ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸಿಎಂ ಕ್ಲಾಸ್: ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸೂಚನೆ – Kannada News | DK Shivakumar Halts Gutka Ban After Opposition; Health Dept Scrutinized

ಬೆಂಗಳೂರು, ಆ.14: ಕರ್ನಾಟಕದಲ್ಲಿ ಗುಟ್ಕಾ ಮಾರಾಟ ನಿಷೇಧಕ್ಕೆ ಸಂಬಂಧಿಸಿದ ಆದೇಶವನ್ನು ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಗುಟ್ಕಾ ನಿಷೇಧ ಆದೇಶದ ಕುರಿತು ಬಹುತೇಕ ಶಾಸಕರಿಂದ, ಅದರಲ್ಲಿಯೂ ಕಾಂಗ್ರೆಸ್ ಶಾಸಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಚರ್ಚಿಸಲು ಹಿರಿಯ ಶಾಸಕರು ನಿನ್ನೆ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದೇಶದ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ಈ ವೇಳೆ ಸಿಎಂ ಸ್ಪಷ್ಟಪಡಿಸಿದ್ದರು. ಬಳಿಕ ನಡೆದ ಸಂಪುಟ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದೆ. ಆರೋಗ್ಯ ಇಲಾಖೆ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡ ಸಿಎಂ ಡಿ.ಕೆ. ಶಿವಕುಮಾರ್, ತಮ್ಮ ಗಮನಕ್ಕೆ ತರದೇ ಇಂತಹ ಗಂಭೀರ ಆದೇಶವನ್ನು ಹೇಗೆ ಹೊರಡಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಸುಮಾರು ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಈ ನಿರ್ಧಾರ ಪರಿಣಾಮ ಬೀರುತ್ತದೆ ಎಂದು ಸಿಎಂ ತಿಳಿಸಿದ್ದಾರೆ. ಹೀಗಾಗಿ, ಗುಟ್ಕಾ ನಿಷೇಧ ಆದೇಶವನ್ನು ಶೀಘ್ರದಲ್ಲೇ ಹಿಂಪಡೆಯುವಂತೆ ಸೂಚನೆ ನೀಡಲಾಗಿದೆ. ಈ ಆದೇಶ ಇಂದೋ ಅಥವಾ ನಾಳೆಯೋ ಹೊರಬೀಳುವ ಸಾಧ್ಯತೆಯಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ.ಎಸ್ ಪಾಟೀಲ್ ಅವಿರೋಧ ಆಯ್ಕೆ – Kannada News | GS Patil Unanimously Elected As Karnataka Assembly Speaker

ಬೆಂಗಳೂರು, ಆಗಸ್ಟ್ 14: ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿ.ಎಸ್. ಪಾಟೀಲ್ ಅವರ ಹೆಸರನ್ನು ಸಭಾಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದು, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಅನುಮೋದಿಸಿದ್ದಾರೆ.

ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ನಂತರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮತ್ತು ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು ಜಿ.ಎಸ್. ಪಾಟೀಲ್ ಅವರನ್ನು ಸಭಾಧ್ಯಕ್ಷರ ಪೀಠಕ್ಕೆ ಕರೆತಂದರು. ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ಸದಸ್ಯರು ನೂತನ ಸಭಾಧ್ಯಕ್ಷರಿಗೆ ಶುಭ ಕೋರಿದರು.

ಜಿ.ಎಸ್. ಪಾಟೀಲ್ ಅವರು ರೋಣ ಕ್ಷೇತ್ರದ ಶಾಸಕರಾಗಿದ್ದು, ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದವರು. ರಾಜಕೀಯದಲ್ಲಿ ಸುದೀರ್ಘ ಅನುಭವ ಹೊಂದಿದ್ದು, ಈ ಹಿಂದೆ ಎಂಟು ಬಾರಿ ಚುನಾವಣೆಗೆ ಸ್ಪರ್ಧಿಸಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಆಡಳಿತ ಪಕ್ಷದಲ್ಲಿ ಮತ್ತು ವಿರೋಧ ಪಕ್ಷದಲ್ಲೂ ಕೆಲಸ ಮಾಡಿದ ಅನುಭವ ಅವರಿಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಸ್ತಾಪಿಸಿದರು. ಎಐಸಿಸಿ ಕೂಡ ಜಿ.ಎಸ್. ಪಾಟೀಲ್ ಅವರ ಆಯ್ಕೆಯನ್ನು ಅನುಮೋದಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Independence Day 2026: ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ – Kannada News | President’s Medals 2026: Karnataka Police Honored for Distinguished Service on Aug 15

ಬೆಂಗಳೂರು, ಆ.14: ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ (ಆಗಸ್ಟ್ 15) ಶುಭಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗುವ ಪ್ರತಿಷ್ಠಿತ ‘ರಾಷ್ಟ್ರಪತಿ ಪದಕ-2026’ ಪ್ರಶಸ್ತಿಯನ್ನು ಘೋಷಿಸಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಒಟ್ಟು 17 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಬಾರಿಯ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ವಿಶಿಷ್ಟ ಸೇವಾ ಪದಕ

ಪೊಲೀಸ್ ಪಡೆಯಲ್ಲಿ ಅತ್ಯಂತ ವಿಶಿಷ್ಟ ಹಾಗೂ ಸುದೀರ್ಘ ಸೇವೆ ಸಲ್ಲಿಸಿದ ಸಿಸಿಬಿಯ (CCB) ಸಹಾಯಕ ಪೊಲೀಸ್ ಕಮಿಷನರ್ (ACP) ಹೆಚ್.ಎನ್. ಧರ್ಮೇಂದ್ರ ಅವರಿಗೆ ಪ್ರತಿಷ್ಠಿತ ‘ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ’ ಗೌರವ ಒಲಿದುಬಂದಿದೆ.

ಇದನ್ನೂ ಓದಿ: ತ್ರಿವರ್ಣ ಧ್ವಜದ ಮಧ್ಯದಲ್ಲಿ “ಅಶೋಕ ಚಕ್ರ”ದ ಕುತೂಹಲಕಾರಿ ಸಂಗತಿಗಳು

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು :

ರಾಜ್ಯದ ವಿವಿಧ ವಿಭಾಗಗಳು, ಕಮಿಷನರೇಟ್ ಹಾಗೂ ಜಿಲ್ಲೆಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ 16 ಅಧಿಕಾರಿ ಮತ್ತು ಸಿಬ್ಬಂದಿಗೆ ಪದಕ ಘೋಷಣೆಯಾಗಿದೆ.

ಸಾರಾ ಫಾತಿಮಾ – ಎಸ್ಪಿ (SP), ರೈಲ್ವೇಸ್, ಬೆಂಗಳೂರು

ಥಾಮಸ್ ಮ್ಯಾಥ್ಯೂ – ಕಮಾಂಡೆಂಟ್, ಕೆ.ಎಸ್.ಆರ್.ಪಿ (KSRP)

ಮಹಾದೇವ್ – ಎಸಿಪಿ (ACP), ಆಗ್ನೇಯ ಸಂಚಾರ ವಿಭಾಗ, ಬೆಂಗಳೂರು

ಪರಮಾನಂದ್ – ಡಿವೈಎಸ್ಪಿ (DySP), ಡಿ.ಎ.ಆರ್ (DAR), ರಾಯಚೂರು

ಷಣ್ಮುಗವರ್ಮಾ – ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ತರಬೇತಿ ಶಾಲೆ, ಮೈಸೂರು

ಭಾವುದ್ದೀನ್ ರುಕ್ಮುದ್ದೀನ್ – ಪೊಲೀಸ್ ಇನ್ಸ್‌ಪೆಕ್ಟರ್, ಮಾಳಮಾರುತಿ ಠಾಣೆ, ಬೆಳಗಾವಿ

ಗುರುಪ್ರಸಾದ್ ಗೋಪಾಲ್ ನಾಯಕ್ – ಇನ್ಸ್‌ಪೆಕ್ಟರ್, ಸಿಐಡಿ (CID)

ನಯೀಂ – ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್ (RPI), ರಾಜಭವನ

ಶ್ರೀನಿವಾಸ – ಪಿ.ಎಸ್.ಐ (PSI), ಕೆ.ಪಿ. ಅಗ್ರಹಾರ ಠಾಣೆ, ಬೆಂಗಳೂರು

ಜ್ಞಾನದೇವ್ ನವಲ ತರಾಸೆ – ಎ.ಆರ್.ಎಸ್.ಐ (ARSI), ಕೆ.ಎಸ್.ಆರ್.ಪಿ

ಮಹದೇವಸ್ವಾಮಿ – ಹೆಡ್ ಕಾನ್ಸ್‌ಟೇಬಲ್, ವಿಧಾನಸೌಧ ಭದ್ರತೆ

ಮಾರಿಯಾ ಜೋಸೆಫ್ ದಿನೇಶ್ ಕುಮಾರ್ – ಹೆಡ್ ಕಾನ್ಸ್‌ಟೇಬಲ್, ಡಿ.ಸಿ.ಆರ್.ಇ (DCRE), ಕೆಜಿಎಫ್

ಚಂದ್ರಶೇಖರ ಚಿಕ್ಕಣ್ಣನವರ್ – ಹೆಡ್ ಕಾನ್ಸ್‌ಟೇಬಲ್, ಕೆ.ಎಸ್.ಆರ್.ಪಿ

ಅಬ್ದುಲ್ ಕಮಾಲ್ – ಹೆಡ್ ಕಾನ್ಸ್‌ಟೇಬಲ್, ತರೀಕೆರೆ ಠಾಣೆ

ನಾಗೇಶ್ ಮಚ್ಚಯ್ಯ – ಹೆಡ್ ಕಾನ್ಸ್‌ಟೇಬಲ್, ಸಿಐಡಿ (CID)

ಮನೋಹರ್ – ಪೊಲೀಸ್ ಕಾನ್ಸ್‌ಟೇಬಲ್, ಹುಣಸೂರು ಠಾಣೆ

ಸಾಧಕ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಈ ಅಪರೂಪದ ಸಾಧನೆಗೆ ರಾಜ್ಯ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಿಂದ ಹಾರ್ದಿಕ ಅಭಿನಂದನೆಗಳು ಹರಿದುಬರುತ್ತಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tirumala: ತಿರುಪತಿಯಲ್ಲಿ ಕಾರುಗಳ ಗಾಜು ಒಡೆದು ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ; ಭಕ್ತರಿಗೆ ಎಸ್‌ಪಿ ನೀಡಿರುವ ಸೂಚನೆಗಳಿವು – Kannada News | Tirumala Parking Thefts: Thief Arrested; SP Issues Crucial Safety Tips for Srivari Devotees

ತಿರುಮಲ: ಶ್ರೀವಾರಿ ದರ್ಶನಕ್ಕಾಗಿ ತಿರುಮಲಕ್ಕೆ ದೇಶಾದ್ಯಂತದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ಸುರಕ್ಷತೆಯನ್ನು ಕಾಯುವ ಹಿತದೃಷ್ಟಿಯಿಂದ ತಿರುಪತಿ ಜಿಲ್ಲಾ ಎಸ್ಪಿಯವರ ಆದೇಶದ ಮೇರೆಗೆ ಪೊಲೀಸರು ಪಾರ್ಕಿಂಗ್ ಪ್ರದೇಶಗಳಲ್ಲಿ ತೀವ್ರ ಭದ್ರತಾ ತಪಾಸಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ತಿರುಮಲದ ಪಾರ್ಕಿಂಗ್ ಸ್ಥಳಗಳಲ್ಲಿ ಕಾರುಗಳ ಗಾಜು ಒಡೆದು ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಅನುಮಾನಾಸ್ಪದ ಸಂಚಾರ; ವಿಚಾರಣೆ ವೇಳೆ ಬಯಲಾಯ್ತು ಸತ್ಯ:

ಪೊಲೀಸರು ಪಾರ್ಕಿಂಗ್ ಸ್ಥಳಗಳಲ್ಲಿ ತಪಾಸಣೆ ನಡೆಸುತ್ತಿದ್ದಾಗ, ರಂಬಗೀಚಾ ಕಾರು ಪಾರ್ಕಿಂಗ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಅತ್ಯಂತ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಆತ ಪಶ್ಚಿಮ ಗೋದಾವರಿ ಜಿಲ್ಲೆಯ ರುದ್ರ ಶ್ಯಾಮ್ ಬಾಬು ಎಂದು ತಿಳಿದುಬಂದಿದೆ. ತೀವ್ರ ತನಿಖೆಯ ನಂತರ ಈತ ಕಳೆದ ಕೆಲವು ದಿನಗಳಿಂದ ತಿರುಮಲದಲ್ಲಿ ಎಸಗುತ್ತಿದ್ದ ಸರಣಿ ಕಳ್ಳತನದ ಕೃತ್ಯಗಳು ಸಾಕ್ಷಿ ಸಮೇತ ಹೊರಬಂದಿವೆ.

ದರ್ಶನಕ್ಕೆ ಹೋಗುವ ಭಕ್ತರೇ ಈತನ ಮುಖ್ಯ ಟಾರ್ಗೆಟ್:

ಶ್ರೀವಾರಿ ದರ್ಶನಕ್ಕೆ ತೆರಳುವ ಮುನ್ನ ಭಕ್ತರು ತಮ್ಮ ಕಾರುಗಳಲ್ಲಿ ಬ್ಯಾಗ್, ನಗದು, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಇತರ ದುಬಾರಿ ವಸ್ತುಗಳನ್ನು ಇಟ್ಟು ಹೋಗುವುದನ್ನೇ ಈತ ಕಣ್ಣಿಟ್ಟು ಕಾಯುತ್ತಿದ್ದ. ಪಾರ್ಕಿಂಗ್ ಪ್ರದೇಶದಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು, ಕಾರುಗಳ ಗಾಜುಗಳನ್ನು ಒಡೆದು ಒಳಗಿದ್ದ ಬೆಲೆಬಾಳುವ ವಸ್ತುಗಳನ್ನು ಅಪಹರಿಸುತ್ತಿದ್ದದ್ದು ತನಿಖೆಯಿಂದ ಸ್ಪಷ್ಟವಾಗಿದೆ.

ಸರಣಿ ಕಳ್ಳತನಗಳ ವಿವರ ಹಾಗೂ ಜಪ್ತಿಯಾದ ವಸ್ತುಗಳು:

ಆರೋಪಿಯು ರಂಬಗೀಚಾ ಪಾರ್ಕಿಂಗ್‌ನಲ್ಲಿ ಕಾರಿನ ಕಿಟಕಿ ಒಡೆದು ನಗದು ಕದ್ದಿದ್ದಲ್ಲದೆ, ಆಗಸ್ಟ್ 2 ರಂದು ನಾರಾಯಣಗಿರಿಯ ATGH ಬಳಿ ಕಾರಿನ ಕನ್ನಡಿ ಒಡೆದು ಲ್ಯಾಪ್‌ಟಾಪ್ ಬ್ಯಾಗ್ ದೋಚಿದ್ದ. ಅಷ್ಟೇ ಅಲ್ಲದೆ, ಆಗಸ್ಟ್ 3 ರಂದು VQC-1 ರ ಬಳಿಯ ಪವರ್ ಸಬ್‌ಸ್ಟೇಷನ್ ಹತ್ತಿರ ನಿಲ್ಲಿಸಿದ್ದ ಫಾರ್ಚೂನರ್ (TG-30-6666) ಕಾರಿನ ಕಿಟಕಿ ಒಡೆದು 3 ಐಫೋನ್‌ಗಳು, 1 ಐವಾಚ್ ಮತ್ತು 45,000 ರೂ. ನಗದನ್ನು ಕಳವು ಮಾಡಿದ್ದ. ಸದ್ಯ ಬಂಧಿತನಿಂದ 2 ಐಫೋನ್‌ಗಳು, 1 ಐವಾಚ್, ಗಾಜು ಒಡೆಯಲು ಬಳಸುತ್ತಿದ್ದ 2 ಉಪಕರಣಗಳು, ಡೆಲ್ ಬ್ಯಾಗ್ ಮತ್ತು ಅಪರಾಧಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು

ತಿರುಮಲ ಭಕ್ತರಿಗೆ ಜಿಲ್ಲಾ ಎಸ್ಪಿಯವರಿಂದ ಜಾಗೃತಿ ಸೂಚನೆಗಳು:

ಈ ಘಟನೆಯ ಹಿನ್ನೆಲೆಯಲ್ಲಿ ತಿರುಪತಿ ಜಿಲ್ಲಾ ಎಸ್ಪಿಯವರು ತಿರುಮಲಕ್ಕೆ ಬರುವ ಭಕ್ತರಿಗೆ ಕೆಲವು ಪ್ರಮುಖ ಸುರಕ್ಷತಾ ಸೂಚನೆಗಳನ್ನು ನೀಡಿದ್ದಾರೆ. ಭಕ್ತರು ತಮ್ಮ ವಾಹನಗಳಲ್ಲಿ ನಗದು, ಚಿನ್ನಾಭರಣ, ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಮುಖ್ಯ ದಾಖಲೆಗಳನ್ನು ಬಿಟ್ಟು ಹೋಗಬಾರದು. ಅತ್ಯಗತ್ಯ ಸಂದರ್ಭಗಳಲ್ಲಿ ಇಡಲೇಬೇಕಾಗಿ ಬಂದರೆ, ಅವು ಹೊರಗಿನಿಂದ ಯಾರ ಕಣ್ಣಿಗೂ ಬೀಳದಂತೆ ಸುರಕ್ಷಿತ ಸ್ಥಳದಲ್ಲಿಡಬೇಕು. ಅಲ್ಲದೆ, ಬ್ಯಾಗ್‌ಗಳು ಅಥವಾ ವ್ಯಾಲೆಟ್‌ಗಳು ಕಾರಿನ ಸೀಟ್ ಮೇಲೆ ಎದ್ದು ಕಾಣುವಂತೆ ಇಡಬಾರದು ಎಂದು ಮನವಿ ಮಾಡಿದ್ದಾರೆ.

ಸುರಕ್ಷಿತ ಪಾರ್ಕಿಂಗ್ ಬಳಸಿ; ತುರ್ತು ಸಹಾಯಕ್ಕೆ 112 ಕರೆ ಮಾಡಿ:

ವಾಹನಗಳನ್ನು ಲಾಕ್ ಮಾಡುವಾಗ ಎಲ್ಲಾ ಬಾಗಿಲುಗಳು ಮತ್ತು ಕಿಟಕಿಗಳು ಸರಿಯಾಗಿ ಲಾಕ್ ಆಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ರಸ್ತೆ ಬದಿ ಅಥವಾ ನಿರ್ಜನ ಪ್ರದೇಶಗಳಲ್ಲಿ ವಾಹನ ನಿಲ್ಲಿಸದೆ, ಭದ್ರತಾ ಸಿಬ್ಬಂದಿ ಹಾಗೂ CCTV ಕಣ್ಗಾವಲು ಇರುವ ಅಧಿಕೃತ ಪಾರ್ಕಿಂಗ್ ಪ್ರದೇಶಗಳನ್ನೇ ಬಳಸಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಅಥವಾ ಡಯಲ್ – 112 ಗೆ ಮಾಹಿತಿ ನೀಡುವಂತೆ ತಿಳಿಸಿರುವ ಪೊಲೀಸರು, ಭಕ್ತರ ಭದ್ರತೆಗೆ ಸಂಪೂರ್ಣ ಆದ್ಯತೆ ನೀಡಲಾಗಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಎರಡು ಅವಾರ್ಡ್ ಗೆದ್ದ ರಿಷಬ್ ಶೆಟ್ಟಿ – Kannada News | Indian Film Festival of Melbourne 2026: Rishab Shetty, Dulquer Salmaan, Rekha Win Top Honours!  

ಆಸ್ಟ್ರೇಲಿಯಾದಲ್ಲಿ ನಡೆದ 17ನೇ ಆವೃತ್ತಿಯ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್’ (IFFM 2026) ಚಲನಚಿತ್ರೋತ್ಸವದಲ್ಲಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಭಾರತೀಯ ಚಿತ್ರರಂಗದ ವೈವಿಧ್ಯಮಯ ಕಥೆಗಳು, ನಟನೆ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಗೌರವಿಸುವ ಈ ಸಮಾರಂಭದಲ್ಲಿ ಕನ್ನಡದ ಹೆಮ್ಮೆಯ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ದಕ್ಷಿಣ ಮತ್ತು ಉತ್ತರ ಭಾರತದ ಹಲವು ದಿಗ್ಗಜ ಕಲಾವಿದರು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ರಿಷಬ್ ಶೆಟ್ಟಿಗೆ ಗೌರವ:

ಕನ್ನಡ ಚಿತ್ರರಂಗದ ‘ಕಾಂತಾರ: ಚಾಪ್ಟರ್ 1’ ಸಿನಿಮಾಗಾಗಿ ರಿಷಬ್ ಶೆಟ್ಟಿ ಅವರು ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರ ಜೊತೆಗೆ, ಭಾರತೀಯ ಸಿನಿಮಾಗೆ ನೀಡಿರುವ ವಿಶಿಷ್ಟ ಕೊಡುಗೆ ಮತ್ತು ಸಾಂಸ್ಕೃತಿಕ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಕ್ಕಾಗಿ ಅವರಿಗೆ ಪ್ರತಿಷ್ಠಿತ ‘ಲೀಡರ್‌ಶಿಪ್ ಇನ್ ಸಿನಿಮಾ’ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.

ಚಿತ್ರರಂಗದ ದೈತ್ಯರಿಗೆ ಜೀವಮಾನದ ಗೌರವ:

ಭಾರತೀಯ ಚಿತ್ರರಂಗದ ಹಿರಿಯ ನಟಿ ರೇಖಾ ಅವರಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟಿ ರಾಣಿ ಮುಖರ್ಜಿ ಅವರ 30 ವರ್ಷಗಳ ಯಶಸ್ವಿ ಚಿತ್ರಜೀವನದ ಪಯಣವನ್ನು ವಿಶೇಷವಾಗಿ ಅಭಿನಂದಿಸಲಾಯಿತು. ನಟ ಪಂಕಜ್ ತ್ರಿಪಾಠಿ ಅವರಿಗೆ ‘ಆರ್ಟಿಸ್ಟ್ ಆಫ್ ಡಿಸ್ಟಿಂಕ್ಷನ್’ ಗೌರವ ಸಿಕ್ಕಿದೆ.

 IFFM 2026 ವಿಜೇತರ ಸಂಪೂರ್ಣ ಪಟ್ಟಿ:

ಅತ್ಯುತ್ತಮ ಸಿನಿಮಾ: ಲೋಕಾ ಚಾಪ್ಟರ್ 1: ಚಂದ್ರ

ಅತ್ಯುತ್ತಮ ಸಿನಿಮಾ (ವಿಶೇಷ ಉಲ್ಲೇಖ): ದಿ ಗ್ರೇಟ್ ಶಂಸುದ್ದೀನ್ ಫ್ಯಾಮಿಲಿ

ಅತ್ಯುತ್ತಮ ಇಂಡಿ ಸಿನಿಮಾ: ನಾಟ್ ಎ ಹೀರೊ

ಇಂಡಿ ಸಿನಿಮಾ (ವಿಶೇಷ ಉಲ್ಲೇಖ): ಕಿಕ್ಕ್ರನ್ ದೇ ಫುಲ್

ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ (ಕಾಂತಾರ: ಚಾಪ್ಟರ್ 1)

ಅತ್ಯುತ್ತಮ ನಟ: ದುಲ್ಕರ್ ಸಲ್ಮಾನ್ (ಕಾಂತಾ)

ಅತ್ಯುತ್ತಮ ನಟಿ: ಕೀರ್ತಿ ಕುಲ್ಹಾರಿ (ಫುಲ್ ಪ್ಲೇಟ್)

ಸಾಕ್ಷ್ಯಚಿತ್ರ : ಫ್ಲೈಯಿಂಗ್ ಟೈಗರ್ಸ್ (ಮಧುಶ್ರೀ ದತ್ತಾ)

ಪೀಪಲ್ಸ್ ಚಾಯ್ಸ್ ಪ್ರಶಸ್ತಿ: ಸೈಯಾರಾ (ಹಿಂದಿ)

ರೈನ್‌ಬೋ ಸ್ಟೋರಿಟೆಲ್ಲರ್ ಪ್ರಶಸ್ತಿ: ಲಾಲಾ ಅಂಡ್ ಪಾಪಿ (Lala and Poppy)

ವೆಬ್ ಸರಣಿ ವಿಭಾಗ

ಅತ್ಯುತ್ತಮ ನಟ : ವಿಜಯ್ ವರ್ಮಾ (ಮಟ್ಕಾ ಕಿಂಗ್)

ಅತ್ಯುತ್ತಮ ನಟಿ : ರಸಿಕಾ ದುಗಲ್ (ದೆಹಲಿ ಕ್ರೈಮ್ ಋತು 3)

ಅತ್ಯುತ್ತಮ ಸರಣಿ : ಫ್ರೀಡಮ್ ಅಟ್ ಮಿಡ್‌ನೈಟ್ – ಸೀಸನ್ 2

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:08 pm, Fri, 14 August 26

Source link

ಸರಕುಗಳ ಮೇಲೆ ಟ್ಯಾರಿಫ್ ತಪ್ಪಿಸಲು ಚೀನಾದ ಕಳ್ಳದಾರಿಗಳಲ್ಲಿ ಭಾರತವೂ ಒಂದು: ಅಮೆರಿಕ ಗಂಭೀರ ಆರೋಪ – Kannada News | US report accuses India and few other nations used by Chinese companies as shadow trans shipment network

ವಾಷಿಂಗ್ಟನ್, ಆಗಸ್ಟ್ 14: ಚೀನಾದಿಂದ ಕಳ್ಳದಾರಿಗಳಲ್ಲಿ ಸರಕುಗಳು ಹರಿದುಬರುತ್ತಿವೆ ಎನ್ನುವ ಆತಂಕ ಅಮೆರಿಕಕ್ಕೆ ಇನ್ನಿಲ್ಲದಂತೆ ಕಾಡುತ್ತಿದೆ. ಅಮೆರಿಕ ಅಧ್ಯಕ್ಷರ ಗೃಹಕಚೇರಿಯಾದ ಶ್ವೇತಭವನ (White House) ಬಿಡುಗಡೆ ಮಾಡಿರುವ ವರದಿಯೊಂದರಲ್ಲಿ, ಚೀನಾದ ಸರಕುಗಳ ಮೇಲಿನ ಹೆಚ್ಚಿನ ಆಮದು ಸುಂಕವನ್ನು (Tariffs) ತಪ್ಪಿಸಲು ಅಕ್ರಮ ಮಾರ್ಗಗಳನ್ನು ಬಳಸಲಾಗುತ್ತಿರುವ 40ಕ್ಕೂ ಹೆಚ್ಚು ದೇಶಗಳ ಪಟ್ಟಿಯಲ್ಲಿ ಭಾರತವನ್ನು ಪ್ರಮುಖ ಸ್ಥಾನದಲ್ಲಿ (Tier-1) ಹೆಸರಿಸಲಾಗಿದೆ. ಕೆನಡಾ, ಯೂರೋಪಿಯನ್ ಯೂನಿಯನ್, ದಕ್ಷಿಣ ಕೊರಿಯಾ ಇತ್ಯಾದಿ ಅಮೆರಿಕದ ಮಿತ್ರ ದೇಶಗಳೂ ಈ ಪ್ರಮುಖ ಪಟ್ಟಿಯಲ್ಲಿರುವುದು ಗಮನಾರ್ಹ.

‘ದಿ ಗ್ರೇಟ್ ಟ್ರಾನ್ಸ್‌ಶಿಪ್‌ಮೆಂಟ್ ಸ್ಕ್ಯಾಮ್’

ಅಮೆರಿಕದ ವೈಟ್‌ಹೌಸ್ ಆಫೀಸ್ ಆಫ್ ಟ್ರೇಡ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಪಾಲಿಸಿ ಬಿಡುಗಡೆ ಮಾಡಿರುವ ಈ ವರದಿಯು ಇದನ್ನು “ದಿ ಗ್ರೇಟ್ ಟ್ರಾನ್ಸ್‌ಶಿಪ್‌ಮೆಂಟ್ ಸ್ಕ್ಯಾಮ್” (The Great Transhipment Scam) ಎಂದು ಹೆಸರಿಡಲಾಗಿದೆ. ಚೀನಾದ ರಫ್ತುದಾರರು ಅಮೆರಿಕ ವಿಧಿಸಿರುವ ಭಾರೀ ಟ್ಯಾರಿಫ್‌ನಿಂದ ಬಚಾವಾಗಲು ತಮ್ಮ ವಸ್ತುಗಳನ್ನು ಮೂರನೇ ದೇಶಗಳ ಮೂಲಕ ದಾರಿ ಬದಲಿಸಿ (Rerouting), ಬೇರೆ ಲೇಬಲ್ (Relabelling) ಹಾಕಿ ಅಥವಾ ಸಣ್ಣಪುಟ್ಟ ಬದಲಾವಣೆ ಮಾಡಿ ಅಮೆರಿಕಕ್ಕೆ ಕಳುಹಿಸುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.

ಇದನ್ನೂ ಓದಿ: ಪ್ರಿ-ರೈಡ್ ಟಿಪ್ಸ್ ಬಂದ್‌: ಓಲಾ, ಉಬರ್, ರ‍್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್

ಭಾರತವನ್ನು ‘ಟೈಯರ್-1’ ವಿಭಾಗದಲ್ಲಿ ಸೇರ್ಪಡೆ

ವರದಿಯಲ್ಲಿ 40ಕ್ಕೂ ಹೆಚ್ಚು ದೇಶಗಳನ್ನು ಟಿಯರ್-1, ಟಿಯರ್-2 ಮತ್ತು ಟಿಯರ್-3 ಎಂದು 3 ವಿಭಾಗಗಳಾಗಿ ವಿಂಗಡಿಸಲಾಗಿದೆ.

  • Tier-1: ಭಾರತ, ಕೆನಡಾ, ಯುರೋಪಿಯನ್ ಯೂನಿಯನ್, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ. ಈ ದೇಶಗಳಲ್ಲಿ ಅಧಿಕೃತ ವ್ಯಾಪಾರದ ನೆಪದಲ್ಲೇ ಈ ರೀತಿಯ ಅಕ್ರಮ ಮಾರ್ಗಗಳನ್ನು ಬಳಸಲಾಗುತ್ತಿದೆ ಎಂದು ಅಮೆರಿಕ ಹೇಳಿದೆ.
  • Tier-2: ಬ್ರೆಜಿಲ್, ಇಂಡೋನೇಷ್ಯಾ, ಮಲೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ.
  • Tier-3: ಬಾಂಗ್ಲಾದೇಶ, ಕಾಂಬೋಡಿಯಾ, ಸಿಂಗಾಪುರ, ಶ್ರೀಲಂಕಾ, ಯುಎಇ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ವ್ಯಾಪಾರ ಸಲಹೆಗಾರ ಪಿಟರ್ ನವಾರೊ (Peter Navarro) ಅವರ ಪ್ರಕಾರ, ಈ ರೀತಿಯ ಅಕ್ರಮ ರಫ್ತಿನಿಂದಾಗಿ ಅಮೆರಿಕ ಸರ್ಕಾರಕ್ಕೆ ಸುಮಾರು 60 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ಆಮದು ಸುಂಕದ ನಷ್ಟವಾಗಿದೆ.

ಭಾರತ, ಮೆಕ್ಸಿಕೋ ಮತ್ತು ವಿಯೆಟ್ನಾಂ ಮೂಲಕವೇ 2025ರಲ್ಲಿ ಚೀನಾದಿಂದ ಸುಮಾರು $67 ಶತಕೋಟಿ ಮೌಲ್ಯದ ಸರಕುಗಳನ್ನು ಮರು-ರಫ್ತು ಮಾಡಲಾಗಿದೆ ಎಂದು ಅಮೆರಿಕ ವರದಿ ತಿಳಿಸಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಬಹಳ ಹೆಚ್ಚಾಗುತ್ತಿವೆ ಎಲೆಕ್ಟ್ರಿಕ್ ಸ್ಕೂಟರ್, ಬೈಕುಗಳು; ರಾಜ್ಯದ ಇವಿ ನೀತಿಗಳೇ ಇದಕ್ಕೆ ಕಾರಣವಾ?

ಮುಂದಿನ ಕ್ರಮಗಳು ಮತ್ತು ಭಾರತ-ಅಮೆರಿಕ ವ್ಯಾಪಾರ ಸಂಬಂಧ

  • ಅಮೆರಿಕ ಸರ್ಕಾರವು ‘Detect border’ ಎಂಬ AI ಆಧಾರಿತ ತಂತ್ರಜ್ಞಾನವನ್ನು ಬಳಸಿ ಇಂತಹ ಸರಕುಗಳನ್ನು ಗುರುತಿಸಲು ನಿರ್ಧರಿಸಿದೆ.
  • ಅಕ್ರಮ ಕಂಡುಬಂದಲ್ಲಿ ಹಿಂದಿನ 1 ವರ್ಷದ ಸರಕುಗಳ ಮೇಲೆಯೂ ಹಿಂಬಾಕಿ ಸುಂಕ (Retrospective Tariffs) ಮತ್ತು ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
  • ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದದ (Trade Deal) ಕುರಿತು ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ವರದಿ ಹೊರಬಿದ್ದಿರುವುದು ಇಬ್ಬದಿ ರಾಜತಾಂತ್ರಿಕ ಹಾಗೂ ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಇಂಥಹಾ ವ್ಯಕ್ತಿಯ ನೋಡಿರಲಿಲ್ಲ’ ಯಶ್​​ ಬಗ್ಗೆ ಸ್ಟಾರ್ ಪತ್ರಕರ್ತ ರಜತ್ ಶರ್ಮಾ ಅಚ್ಚರಿ – Kannada News | Rajat Sharma praised Yash, says I never seen such a super star

ರಜತ್ ಶರ್ಮಾ (Rajat Sharma), ಭಾರತೀಯ ಪತ್ರಿಕೋದ್ಯಮದಲ್ಲಿ ಬಲು ದೊಡ್ಡ ಹೆಸರು. ಇಂಡಿಯಾ ಟುಡೆಯ ಎಡಿಟರ್ ಇನ್ ಚೀಫ್ ಆಗಿರುವ ರಜತ್ ಅವರು ಕರೆದರೆ ಇಲ್ಲ ಎನ್ನುವ ರಾಜಕಾರಣಿ, ಸಿನಿಮಾ ಸೆಲೆಬ್ರಿಟಿಗಳಿಲ್ಲ. ಅವರು ನಡೆಸಿಕೊಡುವ ‘ಆಪ್​ ಕಿ ಅದಾಲತ್’ ಕಾರ್ಯಕ್ರಮಕ್ಕೆ ಪ್ರಧಾನಿ, ಮಾಜಿ ಪ್ರಧಾನಿ, ಹಲವಾರು ಸಚಿವರು, ಮುಖ್ಯಮಂತ್ರಿಗಳು, ದೊಡ್ಡ ಕ್ರೀಡಾ ತಾರೆಯರು, ಬಾಲಿವುಡ್​​ನ ಖಾನ್​​ ತ್ರಯರು ಎಲ್ಲರೂ ಬಂದು ಹೋಗಿದ್ದಾರೆ. ಹಾಗೆ ಬಂದವರಿಗೆ ರಜತ್ ಶರ್ಮಾ, ಕೆಂಡದಂಥಹಾ ಪ್ರಶ್ನೆಗಳನ್ನೇ ಕೇಳುತ್ತಾರೆ. ಇದೀಗ ಅವರ ಆಪ್​​ ಕಿ ಅದಾಲತ್ ಕಾರ್ಯಕ್ರಮದಲ್ಲಿ ನಟ ಯಶ್ ಭಾಗಿ ಆಗಿದ್ದಾರೆ. ಯಶ್ ಕಾರ್ಯಕ್ರಮದ ಬಳಿಕ ತಮ್ಮ ನ್ಯೂಸ್ ಬುಲೆಟಿನ್​​ನಲ್ಲಿ ರಜತ್ ಅವರು ಯಶ್​ ಬಗ್ಗೆ ವಿಶೇಷ ಉಲ್ಲೇಖ ಮಾಡಿದ್ದು, ‘ಅಂಥಹಾ ಸ್ಟಾರ್ ನಟ ನಾನು ನೋಡಿರಲಿಲ್ಲ’ ಎಂದು ಭಾವುಕವಾಗಿ ನುಡಿದಿದ್ದಾರೆ.

‘ಯಶ್ ಅವರೊಟ್ಟಿಗೆ ನಾನು ‘ಆಪ್​​ ಕಿ ಅದಾಲತ್’ ಶೋ ರೆಕಾರ್ಡ್ ಮಾಡಿದೆ. ಅವರು ಬಂದಾಗ ಸ್ಟುಡಿಯೋನಲ್ಲಿದ್ದ ಆಡಿಯೆನ್ಸ್ ಕೊಟ್ಟ ಪ್ರತಿಕ್ರಿಯೆ ನೋಡಿ ನನಗೆ ಆಶ್ಚರ್ಯವಾಯ್ತು. ಯಶ್ ಅವರು ಮೊದಲಿಗೆ ತಮ್ಮ ಹಿಂದಿ ಭಾಷೆಯಿಂದ ನನಗೆ ಶಾಕ್ ನೀಡಿದರು. ಅವರ ಮಾತೃಭಾಷೆ ಕನ್ನಡದವಾದರೂ ಅವರು ಅದ್ಭುತವಾಗಿ ಹಿಂದಿ ಮಾತನಾಡಿದರು. ಹಿಂದಿ ತಪ್ಪಾಗುವ ಸಾಧ್ಯತೆ ಇದೆ ಕ್ಷಮಿಸಿ ಎಂದರಾದರೂ ಅವರ ಭಾಷೆ ಅದ್ಭುತವಾಗಿತ್ತು’ ಎಂದು ರಜತ್ ಹೇಳಿದ್ದಾರೆ.

ಆದರೆ ರಜತ್ ಅವರು ಯಶ್​​ರ ಫ್ಯಾನ್ ಆಗಿದ್ದು, ಅಭಿಮಾನಿಗಳ ಬಗ್ಗೆ ಅವರಿಗೆ ಇರುವ ಕಾಳಜಿಯ ಬಗ್ಗೆ ಮಾತನಾಡಿದಾಗ. ರಜತ್ ಅವರೇ ಹೇಳಿರುವಂತೆ, ‘ಯಶ್ ಒಂದೇ ಬಾರಿ 700ಕ್ಕೂ ಹೆಚ್ಚು ಅಭಿಮಾನಿಗಳೊಂದಿಗೆ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಫೋಟೊ ನೀಡಿದರಂತೆ’ ಈ ಬಗ್ಗೆ ನಾನು ಯಶ್ ಅವರನ್ನು ಕೇಳಿದಾಗ ಅವರು ಕೊಟ್ಟ ಉತ್ತರ ಕೇಳಿ ನನಗೆ ಆಶ್ಚರ್ಯವಾಯ್ತು. ಇವರ ರೀತಿ ಅಭಿಮಾನಿಗಳ ಬಗ್ಗೆ ಯೋಚನೆ ಮಾಡುವ ಮತ್ತೊಬ್ಬ ಸ್ಟಾರ್ ನಟನ ನಾನು ಈ ವರೆಗೆ ನೋಡಿಲ್ಲ’ ಎಂದು ಖುದ್ದು ರಜತ್ ಶರ್ಮಾ ಹೇಳಿದರು.

ಇದನ್ನೂ ಓದಿ:ಯಶ್ ‘ಟಾಕ್ಸಿಕ್’ ಚಿತ್ರದ ಅವಧಿ ಇಷ್ಟೊಂದು ದೀರ್ಘವೇ? ಫ್ಯಾನ್ಸ್​​ಗೆ ಹಬ್ಬ

ರಜತ್ ಅವರ ಪ್ರಶ್ನೆಗೆ ಕಾರ್ಯಕ್ರಮದಲ್ಲಿ ಉತ್ತರಿಸಿರುವ ಯಶ್, ‘ನಾನು ಆಗಾಗ್ಗೆ ಅಭಿಮಾನಿಗಳ ಭೇಟಿ ಮಾಡುತ್ತಿರುತ್ತೇನೆ. ಆದರೆ ನಾನು ಭೇಟಿಗೆ ಹೋಗುವಾಗಲೇ ನಿರ್ಧರಿಸಿ ಹೋಗಿರುತ್ತೇನೆ. ನಾನು ಪ್ರತಿಯೊಬ್ಬರನ್ನೂ ಭೇಟಿ ಆಗಬೇಕು ಎಂದು. ಏಕೆಂದರೆ ಅದು (ಯಶ್ ಜೊತೆ ಫೋಟೊ ತೆಗೆಸಿಕೊಳ್ಳುವುದು) ಅವರ ಪಾಲಿಗೆ ದೊಡ್ಡ ಯಶಸ್ಸು, ಜೀವನ ಪರ್ಯಂತ ಉಳಿಯಬಹುದಾದ ನೆನಪು. ಹಾಗಾಗಿ ನಾನು ಅವರೊಟ್ಟಿಗೆ ಸಿಂಗಲ್ ಆಗಿಯೇ ಫೋಟೊ ತೆಗೆಸಿಕೊಳ್ಳುತ್ತೇನೆ. ಗ್ರೂಫ್ ಫೋಟೊ ತೆಗೆಸಿಕೊಳ್ಳುವುದಿಲ್ಲ’ ಎಂದರು ಯಶ್.

ಯಶ್, ಹೀಗೆ ಹೇಳುತ್ತಿದ್ದಂತೆ, ಅಲ್ಲಿಯೇ ಸ್ಟುಡಿಯೋನಲ್ಲಿದ್ದ ಅಭಿಮಾನಿಗಳು. ‘ಇವತ್ತೂ ಕೂಡ ಸಿಂಗಲ್ ಆಗಿ ಫೋಟೊ ಕೊಡಬೇಕು’ ಎಂದರು. ಯಶ್ ಅದನ್ನು ಒಪ್ಪಿಗೆ ನೀಡಿದ್ದು ಮಾತ್ರವೇ ಅಲ್ಲದೆ, ಸಂದರ್ಶನ ಮುಗಿದ ಬಳಿಕ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲೇ ನಿಂತಿದ್ದು, ಎಲ್ಲರೊಟ್ಟಿಗೂ ಸಿಂಗಲ್ ಫೋಟೊ ತೆಗೆಸಿಕೊಂಡರು. ಎಲ್ಲರಿಗೂ ಹಸ್ತ ಲಾಘವ ಮಾಡಿ ಹಾರೈಸಿದರು. ಇದನ್ನೆಲ್ಲ ನೋಡಿ ರಜತ್ ಶರ್ಮಾ, ಮತ್ತೊಮ್ಮೆ, ‘ಇಂಥಹಾ ಸ್ಟಾರ್ ನಟನ ಈ ವರೆಗೆ ನೋಡಿರಲಿಲ್ಲ’ ಎಂದರು. ಯಶ್ ಅವರ ‘ಆಪ್​​ ಕಿ ಅದಾಲತ್’ ಕಾರ್ಯಕ್ರಮ ಇಂಡಿಯಾ ಟಿವಿಯಲ್ಲಿ ಆಗಸ್ಟ್ 15 ರಂದು ಪ್ರಸಾರ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಿಎಸ್‌ಐ ಮೇಲೆ ಪುತ್ರಿ ಕಪಾಳಮೋಕ್ಷ ಪ್ರಕರಣ: ಮಗಳ ಪರವಾಗಿ ಬಹಿರಂಗ ಕ್ಷಮೆ ಕೇಳಿದ ಶಾಸಕ ಬಿ.ಸುರೇಶ್‌ಗೌಡ – Kannada News | Srirangapatna PSI Assault: MLA Suresh Gowda Seeks Justice, End to VIP Culture

ಮಂಡ್ಯ, ಆ.14: ಶ್ರೀರಂಗಪಟ್ಟಣದ ಆರತಿ ಉಕ್ಕಡ ದೇವಸ್ಥಾನದಲ್ಲಿ ಕರ್ತವ್ಯನಿರತ ಮಹಿಳಾ ಪಿಎಸ್‌ಐ ಮೇಲೆ ಶಾಸಕರ ಪುತ್ರಿ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರು ತಮ್ಮ ಮಗಳ ಪರವಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

“ಯಾರೇ ಆಗಿರಲಿ ತಪ್ಪು ಮಾಡಿದ್ದರೆ ಕಾನೂನಿನಂತೆ ಶಿಕ್ಷೆಯಾಗಲಿ, ನಾವು ಸಾರ್ವಜನಿಕ ಜೀವನದಲ್ಲಿರುವಾಗ ತಾಳ್ಮೆ ಕಳೆದುಕೊಳ್ಳಬಾರದು” ಎಂದು ಸುರೇಶ್‌ಗೌಡ ಅವರು ಹೇಳಿದ್ದಾರೆ. “ಭೀಮನ ಅಮಾವಾಸ್ಯೆಯ ದಿನ ನನ್ನ ಮಗಳು ಚಿಕ್ಕ ಮಕ್ಕಳನ್ನು ಕರೆದುಕೊಂಡು ಆರತಿ ಉಕ್ಕಡ ದೇವಸ್ಥಾನಕ್ಕೆ ಹೋಗಿ ಸರತಿ ಸಾಲಿನಲ್ಲಿ ನಿಂತಿದ್ದಳು. ಒಳಗೆ ಬಿಡುವಂತೆ ಪಿಎಸ್‌ಐ ಅವರಿಗೆ ಕೇಳಿದಾಗ, ಅದೇ ಸಮಯದಲ್ಲಿ ಇನ್ನೊಬ್ಬರನ್ನು ಬಿಟ್ಟಿದ್ದಕ್ಕೆ ಮಾತಿಗೆ ಮಾತು ಬೆಳೆದು ವಾಗ್ವಾದವಾಗಿದೆ.” ಎಂದು ಹೇಳಿದರು.

“ನನ್ನ ಮಗಳು ಕಪಾಳಕ್ಕೆ ಹೊಡೆದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಬಹಳ ಒತ್ತಡದಲ್ಲಿರುತ್ತಾರೆ. ಸಾರ್ವಜನಿಕ ಜೀವನದಲ್ಲಿರುವ ನಾವುಗಳು ಅಹಂಕಾರ ಪಡಬಾರದು ಹಾಗೂ ತಾಳ್ಮೆ ಕಳೆದುಕೊಳ್ಳಬಾರದಿತ್ತು. ಮಗಳ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. “ಯಾರೇ ಆಗಿರಲಿ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಕಾನೂನು ಏನಿದೆ ಅದನ್ನು ನಾವು ಎದುರಿಸುತ್ತೇವೆ. ನನ್ನ ಮಗಳು ನೀಡಿದ್ದ ದೂರನ್ನು ಹಿಂಪಡೆಯಬೇಕಿತ್ತು. ನಾವು ಮತ್ತು ನಮ್ಮ ಕುಟುಂಬದವರೆಲ್ಲರೂ ದೈವಭಕ್ತರು, ಹೀಗೆ ಆಗಬಾರದಿತ್ತು.” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಡ್ಯದ ಆರತಿ ಉಕ್ಕಡದಲ್ಲಿ ಶಾಸಕ ಸುರೇಶ್‌ಗೌಡ ಪುತ್ರಿ ದರ್ಪ: ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಐಶ್ವರ್ಯ

“ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ವಿಐಪಿ ಪ್ರೋಟೋಕಾಲ್ ವ್ಯವಸ್ಥೆಯನ್ನು ತೆಗೆದುಹಾಕಬೇಕು. ದೇವರ ಮುಂದೆ ನಾವೆಲ್ಲರೂ ಸಮಾನರು. ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ, ಅನಗತ್ಯವಾಗಿ ಬೆಳೆಸಬೇಡಿ” ಎಂದು ಮಾಧ್ಯಮಗಳು ಹಾಗೂ ಸಾರ್ವಜನಿಕರಲ್ಲಿ ಶಾಸಕರು ಮನವಿ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಉಜ್ವಲ ಭವಿಷ್ಯಕ್ಕಾಗಿ ಸಾಮೂಹಿಕ ಹೊಣೆಗಾರಿಕೆ: ಸುನಿಲ್ ಅಂಬೇಕರ್ – Kannada News | Sunil Ambekar: RSS Framework for Collective Responsibility and Nation Building

ಬೆಂಗಳೂರು, ಆಗಸ್ಟ್ 14: ಆರ್‌ಎಸ್‌ಎಸ್ (RSS) ಅಖಿಲ ಭಾರತ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್, ಭಾರತವು ಕೇವಲ ಆಧುನಿಕ ರಾಷ್ಟ್ರವಲ್ಲ; ಇದು ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆ ಹಾಗೂ ಸಾಮೂಹಿಕ ಕಲ್ಯಾಣದ ತತ್ತ್ವದ ಮೇಲೆ ನಿಂತಿರುವ ಜೀವಂತ ನಾಗರಿಕತೆಯಾಗಿದೆ ಎಂದು ತಮ್ಮ ಲೇಖನವೊಂದರಲ್ಲಿ ಬರೆದುಕೊಂಡಿದ್ದಾರೆ. ಆರ್‌ಎಸ್‌ಎಸ್ ತನ್ನ ಶತಮಾನೋತ್ಸವದ ಸಂದರ್ಭದಲ್ಲಿ ಐದು ಪ್ರಮುಖ ತತ್ತ್ವಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಸುನಿಲ್ ಅಂಬೇಕರ್ ಉಲ್ಲೇಖಿಸಿದ್ದಾರೆ.

ಸಾಂಸ್ಕೃತಿಕ ಬೇರುಗಳು ಮತ್ತು ಸಾಮೂಹಿಕ ಹೊಣೆಗಾರಿಕೆ

ರಾಷ್ಟ್ರದ ಉಜ್ವಲ ಭವಿಷ್ಯ ನಿರ್ಮಾಣವು ಸಮಾಜದ ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಸುನಿಲ್ ಅಂಬೇಕರ್ ಪ್ರತಿಪಾದಿಸುತ್ತಾರೆ. ಕೇವಲ ರಾಜಕೀಯ ಪಲ್ಲಟ ಅಥವಾ ಆರ್ಥಿಕ ಬೆಳವಣಿಗೆಯಿಂದ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ; ಉನ್ನತ ನೈತಿಕ ಮೌಲ್ಯ, ಸ್ವಾರ್ಥರಹಿತ ಸೇವೆ ಮತ್ತು ಶಿಸ್ತಿನಿಂದ ಮಾತ್ರ ಬಲವಾದ ಸಮಾಜ ಕಟ್ಟಲು ಸಾಧ್ಯ ಎಂದು ಅವರು ಹೇಳುತ್ತಾರೆ. ಅಲ್ಲದೆ ಪ್ರತಿಯೊಬ್ಬರೂ ‘ಭಾರತ ಮಾತೆ’ಯ ಪುತ್ರರೆಂಬ ಭಾವನೆಯಿಂದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಸುನಿಲ್​ ಅವರ ಅಭಿಪ್ರಾಯವಾಗಿದೆ.

ಸಾಮಾಜಿಕ ಸಾಮರಸ್ಯ

ಸಮಾಜವನ್ನು ಭಾಷೆ, ಪ್ರದೇಶ, ಜಾತಿ ಅಥವಾ ರಾಜಕೀಯ ಸಿದ್ಧಾಂತಗಳ ಆಧಾರದಲ್ಲಿ ವಿಭಜಿಸುವ ‘ಗುರುತಿನ ರಾಜಕಾರಣ’ (Identity Politics) ರಾಷ್ಟ್ರೀಯ ಏಕತೆಗೆ ದೊಡ್ಡ ಸವಾಲಾಗಿದೆ ಎಂದು ಸುನಿಲ್ ಅಂಬೇಕರ್ ಎಚ್ಚರಿಸಿದ್ದಾರೆ. ನಮ್ಮಲ್ಲಿರುವ ವಿವಿಧ ಭಾಷೆಗಳು, ಬೌದ್ಧ, ಜೈನ ಹಾಗೂ ಸಿಖ್ ಪರಂಪರೆಗಳು ಒಂದಕ್ಕೊಂದು ವಿರೋಧಿಯಲ್ಲ; ಬದಲಾಗಿ ಇವೆಲ್ಲವೂ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಶ್ರೀಮಂತಗೊಳಿಸುವ ಸಹೋದರಿ ಪರಂಪರೆಗಳಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಜಾಗೃತಿಗೆ ‘ಪಂಚ ಪ್ರಾಣ’

1. ಸಾಮಾಜಿಕ ಸಾಮರಸ್ಯ: ಸಮಾಜದಲ್ಲಿ ಸಮಾನತೆ ಮತ್ತು ಒಗ್ಗಟ್ಟು ಮೂಡಿಸುವುದು.
2. ಪರಿಸರ ಸ್ನೇಹಿ ಜೀವನ: ಪ್ರಕೃತಿಯನ್ನು ರಕ್ಷಿಸುವ ಜೀವನಶೈಲಿ ಅಳವಡಿಕೆ.
3. ಕುಟುಂಬ ಪ್ರಬೋಧನ: ಕುಟುಂಬ ವ್ಯವಸ್ಥೆ ಹಾಗೂ ನೈತಿಕ ಮೌಲ್ಯಗಳ ಬಲವರ್ಧನೆ.
4. ಸ್ವದೇಶಿ ಮತ್ತು ಸ್ವಾವಲಂಬನೆ: ಸ್ಥಳೀಯ ಉತ್ಪನ್ನ ಹಾಗೂ ಚಿಂತನೆಗಳಿಗೆ ಆದ್ಯತೆ.
5. ನಾಗರಿಕ ಕರ್ತವ್ಯ: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮೂಲಭೂತ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸುವುದು.

ಅಂತಿಮವಾಗಿ, ‘ಶಾಖಾ’ಗಳ ಮೂಲಕ ವ್ಯಕ್ತಿ ನಿರ್ಮಾಣ ಮಾಡುವುದು ಹಾಗೂ ಯುವಜನತೆಯ ಶಕ್ತಿಯನ್ನು ರಾಷ್ಟ್ರ ಕಾರ್ಯಕ್ಕೆ ಜೋಡಿಸುವುದು ಭಾರತವನ್ನು ಸಶಕ್ತಗೊಳಿಸಲು ಅತ್ಯಗತ್ಯ ಎಂದು ಸುನಿಲ್ ಅಂಬೇಕರ್ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vidura Niti: ಜೀವನದಲ್ಲಿ ಈ 5 ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ!

ಹಲವು ಬಾರಿ ನಾವು ನಮ್ಮ ವೈಯಕ್ತಿಕ ವಿಷಯಗಳನ್ನು ಇತರರೊಂದಿಗೆ ಹಂಚಿಕೊಂಡು ಬಿಡುತ್ತೇವೆ. ಆದರೆ ನಂತರದ ದಿನಗಳಲ್ಲಿ ಅದರಿಂದಲೇ ದೊಡ್ಡ ಮಟ್ಟದ ನಷ್ಟ ಅಥವಾ ಪಶ್ಚಾತ್ತಾಪ ಅನುಭವಿಸಬೇಕಾಗುತ್ತದೆ. ಮಹಾಭಾರತದಲ್ಲಿ ವಿವರಿಸಲಾದ ವಿದುರ ನೀತಿಯು ಮಾನವ ಜೀವನಕ್ಕೆ ಅತ್ಯಂತ ಪ್ರಾಯೋಗಿಕ ಹಾಗೂ ಮೌಲ್ಯಯುತ ಮಾರ್ಗದರ್ಶನ ನೀಡುತ್ತದೆ. ವಿದುರ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ತಾನು ಸುರಕ್ಷಿತವಾಗಿರಲು ಮತ್ತು ಜೀವನದಲ್ಲಿ ಯಶಸ್ಸು ಕಾಣಲು ಕೆಲವು ವಿಷಯಗಳನ್ನು ಎಂದಿಗೂ ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು. ಇಂದಿನ ಆಧುನಿಕ ಯುಗದಲ್ಲೂ ಜಾಗರೂಕರಾಗಿರಲು ಮತ್ತು ನಮ್ಮ ಖಾಸಗಿ ಜೀವನವನ್ನು ರಕ್ಷಿಸಿಕೊಳ್ಳಲು ನೆರವಾಗುವ ಆ 5 ರಹಸ್ಯ ವಿಷಯಗಳು ಇಲ್ಲಿವೆ.

ನಿಮ್ಮ ಆದಾಯ ಮತ್ತು ಸಂಪತ್ತಿನ ವಿವರಗಳು:

ವಿದುರ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಗಳಿಕೆ, ಉಳಿತಾಯ ಮತ್ತು ಒಟ್ಟು ಸಂಪತ್ತನ್ನು ಅನಗತ್ಯವಾಗಿ ಇತರರ ಮುಂದೆ ಪ್ರದರ್ಶಿಸಬಾರದು. ನಿಮ್ಮ ಆರ್ಥಿಕ ಸ್ಥಿತಿಯನ್ನು ಎಲ್ಲರಿಗೂ ಬಹಿರಂಗಪಡಿಸಿದಾಗ, ಅದು ಸುತ್ತಮುತ್ತಲಿನವರಲ್ಲಿ ಅಸೂಯೆ ಮತ್ತು ದುರಾಸೆಯನ್ನು ಹುಟ್ಟುಹಾಕಬಹುದು. ನಿಮ್ಮ ಪ್ರಗತಿಯನ್ನು ಕಂಡು ಸಂತೋಷಪಡುವ ಬದಲು, ಕೆಲವರು ನಿಮ್ಮ ಹಣದ ದುರ್ಲಾಭ ಪಡೆಯಲು ಯತ್ನಿಸಬಹುದು. ಆದ್ದರಿಂದ, ನಿಮ್ಮ ಆರ್ಥಿಕ ಪರಿಸ್ಥಿತಿಯ ವಿಷಯದಲ್ಲಿ ಯಾವಾಗಲೂ ಸಂಯಮ ಮತ್ತು ಗೌಪ್ಯತೆಯನ್ನು ಕಾಯ್ದುಕೊಳ್ಳುವುದು ಬುದ್ಧಿವಂತಿಕೆ.

ನಿಮ್ಮ ವೈಯಕ್ತಿಕ ದೌರ್ಬಲ್ಯಗಳು:

ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಭಾವನಾತ್ಮಕ, ಮಾನಸಿಕ ಅಥವಾ ವೈಯಕ್ತಿಕ ದೌರ್ಬಲ್ಯಗಳಿರುತ್ತವೆ. ಇವುಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದು ತೀರಾ ಅಪಾಯಕಾರಿ. ತಪ್ಪು ವ್ಯಕ್ತಿಯ ಕೈಗೆ ನಿಮ್ಮ ದೌರ್ಬಲ್ಯದ ಸುಳಿವು ಸಿಕ್ಕರೆ, ಭವಿಷ್ಯದಲ್ಲಿ ಅವರು ಅದನ್ನು ನಿಮ್ಮ ವಿರುದ್ಧವೇ ಅಸ್ತ್ರವಾಗಿ ಬಳಸಿ ನಿಮಗೆ ಕಿರುಕುಳ ನೀಡಬಹುದು. ಹಾಗಾಗಿ, ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳ ಬಳಿಯೂ ನಿಮ್ಮ ಬಲಹೀನತೆಗಳನ್ನು ಹಂಚಿಕೊಳ್ಳುವಾಗ ನೂರು ಬಾರಿ ಯೋಚಿಸುವುದು ಒಳಿತು.

ಕೌಟುಂಬಿಕ ಕಲಹ, ದ್ರೋಹ ಮತ್ತು ಅವಮಾನಗಳು:

ಜೀವನದ ಪಯಣದಲ್ಲಿ ಪ್ರತಿಯೊಬ್ಬರೂ ಯಾವುದೋ ಒಂದು ಹಂತದಲ್ಲಿ ಅವಮಾನ, ದ್ರೋಹ ಅಥವಾ ಕುಟುಂಬದ ಕಲಹಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಖಾಸಗಿ ಘಟನೆಗಳನ್ನು ಪ್ರತಿಯೊಬ್ಬರೊಂದಿಗೂ ಹಂಚಿಕೊಳ್ಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಬದಲಿಗೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಸಾಮಾಜಿಕವಾಗಿ ನಿಮ್ಮ ಮತ್ತು ನಿಮ್ಮ ಕುಟುಂಬದ ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ, ಮನೆಯ ಸಮಸ್ಯೆಯನ್ನು ಮನೆಯೊಳಗೇ ತಿಳುವಳಿಕೆ ಮತ್ತು ತಾಳ್ಮೆಯಿಂದ ಬಗೆಹರಿಸಿಕೊಳ್ಳಬೇಕು. ಅಗತ್ಯವಿದ್ದರೆ ಮಾತ್ರ ತೀರಾ ಆಪ್ತ ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಪಡೆಯಬಹುದು.

ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು

ಭವಿಷ್ಯದ ಯೋಜನೆಗಳು ಮತ್ತು ರಹಸ್ಯ ತಂತ್ರಗಳು:

ಯಾವುದೇ ಒಂದು ಪ್ರಮುಖ ಕೆಲಸ ಅಥವಾ ಬಿಸಿನೆಸ್ ಯೋಜನೆ ಪೂರ್ಣಗೊಳ್ಳುವ ಮುನ್ನವೇ ಅದನ್ನು ಎಲ್ಲರ ಮುಂದೆ ಹೇಳಿಕೊಳ್ಳುವುದು ಮೂರ್ಖತನ ಎನಿಸಿಕೊಳ್ಳುತ್ತದೆ. ನಿಮ್ಮ ಯೋಜನೆಗಳು ಸ್ಪರ್ಧಿಗಳು ಅಥವಾ ವಿರೋಧಿಗಳಿಗೆ ತಲುಪಿದರೆ, ಅವರು ಅದನ್ನು ಹಾಳುಮಾಡಲು ಯತ್ನಿಸಬಹುದು. ಆದ್ದರಿಂದ, ಸರಿಯಾದ ಸಮಯ ಬರುವವರೆಗೆ ನಿಮ್ಮ ಗುರಿಗಳು ಮತ್ತು ತಂತ್ರಗಳನ್ನು ಅತ್ಯಂತ ಗೌಪ್ಯವಾಗಿಡಿ. ಮಾತಿಗಿಂತ ಕೃತಿಯೇ ಹೆಚ್ಚಾಗಿ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತದೆ ಎಂಬುದನ್ನು ಮರೆಯಬಾರದು.

ದಾನ ಧರ್ಮ ಮತ್ತು ಸತ್ಕಾರ್ಯಗಳ ಪ್ರದರ್ಶನ:

ನಮ್ಮ ಭಾರತೀಯ ಸನಾತನ ಸಂಪ್ರದಾಯವು ದಾನ ಮತ್ತು ಒಳ್ಳೆಯ ಕಾರ್ಯಗಳನ್ನು ನಿಸ್ವಾರ್ಥ ಭಾವನೆಯಿಂದ ಮಾಡಬೇಕೆಂದು ಕಲಿಸುತ್ತದೆ. ನೀವು ಮಾಡಿದ ದೇಣಿಗೆ ಅಥವಾ ಸಹಾಯವನ್ನು ಪದೇ ಪದೇ ಪ್ರಚಾರ ಮಾಡಿಕೊಳ್ಳುವುದರಿಂದ ಅಹಂಕಾರ ಮತ್ತು ಆಡಂಬರದ ಭಾವನೆ ಹೆಚ್ಚಾಗುತ್ತದೆ. ಅಗತ್ಯವಿರುವವರಿಗೆ ಸಹಾಯ ಮಾಡುವುದು ಸೇವೆಯಾಗಬೇಕೇ ಹೊರತು, ಪ್ರಚಾರದ ವಸ್ತುವಾಗಬಾರದು. ಸತ್ಕಾರ್ಯಗಳನ್ನು ರಹಸ್ಯವಾಗಿ ಮಾಡಿದಾಗಷ್ಟೇ ಅದಕ್ಕೆ ನೈಜ ಮೌಲ್ಯ ಸಿಗುತ್ತದೆ.

ಭಾವನೆಗಳಿಗೆ ಒಳಗಾಗಿ ನಮ್ಮ ರಹಸ್ಯಗಳನ್ನು ಬಿಟ್ಟುಕೊಡುವುದು ನಮಗೆ ನಾವೇ ಮಾಡಿಕೊಳ್ಳುವ ದ್ರೋಹ. ವಿದುರ ನೀತಿಯ ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅನೇಕ ಅನಗತ್ಯ ತೊಂದರೆಗಳಿಂದ ಮುಕ್ತಿ ಪಡೆಯಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version