ತಪ್ಪಿದ ಭಾರೀ ದುರಂತ; ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್ – Kannada News | SpiceJet Plane Hits parked Akasa Aircraft At Delhi Airport

ನವದೆಹಲಿ, ಏಪ್ರಿಲ್ 16: ದೆಹಲಿ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಆಕಾಶ ಏರ್ ವಿಮಾನಕ್ಕೆ ಸ್ಪೈಸ್‌ಜೆಟ್ ವಿಮಾನ (SpiceJet Plane) ಡಿಕ್ಕಿ ಹೊಡೆದ ಕಾರಣದಿಂದ ಎರಡೂ ಜೆಟ್‌ಗಳಿಗೆ ಹಾನಿಯಾಗಿದ್ದು, ಈ ಬಗ್ಗೆ ತನಿಖೆ ಆರಂಭವಾಗಿದೆ. ಸ್ಪೈಸ್‌ಜೆಟ್ ಬಿ737-700 ವಿಮಾನದ ಬಲಭಾಗದ ರೆಕ್ಕೆಗೆ ಹಾನಿಯಾಗಿದೆ. “ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಇಳಿಸಲಾಯಿತು. ನಮ್ಮ ತಂಡಗಳು ನಮ್ಮ ಪ್ರಯಾಣಿಕರನ್ನು ಹೈದರಾಬಾದ್‌ಗೆ ಆದಷ್ಟು ಬೇಗ ಕಳುಹಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ” ಎಂದು ಸ್ಪೈಸ್​ಜೆಟ್ ವಕ್ತಾರರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡಿಕೆ ತೋಟದ ಬಳಿ ಮಹಿಳೆಯ ತಲೆ ಬುರುಡೆ, ಮೂಳೆಗಳು ಪತ್ತೆ: ಅಕ್ರಮ ಸಂಬಂಧಕ್ಕೆ ನಡೆಯಿತಾ ಹತ್ಯೆ? – Kannada News | Nelamangala: Missing Woman Skeleton Found; Illicit Affair Suspected Murder Case

ನೆಲಮಂಗಲ, ಏಪ್ರಿಲ್​ 16: ಮಹಿಳೆಯೊಬ್ಬರ (Woman) ಅಸ್ಥಿಪಂಜರ (Skeleton) ಪತ್ತೆಯಾದ ಘಟನೆ ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಹಳೇ ನಿಜಗಲ್‌ನಲ್ಲಿ ಗ್ರಾಮದಲ್ಲಿ ನಡೆದಿದೆ. ಅಡಿಕೆ ತೋಟದ ಪಕ್ಕದಲ್ಲಿ ಮಹಿಳೆಯ ತಲೆ ಬುರುಡೆ, ಕೈ-ಕಾಲುಗಳ ಕೆಲ ಮೂಳೆಗಳು ಪತ್ತೆ ಆಗಿವೆ. ಯಮುನಾ (35) ಮೃತ ಮಹಿಳೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಸದ್ಯ ಇವರ ಅಸ್ಥಿಪಂಜರ ಪತ್ತೆಯಾಗಿದೆ. ಅಕ್ರಮ ಸಂಬಂಧದ ಹಿನ್ನೆಲೆ ಈ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ನಡೆದಿದ್ದೇನು?

ಮೃತ ಮಹಿಳೆ ಯಮುನಾ ತುಮಕೂರು ನಿವಾಸಿ. 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ಎಂಬುವವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ, ಎಂಟು ವರ್ಷಗಳ ಹಿಂದೆ ರಾಘವೇಂದ್ರ ಎಂಬಾತನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ ಯಮುನಾ, ಪತಿಯನ್ನು ಬಿಟ್ಟು ಐದು ವರ್ಷಗಳ ಕಾಲ ಆತನೊಂದಿಗೆ ದೊಡ್ಡಬಳ್ಳಾಪುರದಲ್ಲಿ ವಾಸವಿದ್ದರು.

ಇದನ್ನೂ ಓದಿ: ವಿಜಯಪುರದಲ್ಲೊಂದು ಅಮಾನವೀಯ ಘಟನೆ: ನೋಡಲು ತನ್ನಂತಿಲ್ಲ ಎಂದು ಮಗನನ್ನೇ ಕೊಂದ ತಂದೆ

ತನ್ನ ತಪ್ಪಿನ ಅರಿವಾಗಿ ಎರಡು ವರ್ಷಗಳ ಹಿಂದೆ ಯಮುನಾ ಮರಳಿ ಪತಿಯ ಮನೆಗೆ ಬಂದು ಜೀವನ ನಡೆಸುತ್ತಿದ್ದರು. ಆದರೆ, ಕಳೆದ ಮಾರ್ಚ್ 21ರಂದು ಯಮುನಾ ಹುಟ್ಟುಹಬ್ಬ ಇತ್ತು. ಹೀಗಾಗಿ ಭೇಟಿ ಮಾಡುವಂತೆ ರಾಘವೇಂದ್ರ ಒತ್ತಾಯಿಸಿದ್ದ. ಕೆಲಸ ಮುಗಿಸಿ ಆತನನ್ನು ಭೇಟಿ ಮಾಡಲು ಹೋದ ಯಮುನಾ ಅಂದಿನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತುಮಕೂರು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು.

ಅಸ್ಥಿಪಂಜರವಾಗಿ ಪತ್ತೆ

ಹಳೇ ನಿಜಗಲ್ ಗ್ರಾಮದ ಅಡಿಕೆ ತೋಟದ ಪಕ್ಕದಲ್ಲಿ ತಲೆಬುರುಡೆ ಹಾಗೂ ಕೈಕಾಲುಗಳ ಮೂಳೆಗಳು ಪತ್ತೆಯಾಗಿವೆ. ಮೂಳೆಗಳ ಪಕ್ಕದಲ್ಲೇ ಮಹಿಳೆಯ ಬ್ಯಾಗ್ ಹಾಗೂ ಐಡಿ ಕಾರ್ಡ್ ಸಿಕ್ಕಿದ್ದರಿಂದ, ಯಮುನಾ ಎಂದು ಗುರುತಿಸಲಾಗಿದೆ. ಪೊಲೀಸರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು: 6 ಸುತ್ತು ಫೈರಿಂಗ್ ಮಾಡಿ ಗ್ರಾ.ಪಂ ಸದಸ್ಯನ ಹತ್ಯೆ

ಸ್ಥಳಕ್ಕೆ ಡಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ರಾಘವೇಂದ್ರ ಎಂಬಾತನೇ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಅಡಿಕೆ ತೋಟದ ಬಳಿ ಎಸೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವರದಿ: ಮಂಜುನಾಥ್​

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕುರಿ ಮೈತೊಳೆಯಲು ಕೆರೆಗೆ ಹೋಗಿದ್ದ ಸಹೋದರರು ನೀರುಪಾಲು: ಬದುಕು ದುರಂತ ಅಂತ್ಯ – Kannada News | Two Brothers Drown in Javagal Lake While Washing Sheep

ಹಾಸನ, ಏಪ್ರಿಲ್​ 16: ಶಾಲೆಗೆ ರಜೆಯಿದ್ದ ಕಾರಣ ಕುರಿ ತೊಳೆಯಲು ತೆರಳಿದ್ದ ಇಬ್ಬರು ಸಹೋದರರು ಕೆರೆಯಲ್ಲಿ ಮುಳುಗಿ (drowning) ಸಾವನ್ನಪ್ಪಿರುವಂತಹ (death) ದಾರುಣ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮದಲ್ಲಿ ನಡೆದಿದೆ. ಇಮ್ರಾನ್ (15) ಮತ್ತು ಯಾಸಿನ್ (13) ಮೃತ ದುರ್ದೈವಿಗಳು. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ನಡೆದಿದ್ದೇನು?

ಜಾವಗಲ್ ಗ್ರಾಮದ ಇಮ್ರಾನ್ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಯಾಸಿನ್ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಬೇಸಿಗೆ ರಜೆ ಹಿನ್ನೆಲೆ ಮನೆಯಲ್ಲಿದ್ದ ಬಾಲಕರು, ತಾವು ಸಾಕಿದ್ದ ಕುರಿಗಳನ್ನು ಮೈತೊಳೆಯಲೆಂದು ನಿನ್ನೆ ಸಂಜೆ ಗ್ರಾಮದ ಸಮೀಪವಿರುವ ಜಾವಗಲ್ ದೊಡ್ಡಕೆರೆಗೆ ತೆರಳಿದ್ದರು.

ಇದನ್ನೂ ಓದಿ: ಅರಹಳ್ಳಿ ಕೆರೆಯಲ್ಲಿ ದುರಂತ: ಮಕ್ಕಳನ್ನು ರಕ್ಷಿಸಲು ಹೋಗಿ ಜೀವ ತೆತ್ತ ಮಹಿಳೆಯರು

ಕುರಿಗಳ ಮೈತೊಳೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ಆಳದ ಸ್ಥಳಕ್ಕೆ ಬಿದ್ದಿದ್ದಾರೆ. ಒಬ್ಬರನ್ನು ರಕ್ಷಿಸಲು ಹೋಗಿ ಮತ್ತೊಬ್ಬರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ಕುರಿಗಾಹಿಗಳು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸತತ ಕಾರ್ಯಾಚರಣೆಯ ಮೂಲಕ ಬಾಲಕರ ಶವಗಳನ್ನು ಕೆರೆಯಿಂದ ಹೊರತೆಗೆಯಲಾಗಿದೆ.

ಚಿಗುರು ಮೀಸೆಯ ಸಹೋದರರು ಸಾವನ್ನಪ್ಪಿರುವುದು ಜಾವಗಲ್ ಗ್ರಾಮದಲ್ಲಿ ಮೌನ ಆವರಿಸುವಂತೆ ಮಾಡಿದೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಿನಿ ಬಸ್ ಹಾಗೂ ಟ್ರ್ಯಾಕ್ಟರ್ ಪರಸ್ಪರ ಡಿಕ್ಕಿ: ಓರ್ವ ಮಹಿಳೆ ಸಾವು

ಮಿನಿ ಬಸ್ ಹಾಗೂ ಟ್ರ್ಯಾಕ್ಟರ್ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದರೆ ಆರು ಜನರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಹೊರವಲಯದ ಆಂಜನೇಯ ದೇವಸ್ಥಾನ ಬಳಿ ನಡೆದಿದೆ. ರತ್ನಮ್ಮ (32) ಮೃತ ಮಹಿಳೆ.

ಇದನ್ನೂ ಓದಿ: ಜಲ ಕಂಟಕ: ಕರ್ನಾಟಕದಲ್ಲಿ ಸೋಮವಾರ ಒಂದೇ ದಿನ 10 ಮಂದಿ ನೀರು ಪಾಲು

ಇನ್ನು ಗಂಭೀರವಾಗಿ ಗಾಯಗೊಂಡವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ತಿರುಪತಿಯಿಂದ ಕೊಪ್ಪಳ ಕಡೆಗೆ ಮಿನಿ ಬಸ್ ಹೊರಟಿತ್ತು. ಕಂಪ್ಲಿಯಿಂದ ಕುರುಗೋಡು ಕಡೆ ಬರುತ್ತಿದ್ದ ಟ್ರಾಕ್ಟರ್​​ ಡಿಕ್ಕಿ ಹೊಡೆದಿವೆ. ಇಬ್ಬರು ಚಾಲಕರ ನಿರ್ಲಕ್ಷ್ಯದಿಂದಲೇ ಅಪಘಾತ ನಡೆದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಕುರುಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿನಯ್ ಕುಲಕರ್ಣಿ ಕೇಸ್‌ ತೀರ್ಪು ನೀಡಿದ್ದ ಜಡ್ಜ್​ ಸೇರಿ 114 ನ್ಯಾಯಾಧೀಶರ ವರ್ಗಾವಣೆ – Kannada News | Special Court santosh gajanan bhat And Others 114 judge transfer

ಬೆಂಗಳೂರು, (ಏಪ್ರಿಲ್ 16): ಕರ್ನಾಟಕದ ಜಿಲ್ಲಾ, ಸಿವಿಲ್, ಹಿರಿಯ ಸಿವಿಲ್ ನ್ಯಾಯಾಧೀಶರು ಸೇರಿದಂತೆ ಒಟ್ಟು 114 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಪ್ರತಿವರ್ಷ ನಡೆಯುವ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಂತೆ ವರ್ಗಾವಣೆ ಮಾಡಿ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿದ್ದು, ಜೂನ್ 1ರಿಂದ ಹೊಸ ಕಾರ್ಯಭಾರ ವಹಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಇನ್ನು ನಿನ್ನೆ (ಏಪ್ರಿಲ್ 15) ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಕೊಲೆ ಪ್ರಕರಣ ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ಅವರನ್ನೂ ಸಹ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್: ಯಾರಿಗೆ ಜೀವಾವಧಿ? ಯಾರಿಗೆ ರಿಯಾಯಿತಿ? ವಿನಯ್ ಕುಲಕರ್ಣಿಗೆ ನಾಳೆ ಶಿಕ್ಷೆ ಫೈನಲ್

ಧಾರವಾಡದ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ವಿನಯ್ ಕುಲಕರ್ಣಿ ಸೇರಿದಂತೆ 17 ಅಪರಾಧಿಗಳ ಶಿಕ್ಷೆ ಪ್ರಮಾಣ ಪ್ರಕಟಿಸುವ ಒಂದು ದಿನ ಮುನ್ನವೇ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ವರ್ಗಾವಣೆಗೊಂಡಿದ್ದಾರೆ. ಸಂತೋಷ್ ಗಜಾನನ ಭಟ್ ಅವರೇ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ್ದು, ವಿನಯ್ ಕುಲಕರ್ಣಿ ಸೇರಿದಂತೆ ಇತರೆ 17 ಜನರನ್ನು ದೋಷಿ ಎಂದು ತೀರ್ಪು ನೀಡಿದ್ದರು. ಅಲ್ಲದೇ ಇಂದು (ಏಪ್ರಿಲ್ 16) ಶಿಕ್ಷೆ ಪ್ರಮಾಣದ ಬಗ್ಗೆ ವಿಚಾರಣೆ ನಡೆಸಿದ್ದು, ನಾಳೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಮುಂದೂಡಿದ್ದರು. ಇದರ ಮಧ್ಯೆ ಅವರು ವರ್ಗಾವಣೆಯಾಗಿದ್ದು, ನಾಳೆ ಅಪರಾಧಿಗಳಿಗೆ ಅವರು ಶಿಕ್ಷೆ ಪ್ರಮಾಣ ಪ್ರಕಟಿಸುತ್ತಾರಾ ಇಲ್ವಾ ಅಂತ ಸಹಜವಾಗಿಯೇ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಆದ್ರೆ, ಈ ವರ್ಗಾವಣೆಯಲ್ಲಿ ಯಾವುದೇ ಅನುಮಾನಗಳಿಲ್ಲ. ಇದೊಂದು ಸಹಜ ವರ್ಗಾವಣೆಯಾಗಿದ್ದು, ಪ್ರತಿ ವರ್ಷ ಏಪ್ರಿಲ್​ ತಿಂಗಳಲ್ಲಿ ಜಡ್ಜ್​​ಗಳ ವರ್ಗಾವಣೆ ಪ್ರಕ್ರಿಯೆ ನಡೆಯುತ್ತೆ. ಇದರಿಂದ ಸಹಜವಾಗಿಯೇ ಎಲ್ಲಾ ಪ್ರಕರಣಗಳ ಪ್ರಕ್ರಿಯೆಗಳನ್ನು ಹೇಗೆ ಈವರೆಗೆ ನಡೆಸುತ್ತಿದ್ದರೋ ಜೂನ್ 1ರವರೆಗೂ ಹಾಗೇ ನಡೆಸಬಹುದು. ಹೀಗಾಗಿ ನಾಳೆ (ಏಪ್ರಿಲ್ 17) ಕೊಲೆ ಕೇಸ್ ಸಂಬಂಧ ವಿನಯ್ ಕುಲಕರ್ಣಿ ಸೇರಿದಂತೆ 17 ಅಪರಾಧಿಗಳಿಗೆ ಜಡ್ಜ್ ಸಂತೋಷ್ ಗಜಾನನ ಭಟ್ ಅವರೇ ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದಾರೆ.

Source link

MI vs PBKS: ಟಾಸ್ ಗೆದ್ದ ಪಂಜಾಬ್; ರೋಹಿತ್ ಸೇರಿದಂತೆ ಮುಂಬೈ ತಂಡದಲ್ಲಿ 2 ಬದಲಾವಣೆ – Kannada News | MI vs PBKS Playing XI Mumbai Indians vs Punjab Kings Today IPL 2026 match Confirmed playing 11 details with name in Kannada

ಐಪಿಎಲ್‌ನ 19 (IPL 2026) ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ (MI) ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿತು. ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸುವ ಮೂಲಕ ಮುಂಬೈಗೆ ಶುಭಾರಂಭ ಸಿಕ್ಕಿತ್ತು. ಆದಾಗ್ಯೂ, ಅದರ ನಂತರ ಮುಂಬೈ ಸತತ 3 ಸೋಲುಗಳನ್ನು ಎದುರಿಸಬೇಕಾಯಿತು. ಇದೀಗ ಮುಂಬೈ ಇಂಡಿಯನ್ಸ್ ಕಳೆದ ಸೀಸನ್‌ನ ರನ್ನರ್-ಅಪ್ ಪಂಜಾಬ್ ಕಿಂಗ್ಸ್ ತಂಡವನ್ನು ತನ್ನ ಐದನೇ ಪಂದ್ಯದಲ್ಲಿ ಎದುರಿಸುತ್ತಿದೆ. ಪಂಜಾಬ್ ಕಿಂಗ್ಸ್‌ಗೂ ಇದು ಐದನೇ ಪಂದ್ಯವಾಗಿದೆ. ಈ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ (PBKS) ಇದುವರೆಗೆ ಅಜೇಯವಾಗಿದೆ. ಆದ್ದರಿಂದ, ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್‌ನಿಂದ ಕಠಿಣ ಸವಾಲನ್ನು ಎದುರಿಸಲಿದೆ. ಮುಂಬೈಕರ್ ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುನ್ನಡೆಸಿದರೆ, ಹಾರ್ದಿಕ್ ಪಾಂಡ್ಯ ಮುಂಬೈ ನಾಯಕರಾಗಿದ್ದಾರೆ.

ಟಾಸ್ ಗೆದ್ದ ಪಂಜಾಬ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್‌ ಮಾಡಲಿದೆ. ಇದರೊಂದಿಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಪಂಜಾಬ್ ತಂಡ ತನ್ನ ಗೆಲುವಿನ ಸಂಯೋಜನೆಯನ್ನು ಬದಲಿಸಿಲ್ಲ. ಅಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಇಂದು ಆಡುತ್ತಿದೆ. ಇತ್ತ ಮುಂಬೈ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ಮಾಜಿ ನಾಯಕ ರೋಹಿತ್ ಶರ್ಮಾ ಗಾಯದಿಂದ ಈ ಪಂದ್ಯವನ್ನು ಆಡುತ್ತಿಲ್ಲ. ಹಾಗೆಯೇ ಮಿಚೆಲ್ ಸ್ಯಾಂಟ್ನರ್ ಕೂಡ ಈ ಪಂದ್ಯವನ್ನು ಆಡುತ್ತಿಲ್ಲ.

ಮುಖಾಮುಖಿ ದಾಖಲೆ

ಪಂಜಾಬ್ ಮತ್ತು ಮುಂಬೈ ನಡುವಿನ 35 ನೇ ಪಂದ್ಯವು ಇಂದು ನಡೆಯುತ್ತಿದೆ. ಎರಡೂ ತಂಡಗಳ ನಡುವಿನ 34 ಪಂದ್ಯಗಳ ಫಲಿತಾಂಶಗಳನ್ನು ನೋಡಿದರೆ, ಎರಡೂ ತಂಡಗಳು ಸಮಾನವಾಗಿ ಬಲಿಷ್ಠವಾಗಿವೆ ಎಂದು ಹೇಳಬಹುದು. ಎರಡೂ ತಂಡಗಳು ತಲಾ 17 ಪಂದ್ಯಗಳನ್ನು ಗೆದ್ದಿವೆ. ಆದ್ದರಿಂದ, ಗುರುವಾರ ಯಾವ ತಂಡ ಗೆದ್ದು ಮುನ್ನಡೆ ಸಾಧಿಸುತ್ತದೆ ಎಂಬುದನ್ನು ನೋಡುವುದು ಮುಖ್ಯವಾಗಿರುತ್ತದೆ.

MI vs PBKS IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್

ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಿಯಾನ್ ರಿಕೆಲ್ಟನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ಶೆರ್ಫೇನ್ ರುದರ್‌ಫೋರ್ಡ್, ನಮನ್ ಧೀರ್, ಮಯಾಂಕ್ ರಾವತ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ.

ಪಂಜಾಬ್ ಕಿಂಗ್ಸ್: ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:14 pm, Thu, 16 April 26

Source link

ಮೈಗ್ರೇನ್ ಇದ್ಯಾ? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ – Kannada News | Are You Making These Migraine Mistakes? Expert Tips

Are You Making These Migraine Mistakes? Expert TipsImage Credit source: Getty Images

ಮೈಗ್ರೇನ್ (Migraine) ಎಂದರೆ ತಲೆನೋವಿನ ಒಂದು ತೀವ್ರ ರೂಪ. ಸಾಮಾನ್ಯವಾಗಿ ಇದರ ಬಗ್ಗೆ ನಿಮಗೆ ತಿಳಿದಿರಬಹುದು, ಕೆಲವರು ಅನುಭವಿಸಿಯೂ ಇರಬಹುದು. ತಲೆಯ ಒಂದು ಭಾಗದಲ್ಲಿ ಸೂಜಿ ಚುಚ್ಚುವಂತೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಇದು ಗಂಟೆಗಳವರೆಗೆ ಅಥವಾ ದಿನಗಳವರೆಗೆ ಕಂಡುಬರಬಹುದು. ಇದು ಕೇವಲ ತಲೆನೋವಷ್ಟೇ ಅಲ್ಲ, ವಾಂತಿ, ವಾಕರಿಕೆ, ಬೆಳಕಿನ ಸಂವೇದನೆ ಮತ್ತು ಶಬ್ದದಿಂದ ತೊಂದರೆಗಳನ್ನು ಉಂಟುಮಾಡುವ ನರಮಂಡಲದ ಸಮಸ್ಯೆಯಾಗಿದೆ. ಹಾಗಾದರೆ ಮೈಗ್ರೇನ್ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು, ದಿನನಿತ್ಯದ ಯಾವ ಅಭ್ಯಾಸ ಈ ರೀತಿಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೈಗ್ರೇನ್ ಏಕೆ ಉಂಟಾಗುತ್ತದೆ?

ತಜ್ಞರ ಪ್ರಕಾರ, ಮೆದುಳಿನಲ್ಲಿ ನಡೆಯುವ ರಾಸಾಯನಿಕ ಬದಲಾವಣೆಗಳು, ವಿಶೇಷವಾಗಿ ಸೆರೋಟೋನಿನ್ ಮಟ್ಟದ ಕುಸಿತ, ನರಮಂಡಲವನ್ನು ಹೆಚ್ಚು ಸಂವೇದನಾಶೀಲವಾಗಿಸುತ್ತದೆ. ಇದರಿಂದ ತಲೆನೋವು ಟ್ರಿಗರ್ ಆಗುತ್ತದೆ. ಒತ್ತಡ, ನಿದ್ರೆಯ ಕೊರತೆ, ಹಾರ್ಮೋನಲ್ ಬದಲಾವಣೆಗಳು, ಹೆಚ್ಚು ಬೆಳಕು, ಶಬ್ದ ಮತ್ತು ಕೆಲವು ಆಹಾರ ಪದಾರ್ಥಗಳು (ಚಾಕೊಲೇಟ್, ಕ್ಯಾಫೀನ್) ಮೈಗ್ರೇನ್ ಹೆಚ್ಚಿಸಲು ಕಾರಣವಾಗುತ್ತವೆ.

ಈ ತಪ್ಪುಗಳು ನೋವನ್ನು ಹೆಚ್ಚಿಸಬಹುದು;

ಸರಿಯಾಗಿ ನಿದ್ರೆ ಮಾಡದಿರುವುದು: ನಿದ್ರೆಯ ಕೊರತೆಯಿಂದ ಮೆದುಳು ವಿಶ್ರಾಂತಿ ಪಡೆಯುವುದಿಲ್ಲ, ಇದರಿಂದ ಮೈಗ್ರೇನ್ ಸಮಸ್ಯೆ ಹೆಚ್ಚಾಗಬಹುದು. ಪ್ರತಿದಿನ 7– 8 ಗಂಟೆ ನಿದ್ರೆ ಮಾಡುವುದು ಅತ್ಯಗತ್ಯ.

ಹೆಚ್ಚು ಶಬ್ದ ಮತ್ತು ಬೆಳಕಿರುವಲ್ಲಿ ಹೋಗುವುದು: ಜೋರಾದ ಶಬ್ದ ಅಥವಾ ಬೆಳಕಿನ ನಡುವೆ ಇರುವುದರಿಂದ ಮೈಗ್ರೇನ್ ಟ್ರಿಗರ್ ಆಗಬಹುದು. ಶಾಂತ ವಾತಾವರಣದಲ್ಲಿ ಸಮಯ ಕಳೆಯುವುದು ಉತ್ತಮ.

ಇದನ್ನೂ ಓದಿ: ಬಿಸಿಲಿಗೆ ಹೋದ ತಕ್ಷಣ ತಲೆನೋವು ಬರುತ್ತಾ? ಹಾಗಿದ್ರೆ ನಿಮಗೆ ಈ ಸಮಸ್ಯೆ ಇದೆ ಎಂದರ್ಥ!

ಖಾಲಿ ಹೊಟ್ಟೆಯಲ್ಲಿ ಹೆಚ್ಚು ಸಮಯ ಇರುವುದು: ದೀರ್ಘಕಾಲ ಆಹಾರ ಸೇವಿಸದಿರುವುದು ದೇಹದ ಶಕ್ತಿ ಮಟ್ಟವನ್ನು ಕುಗ್ಗಿಸುತ್ತದೆ. ಇದರಿಂದ ಮೈಗ್ರೇನ್ ಹೆಚ್ಚಾಗಬಹುದು. ಹಾಗಾಗಿ ನಿಯಮಿತವಾಗಿ ಸಮತೋಲನ ಆಹಾರ ಸೇವಿಸಬೇಕು.

ಹೆಚ್ಚು ಕ್ಯಾಫೀನ್ ಸೇವನೆ: ಹೆಚ್ಚು ಕಾಫಿ ಅಥವಾ ಚಹಾ ಸೇವನೆಯಿಂದ ನಿದ್ರೆಯ ಮಾದರಿ ಬದಲಾಗುತ್ತದೆ, ಇದು ಮೈಗ್ರೇನ್ ಹೆಚ್ಚಿಸಲು ಕಾರಣವಾಗಬಹುದು.

ನಿಯಂತ್ರಣಕ್ಕೆ ಸಲಹೆಗಳು:

ಮೈಗ್ರೇನ್ ನಿಯಂತ್ರಿಸಲು ನಿಯಮಿತ ನಿದ್ರೆ, ಆರೋಗ್ಯಕರ ಆಹಾರ, ಒತ್ತಡ ನಿಯಂತ್ರಣ ಮತ್ತು ವ್ಯಾಯಾಮ ಮುಖ್ಯ. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ಇಲ್ಲವಾದಲ್ಲಿ ಇದು ಒಂದು ದೀರ್ಘಕಾಲದ ಸಮಸ್ಯೆಯಾಗಬಹುದು. ಹಾಗಾಗಿ ಸರಿಯಾದ ಜೀವನಶೈಲಿ ಮತ್ತು ಕೆಲವು ತಪ್ಪುಗಳನ್ನು ತಪ್ಪಿಸುವ ಮೂಲಕ ಇದನ್ನು ನಿಯಂತ್ರಿಸಬಹುದು. ಆರೋಗ್ಯಕರ ಅಭ್ಯಾಸಗಳು ನೋವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಹಲ್ಲೆ ಕೇಸ್ ಕೈಬಿಡಿ: ಅನಂತಕುಮಾರ್ ಹೆಗಡೆ ಮನವಿಗೆ ಸ್ಪಂದಿಸಿದ ಹೈಕೋರ್ಟ್ – Kannada News | Karnataka High Court Relief to BJP Ex MP Anantkuma hegde Son In Car Over Take Case

ಬೆಂಗಳೂರು, (ಏಪ್ರಿಲ್ 16): ದಾಬಸ್​ಪೇಟೆ ಬಳಿ ಕಾರು ಓವರ್‌ಟೇಕಿಂಗ್ ವಿಚಾರಕ್ಕೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಬಂಧಿಸಿದಂತೆ ಬಿಜೆಪಿಯ ಮಾಜಿ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಪುತ್ರನಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪುತ್ರ ಅಶುತೋಷ್ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಗಲಾಟೆ ಪ್ರಕರಣದಿಂದಾಗಿ ಅವರಿಗೆ ಪಾಸ್‌ಪೋರ್ಟ್ ಪಡೆಯಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಿ ಎಂದು ಮಾಜಿ ಸಂಸದ ಅನಂತಕುಮಾರ್ ಹೆಗಡೆ ಹೈಕೋರ್ಟ್​​​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅಶುತೋಷ್ ವಿರುದ್ಧದ ಪ್ರಕರಣದ ವಿಚಾರಣೆಗೆ ತಡೆ ನೀಡಿ ಇಂದು (ಏಪ್ರಿಲ್ 16) ಆದೇಶ ಹೊರಡಿಸಿದೆ.

ದಾಬಸ್​ಪೇಟೆ ಬಳಿ ಕಾರು ಓವರ್‌ಟೇಕಿಂಗ್ ವಿಚಾರಕ್ಕೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್​ನಲ್ಲಿ ಅಶುತೋಷ್​ ಹೆಸರಿಲ್ಲದಿದ್ದರೂ ದೋಷಾರೋಪಪಟ್ಟಿಯಲ್ಲಿ ಸೇರಿಸಲಾಗಿದೆ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಪಾಸ್‌ಪೋರ್ಟ್​ಗೆ ಸಮಸ್ಯೆಯಾಗಲಿದೆ. ಕುಟುಂಬದ ಹಿರಿಯರನ್ನು ನೋಡಲು ವಿದೇಶದಿಂದ ಬಂದಿದ್ದಾಗ ಘಟನೆ ನಡೆದಿದೆ. ಘಟನೆಯಲ್ಲಿ ಅಶುತೋಷ್ ಪಾತ್ರವಿಲ್ಲವೆಂದು ವಕೀಲ ಪವನ್ ಚಂದ್ರ ಶೆಟ್ಟಿ ವಾದ ಮಂಡಿಸಿದರು. ಈ ವಾದ ಆಲಿಸಿದ ಹೈಕೋರ್ಟ್​, ಅಶುತೋಷ್ ವಿರುದ್ಧದ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ. ಇದರಿಂದ ಅನಂತಕುಮಾರ ಹೆಗಡೆ ಪುತ್ರ ಅಶುತೋಷ್​ಗೆ ಮಧ್ಯಂತರ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ: ನೆಲಮಂಗಲ: ಗಲಾಟೆ-ಹಲ್ಲೆ ಆರೋಪ, ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ, ಗನ್​ಮ್ಯಾನ್, ಚಾಲಕನ ವಿರುದ್ಧ ಎಫ್​ಐಆರ್

ಕೋರ್ಟ್​​​ಗೆ ಅನಂತ್ ಕುಮಾರ್ ಹೆಗಡೆ ಮನವಿ ಮಾಡಿದ್ದೇನು?

ತುಮಕೂರಿನ ದಾಬಸ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಅನಂತಕುಮಾರ ಹೆಗಡೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಏಕಸದಸ್ಯ ಪೀಠ ನಡೆಸಿತ್ತು. ವಿದೇಶದಿಂದ ಬಂದಿದ್ದ ಪುತ್ರ ಅಶುತೋಷ್‌, ತನ್ನ ಅಜ್ಜಿಯನ್ನು ಕಾಣಲು ತಂದೆ ಜೊತೆ ಯಲ್ಲಾಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅನ್ಯ ರಾಜ್ಯದ ಕಾರು ಅವರ ಕಾರು ಹಿಂದಿಕ್ಕಲು ಪ್ರಯತ್ನಿಸಿತ್ತು. ಒಮ್ಮೆ ಕಾರಿಗೂ ಡಿಕ್ಕಿ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಅವರ ಅಂಗ ರಕ್ಷಕ ಮತ್ತು ಚಾಲಕ ದೂರುದಾರರ ಜೊತೆ ವಾಗ್ವಾದ ನಡೆಸಿದ್ದರು. ಇದರಲ್ಲಿ ಅನಂತಕುಮಾರ್ ಮತ್ತು ಅವರ ಪುತ್ರ ಅಶುತೋಷ್‌ ಪಾತ್ರ ಇಲ್ಲ ಎಂದು ಅನಂತಕುಮಾರ್ ಹೆಗಡೆ ಪರ ವಕೀಲರು ವಾದಿಸಿದರು.

ಕಾರಿನ ಹಿಂಬದಿ ಸೀಟಲ್ಲಿ ಅಶುತೋಷ್‌ ಕುಳಿತಿದ್ದರು. ಘಟನಾ ಸ್ಥಳಕ್ಕೆ ಅವರು ಬಂದಿಲ್ಲ. ಅವರ ಕಾರಿನ ಮಧ್ಯದ ಸೀಟುಗಳನ್ನು ತೆಗೆದರೆ ಮಾತ್ರ ಹಿಂದಿನ ಸೀಟಿನಲ್ಲಿರುವವರು ಇಳಿಯಲು ಸಾಧ್ಯ. ಹೀಗಿದ್ದರೂ, ತನಿಖೆ ಸಂದರ್ಭದಲ್ಲಿ ತನಿಖಾಧಿಕಾರಿ ಅಶುತೋಷ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಆರೋಪ ಪಟ್ಟಿಯಲ್ಲೂ ತಂದೆ-ಮಕ್ಕಳ ಪಾತ್ರದ ಬಗ್ಗೆ ಉಲ್ಲೇಖವಿಲ್ಲ. ಅಶುತೋಷ್‌ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಾಲಿ ಪ್ರಕರಣ ಅವರ ಪಾಸ್‌ಪೋರ್ಟ್‌ ಪಡೆಯುವುದಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು. ಇದನ್ನು ಆಲಿಸಿದ ಹೈಕೋರ್ಟ, ವಿಚಾರಣೆಯನ್ನು ಇಂದಿಗೆ ಅಂದರೆ ಏಪ್ರಿಲ್ 16ಕ್ಕೆ ಮುಂದೂಡಿತ್ತು.

ಭಾರೀ ಸದ್ದು ಮಾಡಿದ ಅನಂತ ಕುಮಾರ್ ಹೆಗಡೆ ಮನವಿ

ಇನ್ನು ಅನಂತ ಕುಮಾರ ಹೆಗಡೆ ಕೋರ್ಟ್​​ಗೆ ಮಾಡಿದ್ದ ಮನವಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.  ಪುತ್ರ ಅಶುತೋಷ್ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಹೀಗಾಗಿ ಪ್ರಕರಣದಿಂದ ಕೈಬಿಡಿ ಎಂದು ಕೋರ್ಟ್​​ಗೆ ಅನಂತ ಕುಮಾರ್ ಹೆಗಡೆ ಮನವಿ ಮಾಡಿದ್ದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ,  ವಬಡವರ ಮಕ್ಕಳು ಗಲಾಟೆಗೆ, ತಮ್ಮ ಮಕ್ಕಳು ವಿದೇಶ ವ್ಯಾಸಂಗಕ್ಕೆ, ಇದು ಬಿಜೆಪಿಯವರ ವರಸೆ. ತಮ್ಮ ಮಗನ ವಿದೇಶ ವ್ಯಾಸಂಗಕ್ಕಾಗಿ ಪಾಸ್ಪೋರ್ಟ್ ಪಡೆಯಲು ಗಲಾಟೆ ಕೇಸ್ ಅಡ್ಡಿಯಾಗುತ್ತಿದೆ ಎಂದು ಅವಲತ್ತುಕೊಂಡಿರುವ ಇದೇ ಬಿಜೆಪಿ ನಾಯಕ ಬಡವರ ಮಕ್ಕಳಿಗೆ ಗಲಾಟೆಗೆ, ದೊಂಬಿಗೆ ಪ್ರಚೋದನೆ ಕೊಡುವುದರಲ್ಲಿ ಎತ್ತಿದ ಕೈ ಎಂದು ಟಾಂಗ್ ಕೊಟ್ಟಿದ್ದರು.

ಏನಿದು ಪ್ರಕರಣ?

ಕಳೆದ ವರ್ಷ ಅಂದರೆ 2025ರ ಜೂನ್​​ ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ನಡೆಸಿದ ಆರೋಪ ಕೇಳಿಬಂದಿತ್ತು. ಅನಂತ್‌ ಕುಮಾರ್‌ ಹೆಗಡೆ ಅವರು ತೆರಳುತ್ತಿದ್ದ ಕಾರನ್ನು, ಓವರ್​ ಟೇಕ್​ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ, ಅನಂತ್ ಕುಮಾರ್​ ಹೆಗಡೆ ಪುತ್ರ ಅಶುತೋಷ್, ಚಾಲಕ ಹಾಗೂ ಗನ್​​ಮ್ಯಾನ್​ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇನ್ನೋವಾ ಕಾರಿನಲ್ಲಿ ಸಲ್ಮಾನ್, ಸೈಫ್‌, ಇಲಿಯಾಜ್ ಖಾನ್‌ ಹಾಗೂ ಉನ್ನೀಸಾ ಎಂಬವರ ಮೇಲೆ ಹಲ್ಲೆ ಆರೋಪ ಕೇಳಿಬಂದಿತ್ತು. ಬಳಿಕ ಹಲ್ಲೆಗೊಳಗಾಗಿದ್ದ ಸೈಫ್ ನೀಡಿದ ದೂರಿನ ಮೇರೆಗೆ ದಾಬಸ್​​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಅನಂತಕುಮಾರ್ ಹೆಗಡೆ A1, ಗನ್‌ಮ್ಯಾನ್ ಶ್ರೀಧರ್‌ A2, ಕಾರು ಚಾಲಕ ಮಹೇಶ್‌ A3 ಮತ್ತು ಇತರರ ವಿರುದ್ಧ ಬಿಎನ್​ಎಸ್ ಕಾಯ್ದೆಯ 6 ಸೆಕ್ಷನ್‌ಗಳಡಿ ಎಫ್​ಐಆರ್ ದಾಖಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI vs PBKS IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ – Kannada News | Mumbai Indians vs Punjab Kings IPL 2026 Live Cricket Score MI vs PBKS Match on 16th April latest news in Kannada

ಐಪಿಎಲ್ 19 ನೇ ಸೀಸನ್‌ನ 24 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಎರಡೂ ತಂಡಗಳಿಗೆ ಇದು ಐದನೇ ಪಂದ್ಯ. ಮುಂಬೈ 4 ಪಂದ್ಯಗಳಲ್ಲಿ 3 ರಲ್ಲಿ ಸೋತಿದೆ. ಆದ್ದರಿಂದ, ಪಂಜಾಬ್ ವಿರುದ್ಧದ ಪಂದ್ಯ ಮುಂಬೈಗೆ ಬಹಳ ಮುಖ್ಯವಾಗಿದೆ. ಆದಾಗ್ಯೂ, ಮುಂಬೈ ಅಜೇಯ ಪಂಜಾಬ್‌ನಿಂದ ಕಠಿಣ ಸವಾಲನ್ನು ಎದುರಿಸಲಿದೆ. ಈ ಋತುವಿನಲ್ಲಿ ಪಂಜಾಬ್ 4 ಪಂದ್ಯಗಳಲ್ಲಿ 3 ರಲ್ಲಿ ಗೆದ್ದಿದೆ. ಆದ್ದರಿಂದ, ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ನೋಡುವುದು ಮುಖ್ಯವಾಗಿರುತ್ತದೆ.

Source link

CET ವಿದ್ಯಾರ್ಥಿಗಳೇ ಗಮನಿಸಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಹತ್ವದ ಸೂಚನೆ – Kannada News | KEA Alert: CET Students Beware of Cyber Fraudsters and Fake Admit Card Links

ಬೆಂಗಳೂರು, ಏಪ್ರಿಲ್​​ 16: SSLC, ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳೆ ಪ್ರಶ್ನೆಪತ್ರಿಕೆ ಹೆಸರಲ್ಲಿ ವಿದ್ಯಾರ್ಥಿಗಳ ಹಾದಿ ತಪ್ಪಿಲು ಒಂದಿಷ್ಟು ಮಂದಿ ಯತ್ನಿಸಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಆತಂಕಕಾರಿ ವಿಚಾರ ಬಯಲಾಗಿದೆ. KEA ರೀತಿಯಲ್ಲೇ ನಕಲಿ ವೆಬ್​​ಸೈಟ್ ಮಾಡಿರೋದು ಬೆಳಕಿಗೆ ಬಂದಿದ್ದು, CET ಎಕ್ಸಾಂ ಬರೆಯಲು ಮುಂದಾಗುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನೇ ಸೈಬರ್​​ ವಂಚಕರು ಟಾರ್ಗೆಟ್​​ ಮಾಡಹೊರಟಿದ್ದಾರೆ. ಹೀಗಾಗಿ ಪಿಯುಸಿ ಫಲಿತಾಂಶ ಪ್ರಕಟವಾಗಿರುವ ಬೆನ್ನಲ್ಲೇ ಸಿಇಟಿ ಬರೆಯಲು ತುದಿಗಾಲಲ್ಲಿ ನಿಂತಿರುವ ವಿದ್ಯಾರ್ಥಿಗಳು ಹಾಲ್​​ ಟಿಕೆಟ್​​ ಡೌನ್​​ ಮಾಡಿಕೊಳ್ಳುವ ವೇಳೆ ಎಚ್ಚರ ವಹಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.

ನಕಲಿ ವೆಬ್​​ಸೈಟ್​​ ಯಾವುದು?

ಈಗಾಗಲೇ ಸಿಇಟಿ ಪರೀಕ್ಷೆಯ ದಿನಾಂಕ ನಿಗದಿ ಆಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್​​ಸೈಟ್​​ನಲ್ಲಿ ವಿದ್ಯಾರ್ಥಿಗಳ ಹಾಲ್​​ ಟಿಕೆಟ್​​ ಕೂಡ ಲಭ್ಯವಿದೆ. ಏ.23 ಮತ್ತು 24ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆದರೆ ಕೆಲ ಕಿಡಿಗೇಡಿಗಳು https://applytocollege.co/kcet_admit_card_2026 ಎಂಬ ನಕಲಿ ವೆಬ್​​ ಲಿಂಕ್​​ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದೆಂದು ಹೇಳಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಪ್ರಾಧಿಕಾರ ಈ ಬಗ್ಗೆ ಎಚ್ಚರಿಕೆ ನೀಡಿದೆ. ಅಧಿಕೃತ ವೆಬ್​​ಸೈಟ್ https://cetonline.karnataka.gov.in/UGCET_Admit_Card_2026/Forms/Login.aspx​​ ಮೂಲಕವೇ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರ ಡೌನ್​​ಲೋಡ್​​ ಮಾಡಿಕೊಳ್ಳಬೇಕೆಂದು ತಿಳಿಸಿದೆ.

ಇದನ್ನೂ ಓದಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್; ಸತತ 2ನೇ ವರ್ಷವೂ ಶುಲ್ಕ ಏರಿಕೆ

ಪರೀಕ್ಷೆಗೆ ಮುಂಚೆಯೇ ಸಿಇಟಿ ಪರೀಕ್ಷೆ ಬರೆಯುವವರ ಮೇಲೆ ಸೈಬರ್​ ಕಿರಾತಕರು ಕಣ್ಣು ಹಾಕಿದ್ದು, ನಕಲಿ ವೆಬ್​ಸೈಟ್​​ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯ ಇಲ್ಲ. ಹೀಗಾಗಿ ಎಚ್ಚರವಹಿಸಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ಆರ್​ಸಿಬಿ ವೇಗಿ ರಸಿಕ್ ಸಲಾಂಗೆ 2 ವರ್ಷ ನಿಷೇಧ ಹೇರಿದ್ದ ಬಿಸಿಸಿಐ..! – Kannada News | Rasikh Salam Dar’s IPL 2026 Brilliance: RCB’s Star Bowler Overcomes Age Fraud Ban

ಹಾಲಿ ಚಾಂಪಿಯನ್ ಆರ್​ಸಿಬಿ (RCB) 2026 ರ ಐಪಿಎಲ್​ನಲ್ಲೂ (IPL 2026) ತನ್ನ ಅಮೋಘ ಪ್ರದರ್ಶನವನ್ನು ಮುಂದುವರೆಸಿದೆ. ತಂಡದ ಈ ಗೆಲುವಿನ ಓಟಕ್ಕೆ ಸಾಂಘಿಕ ಪ್ರದರ್ಶನವೇ ಪ್ರಮುಖ ಕಾರಣವಾಗಿದೆ. ಅದರಲ್ಲೂ ಭಾರತದ ಯುವ ವೇಗಿ ರಸಿಕ್ ಸಲಾಂ ದಾರ್ (Rasikh Salam Dar) ಬೌಲಿಂಗ್ ವಿಭಾಗವನ್ನು ಕೂಡಿಕೊಂಡ ಬಳಿಕ ತಂಡ ಮತ್ತಷ್ಟು ಸಮತೋಲಿತವಾಗಿ ಕಾಣಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಈ ವೇಗದ ಬೌಲರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ, 4 ಓವರ್‌ಗಳಲ್ಲಿ ಕೇವಲ 24 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು. ರಸಿಕ್ ಸಲಾಂ ಐಡೆನ್ ಮಾರ್ಕ್ರಾಮ್, ಆಯುಷ್ ಬಡೋನಿ, ಮುಕುಲ್ ಚೌಧರಿ ಮತ್ತು ಆವೇಶ್ ಖಾನ್ ಅವರ ವಿಕೆಟ್‌ಗಳನ್ನು ಕಬಳಿಸಿದರು.

ರಸಿಕ್ ಸಲಾಂ ದಾರ್ ಅವರ ಈ ವಿಧ್ವಂಸಕ ಬೌಲಿಂಗ್​ನಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ಕೇವಲ 146 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಯಾವುದೇ ಸಮಸ್ಯೆಗಳಿಲ್ಲದೆ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದಿತು. ರಸಿಕ್ ಸಲಾಂ ಅವರ ಅತ್ಯುತ್ತಮ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಬಿಸಿಸಿಐ ಅವರನ್ನು ಎರಡು ವರ್ಷಗಳ ಕಾಲ ಕ್ರಿಕೆಟ್​ನಿಂದ ನಿಷೇಧಿಸಿತ್ತು ಎಂಬುದು ನಿಮಗೆ ತಿಳಿದಿದೆಯೇ?. ಅಷ್ಟಕ್ಕೂ ರಸಿಕ್ ವಿರುದ್ಧ ಏಕೆ ಅಂತಹ ಕಠಿಣ ಕ್ರಮ ಕೈಗೊಳ್ಳಲಾಯಿತು ಎಂಬುದನ್ನು ನೋಡುವುದಾದರೆ..

ರಸಿಕ್​ಗೆ 2 ವರ್ಷ ನಿಷೇಧ

2019 ರಲ್ಲಿ ರಸಿಕ್ ಸಲಾಂ ಅವರನ್ನು ಬಿಸಿಸಿಐ ಎರಡು ವರ್ಷಗಳ ಕಾಲ ಕ್ರಿಕೆಟ್​ನಿಂದ ನಿಷೇಧಿಸಿತು. ವಾಸ್ತವವಾಗಿ ರಸಿಕ್ ವಯಸ್ಸಿನ ವಂಚನೆಯಲ್ಲಿ ತಪ್ಪಿತಸ್ಥರೆಂದು ಸಾಭೀತಾಗಿತ್ತು. ಹೀಗಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಗಿತ್ತು. ರಸಿಕ್ ಭಾರತೀಯ ಅಂಡರ್ -19 ತಂಡಕ್ಕೆ ಆಯ್ಕೆಯಾಗಲು ಬಿಸಿಸಿಐಗೆ ನಕಲಿ ಜನನ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಇದನ್ನು ಗಮನಿಸಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಾಲಾ ಶಿಕ್ಷಣ ಮಂಡಳಿಯು ರಸಿಕ್ ತನ್ನ ವಯಸ್ಸನ್ನು ತಪ್ಪಾಗಿ ನಮೂದಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ಗೆ ಮಾಹಿತಿ ನೀಡಿತ್ತು. ಪರಿಣಾಮವಾಗಿ, ಬಿಸಿಸಿಐ ಅವರನ್ನು ಭಾರತ U-19 ತಂಡದಿಂದ ತೆಗೆದುಹಾಕಿದಲ್ಲದೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿತ್ತು.

ರಸಿಕ್‌ಗೆ ಅವಕಾಶ ನೀಡಿದ್ದ ಮುಂಬೈ

ರಸಿಕ್ ಅವರನ್ನು ಕ್ರಿಕೆಟ್​ನಿಂದ ನಿಷೇಧಿಸುವ ವೇಳೆಗೆ ಅವರು ಅದಾಗಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಮುಂಬೈ ಇಂಡಿಯನ್ಸ್ ಅವರಿಗೆ ಅವಕಾಶ ನೀಡಿತ್ತು. ಎರಡು ವರ್ಷಗಳ ನಿಷೇಧದ ನಂತರ ದೇಶೀಯ ಕ್ರಿಕೆಟ್‌ಗೆ ಮರಳಿದ ರಸಿಕ್​​ಗೆ ಕೆಕೆಆರ್ ಮತ್ತು ದೆಹಲಿ ಕ್ಯಾಪಿಟಲ್ಸ್‌ ತಂಡಗಳು ಐಪಿಎಲ್‌ನಲ್ಲಿ ಅವಕಾಶ ನೀಡಿದವು. ಈಗ ಅವರು ಆರ್‌ಸಿಬಿ ತಂಡದ ಭಾಗವಾಗಿದ್ದು, ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.

RCB vs LSG: ತವರಿನಲ್ಲಿ ಲಕ್ನೋ ವಿರುದ್ಧ ಆರ್​ಸಿಬಿಗೆ ಮೊಟ್ಟ ಮೊದಲ ಜಯ

ರಸಿಕ್ ಸಲಾಂ ಅವರ ವೃತ್ತಿಜೀವನ

ರಸಿಕ್ ಸಲಾಂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲೂ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರು 55 ವಿಕೆಟ್‌ಗಳನ್ನು ಉರುಳಿಸಿದ್ದು ಐಪಿಎಲ್‌ನಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಕ್ನೋ ವಿರುದ್ಧ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version