ದಶಕದ ಬಳಿಕ ಸಿಡಿಸಿದ ಸಿಕ್ಸ್​ ಮೌಲ್ಯ ’99 ಲಕ್ಷ ರೂ.’ – Kannada News | Swing King to Six King: Bhuvneshwar Kumar’s Last Over Heroics for RCB!

2016 ರಿಂದ 2026… ಅಕ್ಷರಶಃ ಹತ್ತು ವರ್ಷಗಳ ಅಂತರ! ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ ತಮ್ಮ ನಾಲ್ಕನೇ ಸಿಕ್ಸರ್ ಸಿಡಿಸಲು ತೆಗೆದುಕೊಂಡ ಸಮಯವಿದು. ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ಅನಿರೀಕ್ಷಿತ ಗೆಲುವು ತಂದುಕೊಟ್ಟ ಆ ಸಿಕ್ಸರ್ ಮೌಲ್ಯ ಬರೋಬ್ಬರಿ 99 ಲಕ್ಷ ರೂ..!

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ ಕಠಿಣ ಸವಾಲಿತ್ತು. ಅದರಲ್ಲೂ ಅಂತಿಮ 3 ಎಸೆತಗಳಲ್ಲಿ 9 ರನ್ ಬೇಕಿದ್ದಾಗ, ಒತ್ತಡದ ಪರಿಸ್ಥಿತಿಯಲ್ಲೂ ಭುವನೇಶ್ವರ್ ಕುಮಾರ್ ಮೈದಾನದ ಆಚೆಗೆ ಚೆಂಡನ್ನು ಅಟ್ಟಿದರು. ಈ ಒಂದು ಸಿಕ್ಸರ್‌ನಿಂದ ಆರ್‌ಸಿಬಿಯ ಗೆಲುವಿನ ಸಾಧ್ಯತೆಯನ್ನು 51% ರಿಂದ ನೇರವಾಗಿ 99% ಕ್ಕೆ ಏರಿಸಿತು. ಅಲ್ಲದೆ ಈ ಸಿಕ್ಸರ್‌ನ ಮೌಲ್ಯ ವಿಶ್ಲೇಷಣಾತ್ಮಕವಾಗಿ ಸುಮಾರು ₹99 ಲಕ್ಷ ಎಂದು ಅಂದಾಜಿಸಲಾಗಿದೆ! ಅಂದರೆ ದಶಕದ ಬಳಿಕ ಭುವಿ ಬ್ಯಾಟ್​ನಿಂದ ಸಿಡಿದ ಸಿಕ್ಸ್ ಇದೀಗ 99 ಲಕ್ಷ ರೂ. ಮೌಲ್ಯದ್ದು ಎಂಬುದು ವಿಶೇಷ.

4 ಸಿಕ್ಸರ್​ಗಳು:

ಕ್ರಿಕೆಟ್ ಲೋಕದಲ್ಲಿ ಭುವನೇಶ್ವರ್ ಕುಮಾರ್ ಒಬ್ಬ ಪರಿಣಿತ ಬೌಲರ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ಐಪಿಎಲ್ ಇತಿಹಾಸದಲ್ಲಿ ಅವರು ಸಿಕ್ಸರ್ ಸಿಡಿಸುವುದು ಒಂದು ಅಪರೂಪದ ವಿದ್ಯಮಾನ. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವಾಗ ಕೊನೆಯ ಬಾರಿಗೆ ಸಿಕ್ಸರ್ ಬಾರಿಸಿದ್ದ ಭುವಿ, ಆ ಬಳಿಕ ಬೌಂಡರಿಗಳನ್ನಷ್ಟೇ ನಂಬಿದ್ದರು. ಆದರೆ ಮೇ 10, 2026 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ಬರೊಬ್ಬರಿ 10 ವರ್ಷಗಳ ನಂತರ ಭುವಿ ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅಲ್ಲದೆ ಈವರೆಗೆ ಅವರು ಐಪಿಎಲ್​ನಲ್ಲಿ ಬಾರಿಸಿರುವುದು ಕೇವಲ 4 ಸಿಕ್ಸರ್​ಗಳು ಮಾತ್ರ. ಆ ಸಿಕ್ಸರ್​ಗಳ ವಿವರ ಈ ಕೆಳಗಿನಂತಿದೆ…

    • 2013: ಪುಣೆ ವಾರಿಯರ್ಸ್ ಪರ (1 ಸಿಕ್ಸರ್)
    • 2015: ಸನ್‌ರೈಸರ್ಸ್ ಹೈದರಾಬಾದ್ ಪರ (1 ಸಿಕ್ಸರ್)
    • 2016: ಸನ್‌ರೈಸರ್ಸ್ ಹೈದರಾಬಾದ್ ಪರ (1 ಸಿಕ್ಸರ್)
    • 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ (1 ಸಿಕ್ಸರ್)

‘ಪರ್ಪಲ್’ ಮಿಂಚು:

ಬ್ಯಾಟಿಂಗ್‌ನಲ್ಲಿ ಮಿಂಚುವುದಕ್ಕೂ ಮುನ್ನ, ಭುವನೇಶ್ವರ್ ತಮ್ಮ ಪ್ರಧಾನ ಕೆಲಸವಾದ ಬೌಲಿಂಗ್‌ನಲ್ಲೂ ಕಿಚ್ಚು ಹಚ್ಚಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ಭುವಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಈ ಮೂಲಕ ಒಟ್ಟು  21 ವಿಕೆಟ್‌ಗಳೊಂದಿಗೆ ಅವರು ಈ ಸೀಸನ್‌ನ ‘ಪರ್ಪಲ್ ಕ್ಯಾಪ್’ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ.

Source link

ತ್ರಿಶಾಗೆ ಒಲಿದು ಬಂದ ಬಿಗ್ ಆಫರ್; ರಜನಿ-ಕಮಲ್ ಹೊಸ ಸಿನಿಮಾಗೆ ನಾಯಕಿ? – Kannada News | Trisha Krishnan likely to play female lead in Rajinikanth Kamal Haasan movie

ತಮಿಳು ಚಿತ್ರರಂಗದ ಸ್ಟಾರ್ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ದಶಕಗಳ ನಂತರ ಮತ್ತೆ ಬೆಳ್ಳಿತೆರೆಯ ಮೇಲೆ ಒಂದಾಗುತ್ತಿರುವುದು ಈಗಾಗಲೇ ಅಭಿಮಾನಿಗಳಿಗೆ ಖುಷಿ ನೀಡಿದೆ. ಈಗ ಈ ಬೃಹತ್ ಚಿತ್ರಕ್ಕೆ (KHxRK) ಸೌತ್ ಕ್ವೀನ್ ತ್ರಿಶಾ ಕೃಷ್ಣನ್ ಕೂಡ ಸೇರ್ಪಡೆ ಆಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ತ್ರಿಶಾ (Trisha Krishnan) ಅವರ ಹೆಸರು ಈಗ ಎಲ್ಲ ಕಡೆಗಳಲ್ಲಿ ಚರ್ಚೆಯಲ್ಲಿದೆ. ದಳಪತಿ ವಿಜಯ್ ಜೊತೆಗಿನ ಸ್ನೇಹದ ಕಾರಣದಿಂದಲೂ ಅವರು ಸುದ್ದಿ ಆಗುತ್ತಿದ್ದಾರೆ. ಈ ನಡುವೆ ‘KHxRK’ ಚಿತ್ರಕ್ಕೂ ಅವರೇ ನಾಯಕಿ ಎಂಬ ಸುದ್ದಿ ಹರಿದಾಡುತ್ತಿದೆ.

‘ಜೈಲರ್’ ಖ್ಯಾತಿಯ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಅನೌನ್ಸ್‌ಮೆಂಟ್ ವಿಡಿಯೋದಲ್ಲಿ ರಜನಿ ಮತ್ತು ಕಮಲ್ ಸ್ಟೈಲಿಶ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ವಿಡಿಯೋದ ಕೊನೆಯಲ್ಲಿ ಬರುವ ‘ಹೀರೋ ಯಾರು?’ ಎಂಬ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗಿತ್ತು.

ಕಳೆದ 22 ವರ್ಷಗಳಿಂದ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ತ್ರಿಶಾ, ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ತ್ರಿಶಾ ಈ ಪ್ರಾಜೆಕ್ಟ್‌ಗೆ ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಅವರಿಗೆ ಭಾರಿ ಮೊತ್ತದ ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ. ಇದು ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಬಜೆಟ್‌ನ ಚಿತ್ರವಾಗಲಿದೆ.

ತ್ರಿಶಾ ಈ ಹಿಂದೆ ಕಮಲ್ ಹಾಸನ್ ಅವರೊಂದಿಗೆ ‘ಮನ್ಮದನ್ ಅಂಬು’, ‘ತೂಂಗಾ ವನಂ’ ಮತ್ತು ‘ಥಗ್ ಲೈಫ್’ ಚಿತ್ರಗಳಲ್ಲಿ ನಟಿಸಿದ್ದರೆ, ರಜನಿಕಾಂತ್ ಅವರೊಂದಿಗೆ ‘ಪೇಟ್ಟಾ’ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಸೂರ್ಯ ಅಭಿನಯದ ‘ಕರುಪ್ಪು’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ಅದರಲ್ಲಿಯೂ ತ್ರಿಶಾ ಮಿಂಚಿದ್ದಾರೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ನೋಡಲು ಬರಲಿಲ್ಲ ಪತ್ನಿ, ಮಕ್ಕಳು; ಮಿಂಚಿದ್ದು ಮಾತ್ರ ತ್ರಿಶಾ

ನಿರ್ದೇಶಕ ನೆಲ್ಸನ್ ಸದ್ಯ ‘KHxRK’ ಸ್ಕ್ರಿಪ್ಟ್ ಮತ್ತು ತಾಂತ್ರಿಕ ವರ್ಗದ ಆಯ್ಕೆಯಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ರಜನಿ, ಕಮಲ್, ನೆಲ್ಸನ್ ಮತ್ತು ಅನಿರುದ್ಧ್ ಅವರ ಈ ಕಾಂಬಿನೇಷನ್ ಬಾಕ್ಸ್ ಆಫೀಸ್ ಇತಿಹಾಸವನ್ನೇ ಸೃಷ್ಟಿಸಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರವು 1000 ಕೋಟಿ ರೂಪಾಯಿ ಗಳಿಕೆ ಮಾಡುವ ಮೊದಲ ತಮಿಳು ಸಿನಿಮಾ ಆಗಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ; ಪ್ರಧಾನಿ ಮೋದಿಯವರ ‘ಮಿತ ಬಳಕೆ’ ಕರೆಗೆ ವ್ಯಾಪಾರಿಗಳ ಸಾಥ್! – Kannada News | Mysuru Public Reacts to rs3 Cooking Oil Price Jump and PM Modis Conservation Advice

ಮೈಸೂರು, ಮೇ.11: ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಿದೆ. ಈ ಹಿಂದೆ 138 ರೂಪಾಯಿ ಇದ್ದ ಅಡುಗೆ ಎಣ್ಣೆಯು ಈಗ 141 ರೂಪಾಯಿ ತಲುಪಿದೆ. ಈ ಕುರಿತು ವ್ಯಾಪಾರಿ ಅಣ್ಣೋಜಿ ರಾವ್ ಅವರು ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಡುಗೆ ಎಣ್ಣೆ ಕಡಿಮೆ ಬಳಸುವಂತೆ ನೀಡಿರುವ ಸಲಹೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ತಮ್ಮ ವ್ಯಾಪಾರದ ದೃಷ್ಟಿಯಿಂದ ಎಣ್ಣೆ ಕಡಿಮೆ ಬಳಸಿ ಎಂದು ಹೇಳುವುದು ತಪ್ಪಾದರೂ, ದೇಶದ ಹಿತದೃಷ್ಟಿ, ಜನರ ಆರೋಗ್ಯ ಹಾಗೂ ಯುದ್ಧದ ಪರಿಸ್ಥಿತಿಯ ಕಾರಣದಿಂದ ಮೋದಿ ಅವರ ಸಲಹೆ ಸರಿಯಾಗಿದೆ ಎಂದು ಅಣ್ಣೋಜಿ ರಾವ್ ಅಭಿಪ್ರಾಯಪಟ್ಟಿದ್ದಾರೆ. ಟಿವಿ9 ಕನ್ನಡದ ಪ್ರತಿನಿಧಿ ರಾಮ್ ಅವರು ಮೈಸೂರಿನಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಸಂಗ್ರಹಿಸಿದ್ದಾರೆ. ಪ್ರಧಾನಿಯವರ ಈ ಹೇಳಿಕೆಯು ಕೆಲವರಲ್ಲಿ ಆತಂಕ ಮೂಡಿಸಿದ್ದರೆ, ಮತ್ತೆ ಕೆಲವರು ಇದು ಮುಂದಿನ ಪೀಳಿಗೆಗೆ ಸಂಪನ್ಮೂಲಗಳನ್ನು ಉಳಿಸಲು ಮತ್ತು ಪರಿಸರ ಸಂರಕ್ಷಣೆಗೆ ಸಹಕಾರಿ ಎಂಬ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅನಗತ್ಯವಾಗಿ ವಾಹನಗಳನ್ನು ಬಳಸುವುದು, ಟ್ರಿಪ್‌ಗಳಿಗೆ ಹೋಗುವುದು ಮತ್ತು ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸುವುದನ್ನು ಕಡಿಮೆ ಮಾಡಬೇಕು ಎಂಬ ಅಂಶಕ್ಕೆ ಸಾರ್ವಜನಿಕರು ಒಪ್ಪಿಗೆ ಸೂಚಿಸಿದ್ದಾರೆ.

ವಿಡಿಯೋ ಸುದ್ದಿಗಖನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಮೋದಿ ಮಾರ್ಗದಲ್ಲಿ ಜಿಲೆಟಿನ್ ಪತ್ತೆ ಪ್ರಕರಣ; ಹಿರಿಯ ಅಧಿಕಾರಿಗಳ ಹೆಸರು ಹೇಳಿದ ಆರೋಪಿ, ಈ ಜಿಲೆಟಿನ್​ ಕಡ್ಡಿಗಳು ಎಲ್ಲಿಂದ ಬಂತು ಗೊತ್ತಾ? – Kannada News | Bengaluru Security Breach, Modi Gold Appeal and Trump Xi Meet: Latest News

ಬೆಂಗಳೂರು, ಮೇ,11: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಭದ್ರತಾ ಲೋಪ ಉಂಟಾಗಿದ್ದು, ಅವರು ಸಂಚರಿಸುವ ಮಾರ್ಗದ ಪಕ್ಕದಲ್ಲೇ ಸ್ಫೋಟಕಗಳಿದ್ದ ಬಾಕ್ಸ್ ಪತ್ತೆಯಾಗಿತ್ತು. ಇದೀಗ ಈ ಬಗ್ಗೆ ಮಹತ್ವ ಬೆಳವಣಿಗಳು ನಡೆದಿದೆ. ಈ ಪ್ರಕರಣಕ್ಕೆ ಎನ್​​ಐಎ ಎಂಟ್ರಿಯಾಗಿದೆ. ಇದರ ಜತೆಗೆ ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬನ್ನು ಬಂಧನ ಮಾಡಲಾಗಿದೆ. ಇದೀಗ ಆತ ತನಿಖೆ ವೇಳೆ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾನೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ಇತಿಹಾಸ ನಿರ್ಮಿಸಿರುವ ಟಿವಿಕೆ (TVK) ಪಕ್ಷದ ನಾಯಕ, ನಟ ಜೋಸೆಫ್ ವಿಜಯ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಜಗತ್ತು ಬಿಕ್ಕಟ್ಟಿನಲ್ಲಿದ್ದು, ದೇಶದ ಹಿತಕ್ಕಾಗಿ ತ್ಯಾಗಗಳನ್ನು ಮಾಡಲು ಸಿದ್ಧರಾಗಿ ಎಂದು ಅವರು ಹೇಳಿದ್ದಾರೆ. ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ, ವಿದೇಶಿ ವಿನಿಮಯವನ್ನು ಉಳಿಸುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಈ ನಿಟ್ಟಿನಲ್ಲಿ, ನಾಗರಿಕರು ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇ 13 ರಿಂದ 15 ರವರೆಗೆ ಚೀನಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.

ಮೋದಿ ಬೆಂಗಳೂರು ಭೇಟಿ ವೇಳೆ ಭದ್ರತಾ ಲೋಪ: ಬಂಧಿತ ವಯಕ್ತಿಯಿಂದ ಸ್ಫೋಟಕ ಹೇಳಿಕೆ:

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಭದ್ರತಾ ಲೋಪ ಉಂಟಾಗಿದ್ದು, ಅವರು ಸಂಚರಿಸುವ ಮಾರ್ಗದ ಪಕ್ಕದಲ್ಲೇ ಸ್ಫೋಟಕಗಳಿದ್ದ ಬಾಕ್ಸ್ ಪತ್ತೆಯಾಗಿತ್ತು. ಇದೀಗ ಈ ಬಗ್ಗೆ ಮಹತ್ವ ಬೆಳವಣಿಗಳು ನಡೆದಿದೆ. ಈ ಪ್ರಕರಣಕ್ಕೆ ಎನ್​​ಐಎ ಎಂಟ್ರಿಯಾಗಿದೆ. ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಇನ್ನು ಈ ವ್ಯಕ್ತಿಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಹೇಳಿದ್ದಾರೆ. ಈ ವ್ಯಕ್ತಿಯ ಹೆಸರು ಲೋಹಿತ್​​ ಎಂದು ಗುರುತಿಸಲಾಗಿದೆ. ಲೋಹಿತ್​​
ಆರೋಪಿ ಬಳಿ ಪೊಲೀಸ್ ಇಲಾಖೆ, ತನಿಖಾ ಸಂಸ್ಥೆಗಳ ನಂಬರ್ ಇದೆ. ಸುಖಾಸುಮ್ಮನೆ ಹುಸಿ ಬೆದರಿಕೆ ಕರೆ ಮಾಡಿದ್ದ ಮಾಹಿತಿ ಬಹಿರಂಗವಾಗಿದೆ. ವಿಚಾರಣೆ ವೇಳೆ ಆರೋಪಿ ದೊಡ್ಡ ದೊಡ್ಡವರ ಹೆಸರು ಹೇಳುತ್ತಾನೆ. ನನಗೆ ಅಜಿತ್ ದೋವಲ್ ಗೊತ್ತು, ಎನ್​ಐಎ ನಿರ್ದೇಶಕ ಗೊತ್ತು, ಸಿಬಿಐ ಡೈರೆಕ್ಟರ್ ಗೊತ್ತು, ಡಿಜಿ-ಐಜಿಪಿ, ಕಮಿಷನರ್ ಹೆಸರು ಹೇಳ್ತಾನೆ. ಎಲ್ಲಾ ತನಿಖಾ ಸಂಸ್ಥೆಗಳ ಕಂಟ್ರೊಲ್ ರೂಂ ನಂಬರ್ ಇಟ್ಟುಕೊಂಡಿದ್ದಾನೆ. ಮನಸ್ಸಿಗೆ ಬಂದ ಹಾಗೆ ಕರೆ ಮಾಡಿ ಬೆದರಿಕೆ ಸಂದೇಶಗಳನ್ನು ಹಾಕ್ತಾನೆ ಎಂದು ಹೇಳಲಾಗಿದೆ.

ಇತಿಹಾಸ ನಿರ್ಮಿಸಿದ ದಳಪತಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಆಹ್ವಾನ!:

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ (TVK) ನಾಯಕ ಜೋಸೆಫ್ ವಿಜಯ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಕರೆ ಮಾಡಿ ಅಭಿನಂದಿಸಿದ್ದಾರೆ. ಈ ಸುದೀರ್ಘ ಸಂಭಾಷಣೆಯ ತುಣುಕುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿವೆ.

ಇದನ್ನೂ ಓದಿ: ಸುವೇಂದು ಅಧಿಕಾರಿ ಪಿಎ ಕೊಲೆ ಪ್ರಕರಣ: ಶಂಕಿತರ ಪತ್ತೆಗೆ ನೆರವಾದ ‘UPI’ ಪೇಮೆಂಟ್

ದೇಶದ ಹಿತಕ್ಕಾಗಿ ಒಂದು ವರ್ಷ ಚಿನ್ನ ಖರೀದಿಸಬೇಡಿ:

ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಆರ್ಥಿಕ ಏರಿಳಿತಗಳ ನಡುವೆ ಭಾರತದ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕೆಲವು ಮಹತ್ವದ ಮತ್ತು ಕಟ್ಟುನಿಟ್ಟಾದ ಸಲಹೆಗಳನ್ನು ನೀಡಿದ್ದಾರೆ. ವಿದೇಶಿ ವಿನಿಮಯವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನು ಸಣ್ಣ ತ್ಯಾಗಗಳಿಗೆ ಸಿದ್ಧರಾಗಬೇಕೆಂದು ಅವರು ವಿನಂತಿಸಿದ್ದಾರೆ.

ಟ್ರಂಪ್-ಕ್ಸಿ ಜಿನ್‌ಪಿಂಗ್ ಭೇಟಿಯ ಮೇಲೆ ಜಗತ್ತಿನ ಕಣ್ಣು!:

ಜಾಗತಿಕ ರಾಜತಾಂತ್ರಿಕತೆಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇ 13 ರಿಂದ 15 ರವರೆಗೆ ಚೀನಾಕ್ಕೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿಶೇಷ ಆಹ್ವಾನದ ಮೇರೆಗೆ ಈ ಭೇಟಿ ನಡೆಯುತ್ತಿದ್ದು, ಕಳೆದ ಒಂಬತ್ತು ವರ್ಷಗಳಲ್ಲಿ ಅಮೆರಿಕದ ಅಧ್ಯಕ್ಷರೊಬ್ಬರು ಚೀನಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:28 pm, Mon, 11 May 26

Source link

ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯೋ ದಳಪತಿ ವಿಜಯ್ ಈಗಿನ ಸ್ಯಾಲರಿ ಎಷ್ಟು? – Kannada News | Thalapathy Vijay’s CM Salary: From 100 Cr Films to Public Service – What’s His Pay Now?

ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರ ಸ್ವೀಕರಿಸಿದ್ದಾರೆ. ಪ್ರತಿ ಸಿನಿಮಾಗೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದ ಅವರು, ಈಗ ಚಿತ್ರರಂಗ ತೊರೆದು ಜನರ ಸೇವೆ ಮಾಡಲು ಮುಂದಾಗಿದ್ದಾರೆ. ಮೇ 10ರಂದು ನಡೆದ ಕಾರ್ಯಕ್ರಮದಲ್ಲಿ ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಹಾಗಾದರೆ, ವಿಜಯ್ ಅವರಿಗೆ ಸಿಗುವ ಸಂಬಳ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

ದೇಶದಲ್ಲಿ ಹಲವು ರಾಜ್ಯಗಳಿದ್ದು, ಎಲ್ಲಾ ರಾಜ್ಯಗಳಲ್ಲೂ ಮುಖ್ಯಮಂತ್ರಿಗೆ ನೀಡುವ ಸಂಭಾವನೆ ಏಕರೂಪದಲ್ಲಿ ಇಲ್ಲ. ತಮಿಳುನಾಡು ಮುಖ್ಯಮಂತ್ರಿ ಆಗಿರೋ ವಿಜಯ್​​ಗೆ ಈಗ ಮೂಲ ಮಾಸಿಕ ವೇತನ 2,05,000 ರೂಪಾಯಿ. ಇತರ ರಾಜ್ಯಗಳಿಗೆ ಹೋಲಿಸಿದರೆ ಇದು ತುಸು ಕಡಿಮೆಯೇ. ಆದರೆ, ವಿವಿಧ ಭತ್ಯೆಗಳನ್ನೂ ಸೇರಿಸಿದರೆ ಸಿಎಂ ವಿಜಯ್ ಅವರ ಒಟ್ಟು ಮಾಸಿಕ ವೇತನ ಸುಮಾರು 2,85,000 ರೂಪಾಯಿ ಆಗಲಿದೆ.

ಅಂದರೆ, ದಳಪತಿ ವಿಜಯ್ ಅವರ ವಾರ್ಷಿಕ ಸಂಭಾವನೆ ಸುಮಾರು 34,20,000 ರೂಪಾಯಿ. ವಿಜಯ್ ಅವರು ನೂರಾರು ಕೋಟಿ ರೂಪಾಯಿ ಸಂಭಾವನೆ ಬಿಟ್ಟು ಈಗ ಸಿಎಂ ಆಗಿದ್ದಾರೆ. ಸಂಭಾವನೆ ಕಡಿಮೆ ಇದ್ದರೂ, ಸಿಎಂಗೆ ಅಧಿಕಾರ ಹೆಚ್ಚಿರುತ್ತದೆ. ಹೀಗಾಗಿ, ಎರಡೂ ಸಂಭಾವನೆಯನ್ನು ಹೋಲಿಕೆ ಮಾಡೋದು ಸರಿಯಲ್ಲ ಎಂಬ ಮಾತು ವ್ಯಕ್ತವಾಗಿದೆ.

ಇನ್ನು, ಚೆನ್ನೈನ ಪ್ರತಿಷ್ಠಿತ ಪ್ರದೇಶದಲ್ಲಿ ಸುಸಜ್ಜಿತ ಸರ್ಕಾರಿ ಬಂಗಲೆಯನ್ನು ವಿಜಯ್​​ಗೆ ನೀಡಲಾಗುತ್ತದೆ. ಇದರಲ್ಲಿ ಕ್ಯಾಂಪ್ ಆಫೀಸ್ ಮತ್ತು ಸಿಬ್ಬಂದಿ ವರ್ಗಕ್ಕೆ ಬೇಕಾದ ಎಲ್ಲಾ ಸೌಕರ್ಯಗಳಿರುತ್ತವೆ. ವಿಜಯ್ ಚೆನ್ನೈನಲ್ಲಿ ಮನೆ ಹೊಂದಿರುವುದರಿಂದ ಸರ್ಕಾರಿ ಬಂಗಲೆಯಲ್ಲಿ ಮುಂದುವರಿಯುತ್ತಾರೋ ಅಥವಾ ಇಲ್ಲವೋ ಗೊತ್ತಿಲ್ಲ.
ಇನ್ನು, ವಿಜಯ್ ಅವರಿಗೆ ಸರ್ಕಾರದಿಂದ ಬುಲೆಟ್ ಪ್ರೂಫ್ ಎಸ್‌ಯುವಿ ಸಿಗುತ್ತದೆ. ಪೂರ್ಣ ಪ್ರಮಾಣದ ಬೆಂಗಾವಲು ವಾಹನ ಸದಾ ವಿಜಯ್ ಜೊತೆ ಇರುತ್ತದೆ. ಅಧಿಕೃತ ಪ್ರವಾಸಗಳ ವೇಳೆ ವಿಮಾನ, ರೈಲು ಅಥವಾ ರಸ್ತೆ ಸಂಚಾರದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಸರ್ಕಾರವೇ ಮಾಡಲಿದೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಸ್ವೀಕರಿಸುವಾಗ ಭಾವುಕರಾದ ತ್ರಿಷಾ ಕೃಷ್ಣನ್

ವಿಜಯ್ ಅವರಿಗೆ Z+ ದರ್ಜೆಯ ಭದ್ರತೆ ನೀಡಲಾಗುತ್ತದೆ. ಮುಖ್ಯಮಂತ್ರಿಯವರ ನಿವಾಸ ಮತ್ತು ಅವರು ಪ್ರಯಾಣಿಸುವ ಮಾರ್ಗಗಳಲ್ಲಿ 24 ಗಂಟೆಗಳ ಕಾಲ ಶಸ್ತ್ರಸಜ್ಜಿತ ಪೊಲೀಸರು ಕಾವಲು ಕಾಯುತ್ತಾರೆ. ನಿವೃತ್ತಿಯ ನಂತರವೂ ಹಲವು ಸೌಲಭ್ಯ ವಿಜಯ್​​ಗೆ ಸಿಗುತ್ತದೆ. ಪಿಂಚಣಿ, ಉಚಿತ ವೈದ್ಯಕೀಯ ಸೌಲಭ್ಯ, ರೈಲು ಪ್ರಯಾಣ ಮತ್ತು ಕಚೇರಿ ನಿರ್ವಹಣೆಗೆ ಸಿಬ್ಬಂದಿ ಸೇರಿದಂತೆ ಹಲವು ಸೌಲಭ್ಯಗಳು ಮುಂದುವರಿಯಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾನೂನು ಉಲಂಘಿಸಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ದ ಶಾಲಾ ವಾಹನಗಳು RTO ವಶಕ್ಕೆ !

ಮೈಸೂರು, ಮೇ 11: ಮೈಸೂರು ಆರ್​ಟಿಓ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಎರಡು ಶಾಲಾ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ‘ದ ಲರ್ನಿಂಗ್ ಕರ್ವ್ ಇಂಟರ್ನ್ಯಾಷನಲ್ ಶಾಲೆ’ಗೆ ಸೇರಿದ ಒಂದು ವಾಹನ ಮತ್ತು ಗುರುತು ಹಾಕದ ಮತ್ತೊಂದು ವಾಹನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಿದ ವಾಹನಗಳ ಸ್ಥಿತಿ ಆತಂಕಕಾರಿಯಾಗಿದ್ದು, ಮಕ್ಕಳ ಸುರಕ್ಷತೆಗೆ ಸಂಪೂರ್ಣವಾಗಿ ಧಕ್ಕೆ ತರುವಂತಿತ್ತು.

ಒಂದನೇ ವಾಹನದ ಮುಂಭಾಗದ ಗಾಜು ಸಂಪೂರ್ಣವಾಗಿ ಬಿರುಕುಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿತ್ತು. ತುರ್ತು ನಿರ್ಗಮನ ದ್ವಾರದ ಗಾಜು ಹ್ಯಾಮರ್‌ನಿಂದ ಹೊಡೆದರೂ ಒಡೆಯಲಿಲ್ಲ, ಇದರಿಂದಾಗಿ ಅಪಾಯದ ಸಂದರ್ಭದಲ್ಲಿ ಮಕ್ಕಳನ್ನು ಹೊರಗೆ ತರಲು ಸಾಧ್ಯವಿಲ್ಲ. ಅಲ್ಲದೆ, ವಾಹನಕ್ಕೆ ಎಂಟು ತಿಂಗಳ ಹಿಂದೆಯೇ ಎಫ್‌ಸಿ ಅವಧಿ ಮುಗಿದಿದ್ದು, ವಿಮೆ ಮತ್ತು ತೆರಿಗೆ ಪಾವತಿಯಾಗಿರಲಿಲ್ಲ. ಎರಡನೇ ವಾಹನದಲ್ಲಿ ಯಾವುದೇ ಶಾಲೆಯ ವಿವರಗಳು ಇರಲಿಲ್ಲ. ಮಕ್ಕಳ ಭದ್ರತೆ ದೃಷ್ಟಿಯಿಂದ ಇಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಎಆರ್​ಟಿಓ ರಾಜ್‌ಕುಮಾರ್ ತಿಳಿಸಿದ್ದಾರೆ. ಈಗಾಗಲೇ 138 ವಾಹನಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೃನಾಲ್ ಪಾಂಡ್ಯ ಅಲ್ಲೇ ಸಾಯಬೇಕಿತ್ತು… ಇದೆಂತಹ ನೀಚತನ..! – Kannada News | IPL 2026: S. Badrinath Under Fire for Toxic Comment on Krunal Pandya’s Injury

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯವು ಕೇವಲ ಆಟದ ಕಾರಣಕ್ಕಷ್ಟೇ ಅಲ್ಲದೆ, ಕಾಮೆಂಟರಿ ಬಾಕ್ಸ್‌ನಿಂದ ಬಂದ ಒಂದು ವಿವಾದಾತ್ಮಕ ಹೇಳಿಕೆಯಿಂದಾಗಿ ಸುದ್ದಿಯಲ್ಲಿದೆ. ಆರ್​ಸಿಬಿ ಆಟಗಾರ ಕೃನಾಲ್ ಪಾಂಡ್ಯ ಅವರ ಗಾಯದ ಬಗ್ಗೆ ತಮಾಷೆ ಮಾಡಿದ ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದರಿನಾಥ್ ಅವರು ಈಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಘಟನೆಯ ವಿವರ:

ಮೇ 10 ರಂದು ನಡೆದ ನಿರ್ಣಾಯಕ ಪಂದ್ಯದಲ್ಲಿ ಆರ್​ಸಿಬಿ ಪರ ಬ್ಯಾಟಿಂಗ್ ಮಾಡುತ್ತಿದ್ದ ಕೃನಾಲ್ ಪಾಂಡ್ಯ ತೀವ್ರ ಕಾಲು ಸೆಳೆತದಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ ಎದುರಾಳಿ ತಂಡದ ವಿಕೆಟ್ ಕೀಪರ್ ರಯಾನ್ ರಿಕೆಲ್ಟನ್ ಅವರು ಕೃನಾಲ್ ಸಹಾಯಕ್ಕೆ ಧಾವಿಸಿ ಕ್ರೀಡಾ ಮನೋಭಾವ ಮೆರೆದಿದ್ದರು.

ಈ ದೃಶ್ಯಕ್ಕೆ ಕಾಮೆಂಟೇಟರ್ ಬದರಿನಾಥ್, ಸೆಳೆತ ಅಲ್ಲ, ಮುಂಬೈ ಇಂಡಿಯನ್ಸ್ ತಂಡವರು ನೀ ಅಲ್ಲೇ ಸಾಯಿ ಎಂದರೂ ಪರವಾಗಿಲ್ಲ ಎಂಬಾರ್ಥದಲ್ಲಿ ಕಾಮೆಂಟ್ರಿ ಮಾಡಿದ್ದಾರೆ. ಈ ಆಕ್ಷೇಪಾರ್ಹ ಕಾಮೆಂಟ್ರಿ ಇದೀಗ ವಿವಾದಕ್ಕೆ ಕಾರಣವಾಗಿದೆ.

ಅಭಿಮಾನಿಗಳ ಆಕ್ರೋಶ:

ಈ ಕಾಮೆಂಟ್ರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬದರಿನಾಥ್ ವಿರುದ್ಧ ಟೀಕೆಗಳ ಸುರಿಮಳೆಯೇ ಹರಿದುಬಂದಿದೆ. “ಒಬ್ಬ ಕ್ರೀಡಾಪಟುವಾಗಿ ಮತ್ತೊಬ್ಬ ಆಟಗಾರನ ನೋವಿನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವುದು ಸರಿಯಲ್ಲ” ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೆ ಒಬ್ಬ ಆಟಗಾರನನ್ನು ಅಲ್ಲೇ ಸಾಯಬೇಕಿತ್ತು ಎಂದೇಳುವ ನೀನೆಷ್ಟು ನೀಚ ಎಂದು ಸಿಎಸ್​ಕೆ ತಂಡದ ಮಾಜಿ ಆಟಗಾರನನ್ನು ಕ್ರಿಕೆಟ್ ಪ್ರೇಮಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದರ ಜೊತೆಗೆ  ಇನ್ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟ್ಟರ್) ನಲ್ಲಿ ಅನೇಕರು ಬಿಸಿಸಿಐ ಮತ್ತು ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆಗಳನ್ನು ಟ್ಯಾಗ್ ಮಾಡಿ, ಇಂತಹ “ಟಾಕ್ಸಿಕ್” ಕಾಮೆಂಟೇಟರ್‌ಗಳನ್ನು ಪ್ಯಾನಲ್‌ನಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.

ಅಂದಹಾಗೆ ಕ್ರೀಡೆ ಎಂಬುದು ಕೇವಲ ಗೆಲುವು-ಸೋಲಿನಾಟವಲ್ಲ, ಅದು ಪರಸ್ಪರ ಗೌರವ ಮತ್ತು ಮಾನವೀಯತೆಯ ಪ್ರತೀಕ. ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತು ಪಂದ್ಯವನ್ನು ವಿಶ್ಲೇಷಿಸುವ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಆಟಗಾರನೊಬ್ಬನ ದೈಹಿಕ ನೋವನ್ನು ಕಂಡು ಇಂತಹ ಅಮಾನವೀಯ ಹೇಳಿಕೆ ನೀಡುವುದು ಕ್ರೀಡಾ ಸ್ಫೂರ್ತಿಗೆ ಎಸಗಿದ ದ್ರೋಹ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​​ ವಿರುದ್ಧ ‘ಅಸಭ್ಯ’ವಾಗಿ ಸಂಭ್ರಮಿಸಿದ ಟಿಮ್ ಡೇವಿಡ್

ಎಸ್​. ಬದರಿನಾಥ್ ಅವರ ಈ ಮಾತುಗಳು ಕೇವಲ ಅವರ ವ್ಯಕ್ತಿತ್ವವನ್ನು ಕುಗ್ಗಿಸುವುದಲ್ಲದೆ, ಕ್ರೀಡಾ ಪ್ರಸಾರ ಲೋಕಕ್ಕೇ ಒಂದು ಕಪ್ಪು ಚುಕ್ಕೆಯಾಗಿದೆ. ಇಂತಹ ವಿಷಕಾರಿ ಮಾತುಗಳಿಗೆ ಕಡಿವಾಣ ಬೀಳದಿದ್ದರೆ, ಕಾಮೆಂಟರಿ ಬಾಕ್ಸ್‌ಗಳು ಕ್ರೀಡಾ ವಿಶ್ಲೇಷಣೆಯ ಬದಲಿಗೆ ಕೇವಲ ‘ಅಸಹ್ಯದ ಅಡ್ಡೆ’ಗಳಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.”

Source link

2 ಸರಣಿಗೆ ಆಸ್ಟ್ರೇಲಿಯಾದ 3 ತಂಡಗಳು ಪ್ರಕಟ – Kannada News | Australia Squad For Pakistan and Bangladesh Series

ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ವಿರುದ್ಧದ ಸರಣಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಐಪಿಎಲ್​ ಅಂತ್ಯದ ವೇಳೆಗೆ ಶುರುವಾಗುವ ಪಾಕಿಸ್ತಾನ್ ವಿರುದ್ಧದ ಸರಣಿಯಿಂದ ಆರ್​ಸಿಬಿ ವೇಗಿ ಜೋಶ್ ಹೇಝಲ್​ವುಡ್, ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್​ ಹೊರಗುಳಿದಿದ್ದಾರೆ. ಅಂದರೆ ಈ ಮೂವರು ಐಪಿಎಲ್​ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇವರಲ್ಲದೆ ಇನ್ನೂ ಕೆಲ ಪ್ರಮುಖ ಆಟಗಾರರು ಐಪಿಎಲ್ ಮುಗಿದ ಬಳಿಕವಷ್ಟೇ ಈ ಸರಣಿಗಾಗಿ ತೆರಳಲಿದ್ದಾರೆ. ಅವರೆಂದರೆ…

  • ಟ್ರಾವಿಸ್ ಹೆಡ್ (SRH): ಐಪಿಎಲ್ ಪ್ಲೇಆಫ್‌ ಹಂತದಲ್ಲಿ ಇರುವುದರಿಂದ, ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಂಡು ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ.
  • ಮಿಚೆಲ್ ಮಾರ್ಷ್ (LSG): ಆಸ್ಟ್ರೇಲಿಯಾ ತಂಡದ ನಾಯಕರಾಗಿ ಆಯ್ಕೆಯಾಗಿರುವ ಮಾರ್ಷ, ಐಪಿಎಲ್​ನ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ಬೆನ್ನಲ್ಲೇ ಪಾಕಿಸ್ತಾನಕ್ಕೆ ತೆರಳಲಿದ್ದಾರೆ.
  • ಕೂಪರ್ ಕೊನೊಲಿ, ಕ್ಸೇವಿಯರ್ ಬಾರ್ಟ್ಲೆಟ್, ಬೆನ್ ಡ್ವಾರ್ಶುಯಿಸ್ (PBKS): ಈ ಆಟಗಾರರು ಐಪಿಎಲ್ ಪ್ಲೇಆಫ್ ಮುಗಿದ ನಂತರವಷ್ಟೇ ತಂಡಕ್ಕೆ ಲಭ್ಯವಾಗಲಿದ್ದಾರೆ.
  • ಮ್ಯಾಥ್ಯೂ ಶಾರ್ಟ್ (CSK): ಆರಂಭಿಕ ಪಂದ್ಯಗಳ ನಂತರವಷ್ಟೇ ಶಾರ್ಟ್​ ಆಸ್ಟ್ರೇಲಿಯಾ ತಂಡವನ್ನು ಕೂಡಿಕೊಳ್ಳಲಿದ್ದಾರೆ.
  • ಕ್ಯಾಮರೋನ್ ಗ್ರೀನ್ (KKR): ಕೆಕೆಆರ್ ತಂಡದ ಲೀಗ್ ಹಂತದ ಪಂದ್ಯಗಳ ಬಳಿಕ ಕ್ಯಾಮರೋನ್ ಗ್ರೀನ್ ಆಸ್ಟ್ರೇಲಿಯಾ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಯುವ ಆಟಗಾರರ ಎಂಟ್ರಿ:

ಎರಡು ಸರಣಿಗಳಿಗಾಗಿ ಆಯ್ಕೆಯಾದ ಆಸ್ಟ್ರೇಲಿಯಾ ತಂಡಕ್ಕೆ ಅಂಡರ್-19 ಟೀಮ್​ ನಾಯಕ ಒಲಿವರ್ ಪೀಕ್, ಆಲ್‌ರೌಂಡರ್ ಲಿಯಾಂ ಸ್ಕಾಟ್ ಮತ್ತು ಜೋಯಲ್ ಡೇವಿಸ್ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ, ಸುಮಾರು ಏಳು ವರ್ಷಗಳ ನಂತರ ವೇಗಿ ಬಿಲ್ಲಿ ಸ್ಟಾನ್ಲೇಕ್ ತಂಡಕ್ಕೆ ಮರಳಿರುವುದು ವಿಶೇಷ.

ಬಾಂಗ್ಲಾದೇಶ್ ಸರಣಿಗೆ ಆಸ್ಟ್ರೇಲಿಯಾ ತಂಡಗಳು:

ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಅಲೆಕ್ಸ್ ಕ್ಯಾರಿ, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಬೆನ್  ಡ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಟ್ ಕುನ್ಹೆಮನ್, ಮಾರ್ನಸ್ ಲ್ಯಾಬುಶೇನ್, ಮ್ಯಾಟ್ ರೆನ್ಶಾ, ತನ್ವೀರ್ ಸಂಘ, ಲಿಯಾಮ್ ಸ್ಕಾಟ್, ಆ್ಯಡಂ ಝಂಪಾ.

ಆಸ್ಟ್ರೇಲಿಯಾದ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಟಿಮ್ ಡೇವಿಡ್, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಜೋಯಲ್ ಡೇವಿಸ್, ಆರೋನ್ ಹಾರ್ಡಿ, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮ್ಯಾಟ್ ಕುನ್ಹೆಮನ್, ರಿಲೇ ಮೆರೆಡಿತ್, ಜೋಶ್ ಫಿಲಿಪ್, ಮ್ಯಾಟ್ ರೆನ್ಶಾ, ಆ್ಯಡಂ ಝಂಪಾ.

ಇದನ್ನೂ ಓದಿ: IPL 2026: ಗೆಲುವಿನ ಬೆನ್ನಲ್ಲೇ RCB ಕೋಚ್​ಗೆ ಭಾರಿ ದಂಡ!

ಪಾಕಿಸ್ತಾನ್ ಸರಣಿಗೆ ಆಸ್ಟ್ರೇಲಿಯಾದ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಇಂಗ್ಲಿಸ್, ಮ್ಯಾಟ್ ಕುನ್ಹೆಮನ್, ಮಾರ್ನಸ್ ಲ್ಯಾಬುಶೇನ್, ರಿಲೆ ಮೆರೆಡಿತ್. ಓಲಿ ಪೀಕ್, ಮ್ಯಾಟ್ ರೆನ್ಶಾ, ತನ್ವೀರ್ ಸಂಘ, ಲಿಯಾಮ್ ಸ್ಕಾಟ್, ಮ್ಯಾಥ್ಯೂ ಶಾರ್ಟ್, ಬಿಲ್ಲಿ ಸ್ಟಾನ್ಲೇಕ್, ಆ್ಯಡಂ ಝಂಪಾ.

Published On – 12:41 pm, Mon, 11 May 26

Source link

2.5 ಕೋಟಿ ರೂ. ಮೌಲ್ಯದ ಆಭರಣದಲ್ಲಿ ಇರೋದು ಬರೀ 28 ಗ್ರಾಂ ಬಂಗಾರ! ಅಂಜನಾದ್ರಿ ದೇಣಿಗೆಯಲ್ಲಿ ಮಹಾ ಗೋಲ್‌ಮಾಲ್? – Kannada News | Anjanadri Temple Donation Row: DC Issues Notice to Businessman Over Gold Plated Ornaments

2.50 ಕೋಟಿ ಆಭರಣದಲ್ಲಿ ಇರೋದು ಬರೀ 28 ಗ್ರಾಂ ಬಂಗಾರ!

ಕೊಪ್ಪಳ, ಮೇ 11: ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅದ್ದೂರಿಯಾಗಿ ದೇಣಿಗೆ ನೀಡಿದ್ದ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ಅವರಿಗೆ ಈಗ ಜಿಲ್ಲಾಡಳಿತ ಶಾಕ್ ನೀಡಿದೆ. ಅವರು ನೀಡಿದ್ದ ಆಭರಣಗಳ ಖಚಿತತೆ ಮತ್ತು ಮೌಲ್ಯದ ಬಗ್ಗೆ ಬಿಲ್ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಮುಖ್ಯಾಂಶಗಳು

  • ಅಂಜನಾದ್ರಿ ಹನುಮನಿಗೆ ನೀಡಿದ 2.50 ಕೋಟಿ ಆಭರಣ ಬರೀ ತಾಮ್ರದ ಲೇಪನ.
  • ಕೇವಲ 28 ಗ್ರಾಂ ಬಂಗಾರ ಪತ್ತೆ; ಉದ್ಯಮಿ ಮಹೇಶ ರೆಡ್ಡಿಗೆ ನೋಟಿಸ್.
  • ಅಧಿಕೃತ ಬಿಲ್ ಇಲ್ಲದೆ ಆಭರಣಗಳನ್ನು ಖಜಾನೆಗೆ ಜಮೆ ಮಾಡದ ಜಿಲ್ಲಾಡಳಿತ.

ಏನಾಗಿತ್ತು?

ಕಳೆದ ಮೇ 8ರಂದು ಎಎಂಆರ್ (AMR) ಗ್ರೂಪ್ ಅಧ್ಯಕ್ಷ ಎ. ಮಹೇಶ್ ರೆಡ್ಡಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ದಂಪತಿಗಳ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಬಂಗಾರದ ಪ್ರಭಾವಳಿ, ಕಿರೀಟ ಹಾಗೂ ಗದೆಯನ್ನು ಅರ್ಪಿಸಿದ್ದರು. ಈ ಆಭರಣಗಳ ಮೌಲ್ಯ ಸುಮಾರು 2.50 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ತಿರುಪತಿ ಮಾದರಿಯಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಆಶಯದೊಂದಿಗೆ ಈ ಬೃಹತ್ ದೇಣಿಗೆ ನೀಡಲಾಗಿದೆ ಎಂದು ಅಂದು ಸಂಭ್ರಮಿಸಲಾಗಿತ್ತು.

ತಪಾಸಣೆ ವೇಳೆ ಬಯಲಾದ ಸತ್ಯ

ಉದ್ಯಮಿ ಮಹೇಶ ರೆಡ್ಡಿ ಅವರ ಮನವಿಯ ಮೇರೆಗೆ ಎರಡು ದಿನಗಳ ಕಾಲ ಈ ಆಭರಣಗಳನ್ನು ಆಂಜನೇಯನ ಅಲಂಕಾರಕ್ಕೆ ಬಳಸಲಾಗಿತ್ತು. ಆದರೆ, ಇವುಗಳನ್ನು ಅಧಿಕೃತವಾಗಿ ದೇವಸ್ಥಾನದ ಖಜಾನೆಗೆ ಜಮೆ ಮಾಡಿಕೊಳ್ಳುವ ಮೊದಲು ಜಿಲ್ಲಾಡಳಿತವು ಪರಿಶೀಲನೆ ನಡೆಸಿದಾಗ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ.

2.50 ಕೋಟಿ ಮೌಲ್ಯದ ಚಿನ್ನ ಎಂದು ಹೇಳಲಾದ ಆಭರಣಗಳಲ್ಲಿ ಕೇವಲ 28 ಗ್ರಾಂ ಬಂಗಾರ ಮಾತ್ರ ಪತ್ತೆಯಾಗಿದೆ. ಇವು ಸಂಪೂರ್ಣ ಬಂಗಾರದ ಆಭರಣಗಳಲ್ಲ, ಬದಲಿಗೆ ತಾಮ್ರದ ಮೇಲೆ ಬಂಗಾರದ ಲೇಪನ (Gold Plated) ಮಾಡಲಾದ ಆಭರಣಗಳು ಎಂಬುದು ತಪಾಸಣೆಯಲ್ಲಿ ದೃಢಪಟ್ಟಿದೆ.

ಇದನ್ನೂ ಓದಿ ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!

ದಾಖಲೆ ಸಲ್ಲಿಸಲು ನೋಟಿಸ್

ಅಧಿಕೃತ ಬಿಲ್ ಅಥವಾ ದಾಖಲೆಗಳಿಲ್ಲದೆ ಇವುಗಳನ್ನು ಸರ್ಕಾರಿ ಖಜಾನೆಗೆ ಸೇರಿಸಿಕೊಳ್ಳಲು ಜಿಲ್ಲಾಡಳಿತ ನಿರಾಕರಿಸಿದೆ. ದಾನ ನೀಡಿರುವ ಆಭರಣಗಳ ನಿಖರ ಮೌಲ್ಯ ಮತ್ತು ಚಿನ್ನದ ಪ್ರಮಾಣವನ್ನು ದೃಢೀಕರಿಸುವ ಅಧಿಕೃತ ಬಿಲ್ ನೀಡುವಂತೆ ಮಹೇಶ ರೆಡ್ಡಿ ಅವರಿಗೆ ಸೂಚಿಸಲಾಗಿದೆ. ಇದುವರೆಗೆ ಉದ್ಯಮಿಯಿಂದ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲದ ಕಾರಣ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿಂದೆ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೂ ಅಪಾರ ಪ್ರಮಾಣದ ಚಿನ್ನ ದೇಣಿಗೆ ನೀಡಿದ್ದ ಮಹೇಶ ರೆಡ್ಡಿ ಅವರು, ಅಂಜನಾದ್ರಿಯಲ್ಲಿ ಇಂತಹ ವಿವಾದಕ್ಕೆ ಸಿಲುಕಿರುವುದು ಈಗ ಭಕ್ತರಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುವೇಂದು ಅಧಿಕಾರಿ ಪಿಎ ಕೊಲೆ ಪ್ರಕರಣ: ಶಂಕಿತರ ಪತ್ತೆಗೆ ನೆರವಾದ ‘UPI’ ಪೇಮೆಂಟ್ – Kannada News | Suvendu Adhikari’s PA murder case, UPI payment led police to nab 3 suspects

ಚಂದ್ರನಾಥ್ ರಥ್ ಮತ್ತು ಸುವೇಂದು ಅಧಿಕಾರಿ ಚಿತ್ರImage Credit source: ANI

ಕೋಲ್ಕತಾ, ಮೇ 11: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಕಳೆದ ಬುಧವಾರ (ಮೇ 6) ರಾತ್ರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (Chandranath Rath) ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ವಿಶಾಲ್ ಶ್ರೀವಾಸ್ತವ, ರಾಜ್ ಸಿಂಗ್ ಮತ್ತು ಮಯಂಕ್ ಮಿಶ್ರಾ ಎನ್ನುವ ಶಂಕಿತರನ್ನು ಬಂಧಿಸಿದ್ದಾರೆ. ಈ ಹೈ ಪ್ರೊಫೈಲ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT), ಆರೋಪಿಗಳು ಬಳಸಿದ ವಾಹನವನ್ನು ಪತ್ತೆಹಚ್ಚಲು ಮುಂದಾದಾಗ ಮಹತ್ವದ ಸುಳಿವು ಲಭ್ಯವಾಗಿದೆ.

ಕೋಲ್ಕತ್ತಾದ ಮಧ್ಯಾಮಗ್ರಾಮ್ ಸಮೀಪದ ಜೆಸೋರ್ ರಸ್ತೆಯಲ್ಲಿ ಚಂದ್ರನಾಥ್ ಅವರು ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿತ್ತು. ಕೊಲೆಗಡುಕರು ಬಳಸಿದ್ದ ಸಿಲ್ವರ್ ಬಣ್ಣದ ನಿಸ್ಸಾನ್ ಮೈಕ್ರಾ (Nissan Micra) ಕಾರು ಕೋಲ್ಕತ್ತಾ ಸಮೀಪದ ಬಾಲಿ ಟೋಲ್ ಪ್ಲಾಜಾವನ್ನು ಹಾದುಹೋಗಿತ್ತು. ಅಲ್ಲಿ ಕಾರಿನಲ್ಲಿದ್ದವರು ಯುಪಿಐ (UPI) ಮೂಲಕ ಟೋಲ್ ಹಣ ಪಾವತಿಸಿದ್ದರು. ಈ ಡಿಜಿಟಲ್ ಹಣ ವರ್ಗಾವಣೆಯ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಆ ಹಣ ಯಾರ ಖಾತೆಯಿಂದ ಹೋಗಿದೆ ಎಂಬ ಮಾಹಿತಿ ಸಿಕ್ಕಿದೆ. ಯುಪಿಐ ಪಾವತಿಯ ಸಮಯ ಮತ್ತು ಟೋಲ್ ಗೇಟ್‌ನ ಸಿಸಿಟಿವಿ ದೃಶ್ಯಗಳನ್ನು ಹೋಲಿಕೆ ಮಾಡಿದಾಗ ಆರೋಪಿಗಳ ಚಲನವಲನ ಸ್ಪಷ್ಟವಾಗಿದೆ.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

ಯುಪಿ ಮತ್ತು ಬಿಹಾರ ಕನೆಕ್ಷನ್

ಕಾರಿನ ನಂಬರ್ ಪ್ಲೇಟ್ ಆಧರಿಸಿ ತನಿಖೆ ನಡೆಸಿದಾಗ, ಅದು ಸಿಲಿಗುರಿಯ ವ್ಯಕ್ತಿಯೊಬ್ಬರ ಹೆಸರಿನಲ್ಲಿರುವುದು ತಿಳಿದುಬಂದಿದೆ. ಆ ವ್ಯಕ್ತಿ ಕಾರನ್ನು ಮಾರಾಟಕ್ಕಿಟ್ಟಾಗ ಉತ್ತರ ಪ್ರದೇಶದ (UP) ಕೆಲವು ವ್ಯಕ್ತಿಗಳು ಸಂಪರ್ಕಿಸಿದ್ದರು. ಸದ್ಯ ಪೊಲೀಸರ ತಂಡಗಳು ಯುಪಿ ಮತ್ತು ಬಿಹಾರಕ್ಕೆ ಧಾವಿಸಿದ್ದು, ಈ ಕೊಲೆಯನ್ನು ವೃತ್ತಿಪರ ಶೂಟರ್‌ಗಳ ಮೂಲಕ ಮಾಡಿಸಲಾಗಿದೆ ಎಂದು ಶಂಕಿಸಲಾಗಿದೆ.

ಚಂದ್ರನಾಥ್ ಕೊಲೆ ನಡೆದ ರೀತಿ

ಚಂದ್ರನಾಥ್ ರಥ್ ಅವರು ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ಸಂಚರಿಸುತ್ತಿದ್ದಾಗ, ಮೈಕ್ರಾ ಕಾರಿನ ಮೂಲಕ ಅವರ ದಾರಿ ತಡೆಯಲಾಗಿತ್ತು. ನಂತರ ನಾಲ್ಕು ಮೋಟಾರ್ ಸೈಕಲ್‌ಗಳಲ್ಲಿ ಬಂದ ಎಂಟು ಮಂದಿ ಸಶಸ್ತ್ರಧಾರಿಗಳು ಅತಿ ಸಮೀಪದಿಂದ ಎಂಟು ಸುತ್ತು ಗುಂಡು ಹಾರಿಸಿದ್ದರು. ಚಂದ್ರನಾಥ್ ಅವರ ಎದೆ ಮತ್ತು ತಲೆಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ

ಈ ಕೊಲೆಯನ್ನು ಬಿಜೆಪಿಯು “ರಾಜಕೀಯ ಪ್ರೇರಿತ ಸಂಚು” ಎಂದು ಕರೆದಿದ್ದು, ತೃಣಮೂಲ ಕಾಂಗ್ರೆಸ್ (TMC) ಮೇಲೆ ಆರೋಪ ಮಾಡಿದೆ. ಆದರೆ ಟಿಎಂಸಿ ಈ ಆರೋಪವನ್ನು ತಳ್ಳಿಹಾಕಿದ್ದು, ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದೆ.

ಸದ್ಯ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಪ್ರಮುಖ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version