ಇರಾನ್ ವಿರುದ್ಧದ ದಾಳಿಗೆ ಸದ್ಯಕ್ಕೆ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಟ್ರಂಪ್ – Kannada News | Trump Halts Iran Attack Amid Pakistan Mediation: Diplomatic Push for Peace

ವಾಷಿಂಗ್ಟನ್ , ಏಪ್ರಿಲ್ 22: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಬಿಗುವಿನ ವಾತಾವರಣದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇರಾನ್ ವಿರುದ್ಧದ ದಾಳಿಯನ್ನು ಸದ್ಯಕ್ಕೆ ತಡೆಹಿಡಿದಿರುವ ಟ್ರಂಪ್, ರಾಜತಾಂತ್ರಿಕತೆಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಸ್ಫೋಟಕ ಹಂತ ತಲುಪಿರುವಾಗಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ನಾಯಕರ ವಿಶೇಷ ವಿನಂತಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ ರಾಜತಾಂತ್ರಿಕ ನಡೆ
ಡೊನಾಲ್ಡ್​ ಟ್ರಂಪ್ ತಮ್ಮ ಟ್ರುತ್ ಸೋಶಿಯಲ್​​ ಪ್ಲಾಟ್​ಫಾರ್ಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಾಕಿಸ್ತಾನದ ಫೀಲ್ಡ್​ ಮಾರ್ಷಲ್ ಆಸಿಮ್ ಮುನೀರ್ ಮತ್ತು ಶೆಹಬಾಜ್ ಷರೀಫ್ ಅವರು ಅಮೆರಿಕವನ್ನು ಸಂಪರ್ಕಿಸಿ ಮಾತುಕತೆಗೆ ಸಮಯ ಕೋರಿದ್ದಾರೆ ಎಂದು ತಿಳಿಸಿದ್ದಾರೆ.
ಇರಾನ್ ನಾಯಕರು ಮತ್ತು ಪ್ರತಿನಿಧಿಗಳು ಒಂದು ಏಕೀಕೃತ ಪ್ರಸ್ತಾಪವನ್ನು ಮಂಡಿಸುವವರೆಗೆ ದಾಳಿಯನ್ನು ತಡೆ ಹಿಡಿಯುವಂತೆ ಪಾಕಿಸ್ತಾನ ಮನವಿ ಮಾಡಿದೆ. ಅವರ ಪ್ರಸ್ತಾಪ ಬರುವವರೆಗೆ ಮತ್ತು ಚಚರ್ಚಗಳು ತಾರ್ಕಿಕ ಅಂತ್ಯ ಕಾಣುವವರೆಗೆ ತಾವು ಕದನ ವಿರಾಮ ವಿಸ್ತರಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿ: ಟ್ರಂಪ್ ಅವರ ದಿಗ್ಬಂಧನ ತಂತ್ರ
ಜಾಗತಿಕ ತೈಲ ವ್ಯಾಪಾರದ ನಾಡಿಮಿಡಿತವಾಗಿರುವ ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಟ್ರಂಪ್ ಅತ್ಯಂತ ಕಠಿಣ ನಿಲುವು ತಳೆದಿದ್ದಾರೆ. ಹಾರ್ಮುಜ್ ಜಲಸಂಧಿ ಮುಕ್ತವಾಗಿದ್ದರೆ ಇರಾನ್ ದಿನಕ್ಕೆ ಸುಮಾರು 500 ಮಿಲಿಯನ್ ಡಾಲರ್ ಆದಾಯ ಗಳಿಸುತ್ತದೆ. ಆದರೆ ಅಮೆರಿಕದ ನೌಕಾಪಡೆಯು ಈ ಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವುದರಿಂದ ಇರಾನ್ ಆರ್ಥಿಕವಾಗಿ ಕಂಗೆಟ್ಟಿದೆ.

ಇರಾನ್ ಈ ಜಲಸಂಧಿಯನ್ನು ತಾನೇ ಮುಚ್ಚುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಟ್ರಂಪ್ ಪ್ರಕಾರ, ಇದು ಕೇವಲ ತನ್ನ ಮರ್ಯಾದೆ ಉಳಿಸಿಕೊಳ್ಳಲು ಇರಾನ್ ಮಾಡುತ್ತಿರುವ ನಾಟಕ. ಅಮೆರಿಕ ಈಗಾಗಲೇ ಅದನ್ನು ಮುಚ್ಚಿರುವುದರಿಂದ ಇರಾನ್ ಅಸಹಾಯಕವಾಗಿದೆ.

ಮತ್ತಷ್ಟು ಓದಿ: ನನ್ನಿಂದ ಖುಷಿಯಾಗಿರುವ ಚೀನಾದ ಅಧ್ಯಕ್ಷ ಬಿಗಿ ಅಪ್ಪುಗೆ ನೀಡುತ್ತಾರೆ; ಟ್ರಂಪ್

ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಮೊದಲ ಹಂತದ ಕದನ ವಿರಾಮ ಬುಧವಾರಕ್ಕೆ ಅಂತ್ಯಗೊಂಡಿತ್ತು. ಎರಡನೇ ಸುತ್ತಿನ ಮಾತುಕತೆಗಳು ಯಾವುದೇ ಫಲ ನೀಡದೆ ಸ್ಥಗಿತಗೊಂಡಿದ್ದವು. ಟ್ರಂಪ್ ಮೊದಲು ಕದನ ವಿರಾಮ ವಿಸ್ತರಣೆ ನಿರಾಕರಿಸಿದ್ದರೂ, ಕೊನೆಯ ಕ್ಷಣದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಮನಸ್ಸು ಬದಲಿಸಿದ್ದಾರೆ. ಆದರೂ ಅಮರಿಕ ಸೇನೆಗೆ ಯಾವುದೇ ಕ್ಷಣದಲ್ಲಿ ದಾಳಿಗೆ ಸಿದ್ದರಾಗಿರಿ ಎಂದು ಅವರು ಆದೇಶಿಸಿದ್ದಾರೆ.

ಮುಂದಿನ ಹಾದಿ ಕಠಿಣ
ಈ ಕದನ ವಿರಾಮ ವಿಸ್ತರಣೆಯು ತಾತ್ಕಾಲಿಕವಾಗಿದ್ದು, ಇರಾನ್ ಮಂಡಿಸುವ ಪ್ರಸ್ತಾಪದ ಮೇಲೆ ಎಲ್ಲವೂ ನಿರ್ಧರಿತವಾಗಲಿದೆ. ಒಂದೋ ಒಪ್ಪಂದವಾಗಬೇಕು, ಇಲ್ಲದಿದ್ದರೆ ಇರಾನ್ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಪರೋಕ್ಷ ಎಚ್ಚರಿಕೆಯನ್ನು ಟ್ರಂಪ್ ನೀಡಿದ್ದಾರೆ. ಟ್ರಂಪ್ ಅವರ ಈ ನಡೆ ಇರಾನ್ ಸರ್ಕಾರವನ್ನು ಆರ್ಥಿಕವಾಗಿ ಹೈರಾಣಾಗಿಸಿ, ಅವರನ್ನು ಮಾತುಕತೆಯ ಮೇಜಿಗೆ ಬರುವಂತೆ ಮಾಡುವ ತಂತ್ರದ ಭಾಗವಾಗಿದೆ ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವೇದಿಕೆಯ ಮೇಲೆ ಗಳಗಳನೆ ಅತ್ತ ಜೆನಿಲಿಯಾ ಡಿಸೋಜಾ; ಕಾರಣ ಏನು? – Kannada News | Genelia D’Souza Cries: Emotional Moment at Raj Shivaji Trailer Launch Revealed

ನಟಿ ಜೆನಿಲಿಯಾ ಪರಿಚಯ ಕನ್ನಡದವರಿಗೂ ಇದೆ. ಅವರು ಪರಭಾಷೆ ನಟಿ ಆದರೂ ಕನ್ನಡದಲ್ಲಿ 2008ರಲ್ಲಿ ರಿಲೀಸ್ ಆದ ‘ಸತ್ಯ ಇನ್ ಲವ್’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಜೊತೆ ತೆರೆ ಹಂಚಿಕೊಂಡರು. ಅವರು ಇತ್ತೀಚೆಗೆ ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಈಗ ಅವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಕಾರಣವೂ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಜೆನಿಲಿಯಾ ಪತಿ ರಿತೇಶ್ ದೇಶ್​​ಮುಖ್ ಅವರು ‘ರಾಜ ಶಿವಾಜಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನ ಕೂಡ ಇದೆ. ಮರಾಠ ಸಾಮ್ರಾಜ್ಯದ ದೊರೆ ಛತ್ರಪತಿ ಶಿವಾಜಿ ಮಹರಾಜ ಅವರ ಜೀವನ ಆಧರಿಸಿ ‘ರಾಜ ಶಿವಾಜಿ’ ಸಿನಿಮಾ ಸಿದ್ಧವಾಗಿದೆ. ಇದರಲ್ಲಿ ರಿತೇಶ್ ಶಿವಾಜಿ ಪಾತ್ರ ಮಾಡಿದ್ದಾರೆ. ಏಪ್ರಿಲ್ 20ರಂದು ಮುಂಬೈನಲ್ಲಿ ಅದ್ದೂರಿ ವೇದಿಕೆ ಮೇಲೆ ಟ್ರೇಲರ್ ಲಾಂಚ್ ನಡೆದಿದೆ. ಈ ವೇಳೆ ರಿತೇಶ್ ಭಾವುಕರಾದರು.

‘ರಾಜ ಶಿವಾಜಿ’ ಸಿನಿಮಾ ರಿತೇಶ್ ಅವರ ಕನಸಿನ ಪ್ರಾಜೆಕ್ಟ್. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಈ ಜರ್ನಿಯಲ್ಲಿ ಬೆಂಬಲವಾಗಿ ನಿಂತ ಎಲ್ಲರಿಗೂ ರಿತೇಶ್ ಧನ್ಯವಾದ ಹೇಳಿದ್ದಾರೆ. ಅವರು ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತಾ ಭಾವುಕರಾದರು. ಅವರಿಗೆ ಕಣ್ಣೀರು ತಡೆಯಲಾಗಲಿಲ್ಲ. ಅವರ ಪಕ್ಕದಲ್ಲೇ ಇದ್ದ ಜೆನಿಲಿಯಾ ಅವರು ರಿತೇಶ್ ಅಳುವುದನ್ನು ನೋಡಿ ಕಣ್ಣೀರು ಹಾಕಿದರು. ಅವರಿಗೂ ಕಣ್ಣೀರು ತಡೆಯಲು ಸಾಧ್ಯವೇ ಆಗಿಲ್ಲ. ಈ ಭಾವುಕ ಕ್ಷಣ ನೋಡಿ ಸಂಜಯ್ ದತ್ ಕಣ್ಣುಗಳು ತುಂಬಿ ಬಂದವು. ಸದಾ ಬೆಂಬಲವಾಗಿ ನಿಂತ ಜೆನಿಲಿಯಾ ಅವರಿಗೆ ಧನ್ಯವಾದ ಹೇಳುವುದನ್ನು ರಿತೇಶ್ ಮರೆತಿಲ್ಲ.

ಇದನ್ನೂ ಓದಿ: ‘ರಾಜ ಶಿವಾಜಿ ಪಾತ್ರಕ್ಕೆ ರಿತೇಶ್ ದೇಶ್‌ಮುಖ್ ಸೂಕ್ತವಲ್ಲ’: ನೆಟ್ಟಿಗರಿಂದ ಟ್ರೋಲ್ ಆದ ನಟ

‘ರಾಜ ಶಿವಾಜಿ’ ಚಿತ್ರವನ್ನು ಮುಂಬೈ ಫಿಲ್ಮ್ ಕಂಪನಿ ನಿರ್ಮಾಣ ಮಾಡಿದೆ. ಈ ಚಿತ್ರವನ್ನು ಜಿಯೋ ಸ್ಟುಡಿಯೋಸ್ ಪ್ರೆಸೆಂಟ್ ಮಾಡುತ್ತಿದೆ. ಅಜಯ್ ಹಾಗೂ ಅತುಲ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದೆ. ಈ ಸಿನಿಮಾ ಕಾರ್ಮಿಕ ದಿನಾಚರಣೆ ಪ್ರಯುಕ್ತ ಮೇ 1ರಂದು ರಿಲೀಸ್ ಆಗುತ್ತಿದೆ. ಹಿಂದಿ ಜೊತೆಗೆ ಮರಾಠಿಯಲ್ಲೂ ಸಿನಿಮಾ ಸಿದ್ಧವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today: ಇಂದು ಈ ರಾಶಿಯವರಿಗೆ ಆಭರಣ ಖರೀದಿ ಯೋಗ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 22, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಪಂಚಮಿ ತಿಥಿ, ಆರ್ದ್ರ ನಕ್ಷತ್ರ, ಅತಿಗಂಡ ಯೋಗ, ಮತ್ತು ಬಾಲವ ಕರಣದಿಂದ ಕೂಡಿದೆ.

ಇಂದು ರಾಮಾನುಜಾಚಾರ್ಯರ ಜಯಂತಿ, ಲಾವಣ್ಯ ಗೌರಿ ವ್ರತ, ಗಾಯತ್ರಿ ಜಯಂತಿ, ದಾರುಕಾಚಾರ್ಯರ ಜಯಂತಿ ಹಾಗೂ ಗಜಕೇಸರಿ ಮಹಾಯೋಗದ ಸುದಿನವಾಗಿದೆ. ಗುರು ಮೀನ ರಾಶಿಯಲ್ಲಿ, ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸುವುದರಿಂದ ಗಜಕೇಸರಿ ಮಹಾಯೋಗ ಸೃಷ್ಟಿಯಾಗಿದ್ದು, ಇದು ದಿನಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದೆ. ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಮೇಲೆ ಈ ಗ್ರಹಗಳ ಸಂಚಾರದ ಪರಿಣಾಮಗಳನ್ನು ವಿವರಿಸಿದ್ದು, ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಸ್ಥಿತಿ, ಆರೋಗ್ಯ, ಸಂಬಂಧಗಳು, ವೃತ್ತಿಜೀವನ ಮತ್ತು ಅದೃಷ್ಟದ ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ.

 

 

 

Source link

Daily Devotional: ಮಕ್ಕಳಿಗೆ ಬಾಲಗ್ರಹ ಮಂತ್ರಗಳನ್ನ ಹೇಳುವುದರ ಹಿಂದಿನ ರಹಸ್ಯವೇನು ಗೊತ್ತಾ? – Kannada News | Balagraha Mantras for Kids: Traditional Protection

ಮಕ್ಕಳಿಗೆ ಬಾಲಗ್ರಹ ಮಂತ್ರಗಳನ್ನ ಹೇಳುವುದರ ಹಿಂದಿನ ರಹಸ್ಯವೇನು ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಪುಟ್ಟ ಮಕ್ಕಳು, ಒಂದು ವರ್ಷದಿಂದ ಹನ್ನೆರಡು ವರ್ಷದವರೆಗೆ, ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತಾರೆ, ಹಠ ಮಾಡುತ್ತಾರೆ, ಅಳುತ್ತಾರೆ ಅಥವಾ ಜ್ವರದಿಂದ ಬಳಲುತ್ತಾರೆ. ಇಂತಹ ಸಂದರ್ಭಗಳಲ್ಲಿ, ಹಿಂದೂ ಸಂಸ್ಕೃತಿ ಮತ್ತು ಸನಾತನ ಪರಂಪರೆಯಲ್ಲಿ, ಅನುಭವಿಗಳು ಮತ್ತು ಮಂತ್ರದ ಶಕ್ತಿಯನ್ನು ಪಡೆದವರು ಮಕ್ಕಳಿಗೆ ಮಂತ್ರಗಳನ್ನು ಹಾಕಿಸುವ ಪದ್ಧತಿ ಇದೆ.

ಈ ಮಂತ್ರ ಪಠಣವು ಮಕ್ಕಳಲ್ಲಿನ ಜ್ವರ, ಭಯ ಮತ್ತು ಅಳು ನಿವಾರಿಸಲು ಸಹಕಾರಿಯಾಗಿದೆ ಎಂದು ನಂಬಲಾಗಿದೆ. ಇದನ್ನು ಒಂದು ರೀತಿಯ ಪ್ರಾಥಮಿಕ ಚಿಕಿತ್ಸೆ ಅಥವಾ ಫಸ್ಟ್ ಏಡ್ ಎಂದು ಪರಿಗಣಿಸಲಾಗುತ್ತದೆ. ಹಿರಿಯರು, ವಿದ್ವಾಂಸರು, ಅಥವಾ ದೈವಾಂಶ ಸಂಭೂತರು ಎಂದು ಪರಿಗಣಿಸಲ್ಪಟ್ಟವರು ಕುಂಕುಮ, ವಿಭೂತಿ ಅಥವಾ ವಸ್ತ್ರದ ಮೂಲಕ ಮಂತ್ರಗಳನ್ನು ಹಾಕುತ್ತಾರೆ. ಇದು ಮಕ್ಕಳಿಗೆ ದೃಷ್ಟಿ ದೋಷ ಅಥವಾ ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂದು ನಂಬಿಕೆ ಇದೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

 

 

 

Source link

ಕಸ ಹಾಕಲು ಹೋದ ವಿವಾಹಿತ ಮಹಿಳೆ ನಿಗೂಢ ನಾಪತ್ತೆ: ಪ್ರಿಯಕರನ ಜೊತೆ ಪರಾರಿಯಾದ ಆರೋಪ, ಸಿಸಿಟಿವಿಯಲ್ಲಿ ದೃಶ್ಯ ಸೆರೆ! – Kannada News | Bengaluru: Woman Goes Missing After Leaving Home to Throw Garbage; Husband Alleges Elopement with Paramour in Bagalagunte

ಆರೋಪಿ ಪ್ರಭು ಹಾಗೂ ಮಹಿಳೆImage Credit source: tv9

ಬೆಂಗಳೂರು, ಏಪ್ರಿಲ್ 22: ‘ಕಸ ಹಾಕಿ ಬರುತ್ತೇನೆ’ ಎಂದು ಮನೆಯಿಂದ ಹೊರಹೋದ ಇಬ್ಬರು ಮಕ್ಕಳ ತಾಯಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ (Bengaluru) ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆಯು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ ಎಂದು ಪತಿ ಗಂಭೀರ ಆರೋಪ ಮಾಡಿದ್ದು, ಸದ್ಯ ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ.

ಮಹಿಳೆ ನಿಗೂಢ ನಾಪತ್ತೆ ಘಟನೆಯ ಹಿನ್ನೆಲೆ

ಬಾಗಲಗುಂಟೆಯಲ್ಲಿ ವಾಸವಿದ್ದ ಶರತ್ ಕುಮಾರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶರತ್ ಕೆಲಸಕ್ಕೆ ಹೋದ ಸಮಯದಲ್ಲಿ ಅದೇ ಏರಿಯಾದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನ ಜೊತೆ ಮಹಿಳೆ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಪ್ರಭು ಮಹಿಳೆಯ ಮೊಬೈಲ್ ರೀಚಾರ್ಜ್ ಮಾಡಿಸುತ್ತಿದ್ದ ವಿಷಯ ತಿಳಿದು ದಂಪತಿ ನಡುವೆ ಈ ಹಿಂದೆ ಗಲಾಟೆಯೂ ನಡೆದಿತ್ತು. ಪತಿ ಶರತ್ ಈ ಬಗ್ಗೆ ಪತ್ನಿಗೆ ಬುದ್ಧಿವಾದ ಹೇಳಿದ್ದರು.

ನಿದ್ದೆ ಮಾತ್ರೆ ಹಾಕಿ ಎಸ್ಕೇಪ್?

ಏಪ್ರಿಲ್ 11ರ ರಾತ್ರಿ ಸುಮಾರು 11:57ಕ್ಕೆ ಮಹಿಳೆ ಮನೆ ಬಿಟ್ಟು ಹೋಗಿದ್ದಾಳೆ. ಹೋಗುವ ಮುನ್ನ ಪತಿ ಮತ್ತು ಮಕ್ಕಳಿಗೆ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿದ್ದಳು ಎಂಬ ಗಂಭೀರ ಆರೋಪವನ್ನು ಪತಿ ಶರತ್ ಮಾಡಿದ್ದಾರೆ. ‘ನಾನು ಮನೆಯಲ್ಲಿದ್ದಾಗಲೇ ಒಂದು ಕೈಯಲ್ಲಿ ಕಸದ ಬಕೆಟ್ ಹಾಗೂ ಮತ್ತೊಂದು ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಪ್ರಿಯಕರನ ಜೊತೆ ಹೋಗಿದ್ದಾಳೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯ ದಾಖಲು

ಮಹಿಳೆಯು ಬ್ಯಾಗ್ ಹಿಡಿದು ಹೋಗುತ್ತಿರುವ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಪತ್ನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ ಪತಿ ಶರತ್, ಕೊನೆಗೆ ಸಿಗದಿದ್ದಾಗ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ‘ಫಾರಿನ್ ಸ್ಟೈಲ್’ ಪ್ರಪೋಸ್ ಮಾಡ್ತೀನಿ ಅಂತ ಕೈ-ಕಾಲು ಕಟ್ಟಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಿಯತಮೆ! ಕಣ್ಣೆದುರೇ ಸುಟ್ಟು ಕರಕಲಾದ ಯುವಕ

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:35 am, Wed, 22 April 26

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಎಲ್ಲ ಕಾರ್ಯಕ್ಕೂ ಅನನುಕೂಲ, ದಿಟ್ಟ ನಿರ್ಧಾರ – Kannada News | Today’s Horoscope April 22: Daily Astrology, Important Decisions

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮೀ ತಿಥಿಯ ಬುಧವಾರದಂದು ಯೋಗ್ಯ ಶಿಕ್ಷಣ, ಬರುವ ಸಂಪತ್ತಿನ ರಕ್ಷಣೆ, ಅತಿಯಾದ ಆಹಾರ ಭಕ್ಷಣೆ, ಭವಿಷ್ಯದ ವೀಕ್ಷಣೆ, ಇವೆಲ್ಲ ಇರಲಿದೆ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಸೌಭಾಗ್ಯ, ಕರಣ : ಭದ್ರ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:23 – 13:57, ಯಮಗಂಡ ಕಾಲ 07:42 – 09:16, ಗುಳಿಕ ಕಾಲ 10:49 – 12:23

ಮೇಷ ರಾಶಿ :

ಆತ್ಮವಿಶ್ವಾಸದಿಂದ ನೀವು ದಿನವನ್ನು ಸುಗಮವಾಗಿ ಕಳೆಯುತ್ತೀರಿ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯೊಂದಿಗೆ ಜಗಳವಾದರೂ, ತಾಳ್ಮೆ ಬೇಕು. ಆಸೆಗೆ ಪೂರಕ ವಾತಾವರಣ ಸಿಕ್ಕಿದ್ದು ತೃಪ್ತಿ ನೀಡುವುದು. ಹಿರಿಯರಿಂದ ಮಾರ್ಗದರ್ಶನ ಸಿಗಬಹುದು. ಸಹಾಯ ಮಾಡುವ ಮನೋಭಾವನೆ ನಿಮಗೆ ಸಂತೋಷ ನೀಡುತ್ತದೆ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದ್ದು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಮಾಡಲು ಸರಿಯಾದ ವ್ಯಕ್ತಿಗಳು ಸಿಗುವರು.

ವೃಷಭ ರಾಶಿ :

ಯಾರ ವ್ಯಕ್ತಿತ್ವವನ್ನೂ ಕೇವಲವಾಗಿ ನೋಡುವುದು ಬೇಡ. ಪ್ರೇಮ ಜೀವನದಲ್ಲಿ ಪ್ರಾಮಾಣಿಕತೆ ಮುಖ್ಯ. ದಿವಸದ ಕೊನೆಯಲ್ಲಿ ಆತ್ಮೀಯರೊಂದಿಗೆ ಸಮಯ ಕಳೆಯಬಹುದು. ಸಂಗಾತಿಯ ಪ್ರೀತಿ ನಿಮ್ಮ ನೆನಪಿನಲ್ಲಿ ಉಳಿಯುವ ರೀತಿಯಲ್ಲಿರುತ್ತದೆ. ಕೆಲವು ಸನ್ನಿವೇಶವು ನಿಮಗೆ ಇಷ್ಟವಾಗದು. ಅದರೂ ಅನಿವಾರ್ಯ ಎನಿಸೀತು. ಕೋಪವನ್ನು ಬಿಟ್ಟರೂ ಬಿಡಲಾಗದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ.

ಮಿಥುನ ರಾಶಿ :

ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಇರುವಾಗ ಸಹನೆವಹಿಸಿ. ಪ್ರೇಮದಲ್ಲಿ ವಿಶಿಷ್ಟ ಅನುಭವ ಸಾಧ್ಯ. ಕೆಲಸಕ್ಕಾಗಿ ಕೈಗೊಂಡ ಪ್ರಯಾಣ ಯಶಸ್ಸು ತರುತ್ತದೆ. ಭೂಮಿಯನ್ನು ಪಡೆಯಲು ಓಡಾಟ‌ಮಾಡುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ಇರಲಿದೆ. ವ್ಯವಹಾರದಲ್ಲಿ ನಿಮ್ಮ ನಿರ್ಧಾರಗಳೇ ಅಂತಿಮವಾಗುವುದು. ಯಶಸ್ಸಿನ ಗುಟ್ಟನ್ನು ನೀವು ಯಾರಿಗೂ ಹೇಳಲಾರಿರಿ. ಮನೆಯಲ್ಲಿ ಹರ್ಷದ ವಾತಾವರಣ, ಬಂಧುಗಳ ಸಮಾಗಮ.

ಕರ್ಕಾಟಕ ರಾಶಿ :

ಅನಿರೀಕ್ಷಿತ ಲಾಭವು ಉತ್ಸಾಹ ತರುವುದು. ಪ್ರೇಮ ಜೀವನದಲ್ಲಿ ಅನಿರೀಕ್ಷಿತ ಶಾಂತಿ. ಹೆಚ್ಚು ಕೆಲಸವಿದ್ದರೂ ನೀವು ಶಕ್ತಿವಂತನಂತೆ ಕಾಣಬಹುದು. ಕೆಲಸ ಮುಗಿದ ಅನಂತರ ಮನೆಯಲ್ಲಿಯೂ ಸಮಯ ಕಳೆಯಲು ಪ್ರಯತ್ನ ಮಾಡಿ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲು ನಿಮಗೆ ಸಂಕೋಚವಾಗಬಹುದು. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ಯಾರಿಂದಲೋ ನಿಮಗೆ ಸಂಕಟವಾಗುವುದು.

ಸಿಂಹ ರಾಶಿ :

ಸ್ಥಾನಮಾನಕ್ಕೆ ಶೀತಲ ಸಮರ ಆರಂನಬವಾಗಲಿದೆ. ಹಣದ ಬದಲು ಸುರಕ್ಷಿತ ಹೂಡಿಕೆ ಅತ್ಯುತ್ತಮ. ಮನೆಯಲ್ಲಿ ಸಮಸ್ಯೆಗಳಿದ್ದರೂ ನೀವು ಸಮಾಧಾನದಿಂದಿರುವುದು ಉತ್ತಮ. ಉಚಿತ ಸಮಯದಲ್ಲಿ ಹೊಸದನ್ನು ಕಲಿಯಿರಿ. ಸಂಗಾತಿಯ ಬೆಂಬಲ ನಿಮಗೆ ಬೆರಗಾಗಿಸುವಷ್ಟು ಉತ್ತಮವಾಗಿರಬಹುದು. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಜೀವನಕ್ಕೆ ಕೆಲವು ಮಾರ್ಪಾಡುಗಳು ಅನಿವಾರ್ಯವಾದೀತು.

ಕನ್ಯಾ ರಾಶಿ :

ಪ್ರೇಮ ಜೀವನದಲ್ಲಿ ಗಾಢವಾದ ಅನುಭವ ಆಗುವುದು. ನಿಮ್ಮ ಶ್ರಮದ ಫಲವನ್ನು ಇತರರು ಪಡೆದರೆ ವ್ಯಥೆ ಆಗಬಹುದು. ಹಳೆ ಸ್ನೇಹಿತರ ಭೇಟಿಗೆ ಯೋಜನೆ ಮಾಡುವಿರಿ. ಹಿತಶತ್ರುಗಳು ನಿಮಗೆ ಮಾಡಿದ ಕೆಡುಕು ನಿಮಗೆ ಒಳ್ಳೆಯದೇ ಆಗಲಿದೆ. ಸರ್ಕಾರಿ ಕೆಲಸ ಮಾಡುವವರಿಗೆ ಉನ್ನತ ಸ್ಥಾನದ ವಾರ್ತೆ ಬರುವುದು. ಹೊಸ ಉದ್ಯೋಗವನ್ನು ಆರಂಭಿಸಲು ತೀವ್ರತೆಯು ಇರಲಿದೆ. ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ.

ತುಲಾ ರಾಶಿ :

ನಿಮ್ಮ ವಸ್ತು ಕೈಗೆ ಸಿಗದೇ ಇರುವುದನ್ನು ನೀವು ಮಾಡಿದ ತ್ಯಾಗ ಎಂದು ತಿಳಿಯಿರಿ‌. ಸಂಗಾತಿಯ ಅತಿಯಾದ ಆಸಕ್ತಿ ನಿಮ್ಮ ಮನಸ್ಸಿಗೆ ಒತ್ತಡ ತರಬಹುದು. ಆದರೆ ಅವರ ನಿಜವಾದ ಉದ್ದೇಶ ನಿಮಗೆ ನಂತರ ಸ್ಪಷ್ಟವಾಗಲಿದೆ. ಅನುಭವಿ ವ್ಯಕ್ತಿಯಿಂದ ನೀವು ಪ್ರಯೋಜನಕಾರಿ ಸಲಹೆಯು ಸಿಗುವುದು. ನಿಮ್ಮ ವ್ಯಾಪಾರ ವಿಸ್ತರಣೆಯನ್ನು ಮಾಡಲು ನಿರ್ಧಾರ ಮಾಡುವಿರಿ. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟ.

ವೃಶ್ಚಿಕ ರಾಶಿ :

ಅನಿರೀಕ್ಷಿತ ಆರ್ಥಿಕ ನಷ್ಟ ಸಂಭವಿಸುವುದು. ನಿಮಗೆ ಅರಿವಿಲ್ಲದೇ ಯೋಗವು ನಷ್ಟವಾಗುವುದು. ಅಪರೂಪದ ಭೇಟಿಗಳು ಸಂತೋಷ ತರಬಹುದು. ಪ್ರೇಮದಲ್ಲಿ ಹೊಸ ಚೈತನ್ಯ ಜಾಗರೂಕವಾಗಲಿ. ವೃತ್ತಿ ಯೋಜನೆಗಳು ಸಕಾರಾತ್ಮಕ ಫಲಿತಾಂಶ ತರುತ್ತವೆ. ವಹಿಸಿಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣ ಮಾಡುವಿರಿ. ತೊಂದರೆಗಳನ್ನು ನೀವು ಎದುರಿಸಲು ಸಕ್ಷಮರಾಗಿರುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು.

ಧನು ರಾಶಿ :

ಅವಶ್ಯಕತೆ ಇಲ್ಲದಿದ್ದರೂ ಕೃತಜ್ಞತೆಯನ್ನು ಅರ್ಪಿಸುವುದು ಕರ್ತವ್ಯ. ಸಹೋದ್ಯೋಗಿಗಳ ಜೊತೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ. ಕೆಲಸದಲ್ಲಿ ಹೊಸ ಜನರನ್ನು ಭೇಟಿಯಾಗಿ ಮುಂದಿನ ಅವಕಾಶಗಳತ್ತ ಗಮನ ಹರಿಸಿ. ಸಮಯದ ಪೂರಕವಾಗಿ ಕೆಲಸ ಮಾಡಿದರೆ ಯಶಸ್ಸು ಖಚಿತ. ತುರ್ತು ಹಣವು ಬೇಕಿದ್ದರಿಂದ ಸ್ನೇಹಿತರನ್ನು ಕೇಳುವಿರಿ. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು.

ಮಕರ ರಾಶಿ :

ನೀವು ಉದ್ಯೋಗವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ತಾನಾಗಿಯೇ ಬೀಳುವ ಮರವನ್ನು ನೀವು ತಲೆಯ ಮೇಲೆ ಬೀಳಿಸಿಕೊಳ್ಳುವಿರಿ. ಹಣದ ವಿಚಾರದಲ್ಲಿ ಜಾಣೆ ಅಗತ್ಯ ಸಂಗಾತಿಯೊಂದಿಗೆ ಜಗಳ ಉಂಟಾದರೂ ಅವರು ಶಾಂತಿ ಕಾಪಾಡುತ್ತಾರೆ. ನಿಮ್ಮ ಸಂಗಾತಿಯ ಆರೋಗ್ಯವೂ ವ್ಯತ್ಯಾಸವಾಗಿ ಉದ್ವೇಗಕ್ಕೆ ಒಳಗಾಗುವರು. ಶುಭಕರ್ಮವನ್ನು ಮಾಡುವ ಉತ್ಸಾಹವಗಬಹುದು. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು.

ಕುಂಭ ರಾಶಿ :

ಸೋತೆನೆಂದು ಹತಾಶರಾಗುವ ಬದಲು ಗೆಲವಿಗೆ ಇನ್ನೊಂದು ಅವಕಾಶ ಎಂದುಕೊಂಡರೆ ಸುಖ.‌ ದಿನದ ಕೊನೆಯಲ್ಲಿ ನಿಮ್ಮ ತಾಳ್ಮೆ ಯಶಸ್ಸಿಗೆ ಕಾರಣವಾಗಲಿದೆ. ದುಃಖವನ್ನು ಅನುಭವಿಸುವ ಸಂದರ್ಭ ಬರಬಹುದು. ಮನಸ್ಸು, ಬುದ್ಧಿಗಳನ್ನು ನಿಶ್ಚಲಗೊಳಿಸಿ. ಇಂದು ನೀವು ಸೋಮಾರಿತನವನ್ನು ಬೆಳೆಸಿಕೊಳ್ಳುವಿರಿ. ಹಣಕ್ಕೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಸುಲಭದ ದಾರಿಯು ನಿಮಗೆ ಕಾಣಿಸುವುದು. ವೃತ್ತಿಶೀಲರು ತಮ್ಮನ್ನು ಅತಿಮಾನುಷರಂತೆ ತೋರ್ಪಡಿಸುವರು.

ಮೀನ ರಾಶಿ :

ಇಂದು ಎಲ್ಲವೂ ಖಾಲಿ ಖಾಲಿ ಎನ್ನುವ ಮನೋಭಾವ ಬರಬಹುದು. ಶಕ್ತಿಯ ಮಟ್ಟವನ್ನು ಬಾಕಿಯಿರುವ ಕೆಲಸಗಳಿಗೆ ಬಳಸಬಹುದು. ಹಣಕಾಸಿನ ಕಾರ್ಯದಿಂದ ಯಶಸ್ಸು ಸಿಗಬಹುದು. ಸಂಗಾತಿಯ ಕುಟುಂಬದ ಅಡ್ಡಿ ಕೆಲವೊಂದು ವ್ಯತ್ಯಯ ತಂದರೂ, ನಿಮ್ಮ ಸಹನೆಗೆ ಅದರ ಬಗ್ಗೆ ಪ್ರಭಾವ ಬೀರುವುದಿಲ್ಲ. ಆರ್ಥಿಕಸ್ಥಿತಿಯಲ್ಲಿ ಪ್ರಗತಿಯ ಲಕ್ಷಣವಿದೆ. ವ್ಯವಹಾರದಲ್ಲಿ ಇಂದು ನಿಮಗೆ ತುಂಬಾ ಒತ್ತಡದ ದಿನವಾಗಿರುತ್ತದೆ. ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯಬೇಕಾಗಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಮೋದಿಗೆ ಭಯೋತ್ಪಾದಕ ಎಂದ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು – Kannada News | BJP files complaint to Election Commission against Mallikarjun Kharges terrorist remark on PM Modi

ನವದೆಹಲಿ, ಏಪ್ರಿಲ್ 21: ಪ್ರಧಾನಿ ನರೇಂದ್ರ ಮೋದಿಯನ್ನು (PM Modi) ಭಯೋತ್ಪಾದಕ ಎಂದು ಕರೆದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ. ಕೂಡಲೇ ಕಾಂಗ್ರೆಸ್ ಅಧ್ಯಕ್ಷರು ಸಾರ್ವಜನಿಕ ಕ್ಷಮೆಯಾಚಿಸುವಂತೆ ನಿರ್ದೇಶಿಸುವಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಕಿರಣ್ ರಿಜಿಜು ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರನ್ನೊಳಗೊಂಡ ಬಿಜೆಪಿ ನಿಯೋಗ ಬುಧವಾರ ಈ ವಿಷಯವನ್ನು ಎತ್ತಲು ಚುನಾವಣಾ ಆಯೋಗವನ್ನು ಭೇಟಿ ಮಾಡಲಿವೆ ಎಂದು ಬಿಜೆಪಿ ತಿಳಿಸಿದೆ.

ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಿದ ಅರ್ಜಿಯಲ್ಲಿ, ಬಿಜೆಪಿ ನಾಯಕರು ಪ್ರಧಾನ ಮಂತ್ರಿ ಮೋದಿಯ ವಿರುದ್ಧದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ತೀವ್ರ ಅವಹೇಳನಕಾರಿ ಮತ್ತು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗಳಿಗಾಗಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಸೂಕ್ತ ದಂಡ ವಿಧಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪತ್ರದಲ್ಲಿ ಒತ್ತಾಯಿಸಲಾಗಿದೆ.

“ಅಣ್ಣಾದೊರೈ ಅವರ ಫೋಟೋ ಹಾಕುವ ಈ ಎಐಎಡಿಎಂಕೆ ಜನರು ಮೋದಿಯೊಂದಿಗೆ ಹೇಗೆ ಕೈಜೋಡಿಸುತ್ತಾರೆ? ಎಐಎಡಿಎಂಕೆ ಮೋದಿಯೊಂದಿಗೆ ಹೇಗೆ ಕೈ ಜೋಡಿಸಿದರು? ಅವರೊಬ್ಬ ಭಯೋತ್ಪಾದಕ. ಅವರು ಸಮಾನತೆಯನ್ನು ನಂಬುವುದಿಲ್ಲ. ಅವರ ಪಕ್ಷವೆಂದೂ ಸಮಾನತೆ ಮತ್ತು ನ್ಯಾಯವನ್ನು ನಂಬುವುದಿಲ್ಲ. ಅಂತಹ ಬಿಜೆಪಿಯೊಂದಿಗೆ ಎಐಎಡಿಎಂಕೆ ಸೇರುತ್ತಿದೆ. ಅಂದರೆ ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದರ್ಥ” ಎಂದು ಖರ್ಗೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಇನ್ನೆಷ್ಟು ದಿನ ಜನರ ದಾರಿ ತಪ್ಪಿಸುತ್ತೀರಿ? ಖರ್ಗೆ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ

ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಕೂಡಲೆ ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ, “ಪ್ರಧಾನಿ ಮೋದಿ ಯಾವಾಗಲೂ ನಮಗೆ ಬೆದರಿಕೆ ಹಾಕುತ್ತಾರೆ ಎಂದು ನಾನು ಹೇಳಿದ್ದೇನೆ. ಆದಾಯ ತೆರಿಗೆ ಇಲಾಖೆ, ಇಡಿ ಮತ್ತು ಇತರ ಸಂಸ್ಥೆಗಳು ಅವರ ಕೈಯಲ್ಲಿವೆ ಎಂದು ನಾನು ಹೇಳಿದ್ದೆ. ಅವರು ಭಯೋತ್ಪಾದಕ ಎಂದು ನಾನು ಖಂಡಿತವಾಗಿಯೂ ಹೇಳಲಿಲ್ಲ” ಎಂದು ಸ್ಪಷ್ಟನೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ರಾಶಿಯವರಿಗೆ ಇರುವಷ್ಟು ತಾಪತ್ರೆ ಯಾವ ರಾಶಿಗೂ ಇಲ್ಲ: ಅದರೂ ಇದರ ನಡುವೆ ಒಂದು ಯೋಗವಿದೆ – Kannada News | Mithuna Rashi Monthly Forecast: Career, Finance and Health Insights for Gemini Natives

ಮಿಥುನ ರಾಶಿಯವರಿಗೆ ಈ ತಿಂಗಳು ಗ್ರಹಗಳ ಸಂಚಾರದಲ್ಲಿ ಆಗುವ ಬದಲಾವಣೆಯಿಂದ ಮಿಶ್ರ ಫಲಗಳಿಂದ ಕೂಡಿದೆ. ಬುಧನ ಚಲನೆ ಮತ್ತು ಗಾಳಿಯ ತತ್ವದ ಈ ರಾಶಿಯವರು ಈ ತಿಂಗಳು ಹೆಚ್ಚು ಜಾಗರೂಕರಾಗಿ ಮತ್ತು ಸೃಜನಶೀಲವಾಗಿ ಇರಬೇಕಾದ ಅನಿವಾರ್ಯತೆ ಇದೆ. ಶುಭ ಗ್ರಹದ ದೃಷ್ಟಿ ಮತ್ತು ಸಂಯೋಗದಿಂದ ಶುಭಾಶುಭ ಫಲಗಳು ನಿಮ್ಮ ಪಾಲಿಗೆ ಇರಲಿದೆ.

ಯಾವ ದಶೆ ಉತ್ತಮ?

ಹತ್ತನೇ ಮನೆಯ ಮೇಲಿರುವ ಶುಭ ಗ್ರಹಗಳ ದೃಷ್ಟಿಯಿಂದಾಗಿ ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ನೀವು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಈ ತಿಂಗಳು ನಿಮ್ಮ ಕೈಸೇರಬಹುದು.

​ಆರ್ಥಿಕ ಲಾಭ :

ಹನ್ನೊಂದನೇ ಮನೆಯಲ್ಲಿರುವ ಲಾಭಾಧಿಪತಿಯ ಬಲದಿಂದಾಗಿ ಹಳೆಯ ಸಾಲಗಳು ತೀರುವ ಸಾಧ್ಯತೆ ಇದೆ. ಹಠಾತ್ ಧನಲಾಭ ಅಥವಾ ಪೂರ್ವಜರ ಆಸ್ತಿಯಿಂದ ಲಾಭ ಪಡೆಯುವ ಯೋಗವಿದೆ.

​ಸಾಮಾಜಿಕ ಗೌರವ:

ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಮನ್ನಣೆ ಸಿಗಲಿದೆ. ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡವರಿಗೆ ಇದು ಸುವರ್ಣ ಕಾಲ.

​ಯಾವ ದಶೆ ಅಧಮ?

​ಆರನೇ ಮನೆಯ ಅಧಿಪತಿಯ ಸಂಚಾರದಿಂದಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ವಿಶೇಷವಾಗಿ ಜೀರ್ಣಕ್ರಿಯೆ ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳ ಬಗ್ಗೆ ಎಚ್ಚರವಿರಲಿ.

​ಸಂವಹನದಲ್ಲಿ ಅಡೆತಡೆ :

ರಾಶ್ಯಾಧಿಪತಿ ಬುಧನು ವಕ್ರಿಯಾಗಿದ್ದಲ್ಲಿ ಅಥವಾ ನೀಚ ಸ್ಥಿತಿಯಲ್ಲಿದ್ದಲ್ಲಿ ಮಾತು ಕೆಡುವ ಸಾಧ್ಯತೆ ಇರುತ್ತದೆ. ಪ್ರೀತಿಪಾತ್ರರ ಜೊತೆ ಅನಗತ್ಯ ವಾಗ್ವಾದಗಳು ಮಾನಸಿಕ ಶಾಂತಿ ಕದಡಬಹುದು.

​ಪ್ರವಾಸದಲ್ಲಿ ಜಾಗ್ರತೆ:

ಈ ತಿಂಗಳು ದೂರದ ಪ್ರಯಾಣ ಮಾಡುವಾಗ ನಿಮ್ಮ ವಸ್ತುಗಳ ಬಗ್ಗೆ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.

​ಬುಧವಾರ ಗಣಪತಿಗೆ ಅರಿಶಿನ ಅಥವಾ ಗರಿಕೆ ಸಮರ್ಪಿಸಿ. ​ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ಅಥವಾ ಹಸಿರು ಬೇಳೆಯನ್ನು ದಾನ ಮಾಡುವುದು ಉತ್ತಮ. ಗ್ರಹಗತಿಗಳು ದಾರಿಯನ್ನು ತೋರಿಸುತ್ತವೆ, ಆದರೆ ನಿಮ್ಮ ಪರಿಶ್ರಮ ಮತ್ತು ಸಕಾರಾತ್ಮಕ ಆಲೋಚನೆಗಳು ಮಾತ್ರ ಯಶಸ್ಸನ್ನು ತಂದುಕೊಡುತ್ತವೆ.

– ಲೋಹಿತ ಹೆಬ್ಬಾರ್

Published On – 10:55 pm, Tue, 21 April 26

Source link

ಅಡುಗೆಮನೆಯ ಮಸಾಲೆಯಲ್ಲಿ ವಿಷ; ಮಾಜಿ ಪತ್ನಿಯ ಇಡೀ ಕುಟುಂಬವನ್ನೇ ಕೊಲ್ಲಲು ನಡೆದಿತ್ತು ಸಂಚು!

ಹೈದರಾಬಾದ್, ಏಪ್ರಿಲ್ 21: ಸಿರಿಷಾ ಎಂಬ ಯುವತಿ ಇಂಗ್ಲೆಂಡ್​​ನಲ್ಲಿ ನೆಲೆಸಿದ್ದ ಫಾರ್ಮಾಸಿಸ್ಟ್​ ಒಬ್ಬನನ್ನು ಮದುವೆಯಾಗಿದ್ದಳು. ಆದರೆ, ಆಕೆಗೆ ಆತನೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ವಿಚ್ಛೇದನ ಪಡೆದು ಇನ್ನೊಬ್ಬನನ್ನು ಮದುವೆಯಾಗಿದ್ದಳು. 2ನೇ ವಿವಾಹವಾಗಿದ್ದ ಆಕೆ ಖುಷಿಯಾಗಿರುವುದನ್ನು ಮೊದಲ ಗಂಡನಿಗೆ ನೋಡಲು ಕಷ್ಟವಾಗುತ್ತಿತ್ತು. ಹೀಗಾಗಿ, ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಇಡೀ ಕುಟುಂಬವನ್ನೇ ನಾಶ ಮಾಡುವ ಸಂಚು ಮಾಡಿದ್ದ. ಇದು ಹೈದರಾಬಾದ್​ನ ಕತೆ.

2023ರಲ್ಲಿ ನಡೆದ ಘಟನೆ ಇದು. ಶಶಿರೇಖಾ ಎಂಬ ಯುವತಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ಆಕೆಯ ಉಗುರುಗಳ ಮೇಲೆ ಮಸುಕಾದ ಬಿಳಿ ಗೆರೆಗಳನ್ನು ಗಮನಿಸಿದ ವೈದ್ಯರು ಆಕೆಯ ದೇಹಕ್ಕೆ ವಿಷ ಸೇರಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಆಕೆಯ ಕುಟುಂಬದವರ ಆರೋಗ್ಯದಲ್ಲಿಯೂ ಭಾರೀ ಬದಲಾವಣೆಯಾಗಿತ್ತು. ಆಗಾಗ ವಾಂತಿ, ಸುಸ್ತು, ಜ್ವರ ಮುಂತಾದ ಸಮಸ್ಯೆಗಳು ಪದೇಪದೆ ಕಾಣಿಸಿಕೊಳ್ಳತೊಡಗಿತ್ತು.

ಇದನ್ನೂ ಓದಿ: ಉದ್ಯಮಿಯ ಮನೆಯಿಂದ 220 ಗ್ರಾಂ ಚಿನ್ನ ಕದ್ದ ಐವರು ಪೊಲೀಸ್ ಅಧಿಕಾರಿಗಳು!

ಜುಲೈ 26, 2023ರಂದು ಶಶಿರೇಖಾ ಅವರನ್ನು ಆಂಧ್ರಪ್ರದೇಶದ ಗುಂಟೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಗೆ ತೀವ್ರ ಅತಿಸಾರ, ವಾಂತಿ ಮತ್ತು ಕೈಕಾಲುಗಳಲ್ಲಿ ಊತವಿತ್ತು. ಅವರ ಕುಟುಂಬಸ್ಥರು ಆಕೆಯನ್ನು ಹಲವಾರು ವೈದ್ಯರ ಬಳಿಗೆ ಕರೆದೊಯ್ದರೂ ಅನಾರೋಗ್ಯಕ್ಕೆ ಕಾರಣ ಸ್ಪಷ್ಟವಾಗಿರಲಿಲ್ಲ. ಕೊನೆಗೆ ವೈದ್ಯರೊಬ್ಬರು ಆಕೆಯ ಉಗುರಿನ ಮೇಲಿದ್ದ ಬಿಳಿ ಗೆರೆಗಳನ್ನು ಗಮನಿಸಿ ಆಕೆಯ ಮೇಲೆ ವಿಷಪ್ರಾಶನವಾಗಿದೆ ಎಂದು ತಿಳಿಸಿದ್ದರು. ಆದರೆ, ಅಷ್ಟು ಪ್ರಮಾಣದ ವಿಷ ಆಕೆಯ ದೇಹಕ್ಕೆ ಸೇರಿದ್ದು ಹೇಗೆಂಬುದು ಕಗ್ಗಂಟಾಗಿತ್ತು.

ಶಶಿರೇಖಾ ಅವರ ಕುಟುಂಬದ ಸದಸ್ಯರು ಹಲವಾರು ವೈದ್ಯರನ್ನು ಭೇಟಿ ಮಾಡಿದ ನಂತರ ನರವಿಜ್ಞಾನಿ ಡಾ. ವೇಮುರಿ ರಾಮ ತಾರಕನಾಥ್ ಅವರ ಬಳಿ ಹೋದಾಗ ಈ ವಿಷದ ವಿಷಯ ಬೆಳಕಿಗೆ ಬಂದಿತ್ತು. ತಾರಕನಾಥ್ ಅವರು ಆಕೆಯ ಉಗುರುಗಳ ಮೇಲೆ “ಮೀಸ್” ಎಂದು ಕರೆಯಲ್ಪಡುವ ಬಿಳಿ ಗೆರೆಗಳನ್ನು ನೋಡಿದರು. ಇದು ಆರ್ಸೆನಿಕ್ ವಿಷವನ್ನು ಸೂಚಿಸುತ್ತದೆ. ಪರೀಕ್ಷೆಗಳನ್ನು ನಡೆಸಿದಾಗ ಆಕೆಯ ದೇಹದಲ್ಲಿ ಆ ವಿಷ ಇರುವುದು ಪತ್ತೆಯಾಯಿತು. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದಾಗ ಅವರು ತನಿಖೆ ನಡೆಸಲಾರಂಭಿಸಿದರು.

ಇದನ್ನೂ ಓದಿ: ‘ಫಾರಿನ್ ಸ್ಟೈಲ್’ ಪ್ರಪೋಸ್ ಮಾಡ್ತೀನಿ ಅಂತ ಕೈ-ಕಾಲು ಕಟ್ಟಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಿಯತಮೆ! ಕಣ್ಣೆದುರೇ ಸುಟ್ಟು ಕರಕಲಾದ ಯುವಕ

ಶಶಿರೇಖಾ ಅವರ ಅತ್ತೆ ಎಂ. ಉಮಾ ಮಹೇಶ್ವರಿ ಕೆಲವು ವಾರಗಳ ಹಿಂದೆ ನಿಧನರಾಗಿದ್ದರು. ಇದನ್ನು ಆರಂಭದಲ್ಲಿ ಸಹಜ ಸಾವು ಎಂದು ನಂಬಲಾಗಿತ್ತು. ಆದರೆ, ಮನೆಯ ಬೇರೆ ಸದಸ್ಯರಿಗೂ ಶಶಿರೇಖಾ ಅವರಂತೆಯೇ ಅನಾರೋಗ್ಯದ ಲಕ್ಷಣಗಳು ಕಂಡುಬಂದಿತ್ತು. ಇದು ಅವರ ಕುಟುಂಬದಲ್ಲಿ ಅನುಮಾನವನ್ನು ಹುಟ್ಟುಹಾಕಿತು. ಇದು ಶಶಿರೇಖಾ ಅವರ ಪತಿಯ ತಂಗಿ ಮತ್ತು ಉಮಾ ಅವರ ಮಗಳಾದ ಎಂ. ಸಿರಿಷಾ ಅವರನ್ನು ಆತಂಕಗೊಳಿಸಿತು. ಅವರು ಇಂಗ್ಲೆಂಡ್​​ನಲ್ಲಿ ವಾಸಿಸುತ್ತಿದ್ದಾರೆ. ಆಗ ಸಿರೀಶಾಗೆ ತನ್ನ ಮೊದಲ ಗಂಡನ ಮೇಲೆ ಅನುಮಾನ ಉಂಟಾಯಿತು.

ಸಿರೀಶಾ ಮತ್ತು ಅಜಿತ್ 2018ರಲ್ಲಿ ವಿವಾಹವಾಗಿದ್ದರು. 2022ರಲ್ಲಿ ಸಿರೀಶಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ತನಿಖೆಯ ಪ್ರಕಾರ, ಅಂದಿನಿಂದಲೇ ಅಜಿತ್ ಸಿರೀಶಾ ಮತ್ತು ಅವರ ಕುಟುಂಬವನ್ನು ಕೊಲ್ಲಲು ಯೋಜಿಸಿದ್ದ. ಅಜಿತ್ ಔಷಧೀಯ ಜ್ಞಾನವನ್ನು ಹೊಂದಿದ್ದ. ಆತ ತನ್ನ ಸಹೋದರಿಯ ಮೂಲಕ ಆರ್ಸೆನಿಕ್ ಅನ್ನು ಸಂಗ್ರಹಿಸಿದ್ದ. ಉಪ್ಪು ಮತ್ತು ಮೆಣಸಿನ ಪುಡಿಯಂತಹ ಮಸಾಲೆಗಳಿಗೆ ಮಿಕ್ಸ್ ಮಾಡಿ ಫುಡ್ ಡೆಲಿವರಿ ಬಾಯ್​ ಮೂಲಕ ಅವರ ಮನೆಗೆ ಕಳುಹಿಸಿದ್ದ. ಅದನ್ನು ಹೈದರಾಬಾದ್‌ನಲ್ಲಿರುವ ಸಿರೀಶಾ ಅವರ ಪೋಷಕರ ಮನೆಗೆ ತಲುಪಿಸಲಾಗಿತ್ತು.

ಈ ವಿಷಯ ತಿಳಿಯದೆ ಸಿರೀಶಾಳ ಫ್ಯಾಮಿಲಿ ವಾರಗಟ್ಟಲೆ ಈ ಮಸಾಲೆಗಳನ್ನು ಅಡುಗೆಯಲ್ಲಿ ಸೇವಿಸಿತ್ತು. ಇದರಿಂದ ಉಮಾ ಅವರು ಸಾವನ್ನಪ್ಪಿದರು. ಅಜಿತ್ ಈ ರೀತಿ ಹಲವಾರು ಬಾರಿ ಕೊಲೆ ಪ್ರಯತ್ನಗಳನ್ನು ಮಾಡಿದ್ದ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನು ನಟ ಹೌದು, ಆದ್ರೆ ರಾಜಕೀಯದಲ್ಲಿ ನಾಟಕ ಮಾಡಲ್ಲ: ಟೀಕಾಕಾರರಿಗೆ ವಿಜಯ್ ಖಡಕ್ ತಿರುಗೇಟು – Kannada News | Actor Thalapathy Vijay TVK speech in Chennai on Tamil Nadu Elections Karur Stampede

ತಮಿಳುನಾಡು ವಿಧಾನಸಭೆ ಚುನಾವಣೆಗೆ (Tamil Nadu Elections) ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ಚೆನ್ನೈನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ತಮ್ಮನ್ನು ಟೀಕಿಸುವವರ ವಿರುದ್ಧ ಕೆಂಡಕಾರಿದ್ದಾರೆ. ತಮ್ಮನ್ನು ಕೇವಲ ನಟ ಎಂದು ಹೀಯಾಳಿಸುತ್ತಿರುವವರಿಗೆ ವಿಜಯ್ (Thalapathy Vijay) ತಿರುಗೇಟು ನೀಡಿದ್ದಾರೆ. ಚೆನ್ನೈನಲ್ಲಿ ಮಂಗಳವಾರ (ಏಪ್ರಿಲ್ 21) ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ವಿಜಯ್, ಆಡಳಿತ ಪಕ್ಷ ಮತ್ತು ತಮ್ಮನ್ನು ಟೀಕಿಸುವ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ತಮ್ಮನ್ನು ಸದಾ ನಟ ಎಂದು ಕರೆಯುವ ಸಚಿವರೊಬ್ಬರ ಹೇಳಿಕೆಗೆ ವ್ಯಂಗ್ಯವಾಗಿ ಉತ್ತರಿಸಿದ ವಿಜಯ್, ‘ಇಲ್ಲಿ ಒಬ್ಬ ಸಚಿವರಿದ್ದಾರೆ, ಅವರು ಯಾವಾಗಲೂ ವಿಜಯ್ ಒಬ್ಬ ನಟ, ವಿಜಯ್ ಒಬ್ಬ ನಟ ಎಂದು ಹೇಳುತ್ತಲೇ ಇರುತ್ತಾರೆ. ಹೌದು, ನಾನು ನಟ. ಅವರೇನೋ ಹೊಸ ವಿಷಯ ಕಂಡುಹಿಡಿದವರಂತೆ ಆಡುತ್ತಿದ್ದಾರೆ. ಆದರೆ ನೆನಪಿಡಿ, ನಾನು ರಾಜಕೀಯಕ್ಕೆ ಬಂದ ಮೇಲೆ ಎಲ್ಲೂ ನಟಿಸಿಲ್ಲ. ನೀವು ಮಾಡುತ್ತಿರುವುದು ನಾಟಕದ ಮೇಲೆ ನಾಟಕ. ಹಾಗಿದ್ದಲ್ಲಿ ನಿಮ್ಮನ್ನು ನಾವು ನಟ-ನಟಿಯರು ಎಂದು ಕರೆಯಬೇಕೇ’ ಎಂದು ಪ್ರಶ್ನಿಸಿದರು.

ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ವಿರುದ್ಧ ವಿಜಯ್ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷ ಟಿವಿಕೆ ರ್‍ಯಾಲಿ ವೇಳೆ ನಡೆದ ಕರೂರ್ ಕಾಲು ತುಳಿತ ಪ್ರಕರಣದಲ್ಲಿ 40ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆಗೆ ವಿಜಯ್ ಅವರೇ ಕಾರಣ ಎಂದು ಆರೋಪಿಸುತ್ತಿರುವ ಸರ್ಕಾರಕ್ಕೆ ಅವರು ತಿರುಗೇಟು ನೀಡಿದರು.

‘ನನ್ನನ್ನು ಯಾಕೆ ದೂರುತ್ತಿದ್ದೀರಿ? ಈ ಬಗ್ಗೆ ನಾವು ಮಾತನಾಡುವುದೇ ಇಲ್ಲ ಎಂದು ಈ ಹಿಂದೆ ವಿಡಿಯೋ ಮಾಡಿದ್ದ ನೀವು, ಈಗ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದೀರಿ. ಪೊಲೀಸರ ಅನುಮತಿ ಪಡೆದೇ ನಾನು ಅಲ್ಲಿಗೆ ಹೋಗಿದ್ದೆ. ಎಲ್ಲವೂ ಲೈವ್ ಇತ್ತು, ನಿಮಗೆ ಕಿಂಚಿತ್ತಾದರೂ ವಿವೇಚನೆ ಇಲ್ಲವೇ’ ಎಂದು ವಿಜಯ್ ಆಕ್ರೋಶ ಹೊರಹಾಕಿದರು. ಈ ದುರಂತವು ಆಡಳಿತಾರೂಢ ಡಿಎಂಕೆ ಸರ್ಕಾರದ ವೈಫಲ್ಯ ಎಂದು ಅವರು ಪರೋಕ್ಷವಾಗಿ ಆರೋಪಿಸಿದರು.

ಇದನ್ನೂ ಓದಿ: ಪತ್ನಿ ಫೋಟೋ ನೋಡಿ ಮೌನ ತಾಳಿದ ದಳಪತಿ ವಿಜಯ್; ವಿಡಿಯೋ ವೈರಲ್

2024ರಲ್ಲಿ ರಾಜಕೀಯ ಪಕ್ಷ ಘೋಷಿಸಿದ ನಂತರ ವಿಜಯ್ ಪೂರ್ಣ ಪ್ರಮಾಣದ ರಾಜಕಾರಣಿಯಾಗಿದ್ದಾರೆ. ತಮಿಳುನಾಡು ಚುನಾವಣೆ ಏಪ್ರಿಲ್ 23ರಂದು ನಡೆಯಲಿದ್ದು, ಯಾವುದೇ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಸ್ಪರ್ಧಿಸಲು ವಿಜಯ್ ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ಜನಪರ ಆಡಳಿತದ ಸುಧಾರಣೆ ತರುವುದು ತಮ್ಮ ಗುರಿ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version