Category Archives: Blog

Your blog category

ಮಾಕಳಿ ಬಳಿ ಸರಣಿ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೂ ಲೆಕ್ಕಿಸದೆ ಮೂಟೆಗಳಲ್ಲಿ ಈರುಳ್ಳಿ ತುಂಬಿಕೊಂಡು ಹೋದ ಜನ! – Kannada News | Makali Accident: Biker Killed in Multi Vehicle Crash as Onions Are Looted, Sparks Public Outrage

ನೆಲಮಂಗಲ, ಜನವರಿ 21: ಬೆಂಗಳೂರು (Bangalore) ಉತ್ತರ ತಾಲೂಕಿನ ಮಾಕಳಿ ಸಮೀಪ ಭೀಕರ ಸರಣಿ ಅಪಘಾತ ಸಂಭವಿಸಿ, ಬೈಕ್ ಸವಾರನೊಬ್ಬ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಬುಧವಾರ ನಡೆದಿದೆ. ಅಪಘಾತದಲ್ಲಿ ಮತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೊಲ್ಲಾಪುರದಿಂದ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಲಾರಿ, ಆಟೋ ಹಾಗೂ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ಕ್ಯಾಂಟರ್ ಲಾರಿಗೆ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಲಾರಿ ಮೊದಲು ಆಟೋಗೆ ಡಿಕ್ಕಿ ಹೊಡೆದು, ಬಳಿಕ ಎದುರಿಗೆ ಬರುತ್ತಿದ್ದ ಬೈಕ್‌ಗಳ ಮೇಲೆ ಬಿದ್ದಿದೆ.

ಲಾರಿ ಬೈಕ್ ಮೇಲೆ ಉರುಳಿದ ಪರಿಣಾಮ ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ದೃಶ್ಯ ಅತ್ಯಂತ ಭೀಕರವಾಗಿದ್ದು, ರಸ್ತೆ ಮೇಲೆ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ.

ಮೂಟೆಗಳಲ್ಲಿ ಈರುಳ್ಳಿ ತುಂಬ್ಕೊಂಡು ಹೋದ ಜನ

ಅಚ್ಚರಿಯ ಸಂಗತಿ ಎಂದರೆ, ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದರೂ ಸಹ, ರಸ್ತೆ ಮೇಲೆ ಬಿದ್ದಿದ್ದ ಈರುಳ್ಳಿಯನ್ನು ಹೊತ್ತುಕೊಂಡು ಹೋಗಲು ಜನರು ಮುಗಿಬಿದ್ದರು. ಜನರು ಈರುಳ್ಳಿಗಾಗಿ ಮುಗಿಬಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ಮಾನವೀಯತೆ ಮರೆತ ಈ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇದನ್ನೂ ಓದಿ: ಬೆಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 5.15 ಕೋಟಿ ರೂ. ಮೌಲ್ಯದ ಡ್ರಗ್ಸ್​, ನೈಜೀರಿಯಾ ಪ್ರಜೆ ವಶಕ್ಕೆ

ಘಟನೆ ಕುರಿತು ಮಾಹಿತಿ ಪಡೆದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಹಾಗೂ ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.

ವಿಡಿಯೋ & ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಜಸ್ಟ್ 15 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಪಾರಿವಾಳವನ್ನು ಕಂಡು ಹಿಡಿಯಬಲ್ಲಿರಾ – Kannada News | Optical Illusion: If you can spot the pigeon in this picture, you are smart

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಒಗಟಿನ ಚಿತ್ರಗಳೇ ಹಾಗೆ, ನಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಕೆಲವೊಮ್ಮೆ ಈ ಒಗಟಿನ ಚಿತ್ರ ತಲೆಗೆ ಹುಳ ಬಿಡುತ್ತದೆ. ಎಷ್ಟೇ ಹರಸಾಹಸ ಪಟ್ಟರೂ ಉತ್ತರವಂತೂ ದೊರೆಯುವುದೇ ಇಲ್ಲ. ಇದೀಗ ಇಂತಹದ್ದೇ ಟ್ರಿಕ್ಕಿ ಒಗಟಿನ ಚಿತ್ರ ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಸವಾಲು ಪಾರಿವಾಳವನ್ನು ಕಂಡು ಹಿಡಿಯುವುದು. 15 ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯ ಇದೆಯೇ.

ಈ ಚಿತ್ರವು ಏನನ್ನು ಹೇಳುತ್ತದೆ?

ಇಲ್ಯೂಷನ್ ಚಿತ್ರ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತದೆ. ಈ ಚಿತ್ರವು ಅದೇ ರೀತಿಯಿದ್ದು, ರಸ್ತೆ ಪಕ್ಕದಲ್ಲಿರುವ ದೊಡ್ಡ ದೊಡ್ಡ ಕಟ್ಟಡಗಳನ್ನು ನೀವು ನೋಡಬಹುದು. ಈ ರಸ್ತೆಯಲ್ಲಿ ಕಾರುಗಳು ಓಡಾಡುತ್ತಿದ್ದು, ಅವುಗಳ ಪಕ್ಕದಲ್ಲಿ ಲೈಟ್ ಕಂಬಗಳಿವೆ. ಇದೆಲ್ಲದರ ನಡುವೆ ಪಾರಿವಾಳವೊಂದಿದೆ. ಈ ಒಗಟು ಬಿಡಿಸಲು ನಿಮಗೆ ಹದಿನೈದು ಸೆಕೆಂಡುಗಳಷ್ಟು ಸಮಯವಿದೆ. ಈ ಸವಾಲನ್ನು ಸ್ವೀಕರಿಸಲು ಸಿದ್ಧವಿದ್ರೆ ನಿಮ್ಮ ಸಮಯ ಇದೀಗ ಆರಂಭವಾಗುತ್ತದೆ.

ಇದನ್ನೂ ಓದಿ: ಈ ಚಿತ್ರದಲ್ಲಿರುವ ಮೂರು ಮುಖಗಳನ್ನು ಗುರುತಿಸಿದ್ರೆ ನೀವು ಬುದ್ಧಿವಂತರು

ಪಾರಿವಾಳ ನಿಮ್ಮ ಕಣ್ಣಿಗೆ ಕಂಡಿತೇ?

ಇದು ಟ್ರಿಕ್ಕಿ ಒಗಟಿನ ಚಿತ್ರವಾಗಿರುವುದರಿಂದ ಇಲ್ಯೂಷನ್ ಚಿತ್ರ ಬಿಡಿಸುವುದು ಕಷ್ಟ. ನೀವು ಈ ಒಗಟನ್ನು ಬಿಡಿಸುವಲ್ಲಿ ವಿಫಲರಾಗಿದ್ದೀರಬಹುದು. ಸೋತೆ ಎಂದು ಹೆಚ್ಚು ಚಿಂತಿಸಬೇಡಿ. ಈ ಕೆಳಗಿನ ಫೋಟೋವನ್ನು ನೋಡಿ.. ಪಾರಿವಾಳ ಎಲ್ಲಿದೆ ಎಂದು ನಿಮಗೆ ತಿಳಿಯುತ್ತದೆ. ನೀವು ಈ ಚಿತ್ರದಲ್ಲಿ ಪಾರಿವಾಳವನ್ನು ನೋಡಿದ್ದೀರಿ ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಲ್ಕನೇ ಮಗುವಿಗೆ ತಾಯಿಯಾಗಲಿದ್ದಾರೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ ಪತ್ನಿ ಉಷಾ – Kannada News | A Growing White House Family: Usha Vance Shares News of Baby Boy Arriving in July

ಜೆಡಿ ವ್ಯಾನ್ಸ್​-ಉಷಾ ವ್ಯಾನ್ಸ್​Image Credit source: Free Press Journal

ವಾಷಿಂಗ್ಟನ್, ಜನವರಿ 21: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance)ಪತ್ನಿ ಉಷಾ ವ್ಯಾನ್ಸ್​(Usha Vance) ನಾಲ್ಕನೇ ಮಗುವಿಗೆ ತಾಯಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಉಷಾ ವ್ಯಾನ್ಸ್​ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಗಂಡು ಮಗುವಿನ ಪೋಷಕರಾಗಲಿದ್ದು, ಜುಲೈನಲ್ಲಿ ಮಗುವನ್ನು ಬರಮಾಡಿಕೊಳ್ಳಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಉಷಾ ಮತ್ತು ಮಗು ಚೆನ್ನಾಗಿದ್ದಾರೆ ಮತ್ತು ಜುಲೈ ಅಂತ್ಯದಲ್ಲಿ ಮಗುವನ್ನು ಸ್ವಾಗತಿಸಲು ನಾವೆಲ್ಲರೂ ಎದುರು ನೋಡುತ್ತಿದ್ದೇವೆ.

ಈ ರೋಮಾಂಚಕಾರಿ ಮತ್ತು ಒತ್ತಡದ ಸಮಯದಲ್ಲಿ, ನಮ್ಮ ಕುಟುಂಬವನ್ನು ಅತ್ಯುತ್ತಮವಾಗಿ ನೋಡಿಕೊಳ್ಳುವ ಮಿಲಿಟರಿ ವೈದ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದಿದ್ದಾರೆ. ಜೆಡಿ ವ್ಯಾನ್ಸ್​ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಮಕ್ಕಳ ಹೆಸರು ಇವಾನ್, ವಿವೇಕ್ ಮತ್ತು ಮಿರಾಬೆಲ್. ಉಷಾಗೆ 40 ವರ್ಷ ವಯಸ್ಸು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 60 ದೇಶಗಳ ಮೇಲೆ ವ್ಯಾಪಕ ಸುಂಕ ವಿಧಿಸಿ ವಿರಾಮಗೊಳಿಸಿದ ನಂತರ ವ್ಯಾನ್ಸ್​ ಭಾರತಕ್ಕೆ ಭೇಟಿ ನೀಡಿದ್ದರು. ಜೆಡಿ ವ್ಯಾನ್ಸ್ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್ ಆಂಧ್ರದವರು. ಉಷಾ ವ್ಯಾನ್ಸ್ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಹುಟ್ಟಿದ್ದಾರೆ. ಅವರು ಯೇಲ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಬಿಎ ಪದವಿ ಪಡೆದರು ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸ್ಕಾಲರ್ ಆಗಿದ್ದರು.

ಮತ್ತಷ್ಟು ಓದಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಹಾಗು ಕುಟುಂಬದಿಂದ 4 ದಿನ ಭಾರತ ಪ್ರವಾಸ; ಏನಿದೆ ಅವರ ಅಜೆಂಡಾ?

ಅವರು ಆರಂಭಿಕ ಆಧುನಿಕ ಇತಿಹಾಸದಲ್ಲಿ ಎಂಫಿಲ್ ಪಡೆದರು. ವ್ಯಾನ್ಸ್ ಅವರ ತಾಯಿ ಆಣ್ವಿಕ ಜೀವಶಾಸ್ತ್ರಜ್ಞರಾಗಿದ್ದರೆ, ಅವರ ತಂದೆ ಮೆಕ್ಯಾನಿಕಲ್ ಎಂಜಿನಿಯರ್.

ಉಷಾ ವ್ಯಾನ್ಸ್ ತಂದೆ ಮತ್ತು ಅಜ್ಜ ಇಬ್ಬರೂ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಕೆಲಸ ಮಾಡಿದ್ದರು. ಅವರ ತಂಗಿ ಸ್ಯಾನ್ ಡಿಯಾಗೋದಲ್ಲಿ ಸೆಮಿಕಂಡಕ್ಟರ್ ಕಂಪನಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಉಷಾ ವ್ಯಾನ್ಸ್ ಅವರ ಪೋಷಕರು 1970 ರ ದಶಕದ ಉತ್ತರಾರ್ಧದಲ್ಲಿ ಆಂಧ್ರಪ್ರದೇಶದಿಂದ ಅಮೆರಿಕಕ್ಕೆ ತೆರಳಿದ್ದರು.

ಉಷಾ ವ್ಯಾನ್ಸ್ ಜೆಡಿ ವ್ಯಾನ್ಸ್ ಅವರನ್ನು ಹೇಗೆ ಭೇಟಿಯಾದರು?
ಉಷಾ 2010 ರಲ್ಲಿ ಯೇಲ್ ಕಾನೂನು ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾದರು. ಒಂದು ಡೇಟ್ ನಂತರ ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. 2015 ರಲ್ಲಿ, ಉಷಾ ವ್ಯಾನ್ಸ್ ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು.

ನಂತರ ಅವರು ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೊ ​​ಮತ್ತು ವಾಷಿಂಗ್ಟನ್, ಡಿಸಿಯಲ್ಲಿ ಕಚೇರಿಗಳನ್ನು ಹೊಂದಿರುವ ಕಾನೂನು ಸಂಸ್ಥೆಯಾದ ಯುಎಸ್ ಕಾನೂನು ಸಂಸ್ಥೆ ಮುಂಗರ್, ಟೋಲೆಸ್ ಓಲ್ಸನ್ ಎಲ್ ಎಲ್ ಪಿ ಯಲ್ಲಿ ವಕೀಲರಾದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Neem Tree: ಮನೆಯ ಸಮೀಪ ಬೇವಿನ ಮರ ಇರುವುದು ಶುಭವೇ? ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | The Auspiciousness of Neem: Benefits of Having a Neem Tree Near Your Home

ಬೇವಿನ ಮರದ ಮಹತ್ವ ಮತ್ತು ಮನೆ ಹತ್ತಿರ ಇರುವುದರ ಶುಭಫಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ, ಬೇವಿನ ಮರವನ್ನು ಮನೆಯ ಹತ್ತಿರ ಇರಿಸುವುದರಿಂದ ಮನಸ್ಸಿನ ವಿಕಾರಗಳುಂಟಾಗಬಹುದು ಅಥವಾ ದುಷ್ಟ ಶಕ್ತಿಗಳು ಆವರಿಸಬಹುದು ಎಂಬಂತಹ ಋಣಾತ್ಮಕ ನಂಬಿಕೆಗಳು ಕೆಲವರಲ್ಲಿ ಇವೆ. ಆದರೆ, ಈ ಮರದ ಬಗ್ಗೆ ಧನಾತ್ಮಕ ಮತ್ತು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಅನೇಕ ಶುಭಫಲಗಳು ಗೋಚರಿಸುತ್ತವೆ.

ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬೇವಿನ ಮರಕ್ಕೆ ವಿಶೇಷ ಸ್ಥಾನಮಾನವಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳ ಸುತ್ತಮುತ್ತ ಅಥವಾ ಗ್ರಾಮಗಳ ಚಾವಡಿಗಳಲ್ಲಿ (ಸಭೆ ಸೇರುವ ಸ್ಥಳಗಳು) ಬೇವಿನ ಮರಗಳನ್ನು ನೆಡುತ್ತಿದ್ದರು. ಬೇವಿನ ಮರವು ಆಲದ ಮರ ಮತ್ತು ಅರಳಿ ಮರದಂತೆ ಸಮುದಾಯ ಸಭೆಗಳಿಗೆ, ನ್ಯಾಯ ತೀರ್ಮಾನಗಳಿಗೆ ಸಾಕ್ಷಿಯಾಗಿ ನಿಲ್ಲುತ್ತಿತ್ತು.

ವೈಜ್ಞಾನಿಕವಾಗಿ ಹೇಳುವುದಾದರೆ, ಬೇವಿನ ಮರವು ನಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಶುದ್ಧ ಗಾಳಿಯನ್ನು ನೀಡುವುದರ ಮೂಲಕ ಉಸಿರಾಟದ ಪ್ರಕ್ರಿಯೆಗೆ ನೆರವಾಗುತ್ತದೆ. ಇದರ ತೊಗಟೆ, ಹಣ್ಣು ಮತ್ತು ಎಲೆಗಳು ಆಯುರ್ವೇದದಲ್ಲಿ ಔಷಧೀಯ ಗುಣಗಳನ್ನು ಹೊಂದಿದ್ದು, ಹಲವು ರೋಗಗಳಿಗೆ ಚಿಕಿತ್ಸೆಯಾಗಿ ಬಳಕೆಯಾಗುತ್ತವೆ. ಮನೆಯ ಸುತ್ತ ಬೇವಿನ ಮರ ಇರುವುದರಿಂದ ಕ್ರಿಮಿ ಕೀಟಗಳು ಮತ್ತು ರೋಗರುಜಿನಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ. ಇದು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ.

ಆಧ್ಯಾತ್ಮಿಕವಾಗಿ, ಬೇವಿನ ಮರವನ್ನು ಸಾಕ್ಷಾತ್ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ, ವಿವಾಹ ಆಗದಿರುವವರು, ಪದೇ ಪದೇ ಕಷ್ಟಗಳು ಎದುರಿಸುತ್ತಿರುವವರು, ಮಾಟಮಂತ್ರದಂತಹ ನಕಾರಾತ್ಮಕ ಶಕ್ತಿಗಳಿಂದ ಬಳಲುತ್ತಿರುವವರು ಈ ಮರದ ಬಳಿ ಅರಿಶಿಣ-ಕುಂಕುಮ ಕಟ್ಟಿ ನಮಸ್ಕರಿಸುವುದರಿಂದ ಶುಭಫಲಗಳು ಪ್ರಾಪ್ತವಾಗುತ್ತವೆ ಎಂದು ನಂಬಲಾಗುತ್ತದೆ. ದೇವಿಯ ಆವಾಹನೆ ಈ ಮರದಲ್ಲಿದೆ ಎಂಬುದು ಪ್ರತೀತಿ.

ಬೇವಿನ ಮರದ ಮತ್ತೊಂದು ಪ್ರಮುಖ ಉಪಯೋಗವೆಂದರೆ ಮಕ್ಕಳಲ್ಲಿ ಸಿಡುಬು (ಅಮ್ಮ) ಕಾಣಿಸಿಕೊಂಡಾಗ. ಹಳ್ಳಿಗಳಲ್ಲಿ ಸಿಡುಬಿನಿಂದ ಬಳಲುತ್ತಿರುವ ಮಕ್ಕಳಿಗೆ ಬೇವಿನ ಸೊಪ್ಪನ್ನು ಹಾಸಿಗೆಯ ಮೇಲೆ ಹಾಕುವುದು ಅಥವಾ ಮನೆ ಬಾಗಿಲಿಗೆ ಕಟ್ಟುವ ಪದ್ಧತಿ ಇದೆ. ಬೇವಿನ ಸೊಪ್ಪನ್ನು ಗೋಮೂತ್ರದೊಂದಿಗೆ ಇಟ್ಟಾಗ, ಅದು ಬ್ಯಾಕ್ಟೀರಿಯಾಗಳ ಪ್ರವೇಶವನ್ನು ತಡೆದು, ರೋಗ ನಿವಾರಣೆಗೆ ಸಹಾಯ ಮಾಡುತ್ತದೆ. ಬೇವಿನ ಸೊಪ್ಪು ದೇವಿಯ ಸ್ವರೂಪ ಎಂದು ನಂಬಲಾಗುತ್ತದೆ.

ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಜ್ಯೋತಿಷ್ಯದ ದೃಷ್ಟಿಯಿಂದ, ಬೇವಿನ ಮರವು ಶನಿ, ರಾಹು, ಕೇತು ಗ್ರಹಗಳಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಕರ್ಮಫಲವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲವಾದರೂ, ಇದರ ಪ್ರಭಾವವನ್ನು ತಗ್ಗಿಸಬಹುದು. ಪ್ರಯಾಣಕ್ಕೆ ಹೊರಡುವಾಗ ಎರಡು ಬೇವಿನ ಎಲೆಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಅಥವಾ ಒಂದು ಎಲೆಯನ್ನು ತಿಂದು ಹೋಗುವುದು ಶುಭಸೂಚಕವೆಂದು ಪರಿಗಣಿಸಲಾಗುತ್ತದೆ. ಬೇವಿನ ಮರವು ಜೀವನದಲ್ಲಿ ಸ್ಥಿರತೆ, ಉತ್ತಮ ಆರೋಗ್ಯ ಮತ್ತು ಮನಃಶಾಂತಿಯನ್ನು ಒದಗಿಸುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಬೇವಿನ ಮರವು ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ಇದ್ದರೆ ಅತಿ ಹೆಚ್ಚು ಶುಭಫಲಗಳನ್ನು ನೀಡುತ್ತದೆ ಮತ್ತು ಮಂಗಳ ಯೋಗವನ್ನು ತರುತ್ತದೆ. ತಮಿಳುನಾಡು ಮುಂತಾದ ಪ್ರದೇಶಗಳಲ್ಲಿ ಬೇವಿನ ಮರಕ್ಕೆ ಅರಿಶಿಣ ಹಚ್ಚಿ ಕುಂಕುಮದ ಬೊಟ್ಟನ್ನು ಇಟ್ಟು ಪೂಜಿಸುವುದು ಸರ್ವೇಸಾಮಾನ್ಯ. ಒಟ್ಟಾರೆಯಾಗಿ, ಬೇವಿನ ಮರವು ಶುಭದ ಸಂಕೇತವಾಗಿದ್ದು, ಅದು ಮನೆ ಹತ್ತಿರ ಇರುವುದು ಹಲವು ಸಕಾರಾತ್ಮಕ ಲಾಭಗಳನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸತತ 3 ಪಂದ್ಯಗಳಲ್ಲಿ ಸೋಲು, ಆದರೂ 2ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್​

Source link

ಬೆಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 5.15 ಕೋಟಿ ರೂ. ಮೌಲ್ಯದ ಡ್ರಗ್ಸ್​, ನೈಜೀರಿಯಾ ಪ್ರಜೆ ವಶಕ್ಕೆ – Kannada News | Bengaluru CCB Busts Drug Racket, Seizes Drugs Worth Rs 5.15 Crore; Nigerian National Arrested

ಬೆಂಗಳೂರು, ಜನವರಿ 21: ಬೆಂಗಳೂರಿನಲ್ಲಿ (Bangalore) ಮಾದಕವಸ್ತು ಕಳ್ಳಸಾಗಣೆ ಜಾಲದ ಮೇಲೆ ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ದಾಳಿ ನಡೆಸಿದ್ದು, ನೈಜೀರಿಯಾದ ಪ್ರಜೆಯೊಬ್ಬನನ್ನು ಬಂಧಿಸಿ 5.15 ಕೋಟಿ ರೂ. ಮೌಲ್ಯದ 2.5 ಕೆಜಿ ಎಂಡಿಎಂಎ ಜೊತೆಗೆ 300 ಎಕ್​ಸ್ಟಸಿ ಪಿಲ್ಸ್ ವಶಪಡಿಸಿಕೊಂಡಿದ್ದಾರೆ. ಮಾರತ್ತಹಳ್ಳಿ ಬಳಿಯ ಮುನೆಕೊಳಲುವಿನ ಬಾಡಿಗೆ ಮನೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನೈಜೀರಿಯಾ ಮೂಲದ ಅರ್ನೆಸ್ಟ್ ಒನ್ಯೆಕಾಚಿ ಉಗಾ (45) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಅರ್ನೆಸ್ಟ್ ಒನ್ಯೆಕಾಚಿ ಇದ್ದ ಬಾಡಿಗೆ ನಿವಾಸದ ಮೇಲೆ ದಾಳಿ ನಡೆಸಿ ಡ್ರಗ್ಸ್​ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಾಡುಗೋಡಿ ಮತ್ತು ಹೆಣ್ಣೂರು ಪೊಲೀಸರು ಈ ಹಿಂದೆ ಇದೇ ರೀತಿಯ ಡ್ರಗ್ಸ್ ಪ್ರಕರಣಗಳಲ್ಲಿ ಬಂಧಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಆತ ಮತ್ತೆ ಡ್ರಗ್ಸ್ ಮಾರಾಟ ಚಟುವಟಿಕೆಗಳನ್ನು ಪ್ರಾರಂಭಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮಹಿಳೆಯರ ಒಳ ಉಡುಪು ಕದ್ದು ವಿಕೃತಾನಂದ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಸೈಕೋ ಯುವಕ

ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ವಿಭಾಗವು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಆತನಿಗೆ ಎಲ್ಲಿಂದ ಡ್ರಗ್ಸ್​ ಪೂರೈಕೆಯಾಗುತ್ತಿತ್ತು, ಇತರ ಆರೋಪಿಗಳ ಜತೆಗಿನ ಸಂಪರ್ಕ ಇತ್ಯಾದಿ ಎಲ್ಲ ಮಾಹಿತಿಗಳನ್ನು ಸಿಸಿಬಿ ಪೊಲೀಸರು ಕಲೆಹಾಕುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ರೀತಿಯೇ ಸಖತ್ ರಾ ಆಗಿರಲಿದೆ ‘ಧುರಂದರ್ 2’ ಟೀಸರ್ – Kannada News | Dhurandhar 2: The Revenge Teaser Out soon Aditya Dhar’s Action Packed Sequel is very raw like a Toxic

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಕಳೆದ ವರ್ಷ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಪ್ರೇಕ್ಷಕರು ಈ ಚಿತ್ರವನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ. ಬಿಡುಗಡೆಯಾದ ಒಂದೂವರೆ ತಿಂಗಳ ನಂತರವೂ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ‘ಧುರಂಧರ್’ (Dhurandhar) ವಿಶ್ವಾದ್ಯಂತ 1300 ಕೋಟಿ ರೂ. ಗಳಿಸಿದೆ. ಈಗ ಚಿತ್ರದ ಟೀಸರ್ ಬಗ್ಗೆ ಹೊಸ ಮಾಹಿತಿ ಸಿಕ್ಕಿದೆ.

‘ಧುರಂದರ್’ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಧುರಂಧರ್’ ಚಿತ್ರದ ಕೊನೆಯಲ್ಲಿ, ಚಿತ್ರಕ್ಕೆ ಎರಡನೇ ಪಾರ್ಟ್ ಬರಲಿದೆ ಎಂದು ಘೋಷಿಸಲಾಯಿತು. ಎರಡನೇ ಭಾಗವಾದ ‘ಧುರಂಧರ್: ದಿ ರಿವೆಂಜ್’ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಎರಡನೇ ಭಾಗದ ಟೀಸರ್ ಸಖತ್ ರಾ ಆಗಿರೋ ನಿರೀಕ್ಷೆ ಇದೆ.

ನಿರ್ದೇಶಕ ಆದಿತ್ಯ ಧರ್ ಪ್ರೇಕ್ಷಕರ ನಾಡಿಮಿಡಿತವನ್ನು ಚೆನ್ನಾಗಿ ತಿಳಿದಿದ್ದಾರೆ. ಆದ್ದರಿಂದ, ಪ್ರೇಕ್ಷಕರಿಂದ ಯಾವುದೇ ಅಸಮಾಧಾನವನ್ನು ತಪ್ಪಿಸಲು, ಅವರು ‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಟೀಸರ್ ಅನ್ನು ಮೊದಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಹೆಚ್ಚು ಶಕ್ತಿಶಾಲಿಯಾಗಿ ಮಾಡಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಎ ಪ್ರಮಾಣಪತ್ರ ದೊರೆತಿದೆ.

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಜನವರಿ 19ರಂದು ಈ ಟೀಸರ್ ಅನ್ನು ಅನುಮೋದಿಸಿ ಎ ಪ್ರಮಾಣಪತ್ರವನ್ನು ನೀಡಿದೆಯಂತೆ. ಈ ಟೀಸರ್‌ನ ಅವಧಿ ಸುಮಾರು 1 ನಿಮಿಷ 48 ಸೆಕೆಂಡುಗಳು. ಪ್ರೇಕ್ಷಕರು ‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಟೀಸರ್‌ನಲ್ಲಿ ಬಹಳಷ್ಟು ಆಕ್ಷನ್ ಮತ್ತು ಹಿಂಸೆಯನ್ನು ನೋಡುತ್ತಾರೆ. ಈ ಮೊದಲು ಬಂದ ‘ಟಾಕ್ಸಿಕ್’ ಟೀಸರ್ ಕೂಡ ರಾ ಆಗಿತ್ತು. ಈಗ ಈ ಟೀಸರ್ ಕೂಡ ಹಾಗೆಯೇ ಇರುವ ನಿರೀಕ್ಷೆ ಇದೆ.

‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಟೀಸರ್ ಸನ್ನಿ ಡಿಯೋಲ್ ಅವರ ‘ಬಾರ್ಡರ್ 2’ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ವರದಿಗಳಿವೆ. ಅಂದರೆ, ಬಾರ್ಡರ್ 2 ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರು, ಮಧ್ಯಂತರದಲ್ಲಿ ಅಥವಾ ಆರಂಭದಲ್ಲಿ ಧುರಂಧರ್ 2 ಚಿತ್ರದ ಟೀಸರ್ ಅನ್ನು ನೋಡುತ್ತಾರೆ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾ ಬಿಡುಗಡೆ ಮುಂದೂಡಿಕೆ, ‘ಟಾಕ್ಸಿಕ್’ ಕಾರಣವಾ?

ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಕಂದಹಾರ್ ವಿಮಾನ ಅಪಹರಣ, 2001 ರ ಸಂಸತ್ತಿನ ದಾಳಿ ಮತ್ತು 26/11 ಮುಂಬೈ ದಾಳಿಯ ನಂತರ ಗುಪ್ತಚರ ಸಂಸ್ಥೆಗಳ ಚಟುವಟಿಕೆಗಳನ್ನು ಆಧರಿಸಿದೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರೀತಿಸಿ ಮದುವೆಯಾಗಿ ನಾಲ್ಕೇ ನಾಲ್ಕು ತಿಂಗಳು, ಮೂವರು ಪುರುಷರೊಂದಿಗೆ ಸಿಕ್ಕಿಬಿದ್ದ ಪತ್ನಿಯ ಕೊಲೆಗೈದ ಪತಿ – Kannada News | Love Marriage Tragedy: Kanpur Husband Kills Wife After Finding Her With Other Men

ಕಾನ್ಪುರ, ಜನವರಿ 21: ಇಬ್ಬರದ್ದೂ ಪ್ರೇಮ ವಿವಾಹ(Love Marriage), ಪೋಷಕರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರು. ಹಾಲು,ಜೇನಿನಂತೆ ಸುಖವಾಗಿ ಸಂಸಾರ ಮಾಡಿಕೊಂಡಿರಬೇಕಾದ ಮಹಿಳೆ ಪರ ಪುರುಷರ ಸಂಗ ಮಾಡಿ ಕೊಲೆಯಾಗಿದ್ದಾಳೆ. ಮದುವೆಯಾಗಿ ನಾಲ್ಕೇ ನಾಲ್ಕು ತಿಂಗಳು ಕಳೆದಿತ್ತು, ಪತಿ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ತನ್ನ ಪತ್ನಿ ಮೂವರು ಪುರುಷರೊಂದಿಗೆ ಮಲಗಿದ್ದನ್ನು ನೋಡಿ ಆಘಾತಕ್ಕೊಳಗಾದ ಪತಿ ಬೇರೆ ಆಲೋಚನೆಯನ್ನೇ ಮಾಡದೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ ಮರುದಿನ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಸಚಿನ್ ಸಿಂಗ್ ಕಳೆದ ಒಂದು ತಿಂಗಳಿನಿಂದ ತನ್ನ ಪತ್ನಿ ಶ್ವೇತಾ ಸಿಂಗ್ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಅವರುತಮ್ಮ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದರು ಮತ್ತು ನ್ಯಾಯಾಲಯದಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿದ್ದರು.

ಮತ್ತಷ್ಟು ಓದಿ: ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವೇ? ಭಾರತೀಯ ಕಾನೂನು ಹೇಳೋದೇನು?

ಸಚಿನ್ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ತನ್ನ ಹೆಂಡತಿಯ ನಡವಳಿಕೆಯ ಬಗ್ಗೆ ಅನುಮಾನ ಮೂಡಿತ್ತು. ತಾನು ಕೆಲಸಕ್ಕೆಂದು ಹೊರಗೆ ಹೋಗಿದ್ದಾಗ, ಮಹಾರಾಜಪುರದ ಎಂಜಿನಿಯರಿಂಗ್ ಕಾಲೇಜು ಬಳಿ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಆಕೆ ಸಂಬಂಧ ಬೆಳೆಸಿಕೊಂಡಿದ್ದಳು ಎಂದು ಪತಿ ಆರೋಪಿಸಿದ್ದಾರೆ.

ಎರಡು ದಿನಗಳ ಹಿಂದೆ ತನ್ನ ಪತ್ನಿಗೆ ತಾನು ಹಳ್ಳಿಗೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದಾಗಿಯೂ, ಆ ರಾತ್ರಿ ಹಿಂತಿರುಗಲಿಲ್ಲವೆಂದು ಹೇಳಿ ಮನೆಗೆ ಬಂದಿದ್ದಾಗಿಯೂ ಸಚಿನ್ ಪೊಲೀಸರಿಗೆ ತಿಳಿಸಿದ್ದಾರೆ. ರಾತ್ರಿ ಅನಿರೀಕ್ಷಿತವಾಗಿ ಹಿಂತಿರುಗಿದಾಗ ತನ್ನ ಪತ್ನಿ ಇಬ್ಬರು ಪುರುಷರೊಂದಿಗೆ ಹಾಸಿಗೆಯ ಮೇಲೆ ಮಲಗಿರುವುದನ್ನು ಕಂಡಿದ್ದಾಗಿ ಹೇಳಿಕೊಂಡಿದ್ದಾರೆ.

ತನ್ನ ಮೊಬೈಲ್ ಫೋನ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡಲು ಪ್ರಾರಂಭಿಸಿದೆ, ನಂತರ ತನ್ನ ಪತ್ನಿ ಆ ವ್ಯಕ್ತಿಗಳನ್ನು ತನ್ನ ಮೇಲೆ ಹಲ್ಲೆ ಮಾಡಿದ್ದರು ಎಂದರು. ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದರು. ಸಚಿನ್ ಅಧಿಕಾರಿಗಳಿಗೆ ಈ ವಿಷಯವನ್ನು ಮುಂದುವರೆಸಲು ಇಷ್ಟವಿಲ್ಲ ಇದನ್ನು ಪರಿಹರಿಸಲು ಬಯಸುತ್ತೇನೆ ಎಂದು ಹೇಳಿ ಮನೆಗೆ ಬಂದಿದ್ದರು.

ಮನೆಗೆ ಹಿಂದಿರುಗಿದ ನಂತರ, ಪತ್ನಿ ಆತನನ್ನು ಬಿಟ್ಟು ಆ ಇಬ್ಬರೊಂದಿಗೆ ವಾಸಿಸುವುದಾಗಿ ಬೆದರಿಕೆ ಹಾಕಿದ್ದಳು ನಂತರ ಇಬ್ಬರ ನಡುವೆ ಜಗಳ ನಡೆದಿತ್ತು. ಕೋಪದ ಭರದಲ್ಲಿ ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಂದನೆಂದು ಸಚಿನ್ ಹೇಳಿದ್ದಾನೆ. ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಬಾಡಿಗೆ ಕೋಣೆಯಲ್ಲಿ ಬಿಟ್ಟು ಹೋಗಿದ್ದ.

ಮರುದಿನ, ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕಂಬಳಿಯಲ್ಲಿ ಶವ ಪ್ತತೆಯಾಗಿತ್ತು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದೆ. ಮೃತದೇಹದ ಪ್ರಾಥಮಿಕ ಪರೀಕ್ಷೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಗ್ ಶಾಕ್ ನೀಡಲು ಬಿಸಿಸಿಐ ಸಿದ್ಧತೆ – Kannada News | Virat Kohli, Rohit Sharma Set For Demotion in BCCI Annual Contracts

ಟೀಮ್ ಇಂಡಿಯಾ ಆಟಗಾರರ ಜೊತೆಗಿನ 2026ರ ಕೇಂದ್ರ ಒಪ್ಪಂದಕ್ಕೆ ಬಿಸಿಸಿಐ ಸಿದ್ಧತೆಗಳನ್ನು ಶುರು ಮಾಡಿದೆ. ಈ ಬಾರಿಯ ಒಪ್ಪಂದದಲ್ಲಿ ಕೆಲ ಮಹತ್ವದ ಬದಲಾವಣೆ ಕಂಡು ಬರಲಿದೆ. ಈ ಬದಲಾವಣೆಯೊಂದಿಗೆ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಹಿಂಬಡ್ತಿ ನೀಡುವ ಸಾಧ್ಯತೆಯಿದೆ.

ಪ್ರಸ್ತುತ ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ A+ ಗ್ರೇಡ್​ನಲ್ಲಿದ್ದಾರೆ. ಅದರಂತೆ ಈ ನಾಲ್ವರು ಆಟಗಾರರು ವಾರ್ಷಿಕವಾಗಿ ತಲಾ 7 ಕೋಟಿ ರೂ. ಪಡೆಯುತ್ತಿದ್ದಾರೆ.

ಆದರೆ ಇದೀಗ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಹೀಗಾಗಿ ಈ ಮೂವರನ್ನು ಎ ಪ್ಲಸ್ ಶ್ರೇಣಿಯಿಂದ ಕೈ ಬಿಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.

ಅಲ್ಲದೆ ಹೊಸ ಒಪ್ಪಂದದಲ್ಲಿ ಈ ಮೂವರನ್ನು ಎ ಗ್ರೇಡ್‌ಗೆ ಸೇರಿಸುತ್ತಾರೋ ಅಥವಾ ಬಿ ಗ್ರೇಡ್‌ಗೆ ಪರಿಗಣಿಸುತ್ತಾರೋ ಎಂಬುದೇ ಈಗ ಕುತೂಹಲ. ಏಕೆಂದರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಮುಂದುವರೆಯುತ್ತಿದ್ದು, ಹೀಗಾಗಿ ಇಬ್ಬರಿಗೂ ಹಿಂಬಡ್ತಿ ನೀಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.

A ಗ್ರೇಡ್​ನಲ್ಲಿ ಯಾರಿದ್ದಾರೆ?

ಬಿಸಿಸಿಐನ ಪ್ರಸ್ತುತ ಕೇಂದ್ರ ಒಪ್ಪಂದದಲ್ಲಿ ಒಟ್ಟು 6 ಆಟಗಾರರು ಎ ಗ್ರೇಡ್​ನಲ್ಲಿದ್ದಾರೆ. ಅವರೆಂದರೆ ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಕೆಎಲ್ ರಾಹುಲ್, ಶುಭ್​ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ. ಈ ದರ್ಜೆಯ ಆಟಗಾರರು ಬಿಸಿಸಿಐನಿಂದ ವಾರ್ಷಿಕವಾಗಿ 5 ಕೋಟಿ ರೂ. ಪಡೆಯುತ್ತಿದ್ದಾರೆ. ಆದರೆ ಈ ಬಾರಿ ಗ್ರೇಡ್-ಎ ಯಿಂದ ಮೊಹಮ್ಮದ್ ಶಮಿ ಅವರನ್ನು ಸಹ ಕೈ ಬಿಡುವ ಸಾಧ್ಯತೆಯಿದೆ.

ಅದೇ ರೀತಿ, ಬಿಸಿಸಿಐನ ಪ್ರಸ್ತುತ ಕೇಂದ್ರ ಒಪ್ಪಂದದಲ್ಲಿ, ಗ್ರೇಡ್ ಬಿ ನಲ್ಲಿ 5 ಆಟಗಾರರು ಮತ್ತು ಗ್ರೇಡ್ ಸಿ ನಲ್ಲಿ ಒಟ್ಟು 19 ಆಟಗಾರರಿದ್ದಾರೆ. ಈ ಎರಡೂ ದರ್ಜೆಗಳಲ್ಲಿರುವ ಆಟಗಾರರ ಒಪ್ಪಂದಗಳಲ್ಲೂ ಮಹತ್ವದ ಬದಲಾವಣೆಯಾಗುವ ನಿರೀಕ್ಷೆಯಿದೆ.

ಅಂದರೆ ಇಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರನ್ನು A+  ಗ್ರೇಡ್​ ಒಪ್ಪಂದದಿಂದ ಹೊರಗಿಟ್ಟರೆ, ಉಳಿಯುವುದು ಜಸ್​ಪ್ರೀತ್ ಬುಮ್ರಾ. ಈ ಪಟ್ಟಿಗೆ ಮೂರು ಸ್ವರೂಪಗಳಲ್ಲೂ ಕಣಕ್ಕಿಳಿಯುತ್ತಿರುವ ಆಟಗಾರರನ್ನು ಸೇರ್ಪಡೆಗೊಳಿಸಲಿದ್ದಾರಾ ಅಥವಾ ಗ್ರೇಡ್​ನಲ್ಲಿ ಬದಲಾವಣೆ ಮಾಡಲಿದ್ದಾರಾ ಕಾದು ನೋಡಬೇಕಿದೆ.

2025ರ ಬಿಸಿಸಿಐ ವಾರ್ಷಿಕ ಒಪ್ಪಂದ ಪಟ್ಟಿ:

  • ಎ+ ಗ್ರೇಡ್ (7 ಕೋಟಿ ರೂ.)
  • ವಿರಾಟ್ ಕೊಹ್ಲಿ
  • ರೋಹಿತ್ ಶರ್ಮಾ
  • ಜಸ್​ಪ್ರೀತ್ ಬುಮ್ರಾ
  • ರವೀಂದ್ರ ಜಡೇಜಾ
  • ಎ ಗ್ರೇಡ್ (5 ಕೋಟಿ ರೂ.)
  • ಮೊಹಮ್ಮದ್ ಸಿರಾಜ್
  • ಕೆಎಲ್ ರಾಹುಲ್
  • ಶುಭ್​ಮನ್ ಗಿಲ್
  • ‘ಹಾರ್ದಿಕ್ ಪಾಂಡ್ಯ
  • ಮೊಹಮ್ಮದ್ ಶಮಿ
  • ರಿಷಭ್ ಪಂತ್
  • ಬಿ ಗ್ರೇಡ್ (3 ಕೋಟಿ ರೂ.)
  • ಸೂರ್ಯಕುಮಾರ್ ಯಾದವ್
  • ಕುಲ್ದೀಪ್ ಯಾದವ್
  • ಅಕ್ಷರ್ ಪಟೇಲ್
  • ಯಶಸ್ವಿ ಜೈಸ್ವಾಲ್
  • ಶ್ರೇಯಸ್ ಅಯ್ಯರ್

ಇದನ್ನೂ ಓದಿ: ಬರೋಬ್ಬರಿ ೩೭ ಸಿಕ್ಸ್… ಫಿನ್ ಅಲೆನ್ ಆರ್ಭಟ

  • ಸಿ ಗ್ರೇಡ್ (1 ಕೋಟಿ ರೂ.)
  • ರಿಂಕು ಸಿಂಗ್
  • ತಿಲಕ್ ವರ್ಮಾ
  • ರುತುರಾಜ್ ಗಾಯಕ್ವಾಡ್
  • ಶಿವಂ ದುಬೆ
  • ರವಿ ಬಿಷ್ಣೋಯ್
  • ವಾಷಿಂಗ್ಟನ್ ಸುಂದರ್
  • ಮುಖೇಶ್ ಕುಮಾರ್
  • ಸಂಜು ಸ್ಯಾಮ್ಸನ್
  • ಅರ್ಷದೀಪ್ ಸಿಂಗ್
  • ಪ್ರಸಿದ್ಧ್ ಕೃಷ್ಣ
  • ರಜತ್ ಪಾಟಿದಾರ್
  • ಧ್ರುವ್ ಜುರೆಲ್
  • ಸರ್ಫರಾಝ್ ಖಾನ್
  • ನಿತೀಶ್ ಕುಮಾರ್ ರೆಡ್ಡಿ
  • ಇಶಾನ್ ಕಿಶನ್
  • ಅಭಿಷೇಕ್ ಶರ್ಮಾ
  • ಆಕಾಶ್ ದೀಪ್
  • ವರುಣ್ ಚಕ್ರವರ್ತಿ
  • ಹರ್ಷಿತ್ ರಾಣಾ

Source link

ಬೆನ್ನುಮೂಳೆ ಮುರಿದು ನರಳುತ್ತಿದ್ದ ಸ್ನೇಹಿತನ ಕೆರೆಯಲ್ಲಿ ಮುಳುಗಿಸಿ ಕೊಂದ ಗೆಳೆಯರು! ಘನಘೋರ ಕೃತ್ಯಕ್ಕೆ ಬೆಚ್ಚಿಬಿದ್ದ ಮಾಗಡಿ – Kannada News | New Year Party Turns Fatal in Vajarahalli, Magadi: Broken spine Youth Killed by Friends, Drowned in Lake

ಆರೋಪಿಗಳಾದ ಪ್ರಜ್ವಲ್ ಮತ್ತು ಸುದೀಪ್

ರಾಮನಗರ, ಜನವರಿ 21: ಹೀಗೂ ಸ್ನೇಹಿತರು ಇರುತ್ತಾರಾ? ತಮ್ಮ ಸ್ವಾರ್ಥಕ್ಕೆ ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಏಟು ಮಾಡಿಕೊಂಡಾಗ ಚಿಕಿತ್ಸಗೆ ಹತ್ತಾರು ಲಕ್ಷ ರೂ. ಖರ್ಚಾಗುತ್ತದೆಂದು ಸ್ನೇಹಿತರೇ ಆತನನ್ನು ಕೊಲೆ ಮಾಡಿದ ದಾರುಣ ಘಟನೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ (Ramanagara) ಮಾಗಡಿ (Magadi) ತಾಲೂಕಿನ ವಾಜರಹಳ್ಳಿ ಗ್ರಾಮ ಸಾಕ್ಷಿಯಾಗಿದೆ. ನ್ಯೂ ಇಯರ್ ಪಾರ್ಟಿ ಮಾಡಲು ತೆರಳಿದ್ದ ಗೆಳೆಯರ ಗುಂಪೇ, ತಮ್ಮ ಜೊತೆಯಲ್ಲಿದ್ದ ಯುವಕನನ್ನು ನಿರ್ದಯವಾಗಿ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಅಮಾನವೀಯ ಘಟನೆ ಇದೀಗ ಬಯಲಾಗಿದೆ.

ಕೊಲೆಯಾದ ಯುವಕ ವಿನೋದ್ ಕುಮಾರ್ (26) ಹಾಗೂ ಆರೋಪಿಗಳಾದ ಸುದೀಪ್ ಮತ್ತು ಪ್ರಜ್ವಲ್ ಮೂವರೂ ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಜನವರಿ 1ರಂದು ಹೊಸವರ್ಷ ಆಚರಣೆಗಾಗಿ ಐವರು ಸ್ನೇಹಿತರು ಒಟ್ಟಾಗಿ ಪಾರ್ಟಿಗೆ ತೆರಳಿದ್ದರು. ಈ ವೇಳೆ ಮದ್ಯಕ್ಕೆ ಎಳನೀರು ಬೆರೆಸಲು ತೀರ್ಮಾನಿಸಿದ ಅವರು, ವಿನೋದ್ ಕುಮಾರ್​​ನನ್ನು ತೆಂಗಿನ ಮರ ಹತ್ತುವಂತೆ ಮಾಡಿದ್ದರು ಎನ್ನಲಾಗಿದೆ.

ವಿನೋದ್ ಕುಮಾರ್

ಆ ಸಂದರ್ಭದಲ್ಲಿ ವಿನೋದ್ ಕುಮಾರ್ ಮರದಿಂದ ಕೆಳಗೆ ಬಿದ್ದಿದ್ದ. ಪರಿಣಾಮವಾಗಿ ಆತನ ಬೆನ್ನುಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆ ಹತ್ತಾರು ಲಕ್ಷ ರೂಪಾಯಿ ಖರ್ಚಾಗಬಹುದು ಎಂಬ ಆತಂಕದಿಂದ ಆರೋಪಿಗಳು ಭೀತಿಗೊಂಡಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ವಿನೋದ್​ನನ್ನು ಮನೆಗೆ ಬಿಡುತ್ತೇವೆ ಎಂದು ನಂಬಿಸಿ, ಮಾರ್ಗಮಧ್ಯೆ ವಾಜರಹಳ್ಳಿ ಸಮೀಪದ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ ಎಂಬುದು ಇದೀಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ತಂತಿಯಿಂದ ಕಲ್ಲುಕಟ್ಟಿ ಮೃತದೇಹವ ಬಾವಿಗೆ ಎಸೆದಿದ್ದ ಆರೋಪಿಗಳು

ಆರೋಪಿಗಳು ವಿನೋದ್​ನನ್ನು ಕೆರೆಯಲ್ಲಿ ಮುಳುಗಿಸಿದ ನಂತರ ಆರಾಮವಾಗಿ ಊರಿನಲ್ಲಿ ಓಡಾಡಿದ್ದರು. ಸಂಜೆ ವೇಳೆಗೆ ಮತ್ತೆ ಸ್ಥಳಕ್ಕೆ ಬಂದು ಕೆರೆಯಿಂದ ಮೃತದೇಹವನ್ನು ಹೊರತೆಗೆದು, ತಂತಿಯಿಂದ ಸೈಜುಕಲ್ಲು ಕಟ್ಟಿ ಬಾವಿಗೆ ಎಸೆದಿದ್ದರು.

ಕೊಲೆ ಪ್ರಕರಣ ಬೆಳಕಿಗೆ ಬಂದಿದ್ಹೇಗೆ?

ವಿನೋದ್ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ಅವರ ಪೋಷಕರು ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಡೆಸಿದ ಸೂಕ್ಷ್ಮವಾಗಿ ತನಿಖೆ ನಡೆಸಿದ್ದು, ಸ್ನೇಹಿತರಿಂದಲೇ ಕೊಲೆಯಾಗಿರುವ ರಹಸ್ಯ ಬಯಲಾಗಿದೆ. ಇದೀಗ ಸುದೀಪ್ ಮತ್ತು ಪ್ರಜ್ವಲ್​ನನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link