Category Archives: Blog

Your blog category

ಸಾವಿನ ಕದ ತಟ್ಟಿ ಮರಳಿ ಬಂದ ರಾಣಾ ದಗ್ಗುಬಾಟಿ: ಆಗಿದ್ದೇನು? – Kannada News | Rana Daggubati said he returned movie advances due to his health issue

ಬಾಹುಬಲಿ’ (Bahubali) ಸಿನಿಮಾದ ವಿಲನ್ ಬಲ್ಲಾಳದೇವ ಯಾರಿಗೆ ನೆನಪಿಲ್ಲ. ಪಾತ್ರದಲ್ಲಿ ನಟಿಸಿದ್ದ ರಾಣಾ ದಗ್ಗುಬಾಟಿ, ಆ ಪಾತ್ರಕ್ಕಾಗಿ ಭಾರಿ ರಿಸ್ಕ್ ತೆಗೆದುಕೊಂಡಿದ್ದರು. ಪ್ರಭಾಸ್​​ಗಿಂತಲೂ ಹುರಿಗಟ್ಟಿದ ದೇಹವನ್ನು ‘ಬಾಹುಬಲಿ’ ಸಿನಿಮಾಕ್ಕಾಗಿ ತಯಾರು ಮಾಡಿಕೊಂಡಿದ್ದರು ರಾಣಾ ದಗ್ಗುಬಾಟಿ. ‘ಬಾಹುಬಲಿ’ ಬಳಿಕ ಹಲವು ಮಾಸ್ ಸಿನಿಮಾ ಆಫರ್​​ಗಳು ರಾಣಾ ದಗ್ಗುಬಾಟಿಗೆ ಬಂದಿದ್ದವು. ಆದರೆ ರಾಣಾ ಯಾವ ಸಿನಿಮಾನಲ್ಲಿಯೂ ನಟಿಸಲಿಲ್ಲ, ಬದಲಿಗೆ ತೆಗೆದುಕೊಂಡಿದ್ದ ಅಡ್ವಾನ್ಸ್ ಹಣವನ್ನು ಸಹ ವಾಪಸ್ ಮಾಡಿಬಿಟ್ಟರು. ಅದೇಕೆ ಎಂಬುದನ್ನು ಇದೀಗ ಅವರು ಬಾಯ್ಬಿಟ್ಟಿದ್ದಾರೆ.

ರಾಣಾ ದಗ್​ಗುಬಾಟಿ ಅವರಿಗೆ ‘ಬಾಹುಬಲಿ’ ಸಿನಿಮಾದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಅವರು ನಟಿ ರೆಹಾ ಚಕ್ರವರ್ತಿ ಅವರ ಪಾಡ್​​ಕಾಸ್ಟ್​​ನಲ್ಲಿ ಮಾತನಾಡಿದ್ದಾರೆ. ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯಗಳಿಂದ ಅವರು ಬಳಲಿದರು. ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದ ರಾಣಾ ದಗ್ಗುಬಾಟಿ, ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣ ಸಣ್ಣಗಾಗಿ ಬಿಟ್ಟಿದ್ದರು. ಅವರೇ ಹೇಳಿರುವಂತೆ ಹೋಗುವಾಗ ಹೇಗಿದ್ದರೊ ಅದರ ಅರ್ಧದಷ್ಟಾಗಿಬಿಟ್ಟಿದ್ದರಂತೆ.

‘ಬಾಹುಬಲಿ’ ಬಳಿಕ ಕೆಲವಾರು ಸಿನಿಮಾಗಳನ್ನು ರಾಣಾ ದಗ್ಗುಬಾಟಿ ಒಪ್ಪಿಕೊಂಡಿದ್ದರಂತೆ. ಬಾಕ್ಸರ್ ಒಬ್ಬನ ಬಗೆಗಿನ ಸಿನಿಮಾ ಇನ್ನೂ ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದರಂತೆ. ಆದರೆ ನಾನು ಆ ಹಾಟ್ ಬಾಡಿ ಹೊಂದಿರುವ ನಟ ಅಲ್ಲ ಎಂದು ಎಲ್ಲ ಅಡ್ವಾನ್ಸ್ ಅನ್ನು ಮರಳಿಸಿಬಿಟ್ಟರಂತೆ. ಒಮ್ಮೆ ಅವರು ಅಮೆರಿಕದಲ್ಲಿದ್ದಾಗ ಅವರ ಗೆಳೆಯ ನಟ ವರುಣ್ ತೇಜ್ ಬಂದಿದ್ದರಂತೆ. ಅವರನ್ನು ನೋಡಿ ರಾಣಾ ದಗ್ಗುಬಾಟಿಗೆ ಅವರ ಹಳೆಯ ದಿನಗಳು ನೆನಪಾದವಂತೆ.

ಇದನ್ನೂ ಓದಿ:ರಿಷಬ್ ಶೆಟ್ಟಿ ಜೊತೆ ನಟಿಸಲಿರುವ ‘ಬಾಹುಬಲಿ’ಯ ‘ಸಹೋದರ’

ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ, ವಿಶ್ರಾಂತಿಗಳನ್ನು ಮುಗಿಸಿ ಮರಳುವಾಗ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೊಬ್ಬ ಬಲ್ಲಾಳದೇವ ಎಂದ ಕರೆದಾಗ ರಾಣಾಗೆ ಬಹಳ ಮುಜುಗರವಾಯ್ತಂತೆ. ಏಕೆಂದರೆ ಅವರು ಸಂಪೂರ್ಣವಾಗಿ ಇಳಿದು ಹೋಗಿದ್ದರು. ಪಾಡ್​​ಕಾಸ್ಟ್​​ನಲ್ಲಿ ರಾಣಾ ಹೇಳಿಕೊಂಡಿರುವಂತೆ ಈಗ ಅವರ ಮುಖ್ಯ ಗೋಲ್ ಇರುವುದು ಬದುಕುವುದಕ್ಕೆ ಮಾತ್ರವೇ ಅಂತೆ. ಯಾವ ಬಾಡಿ ಬಿಲ್ಡಿಂಗ್ ಇನ್ನಿತರೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ರಾಣಾ ಹೇಳಿದ್ದಾರೆ.

ರಾಣಾ ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರಾದರೂ ಮಾಸ್ ರೀತಿಯ ಪಾತ್ರಗಳು, ಬಾಡಿ ಬಿಲ್ಡಿಂಗ್ ಅವಶ್ಯಕತೆ ಇರುವ ಪಾತ್ರಗಳಲ್ಲಿ ನಟಿಸುತ್ತಿಲ್ಲ. ಸಿನಿಮಾ ನಟನೆಗಿಂತಲೂ ಸಿನಿಮಾ ನಿರ್ಮಾಣದಲ್ಲಿ ದಗ್ಗುಬಾಟಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಪಾರ್ಟ್ಮೆಂಟ್​ನಲ್ಲಿ ಪತ್ನಿನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಜಂಟಿ ಪೊಲೀಸ್ ಆಯುಕ್ತ – Kannada News | Ramesh banoth Talks about Nageshwar Kills His Wife In Bengaluru

ಬೆಂಗಳೂರು, (ಫೆಬ್ರವರಿ 18): ನಿವೃತ್ತ ಇಸ್ರೋ (ISRO) ಉದ್ಯೋಗಿಯೊಬ್ಬರು ಪತ್ನಿಯನ್ನೇ(Wife) ಕೊಲೆ ಮಾಡಿದ ಘಟನೆ ಬೆಂಗಳೂರು (Bengaluru) ಹೊರವಲಯದ ಅವಲಹಳ್ಳಿ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್‌ ರಾವ್‌ (75), ನಾನು ಸತ್ತರೆ ನಿನ್ನ ನೋಡಿಕೊಳ್ಳುವವರು ಯಾರು ಎಂದು ಪತ್ನಿ ಸಂಧ್ಯಾಳನ್ನು ಟವಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್‌ ರಾವ್‌ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದರು. ತಾನು ಆತ್ಮಹತ್ಯೆ ಮಾಡಿದರೆ ಪತ್ನಿ ಒಂಟಿಯಾಗುತ್ತಾಳೆ. ಆಕೆಯನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ ಎಂದು ತೀರ್ಮಾನಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಪೂರ್ವ ವಲಯ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯಿಸಿದ್ದು, ಸಂಧ್ಯಾಶ್ರೀ ಅವರ ಮನೆಯ ಅಡುಗೆ ಮನೆಯಲ್ಲಿ ಇದ್ದಾಗ ಕೃತ್ಯ ನಡೆಸಲಾಗಿದೆ. ಇಂದು (ಫೆಬ್ರವರಿ 18) ಬೆಳಗ್ಗೆ ಹತ್ತು ಘಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.ನಾಗೇಶ್ವರ ರಾವ್ ಅವರು ಟವಲ್ ಬಳಸಿ ಹಿಂದಿನಿಂದ ಹೋಗಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಅದೇ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡುವ ಒರ್ವರಿಗೆ ಕರೆ ಮಾಡಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಬಳಿಕ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಅಪಾರ್ಟ್ಮೆಂಟ್ ನಲ್ಲಿ ಇರುವ ವೈದ್ಯರೂ ಪರಿಶೀಲನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ಅನ್ವಯ ಕೇಸ್ ದಾಖಲು ಮಾಡಿ ನಾಗಲೇಶ್ವರ ರಾವ್ ಅವರನ್ನ ಬಂಧನ ಮಾಡಲಾಗಿದೆ. ಆರೋಪಿ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆರೋಪಿತ ಸಹ ಮಾನಸಿಕ ಅಸ್ವಸ್ಥತೆ ಇರುವಂತೆ ಕಂಡು ಬರುತ್ತಿದೆ. ಸದ್ಯ ತನಿಖೆ ಮುಂದುವರೆಸಲಾಗಿದ್ದು, ಕೃತ್ಯಕ್ಕೆ ನಿಖರವಾದ ಕಾರಣ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಾನು ಸತ್ತರೆ ನಿನ್ನ ಯಾರು ನೋಡಿಕೊಳ್ಳುತ್ತಾರೆ: ಪತ್ನಿಯನ್ನ ಕೊಂದ ಇಸ್ರೋ ನಿವೃತ್ತ ನೌಕರ

Source link

ಅಮಿತಾಬ್ ಬಚ್ಚನ್ ಹೂಡಿಕೆ ಮಾಡುವ ವಿಧಾನ ತಿಳಿಸಿದ ಅಭಿಷೇಕ್ ಬಚ್ಚನ್ – Kannada News | Abhishek Bachchan shares his father Amitabh Bachchan’s investment lessons

ಅಮಿತಾಬ್ ಬಚ್ಚನ್ (Amitabh Bachchan) ಬಾಲಿವುಡ್​ನ ಸೂಪರ್ ಸ್ಟಾರ್ ನಟ. ಭಾರತೀಯ ಚಿತ್ರರಂಗದ ಲಿವಿಂಗ್ ಲಿಜೆಂಡ್ ಎನಿಸಿಕೊಂಡಿರುವ ಅಮಿತಾಬ್ ಬಚ್ಚನ್ ಅವರು ಅತ್ಯದ್ಭುತ ನಟರಾಗಿರುವ ಜೊತೆಗೆ ಉದ್ಯಮಿಯೂ ಹೌದು. ಅಮಿತಾಬ್ ಬಚ್ಚನ್ ಅವರು ಹಲವು ವರ್ಷಗಳಿಂದಲೂ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮಗಳ ಮೇಲೆ ಹೂಡಿಕೆ ಮಾಡಿಕೊಂಡು ಬಂದಿರುವುದು ಮಾತ್ರವೇ ಅಲ್ಲದೆ, ತಮ್ಮ ಮಕ್ಕಳಿಗೂ ಹೂಡಿಕೆಯ ಕೆಲವು ನಿಯಮಗಳನ್ನು ಹೇಳಿಕೊಟ್ಟಿದ್ದಾರೆ. ಇದೀಗ ಅಮಿತಾಬ್ ಬಚ್ಚನ್ ಅವರ ಪುತ್ರ, ಖ್ಯಾತ ನಟ ಅಭಿಷೇಕ್ ಬಚ್ಚನ್ ಅವರು ತಂದೆಯ ಹೂಡಿಕೆ ನಿಯಮಗಳ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್‌ನ ಬಚ್ಚನ್ ಕುಟುಂಬ ಕೇವಲ ಚಿತ್ರರಂಗದ ಯಶಸ್ಸಿನ ಮೇಲೆ ಮಾತ್ರ ಅವಲಂಬಿತವಾಗಿಲ್ಲ, ಬದಲಿಗೆ ಆಸ್ತಿ ಮತ್ತು ಸಂಪತ್ತನ್ನು ಹೇಗೆ ಬುದ್ಧಿವಂತಿಕೆಯಿಂದ ವೃದ್ಧಿಸಬೇಕು ಎಂಬ ಕಲೆಯನ್ನೂ ಕರಗತ ಮಾಡಿಕೊಂಡಿದೆ. ಇತ್ತೀಚೆಗೆ ಸ್ವಿಗ್ಗಿ ಮತ್ತು ನಾಗಿನ್ ಸಾಸ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಸುದ್ದಿಯಾಗಿದ್ದ ನಟ ಅಭಿಷೇಕ್ ಬಚ್ಚನ್, ಇದೀಗ ತಮ್ಮ ತಂದೆ ಅಮಿತಾಭ್ ಬಚ್ಚನ್ ಅವರ ಹೂಡಿಕೆಯ ನಿಯಮಗಳನ್ನು ಬಹಿರಂಗಪಡಿಸಿದ್ದಾರೆ.

ಜಾಗತಿಕ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಅಭಿಷೇಕ್, ‘ನನ್ನ ತಂದೆ ಯಾವಾಗಲೂ ಭೌತಿಕ ಆಸ್ತಿ ಖರೀದಿ​ ಮೇಲೆ ನಂಬಿಕೆ ಇಟ್ಟವರು. ಅದರಲ್ಲೂ ರಿಯಲ್ ಎಸ್ಟೇಟ್ ಮತ್ತು ಚಿನ್ನದ ಮೇಲೆ ಅವರಿಗೆ ಹೆಚ್ಚಿನ ಒಲವು. ನಾನು ಕೂಡ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದೆ, ನಂತರ ನನ್ನ ಪತ್ನಿ ಬೆಳ್ಳಿಯತ್ತಲೂ ಗಮನ ಹರಿಸುವಂತೆ ಸೂಚಿಸಿದಳು, ಅವರಿಗೆ ಬೆಳ್ಳಿಯ ಮೇಲೆ ಒಲವು ಹೆಚ್ಚು’ ಎಂದು ತಮ್ಮ ಕುಟುಂಬದ ಹಣಕಾಸು ಶಿಸ್ತಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರು ಮುಂಬೈ ಒಂದರಲ್ಲೇ ಸುಮಾರು 600 ಕೋಟಿಗೂ ಹೆಚ್ಚು ಮೌಲ್ಯದ ಕಮರ್ಶಿಯಲ್ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗುತ್ತದೆ.

ಇದನ್ನೂ ಓದಿ:ಅಮಿತಾಬ್ ಬಚ್ಚನ್ ಎದುರು ಬಾಲಕನ ಉದ್ಧಟತನ: ವಿಡಿಯೋ ವೈರಲ್

ಕೇವಲ ಹೂಡಿಕೆ ಮಾತ್ರವಲ್ಲದೆ, ಕೆಲವು ಬ್ರ್ಯಾಂಡ್ ರಾಯಭಾರಿಯಾಗುವ ವಿಷಯದಲ್ಲೂ ಅಭಿಷೇಕ್ ತಮ್ಮದೇ ಆದ ಕಟ್ಟುನಿಟ್ಟಿನ ನಿಯಮ ಹೊಂದಿದ್ದಾರಂತೆ. ‘ನಾನು ಒಬ್ಬ ನಟನಾಗಿ ಯಾವುದಾದರೂ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಬಹುದು. ಆದರೆ, ವೈಯಕ್ತಿಕವಾಗಿ ನಾನು ಬಳಸದ ವಸ್ತುವನ್ನು ಪ್ರಚಾರ ಮಾಡುವುದು ನನಗೆ ಮೋಸ ಮಾಡಿದಂತೆ ಅನಿಸುತ್ತದೆ. ಯಾವುದಾದರೂ ಕಂಪನಿ ನನ್ನನ್ನು ರಾಯಭಾರಿಯನ್ನಾಗಿ ಮಾಡಲು ಮುಂದೆ ಬಂದರೆ, ಮೊದಲು ನಾನು ಆ ವಸ್ತುವನ್ನು ಬಳಸುತ್ತೇನೆಯೇ? ಎಂದು ಯೋಚಿಸುತ್ತೇನೆ’ ಎಂದಿದ್ದಾರೆ.

ತಮ್ಮ 20 ವರ್ಷಗಳ ಅನುಭವವನ್ನು ಹಂಚಿಕೊಂಡ ಅವರು, “ನಾನು ಇಂದಿಗೂ ಒಮೆಗಾ ವಾಚ್ ಧರಿಸುತ್ತೇನೆ, ಫೋರ್ಡ್ ಕಾರು ಬಳಸುತ್ತಿದ್ದೆ, ಐಡಿಯಾ ಸಿಮ್ ಹಾಗೂ ಮೊಟೊರೊಲಾ ಫೋನ್ ಬಳಸುತ್ತಿದ್ದೆ. ಇವೆಲ್ಲವೂ ನಾನು ವೈಯಕ್ತಿಕವಾಗಿ ಇಷ್ಟಪಟ್ಟು ಬಳಸುವ ಬ್ರ್ಯಾಂಡ್‌ಗಳು’ ಎಂದು ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ಅಭಿಷೇಕ್ ಬಚ್ಚನ್ ಕೇವಲ ರಿಯಲ್ ಎಸ್ಟೇಟ್‌ನಲ್ಲಿ ಮಾತ್ರವಲ್ಲದೆ, ಕ್ರೀಡಾ ಲೋಕದಲ್ಲೂ ದೊಡ್ಡ ಹೂಡಿಕೆ ಮಾಡಿದ್ದಾರೆ. ಅವರು ಪ್ರೊ ಕಬಡ್ಡಿಯ ‘ಜೈಪುರ ಪಿಂಕ್ ಪ್ಯಾಂಥರ್ಸ್’ ತಂಡದ ಮಾಲೀಕರಾಗಿದ್ದಾರೆ ಮತ್ತು ‘ಚೆನ್ನೈಯಿನ್ ಎಫ್‌ಸಿ’ ಫುಟ್‌ಬಾಲ್ ತಂಡದ ಸಹ-ಮಾಲೀಕರಾಗಿದ್ದಾರೆ. ಇವುಗಳ ಜೊತೆಗೆ ‘ವಾಹ್ದಮ್ ಟೀ’ ನಂತಹ ಸ್ಟಾರ್ಟಪ್​​ಗಳಲ್ಲಿಯೂ ಹೂಡಿಕೆ ಮಾಡುವ ಮೂಲಕ ತಮ್ಮ ಉದ್ಯಮ ವಿಸ್ತರಿಸಿದ್ದಾರೆ. ಅಭಿಷೇಕ್ ಬಚ್ಚನ್ ಅವರು ಸಹ ಸುಮಾರು 250 ಕೋಟಿಯ ರಿಯಲ್ ಎಸ್ಟೇಟ್ ಅನ್ನು ಮುಂಬೈನಲ್ಲಿ ಹೊಂದಿದ್ದಾರೆ ಎನ್ನಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ-ಅಮೆರಿಕ ಕನೆಕ್ಟ್ ಸೇರಿದಂತೆ ವಿವಿಧ ಎಐ ಯೋಜನೆಗಳನ್ನು ತೆರೆದಿಟ್ಟ ಗೂಗಲ್ ಸಿಇಒ ಸುಂದರ್ ಪಿಚೈ – Kannada News | Google CEO Sundar Pichai announces India America Connect initiative at AI Impact Summit

ನವದೆಹಲಿ, ಫೆಬ್ರುವರಿ 18: ಗೂಗಲ್ ಸಿಇಒ, ಹಾಗೂ ಭಾರತ ಮೂಲದ ಸುಂದರ್ ಪಿಚೈ (Sundar Pichai) ಅವರು ಭಾರತ-ಅಮೆರಿಕ ಕನೆಕ್ಟ್ (India America Connect initiative) ಎನ್ನುವ ಮಹತ್ವದ ಉಪಕ್ರಮ ಘೋಷಿಸಿದ್ದಾರೆ. ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಂದರ್ ಪಿಚೈ, ಭಾರತ ಹಾಗು ಅಮೆರಿಕ ನಡುವೆ ಎಐ ಕನೆಕ್ಟಿವಿಟಿ ಹೆಚ್ಚಿಸಲು ಸಮುದ್ರದೊಳಗೆ ಕೇಬಲ್ ಮಾರ್ಗಗಳನ್ನು (Subsea cable routes) ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

‘ಭಾರತ-ಅಮೆರಿಕ ಕನೆಕ್ಟ್ ಉಪಕ್ರಮವನ್ನು ಘೋಷಿಸುತ್ತಿದ್ದೇವೆ. ಈ ಉಪಕ್ರಮದಲ್ಲಿ ಭಾರತ ಹಾಗೂ ಅಮೆರಿಕ ಹಾಗೂ ದಕ್ಷಿಣ ಗೋಳಾರ್ಧದ ವಿವಿಧ ಸ್ಥಳಗಳ ನಡುವೆ ಎಐ ಕನೆಕ್ಟಿವಿಟಿ ಹೆಚ್ಚಿಸಲು ಸಾಗರದೊಳಗೆ ಹೊಸ ಕೇಬಲ್ ಮಾರ್ಗಗಳನ್ನು ಅಳವಡಿಸಲಾಗುತ್ತದೆ. ಈ ಉಪಕ್ರಮದಿಂದ ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳಬೇಕಾದರೆ ಕೌಶಲ್ಯಾಭಿವೃದ್ಧಿಯಲ್ಲೂ ಹೂಡಿಕೆ ಮಾಡುವ ಅಗತ್ಯ ಇದೆ. ಹೀಗಾಗಿ, ಕೌಶಲ್ಯ ಯೋಜನೆಗಳನ್ನೂ ಪ್ರಕಟಿಸುತ್ತಿದ್ದೇವೆ. ಇದರಲ್ಲಿ ಹೊಸ ಗೂಗಲ್ ಎಐ ಪ್ರೊಫೆಷನಲ್ ಸರ್ಟಿಫಿಕೇಟ್ ಪ್ರೋಗ್ರಾಮ್ ಕೂಡ ಇದೆ. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಎಐ ಅನ್ನು ಸದ್ವಿನಿಯೋಗ ಮಾಡಿಕೊಳ್ಳಲು ಸಹಾಯವಾಗುತ್ತದೆ’ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ

ಅಸಾಧಾರಣ ಎಐ ತಿರುವಿನಲ್ಲಿ ಭಾರತ: ಸುಂದರ್ ಪಿಚೈ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನಲ್ಲಿ ಅಸಾಧಾರಣ ತಿರುವಿನಲ್ಲಿ (extraordinary trajectory) ಭಾರತ ಸಾಗುತ್ತಿದೆ. ಈ ದೇಶದ ಎಐ ಪರಿವರ್ತನೆಯಲ್ಲಿ ಜೊತೆಯಾಗಲು ಗೂಗಲ್ ಬದ್ಧವಾಗಿದೆ. ಭಾರತದ ವೈವಿಧ್ಯತೆ, ಭಾಷಾ ಪರಿಸರ, ಉತ್ತಮ ಡಿಜಿಟಲ್ ಪಬ್ಲಕ್ ಇನ್​ಫ್ರಾಸ್ಟ್ರಕ್ಚರ್​ಗಳು ನಾವೀನ್ಯತೆಗೆ ಭದ್ರ ಬುನಾದಿ ಹಾಕುತ್ತವೆ ಎಂದು ಗೂಗಲ್ ಸಿಇಒ ಅಭಿಪ್ರಾಯಪಟ್ಟಿದ್ದಾರೆ.

ಸುಂದರ್ ಪಿಚೈ ಮಾತನಾಡಿರುವ ವಿಡಿಯೋ

ಭಾರತ ಅಮೆರಿಕ ಕನೆಕ್ಟ್ ಉಪಕ್ರಮ ಹೇಗೆ?

ಗೂಗಲ್ ಸಂಸ್ಥೆ ಭಾರತದಲ್ಲಿ ಎಐ ಮೂಲಸೌಕರ್ಯಕ್ಕಾಗಿ ಐದು ವರ್ಷದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆಗೆ ಯೋಜಿಸಿದೆ. ಇದರ ಭಾಗವಾಗಿ ಇಂಡಿಯಾ-ಅಮೆರಿಕ ಕನೆಕ್ಟ್ ಉಪಕ್ರಮ ಆರಂಭಿಸಲಾಗಿದೆ. ಸಮುದ್ರದೊಳಗಿನಿಂದ ಕೇಬಲ್​ಗಳನ್ನು ಅಳವಡಿಸುವುದು, ಫೈಬರ್ ಆಪ್ಟಿಕ್ ಮಾರ್ಗಗಳನ್ನು ನಿರ್ಮಿಸುವುದು, ಮತ್ತು ಇಂಟರ್ನ್ಯಾಷನಲ್ ಲ್ಯಾಂಡಿಂಗ್ ಸ್ಟೇಷನ್​ಗಳನ್ನು ನಿರ್ಮಿಸುವುದು ಗೂಗಲ್​ನ ಯೋಜನೆಗಳಲ್ಲಿ ಸೇರಿವೆ.

ಇದನ್ನೂ ಓದಿ: ಭಾರತದಲ್ಲಿ ಬೃಹತ್ ಎಐ ಕಂಪ್ಯೂಟಿಂಗ್ ಹಬ್, ಗಿ.ವ್ಯಾ. ಎಐ ಡಾಟಾ ಸೆಂಟರ್ ಫ್ಯಾಕ್ಟರಿ, ಎಐ ಸೂಪರ್​ಕಂಪ್ಯೂಟಿಂಗ್ ಸಿಸ್ಟಂ

ಅಮೆರಿಕದ ಪಶ್ಚಿಮ ಕರಾವಳಿ ಭಾಗದಿಂದ ಸಮುದ್ರದೊಳಗೆ ಕೇಬಲ್​ಗಳನ್ನು ಭಾರತ, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಇತ್ಯಾದಿ ಕಡೆಗೆ ಹಾಯಿಸಲಾಗುತ್ತದೆ. ಭಾರತದಿಂದ ಸಿಂಗಾಪುರ, ಸೌತ್ ಆಫ್ರಿಕಾ ಆಸ್ಟ್ರೇಲಿಯಾಗೆ ಕೆನ್ಕಟ್ ಆಗುವ ವಿವಿಧ ಸಬ್​ಸೀ ಕೇಬಲ್ ಮಾರ್ಗಗಳನ್ನೂ ಮಾಡಲಾಗುತ್ತದೆ. ವಿಶಾಖಪಟ್ಟಣಂನಲ್ಲಿ ಹೊಸ ಇಂಟರ್ನ್ಯಾಷನಲ್ ಸಬ್​ಸೀ ಗೇಟ್​ವೀ ಸ್ಥಾಪಿಸಲಾಗುತ್ತದೆ. ಹಾಗೆಯೇ, ನಾಲ್ಕು ಫೈಬರ್ ಆಪ್ಟಿಕ್ ರೂಟ್​ಗಳನ್ನೂ ನಿರ್ಮಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಳೆಯಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ ಪುನರಾರಂಭ: ಗುಡ್​​ನ್ಯೂಸ್​​ ಕೊಟ್ಟ ಅರಣ್ಯ ಸಚಿವರು – Kannada News | Nagarahole, Bandipur Safari Resumes from Tomorrow: Good News for Tourists

ಬೆಂಗಳೂರು, ಫೆಬ್ರವರಿ 18: ನಾಗರಹೊಳೆ, ಬಂಡೀಪುರ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆಯಿಂದ ನಾಳೆಯಿಂದಲೇ ಸಫಾರಿ ಪುನಾರಂಭಕ್ಕೆ ನಿರ್ಧರಿಸಲಾಗಿದೆ ಎಂದು ವಿಕಾಸಸೌಧದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಸಫಾರಿ ತಾತ್ಕಾಲಿಕ ಸ್ಥಗಿತವಾದ ನಂತರ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದ್ದು, ಜನವರಿ 2ರಂದು ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ಮಾಡಿದ್ದೆವು. ಹಿರಿಯ ಅಧಿಕಾರಿಗಳ ನೇತೃತ್ವದ ತಾಂತ್ರಿಕ ಸಮಿತಿ ಮಧ್ಯಂತರ ವರದಿ ನೀಡಿದ್ದು, ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇದೆ. ಹೀಗಾಗಿ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ. ಪೂರ್ತಿ ವರದಿ ಬಂದ ಬಳಿಕ ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ತಿಳಿಸಿದ್ದಾರೆ.

ಸಫಾರಿ ಅವಧಿ ಇಳಿಕೆ

ಈ ಮೊದಲು ಬಳಕೆ ಮಾಡ್ತಿದ್ದ ಶೇ.50ರಷ್ಟು ವಾಹನಗಳ ಬಳಕೆಗೆ ನಿರ್ಧರಿಸಲಾಗಿದ್ದು, ಸಫಾರಿ ಅವಧಿಯಲ್ಲಿಯೂ ಕೆಲ ಬದಲಾವಣೆ ಮಾಡಲಾಗಿದೆ. ಬಂಡೀಪುರದಲ್ಲಿ 8 ಗಂಟೆಯಿಂದ 5ಕ್ಕೆ ಅವಧಿ ಇಳಿಕೆ ಮಾಡಲಾಗಿದ್ದರೆ, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿದೆ. ಅಲ್ಲದೆ ರೆಸಾರ್ಟ್​​ ಮತ್ತು ಹೋಂ ಸ್ಟೇಗಳಲ್ಲಿ ಕ್ಯಾಂಪ್​​ ಫೈರ್​​ ನಿರ್ಬಂಧಿಸಿಯೂ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸಫಾರಿ ಬಂದ್​ನಿಂದ ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ ಪ್ರವಾಸಿಗರ ದಂಡು! ಕರ್ನಾಟಕಕ್ಕಾಗುವ ನಷ್ಟವೆಷ್ಟು ಗೊತ್ತಾ?

ಹುಲಿ ಹಾಗೂ ಚಿರತೆ ದಾಳಿಯಿಂದ ರಾಜ್ಯದ ಹಲವೆಡೆ ಸಾವು ನೋವುಗಳು ಹೆಚ್ಚಾದ ಹಿನ್ನೆಲೆ ಸರ್ಕಾರ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿತ್ತು. ಇದರ ಪರಿಣಾಮವಾಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಲಾಭವಾಗಿದೆ. ರಣಥಂಬೋರ್ ಹಾಗೂ ಕಾರ್ಬೆಟ್ ಸೇರಿದಂತೆ ಇತರ ರಾಜ್ಯಗಳ ಉದ್ಯಾನವನಗಳಲ್ಲಿ ಸಫಾರಿ ಬುಕ್ಕಿಂಗ್ ಹೆಚ್ಚಾಗಿದೆ ಎಂದು ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಶನ್ (KETRA) ದೂರಿತ್ತು. ಅಲ್ಲದೆ ಬಂಡೀಪುರ-ನಾಗರಹೊಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 35 ರಿಸಾರ್ಟ್ಗಗಳಿಗೆ ದಿನಕ್ಕೆ ಸರಾಸರಿ 3 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಸುಮಾರು 8,000 ಜನರು ಪರಿಸರ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿದ್ದು, ಸಫಾರಿಗೆ ಬ್ರೇಕ್ ಬಿದ್ದಿರುವುದು ಇವರ ಜೀವನದ ಮೇಲೆ ಪರಿಣಾಮ ಬಿದ್ದಿದೆ ಎಂಬ ಬಗ್ಗೆ ವರದಿಯಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:06 pm, Wed, 18 February 26

Source link

ಪುನೀತ್ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಕೈ ಮುಗಿದು ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್ – Kannada News | Kanakapura Srinivas apologies Puneeth Rajkumar Dhruva Sarja and Jogi Prem

ಕೆಲವೇ ದಿನಗಳ ಹಿಂದೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಜೋಗಿ ಪ್ರೇಮ್, ಎ.ಪಿ. ಅರ್ಜುನ್, ಪುನೀತ್ ರಾಜ್​ಕುಮಾರ್, ಧ್ರುವ ಸರ್ಜಾ (Dhruva Sarja) ಮುಂತಾದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈಗ ಮಾಧ್ಯಮದ ಎದುರು ಅವರು ಕ್ಷಮೆ ಕೇಳಿದ್ದಾರೆ. ‘ನಾನು ಕಾಟನ್​ಪೇಟೆ ಗೇಟ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾವುಕವಾಗಿ ಕೆಲವು ವಿಚಾರಗಳನ್ನು ಮಾತನಾಡಿದ್ದೆ. ಕಾರಣ ಇಷ್ಟೇ, ಆ ಸಿನಿಮಾ ರಿಲೀಸ್ ಆಗಬೇಕಿತ್ತು. ಸ್ವಲ್ಪ ಹಣದ ಅವಶ್ಯಕತೆ ಇತ್ತು. ತುಂಬಾ ದುಃಖದಿಂದ ಮಾತನಾಡಿದೆ. ರಾಜ್​​ಕುಮಾರ್ ಎಂದರೆ ನನಗೆ ಬಹಳ ಅಭಿಮಾನ. ಪುನೀತ್ ಸರ್ ನಿಜವಾಗಿಯೂ ದೇವರು. ನನ್ನ ಜೊತೆ ಸಿನಿಮಾ ಮಾಡುವುದಕಿಂತ ಮೊದಲಿನಿಂದಲೂ ಅವರ ಜೊತೆ ಒಡನಾಟ ಇದೆ. ಅವರು ಕನಕಪುರಕ್ಕೆ ಬರುತ್ತಿದ್ದರು’ ಎಂದು ಕನಕಪುರ ಶ್ರೀನಿವಾಸ್ (Kanakapura Srinivas) ಹೇಳಿದ್ದಾರೆ.

‘ಮುಯೂರ ಎಂಬ ಸಿನಿಮಾ ಅನೌನ್ಸ್ ಮಾಡಿದ್ದೆ. ಆ ಸಿನಿಮಾ ಆಗಲಿಲ್ಲ. ನನ್ನ ದುಡ್ಡಿಗೋಸ್ಕರ ದೇವರು ಅವರನ್ನು ತೆಗೆದುಕೊಂಡ ಅಂತ ನಾನು ಹೇಳಿದ್ದೆ. ಆ ಮಾತನ್ನು ನಾನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು 7 ಕೋಟಿ ಕನ್ನಡಿಗರು ನನ್ನನ್ನು ಕ್ಷಮಿಸಬೇಕು. ಪುನೀತ್ ಅವರು ದೇವರಾಗಿಯೇ ಮೇಲೆ ಇರುತ್ತಾರೆ. ಶಿವರಾಜ್​​ಕುಮಾರ್, ಗೀತಮ್ಮ ಅವರು ನನಗೆ ಬಹಳ ಸಹಾಯ ಮಾಡಿದ್ದಾರೆ. ಅವರ ಸಹಕಾರ ನಾನು ಎಂದಿಗೂ ಮರೆಯುವಂತಿಲ್ಲ’ ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.

‘ನಾನು ವಿದ್ಯಾವಂತ ಅಲ್ಲ. ಮನಸ್ಸಿನಲ್ಲಿ ಏನು ಇದೆಯೋ ಅದನ್ನೆಲ್ಲ ಹೇಳಿಬಿಟ್ಟಿದ್ದೇನೆ. ಶಿವಣ್ಣ ನಾನು ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನಿಮ್ಮ ಸಿನಿಮಾ ನಾವಿನ್ನೂ ಮಾಡಬೇಕು. ನಾನು ಏನಾದರೂ ತಪ್ಪಾಗಿ ಮಾತನಾಡಿದ್ದರೆ ದಯವಿಟ್ಟು ಕ್ಷಮಿಸಬೇಕು. ಪುನೀತ್ ರಾಜ್​ಕುಮಾರ್ ಅಭಿಮಾನಿಗಳಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ’ ಎಂದಿದ್ದಾರೆ ಕನಕಪುರ ಶ್ರೀನಿವಾಸ್.

‘ದರ್ಶನ್ ನಮ್ಮ ಮಾಸ್ ಹೀರೋ. ಅವರು ನನಗೆ ದುಡ್ಡು ಕೊಡಬೇಕು ಅಂತ ಹೇಳಿದ್ದೇನೆ. ಅದು ತಪ್ಪು. ಅವರ ಹೊರಗೆ ಬಂದಮೇಲೆ ಜೊತೆಗೆ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ಅದನ್ನು ಈಡೇರಿಸಿಕೊಡಿ’ ಎಂದು ಕನಕಪುರ ಶ್ರೀನಿವಾಸ್ ಅವರು ಕೈ ಮುಗಿದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕನಕಪುರ ಶ್ರೀನಿವಾಸ್ ಅಶ್ಲೀಲ ಮಾತಿಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್

‘ಧ್ರುವ ಸರ್ಜಾ ಅವರ ಜೊತೆ ನಾನು 3 ಸಿನಿಮಾ ಮಾಡಿದ್ದೇನೆ. ನಾನೊಬ್ಬ ಹಳ್ಳಿ ಹುಡುಗ. ನಿಮ್ಮಂಥ ಕಲಾವಿದರು ಬೇಕು. ನಮಗೆ ದಯವಿಟ್ಟು ಕಾಲ್​ಶೀಟ್ ಕೊಡಿ. ಒಳ್ಳೆಯ ಡೈರೆಕ್ಟರ್ ಕರೆದುಕೊಂಡು ಬರುತ್ತೇವೆ. ಸಿನಿಮಾ ಮಾಡಿಕೊಡಿ. ಪ್ರೇಮ್, ಎ.ಪಿ. ಅರ್ಜುನ್ ಅವರು ಸಿನಿಮಾ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ನನಗೆ ದುಡ್ಡು ಬೇಡ, ಸಿನಿಮಾ ಮಾಡಿಕೊಡಿ. ದಯವಿಟ್ಟು ನೀವೆಲ್ಲ ಸಹಕರಿಸಬೇಕು’ ಎಂದು ಕನಕಪುರ ಶ್ರೀನಿವಾಸ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಗಲಕೋಟೆ ಉಪಚುನಾವಣೆ ಮುನ್ನ ಅಕ್ರಮ ಮತದಾರರ ಸದ್ದು: ದಾಖಲೆ‌ ಸಮೇತ ಬಯಲು ಮಾಡಿದ ಮಾಜಿ ಶಾಸಕ – Kannada News | Bagalkote By Election: 7272 Double Voters Alleged by Ex MLA veeranna charantimath

ಡಿಸಿಗೆ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರುImage Credit source: tv9 kannada

ಬಾಗಲಕೋಟೆ, ಫೆಬ್ರವರಿ 18: ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ ವೈ ಮೇಟಿ ನಿಧನ ಹಿನ್ನೆಲೆ ಉಪಚುನಾವಣೆಗೆ (by election) ಭರ್ಜರಿ ತಯಾರಿ ನಡೆದಿದೆ. ಈ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ಚುನಾವಣೆ ಸಿದ್ದತೆ ಮಾಡಿಕೊಳ್ಳುತ್ತೀವೆ. ಈ ಮಧ್ಯೆ ಕ್ಷೇತ್ರದಲ್ಲಿ ಅಕ್ರಮ ವೋಟರ್​​​ಗಳ (voters) ಸದ್ದು ಜೋರಾಗಿದೆ. ಈ ಬಗ್ಗೆ ಬಿಜೆಪಿ‌ ಮಾಜಿ ಶಾಸಕ ವೀರಣ್ಣ ಚರಂತಿಮಠ ದಾಖಲೆ‌ ಸಮೇತ ಆರೋಪ ಮಾಡಿದ್ದಾರೆ.

ಈ ಹಿಂದೆ ಕಾಂಗ್ರೆಸ್ ‌ಮುಖಂಡರು ಬಿಜೆಪಿ‌ ಮಾಜಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಅದೊಂದು ಆರೋಪ ‌ಮಾಡಿದ್ದರು. ಚರಂತಿಮಠ ‌ತಾವು ಕಾರ್ಯಾಧ್ಯಕ್ಷ ಆಗಿರುವ ಬಿವಿವಿ ಸಂಘದ ವಿದ್ಯಾರ್ಥಿಗಳನ್ನು ಮತದಾರರನ್ನಾಗಿ ಮಾಡುತ್ತಿದ್ದಾರೆ. ಅಲ್ಲೂ ಕೂಡ ಅಕ್ರಮ ನಡೆದಿದೆ ಎಂದು ಆರೋಪ ಮಾಡಿ ಡಿಸಿಗೆ ಮನವಿ ಸಲ್ಲಿಸಿದ್ದರು.

ಡಬಲ್ ವೋಟರ್ಸ್ ಕಡಿವಾಣಕ್ಕೆ ಚರಂತಿಮಠ ಆಗ್ರಹ

ಇದೀಗ ವೀರಣ್ಣ ಚರಂತಿಮಠ ಬಾಗಲಕೋಟೆ ಕ್ಷೇತ್ರದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 7272 ಡಬಲ್ ವೋಟರ್ಸ್​ಗಳಿದ್ದಾರೆ ಎಂದು ದಾಖಲೆ ನೀಡಿದ್ದಾರೆ. ಎರಡೆರಡು ಬೂತ್​​ನಲ್ಲಿ ಒಬ್ಬ ವ್ಯಕ್ತಿಯ ಹೆಸರುಗಳಿವೆ. ಎರಡೆರೆಡು ಬೂತ್ ಪ್ರಕಾರ ಎರಡೆರಡು ವೋಟರ್​​​ ಐಡಿ ನಂಬರ್ ಇವೆ ಎಂದು ದಾಖಲೆ ಒದಗಿಸಿದ್ದಾರೆ‌. ಬಿಜೆಪಿ ಮುಖಂಡರು ಡಿಸಿ ಅವರಿಗೆ ದಾಖಲೆ ನೀಡಿ ಇವುಗಳನ್ನು ಸರಿಪಡಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ಮಾಜಿ ಶಾಸಕ ವೀರಣ್ಣ ಚರಂತಿಮಠ, ಡಬಲ್ ವೋಟರ್ಸ್​ ಈ ಹಿಂದೆ ಮತದಾನ ಕೂಡ ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.

ಡಿಸಿ ಸಂಗಪ್ಪ ಹೇಳಿದ್ದಿಷ್ಟು

ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಈ ಘಟನೆ ನಡೆದಿದೆ. ಇದನ್ನು ಬಿಜೆಪಿ ಬೂತ್ ಅಧ್ಯಕ್ಷರು, ಬೂತ್ ಕಾರ್ಯಕರ್ತರು ಬಯಲಿಗೆಳೆದಿದ್ದಾರೆ. ಇನ್ನು ಮನವಿ ಸ್ವೀಕರಿಸಿ ಮಾತನಾಡಿದ ಡಿಸಿ ಸಂಗಪ್ಪ, ಚುನಾವಣಾ ಸಿಬ್ಬಂದಿ ಮೂಲಕ ಈ ಬಗ್ಗೆ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿದ್ದಾರೆ‌. ಇನ್ನು ಈ ಬಗ್ಗೆ ದಾಖಲೆ ನೀಡಿದ ಜಿಲ್ಲಾಡಳಿತ ಬಾಗಲಕೋಟೆ ಕ್ಷೇತ್ರದಲ್ಲಿ 538 ಜನ ನಿಧನ ಹೊಂದಿದವರ ಹೆಸರು ಡಿಲಿಟ್ ಮಾಡಲಾಗಿದೆ. 382 ಜನ ಬೇರೆ ಕಡೆ ಸ್ಥಳಾಂತರವಾಗಿದ್ದಾರೆ. 341 ಜನರ ಹೆಸರು ಮಾತ್ರ ಡಬಲ್ ಇದ್ದವು. ಅವುಗಳನ್ನು ಸರಿ ಮಾಡಲಾಗಿದೆ. 7272 ಡಬಲ್ ವೋಟರ್ಸ್ ಇಲ್ಲ. ಅದು ಕನ್ನಡ ಮತ್ತು ಇಂಗ್ಲಿಷ್​ನಲ್ಲಿರುವ ಮತದಾರರ ಪಟ್ಟಿ ಮೂಲಕ ಗೊಂದಲವಾಗಿದೆ. ಬಿಜೆಪಿಯವರ ಮನವಿ ಸ್ವೀಕರಿಸಿದ್ದು, ಎಲ್ಲಾ ರೀತಿಯಿಂದ ಪರಿಷ್ಕರಣೆ ನಡೆದಿದೆ. ಲೋಪದೋಷ ಇರೋದನ್ನು ಸರಿಪಡಿಸುವ ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವೋಟ್​​ ಚೋರಿ ಎಂದ ‘ಕೈ’ಗೆ ಬಿಜೆಪಿ ಗುದ್ದು: ಕಾಂಗ್ರೆಸ್​ ವಿರುದ್ಧವೇ ಮತದಾರರ ಪಟ್ಟಿ ಅಕ್ರಮ ಆರೋಪ!

ಒಟ್ಟಿನಲ್ಲಿ ಉಪಚುನಾವಣೆ ಕಾವು ಆರಂಭಕ್ಕೂ ಮುನ್ನ ಅಕ್ರಮ ಮತದಾರರ ಸದ್ದು ಜೋರಾಗಿದ್ದು, ಜಿಲ್ಲಾಡಳಿತ ಇದನ್ನು ಕೂಲಂಕುಷವಾಗಿ ಪರಿಶೀಲಿಸಿ ಸರಿಪಡಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಂಜಾಬ್ ಮದುವೆಯಲ್ಲಿ ವಧು-ವರರ ಮೇಲೆ ಹಣದ ಮಳೆ; ನೋಟಿನ ಬಂಡಲ್ ಎಸೆದ ಅತಿಥಿಗಳು! – Kannada News | Money rain NRI Guests Shower Bundles Of Notes On Couple During Punjab Wedding Video Viral

ತರಣ್ ತರಣ್, ಫೆಬ್ರವರಿ 18: ಪಂಜಾಬ್​ನ ತರಣ್ ತರಣ್ ಜಿಲ್ಲೆಯಲ್ಲಿ ನಡೆದ ಮದುವೆ (Wedding Video) ಸಮಾರಂಭದಲ್ಲಿ ವಧು-ವರರು ಅಲಂಕೃತ ವೇದಿಕೆಯ ಮೇಲೆ ನಿಂತಾಗ ಆ ಮದುವೆಗೆ ಬಂದಿದ್ದ ಅತಿಥಿಗಳು ನೋಟುಗಳ ಬಂಡಲ್‌ಗಳನ್ನು ಅವರತ್ತ ಎಸೆಯುವ ದೃಶ್ಯಗಳು ಕಂಡುಬಂದವು. ವೇದಿಕೆ ಮತ್ತು ಸುತ್ತಮುತ್ತಲಿನ ನೆಲ ಪೂರ್ತಿ ನೋಟುಗಳ ರಾಶಿಯಿಂದ ತುಂಬಿತ್ತು.

ಈ ಮದುವೆಗೆ ಹಾಜರಾಗಲು ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳಿಂದ ಅನಿವಾಸಿ ಭಾರತೀಯ (ಎನ್‌ಆರ್‌ಐ) ಅತಿಥಿಗಳು ಆಗಮಿಸಿದ್ದರು. ಮ್ಯೂಸಿಕ್ ಹಾಕುತ್ತಿದ್ದಂತೆ ಅವರು ನವವಿವಾಹಿತರ ಮೇಲೆ ಭಾರತೀಯ ರೂಪಾಯಿ ಮತ್ತು ಯುಎಸ್ ಡಾಲರ್‌ಗಳನ್ನು ಎಸೆದರು. ಈ ವೇಳೆ ಅತಿಥಿಗಳು ವೇದಿಕೆಯ ಸುತ್ತಲೂ ಡ್ಯಾನ್ಸ್ ಮಾಡುತ್ತಿದ್ದರು.

ಇದನ್ನೂ ಓದಿ: ಈ ಗ್ರಾಮದ ಸೊಸೆಯಂದಿರು ಸ್ಮಾರ್ಟ್​​ಫೋನ್ ಬಳಸುವಂತಿಲ್ಲ; ಕಾರಣ ಕೇಳಿದ್ರೆ ಆಶ್ಚರ್ಯ ಪಡುತ್ತೀರ!

ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಕೂಡ ಅತಿಥಿಗಳ ಈ ಸಂಭ್ರಮಾಚರಣೆಯಲ್ಲಿ ಸೇರಿಕೊಂಡರು. ಹಣ ತುಂಬಿದ ಚೀಲಗಳಿಂದ ನೋಟುಗಳನ್ನು ತೆಗೆದು ದಂಪತಿಯತ್ತ ಎಸೆಯಲಾರಂಭಿಸಿದರು. ನೆಲದಲ್ಲಿ ಚದುರಿದ ನೋಟುಗಳನ್ನು ಸಂಗ್ರಹಿಸಿ ವಿಂಗಡಿಸುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದು. ಈ ಮದುವೆಯ ಸಂದರ್ಭದಲ್ಲಿ ಸುಮಾರು 5 ಲಕ್ಷ ರೂ.ಗಳನ್ನು ವೇದಿಕೆಯ ಮೇಲೆ ಸುರಿಯಲಾಗಿದೆ ಎಂದು ಹೇಳಲಾಗಿದೆ.

ಈ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವು ಬಳಕೆದಾರರು ಈ ದೃಶ್ಯವನ್ನು ಪಂಜಾಬಿ ವಿವಾಹದ ವೈಭವ ಎಂದು ಬಣ್ಣಿಸಿದರೆ, ಇನ್ನು ಕೆಲವರು ಇಂತಹ ಅದ್ದೂರಿ ಸಂಪತ್ತಿನ ಪ್ರದರ್ಶನದ ಅಗತ್ಯವನ್ನು ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PAK vs NAM: ಟಿ20 ವಿಶ್ವಕಪ್​ನಲ್ಲಿ ಚೊಚ್ಚಲ ಶತಕ ಬಾರಿಸಿದ ಪಾಕ್ ಆರಂಭಿಕ – Kannada News | Sahibzada Farhan’s Maiden T20 Century: Pakistan Star Smashes 100 vs Namibia in World Cup

ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್ ನಮೀಬಿಯಾ ವಿರುದ್ಧದ ನಿರ್ಣಾಯಕ ಟಿ20 ವಿಶ್ವಕಪ್ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿ ತಂಡವನ್ನು 200 ರನ್​ಗಳ ಗಡಿ ಮುಟ್ಟಿಸಿದರು. ಕೇವಲ 57 ಎಸೆತಗಳಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಿತ ಶತಕ ಬಾರಿಸಿದ ಸಾಹಿಬ್ಜಾದಾ ಫರ್ಹಾನ್ ಅವರಿಗೆ ಇದು ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದ ಮೊದಲ ಶತಕವಾಗಿದೆ. ಈ ಪಂದ್ಯದಲ್ಲಿ ಕೊನೆಯವರೆಗೂ ಅಜೇಯರಾಗಿ ಉಳಿದ ಸಾಹಿಬ್ಜಾದಾ ಫರ್ಹಾನ್ 58 ಎಸೆತಗಳಲ್ಲಿ 100 ರನ್ ಕಲೆಹಾಕಿದರು.

ತಮ್ಮ ಶತಕದ ಇನ್ನಿಂಗ್ಸ್ ಜೊತೆಗೆ ಸಾಹಿಬ್‌ಜಾದಾ ಫರ್ಹಾನ್, ಸ್ಯಾಮ್ ಅಯೂಬ್ ಅವರೊಂದಿಗೆ ಮೊದಲ ವಿಕೆಟ್‌ಗೆ 41 ರನ್‌ಗಳ ಜೊತೆಯಾಟವನ್ನಾಡಿದರು. ನಂತರ ನಾಯಕ ಸಲ್ಮಾನ್ ಆಘಾ ಅವರೊಂದಿಗೂ ಎರಡನೇ ವಿಕೆಟ್‌ಗೆ 42 ಎಸೆತಗಳಲ್ಲಿ 67 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆ ಬಳಿಕ ಶದಾಬ್ ಖಾನ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 40 ಎಸೆತಗಳಲ್ಲಿ ಅಜೇಯ 81 ರನ್‌ಗಳ ಪಾಲುದಾರಿಕೆ ರಚಿಸಿದರು. ಸಾಹಿಬ್‌ಜಾದಾ ಫರ್ಹಾನ್ ಅವರ ಶತಕದ ಜೊತೆಗೆ ಈ ಪಾಲುದಾರಿಕೆಗಳು ಪಾಕಿಸ್ತಾನವು ನಮೀಬಿಯಾ ವಿರುದ್ಧ 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 199 ರನ್ ಗಳಿಸಲು ಸಹಾಯ ಮಾಡಿತು.

ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸಾಹಿಬ್‌ಜಾದಾ ಫರ್ಹಾನ್. ಇಶಾನ್ ಕಿಶನ್ ಮತ್ತು ಶಿಮ್ರಾನ್ ಹೆಟ್ಮೈಯರ್ ಅವರನ್ನು ಹಿಂದಿಕ್ಕಿದರು. ಫರ್ಹಾನ್ ಈಗ 2026 ರ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಫರ್ಹಾನ್, 11 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇಶಾನ್ ಕಿಶನ್ ಮತ್ತು ಶಿಮ್ರಾನ್ ಹೆಟ್ಮೈರ್ ಆಡಿರುವ ಮೂರು ಪಂದ್ಯಗಳಲ್ಲಿ ತಲಾ 10 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

Source link

Video: ಪುಟ್ಟ ಮಗುವಿನಂತೆ ಮನೆಮಾಲೀಕನನ್ನು ಹಿಂಬಾಲಿಸಿದ ಬಾತುಕೋಳಿ – Kannada News | The duck followed the homeowner, video goes viral

ಸ್ವಾರ್ಥ(selfishness) ತುಂಬಿದ ಪ್ರಪಂಚದಲ್ಲಿ ಮನುಷ್ಯ ಮನುಷ್ಯನನ್ನು ನಂಬುವುದೇ ಕಷ್ಟ. ಹೀಗಾಗಿ ಮೂಕ ಜೀವಿಗಳೇ ಎಷ್ಟೋ ವಾಸಿ. ಒಮ್ಮೆ ಪ್ರೀತಿ, ಕಾಳಜಿ ತೋರಿಸಿದ್ರೆ ಆ ವ್ಯಕ್ತಿಯನ್ನು ಜೀವನ ಪರ್ಯಂತ ಮರೆಯಲ್ಲ. ಮಕ್ಕಳಂತೆ ಮನೆ ಮಾಲೀಕನ ಬರುವಿಕೆಗಾಗಿ ಕಾಯುತ್ತದೆ. ಈ ದೃಶ್ಯ ನೋಡಿದ ಮೇಲೆ ನಿಮಗೂ ಹಾಗೆಯೇ ಅನಿಸಬಹುದು. ತನ್ನ ಹಸಿವು ನೀಗಿಸಿದ ಮನೆ ಮಾಲೀಕನ ಮೇಲೆ ಈ ಬಾತುಕೋಳಿಗೆ ಎಷ್ಟು ಪ್ರೀತಿಯಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ. ಇದೀಗ ಪುಟ್ಟ ಮಗುವಿನಂತೆ ಬಾತುಕೋಳಿಯೊಂದು (duck) ಮನೆ ಮಾಲೀಕನನ್ನು ಹಿಂಬಾಲಿಸಿಕೊಂಡು ಹೋಗುವ ವಿಡಿಯೋ ವೈರಲ್ ಆಗಿದೆ. ಈ ಬಾತುಕೋಳಿಯ ಮುಗ್ಧತೆ ಹಾಗೂ ನಿಷ್ಕಲ್ಮಶ ಪ್ರೀತಿಗೆ ನೆಟ್ಟಿಗರು ಕಳೆದೇ ಹೋಗಿದ್ದಾರೆ.

ಕೆ ವೀರೇಶ್ (K Veeresh) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಆತನ ಹಿಂದೆ ಪುಟ್ಟ ಮಗುವಿನಂತೆ ಬಾತುಕೋಳಿಯೊಂದು ಹಿಂಬಾಲಿಸಿಕೊಂಡು ಹೊರಟಿದೆ. ಮನೆ ಮಾಲೀಕನು ಬಾತುಕೋಳಿಗೆ ಗದರಿ ಮನೆಗೆ ಹೋಗುವಂತೆ ಹೇಳುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕರುವನ್ನು ಕಂಡೊಡನೆ ಓಡೋಡಿ ಬಂದು ಮುದ್ದಿಸಿದ ಹಸು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ನಿಷ್ಕಲ್ಮಶವಾದ ಪ್ರೀತಿ ಎಂದಿದ್ದಾರೆ. ಮತ್ತೊಬ್ಬರು, ಇದಕ್ಕೆ ಹೇಳೋದು ಶುದ್ಧ ಪ್ರೀತಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮನುಷ್ಯನಿಗಿಂತ ಈ ಪ್ರಾಣಿಗಳೇ ಮೇಲು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link