All posts by nagaraj11081993

HPCL Recruitment 2026: ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ 731 ಹುದ್ದೆಗಳಿಗೆ ನೇಮಕಾತಿ, 60 ಲಕ್ಷ ರೂ. ವರೆಗೆ ಸಂಬಳ

HPCL Recruitment 2026: ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ 731 ಹುದ್ದೆಗಳಿಗೆ ನೇಮಕಾತಿ, 60 ಲಕ್ಷ ರೂ. ವರೆಗೆ ಸಂಬಳ

ಪ್ರತಿಷ್ಠಿತ ಸಾರ್ವಜನಿಕ ವಲಯದ ಇಂಧನ ಕಂಪನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ದೊಡ್ಡ ಪ್ರಮಾಣದ ನೇಮಕಾತಿ ಅಭಿಯಾನವನ್ನು ಘೋಷಿಸಿದೆ. ಕಂಪನಿಯು ಜೂನಿಯರ್ ಎಕ್ಸಿಕ್ಯೂಟಿವ್‌ಗಳು, ಎಂಜಿನಿಯರ್‌ಗಳು, ಅಧಿಕಾರಿಗಳು ಮತ್ತು ಇತರ ಹಲವು ಹುದ್ದೆಗಳು ಸೇರಿದಂತೆ ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ 700 ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಭಿಯಾನದಡಿಯಲ್ಲಿ ಒಟ್ಟು 731 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇವುಗಳಲ್ಲಿ ಜೂನಿಯರ್ ಎಕ್ಸಿಕ್ಯೂಟಿವ್, ಮೆಕ್ಯಾನಿಕಲ್ ಎಂಜಿನಿಯರ್, ಎಲೆಕ್ಟ್ರಿಕಲ್ ಎಂಜಿನಿಯರ್, ಕೆಮಿಕಲ್ ಎಂಜಿನಿಯರ್, ಆಫೀಸರ್ ಮತ್ತು ಹಿರಿಯ ಮಟ್ಟದ ಹುದ್ದೆಗಳು ಸೇರಿವೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಂಪನಿಯ ಅಧಿಕೃತ ವೆಬ್‌ಸೈಟ್ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮೂಲಕ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬಹುದು. ಅರ್ಜಿ ಪ್ರಕ್ರಿಯೆಯು ಫೆಬ್ರವರಿ 25ರಿಂದ ಪ್ರಾರಂಭವಾಗಿದ್ದು ಮಾರ್ಚ್ 25 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.

ಶೈಕ್ಷಣಿಕ ಅರ್ಹತೆ ಏನು?

ಅರ್ಹತೆಗೆ ಸಂಬಂಧಿಸಿದಂತೆ, ಪ್ರತಿ ಹುದ್ದೆಗೆ ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಇವುಗಳಲ್ಲಿ 3 ವರ್ಷಗಳ ಪದವಿಪೂರ್ವ ಪದವಿ, ಪೂರ್ಣ ಸಮಯದ ಡಿಪ್ಲೊಮಾ, ಎಂಜಿನಿಯರಿಂಗ್ ಪದವಿ, ಅಗ್ನಿಶಾಮಕ ಮತ್ತು ಸುರಕ್ಷತಾ ಡಿಪ್ಲೊಮಾ ಹೊಂದಿರುವ ವಿಜ್ಞಾನ ಪದವೀಧರ, ಎಂಬಿಎ, ಚಾರ್ಟರ್ಡ್ ಅಕೌಂಟೆಂಟ್, ವೆಚ್ಚ ಲೆಕ್ಕಪತ್ರಗಾರ, ಕಾನೂನು ಪದವೀಧರ ಮತ್ತು ಇತರ ಸಂಬಂಧಿತ ಪದವಿಗಳು ಸೇರಿವೆ. ಕೆಲವು ಹುದ್ದೆಗಳಿಗೆ ಕೆಲಸದ ಅನುಭವವೂ ಅಗತ್ಯ.

ವಯಸ್ಸಿನ ಮಿತಿ ಮತ್ತು ವೇತನ ಎಷ್ಟು?

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸಿನ ಮಿತಿ ಹುದ್ದೆಯನ್ನು ಅವಲಂಬಿಸಿ 25 ರಿಂದ 43 ವರ್ಷಗಳು. ಕೆಲವು ಹುದ್ದೆಗಳಿಗೆ ಆರಂಭಿಕ ವೇತನವು ತಿಂಗಳಿಗೆ 30,000 ರಿಂದ 280,000 ರೂ. ವರೆಗೆ ಇರಲಿದೆ. ಸೀನಿಯರ್ ಸೈಬರ್ ಸೆಕ್ಯುರಿಟಿ ಸ್ಟ್ರಾಟೆಜಿಸ್ಟ್‌ನಂತಹ ಉನ್ನತ ಹುದ್ದೆಗಳು 50 ರಿಂದ 60 ಲಕ್ಷ ರೂ. ವರೆಗಿನ ವಾರ್ಷಿಕ ಪ್ಯಾಕೇಜ್‌ಗಳನ್ನು ಹೊಂದಿವೆ. ಮೊದಲ ಹಂತವು ಲಿಖಿತ ಪರೀಕ್ಷೆ ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿರುತ್ತದೆ. ಇದರ ನಂತರ ಅಂತಿಮ ಆಯ್ಕೆಗಾಗಿ ಗುಂಪು ಕಾರ್ಯ ಮತ್ತು ಸಂದರ್ಶನ ಇರುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ, ಅವರು “ನಮ್ಮ ಪ್ರಸ್ತುತ ಉದ್ಯೋಗಗಳು” ವಿಭಾಗಕ್ಕೆ ಹೋಗಿ “ಅಧಿಕಾರಿಗಳ ನೇಮಕಾತಿ 2026” ಲಿಂಕ್ ಅನ್ನು ಕ್ಲಿಕ್ ಮಾಡಬೇಕು.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ನಂತರ ಅಭ್ಯರ್ಥಿಗಳು ತಮ್ಮ ಮೂಲ ಮಾಹಿತಿಯನ್ನು ಒದಗಿಸುವ ಮೂಲಕ ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಲಾಗಿನ್ ಆದ ನಂತರ, ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ, ವರ್ಗ, ಲಿಂಗ ಮತ್ತು ವಿಳಾಸದಂತಹ ವಿವರಗಳನ್ನು ಎಚ್ಚರಿಕೆಯಿಂದ ನಮೂದಿಸಿ.

ಮುಂದಿನ ಹಂತದಲ್ಲಿ, ನಿಮ್ಮ ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಸಹಿಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ನೀವು ಅಪ್‌ಲೋಡ್ ಮಾಡಬೇಕಾಗುತ್ತದೆ. ಇದರ ನಂತರ, ನಿಮ್ಮ ವರ್ಗಕ್ಕೆ ಅನುಗುಣವಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಬೇಕು ಮತ್ತು ಫಾರ್ಮ್ ಅನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್​​ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮ್ಮ ಕ್ಷೇತ್ರದ ಜಾತ್ರೆಗೆ ಪ್ರಭಾವ ಬಳಸಿ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?

ಮೈಸೂರು, (ಮಾರ್ಚ್ 14): ಗಲ್ಫ್ ರಾಷ್ಟ್ರದಲ್ಲಿ ಯುದ್ಧ ನಡೆಯುತ್ತಿರುವುದರಿಂದ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಉಂಟಾಗಿದೆ. ಇದು​​ ಹೋಟೆಲ್ ಉದ್ಯಮದ ಕತ್ತು ಹಿಸುಕುವಂತೆ ಮಾಡಿದೆ. ಗ್ಯಾಸ್ ಎಮರ್ಜೆನ್ಸಿ ಗ್ರಾಹಕರ ಉಸಿರುಗಟ್ಟಿಸಿದೆ. ಕಮರ್ಷಿಯಲ್ ಸಿಲಿಂಡರ್​ಗಳು ಸಿಗುತ್ತಿಲ್ಲ. ಕಾಳಸಂತೆಯಲ್ಲಿ ಒನ್ ಟು ಡಬಲ್ ರೇಟ್​ಗೆ ಸೇಲ್ ಮಾಡುತ್ತಿದ್ದಾರೆ. 1 ಸಾವಿರ 950 ರೂಪಾಯಿ ಇರುವ ಸಿಲಿಂಡರ್​ನ 5 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.ಇದರಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯನವರು ತಮ್ಮ ವರುಣಾ ಕ್ಷೇತ್ರದ ವರಕೋಡು ಗ್ರಾಮದ ಜಾತ್ರೆಗೆ ಪ್ರಭಾವ ಬಳಿಸಿ ಒಂದು ಲೋಡ್ ಗ್ಯಾಸ್ ಸಿಲಿಂಡರ್ ಕೊಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಂತ ಮೈಸೂರು ಜಿಲ್ಲಾ‌ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣ ಗೌಡ ಅವರು ಆರೋಪಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡ, ಮುಖ್ಯಮಂತ್ರಿಗಳು ಮನಸ್ಸು ಮಾಡಿದರೆ ತಕ್ಷಣ ಈ ಸಮಸ್ಯೆ ಬಗೆಹರಿಸಬಹುದು. ನಿನ್ನೆ (ಮಾರ್ಚ್ 13) ಸಿಎಂ ವರಕೋಡು ಹಬ್ಬಕ್ಕೂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ದಾರೆ. ಸಿದ್ದರಾಮಯ್ಯ ವರುಣಗೆ ಮಾತ್ರ ಸಿಎಂ ಅಲ್ಲ. ಅವರು ರಾಜ್ಯದ ಸಿಎಂ ಎಂದು ಕೇವಲ ವರಕೋಡು ಗ್ರಾಮದ ಜಾತ್ರೆಗೆ ಗ್ಯಾಸ್ ಕೊಡಿಸದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಸಿಎಂ ಮನಸ್ಸು ಮಾಡಿದರೆ ಏನೂ ಬೇಕಾದರು ಆಗುತ್ತದೆ. ಜಾತ್ರೆಗೂ ಎರಡು ದಿನ ಮೊದಲೇ ಡಿಸಿ ಜೊತೆ ಮಾತನಾಡಿ ಸಿಲಿಂಡರ್ ಕೊಡಿಸಿದ್ದಾರೆ. ಹೀಗಾಗಿ ಹೋಟೆಲ್‌ಗಳಿಗೂ ಕೂಡ ದಿನಕ್ಕೆ ಒಂದೋ ಎರಡೋ ಸಿಲಿಂಡರ್ ಕೊಡಿಸಲು ಸಿಎಂ ಪ್ರಭಾವ ಬೀರಬೇಕು. ಮೈಸೂರಿನಲ್ಲಿ ಸುಮಾರು ಪ್ರತಿನಿತ್ಯ 4,000 ಸಿಲಿಂಡರ್ ಬಳಸಲಾಗುತ್ತದೆ. ಅಷ್ಟು ಸಾಧ್ಯವಿಲ್ಲವೆಂದರೂ ಕನಿಷ್ಠ 700-800 ಸಿಲಿಂಡರ್ ಲಭ್ಯವಾಗುವಂತೆ ಸಿಎಂ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಯಸ್ಸಿಗೆ ಮೀರಿದ ಸಾಧನೆ: ಅಪರೂಪದ ದಾಖಲೆ ಬರೆದ ಅಲ್ಲು ಅರ್ಜುನ್ ಪುತ್ರಿ ಆರ್ಹಾ

ಅಲ್ಲು ಅರ್ಜುನ್ (Allu Arjun), ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟ. ಬಾಕ್ಸ್ ಆಫೀಸ್​​ನಲ್ಲಿ ಅವರ ಸಿನಿಮಾಗಳು ಹಲವು ದಾಖಲೆಗಳನ್ನು ಬರೆದಿವೆ. ಆದರೆ ಇದೀಗ ಅಲ್ಲು ಅರ್ಜುನ್ ಅವರ ಪುತ್ರಿ ಆರ್ಹಾ ಸಹ ಅಪರೂಪದ ದಾಖಲೆ ಬರೆದಿದ್ದಾರೆ. ಅಲ್ಲು ಅರ್ಜುನ್ ಎಷ್ಟೇ ಬಾಕ್ಸ್ ಆಫೀಸ್ ದಾಖಲೆಗಳನ್ನು ಬರೆದಿರಬಹುದು ಆದರೆ ಆರಾ ಬರೆದಿರುವ ಈ ದಾಖಲೆ ಬಹಳ ಅಪರೂಪದ್ದು ಮತ್ತು ವಿಶೇಷವಾದುದು. ಚುರುಕಿನ ಬಾಲಕಿಯಾದ ಆರ್ಹಾ, ಚೆಸ್ ಕ್ಷೇತ್ರದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಪುತ್ರಿ ಆರ್ಹಾ ಎಳವೆಯಿಂದಲೇ ಚೆಸ್ ಬಗ್ಗೆ ಅತೀವ ಆಸಕ್ತಿ ಹೊಂದಿರುವವರಾಗಿದ್ದು, ಕೆಲ ವರ್ಷಗಳ ಹಿಂದೆಯೇ ಒಟ್ಟಿಗೆ ಹಲವರೊಡನೆ ಚೆಸ್ ಆಡಿ ಎಲ್ಲರನ್ನೂ ಸೋಲಿಸಿದ್ದರು. ಇದೀಗ ಚೆಸ್ ಕ್ಷೇತ್ರದಲ್ಲಿಯೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ. ಆರ್ಹಾ ಇದೀಗ ಅತ್ಯಂತ ಕಿರಿಯ ಚೆಸ್ ಟ್ರೈನರ್ ಎನಿಸಿಕೊಂಡಿದ್ದಾರೆ. ಅವರ ಹೆಸರು ಇದೀಗ ‘ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಅಲ್ಲು ಆರ್ಹಾ ತನ್ನ ಐದನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಚೆಸ್ ತರಬೇತುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೈದರಾಬಾದ್‌ನ ಹೈಟೆಕ್ ಸಿಟಿಯಲ್ಲಿರುವ ರಾಯ್ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಅರ್ಹಾ, ಕೇವಲ ಎರಡು ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಚೆಸ್ ತರಬೇತಿ ನೀಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಮಾತ್ರವಲ್ಲದೆ ಆರ್ಹಾ 30 ಕಠಿಣ ಚೆಸ್ ಪಜಲ್​​ಗಳನ್ನು ಸಹ ಪೂರ್ಣಗೊಳಿಸಿದ್ದಾರಂತೆ.

ಇದನ್ನೂ ಓದಿ:ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್​ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ

ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯ ಪ್ರತಿನಿಧಿ ಆರ್ಬಿಟರ್ ಲಿಂಗಂ ಬಾಲಾಜಿ ಅವರ ನೇತೃತ್ವದಲ್ಲಿ ನಡೆಸಲಾದ ಕೌಶಲ್ಯ ಪರೀಕ್ಷೆಯಲ್ಲಿ ಅರ್ಹಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸುಮಾರು 30 ಕ್ಕೂ ಹೆಚ್ಚು ಚೆಸ್ ಪಜಲ್​​ಗಳನ್ನು ಕ್ಷಣಾರ್ಧದಲ್ಲಿ ಬಿಡಿಸುವ ಮೂಲಕ ತಮ್ಮ ಜಾಣ್ಮೆಯನ್ನು ಸಾಬೀತುಪಡಿಸಿದ್ದಾರೆ. ಐದನೇ ವಯಸ್ಸಿಗೆ ಇದು ಸಾಮಾನ್ಯ ಸಾಧನೆಯೇನಲ್ಲ. ಅಲ್ಲು ಅರ್ಜುನ್, ಸ್ನೇಹಾ ರೆಡ್ಡಿ ಮತ್ತು ಅಜ್ಜ ಅಲ್ಲು ಅರವಿಂದ್ ಅವರ ಸಮ್ಮುಖದಲ್ಲಿ ಅರ್ಹಾ ಈ ಗೌರವಕ್ಕೆ ಪಾತ್ರರಾದರು. ಸೋಶಿಯಲ್ ಮೀಡಿಯಾದಲ್ಲಿ ಅರ್ಹಾ ಅವರ ಅವಾರ್ಡ್ ಸ್ವೀಕರಿಸುವ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಸಹಜವಾಗಿಯೇ ಕುಟುಂಬವು ಆರ್ಹಾರ ಈ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದೆ.

ಅರ್ಹಾ ಕೇವಲ ಚೆಸ್‌ನಲ್ಲಿ ಮಾತ್ರವಲ್ಲದೆ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಸಮಂತಾ ಅಭಿನಯದ ‘ಶಾಕುಂತಲಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇವರು, ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಕಲಾವಿದೆಯಾಗಿದ್ದಾರೆ. ಅದಕ್ಕೂ ಮುಂಚೆ ಯೂಟ್ಯೂಬ್ ವಿಡಿಯೋ ಒಂದರಲ್ಲಿ ಸಹ ಆರ್ಹಾ ನಟಿಸಿದ್ದರು. ‘ಅಂಜಲಿ, ಅಂಜಲಿ’ ಹಾಡಿನಲ್ಲಿ ಆರ್ಹಾ ಸಖತ್ ಆಗಿ ನಟಿಸಿದ್ದರು. ಆ ವಿಡಿಯೋನಲ್ಲಿ ಅಲ್ಲು ಅರ್ಜುನ್ ಸಹ ಇದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viral Video: ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ

ಪುಣೆ, ಮಾರ್ಚ್ 14: ಮಹಾರಾಷ್ಟ್ರದ ಪುಣೆಯಲ್ಲಿರುವ ಅಪಾರ್ಟ್​ಮೆಂಟ್​ನೊಳಗೆ ಲಿಫ್ಟ್​​ನಲ್ಲಿ ಹೋಗುವಾಗ ಲಿಫ್ಟ್ (Lift Accident) ಗೇಟ್‌ನಲ್ಲಿ ಮಗುವಿನ ಕೈ ಸಿಲುಕಿಕೊಂಡಿದೆ. ಇದು ಅಪಾರ್ಟ್​ಮೆಂಟ್ ನಿವಾಸಿಗಳಿಗೆ ಸುರಕ್ಷತಾ ಕಳವಳವನ್ನು ಉಂಟುಮಾಡಿದೆ. ಲಿಫ್ಟ್‌ಗಳನ್ನು ಬಳಸುವಾಗ ಅದರಲ್ಲೂ ವಿಶೇಷವಾಗಿ ಮಕ್ಕಳು ಇರುವಾಗ ಜನರು ಹೆಚ್ಚಿನ ಜಾಗರೂಕರಾಗಿರಬೇಕು ಎಂಬುದಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾರ್ಥಿನಿಗೆ ಹಾವು ಕಡಿತ: ಬಾಯಿಂದ ವಿಷ ತೆಗೆಯಲು ಯತ್ನಿಸಿದ ಶಿಕ್ಷಕ ಆಸ್ಪತ್ರೆಗೆ ದಾಖಲು

ಚಿತ್ರದುರ್ಗ, ಮಾರ್ಚ್​ 14: ನಾಗರಹಾವು ಕಡಿತಕ್ಕೊಳಗಾಗಿ (Snake bite) ಒಂದನೇ ತರಗತಿಯ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ನಡೆದಿದೆ. ಸೃಷ್ಟಿ(6) ನಾಗರಹಾವು ಕಡಿತಕ್ಕೊಳಗಾದ ವಿದ್ಯಾರ್ಥಿನಿ. ಶಾಲಾ ಆವರಣದಲ್ಲಿ ಕುಳಿತಿದ್ದಾಗ ನಾಗರಹಾವು ಕಡಿದಿದೆ. ಈ ವೇಳೆ ಶಾಲಾ ಶಿಕ್ಷಕ ರವಿಶಂಕರ್ ಬಾಯಿಂದ ವಿಷ ತೆಗೆಯಲು ಯತ್ನಿಸಿದ್ದಾರೆ. ಸದ್ಯ ಅಸ್ವಸ್ಥಗೊಂಡ ಸೃಷ್ಠಿಯನ್ನು ಖಾಸಗಿ ಆಸ್ಪತ್ರೆಗೆ ಮತ್ತು ರವಿಶಂಕರ್​​ರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕೆರೆಯಲ್ಲಿ ಈಜಲು ಹೋಗಿ ಓರ್ವ ವಿದ್ಯಾರ್ಥಿ ಸಾವು: ಮತ್ತೊಬ್ಬನ ರಕ್ಷಣೆ

ಮಂಡ್ಯದ ಮಳವಳ್ಳಿ ಪಟ್ಟಣದ ದೊಡ್ಡಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳ ಪೈಕಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ನಡೆದಿದೆ. ಕೇಶವ(11) ಸಾವು, ಹೇಮಂತ್​(12) ರಕ್ಷಣೆಗೊಳಗಾದ ವಿದ್ಯಾರ್ಥಿ.

ಇದನ್ನೂ ಓದಿ: ಬಾಗಲಕೋಟೆ ದಲಿತ ಯುವಕನ ಹತ್ಯೆಗೆ ಬಿಗ್ ಟ್ವಿಸ್ಟ್: ಅನುಮಾನಪಟ್ಟು ಹೊಡೆದು ಕೊಂದ್ರಾ?

ಕೇಶವ ಮತ್ತು ಹೇಮಂತ್​ ಮಳವಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಪರೀಕ್ಷೆ ಮುಗಿಸಿ ಕೆರೆಗೆ ಈಜಲು ಹೋಗಿದ್ದಾಗ ಅವಘಡ ಸಂಭವಿಸಿದೆ. ಮಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹೇರೂರು ಬಳಿ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಬೆಂಗಳೂರು ಮೂಲದ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ವಿದ್ಯಾರ್ಥಿಗಳ ತಂಡ ಬೆಂಗಳೂರಿನಿಂದ‌ ಪ್ರವಾಸ‌ಕ್ಕೆ ಬಂದಿದ್ದರು. ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸುದರ್ಶನ್(22) ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬೈಕ್ ನಿಯಂತ್ರಣ ತಪ್ಪಿ ಬಿದ್ದು ಯುವಕ ಸಾವು

ಬೈಕ್​ ನಿಯಂತ್ರಣ ತಪ್ಪಿ ಬಿದ್ದು ಯುವಕ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಹೊರವಲಯದ ಇಂಡಸ್ಟ್ರಿಯಲ್ ಏರಿಯಾ ಬಳಿ ನಡೆದಿದೆ. ಹೊಸಹಳ್ಳಿ ಗ್ರಾಮದ ಮಲ್ಲಿಕಾರ್ಜುನ (21) ಮೃತ ದುರ್ದೈವಿ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವೈಯರ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಆತ್ಮಹತ್ಯೆ ಎಂದು ನಾಟಕವಾಡಿದ್ದ ಪ್ರಿಯಕರ!

ತನ್ನ ಅಜ್ಜಿಯನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬೈಕ್​​ನಲ್ಲಿ ತನ್ನ ಊರು ಹೊಸಹಳ್ಳಿ ಗ್ರಾಮಕ್ಕೆ ತೆರಳುವಾಗ ಘಟನೆ ಸಂಭವಿಸಿದೆ. ಬೈಕ್ ಅಡ್ಡ ಬಂದ ವೇಳೆ ಬ್ರೇಕ್ ಹಾಕಿದ್ದಕ್ಕೆ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹರೀಶ್ ರಾಣಾ ಪ್ರಕರಣದ ಬೆನ್ನಲ್ಲೇ ಹೊಸ ಚರ್ಚೆ: ಕೋಮಾ ಮತ್ತು ಬ್ರೈನ್ ಡೆಡ್ಗೂ ಏನೆಲ್ಲಾ ವ್ಯತ್ಯಾಸ?

ಬಹು ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಹಾಸಿಗೆಯಲ್ಲೇ ಅಚೇತನವಾಗಿ ಮಲಗಿದ್ದ ಹರೀಶ್ ರಾಣಾಗೆ (Harish Rana) ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕೋಮಾ ಮತ್ತು ಬ್ರೈನ್ ಡೆಡ್ ಎಂಬ ಎರಡು ವೈದ್ಯಕೀಯ ಸ್ಥಿತಿಗಳ ಬಗ್ಗೆ ಚರ್ಚೆ ಹೆಚ್ಚಾಗಿದೆ. ಇವು ಎರಡೂ ಗಂಭೀರ ಸ್ಥಿತಿಗಳಾಗಿದ್ದರೂ, ವೈದ್ಯಕೀಯ ಹಾಗೂ ಕಾನೂನು ದೃಷ್ಟಿಯಿಂದ ದೊಡ್ಡ ವ್ಯತ್ಯಾಸಗಳಿವೆ. ಈ ಪ್ರಕರಣದಿಂದ ಒಂದು ಪ್ರಮುಖ ಪ್ರಶ್ನೆ ಎದುರಾಗಿದೆ. ಹರೀಶ್ ರಾಣಾ ಸುಮಾರು 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಹಾಸಿಗೆಯಲ್ಲೇ ಇದ್ದು, ಎಐಐಎಂಎಸ್ ವೈದ್ಯರ ಮೆಡಿಕಲ್ ಬೋರ್ಡ್ ಅವರು ಪರಿಶೀಲಿಸಿ, ಅವರ ಚೇತರಿಕೆಯ ಸಾಧ್ಯತೆ ಇಲ್ಲ ಎಂದು ತಿಳಿಸಿತ್ತು. ಹಾಗಾಗಿ ದಯಾಮರಣಕ್ಕೆ ನ್ಯಾಯಾಲಯದ ಅನುಮತಿ ಅಗತ್ಯವಾಯಿತು. ಆದರೆ ಯಾರಾದರೂ “ಬ್ರೈನ್ ಡೆಡ್” ಆಗಿದ್ದರೆ ಸಾಮಾನ್ಯವಾಗಿ ನ್ಯಾಯಾಲಯದ ಅನುಮತಿ ಬೇಕಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಬೇರೆ ವಿಧಾನ ಅನುಸರಿಸಲಾಗುತ್ತದೆ ಮತ್ತು ಅಂಗದಾನಕ್ಕೂ ಅನುಮತಿ ನೀಡಬಹುದು. ಆದರೆ ಕೋಮಾ ಮತ್ತು ಬ್ರೈನ್ ಡೆಡ್ ನಡುವಿನ ವ್ಯತ್ಯಾಸವೇನು, ಈ ಎರಡು ಪರಿಸ್ಥಿತಿಗಳಲ್ಲಿ ವೈದ್ಯಕೀಯ ಹಾಗೂ ಕಾನೂನು ನಿರ್ಧಾರಗಳು ಏಕೆ ಬೇರೆಬೇರೆ ಆಗಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಕೋಮಾ ಎಂದರೇನು?

ಸಾಮಾನ್ಯವಾಗಿ ಕೋಮಾ ಎನ್ನುವುದು ಗಂಭೀರವಾದ ಮೆದುಳಿನ ಸ್ಥಿತಿ. ಈ ಸಂದರ್ಭದಲ್ಲಿ ವ್ಯಕ್ತಿ ಗಾಢ ಅಚೇತನ ಸ್ಥಿತಿಗೆ ಹೋಗುತ್ತಾನೆ. ಅವನು ಕಣ್ಣು ತೆರೆಯಲು ಸಾಧ್ಯವಿಲ್ಲ, ಮಾತನಾಡಲು ಸಾಧ್ಯವಿಲ್ಲ ಮತ್ತು ದೇಹದ ಚಲನೆಯೂ ಇರುವುದಿಲ್ಲ. ಆದರೆ ಈ ಸ್ಥಿತಿಯಲ್ಲಿ ಮೆದುಳಿನ ಕೆಲವು ಭಾಗಗಳು ಇನ್ನೂ ಕಾರ್ಯನಿರ್ವಹಿಸುತ್ತಿರುತ್ತವೆ. ರೋಗಿ ಉಸಿರಾಡುತ್ತಿರುತ್ತಾನೆ ಅವನ ಹೃದಯದ ಬಡಿತ ನಿಂತಿರುವುದಿಲ್ಲ. ಕೆಲವರು ಕೆಲವು ದಿನಗಳು, ವಾರಗಳು ಅಥವಾ ತಿಂಗಳುಗಳ ನಂತರ ಕೋಮಾದಿಂದ ಹೊರಬರುವ ಸಾಧ್ಯತೆ ಇರುತ್ತದೆ. ಕೆಲ ಸಂದರ್ಭಗಳಲ್ಲಿ ವರ್ಷಗಳ ಕಾಲವೂ ಇದೆ ಸ್ಥಿತಿ ಮುಂದುವರಿಯಬಹುದು. ವೈದ್ಯರು ಸಾಮಾನ್ಯವಾಗಿ ರೋಗಿಯ ಸ್ಥಿತಿಯನ್ನು ನೋಡಿ, ಕೋಮಾ ಎಷ್ಟು ಕಾಲ ಇರಬಹುದು ಮತ್ತು ಚೇತರಿಕೆಯ ಸಾಧ್ಯತೆ ಏನು ಎಂದು ಅಂದಾಜು ಮಾಡುತ್ತಾರೆ. ಆದರೆ ಕೆಲವೊಮ್ಮೆ ನಿಖರವಾಗಿ ಹೇಳುವುದು ಕೂಡ ಕಷ್ಟವಾಗಬಹುದು.

ಬ್ರೈನ್ ಡೆಡ್ ಎಂದರೇನು?

ಸಾಮಾನ್ಯವಾಗಿ ಬ್ರೈನ್ ಡೆತ್ ಎನ್ನುವುದು ಮೆದುಳು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದ ಸ್ಥಿತಿ. ಈ ಸಂದರ್ಭದಲ್ಲಿ ಮೆದುಳಿನ ಎಲ್ಲಾ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತವಾಗಿರುತ್ತವೆ. ವೈದ್ಯರ ವಿಶೇಷ ತಂಡ ಪರೀಕ್ಷೆ ನಡೆಸಿ, ವ್ಯಕ್ತಿಯನ್ನು “ಬ್ರೈನ್ ಡೆಡ್” ಎಂದು ಘೋಷಿಸುತ್ತದೆ. ವೈದ್ಯಕೀಯ ಮತ್ತು ಕಾನೂನು ದೃಷ್ಟಿಯಿಂದ ಇದನ್ನು ಮರಣವೆಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅಂಗದಾನ ಮಾಡಲು ಸಹ ಕಾನೂನು ಅನುಮತಿ ದೊರೆಯುತ್ತದೆ.

ಇದನ್ನೂ ಓದಿ: 13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅನುಮತಿ

ವೈದ್ಯರು ಹೇಗೆ ನಿರ್ಧರಿಸುತ್ತಾರೆ?

ದೆಹಲಿ ಜಿಬಿ ಪಂತ್ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ದಲ್ಜೀತ್ ಸಿಂಗ್ ಅವರ ಪ್ರಕಾರ, ವೈದ್ಯರು ಹಲವು ನ್ಯೂರಾಲಜಿಕಲ್ ಪರೀಕ್ಷೆಗಳ ಮೂಲಕ ರೋಗಿ ಕೋಮಾ ಸ್ಥಿತಿಯಲ್ಲಿದ್ದಾನೆಯೋ ಅಥವಾ ಬ್ರೈನ್ ಡೆಡ್ ಆಗಿದೆಯೋ ಎಂದು ನಿರ್ಧರಿಸುತ್ತಾರೆ. ಬ್ರೈನ್ ಡೆಡ್ ಆಗಿದ್ದರೆ ಕಾನೂನು ಪ್ರಕಾರ ವ್ಯಕ್ತಿಯನ್ನು ಮೃತ ಎಂದು ಪರಿಗಣಿಸಲಾಗುತ್ತದೆ. ಆದರೆ ಕೋಮಾ ಸ್ಥಿತಿಯಲ್ಲಿ ಚೇತರಿಕೆಯ ಸಾಧ್ಯತೆ ಇರುವುದರಿಂದ ವ್ಯಕ್ತಿಯನ್ನು ಮೃತ ಎಂದು ಪರಿಗಣಿಸಲಾಗುವುದಿಲ್ಲ.

ಕೋಮಾ ಪ್ರಕರಣಗಳಲ್ಲಿ ನ್ಯಾಯಾಲಯದ ಅನುಮತಿ ಏಕೆ ಅಗತ್ಯ?

ಸಾಮಾನ್ಯವಾಗಿ ಕೋಮಾ ಸ್ಥಿತಿಯಲ್ಲಿ ರೋಗಿಯಲ್ಲಿ ಚೇತರಿಕೆಯ ಸಾಧ್ಯತೆ ಇರುವುದರಿಂದ ಲೈಫ್ ಸಪೋರ್ಟ್ ವ್ಯವಸ್ಥೆಯನ್ನು ತೆಗೆದುಹಾಕುವುದು ಸೂಕ್ಷ್ಮ ಹಾಗೂ ಕಾನೂನು ಸಂಬಂಧಿತ ವಿಷಯವಾಗುತ್ತದೆ. ವೈದ್ಯರು ಅಥವಾ ಕುಟುಂಬ ಸದಸ್ಯರು ಸ್ವತಃ ಈ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದ ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಅನುಮತಿ ಪಡೆಯಬೇಕು. ನ್ಯಾಯಾಲಯವು ವೈದ್ಯಕೀಯ ಮಂಡಳಿಯ ವರದಿ, ರೋಗಿಯ ಸ್ಥಿತಿ ಮತ್ತು ಚೇತರಿಕೆಯ ಸಾಧ್ಯತೆಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತದೆ. ಹೀಗಾಗಿ ಕೋಮಾ ಮತ್ತು ಬ್ರೈನ್ ಡೆಡ್ ಎರಡೂ ಗಂಭೀರ ವೈದ್ಯಕೀಯ ಸ್ಥಿತಿಗಳಾಗಿದ್ದರೂ, ಮೆದುಳಿನ ಕಾರ್ಯ ಮತ್ತು ಕಾನೂನು ಮಾನ್ಯತೆಯ ದೃಷ್ಟಿಯಿಂದ ಅವುಗಳಲ್ಲಿ ಪ್ರಮುಖ ವ್ಯತ್ಯಾಸಗಳಿವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ನಿತೀಶ್ ಕುಮಾರ್​ ಹೆಲಿಕಾಪ್ಟರ್ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ದಿಕ್ಕಾಪಾಲಾಗಿ ಓಡಿದ ಪೊಲೀಸರು

ಪಾಟ್ನಾ, ಮಾರ್ಚ್ 14: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಆಗಮನಕ್ಕೂ ಮೊದಲು ಬೇಗುಸರೈನಲ್ಲಿರುವ ಹೆಲಿಪ್ಯಾಡ್‌ನೊಳಗೆ ನುಗ್ಗಿದ ಗೂಳಿ ಕೆಲಕಾಲ ಆತಂಕ ಸೃಷ್ಟಿಸಿತು. ಸಮೃದ್ಧಿ ಯಾತ್ರೆಯ ಭಾಗವಾಗಿ ಸಿಎಂ ಭೇಟಿಗೆ ಸಿದ್ಧತೆ ನಡೆಸುತ್ತಿದ್ದಾಗ ನಡೆದ ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಹೆಲಿಪ್ಯಾಡ್​​ಗೆ ನುಗ್ಗಿದ ಗೂಳಿ ಪೊಲೀಸರನ್ನು ಅಟ್ಟಿಸಿಕೊಂಡು ಹೋಗಿದೆ. ಇದರಿಂದ ಹೆದರಿದ ಪೊಲೀಸರು ಜೀವ ಉಳಿಸಿಕೊಳ್ಳಲು ಮೈದಾನದಿಂದ ಹೊರಗೆ ಓಡಿದ್ದಾರೆ. ಮುಖ್ಯಮಂತ್ರಿ ಆಗಮನಕ್ಕೂ ಮುನ್ನ ಸ್ಥಳವನ್ನು ಸುರಕ್ಷಿತಗೊಳಿಸಲಾಗಿತ್ತು.

ಹೆಲಿಪ್ಯಾಡ್ ಪ್ರದೇಶವು ಬಿದಿರಿನ ಬ್ಯಾರಿಕೇಡ್‌ಗಳಿಂದ ಸುತ್ತುವರೆದಿತ್ತು. ಅಧಿಕೃತ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಆದರೂ ಹೇಗೋ ಗೂಳಿ ಎಂಟ್ರಿ ಕೊಟ್ಟಿದೆ. ಈ ಘಟನೆಯ ಸಮಯದಲ್ಲಿ ಯಾರಿಗೂ ಗಾಯವಾಗದಿದ್ದರೂ, ಅನಿರೀಕ್ಷಿತವಾಗಿ ಒಳಗೆ ನುಗ್ಗಿದ ಗೂಳಿ ಹೆಲಿಪ್ಯಾಡ್‌ನಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯ ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ

ರಾಮನಗರ, (ಮಾರ್ಚ್ 14): ಇದೇ ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ 2026ನೇ ಸಾಲಿನ ರಾಜ್ಯ ಬಜೆಟ್​​​​ ಗೆ ಆಡಳಿತರೂಢ ಪಕ್ಷದ ಶಾಸಕ ಇಕ್ಬಾಲ್ ಹುಸೇನ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹೌದು…ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಮಾತನಾಡಿ ರಾಜ್ಯ ಬಜೆಟ್ ನನಗೆ ಸಮಾಧಾನ ತಂದಿಲ್ಲ. ಮುಖ್ಯಮಮಂತ್ರಿಯವರ ಮೇಲಿನ ಭರವಸೆ ಹುಸಿಯಾಗಿದೆ ಎಂದು ಸಿದ್ದರಾಮಯ್ಯ ಮೇಲೆ ಅಸಮಾಧಾನ ಹೊರಹಾಕಿದ್ದು, ಈ ಸಂಬಂಧ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಬಜೆಟ್ ಬಗ್ಗೆ ಅಸಮಾಧಾನಗೊಂಡಿರುವುದ್ಯಾಕೆ ಎನ್ನುವುದಕ್ಕೆ ಇಕ್ಬಾಲ್ ಹುಸೇನ್ ಕಾರಣ ನೀಡಿದ್ದು, ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡದಿದ್ದರಿಂದ ಅಸಮಾಧಾನಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ರಾಮನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ಇಕ್ಬಾಲ್​ ಹುಸೇನ್​, ನನ್ನ ಕ್ಷೇತ್ರದ ಬಗ್ಗೆ ಮಾತನಾಡಿದ್ದೇನೆ. ಯಾರು ಏನಾದರೂ ಹೇಳಲಿ. ನಾನು ಸಿಎಂ ಹಾಗೂ ಡಿಸಿಎಂ ಇಬ್ಬರ ಜೊತೆಗೂ ಚರ್ಚೆ ಮಾಡಿದ್ದೇನೆ. ನನ್ನ ಕ್ಷೇತ್ರದ ಬಗ್ಗೆ ತೋಡಿಕೊಂಡ ನೋವಿಗೆ ಪ್ರತಿಫಲ ಸಿಕ್ಕಿಲ್ಲ. ಹಾಗಾಗಿ ನಾನು ಮಾತನಾಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

Source link

IPL 2026: ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ವಾರ್ನಿಂಗ್..! ಮೌನ ಮುರಿದ ಫ್ರಾಂಚೈಸಿ

2026 ರ ಐಪಿಎಲ್​ಗೆ (IPL 2026) ದಿನಗಣನೆ ಆರಂಭವಾಗಿದೆ. ಲೀಗ್‌ನ 19 ನೇ ಸೀಸನ್ ಮಾರ್ಚ್ 28 ರಿಂದ ಪ್ರಾರಂಭವಾಗಲಿದೆ. ಈ ಸೀಸನ್‌ಗಾಗಿ ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿವೆ. ಬಿಸಿಸಿಐ ಆರಂಭಿಕ ಪಂದ್ಯಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಏತನ್ಮಧ್ಯೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶಿಬಿರದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಸೀಸನ್ ಆರಂಭಕ್ಕೂ ಮುನ್ನ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮಾಜಿ ನಾಯಕ ರೋಹಿತ್ ಶರ್ಮಾಗೆ (Rohit Sharma) ಎಚ್ಚರಿಕೆ ನೀಡಿದ್ದಾರೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸೋಶಿಯಲ್ ಮೀಡಿಯಾ ಪೋಸ್ಟ್​ ಗಾಳಿಯಂತೆ ಹಬ್ಬವುದನ್ನು ಗಮನಿಸಿದ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿ ಈ ಪೋಸ್ಟ್​ಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವ ಕೆಲಸ ಮಾಡಿದೆ.

ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ವಾರ್ನಿಂಗ್?

2026 ರ ಐಪಿಎಲ್ ಆರಂಭಕ್ಕೂ ಮುನ್ನ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮಾಜಿ ನಾಯಕ ರೋಹಿತ್ ಶರ್ಮಾಗೆ ಎಚ್ಚರಿಕೆ ನೀಡಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಡಿದೆ. ವೈರಲ್ ಆಗಿರುವ ಪೋಸ್ಟ್‌ನಲ್ಲಿ, ಐಪಿಎಲ್‌ನಲ್ಲಿ ರನ್ ಬರ ಎದುರಿಸುತ್ತಿರುವ ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ಎಚ್ಚರಿಕೆ ನೀಡಿದ್ದು, ಈ ಬಾರಿ ರನ್ ಗಳಿಸದಿದ್ದರೆ ಅವರನ್ನು ತಂಡದಲ್ಲಿ ಆಡಿಸಲು ಸಾಧ್ಯವಿಲ್ಲ ಎಂದು ಮುಂಬೈ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಮಾತ್ರವಲ್ಲದೆ ರೋಹಿತ್ ಅವರ ಪ್ರದರ್ಶನದ ಬಗ್ಗೆ ಮ್ಯಾನೇಜ್‌ಮೆಂಟ್ ಕೂಡ ಅಸಮಾಧಾನಗೊಂಡಿದೆ ಎಂದು ಬರೆಯಲಾಗಿದೆ.

ಆಕ್ಸಿಜನ್ ಎಂಬ ಹೆಸರಿನ ಖಾತೆಯಿಂದ ಈ ಪೋಸ್ಟ್ ಪ್ರಕಟವಾಗಿದ್ದು, ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತಲ್ಲಣ ಸೃಷ್ಟಿಸಿದೆ. ಇತ್ತ ಈ ಪೋಸ್ಟ್​ ನೋಡಿದ ರೋಹಿತ್ ಅಭಿಮಾನಿಗಳು ಪಾಂಡ್ಯ ವಿರುದ್ಧ ಕಿಡಿಕಾರಲು ಶುರು ಮಾಡಿದ್ದಾರೆ. ಪಾಂಡ್ಯ ಮೇಲೆ ನಿಂದನೆಗಳ ಸುರಿಮಳೆಗೈಯಲಾರಂಭಿಸಿದ್ದಾರೆ. ಈ ಪೋಸ್ಟ್​ ನೋಡಿ ಕೂಡಲೇ ಎಚ್ಚೆತ್ತುಕೊಂಡಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಹಾರ್ದಿಕ್ ಪಾಂಡ್ಯರ GIF ಅನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ‘ಹಾಗೆನಾದರೂ ಇದೆಯಾ’ ಎಂದು ಹಾರ್ದಿಕ್​ರನ್ನು ತಮಾಷೆಯಾಗಿ ಪ್ರಶಸ್ತಿದೆ. ಇದರ ಜೊತೆಗೆ ತಮಾಷೆಯ ಎಮೋಜಿಯನ್ನು ಹಂಚಿಕೊಂಡಿದೆ. ಅಂದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಪೋಸ್ಟ್​ನಲ್ಲಿ ನಿಜಾಂಶವಿಲ್ಲ. ಇದೆಲ್ಲ ಶುದ್ಧ ಕಟ್ಟುಕತೆ ಎಂದು ಮುಂಬೈ ಇಂಡಿಯನ್ಸ್ ಖಚಿತ ಪಡಿಸಿದೆ.

IPL 2026: ಐಪಿಎಲ್ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದ ಆರ್​ಸಿಬಿ- ಎಸ್​ಆರ್​ಹೆಚ್

ಐದು ಬಾರಿಯ ಚಾಂಪಿಯನ್

ವಾಸ್ತವವಾಗಿ 2013 ರಿಂದ ಯಾವುದೇ ಐಪಿಎಲ್ ಆವೃತ್ತಿಯಲ್ಲಿ ರೋಹಿತ್​ ಶರ್ಮಾ 500 ರನ್ ಗಳಿಸಿಲ್ಲ. ಕಳೆದ ಆವೃತ್ತಿಯಲ್ಲಿ 15 ಪಂದ್ಯಗಳನ್ನಾಡಿದ್ದ ರೋಹಿತ್ 418 ರನ್ ಕಲೆಹಾಕಿದ್ದರು. ಆದಾಗ್ಯೂ ರೋಹಿತ್ ಹಾಗೂ ಹಾರ್ದಿಕ್ ನಡುವೆ ಮನಸ್ತಾಪವಿದೆ ಎಂಬ ಸುಳ್ಳು ಸುದ್ದಿಯನ್ನು ಹುಟ್ಟುಹಾಕಲಾಗಿದೆ. ಇವರಿಬ್ಬರು ಮುಂಬೈ ತಂಡದ ಬೆನ್ನೆಲುಬಾಗಿದ್ದಾರೆ. ರೋಹಿತ್ ನಾಯಕತ್ವದಲ್ಲೇ ಮುಂಬೈ ಐದು ಬಾರಿ ಚಾಂಪಿಯನ್‌ ಆಗಿದೆ. ಹೀಗಿರುವಾಗ ರೋಹಿತ್ ಶರ್ಮಾ ಬಗ್ಗೆ ಯಾರು ಈ ರೀತಿಯಾಗಿ ಮಾತನಾಡಲು ಸಾಧ್ಯವೆ ಇಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಸ್​ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?

ನವದೆಹಲಿ, ಮಾರ್ಚ್ 14: ಎಲ್​ಪಿಜಿ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ, ದೇಶದಲ್ಲಿ ಬೇಕಾದಷ್ಟು ಎಲ್​ಪಿಜಿ (LPG Cylinder Booking) ಸಂಗ್ರಹವಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಆದರೂ ಗ್ರಾಹಕರಿಗೆ ಆ್ಯಪ್ ಮೂಲಕ, ಎಸ್​ಎಂಎಸ್ ಅಥವಾ ಆನ್​ಲೈನ್ ಮೂಲಕ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ. ಗ್ಯಾಸ್ ಬುಕ್ ಮಾಡಲಾಗದೆ ಜನರು ಪರದಾಡುತ್ತಿದ್ದಾರೆ. ಫೋನ್, ಮಿಸ್ಡ್ ಕಾಲ್, ಆ್ಯಪ್, ವಾಟ್ಸಾಪ್ ಮೂಲಕ ನೀವು ಹೇಗೆ ಸುಲಭವಾಗಿ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.

ಜಾಗತಿಕ ಯುದ್ಧದ ಪರಿಣಾಮವಾಗಿ ಎಲ್ಲೆಡೆ ಇಂಧನ ಹಾಗೂ ಗ್ಯಾಸ್​ ಕೊರತೆ ಎದುರಾಗಿದೆ ಎಂಬ ಸುದ್ದಿಗಳು ಹರಡಿರುವುದರಿಂದ ಅನೇಕ ಮನೆಗಳಲ್ಲಿ ಸಾಮಾನ್ಯಕ್ಕಿಂತ ಮುಂಚಿತವಾಗಿ LPG ಸಿಲಿಂಡರ್‌ಗಳನ್ನು ಬುಕ್ ಮಾಡಲಾಗುತ್ತಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕಾರಿಗಳು LPG ಬುಕಿಂಗ್‌ಗಳ ನಡುವಿನ ಕನಿಷ್ಠ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ. ಗ್ರಾಮೀಣ ಗ್ರಾಹಕರಿಗೆ ಲಾಕ್-ಇನ್ ಅವಧಿ ಅಥವಾ ಬುಕಿಂಗ್ ಅನ್ನು ಹಿಂದಿನ 25 ದಿನಗಳಿಗೆ ಹೋಲಿಸಿದರೆ 45 ದಿನಗಳಿಗೆ ಹೆಚ್ಚಿಸಲಾಗಿದೆ.

ಭಾರತ್ ಗ್ಯಾಸ್ ಬುಕಿಂಗ್:

ಭಾರತ್ ಗ್ಯಾಸ್ ಗ್ರಾಹಕರು IVRS, SMS, WhatsApp, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ LPG ಸಿಲಿಂಡರ್ ರೀಫಿಲ್ಲಿಂಗ್ ಬುಕ್ ಮಾಡಬಹುದು.

IVRS ಬುಕಿಂಗ್: ರೀ-ಫಿಲ್ಲಿಂಗ್ ವಿನಂತಿಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7715012345 ಅಥವಾ 7718012345 ಗೆ ಕರೆ ಮಾಡಿ.

SMS ಬುಕಿಂಗ್: ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7715012345 ಅಥವಾ 7718012345ಗೆ LPG ಎಂದು ಸಂದೇಶವನ್ನು ಕಳುಹಿಸಿ.

WhatsApp ಬುಕಿಂಗ್: ನಿಮ್ಮ ಕಾಂಟ್ಯಾಕ್ಟ್​​ನಲ್ಲಿ 1800224344 (BPCL ಸ್ಮಾರ್ಟ್‌ಲೈನ್) ಅನ್ನು ಸೇವ್ ಮಾಡಿಕೊಳ್ಳಿ. ಬುಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು Hi ಅಥವಾ Book ಎಂದು ಮೆಸೇಜ್ ಕಳುಹಿಸಿ.

ಮೊಬೈಲ್ ಅಪ್ಲಿಕೇಶನ್: ಪ್ಲೇ ಸ್ಟೋರ್‌ನಿಂದ ಭಾರತ್‌ಗ್ಯಾಸ್ ಅಪ್ಲಿಕೇಶನ್ ಅನ್ನು ಡೌನ್​ಲೋಡ್ ಮಾಡಿಕೊಳ್ಳಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ. ನಂತರ ರೀಫಿಲ್ ಸಿಲಿಂಡರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಇತರ ಅಪ್ಲಿಕೇಶನ್‌ಗಳು: UMANG ಅಪ್ಲಿಕೇಶನ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು.

ಆನ್‌ಲೈನ್ ಸೇವೆಗಳು: ಗ್ರಾಹಕರು ಹಲೋ BPCL ಮೊಬೈಲ್ ಅಪ್ಲಿಕೇಶನ್ ಅಥವಾ ಅಧಿಕೃತ ಭಾರತ್ ಗ್ಯಾಸ್ ಮೂಲಕ ರೀಫಿಲ್ಲಿಂಗ್ ವಿನಂತಿಗಳನ್ನು ಸಲ್ಲಿಸಬಹುದು.

ಇದನ್ನೂ ಓದಿ: LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂಪಾಯಿಗೆ ಏರಿಕೆ?

HP ಗ್ಯಾಸ್ ರೀಫಿಲ್ ಬುಕಿಂಗ್:

HP ಗ್ಯಾಸ್ ಗ್ರಾಹಕರು ಹಲವಾರು ಅಧಿಕೃತ ಮಾರ್ಗಗಳ ಮೂಲಕ LPG ಸಿಲಿಂಡರ್ ಬುಕ್ ಮಾಡಬಹುದು.

HP ಪೇ ಮೊಬೈಲ್ ಅಪ್ಲಿಕೇಶನ್: ಬುಕಿಂಗ್ ಮತ್ತು ಪಾವತಿಗಾಗಿ Android ಮತ್ತು iOSನಲ್ಲಿ ಇದು ಲಭ್ಯವಿದೆ.

IVRS ಸೇವೆ: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 88888 23456 ನಂಬರ್ ಡಯಲ್ ಮಾಡಿ.

ಮಿಸ್ಡ್ ಕಾಲ್: ರೀ-ಫಿಲ್ಲಿಂಗ್ ಬುಕ್ ಮಾಡಲು 94936 02222 ಗೆ ಮಿಸ್ಡ್ ಕಾಲ್ ನೀಡಿ.

ವಾಟ್ಸಾಪ್: ನಿಮ್ಮ ನೋಂದಾಯಿತ ಸಂಖ್ಯೆಯಿಂದ 92222 01122 ಗೆ Hi ಎಂದು ಕಳುಹಿಸಿ.

ವೆಬ್‌ಸೈಟ್: www.myhpgas.in ನಲ್ಲಿ ಕೂಡ ಬುಕ್ ಮಾಡಬಹುದು.

ಮೊಬೈಲ್ ಅಪ್ಲಿಕೇಶನ್‌ಗಳು: UMANG, Amazon Pay, Paytm, PhonePe ಮತ್ತು ಇತರ BBPS ಆ್ಯಕ್ಟಿವ್ ಇರುವ ಅಪ್ಲಿಕೇಶನ್‌ಗಳ ಮೂಲಕವೂ ಸಿಲಿಂಡರ್ ಬುಕಿಂಗ್‌ಗಳನ್ನು ಮಾಡಬಹುದು.

ಗ್ರಾಹಕ ಸೇವಾ ಕೇಂದ್ರಗಳು: ಸಹಾಯಕ್ಕಾಗಿ ಗ್ರಾಹಕರು ಹತ್ತಿರದ CSC ಕೇಂದ್ರಗಳಿಗೆ ಭೇಟಿ ನೀಡಬಹುದು.

 

ಇದನ್ನೂ ಓದಿ: LPG Booking: ಚಿಂತಿತರಾಗಬೇಡಿ, ಬೇಕಾದಷ್ಟು ಎಲ್​ಪಿಜಿ ಸಂಗ್ರಹವಿದೆ; ಸರ್ಕಾರದಿಂದ ಗ್ರಾಹಕರಿಗೆ ಮನವಿ

Indane ಗ್ಯಾಸ್ ರೀಫಿಲ್ ಬುಕಿಂಗ್:

ಇಂಡೇನ್ ಗ್ಯಾಸ್ ಗ್ರಾಹಕರು ಬಹು ಅಧಿಕೃತ ಚಾನಲ್‌ಗಳ ಮೂಲಕ LPG ಸಿಲಿಂಡರ್ ರೀ-ಫಿಲ್ಲಿಂಗ್​ಗಳನ್ನು ಬುಕ್ ಮಾಡಬಹುದು.

SMS/IVRS ಬುಕಿಂಗ್: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ REFILL ಎಂದು ಕಳುಹಿಸಿ ಅಥವಾ IVRS ಸೇವೆಯನ್ನು 7718955555ನಲ್ಲಿ ಬಳಸಿ.

ಮಿಸ್ಡ್ ಕಾಲ್ ಬುಕಿಂಗ್: ರೀಫಿಲ್ಲಿಂಗ್ ವಿನಂತಿಯನ್ನು ಮಾಡಲು 8454955555ಗೆ ಮಿಸ್ಡ್ ಕಾಲ್ ನೀಡಿ.

WhatsApp ಬುಕಿಂಗ್: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7588888824ಗೆ REFILL ಎಂಬ ಮೆಸೇಜ್ ಕಳುಹಿಸಿ.

ಮೊಬೈಲ್ ಅಪ್ಲಿಕೇಶನ್: ಇಂಡಿಯನ್ ಆಯಿಲ್ ಒನ್ ಮೊಬೈಲ್ ಅಪ್ಲಿಕೇಶನ್ ಮೂಲಕವೂ ರೀಫಿಲ್ಲಿಂಗ್ ಬುಕ್ ಮಾಡಬಹುದು.

ಆನ್‌ಲೈನ್ ಪೋರ್ಟಲ್: ಗ್ರಾಹಕರು ಅಧಿಕೃತ ಪೋರ್ಟಲ್ https://cx.indianoil.in ಮೂಲಕ ರೀಫಿಲ್ಲಿಂಗ್ ಮನವಿಗಳನ್ನು ಮಾಡಬಹುದು.

ಗ್ರಾಹಕ ಸಹಾಯವಾಣಿ: ಪ್ರತಿಕ್ರಿಯೆ ಮತ್ತು ಗ್ರಾಹಕ ಬೆಂಬಲಕ್ಕಾಗಿ ಟೋಲ್-ಫ್ರೀ ಸಂಖ್ಯೆ 1800-2333-555 ಲಭ್ಯವಿದೆ.

ತುರ್ತು ಸಹಾಯವಾಣಿ: LPG ಸೋರಿಕೆ ಅಥವಾ ಸುರಕ್ಷತಾ ತುರ್ತು ಸಂದರ್ಭಗಳಲ್ಲಿ, ಗ್ರಾಹಕರು ರಾಷ್ಟ್ರೀಯ LPG ತುರ್ತು ಸಂಖ್ಯೆ 1906 ಅನ್ನು ಸಂಪರ್ಕಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link