2013ರ ಅತ್ಯಾಚಾರ ಪ್ರಕರಣ; ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆ – Kannada News | Tarun Tejpal former Tehelka Editor Gets 10 Years Jail For Raping Colleague in 2013

ಪಣಜಿ, ಆಗಸ್ಟ್ 6: ಸುಮಾರು 13 ವರ್ಷಗಳ ಹಿಂದೆ ಗೋವಾದ ರೆಸಾರ್ಟ್‌ ಒಂದರಲ್ಲಿ ನಡೆದ ತೆಹೆಲ್ಕಾ ಥಿಂಕ್​ಫೆಸ್ಟ್ ಕಾರ್ಯಕ್ರಮದಲ್ಲಿ ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ‘ತೆಹಲ್ಕಾ’ ನಿಯತಕಾಲಿಕೆಯ ಸ್ಥಾಪಕ ತರುಣ್ ತೇಜ್‌ಪಾಲ್ (Tarun Tejpal) ಅವರನ್ನು ದೋಷಿ ಎಂದು ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು, ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. 2021ರಲ್ಲಿ ವಿಚಾರಣಾ ನ್ಯಾಯಾಲಯವು ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ವಜಾಗೊಳಿಸಿದ ಹೈಕೋರ್ಟ್, 2 ವಾರಗಳ ಒಳಗೆ ಗೋವಾ ಪೊಲೀಸರ ಮುಂದೆ ಶರಣಾಗುವಂತೆ ತೇಜ್‌ಪಾಲ್‌ಗೆ ಆದೇಶ ನೀಡಿದೆ.

ಈ ಪ್ರಕರಣವು 2013 ರ ನವೆಂಬರ್​ನದ್ದಾಗಿದ್ದು, ಗೋವಾದ ರೆಸಾರ್ಟ್‌ ಒಂದರಲ್ಲಿ ‘ತೆಹಲ್ಕಾ’ ಆಯೋಜಿಸಿದ್ದ ವಾರ್ಷಿಕ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ ಲಿಫ್ಟ್‌ನಲ್ಲಿ ತೇಜ್‌ಪಾಲ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳಾ ಉದ್ಯೋಗಿ ಆರೋಪಿಸಿದ್ದರು. ಆದರೆ, ತರುಣ್ ತೇಜ್​ಪಾಲ್ ಇದನ್ನು ನಿರಾಕರಿಸಿದ್ದರು.

ಇಂದು ಬೆಳಿಗ್ಗೆ ಹೈಕೋರ್ಟ್‌ ತಮಗೆ ಶಿಕ್ಷೆಯನ್ನು ಖಚಿತಪಡಿಸುತ್ತಿದ್ದಂತೆಯೇ ತೇಜ್‌ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ದೋಷಾರೋಪಣೆಯ ಆದೇಶವನ್ನು ಒಂದು ವಾರಗಳ ಕಾಲ ಅಮಾನತಿನಲ್ಲಿಡುವಂತೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಆದರೆ ಮಧ್ಯಾಹ್ನ ಹೈಕೋರ್ಟ್ ಅವರಿಗೆ 10 ವರ್ಷಗಳ ಶಿಕ್ಷೆ ಘೋಷಿಸಿ, ಶರಣಾಗಲು 2 ವಾರಗಳ ಕಾಲಾವಕಾಶ ನೀಡಿದೆ. ಇದು ತೇಜ್‌ಪಾಲ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಮೇಲ್ಮನವಿಯನ್ನು ಮುಂದುವರಿಸಲು ಅಥವಾ ತಿದ್ದುಪಡಿ ಮಾಡಲು ಸಮಯಾವಕಾಶ ಕಲ್ಪಿಸಲಿದೆ.

ಇದನ್ನೂ ಓದಿ: Tarun Tejpal: ತರುಣ್ ತೇಜ್‌ಪಾಲ್‌ಗೆ ಭಾರಿ ಆಘಾತ: 2013ರ ಅತ್ಯಾಚಾರ ಪ್ರಕರಣದಲ್ಲಿ ತೇಜ್‌ಪಾಲ್ ದೋಷಿ, ಹೈಕೋರ್ಟ್ ತೀರ್ಪು

ತಮ್ಮ ವಿರುದ್ಧ ಆದೇಶ ಹೊರಬಿದ್ದಾಗ ತರುಣ್ ತೇಜ್‌ಪಾಲ್ ನ್ಯಾಯಾಲಯದಲ್ಲಿಯೇ ಇದ್ದರು. ಈ ವೇಳೆ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ಮಾತನಾಡಿದ ತೇಜ್‌ಪಾಲ್, ತಮಗೀಗ 62 ವರ್ಷ ವಯಸ್ಸಾಗಿದ್ದು, ಕರುಣೆ ತೋರುವಂತೆ ಮನವಿ ಮಾಡಿದರು. “ನನಗೆ 62 ವರ್ಷ. ನಾನು ರಾಜಕೀಯಕ್ಕೆ ಬಲಿಯಾಗಿದ್ದೇನೆ ಎಂದು ಭಾವಿಸುತ್ತೇನೆ. ನನಗೆ ಹೆಂಡತಿಯಿದ್ದಾರೆ, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇದಕ್ಕಿಂತ ಹೆಚ್ಚು ಹೇಳಲು ಏನೂ ಇಲ್ಲ. ನಾವು ಮೇಲ್ಮನವಿ ಸಲ್ಲಿಸಬಹುದು ಅಷ್ಟೇ. ದಯವಿಟ್ಟು ನನ್ನ ಮೇಲೆ ಕರುಣೆ ತೋರಿ” ಎಂದು ತೇಜ್‌ಪಾಲ್ ಹೇಳಿದರು.

ತರುಣ್ ತೇಜ್‌ಪಾಲ್ ಅವರ ಕರುಣೆಯ ಅರ್ಜಿಯನ್ನು ವಿರೋಧಿಸಿದ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪತ್ರಕರ್ತ ತರುಣ್ ತೇಜ್​ಪಾಲ್ ಸಂತ್ರಸ್ತೆಗೆ ತಂದೆಯ ಸಮಾನರಾಗಿದ್ದರು. ಸಮಾಜಕ್ಕೆ ಪ್ರಬಲ ಸಂದೇಶ ರವಾನಿಸಲು ಸೂಕ್ತ ಉದಾಹರಣೆಯನ್ನು ಸೃಷ್ಟಿಸಬೇಕು ಎಂದು ಹೇಳಿದರು. “ಸಂತ್ರಸ್ತೆ ತಮ್ಮ ಮಗಳ ವಯಸ್ಸಿನ ಹುಡುಗಿಯಾಗಿದ್ದರೂ ಅವರು ಅತ್ಯಾಚಾರ ಎಸಗಿದ್ದಾರೆ. ಆ ಯುವತಿಗೆ ತಂದೆಯಂತಿದ್ದವರು ಇಂತಹ ಕೃತ್ಯದಲ್ಲಿ ತೊಡಗಬಾರದಿತ್ತು. ಆ ಸಂತ್ರಸ್ತೆ ನಿರಾಕರಿಸಿದರೂ ಅವರು ಮುಂದಿನ 2 ದಿನಗಳ ಕಾಲ ಸತತವಾಗಿ ದೌರ್ಜನ್ಯ ಎಸಗುವುದನ್ನು ಮುಂದುವರಿಸಿದರು” ಎಂದು ಮೆಹ್ತಾ ಹೇಳಿದರು.

ಇದನ್ನೂ ಓದಿ: ನ್ಯಾಯಾಂಗದ ಅಧಿಕಾರಿಗಳು ಸರ್ಕಾರಿ ನೌಕರರಲ್ಲ; ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಳದ ಕುರಿತು ಸುಪ್ರೀಂ ಕೋರ್ಟ್ ಅಭಿಮತ

ಏನಿದು ಪ್ರಕರಣ?:

ಗೋವಾದ ಬಾಂಬೋಲಿಮ್‌ನಲ್ಲಿರುವ ಗ್ರಾಂಡ್ ಹಯಾತ್ ಹೋಟೆಲ್‌ನ ಲಿಫ್ಟ್‌ನಲ್ಲಿ ಹಿರಿಯ ಪತ್ರಕರ್ತ ತರುಣ್ ತೇಜ್‌ಪಾಲ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾಜಿ ‘ತೆಹಲ್ಕಾ’ ಸಹೋದ್ಯೋಗಿಯೊಬ್ಬರು ಆರೋಪಿಸಿದ್ದರು. ಆ ಸಮಯದಲ್ಲಿ ‘ತೆಹಲ್ಕಾ’ ಅತ್ಯಂತ ಪ್ರಭಾವಿ ತನಿಖಾ ನಿಯತಕಾಲಿಕೆಗಳಲ್ಲಿ ಒಂದಾಗಿತ್ತು ಮತ್ತು ತೇಜ್‌ಪಾಲ್ ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿದ್ದರು. ತೇಜ್‌ಪಾಲ್ ಅವರನ್ನು 2013ರ ನವೆಂಬರ್ 30ರಂದು ಬಂಧಿಸಲಾಯಿತು. ಆದರೆ, 1 ವರ್ಷದ ಒಳಗಾಗಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.

ಗೋವಾ ಸೆಷನ್ಸ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ 2017ರಲ್ಲಿ ಪ್ರಾರಂಭವಾಯಿತು. 2021ರಲ್ಲಿ ಸೆಷನ್ಸ್ ಕೋರ್ಟ್ ತೇಜ್‌ಪಾಲ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆ ಪ್ರಕರಣದಲ್ಲಿ ಇದೀಗ ತೀರ್ಪು ಹೊರಬಿದ್ದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಟಿಎಂ ಕಾರ್ಡ್‌ ಇದ್ರೆ ಸಾಕು, ಅಕೌಂಟ್‌ಗೆ ಹಣ ಡೆಪಾಸಿಟ್ ಮಾಡೋದು ಸುಲಭ – Kannada News | How to deposit money in a cash deposit machine

ಸಾಂದರ್ಭಿಕ ಚಿತ್ರ
Image Credit source: krisanapong detraphiphat/Moment/Getty Images

ಈಗೇನಿದ್ದರೂ ಹಣಕಾಸಿನ ವಹಿವಾಟು ತುಂಬಾ ಸುಲಭವೇ ಆಗಿದೆ. ದುಡ್ಡು ಬೇಕಾದ್ರೆ, ಡೆಪಾಸಿಟ್ (deposit) ಮಾಡ್ಬೇಕಾದ್ರೂ ಬ್ಯಾಂಕ್‌ನಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಕ್ಯಾಶ್ ಡೆಪಾಸಿಟ್ ಮೆಷಿನ್ (Cash Deposit Machines) ಇದ್ರೆ ಅದರ ಮೂಲಕ ಹಣ ಜಮಾ ಮಾಡಬಹುದು. ಇಲ್ಲಿ ಕಾರ್ಡ್ ಬಳಸಿ ಅಥವಾ ಕಾರ್ಡ್ ಇಲ್ಲದೇ ಹಣ ಡೆಪಾಸಿಟ್ ಮಾಡುವ ಎರಡು ಅವಕಾಶವೂ ಇದೆ. ಇದ್ರಿಂದ ನಿಮ್ಮ ಸಮಯ ಕೂಡ ಉಳಿಯುತ್ತದೆ.

ಎಟಿಎಂ ಕಾರ್ಡ್ ಬಳಸಿ  ಖಾತೆಗೆ ಹಣ ಜಮಾ ಮಾಡುವುದು ಹೇಗೆ?

ಹಂತ 1: ನಿಮ್ಮ ಡೆಬಿಟ್‌ ಅಥವಾ ಕಾರ್ಡ್‌ನ್ನು ಮೆಷಿನ್‌ನ ಸ್ಲಾಟ್‌ ಒಳಗೆ ಹಾಕಿ.

ಹಂತ 2: ಭಾಷೆಯ ಆಯ್ಕೆಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.

ಹಂತ 3: ನಿಮ್ಮ ನಾಲ್ಕು ಅಂಕಿಯ ಎಟಿಎಂ ಪಿನ್ ನಂಬರ್‌ನ್ನು ಇಲ್ಲಿ ನಮೂದಿಸಿ.

ಹಂತ 4: ಸ್ಕ್ರೀನ್ ಮೇಲೆ ಕಾಣುವ ಬ್ಯಾಂಕಿಂಗ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ಕ್ಯಾಶ್ ಡೆಪಾಸಿಟ್ ಆಯ್ಕೆಯನ್ನು ಒತ್ತಿ.

ಹಂತ 5: ಉಳಿತಾಯ ಖಾತೆ, ಚಾಲ್ತಿ ಖಾತೆ ಈ ಎರಡು ಆಯ್ಕೆಯಲ್ಲಿ ನಿಮ್ಮದು ಯಾವುದು ಖಾತೆ ಅದರ ಮೇಲೆ ಕ್ಲಿಕ್ ಮಾಡಿ.

ಹಂತ 6: ಮೆಷಿನ್‌ನ ಕೆಳಗಿರುವ ನಗದು ಸ್ವೀಕರಿಸುವ ಬಾಕ್ಸ್ ತೆರೆದುಕೊಳ್ಳುತ್ತದೆ. ನಿಮ್ಮ ಬಳಿಯಿರುವ ನೋಟುಗಳನ್ನು ಸರಿಯಾಗಿ ಜೋಡಿಸಿ ಬಾಕ್ಸ್‌ನಲ್ಲಿಡಿ.

ಹಂತ 7: ಪರದೆಯ ಮೇಲಿರುವ ಎಂಟರ್ ಅಥವಾ ಕನ್ಫರ್ಮ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 8: ಸ್ಕ್ರೀನ್ ಮೇಲೆ ಒಟ್ಟು ಮೊತ್ತವನ್ನು ತೋರಿಸುತ್ತದೆ. ನೀವು ಜಮಾ ಮಾಡಿದ ಮೊತ್ತ ಸರಿಯಾಗಿದ್ದರೆ ಕನ್ಫರ್ಮ್ ಮೇಲೆ ಕ್ಲಿಕ್ ಮಾಡಿ.

ಹಂತ 9: ಹಣ ಜಮಾ ಆದ ತಕ್ಷಣವೇ ಮೆಷಿನ್‌ನಿಂದ ರಶೀದಿ ಬರುತ್ತದೆ.

ಕಾರ್ಡ್ ಇಲ್ಲದೇ ಹಣ ಜಮಾ ಮಾಡುವುದು ಹೇಗೆ?

ಹಂತ 1: ಸ್ಕ್ರೀನ್ ಮೇಲೆ ಕಾಣುವ ಕಾರ್ಡ್ ಲೆಸ್ ಡೆಪಾಸಿಟ್ ಆಯ್ಕೆಯನ್ನು ಒತ್ತಿ.

ಹಂತ 2: ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ. ಸ್ಕ್ರೀನ್ ಮೇಲೆ ಖಾತೆದಾರರ ಹೆಸರು ಬರುತ್ತದೆ.

ಹಂತ 3: ನಗದು ಬಾಕ್ಸ್‌ನಲ್ಲಿ ನೋಟುಗಳನ್ನು ಇಟ್ಟು ಎಂಟರ್ ಆಯ್ಕೆಯನ್ನು ಒತ್ತಿಂ

ಹಂತ 4: ಮೊತ್ತವನ್ನು ಪರಿಶೀಲಿಸಿ ಕನ್ಫರ್ಮ್ ಆಯ್ಕೆಯ ಮೇಲೆ ಒತ್ತಿ.

ಇದನ್ನೂ ಓದಿ: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಅಕೌಂಟ್ ತೆರೆಯಲು ಅವಕಾಶವಿದೆ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಬ್ಯಾಂಕ್ ಹೋಗದೇ ಖಾತೆಗೆ ಹಣ ಜಮಾ ಮಾಡುವುದು ಹೇಗೆ?

ಉತ್ತರ: ಖಾತೆಗೆ ಹಣ ಜಮಾ ಬ್ಯಾಂಕ್‌ಗೆ ಹೋಗಬೇಕಾಗಿಲ್ಲ, ಎಟಿಎಂ ಮೆಷಿನ್ ನಲ್ಲಿ ಹಣ ಜಮಾ ಮಾಡಬಹುದು.

ಪ್ರಶ್ನೆ: ಎಟಿಎಂ ನಲ್ಲಿ ಖಾತೆಗೆ ಹಣ ಜಮಾ ಮಾಡುವುದು ಹೇಗೆ?

ಉತ್ತರ: ಎಟಿಎಂ ಕಾರ್ಡ್ ಬಳಸಿ, ಕಾರ್ಡ್ ಇಲ್ಲದೇ ಎಟಿಎಂನಲ್ಲಿ ಖಾತೆಗೆ ಹಣ ಜಮಾ ಮಾಡಲು ಅವಕಾಶವಿದೆ.

ಪ್ರಶ್ನೆ: ಎಟಿಎಂನಲ್ಲಿ ಖಾತೆಗೆ ಹಣ ಜಮಾ ಮಾಡಲು ಏನೆಲ್ಲಾ ದಾಖಲೆಗಳು ಬೇಕು?

ಉತ್ತರ: ಎಟಿಎಂನಲ್ಲಿ ಖಾತೆಗೆ ಹಣ ಜಮಾ ಮಾಡಲು ಖಾತೆ ಸಂಖ್ಯೆ, ಮೊಬೈಲ್ ನಂಬರ್, ಯುಪಿಐ ಇರಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:02 pm, Thu, 6 August 26

Source link

IND vs SL: ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಟೀಂ ಇಂಡಿಯಾಕ್ಕಾಗುವ ಲಾಭವೇನು? – Kannada News | India vs Sri Lanka Test: WTC Final Hopes! Points Table Impact Explained

ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಶ್ರೀಲಂಕಾ (India vs Sri Lanka) ಪ್ರವಾಸ ಮಾಡಿದೆ. ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ನೆಲದಲ್ಲಿ ಮೊದಲ ಬಾರಿಗೆ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಟೆಸ್ಟ್ ಸರಣಿ ಆಗಸ್ಟ್ 15 ರಂದು ಆರಂಭವಾಗಲಿದ್ದು, 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ( World Test Championship) ಫೈನಲ್‌ ರೇಸ್​ನಲ್ಲಿ ಉಳಿಯಬೇಕೆಂದರೆ ಭಾರತ ಈ ಸರಣಿಯನ್ನು ಗೆಲ್ಲಲೇಬೇಕು. ಒಂದು ವೇಳೆ ಈ ಟೆಸ್ಟ್ ಸರಣಿಯಲ್ಲಿ ಭಾರತ ಸೋತರೆ, ಸರಣಿ ಟೈ ಆದರೆ ಅಥವಾ ಭಾರತ ಒಂದೇ ಒಂದು ಪಂದ್ಯವನ್ನು ಗೆದ್ದರೆ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಾಯಿಂಟ್ ಪಟ್ಟಿಯಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎಂಬುದರ ವಿವರ ಇಲ್ಲಿದೆ.

ಕ್ಲೀನ್ ಸ್ವೀಪ್ ಮಾಡಿದರೆ ಭಾರತಕ್ಕೆ ಲಾಭ

ಪ್ರಸ್ತುತ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-27 ರ ಅಂಕ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಈ ಆವೃತ್ತಿಯಲ್ಲಿ ಭಾರತ ಇದುವರೆಗೆ ಒಟ್ಟು 9 ಟೆಸ್ಟ್‌ಗಳನ್ನು ಆಡಿದ್ದು, ಅದರಲ್ಲಿ 4 ಪಂದ್ಯಗಳನ್ನು ಗೆದ್ದಿದ್ದರೆ, 4 ಪಂದ್ಯಗಳನ್ನು ಸೋತಿದೆ ಮತ್ತು. ಉಳಿದಂತೆ 1 ಪಂದ್ಯ ಡ್ರಾ ಆಗಿದೆ. ಹೀಗಾಗಿ ಭಾರತದ ಗೆಲುವಿನ ಶೇಕಡಾವಾರು 48.15 ಆಗಿದೆ. ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ, ಶ್ರೀಲಂಕಾವನ್ನು 2-0 ಅಂತರದಿಂದ ಸೋಲಿಸಿದರೆ, ಟೀಂ ಇಂಡಿಯಾದ ಗೆಲುವಿನ ಶೇಕಡಾವಾರು 57.58 ಕ್ಕೆ ಏರಿಕೆಯಾಗಲಿದ್ದು, ಪಾಯಿಂಟ್ ಪಟ್ಟಿಯಲ್ಲಿ 5 ರಿಂದ 4 ನೇ ಸ್ಥಾನಕ್ಕೆ ಏರುತ್ತದೆ.

IND vs SL: ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ; ಟೆಸ್ಟ್ ಸರಣಿಗೆ ಸ್ಟಾರ್ ಪ್ಲೇಯರ್ ಎಂಟ್ರಿ

ಭಾರತ 0-2 ಅಂತರದಲ್ಲಿ ಸೋತರೆ ಕಷ್ಟ

ಇದಲ್ಲದೆ, ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು 1-1 ಅಂತರದಲ್ಲಿ ಡ್ರಾದಲ್ಲಿ ಕೊನೆಗೊಂಡರೆ, ಭಾರತದ ಗೆಲುವಿನ ಶೇಕಡಾವಾರು 48.48 ಆದರೆ, ಶ್ರೀಲಂಕಾದ ಗೆಲುವಿನ ಶೇಕಡಾವಾರು 44.44 ಆಗಿರುತ್ತದೆ. ಈ ಪರಿಸ್ಥಿತಿಯಲ್ಲಿ, ಭಾರತ ಐದನೇ ಸ್ಥಾನದಲ್ಲಿ ಉಳಿಯುತ್ತದೆ ಮತ್ತು ಶ್ರೀಲಂಕಾ ಆರನೇ ಸ್ಥಾನದಲ್ಲಿ ಉಳಿಯುತ್ತದೆ. ಆದಾಗ್ಯೂ, ಭಾರತ ಈ ಟೆಸ್ಟ್ ಸರಣಿಯನ್ನು 0-2 ಅಂತರದಲ್ಲಿ ಸೋತರೆ, ಭಾರತದ ಗೆಲುವಿನ ಶೇಕಡಾವಾರು 39.39 ಕ್ಕೆ ಕುಸಿಯಲಿದ್ದು, ಶ್ರೀಲಂಕಾದ ಗೆಲುವಿನ ಶೇಕಡಾವಾರು 61.11 ಕ್ಕೆ ಏರಲಿದೆ. ಇದರಿಂದ ಶ್ರೀಲಂಕಾ ಆರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರುತ್ತದೆ. ಇತ್ತ ಭಾರತ ಡಬ್ಲ್ಯೂಟಿಸಿ ಫೈನಲ್​ ರೇಸ್​ನಿಂದ ಭಾಗಶಃ ಹೊರಬೀಳುತ್ತದೆ. ಇದರರ್ಥ ಭಾರತ ಡಬ್ಲ್ಯೂಟಿಸಿ ಫೈನಲ್ ರೇಸ್​ನಲ್ಲಿ ಉಳಿಯಬೇಕೆಂದರೆ ಯಾವುದೇ ಬೆಲೆ ತೆತ್ತಾದರೂ ಶ್ರೀಲಂಕಾವನ್ನು ಸೋಲಿಸಲೇಬೇಕು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:50 pm, Thu, 6 August 26

Source link

ಮಧ್ಯರಾತ್ರಿ ಗುಂಡಿನ ಸದ್ದು: ಬೆಚ್ಚಿಬಿದ್ದ ಅಪಾರ್ಟ್‌ಮೆಂಟ್‌ ಜನರು; ನಡೆದಿದ್ದೇನು? – Kannada News | Drunk IT Employee Opens Fire with Air Gun on Security Guard in Anekal

ಆನೇಕಲ್, ಆಗಸ್ಟ್​​ 06: ಕುಡಿದ ಅಮಲಿನಲ್ಲಿ ಓರ್ವ ಟೆಕ್ಕಿ ತನ್ನ ಪ್ಲಾಟ್‌ನ ಬಾಲ್ಕನಿಯಿಂದ ಸೆಕ್ಯುರಿಟಿ ಗಾರ್ಡ್‌ಗಳು ಹಾಗೂ ಕಾರುಗಳ ಮೇಲೆ ಏರ್ ಗನ್‌ನಿಂದ ಫೈರಿಂಗ್ (air gun firing) ಮಾಡಿರುವ ಘಟನೆ ಆನೇಕಲ್ ತಾಲೂಕಿನ ಬಂಡಾಪುರ ಸಮೀಪದ ಸಿಪಾನಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಕ್ನೋ ಮೂಲದ ಅನುರಾಗ್ ತಿವಾರಿ (40) ಫೈರಿಂಗ್ ಮಾಡಿದ ವ್ಯಕ್ತಿ. ಅನುರಾಗ್ ತಿವಾರಿ ಐಟಿ ಉದ್ಯೋಗಿ ಆಗಿದ್ದು, ಸದ್ಯ ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?

ಅನುರಾಗ್ ತಿವಾರಿ ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎಂಟು ತಿಂಗಳಿನಿಂದ ಸಿಪಾನಿ ಅಪಾರ್ಟ್‌ಮೆಂಟ್‌ನ ಬ್ಲಿಸ್-1 ವಿಭಾಗದ B304 ಪ್ಲಾಟ್‌ನಲ್ಲಿ ವಾಸವಿದ್ದ. ಕಳೆದ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಅನುರಾಗ್, ತನ್ನ ಪ್ಲಾಟ್ ಒಳಗೆ ಫೋನ್‌ನಲ್ಲಿ ಮಾತನಾಡುತ್ತಾ ಜೋರಾಗಿ ಕೂಗಾಡುತ್ತಿದ್ದ.

ಇದನ್ನೂ ಓದಿ: ಬೆಳಗಾವಿ: ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ; ಮಗು ಸೇರಿ ಮೂವರು ಸಾವು

ಬಳಿಕ ಮಧ್ಯರಾತ್ರಿ ಸುಮಾರು 2:30ರ ಸುಮಾರಿಗೆ ಬಾಲ್ಕನಿಗೆ ಬಂದು ಏರ್ ಗನ್‌ನಿಂದ ಕೆಳಗಿದ್ದ ಕಾರುಗಳು ಹಾಗೂ ಪಾರ್ಕಿಂಗ್ ಶೇಡ್ ಮೇಲೆ ಶೂಟ್ ಮಾಡಲು ಪ್ರಾರಂಭಿಸಿದ್ದಾನೆ. ಫೈರಿಂಗ್ ಶಬ್ದ ಕೇಳುತ್ತಿದ್ದಂತೆ ಸ್ಥಳಕ್ಕೆ ಬಂದ ಸೆಕ್ಯುರಿಟಿ ಗಾರ್ಡ್‌ಗಳ ಮೇಲೆಯೂ ಈತ ಗನ್‌ನಿಂದ ಶೂಟ್ ಮಾಡಿದ್ದಾನೆ. ಸುಮಾರು 45 ನಿಮಿಷಗಳ ಕಾಲ ಈತ ಸತತವಾಗಿ ಫೈರಿಂಗ್ ನಡೆಸಿ ಆತಂಕ ಸೃಷ್ಟಿಸಿದ್ದ.

ಕಾರು ಮಾಲೀಕ ಬಿದ್ಯುತ್ ಹೇಳಿದ್ದಿಷ್ಟು 

ಇನ್ನು ಘಟನೆ ಕುರಿತಾಗಿ ಕಾರು ಮಾಲೀಕ ಬಿದ್ಯುತ್ ಎಂಬುವವರು ಪ್ರತಿಕ್ರಿಯಿಸಿದ್ದು, ‘ಕಳೆದ ರಾತ್ರಿ ಕಾರಿನ ಮೇಲೆ ಏರ್ ಫೈರಿಂಗ್ ಆಗಿದೆ. ಮಧ್ಯರಾತ್ರಿ 2.30 ರ ಸುಮಾರಿಗೆ ಈ ಘಟನೆ ನಡೆದಿದೆ. ಸೆಕ್ಯುರಿಟಿ ಮೇಲೆ ಕೂಡ ಫೈರ್ ಮಾಡಿದ್ದಾರೆ. ಯಾರಿಗೂ ಏನು ಆಗಿಲ್ಲ. ಆದರೆ ಪಾರ್ಕಿಂಗ್​​ನಲ್ಲಿದ್ದ ಕಾರಿನ ಗ್ಲಾಸ್ ಪುಡಿಯಾಗಿವೆ. ಅವರು ಏಕೆ ಈ ರೀತಿ ಮಾಡಿದ್ದಾರೆ ಗೊತ್ತಿಲ್ಲ. ಅವರಿಗೂ ನಮಗೂ ಯಾವುದೇ ಪರಿಚಯವಿಲ್ಲ. ಕುಡಿದು ಈ ರೀತಿ ಮಾಡಿರಬೇಕು. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ’ ಎಂದರು.

ಸ್ಥಳಕ್ಕೆ ಸೋಕೋ ತಂಡ ಭೇಟಿ

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸೂರ್ಯನಗರ ಠಾಣೆ ಪೊಲೀಸರು ಆರೋಪಿ ಅನುರಾಗ್ ತಿವಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸೋಕೋ ತಂಡವು ಘಟನಾ ಸ್ಥಳ ಹಾಗೂ ಆರೋಪಿಯ ಪ್ಲಾಟ್‌ಗೆ ಭೇಟಿ ನೀಡಿ, ಕಾರಿನ ಬಳಿ ಸಿಕ್ಕ ಏರ್ ಗನ್ ಬಾಲ್ಸ್‌ಗಳನ್ನು ಒಳಗೊಂಡಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ. ಕೃತ್ಯಕ್ಕೆ ಬಳಸಿದ್ದ ಏರ್ ಗನ್ ಹಾಗೂ ಬಾಲ್ಸ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಿನ್ನ, ಬೆಳ್ಳಿ ಬೆಲೆಗಳು ಏರಿಕೆಯ ಹಾದಿಯಲ್ಲಿರುವುದು ಯಾಕೆ? ಇಲ್ಲಿವೆ ಪ್ರಮುಖ ಕಾರಣಗಳು – Kannada News | Know why Gold, silver prices rising, Weaker US dollar, lower treasury yield and other reasons

ನವದೆಹಲಿ, ಆಗಸ್ಟ್ 6: ಚಿನ್ನದ ಬೆಲೆ (Gold Rates) ಕಳೆದ ಎರಡು ದಿನಗಳಿಂದ ಭರ್ಜರಿ ಏರಿಕೆ ಕಾಣುತ್ತಿದೆ. ಜನವರಿ ತಿಂಗಳಲ್ಲಿ ಅದು ಮುಟ್ಟಿದ್ದ ಗರಿಷ್ಠ ಬೆಲೆ ಮಟ್ಟವನ್ನು ಮುಂದಿನ ಕೆಲ ವಾರಗಳಲ್ಲಿ ತಲುಪಬಹುದು ಎಂದೂ ಕೆಲವರು ಹೇಳುತ್ತಿದ್ದಾರೆ. ಇರಾನ್ ಯುದ್ಧ ಶುರುವಾದಾಗ ಕುಸಿಯುತ್ತಿದ್ದ ಚಿನ್ನದ ಬೆಲೆ ಈಗ ಏರಿಕೆ ಕಾಣಲು ಏನು ಕಾರಣ? ಕಿಟ್ಕೋ (Kitco) ಸುದ್ದಿಸಂಸ್ಥೆ ವರದಿಯ ಪ್ರಕಾರ, ಯುಎಸ್ ಡಾಲರ್ ಮೌಲ್ಯ ಕುಸಿತ, ಯುಎಸ್ ಟ್ರೆಶರಿ ಯೀಲ್ಡ್ (Treasury Yields) ಕಡಿಮೆಯಾಗಿರುವುದು ಮತ್ತು ಆ ದೇಶದ ಉದ್ಯೋಗದ ದತ್ತಾಂಶಗಳಿಂದಾಗಿ ಆಟೋಮ್ಯಾಟಿಕ್ ಆಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಅದೇ ಸಮಯದಲ್ಲಿ, ಹಾರ್ಮುಜ್ ಜಲಸಂಧಿಯ (Strait of Hormuz) ಹಡಗು ಸಂಚಾರಕ್ಕೆ ಸಂಬಂಧಿಸಿದಂತೆ ಇರಾನ್ ಮತ್ತು ಅಮೆರಿಕ ನಡುವೆ ಸಕಾರಾತ್ಮಕ ಮಾತುಕತೆಯ ಭರವಸೆಯಿಂದ ಕಚ್ಚಾ ತೈಲ ಬೆಲೆ ನಿಯಂತ್ರಣದಲ್ಲಿದ್ದು, ಹಣದುಬ್ಬರದ ಭೀತಿಯನ್ನು ಸ್ವಲ್ಪ ತಗ್ಗಿಸಿದೆ. ಇದೂ ಕೂಡ ಚಿನ್ನದ ಮೇಲೆ ಹೂಡಿಕೆ ಹೆಚ್ಚಲು ಕಾರಣವಾಗಿರಬಹುದು.

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ

  • ಚಿನ್ನ (Spot Gold): ಔನ್ಸ್‌ಗೆ $4,244.00 ತಲುಪಿದ್ದು, ಸುಮಾರು 4.11% ನಷ್ಟು ಏರಿಕೆ ಕಂಡಿದೆ.
  • ಬೆಳ್ಳಿ (Spot Silver): ಔನ್ಸ್‌ಗೆ $61.88 ಕ್ಕೆ ಏರಿಕೆಯಾಗಿದ್ದು, 4.16% ನಷ್ಟು ಹೆಚ್ಚಳ ದಾಖಲಿಸಿದೆ.

ಇದನ್ನೂ ಓದಿ: Gold Rates 06 Aug: ಹತ್ತು ಗ್ರಾಮ್ ಚಿನ್ನದ ಬೆಲೆ ಎರಡೇ ದಿನದಲ್ಲಿ 5,250 ರೂ ಹೆಚ್ಚಳ

ಯುಎಸ್ ಆರ್ಥಿಕ ದತ್ತಾಂಶ ಹಾಗೂ ಫೆಡ್ ನಿರ್ಧಾರ

  • ಜುಲೈ ತಿಂಗಳ ಖಾಸಗಿ ವಲಯದ ಉದ್ಯೋಗ ಸೃಷ್ಟಿ ನಿರೀಕ್ಷೆಗಿಂತ ಕಡಿಮೆ (44,000) ದಾಖಲಾಗಿದೆ.
  • ಅಮೆರಿಕದ ಫೆಡರಲ್ ರಿಸರ್ವ್ (Fed) ಬಡ್ಡಿ ದರವನ್ನು ಸದ್ಯಕ್ಕೆ 3.50% ನಿಂದ 3.75% ವ್ಯಾಪ್ತಿಯಲ್ಲಿ ಕಾಯ್ದುಕೊಂಡಿದ್ದರೂ, ಸೆಪ್ಟೆಂಬರ್‌ನಲ್ಲಿ 25 ಬಿಪಿಎಸ್ (bps) ಬಡ್ಡಿ ದರ ಏರಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಅಂದಾಜಿಸಿದೆ.
  • ಡಾಲರ್ ಮೌಲ್ಯ ಮತ್ತು ಟ್ರೆಶರಿ ಯೀಲ್ಡ್ (Treasury Yields) ಕಡಿಮೆಯಾಗಿದ್ದು ಚಿನ್ನ-ಬೆಳ್ಳಿ ಬೆಲೆ ಏರಿಕೆಗೆ ಪ್ರಮುಖ ಬೆಂಬಲ ನೀಡಿದೆ.

ಕಚ್ಚಾ ತೈಲ ಮತ್ತು ಭೌಗೋಳಿಕ ರಾಜಕೀಯ ಕಾರಣಗಳು

  • Nymex WTI ಕಚ್ಚಾ ತೈಲವು ಬ್ಯಾರೆಲ್‌ಗೆ $75.22 ಕ್ಕೆ ಕುಸಿದಿದೆ.
  • ಇರಾನ್ ಮತ್ತು ಓಮನ್ ದೇಶಗಳು ಹಡಗು ಮಾರ್ಗಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ. ಅಮೆರಿಕದ ಜೊತೆ ತಾತ್ಕಾಲಿಕ ಒಪ್ಪಂದವಾಗುವ ಸೂಚನೆ ಸಿಕ್ಕಿರುವುದರಿಂದ ತೈಲ ಬೆಲೆಯಲ್ಲಿ ಕೊಂಚ ನಿರಾಳತೆ ಕಂಡುಬಂದಿದೆ.

ಇದನ್ನೂ ಓದಿ: ಗ್ರಾಹಕರ ಮೇಲೆ ಡಾರ್ಕ್ ಪ್ಯಾಟರ್ನ್ ತಂತ್ರ: ಝೆಪ್ಟೋ, ಬುಕ್ ಮೈ ಶೋ, ಫಿಸಿಕ್ಸ್ ವಾಲಾ ಸೇರಿದಂತೆ 9 ಕಂಪನಿಗಳಿಗೆ ದಂಡ

ಕರೆನ್ಸಿ ಮತ್ತು ಇತರ ಮಾರುಕಟ್ಟೆಗಳು

  • ಜಪಾನೀಸ್ ಯೆನ್ (Yen) ಮೌಲ್ಯ ಸ್ಥಿರಗೊಳಿಸಲು ಅಮೆರಿಕ ಮತ್ತು ಜಪಾನ್ ಜಂಟಿ ಹಸ್ತಕ್ಷೇಪ ಮಾಡಿದ್ದು, ಡಾಲರ್ ಮೌಲ್ಯವನ್ನು ಇನ್ನಷ್ಟು ಕುಗ್ಗಿಸಿದೆ.
  • ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಡೌ ಜೋನ್ಸ್ ದಾಖಲೆಯ ಮಟ್ಟವನ್ನು ತಲುಪಿದ್ದರೆ, AI ಕಂಪನಿಗಳ ಷೇರು ಕುಸಿತದಿಂದಾಗಿ ನ್ಯಾಸ್‌ಡಾಕ್ (Nasdaq) ನಷ್ಟ ಅನುಭವಿಸಿದೆ.
  • ಕೊರಿಯಾದ ಸೆಂಟ್ರಲ್ ಬ್ಯಾಂಕ್ ಇತ್ತೀಚಿನ ಕೆಲ ದಿನಗಳಿಂದ ಗೋಲ್ಡ್ ಇಟಿಎಫ್​ನಲ್ಲಿ ಹೂಡಿಕೆ ಮಾಡುತ್ತಿದೆ. ಇದು ಚಿನ್ನದ ಮಾರುಕಟ್ಟೆಯನ್ನು ಪ್ರಭಾವಿತಗೊಳಿಸಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಲಾಲ್​​ಬಾಗ್ ಫ್ಲವರ್ ಶೋನಲ್ಲಿ ಸಿಗಲಿದೆ ಬಿಗ್​​ಬಾಸ್​​ಗೆ ಹೋಗುವ ಅವಕಾಶ – Kannada News | Bigg Boss Kannada Agnipariksha challenge in lalbagh botanical garden

ಬಿಗ್​​ಬಾಸ್ ಕನ್ನಡ (Bigg Boss Kannada) ಹೊಸ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಸುದೀಪ್ ಅವರ ಪ್ರೊಮೊ ಒಂದು ಬಿಡುಗಡೆ ಆಗಿದ್ದು, ಶೀಘ್ರವೇ ದಿನಾಂಕ ಘೋಷಣೆ ಆಗಲಿದೆ. ಈ ಬಾರಿ ಸಾಮಾನ್ಯರು ಸಹ ಬಿಗ್​​ಬಾಸ್​​ನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಸ್ಪರ್ಧಿಗಳ ಅಂತಿಮ ಪಟ್ಟಿಯೂ ರೆಡಿ ಆಗಿದೆ. ಕೆಲವೇ ದಿನಗಳಲ್ಲಿ ಬಿಗ್​​ಬಾಸ್ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಈ ಅದ್ಧೂರಿ ಗ್ರ್ಯಾಂಡ್ ಓಪನಿಂಗ್​​ ಅನ್ನು ನೇರವಾಗಿ ಅವಕಾಶ ಇದೀಗ ನಿಮ್ಮದಾಗಲಿದೆ.

ಸುದೀಪ್ ಅವರು ಬಿಗ್​​ಬಾಸ್ ಸ್ಪರ್ಧಿಗಳನ್ನು ಪರಿಚಯಿಸಿ, ಅವರನ್ನು ಬಿಗ್​​ಬಾಸ್ ಮನೆಯೊಳಗೆ ಕಳಿಸುವ ಸಂದರ್ಭವನ್ನು ಲೈವ್ ಆಗಿ ನೋಡುವ ಅವಕಾಶವನ್ನು ಸಾರ್ವಜನಿಕರು ಪಡೆಯಬಹುದಾಗಿದೆ. ಅವಕಾಶ ಪಡೆಯಲು ನೀವು ಲಾಲ್​ಬಾಗ್ ಫ್ಲವರ್ ಶೋನಲ್ಲಿ ಭಾಗವಹಿಸಬೇಕಿದೆ. ಲಾಲ್​​ಬಾಗ್ ಫ್ಲವರ್ ಶೋ ಇದೀಗ ಆರಂಭವಾಗಿದೆ. ಈ ಲಾಲ್​​ಬಾಗ್ ಫ್ಲವರ್ ಶೋನಲ್ಲಿ ‘ಬಿಗ್​​ಬಾಸ್ ಅಗ್ನಿಪರೀಕ್ಷೆ ಎಕ್ಸ್ಪೀರಿಯನ್ಸ್ ಜೋನ್’ ಒಂದನ್ನು ಬಿಗ್​​ಬಾಸ್ ತಂಡ ಮಾಡಿದೆ. ಇಲ್ಲಿ ಬಿಗ್​​ಬಾಸ್​​ನ ಐಕಾನಿಕ್ ಚೇರ್ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜೊತೆಗೆ ಬಿಗ್​​ಬಾಸ್ ಸೆಲ್ಫಿ ಜೋನ್ ಸಹ ಇರಲಿದೆ.

ಈ ಬಿಗ್​​ಬಾಸ್ ಎಕ್ಸ್​ಪೀರಿಯನ್ಸ್ ಝೋನ್​​ಗೆ ಹೋಗಿ ಅಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡು ಅದನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬೇಕಿದೆ. ಹೀಗೆ ಹಂಚಿಕೊಂಡ ಫೋಟೊವನ್ನು ಕಲರ್ಸ್ ಕನ್ನಡದ ಜೊತೆಗೆ ಟ್ಯಾಗ್ ಮಾಡಬೇಕಿದೆ, ಚಿತ್ರಕ್ಕೆ ‘ಬಿಬಿಕೆಅಗ್ನಿಪರೀಕ್ಷೆ’ (#BBKAGNIPARIKSHE) ಹ್ಯಾಷ್ ಟ್ಯಾಗ್ ಅನ್ನು ಹಾಕುವುದು ಮರೆಯುವಂತಿಲ್ಲ. ಈ ಫೋಟೊಗಳು ಪಬ್ಲಿಕ್ ಆಗಿರುವುದು ಕಡ್ಡಾಯ. ಹೀಗೆ ಮಾಡಿದಲ್ಲಿ, ಕಲರ್ಸ್ ವಾಹಿನಿ ಅಥವಾ ಬಿಗ್​​ಬಾಸ್ ಆಯೋಜಕರು ಆಯ್ದ ಕೆಲವರನ್ನು ಬಿಗ್​​ಬಾಸ್ ಕನ್ನಡ ವೀಕೆಂಡ್ ಎಪಿಸೋಡ್ ಅನ್ನು ಲೈವ್ ಆಗಿ ನೋಡಲು ಆಹ್ವಾನವನ್ನು ಕಳಿಸಲಿದ್ದಾರೆ. ಜೊತೆಗೆ ಬಿಗ್​​ಬಾಸ್ ಬಹುಮಾನಗಳನ್ನು ಗೆಲ್ಲುವ ಅವಕಾಶ ಸಹ ಲಭಿಸಲಿದೆ.

ಇದನ್ನೂ ಓದಿ:‘ಮತ್ತೆ ಶುರು ಮಾಡೋಣ್ವ’ ಬಿಗ್​​ಬಾಸ್ ಬಾಗಿಲು ತೆರೆದ ಸುದೀಪ್

ಲಾಲ್​​ಬಾಗ್ ಫ್ಲವರ್ ಶೋ ಇಂದಿನಿಂದ (ಆಗಸ್ಟ್ 06) ಆರಂಭವಾಗಿದ್ದು, ಆಗಸ್ಟ್ 17ರ ವರೆಗೆ ನಡೆಯಲಿದೆ. ಬಿಗ್​​ಬಾಸ್ ಎಕ್ಸ್​ಪೀರಿಯನ್ಸ್ ಜೋನ್ ಸಹ ಸಾರ್ವಜನಿಕ ಪ್ರವೇಶಕ್ಕೆ ಲಭ್ಯವಿದೆ. ಇಲ್ಲಿ ಸೆಲ್ಫಿ ತೆಗೆದುಕೊಂಡು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡರೆ ಅದುವೇ ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ವೀಕ್ಷಣೆಗೆ ಟಿಕೆಟ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:59 pm, Thu, 6 August 26

Source link

ವೃದ್ಧಾಪ್ಯದಲ್ಲಿ ಸ್ನಾಯುಗಳ ಆರೋಗ್ಯ ಕಾಪಾಡಿಕೊಳ್ಳುವುದು ಏಕೆ ಮುಖ್ಯ? ವೈದ್ಯರು ಹೇಳಿರುವ ಮಹತ್ವದ ಸಲಹೆಗಳು – Kannada News | Muscle Loss After 40: Causes, Symptoms and Prevention Tips

ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹಲವು ಸಹಜ ಬದಲಾವಣೆಗಳಾಗುತ್ತದೆ. ಅವುಗಳಲ್ಲಿ ಪ್ರಮುಖವಾದದ್ದು ಸ್ನಾಯುಗಳ (Muscles) ಶಕ್ತಿ ಮತ್ತು ಗಾತ್ರ ಕ್ರಮೇಣ ಕಡಿಮೆಯಾಗುವುದು. ಇದನ್ನು ಸಾಮಾನ್ಯ ವಯೋಸಹಜ ಪ್ರಕ್ರಿಯೆ ಎಂದು ಹಲವರು ನಿರ್ಲಕ್ಷಿಸುತ್ತಾರೆ. ಆದರೆ ಸ್ನಾಯುಗಳು ಕೇವಲ ದೇಹಕ್ಕೆ ಶಕ್ತಿ ನೀಡುವುದಲ್ಲ, ನಡೆಯುವುದು, ಮೆಟ್ಟಿಲು ಹತ್ತುವುದು, ವಸ್ತುಗಳನ್ನು ಎತ್ತುವುದು ಹಾಗೂ ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿ ನಿರ್ವಹಿಸಲು ಅತ್ಯಗತ್ಯ. ಆದ್ದರಿಂದ 30–40 ವರ್ಷ ವಯಸ್ಸಿನ ನಂತರವೇ ಸ್ನಾಯುಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ವಯಸ್ಸಿನೊಂದಿಗೆ ಸ್ನಾಯುಗಳು ಏಕೆ ದುರ್ಬಲವಾಗುತ್ತವೆ?

ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆನ್ ಏಜಿಂಗ್ (NIA) ಪ್ರಕಾರ, ವಯಸ್ಸು ಹೆಚ್ಚಾದಂತೆ ಸ್ನಾಯುಗಳ ಪ್ರಮಾಣ ಮತ್ತು ಬಲ ಕ್ರಮೇಣ ಕಡಿಮೆಯಾಗುತ್ತದೆ. ಈ ಸ್ಥಿತಿಯನ್ನು ಸಾರ್ಕೋಪೀನಿಯಾ (Sarcopenia) ಎಂದು ಕರೆಯಲಾಗುತ್ತದೆ.

  • ಸ್ನಾಯುಗಳ ದುರ್ಬಲತೆಯಿಂದ, ನಡೆಯಲು ಕಷ್ಟವಾಗಬಹುದು
  • ಮೆಟ್ಟಿಲು ಹತ್ತುವುದು ಕಠಿಣವಾಗಬಹುದು
  • ಕುರ್ಚಿಯಿಂದ ಏಳಲು ತೊಂದರೆಯಾಗಬಹುದು
  • ಭಾರವಾದ ವಸ್ತುಗಳನ್ನು ಎತ್ತಲು ಸಾಧ್ಯವಾಗದೇ ಇರಬಹುದು
  • ಸ್ನಾಯುಗಳ ದುರ್ಬಲತೆಯಿಂದ ಮೂಳೆ ಮುರಿತ, ಆಸ್ಟಿಯೋಪೊರೋಸಿಸ್ (Osteoporosis) ಹಾಗೂ ದೀರ್ಘಕಾಲದ
  • ಅಂಗವೈಕಲ್ಯದ ಅಪಾಯವೂ ಹೆಚ್ಚಾಗಬಹುದು.

ಸ್ನಾಯುಗಳು ದುರ್ಬಲವಾಗುತ್ತಿರುವ ಸೂಚನೆಗಳು;

  • ದೇಹದಲ್ಲಿ ನಿರಂತರ ದೌರ್ಬಲ್ಯ
  • ಮೆಟ್ಟಿಲು ಹತ್ತಲು ಕಷ್ಟವಾಗುವುದು
  • ಭಾರ ಎತ್ತಲು ಶಕ್ತಿ ಕಡಿಮೆಯಾಗುವುದು
  • ನಡೆಯುವ ವೇಗ ನಿಧಾನವಾಗುವುದು
  • ಕುರ್ಚಿಯಿಂದ ಏಳಲು ಹೆಚ್ಚು ಪ್ರಯತ್ನ ಬೇಕಾಗುವುದು
  • ಆಗಾಗ ಸಮತೋಲನ ತಪ್ಪಿ ಬೀಳುವುದು
  • ದೈನಂದಿನ ಕೆಲಸಗಳನ್ನು ಮಾಡಲು ಕಷ್ಟವಾಗುವುದು

ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಸ್ನಾಯುಗಳನ್ನು ಬಲವಾಗಿಡಲು ಏನು ಮಾಡಬೇಕು?

ನಿಯಮಿತ ಸ್ಟ್ರೆಂಗ್ತ್ ಟ್ರೈನಿಂಗ್ ಮಾಡಿ: ವಾರಕ್ಕೆ ಕನಿಷ್ಠ 2– 3 ದಿನ ಹಗುರವಾದ Strength Training ಅಥವಾ Resistance Exercise ಮಾಡುವುದು ಸ್ನಾಯುಗಳ ಬಲವನ್ನು ಹೆಚ್ಚಿಸಲು ಸಹಕಾರಿ.

ಸಾಕಷ್ಟು ಪ್ರೋಟೀನ್ ಸೇವಿಸಿ: ಆಹಾರದಲ್ಲಿ ಬೇಳೆಕಾಳುಗಳು, ಹಾಲು, ಮೊಸರು, ಪನೀರ್, ಮೊಟ್ಟೆ, ಮೀನು, ಸೋಯಾ ಕಾಳುಗಳು.

ದೈಹಿಕ ಚಟುವಟಿಕೆ ಹೆಚ್ಚಿಸಿ: ಒಂದೇ ಜಾಗದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳಬೇಡಿ. ಪ್ರತಿದಿನ 30–45 ನಿಮಿಷ ನಡೆಯುವುದು ಅಥವಾ ಸಣ್ಣ ವ್ಯಾಯಾಮ ಮಾಡುವುದು ಉತ್ತಮ. ಜೊತೆಗೆ ಸರಿಯಾಗಿ 7–8 ಗಂಟೆ ನಿದ್ರೆ ಮಾಡುವುದು ಕೂಡ ಅತ್ಯಗತ್ಯ.

ಸ್ನಾಯುಗಳ ಆರೋಗ್ಯ ಕೇವಲ ವ್ಯಾಯಾಮದಿಂದ ಮಾತ್ರವಲ್ಲ, ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಮರ್ಪಕ ಪ್ರಮಾಣದಲ್ಲಿ ದೊರಕುವುದರಿಂದಲೂ ಉತ್ತಮವಾಗಿರುತ್ತದೆ. ದೀರ್ಘಕಾಲ ಹಾಸಿಗೆಯಲ್ಲೇ ಇರುವವರು ಅಥವಾ ದೈಹಿಕ ಚಟುವಟಿಕೆ ಕಡಿಮೆ ಇರುವವರಲ್ಲಿ ಸ್ನಾಯು ಕ್ಷೀಣಿಸುವ ಅಪಾಯ ಹೆಚ್ಚು. ಇತ್ತೀಚಿನ ಅಧ್ಯಯನಗಳ ಪ್ರಕಾರ, 30 ವರ್ಷಗಳ ನಂತರ ಪ್ರತೀ ದಶಕದಲ್ಲಿ ಸ್ನಾಯುಗಳ ಪ್ರಮಾಣ ಕ್ರಮೇಣ ಕಡಿಮೆಯಾಗತೊಡಗುತ್ತದೆ. ಆದ್ದರಿಂದ ಮಧ್ಯವಯಸ್ಸಿನಿಂದಲೇ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯಾಯಾಂಗದ ಅಧಿಕಾರಿಗಳು ಸರ್ಕಾರಿ ನೌಕರರಲ್ಲ; ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಳದ ಕುರಿತು ಸುಪ್ರೀಂ ಕೋರ್ಟ್ ಅಭಿಮತ – Kannada News | Judicial Officers are Not Government Servants Supreme Court Weighs On Raising District Judges Retirement Age

ನವದೆಹಲಿ, ಆಗಸ್ಟ್ 6: ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಪರಿಶೀಲಿಸುತ್ತಿರುವ ಸುಪ್ರೀಂ ಕೋರ್ಟ್ (Suprmee Court) ಈ ಬಗ್ಗೆ ವಿಚಾರಣೆ ವೇಳೆ ಇಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. “ನ್ಯಾಯಾಂಗದ ಅಧಿಕಾರಿಗಳು ಸರ್ಕಾರಿ ನೌಕರರಲ್ಲ, ಅವರು ವಿಶಿಷ್ಟ ಮತ್ತು ಪ್ರತ್ಯೇಕ ವರ್ಗಕ್ಕೆ ಸೇರಿದವರು” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳ ನಿವೃತ್ತಿ ವಯೋಮಿತಿ ಹೆಚ್ಚಳದ ಪ್ರಸ್ತಾಪಕ್ಕೆ ಕೆಲವು ರಾಜ್ಯ ಸರ್ಕಾರಗಳು ಎತ್ತಿದ್ದ ಆಕ್ಷೇಪಣೆಗಳಲ್ಲಿ ಒಂದನ್ನು ಪರಿಶೀಲಿಸುವಾಗ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ಹೇಳಿಕೆ ನೀಡಿದೆ.

ತಮ್ಮ ರಾಜ್ಯಗಳಲ್ಲಿ ಸರ್ಕಾರಿ ನೌಕರರು ಕಡಿಮೆ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ ಎಂಬ ಕಾರಣಕ್ಕೆ ಕೆಲವು ರಾಜ್ಯಗಳು ಈ ಪ್ರಸ್ತಾಪವನ್ನು ವಿರೋಧಿಸಿವೆ ಎಂದು ಸುಪ್ರೀಂ ಕೋರ್ಟ್​ಗೆ ತಿಳಿಸಲಾಯಿತು. ಇದರ ಜೊತೆಗೆ ನಿವೃತ್ತಿ ವಯಸ್ಸಿನ ಹೆಚ್ಚಳದಿಂದ ಹೆಚ್ಚುವರಿ ಆರ್ಥಿಕ ಹೊರೆಯಾಗುವ ಸಾಧ್ಯತೆಯನ್ನು ಸಹ ರಾಜ್ಯಗಳು ಉಲ್ಲೇಖಿಸಿದ್ದವು. ಇದರಲ್ಲಿ ಮೊದಲ ವಾದವನ್ನು ತಳ್ಳಿಹಾಕಿದ ನ್ಯಾಯಪೀಠವು, ನ್ಯಾಯಾಂಗದ ಅಧಿಕಾರಿಗಳನ್ನು ಸಂವಿಧಾನಾತ್ಮಕ ಚೌಕಟ್ಟಿನಡಿಯಲ್ಲಿ ರಾಜ್ಯ ಸರ್ಕಾರಗಳೇ ನೇಮಕ ಮಾಡಿದರೂ ಅವರು ಪ್ರತ್ಯೇಕ ವರ್ಗಕ್ಕೆ ಸೇರುತ್ತಾರೆ ಎಂದು ಹೇಳಿದೆ.

“ನ್ಯಾಯಾಂಗ ಅಧಿಕಾರಿಗಳು ಸರ್ಕಾರಿ ನೌಕರರಲ್ಲ. ಸಂವಿಧಾನಾತ್ಮಕ ಯೋಜನೆಯಡಿ ರಾಜ್ಯ ಸರ್ಕಾರವು ಅವರನ್ನು ನೇಮಕ ಮಾಡಿದರೂ ಅವರು ವಿಶಿಷ್ಟ ಮತ್ತು ಪ್ರತ್ಯೇಕ ವರ್ಗಕ್ಕೆ ಸೇರುತ್ತಾರೆ” ಎಂದು ನ್ಯಾಯಪೀಠ ಹೇಳಿದೆ. ವೈದ್ಯರು ಮತ್ತು ಪ್ರಾಧ್ಯಾಪಕರು ಸೇರಿದಂತೆ ವಿವಿಧ ವೃತ್ತಿಪರ ವರ್ಗಗಳಿಗೆ ಈಗಾಗಲೇ ವಿಭಿನ್ನ ನಿವೃತ್ತಿ ವಯಸ್ಸು ಜಾರಿಯಲ್ಲಿದೆ ಎಂಬುದನ್ನು ಪ್ರಸ್ತಾಪಿಸಿದ ನ್ಯಾಯಪೀಠವು, ವೃತ್ತಿಪರರ ನಿವೃತ್ತಿ ವಯಸ್ಸನ್ನು ನಿರ್ಧರಿಸುವಲ್ಲಿ ಅನುಭವದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿತು.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ 96,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ: 10,000 ಕೇಸ್‌ಗಳು ಒಂದು ದಶಕದಿಂದ ಇತ್ಯರ್ಥವಾಗಿಲ್ಲ

ನಿವೃತ್ತಿ ವಯಸ್ಸು ಹೆಚ್ಚಿಸುವುದರಿಂದ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತದೆ ಎಂಬ ರಾಜ್ಯಗಳ ಮತ್ತೊಂದು ಆಕ್ಷೇಪಣೆಯನ್ನೂ ನ್ಯಾಯಪೀಠವು ನಿರಾಕರಿಸಿದೆ. ನ್ಯಾಯಾಂಗ ಅಧಿಕಾರಿಯೊಬ್ಬರು ನಿವೃತ್ತರಾದಾಗ ಅವರಿಗೆ ನಿವೃತ್ತಿ ಸೌಲಭ್ಯಗಳು ಮತ್ತು ಪಿಂಚಣಿ ನೀಡಬೇಕಾಗುತ್ತದೆ. ಜೊತೆಗೆ ಖಾಲಿಯಾದ ಹುದ್ದೆಯನ್ನು ಭರ್ತಿ ಮಾಡಿ ಹೊಸ ಅಧಿಕಾರಿಗೆ ವೇತನ ನೀಡಬೇಕಾಗುತ್ತದೆ. ಆದ್ದರಿಂದ ಅನುಭವಸ್ಥ ನ್ಯಾಯಾಂಗ ಅಧಿಕಾರಿಯ ಸೇವೆಯನ್ನು ಮುಂದುವರಿಸುವುದರಿಂದ ಆರ್ಥಿಕ ಹೊಣೆಗಾರಿಕೆ ಕಡಿಮೆಯಾಗಬಹುದು ಎಂದು ಸುಪ್ರೀಂಕೋರ್ಟ್ ಅಭಿ್ರಾಯಪಟ್ಟಿದೆ.

ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದನ್ನು ವಿರೋಧಿಸಿ ರಾಜ್ಯ ಸರ್ಕಾರಗಳು ನೀಡಿದ ಎರಡೂ ಕಾರಣಗಳು ಸಮರ್ಥನೀಯವಲ್ಲ ಎಂದು ಹೇಳಿದ ನ್ಯಾಯಪೀಠ, ನ್ಯಾಯಾಂಗದ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಈ ಪ್ರಸ್ತಾಪದ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಜುಲೈ 22ರಂದು ಹೈಕೋರ್ಟ್‌ಗಳಿಗೆ ಸೂಚಿಸಿತ್ತು. ಮಧ್ಯಂತರ ವ್ಯವಸ್ಥೆಯಾಗಿ, ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಹೈಕೋರ್ಟ್ ವಯೋಮಿತಿ ಹೆಚ್ಚಳಕ್ಕೆ ಒಪ್ಪಿಕೊಂಡಲ್ಲಿ ನ್ಯಾಯಾಂಗ ಅಧಿಕಾರಿಗಳು 60 ವರ್ಷಗಳ ನಂತರವೂ ಸೇವೆಯಲ್ಲಿ ಮುಂದುವರಿಯಬಹುದು ಎಂದು ಹೇಳಿತ್ತು.

ಇದನ್ನೂ ಓದಿ: TET Deadline Extended: ಸರ್ಕಾರಿ ಶಾಲೆ ಶಿಕ್ಷಕರಿಗೆ ‘ಟಿಇಟಿ’ ಕಡ್ಡಾಯ; ಸುಪ್ರೀಂ ಕೋರ್ಟ್‌ನಿಂದ ಗಡುವು ವಿಸ್ತರಣೆ

ಬುಧವಾರದ ವಿಚಾರಣೆಯ ಸಂದರ್ಭದಲ್ಲಿ, ತೆಲಂಗಾಣ ರಾಜ್ಯವು ನ್ಯಾಯಾಂಗದ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 61 ವರ್ಷಕ್ಕೆ ಹೆಚ್ಚಿಸಿದೆ ಎಂದು ಪೀಠಕ್ಕೆ ತಿಳಿಸಲಾಯಿತು. ತಮಿಳುನಾಡು ಇದನ್ನು 61ಕ್ಕೆ ಹೆಚ್ಚಿಸಲು ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದರೆ, ಮಧ್ಯಪ್ರದೇಶ ತನ್ನ ಹೈಕೋರ್ಟ್ ಪೂರ್ಣ ಪೀಠದ ಶಿಫಾರಸಿನ ಆಧಾರದ ಮೇಲೆ ಈ ಪ್ರಸ್ತಾಪವನ್ನು ಪರಿಶೀಲಿಸಲು ಸಿದ್ಧವಿದೆ ಎಂದು ಹೇಳಿದೆ.

ಆರ್ಥಿಕ ಹೊರೆಗಳನ್ನು ಉಲ್ಲೇಖಿಸಿ ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ನಾಗಾಲ್ಯಾಂಡ್ ಈ ಪ್ರಸ್ತಾಪವನ್ನು ವಿರೋಧಿಸಿವೆ. ಆದರೆ, ಅಸ್ಸಾಂ ಮತ್ತು ದೆಹಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹೆಚ್ಚಿನ ಸಮಯ ಕೋರಿವೆ.

ಎರಡು ವಾರಗಳ ಒಳಗಾಗಿ ಮರುಪರಿಶೀಲಿಸಲು ನಿರ್ದೇಶನ:
ಆಕ್ಷೇಪ ವ್ಯಕ್ತಪಡಿಸಿರುವ ಎಲ್ಲಾ ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರ ನಿಯಮಗಳಿಂದ ಸ್ವತಂತ್ರವಾಗಿ, ಈ ಪ್ರಸ್ತಾಪವನ್ನು ಮತ್ತೊಮ್ಮೆ ತುರ್ತಾಗಿ ಮರುಪರಿಶೀಲಿಸಬೇಕು ಮತ್ತು 2 ವಾರಗಳ ಒಳಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಸಂಬಂಧಪಟ್ಟ ಹೈಕೋರ್ಟ್‌ಗಳು ವಿಭಿನ್ನ ಅಭಿಪ್ರಾಯ ಹೊಂದಿದ್ದರೂ ಸಹ ರಾಜ್ಯ ಸರ್ಕಾರಗಳು ನಿವೃತ್ತಿ ವಯಸ್ಸು ಹೆಚ್ಚಿಸಲು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬಹುದು, ಹೈಕೋರ್ಟ್‌ಗಳ ಆಕ್ಷೇಪಣೆಗಳನ್ನು ಸುಪ್ರೀಂ ಕೋರ್ಟ್ ಸೂಕ್ತ ಸಮಯದಲ್ಲಿ ಪರಿಶೀಲಿಸಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

RRB Recruitment 2026: ರೈಲ್ವೆಯಲ್ಲಿ ನೇಮಕಾತಿ; 4,098 ಜೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ – Kannada News | RRB JE Recruitment 2026: 4098 Junior Engineer & Other Vacancies Announced, Apply Now

ಭಾರತೀಯ ರೈಲ್ವೆಯಲ್ಲಿ ನೇಮಕಾತಿ
Image Credit source: Getty Images

ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಮತ್ತೊಂದು ಬೃಹತ್ ನೇಮಕಾತಿ ಅಧಿಸೂಚನೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ದೇಶಾದ್ಯಂತ ಇರುವ ಎಲ್ಲಾ ರೈಲ್ವೆ ವಲಯಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಮಂಡಳಿ (RRB) ಇತ್ತೀಚೆಗೆ ಕೇಂದ್ರೀಕೃತ ಉದ್ಯೋಗ ಕಿರು ಅಧಿಸೂಚನೆಯನ್ನು (CGL 04/2026) ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 4,098 ಜೂನಿಯರ್ ಎಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್, ಹಾಗೂ ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಅರ್ಹತೆ, ವಯೋಮಿತಿ ಮತ್ತು ವೇತನ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಎಂಜಿನಿಯರಿಂಗ್ ಡಿಪ್ಲೊಮಾ, ಬಿ.ಇ/ಬಿ.ಟೆಕ್ ಪದವಿ ಅಥವಾ ಬಿ.ಎಸ್ಸಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು 18 ರಿಂದ 33 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಇತರ ಭತ್ಯೆಗಳ ಜೊತೆಗೆ ತಿಂಗಳಿಗೆ 35,400ರೂ. ಆರಂಭಿಕ ಮೂಲ ವೇತನ ದೊರೆಯಲಿದೆ. ಹುದ್ದೆಗಳ ಪ್ರಾದೇಶಿಕವಾರು ವಿವರ, ಶೈಕ್ಷಣಿಕ ಅರ್ಹತೆಗಳು ಹಾಗೂ ಪಠ್ಯಕ್ರಮದ ಕುರಿತು ಪೂರ್ಣ ಅಧಿಸೂಚನೆ ಬಂದ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಹಂತ-1 ಮತ್ತು ಹಂತ-2 ರ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗಳು (CBT), ಮೂಲ ಪ್ರಮಾಣಪತ್ರಗಳ ಪರಿಶೀಲನೆ ಹಾಗೂ ರೈಲ್ವೆ ವೈದ್ಯಕೀಯ (Medical Examination) ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ವಿವರವಾದ ಪೂರ್ಣ ಅಧಿಸೂಚನೆ ಬಿಡುಗಡೆ ದಿನಾಂಕ: 13 ಆಗಸ್ಟ್ 2026
  • ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ: 14 ಆಗಸ್ಟ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಸೆಪ್ಟೆಂಬರ್ 2026
  • CBT-1 ಲಿಖಿತ ಪರೀಕ್ಷೆಯ ದಿನಾಂಕ: ಶೀಘ್ರದಲ್ಲೇ ಘೋಷಿಸಲಾಗುವುದು

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ರಸ್ತೆ, ಚರಂಡಿ, ಪಿಂಚಣಿಯೂ ಇಲ್ಲ: ಬರ ಅಧ್ಯಯನಕ್ಕೆ ಬಂದ ಸಚಿವರನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು – Kannada News | Puttarangashetty Tasked by Ranganathapura Women on Infrastructure Deficiencies

ಚಾಮರಾಜನಗರ, ಆ.6: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ಬರ ಅಧ್ಯಯನಕ್ಕೆ ಬಂದಿದ್ದ ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಸ್ಥಳೀಯ ಮಹಿಳೆಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳ ತೀವ್ರ ಕೊರತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ಸಚಿವರನ್ನು ನೇರವಾಗಿ ಪ್ರಶ್ನಿಸಿದರು. ಗ್ರಾಮದಲ್ಲಿ ರಸ್ತೆಗಳು ಸರಿ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ, ಬಸ್ ಸೌಲಭ್ಯದ ಕೊರತೆ ಇದೆ ಎಂದು ಮಹಿಳೆಯರು ದೂರಿದರು. ಕುಡಿಯುವ ನೀರಿನ ಸಮಸ್ಯೆಯೂ ಇರುವುದಾಗಿ ತಿಳಿಸಿದ ಗ್ರಾಮಸ್ಥರು, ಕೇವಲ ಕುಡಿಯುವ ನೀರು ಹೊರತುಪಡಿಸಿ ಬೇರೆ ಯಾವುದೇ ಸೌಕರ್ಯಗಳಿಲ್ಲ ಎಂದು ಆಪಾದಿಸಿದರು. “ನಮಗೆ ಇಷ್ಟು ಮಾಡಿಕೊಡಿ” ಎಂದು ಸಚಿವರನ್ನು ಮನವಿ ಮಾಡಿದರು. ಮಹಿಳೆಯರು ತಮ್ಮ ಸಮಸ್ಯೆಗಳನ್ನು ಒಂದೊಂದಾಗಿ ವಿವರಿಸುತ್ತಾ, ಪಿಂಚಣಿ ಹಣ ತಲುಪದಿರುವ ಬಗ್ಗೆಯೂ ದೂರಿದರು. ಡಿಸಿ ಆಫೀಸ್ ಮತ್ತು ತಾಲೂಕು ಆಫೀಸ್‌ಗಳಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. “ಎರಡು ಮಕ್ಕಳವ್ವ, ಓಡಾಡಕ್ಕ ನೆಮ್ಮದಿ ಇಲ್ಲ” ಎಂದು ಒಬ್ಬ ಮಹಿಳೆ ತಮ್ಮ ಸ್ಥಿತಿಯನ್ನು ವಿವರಿಸಿದರು. ಗ್ರಾಮಸ್ಥರ ಆಕ್ರೋಶಭರಿತ ಪ್ರಶ್ನೆಗಳಿಂದ ಸಚಿವ ಪುಟ್ಟರಂಗಶೆಟ್ಟಿ ಅವರು ತಬ್ಬಿಬ್ಬಾದರು. ಸ್ಥಳದಲ್ಲಿ ನೆರೆದಿದ್ದ ಮಹಿಳೆಯರು ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಂತೆ ಸಚಿವರಿಗೆ ಬಲವಾಗಿ ಆಗ್ರಹಿಸಿದರು. ಈ ಘಟನೆಯು ಗ್ರಾಮಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಬೆಳಕು ಚೆಲ್ಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version