ಕೈವ್, ಏಪ್ರಿಲ್ 18: ಉಕ್ರೇನ್ ರಾಜಧಾನಿ ಕೈವ್‌ನಲ್ಲಿನ ಸೂಪರ್ ಮಾರ್ಕೆಟ್ನಲ್ಲಿ ಇಂದು ರಾತ್ರಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ 5 ಜನರನ್ನು ಕೊಂದಿದ್ದ. ಈ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದರು. ಇದಾದ ನಂತರ ದಾಳಿಕೋರ ಹಲವರನ್ನು ಸೂಪರ್‌ಮಾರ್ಕೆಟ್‌ನೊಳಗೆ ಒತ್ತೆಯಾಳಾಗಿರಿಸಿಕೊಂಡಿದ್ದ. ಕೊನೆಗೂ ಉಕ್ರೇನ್ ಪೊಲೀಸ್ ಕಾರ್ಯಾಚರಣೆಯ ಸಮಯದಲ್ಲಿ ಆತನನ್ನು ಕೊಲ್ಲಲಾಗಿದೆ. ಆ ಶೂಟರ್ ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡು, ಘರ್ಷಣೆಯ ಸಮಯದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏ.18: ಸಿಲಿಕಾನ್ ಸಿಟಿಯ ಟ್ರಾಫಿಕ್ ನಡುವೆ ವಿಲಕ್ಷಣ ಘಟನೆಗಳಿಗೇನೂ ಕೊರತೆಯಿಲ್ಲ. ಆದರೆ ಈಗ ಹೊರರಾಜ್ಯದ ಯುವಕನೊಬ್ಬ ಮಾಡಿರುವ ‘ಹುಚ್ಚಾಟ’ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಟ್ರಾಫಿಕ್ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಅಥವಾ ಟ್ರೋಲ್ ಆಗಲು ಈ ಯುವಕ ಹೆಲ್ಮೆಟ್ ಬದಲಿಗೆ ಅಡುಗೆ ಮನೆಯಲ್ಲಿ ಬಳಸುವ ಬಾಂಡ್ಲಿಯನ್ನು (Frying Pan) ತಲೆ ಮೇಲೆ ಇಟ್ಟುಕೊಂಡು ಬೈಕ್ ಸವಾರಿ ಮಾಡಿದ್ದಾನೆ. ಬೆಂಗಳೂರಿನ ಎಚ್.ಎಸ್.ಆರ್ ಲೇಔಟ್ (HSR Layout) ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರೂಪೇನಾ ಅಗ್ರಹಾರ ಬಳಿ ಈ ಘಟನೆ ನಡೆದಿದೆ. ಕೆಎಲ್ 59 ಪಿ 7471 (KL 59 P 7471) ನೋಂದಣಿ ಸಂಖ್ಯೆಯ ಪಲ್ಸರ್ ಬೈಕ್‌ನಲ್ಲಿ ಕೇರಳ ಮೂಲದ ಯುವಕರು ಈ ಸಾಹಸ ಮಾಡಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸವಾರ ಹೆಲ್ಮೆಟ್ ಧರಿಸಿದ್ದರೂ, ಹಿಂಬದಿ ಕುಳಿತಿದ್ದ ಯುವಕ ಕೈಯಿಂದ ಬಾಂಡ್ಲಿಯನ್ನು ತಲೆ ಮೇಲೆ ಹಿಡಿದುಕೊಂಡಿದ್ದ. ದೂರದಿಂದ ನೋಡಿದರೆ ಅದು ಕಪ್ಪು ಬಣ್ಣದ ಹೆಲ್ಮೆಟ್‌ನಂತೆಯೇ ಭಾಸವಾಗುತ್ತಿತ್ತು. ಇತರ ವಾಹನ ಸವಾರರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ಪೀಕ್ ಬೆಂಗಳೂರು ಮೊಮೆಂಟ್” (Peak Bengaluru Moment) ಎಂಬ ಶೀರ್ಷಿಕೆಯಡಿ ಈ ವಿಡಿಯೋ ಸಖತ್ ವೈರಲ್ ಆಗಿದೆ. “ಬಾಂಡ್ಲಿ ಆಮ್ಲೆಟ್ ಹಾಕಲು ಕೆಲಸಕ್ಕೆ ಬರುತ್ತದೆಯೇ ಹೊರತು, ಅಪಘಾತವಾದಾಗ ತಲೆ ಉಳಿಸುವುದಿಲ್ಲ” ಎಂದು ನೆಟ್ಟಿಗರು ಈ ಯುವಕನ ಕಾಲೆಳೆದಿದ್ದಾರೆ.
ತೆಲುಗು ಚಿತ್ರರಂಗದ ನಟ ಅಡಿವಿಶೇಷ್ (Adivishesh) ನಟನೆಯ ‘ಡಕಾಯತ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ನಿನ್ನೆ ಬೆಂಗಳೂರಿನ ಜಿಟಿ ಮಾಲ್ಗೆ ಬಂದಿದ್ದ ಅಡಿವಿಶೇಷ್, ಮಾಲ್ನಲ್ಲಿ ತಮ್ಮ ಸಿನಿಮಾ ಪ್ರದರ್ಶನ ಆಗುತ್ತಿದ್ದ ಸಮಯದಲ್ಲಿ ಬಂದು ಪ್ರೇಕ್ಷಕರೊಡನೆ ಮಾತನಾಡಿದರು. ಈ ವೇಳೆ ನಟ ಅಡಿವಿಶೇಷ್ ಅವರೊಟ್ಟಿಗೆ ಕೈಕುಲುಕಲು ಜನ ಮುಗಿಬಿದ್ದರು. ಪ್ರೇಕ್ಷಕರೊಟ್ಟಿಗೆ ಮಾತನಾಡಿದ ಅಡಿವಿಶೇಷ್, ತಮ್ಮ ಸಿನಿಮಾಕ್ಕೆ ಪ್ರೀತಿ ನೀಡುತ್ತಿರುವುದಕ್ಕೆ ಧನ್ಯವಾದ ಅರ್ಪಿಸಿದರು. ಅವರೊಟ್ಟಿಗೆ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಸಹ ಇದ್ದರು.
ನವದೆಹಲಿ, ಏಪ್ರಿಲ್ 18: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಅವರು, “ಕಾಂಗ್ರೆಸ್, ಡಿಎಂಕೆ, ಟಿಎಂಸಿಯಂತಹ ವಿರೋಧ ಪಕ್ಷಗಳಿಗೆ ಮಹಿಳಾ ಅಭಿವೃದ್ಧಿಯನ್ನು ಸಹಿಸಿಕೊಳ್ಳಲು ಆಗದು. ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಒಂದು ದೊಡ್ಡ ಕಾರಣವಿದೆ. ಈ ವಂಶಾಡಳಿತ ಪಕ್ಷಗಳಲ್ಲಿ ಒಂದು ಭಯವಿದೆ. ಒಂದುವೇಳೆ ಮಹಿಳೆಯರು ಸಬಲೀಕರಣಗೊಂಡರೆ ತಮ್ಮ ವಂಶಾಡಳಿತ ನಾಯಕತ್ವಕ್ಕೆ ಕುತ್ತು ಉಂಟಾಗುತ್ತದೆ ಎಂದು ಅವರು ಭಯಪಡುತ್ತಿದ್ದಾರೆ. ಅವರು ಎಂದಿಗೂ ತಮ್ಮ ಕುಟುಂಬದ ಮಹಿಳೆಯರು ಮಾತ್ರ ಅಧಿಕಾರದಲ್ಲಿರಬೇಕೆಂದು ಬಯಸುತ್ತಾರೆ. ತಮ್ಮ ಕುಟುಂಬದ ಹೊರಗಿನ ಮಹಿಳೆಯರು ಮುಂದುವರಿಯುವುದನ್ನು ಅವರು ಎಂದಿಗೂ ಬಯಸುವುದಿಲ್ಲ. ಅದೇ ಕಾರಣಕ್ಕೆ ಈ ಮಸೂದೆಗೆ ಅವರು ಬೆಂಬಲ ನೀಡಲಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಒಂದು ಸಿನಿಮಾ (Cinema) ಹಿಟ್ ಆದರೂ ಸಾಕು, ನಟ-ನಟಿಯರ ಜೀವನ ಶೈಲಿಯೇ ಬದಲಾಗುತ್ತದೆ. ಎರಡನೇ ಸಿನಿಮಾಕ್ಕೆ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಾರೆ. ಐಶಾರಾಮಿ ಕಾರು, ಮನೆಗಳನ್ನು ಖರೀದಿಸುತ್ತಾರೆ. ಆದರೆ ದಶಕಗಳಿಂದಲೂ ಚಿತ್ರರಂಗದಲ್ಲಿರುವ ಮತ್ತು ಸ್ಟಾರ್ ನಟರುಗಳಿಗೆ ಸಮಾನವಾದ ಸಂಭಾವನೆ ಪಡೆಯುವ ಸ್ಟಾರ್ ನಟರೊಬ್ಬರು ಕಳೆದ ಹತ್ತು ವರ್ಷದಿಂದಲೂ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ. ಇದ್ದ ಮನೆಯನ್ನೂ ಸಹ ಆಲಿಯಾ ಭಟ್ ಅವರಿಗೆ ಮಾರಾಟ ಮಾಡಿದ್ದಾರೆ. ಈ ಸರಳ ಜೀವಿಯ ಹೆಸರು ಅನುಪಮ್ ಖೇರ್.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಶಸ್ವಿ ವೃತ್ತಿಜೀವನವನ್ನು ಹೊಂದಿರುವ ಅನುಪಮ್ ಖೇರ್ ಈಗಲೂ ಸಹ ಬಾಲಿವುಡ್ನ ಬ್ಯುಸಿ ನಟರಲ್ಲೊಬ್ಬರು. 550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಆರ್ಥಿಕವಾಗಿ ಅತ್ಯಂತ ಸದೃಢರಾಗಿದ್ದರೂ, ಕಳೆದ ಒಂದು ದಶಕದಿಂದ ಮುಂಬೈನಲ್ಲಿ ಸ್ವಂತ ಮನೆ ಹೊಂದಿಲ್ಲ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದರ ಹಿಂದಿನ ತತ್ವ ಮತ್ತು ಕಾರಣಗಳನ್ನು ಹಂಚಿಕೊಂಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಅನುಪಮ್ ಖೇರ್ ಅವರು ಮುಂಬೈನ ಜುಹು ಪ್ರದೇಶದಲ್ಲಿದ್ದ ತಮ್ಮ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ನಟಿ ಆಲಿಯಾ ಭಟ್ ಅವರಿಗೆ ಮಾರಾಟ ಮಾಡಿದರು. ಆ ಮನೆಯನ್ನು ಮಾರಿದ ನಂತರ ಅವರು ಮತ್ತೊಂದು ಮನೆಯನ್ನು ಖರೀದಿಸುವ ಬದಲು ಬಾಡಿಗೆ ಮನೆಯಲ್ಲಿ ಇರಲು ನಿರ್ಧರಿಸಿದರು. ಕಳೆದ ಹತ್ತು ವರ್ಷಗಳಿಂದಲೂ ಅವರು ಬಾಡಿಗೆ ಮನೆಯಲ್ಲಿಯೇ ಇದ್ದಾರೆ. ಇದು ಅವರೇ ಬೇಕೆಂದು ಮಾಡಿಕೊಂಡಿರುವ ಆಯ್ಕೆ. ಇದಕ್ಕೆ ಕಾರಣವನ್ನೂ ವಿವರಿಸಿದ್ದಾರೆ ಅನುಪಮ್ ಖೇರ್.
ಅನುಪಮ್ ಖೇರ್ ಅವರ ಪ್ರಕಾರ, ‘ಜೀವನವು ಯಾವುದೇ ಹಂತದಲ್ಲೂ ಸರಳವಾಗಿರಬೇಕು’ ಎಂಬ ನಿಯಮ ಪಾಲಿಸುವವರು. ‘ನಾನು ನನ್ನ ಜೀವನದ ಬಹುಪಾಲು ಸಮಯವನ್ನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಈಗ ನಾನು ನನ್ನ ಜೀವನವನ್ನು ಯಾವುದೇ ಹೊರೆಯಿಲ್ಲದೆ ಆನಂದಿಸಲು ಬಯಸುತ್ತೇನೆ. “ನಾನು ಕಳೆದ 10 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಮತ್ತು ಇದು ನನಗೆ ತುಂಬಾ ಸಮಾಧಾನ ನೀಡಿದೆ. ನಾನು ಆ ಮನೆಯನ್ನು ಬಿಟ್ಟು ಹೋಗಬೇಕೆಂದಾಗ ಸುಲಭವಾಗಿ ಹೊರಬರಬಹುದು. ದೊಡ್ಡ ಆಸ್ತಿಗಳನ್ನು ನಿರ್ವಹಿಸುವ ಜವಾಬ್ದಾರಿ ನನಗಿಷ್ಟವಿಲ್ಲ’ ಎಂದು ಅವರು ಹೇಳಿದ್ದಾರೆ.
ಅನುಪಮ್ ಖೇರ್ ಅವರಿಗೆ ಸ್ವಂತ ಮನೆ ಇಲ್ಲವಾದರೂ, ಶಿಮ್ಲಾದಲ್ಲಿ ತಮ್ಮ ತಾಯಿಗಾಗಿ ಒಂದು ಸುಂದರವಾದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರ ತಾಯಿಯೂ ಸಹ ದಶಕಗಳಿಂದಲೂ ಬಾಡಿಗೆ ಮನೆಯಲ್ಲಿದ್ದರಂತೆ. ತಾಯಿಯವರಿಗೆ ಶಿಮ್ಲಾನಲ್ಲಿ ಸಣ್ಣ ಮನೆ ಮಾಡಿಕೊಳ್ಳಬೇಕು ಎಂಬ ಆಸೆಯಿತ್ತಂತೆ. ಅದರಂತೆ ಅನುಪಮ್ ಖೇರ್, ತಾಯಿಗಾಗಿ ಶಿಮ್ಲಾನಲ್ಲಿ ದೊಡ್ಡ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ.
ಅನುಪಮ್ ಖೇರ್ ಅವರು 1982 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ನಾಯಕ, ವಿಲನ್, ಹಾಸ್ಯನಟ, ಪೋಷಕ ಪಾತ್ರ ಹೀಗೆ ಹಲವಾರು ರೀತಿಯ ಪಾತ್ರಗಳಲ್ಲಿ ಅನುಪಮ್ ಖೇರ್ ನಟಿಸಿದ್ದಾರೆ. ಹಿಂದಿ ಮಾತ್ರವಲ್ಲದೆ, ತೆಲುಗು, ತಮಿಳು, ಇಂಗ್ಲೀಷ್, ಕನ್ನಡದ ಕೆಲ ಸಿನಿಮಾಗಳಲ್ಲಿಯೂ ಸಹ ಅನುಪಮ್ ಖೇರ್ ನಟನೆ ಮಾಡಿದ್ದಾರೆ.
ಹಸಿ, ಒಣ ತ್ಯಾಜ್ಯ (ಸಂಗ್ರಹ ಚಿತ್ರ)Image Credit source: INKDABBI
ಬೆಂಗಳೂರು, ಏಪ್ರಿಲ್ 18: ರಾಜಧಾನಿ ಬೆಂಗಳೂರಿಗೆ ಅಂಟಿಕೊಂಡಿರುವ ಬಹುದೊಡ್ಡ ಶಾಪ ಅಂದರೆ ಅದು ಕಸ (Garbage). ಗಾರ್ಬೇಜ್ ಸಿಟಿ ಎಂಬ ಕುಖ್ಯಾತಿ ಹೋಗಿಲ್ಲ. ಹೀಗಾಗಿ ಘನತ್ಯಾಜ ನಿರ್ವಹಣೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ. ಕಸ ವಿಂಗಡಣೆ ನಿಯಮ ಪಾಲನೆ ಮಾಡಿಲ್ಲ ಅಂದ್ರೆ ಒಂದು ಸಾವಿರ ರೂಪಾಯಿ ದಂಡ ಬೀಳೋದು ಗ್ಯಾರಂಟಿ.
ಕಸ ವಿಂಗಡಣೆ ಕಡ್ಡಾಯ
ಸಿಲಿಕಾನ್ ಸಿಟಿಗೆ ಗಾರ್ಬೇಜ್ನದ್ದೇ ಟೆನ್ಷನ್. ಕಸ ವಿಂಗಡಣೆ ಮಾಡಿಕೊಡಿ ಅಂದರೂ ಕೆಲವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ನಗರದಲ್ಲಿ ಕಸ ನಿರ್ವಹಣೆ ನಿಯಮ ಬಿಗಿಗೊಳಿಸಲು ಜಿಬಿಎ ಮುಂದಾಗಿದೆ. ಏಪ್ರಿಲ್ 1ರಿಂದಲೇ ಮನೆಮನೆಗಳಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಲು ನಿರ್ಧರಿಸಿದೆ.
ಹೊಸ ನಿಯಮದಂತೆ ಹಸಿ, ಒಣ, ನೈರ್ಮಲ್ಯ ಹಾಗೂ ವಿಶೇಷ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡದಿದ್ದರೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಇದೇ ತಪ್ಪು ಮಾಡಿದರೆ, ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.
ಕಸದ ಮೇಲಿನ ತೆರಿಗೆ ಹೊರೆ: ಸಾರ್ವಜನಿಕರು ಅಸಮಾಧಾನ
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026 ಅನ್ವಯ ದಂಡ ವಿಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಈ ಕ್ರಮ ಅವೈಜ್ಞಾನಿಕವಾಗಿದ್ದು, ಕಸದ ಮೇಲಿನ ತೆರಿಗೆ ಹೊರೆಯಾಗುತ್ತಿದೆ ಅಂತ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಹೊಸ ನಿಯಮಗಳ ಮೂಲಕ ಕಸ ಮುಕ್ತ ಬೆಂಗಳೂರಿಗೆ ನೂರೆಂಟು ಸರ್ಕಸ್ ನಡೆಯುತ್ತಿವೆ. ಆದರೆ ಇದಕ್ಕೆ ಪೂರಕವಾಗಿ ನಾಗರಿಕರು ಸಾಥ್ ನೀಡುತ್ತಾರಾ ಅಂತ ಕಾದು ನೋಡಬೇಕಿದೆ.
ದೆಹಲಿ, ಏ,18: ಕಾಂಗ್ರೆಸ್ ನಾಯಕ ಬೇಲೂರು ಗೋಪಾಲಕೃಷ್ಣ ಅವರು ದೆಹಲಿ ಭೇಟಿ ಬಳಿಕ ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ತಿಂಗಳೊಳಗೆ ಸಂಪುಟದಲ್ಲಿ ಬದಲಾವಣೆಗಳ ಕುರಿತು ಉತ್ತಮ ಸುದ್ದಿ ಹೊರಬೀಳಬಹುದು ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ನಾರಿಶಕ್ತಿ ವಂದನ್ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ) ಬಗ್ಗೆಯೂ ಬೇಲೂರು ಗೋಪಾಲಕೃಷ್ಣ ಮಾತನಾಡಿದರು. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ ವಿರೋಧವಿಲ್ಲ. ಹಿಂದೆ 2011ರಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲೂ ಈ ಕುರಿತು ಪ್ರಯತ್ನ ನಡೆದಿತ್ತು ಎಂದು ಅವರು ಹೇಳಿದರು. ಆದರೆ, ಮುಂಬರುವ ಪಂಚರಾಜ್ಯ ಚುನಾವಣೆಗಳ ಹಿನ್ನೆಲೆಯಲ್ಲಿ ಮತಬ್ಯಾಂಕ್ ರಾಜಕಾರಣಕ್ಕಾಗಿ ಈ ಮಸೂದೆಯನ್ನು ಅವಸರದಲ್ಲಿ ಮಂಡಿಸಲಾಗಿದೆ ಎಂದು ಅವರು ಆಕ್ಷೇಪಿಸಿದರು. ಒಂದೇ ಬಾರಿಗೆ ಮಹಿಳಾ ಮೀಸಲಾತಿ, ಕ್ಷೇತ್ರ ವಿಂಗಡಣೆ (ಬೈಪರ್ಕೇಶನ್) ಸೇರಿದಂತೆ ಮೂರು ಮಸೂದೆಗಳನ್ನು ಚರ್ಚೆಯಿಲ್ಲದೆ ಮಂಡಿಸುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಯೊಂದು ಮಸೂದೆಗೂ ಪ್ರತ್ಯೇಕವಾಗಿ, ಕನಿಷ್ಠ 15-20 ದಿನಗಳ ಕಾಲ ಸಂಸತ್ತಿನಲ್ಲಿ ಮುಕ್ತ ಚರ್ಚೆ ನಡೆಸಬೇಕು ಎಂದು ಗೋಪಾಲಕೃಷ್ಣ ಆಗ್ರಹಿಸಿದರು. ವಿಶೇಷವಾಗಿ ಕ್ಷೇತ್ರ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಆಗಬಹುದಾದ ಸಂಭವನೀಯ ತೊಂದರೆಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ನವದೆಹಲಿ, ಏಪ್ರಿಲ್ 18: ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಈ ವೇಳೆ ನಿನ್ನೆ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ. ಶಾಸಕಾಂಗಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಮಸೂದೆಯು ಲೋಕಸಭೆಯಲ್ಲಿ ಸೋತ ನಂತರ ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.
“ಮಹಿಳಾ ಪ್ರಗತಿಗಾಗಿ ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ನಾವು ಯಶಸ್ವಿಯಾಗಲಿಲ್ಲ. ಇದಕ್ಕಾಗಿ ನಾನು ರಾಷ್ಟ್ರದ ಎಲ್ಲಾ ತಾಯಂದಿರು ಮತ್ತು ಸಹೋದರಿಯರಲ್ಲಿ ಕ್ಷಮೆಯಾಚಿಸುತ್ತೇನೆ. ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡ ವಿರೋಧ ಪಕ್ಷಗಳು ಈ ಮಸೂದೆ ಅಂಗೀಕಾರವಾಗದಿದ್ದುದಕ್ಕೆ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದ್ದು ವಿಪರ್ಯಾಸ” ಎಂದು ಮೋದಿ ಟೀಕಿಸಿದ್ದಾರೆ.
“ನಮಗೆ ರಾಷ್ಟ್ರದ ಹಿತಾಸಕ್ತಿ ಅತ್ಯಂತ ಮುಖ್ಯ. ಆದರೆ ಕೆಲವರಿಗೆ ಪಕ್ಷದ ಹಿತಾಸಕ್ತಿಯನ್ನು ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚು. ಅದರ ಪರಿಣಾಮವನ್ನು ಮಹಿಳೆಯರು ಮತ್ತು ದೇಶವು ಅನುಭವಿಸಬೇಕಾಗುತ್ತದೆ. ಈ ಬಾರಿಯೂ ಇದೇ ಆಗಿದೆ. ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಸಮಾಜವಾದಿ ಪಕ್ಷದಂತಹ ಪಕ್ಷಗಳ ಸ್ವಾರ್ಥ ರಾಜಕೀಯದಿಂದಾಗಿ, ದೇಶದ ಮಹಿಳೆಯರು ತೊಂದರೆ ಅನುಭವಿಸಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
2029 ರಲ್ಲಿ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತರುವ ಮತ್ತು ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಶುಕ್ರವಾರ ಕೆಳಮನೆಯಲ್ಲಿ ಸೋಲಿಸಲಾಯಿತು. ಹಾಜರಿರುವ ಮತ್ತು ಮತ ಚಲಾಯಿಸುವ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರ ಬೆಂಬಲವನ್ನು ಪಡೆದರೆ ಸಂವಿಧಾನ ಆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗುತ್ತದೆ. ಆದರೆ ಮೂರು ಮಸೂದೆಗಳ ಮೇಲಿನ ಚರ್ಚೆಯ ನಂತರ ನಡೆದ ಸಭೆಯಲ್ಲಿ, 298 ಸದಸ್ಯರು ಮಸೂದೆಯನ್ನು ಬೆಂಬಲಿಸಿದರೆ, 230 ಸದಸ್ಯರು ಅದರ ವಿರುದ್ಧ ಮತ ಚಲಾಯಿಸಿದರು.
ಈ ನಿರ್ಣಾಯಕ ಮಸೂದೆ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ಆದರೆ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟವು ಸಂಖ್ಯೆಗಳನ್ನು ಒಟ್ಟುಗೂಡಿಸಲು ಸಾಧ್ಯವಾಗಲಿಲ್ಲ. ಶುಕ್ರವಾರ ರಾತ್ರಿ ಲೋಕಸಭೆಯಲ್ಲಿ ಮಸೂದೆಯ ಮೇಲಿನ ಮತದಾನದ ಸಮಯದಲ್ಲಿ, 298 ಸದಸ್ಯರು ಅದರ ಪರವಾಗಿ ಮತ ಚಲಾಯಿಸಿದರೆ, 230 ಸಂಸದರು ಅದರ ವಿರುದ್ಧ ಮತ ಚಲಾಯಿಸಿದರು. ಮತ ಚಲಾಯಿಸಿದ 528 ಸದಸ್ಯರಲ್ಲಿ ಮಸೂದೆಗೆ ಮೂರನೇ ಎರಡರಷ್ಟು ಬಹುಮತಕ್ಕೆ 352 ಮತಗಳು ಬೇಕಾಗಿದ್ದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಐಪಿಎಲ್ 2026 ರ 27 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಅಭಿ ಅವರ ಈ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಅಂದರೆ, ಅವರು ಕೇವಲ 9 ಎಸೆತಗಳಲ್ಲಿ 44 ರನ್ ಗಳಿಸಿದರು. ಉಳಿದ ಆರು ಎಸೆತಗಳಲ್ಲಿ ಆರು ರನ್ ಕಲೆಹಾಕಿ ತಮ್ಮ ಅರ್ಧಶತಕ ಪೂರೈಸಿದರು.
ಇದರೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಪರ ಅತಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೆ ಈ ಹಿಂದೆ ತಮ್ಮ ಹೆಸರಿನಲ್ಲಿದ್ದ ದಾಖಲೆಯನ್ನು ಸಹ ಮುರಿದಿದ್ದಾರೆ. 2024 ರಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧ ಅಭಿಷೇಕ್ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಭಿಷೇಕ್ ದಾಖಲೆ ನಿರ್ಮಿಸಿದ್ದಾರೆ. ಅಂತಿಮವಾಗಿ ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 59 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿ, ಏ,18: ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿ ವಿಧೇಯಕವನ್ನು ವಿರೋಧಿಸಿ ಈಗ ಸದನದಲ್ಲಿ ಸಮರ್ಥನೆ ಮಾಡಿಕೊಳ್ಳಲು ಪರದಾಡುತ್ತಿದೆ ಎಂದು ಜೋಶಿ ಆರೋಪಿಸಿದ್ದಾರೆ. ಅನೇಕ ಕಾಂಗ್ರೆಸ್ ಸಂಸದರಿಗೆ ಮಹಿಳಾ ಮೀಸಲಾತಿಯನ್ನು ವಿರೋಧಿಸಬಾರದು ಎಂದು ತಿಳಿದಿದ್ದರೂ, ರಾಹುಲ್ ಗಾಂಧಿ ಅವರ ಅಪ್ರಬುದ್ಧ ಮತ್ತು ಗಂಭೀರತೆ ಇಲ್ಲದ, ಬೇಜವಾಬ್ದಾರಿಯ ಪಾರ್ಟ್ ಟೈಮ್ ರಾಜಕಾರಣಿಯ ನಾಯಕತ್ವದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಪ್ರಹ್ಲಾದ್ ಜೋಶಿ ಕಟುವಾಗಿ ಟೀಕಿಸಿದರು.ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಪಕ್ಷವನ್ನು ಒಬಿಸಿ ವಿರೋಧಿ ಎಂದು ಕರೆದರು. ರಾಜೀವ್ ಗಾಂಧಿ, ನೆಹರು ಮತ್ತು ಇಂದಿರಾ ಗಾಂಧಿ ಅವರ ಕಾಲದಲ್ಲಿಯೂ ಒಬಿಸಿ ಕಮಿಷನ್‌ಗೆ ಸಾಂವಿಧಾನಿಕ ಸ್ಥಾನಮಾನ ನೀಡಲಿಲ್ಲ ಎಂದು ಅವರು ಹೇಳಿದರು. ವಿಶೇಷವಾಗಿ, ಮಂಡಲ ಆಯೋಗದ ಸಂದರ್ಭದಲ್ಲಿ ರಾಜೀವ್ ಗಾಂಧಿಯವರು ಒಬಿಸಿ ಮೀಸಲಾತಿಯನ್ನು ತೀವ್ರವಾಗಿ ವಿರೋಧಿಸಿದ್ದರು ಎಂಬುದನ್ನು ಜೋಶಿ ಉಲ್ಲೇಖಿಸಿದರು. 1984 ರಿಂದ 1989 ರವರೆಗೆ ಪ್ರಧಾನಮಂತ್ರಿಯಾಗಿದ್ದ ರಾಜೀವ್ ಗಾಂಧಿ ಅವರು ಸಂಸತ್ತಿನಲ್ಲಿ ಅತಿ ಉದ್ದದ ಭಾಷಣವನ್ನು ಒಬಿಸಿ ಮೀಸಲಾತಿ ಮತ್ತು ಮಂಡಲ ಕಮಿಷನ್ ವಿರುದ್ಧ ಮಾಡಿದ್ದರು ಎಂದು ಅವರು ಸ್ಮರಿಸಿದರು. ಇಂದು ರಾಹುಲ್ ಗಾಂಧಿ ಈ ಬಗ್ಗೆ ಜ್ಞಾನವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷವು ಮಹಿಳಾ ವಿರೋಧಿ ಕೂಡ ಹೌದು ಎಂದು ಜೋಶಿ ಪ್ರತಿಪಾದಿಸಿದರು. 1996 ರಲ್ಲಿ ದೇವೇಗೌಡರ ಸರ್ಕಾರ ಮಹಿಳಾ ಮೀಸಲಾತಿಯನ್ನು ತಂದಾಗ, ಕಾಂಗ್ರೆಸ್ ಪಕ್ಷವು ಆ ಸರ್ಕಾರಕ್ಕೆ ಬೆಂಬಲ ನೀಡಿದ್ದರೂ, ಮಹಿಳಾ ಮೀಸಲಾತಿ ವಿಧೇಯಕವನ್ನು ವಿರೋಧಿಸಿತ್ತು. ಇದು ಐತಿಹಾಸಿಕ ದಾಖಲೆ ಎಂದು ಜೋಶಿ ತಿಳಿಸಿದರು. “ಅವರು ಅದನ್ನು ವಿರೋಧಿಸಿದರು” ಎಂದು ಜೋಶಿ ಪುನರುಚ್ಚರಿಸಿದರು. ಮಹಿಳಾ ಮೀಸಲಾತಿ ಜಾರಿಗೆ ಬಾರದೆ ಇರಲು ಕಾಂಗ್ರೆಸ್ ಕಾರಣವಾಗಿದ್ದು, ಆ ಮಸೂದೆಯನ್ನು ಜಾರಿಗೆ ತರುವುದು ಸಂಪೂರ್ಣವಾಗಿ ಅವರ ಕೈಯಲ್ಲಿತ್ತು ಎಂದರು. ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್ ಜೋಶಿ, ರಾಜಕಾರಣಿಗಳು ಹೇಳಿದ್ದನ್ನು ಕೇವಲ ವರದಿ ಮಾಡುವುದಷ್ಟೇ ಅಲ್ಲದೆ, ಪ್ರತಿಯೊಬ್ಬರೂ ವಿಷಯದ ಬಗ್ಗೆ ಅಧ್ಯಯನ ಮಾಡಿ, ವಾಸ್ತವಾಂಶಗಳನ್ನು ಪರಿಶೀಲಿಸಿ ವರದಿ ಮಾಡುವಂತೆ ವಿನಂತಿಸಿದರು. 1996ರಲ್ಲಿ ಅವರು ಮಹಿಳಾ ಮೀಸಲಾತಿಯನ್ನು ವಿರೋಧಿಸಿದ್ದರೂ, ನಂತರ ಬೆಂಬಲ ನೀಡಿದಂತೆ ವರ್ತಿಸುವುದು ವಿಪರ್ಯಾಸ ಎಂದರು. ಒಟ್ಟಾರೆ, ರಾಹುಲ್ ಗಾಂಧಿ ಅವರ ಅಪ್ರಬುದ್ಧ ನಾಯಕತ್ವ ಮತ್ತು ಕಾಂಗ್ರೆಸ್‌ನ ಐತಿಹಾಸಿಕ ನಿಲುವುಗಳ ಬಗ್ಗೆ ಪ್ರಹ್ಲಾದ್ ಜೋಶಿ ತಮ್ಮ ಸುದ್ದಿಗೋಷ್ಠಿಯಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.