Category Archives: Blog

Your blog category

ಪ್ರತಿನಿತ್ಯ ಬ್ರಷ್ ಮಾಡಿದ್ರೂ ಕ್ಯಾವಿಟಿ ಉಂಟಾಗುತ್ತಿದ್ದರೆ ಈ ಸಮಸ್ಯೆ ತಡೆಯಲು ಸಿಂಪಲ್ ಐಡಿಯಾ ಇಲ್ಲಿದೆ – Kannada News | Tooth Decay Explained: Early Cavity Symptoms You Shouldn’t Ignore

ಪ್ರತಿದಿನ ಹಲ್ಲುಗಳನ್ನು ಬ್ರಷ್ (Brushing) ಮಾಡುತ್ತಿದ್ದರೂ ಕ್ಯಾವಿಟಿ ಸಮಸ್ಯೆ (Cavity) ಕಾಣಿಸಿಕೊಳ್ಳುವುದು ಹಲವರಲ್ಲಿ ಸಾಮಾನ್ಯವಾಗಿದೆ. ದಂತ ಆರೋಗ್ಯದ ಬಗ್ಗೆ ಜಾಗೃತಿ ಇದ್ದರೂ ಈ ಸಮಸ್ಯೆ ಉಂಟಾಗುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ತಜ್ಞರು ಸ್ಪಷ್ಟನೆ ನೀಡಿದ್ದಾರೆ. ದಂತ ವೈದ್ಯರ ಪ್ರಕಾರ, ಕ್ಯಾವಿಟಿ ಎಂದರೆ ದಂತದ ಮೇಲ್ಭಾಗದಲ್ಲಿ ಹಾನಿ ಉಂಟಾಗುವುದು. ಇದು ಬ್ಯಾಕ್ಟೀರಿಯಾ ಬೆಳವಣಿಗೆಯಿಂದ ಉಂಟಾಗಿ, ನಿಧಾನವಾಗಿ ದಂತದಲ್ಲಿ ಕುಳಿ ಉಂಟುಮಾಡುತ್ತದೆ. ಪ್ರತಿದಿನ ಬ್ರಷ್ ಮಾಡುವುದು ಮಾತ್ರ ಸಾಕಾಗುವುದಿಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ಮಾಡುವುದು ಕೂಡ ಅತ್ಯಗತ್ಯವಾಗುತ್ತದೆ. ಹಾಗಾದರೆ ಯಾವ ರೀತಿ ಹಲ್ಲುಜ್ಜಬೇಕು, ಕ್ಯಾವಿಟಿಯ ಆರಂಭಿಕ ಲಕ್ಷಣಗಳು ಹೇಗಿರುತ್ತವೆ, ಇದರಿಂದ ಮುಕ್ತಿ ಪಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ನಮ್ಮಲ್ಲಿ ಹಲವರು ಹಲ್ಲುಜ್ಜುವುದನ್ನು ಒಂದು ಕೆಲಸದ ರೀತಿ ಭಾವಿಸುತ್ತಾರೆ. ಹಾಗಾಗಿ ಆದಷ್ಟು ಬೇಗ ಅದನ್ನು ಮುಗಿಸಲು ಕಾಯುತ್ತಿರುತ್ತಾರೆ. ಆದರೆ ದಂತ ಅಥವಾ ಹಲ್ಲುಗಳ ಮೇಲೆ ಸರಿಯಾದ ಕೋನದಲ್ಲಿ ಬ್ರಷ್ ಮಾಡದೆ, ಬೇಗ ಬೇಗ ಮಾಡಿ ಮುಗಿಸುವುದರಿಂದ ದಂತಗಳ ನಡುವೆ ಇರುವ ಅಶುದ್ಧಿ ಸಂಪೂರ್ಣವಾಗಿ ಹೋಗುವುದಿಲ್ಲ. ತಜ್ಞರ ಪ್ರಕಾರ, ದಿನಕ್ಕೆ ಕನಿಷ್ಠ ಎರಡು ಬಾರಿ, ಎರಡು ನಿಮಿಷಗಳ ಕಾಲ ಸರಿಯಾದ ರೀತಿಯಲ್ಲಿ ಬ್ರಷ್ ಮಾಡಬೇಕು. ಅದರಲ್ಲಿಯೂ ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಕ್ಯಾವಿಟಿಗೆ ಪ್ರಮುಖ ಕಾರಣವಾಗಿದೆ. ಸಿಹಿ ತಿಂದ ನಂತರ ಬಾಯಿ ತೊಳೆಯದೇ ಇದ್ದರೆ, ಆ ಆಹಾರದ ಕಣಗಳು ದಂತಗಳ ಮೇಲೆ ಉಳಿದು ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತವೆ. ಇದರಿಂದ ಆಮ್ಲ ಉತ್ಪತ್ತಿಯಾಗಿ ದಂತ ಹಾನಿಯಾಗುತ್ತದೆ.

ಇದನ್ನೂ ಓದಿ: ಹಲ್ಲುಜ್ಜಿದ ತಕ್ಷಣ ಯಾಕೆ ನೀರು ಕುಡಿಯಬಾರದು? ಈ ಗಂಭೀರ ಕಾರಣ ತಿಳಿದ್ರೆ ನೀವೆಂದು ಈ ತಪ್ಪು ಮಾಡಲ್ಲ

ಕ್ಯಾವಿಟಿಯ ಆರಂಭಿಕ ಲಕ್ಷಣಗಳು:

ಕ್ಯಾವಿಟಿ ಆರಂಭದಲ್ಲಿ ಸಣ್ಣ ಲಕ್ಷಣಗಳಿಂದಲೇ ಕಾಣಿಸಿಕೊಳ್ಳುತ್ತದೆ. ದಂತದಲ್ಲಿ ತಂಪು ಅಥವಾ ಬಿಸಿ ತಟ್ಟುವುದು, ಸಣ್ಣ ನೋವು, ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ನೀರು ಕುಡಿಯುವಾಗ ಅಥವಾ ಆಹಾರ ತಿನ್ನುವಾಗ ನೋವು ಉಂಟಾಗುವುದು ಪ್ರಮುಖ ಲಕ್ಷಣಗಳಾಗಿವೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆ ಗಂಭೀರವಾಗಬಹುದು.

ಕ್ಯಾವಿಟಿ ತಡೆಯಲು ಸಲಹೆಗಳು:

ಸಾಮಾನ್ಯವಾಗಿ ಕ್ಯಾವಿಟಿ ತಡೆಗಟ್ಟಲು ದಿನಕ್ಕೆ ಎರಡು ಬಾರಿ ಸರಿಯಾಗಿ ಬ್ರಷ್ ಮಾಡುವುದು, ಫ್ಲಾಸ್ ಬಳಕೆ, ಸಿಹಿ ಹಾಗೂ ಜಂಕ್ ಫುಡ್ ಕಡಿಮೆ ಮಾಡುವುದು ಮುಖ್ಯ. ಯಾವುದೇ ತೊಂದರೆ ಕಂಡುಬಂದರೆ ತಕ್ಷಣ ದಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಒಟ್ಟಾರೆ, ದಂತ ಆರೈಕೆಯಲ್ಲಿ ಸರಿಯಾದ ಪದ್ಧತಿ ಮತ್ತು ಆಹಾರ ಕ್ರಮ ಪಾಲಿಸಿದರೆ ಕ್ಯಾವಿಟಿ ಸಮಸ್ಯೆಯನ್ನು ಸುಲಭವಾಗಿ ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇ 10ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಏನು ವಿಶೇಷ? – Kannada News | PM Narendra Modi to Visit Bengaluru on May 10, Says R Ashok

ಬೆಂಗಳೂರು, ಮೇ 10: ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಅಧಿಕಾರ ಹಾಗೂ ಕೇರಳ ರಾಜ್ಯದ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಹಿನ್ನೆಲೆ HAL ಏರ್​ಪೋರ್ಟ್ ಪ್ರವೇಶದ್ವಾರ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೇ 10ರಂದು ಬೆಳಿಗ್ಗೆ 9 ಗಂಟೆಗೆ ಮೋದಿ ಅವರು HAL ಏರ್‌ಪೋರ್ಟ್‌ಗೆ ಆಗಮಿಸಲಿದ್ದು, ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಸುಮಾರು 10ರಿಂದ 15 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಇದೊಂದು ಸಂಪೂರ್ಣ ಬಿಜೆಪಿ ಕಾರ್ಯಕ್ರಮವಾಗಿದ್ದು, ನಂತರ ಅವರು ರವಿಶಂಕರ್ ಗುರೂಜಿ ಆಶ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆರ್​​. ಅಶೋಕ್ ಮಾಹಿತಿ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ‘ನಿರಾಶೆಯಾಗಿದೆ’.. ಕೈತಪ್ಪಿದ ಫೈನಲ್ ಆತಿಥ್ಯ; ಹೇಳಿಕೆ ಬಿಡುಗಡೆ ಮಾಡಿದ ಕೆಎಸ್​ಸಿಎ – Kannada News | BCCI Shifts IPL 2026 Playoffs/Final from Bengaluru; KSCA Expresses Disappointment

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಐಪಿಎಲ್ 2026 (IPL 2026) ರ ಪ್ಲೇಆಫ್‌ ಹಾಗೂ ಫೈನಲ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಬಿಸಿಸಿಐ (BCCI) ಕೂಡ ಐಪಿಎಲ್ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಐಪಿಎಲ್ ಫೈನಲ್ ನಡೆಸಲು ನಿರ್ಧರಿಸಿತ್ತು. ಇತ್ತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಐಪಿಎಲ್ ಫೈನಲ್​ಗೆ ಸಕಲ ತಯಾರಿ ಮಾಡಿಕೊಂಡಿತ್ತು. ಆದರೆ ಲೀಗ್ ಪಂದ್ಯಗಳು ಮುಗಿಯುವುದಕ್ಕೂ ಮುನ್ನ ಪ್ಲೇಆಫ್‌ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿರುವ ಬಿಸಿಸಿಐ, ಪ್ಲೇಆಫ್‌ ಹಾಗೂ ಫೈನಲ್ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಿದೆ. ಈ ಬಗ್ಗೆ ಬಿಸಿಸಿಐ ಕೂಡ ಹೇಳಿಕೆ ಬಿಡುಗಡೆ ಮಾಡಿದೆ. ಇದೀಗ ಫೈನಲ್ ಕೈತಪ್ಪಿದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೆಎಸ್​​ಸಿಎ ಈ ಬಗ್ಗೆ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ನಿರಾಶೆಯಾಗಿದೆ; ಕೆಎಸ್​ಸಿಎ

ಬೆಂಗಳೂರುದಲ್ಲಿ ಐಪಿಎಲ್ ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಸ್ಪಷ್ಟೀಕರಣ ನೀಡುತ್ತಿದ್ದು, ಮೊದಲಿಗೆ, ಐಪಿಎಲ್ ಪ್ಲೇಆಫ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಿರುವುದಕ್ಕೆ ಕೆಎಸ್​ಸಿಎ ನಿರಾಶೆ ವ್ಯಕ್ತಪಡಿಸುತ್ತದೆ. ಕೆಎಸ್​ಸಿಎ ಅಧ್ಯಕ್ಷರು ಹಾಗೂ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಈ ವಿಷಯವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೊತೆ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದು, ಬೆಂಗಳೂರಿನಲ್ಲಿ ಐಪಿಎಲ್ ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲು KSCAಯ ಸಿದ್ಧತೆ, ಆಸಕ್ತಿ ಹಾಗೂ ಇಚ್ಛೆಯನ್ನು ಅಧಿಕೃತವಾಗಿ ತಿಳಿಸಿದ್ದರು.

ಪ್ರಸ್ತುತ ಸೀಸನ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯಗಳು ಸುಗಮ ನಿರ್ವಹಣೆ, ಜನಸ್ತೋಮ ನಿಯಂತ್ರಣ, ಕಾರ್ಯಾಚರಣಾ ದಕ್ಷತೆ ಹಾಗೂ ಪ್ರೇಕ್ಷಕರ ಅನುಭವದ ದೃಷ್ಟಿಯಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಇಂತಹ ಮಹತ್ವದ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸುವ ಸಾಮರ್ಥ್ಯವನ್ನು KSCA ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಸಂಬಂಧ KSCA, ಬೆಂಗಳೂರಿನಲ್ಲಿ ಪ್ರಸ್ತುತ ಐಪಿಎಲ್ ಸೀಸನ್ ಅನ್ನು ಯಾವ ರೀತಿಯ ಕಾರ್ಯಾಚರಣಾ ವ್ಯವಸ್ಥೆಯಡಿ ನಡೆಸಲಾಯಿತು ಎಂಬುದನ್ನು ವಿವರಿಸುವ ಸಮಗ್ರ ಪತ್ರವನ್ನು BCCIಗೆ ಕಳುಹಿಸಿತ್ತು. ಈ ವ್ಯವಸ್ಥೆಗಳು ಮತ್ತು ಪ್ರೋಟೋಕಾಲ್‌ಗಳು 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೇ ಅನುಸರಿಸಲಾಗುತ್ತಿದ್ದು, ಈ ಸೀಸನ್‌ನಲ್ಲಿಯೂ ಹಾಗೂ ಹಿಂದಿನ ಪ್ಲೇಆಫ್ ಪಂದ್ಯಗಳ ಆಯೋಜನೆಯಲ್ಲಿಯೂ ಸಮಾನವಾಗಿ ಜಾರಿಗೊಳಿಸಲಾಗಿತ್ತು.

ಬಿಸಿಸಿಐ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ

KSCA ಕಳುಹಿಸಿದ್ದ ಪತ್ರ ಸಂಪೂರ್ಣವಾಗಿ ವಾಸ್ತವಾಧಾರಿತ, ಕಾರ್ಯಾಚರಣಾತ್ಮಕ ಹಾಗೂ ಸ್ಪಷ್ಟೀಕರಣಾತ್ಮಕ ಸ್ವರೂಪದ್ದಾಗಿದ್ದು, ಇಂತಹ ಮಹತ್ವದ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದ ಲಾಜಿಸ್ಟಿಕ್ಸ್ ಮತ್ತು ಹಿತಾಸಕ್ತಿದಾರರ ಅಗತ್ಯಗಳ ಕುರಿತು ಪಾರದರ್ಶಕತೆ ಒದಗಿಸುವ ಉದ್ದೇಶವನ್ನಷ್ಟೇ ಹೊಂದಿತ್ತು. ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲು KSCA ಸಂಪೂರ್ಣ ಸಿದ್ಧತೆಯಲ್ಲಿದ್ದರೂ, BCCI ಈ ಪಂದ್ಯಗಳನ್ನು ಬೇರೆಡೆ ನಡೆಸಲು ನಿರ್ಧಾರ ಕೈಗೊಂಡಿರುವುದನ್ನು ನಾವು ಅರಿತುಕೊಂಡಿದ್ದೇವೆ. ಈ ನಿರ್ಧಾರದ ನಿರ್ದಿಷ್ಟ ಕಾರಣಗಳನ್ನು KSCAಗೆ ಅಧಿಕೃತವಾಗಿ ತಿಳಿಸದಿದ್ದರೂ, BCCIಯ ನಿರ್ಧಾರಾಧಿಕಾರ ಮತ್ತು ಪ್ರಾಧಿಕಾರವನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ.

IPL 2026: ಆರ್​ಸಿಬಿ ಫ್ಯಾನ್ಸ್​ಗೆ ಬಿಗ್​ ಶಾಕ್; ಐಪಿಎಲ್ ಫೈನಲ್ ಬೆಂಗಳೂರಿನಿಂದ ಅಹಮದಾಬಾದಿಗೆ ಶಿಫ್ಟ್

KSCA ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಹತ್ವದ ಪಂದ್ಯಗಳನ್ನು ಆಯೋಜಿಸಲು ಸದಾ ಸಿದ್ಧವಾಗಿದ್ದು, ಭಾರತದಲ್ಲಿ ಕ್ರಿಕೆಟ್ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆಗೆ BCCI, ಫ್ರಾಂಚೈಸಿಗಳು, ಸರ್ಕಾರದ ಅಧಿಕಾರಿಗಳು ಹಾಗೂ ಎಲ್ಲಾ ಹಿತಾಸಕ್ತಿದಾರರಿಗೆ ತನ್ನ ಸಂಪೂರ್ಣ ಸಹಕಾರವನ್ನು ಮುಂದುವರಿಸಲಿದೆ. ಮಾಧ್ಯಮ ವಲಯ ಹಾಗೂ ಕ್ರಿಕೆಟ್ ಅಭಿಮಾನಿಗಳ ನಿರಂತರ ಬೆಂಬಲ, ಪ್ರೋತ್ಸಾಹ ಮತ್ತು ಸಹಕಾರಕ್ಕೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗುರು’ವಿಗೆ ವಿದಾಯ ಹೇಳಿದ ವಿಜಯ್, ಗೆಳೆಯನ ನೋವಿಗೆ ಜೊತೆ – Kannada News | Thalapathy Vijay pay his last respects to producer RB Choudary Express condolences to family

ದಳಪತಿ ವಿಜಯ್ (Thalapathy Vijay) ಇತಿಹಾಸ ಬರೆದಿದ್ದಾರೆ. ತಮ್ಮ ಅಭೂತಪೂರ್ವ ಸ್ಟಾರ್​​ಡಮ್, ಅಭಿಮಾನಿ ಬಳಗವನ್ನು ಬಳಸಿಕೊಂಡು ಇದೀಗ ತಮಿಳುನಾಡು ವಿಧಾನಸಭೆ ಚುನಾವಣೆ ಗೆದ್ದಿದ್ದು, ಸಿಎಂ ಆಗಲಿದ್ದಾರೆ. ಆದರೆ ಇಂಥಹಾ ಖುಷಿಯ ಸಮಯದಲ್ಲಿಯೇ ವಿಜಯ್ ಅವರ ಚಿತ್ರರಂಗದ ಗುರುಗಳಲ್ಲಿ ಒಬ್ಬರಾದ ಆರ್​​ಬಿ ಚೌಧರಿ ಅವರು ನಿಧನ ಹೊಂದಿದ್ದಾರೆ. ಖ್ಯಾತ ನಿರ್ಮಾಪಕ ಆರ್​​ಬಿ ಚೌಧರಿ ಅವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದು, ವಿಜಯ್, ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಅವರ ಅಂತಿಮ ದರ್ಶನ ಪಡೆದಿರುವುದಲ್ಲದೆ, ಗೆಳೆಯನಿಗೆ ಸಾಂತ್ವನ ಸಹ ಹೇಳಿದ್ದಾರೆ.

ಆರ್​​ಬಿ ಚೌಧರಿ ಅವರು ವಿಜಯ್​​ಗೆ ಹಲವು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅವರ ಸ್ಟಾರ್​​ಡಮ್​​ಗೆ ಕಾರಣವಾದ ನಿರ್ಮಾಪಕ. ಅದು ಮಾತ್ರವೇ ಅಲ್ಲದೆ, ವಿಜಯ್ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾದ ನಟ ಜೀವ ಅವರ ತಂದೆಯೂ ಹೌದು. ಆರ್​​ಬಿ ಚೌಧರಿ ಅವರು ರಾಜಸ್ಥಾನದ ಹಳ್ಳಿಯೊಂದರ ಬಳಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅವರ ಅಂತಿಮ ದರ್ಶನವನ್ನು ವಿಜಯ್ ಅವರು ಇಂದು (ಮೇ 6) ಸಂಜೆ ಪಡೆದಿದ್ದಾರೆ.

ವಿಜಯ್ ಅವರು ಆರ್​​ಬಿ ಚೌಧರಿ ಅವರ ಅಂತಿಮ ದರ್ಶನ ಪಡೆದು, ಗೆಳೆಯ ಜೀವ ಅವರನ್ನು ಆಲಂಗಿಸಿಕೊಂಡು ಅವರಿಗೆ ಸಾಂತ್ವನ ಹೇಳಿದ್ದಾರೆ. ಜೀವ ಮತ್ತು ವಿಜಯ್ ಒಟ್ಟಿಗೆ ‘ನನ್ಬ’ ಸಿನಿಮಾನಲ್ಲಿ ನಟಿಸಿದ್ದರು. ‘ನನ್ಬ’ ಎಂದರೆ ತಮಿಳಿನಲ್ಲಿ ಗೆಳೆಯ ಎಂದರ್ಥ. ಇಬ್ಬರೂ ಬಹಳ ಆತ್ಮೀಯ ಗೆಳೆಯರಾಗಿದ್ದರು. ಅದಕ್ಕಿಂತಲೂ ಮುಖ್ಯವಾಗಿ, ವಿಜಯ್ ಅವರು ಸ್ಟಾರ್ ಆಗಿ ಚಿತ್ರರಂಗದಲ್ಲಿ ಬೆಳೆಯಲು ಆರ್​​ಬಿ ಚೌಧರಿ ಅವರು ಬಹು ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರು.

ಇದನ್ನೂ ಓದಿ:ದಳಪತಿ ವಿಜಯ್ ಗೆದ್ದಿದ್ದಕ್ಕೆ ದುನಿಯಾ ವಿಜಿ ಹೇಳಿದ್ದೇನು?

ತೀರ ಸಾಧಾರಣ ಯಶಸ್ಸನ್ನಷ್ಟೆ ಕಂಡು, ದೊಡ್ಡ ಹಿಟ್ ಗಾಗಿ ವಿಜಯ್ ಕಾತರರಾಗಿದ್ದಾಗ 1996 ರಲ್ಲಿ ಚೌಧರಿ ಅವರು ವಿಜಯ್ ಅವರಿಗಾಗಿ ‘ಪೂವೇ ಉನಕ್ಕಾಗ’ ಸಿನಿಮಾ ನಿರ್ಮಿಸಿದರು. ಅದು ಬ್ಲಾಕ್ ಬಸ್ಟರ್ ಆಯ್ತು. ಅದಾದ ಬಳಿಕ 1999ರಲ್ಲಿ ಮತ್ತೊಂದು ಸಿನಿಮಾ ನಿರ್ಮಿಸಿದರು. ಅದೂ ಸಹ ಬ್ಲಾಕ್ ಬಸ್ಟರ್. ಫ್ಯಾಮಿಲಿ ಆಡಿಯೆನ್ಸ್ ನಟ ಎನಿಸಿಕೊಂಡಿದ್ದ ವಿಜಯ್ ಅವರಿಗೆ ಮಾಸ್ ಹೀರೋ ಇಮೇಜು ಕೊಟ್ಟ ‘ತಿರುಪಾಚ್ಚಿ’ ಸಿನಿಮಾವನ್ನು ಸಹ ಚೌಧರಿ ಅವರೇ ನಿರ್ಮಿಸಿದ್ದು. ಬಳಿಕ 2014 ರಲ್ಲಿ ಬಂದ ಮತ್ತೊಂದು ಬ್ಲಾಕ್ ಬಸ್ಟರ್ ‘ಜಿಲ್ಲಾ’ ಸಿನಿಮಾವನ್ನೂ ಸಹ ಸೂಪರ್ ಗುಡ್ ಫಿಲಮ್ಸ್​ನ ಚೌಧರಿ ಅವರೇ ನಿರ್ಮಿಸಿದ್ದು.

ಚೌಧರಿ ಅವರು ಈ ವರೆಗೆ 99 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. 100ನೇ ಸಿನಿಮಾವನ್ನು ವಿಜಯ್ ಜೊತೆಗೇ ನಿರ್ಮಾಣ ಮಾಡಬೇಕು ಎಂಬುದು ಅವರ ಆಸೆ ಆಗಿತ್ತು. ಆದರೆ ವಿಜಯ್ ಹಠಾತ್ತನೆ ಸಿನಿಮಾದಿಂದ ನಿವೃತ್ತಿ ಘೋಷಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಆದರೆ ವಿಜಯ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮುಂಚೆಯೇ ಚೌಧರಿ ನಿಧನ ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೀವು ಮಾಡುವ ಈ ತಪ್ಪುಗಳು ಕುಕ್ಕರ್‌ ಸ್ಫೋಟಗೊಳ್ಳಲು ಕಾರಣವಾಗಬಹುದು – Kannada News | These mistakes you make can cause your pressure cooker to explode‌

ಈಗಂತೂ ಪ್ರತಿ ಮನೆಯಲ್ಲೂ ಕುಕ್ಕರ್‌ (pressure cooker) ಬಳಕೆ ಮಾಡಲಾಗುತ್ತದೆ. ಅನ್ನ ಬೇಯಿಸುವುದರಿಂದ ಹಿಡಿದು ಸಾರು, ಸಾಂಬಾರ್‌ ಮಾಡುವವರೆಗೆ ಪ್ರತಿಯೊಂದು ಅಡುಗೆಯನ್ನೂ ಹೆಚ್ಚಿನವರು ಕುಕ್ಕರ್‌ನಲ್ಲಿಯೇ ಮಾಡುತ್ತಾರೆ. ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಸಮಯ ಉಳಿತಾಯವಾಗುವುದಲ್ಲದೆ ಗ್ಯಾಸ್‌ ಕೂಡ ಉಳಿತಾಯವಾಗುತ್ತದೆ. ವಿಷಯ ಏನೆಪ್ಪಾ ಅಂದ್ರೆ ಅನೇಕರಿಗೆ  ಕುಕ್ಕರ್‌ ಹೇಗೆ ಬಳಸಬೇಕು ಎಂಬ ಅರಿವಿಲ್ಲ. ಈ ಸಣ್ಣ ನಿರ್ಲಕ್ಷ್ಯ, ಅಜಾಗರೂಕತೆ ಕುಕ್ಕರ್‌ ಸ್ಫೋಟಗೊಳ್ಳಲು ಕಾರಣವಾಗಬಹುದು. ಆದ್ದರಿಂದ ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಈ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅತ್ಯಗತ್ಯ.

ನಿಮ್ಮ ಈ ತಪ್ಪುಗಳಿಂದ ಕುಕ್ಕರ್‌ ಸ್ಫೋಟಗೊಳ್ಳಬಹುದು:

ಗ್ಯಾಸ್ಕೆಟ್ ರಬ್ಬರ್‌ನ ನಿರ್ಲಕ್ಯ: ಪ್ರೆಶರ್ ಕುಕ್ಕರ್‌ನಲ್ಲಿ ರಬ್ಬರ್ ಗ್ಯಾಸ್ಕೆಟ್ ಮತ್ತು ಸೀಟಿ ಅತ್ಯಗತ್ಯ. ಒಟ್ಟಾಗಿ, ಅವೆರಡು ಆಂತರಿಕ ಒತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಹೆಚ್ಚುವರಿ ಉಗಿಯನ್ನು ಬಿಡುಗಡೆ ಮಾಡುತ್ತವೆ. ಆದರೆ ಅನೇಕ ಮಂದಿ ಗ್ಯಾಸ್ಕೆಟ್‌ ರಬ್ಬರ್‌ ಸಡಿಲವಾದರೂ, ಅವು ಸವೆದು ಹೋದರು ಅದನ್ನು ಚೇಂಜ್‌ ಮಾಡುವುದುದಿಲ್ಲ. ಇದು ಪ್ರೆಶರ್ ಕುಕ್ಕರ್‌ನೊಳಗಿನ ಒತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತದೆ, ಇದು ಕುಕ್ಕರ್‌ ಬ್ಲಾಸ್ಟ್‌ ಆಗಲು ಕಾರಣವಾಗುತ್ತದೆ. ಆದ್ದರಿಂದ ಸೀಟಿ ಮತ್ತು ಗ್ಯಾಸ್ಕೆಟ್ ಅನ್ನು ನಿಯತಕಾಲಿಕವಾಗಿ ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ತಕ್ಷಣ ಅವುಗಳನ್ನು ಬದಲಾಯಿಸಿ.

ಕುಕ್ಕರ್ ಅನ್ನು ಅತಿಯಾಗಿ ತುಂಬಿಸುವುದು: ಅನೇಕರು ಕುಕ್ಕರ್‌ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಆಹಾರ ತುಂಬಿಸುತ್ತಾರೆ. ಹೀಗೆ ಕುಕ್ಕರ್‌ ಸಂಪೂರ್ಣವಾಗಿ ತುಂಬುವವರೆಗೆ ಅದರಲ್ಲಿ ಅನ್ನ, ತರಕಾರಿ ಬೇಯಿಸಬಾರದು. ಇದರಿಂದ ಕುಕ್ಕರ್‌ ಒಳಗೆ ಉತ್ಪತ್ತಿಯಾಗುವ ಉಗಿ ಹೊರಗೆ ಹೋಗಲು ಯಾವುದೇ ಮಾರ್ಗವಿರುವುದಿಲ್ಲ. ಇದು ಒತ್ತಡದ ಮಟ್ಟ ವೇಗವಾಗಿ ಏರಿಕೆಯಾಗಲು ಕಾರಣವಾಗುತ್ತದೆ. ಇದರಿಂದ ಕುಕ್ಕರ್‌ ಸ್ಫೋಟಗೊಳ್ಳಬಹುದು. ಆದ್ದರಿಂದ ಯಾವಾಗಲೂ ಕಕ್ಕರ್‌ನ ಸಾಮರ್ಥ್ಯದ  2/3 ರಷ್ಟು ಮಾತ್ರ ಆಹಾರವನ್ನು ತುಂಬಿಸಬೇಕು.

ಸೀಟಿಯನ್ನು ಸ್ವಚ್ಛಗೊಳಿಸದಿರುವುದು: ಸೀಟಿ ಒತ್ತಡ ಬಿಡುಗಡೆಗೆ  ಕುಕ್ಕರ್‌ನ ಪ್ರಮುಖ ಭಾಗವಾಗಿದೆ. ಅದರಲ್ಲಿ ಕೊಳೆ ಅಥವಾ ಆಹಾರ ಕಣಗಳು ಸಿಲುಕಿಕೊಂಡರೆ, ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಉಗಿ ತಪ್ಪಿಸಿಕೊಳ್ಳುವುದನ್ನು ತಡೆಯುತ್ತದೆ, ಇದರಿಂದ ಕುಕ್ಕರ್ ಒಳಗೆ ಒತ್ತಡ ಹೆಚ್ಚಾಗುತ್ತದೆ ಮತ್ತು ಕುಕ್ಕರ್ ಸ್ಫೋಟಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಪ್ರತಿ ಬಳಕೆಯ ನಂತರ ಸೀಟಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ವೆಂಟ್ ಪೈಪ್‌ನಲ್ಲಿ ಯಾವುದೇ ಅಡಚಣೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: ಪಾತ್ರೆ ತೊಳೆಯುವ ಸ್ಪಾಂಜ್‌ಗಳ ಸ್ವಚ್ಛತೆಯ ಬಗ್ಗೆ ಇರಲಿ ತುಸು ಹೆಚ್ಚು ಕಾಳಜಿ

ಕಡಿಮೆ ನೀರು ಸೇರಿಸುವುದು: ಕೆಲವರು ಕುಕ್ಕರ್‌ನಲ್ಲಿ ಆಹಾರ ಬೇಯಿಸುವಾಗ ಅಗತ್ಯಕ್ಕಿಂತಲೂ ಕಡಿಮೆ ಪ್ರಮಾಣದ ನೀರನ್ನು ಸೇರಿಸುತ್ತಾರೆ. ಇದು ಆಹಾರವನ್ನು ಸುಡುವುದಲ್ಲದೆ, ಒಳಗೆ ಅತಿಯಾದ ಶಾಖವನ್ನು ಉತ್ಪಾದಿಸುತ್ತದೆ. ಇದು ಕುಕ್ಕರ್ ಅತಿಯಾಗಿ ಬಿಸಿಯಾಗಲು ಮತ್ತು ಸ್ಫೋಟಗೊಳ್ಳಲು ಕಾರಣವಾಗಬಹುದು. ಆದ್ದರಿಂದ ಆಹಾರ ಬೇಯಿಸುವಾಗ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇರಿಸಿ.

ಹಳೆಯ ಪ್ರೆಶರ್ ಕುಕ್ಕರ್‌ ಬಳಕೆ: ಕೆಲವರು ಹಲವು ವರ್ಷಗಳ ಹಳೆಯ ಕುಕ್ಕರ್‌ಗಳನ್ನೇ ಬಳಕೆ ಮಾಡುತ್ತಾರೆ. ಕಾಲ ಕಳೆದಂತೆ ಕುಕ್ಕರ್‌ನ ಮುಚ್ಚಳ ಮತ್ತು ಲಾಕ್ ವ್ಯವಸ್ಥೆಯು ದುರ್ಬಲಗೊಳ್ಳುವ ಕಾರಣ ಹಳೆಯ ಪ್ರೆಶರ್‌ ಕುಕ್ಕರ್‌ನಲ್ಲಿ ಅಡುಗೆ ಮಾಡುವುದು ತುಂಬಾನೇ ಡೇಂಜರ್.‌ ಏಕೆಂದರೆ ಇದು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಕುಕ್ಕರ್‌ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ, ಮತ್ತು ಯಾವಾಗಲೂ ಐಎಸ್‌ಐ ಗುರುತು ಹೊಂದಿರುವ ಉತ್ತಮ ಗುಣಮಟ್ಟದ ಕುಕ್ಕರ್‌ಗಳನ್ನೇ ಬಳಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾ ಇಂಟಿ ಬಂಗಾರಂ’ ಬಿಡುಗಡೆ ಮುಂದೂಡಿಕೆ: ಹೊಸ ದಿನಾಂಕದತ್ತ ಚಿತ್ರತಂಡದ ಚಿತ್ತ – Kannada News | Samantha Ruth Prabhu starrer Maa Inti Bangaram movie release date postpone

ಇತ್ತೀಚೆಗೆ ಸಿನಿಮಾಗಳ ಬಿಡುಗಡೆ ದಿನಗಳು ಪದೇ ಪದೇ ಬದಲಾವಣೆ ಆಗುತ್ತಲೇ ಇವೆ. ‘ಟಾಕ್ಸಿಕ್’ (Toxic) ಸಿನಿಮಾದ ದಿನಾಂಕ ಬದಲಾವಣೆ ಆದ ಬಳಿಕ ಅದರ ಪರಿಣಾಮದಿಂದಲೋ ಏನೋ ಎಷ್ಟೋಂದು ಸಿನಿಮಾಗಳ ಬಿಡುಗಡೆ ದಿನಾಂಕ ಬದಲಾವಣೆ ಆಗಿವೆ, ಈಗಲೂ ಆಗುತ್ತಲೇ ಇವೆ. ‘ಉಸ್ತಾದ್ ಭಗತ್ ಸಿಂಗ್’, ‘ಡಕಾಯತ್’, ‘ಪೆದ್ದಿ’ ಸಿನಿಮಾಗಳ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಯ್ತು. ಇದೀಗ ಸಮಂತಾ ಋತ್ ಪ್ರಭು ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಮಾ ಇಂಟಿ ಬಂಗಾರಂ’ (Maa Inti Bangaram) ಬಿಡುಗಡೆಯ ದಿನಾಂಕದಲ್ಲಿ ಬದಲಾವಣೆಯಾಗಿದೆ. ಈ ಹಿಂದೆ ನಿಗದಿಯಾಗಿದ್ದ ದಿನಾಂಕದಂದು ಚಿತ್ರ ತೆರೆಗೆ ಬರುತ್ತಿಲ್ಲ, ಬದಲಿಗೆ ಬೇರೆ ದಿನಾಂಕವನ್ನು ರಿಲೀಸ್​​ಗೆ ನಿಗದಿ ಮಾಡಲಾಗುತ್ತಿದೆ.

ಈ ಹಿಂದೆ ‘ಮಾ ಇಂಟಿ ಬಂಗಾರಂ’ ಸಿನಿಮಾವು ಮೇ 15 ರಂದು ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಚಿತ್ರತಂಡವೂ ಸಹ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿತ್ತು. ಆದರೆ ಸಿನಿಮಾದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಇನ್ನೂ ಬಾಕಿ ಇರುವ ಕಾರಣ ಹಾಗೂ ಬಾಕ್ಸ್ ಆಫೀಸ್​​ನಲ್ಲಿ ಕೆಲವು ದೊಡ್ಡ ಸಿನಿಮಾಗಳು ಆ ಸಮಯದಲ್ಲಿ ಬಿಡುಗಡೆ ಆಗುತ್ತಿರುವ ಕಾರಣ, ಬಾಕ್ಸ್ ಆಫೀಸ್ ಪೈಪೋಟಿಯನ್ನು ತಪ್ಪಿಸಲೆಂದು ಚಿತ್ರತಂಡವು ಸಿನಿಮಾದ ಬಿಡುಗಡೆ ದಿನಾಂಕ ಬದಲಾವಣೆಗೆ ಮುಂದಾಗಿದೆ.

ಆರಂಭದಲ್ಲಿ ಈ ಚಿತ್ರವನ್ನು ಏಪ್ರಿಲ್ ಅಥವಾ ಮೇ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಬಳಿಕ ಮೇ 15 ರಂದು ಚಿತ್ರವನ್ನು ಅದ್ಧೂರಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಬೇಸಿಗೆಯ ರಜಾದಿನಗಳ ಲಾಭವನ್ನು ಪಡೆಯಲು ಚಿತ್ರತಂಡ ಈ ದಿನಾಂಕವನ್ನು ಆಯ್ದುಕೊಂಡಿತ್ತು, ಆದರೆ ಈಗ ಮತ್ತೆ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಈಗಾಗಲೇ ಸಿನಿಮಾದ ಟೀಸರ್, ಹಾಡು ಬಿಡುಗಡೆ ಆಗಿದ್ದು, ಸಖತ್ ಕುತೂಹಲ ಮೂಡಿಸಿವೆ. ಸಮಂತಾ, ಮುದ್ದು ಸೊಸೆಯಾಗಿ ಜೊತೆಗೆ ಆಕ್ಷನ್ ಕ್ವೀನ್ ಆಗಿಯೂ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ಸಮಂತಾ ಜೊತೆಗೆ ಕನ್ನಡದ ನಟ ದಿಗಂತ್ ಸಹ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣವೂ ಸಹ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದಿರುವುದು ವಿಶೇಷ. ಸಿನಿಮಾವನ್ನು ಸಮಂತಾರ ಮೆಚ್ಚಿನ ನಿರ್ದೇಶಕಿ ಬಿವಿ ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ಈ ಇಬ್ಬರಿಗೂ ಇದು ಎರಡನೇ ಸಿನಿಮಾ ಆಗಿದೆ. ಸಿನಿಮಾಕ್ಕೆ ಸಮಂತಾರ ಪತಿ, ನಿರ್ದೇಶಕ ರಾಜ್ ನಿಧಿಮೋರು ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಸಿಂಧೂರ್​​ಗೆ ಒಂದು ವರ್ಷ; ಉಗ್ರರ ವಿರುದ್ಧದ ಕಾರ್ಯಾಚರಣೆ ಪರಿಣಾಮಕಾರಿಯಾಗಿದ್ದು ಹೇಗೆ? – Kannada News | 1 year for Operation Sindoor How India delivered maximum damage with minimal impact

ನವದೆಹಲಿ, ಮೇ 6: ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ನಡೆದು ಒಂದು ವರ್ಷವಾಗಿದೆ. ಮಿಲಿಟರಿ ಕಾರ್ಯಾಚರಣೆಯನ್ನು ಆಧುನಿಕ ಯುದ್ಧದಲ್ಲಿ ನಿರ್ಣಾಯಕ ಕ್ಷಣವೆಂದು ಪರಿಗಣಿಸಲಾಗುತ್ತದೆ. ಕಾಶ್ಮೀರದ ಕಣಿವೆ ಪಹಲ್ಗಾಮ್​​ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಪ್ರತಿಕ್ರಿಯೆಯಾಗಿ ಕಳೆದ ವರ್ಷ ಇದೇ ಸಮಯದಲ್ಲಿ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿತ್ತು. ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು.

ಜಮ್ಮು-ಕಾಶ್ಮೀರದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಗಡಿಯಾಚೆಗಿನ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾದ ಈ ಕಾರ್ಯಾಚರಣೆಯಲ್ಲಿ ಭಾರತ ನಾಗರಿಕರು ಯಾರೂ ಸಾವನ್ನಪ್ಪದಂತೆ ಎಚ್ಚರ ವಹಿಸಿತ್ತು. ಅಮಾಯಕರಿಗೆ ಯಾವುದೇ ತೊಂದರೆಯಾಗದಂತೆ ಕೇವಲ ಉಗ್ರರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುವುದು ಸುಲಭದ ಸಂಗತಿಯಾಗಿರಲಿಲ್ಲ. ಆದರೂ ಆ ಸವಾಲನ್ನು ಭಾರತದ ವಾಯುಪಡೆ, ಸೇನಾಪಡೆ ಯಶಸ್ವಿಯಾಗಿ ನಿರ್ವಹಿಸಿತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಭಾರತದ ವಾಯುಪಡೆಗೆ ಸೋತು ಪಾಕಿಸ್ತಾನ ಮಂಡಿಯೂರಿತ್ತು; ಯುರೋಪಿಯನ್ ಮಿಲಿಟರಿ ವಿಶ್ಲೇಷಣೆ

ಆ ಘಟನೆ ನಡೆದು ಒಂದು ವರ್ಷವಾಗಿದೆ. ಇಂದು ನಾವು ನೋಡುವ ಹೆಚ್ಚಿನ ಜಾಗತಿಕ ಸಂಘರ್ಷಗಳಲ್ಲಿ ವಿನಾಶವನ್ನು ನಿಯಂತ್ರಿಸಲು ಸಾಧ್ಯವೇ ಆಗುವುದಿಲ್ಲ. ಇದು ಎರಡೂ ಕಡೆಯ ಆರ್ಥಿಕತೆಗಳು ಮತ್ತು ನಾಗರಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಆಪರೇಷನ್ ಸಿಂಧೂರ್ ವಿಭಿನ್ನವಾಗಿತ್ತು. ಇದರಲ್ಲಿ ಅಮಾಯರು ಯಾರೂ ಬಲಿಯಾಗಲಿಲ್ಲ. ಭಾರತ ಸ್ಪಷ್ಟವಾದ ಗುರಿಯನ್ನಿಟ್ಟುಕೊಂಡು ನಡೆಸಿದ್ದ ಈ ದಾಳಿ ಯಾವುದೇ ಬಿಕ್ಕಟ್ಟಿಗೂ ಕಾರಣವಾಗಲಿಲ್ಲ.

ಭಾರತವು ಪಾಕಿಸ್ತಾನದ ಭಯೋತ್ಪಾದನೆ ಮತ್ತು ಮಿಲಿಟರಿ ಮೂಲಸೌಕರ್ಯದ ಮೇಲೆ ತೀವ್ರ ದಾಳಿ ನಡೆಸಿ ಹಾನಿಯನ್ನುಂಟುಮಾಡಿತು. ಆದರೆ, ಯಾವುದೇ ಮನೆಗಳಿಗೂ ಹಾನಿಯಾಗಲಿಲ್ಲ. ಪಾಕಿಸ್ತಾನಿ ಕ್ಷಿಪಣಿಗಳಿಂದ ಭಾರತಕ್ಕೆ ಯಾವುದೇ ಹಾನಿಯಾಗಲು ಬಿಡಲಿಲ್ಲ. ಈ ಮಿಲಿಟರಿ ಕಾರ್ಯಾಚರಣೆಯ ಪರಿಣಾಮವಾಗಿ ಭಾರತದಲ್ಲಿ ಯಾವುದೇ ಆರ್ಥಿಕ ಆಘಾತ ಉಂಟಾಗಿಲ್ಲ.

ಭಾರತೀಯ ವಾಯುಪಡೆಯು ಪಾಕಿಸ್ತಾನದ ಚೀನಾ ಸರಬರಾಜು ಮಾಡಿದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬೈಪಾಸ್ ಮಾಡಿ ಜ್ಯಾಮ್ ಮಾಡಿತು. ರಫೇಲ್ ಜೆಟ್‌ಗಳು, SCALP ಕ್ಷಿಪಣಿಗಳು ಮತ್ತು ಹ್ಯಾಮರ್ ಬಾಂಬ್‌ಗಳನ್ನು ಬಳಸಿಕೊಂಡು ಕೇವಲ 23 ನಿಮಿಷಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಬೀಜಿಂಗ್ ಮಧ್ಯಸ್ಥಿಕೆ; ಲಜ್ಜೆಗೆಟ್ಟು ಚೀನಾದ ಬೆಂಬಲಕ್ಕೆ ನಿಂತ ಪಾಕಿಸ್ತಾನ

ಮೇ 10 ರಂದು ಕೆಲವೇ ಗಂಟೆಗಳಲ್ಲಿ ಭಾರತವು ನೂರ್ ಖಾನ್, ರಫೀಕಿ, ಮುರಿಯ್, ಸುಕ್ಕೂರ್, ಸಿಯಾಲ್‌ಕೋಟ್, ಪಸ್ರೂರ್, ಚುನಿಯನ್, ಸರ್ಗೋಧಾ, ಸ್ಕಾರ್ಡು, ಭೋಲಾರಿ ಮತ್ತು ಜಕೋಬಾಬಾದ್ ವಾಯುನೆಲೆಗಳು ಸೇರಿದಂತೆ 11 ಪ್ರಮುಖ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡಿತು. ಈ ದಾಳಿಗಳು ಪಾಕಿಸ್ತಾನದ ವಾಯು ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಕುಗ್ಗಿಸಿದವು.

ಈ ಕ್ರಮಗಳೊಂದಿಗೆ, ಭಾರತವು ಒಂದೇ ಕಾರ್ಯಾಚರಣೆಯಲ್ಲಿ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರದ 11 ವಾಯುನೆಲೆಗಳನ್ನು ಹೊಡೆದುರುಳಿಸಿದ ಮೊದಲ ದೇಶವಾಯಿತು. ಪಾಕಿಸ್ತಾನದ ವಾಯುಪಡೆಯ ಸ್ವತ್ತುಗಳಲ್ಲಿ ಶೇ. 20ರಷ್ಟನ್ನು ನಾಶಪಡಿಸಿತು. ಭೋಲಾರಿ ವಾಯುನೆಲೆಯಲ್ಲಿ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್ ಸಾವು ಮತ್ತು ಪ್ರಮುಖ ಫೈಟರ್ ಜೆಟ್‌ಗಳ ನಾಶ ಸೇರಿದಂತೆ ಹೆಚ್ಚಿನ ಸಾವುನೋವುಗಳು ವರದಿಯಾಗಿವೆ.

ಈ ಕಾರ್ಯಾಚರಣೆ ಭಾರತದ ಸ್ವದೇಶಿ ರಕ್ಷಣಾ ಸಾಮರ್ಥ್ಯಗಳ ಪರಿಪಕ್ವತೆಯನ್ನು ಎತ್ತಿ ತೋರಿಸಿತು. ಹಾಗೇ, ಸುಧಾರಿತ ವ್ಯವಸ್ಥೆಗಳ ಜಾಗತಿಕ ರಫ್ತುದಾರನಾಗಿ ಅದರ ವಿಶ್ವಾಸಾರ್ಹತೆಯನ್ನು ಬಲಪಡಿಸಿತು. ಇದಾದ ಒಂದು ವರ್ಷದ ನಂತರ, ಆಪರೇಷನ್ ಸಿಂಧೂರ್ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ ಎಂದು ಪರಿಗಣಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎರಡುವರೆ ವರ್ಷ ಬಳಿಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಜೀವರಾಜ್ – Kannada News | Shringeri Assembly Result: BJP DN Jeevaraj Finally Take oath as MLA after Won In Recounting

ಬೆಂಗಳೂರು, (ಮೇ 06): ಹೈಕೋರ್ಟ್ ಆದೇಶದಂತೆ ಶೃಂಗೇರಿ ವಿಧಾನಸಭಾ (shringeri Assembly Result) ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ (BJP DN Jeevaraj )ಗೆಲುವು ಸಾಧಿಸಿದ್ದಾರೆ. ಸುಮಾರು ಮೂರು ವರ್ಷಗಳ ಸತತ ಕಾನೂನು ಹೋರಾಟದ ಮೂಲಕ ಶಾಸಕರಾಗಿ ಆಯ್ಕೆಯಾಗಿರುವ ಜೀವರಾಜ್ ಇಂದು (ಮೇ 06) ಶೃಂಗೇರಿ ಶಾರದಾಂಬೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಕಾಂಗ್ರೆಸ್​​ ಶಾಸಕ ಸಂಖ್ಯೆಯಲ್ಲಿ  ಒಂದು ಕಡೆಮೆಯಾದಂತಾಗಿದೆ,

ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಬಳಿಕ ಉಂಟಾದ ರಾಜಕೀಯ ಗದ್ದಲದಿಂದ, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಬಿಜೆಪಿ ವಿಳಂಬ ಆರೋಪ ಮಾಡಿತ್ತು. ಬಿಜೆಪಿ ಪ್ರತಿನಿಧಿ ಮಂಡಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಸ್ಪೀಕರ್ ಲಭ್ಯವಿಲ್ಲದಿದ್ದರೆ ತಾವೇ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಬುಧವಾರ ಸ್ವೀಕರ್ ಯುಟಿ ಖಾದರ್ ಅವರೇ ಪ್ರಮಾಣ ವಚನ ಬೋಧಿಸಿದರು.

2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ನ ರಾಜೇಗೌಡ ಅವರು ಗೆದ್ದಿದ್ದರು. ಆದ್ರೆ, ಅಂಚೆ ಮತಗಳಲ್ಲಿ ಅನುಮಾನಗಳು ವ್ಯಕ್ತವಾಗಿದ್ದವು, ಹೀಗಾಗಿ ಜೀವರಾಜ್ ಅವರು ಕೋರ್ಟ್ ಮೊರೆ ಹೋಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs PAK: ಪಾಕ್ ಕ್ರಿಕೆಟ್ ತಂಡಕ್ಕೆ ಭಾರತದಲ್ಲಿ ಅಡಲು ಅವಕಾಶ ನೀಡಿದ ಕೇಂದ್ರ ಸರ್ಕಾರ – Kannada News | India Allows Pak Players for Multi Nation Tournaments, No Bilateral Cricket

ಪಹಲ್ಗಾಮ್​ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಅಮಾಯಕ ಭಾರತೀಯರ ಪ್ರಾಣ ಹರಣ ಮಾಡಿದ ಬಳಿಕ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳಿಗೂ ಭಾರತ ಅಂತ್ಯ ಹಾಡಿದೆ. ಇದರಿಂದಾಗಿ ಎರಡೂ ದೇಶಗಳ ಕ್ರಿಕೆಟ್ ತಂಡಗಳ ನಡುವಿನ ಪಂದ್ಯಕ್ಕೂ ಬ್ರೇಕ್ ಬಿದ್ದಿದೆ. ಮಾತ್ರವಲ್ಲದೆ ಭಾರತ ತಂಡ ಪಂದ್ಯವನ್ನಾಡಲು ಪಾಕಿಸ್ತಾನಕ್ಕೆ (India vs Pakistan) ಪ್ರಯಾಣಿಸಲು ಒಲ್ಲೆ ಎಂದರೆ, ಇತ್ತ ಪಾಕಿಸ್ತಾನ ತಂಡ ಕೂಡ ಭಾರತಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದೆ. ಏತನ್ಮಧ್ಯೆ, ಭಾರತ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಪಾಕಿಸ್ತಾನಿ ಆಟಗಾರರು ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡಿದೆ. ಭಾರತ ಸರ್ಕಾರದ ಪ್ರಕಾರ, ಪಾಕಿಸ್ತಾನಿ ಆಟಗಾರರು ಬಹು ದೇಶಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಈವೆಂಟ್​ಗಳಲ್ಲಿ ಅಂದರೆ ಐಸಿಸಿ (ICC) ಹಾಗೂ ಎಸಿಸಿ (ACC) ಈವೆಂಟ್​ಗಳಲ್ಲಿ ಆಡಲು ಭಾರತಕ್ಕೆ ಪ್ರಯಾಣಿಸಲು ಅನುಮತಿ ನೀಡಿದೆ.

ಭಾರತ ಸರ್ಕಾರ ಹೇಳಿದ್ದೇನು?

“ಭಾರತ ಆಯೋಜಿಸುವ ಬಹು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಕಿಸ್ತಾನಿ ಆಟಗಾರರು ಭಾಗವಹಿಸಲು ಅನುಮತಿ ನೀಡಲಾಗುತ್ತಿದೆ. ಆದರೆ ಭಾರತ ತಂಡವನ್ನು ಮಾತ್ರ ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ” ಎಂದು ಭಾರತ ಸರ್ಕಾರ ಹೇಳಿದೆ. ಇದರರ್ಥ ಏಷ್ಯಾಕಪ್, ಚಾಂಪಿಯನ್ಸ್ ಟ್ರೋಫಿ ಅಥವಾ ವಿಶ್ವಕಪ್‌ನಂತಹ ಪಂದ್ಯಾವಳಿಗಳು ಭಾರತದಲ್ಲಿ ನಡೆದರೆ ಪಾಕಿಸ್ತಾನಿ ಆಟಗಾರರಿಗೆ ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಆದರೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗಳನ್ನು ನಡೆಸುವ ಮಾತೇ ಇಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.

ಪಾಕ್ ತಂಡಕ್ಕೆ ಭಾರತಕ್ಕೆ ಬರುತ್ತಾ?

ಗಮನಿಸಬೇಕಾದ ಅಂಶವೆಂದರೆ, ಭಾರತ ಮತ್ತು ಪಾಕಿಸ್ತಾನ ಇತ್ತೀಚೆಗೆ ನಡೆದ ಎರಡು ಐಸಿಸಿ ಟೂರ್ನಿಗಳಿಗೆ ಪರಸ್ಪರರ ದೇಶಗಳಿಗೆ ಪ್ರಯಾಣಿಸಿಲ್ಲ. ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಿತ್ತು, ಆದರೆ ಭಾರತ ತಂಡ ಯುಎಇಯಲ್ಲಿ ತನ್ನ ಪಂದ್ಯಗಳನ್ನು ಆಡಿತ್ತು. ಇತ್ತ ಭಾರತ ಆಯೋಜಿಸಿದ್ದ 2026 ರ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸಲಿಲ್ಲ. ಹೀಗಾಗಿ ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಪಾಕಿಸ್ತಾನ ವಿರುದ್ಧ ಆಡಲು ಭಾರತ ತಂಡ ಶ್ರೀಲಂಕಾಕ್ಕೆ ಪ್ರಯಾಣಿಸಬೇಕಾಗಿತ್ತು. ಆದ್ದರಿಂದ, ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸುತ್ತದೆಯೇ ಎಂಬುದು ಒಂದು ಪ್ರಮುಖ ಪ್ರಶ್ನೆಯಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಇದು ಅಸಂಭವವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯ ಜಯಭೇರಿ: ದೇಶದ ಜಿಡಿಪಿ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮೂಡೀಸ್ ಮತ್ತು ಎಡಿಬಿ – Kannada News | Moodys adb laud indias economy strong growth stable outlook global investment hub

ನವದೆಹಲಿ, ಮೇ 6: ಜಾಗತಿಕವಾಗಿ ಅನೇಕ ಪ್ರಮುಖ ದೇಶಗಳ ಆರ್ಥಿಕತೆಗಳು ಮಂದಗತಿಯನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಭಾರತದ ಆರ್ಥಿಕತೆಯು ಅತ್ಯಂತ ಸದೃಢವಾಗಿ ಮುನ್ನಡೆಯುತ್ತಿರುವುದನ್ನು ಜಾಗತಿಕ ರೇಟಿಂಗ್ ದೈತ್ಯ ಸಂಸ್ಥೆಯಾದ ‘ಮೂಡೀಸ್’ (Moody’s Ratings) ಮತ್ತು ‘ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್’ (ADB) ಮುಕ್ತಕಂಠದಿಂದ ಶ್ಲಾಘಿಸಿವೆ. ಭಾರತದ ಜಿಡಿಪಿ (GDP) ಪ್ರಗತಿಯು ಮುಂಬರುವ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳಲಿದೆ ಎಂದು ಎರಡೂ ಜಾಗತಿಕ ಸಂಸ್ಥೆಗಳು ಜಂಟಿಯಾಗಿ ವಿಶ್ವಾಸ ವ್ಯಕ್ತಪಡಿಸಿವೆ.

ಮೂಡೀಸ್ ಸಂಸ್ಥೆಯು ಭಾರತದ ಆರ್ಥಿಕತೆಯ ಸ್ಥಿರತೆಯನ್ನು ಗುರುತಿಸಿ ತನ್ನ ಮುನ್ಸೂಚನೆಯನ್ನು ಸಕಾರಾತ್ಮಕವಾಗಿ ಪರಿಷ್ಕರಿಸಿದೆ. ಇನ್ನೊಂದೆಡೆ, ಎಡಿಬಿ (ADB) ದೇಶದ ಬಲವಾದ ಆಂತರಿಕ ಬೇಡಿಕೆಯನ್ನು ಪ್ರಶಂಸಿಸಿದೆ.

ಮೂಡೀಸ್ ನೀಡಿದ ಪ್ರಮುಖ ರೇಟಿಂಗ್ ವಿವರಗಳು

ಜಾಗತಿಕ ರೇಟಿಂಗ್ ಸಂಸ್ಥೆಯಾದ ಮೂಡೀಸ್, ಭಾರತದ ದೀರ್ಘಾವಧಿಯ ಸ್ಥಳೀಯ ಮತ್ತು ವಿದೇಶಿ ಕರೆನ್ಸಿ ವಿತರಕರ ರೇಟಿಂಗ್ ಅನ್ನು ‘Baa3’ ಮಟ್ಟದಲ್ಲಿ ಕಾಯ್ದುಕೊಂಡಿದೆ. ಆದರೆ, ದೇಶದ ಆರ್ಥಿಕ ಮುನ್ನೋಟವನ್ನು (Outlook) ‘ಸ್ಥಿರ’ (Stable) ಇಂದ ‘ಧನಾತ್ಮಕ’ (Positive) ಮಟ್ಟಕ್ಕೆ ಏರಿಸಿದೆ.

ಇದನ್ನೂ ಓದಿ: ಬ್ಯಾಂಕ್​ಗಳಲ್ಲಿ ಕೆಟ್ಟ ಸಾಲಗಳು; ಆರ್​ಬಿಐನಿಂದ ಹೊಸ ನಿಯಮಗಳ ಪ್ರಸ್ತಾಪ; ಏನಿವು ರೂಲ್ಸ್?

ಭಾರತದ ನೈಜ ಜಿಡಿಪಿ (Real GDP) ಪ್ರಗತಿ ದರವು ಮುಂದಿನ ಆರ್ಥಿಕ ವರ್ಷಗಳಲ್ಲಿ ಶೇಕಡಾ 6.5 ರಿಂದ 7 ರಷ್ಟು ಜಿಗಿತ ಕಾಣಲಿದೆ ಎಂದು ಮೂಡೀಸ್ ಅಂದಾಜಿಸಿದೆ.

ಸರ್ಕಾರದ ಮೂಲಸೌಕರ್ಯ ಹೂಡಿಕೆಗಳು, ಸುಧಾರಿತ ಉತ್ಪಾದನಾ ವಲಯ ಮತ್ತು ಬಲಿಷ್ಠ ಡಿಜಿಟಲ್ ಆರ್ಥಿಕತೆಯು ಭಾರತದ ಈ ಸುಸ್ಥಿರ ಬೆಳವಣಿಗೆಗೆ ಮುಖ್ಯ ಕಾರಣಗಳಾಗಿವೆ ಎಂದು ಸಂಸ್ಥೆ ತಿಳಿಸಿದೆ.

ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಹೇಳಿದ್ದೇನು?

ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ತನ್ನ ಇತ್ತೀಚಿನ ಆರ್ಥಿಕ ವರದಿಯಲ್ಲಿ ಭಾರತದ ಬೆಳವಣಿಗೆಯ ವೇಗವನ್ನು ಶ್ಲಾಘಿಸಿದೆ. ಏಷ್ಯಾದ ಇತರ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದ ಪ್ರಗತಿ ಅತ್ಯಂತ ವೇಗವಾಗಿದೆ ಎಂದು ಎಡಿಬಿ ಹೇಳಿದೆ.

ಬಲಿಷ್ಠ ದೇಶೀಯ ಬೇಡಿಕೆ: ಭಾರತದಲ್ಲಿ ಗ್ರಾಹಕರ ಬಳಕೆ ಮತ್ತು ಹೂಡಿಕೆಯ ಪ್ರಮಾಣ (Domestic Demand) ಸತತವಾಗಿ ಹೆಚ್ಚುತ್ತಿರುವುದು ಆರ್ಥಿಕತೆಗೆ ದೊಡ್ಡ ಇಂಧನವಾಗಿದೆ.

ಉತ್ಪಾದನಾ ವಲಯದ ಕ್ರಾಂತಿ: ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಮತ್ತು ಪಿಎಲ್‌ಐ (PLI) ಯೋಜನೆಗಳ ಕಾರಣದಿಂದಾಗಿ ಉತ್ಪಾದನೆ ಮತ್ತು ರಫ್ತು ವಲಯಗಳು ದೇಶದ ಜಿಡಿಪಿಗೆ ದೊಡ್ಡ ಕೊಡುಗೆ ನೀಡುತ್ತಿವೆ ಎಂದು ಎಡಿಬಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಕಾಗ್ನಿಜೆಂಟ್​ನಲ್ಲಿ 15,000 ಮಂದಿ ಲೇ ಆಫ್ ಸಾಧ್ಯತೆ; ಫ್ರೆಷ್​ವರ್ಕ್ಸ್​ನಲ್ಲಿ ಶೇ. 11 ಮಂದಿಗೆ ಕಾದಿದೆ ಶಾಕ್

ಸುಧಾರಿಸುತ್ತಿರುವ ಬ್ಯಾಂಕಿಂಗ್ ಮತ್ತು ವಿತ್ತೀಯ ನೀತಿ

ಭಾರತದ ಬ್ಯಾಂಕಿಂಗ್ ವ್ಯವಸ್ಥೆಯು ಕಳೆದ ಕೆಲವು ವರ್ಷಗಳಲ್ಲಿ ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ ಹಂತಕ್ಕೆ ತಲುಪಿದೆ ಎಂದು ಮೂಡೀಸ್ ಒತ್ತಿಹೇಳಿದೆ. ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್‌ಗಳು ಸುಧಾರಿಸಿದ್ದು, ಕೈಗಾರಿಕಾ ವಲಯಕ್ಕೆ ಸಾಲದ ಹರಿವು ಹೆಚ್ಚಾಗಿದೆ. ಇದರೊಂದಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣದುಬ್ಬರವನ್ನು (Inflation) ಯಶಸ್ವಿಯಾಗಿ ನಿಯಂತ್ರಣದಲ್ಲಿಟ್ಟಿರುವುದು ದೇಶದ ಒಟ್ಟಾರೆ ಆರ್ಥಿಕ ಭದ್ರತೆಗೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.

ಜಾಗತಿಕ ಹೂಡಿಕೆಗೆ ಭಾರತವೇ ಮೊದಲ ಆದ್ಯತೆ

ಜಾಗತಿಕ ಪೂರೈಕೆ ಸರಪಳಿಯಲ್ಲಿ (Global Supply Chain) ಜಗತ್ತಿನ ದೊಡ್ಡ ಕಂಪನಿಗಳು ಈಗ ‘ಚೀನಾ ಪ್ಲಸ್ ಒನ್’ (China + 1) ತಂತ್ರವನ್ನು ಅಳವಡಿಸಿಕೊಳ್ಳುತ್ತಿದ್ದು, ಅದಕ್ಕೆ ಭಾರತವೇ ಅತ್ಯಂತ ಸೂಕ್ತ ಹಾಗೂ ಆಕರ್ಷಕ ತಾಣವಾಗಿ ಹೊರಹೊಮ್ಮುತ್ತಿದೆ. ಈ ಜಾಗತಿಕ ಹೂಡಿಕೆಯು ಭಾರತದ ಸುದೀರ್ಘ ಬೆಳವಣಿಗೆಗೆ ದಾರಿಯಾಗಲಿದೆ ಎಂದು ಈ ಹಣಕಾಸು ಸಂಸ್ಥೆಗಳು ಭವಿಷ್ಯ ನುಡಿದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link