ನಮ್ಮ ಮೆಟ್ರೋ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು – Kannada News | Namma Metro Yellow Line: Seventh driverless train arrives in Bengaluru

ಬೆಂಗಳೂರು, ಡಿಸೆಂಬರ್​​ 18: ನಮ್ಮ ಮೆಟ್ರೋದ ಯೆಲ್ಲೋ ಮಾರ್ಗದ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಡ್ರೈವರ್ಲೆಸ್ 7ನೇ ರೈಲು ಬೆಂಗಳೂರು ತಲುಪಿದ್ದು, ಈ ಮಾರ್ಗದಲ್ಲಿ ರೈಲುಗಳ ನಡುವಿನ ಓಡಾಟದ ಸಮಯ ಹೊಸ ವರ್ಷಕ್ಕೆ ಮತ್ತಷ್ಟು ಕಡಿಮೆ ಆಗಲಿದೆ. ಹೊಸ ರೈಲು ಹಳಿಗಿಳಿದ ಬೆನ್ನಲ್ಲೇ 8-10 ನಿಮಿಷಗಳಿಗೆ ಒಂದರಂತೆ ಮೆಟ್ರೋ ಸಂಚರಿಸಲಿದೆ.

ಹೆಬ್ಬಗೋಡಿ ಡಿಪೋ ತಲುಪಿದ ರೈಲು

ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು

ಡಿಸೆಂಬರ್ 10ರಂದು ಕೊಲ್ಕತ್ತಾದ ಟಿಟಾಗರ್​​ನಿಂದ ಹೊರಟಿದ್ದ ಡ್ರೈವರ್ಲೆಸ್ 7ನೇ ರೈಲು ಇಂದು ಸಂಜೆ ಬೆಂಗಳೂರಿನ ಹೆಬ್ಬಗೋಡಿ ಡಿಪೋ ತಲುಪಿದೆ. ಇದು ಜನವರಿಯಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಿದ್ದು, ಆರ್​​.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಯೆಲ್ಲೋ ಲೈನ್​​ನಲ್ಲಿ ಓಡಾಡಲಿದೆ. 19.15 ಕಿಮೀ ವಿಸ್ತೀರ್ಣವಿರುವ ಈ ಮಾರ್ಗದಲ್ಲಿ ಸದ್ಯ 5 ಮೆಟ್ರೋ ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ. ಆಗಸ್ಟ್ 10ರಂದು ಯೆಲ್ಲೋ ಲೈನ್​​ ಉದ್ಘಾಟನೆಯಾಗಿದ್ದು, ಆಗಸ್ಟ್​​ 11ರಿಂದ ವಾಣಿಜ್ಯ ಸಂಚಾರವನ್ನು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಆರಂಭಿಸಿತ್ತು.

ಇದನ್ನೂ ಓದಿ: ಹಳದಿ ಮಾರ್ಗದಲ್ಲಿನ ಮೆಟ್ರೋ ಸ್ಟೇಷನ್​​ಗಳ ಸಮೀಪ ಬಿಎಂಟಿಸಿ ಬಸ್​​ ನಿಲ್ದಾಣಗಳ ವ್ಯವಸ್ಥೆ

ಮೇನಿಂದ ಪಿಂಕ್​​ ಲೈನ್​​ ಮೆಟ್ರೋ ಸಂಚಾರ ಸಾಧ್ಯತೆ

ನಮ್ಮ ಮೆಟ್ರೋದ ಬಹು ನಿರೀಕ್ಷಿತ ಯೋಜನೆಗಳಲ್ಲೊಂದಾದ ಪಿಂಕ್​​ ಲೈನ್​​ನಲ್ಲಿ ಸಂಚಾರ ಮಾಡಲಿರುವ ಚಾಲಕ ರಹಿತ ರೈಲಿನ ಮಾದರಿಯನ್ನು ಬಿಇಎಂಎಲ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಒಟ್ಟು 23 ಚಾಲಕರಹಿತ ರೈಲುಗಳಿಗೆ ಆರ್ಡರ್​ ನೀಡಲಾಗಿದ್ದು, 2026 ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು BMRCL  ಸಿದ್ಧತೆ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ಬ್ಲ್ಯೂ ಲೈನ್​​ ಮತ್ತು ಪಿಂಕ್​​ ಲೈನ್​​ ಮೆಟ್ರೋಗಳಿಗಾಗಿ ಒಟ್ಟು 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಬೋಗಿಗಳನ್ನು BEML ಪೂರೈಸಲಿದೆ. ಮೆಟ್ರೋ ಟ್ರೇನ್‌ಸೆಟ್‌ಗಳನ್ನು ಸಂಪೂರ್ಣವಾಗಿ ಬೆಂಗಳೂರಿನ BEMLನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇಂಜಿನಿಯರಿಂಗ್​​ ಮತ್ತು ನಿರ್ಮಾಣ ಎಲ್ಲವೂ ಇಲ್ಲಿಯೇ ಆಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಪವನ್ ಕಲ್ಯಾಣ್ ಪುತ್ರನಿಗಾಗಿ ನೂರಾರು ಕೋಟಿ ಸುರಿಯಲು ರೆಡಿ’ – Kannada News | Producer wants to make pan world movie with Pawan Kalyan’s son Akira Nanda

ಪವನ್ ಕಲ್ಯಾಣ್ (Pawan Kalyan) ತೆಲುಗು ಚಿತ್ರರಂಗದ ಸ್ಟಾರ್ ನಟ. ಈಗಾಗಲೇ ಅವರು ಚಿತ್ರರಂಗಕ್ಕೆ ಅಲ್ಪ ವಿರಾಮ ಇಟ್ಟು, ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶ ಡಿಸಿಎಂ ಆಗಿರುವ ಪವನ್ ಕಲ್ಯಾಣ್, ಕೆಲವು ಪ್ರಮುಖ ಖಾತೆಗಳನ್ನು ಸಹ ನಿಭಾಯಿಸುತ್ತಿದ್ದಾರೆ. ಆದರೆ ಚುನಾವಣೆಗೆ ಮುಂಚೆ ಒಪ್ಪಿಕೊಂಡಿದ್ದ ಕೆಲ ಸಿನಿಮಾಗಳಲ್ಲಿ ನಟಿಸಿದ್ದು, ಇನ್ನೊಂದು ಸಿನಿಮಾ ಮಾತ್ರ ಬಾಕಿ ಉಳಿದಿದೆ. ಆ ಸಿನಿಮಾದ ಬಳಿಕ ಸಂಪೂರ್ಣವಾಗಿ ಸಿನಿಮಾದಿಂದ ದೂರಾಗುವುದಾಗಿ ಪವನ್ ಕಲ್ಯಾಣ್ ಈಗಾಗಲೇ ಹೇಳಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ. ಹಾಗಾಗಿ ಅಭಿಮಾನಿಗಳು ಪವನ್ ಕಲ್ಯಾಣ್ ಅವರ ಪುತ್ರ ಸಿನಿಮಾಕ್ಕೆ ಬರಬೇಕೆಂದು ಒತ್ತಾಯಿಸುತ್ತಿದ್ದಾರೆ.

ಪವನ್ ಕಲ್ಯಾಣ್ ಪುತ್ರ ಅಕಿರ 21 ವರ್ಷ ವಯಸ್ಸಿನವರಾಗಿದ್ದು ಶಿಕ್ಷಣದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಅಕಿರ ಅವರ ಚಿತ್ರರಂಗ ಪ್ರವೇಶದ ಬಗ್ಗೆ ಚರ್ಚೆಗಳು ಜೋರಾಗಿ ನಡೆದಿವೆ. ಪವನ್ ನಟಿಸಿದ್ದ ಈ ಹಿಂದಿನ ಸಿನಿಮಾ ‘ಓಜಿ’ಯಲ್ಲಿ ಅಕಿರ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅದು ಸುಳ್ಳಾಯ್ತು. ಇದೀಗ ಅಕಿರ, ಸ್ವತಂತ್ರ್ಯ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಪವನ್ ಕಲ್ಯಾಣ್ ಜೊತೆಗೆ ಈ ಹಿಂದೆ ಕೆಲಸ ಮಾಡಿರುವ ನಿರ್ಮಾಪಕ, ವಿತರಕ ಟಿಜಿ ವಿಶ್ವಪ್ರಸಾದ್, ಈ ಬಗ್ಗೆ ಮಾತನಾಡಿದ್ದು, ತಾವು ಪವನ್ ಕಲ್ಯಾಣ್ ಪುತ್ರ ಅಕಿರ ಅನ್ನು ಚಿತ್ರರಂಗಕ್ಕೆ ಲಾಂಚ್ ಮಾಡಲು ಸಜ್ಜಾಗಿರುವುದಾಗಿ ಹೇಳಿದ್ದಾರೆ. ಪವನ್ ಕಲ್ಯಾಣ್ ಪುತ್ರ ಅಕಿರ ಜೊತೆಗೆ ನಾನು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಮಾಡಲು ರೆಡಿ ಇರುವುದಾಗಿ ವಿಶ್ವಪ್ರಸಾದ್ ಹೇಳಿದ್ದಾರೆ. ಅದಕ್ಕಾಗಿ ಎಷ್ಟು ಕೋಟಿ ಖರ್ಚಾದರು ಭರಿಸುವುದಾಗಿ ವಿಶ್ವಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ:ಕಾರು ಉಡುಗೊರೆಯಾಗಿ ಕೊಟ್ಟ ನಟ ಪವನ್ ಕಲ್ಯಾಣ್: ಯಾರಿಗೆ? ಏಕೆ?

ವಿಶ್ವಪ್ರಸಾದ್ ಮಾತ್ರವೇ ಅಲ್ಲದೆ, ತೆಲುಗು ಚಿತ್ರರಂಗದ ನಟ, ನಿರ್ಮಾಪಕ, ರಾಜಕಾರಣಿಯೂ ಆಗಿರುವ ಬಂಡ್ಲ ಗಣೇಶ್ ಸಹ ತಾವು, ಅಕಿರ ಅನ್ನು ಲಾಂಚ್ ಮಾಡಲು ಉತ್ಸುಕರಾಗಿರುವುದಾಗಿ ಈ ಹಿಂದೆಯೇ ಹೇಳಿದ್ದರು. ಇನ್ನು ರಾಜಮೌಳಿ ತಂದೆ ವಿಜಯಪ್ರಸಾದ್ ಸಹ, ಕಾರ್ಯಕ್ರಮವೊಂದರಲ್ಲಿ ಪವನ್ ಪುತ್ರ ಅಕಿರ ಚಿತ್ರರಂಗಕ್ಕೆ ಬರಬೇಕು, ಅವರ ತಾಯಿ ರೇಣು ದೇಸಾಯಿ ಈ ಬಗ್ಗೆ ಯೋಚನೆ ಮಾಡಬೇಕು ಎಂದಿದ್ದರು.

ಇನ್ನು ಅಕಿರ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಆಗಿದ್ದಾರೆ. ಅವರು ಹೊರಗೆ ಕಾಣಿಸಿಕೊಂಡರೂ ಸಹ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ. ಅಕಿರ ಸಹ ಇದೀಗ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಅವರು ಶೀಘ್ರವೇ ಚಿತ್ರರಂಗಕ್ಕೆ ಬರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರೀತಿ ಹೆಸರಲ್ಲಿ ಕಾಮದ ತೀಟೆ ತೀರಿಸಿಕೊಂಡ ಪ್ರಿಯಕರ: ಸಾಲದಕ್ಕೆ ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ – Kannada News | Three Friends Gang Arrested By Magadi Police for Physical Assault on 19 Year Old girl

ರಾಮನಗರ, (ಡಿಸೆಂಬರ್ 18): ಬೆಂಗಳೂರಿನ (Bengaluru ) ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿನಿ (College Student)  ‌ಮೇಲೆ ಸಾಮೂಹಿಕ ‌ಆತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಯುವತಿಯನ್ನು ಪ್ರೀತಿಸುವ ನಾಟಕವಾಡಿ, ಆಕೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಲ್ಲದ್ದೇ, ತಮ್ಮ ಖಾಸಗಿ ಕ್ಷಣದ ವಿಡಿಯೋ ಮುಂದಿಟ್ಟುಕೊಂಡು ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯ ರಾಮನಗರದಲ್ಲಿ (Ramanagar) ಈ ಅಮಾನುಷ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಸದ್ಯ ಪ್ರಿಯಕರ ಸೇರಿ ಆತನ ಇಬ್ಬರು ಸ್ನೇಹಿತರನ್ನು ಮಾಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಕಾಸ್, ಪ್ರಶಾಂತ್ ಮತ್ತು ಚೇತನ್ ಬಂಧಿತ ಆರೋಪಿಗಳು.

ಪ್ರೀತಿ ಬಲೆಗೆ ಬೀಳಿಸಿಕೊಂಡು ಕಾಮದಾಟ

ಏಳು ತಿಂಗಳ ಹಿಂದೆ ವಿಕಾಸ್, ಮಾಗಡಿಯ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ. ಆನಂತರ ಮೂರು ತಿಂಗಳ ಹಿಂದೆ ಪ್ರೀತಿಯ ಹೆಸರಲ್ಲಿ ಯುವತಿಯನ್ನ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ಲೈಂಗಿಕವಾಗಿ ಬಳಿಸಿಕೊಂಡಿದ್ದ. ಸಾಲದಕ್ಕೆ ಕಾಮುಕ ಅದನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದ. ಆನಂತರ ಆ ವಿಡಿಯೋ ಯುವತಿಗೆ ಕಳುಹಿಸಿ ಬೆದರಿಕೆ ಹಾಕಿ ತಾನು ಕರೆದಾಗೆಲ್ಲ ಬರಬೇಕು ಎಂದು ಬ್ಲ್ಯಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ.

ಇದನ್ನೂ ಓದಿ: ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಸಿಂಗರ್ ಮೈಲಾರಿ ಅರೆಸ್ಟ್

ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​​ಮೇಲ್

ಅದರಂತೆ ಕೆಲ ದಿನಗಳ ಹಿಂದೆ ಪ್ರಿಯಕರ ವಿಕಾಸ್, ಯುವತಿಯನ್ನ ಗೆಳೆಯ ಚೇತನ್ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವಿಕಾಸ್ ಹಾಗೂ ಇಬ್ಬರು ಸಹಪಾಠಿಗಳಾದ ಪ್ರಶಾಂತ್ ‌ಹಾಗೂ ಚೇತನ್ ಸೇರಿಕೊಂಡು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದರಿಂದ ನೊಂದ ಯುವತಿ, ಮಾಗಡಿ ಪೊಲೀಸ್ ಠಾಣೆಗೆ ದೂರು‌ ನೀಡಿದ್ದು, ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ‌ಮೂವರನ್ನ ಬಂಧಿಸಿದ್ದಾರೆ.

ವಿಕಾಸ್ ಹಾಗೂ ಪ್ರಶಾಂತ್ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ಚೇತನ್ ಮಾಗಡಿ ಪಟ್ಟಣದಲ್ಲಿ ‌ಎಲೆಕ್ಟ್ರಿಕ್ ಕೆಲಸ ಮಾಡುತ್ತಾನೆ. ಇನ್ನು ಚೇತನ್ ಪತ್ನಿ ಹೆರಿಗೆಗೆ ಹೋಗಿದ್ದ ವೇಳೆ ಮನೆಯಲ್ಲಿಯೇ ಯುವತಿಯ ಮೇಲೆ ಆತ್ಯಾಚಾರ ಎಸಗಿದ್ದಾರೆ. ಇನ್ನು ವಿಕಾಸ್, ಪ್ರೇಯಿಸಿಯೊಂದಿಗೆ ಮಾತ್ರವಲ್ಲ ಬೇರೆ ಬೇರೆ ಯುವತಿಯರ ಜೊತೆ ದೈಹಿಕ ಸಂಪರ್ಕ ನಡೆಸಿರುವ ಬಗ್ಗೆ ಸ್ನೇಹಿತರ ಮುಂದೆ ಹೇಳಿಕೊಂಡಿದ್ದಾನೆ. ಆ ವಿಡಿಯೋ ಹಾಗೂ ವಿಡಿಯೋ ಕೂಡ ವೈರಲ್ ಆಗಿದೆ.

ಇದನ್ನೂ ಓದಿ: ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ ಮೆರೆದ ಗ್ಯಾಂಗ್​​

ಒಟ್ಟಾರೆ ಪ್ರೀತಿಯ ಹೆಸರಲ್ಲಿ ಯುವತಿಯನ್ನ ಬಲೆಗೆ ಬೀಳಿಸಿಕೊಂಡು ನಂತರ ಸ್ನೇಹಿತರ ಜೊತೆಗೂಡಿ ಆತ್ಯಾಚಾರ ಎಸಗಿ ಇದೀಗ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಶಭ್ರಷ್ಟರಿಬ್ಬರ ಸಂಭ್ರಮ; ವಿಜಯ್ ಮಲ್ಯ 70ನೇ ಹುಟ್ಟುಹಬ್ಬಕ್ಕೆ ಪಾರ್ಟಿ ಕೊಟ್ಟ ಲಲಿತ್ ಮೋದಿ – Kannada News | Glorious Evening Lalit Modi hosts birthday bash for Fugitive Vijay Mallya in London

ನವದೆಹಲಿ, ಡಿಸೆಂಬರ್ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit Modi) ಅವರು ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ (Vijay Mallya) ಅವರ ಹುಟ್ಟುಹಬ್ಬದ ಆಚರಣೆಯನ್ನು ಲಂಡನ್‌ನಲ್ಲಿ ಆಯೋಜಿಸಿದ್ದು, ಅವರ ಬೆಲ್‌ಗ್ರೇವ್ ಸ್ಕ್ವೇರ್ ನಿವಾಸಕ್ಕೆ ಹಲವಾರು ಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಿದ್ದರು. ಅತಿಥಿಗಳ ಪಟ್ಟಿಯಲ್ಲಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಶಾ, ನಟ ಇದ್ರಿಸ್ ಎಲ್ಬಾ ಮತ್ತು ಫ್ಯಾಷನ್ ಡಿಸೈನರ್ ಮನೋವಿರಾಜ್ ಖೋಸ್ಲಾ ಕೂಡ ಇದ್ದರು.

ನಿನ್ನೆ ಸಂಜೆಯ ಫೋಟೋಗಳಲ್ಲಿ ಕಿರಣ್ ಮಜುಮ್ದಾರ್ ಶಾ ಅವರು ಖೋಸ್ಲಾ ಅವರೊಂದಿಗೆ ಪೋಸ್ ನೀಡುತ್ತಿರುವುದನ್ನು ಮತ್ತು ಇನ್ನೊಂದರಲ್ಲಿ ಎಲ್ಬಾ ಅವರೊಂದಿಗೆ ಚಾಟ್ ಮಾಡುತ್ತಿರುವುದನ್ನು ನೋಡಬಹುದು. ಫೋಟೋಗ್ರಾಫರ್ ಜಿಮ್ ರೈಡೆಲ್ ಎಕ್ಸ್‌ನಲ್ಲಿ ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಲಂಡನ್‌ನಲ್ಲಿ ವಿಜಯ್ ಮಲ್ಯ ಅವರ 70ನೇ ಪ್ರಿ-ಬರ್ತಡೇ ಪಾರ್ಟಿ ಏರ್ಪಡಿಸಿದ್ದಕ್ಕಾಗಿ ಲಲಿತ್ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್​ ಸಾಲ ಜಟಾಪಟಿ: ಲೆಕ್ಕಪತ್ರಕ್ಕಾಗಿ ಹೈಕೋರ್ಟ್​ ಮೊರೆ ಹೋದ ವಿಜಯ್​ ಮಲ್ಯ

ಲಲಿತ್ ಮೋದಿ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನನ್ನ ಮನೆಯಲ್ಲಿ ನನ್ನ ಸ್ನೇಹಿತ ವಿಜಯ್ ಮಲ್ಯ ಅವರ ಹುಟ್ಟುಹಬ್ಬಕ್ಕೂ ಮುನ್ನ ನಡೆದ ಪಾರ್ಟಿಗೆ ಬಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ.

ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೆಟ್ಟಿಗರು ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಹಲವು ವರ್ಷಗಳ ಕಾಲ ಭಾರತೀಯ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದರೂ ಸಹ ಸಂತೋಷದ ಸಮಯವನ್ನು ಎಂಜಾಯ್ ಮಾಡುತ್ತಿರುವುದಕ್ಕಾಗಿ ಟ್ರೋಲ್ ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಲಲಿತ್ ಮೋದಿ ಆಯೋಜಿಸಿದ್ದ ಖಾಸಗಿ ಕರೋಕೆ ಸಂಜೆಯಲ್ಲಿ ಕೂಡ ಲಲಿತ್ ಮೋದಿ ಹಾಗೂ ವಿಜಯ್ ಮಲ್ಯ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇದರಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ ಸೇರಿದಂತೆ 300ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ

ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಕುಸಿತಕ್ಕೆ ಸಂಬಂಧಿಸಿದ ಕಾನೂನು ತೊಂದರೆಗಳ ನಡುವೆ ವಿಜಯ್ ಮಲ್ಯ ಮಾರ್ಚ್ 2016ರಲ್ಲಿ ಭಾರತವನ್ನು ತೊರೆದರು. 9,000 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿದಂತೆ ವಂಚನೆ ಮತ್ತು ಹಣ ವರ್ಗಾವಣೆ ಆರೋಪದ ಮೇಲೆ ಭಾರತೀಯ ಅಧಿಕಾರಿಗಳು ಅವರನ್ನು ಇಂಗ್ಲೆಂಡ್​​ನಿಂದ ಭಾರತಕ್ಕೆ ಹಸ್ತಾಂತರ ಮಾಡಲು ಹೋರಾಡುತ್ತಲೇ ಇದ್ದಾರೆ.

ಐಪಿಎಲ್ ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಲಿತ್ ಮೋದಿ, ಬಿಡ್ ರಿಗ್ಗಿಂಗ್ ಮತ್ತು ಹಣ ವರ್ಗಾವಣೆ ಸೇರಿದಂತೆ ಹಣಕಾಸಿನ ಅಕ್ರಮಗಳ ಆರೋಪದ ನಂತರ ಅವರನ್ನು ಐಪಿಎಲ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಅದಾದ ನಂತರ 2010ರಲ್ಲಿ ಅವರು ಭಾರತವನ್ನು ತೊರೆದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೊಡಗಿನಲ್ಲಿ ವಿಶಿಷ್ಟ ಕೋವಿ ಹಬ್ಬ: ಬಂದೂಕಿಗೆ ಪೂಜೆ, ಗುಂಡು ಹೊಡೆದು ಶೌರ್ಯ ಮೆರೆದ ಕೊಡವರು

Source link

ಈ ಆಯುರ್ವೇದ ಸಲಹೆಯಿಂದ ಮಗು ಹಾಸಿಗೆ ಒದ್ದೆ ಮಾಡುವುದನ್ನು ತಡೆಯಬಹುದು! – Kannada News | Understanding Bedwetting: Ayurvedic Diagnosis and Solutions for Kids

ರಾತ್ರಿ ಸಮಯದಲ್ಲಿ ಮಗು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಸಾಮಾನ್ಯವಾಗಿ ಯಾರೂ ಕೂಡ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲಿಯೂ ಕೆಲವು ತಾಯಂದಿರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ಮಾಡುವುದು ಸರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಮಗುವಿಗೆ 5 ವರ್ಷ ಆದ ಮೇಲೂ ಬೆಡ್ ವೆಟ್ಟಿಂಗ್ (Bedwetting) ಸಮಸ್ಯೆ ಮುಂದುವರಿದರೆ, ಅದು ಸಹಜವಲ್ಲ ಬದಲಾಗಿ ಆರೋಗ್ಯ ಸಮಸ್ಯೆಯಾಗಿರಬಹುದು. ಹಾಗಾಗಿ ಪೋಷಕರು, ಈ ರೀತಿ ಆಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಈ ಸ್ಟೋರಿ ಮೂಲಕ ಈ ರೀತಿ ಸಮಸ್ಯೆಗೆ ಕಾರಣವೇನು, ಇದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಮಕ್ಕಳು ಬೆಡ್ ವೆಟ್ಟಿಂಗ್ ಮಾಡುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಮಗುವಿನ ಮೂತ್ರಕೋಶ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಅಥವಾ ಮೂತ್ರ ನಿಯಂತ್ರಣದ ಕೊರತೆ ಈ ಸಮಸ್ಯೆಗೆ ಕಾರಣವಾಗಿರಬಹುದು. ಏಕೆಂದರೆ ಮೂತ್ರಕೋಶವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲದಿದ್ದರೆ, ಅದು ಮೂತ್ರವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಬಹುದು. ಜೊತೆಗೆ ಮಗು ಆಳವಾದ ನಿದ್ರೆಯಲ್ಲಿದ್ದರೆ, ಮೂತ್ರಕೋಶ ತುಂಬಿದೆ ಎಂಬ ಸಂಕೇತ ಅವರ ಮೆದುಳನ್ನು ತಲುಪದಿರಬಹುದು. ಅಷ್ಟೇ ಅಲ್ಲ, ಮೂತ್ರನಾಳಗಳ ಹಿಗ್ಗುವಿಕೆಯಿಂದ ಕೆಲವು ಮಕ್ಕಳು ಮೂತ್ರನಾಳದ ಸೋಂಕಿನಿಂದ (UTI) ಬಳಲುತ್ತಿದ್ದು ಪೋಷಕರು ಅದನ್ನು ಗುರುತಿಸಲು ವಿಫಲರಾಗಿರಬಹುದು. ಕೆಲವೊಮ್ಮೆ ಈ ರೀತಿಯ ಸಮಸ್ಯೆ ಆನುವಂಶಿಕವಾಗಿ ಬಂದಿರುತ್ತದೆ. ಪೋಷಕರಿಗೆ ಈಗಾಗಲೇ ಈ ಸಮಸ್ಯೆ ಇದ್ದರೆ, ಮಗುವಿನಲ್ಲಿಯೂ ಕಂಡುಬರಬಹುದು. ಇವುಗಳ ಹೊರತಾಗಿ ಕೆಲವೊಮ್ಮೆ, ಮಗುವಿನ ಮಾನಸಿಕ ಆರೋಗ್ಯ ಸಮಸ್ಯೆಗಳು ಕೂಡ ಈ ಸಮಸ್ಯೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ದೇಹದಲ್ಲಿ ಮೂತ್ರವರ್ಧಕ ಹಾರ್ಮೋನ್ ಮಟ್ಟ ಕಡಿಮೆಯಾಗುವುದು ಸಹ ರಾತ್ರಿಯಲ್ಲಿ ಮೂತ್ರ ವಿಸರ್ಜನೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಹೊಟ್ಟೆ ಮತ್ತು ಕರುಳನ್ನು ಪರೀಕ್ಷಿಸಲು ಮಾತ್ರೆಯಂತಹ ವಿಭಿನ್ನ ಸಾಧನವನ್ನು ಕಂಡುಹಿಡಿದ ವಿಜ್ಞಾನಿಗಳು

ಮಕ್ಕಳು ಬೆಡ್ ವೆಟ್ಟಿಂಗ್ ಮಾಡುವುದನ್ನು ತಡೆಯಲು ಏನು ಮಾಡಬೇಕು?

ನಿಮ್ಮ ಮಗು ಕೂಡ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಈ ರೀತಿಯ ಆಯುರ್ವೇದದಲ್ಲಿ ತಿಳಿಸಿರುವ ಗಿಡಮೂಲಿಕೆ ಔಷಧಿಗಳನ್ನು ಟ್ರೈ ಮಾಡಬಹುದು. ಈ ಮನೆಮದ್ದು ತಯಾರಿಸಲು, 50 ಗ್ರಾಂ ಕಪ್ಪು ಎಳ್ಳು, 25 ಗ್ರಾಂ ಓಂ ಕಾಳು (ಕ್ಯಾರಮ್ ಬೀಜಗಳು) ಮತ್ತು 100 ಗ್ರಾಂ ಬೆಲ್ಲವನ್ನು ಹಾಕಿ ಮಿಶ್ರಣ ಮಾಡಿ. ಕಪ್ಪು ಎಳ್ಳು ಮತ್ತು ಓಂ ಕಾಳನ್ನು ಪುಡಿಮಾಡಿ. ಬೆಲ್ಲವನ್ನು ಮೆತ್ತಗೆ ಮಾಡಿ ಎರಡೂ ಪದಾರ್ಥಗಳನ್ನು ಬೆರೆಸಿ ಮಾತ್ರೆಗಳನ್ನು ತಯಾರಿಸಿ. ಪ್ರತಿದಿನ ನಿಮ್ಮ ಮಗುವಿಗೆ ಈ ಎರಡು ಮಾತ್ರೆಗಳನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಲು ಕೊಡಿ. ಇದರ ಪರಿಣಾಮ ನಿಮಗೆ ತಿಳಿಯುತ್ತದೆ. ಅಥವಾ ಅರ್ಧ ಚಮಚ ಆಮ್ಲಾ ಪುಡಿಯನ್ನು ಎರಡು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಬೆಳಿಗ್ಗೆ ಮತ್ತು ಸಂಜೆ ನಿಮ್ಮ ಮಗುವಿಗೆ ನೀಡಿ. ಇದರ ಜೊತೆಗೆ ನಿಮ್ಮ ಮಗುವಿಗೆ ಮೂತ್ರ ವಿಸರ್ಜಿಸಲು ಸರಿಯಾದ ತರಬೇತಿ ನೀಡಿ. ನಿಯಮಿತವಾಗಿ ಮೂತ್ರ ವಿಸರ್ಜಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಹೇಳಿ ಕೊಡಿ. ಮಲಗುವ ಮುನ್ನ ಮೂತ್ರ ವಿಸರ್ಜನೇ ಮಾಡಿ ಬಳಿಕ ಮಲಗುವ ರೂಢಿ ಬೆಳೆಸಿಕೊಳ್ಳಲು ಸಹಾಯ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಡಾ ಕೇಸ್​​ ವಿಚಾರಣೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ: ವಾದ-ಪ್ರತಿವಾದ ಹೇಗಿತ್ತು? – Kannada News | MUDA Case: Special Court for Peoples Representative postpones hearing to December 23

ಬೆಂಗಳೂರು, ಡಿಸೆಂಬರ್​​ 18: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮುಡಾ ಸೈಟ್ ಹಂಚಿಕೆ ಕೇಸ್ ವಿಚಾರಣೆ ಮುಂದೂಡಿಕೆಯಾಗಿದೆ.  ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್‌ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಆಕ್ಷೇಪ ಸಂಬಂಧ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಡಿ. 23ಕ್ಕೆ ಮುಂದೂಡಿದೆ. ತನಿಖೆಯ ಸ್ಥಿತಿಗತಿ ಬಗ್ಗೆ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿದ್ದು, ತನಿಖೆ ಅಂತಿಮ ಹಂತದಲ್ಲಿದೆ ಎಂದು ಲೋಕಾಯುಕ್ತ ಎಸ್‌ಪಿಪಿ ವೆಂಕಟೇಶ ಅರಬಟ್ಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆರೋಪಪಟ್ಟಿ ಸಲ್ಲಿಕೆಗೂ ಮುನ್ನ ಸರ್ಕಾರದ ಪೂರ್ವಾನುಮತಿ ಬೇಕು. ಅದಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಅಂತಿಮ‌ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುತ್ತೇವೆ ಎಂದು ಕೋರ್ಟ್​​ಗೆ ಲೋಕಾಯುಕ್ತ ಎಸ್‌ಪಿಪಿ ತಿಳಿಸಿದ್ದಾರೆ. ಈಗಾಗಲೇ ನಿಮಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಕೇಸ್ ಡೈರಿ ಸಿದ್ಧವಿದೆಯೇ ಎಂದು ಕೋರ್ಟ್​​ ಪ್ರಶ್ನಿಸಿದ್ದು, ಅದನ್ನು ನಾಳೆ ಸಲ್ಲಿಸುವುದಾಗಿ ಎಸ್​​ಪಿಪಿ ಹೇಳಿದ್ದಾರೆ.

ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಮುಡಾ ರಹಸ್ಯ; 22 ಕೋಟಿ ರೂ. ಲಂಚ ಪಡೆದಿದ್ದ ಮಾಜಿ ಆಯುಕ್ತ, ಇಡಿ ತನಿಖೆಯಲ್ಲಿ ಬಟಾಬಯಲು

ಕೋರ್ಟ್ ಆದೇಶಿಸಿದ ಮೇಲೆ ಸಿಎಂ ಸಿದ್ದರಾಮಯ್ಯ ಸೇರಿ 4 ಆರೋಪಿಗಳ ವಿರುದ್ಧ ತನಿಖೆ ಮಾಡಿಲ್ಲ. ಇವರು ಕಾನೂನಿಗೆ ಬೆಲೆ ಕೊಡುತ್ತಿಲ್ಲವೆಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಹೀಗಾಗಿ ನ್ಯಾಯಾಲಯ ನಮ್ಮ ಅರ್ಜಿಯ ಮೇಲೆ ಆದೇಶ ನೀಡಬೇಕೆಂದು ವಾದಿಸಿದ್ದಾರೆ. ಆದರೆ, ಮೂರು ಜಿಲ್ಲೆಗಳ ಸಿಬ್ಬಂದಿಯೊಂದಿಗೆ ಲೋಕಾಯುಕ್ತ ಪೊಲೀಸರು ಕೆಲಸ ಮಾಡಿದ್ದಾರೆ . ಕೇಸ್ ಡೈರಿ ತಾವು ಪರಿಶೀಲಿಸಿದರೆ ತನಿಖೆ ನಡೆಸಿರುವುದು ತಿಳಿಯುತ್ತದೆ. ತನಿಖಾ ಸ್ಥಿತಿಗತಿ ವರದಿಯನ್ನು ದೂರುದಾರರಿಗೆ ನೀಡುತ್ತೇವೆ. ಅವರು ಅದನ್ನು ಬಹಿರಂಗಪಡಿಸದಂತೆ ನ್ಯಾಯಾಲಯ ನಿರ್ಬಂಧಿಸಬೇಕೆಂದು ಈ ವೇಳೆ ಎಸ್​​ಪಿಪಿ ಆಗ್ರಹಿಸಿದ್ದಾರೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಬಿ ರಿಪೋರ್ಟ್ ಸಂಬಂಧಿಸಿದಂತೆ ಹೆಚ್ಚುವರಿ ವಾದಮಂಡನೆಯಿದ್ದರೆ ಸಲ್ಲಿಸಿ ಎಂದು ಇಡಿ, ದೂರುದಾರ ಸ್ನೇಹಮಯಿ ಕೃಷ್ಣಗೆ  ಸೂಚನೆ ನೀಡಿದೆ. ಬಳಿಕ ವಿಚಾರಣೆ ಡಿ.23ಕ್ಕೆ ಮುಂದೂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿನಿಮಾ ಬಗ್ಗೆ ಇದ್ದ ಈ ತಪ್ಪು ಗ್ರಹಿಕೆ ಈ ವರ್ಷ ಮಾಯವಾಯ್ತು – Kannada News | Movie duration changing year by year

90ರ ದಶಕದಲ್ಲಿ ಅನೇಕ ಸಿನಿಮಾಗಳು ಮೂರು ಗಂಟೆಗಳು ಇದ್ದ ಉದಾಹರಣೆ ಇದೆ. ಆದರೆ, ಕಳೆದ ಒಂದು ದಶಕದ ಸಿನಿಮಾ ನೋಡಿದರೆ ಬಹುತೇಕ ಚಿತ್ರಗಳ ಸಮಯವು ಎರಡು ಗಂಟೆಯಿಂದ ಎರಡೂವರೆ ಗಂಟೆ ಇದೆ. ಇದು ಸ್ಟ್ಯಾಂಡರ್ಡ್ ಎನಿಸಿಬಿಟ್ಟಿದೆ. ಆದರೆ, ಈ ವರ್ಷವು ಇದನ್ನು ಬದಲಿಸೋ ಸೂಚನೆ ಕೊಟ್ಟಿದೆ. ‘ಡೆವಿಲ್’, ‘ಧುರಂಧರ್’ ಸೇರಿದಂತೆ ಹಲವು ಸಿನಿಮಾಗಳು ಈ ನಿಯಮವನ್ನು ಮುರಿದಿವೆ.

ಈಗಿನ ಕಾಲದಲ್ಲಿ ಮನರಂಜನೆಗೆ ನಾನಾ ಆಯ್ಕೆಗಳಿವೆ. ಹೀಗಾಗಿ, ಸಿನಿಮಾ ನೋಡಿಯೇ ಮನರಂಜನೆ ಪಡೆಯಬೇಕು ಎಂಬುದು ಯಾರಿಗೂ ಇಲ್ಲ. ಮೊದಲಿನಷ್ಟು ತಾಳ್ಮೆಯೂ ಜನರಿಗೆ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಕಾರಣದಿಂದಲೇ ಸಿನಿಮಾದ ಅವಧಿಯನ್ನು ಎರಡು ಗಂಟೆಯಿಂದ ಎರಡೂವರೆ ಗಂಟೆಗೆ ಸೀಮಿತ ಮಾಡಲಾಗಿತ್ತು. ಆದರೆ, ಕೆಲವು ನಿರ್ದೇಶಕರು ಧೈರ್ಯ ಮಾಡಿ ಈ ನಿಯಮವನ್ನು ಮುರಿಯುವ ಪ್ರಯತ್ನದಲ್ಲಿ ಇದ್ದಾರೆ ಎನ್ನಬಹುದು.

ಕಳೆದ ವರ್ಷಾಂತ್ಯಕ್ಕೆ ಬಂದ ‘ಪುಷ್ಪ 2’ ಸಿನಿಮಾ 3 ಗಂಟೆ 21 ನಿಮಿಷ ಇತ್ತು. ಈ ವರ್ಷ ಬಂದು ಸೂಪರ್ ಹಿಟ್ ಆದ ‘ಧುರಂಧರ್’ ಚಿತ್ರದ ಅವಧಿ 3 ಗಂಟೆ 36 ನಿಮಿಷ. ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ರನ್ ಟೈಮ್ ಮೂರು ಗಂಟೆಗೆ (2 ಗಂಟೆ 49 ನಿಮಿಷ) ಸನಿಹವಾಗಿದೆ.

ಇದನ್ನೂ ಓದಿ:ಬಾಲಿವುಡ್​​ಗೆ ಎಂಟ್ರಿ ಕೊಡಲಿರುವ ರುಕ್ಮಿಣಿ ವಸಂತ್, ನಟಿ ಹೇಳಿದ್ದೇನು?

‘ಧುರಂಧರ್’ ಸಿನಿಮಾದ ರನ್​ ಟೈಮ್ ಚಿತ್ರಕ್ಕೆ ಮುಳುವಾಗಬಹುದು ಎನ್ನಲಾಗಿತ್ತು. ಆದರೆ, ಈ ಸಿನಿಮಾ 400+ ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನ್ಲಿ ಸಾವಿರ ಕೋಟಿ ರೂಪಾಯಿ ಸಮೀಪಿಸುತ್ತಿದೆ. ಹೀಗಾಗಿ, ರನ್​ ಟೈಮ್ ಮುಖ್ಯವಾಗೋದಿಲ್ಲ.

‘ರಾಜ ಸಾಬ್’ ಹಾಗೂ ‘ಜನ ನಾಯಗನ್’ ಅವಧಿ ಕೂಡ ಮೂರು ಗಂಟೆ ಮೀರಿಸಿದೆ. ‘ರಾಜಾ ಸಾಬ್ ’ 3 ಗಂಟೆ 10 ನಿಮಿಷ ಹಾಗೂ ಜನ ನಾಯಗನ್ 3 ಗಂಟೆ 5 ನಿಮಿಷ ಇದೆ. ಹೀಗಾಗಿ, ರನ್ ಟೈಮ್ ಮುಖ್ಯವಾಗುವುದಿಲ್ಲ ಎಂಬುದನ್ನು ಜನರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಈ ಬದಲಾವಣೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಬಾರಿಗೆ ಡಿಕೆಶಿ ವಿರುದ್ಧ ಅಬ್ಬರಿಸಿ ತೊಡೆ ತಟ್ಟಿದ ವಿಜಯೇಂದ್ರ, ಡಿಸಿಎಂ ತಾಕತ್ತಿಗೆ ಸವಾಲ್ – Kannada News | BJP President BY Vijayendra first time Open Challenged To DCM DK Shivakumar

ಬೆಳಗಾವಿ, (ಡಿಸೆಂಬರ್ 18):ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra)ನಡುವಿನ ಮಾತಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೇ ಮೊದಲ ಬಾರಿಗೆ ವಿಜಯೇಂದ್ರ, ಡಿಕೆಶಿ ವಿರುದ್ಧ ಗಟ್ಟಿ ಧ್ವನಿಯಲ್ಲಿ ಅಬ್ಬರಿಸಿ ತೊಡೆ ತಟ್ಟಲು ಪ್ರಯತ್ನಿಸಿದ್ದಾರೆ. ರಾಜ್ಯದ ಖಜಾನೆ ಲೂಟಿ ಮಾಡಿ ಕಾಂಗ್ರೆಸ್‌ (Congress) ತನ್ನ ಹೈಕಮಾಂಡ್‌ ತೃಪ್ತಿ ಪಡಿಸುತ್ತಿದೆ ಎಂಬ ವಿಜಯೇಂದ್ರ ಹೇಳಿಕೆಗೆ ಕೆಂಡಮಂಡಲಾದ ಡಿಕೆ ಶಿವಕುಮಾರ್, ಕಲೆಕ್ಷನ್‌ ಕಿಂಗ್‌ ಅಂದ್ರೆ ಅದು ವಿಜಯೇಂದ್ರ. ಅವರಪ್ಪನ ಹೆಸರು ಕೆಡಿಸಿದ್ದು ವಿಜಯೇಂದ್ರ, ಅವರ ಕಲೆಕ್ಷನ್‌, ವರ್ಗಾವಣೆ ದಂಧೆ ಎಲ್ಲವನ್ನ ಬಿಚ್ಚಿಡಬೇಕಾ ಎಂದು ಎಂದು ತಿರುಗೇಟು ನೀಡಿದ್ದಾರೆ. ಇದಕ್ಕೆ ವಿಜಯೇಂದ್ರ ಪ್ರತಿಕ್ರಿಯಿಸಿ, ಡಿಕೆಶಿ ತಾಕತ್ತಿಗೆ ಸವಾಲು ಹಾಕಿದ್ದಾರೆ.

ಅಧಿಕಾರದ ಮದ ಮಾತನಾಡಿಸಿದೆ

ಬೆಳಗಾವಿಯಲ್ಲಿಂದು ಮಾತನಾಡಿರುವ  ವಿಜಯೇಂದ್ರ,   ಡಿ.ಕೆ.ಶಿವಕುಮಾರ್ ಮನಬಂದಂತೆ ಮಾತಾಡಿದ್ದಾರೆ. ಅಧಿಕಾರದ ಮದ ಮಾತನಾಡಿಸಿರಬಹುದು.ಯಾರಿಗೋ ದಬ್ಬಾಳಿಕೆ ಮಾಡಿದಂತೆ ನನಗೆ ಮಾಡುವುದಕ್ಕೆ ಬರಬೇಡಿ. ನಾನು ಒಬ್ಬ ಪ್ರತಿನಿಧಿ ಹಾಗೂ ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೇನೆ. ಬಿ.ಎಸ್​.ಯಡಿಯೂರಪ್ಪನವರ ವಿರುದ್ಧ ಹೇಗೆ ಷಡ್ಯಂತ್ರ ಮಾಡಿದ್ದರೋ ಗೊತ್ತಿದೆ. ಅದನ್ನೆಲ್ಲಾ ಈಗ ಮಾತನಾಡುವುದಕ್ಕೆ ಬರಬೇಡಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ನೋಡಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ಡಿಕೆಶಿ ಬಣಕ್ಕೆ ಮತ್ತೆ ರಾಜಣ್ಣ ಟಾಂಗ್

ಡಿಕೆಶಿ ತಾಕತ್ತಿಗೆ ವಿಜಯೇಂದ್ರ ಸವಾಲ್

ಡಿಕೆ ಶಿವಕುಮಾರ್​​ ಅವರಿಂದ ನಾನು ಪಾಠ ಕಲಿಯುವ ಅಗತ್ಯ ಇಲ್ಲ. ಭ್ರಷ್ಟಾಚಾರದ ಪಿತಾಮಹ ಯಾರು ಎಂದು ಕೇಳಿದರೆ ರಾಜ್ಯದಲ್ಲಿ ಡಿಕೆಶಿ ಹೆಸರೇ ಹೇಳ್ತಾರೆ. ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿಹಿಡಿದು ಮಾತನಾಡಲಿ. ನಾವೇನು ಹೆದರಿಕೊಂಡು ಓಡಿ ಹೋಗ್ತಿದ್ದೀವಾ? ಕಾಂಗ್ರೆಸ್​ನವರ ಯೋಗ್ಯತೆ ಏನು ಅನ್ನೋದು ಇಡೀ ದೇಶಕ್ಕೆ ಗೊತ್ತಿದೆ. ತಾಕತ್ತು ಇದ್ದರೆ ಅದೇನು ಬಿಚ್ಚಿಡ್ತಾರೋ ಬಿಚ್ಚಿಡ್ಲಿ ಎಂದು ಸವಾಲ್ ಹಾಕಿದ್ದಾರೆ.

ಈ ಸರ್ಕಾರದ ಯೋಗ್ಯತೆಗೆ ಒಂದು ಗುಂಡಿ ಮುಚ್ಚೋದಕ್ಕೂ ಸಾಧ್ಯ ಆಗಿಲ್ಲ.ಡಿಕೆ ಶಿವಕುಮಾರ್ ಭ್ರಷ್ಟಾಚಾರ ಬಗ್ಗೆ ಮಾತನಾಡದಿದ್ದರೆ ಒಳ್ಳೆಯದು. ಭ್ರಷ್ಟಾಚಾರದ ಪಿತಾಮಹ ಯಾರು ಎಂದು ಕೇಳಿದರೆ ರಾಜ್ಯದಲ್ಲಿ ಡಿಕೆಶಿ ಹೆಸರೇ ಹೇಳ್ತಾರೆ. ಯಾವ ಪುರುಷಾರ್ಥಕ್ಕೆ ಮಾತನಾಡ್ತಿದ್ದೀರಿ. ರಾಜ್ಯದಲ್ಲಿ 2.5 ಲಕ್ಷ ಹುದ್ದೆ ಖಾಲಿ ಇವೆ. ಈ ಸರ್ಕಾರ ಬಂದಾಗಿನಿಂದ ಹುದ್ದೆಗಳನ್ನು ಭರ್ತಿ ಮಾಡಲು ಆಗಿಲ್ಲ. ಸಿಎಂ ತವರು ಜಿಲ್ಲೆಯಲ್ಲಿ ಚೈತ್ರ ಬಿ ಕುರುಬುರು ಗ್ರಾಮ 32 ಬಾರಿ ಕೋಕೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ನಾಚಿಕೆಗೇಡಿನ ಈ ಸರ್ಕಾರ ಆಕೆ ಕೇವಲ 5 ಲಕ್ಷ ರೂ. ಬಹುಮಾನ ಕೊಟ್ಟಿದ್ದಾರೆ. ಸರ್ಕಾರದ ಮುಖಕ್ಕೆ ಆಕೆ ಹಣವನ್ನು ವಾಪಸ್ ಬಿಸಾಡಿದ್ದಾಳೆ. ಖಜಾನೆ ಖಾಲಿಯಾಗಿದ್ದಕ್ಕೆ ಈ ಸರಕಾರ ಹೀಗೆ ಮಾಡುತ್ತಿದೆ ಇಂಥ ಕೆಟ್ಡ ಪರಿಸ್ಥಿತಿ ಹಿಂದೆ ಯಾವ ಸರ್ಕಾರಕ್ಕೂ ಬಂದಿರಲಿಲ್ಲ. ಯಾರಿಗೋ ದಬ್ಬಾಳಿಕೆ ಮಾಡಿದಂತೆ ನನಗೆ ಮಾಡುವುದಕ್ಕೆ ಬರಬೇಡಿ ಎಂದು ಕಿಡಿಕಾರಿದರು.

ಮೊದಲ ಬಾರಿಗೆ ಅಬ್ಬರಿಸಿದ ವಿಜಯೇಂದ್ರ

ಹೌದು….ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಆಯ್ತು ವಿಜಯೇಂದ್ರ ಈ ರೀತಿ ಯಾವಾತ್ತು ಗಟ್ಟಿ ಧ್ವನಿಯಲ್ಲಿ ಡಿಕೆ ಶಿವಕುಮಾರ್ ಅಥವಾ ಸಿದ್ದರಾಮಯ್ಯನವರ ವಿರುದ್ಧ ಮಾತನಾಡಿದ ಉದಾಹರಣೆಗಳಿಲ್ಲ.  ಹೀಗಾಗಿ ವಿಜಯೇಂದ್ರ ವಿರುದ್ಧ ಅಡ್ಜಸ್ಟ್​ಮೆಂಟ್ ರಾಜಕಾರಣದ ಆರೋಪಗಳು ಕೇಳಿಬಂದಿದ್ದವು.  ಆದ್ರೆ, ಇವತ್ತು ಇದೇ ಮೊದಲ ಬಾರಿಗೆ ವಿಜಯೇಂದ್ರ ಸಿಡಿದೆದಿದ್ದು,  ಡಿಕೆಶಿ ವಿರುದ್ಧ ಮನಸೋ ಇಚ್ಚೇ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಅದೇನು ಬಿಚ್ಚಿ ಇಡ್ತಾರೋ ಇಡಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

Source link

World Meditation Day: ಡಿ. 21 ವಿಶ್ವ ಧ್ಯಾನ ದಿನ; ಅಶಾಂತ ಜಗತ್ತಿಗೆ ಧ್ಯಾನವೇ ಶಾಂತಿಯ ದಾರಿ: ರವಿಶಂಕರ್ ಗುರೂಜಿ – Kannada News | World Meditation Day: Sri Sri Ravi Shankar Urges Global Peace and Mental Health

ಕಳೆದ ವರ್ಷ ಜಿನೀವಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 21ನ್ನು ಪ್ರಥಮ ‘ವಿಶ್ವ ಧ್ಯಾನ ದಿನ’ವಾಗಿ ಘೋಷಿಸಿತು. ಈ ಐತಿಹಾಸಿಕ ದಿನದಂದೇ, ಜಗತ್ತಿನಾದ್ಯಂತ 8.5 ಮಿಲಿಯನ್‌ಕ್ಕಿಂತ ಹೆಚ್ಚು ಜನರು ಒಂದೇ ಸಮಯದಲ್ಲಿ ಧ್ಯಾನದಲ್ಲಿ ಭಾಗವಹಿಸಿದ್ದರು. ಇದು ಇತಿಹಾಸದಲ್ಲೇ ಅತಿದೊಡ್ಡ ಸಾಮೂಹಿಕ ಧ್ಯಾನ ಸಮಾಗಮವಾಗಿ ದಾಖಲೆ ನಿರ್ಮಿಸಿತು.

ಈ ಸಂದರ್ಭದಲ್ಲಿ ಜಾಗತಿಕ ಆಧ್ಯಾತ್ಮಿಕ ನಾಯಕ ಹಾಗೂ ಮಾನವತಾವಾದಿ ಗುರುದೇವ್ ಶ್ರೀ ಶ್ರೀ ರವಿ ಶಂಕರರು, ಬುಧವಾರ ಜಿನೀವಾದಲ್ಲಿನ ವಿಶ್ವಸಂಸ್ಥೆಯ ಸಭಾಂಗಣದಿಂದ ಮಾತನಾಡುತ್ತಾ, ಅಶಾಂತಿ, ಸಂಘರ್ಷ ಮತ್ತು ಒತ್ತಡದಿಂದ ಬಳಲುತ್ತಿರುವ ಇಂದಿನ ಜಗತ್ತಿಗೆ ಧ್ಯಾನ ಅತ್ಯವಶ್ಯಕ ಎಂದು ಹೇಳಿದರು. ಧ್ಯಾನವನ್ನು ಜೀವನದ ಅವಿಭಾಜ್ಯ ಭಾಗವನ್ನಾಗಿ ಮಾಡಿಕೊಳ್ಳುವಂತೆ ಅವರು ವಿಶ್ವದ ಜನತೆಗೆ ಕರೆ ನೀಡಿದರು.

ಅದರಂತೆ ಈ ಡಿಸೆಂಬರ್ 19ರಂದು ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮುಖ್ಯ ಭಾಷಣ ನೀಡಲಿದ್ದು, ಡಿಸೆಂಬರ್ 21ರಂದು ವರ್ಲ್ಡ್ ಟ್ರೇಡ್ ಸೆಂಟರ್‌ನಿಂದ (ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ) ಜಾಗತಿಕ ಧ್ಯಾನವನ್ನು ನಡೆಸಲಿದ್ದಾರೆ.

ಸಮಾಜಕ್ಕೂ ಅಗತ್ಯವಾದ ಧ್ಯಾನ:

ಧ್ಯಾನವು ಕೇವಲ ವೈಯಕ್ತಿಕ ಸುಖ–ಶಾಂತಿಗಷ್ಟೇ ಸೀಮಿತವಲ್ಲ, ದಣಿವು, ಒತ್ತಡ, ಘರ್ಷಣೆ, ಅನಿಶ್ಚಿತತೆ ಮತ್ತು ಭಾವನಾತ್ಮಕ ಸಂಕಟಗಳಿಂದ ಬಳಲುತ್ತಿರುವ ಸಂಪೂರ್ಣ ಸಮಾಜಕ್ಕೂ ಧ್ಯಾನ ಅತ್ಯಂತ ಪ್ರಸ್ತುತವಾಗಿದೆ ಎಂದು ಎಂದು ಗುರುದೇವ ತಮ್ಮ ಭಾಷಣದಲ್ಲಿ ಹೇಳಿದರು.

‘ಜಾಗತಿಕ ಶಾಂತಿಗಾಗಿ ವಿಶ್ವವು ಧ್ಯಾನ ಮಾಡುತ್ತದೆ’ ಎಂಬ ಶೀರ್ಷಿಕೆಯಡಿ, ಎರಡನೇ ವಿಶ್ವ ಧ್ಯಾನ ದಿನದ ಶುಭಾರಂಭ ಕಾರ್ಯಕ್ರಮ ಜಿನೀವಾದಲ್ಲಿನ ಯುಎನ್ ಕಚೇರಿಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಜಿನೀವಾದಲ್ಲಿನ ಭಾರತದ ಶಾಶ್ವತ ಮಿಷನ್ ಹಾಗೂ ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿತ್ತು.

ಮಾನವ ಮನಸ್ಸಿನ ಸ್ಥಿರತೆಯ ಅಗತ್ಯ:

ಎಲ್ಲಾ ವಯೋಮಾನದವರಲ್ಲೂ ಮತ್ತು ಎಲ್ಲಾ ದೇಶಗಳಲ್ಲೂ ಆತಂಕ, ದೈಹಿಕ–ಮಾನಸಿಕ ದಣಿವು ಹಾಗೂ ಏಕಾಂಗಿತನ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಬಾಹ್ಯ ಪರಿಹಾರಗಳಷ್ಟೇ ಸಾಕಾಗುವುದಿಲ್ಲ; ಮಾನವ ಮನಸ್ಸಿನ ಸ್ಥಿರತೆಯೂ ಅಗತ್ಯ ಎಂಬ ಸಂದೇಶವನ್ನು ಗುರುದೇವರು ನೀಡಿದರು.

“ಧ್ಯಾನ ಇಂದು ಜಗತ್ತಿಗೆ ಐಶಾರಾಮಿ ವಿಷಯವಲ್ಲ. ಜನಸಂಖ್ಯೆಯ ಮೂರನೇ ಒಂದು ಭಾಗ ಒಂಟಿತನದಿಂದ ಬಳಲುತ್ತಿದ್ದು, ಅರ್ಧದಷ್ಟು ಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಮನಸ್ಸನ್ನು ಶಾಂತಗೊಳಿಸುವ ಮಾರ್ಗ ನಮಗೆ ಬೇಕಾಗಿದೆ. ಇಲ್ಲಿ ಧ್ಯಾನವೇ ಪ್ರಮುಖ ಪಾತ್ರ ವಹಿಸುತ್ತದೆ,” ಎಂದು ಅವರು ಹೇಳಿದರು.

ಧ್ಯಾನದ ಮಹತ್ವ:

ಧ್ಯಾನ ಹಾಗೂ ಪ್ರಜ್ಞಾಪೂರ್ವಕ ಸ್ಥಿತಿ (ಮೈಂಡ್‌ಫುಲ್‌ನೆಸ್) ಕುರಿತು ಮಾತನಾಡಿದ ಗುರುದೇವರು,
“ಮೈಂಡ್‌ಫುಲ್‌ನೆಸ್ ದಾರಿಯಾದರೆ, ಧ್ಯಾನವು ಮನೆ ಇದ್ದಂತೆ. ಧ್ಯಾನ ನಿಮ್ಮನ್ನು ನಿಮ್ಮ ಅಂತರಾಳಕ್ಕೆ ಕೊಂಡೊಯ್ದು ಆಳವಾದ ನೆಮ್ಮದಿಯನ್ನು ನೀಡುತ್ತದೆ. ಕಂಪ್ಯೂಟರ್‌ನಲ್ಲಿ ಅನಾವಶ್ಯಕ ಕಡತಗಳನ್ನು ಡಿಲೀಟ್ ಮಾಡುವಂತೆ, ಧ್ಯಾನ ಮನಸ್ಸಿನಲ್ಲಿರುವ ಅನಗತ್ಯ ಒತ್ತಡವನ್ನು ದೂರಮಾಡುತ್ತದೆ,” ಎಂದು ವಿವರಿಸಿದರು.

ಜಾಗತಿಕ ಸಾಮರಸ್ಯಕ್ಕೆ ಧ್ಯಾನ:

“ನಾವೆಲ್ಲರೂ ಚೈತನ್ಯಮಯವಾಗಿದ್ದೇವೆ. ನಮ್ಮ ಚೈತನ್ಯ ಶಕ್ತಿ ಸಾಮರಸ್ಯಪೂರ್ಣವಾಗಿದೆಯೇ ಎಂಬುದನ್ನು ಗಮನಿಸಬೇಕು. ಇದಕ್ಕೆ ಉತ್ತರವೇ ಧ್ಯಾನ. ಅದು ನಮ್ಮ ಸುತ್ತಲೂ ಏಕತೆ ಮತ್ತು ಶುದ್ಧತೆಯನ್ನು ತರುತ್ತದೆ,” ಎಂದು ಗುರುದೇವರು ಹೇಳಿದರು.

ಐತಿಹಾಸಿಕ ಸಾಧನೆ:

ಕಳೆದ ವರ್ಷ ‘ಗುರುದೇವರೊಂದಿಗೆ ವಿಶ್ವ ಧ್ಯಾನ ಮಾಡುತ್ತದೆ’ ಕಾರ್ಯಕ್ರಮದಲ್ಲಿ 8.5 ಮಿಲಿಯನ್‌ಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದು, ಆರು ಗಿನ್ನಿಸ್ ವಿಶ್ವ ದಾಖಲೆಗಳನ್ನು ಸ್ಥಾಪಿಸಿತು. ಮನೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಸಂಘರ್ಷಪೀಡಿತ ಪ್ರದೇಶಗಳಲ್ಲೂ ಸೇರಿದಂತೆ ವಿವಿಧ ಸಮಾಜ–ಸಮುದಾಯಗಳಿಂದ ಜನರು ಇದರಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪ ದೇವಾಲಯದ 18 ಪವಿತ್ರ ಮೆಟ್ಟಿಲುಗಳ ಮಹತ್ವವೇನು ಗೊತ್ತಾ?

ಭಾರತದ ಶಾಶ್ವತ ಪ್ರತಿನಿಧಿಯ ಮಾತು:

ಜಿನೀವಾದಲ್ಲಿನ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಸನ್ಮಾನ್ಯ ಅರಿಂದಮ್ ಬಾಗ್ಚಿ ಮಾತನಾಡುತ್ತಾ,
“ಸಂಕೀರ್ಣ ಸಂಘರ್ಷಗಳಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ, ಧ್ಯಾನವು ಕೇವಲ ವೈಯಕ್ತಿಕ ಅಭ್ಯಾಸವಲ್ಲ; ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಶಕ್ತಿಶಾಲಿ ಸಾಧನವಾಗಿದೆ,” ಎಂದರು.

182ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ:

ಒಮ್ಮೆ ಪಾಶ್ಚಾತ್ಯ ಜಗತ್ತಿನಲ್ಲಿ ವಿಚಿತ್ರವೆಂದು ಪರಿಗಣಿಸಲಾಗುತ್ತಿದ್ದ ಧ್ಯಾನವನ್ನು, ಗುರುದೇವ್ ಶ್ರೀ ಶ್ರೀ ರವಿ ಶಂಕರರು ಜಾಗತಿಕ ಚಳವಳಿಯಾಗಿ ರೂಪಿಸಿದ್ದಾರೆ. ಶಿಕ್ಷಣ, ಸಂಘರ್ಷ ಪರಿಹಾರ, ರೈತ ಕಲ್ಯಾಣ, ಕಾರಾಗೃಹ ಪುನರ್ವಸತಿ, ಯುವ ನಾಯಕತ್ವ ಮತ್ತು ಕಾರ್ಪೊರೇಟ್ ಒತ್ತಡ ನಿರ್ವಹಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವರು 182ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಶಾಂತ ಮತ್ತು ಅನಿಶ್ಚಿತತೆಯಿಂದ ತುಂಬಿರುವ ಇಂದಿನ ಕಾಲಘಟ್ಟದಲ್ಲಿ, ಶಾಂತಿಯ ನಿಜವಾದ ಕೀಲಿಕೈ ಮಾನವ ಮನಸ್ಸಿನಲ್ಲೇ ಇದೆ ಎಂಬುದನ್ನು ಜಗತ್ತಿಗೆ ನೆನಪಿಸುವ ಕ್ಷಣ ಇದಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:15 pm, Thu, 18 December 25

Source link

Exit mobile version