Charanasparsha: ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವುದೇಕೆ? ಚರಣಸ್ಪರ್ಶದ ಹಿಂದಿನ ರಹಸ್ಯ ಇಲ್ಲಿದೆ – Kannada News | What is the real logic behind touching the feet of elders?

ಭಾರತೀಯ ಸಂಸ್ಕೃತಿಯಲ್ಲಿ ಬಾಲ್ಯದಿಂದಲೂ ನಾವು ನೋಡಿಕೊಂಡು ಬಂದಿರುವ ಸುಂದರ ಸಂಪ್ರದಾಯ ಎಂದರೆ ‘ಹಿರಿಯರ ಪಾದಗಳಿಗೆ ನಮಸ್ಕರಿಸುವುದು’ (ಚರಣಸ್ಪರ್ಶ ಅಥವಾ ಪ್ರಣಾಮ). ಪರೀಕ್ಷೆಗೆ ಹೋಗುವ ಮುನ್ನ ಪೋಷಕರು ಮತ್ತು ಅಜ್ಜಿಯರ ಪಾದಗಳನ್ನು ಮುಟ್ಟುವುದು, ನವವಿವಾಹಿತರು ಹಿರಿಯರ ಆಶೀರ್ವಾದ ಪಡೆಯುವುದು ಅಥವಾ ಶುಭ ಸಮಾರಂಭಗಳಲ್ಲಿ ಕಾಲಿಗೆ ಎರಗುವುದು ನಮ್ಮಲ್ಲಿ ಪವಿತ್ರ ಆಚರಣೆಯಾಗಿದೆ. ಆದರೆ, “ನಾವು ಹಿರಿಯರ ಕಾಲುಗಳಿಗೆ ನಮಸ್ಕರಿಸುವುದೇಕೆ?” ಎಂಬ ಪ್ರಶ್ನೆ ಇಂದಿನ ಯುವ ಪೀಳಿಗೆಯಲ್ಲಿ ಉದ್ಭವಿಸುವುದು ಸಹಜ. ಈ ಪದ್ಧತಿಯ ಹಿಂದೆ ಸಾವಿರಾರು ವರ್ಷಗಳ ಇತಿಹಾಸ, ಆಧ್ಯಾತ್ಮಿಕ ಪರಿಕಲ್ಪನೆಗಳು, ಕುಟುಂಬ ಮೌಲ್ಯಗಳು ಹಾಗೂ ಸಾಂಪ್ರದಾಯಿಕ ನಂಬಿಕೆಗಳಿವೆ.

ವೈದಿಕ ಸಂಸ್ಕೃತಿ ಮತ್ತು ಪ್ರಾಚೀನ ಇತಿಹಾಸ:

ಭಾರತೀಯ ವೈದಿಕ ಸಂಸ್ಕೃತಿಯಲ್ಲಿ ಹಿರಿಯರಿಗೆ ನಮಸ್ಕರಿಸುವ ಪದ್ಧತಿ ಅತ್ಯಂತ ಪ್ರಾಚೀನವಾದದ್ದು. ‘ಪ್ರಣಾಮ’ ಎಂದರೆ ಭಕ್ತಿ ಮತ್ತು ನಮ್ರತೆಯಿಂದ ಎರಗುವುದು. ‘ಚರಣಸ್ಪರ್ಶ’ ಎಂದರೆ ಹಿರಿಯರ ಪಾದಗಳನ್ನು ಸ್ಪರ್ಶಿಸುವುದು. ಸಂಸ್ಕೃತ ಗ್ರಂಥಗಳ ಪ್ರಕಾರ, ಪೋಷಕರು, ಶಿಕ್ಷಕರು ಮತ್ತು ಹಿರಿಯರನ್ನು ಗೌರವಿಸುವುದು ಮಾನವನ ಪ್ರಮುಖ ಕರ್ತವ್ಯ.

ಪ್ರಾಚೀನ ಗುರುಕುಲ ವ್ಯವಸ್ಥೆಯಲ್ಲಿ, ಶಿಷ್ಯರು ತಮ್ಮ ಶಿಕ್ಷಣವನ್ನು ಪ್ರಾರಂಭಿಸುವ ಮುನ್ನ ಗುರುವಿನ ಪಾದಗಳಿಗೆ ನಮಸ್ಕರಿಸುತ್ತಿದ್ದರು. ಇದು ಶೈಕ್ಷಣಿಕ ನಮ್ರತೆ ಹಾಗೂ ಗುರುವಿನ ಮೇಲಿನ ಅಖಂಡ ಗೌರವದ ಸಂಕೇತವಾಗಿತ್ತು.

ನಾವೇಕೆ ಪಾದಗಳಿಗೆ ನಮಸ್ಕರಿಸಬೇಕು?

ಹಿಂದೂ ತತ್ವಶಾಸ್ತ್ರದ ಪ್ರಕಾರ, ಪಾದ ಮುಟ್ಟುವುದು ಎಂದರೆ ‘ಅಹಂಕಾರವನ್ನು ತ್ಯಜಿಸಿ ವಿನಮ್ರತೆಯನ್ನು ಅಪ್ಪಿಕೊಳ್ಳುವುದು’. ಹಿರಿಯರು ತಮ್ಮ ಜೀವನದಲ್ಲಿ ಅನೇಕ ಅನುಭವಗಳು, ಕಷ್ಟ-ಸುಖಗಳನ್ನು ಕಂಡವರು ಅವರ ಪಾದಗಳನ್ನು ಸ್ಪರ್ಶಿಸುವುದೆಂದರೆ, ಅವರು ನಡೆದ ದಾರಿ, ಗಳಿಸಿದ ಜ್ಞಾನ ಮತ್ತು ಕಲಿತ ಪಾಠಗಳಿಗೆ ಗೌರವ ಸಲ್ಲಿಸುವುದು. “ನಿಮ್ಮ ಅನುಭವವೇ ನಮಗೆ ದಾರಿದೀಪ” ಎಂಬ ಸದಾಶಯ ಈ ಕ್ರಿಯೆಯ ಹಿಂದಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಆಶೀರ್ವಾದ ಮತ್ತು ಕುಟುಂಬ ಬಂಧದ ಬಲ:

ಹಿರಿಯರ ಪಾದಗಳನ್ನು ಮುಟ್ಟಿದಾಗ, ಅವರು ಮನಸ್ಸಿನಿಂದ ಹಾರೈಸಿ ನಮ್ಮ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸುತ್ತಾರೆ. ಹಿಂದೂ ನಂಬಿಕೆಯ ಪ್ರಕಾರ, ಹಿರಿಯರ ಮುಕ್ತ ಹೃದಯದ ಆಶೀರ್ವಾದವು ಭಗವಂತನ ಅನುಗ್ರಹಕ್ಕೆ ಸಮಾನ. ಇದು ಯಶಸ್ಸು, ಶ್ರೇಯಸ್ಸು ಮತ್ತು ದೀರ್ಘಾಯುಷ್ಯವನ್ನು ತರುತ್ತದೆ. ಈ ಪದ್ಧತಿಯು ಕುಟುಂಬದ ಸದಸ್ಯರ ನಡುವೆ ಪ್ರೀತಿ, ಪರಸ್ಪರ ಗೌರವ ಹಾಗೂ ಸುಂದರ ಮಾನವೀಯ ಬಂಧವನ್ನು ಗಟ್ಟಿಗೊಳಿಸುತ್ತದೆ.

ಹಿಂದೂ ಧರ್ಮಕ್ಕಷ್ಟೇ ಸೀಮಿತವಲ್ಲ:

ಪಾದ ಸ್ಪರ್ಶವು ಕೇವಲ ಹಿಂದೂ ಆಚರಣೆಯಾಗಿ ಉಳಿದಿಲ್ಲ. ಹಿರಿಯರನ್ನು ಗೌರವಿಸುವ ಈ ಪದ್ಧತಿಯು ಭಾರತದ ಸಿಖ್, ಜೈನ ಮತ್ತು ಬೌದ್ಧ ಸಂಪ್ರದಾಯಗಳಲ್ಲೂ ವ್ಯಾಪಕವಾಗಿ ಕಂಡುಬರುತ್ತದೆ. ಸ್ಥಳೀಯವಾಗಿ ಆಚರಣೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ, ಹಿರಿಯರ ಅನುಭವಕ್ಕೆ ಗೌರವ ಕೊಡುವ ಭಾವನೆ ಎಲ್ಲ ಧರ್ಮಗಳಲ್ಲೂ ಒಂದೇ ಆಗಿದೆ.

ಚರಣಸ್ಪರ್ಶದ ಹಿಂದಿನ ಸಾಂಪ್ರದಾಯಿಕ & ವೈಜ್ಞಾನಿಕ ನಂಬಿಕೆಗಳು:

ಈ ಸಂಪ್ರದಾಯದ ಕುರಿತು ಕೆಲವು ಆಸಕ್ತಿಕರ ಸಾಂಪ್ರದಾಯಿಕ ಹಾಗೂ ದೈಹಿಕ ನಂಬಿಕೆಗಳೂ ಇವೆ:

  • ಧನಾತ್ಮಕ ಶಕ್ತಿಯ ಪರಿಚಲನೆ: ಆಧ್ಯಾತ್ಮಿಕ ನಂಬಿಕೆಯ ಪ್ರಕಾರ, ನಮ್ಮ ದೇಹದಲ್ಲಿ ಶಕ್ತಿ ಹರಿಯುತ್ತದೆ. ನಾವು ನಮ್ರತೆಯಿಂದ ಹಿರಿಯರ ಪಾದ ಸ್ಪರ್ಶಿಸಿದಾಗ, ಹಿರಿಯರ ಧನಾತ್ಮಕ ಶಕ್ತಿಯು ಆಶೀರ್ವಾದದ ರೂಪದಲ್ಲಿ ನಮ್ಮ ದೇಹವನ್ನು ಪ್ರವೇಶಿಸುತ್ತದೆ ಎನ್ನಲಾಗುತ್ತದೆ.
  • ಉತ್ತಮ ದೈಹಿಕ ವ್ಯಾಯಾಮ: ಹಿರಿಯರ ಪಾದಗಳಿಗೆ ನಮಸ್ಕರಿಸುವಾಗ ಸೊಂಟ, ಮೊಣಕಾಲುಗಳನ್ನು ಬಗ್ಗಿಸಿ ತೋಳುಗಳನ್ನು ಚಾಚಲಾಗುತ್ತದೆ. ಇದು ಒಂದು ರೀತಿಯ ಸಣ್ಣ ದೈಹಿಕ ವ್ಯಾಯಾಮದಂತಿದ್ದು, ರಕ್ತ ಪರಿಚಲನೆಗೆ ಪೂರಕವಾಗಿದೆ ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Dam Water Level: ಆಲಮಟ್ಟಿ ಡ್ಯಾಂ ಭರ್ತಿಗೆ ಕೆಲವೇ ಅಡಿ ಬಾಕಿ; ಇಲ್ಲಿದೆ ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ – Kannada News | Karnataka Dam Water Level Today: KRS, Alamatti, Kabini Storage Details

ಆಲಮಟ್ಟಿ ಡ್ಯಾಂ ಭರ್ತಿಗೆ ಕೆಲವೇ ಅಡಿ ಬಾಕಿ; ಇಲ್ಲಿದೆ ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ

ಬೆಂಗಳೂರು, ಜುಲೈ 28: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಮಟ್ಟದಲ್ಲಿ ಸ್ಪಷ್ಟ ವ್ಯತ್ಯಾಸ ಗೋಚರಿಸುತ್ತಿದ್ದು, ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ನದಿ ಪಾತ್ರಗಳಲ್ಲಿ ಮಿಶ್ರ ವಾತಾವರಣ ಕಂಡುಬಂದಿದೆ. ಕೃಷ್ಣಾ ನದಿ ಪಾತ್ರದ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದರೆ, ಕಾವೇರಿ ಕೊಳ್ಳದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ.

ಆಲಮಟ್ಟಿ ಜಲಾಶಯ ಭರ್ತಿಗೆ ಕೆಲವೇ ಹಂತ ಬಾಕಿ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 519.30 ಮೀಟರ್
  • ಒಳಹರಿವು: 55,685 ಕ್ಯೂಸೆಕ್
  • ಹೊರಹರಿವು: 21,113 ಕ್ಯೂಸೆಕ್

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯವು ಭರ್ತಿಯಾಗುವ ಹಂತಕ್ಕೆ ತಲುಪಿದೆ. ಜಲಾಶಯಕ್ಕೆ 55 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೆಳಭಾಗದ ನದಿಗೆ 21,113 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.

ಬಸವಸಾಗರದಲ್ಲಿ ಸ್ಥಿರ ಸಂಗ್ರಹ: ನದಿಗೆ ನೀರು ಬಿಡುಗಡೆ

  • ಗರಿಷ್ಠ ಮಟ್ಟ: 492.25 ಮೀಟರ್
  • ಇಂದಿನ ಮಟ್ಟ: 492.20 ಮೀಟರ್
  • ಒಳಹರಿವು: 25,000 ಕ್ಯೂಸೆಕ್
  • ಹೊರಹರಿವು: 20,500 ಕ್ಯೂಸೆಕ್

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯವು ಗರಿಷ್ಠ ಮಟ್ಟದ ಸಮೀಪದಲ್ಲೇ ಮುಂದುವರಿದಿದೆ. ಡ್ಯಾಂಗೆ 25,000 ಕ್ಯೂಸೆಕ್ ನೀರು ಒಳಹರಿವು ದಾಖಲಾಗುತ್ತಿದ್ದು, ಒಳಹರಿವಿನ ಪ್ರಮಾಣ ಹೆಚ್ಚಿರುವ ಕಾರಣ ನದಿಗೆ 20,500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಹೇಮಾವತಿ ಜಲಾಶಯ: ಕಳೆದ ವರ್ಷಕ್ಕಿಂತ ಸಂಗ್ರಹ ಕ್ಷೀಣ

ಗರಿಷ್ಠ ಮಟ್ಟ: 2922 ಅಡಿ (37 TMC)
ಇಂದಿನ ಮಟ್ಟ: 2905.98 ಅಡಿ (23.753 TMC)
ಒಳಹರಿವು: 6,390 ಕ್ಯೂಸೆಕ್
ಹೊರಹರಿವು: 500 ಕ್ಯೂಸೆಕ್
ಕಳೆದ ವರ್ಷ ಇದೇ ದಿನ: 2920.89 ಅಡಿ (35.943 TMC)

ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ತೀವ್ರ ಕುಸಿತ ಕಂಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ 35.943 ಟಿಎಂಸಿ ನೀರು ಸಂಗ್ರಹವಿತ್ತು ಮತ್ತು 25,724 ಕ್ಯೂಸೆಕ್ ಒಳಹರಿವಿತ್ತು. ಆದರೆ ಈ ಬಾರಿ ಒಳಹರಿವು ಕೇವಲ 6,390 ಕ್ಯೂಸೆಕ್ ದಾಖಲಾಗಿದ್ದು, ಕೇವಲ 23.753 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ.

ಕಬಿನಿಯಲ್ಲಿ ಕಳೆದ ವರ್ಷಕ್ಕಿಂತ ಭಾರಿ ಕುಸಿತ

  • ಇಂದಿನ ನೀರಿನ ಮಟ್ಟ: 75.28 ಅಡಿ
  • ಕಳೆದ ವರ್ಷ ಇದೇ ದಿನ: 81.97 ಅಡಿ
  • ಇಂದಿನ ಸಂಗ್ರಹ: 14.42 ಟಿಎಂಸಿ (ಕಳೆದ ವರ್ಷ: 18.22 ಟಿಎಂಸಿ)
  • ಒಳಹರಿವು: 3,594 ಕ್ಯೂಸೆಕ್ (ಕಳೆದ ವರ್ಷ: 31,600 ಕ್ಯೂಸೆಕ್)
  • ಹೊರಹರಿವು: 300 ಕ್ಯೂಸೆಕ್ (ಕಳೆದ ವರ್ಷ: 40,000 ಕ್ಯೂಸೆಕ್)
  • ಕಳೆದ 24 ಗಂಟೆಗಳ ಮಳೆ: 16 ಮಿ.ಮೀ.

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲೂ ಬರದ ಛಾಯೆ ಎದ್ದು ಕಾಣುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 31 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವಿದ್ದು, 40 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಒಳಹರಿವು ಕೇವಲ 3,594 ಕ್ಯೂಸೆಕ್‌ಗೆ ಸೀಮಿತವಾಗಿದ್ದು, ಸಂಗ್ರಹ ಮಟ್ಟವೂ ಕಡಿಮೆಯಾಗಿದೆ.

ಕೆಆರ್‌ಎಸ್‌ನಲ್ಲಿ ಇನ್ನೂ 100 ಅಡಿ ತಲುಪದ ನೀರಿನ ಮಟ್ಟ

  • ಗರಿಷ್ಠ ಮಟ್ಟ: 124.80 ಅಡಿ (49.452 TMC)
  • ಇಂದಿನ ಮಟ್ಟ: 91.80 ಅಡಿ
  • ಇಂದಿನ ಸಂಗ್ರಹ: 17.039 ಟಿಎಂಸಿ
  • ಒಳಹರಿವು: 2,552 ಕ್ಯೂಸೆಕ್
  • ಹೊರಹರಿವು: 1,745 ಕ್ಯೂಸೆಕ್

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (KRS) ಜಲಾಶಯದಲ್ಲಿ ನೀರಿನ ಮಟ್ಟ ಇನ್ನೂ 100 ಅಡಿ ದಾಟಿಲ್ಲ. ಜಲಾಶಯದ ಒಟ್ಟು ಸಾಮರ್ಥ್ಯ 49.452 ಟಿಎಂಸಿ ಆಗಿದ್ದರೂ, ಪ್ರಸ್ತುತ ಕೇವಲ 17.039 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಒಳಹರಿವು ಕೇವಲ 2,552 ಕ್ಯೂಸೆಕ್ ಇದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ಟೆಸ್ಟ್ ತಂಡ ಪ್ರಕಟ: ಕನ್ನಡಿಗ ಉಪನಾಯಕ – Kannada News | India’s squad for the Test series in Sri Lanka

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಲಿಷ್ಠ ತಂಡವನ್ನು ಶುಭ್​ಮನ್ ಗಿಲ್ ಮುನ್ನಡೆಸಲಿದ್ದು, ಉಪನಾಯಕನಾಗಿ ಕನ್ನಡಿಗ ಕೆ.ಎಲ್. ರಾಹುಲ್ ಜವಾಬ್ದಾರಿ ಹೊತ್ತಿದ್ದಾರೆ. ಇನ್ನುಳಿದಂತೆ, ಮಧ್ಯಪ್ರದೇಶದ ಸ್ಪಿನ್ನರ್ ಸರಂಶ್ ಜೈನ್‌ಗೆ ತಂಡದಲ್ಲಿ ಚೊಚ್ಚಲ ಅವಕಾಶ ದೊರೆತಿದೆ.

ಭಾರತ ಟೆಸ್ಟ್ ತಂಡದ ವಿವರ:

  • ಬ್ಯಾಟರ್‌ಗಳು: ಶುಭ್‌ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್*
  • ವಿಕೆಟ್ ಕೀಪರ್‌ಗಳು: ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್
  • ಆಲ್‌ರೌಂಡರ್‌ಗಳು/ಸ್ಪಿನ್ನರ್‌ಗಳು: ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್
  • ವೇಗದ ಬೌಲರ್‌ಗಳು: ಜಸ್‌ಪ್ರೀತ್ ಬುಮ್ರಾ*, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್

ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರುವ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಮತ್ತು ತಮಿಳುನಾಡಿನ ಬ್ಯಾಟರ್ ಸಾಯಿ ಸುದರ್ಶನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದರೂ, ಅವರ ಲಭ್ಯತೆಯು ಬಿಸಿಸಿಐನ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ನೀಡುವ ಫಿಟ್‌ನೆಸ್ ಕ್ಲಿಯರೆನ್ಸ್ ಮೇಲೆ ಆಧಾರಿತವಾಗಿದೆ.

ಜಡ್ಡು ಕಂಬ್ಯಾಕ್:

ಟೆನ್ನಿಸ್ ಎಲ್ಬೋ (ಮೊಣಕೈ) ಗಾಯದಿಂದಾಗಿ ಕೆಲವು ಕಾಲ ಕ್ರಿಕೆಟ್‌ನಿಂದ ದೂರವಿದ್ದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಸಂಪೂರ್ಣ ಗುಣಮುಖರಾಗಿ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಇದು ಭಾರತದ ಸ್ಪಿನ್ ವಿಭಾಗಕ್ಕೆ ಹೆಚ್ಚಿನ ಬಲ ತಂದಿದೆ.

ಸರಂಶ್ ಜೈನ್‌ಗೆ ಚೊಚ್ಚಲ ಅವಕಾಶ:

ಮಧ್ಯಪ್ರದೇಶದ ಆಫ್-ಸ್ಪಿನ್ನರ್ ಸರಂಶ್ ಜೈನ್ ಮೊದಲ ಬಾರಿಗೆ ರಾಷ್ಟ್ರೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹ್ಯಾಮ್‌ಸ್ಟ್ರಿಂಗ್ ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿರುವ ವಾಷಿಂಗ್ಟನ್ ಸುಂದರ್ ಅವರ ಜಾಗಕ್ಕೆ ಸಾರಂಶ್ ಅವರನ್ನು ಆಯ್ಕೆ ಮಾಡಲಾಗಿದೆ.

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.

ಭಾರತ ಮತ್ತು ಶ್ರೀಲಂಕಾ ಸರಣಿ ವೇಳಾಪಟ್ಟಿ:

ಆಗಸ್ಟ್ 4 ರಂದು ಕೊಲಂಬೋ ತಲುಪಲಿರುವ ಟೀಮ್ ಇಂಡಿಯಾ, ಮೊದಲ ಟೆಸ್ಟ್‌ಗೂ ಮುನ್ನ ಸ್ಥಳೀಯ ಲಂಕಾ ಬೋರ್ಡ್ XI ವಿರುದ್ಧ 4 ದಿನಗಳ ಸುದೀರ್ಘ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದಾದ ಬಳಿಕ 2 ಟೆಸ್ಟ್ ಮ್ಯಾಚ್​ಗಳಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ದಿನಾಂಕ ಪಂದ್ಯದ ವಿವರ ಕ್ರೀಡಾಂಗಣ
ಆಗಸ್ಟ್ 7 – 10, 2026 4 ದಿನಗಳ ಅಭ್ಯಾಸ ಪಂದ್ಯ ಎನ್‌ಸಿಸಿ ಮೈದಾನ, ಕೊಲಂಬೋ
ಆಗಸ್ಟ್ 15 – 19, 2026 ಮೊದಲನೇ ಟೆಸ್ಟ್ ಪಂದ್ಯ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣ, ಗಾಲೆ
ಆಗಸ್ಟ್ 23 – 27, 2026 ಎರಡನೇ ಟೆಸ್ಟ್ ಪಂದ್ಯ ಎಸ್‌ಎಸ್‌ಸಿ ಮೈದಾನ, ಕೊಲಂಬೋ

ಇದನ್ನೂ ಓದಿ: ಎಚ್ಚರಿಕೆ… ವೈಭವ್‌ಗೆ ಕೋಚ್ ಲಕ್ಷ್ಮಣ್ ಕಟ್ಟುನಿಟ್ಟಿನ ಸೂಚನೆ!

ಈ ಸರಣಿಯ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 8 ಮ್ಯಾಚ್​ಗಳ ಸರಣಿ ಆಡಲಿದೆ. ಈ ಸರಣಿ ಸೆಪ್ಟೆಂಬರ್ 26 ರಿಂದ ಶುರುವಾಗಲಿದ್ದು,  3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಾಗುತ್ತದೆ.

Published On – 9:38 am, Tue, 28 July 26

Source link

ಟೀಮ್ ಇಂಡಿಯಾಗೆ 33 ವರ್ಷದ ಆಲ್​ರೌಂಡರ್ ಎಂಟ್ರಿ! – Kannada News | Who is Saransh Jain? Meet Team India’s new all rounder

ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಕಾಣಿಸಿಕೊಂಡ ಏಕೈಕ ಹೊಸಮುಖ ಸರಂಶ್ ಜೈನ್. ಮಧ್ಯಪ್ರದೇಶದ 33 ವರ್ಷದ ಅನುಭವಿ ಆಫ್-ಸ್ಪಿನ್ ಆಲ್‌ರೌಂಡರ್ ಸರಂಶ್ ಜೈನ್ ಗಾಯಾಳು ವಾಷಿಂಗ್ಟನ್ ಸುಂದರ್​ಗೆ ಬದಲಿಗೆ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಬೆನ್ನಲ್ಲೇ ಯಾರು ಈ ಸರಂಶ್ ಜೈನ್ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…

ಸರಂಶ್ ಜೈನ್ ಪ್ರಥಮ ದರ್ಜೆ ಕ್ರಿಕೆಟ್ ಕೆರಿಯರ್ ಆರಂಭವಾಗಿದ್ದು 2014 ರಲ್ಲಿ. ಮಧ್ಯಪ್ರದೇಶ್ ಪರ ಕಣಕ್ಕಿಳಿಯುವ ಮೂಲಕ ವೃತ್ತಿಜೀವನ ಆರಂಭಿಸಿದ್ದ ಸರಂಶ್​ಗೆ ಹನ್ನೆರಡು ವರ್ಷಗಳ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸಿದೆ. ಕಳೆದ ಹನ್ನೆರಡು ವರ್ಷಗಳ ಸರಂಶ್ ಜೈನ್ ದೇಶೀಯ ಕ್ರಿಕೆಟ್​ನಲ್ಲಿ ಹೇಗೆ ಆಡಿದ್ದರು ಎಂಬುದಕ್ಕೆ ಈ ಕೆಳಗಿನ ಅಂಕಿ ಅಂಶಗಳೇ ಸಾಕ್ಷಿ.

  • ಪ್ರಥಮ ದರ್ಜೆ ಪಂದ್ಯಗಳು: 54
  • ಗಳಿಸಿದ ರನ್ ಸಂಖ್ಯೆ: 2,223
  • ಬ್ಯಾಟಿಂಗ್ ಸರಾಸರಿ: 31.76
  • ಶತಕ / ಅರ್ಧಶತಕ: 2 / 14
  • ಪಡೆದ ವಿಕೆಟ್‌ಗಳು: 188
  • ಬೌಲಿಂಗ್ ಸರಾಸರಿ: 27.31
  • ಅತ್ಯುತ್ತಮ ಬೌಲಿಂಗ್ ಪ್ರದರ್ಶನ: 6/75 (ಒಂದು ಇನ್ನಿಂಗ್ಸ್‌ನಲ್ಲಿ)

ಅಪ್ರತಿಮ ಬೌಲಿಂಗ್ ಪ್ರದರ್ಶನ:

ಕಳೆದ 12 ತಿಂಗಳ ದೇಶಿ ಕ್ರಿಕೆಟ್​ನಲ್ಲಿ ಸರಂಶ್ ಜೈನ್ ಅದ್ಭುತ ಪ್ರದರ್ಶನ ನೀಡಿದ್ದರು. ಈ ಅವಧಿಯಲ್ಲಿ 311 ರನ್ ಗಳಿಸುವುದರ ಜೊತೆಗೆ ಬರೋಬ್ಬರಿ 44 ಪ್ರಥಮ ದರ್ಜೆ ವಿಕೆಟ್‌ಗಳನ್ನು ಕಬಳಿಸಿ, ಭಾರತದ ಅತ್ಯಂತ ಯಶಸ್ವಿ ರೆಡ್-ಬಾಲ್ ಆಫ್-ಸ್ಪಿನ್ನರ್ ಆಗಿ ಹೊರಹೊಮ್ಮಿದರು.

ದುಲೀಪ್ ಮತ್ತು ಇರಾನಿ ಟ್ರೋಫಿ ಸಾಧನೆ:

ದುಲೀಪ್ ಟ್ರೋಫಿಯಲ್ಲಿ ಸೆಂಟ್ರಲ್ ಝೋನ್ ತಂಡ ಚಾಂಪಿಯನ್ ಆಗುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಮುಂಬೈ ವಿರುದ್ಧದ ಇರಾನಿ ಟ್ರೋಫಿ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡದ ಪರವಾಗಿ 121 ರನ್‌ಗಳಿಗೆ 6 ವಿಕೆಟ್ ಪಡೆದು ಗಮನ ಸೆಳೆದಿದ್ದರು.

ಇಂಡಿಯಾ ‘ಎ’ ತಂಡದಲ್ಲಿ ಮಿಂಚು:

ಭಾರತದ ಹಿರಿಯ ತಂಡಕ್ಕೆ ಆಯ್ಕೆಯಾಗಲು ಇತ್ತೀಚಿನ ಇಂಡಿಯಾ ‘ಎ’ ತಂಡದ ಶ್ರೀಲಂಕಾ ಪ್ರವಾಸವೇ ಪ್ರಮುಖ ಕಾರಣ. ಗಾಲೆಯಲ್ಲಿ ನಡೆದ ಶ್ರೀಲಂಕಾ ‘ಎ’ ವಿರುದ್ಧದ ಎರಡನೇ ನಾಲ್ಕು ದಿನಗಳ ಪಂದ್ಯದಲ್ಲಿ ಜವಾಬ್ದಾರಿಯುತ 70* ರನ್ ಬಾರಿಸಿದ್ದಲ್ಲದೆ, ಪಂದ್ಯದಲ್ಲಿ ಒಟ್ಟು 6 ವಿಕೆಟ್ ಉರುಳಿಸಿ ಮ್ಯಾಚ್ ವಿನ್ನರ್ ಎನಿಸಿಕೊಂಡರು. ಈ ಆಲ್‌ರೌಂಡ್ ಪ್ರದರ್ಶನವೇ ಅವರಿಗೆ ಇಂದು ರಾಷ್ಟ್ರೀಯ ಟೆಸ್ಟ್ ತಂಡದ ಬಾಗಿಲು ತೆರೆಯುವಂತೆ ಮಾಡಿದೆ.

ಇದನ್ನೂ ಓದಿ: ಭಾರತ ಟೆಸ್ಟ್ ತಂಡ ಪ್ರಕಟ: ಕನ್ನಡಿಗ ಉಪನಾಯಕ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ಸರಂಶ್ ಜೈನ್ ಅವರಿಗೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಚತುರತೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಸಿಕ್ಕಿದೆ. ಶ್ರೀಲಂಕಾ ಪ್ರವಾಸದಲ್ಲಿ ಅವರು ಭಾರತ ತಂಡಕ್ಕೆ ದೊಡ್ಡ ಬಲ ತುಂಬುವ ಎಲ್ಲ ನಿರೀಕ್ಷೆಗಳಿದ್ದು, ದೇಶಿ ಕ್ರಿಕೆಟ್‌ನ ಯಶಸ್ಸನ್ನು ಅಂತರರಾಷ್ಟ್ರೀಯ ರಂಗದಲ್ಲೂ ಮುಂದುವರಿಸಿ ಹೆಮ್ಮೆಯ ಮ್ಯಾಚ್-ವಿನ್ನರ್ ಆಗಿ ಹೊರಹೊಮ್ಮಲಿ ಎಂಬುದೇ ಅಭಿಮಾನಿಗಳ ಆಶಯ.

Source link

World Nature Conservation Day 2026: ದೈನಂದಿನ ಜೀವನದಲ್ಲಿ ಈ ಸಣ್ಣ ಕಾರ್ಯಗಳನ್ನು ಮಾಡುವ ಮೂಲಕ ಪ್ರಕೃತಿಯ ರಕ್ಷಣೆಗೆ ದೊಡ್ಡ ಕೊಡುಗೆ ನೀಡಬಹುದು – Kannada News | World Nature Conservation Day 2026: What is the purpose of celebrating World Nature Conservation Day?

ವಿಶ್ವ ಪ್ರಕೃತಿ ಸಂರಕ್ಷಣಾ ದಿನImage Credit source: Getty Images

ಪ್ರಕೃತಿಯು (Nature) ನಮಗೆಲ್ಲರಿಗೂ ಶುದ್ಧ ಗಾಳಿ, ನೀರು, ಆಹಾರ ಸೇರಿದಂತೆ ಬದುಕಲು ಬೇಕಾದ ಪ್ರತಿಯೊಂದನ್ನು ಸಹ ನೀಡುತ್ತಿವೆ. ಆದರೆ ಇಂದು ಮನುಷ್ಯನ ಸ್ವಾರ್ಥದ ಕಾರಣದಿಂದಾಗಿ ನೀರು, ಗಾಳಿ ಕುಲುಷಿತಗೊಂಡಿವೆ. ಅದೆಷ್ಟೋ ಪ್ರಾಣಿ, ಪಕ್ಷಿ, ಸಸ್ಯ ಪ್ರಬೇಧಗಳು ಅಳಿವಿನಂಚಿಗೆ ತಲುಪಿವೆ. ಜಾಗತಿಕ ತಾಪಮಾನವೂ ಏರಿಕೆ, ಹವಾಮಾನ ಬದಲಾವಣೆಯಿಂದಾಗಿ ಪರಿಸರದ ಆರೋಗ್ಯ ಹದಗೆಡುತ್ತಿವೆ. ಹಾಗಾಗಿ ಸ್ಥಿರ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ಜುಲೈ 28 ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ದೈನಂದಿನ ಜೀವನದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡುವ ಮೂಲಕ ಪ್ರಕೃತಿಯ ರಕ್ಷಿಸುವ ಪ್ರತಿಜ್ಞೆಯನ್ನು ನಾವೆಲ್ಲರೂ ಮಾಡೋಣ.

ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಇತಿಹಾಸವೇನು?

ಪ್ರತಿ ವರ್ಷ ಜುಲೈ 28 ಅನ್ನು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಪರಿಸರದ ಮಹತ್ವವನ್ನು ನಮಗೆ ನೆನಪಿಸುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ಕೈಗಾರೀಕರಣ, ಅರಣ್ಯನಾಶ ಇವೆಲ್ಲವೂ ಪ್ರಕೃತಿಯನ್ನು ನಾಶ ಮಾಡುತ್ತಿವೆ. ಈ ಪ್ರಕೃತಿಯನ್ನು ರಕ್ಷಣೆ ಮಾಡುವ ಉದ್ದೇಶದಿಂದ 2000 ನೇ ದಶಕದಲ್ಲಿ ಪ್ರಕೃತಿ ಸಂರಕ್ಷಣಾ ಒಕ್ಕೂಟ (IUCN) ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಈ ಜಾಗೃತಿ ದಿನವನ್ನು ಜುಲೈ 28 ರಂದು ಆಚರಿಸಲಾಗುತ್ತಿದೆ.

ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಉದ್ದೇಶವೇನು?

  • ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಪ್ರಪಂಚದಾದ್ಯಂತ ಪ್ರಕೃತಿಯ ಸಂರಕ್ಷಣೆಗಾಗಿ ಜಾಗೃತಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತದೆ.
  • ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸುವ ಪ್ರಾಥಮಿಕ ಗುರಿ ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳನ್ನು ಉಳಿಸುವುದಾಗಿದೆ.
  • ಈ ಜಾಗೃತಿ ಕಾರ್ಯಕ್ರಮವು ಪ್ರಕೃತಿಯ ಸಸ್ಯ, ಪ್ರಾಣಿ, ಇಂಧನ ಸರಬರಾಜು, ಭೂಮಿ, ನೀರು ಮತ್ತು ಗಾಳಿ ಸೇರಿದಂತೆ ವಿವಿಧ ನೈಸರ್ಗಿಕ ಅಂಶಗಳನ್ನು ಸಂರಕ್ಷಿಸುವುದರ ಮೇಲೆ ಒತ್ತು ನೀಡುತ್ತದೆ.

ಇದನ್ನೂ ಓದಿ: ಕಾರ್ಗಿಲ್‌ ಯುದ್ಧ ನಡೆಯುವುದಕ್ಕೆ ಮುಖ್ಯ ಕಾರಣವೇನು? ಕದನದಲ್ಲಿ ಭಾರತ ಗೆದ್ದು ಬೀಗಿದ ಪರಾಕ್ರಮದ ಕಥೆಯನ್ನು ತಿಳಿಯಿರಿ

ಪ್ರಕೃತಿಯ ರಕ್ಷಣೆಗೆ ನಾವು ಏನೆಲ್ಲಾ ಮಾಡಬಹುದು?

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು: ಪ್ಲಾಸ್ಟಿಕ್ ಇಂದು ಪರಿಸರಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಾಮಿಸಿದೆ. ಇದು ಮಣ್ಣು ಮಾತ್ರವಲ್ಲದೆ ಸಾಗರಗಳು ಮತ್ತು ಮುಗ್ಧ ಜೀವಿಗಳಿಗೂ ಹಾನಿ ಮಾಡುತ್ತದೆ. ಹಾಗಾಗಿ ಈ ದಿನ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡುವ ಪ್ರತಿಜ್ಞೆಯನ್ನು ಮಾಡೋಣ. ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್‌ ಜೀಲಗಳ ಬದಲು ಬಟ್ಟೆ ಅಥವಾ ಸೆಣಬಿನ ಚೀಲಗಳನ್ನು ಬಳಸೋಣ.

ನೀರು ಪೋಲು ಮಾಡದಿರುವುದು: ನೀರು ಜೀವನದ ಅಡಿಪಾಯ. ಹಾಗಾಗಿ ನೀರು ಪೋಲು ಆಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಮಳೆನೀರು ಕೊಯ್ಲು ಮಾಡುವುದು ಮತ್ತು ನೀರನ್ನು ವಿವೇಚನೆಯಿಂದ ಬಳಸುವುದು ಮುಂತಾದ ಸಣ್ಣ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ದೊಡ್ಡ ಉಳಿತಾಯಕ್ಕೆ ಕಾರಣವಾಗಬಹುದು.

ಗಿಡಗಳನ್ನು ನೆಡುವುದು: ನೀವು ಮರಗಿಡಗಳನ್ನು ನೆಡುವ ಮೂಲಕವೂ ಪ್ರಕೃತಿಯ ರಕ್ಷಣೆಗೆ ಕೊಡುಗೆಯನ್ನು ನೀಡಬಹುದು. ಅರಣ್ಯ ನಾಶ ಹೆಚ್ಚುತ್ತಿರುವ ಈ ದಿನಗಳಲ್ಲಿ ನೀವು ಮರಗಳನ್ನು ನೆಡುವ ಕಾರ್ಯಗಳಿಗೆ ಮುಂದಾಗಿ.

ಇಂಧನ ಉಳಿತಾಯ ಮಾಡಿ: ಅನಗತ್ಯ ವಿದ್ಯುತ್ ಬಳಕೆಯೂ ಪರಿಸರಕ್ಕೆ ಹಾನಿ ಮಾಡುತ್ತದೆ. ಹಾಗಾಗಿ  ಎಲ್ಇಡಿ ಬಲ್ಬ್‌ಗಳನ್ನು ಬಳಸಿ, ಅನಗತ್ಯ ಉಪಕರಣಗಳನ್ನು ಆಫ್ ಮಾಡಿ. ಮತ್ತು ಕಡಿಮೆ ಅನಿಲ ಬಳಸಿ, ಮತ್ತು ಸಾಧ್ಯವಾದರೆ, ಸೌರಶಕ್ತಿಯನ್ನು ಬಳಸಿ. ಹೀಗೆ ಇಂಧನ ಸಂರಕ್ಷಣೆಗೆ ವಿಶೇಷ ಗಮನ ಕೊಡುವ ಮೂಲಕವೂ ಪ್ರಕೃತಿಯ ರಕ್ಷಣೆಗೆ ಕೊಡುಗೆ ನೀಡಬಹುದು.

ಸಾವಯವ ಗೊಬ್ಬರಗಳ ಬಳಕೆ: ಮಣ್ಣು ಕಲುಷಿತಗೊಳ್ಳದಂತೆ ತಡೆಯಲು ರಾಸಾಯನಿಕಯುಕ್ತ ಗೊಬ್ಬರಗಳ ಬದಲು ಸಾವಯವ ಗೊಬ್ಬರಗಳ ಬಳಕೆ ಮಾಡಬೇಕು. ಸಾಧ್ಯವಾದಷ್ಟು ಸಾವಯವ ಕೃಷಿಯತ್ತ ಗಮನ ಕೊಡಬೇಕು.

ಸಾರ್ವಜನಿಕ ಸಾರಿಗಳ ಬಳಕೆ: ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿ. ಇದು ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗಿಡಗಳನ್ನು ಗಿಫ್ಟ್‌ ನೀಡಿ: ಯಾವುದೇ ಕಾರ್ಯಕ್ರಮಗಳು ಇದ್ದಾಗ ಗಿಫ್ಟ್‌ ಕೊಡುವ ಪದ್ಧತಿ ನಮ್ಮಲ್ಲಿದೆ. ಹೂಗುಚ್ಛ ಇತ್ಯಾದಿ ಗಿಫ್ಟ್‌ಗಳನ್ನು ನೀಡುವ ಬದಲು ಗಿಡಗಳನ್ನು ಗಿಫ್ಟ್‌ ನೀಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಲ್ಲಾ ಹೇಳಿಕೆ ವಿವಾದ: ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೆಯುತ್ತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ – Kannada News | Muslim Leaders Warn of Protest Against BJP MLC C.T. Ravi Over ‘Mulla’ Remark in Chikkamagaluru

ಚಿಕ್ಕಮಗಳೂರು, ಜುಲೈ 28: ‘ಮುಲ್ಲಾಗಳಿಗೆ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ’ ಎಂಬ ಬಿಜೆಪಿ ಎಂಎಲ್​​ಸಿ ಸಿಟಿ ರವಿ ಹೇಳಿಕೆಯನ್ನು ಮುಸ್ಲಿಂ ನಾಯಕರು ಖಂಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಎಸ್.ಡಿ.ಪಿ.ಐ. ಮುಖಂಡ ಅತೀಕ್ ಮಾತನಾಡಿ, ಮುಸಲ್ಮಾನರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಸಿಟಿ ರವಿಗೆ ಆಗ್ರಹಿಸಿದ್ದಾರೆ. ಮುಲ್ಲಾಗಳು ಯಾರೂ ಅನಕ್ಷರಸ್ಥರಲ್ಲ ಎಂದು ಸ್ಪಷ್ಟಪಡಿಸಿದ ಅತೀಕ್, ಪ್ರತಿಯೊಬ್ಬರೂ ಶಿಕ್ಷಿತರು ಮತ್ತು ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು. ದೇಶದ ಅಭಿವೃದ್ಧಿಗೆ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಉಲ್ಲೇಖಿಸಿದ ಅವರು, ಬಿಳಿ ಕೂದಲಿನ ರಾಜಕೀಯ ಈಗ ನಡೆಯುವುದಿಲ್ಲ ಎಂದು ತಿಳಿಸಿದರು.

ಮುಂದೆ ಯಾವುದೇ ಭಾಷಣ ಮಾಡುವ ಮುನ್ನ ಯೋಚಿಸಿ ಮಾತನಾಡಬೇಕು. ಇಂತಹ ಮಾತು ಮುಂದುವರಿದರೆ, ಮುಸ್ಲಿಂ ಸಮುದಾಯ ಒಟ್ಟಾಗಿ ಸಿ.ಟಿ. ರವಿ ಅವರು ಚಿಕ್ಕಮಗಳೂರಿಗೆ ಪ್ರವೇಶಿಸದಂತೆ ತಡೆಯಲಿದೆ ಎಂದು ಅತೀಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ನೇರ ಚರ್ಚೆಗೆ ಬರುವಂತೆ ಸಿ.ಟಿ. ರವಿಗೆ ಸವಾಲು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಪೋಸ್ಟ್ ತಡೆಹಿಡಿದ ಫೇಸ್‌ಬುಕ್: ಇದು ಭಾರತದ ಪ್ರಜಾಪ್ರಭುತ್ವದ ಮೇಲಿನ ಹಸ್ತಕ್ಷೇಪ, ತಜಿಂದರ್ ಬಗ್ಗಾ ಆಕ್ರೋಶ – Kannada News | BJP Leader Bagga Questions Meta After PM Modi’s Social Media Post Faces Access Restrictions

ನವದೆಹಲಿ,ಜುಲೈ 28: ದೇಶದಲ್ಲಿ ನೀಟ್(NEET) ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ತಂದಿರುವ ಕಠಿಣ ಕಾನೂನು ಮತ್ತು ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಭಾರತದಲ್ಲಿ ವೀಕ್ಷಿಸದಂತೆ ಫೇಸ್‌ಬುಕ್ ತಡೆಹಿಡಿದಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಫೇಸ್‌ಬುಕ್ ಸಂಸ್ಥೆಯು ಭಾರತದ ಡಿಜಿಟಲ್ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಿಯಮಬಾಹಿರವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ತಜಿಂದರ್ ಬಗ್ಗಾ ಅವರ ಪ್ರಮುಖ ಆರೋಪಗಳು
ಫೇಸ್‌ಬುಕ್ ತನ್ನ ಎಲ್ಲಾ ಮಿತಿಗಳನ್ನು ಮೀರಿದೆ. ಭಾರತದ ಪ್ರಧಾನಮಂತ್ರಿಯವರ ಪೋಸ್ಟ್ ಅನ್ನು ಭಾರತೀಯರೇ ನೋಡದಂತೆ ತಡೆಯಲು ಈ ವಿದೇಶಿ ವೇದಿಕೆಗೆ ಅಧಿಕಾರ ಕೊಟ್ಟವರು ಯಾರು?” ಎಂದು ಬಗ್ಗಾ ಪ್ರಶ್ನಿಸಿದ್ದಾರೆ. ಇದು ಕೇವಲ ಕಂಟೆಂಟ್ ನಿಯಂತ್ರಣ ಅಲ್ಲ, ಬದಲಿಗೆ ಭಾರತದ ಪ್ರಜಾಪ್ರಭುತ್ವದ ಮೇಲಿನ ಶೋಚನೀಯ ಹಸ್ತಕ್ಷೇಪ. ಫೇಸ್‌ಬುಕ್ ಯಾರ ‘ಕಾನೂನುಬದ್ಧ ವಿನಂತಿ’ಯನ್ನು ಆಧರಿಸಿ ಈ ಪೋಸ್ಟ್ ತೆಗೆದುಹಾಕಿದೆ ಎಂಬುದನ್ನು ದೇಶದ ಜನರಿಗೆ ಬಹಿರಂಗಪಡಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಮತ್ತಷ್ಟು ಓದಿ: ನಾನು ಬೀದಿ ಹೋರಾಟಗಾರ: ಜೈರಾಮ್ ರಮೇಶ್ ಹೇಳಿಕೆಗೆ ಧರ್ಮೇಂದ್ರ ಪ್ರಧಾನ್ ತಿರುಗೇಟು

ದೇಶಾದ್ಯಂತ ಸದ್ದು ಮಾಡುತ್ತಿರುವ ನೀಟ್ ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾ ವಿರುದ್ಧ ಕೇಂದ್ರ ಸರ್ಕಾರ ತಂದಿರುವ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ-2026’ ಹಾಗೂ ನಂದನ್ ನಿಲೇಕಣಿ ನೇತೃತ್ವದ ಉನ್ನತಾಧಿಕಾರದ ಕಾರ್ಯಪಡೆ ರಚನೆಯ ಕುರಿತು ಪ್ರಧಾನಿ ಮೋದಿ ಪೋಸ್ಟ್ ಹಂಚಿಕೊಂಡಿದ್ದರು.

ಪೋಸ್ಟ್​

ಭಾರತದಲ್ಲಿ ಐಟಿ ಕಾಯ್ದೆಯಡಿ ಸರ್ಕಾರ ಅಥವಾ ನಿಯಂತ್ರಕ ಮಂಡಳಿಗಳ ವಿನಂತಿಯ ಮೇರೆಗೆ ನಿರ್ದಿಷ್ಟ ಪೋಸ್ಟ್‌ಗಳನ್ನು ತಡೆಯಲು ಅವಕಾಶವಿದೆಯಾದರೂ, ಸ್ವತಃ ದೇಶದ ಪ್ರಧಾನಿಯವರ ಅಧಿಕೃತ ಹೇಳಿಕೆಯ ಪೋಸ್ಟ್ ತಡೆಯಲ್ಪಟ್ಟಿರುವುದು ದೊಡ್ಡ ಮಟ್ಟದ ರಾಜಕೀಯ ಮತ್ತು ಕಾನೂನು ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳ ನಡುವೆ, ಸಾಮಾಜಿಕ ಜಾಲತಾಣ ಸಂಸ್ಥೆಗಳು ಹಾಗೂ ಕೇಂದ್ರ ಸರ್ಕಾರದ ನಡುವಿನ ಡಿಜಿಟಲ್ ನೀತಿ ನಿಯಮಗಳ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:54 am, Tue, 28 July 26

Source link

ಅಸ್ಸಾಂ ಮೆಟಲ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ: ನಾಲ್ವರು ಕಾರ್ಮಿಕರ ಸಾವು, ಮಾಲೀಕ ಸೇರಿ ಐವರ ಬಂಧನ – Kannada News | Four Workers Lose Lives in Assam Metal Plant Blast, Factory Owner Among Five Held

ಕಚಾರ್,ಜುಲೈ 28: ಅಸ್ಸಾಂನ ಕಚಾರ್ ಜಿಲ್ಲೆಯ ಲೋಹ ಸಂಸ್ಕರಣಾ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಪ್ರಬಲ ಸ್ಫೋಟ(Blast)ದಲ್ಲಿ ನಾಲ್ವರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರ್ಖಾನೆಯ ಮಾಲೀಕ ಹಾಗೂ ಮಂಡಳಿಯ ನಾಲ್ವರು ಸದಸ್ಯರು ಸೇರಿ ಐವರನ್ನು ಬಂಧಿಸಿದ್ದಾರೆ.

ಕಾರ್ಖಾನೆಯ ಒಳಗೆ ಕೆಲಸ ನಡೆಯುತ್ತಿದ್ದಾಗ ಏಕಾಏಕಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕರಗಿದ ಬಿಸಿ ಲೋಹವು ಸುತ್ತಲೂ ಸಿಡಿದು ಹತ್ತಿರದಲ್ಲಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಹಾಗೂ ಚಿಕಿತ್ಸೆ ವೇಳೆ ಮೃತಪಟ್ಟರೆ, ಗಾಯಗೊಂಡ ಇಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ನಂತರ ಗುವಾಹಟಿಯಲ್ಲಿ ತಲೆಮರೆಸಿಕೊಂಡಿದ್ದ ಕಾರ್ಖಾನೆಯ ಮಾಲೀಕನನ್ನು ಸೋಮವಾರ ಬಂಧಿಸಲಾಗಿದ್ದು, ಉಳಿದ ನಾಲ್ವರನ್ನು ಕಚಾರ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಕಠಿಣ ನಿಬಂಧನೆಗಳಡಿ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಚಲಿಸುತ್ತಿದ್ದ ಟ್ರಕ್ ಟೈರ್ ಸ್ಫೋಟ, ಮನೆಯೊಳಗೆ ನುಗ್ಗಿದ ಲಾರಿಗೆ, ಒಂದೇ ಕುಟುಂಬದ ಮೂವರು ಬಲಿ

ಪ್ರತಿಭಟನೆ ಮತ್ತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ
ಸಾರ್ವಜನಿಕರ ಆಕ್ರೋಶ: ಕಾರ್ಖಾನೆಯಲ್ಲಿ ಯಾವುದೇ ಸುರಕ್ಷತಾ ಮಾನದಂಡಗಳನ್ನು ಪಾಲಿಸುತ್ತಿರಲಿಲ್ಲ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಘಟಕದ ಹೊರಗೆ ಭಾರಿ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪೋಸ್ಟ್

ತನಿಖೆಗೆ ಆದೇಶ: ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸಚಿವ ಕೌಶಿಕ್ ರೈ, ಘಟನೆಯ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಸ್ಫೋಟದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಲಾ 5 ಲಕ್ಷ ರೂ. ಆರ್ಥಿಕ ಪರಿಹಾರ ಘೋಷಿಸಿದ್ದು, ಜಿಲ್ಲೆಯಾದ್ಯಂತ ಎಲ್ಲಾ ಕೈಗಾರಿಕಾ ಘಟಕಗಳ ಸುರಕ್ಷತಾ ತಪಾಸಣೆ ನಡೆಸಲು ಸೂಚಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:39 am, Tue, 28 July 26

Source link

ಬಿಗ್ ಬಾಸ್ ಸಂಭಾವನೆ ಗುಟ್ಟು ರಟ್ಟು ಮಾಡಿದ ಧನರಾಜ್; ಅಸಲಿ ವಿಷಯ ಕೇಳಿ ಜನ ಶಾಕ್ – Kannada News | Bigg Boss Kannada 11 Contestant Dhanraj Achar Reveals Inside Details of Contestants Remuneration

ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳಿಗೆ ಎಷ್ಟು ಸಂಭಾವನೆ ಸಿಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಈ ಪ್ರಶ್ನೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಧನರಾಜ್ ಆಚಾರ್ ಕೊನೆಗೂ ಉತ್ತರಿಸಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿರುವ ಅವರು ಸಂಭಾವನೆಯ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಧನರಾಜ್ ನೀಡಿರುವ ಈ ಮಾಹಿತಿ ಅನೇಕರಿಗೆ ತೀವ್ರ ಅಚ್ಚರಿ ಮೂಡಿಸಿದೆ.

ಬಿಗ್ ಬಾಸ್ ಮನೆಯಿಂದ ದೊಡ್ಡ ಮಟ್ಟದಲ್ಲಿ ಹಣ ಸಂಪಾದನೆ ಮಾಡಬಹುದು ಎಂದು ಧನರಾಜ್ ಹೇಳಿದ್ದಾರೆ. ಮಾಡುವವರಿಗೆ ಬಿಗ್ ಬಾಸ್‌ನಲ್ಲಿ ಸಿಕ್ಕಾಪಟ್ಟೆ ದುಡ್ಡಿದೆ ಎಂದು ಅವರು ರಿವೀಲ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ಬಿಗ್ ಬಾಸ್ ಗೆಲ್ಲುವ ವಿನ್ನರ್ ಪಡೆಯುವ ಪ್ರಶಸ್ತಿ ಮೊತ್ತದ ಅರ್ಧದಷ್ಟು ಹಣವನ್ನು ಕೆಲ ಪ್ರಮುಖ ಸ್ಪರ್ಧಿಗಳು ಸಂಭಾವನೆಯಾಗಿಯೇ ಪಡೆಯುತ್ತಾರೆ’ ಎಂಬ ವಿಷಯ ರಿವೀಲ್ ಆಗಿದೆ.

ಸಂದರ್ಶಕರು 25 ಲಕ್ಷ ರೂಪಾಯಿ ಇರಬಹುದೇ ಎಂದು ಕೇಳಿದಾಗ ಧನರಾಜ್ ನಗುತ್ತಾ ‘ತಾವು ಆ ಮೊತ್ತವನ್ನು ಬಾಯಿ ಬಿಟ್ಟು ಹೇಳುವುದಿಲ್ಲ’ ಎಂದು ಮೌನ ವಹಿಸಿದ್ದಾರೆ. ಇನ್ನು ಅತಿ ಕಡಿಮೆ ಸಂಭಾವನೆ ಯಾರಿಗೆ ಸಿಗುತ್ತದೆ ಎಂಬ ಪ್ರಶ್ನೆಗೂ ಧನರಾಜ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಅತಿ ಕಡಿಮೆ ಸಂಭಾವನೆ ಪಡೆದವರು ನಾನೇ ಇರಬೇಕು ಎಂದು ಅವರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ಮೂಲಕ ಬಿಗ್ ಬಾಸ್ ಸಂಭಾವನೆಯ ರಹಸ್ಯವನ್ನು ಧನರಾಜ್ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ‘ಅರ್ಚನಾ ಕೊಟ್ಟಿಗೆ ಬಿಗ್ ಬಾಸ್​​ಗೆ ಬರಲಿ’; ವೀಕ್ಷಕರ ಒತ್ತಾಯ

ವಿನ್ನರ್​​ಗಳಿಗೆ 50 ಲಕ್ಷ ರೂಪಾಯಿ ಸಿಗುತ್ತದೆ. ಅದರ ಅರ್ಧದಷ್ಟು ಎಂದರೆ 25 ಲಕ್ಷ ರೂಪಾಯಿ. ಇಷ್ಟು ದೊಡ್ಡ ಮೊತ್ತವನ್ನು ಸಂಭಾವನೆಯನೇಯಾಗಿಯೇ ಪಡೆದುಕೊಂಡಿದ್ದಾರೆ ಎಂದರೆ ಅದು ಯಾವ ಸ್ಪರ್ಧಿ ಇರಬಹುದು ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಾಲಕರ ಕೊರತೆಯಿಂದ ಸಂಚಾರ ಮಾಡ್ತಿಲ್ಲ ಬಿಎಂಟಿಸಿಯ 500ಕ್ಕೂ ಹೆಚ್ಚು ಇವಿ ಬಸ್! ಸಮಯಕ್ಕೆ ಬಸ್ ಸಿಗದೆ ಪ್ರಯಾಣಿಕರ ಪರದಾಟ – Kannada News | BMTC Electric Buses Hit by Driver Shortage? Bengaluru Commuters Face Delays as Hundreds of EV Buses Stay Off Roads

ಬಿಎಂಟಿಸಿಯ ಎಲೆಕ್ಟ್ರಿಕ್ (ಇವಿ) ಬಸ್‌ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜುಲೈ 28: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ ಕೆಲವು ದಿನಗಳಿಂದ ಬಿಎಂಟಿಸಿ ಬಸ್‌ಗಳು ನಿಗದಿತ ಸಮಯಕ್ಕೆ ಸಿಗುತ್ತಿಲ್ಲ ಎಂಬ ದೂರುಗಳು ಹೆಚ್ಚುತ್ತಿವೆ. ಇದರಿಂದ ಶಾಲೆ, ಕಾಲೇಜು ಹಾಗೂ ಕಚೇರಿಗಳಿಗೆ ತೆರಳುವ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪ್ರಮುಖ ಕಾರಣವಾಗಿ ಬಿಎಂಟಿಸಿಯ ಎಲೆಕ್ಟ್ರಿಕ್ (ಇವಿ) ಬಸ್‌ಗಳು ಸಮರ್ಪಕವಾಗಿ ಕಾರ್ಯಾಚರಣೆ ನಡೆಸದಿರುವುದು ಹಾಗೂ ಚಾಲಕರ ಕೊರತೆ ಎಂಬುದು ತಿಳಿದುಬಂದಿದೆ.

ನಗರದಲ್ಲಿ ಬಿಎಂಟಿಸಿಯ 15 ಎಲೆಕ್ಟ್ರಿಕ್ ಬಸ್ ಡಿಪೋಗಳಲ್ಲಿ ಒಟ್ಟು 1,760 ಇವಿ ಬಸ್‌ಗಳು ಕಾರ್ಯಾಚರಣೆಗೆ ಲಭ್ಯವಿವೆ. ಆದರೆ, ಪ್ರತಿದಿನ 500ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗೆ ಇಳಿಯುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಇದರ ಪರಿಣಾಮ ಹಲವು ಮಾರ್ಗಗಳಲ್ಲಿ ಬಸ್‌ಗಳ ನಡುವಿನ ಅಂತರ ಹೆಚ್ಚಾಗಿದ್ದು, ಪ್ರಯಾಣಿಕರು ದೀರ್ಘ ಸಮಯ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇವಿ ಬಸ್‌ಗಳ ಕಾರ್ಯಾಚರಣೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಈ ಬಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ ನಿರ್ವಾಹಕರನ್ನು (ಕಂಡಕ್ಟರ್‌ಗಳನ್ನು) ಬೇರೆ ಡಿಪೋಗಳಿಗೆ ವರ್ಗಾಯಿಸಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎನ್ನಲಾಗಿದೆ.

ಚಾಲಕರ ಕೊರತೆಗೆ ಸಂಬಳವೇ ಕಾರಣ?

ಸಾರಿಗೆ ನೌಕರರ ಮುಖಂಡ ಜಗದೀಶ್ ಅವರ ಪ್ರಕಾರ, ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆಗಳು ಚಾಲಕರಿಗೆ ಭರವಸೆ ನೀಡಿದಷ್ಟು ವೇತನ ನೀಡುತ್ತಿಲ್ಲ ಎಂಬ ಆರೋಪವಿದೆ. ಕೆಲಸಕ್ಕೆ ಸೇರಿಸಿಕೊಳ್ಳುವಾಗ 25,000 ರೂ. ಸಂಬಳ ನೀಡುವುದಾಗಿ ಹೇಳಲಾಗುತ್ತಿದೆಯಾದರೂ, ನಂತರ 20,000 ರೂ. ಮಾತ್ರ ನೀಡಲಾಗುತ್ತಿದೆ ಹಾಗೂ ವೇತನವೂ ಸಮಯಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಅನೇಕ ಚಾಲಕರು ಕೆಲಸ ತೊರೆಯುತ್ತಿದ್ದು, ಹೊಸ ಚಾಲಕರು ಸೇರ್ಪಡೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಇತರ ಆರೋಪಗಳೇನು?

ಇತ್ತೀಚೆಗೆ ಎಲೆಕ್ಟ್ರಿಕ್ ಬಸ್‌ಗಳಿಗೆ ಸಂಬಂಧಿಸಿದ ಅಪಘಾತಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅನುಭವಿ ಚಾಲಕರನ್ನು ನೇಮಕ ಮಾಡಿಕೊಳ್ಳಲು ಗುತ್ತಿಗೆ ಸಂಸ್ಥೆಗಳು ಕಷ್ಟಪಡುತ್ತಿವೆ. ಇದರ ಜೊತೆಗೆ, ಕೆಲ ಬಿಎಂಟಿಸಿ ಅಧಿಕಾರಿಗಳು ಲಂಚದ ಆಮಿಷಕ್ಕೆ ಒಳಗಾಗಿ, ಕಾರ್ಯಾಚರಣೆ ನಡೆಸದ ಕೆಲವು ಇವಿ ಬಸ್‌ಗಳನ್ನೂ ಸಂಚಾರ ನಡೆಸಿದಂತೆ ವರದಿಯಲ್ಲಿ ದಾಖಲಿಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಪ್ರಯಾಣಿಕರ ಅಳಲು

ಬಿಎಂಟಿಸಿ ಬಸ್​ಗಳ ಅಲಭ್ಯತೆ ಬಗ್ಗೆ ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸಮಯಕ್ಕೆ ಬರುತ್ತಿಲ್ಲ. ಇದರಿಂದ ದೈನಂದಿನ ಪ್ರಯಾಣದಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕ ರಾಮು ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಬಸ್‌ನಲ್ಲಿ ಸಚಿವ ಬೈರತಿ ಸುರೇಶ್ ರಿಯಾಲಿಟಿ ಚೆಕ್: ಚಿಲ್ಲರೆ ಇಲ್ಲದ್ದಕ್ಕೆ ಸಚಿವರನ್ನೇ ಬಸ್‌ನಿಂದ ಕೆಳಗಿಳಿಸಲು ಯತ್ನಿಸಿದ ಕಂಡಕ್ಟರ್

ಒಟ್ಟಾರೆ, ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ಕುಂಠಿತಗೊಂಡಿರುವುದರಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದ್ದು, ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಹಿಡಿಯುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version