾಷ್ಟ್ರದ ಪಲ್ಘಾರ್ ಹೆದ್ದಾರಿಯಲ್ಲಿ ಭೀಕರ ಅಪಘಾತ; 13 ಜನ ಸಾವು, ಸರ್ಕಾರದಿಂದ 5 ಲಕ್ಷ ಪರಿಹಾರ ಘೋಷಣೆ – Kannada News | 13 people died 20 injured in Maharashtras Palghar highway accident CM announces Rs 5 lakh aid

ಮುಂಬೈ, ಮೇ 18: ಮಹಾರಾಷ್ಟ್ರದ ಪಲ್ಘಾರ್‌ನಲ್ಲಿ ಇಂದು ಭೀಕರ ಅಪಘಾತ (Accident) ಸಂಭವಿಸಿದೆ. ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಮದುವೆಗೆ ಹೋಗುತ್ತಿದ್ದ ಮತ್ತೊಂದು ಸಣ್ಣ ಟ್ರಕ್‌ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ 13 ಜನರು ಸಾವನ್ನಪ್ಪಿದ್ದಾರೆ. ಕಾಸಾದ ಪ್ರದೇಶ ಪೊಲೀಸರ ಪ್ರಕಾರ, 40ಕ್ಕೂ ಹೆಚ್ಚು ಜನರು ಈ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದರು.

ಇಂದು ಬೆಳಿಗ್ಗೆ 4 ಗಂಟೆಗೆ ಕಂಟೇನರ್ ಅಪಘಾತ ಸಂಭವಿಸಿ, ಟ್ರಕ್ ನಜ್ಜುಗುಜ್ಜಾಗಿದೆ. ಎರಡೂ ವಾಹನಗಳು ಪಲ್ಟಿಯಾದ ಕಾರಣದಿಂದ ಅನೇಕ ಪ್ರಯಾಣಿಕರು ಅಡಿಗೆ ಸಿಲುಕಿಕೊಂಡರು. ಈ ಘಟನೆಯ ನಂತರ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿದರು. ಸುಮಾರು 25 ಜನರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಐಚರ್ ಟೆಂಪೋ ಸುಮಾರು 30ರಿಂದ 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಅವರು ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಸಂಜೆ 4 ಗಂಟೆ ಸುಮಾರಿಗೆ ಟೆಂಪೋ ಮುಂಬೈ-ಗುಜರಾತ್ ಮಾರ್ಗದಲ್ಲಿ ಚಲಿಸುತ್ತಿದ್ದಾಗ ಟ್ರಕ್ ಟೆಂಪೋದ ಎಡಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಎಸಿ ಹಾಕೊಂಡು ಮಗಿದ್ದಲ್ಲೇ ವ್ಯಕ್ತಿ ಸಾವು; ಅಪಘಾತದಲ್ಲಿ ತಾಯಿ-ಮಗಳು ದುರ್ಮರಣ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ. ಗಾಯಗೊಂಡವರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಸೂಚನೆಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ? ಪರಮೇಶ್ವರ್ ಹೇಳಿದ್ದಿಷ್ಟು – Kannada News | Tumakur: Will Congress Sadhana Samavesh Enter the Guinness Book of Records Here’s What G. Parameshwara Said

ತುಮಕೂರು, ಮೇ 18: ಕಾಂಗ್ರೆಸ್ ಸರ್ಕಾರದ 3ನೇ ವರ್ಷದ ಸಾಧನಾ ಸಮಾವೇಶವು ಮೇ 19 ಬೆಳಗ್ಗೆ 11 ಗಂಟೆಗೆ ತುಮಕೂರಿನ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿರುವುದು ಹಾಗೂ ರಾಜ್ಯದಲ್ಲಿ 13.5 ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಿರುವುದು ಸರ್ಕಾರದ ಪ್ರಮುಖ ಸಾಧನೆ ಎಂದು ತಿಳಿಸಿದರು. ತುಮಕೂರು ಜಿಲ್ಲೆಯೊಂದರಲ್ಲೇ 1,52,492 ಜನರಿಗೆ ಹಕ್ಕುಪತ್ರ ನೀಡಲಾಗಿದ್ದು, ಆ ಮೂಲಕ ತುಮಕೂರು ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಸಾಧನೆಯು ಗಿನ್ನಿಸ್ ದಾಖಲೆಗೆ ಸೇರಿದೆ. ಹೀಗಾಗಿ ಪ್ರಮಾಣಪತ್ರ ನೀಡಲು ಗಿನ್ನಿಸ್ ಸಂಸ್ಥೆಯರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ದುಬಾರೆಯಲ್ಲಿ ಆನೆಗಳ ಕಾದಾಟದಲ್ಲಿ ಮಹಿಳೆ ಸಾವು ಬೆನ್ನಲ್ಲೇ ಪ್ರವಾಸಿಗರಿಗೆ ಮಾರ್ಗಸೂಚಿ ಪ್ರಕಟ – Kannada News | Karnataka Forest Department New Guidelines for Tourists after Dubare Camp Tragedy

ಬೆಂಗಳೂರು, (ಮೇ 18): ಕೊಡಗಿನ (Kodagu) ಪ್ರವಾಸಿ ತಾಣ ದುಬಾರಿ ಆನೆ ಶಿಬಿರದಲ್ಲಿ ಆನೆಗಳ (elephants) ಕಾದಾಟದಲ್ಲಿ ಪ್ರವಾಸಿ ಮಹಿಳೆ (Tourist Woman) ಸಿಲುಕಿ ಸಾವನ್ನಪ್ಪಿದ್ದಾಳೆ. ಈ ಆಘಾತಕಾರಿ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡು ಅರಣ್ಯ ಇಲಾಖೆ, ಇನ್ಮುಂದೆ ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಹೌದು…ಕರ್ನಾಟಕದಲ್ಲಿರುವ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ರೂಪಿಸುವಂತೆ ಮತ್ತು 100 ಅಡಿ ದೂರದಲ್ಲಿ ನಿಂತು ಆನೆಗಳ ಸ್ನಾನ ವೀಕ್ಷಿಸಲು ಅವಕಾಶ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ಆದೇಶಿಸಿದ್ದಾರೆ.

  • ದುಬಾರೆ ಶಿಬಿರದಲ್ಲಿ ಆನೆಗಳ ಕಾದಾಟದಲ್ಲಿ ಪ್ರವಾಸಿ ಮಹಿಳೆ ಸಾವು
  • ಈ ಪ್ರಕರಣ ಬೆನ್ನಲ್ಲೇ ಪ್ರವಾಸಿಗರಿಗೆ ಹೊಸ ಮಾರ್ಗಸೂಚಿ ಪ್ರಕಟ
  • ವನ್ಯಜೀವಿಗಳನ್ನು 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ
  • ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಮಹತ್ವದ ಆದೇಶ

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಸಂಬಂಧ ಸೂಚನೆ ನೀಡಿರುವ ಈಶ್ವರ್ ಖಂಡ್ರೆ, ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಆನೆಗಳ ನಡುವೆ ನಡೆದ ಕಾದಾಟದ ವೇಳೆ ಮಹಿಳೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯ ಎಂದಿದ್ದಾರೆ.

ಇದನ್ನೂ ಓದಿ: ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು

ಪರಿಸರ ಪ್ರವಾಸೋದ್ಯಮದ ಚಾರಣಪಥಗಳಲ್ಲಿ ಚಾರಣಿಗರ/ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರಮಾಣಿತ ಕಾರ್ಯಾಚರಣೆ ವಿಧಾನ ರೂಪಿಸಲಾಗಿದ್ದು, ಈ ಎಸ್‌ಒಪಿ ಜಾರಿ ಖಚಿತಪಡಿಸಿಕೊಳ್ಳುವವರೆಗೆ ಚಾರಣಪಥಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಈಗಾಗಲೇ ಸೂಚಿಸಲಾಗಿದೆ. ಅದೇ ಪ್ರಕಾರವಾಗಿ ಸಾಕಾನೆ ಶಿಬಿರಗಳಿಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಎಸ್‌ಒಪಿ ರೂಪಿಸಲು ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿರುವ ಎಲ್ಲ ಸಾಕಾನೆ ಶಿಬಿರದಲ್ಲಿ ನಾಳೆಯಿಂದಲೇ (ಮೇ 18) ಪ್ರವಾಸಿಗರು ಆನೆಯ ಬಳಿ ಹೋಗದಂತೆ, ಕನಿಷ್ಠ 100 ಅಡಿ ದೂರದಲ್ಲಿ ನಿಂತು ಆನೆ ಮೈತೊಳೆಯುವುದನ್ನು ವೀಕ್ಷಿಸುವಂತೆ ಮತ್ತು ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳಲು, ಮೈತೊಳೆಯಲು ಅವಕಾಶ ನೀಡದಂತೆ ಮತ್ತು ಬಾಳೆಹಣ್ಣು, ಬೆಲ್ಲ, ಕಬ್ಬು ಇತ್ಯಾದಿ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ತಿನ್ನಸದಂತೆ ಆದೇಶ ಹೊರಡಿಸಲು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:58 pm, Mon, 18 May 26

Source link

IPL 2026: ಒಂದೇ ಒಂದು ಕ್ಯಾಚ್ ಹಿಡಿದಿಲ್ಲ; ವೈಭವ್ ಫೀಲ್ಡಿಂಗ್ ಬಗ್ಗೆ ಕೈಫ್ ಕಳವಳ – Kannada News | Vaibhav Suryavanshi’s IPL 2026 Dilemma: Batting Brilliance vs. Fielding Woes – Kaif Questions RR Star

ಐಪಿಎಲ್ 2026 (IPL 2026) ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಬ್ಯಾಟಿಂಗ್‌ ಬೆನ್ನೆಲುಬಾಗಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ನಿರಂತರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ವೈಭವ್ ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ರಾಜಸ್ಥಾನ್ ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ವೈಭವ್ ಅವರ ಫೀಲ್ಡಿಂಗ್‌ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರಶ್ನೆಗಳನ್ನು ಎತ್ತಿದ್ದಾರೆ. ವಾಸ್ತವವಾಗಿ ಸೀಸನ್ ಆರಂಭದಲ್ಲಿ ವೈಭವ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಲಾಗುತ್ತಿತ್ತು. ಆದರೆ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡಿದ್ದ ವೈಭವ್ ಅವರ ಕಳಪೆ ಫೀಲ್ಡಿಂಗ್‌ ಬಗ್ಗೆ ಕೈಫ್ ಪ್ರಶ್ನೆಗಳನ್ನು ಎತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ಫೀಲ್ಡಿಂಗ್ ಬಗ್ಗೆ ನಿರಾಶೆ ವ್ಯಕ್ತಪಡಿಸಿ ಮೊಹಮ್ಮದ್ ಕೈಫ್ ಮಾಜಿ ಪೋಸ್ಟ್ ಮಾಡಿದ್ದು, ‘ಐಪಿಎಲ್ ಉದ್ದಕ್ಕೂ ವೈಭವ್ ಒಂದೇ ಒಂದು ಕ್ಯಾಚ್ ಹಿಡಿದಿಲ್ಲ ಎಂದು ಅವರು ತಮ್ಮ ಪೋಸ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ವೈಭವ್ ಒಂದೇ ಒಂದು ಕ್ಯಾಚ್ ತೆಗೆದುಕೊಂಡಿಲ್ಲ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ವೈಭವ್ ಅವರನ್ನು ಕ್ಯಾಚಿಂಗ್ ಸ್ಥಾನದಲ್ಲಿ ನಿಯೋಜಿಸಲಾಗಿಲ್ಲ ಎಂದಿದ್ದಾರೆ.

ಕೈಫ್ ಪೋಸ್ಟ್​ನಲ್ಲಿ ಏನಿದೆ?

“ಪ್ರಸ್ತುತ ಐಪಿಎಲ್‌ನಲ್ಲಿ ಫೀಲ್ಡಿಂಗ್ ಮಟ್ಟವನ್ನು ನೋಡುವುದು ನೋವಿನ ಸಂಗತಿ” ಎಂದಿರುವ ಕೈಫ್, ಭಾನುವಾರದ ಪಂದ್ಯದಲ್ಲಿ ಯಶ್‌ರಾಜ್, ಕೆಎಲ್ ರಾಹುಲ್ ಸೊನ್ನೆಗ ನೀಡಿದ ಕ್ಯಾಚ್ ಅನ್ನು ಕೈಬಿಟ್ಟರು. ಇತ್ತ ವೈಭವ್ ಸೂರ್ಯವಂಶಿ ಕೂಡ ಕಳಪೆ ಫೀಲ್ಡಿಂಗ್ ಮಾಡಿದರು. ವೈಭವ್ ಈ ಆವೃತ್ತಿಯಲ್ಲಿ ಒಂದೇ ಒಂದು ಕ್ಯಾಚ್ ತೆಗೆದುಕೊಂಡಿಲ್ಲ. ಅವರು ಭಾರತದ ಪರ ಆಡಲು ಬಯಸಿದರೆ, ಅವರು ಫೀಲ್ಡಿಂಗ್‌ನಲ್ಲಿ ಹೆಚ್ಚು ಚುರುಕಾಗಿರಬೇಕು. ಯುವಕರಿಗೆ ಫೀಲ್ಡಿಂಗ್ ಕೌಶಲ್ಯಗಳನ್ನು ಕಲಿಸುವುದು ತಂಡದ ತರಬೇತುದಾರರ ಕರ್ತವ್ಯ. ಯುವಕರು ಫೀಲ್ಡಿಂಗ್ ಅನ್ನು ಆನಂದಿಸಬೇಕು ಎಂದಿದ್ದಾರೆ.

153 ಕ್ಯಾಚ್‌ ಡ್ರಾಪ್

ಮೊಹಮ್ಮದ್ ಕೈಫ್ ಕಳವಳಕ್ಕೆ ಕಾರಣವೂ ಇದ್ದು, ಅಂಕಿಅಂಶಗಳ ಪ್ರಕಾರ ಐಪಿಎಲ್ 2026 ರಲ್ಲಿ ಇದುವರೆಗೆ 153 ಕ್ಯಾಚ್‌ಗಳನ್ನು ಕೈಬಿಡಲಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಈ ವಿಷಯದಲ್ಲಿ ಅಗ್ರಸ್ಥಾನದಲ್ಲಿವೆ. ಕೆಲವು ತಂಡಗಳು ಪ್ರಮುಖ ಆಟಗಾರರ ಕ್ಯಾಚ್ ಕೈಚೆಲ್ಲಿದ ಪರಿಣಾಮವಾಗಿ ಪಂದ್ಯವನ್ನು ಸೋತಿವೆ. ಹೀಗಾಗಿ ಈ ಬಗ್ಗೆ ಅನೇಕ ಮಾಜಿ ಆಟಗಾರರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಏಷ್ಯಾ ಉದ್ವಿಗ್ನತೆಯ ನಡುವೆ ಸೌದಿ ಅರೇಬಿಯಾಕ್ಕೆ 16 ಜೆಟ್, 8,000 ಸೈನಿಕರನ್ನು ಕಳುಹಿಸಿದ ಪಾಕಿಸ್ತಾನ – Kannada News | Pakistan Sends 8,000 Troops, 16 Jets To Saudi arabia Amid West Asia war

ಇಸ್ಲಮಾಬಾದ್, ಮೇ 18: ಇರಾನ್ ಯುದ್ಧದಲ್ಲಿ (Iran War) ಸೌದಿ ಅರೇಬಿಯಾವನ್ನು ರಕ್ಷಿಸಲು ಪಾಕಿಸ್ತಾನ ತನ್ನ ಬೃಹತ್ ಪಡೆಗಳನ್ನು ನಿಯೋಜಿಸಿದೆ. ರಿಯಾದ್ ಜೊತೆಗಿನ ರಕ್ಷಣಾ ಒಪ್ಪಂದದಡಿಯಲ್ಲಿ ಪಾಕಿಸ್ತಾನವು (Pakistan) 16 ಯುದ್ಧ ವಿಮಾನಗಳು, ಒಂದು ರಕ್ಷಣಾ ವ್ಯವಸ್ಥೆ, 50 ಡ್ರೋನ್‌ಗಳು ಮತ್ತು 8,000 ಸೈನಿಕರನ್ನು ಸೌದಿ ಅರೇಬಿಯಾಕ್ಕೆ ನಿಯೋಜಿಸಿದೆ. ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇರಾನಿನ ದಾಳಿಯಿಂದ ರಕ್ಷಿಸಿಕೊಳ್ಳಲು ಪಾಕಿಸ್ತಾನ ಸೌದಿ ಅರೇಬಿಯಾಕ್ಕೆ 8,000 ಸೈನಿಕರನ್ನು ನಿಯೋಜಿಸಿದೆ. ಸೌದಿ ಅರೇಬಿಯಾ ಪ್ರಸ್ತುತ ಯುಎಇಯಲ್ಲಿ 16 ಫೈಟರ್ ಜೆಟ್‌ಗಳನ್ನು ನಿಯೋಜಿಸಿದೆ. ಈ ಜೆಟ್‌ಗಳಲ್ಲಿ ಹೆಚ್ಚಿನವು ಚೀನಾದಲ್ಲಿ ತಯಾರಾದ ಜೆಎಫ್ -17 ಗಳಾಗಿವೆ. ಸುಮಾರು 50 ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿದೆ.

ಇದನ್ನೂ ಓದಿ: ಅಮೆರಿಕವನ್ನು ನಂಬುವುದಿಲ್ಲ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಭಾರತಕ್ಕೆ ಸಾಧ್ಯ; ಇರಾನ್​ ವಿದೇಶಾಂಗ ಸಚಿವ ಅರಘ್ಚಿ

ಮೂಲಗಳ ಪ್ರಕಾರ, ಪಾಕಿಸ್ತಾನಿ ತುಕಡಿಯು ಸುಮಾರು 16 ಫೈಟರ್ ಜೆಟ್‌ಗಳನ್ನು ಒಳಗೊಂಡಿದೆ. ಚೀನಾದೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾದ ಜೆಎಫ್ -17 ಫೈಟರ್‌ಗಳನ್ನು ಈ ವರ್ಷದ ಆರಂಭದಲ್ಲಿ ಸೌದಿ ಅರೇಬಿಯಾಕ್ಕೆ ಕಳುಹಿಸಲಾಗಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಕೆಲವು ದಿನಗಳ ಹಿಂದೆ ಹೇಳಿಕೆಯೊಂದರಲ್ಲಿ, ಸೌದಿ ಅರೇಬಿಯಾದ ಭದ್ರತೆಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದರು. ಪಾಕಿಸ್ತಾನವು 2025ರಲ್ಲಿ ಸೌದಿ ಅರೇಬಿಯಾದೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದದಡಿ ಪಾಕಿಸ್ತಾನವು ಸೌದಿ ಅರೇಬಿಯಾಕ್ಕೆ ಭದ್ರತೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!

ಇನ್ನೊಂದೆಡೆ, ಇರಾನ್‌ಗೆ ಹತ್ತಿರ ಎಂದು ಹೇಳಿಕೊಳ್ಳುವ ಪಾಕಿಸ್ತಾನ, ಪರಮಾಣು ಒಪ್ಪಂದ ಪ್ರಕ್ರಿಯೆಯಲ್ಲಿ ಅಧಿಕೃತ ಸಂದೇಶವಾಹಕನಾಗಿದೆ. ಇತ್ತೀಚೆಗೆ, ಅದು ಇರಾನ್‌ನೊಂದಿಗೆ ಎರಡು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ. ಇದಲ್ಲದೆ, ಇರಾನ್ ತನ್ನ ಹಲವಾರು ತೈಲ ಮತ್ತು ಅನಿಲ ಹಡಗುಗಳನ್ನು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಿದೆ. ಆದರೂ ಪಾಕಿಸ್ತಾನ ಸೌದಿ ಅರೇಬಿಯಾಕ್ಕೆ ಮಿಲಿಟರಿ ಪಡೆಯನ್ನು ಕಳುಹಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಳೆದ ಯುದ್ಧದ ಸಮಯದಲ್ಲಿ ಇರಾನ್ ಸೌದಿ ಅರೇಬಿಯಾದ ಮೇಲೆ ಭಾರಿ ದಾಳಿ ನಡೆಸಿತು. ಸೌದಿ ಅರೇಬಿಯಾ ಕೆಲವು ಇರಾನಿನ ನೆಲೆಗಳ ಮೇಲೆಯೂ ದಾಳಿ ಮಾಡಿತು. ಇದಲ್ಲದೆ, ಸೌದಿ ಅರೇಬಿಯಾ ಎರಡು ಇರಾನಿನ ಪ್ರಾಕ್ಸಿ ಸಂಘಟನೆಗಳಾದ ಕಟೈಬ್ ಹೆಜ್ಬೊಲ್ಲಾ ಮತ್ತು ಹೌತಿ ಬಂಡುಕೋರರ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version