ಸಂಭ್ರಮಾಚರಣೆ ವೇಳೆ ಹೃದಯಾಘಾತ: ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು – Kannada News | Thouseef Giraganvi, Kolhar Member, Dies from Heart Attack at Cricket Final Celebration

ವಿಜಯಪುರ, ಮೇ.13: ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದ ಸಂಭ್ರಮದ ನಡುವೆಯೇ ಕರಾಳ ಘಟನೆಯೊಂದು ಸಂಭವಿಸಿದೆ. ಗೆಲುವಿನ ಉತ್ತುಂಗದಲ್ಲಿದ್ದಾಗ ಪಟ್ಟಣ ಪಂಚಾಯತ್ ಸದಸ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೊಲ್ಹಾರ ಪಟ್ಟಣ ಪಂಚಾಯತ್‌ನ 16ನೇ ವಾರ್ಡ್ ಸದಸ್ಯರಾದ ತೌಸೀಪ್ ಗಿರಗಾಂವಿ ಅವರು ಮೃತಪಟ್ಟ ದುರ್ದೈವಿ. ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕೆಪಿಎಲ್ (KPL) ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ತೌಸೀಪ್ ವೀಕ್ಷಿಸುತ್ತಿದ್ದರು. ಆಟದ ಅಂತ್ಯದಲ್ಲಿ ತಮ್ಮ ನೆಚ್ಚಿನ ತಂಡ ಜಯಗಳಿಸುತ್ತಿದ್ದಂತೆ ಮೈದಾನಕ್ಕಿಳಿದು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಯುವ ಸದಸ್ಯರ ಅಕಾಲಿಕ ನಿಧನದಿಂದಾಗಿ ಕೊಲ್ಹಾರ ಪಟ್ಟಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕ್ರೀಡೆಯ ಸಂಭ್ರಮವು ಕ್ಷಣಾರ್ಧದಲ್ಲಿ ಮೌನಕ್ಕೆ ತಿರುಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಹಿತಿ ಲಭ್ಯವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಊರು ಬದಲಾಯಿಸುವುದು ಸುಲಭದ ಕೆಲಸವಲ್ಲ; ಬೆಂಗಳೂರಿಗೆ ಸ್ಥಳಾಂತರಗೊಳ್ಳುವಾಗ ದಂಪತಿ ಹೀಗೆಂದಿದ್ದೇಕೆ? – Kannada News | Couple shares emotional experience of moving from Gurgaon to Bengaluru

ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ (Bengaluru) ಬರುವವರು ಅದೆಷ್ಟೋ. ಹೀಗೆ ಬಂದವರಿಗೆ ಈ ನಗರದ ವಾತಾವರಣ ಹೊಸತು. ಹುಟ್ಟಿ ಬೆಳೆದ ಊರು ಅಥವಾ ಇಷ್ಟು ಕಾಲ ಇದ್ದ ಊರನ್ನು ಬಿಟ್ಟು ಬರೋದು ಹೇಳಿದ್ದಷ್ಟು ಸುಲಭವಲ್ಲ, ಖಾಲಿತನ ಕಾಡೋದಿದೆ. ಇದೀಗ ಈ ದಂಪತಿಗೂ ಅದೇ ರೀತಿ ಆಗಿದೆ. ಗುರಗಾಂವ್‌ನಿಂದ (Gurgaon) ಬೆಂಗಳೂರಿಗೆ ಸ್ಥಳಾಂತರಗೊಳ್ಳುವಾಗ ಅನುಭವಿಸಿದ ಭಾವನಾತ್ಮಕ ಹೋರಾಟವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಧೈರ್ಯ ತುಂಬಿದ್ದಾರೆ.

ಶುಭಂ ಎಂಬುವವರು @lifeworklullaby ಹೆಸರಿನ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ತಾವು ಅನುಭವಿಸಿದ ಕಷ್ಟವನ್ನು ಹೇಳಿಕೊಂಡಿದ್ದಾರೆ. ಜೀವನವು ತುಂಬಾ ವಿಚಿತ್ರವಾಗಿದೆ, ಅಲ್ಲವೇ? ನಾವು ಗುರಗಾಂವ್‌ನಲ್ಲಿ ಇದ್ದಾಗ ಬೆಂಗಳೂರಿಗೆ ಹೋಗಬೇಕಾಯಿತು. ನಾವು ದೆಹಲಿಯಿಂದ ಗುರಗಾಂವ್‌ಗೆ ಸ್ಥಳಾಂತರಗೊಂಡಾಗ ಇಷ್ಟ ಪಟ್ಟು ಮನೆ ಬಾಡಿಗೆ ಪಡೆದುಕೊಂಡಿದ್ದೆವು. ಆದರೀಗ ಕೇವಲ ಏಳು ತಿಂಗಳ ನಂತರ ನಾವು ಮನೆ ಖಾಲಿ ಮಾಡಬೇಕಾಗಿದೆ. ಹೃದಯವೇ ಭಾರವಾಗಿದೆ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದು ಕೇವಲ ಬಾಡಿಗೆ ಅಪಾರ್ಟ್ಮೆಂಟ್ ಆಗಿರಲಿಲ್ಲ. ನಾವು ನಮ್ಮ ಕಂಟೆಂಟ್‌ ಕ್ರಿಯೇಟಿಂಗ್‌ ಜರ್ನಿ ಪ್ರಾರಂಭಿಸಿದ್ದು, ಸ್ವತಂತ್ರವಾಗಿ ಬದುಕಲು ಕಲಿತಿದ್ದು ಮತ್ತು ವೇದಾ ಜೊತೆಗೆ ನಮ್ಮ ವೃತ್ತಿಜೀವನವನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಕಲಿತಿದ್ದು ಇಲ್ಲಿಯೇ. ನಾವು ಈಗ ಬೆಂಗಳೂರಿನಲ್ಲಿ ಮತ್ತೆ ಅದೇ ಕೆಲಸವನ್ನು ಮಾಡಬೇಕಾಗಿದೆ. ನನ್ನನ್ನು ನಂಬಿ, ಬೆಂಗಳೂರಿನಲ್ಲಿ ಮನೆ ಹುಡುಕುವುದು ಇನ್ನೊಂದು ರೀತಿಯ ಸಾಹಸ. ಆದರೆ ಅಲ್ಲಿ ಹಲವು ಆಯ್ಕೆಗಳಿವೆ, ಬಾಡಿಗೆ ಮಾತ್ರ ಗಗನಕ್ಕೇರುತ್ತಿದೆ. ನಿಮ್ಮ ಬಜೆಟ್‌ನಲ್ಲಿ ಉತ್ತಮ ಮನೆ ಹುಡುಕುವುದು ಅಸಾಧ್ಯವಾಗುತ್ತದೆ. ಆದರೆ ನಾವು ಆ ಕೆಲಸವನ್ನು ಇಷ್ಟಪಡುತ್ತೇವೆ ಎಂದು ಹೇಳಿದ್ದಾರೆ.

ನಾವು ಮೂವರ್ಸ್ ಮತ್ತು ಪ್ಯಾಕರ್ಸ್ ಸೇವೆಯನ್ನು ಬಳಸಿದ್ದು ಇದೇ ಮೊದಲು. ಅರ್ಧಕ್ಕಿಂತ ಹೆಚ್ಚು ಕೆಲಸವನ್ನು ತಾವೇ ವಹಿಸಿಕೊಂಡರು. ನಾವು ಏನನ್ನೂ ಮಾಡಬೇಕಾಗಿಲ್ಲ. ನಾವು ಅವರಿಗೆ ಮಾರ್ಗದರ್ಶನ ನೀಡಿದ್ದೇವೆ. ಇನ್ನು ಊರನ್ನು ಬದಲಾಯಿಸುವುದು ಸುಲಭದ ಕೆಲಸವಲ್ಲ. ನೀವು ಮಗುವಿನೊಂದಿಗೆ ಎಲ್ಲವನ್ನೂ ಮಾಡಬೇಕಾದಾಗ, ಅದು ಇನ್ನಷ್ಟು ಕಷ್ಟಕರವಾಗಿರುತ್ತದೆ ಎಂದು ವಾಸ್ತವ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಬಲು ದುಬಾರಿ; 1.3 ಲಕ್ಷ ರೂ ತಿಂಗಳ ಖರ್ಚು ಎಂದ ದಂಪತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮಗುವಿನೊಂದಿಗೆ ಗುರಗಾಂವ್‌ನಿಂದ ಬೆಂಗಳೂರಿಗೆ ಹೋಗುವುದು ಸುಲಭವಲ್ಲ, ನಿಮಗೆ ಶಕ್ತಿ ಸಿಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಬೆಂಗಳೂರು ಹೆಚ್ಚುತ್ತಿರುವ ಬಾಡಿಗೆಯೊಂದಿಗೆ ಮನೆ ಹುಡುಕಾಟವು ನಿಜವಾಗಿಯೂ ಒಂದು ಸವಾಲು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬೆಂಗಳೂರಿನಲ್ಲಿ ನಿಮ್ಮ ಹೊಸ ಅಧ್ಯಾಯಕ್ಕೆ ಶುಭವಾಗಲಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿ ರೊಟ್ಟಿಗೆ ಈಗ ಗ್ಲೋಬಲ್ ಟಚ್: ಅಮೆರಿಕ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗೆ ರೊಟ್ಟಿ ರಫ್ತು! – Kannada News | Rural Women Empowered: Kalaburagi Rotti Export Takes Indian Cuisine Worldwide

ಕಲಬುರಗಿ, ಮೇ.13: ಜಿಲ್ಲೆಯ ವಿಶಿಷ್ಟ ಆಹಾರ ಸಂಸ್ಕೃತಿಯ ಗುರುತಾಗಿರುವ ‘ಕಲಬುರಗಿ ರೊಟ್ಟಿ’ ಈಗ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳು ಸಿದ್ಧಪಡಿಸಿದ ರೊಟ್ಟಿಗಳ ಮೊದಲ ರಫ್ತು ಘಟಕಕ್ಕೆ ಚಾಲನೆ ನೀಡಲಾಗಿದ್ದು, ಇನ್ನು ಮುಂದೆ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದ ಕನ್ನಡಿಗರು ಕಲಬುರಗಿ ರೊಟ್ಟಿಯ ಸವಿಯನ್ನು ಸವಿಯಬಹುದಾಗಿದೆ.

ಅಮೆರಿಕ ಮತ್ತು ಆಸ್ಟ್ರೇಲಿಯಾಕ್ಕೆ ಪ್ರತಿ ತಿಂಗಳು ತಲಾ 10,000 ರೊಟ್ಟಿಗಳ ರಫ್ತು ಮಾಡಲಾಗುವುದು. ಇನ್ನು ಕೆನಡಾಕ್ಕೆ ಪ್ರತಿ ತಿಂಗಳು 5,000 ರೊಟ್ಟಿಗಳ ರಫ್ತು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಒಂದು ಪೋಸ್ಟ್​​​ನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಯೋಜನೆಯ ಹಿಂದೆ ಜಿಲ್ಲೆಯ 100ಕ್ಕೂ ಹೆಚ್ಚು ಸ್ಥಳೀಯ ಸ್ವಸಹಾಯ ಸಂಘಗಳ (SHG) ಸುಮಾರು 1,000 ಮಹಿಳೆಯರ ಶ್ರಮವಿದೆ. ಕಳೆದ ಎರಡು ವರ್ಷಗಳಿಂದ ಸರ್ಕಾರವು ಈ ಉದ್ದೇಶಕ್ಕಾಗಿ 150ಕ್ಕೂ ಹೆಚ್ಚು ರೊಟ್ಟಿ ಮಾಡುವ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಿದೆ. ಅಲ್ಲದೆ, ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್‌ಗೆ ವಿಶೇಷ ಒತ್ತು ನೀಡುವ ಮೂಲಕ ಕಲಬುರಗಿ ರೊಟ್ಟಿಯನ್ನು ಜಾಗತಿಕ ಮಟ್ಟಕ್ಕೆ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: ಖಾಕಿ ಪಡೆಯ ಮಾನವೀಯತೆ: 73 ವೃದ್ಧರು ಹಾಗೂ ಒಂಟಿ ಮಹಿಳೆಯರ ಬಾಳಿಗೆ ಆಸರೆಯಾದ ವಿಜಯಪುರ ಪೊಲೀಸರು!

ಇಲ್ಲಿದೆ ನೋಡಿ:

ಪ್ರಸ್ತುತ ಕಲಬುರಗಿ ರೊಟ್ಟಿಯು ಸ್ವಿಗ್ಗಿ, ಜೊಮ್ಯಾಟೊ ಮತ್ತು ಅಮೆಜಾನ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲೂ ಲಭ್ಯವಿದ್ದು, ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಇದು ದೊಡ್ಡ ಶಕ್ತಿಯಾಗಿ ಮೂಡಿಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ – Kannada News | PM Narendra Modi reduced his convoy size as per SPG protocol after his Fuel Saving Appeal

ನವದೆಹಲಿ, ಮೇ 13: ದೇಶದಲ್ಲಿ ಉಂಟಾಗಿರುವ ಇಂಧನದ ಬಿಕ್ಕಟ್ಟನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಈ ಹಿಂದೆ ದೇಶದ ಜನರಿಗೆ ಸಾಧ್ಯವಾದಷ್ಟು ಕಡಿಮೆ ಪ್ರವಾಸ ಮಾಡಬೇಕು, ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಬಳಸಬೇಕು, ಸ್ವಂತ ವಾಹನಗಳ ಬದಲು ಸರ್ಕಾರಿ ಸಾರಿಗೆಯನ್ನು ಹೆಚ್ಚು ಬಳಸಲು ಕರೆನೀಡಿದ್ದರು. ಹಾಗೇ, ಆದಷ್ಟೂ ಮನೆಯಿಂದಲೇ ಕೆಲಸ ಮಾಡುವಂತೆ, ಅನಿವಾರ್ಯತೆಯಿದ್ದರೆ ಮಾತ್ರ ಕಚೇರಿಗೆ ಅಥವಾ ಹೊರಗೆ ಪ್ರಯಾಣಿಸುವಂತೆ ಮೋದಿ ಕೋರಿದ್ದರು.

ದೇಶದಲ್ಲಿ ಇಂಧನದ ಬಿಕ್ಕಟ್ಟನ್ನು ನಿಯಂತ್ರಿಸಲು ಪ್ರಧಾನಿ ಮೋದಿ ತಮ್ಮ ಬೆಂಗಾವಲು ಪಡೆಯ ಗಾತ್ರವನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಎಸ್‌ಪಿಜಿ ಶಿಷ್ಟಾಚಾರದ ಪ್ರಕಾರ ಅಗತ್ಯ ಭದ್ರತಾ ಘಟಕಗಳನ್ನು ನಿರ್ವಹಿಸುವ ವಾಹನಗಳನ್ನು ಕಡಿತಗೊಳಿಸಲಾಗಿದೆ. ಸರ್ಕಾರದೊಳಗೆ ಕಠಿಣ ಕ್ರಮಗಳ ಅನುಷ್ಠಾನವನ್ನು ಸೂಚಿಸುವ ಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಗಾವಲು ಪಡೆಯ ಗಾತ್ರವನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಪ್ರಧಾನಿ ಮೋದಿಯ ವಾಹನದ ಹಿಂದೆ ಕೇವಲ 2 ಬೆಂಗಾವಲು ಪಡೆ ಹೋಗುತ್ತಿರುವ ವಿಡಿಯೋ ಇಲ್ಲಿದೆ. ಈ ಮೂಲಕ ಸರ್ಕಾರದ ಮಟ್ಟದಲ್ಲೂ ಅನಗತ್ಯ ಇಂಧನ ವೆಚ್ಚಕ್ಕೆ ಪ್ರಧಾನಿ ಮೋದಿ ಕಡಿವಾಣ ಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಆ ಎರಡು ಅವಮಾನಗಳಿಂದಲೇ ವಿಜಯ್ ರಾಜಕೀಯಕ್ಕೆ ಬರುವ ನಿರ್ಧಾರ ಮಾಡಿದ್ದು – Kannada News | Thalapathy Vijay entered politics because of that two incidents

ದಳಪತಿ ವಿಜಯ್ (Thalapaty Vijay) ಈಗ ತಮಿಳುನಾಡಿನ ಸಿಎಂ. ತಮ್ಮನ್ನೂ ಸೇರಿ 108 ಶಾಸಕರ ಬೆಂಬಲ ಹೊಂದಿದ್ದ ವಿಜಯ್​​ಗೆ ಈಗ 144 ಶಾಸಕರು ಬೆಂಬಲ ನೀಡಿದ್ದಾರೆ. ಇದೊಂದು ಬಹಳ ಉತ್ತಮ ಸಂಖ್ಯೆ ಆಗಿದ್ದು ಸರ್ಕಾರ ಭದ್ರವಾಗಿದೆ. ವಿಜಯ್ ರಾಜಕೀಯಕ್ಕೆ ಬಂದಿದ್ದು, ಸಿಎಂ ಆಗಿದ್ದು ಎಲ್ಲವೂ ಅಚಾನಕ್ಕಾಗಿ ನಡೆದಂತೆ ಹಲವರಿಗೆ ಭಾಸವಾಗುತ್ತಿದೆ. ಆದರೆ ಇದರ ಹಿಂದೆ ವರ್ಷಗಳ ಶ್ರಮ ಮತ್ತು ಯೋಜನೆ ಇದೆ. ವಿಜಯ್ ಅಸಲಿಗೆ ಬಹಳ ಇಂಟ್ರೋವರ್ಟ್ ಮಾದರಿ ವ್ಯಕ್ತಿ. ಹೆಚ್ಚು ಮಾತನಾಡುವುದಿಲ್ಲ, ಮೌನವಾಗಿರುವುದನ್ನೇ ಹೆಚ್ಚು ಇಷ್ಟ ಪಡುವ ವ್ಯಕ್ತಿ. ಅಂಥಹಾ ವ್ಯಕ್ತಿ ರಾಜಕಾರಣಕ್ಕೆ ಧುಮುಕುವ ನಿರ್ಧಾರ ಮಾಡಿದ್ದು ಆರಂಭದಲ್ಲಿ ಅವರ ಅಭಿಮಾನಿಗಳಿಗೇ ಆಶ್ಚರ್ಯ ಉಂಟು ಮಾಡಿತ್ತು. ಆದರೆ ವಿಜಯ್, ರಾಜಕೀಯಕ್ಕೆ ಧುಮುಕುವ ನಿರ್ಧಾರದ ಹಿಂದೆ ಅವರಿಗೆ ಆಗಿದ್ದ ಎರಡು ಅವಮಾನಗಳು ಕಾರಣ ಎನ್ನಲಾಗುತ್ತದೆ.

ವಿಜಯ್ ದಶಕಗಳಿಂದಲೂ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ನಟ. 2010ರ ವೇಳೆಗಾಗಲೇ ರಜನೀಕಾಂತ್ ಅವರ ಉತ್ತರಾಧಿಕಾರಿ ವಿಜಯ್ ಎಂಬ ಮಾತುಗಳು ಕೇಳಲಾರಂಭವಾಗಿದ್ದವು. 2011 ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆದಿತ್ತು. ಅದಾಗಲೇ ವಿಜಯ್ ಅವರು ತಮ್ಮ ಅಭಿಮಾನಿ ಸಂಘಟನೆ ‘ಮಕ್ಕಳ್ ನಿಧಿ ಮಯಂ’ ಅನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ ಅವರ ತಂದೆ ಎಸ್ ಚಂದ್ರಶೇಖರ್, ಆ ಸಂಘಟನೆಯನ್ನು ಉತ್ತಮವಾಗಿಯೇ ಬಲಪಡಿಸಿದ್ದರು. 2011 ರ ಚುನಾವಣೆ ವೇಳೆ ಜಯಲಲಿತಾ ಅವರಿಗೆ ವಿಜಯ್ ಅವರ ಮಕ್ಕಳ್ ನಿಧಿ ಮಯಂ ಬೆಂಬಲ ನೀಡಿತು. ಜಯಲಲಿತಾ ಅವರ ಪಕ್ಷ ಗೆದ್ದು ಜಯಲಲಿತಾ ಸಿಎಂ ಸಹ ಆದರು. ವಿಜಯ್ ಅವರ ತಂದೆ ಖುದ್ದು ಹೋಗಿ ಜಯಲಲಿತಾ ಅವರನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಜಯಲಲಿತಾ ಅವರ ವಿಜಯ್ ಹಾಗೂ ಚಂದ್ರಶೇಖರ್ ಅವರಿಗೆ ಧನ್ಯವಾದ ಹೇಳಿದ್ದರು.

ಇದನ್ನೂ ಓದಿ:ಸಿಎಂ ಕಚೇರಿ ಅಧಿಕಾರಿಯಾಗಿ ಜ್ಯೋತಿಷಿ: ವಿಜಯ್ ವಿರುದ್ಧ ಅಸಮಾಧಾನ

ಅದಾಗಿ ಎರಡು ವರ್ಷಗಳ ಬಳಿಕ ಅಂದರೆ 2013 ರಲ್ಲಿ ವಿಜಯ್ ನಟನೆಯ ‘ತಲೈವ’ ಸಿನಿಮಾ ಬಿಡುಗಡೆಗೆ ರೆಡಿಯಾಗಿತ್ತು. ಆ ಸಿನಿಮಾದ ಟ್ಯಾಗ್​​ಲೈನ್ ‘ಟೈಮ್ ಟು ಲೀಡ್’, (ನಾಯತ್ವ ವಹಿಸಿಕೊಳ್ಳುವ ಸಮಯ) ಎಂದಾಗಿತ್ತು. ಇದು ಜಯಲಲಿತಾ ಅವರಿಗೆ ಸರಿ ಬರಲಿಲ್ಲ, ಅದಾಗಲೇ ಜಯಲಲಿತಾ ಮೇಲೆ ಭ್ರಷ್ಟಾಚಾರದ ಆರೋಪ ಬಂದು, ಪ್ರಕರಣ ಸುಪ್ರೀಂಕೋರ್ಟ್​​ನಲ್ಲಿತ್ತು. ಅಂಥಹಾ ಸಮಯದಲ್ಲಿ ವಿಜಯ್ ಅವರು ರಾಜಕೀಯ ಪ್ರೇರಿತ ಟ್ಯಾಗ್​ಲೈನ್ ಬಳಸಿ, ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದು, ಜಯಲಲಿತಾರಿಗೆ ಭೀತಿ ಉಂಟು ಮಾಡಿತ್ತು.

‘ತಲೈವಾ’ ಸಿನಿಮಾದ ಬಿಡುಗಡೆಗೆ ಸಮಸ್ಯೆ ನೀಡಲಾಯ್ತು, ಆದರೆ ಅದಾಗಲೇ ಸಿನಿಮಾ ವಿದೇಶದಲ್ಲಿ ಬಿಡುಗಡೆ ಆಗಿಬಿಟ್ಟಿತ್ತು. ಸಿನಿಮಾ ತಮಿಳುನಾಡಿನಲ್ಲಿ ಬಿಡುಗಡೆ ಆಗಲಿಲ್ಲವೆಂದರೆ ಪೈರಸಿ ಸಮಸ್ಯೆ ಆಗುತ್ತದೆ ಎಂದು ವಿಜಯ್ ಹಾಗೂ ‘ತಲೈವಾ’ ಸಿನಿಮಾದ ನಿರ್ದೇಶಕರು ಜಯಲಲಿತಾ ಭೇಟಿಗೆಂದು ಹೋದರು. ಆದರೆ ಅವರನ್ನು ಜಯಲಲಿತಾ ಭೇಟಿ ಸಹ ಆಗಲಿಲ್ಲ. ಕೊನೆಗೆ ವಿಜಯ್ ಬಹಿರಂಗ ಕ್ಷಮಾಪಣೆ ಕೇಳಿ, ‘ಟೈಮ್ ಟು ಲೀಡ್’ ಟ್ಯಾಗ್ ಲೈನ್ ತೆಗೆದ ಬಳಿಕ, ನಿಗದಿತ ದಿನಾಂಕದ 11 ದಿನಗಳ ನಂತರ ಸಿನಿಮಾ ಬಿಡುಗಡೆ ಮಾಡಲಾಯ್ತು. ಇದು ವಿಜಯ್ ಅವರಿಗೆ ಭಾರಿ ಅವಮಾನ ಉಂಟು ಮಾಡಿತು.

ಅದಾಗಿ ಕೆಲವೇ ದಿನಗಳ ಬಳಿಕ, 2013ರ ಸೆಪ್ಟೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ಭಾರತೀಯ ಚಿತ್ರರಂಗದ 100ನೇ ವರ್ಷದ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಇಡೀ ತಮಿಳು ಚಿತ್ರರಂಗ ಭಾಗಿ ಆಗಿತ್ತು. ವಿಜಯ್ ಅವರಿಗೆ ತಡವಾಗಿ ಆಹ್ವಾನ ತಲುಪಿತು. ಆದರೂ ವಿಜಯ್ ಬಂದಿದ್ದರು. ಆದರೆ ಅವರನ್ನು ಉದ್ದೇಶಪೂರ್ವಕವಾಗಿ ಕೊನೆಯ ಆಸನದಲ್ಲಿ ಕೂರಿಸಲಾಗಿತ್ತು. ಅಂದು ವಿಜಯ್ ಬೇಸರದಿಂದಲೇ ಆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಈ ಎರಡು ಅವಮಾನಗಳ ಬಳಿಕ ವಿಜಯ್ ಅವರು ರಾಜಕೀಯ ಪ್ರವೇಶದ ಬಗ್ಗೆ ಗಂಭೀರವಾದರು. ತಮ್ಮ ಅಭಿಮಾನಿ ಸಂಘಟನೆಯನ್ನು ಹೆಚ್ಚು ಬಲಗೊಳಿಸಿದರು. ಜೊತೆಗೆ ಸಿನಿಮಾಗಳ ಆಯ್ಕೆಯಲ್ಲಿ ಹೆಚ್ಚು ಎಚ್ಚರ ವಹಿಸಲು ಆರಂಭಿಸಿದರು. ರಾಜಕೀಯಕ್ಕೆ ಸಂಬಂಧಿಸಿದ ಕತೆಗಳನ್ನು ಹೆಚ್ಚು ಆಯ್ಕೆ ಮಾಡಿಕೊಂಡರು. ಸಿನಿಮಾಗಳಲ್ಲಿ ಸರ್ಕಾರಗಳನ್ನು ಟೀಕಿಸಲು ಆರಂಭಿಸಿದರು. ಬಡವರ ಪರ, ಮಹಿಳೆಯರ ಪರ ಸಂಭಾಷಣೆಗಳನ್ನು ಹೇಳಲು ಶುರು ಮಾಡಿದರು. ಕೊನೆಗೆ ಈಗ ಸಿಎಂ ಸಹ ಆಗಿದ್ದಾರೆ. ರಾಜಕಾರಣಿಗಳಿಂದ ಅವಮಾನಕ್ಕೆ ಒಳಗಾಗಿದ್ದ ವಿಜಯ್ ಈಗ ಖುದ್ದು ರಾಜಕಾರಣಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

PCOS is now PMOS: PCOS ಇನ್ನು ಮುಂದೆ PMOS; ಮಹಿಳೆಯರ ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆ – Kannada News | PCOS is now PMOS: Understanding the New Name for Women’s Hormonal and Metabolic Health

ದಶಕಗಳಿಂದ ಲಕ್ಷಾಂತರ ಮಹಿಳೆಯರು “PCOS” (Polycystic Ovary Syndrome) ಎಂಬ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಈ ಹೆಸರೇ ಅನೇಕರಲ್ಲಿ ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿತ್ತು. ವೈದ್ಯರು ಮತ್ತು ಸಂಶೋಧಕರ ಸುದೀರ್ಘ ಚರ್ಚೆಯ ನಂತರ, ಈ ಕಾಯಿಲೆಗೆ ಈಗ ಅಧಿಕೃತವಾಗಿ PMOS (Polyendocrine Metabolic Ovarian Syndrome) ಎಂದು ಮರುನಾಮಕರಣ ಮಾಡಲಾಗಿದೆ. ಇದು ಕೇವಲ ಹೆಸರಿನ ಬದಲಾವಣೆಯಲ್ಲ, ಬದಲಾಗಿ ಮಹಿಳೆಯರ ಆರೋಗ್ಯವನ್ನು ನೋಡುವ ದೃಷ್ಟಿಕೋನದಲ್ಲಾದ ದೊಡ್ಡ ಬದಲಾವಣೆಯಾಗಿದೆ.

“PCOS” ಎಂಬ ಹೆಸರಿನಲ್ಲಿದ್ದ ಗೊಂದಲಗಳೇನು?

ಹಳೆಯ ಹೆಸರಿನಲ್ಲಿದ್ದ “Polycystic” ಎಂಬ ಪದವು ಕೇವಲ ಅಂಡಾಶಯದ ಮೇಲಿನ ಗುಳ್ಳೆಗಳ (Cysts) ಕಡೆಗೆ ಗಮನ ಸೆಳೆಯುತ್ತಿತ್ತು. ವಾಸ್ತವವಾಗಿ, ಈ ಸಮಸ್ಯೆ ಇರುವ ಎಲ್ಲ ಮಹಿಳೆಯರಿಗೂ ಅಂಡಾಶಯದಲ್ಲಿ ಸಿಸ್ಟ್‌ಗಳು ಇರುವುದಿಲ್ಲ. ಸ್ಕ್ಯಾನ್‌ನಲ್ಲಿ ಕಾಣಿಸಿಕೊಳ್ಳುವವುಗಳು ನಿಜವಾದ ಸಿಸ್ಟ್‌ಗಳಲ್ಲ, ಬದಲಾಗಿ ಹಾರ್ಮೋನ್ ಅಸಮತೋಲನದಿಂದ ಬೆಳವಣಿಗೆ ನಿಂತಿರುವ ಅಂಡಾಣುಗಳು (Arrested Follicles). ಇವು ಸಾಮಾನ್ಯ ಸಿಸ್ಟ್‌ಗಳಂತೆ ಸಿಡಿಯುವುದಿಲ್ಲ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವನ್ನೂ ಹೊಂದಿರುವುದಿಲ್ಲ. ಈ ಹೆಸರಿನಿಂದಾಗಿ ಅನೇಕ ಮಹಿಳೆಯರು ಸರಿಯಾದ ಚಿಕಿತ್ಸೆ ಪಡೆಯಲು ವಿಳಂಬವಾಯಿತು.

PMOS: ಇಡೀ ದೇಹದ ಮೇಲೆ ಬೀರುವ ಪರಿಣಾಮ:

ತಜ್ಞರ ಪ್ರಕಾರ, PMOS ಎಂಬುದು ಕೇವಲ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಇದು ದೇಹದ ಸಂಪೂರ್ಣ ಹಾರ್ಮೋನ್ ಮತ್ತು ಮೆಟಾಬಾಲಿಕ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಇನ್ಸುಲಿನ್ ಪ್ರತಿರೋಧ, ತೂಕ ಹೆಚ್ಚಳ, ಟೈಪ್-2 ಮಧುಮೇಹ, ಹೃದಯರೋಗ, ಸ್ಟ್ರೋಕ್ ಸೇರಿದಂತೆ ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳ ಅಪಾಯವೂ ಹೆಚ್ಚಾಗಬಹುದು.

PMOS ಎಂಬ ಹೆಸರಿನ ಅರ್ಥ ಮತ್ತು ಪ್ರಾಮುಖ್ಯತೆ:

ಹೊಸ ಹೆಸರಿನ ಪ್ರತಿ ಪದವೂ ಸಮಸ್ಯೆಯ ಆಳವನ್ನು ವಿವರಿಸುತ್ತದೆ:

  • Polyendocrine: ಇನ್ಸುಲಿನ್ ಮತ್ತು ಟೆಸ್ಟೋಸ್ಟೆರೋನ್ ಸೇರಿದಂತೆ ದೇಹದ ಹಲವಾರು ಹಾರ್ಮೋನ್ ವ್ಯವಸ್ಥೆಗಳು ಬಾಧಿತವಾಗುತ್ತವೆ ಎಂಬುದನ್ನು ಇದು ಸೂಚಿಸುತ್ತದೆ.
  • Metabolic: ದೇಹದ ತೂಕ ನಿಯಂತ್ರಣ ಮತ್ತು ಇನ್ಸುಲಿನ್ ವ್ಯವಸ್ಥೆಯೊಂದಿಗಿನ ಗಾಢ ಸಂಬಂಧವನ್ನು ಇದು ಪ್ರತಿನಿಧಿಸುತ್ತದೆ.
  • Ovarian: ಅಂಡಾಣು ಉತ್ಪತ್ತಿ ಮತ್ತು ಹಾರ್ಮೋನ್ ಉತ್ಪಾದನೆಯಲ್ಲಿ ಅಂಡಾಶಯದ ಪಾತ್ರವಿರುವುದನ್ನು ಇದು ತಿಳಿಸುತ್ತದೆ.
  • Syndrome: ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುವುದರಿಂದ ಇದನ್ನು ಒಂದು ‘ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ.

ಗಮನಿಸಬೇಕಾದ ಪ್ರಮುಖ ಲಕ್ಷಣಗಳು ಮತ್ತು ಇನ್ಸುಲಿನ್ ಪಾತ್ರ:

ಅಕ್ರಮ ಮಾಸಿಕ ಚಕ್ರ, ತೀವ್ರ ಮೊಡವೆಗಳು, ಅನಿರೀಕ್ಷಿತ ತೂಕ ಹೆಚ್ಚಳ, ಮುಖದಲ್ಲಿ ಅನಗತ್ಯ ಕೂದಲು ಬೆಳೆಯುವುದು ಮತ್ತು ಕೂದಲು ಉದುರುವುದು ಇದರ ಸಾಮಾನ್ಯ ಲಕ್ಷಣಗಳು. ಈ ಎಲ್ಲದರ ಹಿಂದೆ ‘ಇನ್ಸುಲಿನ್ ಪ್ರತಿರೋಧ’ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಾದಾಗ ಅಂಡಾಶಯಗಳು ಹೆಚ್ಚು ಟೆಸ್ಟೋಸ್ಟೆರೋನ್ ಉತ್ಪಾದಿಸುತ್ತವೆ, ಇದು ಹಾರ್ಮೋನ್ ಏರುಪೇರಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಹೊಟ್ಟೆ ನೋವನ್ನು ನಿರ್ಲಕ್ಷಿಸಬೇಡಿ; ಇದರ ಹಿಂದೆ ಬರಬಹುದು ನೀವು ಊಹಿಸಲೂ ಸಾಧ್ಯವಿಲ್ಲದ ಕಾಯಿಲೆಗಳು!

ಚಿಕಿತ್ಸಾ ಕ್ರಮಗಳು ಮತ್ತು ಜೀವನಶೈಲಿ ಬದಲಾವಣೆ:

ಹೆಸರು ಬದಲಾಗಿದ್ದರೂ, ಮೂಲ ಚಿಕಿತ್ಸಾ ವಿಧಾನಗಳು ಜೀವನಶೈಲಿಯ ಮೇಲೆ ಹೆಚ್ಚು ಅವಲಂಬಿತವಾಗಿವೆ. ಸಂಸ್ಕರಿಸಿದ ಆಹಾರವನ್ನು ತ್ಯಜಿಸುವುದು, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಅತ್ಯಗತ್ಯ. ಕೆಲವರಿಗೆ ವೈದ್ಯರ ಸಲಹೆಯ ಮೇರೆಗೆ ಹಾರ್ಮೋನ್ ಥೆರಪಿ ಅಥವಾ ಇನ್ಸುಲಿನ್ ನಿಯಂತ್ರಿಸುವ ಔಷಧಿಗಳ (ಉದಾಹರಣೆಗೆ ಮೆಟ್‌ಫಾರ್ಮಿನ್) ಅಗತ್ಯವಿರಬಹುದು.

PMOS ಎಂಬ ಹೊಸ ಹೆಸರು ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಕೇವಲ ‘ಫರ್ಟಿಲಿಟಿ’ ದೃಷ್ಟಿಯಿಂದ ನೋಡದೆ, ಒಟ್ಟಾರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ನೋಡಲು ಸಹಕಾರಿಯಾಗಿದೆ. ಇದು ರೋಗನಿರ್ಣಯವನ್ನು ಸುಲಭಗೊಳಿಸುವುದಲ್ಲದೆ, ಭವಿಷ್ಯದಲ್ಲಿ ಉಂಟಾಗಬಹುದಾದ ಮಧುಮೇಹ ಮತ್ತು ಹೃದಯರೋಗಗಳಂತಹ ಗಂಭೀರ ಅಪಾಯಗಳನ್ನು ತಪ್ಪಿಸಲು ಮಹಿಳೆಯರಿಗೆ ಹೊಸ ಆಶಾಕಿರಣವಾಗಿದೆ.

ಲೇಖನ: ಡಾ. ರವಿಕಿರಣ ಪಟವರ್ಧನ, ಆಯುರ್ವೇದ ತಜ್ಞರು ಶಿರಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖಾಕಿ ಪಡೆಯ ಮಾನವೀಯತೆ: 73 ವೃದ್ಧರು ಹಾಗೂ ಒಂಟಿ ಮಹಿಳೆಯರ ಬಾಳಿಗೆ ಆಸರೆಯಾದ ವಿಜಯಪುರ ಪೊಲೀಸರು! – Kannada News | Karnataka Police Community Outreach: Vijayapura Cops Help 73 Access Social Benefits

ವಿಜಯಪುರ, ಮೇ.13: ಅಪರಾಧ ಕೃತ್ಯಗಳ ತನಿಖೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಪೊಲೀಸರ ಕೆಲಸ ಎಂದು ಭಾವಿಸಿದವರಿಗೆ ವಿಜಯಪುರ ಜಿಲ್ಲಾ ಪೊಲೀಸರು ತಮ್ಮ ಸಮಾಜಮುಖಿ ಕಾರ್ಯದ ಮೂಲಕ ಹೊಸ ಮಾದರಿ ತೋರಿದ್ದಾರೆ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದ 73 ಜನ ವೃದ್ಧರು ಮತ್ತು ಒಂಟಿ ಮಹಿಳೆಯರ ಮನೆ ಬಾಗಿಲಿಗೆ ತೆರಳಿ ಅವರಿಗೆ ವಿವಿಧ ಯೋಜನೆಗಳ ಸೌಲಭ್ಯ ದೊರಕಿಸಿಕೊಡುವ ಮೂಲಕ ಪೊಲೀಸರು ‘ಆಸರೆ’ಯಾಗಿದ್ದಾರೆ.

ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ಪಿಂಚಣಿ, ಇಂದಿರಾ ಪಿಂಚಣಿ, ಸಂಧ್ಯಾ ಸುರಕ್ಷಾ ಮತ್ತು ಭಾಗ್ಯ ಜ್ಯೋತಿಯಂತಹ ಹತ್ತಾರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪೊಲೀಸರು ಫಲಾನುಭವಿಗಳಿಗೆ ನೆರವಾಗಿದ್ದಾರೆ.ಪೊಲೀಸರ ಈ ವಿಶೇಷ ಕಾಳಜಿಯಿಂದಾಗಿ 14 ಮಂದಿಗೆ ವೃದ್ಧಾಪ್ಯ ವೇತನ, 16 ಮಹಿಳೆಯರಿಗೆ ವಿಧವಾ ವೇತನ ಹಾಗೂ 8 ಮಂದಿಗೆ ವಿಕಲಚೇತನ ಪಿಂಚಣಿ ಲಭಿಸಿದೆ. ಅಲ್ಲದೆ, 10 ವೃದ್ಧರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ದೊರಕಿಸಿಕೊಡಲಾಗಿದೆ.

ಇದನ್ನೂ ಓದಿ: ಬೆಳಗಾವಿ ಪಾಲಿಕೆಯಲ್ಲಿ ಗಡಿ ಸಮರ; ‘ಕರ್ನಾಟಕ ಪರ ಗೊತ್ತುವಳಿ’ ಮಂಡನೆ ವೇಳೆ ಎಂಇಎಸ್ ಸದಸ್ಯರ ಕಿರಿಕ್!

ಕೇವಲ ಪಿಂಚಣಿ ಅಷ್ಟೇ ಅಲ್ಲದೆ, 3 ವೃದ್ಧೆಯರಿಗೆ ಉಚಿತ ಕಣ್ಣಿನ ಚಿಕಿತ್ಸೆ ಕೊಡಿಸಲಾಗಿದೆ ಹಾಗೂ 4 ಮಂದಿಗೆ ಅಂಚೆ ಬ್ಯಾಂಕ್ ಖಾತೆಗಳನ್ನು ತೆರೆಯಿಸಿಕೊಡಲಾಗಿದೆ. ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿರುವ ಭಯವನ್ನು ಹೋಗಲಾಡಿಸಿ, ವಿಶ್ವಾಸ ಮೂಡಿಸುವಲ್ಲಿ ಈ ‘ಆಸರೆ’ ಕಾರ್ಯಕ್ರಮ ಯಶಸ್ವಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಗ್ಲಿಷ್​​, ಹಿಂದಿಯಲ್ಲಿ ಮನವಿ ಮಾಡಿದ ರೈತ: ಬಹುಭಾಷೆಯಲ್ಲಿ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ! – Kannada News | Elderly Farmer’s English, Hindi Speech Stuns MLA at Chikkanayakanahalli Taluk Office; Video Goes Viral

ತುಮಕೂರು, ಮೇ 13: ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿ ವಯಸ್ಕ ರೈತರೋರ್ವರು ತಮ್ಮ ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ಇಂಗ್ಲಿಷ್​​ ಮತ್ತು ಹಿಂದಿಯಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಹವಾಲು ನೀಡಲು ಬಂದ ರೈತ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುತ್ತಿರುವುದನ್ನು ಕಂಡು ಶಾಸಕ ಸಿ.ಬಿ. ಸುರೇಶ್​​ ಬಾಬು ಅಚ್ಚರಿಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿ ಎದುರು ಅಚಲವಾಗಿ ನಿಂತಿರುವ ಈ ವಯೋವೃದ್ಧ ರೈತನ ಮನಕಲುಕುವ ಮನವಿಯನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಕೇಳಿ. ಅವರ ಮಾತುಗಳಲ್ಲಿ ನೋವೂ ಇದೆ, ಹೋರಾಟದ ಶಕ್ತಿಯೂ ಇದೆ ಎಂದು ನೆಟ್ಟಿಗರು ಪ್ರಶಂಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೈತರಿಗೆ ಒಳ್ಳೆ ಸುದ್ದಿ; 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಮೋದಿ ಸಂಪುಟ ಒಪ್ಪಿಗೆ – Kannada News | Modi Cabinet approves Minimum Support Prices MSP hike for 14 Kharif crops

ನವದೆಹಲಿ, ಮೇ 13: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ (Union Cabinet Meeting) ಇಂದು 4 ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. 2026-27ರ ಮಾರುಕಟ್ಟೆ ಋತುವಿನಲ್ಲಿ 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ ಗಣನೀಯ ಹೆಚ್ಚಳವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದರಿಂದಾಗಿ ಸೂರ್ಯಕಾಂತಿ ಬೀಜವು ಕ್ವಿಂಟಾಲ್‌ಗೆ 622 ರೂ. ಹೆಚ್ಚಳವನ್ನು ಕಂಡಿದ್ದು, ಅದರ ಒಟ್ಟು MSP ಕ್ವಿಂಟಾಲ್‌ಗೆ 8,343 ರೂ. ತಲುಪಿದೆ.

ಖಾರಿಫ್ ಋತುವಿನಲ್ಲಿ ರೈತರಿಗೆ ಅಂದಾಜು 2 ಲಕ್ಷ 60 ಸಾವಿರ ಕೋಟಿ ರೂ. ಪಾವತಿ ಮಾಡಲಾಗುತ್ತದೆ. ಈ ಋತುವಿನಲ್ಲಿ ಅಂದಾಜು 824 ಲಕ್ಷ ಮೆಟ್ರಿಕ್ ಟನ್ ಬೆಳೆಗಳನ್ನು ಖರೀದಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ಹೆಚ್ಚಳ?:

ಸೂರ್ಯಕಾಂತಿ ಬೀಜಕ್ಕೆ ಪ್ರತಿ ಕ್ವಿಂಟಾಲ್‌ಗೆ 622 ರೂ. MSP ಹೆಚ್ಚಳವನ್ನು ಶಿಫಾರಸು ಮಾಡಲಾಗಿದೆ. ಹತ್ತಿಗೆ ಕ್ವಿಂಟಾಲ್‌ಗೆ 557 ಮತ್ತು ಎಳ್ಳಿಗೆ ಕ್ವಿಂಟಾಲ್‌ಗೆ 500 ರೂ.ಗಳ ಹೆಚ್ಚಳವನ್ನು ಶಿಫಾರಸು ಮಾಡಲಾಗಿದೆ. ಎ ದರ್ಜೆಯ ಭತ್ತಕ್ಕೆ ಕ್ವಿಂಟಾಲ್‌ಗೆ 2 ಸಾವಿರದ 461 ರೂ. ಕನಿಷ್ಠ ಬೆಂಬಲ ಬೆಲೆ, ಹೈಬ್ರಿಡ್‌ ಜೋಳಕ್ಕೆ ಕ್ವಿಂಟಾಲ್‌ಗೆ 4,023 ರೂ.ಗಳು, ಬಾಜ್ರಾಗೆ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ಗೆ 2,900 ರೂ.ಗಳು ಮತ್ತು ತೊಗರಿ ಬೇಳೆಗೆ ಪ್ರತಿ ಕ್ವಿಂಟಾಲ್‌ಗೆ 8,450 ರೂ. ಬೆಂಬಲ ಬೆಲೆಯನ್ನು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಜೋಶಿ ಮನವಿಗೆ ಸ್ಪಂದಿಸಿ ಬೆಂಬಲ ಬೆಲೆ ಹೆಸರು ಖರೀದಿಗೆ ಕಾಲಾವಕಾಶ ವಿಸ್ತರಣೆ

2019ರಲ್ಲಿ ಘೋಷಿಸಲಾದ ನೀತಿಗೆ ಅನುಗುಣವಾಗಿ, ಎಲ್ಲಾ ಅಧಿಸೂಚಿತ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಶೇ. 50ರಷ್ಟು ಹೆಚ್ಚಿಸಲಾಗಿದೆ. ಖಾರಿಫ್ ಮಾರುಕಟ್ಟೆ ಋತುವಿನಲ್ಲಿ ಸುಮಾರು 824.41 ಲಕ್ಷ ಮೆಟ್ರಿಕ್ ಟನ್‌ಗಳ ವಾರ್ಷಿಕ ಸಂಗ್ರಹಣೆಯನ್ನು ಸರ್ಕಾರ ಅಂದಾಜಿಸಿದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ ಮಾಡಿದ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಬಿಇಎಂಎಲ್​ ಘಟಕಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ: ಮೆಟ್ರೋ ಬೋಗಿಗಳ ಪರಿಶೀಲನೆ​​​

ಹಾಗೇ, ನಮೋ ಭಾರತ್ ರೈಲು ಕಾರ್ಯಾಚರಣೆಗಳ ಅಡಿಯಲ್ಲಿ 20,667 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಬ್ರಾಡ್‌ಗೇಜ್‌ನಲ್ಲಿ ಭಾರತದ ಮೊದಲ ಅರೆ-ಹೈ-ಸ್ಪೀಡ್ ರೈಲು ಕಾರಿಡಾರ್ (134 ಕಿಮೀ) ಅನ್ನು ಸಹ ಸಂಪುಟ ಅನುಮೋದಿಸಿದೆ. ಧೋಲೆರಾ SIR ಅನ್ನು ಅಹಮದಾಬಾದ್ (ಸಬರಮತಿ), ಧೋಲೆರಾ ವಿಮಾನ ನಿಲ್ದಾಣ ಮತ್ತು ಲೋಥಾಲ್ NHMCಯೊಂದಿಗೆ ಸಂಪರ್ಕಿಸುವುದಾಗಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:18 pm, Wed, 13 May 26

Source link

ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ? – Kannada News | Modi Cabinet’s Mega Push: Rs 37,500 Cr Coal Gasification to Cut Imports, Create 50K Jobs

ಕಲ್ಲಿದ್ದಲು ಅನಿಲೀಕರಣ ಪ್ರಕ್ರಿಯೆ ವಿವರಿಸಿದ ಸಚಿವ ಎ ವೈಷ್ಣವ್Image Credit source: PTI

ನವದೆಹಲಿ, ಮೇ 13: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ (Union Cabinet) ಸಭೆಯು ‘ಮೇಲ್ಮೈ ಕಲ್ಲಿದ್ದಲು/ಲಿಗ್ನೈಟ್ ಅನಿಲೀಕರಣ’ (Surface Coal/Lignite Gasification) ಯೋಜನೆಗಳನ್ನು ಉತ್ತೇಜಿಸಲು 37,500 ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ನೆರವನ್ನು ಘೋಷಿಸಿದೆ. ಈ ಯೋಜನೆಯು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.

2030ರ ವೇಳೆಗೆ 100 ಮಿಲಿಯನ್ ಟನ್ ಕಲ್ಲಿದ್ದಲನ್ನು ಅನಿಲೀಕರಣಗೊಳಿಸುವ ರಾಷ್ಟ್ರೀಯ ಗುರಿಯನ್ನು ಸಾಧಿಸಲು ಈ ಯೋಜನೆ ಸಹಕಾರಿಯಾಗಲಿದೆ. ಪ್ರಸ್ತುತ ಭಾರತವು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವ ಎಲ್‌ಎನ್‌ಜಿ (LNG), ಯೂರಿಯಾ, ಅಮೋನಿಯಾ ಮತ್ತು ಮೆಥನಾಲ್ ಅಂತಹ ಉತ್ಪನ್ನಗಳನ್ನು ದೇಶೀಯವಾಗಿಯೇ ತಯಾರಿಸಲು ಈ ಯೋಜನೆ ನೆರವಾಗಲಿದೆ.

ಈ ಬೃಹತ್ ಯೋಜನೆಯಿಂದ ಸುಮಾರು 25ಕ್ಕೂ ಹೆಚ್ಚು ಕಲ್ಲಿದ್ದಲು ಉತ್ಪಾದನಾ ಪ್ರದೇಶಗಳಲ್ಲಿ ಸುಮಾರು 50,000 ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಈ ಯೋಜನೆಯ ಮೂಲಕ ಸುಮಾರು 2.5 ರಿಂದ 3.0 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: ಇಂಧನ ಕಡಿಮೆ ಬಳಸಿ ಎನ್ನುತ್ತಿರೋದು ಮೋದಿ ಮಾತ್ರವಲ್ಲ, ವಿವಿಧ ದೇಶಗಳು ಜಾರಿಗೊಳಿಸಿರುವ ಸಂಗತಿಗಳೇ

ಕಲ್ಲಿದ್ದಲು ಅನಿಲೀಕರಣ ಯೋಜನೆಯ ಪ್ರಮುಖ ಅಂಶಗಳು

  1. ಆರ್ಥಿಕ ಪ್ರೋತ್ಸಾಹ: ಹೊಸ ಯೋಜನೆಗಳಿಗೆ ಯಂತ್ರೋಪಕರಣ ಮತ್ತು ಸ್ಥಾವರ ವೆಚ್ಚದ ಗರಿಷ್ಠ 20% ರಷ್ಟು ಆರ್ಥಿಕ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.
  2. ಪಾರದರ್ಶಕ ಆಯ್ಕೆ: ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಯೋಜನೆಗಳನ್ನು ಆಯ್ಕೆ ಮಾಡಲಾಗುತ್ತದೆ.
  3. ದೀರ್ಘಾವಧಿ ಭರವಸೆ: ಹೂಡಿಕೆದಾರರಿಗೆ ದೀರ್ಘಾವಧಿಯ ನೀತಿ ನಿಶ್ಚಿತತೆಯನ್ನು ಒದಗಿಸಲು ಕಲ್ಲಿದ್ದಲು ಸಂಪರ್ಕದ ಅವಧಿಯನ್ನು 30 ವರ್ಷಗಳವರೆಗೆ ವಿಸ್ತರಿಸಲಾಗಿದೆ.
  4. ಅನಿಲೀಕರಣದ ಗುರಿ: ಮೇಲ್ಮೈ ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಯೋಜನೆಗಳಿಗೆ ಪ್ರೋತ್ಸಾಹಿಸಲು 37,500 ಕೋಟಿ ರೂ ಇಡಲಅಗಿದೆ. 75 ಮಿಲಿಯನ್ ಟನ್​ಗಳಷ್ಟು ಕಲ್ಲಿದ್ದಲು ಮತ್ತು ಲಿಗ್ನೈಟ್​ನ ಅನಿಲೀಕರಣಗೊಳಿಸುವ ಗುರಿ ಇಡಲಾಗಿದೆ.

ಭಾರತವು ವಿಶ್ವದ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಈ ಕಲ್ಲಿದ್ದಲನ್ನು ನೇರವಾಗಿ ಸುಡುವ ಬದಲು ‘ಸಿಂಗ್ಯಾಸ್’ (Syngas) ಆಗಿ ಪರಿವರ್ತಿಸುವ ಮೂಲಕ ರಾಸಾಯನಿಕಗಳು ಮತ್ತು ಇಂಧನಗಳನ್ನು ತಯಾರಿಸುವುದು ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿದೆ. ಇದು ಪ್ರಧಾನಿ ಮೋದಿಯವರ ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ ಕನಸಿಗೆ ಬಲ ತುಂಬಲಿದೆ.

ಇದನ್ನೂ ಓದಿ: ಇಂಧನ ಬಿಕ್ಕಟ್ಟು; ವರ್ಕ್ ಫ್ರಂ ಹೋಂ, ಪೆಟ್ರೋಲ್ ಖರೀದಿಮಿತಿ ಇತ್ಯಾದಿ ಕ್ರಮ ಜಾರಿಯಲ್ಲಿರುವ ದೇಶಗಳು

ಅಶ್ವಿನಿ ವೈಷ್ಣವ್ ಅವರಿಂದ ವಿವರಣೆ

ಕ್ಯಾಬಿನೆಟ್ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಕಲ್ಲಿದ್ದಲು ಅನಿಲೀಕರಣ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಂಡರು. ಅನಿಲದ ಬೇಡಿಕೆ ಪೂರೈಸಲು ಈ ಯೋಜನೆ ಎಷ್ಟು ಮಹತ್ವ ಎಂಬುದನ್ನು ಅವರು ವಿವರಿಸಿದರು.

‘ಭಾರತದಲ್ಲಿ 200 ವರ್ಷಗಳಿಗೆ ಆಗುವಷ್ಟು ಕಲ್ಲಿದ್ದಲು ಸಂಗ್ರಹ ಇದೆ. ಕಲ್ಲಿದ್ದಲಿನಿಂದ ಗ್ಯಾಸ್ ತಯಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಯೋಜನೆಯಲ್ಲಿ, ಕಲ್ಲಿದ್ದಲನ್ನು ಜಜ್ಜಲಾಗುತ್ತದೆ. ಕುಲುಮೆಯೊಳಗೆ (Furnace) ಬಹಳ ಅಧಿಕ ಉಷ್ಣಾಂಶ ಹಾಗು ಒತ್ತಡದಲ್ಲಿ ಅದನ್ನು ಬಿಸಿ ಮಾಡಲಾಗುತ್ತದೆ. ಆಗ ಆ ಕಲ್ಲಿದ್ದಲು ಹೊತ್ತಿಉರಿಯುವ ಬದಲು ಸಿಂಥೆಟಿಕ್ ಗ್ಯಾಸ್ ಅಥವಾ ಸಿನ್​ಗ್ಯಾಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಈ ಸಿನ್​ಗ್ಯಾಸ್​ನಲ್ಲಿ ಮುಖ್ಯವಾಗಿ ಕಾರ್ಬನ್ ಮಾನಾಕ್ಸೈಡ್ ಮತ್ತು ಹೈಡ್ರೋಜನ್ ಇರುತ್ತದೆ. ಇದನ್ನು ನೈಸರ್ಗಿಕ ಅನಿಲದಂತೆ ಉಪಯೋಗಿಸಬಹುದು. ವಿದ್ಯುತ್ ಉತ್ಪಾದನೆಗೆ ಬಳಸಬಹುದು, ಎಲ್​ಪಿಜಿ ರೀತಿಯ ಇಂಧನವಾಗಿಯೂ ಬಳಸಬಹುದು’ ಎಂದು ವೈಷ್ಣವ್ ವಿವರ ನೀಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version