ತೂಕ ಇಳಿಕೆ, ಜೀರ್ಣಕ್ರಿಯೆ, ಹೃದಯ ಆರೋಗ್ಯ ಕಾಪಾಡಲು ಒಂದು ಮುಷ್ಟಿ ಮೊಳಕೆ ಬಂದ ಮೆಂತ್ಯೆ ಸಾಕು..! – Kannada News | Sprouted Fenugreek: Health Benefits, Uses and Expert Tips

ಮೆಂತ್ಯೆ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆಯಾಗಿದ್ದರೂ, ಇದರ ಆರೋಗ್ಯ ಪ್ರಯೋಜನಗಳು ಸಾಕಷ್ಟಿದೆ. ವಿಶೇಷವಾಗಿ ಮೊಳಕೆ ಬಂದ ಮೆಂತ್ಯೆ (Sprouted Fenugreek) ಕಾಳುಗಳು ಪೌಷ್ಟಿಕಾಂಶಗಳ ಉತ್ತಮ ಮೂಲವಾಗಿದ್ದು, ಜೀರ್ಣಕ್ರಿಯೆ ಸುಧಾರಿಸುವುದರಿಂದ ಹಿಡಿದು ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಅದರಲ್ಲಿಯೂ ಮೆಂತ್ಯೆ ಕಾಳುಗಳನ್ನು ಮೊಳಕೆ ಬರಿಸಿದಾಗ ಅವುಗಳಲ್ಲಿರುವ ಕೆಲವು ವಿಟಮಿನ್‌, ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ದೇಹಕ್ಕೆ ಸುಲಭವಾಗಿ ಹೀರಿಕೊಳ್ಳಲು ಸಹಾಯ ನಡುತ್ತದೆ.

ಮೊಳಕೆ ಬಂದ ಮೆಂತ್ಯೆ ಆರೋಗ್ಯಕ್ಕೆ ಹೇಗೆ ಸಹಕಾರಿ?

ಜೀರ್ಣಕ್ರಿಯೆ ಸುಧಾರಿಸುತ್ತದೆ: ಮೆಂತ್ಯೆಯಲ್ಲಿ ಫೈಬರ್ ಅಧಿಕ ಪ್ರಮಾಣದಲ್ಲಿದ್ದು, ಮಲಬದ್ಧತೆ, ಅಜೀರ್ಣ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿಯೂ ಇದು ನೆರವಾಗುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ: ಕೆಲವು ಅಧ್ಯಯನಗಳ ಪ್ರಕಾರ ಮೆಂತ್ಯೆಯಲ್ಲಿರುವ ಕರಗುವ ನಾರಿನ ಅಂಶ (Soluble Fiber) ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಮೂಲಕ ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಆದರೆ ಇದು ಮಧುಮೇಹದ ಔಷಧಿಗೆ ಪರ್ಯಾಯವಲ್ಲ.

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ: ನಿಯಮಿತ ಪ್ರಮಾಣದಲ್ಲಿ ಮೆಂತ್ಯೆ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು ಎಂದು ಕೆಲವು ಸಂಶೋಧನೆಗಳು ಸೂಚಿಸಿವೆ. ಇದರಿಂದ ಹೃದಯದ ಆರೋಗ್ಯಕ್ಕೂ ಪ್ರಯೋಜನವಾಗಬಹುದು.

ತೂಕ ಇಳಿಕೆಗೆ ನೆರವಾಗಬಹುದು: ಮೆಂತ್ಯೆಯಲ್ಲಿರುವ ಫೈಬರ್ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ಅನಗತ್ಯ ಹಸಿವು ಕಡಿಮೆಯಾಗಬಹುದು ಮತ್ತು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಬಹುದು.

ಚರ್ಮ ಮತ್ತು ಕೂದಲಿನ ಆರೋಗ್ಯ: ಮೆಂತ್ಯೆಯಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಖನಿಜಾಂಶಗಳು ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡಬಹುದು. ಫ್ರೀ ರ್ಯಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಸಹಕಾರಿ.

ಮಹಿಳೆಯರ ಆರೋಗ್ಯ: ಮೆಂತ್ಯೆಯಲ್ಲಿ ಇರುವ ಕೆಲವು ಸಸ್ಯ ಮೂಲದ ಸಂಯುಕ್ತಗಳು (Phytoestrogens) ಮಹಿಳೆಯರ ಹಾರ್ಮೋನ್ ಸಮತೋಲನಕ್ಕೆ ನೆರವಾಗಬಹುದು ಎಂಬುದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಆದರೆ PCOS, ಥೈರಾಯ್ಡ್ ಅಥವಾ ಇತರ ಹಾರ್ಮೋನ್ ಸಮಸ್ಯೆಗಗಳಿಗೆ ಇದನ್ನೇ ಅವಲಂಬಿಸುವುದು ಸರಿಯಲ್ಲ. ವೈದ್ಯರ ಸಲಹೆಯೊಂದಿಗೆ ಮಾತ್ರ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು.

ಇದನ್ನೂ ಓದಿ: ಮೊಳಕೆಯೊಡೆದ ಹೆಸರುಕಾಳು vs ಮೊಳಕೆ ಬಂದ ಕಪ್ಪು ಕಡಲೆ: ಯಾವುದು ನಿಜವಾದ ಸೂಪರ್‌ಫುಡ್ ತಿಳಿದುಕೊಳ್ಳಿ

ಮೆಂತ್ಯೆಯನ್ನು ಹೇಗೆ ಸೇವಿಸಬೇಕು?

  • ಒಂದು ಮುಷ್ಟಿ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ.
  • ನಂತರ ನೀರನ್ನು ಸೋಸಿ 1– 2 ದಿನ ಬಟ್ಟೆಯಲ್ಲಿ ಅಥವಾ ಮೊಳಕೆ ಬರುವ ಪಾತ್ರೆಯಲ್ಲಿ ಇಡಿ.
  • ಮೊಳಕೆ ಬಂದ ಬಳಿಕ ಬೆಳಿಗ್ಗೆ ಸೇವಿಸಬಹುದು.
  • ಆರಂಭದಲ್ಲಿ 1– 2 ಟೇಬಲ್ ಸ್ಪೂನ್ ಸಾಕು.
  • ಸಲಾಡ್, ಮೊಳಕೆ ಮಿಶ್ರಣ, ಮೊಸರು ಅಥವಾ ಸ್ಮೂಥಿಗೆ ಸೇರಿಸಿ ಸೇವಿಸಬಹುದು.

ಯಾರು ಎಚ್ಚರಿಕೆಯಿಂದ ಸೇವಿಸಬೇಕು?

  • ಗರ್ಭಿಣಿಯರು ವೈದ್ಯರ ಸಲಹೆಯಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು.
  • ಮಧುಮೇಹದ ಔಷಧಿ ಸೇವಿಸುವವರು ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ವೈದ್ಯರ ಸಲಹೆ ಪಡೆಯಬೇಕು.
  • ರಕ್ತ ತೆಳುವಾಗಿಸುವ ಔಷಧಿ (Blood Thinners) ಬಳಸುವವರು ಎಚ್ಚರಿಕೆ ವಹಿಸಬೇಕು.
  • ಕೆಲವರಿಗೆ ಹೊಟ್ಟೆ ಉಬ್ಬರ ಅಥವಾ ಅಲರ್ಜಿ ಕಾಣಿಸಬಹುದು.

ಮೆಂತ್ಯೆ ಆರೋಗ್ಯಕರ ಆಹಾರದ ಭಾಗವಾಗಬಹುದು. ಆದರೆ ಯಾವುದೇ ಒಂದು ಆಹಾರವೇ ಎಲ್ಲ ಕಾಯಿಲೆಗಳಿಗೆ ಪರಿಹಾರವಲ್ಲ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ವೈದ್ಯರ ಸಲಹೆ ಇವೆಲ್ಲವೂ ಉತ್ತಮ ಆರೋಗ್ಯಕ್ಕೆ ಅಗತ್ಯ.

ಸೂಚನೆ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ಮಧುಮೇಹ, ಹಾರ್ಮೋನ್ ಸಮಸ್ಯೆಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆದು ಆ ಬಳಿಕ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಏರ್ಲೈನ್ಸ್ ಕಟ್ಟಲಿರುವ ಅದಾನಿ; ಎರಡೇ ಕಂಪನಿಗಳ ಪ್ರಾಬಲ್ಯದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸಾಧ್ಯತೆ – Kannada News | Adani Group may enter Airlines business in India, says report

ನವದೆಹಲಿ, ಜುಲೈ 23: ಭಾರತದ ಪ್ರಮುಖ ಕೈಗಾರಿಕೋದ್ಯಮಿ ಗೌತಮ್ ಅದಾನಿ (Gautam Adani) ಅವರು ವೈಮಾನಿಕ ಕ್ಷೇತ್ರಕ್ಕೆ ಲಗ್ಗೆ ಇಡಲು ಯೋಚಿಸುತ್ತಿದ್ದಾರೆ. ಈಗಾಗಲೇ ಪೋರ್ಟ್, ಏರ್​ಪೋರ್ಟ್​ಗಳ ನಿರ್ಮಾಣ ಮತ್ತು ನಿರ್ವಹಣೆಯ ಬ್ಯುಸಿನೆಸ್​ನಲ್ಲಿರುವ ಅದಾನಿ ಗ್ರೂಪ್ ಈಗ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಕ್ಷೇತ್ರಕ್ಕೆ (Airlines Business) ಅಡಿ ಇಟ್ಟರೆ ಅಚ್ಚರಿ ಇಲ್ಲ. ಏರ್ಪೋರ್ಟ್​ಗಳನ್ನು ನಿರ್ವಹಿಸುತ್ತಿದ್ದರೂ ಏರ್ಲೈನ್ಸ್ ಸಂಸ್ಥೆ ಸ್ಥಾಪಿಸುವ ಇರಾದೆ ಇಲ್ಲ ಎಂದು ಅದಾನಿ ಹೇಳಿದ್ದರಾದರೂ ಮಾಧ್ಯಮಗಳ ವರದಿ ಪ್ರಕಾರ ಅವರು ಆ ಹೆಜ್ಜೆಯನ್ನೂ ಇರಿಸಬಹುದು ಎನ್ನಲಾಗಿದೆ.

ವರದಿಗಳ ಪ್ರಕಾರ, ಅದಾನಿ ಗ್ರೂಪ್ ಹೊಸ ಏರ್​ಲೈನ್ಸ್ ಸಂಸ್ಥೆಯನ್ನೇ ಹುಟ್ಟುಹಾಕಬಹುದು, ಅಥವಾ ಈಗಿರುವ ಒಂದು ಏರ್ಲೈನ್ಸ್ ಕಂಪನಿಯನ್ನೇ ಖರೀದಿಸಬಹುದು. ಭಾರತದಲ್ಲಿ ಏರ್ಲೈನ್ಸ್ ಉದ್ಯಮ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದೆ. ಇಲ್ಲಿ ದೊಡ್ಡ ಲಾಭ ಮಾಡಿದ ಕಂಪನಿಗಳಿಲ್ಲ. ಹಲವು ಕಂಪನಿಗಳು ಸರಿಯಾದ ನಿರ್ವಹಣೆ ಇಲ್ಲದೆ ಪತನಗೊಂಡಿರುವುದುಂಟು. ಸದ್ಯ ಇಂಡಿಗೋ ಮತ್ತು ಏರ್ ಇಂಡಿಯಾ ಮಾತ್ರವೇ ಇರುವ ಪ್ರಮುಖ ದೊಡ್ಡ ಏರ್ಲೈನ್ಸ್ ಸಂಸ್ಥೆಗಳು. ಸಣ್ಣ ಪುಟ್ಟ ವೈಮಾನಿಕ ಕಂಪನಿಗಳು ಈಗೀಗ ಶುರುವಾಗುತ್ತಿವೆ. ಅದಾನಿ ಗ್ರೂಪ್ ಈ ಬ್ಯುಸಿನೆಸ್​ಗೆ ಇಳಿದರೆ ಉದ್ಯಮಕ್ಕೆ ಹೊಸ ಬಲ ಸಿಕ್ಕಂತಾಗಬಹುದು.

ಈ ಉದ್ಯಮದಲ್ಲಿನ ಸಾಧಕ ಮತ್ತು ಬಾಧಕಗಳನ್ನು ಅದಾನಿ ಗ್ರೂಪ್ ಅವಲೋಕಿಸುತ್ತಿದೆ. ವಿಮಾನಗಳ ಆಪರೇಟಿಂಗ್ ವೆಚ್ಚ ಬಹಳ ಅಧಿಕ ಇದೆ. ಫ್ಲೈಟ್ ನಿಲುಗಡೆ, ಪೈಲಟ್​ಗಳು ಹಾಗೂ ಅಗತ್ಯ ಸಿಬ್ಬಂದಿ ಕೊರತೆ ಇತ್ಯಾದಿ ಸಮಸ್ಯೆಗಳು ಈ ಉದ್ಯಮವನ್ನು ಕಾಡುತ್ತಿದೆ.

ಇದನ್ನೂ ಓದಿ: ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ

ಗೌತಮ್ ಅದಾನಿ ಉದ್ಯಮ ಪ್ರಪಂಚ ಇದು

ಅದಾನಿ ಗ್ರೂಪ್ ಬಹಳ ಹಾರ್ಡ್​ಕೋರ್ ಬ್ಯುಸಿನೆಸ್​ಗಳಲ್ಲಿ ಇದೆ. ಏರ್ಪೋರ್ಟ್, ಬಂದರು, ಸಿಮೆಂಟ್, ರಿಯಲ್ ಎಸ್ಟೇಟ್, ಇನ್​ಫ್ರಾಸ್ಟ್ರಕ್ಚರ್ ಇತ್ಯಾದಿ ಹಲವು ಕ್ಷೇತ್ರದಲ್ಲಿ ಉಪಸ್ಥಿತಿ ಇದೆ. ಅದರ ಪ್ರಾಬಲ್ಯ ಇರುವ ಕೆಲ ಪ್ರಮುಖ ಕ್ಷೇತ್ರಗಳ ಪರಿಚಯ ಇಲ್ಲಿದೆ:

  • ಏರ್​ಪೋರ್ಟ್ ಬ್ಯುಸಿನೆಸ್: ಅದಾನಿ ಗ್ರೂಪ್ 2019ರಲ್ಲಿ ಏರ್ಪೋರ್ಟ್ ನಿರ್ವಹಣೆಯ ಬ್ಯುಸಿನೆಸ್​ಗೆ ಇಳಿದಿದೆ. ಮುಂಬೈ, ಜೈಪುರ್, ತಿರುವನಂತಪುರಂ ಸೇರಿದಂತೆ ಎಂಟು ಏರ್ಪೋರ್ಟ್​ಗಳನ್ನು ಇದು ನಿರ್ವಹಿಸುತ್ತಿದೆ.
  • ಬಂದರುಗಳು: ಪೋರ್ಟ್ಸ್ ಬ್ಯುಸಿನೆಸ್​ನಲ್ಲಿ ಅದಾನಿ ಗ್ರೂಪ್ ಬಹಳ ಗಟ್ಟಿ ಇದೆ. ಭಾರತದೊಳಗೆ 15 ಪೋರ್ಟ್​ಗಳನ್ನು ಅದು ನಿರ್ವಹಿಸುತ್ತದೆ. ಭಾರತದ ಅತ್ಯಂತ ಬ್ಯುಸಿ ಇರುವ ಖಾಸಗಿ ಪೋರ್ಟ್ ಆದ ಮುಂದ್ರಾ ಕೂಡ ಅದಾನಿ ಸುಪರ್ದಿಯಲ್ಲಿದೆ. ಭಾರತದಲ್ಲಷ್ಟೇ ಅಲ್ಲ, ಆಸ್ಟ್ರೇಲಿಯಾ, ಶ್ರೀಲಂಕಾ, ಇಸ್ರೇಲ್ ಮತ್ತು ತಾಂಜಾನಿಯಾದಲ್ಲೂ ಪೋರ್ಟ್ ನಿರ್ವಹಣೆಯ ಬ್ಯುಸಿನೆಸ್ ಅನ್ನು ಅದಾನಿ ಗ್ರೂಪ್ ಹೊಂದಿದೆ.
  • ಸಿಮೆಂಟ್ ಉದ್ಯಮ: ಮೂರ್ನಾಲ್ಕು ವರ್ಷದ ಹಿಂದಷ್ಟೇ ಸಿಮೆಂಟ್ ಉದ್ಯಮಕ್ಕೆ ಕಾಲಿಟ್ಟ ಅದಾನಿ ಗ್ರೂಪ್ ಈಗ ಪ್ರಮುಖ ಸಿಮೆಂಟ್ ಕಂಪನಿಗಳನ್ನು ಖರೀದಿಸುತ್ತಿದೆ. ಅಂಬುಜಾ ಸಿಮೆಂಟ್ಸ್​ನಲ್ಲಿ ಪ್ರಮುಖ ಪಾಲನ್ನು ಹೊಂದಿರುವ ಸಂಸ್ಥೆ, ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಖರೀದಿಗೂ ಮುಂದಾಗಿದೆ.
  • ಇಂಧನ ಉದ್ಯಮ: ಅದಾನಿ ಪವರ್, ಅದಾನಿ ಗ್ರೀನ್ ಎನರ್ಜಿ ಸಂಸ್ಥೆಗಳ ಮೂಲಕ ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಪ್ರಬಲ ಉಪಸ್ಥಿತಿ ಹೊಂದಿದೆ. ಪಿಎನ್​ಜಿ ವಿತರಣೆ ಕೂಡ ಮಾಡುತ್ತದೆ.
  • ಡಾಟಾ ಸೆಂಟರ್ಸ್: ಭಾರತದಲ್ಲಿ ಡೇಟಾ ಸೆಂಟರ್ ನಿರ್ಮಾಣಕ್ಕೂ ಅದಾನಿ ಗ್ರೂಪ್ ಎಂಟ್ರಿ ಕೊಟ್ಟಿದೆ. ಕೆಲ ತಿಂಗಳ ಹಿಂದಷ್ಟೇ ಊಬರ್​ಗೆ ಭಾರತದಲ್ಲಿ ಮೊದಲ ಡೇಟಾ ಸೆಂಟರ್ ನಿರ್ಮಾಣ ಮಾಡಿಕೊಡಲಿದೆ. ತನ್ನ ನವೀಕರಣ ಇಂಧನ ಉತ್ಪಾದನೆಯ ಶಕ್ತಿಯನ್ನು ಡೇಟಾ ಸೆಂಟರ್​ಗೆ ಉಪಯೋಗಿಸಿ, ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಅದಾನಿ ಮುಂದಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರ ಸರ್ಕಾರ ಭರವಸೆಗೂ ಒಪ್ಪದ ಸಿಜೆಪಿ; ನಾಳೆ ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ – Kannada News | Cockroach Janta Party CJP calls nationwide protest on July 24 despite Government assurance on paper leaks

ನವದೆಹಲಿ, ಜುಲೈ 23: ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ ನಡೆದ ಅಕ್ರಮಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಾಳೆ (ಜುಲೈ 24) ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಚರ್ಚೆ ನಡೆಸುವುದಾಗಿ ಕೇಂದ್ರ ಸರ್ಕಾರವು ಪದೇ ಪದೇ ಭರವಸೆ ನೀಡಿ, ಮಾತುಕತೆಗೆ ಆಹ್ವಾನಿಸುತ್ತಿದ್ದರೂ ಸಿಜೆಪಿ ಬೆಂಬಲಿಗರು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಒಂದೇ ದಿನ, ಒಂದೇ ಬೇಡಿಯೊಂದಿಗೆ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಲು ಸಿಜೆಪಿ ಸಜ್ಜಾಗಿದೆ.

“ದೇಶಾದ್ಯಂತ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಈ ದೇಶವ್ಯಾಪಿ ಪ್ರತಿಭಟನೆಯನ್ನು ಕರೆಯಲಾಗಿದೆ” ಎಂದು ಸಿಜೆಪಿ ತಿಳಿಸಿದೆ. ಪ್ರತಿಭಟನೆಯ ಅನುಮತಿ ಮತ್ತು ಸಾರಿಗೆ ವ್ಯವಸ್ಥೆಗಳಿಗಾಗಿ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಮತ್ತು ಗುಂಪುಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದೆ.

“ಸಾರ್ವಜನಿಕರ ಮುಂದೆ ವಿದ್ಯಾರ್ಥಿಗಳ ಬೇಡಿಕೆಗಳನ್ನು ಗಟ್ಟಿಯಾಗಿ ಓದಿ ಹೇಳಿ. ಪೊಲೀಸ್ ದೌರ್ಜನ್ಯ ಎದುರಿಸಿದವರಿಗೆ ಬೆಂಬಲ ಹಾಗೂ ಒಗ್ಗಟ್ಟು ಪ್ರದರ್ಶಿಸಿ. ಇಂಕಿಲಾಬ್ ಜಿಂದಾಬಾದ್, ಭಾರತ ಮಾತಾ ಕಿ ಜೈ” ಎಂದು ಸಿಜೆಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ‘ಯಾವುದೇ ಸ್ಥಳದಲ್ಲಿ, ಯಾವ ಸಮಯದಲ್ಲಾದರೂ ಚರ್ಚೆಗೆ ಸಿದ್ಧ’; 4ನೇ ಬಾರಿ ಸಿಜೆಪಿಗೆ ಕೇಂದ್ರ ಸರ್ಕಾರ ಆಹ್ವಾನ

ಪ್ರಧಾನಿ ಮೋದಿಯ ಭರವಸೆ ನಡುವೆಯೂ ಪ್ರತಿಭಟನೆ:

ಪೇಪರ್ ಲೀಕ್ ಪ್ರಕರಣಗಳಲ್ಲಿ ಭಾಗಿಯಾದ ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಪದೇ ಪದೇ ಭರವಸೆ ನೀಡಿದೆ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಇಂದು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಶೀಘ್ರ ತನಿಖೆಗೆ ‘ಫಾಸ್ಟ್ ಟ್ರ್ಯಾಕ್ ಕೋರ್ಟ್’ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಸರ್ಕಾರವು ಸಿಜೆಪಿ ಪ್ರತಿನಿಧಿಗಳನ್ನು ಮಾತುಕತೆಗೆ ಆಹ್ವಾನಿಸಿದ್ದರೂ, ಪ್ರತಿಭಟನಾಕಾರರು ಈ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವವರೆಗೂ ತಮ್ಮ ಹೋರಾಟವನ್ನು ಅಂತ್ಯಗೊಳಿಸುವುದಿಲ್ಲ ಎಂದು ಸಿಜೆಪಿ ನಾಯಕರು ತಿಳಿಸಿದ್ದಾರೆ.

ಪ್ರತಿಭಟನಾಕಾರರಿಗೆ ಸಿಜೆಪಿ ನೀಡಿದ ಪ್ರಮುಖ ಸೂಚನೆಗಳು:

ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಹಿಂಸಾಚಾರಕ್ಕೆ ಇಳಿಯದೆ, ಸಂಪೂರ್ಣ ಶಾಂತಿಯುತವಾಗಿ ಹಾಗೂ ಅಹಿಂಸಾತ್ಮಕವಾಗಿ ನಡೆದುಕೊಳ್ಳಬೇಕು ಎಂದು ಸಿಜೆಪಿ ಸೂಚನೆ ನೀಡಿದೆ. ಪ್ರತಿಭಟನಾಕಾರರಿಗೆ ನೀಡಿದ ಮುಖ್ಯ ಸೂಚನೆಗಳೆಂದರೆ,

ಸಕಾರಾತ್ಮಕ ಘೋಷಣೆಗಳನ್ನು ಕೂಗಿ:

ಪ್ರತಿಭಟನಾಕಾರರು ಕೇವಲ “ಜೈ ಹಿಂದ್, ಭಾರತ ಮಾತಾ ಕಿ ಜೈ, ಇಂಕಿಲಾಬ್ ಜಿಂದಾಬಾದ್, ಜೈ ಭೀಮ್”ನಂತಹ ಸಕಾರಾತ್ಮಕ ಘೋಷಣೆಗಳನ್ನು ಮಾತ್ರ ಕೂಗಬೇಕು. ಪ್ರತಿಯೊಂದು ಘಟನೆಯನ್ನು ರೆಕಾರ್ಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: ನೀಟ್ ಪೇಪರ್ ಸೋರಿಕೆ: ಮೌನ ಮುರಿದ ಪ್ರಧಾನಿ, ಫಾಸ್ಟ್​ ಟ್ರ್ಯಾಕ್ ಕೋರ್ಟ್​ ಮಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡ್ತೀವಿ ಎಂದ ಮೋದಿ

ನಿಯಮಗಳ ಪಾಲನೆ:

ನಿಗದಿಪಡಿಸಿದ ಸ್ಥಳದಲ್ಲಿ ಹಾಗೂ ಮಾರ್ಗಗಳಲ್ಲಿ ಮಾತ್ರ ಮೆರವಣಿಗೆ ನಡೆಸಬೇಕು. ಯಾವುದೇ ಪ್ರಚೋದನಕಾರಿ, ನಿಂದನೀಯ, ಕೋಮು ದ್ವೇಷದ ಅಥವಾ ಆಕ್ಷೇಪಾರ್ಹ ಭಾಷೆಯನ್ನು ಬಳಸಬಾರದು.

ಆಯುಧಗಳ ನಿಷೇಧ:

ಲಾಠಿ, ಕೋಲು ಸೇರಿದಂತೆ ಯಾವುದೇ ರೀತಿಯ ಆಯುಧಗಳನ್ನು ತರಲು ಯಾರಿಗೂ ಅನುಮತಿಯಿಲ್ಲ. ಪ್ರತಿಭಟನಾಕಾರರು 2-3 ಜನರ ಗುಂಪುಗಳಲ್ಲಿಯೇ ಇರಬೇಕು.

ಸಂಚಾರಕ್ಕೆ ಅಡ್ಡಿ ಬೇಡ:

ಪ್ರತಿಭಟನೆಯ ವೇಳೆ ಸಾರ್ವಜನಿಕ ವಾಹನ ಸಂಚಾರಕ್ಕೆ ಅಡ್ಡಿಪಡಿಸಬಾರದು. ಯಾವುದೇ ಸುಳ್ಳು ಸುದ್ದಿ ಅಥವಾ ದೃಢಪಡಿಸದ ಮಾಹಿತಿಯನ್ನು ಹರಡಬಾರದು.

ತುರ್ತು ಸಂಪರ್ಕ ಸಂಖ್ಯೆಗಳು:

“ನಿಮ್ಮ ಮುಂಗೈ ಮೇಲೆ ಮಾರ್ಕರ್‌ನಿಂದ ಮತ್ತು ಜೇಬಿನಲ್ಲಿರುವ ಕಾರ್ಡ್‌ನಲ್ಲಿ ವಕೀಲರ ಅಥವಾ ಕಾನೂನು ವಿದ್ಯಾರ್ಥಿಯ ನಂಬರ್ ಹಾಗೂ ಒಂದು ತುರ್ತು ಸಂಪರ್ಕ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ. ಒತ್ತಡದ ಸಮಯದಲ್ಲಿ ನೆನಪು ತಪ್ಪಬಹುದು ಅಥವಾ ಮೊಬೈಲ್ ಬ್ಯಾಟರಿ ಖಾಲಿಯಾಗಬಹುದು ಅಥವಾ ಹಾಳಾಗಬಹುದು” ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ.

ಪ್ರಚೋದನೆಗೆ ಒಳಗಾಗಬೇಡಿ:

ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ ಸೃಷ್ಟಿಸಲು ಯತ್ನಿಸುವ ಕಿಡಿಗೇಡಿಗಳ ಬಗ್ಗೆ ಎಚ್ಚರದಿಂದಿರಲು ಮತ್ತು ಪೋಲಿಸರೊಂದಿಗೆ ಸಹಕರಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಕಿಡಿಗೇಡಿತನ ಕಂಡರೆ ಸುಮ್ಮನಿರಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ವರದಿ ಮಾಡಿ ಮತ್ತು ಸುತ್ತಮುತ್ತಲಿನವರ ನೆರವು ಪಡೆಯಿರಿ. ಯಾರಾದರೂ ಪ್ರಚೋದಿಸಿದರೆ ಪ್ರತಿಕ್ರಿಯಿಸದೆ, ಮಾರ್ಷಲ್‌ಗಳಿಗೆ ಮಾಹಿತಿ ನೀಡಿ ಎಂದು ಪ್ರತಿಭಟನಾಕಾರರಿಗೆ ಸೂಚಿಸಲಾಗಿದೆ.

ರಾಜಧಾನಿ ದೆಹಲಿ ಸೇರಿದಂತೆ ಮುಂಬೈ, ಕೊಲ್ಕತ್ತಾ ಹಾಗೂ ಇತರ ಪ್ರಮುಖ ನಗರಗಳಲ್ಲಿ ಜುಲೈ 24ರ ಪ್ರತಿಭಟನೆಗೆ ಭಾರಿ ಬೆಂಬಲ ವ್ಯಕ್ತವಾಗುವ ಸಾಧ್ಯತೆಯಿದ್ದು, ಭದ್ರತಾ ಪಡೆಗಳು ಹೆಚ್ಚಿನ ಎಚ್ಚರ ವಹಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Aadhaar: ನಿಮ್ಮ ಆಧಾರ್ ಬಯೋಮೆಟ್ರಿಕ್‌ ಡೇಟಾ ಸುರಕ್ಷಿತವಾಗಿರಲು ಈ ರೀತಿ ಲಾಕ್ ಮಾಡಿ – Kannada News | Aadhaar: How to lock Aadhaar biometrics Data

ಬ್ಯಾಂಕ್, ಸಿಮ್ ಕಾರ್ಡ್ ಖರೀದಿ, ಸರ್ಕಾರದ ಸೌಲಭ್ಯ ಸೇರಿದಂತೆ ಪ್ರತಿಯೊಂದು ಕೆಲಸಗಳಿಗೂ ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯ. ಇದು ಪ್ರತಿಯೊಬ್ಬ ಭಾರತೀಯನ ಅತ್ಯಂತ ಪ್ರಮುಖ ಗುರುತಿನ ದಾಖಲೆಯಲ್ಲಿ ಒಂದಾಗಿದೆ. ಹೀಗಿರುವಾಗ ಆಧಾರ್ ಕಾರ್ಡ್ ನಲ್ಲಿ ಮಾಹಿತಿಯನ್ನು ದುರುಪಯೋಗ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಈ ಹಿನ್ನಲೆಯಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ವಿಶೇಷ ಸೌಲಭ್ಯವನ್ನು ತಂದಿದೆ. ಮಾಹಿತಿ ದುರಪಯೋಗ ಆಗಬಾರದು ಎನ್ನುವ ದೃಷ್ಟಿಯಿಂದ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮತ್ತು ಅನ್‌ಲಾಕ್ ಮಾಡುವ ವಿಶೇಷ ಸೌಲಭ್ಯ ಒದಗಿಸಿದೆ. ಆಧಾರ್ ಬಯೋಮೆಟ್ರಿಕ್ ಡೇಟಾವನ್ನು mAadhaar ಅಪ್ಲಿಕೇಶನ್ ಅಥವಾ UIDAI ಅಧಿಕೃತ ವೆಬ್‌ಸೈಟ್ ಬಳಸಿ ಸುಲಭವಾಗಿ ಲಾಕ್ ಅಥವಾ ಅನ್‌ಲಾಕ್ ಮಾಡಬಹುದು.

ಅಧಿಕೃತ ವೆಬ್ಸೈಟ್‌ನಲ್ಲಿ ಬಯೋಮೆಟ್ರಿಕ್ ಡೇಟಾ ಲಾಕ್ ಮಾಡುವುದು ಹೇಗೆ?

ಹಂತ 1: UIDAI ಪೋರ್ಟಲ್‌ಗೆ ಭೇಟಿ ನೀಡಿ. ಆಧಾರ್ ಸೇವೆಗಳ ವಿಭಾಗದಿಂದ “ಲಾಕ್/ಅನ್‌ಲಾಕ್ ಬಯೋಮೆಟ್ರಿಕ್ಸ್” ಆಯ್ಕೆಮಾಡಿ.

ಹಂತ 2: 12-ಅಂಕಿಯ ಆಧಾರ್ ಸಂಖ್ಯೆ, ಭದ್ರತಾ ಕೋಡ್ ನಮೂದಿಸಿ ಮತ್ತು ಒಟಿಪಿ ಕಳುಹಿಸು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 3: ಆಧಾರ್‌ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.

ಹಂತ 4: ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿ ಅನ್ನು ನಮೂದಿಸಿ. ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 5: ಸ್ಕ್ರೀನ್ ಮೇಲೆ ನಮೂದಿಸಲಾದ 4 ಅಂಕಿಯ ಭದ್ರತಾ ಕೋಡ್ ಅನ್ನು ನಮೂದಿಸಿ ಮತ್ತು ಸಕ್ರಿಯಗೊಳಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರೆ,  ನಿಮ್ಮ ಬಯೋಮೆಟ್ರಿಕ್ಸ್ ಲಾಕ್ ಆಗುತ್ತದೆ.

mAadhaar ಆಪ್ ಮೂಲಕ ಡೇಟಾ ಲಾಕ್ ಮಾಡುವುದು ಹೇಗೆ?

ಹಂತ 1: ನಿಮ್ಮ mAadhaar ಅಪ್ಲಿಕೇಶನ್‌ಗೆ ಲಾಗಿನ್ ಆಗಿರಿ.

ಹಂತ 2: ಅಪ್ಲಿಕೇಶನ್‌ನ ಮೇಲಿನ ಬಲ ಬದಿಯಲ್ಲಿರುವ ಹ್ಯಾಂಬರ್ಗರ್ ಐಕಾನ್ ಮೇಲೆ ಕ್ಲಿಕ್ ಮಾಡಿ.

ಹಂತ 3: ಬಯೋಮೆಟ್ರಿಕ್ ಸೆಟ್ಟಿಂಗ್‌ಗಳ ಆಯ್ಕೆಯನ್ನು ಆಯ್ಕೆ ಮಾಡಿ.

ಹಂತ 4: ಬಯೋಮೆಟ್ರಿಕ್ ಲಾಕಿಂಗ್ ಅನ್ನು ಸಕ್ರಿಯಗೊಳಿಸಿ ಆಯ್ಕೆಯನ್ನು ಟಿಕ್ ಮಾಡಿ.

ಹಂತ 5: ನಿಮ್ಮ ಮೊಬೈಲ್ ಸಂಖ್ಯೆಯಿಂದ ಒಟಿಪಿ ವಿನಂತಿಸಲಾಗುತ್ತದೆ. ಇದು ಅಪ್ಲಿಕೇಶನ್‌ನಲ್ಲಿ ಸ್ವಯಂಚಾಲಿತವಾಗಿ ನೀಡಲಾಗುತ್ತದೆ.

ಹಂತ 6: ನೀವು ಒಟಿಪಿ ನಮೂದಿಸಿದ ಬಳಿಕ ಬಯೋಮೆಟ್ರಿಕ್ ಲಾಕ್ ಆಗುತ್ತದೆ.

ಇದನ್ನೂ ಓದಿ: Aadhar Card: ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ನಂಬರ್‌ನ್ನು ಹೀಗೆ ತಿದ್ದುಪಡಿ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವುದು ಎಷ್ಟು ಮುಖ್ಯ?

ಉತ್ತರ: ಸುರಕ್ಷತೆಗೆ ಹಾಗೂ ಡೇಟಾ ದುರಪಯೋಗ ಆಗಬಾರದು ಎನ್ನುವ ದೃಷ್ಟಿಯಿಂದ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವುದು ಬಹಳ ಮುಖ್ಯ.

ಪ್ರಶ್ನೆ: ಆಧಾರ್ ಬಯೋಮೆಟ್ರಿಕ್ ಡೇಟಾ ಲಾಕ್ ಮಾಡುವುದು ಹೇಗೆ?

ಉತ್ತರ: ಆಧಾರ್ ಬಯೋಮೆಟ್ರಿಕ್ ಡೇಟಾವನ್ನು mAadhaar ಅಪ್ಲಿಕೇಶನ್ ಅಥವಾ UIDAI ಅಧಿಕೃತ ವೆಬ್‌ಸೈಟ್ ಬಳಸಿ

ಪ್ರಶ್ನೆ: ಬಯೋಮೆಟ್ರಿಕ್ ಡೇಟಾ ಎಷ್ಟು ನಿಮಿಷದವರೆಗೆ ಆನ್ ಲಾಕ್ ಆಗಿರುತ್ತದೆ?

ಉತ್ತರ: ಬಯೋಮೆಟ್ರಿಕ್ ಮಾಹಿತಿಯು 10 ನಿಮಿಷಗಳವರೆಗೆ ಮಾತ್ರ ಅನ್‌ಲಾಕ್ ಆಗಿರುತ್ತದೆ, ನಂತರ ಅದು ಸ್ವಯಂಚಾಲಿತವಾಗಿ ಮರು-ಲಾಕ್ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:32 pm, Thu, 23 July 26

Source link

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತೆ ಏರಿಕೆ: ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ – Kannada News | Bengaluru Mysore Expressway Toll Rates Hiked Again: Check New Toll Tariffs for Cars, Buses, and Heavy Vehicles

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತೆ ಏರಿಕೆ

ಬೆಂಗಳೂರು, ಜುಲೈ 23: ಮೂರು ತಿಂಗಳೊಳಗೆ ಎರಡನೇ ಬಾರಿಗೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯ ಟೋಲ್​​ ದರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಷ್ಕರಿಸಿದ್ದು, ಕನಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳ ಮಾಡಲಾಗಿದೆ. ಆ ಮೂಲಕ ವಾಹನ ಸವಾರರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟಿದೆ. ಹೊಸ ದರಗಳು ಜುಲೈ 21ರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದ್ದು, ಎನ್‌ಎಚ್-275ರ ಆರು ಪಥದ ಬೆಂಗಳೂರು–ನಿಡಘಟ್ಟ ಮಾರ್ಗಕ್ಕೆ ಅನ್ವಯವಾಗಲಿವೆ. 2023ರಲ್ಲಿ ಎಕ್ಸ್‌ಪ್ರೆಸ್‌ವೇ ಆರಂಭವಾದ ಬಳಿಕ ಟೋಲ್ ದರಗಳು ಒಟ್ಟಾರೆ ಸುಮಾರು ಶೇ.37ರಷ್ಟು ಏರಿಕೆಯಾಗಿದೆ.

ಹೊಸ ಟೋಲ್ ದರದ ಮಾಹಿತಿ

  • ಕಾರು, ಜೀಪು, ವ್ಯಾನ್ ಹಾಗೂ ಇತರೆ ಲಘು ವಾಹನಗಳು:
    ಏಕಮುಖ ಪ್ರಯಾಣ: ₹185 (ಹಿಂದೆ ₹180, ಮಾರ್ಚ್‌ನಲ್ಲಿ ₹175, 2023ರಲ್ಲಿ ₹135)
    ಒಂದೇ ದಿನದ ಹಿಂದಿರುಗುವ ಪ್ರಯಾಣ: ₹275
    ಮಾಸಿಕ (50 ಪ್ರಯಾಣ) ಪಾಸ್: ₹6,100 (ಹಿಂದೆ ₹5,940)
  • ಟೋಲ್ ಪ್ಲಾಜಾದ 20 ಕಿ.ಮೀ ವ್ಯಾಪ್ತಿಯ ನಿವಾಸಿಗಳಿಗೆ ಸ್ಥಳೀಯ ಮಾಸಿಕ ಪಾಸ್ ₹360 ಯಥಾಸ್ಥಿತಿ
  • ಲಘು ವಾಣಿಜ್ಯ ವಾಹನಗಳು, ಮಿನಿಬಸ್‌, ಲಘು ಸರಕು ವಾಹನಗಳು: ₹295
  • ಎರಡು ಅಕ್ಷಗಳ ಲಾರಿ ಮತ್ತು ಬಸ್‌ಗಳು: ₹620
  • ಮೂರು ಅಕ್ಷಗಳ ವಾಣಿಜ್ಯ ವಾಹನಗಳು: ₹675
  • ನಾಲ್ಕರಿಂದ ಆರು ಅಕ್ಷಗಳ ಭಾರೀ ವಾಹನಗಳು: ₹970
  • ಏಳು ಅಥವಾ ಹೆಚ್ಚು ಅಕ್ಷಗಳ ವಾಹನಗಳು: ₹1,180

ಇದನ್ನೂ ಓದಿ: ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆಗೆ ಕೇಂದ್ರ ಗ್ರೀನ್ ಸಿಗ್ನಲ್; ತಿರುಪತಿ-ಚೆನ್ನೈ ಪ್ರಯಾಣಕ್ಕೆ ಇನ್ನಷ್ಟು ಅನುಕೂಲ

ದರ ಏರಿಕೆಗೆ ಕಾರಣವೇನು?

2023ರ ಜನವರಿಯಲ್ಲಿ ಹೊರಡಿಸಿದ್ದ ಟೋಲ್ ಗಜೆಟ್ ಅಧಿಸೂಚನೆ ಹಾಗೂ ಜುಲೈ 18ರಂದು ನೀಡಲಾದ ಹೊಸ ಅನುಮೋದನೆಯ ಆಧಾರದ ಮೇಲೆ 2026–27ನೇ ಹಣಕಾಸು ವರ್ಷದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಎನ್‌ಎಚ್‌ಎಐ ತಿಳಿಸಿದೆ. ಬೆಂಗಳೂರು–ನಿಡಘಟ್ಟ ಮಾರ್ಗವು ಹೈಬ್ರಿಡ್ ಅನ್ಯುಟಿ ಮಾದರಿ (Hybrid Annuity Model) ಅಡಿಯಲ್ಲಿ ನಿರ್ಮಾಣವಾಗಿದ್ದು, ಈ ಮಾದರಿಯಲ್ಲಿ ಯೋಜನೆ ವೆಚ್ಚವನ್ನು ಟೋಲ್ ಸಂಗ್ರಹ ಮತ್ತು ಸರ್ಕಾರದ ಅನ್ಯುಟಿ ಪಾವತಿಗಳ ಮೂಲಕ ಮರುಪಡೆಯಲಾಗುತ್ತದೆ ಎಂದು ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ಇತಿಹಾಸದಲ್ಲೇ ಅತ್ಯಂತ ಎತ್ತರ ಅಪಾರ್ಟ್ಮೆಂಟ್ ಕಟ್ಟಡ ತೆರವಿಗೆ ಜಿಬಿಎ ತೀರ್ಮಾನ: ಏಕೆ, ಏನಿದು? – Kannada News | GBA Decides to Demolish Bengaluru’s Tallest Apartment Building

ಬೆಂಗಳೂರು, ಜುಲೈ 23: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗಾಗಲೇ ನಗರದಲ್ಲಿ ಫುಟ್‌ಪಾತ್‌ಗಳ ಒತ್ತುವರಿ ತೆರವು ಮಾಡುತ್ತಿದೆ. ಇನ್ನು ಇತ್ತೀಚೆಗೆ ಅಕ್ರಮ ಕಟ್ಟಡಗಳ ವಿರುದ್ಧ ಸಮರ ಸಾರುವ ಮೂಲಕ ತೆರವುಗೊಳಿಸಲಾಗಿತ್ತು. ಇದೀಗ ಬಿಜಿಎ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಬೆಂಗಳೂರಿನ ಇತಿಹಾಸದಲ್ಲೇ ಅತ್ಯಂತ ಎತ್ತರದ ಬಹುಮಹಡಿ ಕಟ್ಟಡವೊಂದನ್ನು ನೆಲಸಮಗೊಳಿಸಲು ತೀರ್ಮಾನಿಸಲಾಗಿದ್ದು, ಅಪಾಯಕಾರಿ ಹಂತ ತಲುಪಿರುವ 18 ಮಹಡಿಗಳ ಬೃಹತ್ ಅಪಾರ್ಟ್‌ಮೆಂಟ್ ಕಟ್ಟಡವನ್ನು ತೆರವುಗೊಳಿಸಲು ಅಧಿಕಾರಿಗಳು ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ.

200 ಕೋಟಿ ರೂ ವೆಚ್ಚದ ಕಟ್ಟಡ ವಾಲಿದ್ದೇಗೆ?

ಎಸ್​​ಎನ್​​ಎನ್​ ರಾಜ್ ಕಾರ್ಪ್ ಸಂಸ್ಥೆಯ ಒಡೆತನದಲ್ಲಿ ಸುಮಾರು 200 ಕೋಟಿ ರೂ ವೆಚ್ಚದಲ್ಲಿ 18 ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿತ್ತು. ಒಟ್ಟು 49 ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಈ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ಕಟ್ಟಡದಲ್ಲಿ ತೀವ್ರ ಸ್ವರೂಪದ ರಚನಾತ್ಮಕ ಹಾನಿ (ಸ್ಟ್ರಕ್ಚರಲ್ ಡ್ಯಾಮೇಜ್) ಕಂಡುಬಂದಿದೆ. ಪ್ರಸ್ತುತ ಈ ಕಟ್ಟಡವು ಒಂದು ಬದಿಗೆ ವಾಲಿದ್ದು, ಭವಿಷ್ಯದಲ್ಲಿ ಭಾರೀ ದುರಂತ ಸಂಭವಿಸುವ ಭೀತಿ ಎದುರಾಗಿದೆ.

ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾಡಳಿತ ಭವನ ವಿವಾದ: ಉದ್ಘಾಟನೆ ಸಮಯದಲ್ಲೇ ಅವೈಜ್ಞಾನಿಕ ಕಟ್ಟಡವೆಂದು ರಿಜೆಕ್ಟ್

ಇನ್ನು ಕಟ್ಟಡದ ಭದ್ರತೆ ಹಾಗೂ ಸಾರ್ವಜನಿಕರ ಜೀವ ರಕ್ಷಣೆಯ ಹಿತದೃಷ್ಟಿಯಿಂದ ಜಿಬಿಎ ಮುಖ್ಯ ಆಯುಕ್ತರು ಹಾಗೂ ಎಸ್​​ಎನ್​​ಎನ್​ ರಾಜ್ ಕಾರ್ಪ್ ಸಂಸ್ಥೆ ಮಾಲೀಕರ ನಡುವೆ ಇಂದು ಉನ್ನತ ಮಟ್ಟದ ಸಭೆ ನಡೆಯಿತು.

ಕಟ್ಟಡ ಡೆಮಾಲಿಷನ್​ಗೆ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ಸೂಚನೆ 

ಸಭೆಯಲ್ಲಿ ಕಟ್ಟಡವನ್ನು ತಕ್ಷಣವೇ ಡೆಮಾಲಿಷನ್ ಮಾಡುವಂತೆ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್​ ಸೂಚಿಸಿದರು. ಇನ್ನು ಪ್ರಾಧಿಕಾರದ ನಿರ್ಧಾರಕ್ಕೆ ಸಂಪೂರ್ಣವಾಗಿ ಒಪ್ಪಿಕೊಂಡಿರುವ ಎಸ್​​ಎನ್​​ಎನ್ ರಾಜ್ ಕಾರ್ಪ್ ಆಡಳಿತ ಮಂಡಳಿಯು, ಇಡೀ ಡೆಮಾಲಿಷನ್ ಕಾರ್ಯಾಚರಣೆಗೆ ತಗುಲುವ ಸಂಪೂರ್ಣ ಖರ್ಚು-ವೆಚ್ಚವನ್ನು ತಾವೇ ಭರಿಸುವುದಾಗಿ ಒಪ್ಪಿಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆಸಿಡ್ ದಾಳಿ ಆಗದಿದ್ರೆ ನಮ್ಮ ತಾಯಿ ಇನ್ನೂ 10 ವರ್ಷ ಬದುಕುತ್ತಿದ್ರು ಎಂದ HD ರೇವಣ್ಣ – Kannada News | JDS MLA HD Revanna Revels Acid Attack On His Mother Chennamma On 2001

ಹಾಸನ, (ಜುಲೈ 23): ಜೆಡಿಎಸ್ ಶಾಸಕ ಹೆಚ್​​ಡಿ ರೇವಣ್ಣ ಅವರು ತಮ್ಮ ತಾಯಿ ನಿಧನದ ಬಳಿಕ ಮೊದಲ ಸುದ್ದಿಗೋಷ್ಠಿ ಮಾಡಿದ್ದು, ತಮ್ಮ ತಾಯಿ ಚೆನ್ನಮ್ಮರ ಕೆಲ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಪ್ರಮುಖವಾಗಿ ಆ್ಯಸಿಡ್ ದಾಳಿ ಘಟನೆ ಬಗ್ಗೆಯೂ ಬಹಿರಂಗಪಡಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, 2001ರಲ್ಲಿ ಆಸಿಡ್ ದಾಳಿ ಆಗದೆ ಹೋಗಿದ್ದರೆ ಅವರಿಗೆ (ಚೆನ್ನಮ್ಮ) ಇಷ್ಟು ಬೇಗ ಸಾವು ಬರ್ತಿರಲಿಲ್ಲ. ರೇವಣ್ಣನನ್ನ ಮುಗಿಸಲೇ ಬೇಕು ಎಂದು ಸಂಚು ರೂಪಿಸಿದ್ದರು. ಅಂದು ನಾನು ಇದ್ದಿದ್ದರೆ ನನ್ನ ಮೇಲೆ ದಾಳಿ ಆಗೋದು. ನಾನು ಇಲ್ಲದ ಕಾರಣ ನಮ್ಮ ತಾಯಿ ನೋವು ತಿಂದರು ಎಂದು ತಾಯಿ ಮೇಲೆ ನಡೆದಿದ್ದ ಆಸಿಡ್ ದಾಳಿ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

ನಮ್ಮ ತಾಯಿ ದೇವತೆಯಾಗಿ ನಮ್ಮ ಕುಟುಂಬ ಸಾಕಿದ್ದಾರೆ. ನಮ್ಮ ಅಮ್ಮನನ್ನ ನಮ್ಮ ತಂಗಿಯರು ನೋಡಿಕೊಂಡರು. ನಾವು ಹೋಗಿ ನೋಡಿಕೊಂಡು ಬರ್ತಿದ್ವಿ. ರಂಗನಾಥ ಸ್ವಾಮಿ ಪಾದದಡಿಯಲ್ಲಿ ಇರಬೇಕು ಎಂದು ಅಲ್ಲಿ ಅಂತ್ಯಕ್ರಿಯೆ ಮಾಡಿದ್ದೇವೆ. ನಮ್ಮ ತಂದೆ ಪಡುವಲಹಿಪ್ಪೆಯಲ್ಲಿ ಮಾಡೋಣ ಎಂದರು. ಆದ್ರೆ, ನಮ್ಮ ತಮ್ಮ ಕುಮಾರಸ್ವಾಮಿ ಇಲ್ಲೇ ಮಾಡೋಣ ಎಂದು ಹಠ ಹಿಡಿದರು. ಅವರು ಮೊದಲೇ ಅಲ್ಲಿ ಜಾಗ ಖರೀದಿ ಮಾಡಿದ್ರು. ಹಾಗಾಗಿ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ಸನ್ನಿದಾನದ ತಟದಲ್ಲಿ ಅಂತ್ಯಕ್ರಿಯೆ ಮಾಡಿದೆವು ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ  ಕ್ಲಿಕ್ ಮಾಡಿ

Source link

ರಾಜ್ಯದ CSR ನಿಧಿಯ ಪ್ರತಿ ಪೈಸೆಯೂ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗ: ಡಿಕೆ ಶಿವಕುಮಾರ್ – Kannada News | CSR fund Use primary education Says CM DK Shivakumar And He calls Adoption Governmnet Schools

ಬೆಂಗಳೂರು, (ಜು.23): “ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿಯಷ್ಟು ಸಿಎಸ್ಆರ್ ನಿಧಿ ಇದ್ದು, ಇದರ ಪ್ರತಿಯೊಂದು ಪೈಸೆ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ(Education) ವಿನಿಯೋಗವಾಗಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ಕರೆ ನೀಡಿದ್ದಾರೆ. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ)ಯ ಎಂ.ವಿ ಸಭಾಂಗಣದಲ್ಲಿ ಎಫ್ ಕೆಸಿಸಿಐ ಜಾಗತಿಕ ಸಿಎಸ್ಆರ್ ಮತ್ತು ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಶಿವಕುಮಾರ್ ಅವರು ಗುರುವಾರ ಉದ್ಘಾಟಿಸಿ ಮಾತನಾಡಿದ ಸಿಎಂ, “ನಾವು ಅಧಿಕಾರಕ್ಕೆ ಬಂದ ಬಳಿಕ ನಮ್ಮ ಸಚಿವರ ಜೊತೆ ಚರ್ಚೆ ಮಾಡಿ, ಸಿಎಸ್ಆರ್ ನಿಧಿಯನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸಲು ತೀರ್ಮಾನಿಸಿದ್ದೇವೆ. ಕೆಲವರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ 50% ಉದ್ಯಮಿಗಳು ಈ ಸಿಎಸ್ಆರ್ ನಿಧಿ ದುರುಪಯೋಗ ಮಾಡುತ್ತಿದ್ದಾರೆ. ಹೀಗಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ನೇಮಿಸಿ ನಿಧಿಯನ್ನು ಎಲ್ಲೆಲ್ಲಿ ಬಳಸಲಾಗುತ್ತಿದೆ ಎಂದು ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.

“ಗ್ರಾಮೀಣ ಭಾಗದ ಮಕ್ಕಳಿಗೆ ನಗರ ಪ್ರದೇಶದಂತೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಹೀಗಾಗಿ ನಾವು ನೀತಿ ರೂಪಿಸುತ್ತಿದ್ದು, ಎಲ್ಲರೂ ಸಿಎಸ್ಆರ್ ನಿಧಿಯನ್ನು ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಬೇಕು. ಸಿಎಸ್ಆರ್ ನಿಧಿಯಲ್ಲಿ ಶಾಲೆಗಳನ್ನು ಗ್ರಾಮೀಣ ಭಾಗದಲ್ಲಿ ನಿರ್ಮಾಣ ಮಾಡಬೇಕು. ನಮ್ಮ ಸರ್ಕಾರ ರಾಜ್ಯದಲ್ಲಿ 2 ಸಾವಿರ ಜಾಗಗಳನ್ನು ಗುರುತಿಸಿದ್ದು, ಪ್ರತಿ ಕಾರ್ಪೊರೇಟ್ ಸಂಸ್ಥೆ ಈ ಜಾಗಗಳಲ್ಲಿ ಅತ್ಯುತ್ತಮ ಮೂಲಸೌಕರ್ಯವಿರುವ ಶಾಲೆಗಳನ್ನು ನಿರ್ಮಾಣ ಮಾಡಬೇಕು. ನೀವು ನಮಗೆ ಹಣ ನೀಡಬೇಡಿ, ನೀವೇ ಹಣ ಹಾಕಿ ಶಾಲೆ ನಿರ್ಮಿಸಿ. ಶಾಲೆಗೆ ನಿಮ್ಮ ಸಂಸ್ಥೆಯ ಹೆಸರನ್ನು ಸೇರಿಸಿ. ಟೊಯೋಟಾ ಬೆಂಗಳೂರಿನಲ್ಲಿ 7-8 ಶಾಲೆಗಳನ್ನು ನಿರ್ಮಿಸುತ್ತಿವೆ. ಟೋಯೋಟಾದವರು ಪ್ರತಿ ಶಾಲೆಗೆ 10-15 ಕೋಟಿ ಹಣ ವೆಚ್ಚ ಮಾಡಿ ನಿರ್ಮಿಸುತ್ತಿದ್ದಾರೆ ಉಪಆಯುಕ್ತರು ನಿಮಗೆ ಜಾಗ ನೀಡುತ್ತಾರೆ. ಆ ಜಾಗದಲ್ಲಿ ನೀವು ಶಾಲೆ ನಿರ್ಮಿಸಬಹುದು. ನಿಮಗೆ ಒಬ್ಬರಿಂದಲೇ ಸಂಪೂರ್ಣ ಶಾಲೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೆ, ಶಾಲೆಯ ಕೆಲವೊಂದು ಭಾಗವನ್ನು ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಲಾಗುವುದು. ಇದಕ್ಕಾಗಿಯೇ ಒಂದು ವೇದಿಕೆ ರೂಪಿಸಲಾಗುವುದು” ಎಂದರು.

ಇದನ್ನೂ ಓದಿ:  KPSCಯಲ್ಲಿ ಮತ್ತೊಂದು ಬ್ರಹ್ಮಾಂಡ ಅಕ್ರಮ? 80 ಲಕ್ಷ ರೂಪಾಯಿಗೆ ಒಂದು ಪಶು ವೈದ್ಯಾಧಿಕಾರಿ ಸೀಟ್​​ ಬಿಕರಿ?

ಸರ್ಕಾರಿ ಶಾಲೆಗಳನ್ನು ನಗರದ ಖಾಸಗಿ ಶಾಲೆಗಳು ದತ್ತು ಪಡೆಬೇಕು

“ನಗರ ಪ್ರದೇಶಗಳಲ್ಲಿ 50 ಸಾವಿರಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿರುವ ಶಾಲೆಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು. ಒಂದು ವೇಳೆ ಈ ಶಾಲೆಗಳು ದತ್ತು ಪಡೆಯದೇ ಇದ್ದರೆ ಈ ಶಾಲೆಗಳ ಶುಲ್ಕಗಳಿಗೆ ಮಿತಿ ಹಾಕಲಾಗುವುದು. ಈ ಶಾಲೆಗಳು ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಹಣ ಹಾಕುವುದು ಬೇಡ, ಅವರು ಕೇವಲ ಬೋಧಕರನ್ನು ನಿಯೋಜಿಸಿದರೆ ಸಾಕು. ನಮ್ಮ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಸರ್ಕಾರಿ ಶಾಲಾ ಶಿಕ್ಷಕರಿಗೆ ನಾವು ಖಾಸಗಿ ಶಾಲೆಗಳಿಗಿಂತ ಉತ್ತಮ ವೇತನ ನೀಡುತ್ತಿದ್ದೇವೆ. ನೀವೆಲ್ಲರೂ ಇದರ ಭಾಗವಾಗಬೇಕು. ನಾನು ಕೂಡ ಮೂರು ಶಾಲೆ ನಡೆಸುತ್ತಿದ್ದೇನೆ. ನಮ್ಮ ಶಾಲೆಗಳು ಕೂಡ ಗ್ರಾಮೀಣ ಭಾಗದ ಸರ್ಕಾರಿ ಶಾಲೆ ದತ್ತು ಪಡೆಯಬೇಕು ಎಂದು ನನ್ನ ಮಗಳಿಗೆ ತಿಳಿಸಿದ್ದೇನೆ. ಆಕೆ ಮೂರು ಶಾಲೆ ದತ್ತು ಪಡೆದಿದ್ದಾರೆ” ಎಂದು ತಿಳಿಸಿದರು.

“ಸಿಎಸ್ಆರ್ ನಿಧಿಯನ್ನು ಮೊದಲು ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಿ, ನಂತರ ಆರೋಗ್ಯ ಕ್ಷೇತ್ರದತ್ತ ಗಮನಹರಿಸಬಹುದು. ನಾವು ಈ ವಿಚಾರವಾಗಿ ನೀತಿ ರೂಪಿಸಿ, ಎಲ್ಲಾ ಕೈಗಾರಿಕೋದ್ಯಮಿಗಳ ಜೊತೆ ಚರ್ಚೆ ಮಾಡಲಾಗುವುದು. ಸಧ್ಯದಲ್ಲೇ ನಾನು ವಿವಿಧ ಕ್ಷೇತ್ರಗಳ ಉದ್ಯಮಗಳ ಜೊತೆ ಸಭೆ ಮಾಡಲಿದ್ದೇನೆಇದರಿಂದ ಶಿಕ್ಷಣಕ್ಕೆ ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಬಹುದು. ನಮ್ಮ ಹಳ್ಳಿಯ ಮಕ್ಕಳು ಕೇವಲ ಬೆಂಗಳೂರು ಅಥವಾ ಇತರೆ ಭಾಗದ ಮಕ್ಕಳ ಜೊತೆ ಸ್ಪರ್ಧೆ ಮಾಡುತ್ತಿಲ್ಲ. ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ” ಎಂದರು.

ರಾಜ್ಯದ ಪ್ರಗತಿಯಲ್ಲಿ ಎಫ್ ಕೆಸಿಸಿಐ ಕೊಡುಗೆ

“ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ) ಮಹಾರಾಜರ ಕಾಲದಿಂದ ಇಂದಿನವರೆಗೂ ಎಲ್ಲರನ್ನು ಒಟ್ಟಾಗಿ ಮುನ್ನಡೆಸಿಕೊಂಡು ಬಂದು ಅತ್ಯುತ್ತಮ ಕೆಲಸ ಮಾಡುತ್ತಿದೆ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ಹೇಳುತ್ತಿರುತ್ತೇನೆ. ಎಫ್ ಕೆಸಿಸಿಐ ಕರ್ನಾಟಕ ಹಾಗೂ ಭಾರತದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದೆ. ಪ್ರತಿ ಕ್ಷೇತ್ರದಲ್ಲೂ ತನ್ನ ಸೇವೆ ಸಲ್ಲಿಸಿದ್ದು, ಕರ್ನಾಟಕದ ಯಶಸ್ಸು ಈ ಸಂಸ್ಥೆಯ ಜೊತೆಯಲ್ಲಿದೆ. ಇಂದು ಐಟಿ ಬಿಟಿ, ಎಐ ಕ್ಷೇತ್ರಗಳು ಬಂದಿವೆ. ಆದರೆ ಇದ್ಯಾವುದೂ ಇಲ್ಲದಿರುವಾಗಲೂ ಎಫ್ ಕೆಸಿಸಿಐ ಕೆಲಸ ಮಾಡಿಕೊಂಡು ಬಂದಿದೆ. ರಾಜ್ಯವನ್ನು ಹೀಗೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕು” ಎಂದು ತಿಳಿಸಿದರು.

“ಇಂದು ನಾವು ಸಿಎಸ್ಆರ್ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ. ಈ ಸಂಸ್ಥೆ ಗ್ಲೋಬಲ್ ಸಿಎಸ್ಆರ್ ವಿಚಾರ ಪ್ರಸ್ತಾಪಿಸಿದೆ. ಈ ಸಂದರ್ಭದಲ್ಲಿ ನಾನು ಪ್ರಣಬ್ ಮುಖರ್ಜಿ ಅವರನ್ನು ಸ್ಮರಿಸಲೇಬೇಕು. ಅವರು ಆರ್ಥಿಕ ಸಚಿವರಾಗಿದ್ದಾಗ ಈ ಸಿಎಸ್ಆರ್ ಅನ್ನು ಜಾರಿಗೆ ತಂದರು. ಪರಿಣಾಮ ಇಂದು ಸಿಎಸ್ಆರ್ ಸೇವೆಯಾಗಿ ಉಳಿದಿಲ್ಲ. ಇದು ಸುಸ್ಥಿರ ಅಭಿವೃದ್ಧಿಗೆ ತಂತ್ರಗಾರಿಕಾ ಹೂಡಿಕೆಯಾಗಿದೆ. ಲಾಭ ಮಾಡಿ ಬೆಳವಣಿಗೆ ಕಂಡಿದ್ದವರು ಸಮಾಜಕ್ಕಾಗಿ ತಮ್ಮ ಲಾಭಾಂಶವನ್ನು ಹಂಚಿಕೊಳ್ಳುವುದು ಸಿಎಸ್ಆರ್ ಉದ್ದೇಶವಾಗಿದೆ” ಎಂದರು.

ಶಿಕ್ಷಣಕ್ಕಾಗಿ ಹಳ್ಳಿಗಳಿಂದ ನಗರಕ್ಕೆ ವಲಸೆ

“ನಾನು ಹಳ್ಳಿಯಿಂದ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬಂದವನು. ನನಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ನಮ್ಮ ಪೋಷಕರು ನನ್ನನ್ನು ಬೆಂಗಳೂರಿಗೆ ಕಳುಹಿಸಿದರು. ನಾನು ಇಲ್ಲೇ ವಿದ್ಯಾರ್ಥಿಯಾಗಿದ್ದಾಗಿನಿಂದ ರಾಜಕಾರಣದಲ್ಲಿ ತೊಡಗಿಕೊಂಡು ಮತ್ತೆ ಊರಿಗೆ ವಾಪಸ್ ಹೋಗಲೇ ಇಲ್ಲ. ಇದು ಕೇವಲ ನನ್ನ ಕಥೆ ಮಾತ್ರವಲ್ಲ. ನಗರ ಪ್ರದೇಶದ ಎಲ್ಲರ ಪರಿಸ್ಥಿತಿಯಾಗಿದೆ. ಇಂದು ನಗರಗಳ ಜನಸಂಖ್ಯೆ 43%ನಷ್ಟಿದೆ. ಈ ಹಿಂದೆ 31% ಇತ್ತು. ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಇಂದು 1.40 ಕೋಟಿಯಷ್ಟಾಗಿದೆ. 1.35 ಕೋಟಿ ವಾಹನಗಳು ಬೆಂಗಳೂರು ರಸ್ತೆಗಳಲ್ಲಿವೆ. ಇಡೀ ವಿಶ್ವದಾದ್ಯಂತ ಜನ ಬೆಂಗಳೂರಿನತ್ತ ಮುಖ ಮಾಡಿದ್ದಾರೆ” ಎಂದು ತಿಳಿಸಿದರು.

ರಾಜ್ಯದ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ:

“ಇಲ್ಲಿನ ಮಾನವ ಸಂಪನ್ಮೂಲ, ಇಲ್ಲಿನ ಶಿಕ್ಷಣದ ಗುಣಮಟ್ಟ ದೇಶದಲ್ಲಿ ಬೇರೆಲ್ಲೂ ಇಲ್ಲ. ನಮ್ಮ ದೇಶದಲ್ಲಿ 140 ಅಂತಾರಾಷ್ಟ್ರೀಯ ಶಾಲೆಗಳಿದ್ದು, ನಮ್ಮ ರಾಜ್ಯದಲ್ಲೇ 38 ಅಂತಾರಾಷ್ಟ್ರೀಯ ಶಾಲೆಗಳಿವೆ. ನಮ್ಮಲ್ಲಿರುವ ಪ್ರಾಥಮಿಕ ಶಿಕ್ಷಣ ಅತ್ಯುತ್ತಮವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಅಂದಿನ ಪ್ರಧಾನಮಂತ್ರಿಗಳಾದ ವಾಜಪೇಯಿ ಅವರು, ಇಷ್ಟು ದಿನ ವಿಶ್ವದ ನಾಯಕರುಗಳು ಮೊದಲು ದೆಹಲಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಭೇಟಿ ನೀಡುತ್ತಿದ್ದರು. ಈಗ ಕಾಲ ಬದಲಾಗಿದೆ. ವಿಶ್ವದ ನಾಯಕರು ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರ ನಗರಗಳಿಗೆ ಹೋಗುತ್ತಾರೆ ಎಂದು ಹೇಳಿದ್ದರು. ಬೆಂಗಳೂರಿನಲ್ಲಿರುವ ಪ್ರತಿಭೆಗಳು ಈ ನಗರವನ್ನು ಜಾಗತಿಕ ನಗರವನ್ನಾಗಿ ರೂಪಿಸಿದೆ. ನಾವು 70ರ ದಶಕದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮಾಡಿದರೂ ಈಗ ಆ ಪ್ರದೇಶ ಹೇಗಾಗಿದೆ ನೋಡಿ. ಕೇವಲ ಐಟಿ ಮಾತ್ರವಲ್ಲ, ಉತ್ಪಾದನಾ ಕ್ಷೇತ್ರಗಳಲ್ಲಿ ಬೆಂಗಳೂರು ಪ್ರಗತಿ ಸಾಧಿಸಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರ್ ಗಳಿದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಇಂಜಿನಿಯರ್ ಗಳು ಕೆಲಸ ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ 13 ಲಕ್ಷ ಇಂಜಿನಿಯರ್ ಗಳ ಪೈಕಿ 8 ಲಕ್ಷ ಜನ ಭಾರತದವರಾಗಿದ್ದು, ಅದರಲ್ಲಿ 6 ಲಕ್ಷ ಜನ ಕರ್ನಾಟಕದವರಾಗಿದ್ದಾರೆ. ಇದು ನಮ್ಮಲ್ಲಿರುವ ಪ್ರತಿಭೆ ದೇಶದ ಹೊರಗೆ ಹೋಗುತ್ತಿರುವುದಕ್ಕೆ ಈ ಅಂಕಿಅಂಶಗಳು ಸಾಕ್ಷಿಯಾಗಿವೆ” ಎಂದರು.

“ಇನ್ನು ವೈದ್ಯಕೀಯ ಕ್ಷೇತ್ರವನ್ನು ನೋಡುವುದಾದರೆ, ಬೆಂಗಳೂರು ಹೆಲ್ತ್ ಟೂರಿಸಂ ನಲ್ಲಿ ಮುಂದೆ ಇದೆ. ನಮ್ಮ ರಾಜ್ಯದಲ್ಲಿ 71 ಮೆಡಿಕಲ್ ಕಾಲೇಜುಗಳಿದ್ದು, ಬೇರೆ ಯಾವುದೇ ರಾಜ್ಯಗಳಲ್ಲಿ ಇಷ್ಟು ಮೆಡಿಕಲ್ ಕಾಲೇಜುಗಳಿಲ್ಲ. ನಾವು ಪ್ರತಿ ವರ್ಷ ಸುಮಾರು 13 ಸಾವಿರ ವೈದ್ಯರು, ಸುಮಾರು 1 ಲಕ್ಷ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ತಯಾರು ಮಾಡುತ್ತಿದ್ದೇವೆ. ನಮ್ಮಲ್ಲಿರುವ ಅತ್ಯಂತ ಪ್ರತಿಭಾನ್ವಿತರು ಹೊರ ದೇಶಗಳಿಗೆ ಹೋಗುತ್ತಿದ್ದಾರೆ” ಎಂದರು.

ಉದ್ಯೋಗದಾತರ ಹಿತ ಕಾಯಲು ಬದ್ಧ

“ಉದ್ಯೋಗಿಗಳ ಜೊತೆಗೆ ಉದ್ಯೋಗದಾತರ ಹಿತವನ್ನು ನಾವು ಕಾಪಾಡಬೇಕು. ಉದ್ಯೋಗದಾತರು ಶಕ್ತಿಶಾಲಿಯಾಗಿದ್ದರೆ ಉದ್ಯೋಗಿಗಳು ಶಕ್ತಿಶಾಲಿಯಾಗಿರುತ್ತಾರೆ. ಉದ್ಯೋಗಿಗಳಿಗೆ ನೀಡಬೇಕಾದ ಕನಿಷ್ಠ ವೇತನಗಳನ್ನು ನಾವು ನೀಡಲೇಬೇಕು. ಜೊತೆಗೆ ಉದ್ಯೋಗದಾತರ ಮೇಲೂ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳಬೇಕು. ನಿಮ್ಮ ಉದ್ಯಮ ವ್ಯಾಪಾರಕ್ಕೆ ನೆರವಾಗಿರುವುದಕ್ಕೆ ಅಗತ್ಯವಿರುವಂತೆ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಸಲು ನಾವು ಮುಂದಾಗಿದ್ದೇವೆ. ನೀವು ಬಲಿಷ್ಠವಾಗಿದ್ದರೆ, ನಾವು ಬಲಿಷ್ಠವಾಗುತ್ತೇವೆ, ನೀವು ನಿಶಕ್ತರಾದರೆ, ನಾವು ದುರ್ಬಲರಾಗುತ್ತೇವೆ. ನೀವು ಬಲಿಷ್ಠರಾಗಿ ಎಲ್ಲರೂ ಒಟ್ಟಾಗಿ ರಾಜ್ಯವನ್ನು ನಿರ್ಮಾಣ ಮಾಡೋಣ” ಎಂದು ಕರೆ ನೀಡಿದರು.

“ನಾನು ರತನ್ ಟಾಟಾ ಅವರನ್ನು ಒಮ್ಮೆ ಭೇಟಿ ನೀಡಿದಾಗ ಅವರು ನನಗೆ ಒಂದು ಸಲಹೆ ನೀಡಿದ್ದರು. ನೀವು ವೇಗವಾಗಿ ಸಾಗಬೇಕಾದರೆ, ಒಬ್ಬರೇ ಹೋಗಿ. ನೀವು ಬಹುದೂರ ಸಾಗಬೇಕಾದರೆ ಬೇರೆಯವರ ಜತೆಗೂಡಿ ಹೋಗಿ. ನಮ್ಮ ಸರ್ಕಾರವಾಗಲಿ, ಎಫ್ ಕೆಸಿಸಿಐ ಎಲ್ಲರೂ ಒಟ್ಟಾಗಿ ಸಾಗೋಣ. ನಮ್ಮ ಸರ್ಕಾರ ಶಿಕ್ಷಣ, ಆರೋಗ್ಯ, ಹಸಿರು ಉಳಿಸುವತ್ತ ನಾವು ಗಮನಹರಿಸುತ್ತಿದ್ದೇವೆ. ಬೆಂಗಳೂರಿನಲ್ಲಿರುವ ಅರಣ್ಯ ಜಾಗಗಳಲ್ಲಿ ಜೈವಿಕ ಉದ್ಯಾನವನ ಸ್ಥಾಪಿಸಲು ಮುಂದಾಗಿದ್ದೇವೆ. ನಮ್ಮ ಸರ್ಕಾರ ಯುವ ಉದ್ಯೋಗ ಸೇತು ಎಂಬ ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸುತ್ತಿದ್ದು, ನಿಮಗೆ ಯಾವ ರೀತಿ ಕೌಶಲ್ಯ ಆಧಾರಿತ ಉದ್ಯೋಗಿಗಳು ಬೇಕು ಎಂದು ತಿಳಿಸಿದರೆ, ನಮ್ಮ ಸರ್ಕಾರ ಯುವಕರಿಗೆ ತರಬೇತಿ ನೀಡಿ ನಿಮಗೆ ನೀಡುತ್ತದೆ. ನೀವು ಅವರಿಗೆ ಉದ್ಯೋಗ ನೀಡಬಹುದು. ನೀವು ಇಂತಹವರಿಗೆ ಉದ್ಯೋಗ ನೀಡಬೇಕು, ನೀಡಬಾರದು ಎಂಬ ವಿಚಾರವಾಗಿ ನಾವು ನಿಮ್ಮ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಈಗ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ 15% ಮೀಸಲಾತಿ ನೀಡಲಾಗುತ್ತಿದ್ದು, ಸದ್ಯದಲ್ಲೇ ಈ 15% ನಲ್ಲಿ 7.5% ಅನ್ನು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡಲಾಗುವುದು. ನಾನು ರಾಜ್ಯದ ಮುಖ್ಯಮಂತ್ರಿಯಾದರೂ ನಿಮ್ಮವನಾಗಿದ್ದೇನೆ. ನಿಮ್ಮ ಪರವಾಗಿ ನಿಲ್ಲುತ್ತೇನೆ” ಎಂದು ಭರವಸೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

WTC Final 2026-27: 4ನೇ ಆವೃತ್ತಿಯ ಡಬ್ಲ್ಯೂಟಿಸಿ ಫೈನಲ್ ವೇಳಾಪಟ್ಟಿ ಪ್ರಕಟ – Kannada News | WTC Final 2027 Schedule Announced: Oval to Host Key Clash and Ashes Dates Revealed

2025-27 ರ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final 2027) ಪಂದ್ಯದ ವೇಳಾಪಟ್ಟಿಯನ್ನು ಐಸಿಸಿ (ICC) ಇಂದು ಪ್ರಕಟಿಸಿದೆ. ಅದರಂತೆ ಈ ಆವೃತ್ತಿಯ ಫೈನಲ್ ಪಂದ್ಯ 2027 ರ ಜೂನ್ 9 ರಂದು ಆರಂಭವಾಗಲಿದ್ದು, ಜೂನ್ 13 ರವರೆಗೆ ನಡೆಯಲಿದೆ. ಐಸಿಸಿ ಈಗಾಗಲೇ 2027, 2029 ಮತ್ತು 2031 ರ ಡಬ್ಲ್ಯೂಟಿಸಿ ಫೈನಲ್‌ಗಳ ಆತಿಥ್ಯದ ಹಕ್ಕುಗಳನ್ನು ಇಂಗ್ಲೆಂಡ್‌ಗೆ ನೀಡಿದೆ. 2027ರ ಆವೃತ್ತಿಯ ಫೈನಲ್ ಪಂದ್ಯಕ್ಕೆ ಲಂಡನ್‌ನ ಐಕಾನಿಕ್ ದಿ ಓವಲ್ ಮೈದಾನ ಆತಿಥ್ಯವಹಿಸುತ್ತಿದೆ. ಈ ಮೈದಾನದಲ್ಲಿ ಎರಡನೇ ಬಾರಿಗೆ ಡಬ್ಲ್ಯೂಟಿಸಿ ಫೈನಲ್ ನಡೆಯುತ್ತಿದ್ದು, ಈ ಮೊದಲು ಅಂದರೆ 2023 ರಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು.

9 ತಂಡಗಳ ನಡುವೆ ರೇಸ್

2027 ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್‌ ರೇಸ್​ ತೀವ್ರ ಕುತೂಹಲ ಮೂಡಿಸಿದೆ. ಏಕೆಂದರೆ ಎಲ್ಲಾ 9 ತಂಡಗಳು ಫೈನಲ್‌ಗೆ ಟಿಕೆಟ್ ಪಡೆಯುವ ಪೈಪೋಟಿಯಲ್ಲಿವೆ. ಅಂತಹ ಪರಿಸ್ಥಿತಿಯಲ್ಲಿ, ಮುಂಬರುವ ಟೆಸ್ಟ್ ಸರಣಿಯು ಡಬ್ಲ್ಯೂಟಿಸಿ ಪಾಯಿಂಟ್ ಟೇಬಲ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಿದೆ. ಅದರಂತೆ ಜುಲೈ ಮತ್ತು ಆಗಸ್ಟ್‌ನಲ್ಲಿ ಹಲವಾರು ನಿರ್ಣಾಯಕ ಟೆಸ್ಟ್ ಸರಣಿಗಳು ನಡೆಯಲಿವೆ. ಈ ಸರಣಿಗಳಿಂದ ಹೊರಬರುವ ಫಲಿತಾಂಶ ಯಾವ ತಂಡ ರೇಸ್​ನಲ್ಲಿ ಉಳಿಯಲಿದೆ ಎಂಬುದನ್ನು ನಿರ್ಧರಿಸಲಿದೆ.

ಮುಂಬರುವ ಪ್ರಮುಖ ಟೆಸ್ಟ್ ಸರಣಿಗಳನ್ನು ನೋಡುವುದಾದರೆ.. ಜುಲೈ 25 ರಿಂದ ವೆಸ್ಟ್ ಇಂಡೀಸ್, ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಲಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ತಂಡವು ಆಗಸ್ಟ್ 13 ರಿಂದ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಆಸ್ಟ್ರೇಲಿಯಾ, ಬಾಂಗ್ಲ ವಿರುದ್ಧ ಗೆದ್ದು ಅಗ್ರಸ್ಥಾನದಲ್ಲಿ ಮುಂದುವರೆಯುವ ಇರಾದೆಯಲ್ಲಿದೆ.

ಭಾರತ- ಲಂಕಾ ಮುಖಾಮುಖಿ

ಇದಾದ ನಂತರ, ಆಗಸ್ಟ್ 15 ರಿಂದ ಶ್ರೀಲಂಕಾ ಮತ್ತು ಭಾರತ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. WTC ಪಾಯಿಂಟ್ ಟೇಬಲ್ ವಿಷಯದಲ್ಲಿ ಈ ಸರಣಿ ಎರಡೂ ತಂಡಗಳಿಗೆ ಬಹಳ ಮುಖ್ಯವಾಗಿದೆ. ಏತನ್ಮಧ್ಯೆ, ಪಾಕಿಸ್ತಾನ ತಂಡವು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

IND vs ENG: ಹಿಟ್​ಮ್ಯಾನ್ ಅಲ್ಲ, ಟೆಸ್ಟ್ ಮ್ಯಾನ್..! ಏನಾಯ್ತು ರೋಹಿತ್ ಶರ್ಮಾ?

ಆಶಸ್ ಸರಣಿ ವೇಳಾಪಟ್ಟಿ ಪ್ರಕಟ

ಡಬ್ಲ್ಯೂಟಿಸಿ ಫೈನಲ್ ಜೊತೆಗೆ ಪ್ರತಿಷ್ಠಿತ ಆಶಸ್ ಸರಣಿಯ ವೇಳಾಪಟ್ಟಿಯೂ ಹೊರಬಿದ್ದಿದೆ. ಅದರಂತೆ ಆಶಸ್ ಸರಣಿಯು ಜೂನ್ 18, 2027 ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಪ್ರಾರಂಭವಾಗಲಿದೆ. ಎರಡನೇ ಟೆಸ್ಟ್ ಜೂನ್ 30 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಜುಲೈ 8 ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 21 ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಐದನೇ ಟೆಸ್ಟ್ ಪಂದ್ಯ ಜುಲೈ 29 ರಂದು ಓವಲ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:03 pm, Thu, 23 July 26

Source link

IND vs ZIM: ಸತತ 8ನೇ ಪಂದ್ಯದಲ್ಲಿ ಟಾಸ್ ಗೆದ್ದ ಅಯ್ಯರ್; ತಂಡದ ಪರ ಯುವ ವೇಗಿ ಪಾದಾರ್ಪಣೆ – Kannada News | Shreyas Iyer’s Team India Seeks First Win in Zimbabwe T20 Series Opener

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸತತ ಎರಡು ಟಿ20 ಸರಣಿಗಳನ್ನು ಸೋತ ಟೀಂ ಇಂಡಯಾ ಇದೀಗ ಮತ್ತೊಮ್ಮೆ ಮೈದಾನಕ್ಕಿಳಿದಿದೆ. ಈ ಬಾರಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಜಿಂಬಾಬ್ವೆ (India vs Zimbabwe ) ತಂಡವನ್ನು ಎದುರಿಸುತ್ತಿರುವ ಶ್ರೇಯಸ್ ಅಯ್ಯರ್ ಪಡೆ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಶ್ರೇಯಸ್ ಅಯ್ಯರ್ (Shreyas Iyer) ತಂಡದ ನಾಯಕನಾದ ಬಳಿಕ ಇದುವರೆಗೆ 7 ಪಂದ್ಯಗಳನ್ನು ಆಡಲಾಗಿದೆ. ಆದರೆ ಈ 7 ಪಂದ್ಯಗಳಲ್ಲಿ ಒಂದರಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಇದೀಗ ಕಳೆದ ಸರಣಿಗಳಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಂಡು ಅಖಾಡಕ್ಕಿಳಿದಿರುವ ಯುವ ಟೀಂ ಇಂಡಿಯಾ, ಜಿಂಬಾಬ್ವೆ ಸವಾಲನ್ನು ಯಾವ ರೀತಿಯಾಗಿ ಎದುರಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಸತತ 8ನೇ ಪಂದ್ಯದಲ್ಲಿ ಟಾಸ್ ಗೆದ್ದ ಅಯ್ಯರ್

ಹರಾರೆಯಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಇಲ್ಲಿ ಕಳವಳಕರವಾದ ಸಂಗತಿಯೆಂದರೆ ಶ್ರೇಯಸ್ ಅಯ್ಯರ್ ನಾಯಕನಾಗಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಟಾಸ್ ಗೆದ್ದಿದ್ದಾರೆ. ಆದರೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಈ ಪಂದ್ಯದಲ್ಲೂ ಟಾಸ್ ಗೆದ್ದಿರುವ ಅಯ್ಯರ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಾರಾ ಕಾದು ನೋಡಬೇಕಿದೆ.

ಅಶೋಕ್ ಶರ್ಮಾ ಪಾದಾರ್ಪಣೆ

ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಎರಡೂ ತಂಡಗಳ ಪರ ಯುವ ಆಟಗಾರರಿಗೆ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ಸಿಕ್ಕಿದೆ. ಅದರಂತೆ ಟೀಂ ಇಂಡಿಯಾ ಪರ ವೇಗದ ಬೌಲರ್ ಅಶೋಕ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತ ಆರಂಭಿಕರಾದ ಬೆನ್ ಕರನ್ ಮತ್ತು ನ್ಯೂಮನ್ ನ್ಯಾಮುರಿ ಜಿಂಬಾಬ್ವೆ ಪರ ಚೊಚ್ಚಲ ಪಂದ್ಯವಾಡುತ್ತಿದ್ದಾರೆ.

Zimbabwe vs India T20, Live Score: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್ 11

ಭಾರತ ತಂಡ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ ( ಚೊಚ್ಚಲ ಪಂದ್ಯ) ಮತ್ತು ಮಯಾಂಕ್ ಯಾದವ್.

ಜಿಂಬಾಬ್ವೆ ತಂಡ: ಬ್ರಿಯಾನ್ ಬೆನೆಟ್, ಬೆನ್ ಕರ್ರನ್ (ಚೊಚ್ಚಲ ಪಂದ್ಯ), ಡಿಯೋನ್ ಮೈಯರ್ಸ್, ಸಿಕಂದರ್ ರಝಾ (ನಾಯಕ), ರಿಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ (ಚೊಚ್ಚಲ ಪಂದ್ಯ), ರಿಚರ್ಡ್ ನಾಗರವಾ ಮತ್ತು ಬ್ಲೆಸ್ಸಿಂಗ್ ಮುಜರಬಾನಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:23 pm, Thu, 23 July 26

Source link

Exit mobile version