ರಾಮಲಿಂಗಾ ರೆಡ್ಡಿ ರಾಜೀನಾಮೆ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಹೆಚ್​ಕೆ ಪಾಟೀಲ್ ಶಾಕಿಂಗ್ ಮಾತು – Kannada News

ಬೆಂಗಳೂರು, ಜೂನ್ 5: ಖಾತೆ ಹಂಚಿಕೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ (Congress) ಪಕ್ಷದಲ್ಲಿ ಸ್ಫೋಟಗೊಂಡಿರುವ ಅಸಮಾಧಾನದ ಜ್ವಾಲೆ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ದಿಢೀರ್ ರಾಜೀನಾಮೆ ನಿರ್ಧಾರವು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಈ ಕುರಿತು ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ಹೆಚ್​​ಕೆ ಪಾಟೀಲ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಲಿಂಗಾ ರೆಡ್ಡಿ ರಾಜೀನಾಮೆ ನಡೆ ಸರ್ಕಾರ ಹಾಗೂ ಪಕ್ಷದ ನಾಯಕತ್ವಕ್ಕೆ ಒಂದು ದೊಡ್ಡ ಎಚ್ಚರಿಕೆ ಗಂಟೆ (Wake-up call) ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಾಂಶಗಳು

  • ರಾಮಲಿಂಗಾ ರೆಡ್ಡಿ ರಾಜೀನಾಮೆ ಕೇವಲ ವೈಯಕ್ತಿಕ ನಿರ್ಧಾರವಲ್ಲ: ಹೆಚ್​ಕೆ ಪಾಟೀಲ್.
  • ಇದು ಹೈಕಮಾಂಡ್‌ಗೆ ಒಂದು ಗಂಭೀರ ಎಚ್ಚರಿಕೆ ಗಂಟೆ ಎಂದ ಹಿರಿಯ ನಾಯಕ.
  • ನಿರ್ಧಾರ ಪುನರ್ಪರಿಶೀಲಿಸುವಂತೆ ರಾಮಲಿಂಗಾ ರೆಡ್ಡಿಗೆ ಮನವಿ.

ಸ್ನೇಹಿತನಿಗೆ ಕರೆ ಮಾಡಿ ಮನವೊಲಿಸಲು ಯತ್ನ

ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಚ್​ಕೆ ಪಾಟೀಲ್, ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯವನ್ನು ನಾನು ಮಾಧ್ಯಮಗಳಲ್ಲಿ ನೋಡಿದೆ. ತಕ್ಷಣವೇ ನನ್ನ ಆಪ್ತ ಸ್ನೇಹಿತರಾದ ಅವರಿಗೆ ಫೋನ್ ಮಾಡಿ ಮಾತನಾಡಿದ್ದೇನೆ. ಅವರು ತಮ್ಮ ಆಂತರಿಕ ಅಭಿಪ್ರಾಯ ಹಾಗೂ ಬೇಸರವನ್ನು ನನ್ನ ಬಳಿ ಹಂಚಿಕೊಂಡಿದ್ದಾರೆ. ಅವರು ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ನಾನು ವಿನಂತಿಸುತ್ತೇನೆ ಎಂದರು.

ಹೆಚ್​ಕೆ ಪಾಟೀಲ್ ಮಾತಿನ ವಿಡಿಯೋ


ತಕ್ಷಣ ಮಧ್ಯಪ್ರವೇಶಿಸುವಂತೆ ಹೈಕಮಾಂಡ್‌ಗೆ ಒತ್ತಾಯ

ಪಕ್ಷದಲ್ಲಿ ಉದ್ಭವಿಸಿರುವ ಈ ಬಿಕ್ಕಟ್ಟಿನ ಕುರಿತು ಉನ್ನತ ನಾಯಕತ್ವ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ‘ಸಂಬಂಧಪಟ್ಟ ನಾಯಕರು ಇಂತಹ ಸಂದರ್ಭದಲ್ಲಿ ತಕ್ಷಣವೇ ಗಂಭೀರವಾಗಿ ಗಮನಹರಿಸಬೇಕು. ಇದೊಂದು ರೀತಿಯ ದೊಡ್ಡ ಎಚ್ಚರಿಕೆ ಗಂಟೆ. ದಯಮಾಡಿ ಹಿರಿಯ ನಾಯಕರು ಈ ವಿಚಾರವನ್ನು ಲಘುವಾಗಿ ಪರಿಗಣಿಸದೆ, ತಕ್ಷಣವೇ ಸರಿಪಡಿಸುವ ಕೆಲಸಕ್ಕೆ ಮುಂದಾಗಬೇಕು’ ಎಂದು ಹೈಕಮಾಂಡ್‌ಗೆ ವಿನಂತಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಿರೋಧ, 1 ಪೀಠಕ್ಕೆ ಮೂರು ಜಿಲ್ಲೆ ನಡುವೆ ಹಗ್ಗ ಜಗ್ಗಾಟ – Kannada News

ಕಾರವಾರ, (ಜೂನ್ 04): ಸದ್ಯ ಕರ್ನಾಟಕದಲ್ಲಿ (Karnataka) ಕಲಬುರಗಿ ಹಾಗೂ ಧಾರವಾಡ ಹೈಕೋರ್ಟ್​​​ ಪೀಠ (High Court Bench) ಇದ್ದು, ಇದೀಗ ಕರಾವಳಿ (Karavali) ಹಾಗೂ ಮಲೆನಾಡು (malenadu) ಭಾಗದ ಜನರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಮಂಗಳೂರಿನಲ್ಲಿ ಮತ್ತೊಂದು ಹೈಕೋರ್ಟ್ ಪೀಠ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ. ಆದ್ರೆ, ಮಂಗಳೂರಿನಲ್ಲಿ ಸ್ಥಾಪನೆ ಮಾಡುವುದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗಿವೆ. ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಜನರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಆಗಬೇಕೆಂದು ಆಗ್ರಹಿಸಿದ್ದಾರೆ. ಹೀಗಾಗಿ ಒಂದು ಪೀಠಕ್ಕೆ ಮೂರು ಜಿಲ್ಲೆಗಳ ನಡುವೆ ಹಗ್ಗ ಜಗ್ಗಾಟ ನಡೆದಿದೆ.

ಧಾರವಾಡವೇ ಹತ್ತಿರ, ಮಂಗಳೂರು ಭೌಗೋಳಿಕವಾಗಿ ದೂರ

ರಾಜ್ಯದಲ್ಲೇ ಭೌಗೋಳಿಕವಾಗಿ ದೊಡ್ಡದಾಗಿರುವ ಉತ್ತರ ಕನ್ನಡ ಜಿಲ್ಲೆ. ಜಿಲ್ಲೆಯಲ್ಲಿ ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಹೋಗುವುದೇ ಭಾರಿ ಕಷ್ಟ. ಹೀಗಿರುವಾಗ ಆರೋಗ್ಯ , ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಇಲ್ಲಿನ ಜನ ಬೇರೆ ಜಿಲ್ಲೆಯನ್ನೆ ಅವಲಂಬಿಸಿದ್ದಾರೆ. ಪ್ರಮುಖವಾಗಿ ಐದು ಜಿಲ್ಲೆಗಳಿಗೆ ಹೊಂದಿಕೊಂಡಿರುವುದರಿಂದ ಆಯಾ ತಾಲೂಕಿನವರು ಸಮಿಪದ ಜಿಲ್ಲೆಗಳನ್ನೆ ಹೆಚ್ಚಾಗಿ ಅವಲಂಬಿಸಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪೀಠ ಆಗಬೇಕೆಂದು ಕಾರವಾರ ವಕೀಲರ ಸಂಘ ಆಗ್ರಹಿಸಿದೆ.

ಇದನ್ನೂ ಓದಿ: ಇಂದಿನಿಂದ ಜೂನ್ 11 ರವರೆಗೆ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ: ಮೀನುಗಾರರಿಗೆ, ಪ್ರವಾಸಿಗರಿಗೆ ಬಿಗ್​​​ ಅಲರ್ಟ್

ಉತ್ತರ ಕನ್ನಡ ಜಿಲ್ಲೆಯಲ್ಲಿ 11 ಬಾರ್ ಅಸೋಷಿಯೇಷನ್ ಇದ್ದು ,ಉಡುಪಿ 4 , ಮಂಗಳೂರಿನಲ್ಲಿ 6 ಬಾರ್ ಅಸೋಷಿಯನ್ ಇದೆ. ಇನ್ನೂ ಹೈಕೋರ್ಟ್ ನಲ್ಲಿರುವ ಕೇಸ್ ಗಳ ಪ್ರಮಾಣದಲ್ಲೂ ಉತ್ತರ ಕನ್ನಡ ಜಿಲ್ಲೆಯ ಪ್ರಕರಣಗಳು ಹೆಚ್ಚಿಗೆ ಇವೆ. ಹೀಗಾಗಿ ಮಂಗಳೂರಿನಲ್ಲಿ ಸ್ಥಾಫನೆ ಮಾಡುವುದರ ಬದಲು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸ್ಥಾಫನೆ ಮಾಡಿದ್ರೆ ಶಿವಮೊಗ್ಗ ಸೇರಿದಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೂ ಅನಕೂಲ ಆಗುತ್ತದೆ. ಒಂದು ವೇಳೆ ಮಾಡುವುದಕ್ಕೆ ಆಗದೆ ಇದ್ರೆ ಈ ಹಿಂದಿನಂತೆ ಉತ್ತರ ಕನ್ನಡ ಜಿಲ್ಲೆ ಧಾರವಾಡ ಪಿಠದಲ್ಲಿಯೇ ಮುಂದುವರೆಯಲಿ ಎಂದಿದ್ದಾರೆ.

ಮಂಗಳೂರಿನಲ್ಲೇ ಪೀಠ ಸ್ಥಾಪನೆ ಮಾಡಲು ಹೊರಟಿದ್ಯಾಕೆ?

ಕರಾವಳಿಯ ಮಂಗಳೂರು ಮತ್ತು ಉಡುಪಿ ಜಿಲ್ಲೆ ಬೆಂಗಳೂರಿನ ಹೈಕೋರ್ಟ್​​ ಪಿಠದಡಿಯಲ್ಲಿ ಇದ್ದರೇ, ಉತ್ತರ ಕನ್ನಡ ಜಿಲ್ಲೆ ಮಾತ್ರ ಧಾರವಾಡ ಹೈಕೋರ್ಟ್​ ಪೀಠದಡಿ ಬರುತ್ತದೆ. ಹೀಗಾಗಿ ಕರಾವಳಿ ಜಿಲ್ಲೆಗೆ ಪ್ರತ್ಯೇಕ ಹೈಕೋರ್ಟ ಪೀಠ ಬೇಕೆಂದು ಮಂಗಳೂರಿನಲ್ಲಿ ಹೋರಾಟ ಪ್ರಾರಂಭವಾಯಿತು. ಇದರ ಪ್ರತಿಫಲವಾಗಿ ಇದೀಗ ರಾಜ್ಯ ಸರ್ಕಾರ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒಲವು ತೋರಿದ್ದು, ಮಂಗಳೂರಿನಲ್ಲಿ ಹೈ ಕೋರ್ಟ್ ಪಿಠಕ್ಕೆ ಸಕಲ ವ್ಯವಸ್ಥೆ ಕಲ್ಪಿಸುವುದಾಗಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ಮಂಗಳೂರಿಗೆ ತೆರಳಿ ಸ್ಥಳ ಪರಿಶೀಲನೆ ಹಾಗೂ ಮೂಲಭೂತ ಸೌಕರ್ಯದ ಕುರಿತು ಪರಿಶೀಲನೆ ನಡೆಸಲಾಗಿದೆ. ಆದ್ರೆ ಇದೀಗ ವಿರೋಧ ವ್ಯಕ್ತವಾಗಿದೆ. ಹೈಕೋರ್ಟ್ ಪೀಠ ಸ್ಥಾಪನೆ ಮಾಡುವುದಾದರೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮಾಡಲಿ,ಇದರಿಂದ ಉಡುಪಿ,ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ಲಾಭವಾಗಲಿದೆ ಎಂಬುವುದು ಉತ್ತರ ಕನ್ನಡ ಜಿಲ್ಲೆಯ ವಕೀಲರ ವಾದ.

ಶಿವಮೊಗ್ಗದಲ್ಲೆ ಪೀಠ ಸ್ಥಾಪನೆಗೆ ಆಗ್ರಹ

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಉತ್ತರ ಕನಡ ಜಿಲ್ಲೆ ಮಾತ್ರವಲ್ಲ ಶಿವಮೊಗ್ಗದವರು ಸಹ ವಿರೋಧ ವ್ಯಕ್ತಪಡಿಸಿದ್ದು, ಶಿವಮೊಗ್ಗದಲ್ಲೇ ಹೈಕೋರ್ಟ್​ ಪೀಠ ಸ್ಥಾಪನೆ ಮಾಡಬೇಕೆಂದು ಜಿಲ್ಲಾ ವಕೀಲರ ಸಂಘ ಆಗ್ರಹಿಸಿದೆ. ಹೀಗಾಗಿ ಒಂದು ಹೈಕೋರ್ಟ್ ಪೀಠಕ್ಕೆ ಮೂರು ಜಿಲ್ಲೆಗಳ ನಡುವೆ ಹಗ್ಗ ಜಗ್ಗಾಟ ನಡೆದಿದೆ.

ಒಟ್ಟಿನಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್​ ಪೀಠ ಸ್ಥಾಪನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗುತಿದ್ದು ,ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರಿನೊಂದಿಗೆ ಸೇರಿಸಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ಜಿಲ್ಲಾ ವಕೀಲರ ಸಂಘ ನೀಡಿದೆ. ಇನ್ನೊಂದೆಡೆ ಶಿವಮೊಗ್ಗದಲ್ಲಿ ಪೀಠ ಆಗಬೇಕೆಂದು ಆಗ್ರಹಗಳು ವ್ಯಕ್ತವಾಗುತ್ತಿದ್ದು, ಸರ್ಕಾರ ಯಾವ ತಿರ್ಮಾನ ಕೈಗೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:13 pm, Fri, 5 June 26

Source link

ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8 ಏರಿಕೆ; ಇಡೀ ವರ್ಷದಲ್ಲಾದ ಆರ್ಥಿಕ ಬೆಳವಣಿಗೆ ಶೇ. 7.7 – Kannada News

ನವದೆಹಲಿ, ಜೂನ್ 5: ಕಳೆದ ಬಾರಿಯ ಹಣಕಾಸು ವರ್ಷದಲ್ಲಿ (2025-26) ಭಾರತದ ಆರ್ಥಿಕತೆ ಶೇ. 7.7ರಷ್ಟು ಹೆಚ್ಚಳ ಕಂಡಿದೆ. ಇದು ಸರ್ಕಾರ ಶುಕ್ರವಾರ (ಜೂನ್ 5) ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಿಂದ ತಿಳಿದುಬಂದಿದೆ. 2024-25ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (India GDP) ಶೇ. 7.1ರಷ್ಟು ಹಿಗ್ಗಿತ್ತು. 2025-26ರಲ್ಲಿ ಅದನ್ನೂ ಮೀರಿಸಿದ ಬೆಳವಣಿಗೆ ಸಾಧಿಸಿದೆ.

2025-26ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8ರ ವಾರ್ಷಿಕ ದರದಲ್ಲಿ ಬೆಳವಣಿಗೆ ಹೊಂದಿದೆ ಎಂದು ದತ್ತಾಂಶದಲ್ಲಿ ತಿಳಿಸಲಾಗಿದೆ. ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಕ್ರಮವಾಗಿ ಶೇ. 7.8, ಶೇ. 8.2 ಮತ್ತು ಶೇ. 7.8ರಷ್ಟು ಬೆಳವಣಿಗೆ ದಾಖಲಾಗಿತ್ತು.

ಇದನ್ನೂ ಓದಿ: ಬಂಡವಾಳ ಆಕರ್ಷಿಸಲು ಬ್ಯಾಂಕುಗಳಿಗೆ ಹೆಡ್ಡಿಂಗ್ ಸಪೋರ್ಟ್​ನಿಂದ ಹಿಡಿದು ಎನ್​ಆರ್​ಐ ಹೂಡಿಕೆ ಮಿತಿ ಹೆಚ್ಚಳದವರೆಗೆ ಆರ್​ಬಿಐನಿಂದ 5 ಕ್ರಮಗಳು

ಹಣದುಬ್ಬರದ ಅಂಶವನ್ನೂ ಪರಿಗಣಿಸಿ ಲೆಕ್ಕ ಮಾಡಲಾದ ನೈಜ ಜಿಡಿಪಿ ಅಥವಾ ರಿಯಲ್ ಜಿಡಿಪಿ ಮೊತ್ತ 2025-26ರಲ್ಲಿ 323.12 ಲಕ್ಷ ಕೋಟಿ ರೂ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ (2024-25) ರಿಯಲ್ ಜಿಡಿಪಿ ಮೊತ್ತ 299.89 ಲಕ್ಷ ಕೋಟಿ ರೂ ಇತ್ತೆನ್ನಲಾಗಿದೆ.

ಇನ್ನು, ಹಣದುಬ್ಬರದ ಪರಿಣಾಮವನ್ನು ಒಳಗೊಂಡ ಲೆಕ್ಕಾಚಾರದ ನಾಮಿನಲ್ ಜಿಡಿಪಿ ಮೊತ್ತ 2025-26ರಲ್ಲಿ 346.36 ಲಕ್ಷ ಕೋಟಿ ರೂ ಇದೆ. ಇದು ಹಿಂದಿನ ವರ್ಷದಕ್ಕೆ ಹೋಲಿಸಿದರೆ ಶೇ. 8.9ರಷ್ಟು ಹೆಚ್ಚಳ ಕಂಡಿದೆ.

ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಯಾವ್ಯಾವ ಸೆಕ್ಟರ್​ಗಳ ಸಾಧನೆ ಹೇಗಿದೆ?

ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ 7.8ರಷ್ಟು ಹೆಚ್ಚಿದೆ. ಇದರಲ್ಲಿ ಸರ್ವಿಸ್ ಸೆಕ್ಟರ್​ನ ಕೊಡುಗೆ ಗಣನೀಯವಾಗಿದೆ. ಇದು ಶೇ. 9.9ರ ವಾರ್ಷಿಕ ದರದಲ್ಲಿ ಹಿಗ್ಗಿದೆ. ಮ್ಯಾನುಫ್ಯಾಕ್ಚರಿಂಗ್, ಕನ್ಸ್​ಟ್ರಕ್ಷನ್, ಯುಟಿಲಿಟಿ ಇತ್ಯಾದಿ ಇರುವ ಸೆಕೆಂಡರಿ ಸೆಕ್ಟರ್ ಉತ್ತಮವಾದ ಶೇ. 7.4ರಷ್ಟು ಹಿಗ್ಗಿದೆ.

ಇದನ್ನೂ ಓದಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆಬಿ ನೊಂದಣಿ ಇಲ್ಲದೇ ಎನ್​ಆರ್​ಐಗಳಿಗೆ ಹೂಡಿಕೆ ಮಿತಿ ಹೆಚ್ಚಳ

ವೈಯಕ್ತಿಕ ಸೆಕ್ಟರ್​ಗಳ ಪೈಕಿ ಟ್ರೇಡ್, ಹೋಟೆಲ್, ಟ್ರಾನ್ಸ್​ಪೋರ್ಟ್, ಕಮ್ಯೂನಿಕೇಶನ್, ಬ್ರಾಡ್ಕ್ಯಾಸ್ಟಿಂಗ್ ಸಂಬಂಧಿತ ಸೇವೆಗಳು ಕೊನೆಯ ಕ್ವಾರ್ಟರ್​ನಲ್ಲಿ ಅದ್ವಿತೀಯವೆನಿಸುವ ಶೇ. 12.5ರಷ್ಟು ಬೆಳವಣಿಗೆ ಕಂಡಿವೆ. ರಿಯಲ್ ಎಸ್ಟೇಟ್, ಐಟಿ ಸರ್ವಿಸ್, ವೃತ್ತಿಪರ ಸೇವೆ, ಹಣಕಾಸು ಸೇವೆಗಳು ಶೇ. 10.4ರಷ್ಟು ಹೆಚ್ಚಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪೂಜೆಯ ಬಳಿಕ ಆರತಿ ತಟ್ಟೆಗೆ ಕಡ್ಡಾಯವಾಗಿ ಹಣ ಹಾಕಬೇಕು ಯಾಕೆ? ಇದರ ಹಿಂದೆ ಇದೆ ಸೈನ್ಸ್ – Kannada News

ಸನಾತನ ಹಿಂದೂ ಧರ್ಮದಲ್ಲಿ ದೇವಸ್ಥಾನಗಳಿಗಾಗಲಿ ಅಥವಾ ಮನೆಯಲ್ಲಾಗಲಿ ಪೂಜೆ ಮುಗಿದ ನಂತರ ದೇವರಿಗೆ ಮಹಾಮಂಗಳಾರತಿ ಮಾಡುವುದು ಕಡ್ಡಾಯ. ಆದರೆ, ಆರತಿ ತಟ್ಟೆಯನ್ನು ಭಕ್ತರ ಮುಂದೆ ತಂದಾಗ ಅದಕ್ಕೆ ಕಡ್ಡಾಯವಾಗಿ ಹಣ ಅಥವಾ ನಾಣ್ಯಗಳನ್ನು ಹಾಕುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ. ಇದು ಕೇವಲ ಮೂಢನಂಬಿಕೆಯಲ್ಲ ಅಥವಾ ಬಲವಂತದ ಆಚರಣೆಯಲ್ಲ. ಇದರ ಹಿಂದೆ ಆಳವಾದ ಧಾರ್ಮಿಕ, ಐತಿಹಾಸಿಕ ಮತ್ತು ವೈಜ್ಞಾನಿಕ ಕಾರಣಗಳಿವೆ ಎಂದು ಶಾಸ್ತ್ರ ಹೇಳಿದೆ.

ಅಹಂಕಾರದ ತ್ಯಾಗ ಮತ್ತು ಋಣ ಮುಕ್ತಿ

ಶಾಸ್ತ್ರಗಳ ಪ್ರಕಾರ, ಭಗವಂತನು ನಮಗೆ ನೀಡಿರುವ ಐಶ್ವರ್ಯ, ಆರೋಗ್ಯ ಮತ್ತು ಪ್ರಕೃತಿಯ ಕೊಡುಗೆಗಳಿಗೆ ಪ್ರತಿಯಾಗಿ ನಾವು ಕೃತಜ್ಞತೆ ಸಲ್ಲಿಸಬೇಕು. ಆರತಿ ತಟ್ಟೆಗೆ ನಾಣ್ಯವನ್ನು ಹಾಕುವುದು ಎಂದರೆ ನಮ್ಮಲ್ಲಿರುವ ‘ಮಮಕಾರ’ ಮತ್ತು ‘ಅಹಂಕಾರ’ವನ್ನು ದೇವರ ಪಾದಕ್ಕೆ ಅರ್ಪಿಸುವುದು ಎಂದರ್ಥ. ದೇವಸ್ಥಾನಕ್ಕೆ ಹೋದಾಗ ಬರಿಗೈಯಲ್ಲಿ ಹೋಗಬಾರದು ಮತ್ತು ಬರಿಗೈಯಲ್ಲಿ ವಾಪಸ್ ಬರಬಾರದು ಎಂಬ ನಿಯಮವಿದೆ. ಭಕ್ತಿಪೂರ್ವಕವಾಗಿ ನೀಡುವ ಈ ಕಾಣಿಕೆ ಮನುಷ್ಯನಲ್ಲಿ ಕಂಜೂಸ್ ಗುಣವನ್ನು ದೂರ ಮಾಡಿ, ತ್ಯಾಗ ಮನೋಭಾವನೆಯನ್ನು ಬೆಳೆಸುತ್ತದೆ.

ಸಮಾಜ ಕಲ್ಯಾಣ

ಪ್ರಾಚೀನ ಇತಿಹಾಸವನ್ನು ಗಮನಿಸಿದರೆ, ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಾಗಿರಲಿಲ್ಲ. ಅವು ಇಡೀ ಸಮಾಜದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ರಾಜರು ಮತ್ತು ಶ್ರೀಮಂತರು ದೇವಸ್ಥಾನಗಳಿಗೆ ಭಾರಿ ದಾನ ನೀಡುತ್ತಿದ್ದರು. ಆದರೆ ಸಾಮಾನ್ಯ ಜನರಿಗೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಸಿಗಲೆಂದು ಆರತಿ ತಟ್ಟೆಗೆ ಸಣ್ಣ ಕಾಣಿಕೆ ಹಾಕುವ ಪದ್ಧತಿ ಜಾರಿಗೆ ಬಂತು. ಈ ರೀತಿ ಸಂಗ್ರಹವಾದ ಹಣವನ್ನು ದೇವಸ್ಥಾನದ ದೀಪದ ಎಣ್ಣೆ, ಪೂಜಾ ಸಾಮಗ್ರಿಗಳು, ಅರ್ಚಕರ ಜೀವನೋಪಾಯ ಹಾಗೂ ಅಲ್ಲಿಗೆ ಬರುವ ಬಡ ಭಕ್ತರ ಅನ್ನದಾನಕ್ಕೆ ಬಳಸಲಾಗುತ್ತಿತ್ತು.

ತಾಮ್ರದ ತಟ್ಟೆ ಮತ್ತು ನಾಣ್ಯಗಳ ಹಿಂದಿರುವ ಸೈನ್ಸ್ ಏನು?

ಹಳೆಯ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳು ಸಂಪೂರ್ಣವಾಗಿ ಚಿನ್ನ, ಬೆಳ್ಳಿ ಅಥವಾ ತಾಮ್ರದ ಲೋಹದಿಂದ ಮಾಡಲ್ಪಟ್ಟಿದ್ದವು. ಆರತಿಯನ್ನು ಸಾಮಾನ್ಯವಾಗಿ ತಾಮ್ರ ಅಥವಾ ಹಿತ್ತಾಳೆ ತಟ್ಟೆಯಲ್ಲೇ ಬೆಳಗಲಾಗುತ್ತದೆ. ಲೋಹದ ನಾಣ್ಯಗಳು ತಟ್ಟೆಗೆ ಸ್ಪರ್ಶಿಸಿದಾಗ ಮತ್ತು ಕರ್ಪೂರದ ಶಾಖ ತಗುಲಿದಾಗ, ಅಲ್ಲಿ ಒಂದು ಧನಾತ್ಮಕ ಶಕ್ತಿ ಹಾಗೂ ಕಂಪನ ಉತ್ಪತ್ತಿಯಾಗುತ್ತದೆ. ಭಕ್ತರು ಆರತಿ ತೆಗೆದುಕೊಳ್ಳುವಾಗ ಕೈಗಳನ್ನು ತಟ್ಟೆಯ ಹತ್ತಿರ ತಂದಾಗ ಆ ದಿವ್ಯ ಲೋಹದ ಶಕ್ತಿ ಅವರ ದೇಹವನ್ನು ಪ್ರವೇಶಿಸುತ್ತದೆ ಎಂಬ ವೈಜ್ಞಾನಿಕ ನಂಬಿಕೆಯೂ ಇದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

“ದಾನಂ ಪ್ರಧಾನಂ” – ಶ್ರದ್ಧೆಯೇ ಮುಖ್ಯ, ಮೌಲ್ಯವಲ್ಲ

ಶಾಸ್ತ್ರಗಳ ಪ್ರಕಾರ, ಆರತಿ ತಟ್ಟೆಗೆ ಇಷ್ಟೇ ಹಣ ಹಾಕಬೇಕು ಎಂಬ ಯಾವುದೇ ಕಟ್ಟುಪಾಡುಗಳಿಲ್ಲ. ನಿಮ್ಮ ಶಕ್ತಿ ಮತ್ತು ಭಕ್ತಿಗೆ ಅನುಗುಣವಾಗಿ ಶ್ರದ್ಧೆಯಿಂದ ಒಂದು ರೂಪಾಯಿ ಹಾಕಿದರೂ ಅದು ಕೋಟಿ ಪುಣ್ಯವನ್ನು ತರುತ್ತದೆ. ಇಲ್ಲಿ ಭಕ್ತಿ ಪ್ರಧಾನವೇ ಹೊರತು ಹಣದ ಮೌಲ್ಯವಲ್ಲ ಎಂದು ಧರ್ಮಶಾಸ್ತ್ರಗಳು ಸಾರುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಸ್ಸಾಂನಲ್ಲಿ ಕ್ಯಾಬಿನೆಟ್ ವಿಸ್ತರಣೆ; ಹಿಮಂತ ಬಿಸ್ವ ಶರ್ಮಾ ಸಂಪುಟಕ್ಕೆ 12 ನೂತನ ಸಚಿವರ ಸೇರ್ಪಡೆ – Kannada News

ಗುವಾಹಟಿ, ಜೂನ್ 5: ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ನೇತೃತ್ವದ ಎನ್‌ಡಿಎ (NDA) ಸರ್ಕಾರದ ಸಂಪುಟ ವಿಸ್ತರಣೆಯಾಗಿದ್ದು, ಒಟ್ಟು 12 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಯ ಅಶ್ವಿನಿ ರಾಯ್ ಸರ್ಕಾರ್, ನಿಲಿಮಾ ದೇವಿ ಮತ್ತು ಸುಶಾಂತ ಬೊರ್ಗೊಹೈನ್ ಅವರಂತಹ ಹೊಸ ಮುಖಗಳಿಗೆ ಮೊದಲ ಬಾರಿಗೆ ಸಚಿವ ಸ್ಥಾನ ನೀಡಲಾಗಿದೆ. ಅಸ್ಸಾಂ ವಿಧಾನಸಭೆಯ ಮಾಜಿ ಸ್ಪೀಕರ್ ಬಿಸ್ವಜಿತ್ ದೈಮರಿ ಅವರು ಕೂಡ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಜೆಪಿಯ ಪ್ರಬಲ ಮೈತ್ರಿ ಪಕ್ಷವಾದ ಅಸೋಂ ಗಣ ಪರಿಷತ್ (AGP) ನಾಯಕ ಕೇಶಬ್ ಮಹಾಂತ ಅವರು ಮರಳಿ ಸಂಪುಟ ಸೇರಿದ್ದಾರೆ. 126 ಸದಸ್ಯರ ಬಲ ಹೊಂದಿರುವ ಅಸ್ಸಾಂ ವಿಧಾನಸಭೆಯಲ್ಲಿ ನಿಯಮಾವಳಿಗಳ ಪ್ರಕಾರ ಗರಿಷ್ಠ 19 ಸಚಿವರನ್ನು ಹೊಂದಲು ಅವಕಾಶವಿದೆ. ಮೇ 12ರಂದು ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಶರ್ಮಾ ಮತ್ತು ಇತರ ನಾಲ್ವರು ಸಚಿವರಾದ ಅತುಲ್ ಬೋರಾ, ಚರಣ್ ಬೋರೋ, ಅಜಂತಾ ನಿಯೋಗ್ ಮತ್ತು ರಾಮೇಶ್ವರ್ ತೇಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದಿನ 12 ಸಚಿವರ ಸೇರ್ಪಡೆಯೊಂದಿಗೆ ಸಂಪುಟದ ಒಟ್ಟು ಬಲ 17ಕ್ಕೆ ತಲುಪಿದ್ದು, ಇನ್ನೂ 2 ಸ್ಥಾನಗಳು ಬಾಕಿ ಉಳಿದಿವೆ.

ಇದನ್ನೂ ಓದಿ: ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ್​​ ಪ್ರಮಾಣ: ಸತತ ಎರಡು ಅವಧಿಗೆ ಕಾಂಗ್ರೆಸೇತರ ಮೊದಲ ಸಿಎಂ ಎಂಬ ಹೆಗ್ಗಳಿಕೆ

ಇತ್ತೀಚೆಗೆ ನಡೆದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು 102 ಸ್ಥಾನಗಳನ್ನು (ಬಿಜೆಪಿ 82, ಎಜಿಪಿ 10, ಬಿಪಿಎಫ್ 10) ಗೆಲ್ಲುವ ಮೂಲಕ ಸತತ ಮೂರನೇ ಬಾರಿಗೆ ಅಸ್ಸಾಂನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಹುಲ್ ಗಾಂಧಿ ಮಹತ್ವದ ಭರವಸೆ: ಐ ಆ್ಯಮ್​ ಹ್ಯಾಪಿ ಎಂದ ಸಚಿವ ಕೆ.ಹೆಚ್​.ಮುನಿಯಪ್ಪ – Kannada News

ಬೆಂಗಳೂರು, (ಜೂನ್ 05): ಡಿಕೆ ಶಿವಕುಮಾರ್ (DK Shivakumar) ಸರ್ಕಾರದಲ್ಲಿ ಖಾತೆ (Ministers portfolio )ಕ್ಯಾತೆ ಶುರುವಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೈತಪ್ಪಿದ್ದಕ್ಕೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರ ಹಠಾತ್ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಹಿಂದೆ ನಿಭಾಯಿಸಿದ್ದ ಆಹಾರ ಇಲಾಖೆ ಜವಾಬ್ದಾರಿ ನೀಡಿದ್ದಕ್ಕೆ ಮತ್ತೊಬ್ಬ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಖುದ್ದು ರಾಹುಲ್ ಗಾಂಧಿ ಬಳಿಯೇ ತಮ್ಮ ಅಸಮಾಧಾನ ತೋಡಿಕೊಂಡಿದ್ದು, ಈ ವೇಳೆ ರಾಹುಲ್ ಮಹತ್ವದ ಭರವಸೆ ನೀಡಿದ್ದಾರೆ. ಇದರಿಂದ ಸಮಾಧಾನಗೊಂಡಿರುವ ಮುನಿಯಪ್ಪ, ಐ ಆ್ಯಮ್​ ಹ್ಯಾಪಿ ಎಂದಿದ್ದಾರೆ.

ಮುಖ್ಯಾಂಶಗಳು

  • ಆಹಾರ ಖಾತೆ ನೀಡಿದ್ದಕ್ಕೆ ಮುನಿಯಪ್ಪ ಅಸಮಾಧಾನ ವಿಚಾರ
  • ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ
  • ಐ ಆ್ಯಮ್​ ಹ್ಯಾಪಿ ಎಂದ ಸಚಿವ ಕೆ.ಹೆಚ್​.ಮುನಿಯಪ್ಪ
  • ರಾಹುಲ್​, ವೇಣುಗೋಪಾಲ್, ಸುರ್ಜೇವಾಲ ಭೇಟಿಯಾಗಿದ್ದೇವೆ
  • ಕಾಂಗ್ರೆಸ್ ನಾಯಕರು ಗೊಂದಲ ಬಗೆಹರಿಸುವುದಾಗಿ ಹೇಳಿದ್ದಾರೆ
  • ಬೆಂಗಳೂರಿನಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ

ಮಲ್ಲಿಕಾರ್ಜು ಖರ್ಗೆ ಅವರ ನಾಮಪತ್ರ ಸಲ್ಲಿಕೆಗೆಂದು ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ಜೊತೆ ಸಿಎಂ ಡಿಕೆ ಶಿವಕುಮಾರ್ ಸಚಿವರ ಖಾತೆ ಕ್ಯಾತೆ ವಿಚಾರವನ್ನು ಪ್ರಸ್ತಾಪಿಸಿದರು. ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವ ಬಗ್ಗೆ ರಾಹುಲ್ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಇದೇ ವೇಳೆ ಕೆ ಹೆಚ್ ಮುನಿಯಪ್ಪ ಅವರ ಅಸಮಾಧಾನವೂ ಸಹ ಚರ್ಚೆಯಾಗಿದೆ. ಬಳಿಕ ಮುನಿಯಪ್ಪ ಸಹ ಖುದ್ದು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಅಳಲು ತೋಡಿಸಿಕೊಂಡಿದ್ದು, ಈ ವೇಳೆ ಗೊಂದಲ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಸಚಿವ ಮುನಿಯಪ್ಪ ಸಹ ಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಆರದ ಖಾತೆ ಕಿಚ್ಚು: ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಕೆಎಚ್ ಮುನಿಯಪ್ಪ ಬಹಿರಂಗ ಅಸಮಾಧಾನ

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮುನಿತಪ್ಪ, ರಾಹುಲ್ ಗಾಂಧಿ​, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದು, ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಐ ಆ್ಯಮ್​ ಹ್ಯಾಪಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  ಇದರೊಂದಿಗೆ ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ.

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ

ಕಳೆದ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಆಹಾರ ಇಲಾಖೆ ಖಾತೆಯನ್ನು ಮುನಿಯಪ್ಪನವರಿಗೆ ನೀಡಲಾಗಿತ್ತು. ಇದೀಗ ಡಿಕೆ ಶಿವಕುಮಾರ್ ಸಂಪುಟದಲ್ಲೂ ಸಹ ಅದೇ ಖಾತೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ಮುನಿಯಪ್ಪ, ಬೆಳಗ್ಗೆ ಮಾಧ್ಯಮಗಳ ಮುಂದೆಯೇ ಬಹಿರಂಗವಾಗಿ ಬೇಸರ ಹೊರಹಾಕಿದ್ದರು. ಆಹಾರ ಇಲಾಖೆ ಬೇಡ ಸಮಾಜ ಕಲ್ಯಾಣ ಇಲಾಖೆ ಬೇಕೆಂದು ಪಟ್ಟು ಹಿಡಿದಿದ್ದಾರೆ.

ಇನ್ನು ಈ ಬಗ್ಗೆ ಇಂದು (ಜೂನ್ 05) ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುನಿಯಪ್ಪ, . “ನಾನು ರಾಜಕೀಯದಲ್ಲಿ 8 ಬಾರಿ ಗೆದ್ದಿರುವ ಅತ್ಯಂತ ಹಿರಿಯ ನಾಯಕ. ಸಂಪುಟದಲ್ಲಿ ಪ್ರೊಟೊಕಾಲ್ ಪ್ರಕಾರ ಸೀನಿಯಾರಿಟಿ ನೋಡಿ ಖಾತೆ ಹಂಚಬೇಕಿತ್ತು. ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯಂತಹ ಜನಸೇವೆಗೆ ನೇರ ಅವಕಾಶವಿರುವ ದೊಡ್ಡ ಖಾತೆ ನೀಡುವಂತೆ ನಾನು ಮೊದಲೇ ಕೇಳಿದ್ದೆ. ಆದರೆ ಹಂಚಿಕೆಯಲ್ಲಿ ಯಾವುದೇ ಸಮಾತೋಲನ ಕಾಯ್ದುಕೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ, ಇದೀಗ ರಾಹುಲ್ ಗಾಂಧಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೂಟಿಂಗ್​​ನಲ್ಲಿ ಕುದುರೆ ಮೇಯಿಸಿದ ಅಕ್ಷಯ್, ಬಕರಾ ಆದ ಹಾಸ್ಯನಟ ರಾಜ್​ಪಾಲ್ – Kannada News

ಅಕ್ಷಯ್ ಕುಮಾರ್​ (Akshay Kumar) ವರ್ಷಕ್ಕೆ ಅತಿ ಹೆಚ್ಚು ಸಿನಿಮಾ ಮಾಡುವ ಭಾರತದ ಸ್ಟಾರ್ ನಟ. ಇತರೆ ಸ್ಟಾರ್ ನಟರುಗಳು ಒಂದು ಸಿನಿಮಾ ಮಾಡಲು ಎರಡು-ಮೂರು ವರ್ಷ ತೆಗೆದುಕೊಂಡರೆ, ಅಕ್ಷಯ್ ಕುಮಾರ್ ಒಂದೇ ವರ್ಷದಲ್ಲಿ ಮೂರು ನಾಲ್ಕು ಸಿನಿಮಾ ಮುಗಿಸಿ ಇನ್ನೆರಡರ ಶೂಟಿಂಗ್ ಪ್ರಾರಂಭಿಸಿರುತ್ತಾರೆ. ಶೂಟಿಂಗ್ ವಿಷಯದಲ್ಲಿ ಬಲು ಶಿಸ್ತಿನ ವ್ಯಕ್ತಿ ಆಗಿರುವ ಅಕ್ಷಯ್ ಕುಮಾರ್, ಬೆಳಿಗ್ಗೆ 6 ಗಂಟೆಗೆ ಶೂಟಿಂಗ್ ಆರಂಭಿಸಿದರೆ ಸಂಜೆ 4 ಅಥವಾ 5 ಕ್ಕೆ ಮುಗಿಸಿ ಬಿಡುತ್ತಾರೆ. ಶೂಟಿಂಗ್ ಸಮಯದಲ್ಲಿಯೂ ಸಹ ಬಲು ಸಕ್ರಿಯರಾಗಿರುವ ಅಕ್ಷಯ್, ಸಹ ನಟರನ್ನು ಬಕರಾ ಮಾಡುತ್ತಾ ತಮಾಷೆ ಮಾಡುತ್ತಿರುತ್ತಾರೆ.

ಇದೀಗ ಅಕ್ಷಯ್ ಕುಮಾರ್ ಅವರು ಹಾಸ್ಯ ಪ್ರಧಾನ ಆಕ್ಷನ್ ಸಿನಿಮಾ ‘ವೆಲ್​​ಕಮ್ ಟು ಜಂಗಲ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಭಾರಿ ತಾರಾಗಣ ಇರುವ ಹಾಸ್ಯ ಪ್ರಧಾನ ಸಿನಿಮಾ ಇದಾಗಿದ್ದು, ಅಕ್ಷಯ್ ಜೊತೆಗೆ ಇನ್ನೂ ಕೆಲವು ಸ್ಟಾರ್ ನಟರುಗಳು ಇದ್ದು, ಇವರ ಜೊತೆಗೆ ಹಲವು ಹಾಸ್ಯ ನಟರು ಸಹ ನಟಿಸುತ್ತಿದ್ದಾರೆ. ಇದೀಗ ನಟ ಅಕ್ಷಯ್ ಕುಮಾರ್, ಸಿನಿಮಾ ಶೂಟಿಂಗ್ ವೇಳೆ ತಾವು ಹಿರಿಯ ಹಾಸ್ಯ ನಟನ ಮೇಲೆ ಮಾಡಿದ ಪ್ರ್ಯಾಂಕ್​​ನ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಶೂಟಿಂಗ್ ವೇಳೆ ಅಕ್ಷಯ್ ಕುಮಾರ್, ಕುದುರೆ ಮೇಯಿಸಿದ್ದಾರೆ. ಆದರೆ ಕುದುರೆಗೆ ಹುಲ್ಲು ತಿನ್ನಿಸಿಲ್ಲ ಬದಲಿಗೆ ಸಹ ನಟನ ಕೂದಲನ್ನೇ ತಿನ್ನಿಸಿದ್ದಾರೆ. ಹಿರಿಯ ಹಾಸ್ಯ ನಟ ರಾಜ್​ಪಾಲ್ ಯಾದವ್ ಶೂಟಿಂಗ್ ವೇಳೆ ಯಾರೊಟ್ಟಿಗೋ ಮಾತನಾಡುತ್ತಾ ನಿಂತಿದ್ದಾಗ, ಅಲ್ಲಿಗೆ ಕುದುರೆ ಹಿಡಿದು ಬರುವ ಅಕ್ಷಯ್ ಕುಮಾರ್, ರಾಜ್​​ಪಾಲ್ ಧರಿಸಿದ್ದ ನಕಲಿ ಕೂದಲಿನ ವಿಗ್ ಅನ್ನು ತಿನ್ನುವಂತೆ ಕುದುರೆಗೆ ಹೇಳಿದ್ದಾರೆ, ಕೂಡಲೇ ಆ ಕುದುರೆ ರಾಪ್​​ಪಾಲ್​ ಯಾದವ್ ಅವರ ವಿಗ್​​ಗೆ ಬಾಯಿ ಹಾಕಿದೆ. ತಲೆಗೆ ಏನೋ ತಾಗಿದಂತಾಗಿ ಹಿಂದೆ ತಿರುಗಿ ನೋಡಿದ ರಾಜ್​​ಪಾಲ್ ಯಾದವ್ ಕುದುರೆಯನ್ನು ನೋಡಿ ಹೌಹಾರಿದ್ದಾರೆ. ಇದನ್ನು ನೋಡಿ ಅಕ್ಷಯ್ ಕುಮಾರ್​​​ಗೆ ನಗುವೋ ನಗು.

ವಿಶೇಷವೆಂದರೆ ವಿಡಿಯೋನಲ್ಲಿ ರಾಜ್​​ಪಾಲ್ ಪಕ್ಕದಲ್ಲೇ ಪರೇಶ್ ರಾವಲ್ ಸಹ ಇದ್ದಾರೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಡುವೆ ಎಲ್ಲವೂ ಸರಿ ಇಲ್ಲ. ಅಕ್ಷಯ್ ನಿರ್ಮಾಣ ಮಾಡುತ್ತಿದ್ದ ‘ಹೇರಾ ಪೇರಿ 3’ ಸಿನಿಮಾನಲ್ಲಿ ತಾವು ನಟಿಸುವುದಿಲ್ಲ ಎಂದು ಪರೇಶ್ ಹೇಳಿದ್ದರು. ಸಂಧಾನದ ಬಳಿಕ ಒಪ್ಪಿಗೆ ಸೂಚಿಸಿದ್ದರಾದರೂ ಈಗ ಮತ್ತೆ ಸಿನಿಮಾದಿಂದ ಹೊರಗೆ ಹೋಗಿದ್ದು, ಪಡೆದಿದ್ದ ಅಡ್ವಾನ್ಸ್ ಮೊತ್ತವನ್ನು ಬಡ್ಡಿ ಸಮೇತ ಹಿಂತಿರುಗಿಸಿದ್ದಾರೆ. ಅಲ್ಲದೆ, ಸಂದರ್ಶನವೊಂದರಲ್ಲಿ ಅಕ್ಷಯ್ ನನ್ನ ಗೆಳೆಯ ಅಲ್ಲ ಸಹ ನಟ ಅಷ್ಟೆ ಎಂದು ಹೇಳಿಕೆ ಸಹ ನೀಡಿದ್ದರು.

ಈಗ ಅಕ್ಷಯ್ ಕುಮಾರ್ ಹಂಚಿಕೊಂಡಿರುವ ವಿಡಿಯೋನಲ್ಲಿ ಅಕ್ಷಯ್ ಕುಮಾರ್ ಮಾಡಿರುವ ಪ್ರ್ಯಾಂಕ್ ನೋಡಿ ಪರೇಶ್ ರಾವಲ್ ಸಹ ಮನಸಾರೆ ನಕ್ಕಿದ್ದಾರೆ. ವಿಡಿಯೋ ನೋಡಿದರೆ ಅಕ್ಷಯ್ ಮತ್ತು ಪರೇಶ್ ರಾವಲ್ ತಮ್ಮ ನಡುವೆ ಇದ್ದ ಮನಸ್ಥಾಪವನ್ನು ಮರೆತಂತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SSC Recruitment 2026: ಹುದ್ದೆಗಳ ಸಂಖ್ಯೆ 731ರಿಂದ 1170ಕ್ಕೆ ಏರಿಕೆ; ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶ! – Kannada News

ಕೇಂದ್ರ ಸರ್ಕಾರಿ ಉದ್ಯೋಗImage Credit source: Pinterest

ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸಿಬ್ಬಂದಿ ಆಯ್ಕೆ ಆಯೋಗ (SSC) ಸಿಹಿಸುದ್ದಿ ನೀಡಿದೆ. ದೇಶಾದ್ಯಂತದ ವಿವಿಧ ಕೇಂದ್ರ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಕಚೇರಿಗಳಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ಗ್ರೇಡ್ ‘ಡಿ’ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕಟಿಸಿದ್ದ ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ಈ ಹಿಂದೆ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದ ಅಧಿಸೂಚನೆಯಲ್ಲಿ ಒಟ್ಟು 731 ಹುದ್ದೆಗಳ ನೇಮಕಾತಿ ಘೋಷಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದು, ಒಟ್ಟು ಹುದ್ದೆಗಳ ಸಂಖ್ಯೆಯನ್ನು 1170ಕ್ಕೆ ಹೆಚ್ಚಿಸಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಿವೆ.

ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಷ್ಕೃತ ಮಾಹಿತಿ:

SSC ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಜೂನ್ 4, 2026ರ ವೇಳೆಗೆ ವಿವಿಧ ಇಲಾಖೆಗಳಲ್ಲಿನ ಒಟ್ಟು 1170 ಸ್ಟೆನೋಗ್ರಾಫರ್ ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಸಂಖ್ಯೆಯಲ್ಲಿ 439 ಸ್ಥಾನಗಳ ಹೆಚ್ಚಳವಾಗಿರುವುದು ಅಭ್ಯರ್ಥಿಗಳಲ್ಲಿ ಉತ್ಸಾಹ ಮೂಡಿಸಿದೆ.

ಪರೀಕ್ಷೆ ಯಾವಾಗ ನಡೆಯಲಿದೆ?

ಅಧಿಕೃತ ವೇಳಾಪಟ್ಟಿಯ ಪ್ರಕಾರ, ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ಗ್ರೇಡ್ ‘ಡಿ’ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಜುಲೈ ಮತ್ತು ಆಗಸ್ಟ್ ತಿಂಗಳ ನಡುವೆ ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈಗಿನಿಂದಲೇ ಸಿದ್ಧತೆಯನ್ನು ಮತ್ತಷ್ಟು ವೇಗಗೊಳಿಸುವುದು ಅಗತ್ಯವಾಗಿದೆ.

ಪರೀಕ್ಷೆಯ ಮಾದರಿ ಹೇಗಿರಲಿದೆ?

SSC ಸ್ಟೆನೋಗ್ರಾಫರ್ CBT ಪರೀಕ್ಷೆಯು ಒಟ್ಟು 200 ಅಂಕಗಳಿಗೆ ನಡೆಯಲಿದ್ದು, 200 ಬಹು ಆಯ್ಕೆ ಪ್ರಶ್ನೆಗಳು ಕೇಳಲಾಗುತ್ತವೆ. ಪರೀಕ್ಷೆಯ ಅವಧಿ 2 ಗಂಟೆಗಳಾಗಿದ್ದು, ಅಭ್ಯರ್ಥಿಗಳ ವಿಶ್ಲೇಷಣಾ ಸಾಮರ್ಥ್ಯ, ಸಾಮಾನ್ಯ ಜ್ಞಾನ ಹಾಗೂ ಇಂಗ್ಲಿಷ್ ಭಾಷಾ ಕೌಶಲ್ಯವನ್ನು ಪರೀಕ್ಷಿಸಲಾಗುತ್ತದೆ. ಅಭ್ಯರ್ಥಿಗಳು ಪರೀಕ್ಷೆ ಬರೆಯುವಾಗ ಎಚ್ಚರಿಕೆಯಿಂದ ಉತ್ತರಿಸುವುದು ಅಗತ್ಯ. ಏಕೆಂದರೆ ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. CBT ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ನಂತರ ಸ್ಟೆನೋಗ್ರಫಿ ಕೌಶಲ್ಯ ಪರೀಕ್ಷೆಗೆ ಹಾಜರಾಗಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆಯ್ಕೆ ಮಾಡಿಕೊಂಡಿರುವ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಈ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಅಂತಿಮ ಆಯ್ಕೆ ಹೇಗೆ?

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಕೌಶಲ್ಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಅಭ್ಯರ್ಥಿಗಳ ಅಂತಿಮ ಆಯ್ಕೆ ನಡೆಯಲಿದೆ. ಬಳಿಕ SSC ಅಂತಿಮ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಿದೆ.

ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ:

ಹುದ್ದೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಬಾರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅವಕಾಶಗಳಿವೆ. ಆದಾಗ್ಯೂ, CBT ಪರೀಕ್ಷೆ ಹಾಗೂ ಸ್ಟೆನೋಗ್ರಫಿ ಕೌಶಲ್ಯ ಪರೀಕ್ಷೆ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುವುದು ಅಗತ್ಯವಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಪಠ್ಯಕ್ರಮ, ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಆಧಾರದ ಮೇಲೆ ಸಿದ್ಧತೆ ನಡೆಸುವುದು ಒಳಿತು. SSC ಸ್ಟೆನೋಗ್ರಾಫರ್ ನೇಮಕಾತಿ 2026 ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಸಾವಿರಾರು ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದ್ದು, ಹುದ್ದೆಗಳ ಸಂಖ್ಯೆಯ ಹೆಚ್ಚಳದಿಂದ ಉದ್ಯೋಗಾವಕಾಶಗಳು ಮತ್ತಷ್ಟು ವಿಸ್ತರಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜವಾಹರಲಾಲ್ ನೆಹರು- ನರೇಂದ್ರ ಮೋದಿ ಅವಧಿಯ ವ್ಯತ್ಯಾಸಗಳೇನು? ಇಬ್ಬರ ನಾಯಕತ್ವದ ಅವಲೋಕನ ಇಲ್ಲಿದೆ – Kannada News

ನವದೆಹಲಿ, ಜೂನ್ 5: ಬರುವ ಜೂನ್ 10ರಂದು ಭಾರತದ ರಾಜಕಾರಣದಲ್ಲಿ ಹಳೇ ದಾಖಲೆಯೊಂದು ಇತಿಹಾಸ ಪುಟ ಸೇರಲಿದೆ. ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸತತವಾಗಿ ಅತಿ ಹೆಚ್ಚು ದಿನಗಳ ಕಾಲ ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಅವರು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ (4,398 ದಿನಗಳು) ದಾಖಲೆಯನ್ನು ದಾಟಲಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ, ನೆಹರು ಮತ್ತು ಮೋದಿ ಯುಗದ ಆಡಳಿತ ಹಾಗೂ ಭಾರತದ ಬದಲಾದ ಸ್ವರೂಪದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ.

ಮೊದಲೆಲ್ಲ ರಾಜಕೀಯ ಎಂಬುದು ಕೇವಲ ರ‍್ಯಾಲಿ ಮತ್ತು ಚುನಾವಣೆಗಳಿಗೆ ಸೀಮಿತವಾಗಿತ್ತು. ಆದರೆ, ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ರಾಜಕೀಯ ನಾಯಕರ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಲೇ ಇರುತ್ತಾರೆ. ಇಂತಹ ಕಠಿಣ ಸನ್ನಿವೇಶದಲ್ಲೂ ಪ್ರಧಾನಿ ಮೋದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಶ್ರಮಿಸುತ್ತಿದ್ದಾರೆ. ಜೂನ್ 10ಕ್ಕೆ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಪ್ರಧಾನಿ ಮುರಿಯಲಿದ್ದಾರೆ.

ತಲೆಮಾರುಗಳ ನಡುವಿನ ಸಮನ್ವಯತೆ:

ಬದಲಾಗುತ್ತಿರುವ ತಲೆಮಾರುಗಳ ನಡುವೆಯೂ ತಮ್ಮ ರಾಜಕೀಯ ಮತ್ತು ಭಾವನಾತ್ಮಕ ಪ್ರಸ್ತುತತೆಯನ್ನು ಕಾಯ್ದುಕೊಳ್ಳುವ ನಾಯಕರು ಬಹಳ ಅಪರೂಪ. ಆದರೆ, ಪ್ರಧಾನಿ ಮೋದಿ ಅವರು ಒಂದೇ ಕುಟುಂಬದ ಮೂರು ವಿಭಿನ್ನ ತಲೆಮಾರುಗಳಿಗೆ ಕನೆಕ್ಟ್ ಆಗಿದ್ದಾರೆ. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವೋಟ್ ಮಾಡಿದ್ದ ಒಬ್ಬ ಹಿರಿಯ ವ್ಯಕ್ತಿ ಮತ್ತು ಆತನ ಮಗ, ಹಾಗೂ ಅದೇ ಕುಟುಂಬದ ಮೊಮ್ಮಗ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಮತ ಹಾಕಿರುತ್ತಾರೆ. ಈ ಮೂಲಕ ಅವರು ಮೂರೂ ತಲೆಮಾರುಗಳ ನೆಚ್ಚಿನ ನಾಯಕರಾಗಿದ್ದಾರೆ.

ಇದನ್ನೂ ಓದಿ: ಇಡೀ ನೆಹರು-ಗಾಂಧಿ ಕುಟುಂಬವೇ ದೇಶದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದೆ; ಪಿಯೂಷ್ ಗೋಯಲ್ ಆರೋಪ

ಸವಾಲುಗಳ ಯುಗದ ನಾಯಕ:

ಕೊವಿಡ್-19 ಜಾಗತಿಕ ಸಾಂಕ್ರಾಮಿಕ, ಅಂತಾರಾಷ್ಟ್ರೀಯ ಯುದ್ಧಗಳು, ಭಯೋತ್ಪಾದನೆ, ಆರ್ಥಿಕ ಆಘಾತಗಳು ಮತ್ತು ಜಾಗತಿಕ ರಾಜತಾಂತ್ರಿಕ ಸಮತೋಲನ ಕಾಯ್ದುಕೊಳ್ಳುವಿಕೆಯಂತಹ ಸಾಲು ಸಾಲು ಬಿಕ್ಕಟ್ಟುಗಳ ನಡುವೆ ಪ್ರಧಾನಿ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ನೆಹರು ಅವರ ಕಾಲಕ್ಕೆ ಹೋಲಿಸಿದರೆ, ಪ್ರಸ್ತುತ ಮೋದಿ ಅವರು ಎದುರಿಸುತ್ತಿರುವ ಸವಾಲುಗಳ ತೀವ್ರತೆ ಮತ್ತು ಸ್ವರೂಪ ಅತ್ಯಂತ ಕಠಿಣ ಹಾಗೂ ಸಂಪೂರ್ಣ ಭಿನ್ನವಾಗಿದೆ.

ಜನ ಚಳುವಳಿಯಾದ ಆಡಳಿತ:

ಜವಾಹರಲಾಲ್ ನೆಹರು ಅವರ ಆಡಳಿತ ಮಾದರಿಯು ಹೆಚ್ಚಾಗಿ ‘ಟಾಪ್-ಡೌನ್’ (ಮೇಲಿಂದ ಕೆಳಕ್ಕೆ) ಆಗಿತ್ತು. ಅಲ್ಲಿ ನಿರ್ಧಾರಗಳನ್ನು ರಾಜಕೀಯ ಗಣ್ಯರು ಮತ್ತು ಅಧಿಕಾರಶಾಹಿಯೇ ತೆಗೆದುಕೊಳ್ಳುತ್ತಿದ್ದರು. ಆದರೆ, ಪ್ರಧಾನಿ ಮೋದಿ ಅವರ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್” ತತ್ವವು ಸಾರ್ವಜನಿಕರ ಸಾಮೂಹಿಕ ಭಾಗವಹಿಸುವಿಕೆಗೆ ಒತ್ತು ನೀಡುವ ಮೂಲಕ ಆಡಳಿತವನ್ನು ಒಂದು ‘ಜನ ಚಳುವಳಿ’ಯನ್ನಾಗಿ ಮಾರ್ಪಡಿಸಿದೆ.

ಇದನ್ನೂ ಓದಿ: ಜೂನ್ 10 ಕ್ಕೆ ಪ್ರಧಾನಿ ಮೋದಿ ಹೆಸರಿಗೆ ಹೊಸ ದಾಖಲೆ, ನೆಹರು ಅಧಿಕಾರಾವಧಿ ಹಿಂದಿಕ್ಕಲಿರುವ ನವ ಭಾರತದ ಸಾರಥಿ

ಸಾಮಾನ್ಯರ ಸಾಮರ್ಥ್ಯದ ಮೇಲೆ ನಂಬಿಕೆ:

ನೆಹರು ಅವರ ಸಮಾಜವಾದಿ ನೀತಿಯು ಸರ್ಕಾರದ ನಿಯಂತ್ರಣ ಮತ್ತು ಅಧಿಕಾರಶಾಹಿಯ ನಿರ್ವಹಣೆಗೆ ಪ್ರಾಮುಖ್ಯತೆ ನೀಡಿತ್ತು. ಆದರೆ, ಪ್ರಧಾನಿ ಮೋದಿ ಅವರ ಆಡಳಿತವು ಸಾಮಾನ್ಯ ಭಾರತೀಯರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ಅವರ ಸಬಲೀಕರಣಕ್ಕೆ ಒತ್ತು ನೀಡುತ್ತಿದೆ.

ಸಾಮೂಹಿಕ ರಾಷ್ಟ್ರೀಯ ಮಿಷನ್:

ನೆಹರು ಕಾಲದಲ್ಲಿ ದೇಶದ ಅಭಿವೃದ್ಧಿ ಎನ್ನುವುದು ಕೇವಲ ಸರ್ಕಾರದ ಜವಾಬ್ದಾರಿ ಎಂದು ಬಿಂಬಿತವಾಗಿತ್ತು. ಆದರೆ, ಪ್ರಸ್ತುತ ಮೋದಿಯವರ ಯುಗದಲ್ಲಿ ದೇಶದ ಪ್ರಗತಿಯನ್ನು ಪ್ರತಿಯೊಬ್ಬ ನಾಗರಿಕನ ಕೊಡುಗೆಯನ್ನು ಬಯಸುವ ಒಂದು ‘ಸಾಮೂಹಿಕ ರಾಷ್ಟ್ರೀಯ ಮಿಷನ್’ (ಸಬ್ ಕಾ ಪ್ರಯಾಸ್) ಆಗಿ ರೂಪಿಸಲಾಗಿದೆ.

ಜನಸಂಖ್ಯೆಯ ಹೆಚ್ಚಳ:

ನೆಹರು ಅಧಿಕಾರ ವಹಿಸಿಕೊಂಡಾಗ ದೇಶದ ಜನಸಂಖ್ಯೆ 34 ಕೋಟಿ ಇತ್ತು. ಆದರೆ ಇಂದು ಪ್ರಧಾನಿ ಮೋದಿ ಮುನ್ನಡೆಸುತ್ತಿರುವ ಭಾರತದ ಜನಸಂಖ್ಯೆ 146 ಕೋಟಿಗೂ ಅಧಿಕವಾಗಿದೆ. 1951ರ ಮೊದಲ ಚುನಾವಣೆಯಲ್ಲಿ ಕೇವಲ 53 ಪಕ್ಷಗಳು ಸ್ಪರ್ಧಿಸಿದ್ದರೆ, 2024ರ ಚುನಾವಣೆಯಲ್ಲಿ ಭೀಕರ ಸ್ಪರ್ಧೆಯ ನಡುವೆ ದಾಖಲೆಯ 744 ಪಕ್ಷಗಳು ಕಣಕ್ಕಿಳಿದಿದ್ದವು. ನೆಹರು ಕಾಲದ ಏಕಪಕ್ಷೀಯ ಪ್ರಾಬಲ್ಯದ ಜಾಗದಲ್ಲಿ ಇಂದು ಪ್ರಾದೇಶಿಕ ಪಕ್ಷಗಳ ಪ್ರಬಲ ಪೈಪೋಟಿ ಇದೆ.

ಆರ್ಥಿಕತೆ ಮತ್ತು ಜಾಗತಿಕ ಮುನ್ನಡೆ:

ನೆಹರು ಕಾಲದಲ್ಲಿ ಭಾರತದ ಜಿಡಿಪಿ (GDP) ಬೆಳವಣಿಗೆ ಕೇವಲ 3.5%ರಷ್ಟಿತ್ತು. ಆದರೆ, ಇಂದು ಕೋವಿಡ್ ಜಾಗತಿಕ ಬಿಕ್ಕಟ್ಟಿನ ನಡುವೆಯೂ ಮೋದಿ ನೇತೃತ್ವದಲ್ಲಿ ಭಾರತ 6.5-7% ಬೆಳವಣಿಗೆಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತವು 2014ರಲ್ಲಿದ್ದ 10ನೇ ಸ್ಥಾನದಿಂದ 2025-26 ರಲ್ಲಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಕೊಕ್ಕು ಮುರಿದುಕೊಂಡು ಆಹಾರ ತಿನ್ನಲು ಕಷ್ಟಪಡುತ್ತಿದ್ದ ಹಕ್ಕಿಯ ನೆರವಿಗೆ ಬಂದ ಮತ್ತೊಂದು ಪಕ್ಷಿ – Kannada News

ಈಗಿನ ಕಾಲದಲ್ಲಿ ಜನರು ಇತರರಿಗೆ ಸಹಾಯ ಮಾಡುವುದು ಬಿಡಿ, ಕಷ್ಟ ಎನ್ನುವರತ್ತ ತಿರುಗಿಯೂ ನೋಡಲ್ಲ. ಹೀಗಿರುವಾಗ ಈ ಪಕ್ಷಿಗಳು ತನ್ನ ಬಳಗದಲ್ಲಿ ತೊಂದರೆಗೆ ಸಿಲುಕಿರುವ ಜೀವಕ್ಕೆ ರಕ್ಷಣೆಗೆ ನಿಲ್ಲುತ್ತದೆ, ಆಸರೆಯಾಗುತ್ತದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ವಿಡಿಯೋ. ಕೊಕ್ಕು ಮುರಿದುಕೊಂಡು ಆಹಾರ ತಿನ್ನಲಾಗದೇ ಒದ್ದಾಡುತ್ತಿದ್ದ ಪಕ್ಷಿಗೆ ಇನ್ನೊಂದು ಹಕ್ಕಿ ತನ್ನ ಕೊಕ್ಕಿನಿಂದ ಆಹಾರ (food) ನೀಡಿದ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಪಕ್ಷಿಯ ಸಹಾಯ ಮಾಡುವ ಗುಣವನ್ನು ಮೆಚ್ಚಿಕೊಂಡಿದ್ದಾರೆ.

@Ravitiwariii_ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕೊಕ್ಕು ಮುರಿದುಕೊಂಡ ಪಕ್ಷಿ ಆಹಾರ ತಿನ್ನಲು ಕಷ್ಟ ಪಡುತ್ತಿದೆ. ಇದೇ ವೇಳೆ ಮತ್ತೊಂದು ಪಕ್ಷಿ ತನ್ನ ಕೊಕ್ಕಿನಿಂದ ಆಹಾರ ಕೊಟ್ಟು ಸಹಾಯ ಮಾಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ

ಈ ವಿಡಿಯೋ ಅಧಿಕ ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪ್ರೀತಿ ಹಾಗೂ ದಯೆಯ ಅತ್ಯಂತ ಸುಂದರ ಎಂದಿದ್ದಾರೆ. ಇನ್ನೊಬ್ಬರು, ಈ ಹಕ್ಕಿಯಿಂದ ಮನುಷ್ಯರು ಕಲಿಯುವಂತಹದ್ದು ಸಾಕಷ್ಟಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮೂಕ ಜೀವಿಗಳು ಗುಣದಲಿ ಮೇಲು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:21 pm, Fri, 5 June 26

Source link

Exit mobile version