ಹೊಳೆ ಹರಿವ ದಿಕ್ಕನ್ನೇ ಬದಲಾಯಿಸಿದ ಹೂಳು: ಪಿನಾಕಿನಿ ತೀರದ ನಿವಾಸಿಗಳಿಗೆ ತಪ್ಪದ ಗೋಳು! – Kannada News

ಉಡುಪಿ, ಜೂನ್​​ 04 : ಜಿಲ್ಲೆಯ ಕೋಟೆ ಮತ್ತು ಮಟ್ಟು ಭಾಗದ ಜನರಿಗೆ ಜೀವನಾಡಿಯಾಗಿದ್ದ ಪಿನಾಕಿನಿ ಹೊಳೆಯೇ ಈಗ ಇಲ್ಲಿನ ನಿವಾಸಿಗಳಿಗೆ ಜೀವಭಯ ಹುಟ್ಟಿಸಿದೆ. ಹೊಳೆಯ ಮಧ್ಯದಲ್ಲಿ ಹೂಳು ತುಂಬಿ ಹರಿವಿನ ದಿಕ್ಕೇ ಬದಲಾಗಿರುವ ಪರಿಣಾಮ ತೀರ ಪ್ರದೇಶಗಳಲ್ಲಿ ಭೂ ಕೊರೆತ ಉಂಟಾಗುತ್ತಿದ್ದು ಕೃಷಿ ಜಮೀನು ಹೊಳೆ ಪಾಲಾಗುತ್ತಿವೆ. ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈಗಲೇ ಹೀಗಾದರೆ ಮಳೆಗಾಲ ಎದುರಿಸೋದು ಹೇಗೆಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ಹೆಚ್ಚಿದ ಭೂ ಕೊರೆತ

ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರೆಂಕುದ್ರು ಮತ್ತು ಮಟ್ಟು ಕಟ್ಟದ ನಿವಾಸಿಗಳ ಪ್ರಕಾರ, ಹೊಳೆಯ ಮಧ್ಯಭಾಗದಲ್ಲಿ ವರ್ಷಗಳಿಂದ ಹೂಳು ತುಂಬಿರುವುದೇ ಇಂದಿನ ಸಮಸ್ಯೆಗೆ ಪ್ರಮುಖ ಕಾರಣ. ಹೂಳಿನ ಪರಿಣಾಮ ಹೊಳೆಯ ಹರಿವಿನ ದಿಕ್ಕು ಬದಲಾಗಿದ್ದು, ನೀರು ನೇರವಾಗಿ ಭೂ ಪ್ರದೇಶದತ್ತ ನುಗ್ಗಿ ತೀರ ಪ್ರದೇಶದ ಭೂ ಕೊರೆತಕ್ಕೆ ಕಾರಣವಾಗುತ್ತಿದೆ. ಮೊದಲು ಅಡಿ ಲೆಕ್ಕದಲ್ಲಿ ಆಗುತ್ತಿದ್ದ ಭೂ ಕೊರೆತ ಇದೀಗ ಮೀಟರ್‌ಗಟ್ಟಲೆ ದೂರಕ್ಕೆ ಹೆಚ್ಚಿದೆ ಎನ್ನುವುದು ಸ್ಥಳೀಯರ ಅಳಲು. ಈಗಾಗಲೇ ಸುಮಾರು 10ರಿಂದ 15 ಮೀಟರ್‌ಗೂ ಅಧಿಕ ಭೂ ಪ್ರದೇಶ ಹೊಳೆ ಪಾಲಾಗಿದೆ. ನೂರಾರು ಫಲಭರಿತ ತೆಂಗಿನ ಮರಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಉಳಿದ ಜಮೀನಿನಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಈ ಬಾರಿಯ ಮಳೆಗಾಲ ಮತ್ತಷ್ಟು ಭಯ ಹುಟ್ಟಿಸಿದೆ.

ಇದನ್ನೂ ಓದಿ: ಮೃತರನ್ನೂ ಬಿಡದ ಕಳ್ಳರು; ಮಹಿಳೆ ಮೈಮೇಲಿದ್ದ 18 ಗ್ರಾಂ ಚಿನ್ನಾಭರಣಗಳು ಕಳವು

ಇದೊಂದೇ ಸಮಸ್ಯೆಯಲ್ಲ, ಉಬ್ಬರದ ವೇಳೆಯಲ್ಲಿ ಸಮುದ್ರದ ಉಪ್ಪು ನೀರು ಪಿನಾಕಿನಿ ಹೊಳೆಗೆ ನುಗ್ಗಿ ಸುತ್ತಮುತ್ತಲಿನ ಬಾವಿ ನೀರನ್ನೂ ಉಪ್ಪಾಗಿಸುತ್ತಿದೆ. ಇನ್ನು ಗ್ರಾಮ ಪಂಚಾಯತ್‌ನಿಂದ ಸಮರ್ಪಕವಾಗಿ ನಲ್ಲಿ ನೀರಿನ ಸೌಲಭ್ಯವೂ ಸಿಗುತ್ತಿಲ್ಲ ಎನ್ನುವುದು ನಿವಾಸಿಗಳ ಆರೋಪ. ಪ್ರವಾಹದ ಸಂದರ್ಭ ವಿಷಜಂತುಗಳು ಮನೆಗಳಿಗೆ ನುಗ್ಗುತ್ತಿರುವುದು ಕೂಡ ಮತ್ತೊಂದು ಸಂಕಷ್ಟವಾಗಿ ಪರಿಣಮಿಸಿದೆ. ಹೀಗಾಗಿ ಪಿನಾಕಿನಿ ಹೊಳೆಯ ಮಧ್ಯದಲ್ಲಿ ತುಂಬಿರುವ ಹೂಳು ತೆರವುಗೊಳಿಸಿ, ತೀರ ಪ್ರದೇಶದ ಭೂಮಿ ರಕ್ಷಣೆಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಭೂ ಪ್ರದೇಶ ಹೊಳೆ ಪಾಲಾಗುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪರೀಕ್ಷೆಗೆ ಹಾಜರಾಗದೆ ಜರ್ಮನ್ ಭಾಷಾ ಪ್ರಮಾಣಪತ್ರ ಪಡೆಯಲು ಹೋಗಿ ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ! – Kannada News

ಬೆಂಗಳೂರು, ಜೂನ್​​ 04: ಪರೀಕ್ಷೆಗೆ ಹಾಜರಾಗದೆ ಜರ್ಮನ್ ಭಾಷಾ ಪ್ರಮಾಣಪತ್ರ ಪಡೆಯಲು ಹೋಗಿ ಬೆಂಗಳೂರಿನ (Bengaluru) ಖಾಸಗಿ ಆಸ್ಪತ್ರೆಯ ಉದ್ಯೋಗಿಯೋರ್ವರು ಬರೋಬ್ಬರಿ 3.67 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಸೈಬರ್​​ ವಂಚಕರ ಬಣ್ಣದ ಮಾತುಗಳಿಗೆ ಮರುಳಾದ ಬೆಂಗಳೂರಿನ ಖ್ಯಾತ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ 34 ವರ್ಷದ ಪಶ್ಚಿಮ ಬಂಗಾಳ ಮೂಲದ ಈ ವ್ಯಕ್ತಿ ವಂಚನೆಗೆ ಒಳಗಾಗಿದ್ದಾರೆ.

ವಂಚನೆ ನಡೆದಿದ್ದು ಹೇಗೆ?

ಜರ್ಮನ್ ಭಾಷೆಯ ಬಿ1 (B1) ಹಂತದ ಕೋರ್ಸ್ ಪೂರ್ಣಗೊಳಿಸಿದ್ದ ಅವರು ಜರ್ಮನಿಗೆ ತೆರಳುವ ಅವಕಾಶಗಳಿಗಾಗಿ ಹುಡುಕುತ್ತಿದ್ದರು. ಈ ವೇಳೆ ಪರೀಕ್ಷೆ ಬರೆಯದೇ ಜರ್ಮನ್ ಭಾಷಾ ಪ್ರಮಾಣಪತ್ರ ನೀಡುವುದಾಗಿ ಹೇಳಿದ್ದ ಫೇಸ್‌ಬುಕ್ ಜಾಹೀರಾತು ಅವರ ಗಮನ ಸೆಳೆದಿದೆ. ಆ ಆಮಿಷಕ್ಕೆ ಒಳಗಾಗಿ ಜಾಹೀರಾತುದಾರರನ್ನು ಸಂಪರ್ಕಿಸಿದ ಅವರು, ಬಳಿಕ ವಾಟ್ಸ್ಆಪ್ ಮೂಲಕ ವಂಚಕರ ಸಂಪರ್ಕಕ್ಕೆ ಬಂದಿದ್ದಾರೆ. ಪ್ರಮಾಣಪತ್ರ ಪಡೆಯಲು 700 ಯೂರೋಗಳ ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕೆಂದು ವಂಚಕರು ನಂಬಿಸಿದ್ದು, ಹಂತ ಹಂತವಾಗಿ ಸಂತ್ರಸ್ತ ವ್ಯಕ್ತಿ ಹಣ ವರ್ಗಾಯಿಸಿದ್ದರು. ಹೀಗಿದ್ದರೂ ಪ್ರಮಾಣಪತ್ರ ನೀಡುವ ಬದಲು ಮತ್ತಷ್ಟು ಹಣದ ಬೇಡಿಕೆ ಇಟ್ಟಾಗ ಅನುಮಾನಗೊಂಡ ಅವರು ತಾವು ವಂಚನೆಗೆ ಒಳಗಾಗಿರುವುದನ್ನು ಅರಿತು ಜೆ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಆನ್‌ಲೈನ್ ಜೂಜಿಗೆ ಬಿತ್ತು ಬ್ರೇಕ್; 127 ಹೋಸ್ಟಿಂಗ್ ಏಜೆನ್ಸಿಗಳ ಸಹಾಯ ಕೋರಿದ ಕರ್ನಾಟಕ ಸೈಬರ್ ಪೊಲೀಸರು!

ತಾನು ಜರ್ಮನ್ ಭಾಷೆಯ ಬಿ1 ಹಂತದ ಕೋರ್ಸ್ ಪೂರ್ಣಗೊಳಿಸಿದ್ದೆ ಮತ್ತು ಜರ್ಮನಿಗೆ ತೆರಳಲು ಅವಕಾಶಗಳಿಗಾಗಿ ಹುಡುಕುತ್ತಿದ್ದೆ. ಈ ವೇಳೆ ಮಹಿಳೆಯೊಬ್ಬರು ಸೇರಿದಂತೆ ನಾಲ್ವರು ಭಾರತೀಯ ಹಾಗೂ ಜರ್ಮನ್ ಸಿಮ್ ಕಾರ್ಡ್‌ಗಳನ್ನು ಬಳಸಿ ವಾಟ್ಸ್ಆಪ್ ಮೂಲಕ ಸಂಪರ್ಕಿಸಿದ್ದರು. ಪ್ರಕ್ರಿಯೆ ಸಂಪೂರ್ಣವಾಗಿ ನೈಜವಾಗಿದೆ ಎಂದು ಪದೇ ಪದೇ ಭರವಸೆ ನೀಡಿದ್ದರು. ಅವರು ತನ್ನನ್ನು ಇನ್‌ಸ್ಟಾಗ್ರಾಂ ಗುಂಪುಗಳಿಗೂ ಸೇರಿಸಿದ್ದರು. ಅಲ್ಲಿ ಹಲವರು ಪ್ರಮಾಣಪತ್ರ ಪಡೆದಿರುವುದಾಗಿ ಸಕಾರಾತ್ಮಕ ಪ್ರತಿಕ್ರಿಯೆ ಹಂಚಿಕೊಂಡಿದ್ದರು. ಅವರೊಂದಿಗೆ ಮಾತನಾಡಿದ ಬಳಿಕ ಆ ಆಫರ್ ನಿಜವೆಂದು ನಂಬಿದ್ದೆ. ಜರ್ಮನಿಯಲ್ಲಿ ಉತ್ತಮ ಉದ್ಯೋಗಾವಕಾಶಗಳಿಗಾಗಿ ನನಗೆ ಬಿ2 (B2) ಪ್ರಮಾಣಪತ್ರದ ಅಗತ್ಯವಿತ್ತು. ಮೊದಲು ದೊಡ್ಡ ಮೊತ್ತದ ಹಣ ಕೇಳಿದ್ದರೂ, ನಂತರ ಸಣ್ಣ ಸಣ್ಣ ಕಂತುಗಳಲ್ಲಿ ಪಾವತಿಸಲು ವಂಚಕರು ಒಪ್ಪಿಕೊಂಡಿದ್ದರು ಎಂದು ಸಂತ್ರಸ್ತ ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಹಾರದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, 3ಕ್ಕೂ ಅಧಿಕ ಮಂದಿ ಸಾವು – Kannada News

ಮುಜಫರ್‌ಪುರ, ಜೂನ್ 4: ಬಿಹಾರದ ಪ್ರಸಾದ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ಇಂದು ಅಗ್ನಿ ಅವಘಡ(Fire Accident) ಸಂಭವಿಸಿದ್ದು, ಮೂರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಸ್ಪತ್ರೆಯೊಳಗೆ ದಟ್ಟ ಹೊಗೆ ಮತ್ತು ಬೆಂಕಿಯ ನಡುವೆ ಸಿಲುಕಿದ್ದ 20 ಕ್ಕೂ ಹೆಚ್ಚು ರೋಗಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.
ಹಲವು ರೋಗಿಗಳನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಧಿಕಾರಿಗಳು ಪ್ರಸ್ತುತ ಸ್ಥಿತಿ ಮತ್ತು ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿಶಾಮಕ ಅಧಿಕಾರಿ ಆರ್.ಎನ್. ಪಾಂಡೆ ನೇತೃತ್ವದ ತಂಡ ಕಾರ್ಯಪ್ರವೃತ್ತವಾಯಿತು. ಸ್ಥಳಕ್ಕೆ ಧಾವಿಸಿದ 12 ಅಗ್ನಿಶಾಮಕ ವಾಹನಗಳು ದಟ್ಟ ಮತ್ತು ವಿಷಕಾರಿ ಹೊಗೆಯನ್ನು ಸೀಳಿಕೊಂಡು ಅತ್ಯಂತ ವ್ಯವಸ್ಥಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ರಕ್ಷಣಾ ಮತ್ತು ಪರಿಹಾರ ತಂಡಗಳು ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದವು.

ಅವಘಡದ ತೀವ್ರತೆಯನ್ನು ಅರಿತು ಜಿಲ್ಲಾಧಿಕಾರಿ (DM) ಸುಬ್ರತ್ ಕುಮಾರ್ ಸೇನ್ ಹಾಗೂ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (SSP) ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ತಕ್ಷಣವೇ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯ ನೇರ ಮೇಲ್ವಿಚಾರಣೆ ವಹಿಸಿಕೊಂಡಿತು.

ಮತ್ತಷ್ಟು ಓದಿ: ದೆಹಲಿಯ ಹೋಟೆಲ್​ನಲ್ಲಿ ಅಗ್ನಿ ಅವಘಡ, 20 ಮಂದಿ ಸಾವು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ ಜನ

ಸಿವಿಲ್ ಸರ್ಜನ್ ಅವರು ಕೂಡ ಸ್ಥಳದಲ್ಲೇ ಮೊಕ್ಕಾಂ ಹೂಡಿ, ರಕ್ಷಿಸಲಾದ ರೋಗಿಗಳಿಗೆ ತಕ್ಷಣದ ತುರ್ತು ಚಿಕಿತ್ಸೆ ಸಿಗುವಂತೆ ನೋಡಿಕೊಂಡರು. ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಸುಸಜ್ಜಿತ ಆಂಬ್ಯುಲೆನ್ಸ್‌ಗಳ ಮೂಲಕ ಹತ್ತಿರದ ಪ್ರಮುಖ ಆಸ್ಪತ್ರೆಗಳಿಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದ್ದು, ಅವರಿಗೆ ಉತ್ತಮ ವೈದ್ಯಕೀಯ ನೆರವು ನೀಡಲಾಗುತ್ತಿದೆ.
ಆಸ್ಪತ್ರೆಯಲ್ಲಿದ್ದ ಪ್ರತಿಯೊಬ್ಬ ರೋಗಿಯ ಪ್ರಸ್ತುತ ಸ್ಥಿತಿ ಮತ್ತು ಅವರ ಸುರಕ್ಷಿತ ಸ್ಥಳದ ಮಾಹಿತಿಯನ್ನು ಅವರ ಸಂಬಂಧಿಕರಿಗೆ ತಲುಪಿಸಲು ಜಿಲ್ಲಾಧಿಕಾರಿಗಳು ವಿಶೇಷ ತಂಡವನ್ನು ನಿಯೋಜಿಸಿದ್ದಾರೆ.

ಈ ದುರದೃಷ್ಟಕರ ಘಟನೆಯಲ್ಲಿ ಹೊಗೆಯಿಂದ ಉಸಿರುಗಟ್ಟಿ ಐಸಿಯುನಲ್ಲಿದ್ದ ಮೂವರು ರೋಗಿಗಳು ಸೇರಿದಂತೆ ಹಲವು ಮಂದಿ ಪ್ರಾಣ ಕಳೆದುಕೊಂಡಿರುವುದು ತೀವ್ರ ಕಳವಳಕಾರಿಯಾಗಿದ್ದರೂ, ಅಗ್ನಿಶಾಮಕ ದಳ ಮತ್ತು ಸ್ಥಳೀಯ ರಕ್ಷಣಾ ತಂಡಗಳು ತೋರಿದ ಸಮಯಪ್ರಜ್ಞೆಯಿಂದಾಗಿ 20 ಕ್ಕೂ ಹೆಚ್ಚು ಅಮೂಲ್ಯ ಜೀವಗಳು ಪಾರಾಗಿವೆ.

ಆಸ್ಪತ್ರೆ ಸಿಬ್ಬಂದಿಗಳ ಗೈರು ನಡುವೆಯೂ ಅಧಿಕಾರಿಗಳು ರೋಗಿಗಳ ಕುಟುಂಬಗಳಿಗೆ ಧೈರ್ಯ ತುಂಬಿದ್ದು, ಸಂಪೂರ್ಣ ಪಾರದರ್ಶಕ ತನಿಖೆಗೆ ಆದೇಶಿಸಿದ್ದಾರೆ. ಸದ್ಯ ಆಸ್ಪತ್ರೆ ಆವರಣದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಸಂಪೂರ್ಣ ಹತೋಟಿಯಲ್ಲಿದೆ. ಜೂನ್ 3ರಂದು ದೆಹಲಿಯ ಮಾಳವೀಯ ನಗರದ ಹೋಟೆಲ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು, 20 ಮಂದಿ ಪ್ರಾಣ ಕಳೆದುಕೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಟ ಸೂರ್ಯ ಎಸ್‌ಜೆ ಸಿನಿಮಾ ಸೆಟ್​​​ನಲ್ಲಿ ಅವಘಡ; ಓರ್ವ ಸಾವು – Kannada News

ತಮಿಳಿನ ಖ್ಯಾತ ನಟ ಎಸ್‌ಜೆ ಸೂರ್ಯ (SJ Surya) ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಕಿಲ್ಲರ್’ ಸಿನಿಮಾದ ಚಿತ್ರೀಕರಣದ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಶೂಟಿಂಗ್ ಸೆಟ್‌ನಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಚಿತ್ರತಂಡದ 26 ವರ್ಷದ ಯುವ ತಂತ್ರಜ್ಞರೊಬ್ಬರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದ ಮೇಲೆ ಚೆನ್ನೈ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಚೆನ್ನೈನ ಪ್ರಸಿದ್ಧ ಬಿನ್ನಿ ಮಿಲ್ಸ್‌ನಲ್ಲಿ ‘ಕಿಲ್ಲರ್’ ಸಿನಿಮಾದ ಸೆಟ್ ಹಾಕಿ ಶೂಟಿಂಗ್ ಮಾಡಲಾಗುತ್ತಿತ್ತು. ಮುಂಜಾನೆಯ ವೇಳೆಯಲ್ಲಿ ಚಿತ್ರದ ಪ್ರಮುಖ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸಲು ತಂಡ ಸಜ್ಜಾಗಿತ್ತು. ಈ ಆ್ಯಕ್ಷನ್ ಸೀನ್‌ಗಾಗಿ ವಿಶೇಷ ಎಫೆಕ್ಟ್ಸ್ ನೀಡಲು ಗ್ಯಾಸ್ ಸಿಲಿಂಡರ್‌ಗಳನ್ನು ಬಳಸಲಾಗುತ್ತಿತ್ತು. ಆದರೆ, ಹಠಾತ್ ಆಗಿ ಸಿಲಿಂಡರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ದೊಡ್ಡ ಮಟ್ಟದಲ್ಲಿ ಸ್ಫೋಟ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ತಂತ್ರಜ್ಞರು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಎಚ್ಚೆತ್ತ ಚಿತ್ರತಂಡ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಿಸಿತು. ಆದರೆ, ದುರದೃಷ್ಟವಶಾತ್ ಮದನ್ ಎಂಬುವವರು ತೀವ್ರ ರಕ್ತಸ್ರಾವ ಹಾಗೂ ಗಾಯಗಳಿಂದಾಗಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಳಿದ ಮೂವರು ತಂತ್ರಜ್ಞರಾದ ಶಕ್ತಿವೇಲ್, ಸೂರ್ಯ ಮತ್ತು ದಿನಕರನ್ ಅವರಿಗೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ದುರಂತದ ಬೆನ್ನಲ್ಲೇ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಷ್ಟು ದೊಡ್ಡ ಆ್ಯಕ್ಷನ್ ದೃಶ್ಯವನ್ನು ಚಿತ್ರೀಕರಿಸುವ ಮುನ್ನ ಚಿತ್ರತಂಡ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ತನಿಖೆ ಆರಂಭವಾಗಿದೆ. ಈ ಭೀಕರ ಸ್ಫೋಟಕ್ಕೆ ಕೇವಲ ತಾಂತ್ರಿಕ ದೋಷ ಕಾರಣವೇ ಅಥವಾ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವೇ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಚಿತ್ರೀಕರಣದ ಸ್ಥಳದಲ್ಲಿದ್ದ ಇತರ ತಂತ್ರಜ್ಞರು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಾರ್ತಿಕ್ ಸುಬ್ಬರಾಜು ಜೊತೆ ಕೈ ಜೋಡಿಸಿದ ಸೂರ್ಯ

ಪ್ರಕರಣದ ಪ್ರಾಥಮಿಕ ತನಿಖೆಯ ಬಳಿಕ ಚೆನ್ನೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸೆಟ್‌ಗೆ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡಿದ್ದ ವೆಂಡರ್ ರಾಮು ಹಾಗೂ ಸಿಲಿಂಡರ್‌ಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೇಲ್ವಿಚಾರಕ ಆರ್ಮುಗಂ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಶಸ್ವಿ ವಿದ್ಯಾರ್ಥಿಯಾಗಬೇಕೇ?: ಅದೃಷ್ಟ ಮಾತ್ರ ಸಾಲದು, ಈ 5 ಗುಣಗಳನ್ನು ಇಂದೇ ರೂಢಿಸಿಕೊಳ್ಳಿ!

ಬೆಂಗಳೂರು, ಜೂ.4: ಪ್ರತಿಯೊಬ್ಬರ ಜೀವನದಲ್ಲಿ ವಿದ್ಯಾರ್ಥಿ ಜೀವನವು ಅತ್ಯಂತ ಮಹತ್ವದ ಹಂತವಾಗಿದೆ. ಈ ಅವಧಿಯಲ್ಲಿ ರೂಢಿಸಿಕೊಳ್ಳುವ ಅಭ್ಯಾಸಗಳು ಭವಿಷ್ಯವನ್ನು ರೂಪಿಸುತ್ತವೆ. ಯಶಸ್ವಿ ವಿದ್ಯಾರ್ಥಿಯಾಗಲು ಕೇವಲ ಅದೃಷ್ಟವಷ್ಟೇ ಸಾಲದು. ಶಿಸ್ತು, ಸಂಯಮ, ತಾಳ್ಮೆ, ಸಹನೆ ಮತ್ತು ಆಲೋಚನಾ ಶಕ್ತಿಗಳನ್ನು ಬೆಳೆಸಿಕೊಳ್ಳುವುದು ಅನಿವಾರ್ಯ. ಉದಾಸೀನತೆ ಹಾಗೂ ನಿರ್ಲಕ್ಷ್ಯ ಸ್ವಭಾವಗಳು ಯಶಸ್ಸಿಗೆ ಅಡ್ಡಿಯಾಗುತ್ತವೆ. ವಿದ್ಯಾದದಾತಿ ವಿನಯಂ ಎಂಬಂತೆ, ವಿದ್ಯೆಯು ವಿನಯವನ್ನು ನೀಡುತ್ತದೆ. ವಿನಯವು ಅರ್ಹತೆಯನ್ನು, ಅರ್ಹತೆಯು ಸಂಪತ್ತನ್ನು ಮತ್ತು ಸಂಪತ್ತು ಸುಖಮಯ ಜೀವನವನ್ನು ತರುತ್ತದೆ. ಆದರ್ಶ ವಿದ್ಯಾರ್ಥಿಯು ಸೂರ್ಯೋದಯಕ್ಕೆ ಮುನ್ನ ಏಳಬೇಕು, ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು ಮತ್ತು ಸಮತೋಲಿತ ಆಹಾರ ಸೇವಿಸಬೇಕು. ಬಾಲ್ಯದಿಂದಲೇ ಪೋಷಕರು ಮತ್ತು ಶಿಕ್ಷಕರು ಉತ್ತಮ ಸಂಸ್ಕಾರಗಳನ್ನು ಕಲಿಸುವುದು ಮುಖ್ಯ. ಜ್ಞಾನ ಸಂಪಾದನೆಗೆ ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುವುದು ಯಶಸ್ಸಿಗೆ ದಾರಿಯಾಗುತ್ತದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ ಟ್ವಿಟರ್ ವಿಮರ್ಶೆ: ರಾಮ್ ಚರಣ್ ನಟನೆಗೆ ಪ್ರೇಕ್ಷಕರು ಫಿದಾ; ಶಿವಣ್ಣನಿಗೂ ಜೈಕಾರ

ಬುಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬಂದಿರುವ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ‘ಪೆದ್ದಿ’ (Peddi Movie) ಜೂನ್ 4ರಂದು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದೆ. ಜೂನ್ 3ರ ರಾತ್ರಿಯೇ ಸಿನಿಮಾಗೆ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಇದನ್ನು ವೀಕ್ಷಿಸಿದ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಆರಂಭದಲ್ಲಿ ಟೆನ್ನಿಸ್ ಇಷ್ಟಪಟ್ಟಿದ್ದರು, ಎಂ.ಎಸ್. ಧೋನಿ ಕ್ರಿಕೆಟ್‌ಗೆ ಬರುವ ಮುನ್ನ ಫುಟ್‌ಬಾಲ್ ಆಡುತ್ತಿದ್ದರು. ಹಾಗೆಯೇ ನಮ್ಮ ದೇಶದ ಹಲವು ಖ್ಯಾತ ಕ್ರೀಡಾಪಟುಗಳು ತಮ್ಮ ವೃತ್ತಿಜೀವನದಲ್ಲಿ ಇಂತಹ ಬದಲಾವಣೆಗಳನ್ನು ಕಂಡಿದ್ದಾರೆ. ಅದೇ ಮಾದರಿಯಲ್ಲಿ ‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಒಬ್ಬ ಅಥ್ಲೀಟ್ ಆಗಿ ಕಾಣಿಸಿಕೊಂಡಿದ್ದು, ಅವರ ಕ್ರೀಡಾ ಪಯಣದ ಕಥೆಯನ್ನು ಸಿನಿಮಾ ಒಳಗೊಂಡಿದೆ.

ಎಕ್ಸ್ (ಟ್ವಿಟರ್) ತಾಣದಲ್ಲಿ ಸಿನಿಮಾಗೆ ಬಹುತೇಕ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ರಾಮ್ ಚರಣ್ ಅವರ ನಟನೆ ಮತ್ತು ಇಂಟ್ರೊಡಕ್ಷನ್ ಸೀನ್ ಪ್ರೇಕ್ಷಕರ ಮನಗೆದ್ದಿದೆ. ಇನ್ನು, ಶಿವರಾಜ್​​ಕುಮಾರ್ ಪಾತ್ರವನ್ನು ಜನರು ಕೊಂಡಾಡಿದ್ದಾರೆ.

‘ಚಿತ್ರದ ಮೊದಲಾರ್ಧ ಚೆನ್ನಾಗಿದೆ. ಪ್ರೀ-ಇಂಟರ್ವಲ್‌ನಿಂದ ಹಿಡಿದು ಇಂಟರ್ವಲ್ ಬ್ಲಾಕ್‌ವರೆಗಿನ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದ್ದು, ಚಿತ್ರದ ಪ್ರಮುಖ ಹೈಲೈಟ್ ಆಗಿವೆ. ರಾಮ್ ಚರಣ್ ಎಂಟ್ರಿ ಸೀನ್ ಮಾಸ್ ಆಗಿದೆ. ಆದರೆ ನಾಯಕಿ ಮತ್ತು ವಿಲನ್ ಟ್ರ್ಯಾಕ್ ಅಷ್ಟಾಗಿ ಕೆಲಸ ಮಾಡಿಲ್ಲ’ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಪ್ರೇಕ್ಷಕರು ಚಿತ್ರದ ಹೆಲಿಕಾಪ್ಟರ್ ಶಾಟ್ ಅನ್ನು ಕೊಂಡಾಡಿದ್ದು, ‘ಫ್ಲಡ್ ಲೈಟ್ಸ್​ನಲ್ಲಿ ಬರುವ 360 ಡಿಗ್ರಿ ಮತ್ತು ಹೆಲಿಕಾಪ್ಟರ್ ಕ್ರಿಕೆಟಿಂಗ್ ಶಾಟ್‌ಗಳು, ಅದಕ್ಕೆ ಎ.ಆರ್. ರೆಹಮಾನ್ ಕೊಟ್ಟಿರುವ ಬಿಜಿಎಂ ಮತ್ತು ‘ಪೆದ್ದಿ’ ಚಾಂಟ್ಸ್ ಥಿಯೇಟರ್‌ನಲ್ಲಿ ರೋಮಾಂಚನ ಉಂಟುಮಾಡುತ್ತವೆ. ಹಾಡುಗಳ ವಿಶ್ಯುವಲ್ಸ್ ಸೂಪರ್ ಆಗಿದ್ದು, ಎಮೋಷನ್ಸ್ ಜೊತೆ ಬ್ಲಾಕ್‌ಬಸ್ಟರ್ ಆಗಿದೆ’ ಎಂದು ಕೊಂಡಾಡಿದ್ದಾರೆ.

ಮೊದಲಾರ್ಧದಲ್ಲಿ ಜಾನ್ವಿ ಕಪೂರ್ ನಟನೆಗೆ ತೂಕ ಇಲ್ಲ ಎಂದು ಫ್ಯಾನ್ಸ್ ಹೇಳಿದ್ದಾರೆ. ಕೆಲವು ಹಾಡುಗಳನ್ನು ಸುಖಾಸುಮ್ಮನೆ ಹಾಕಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಶಿವಣ್ಣ ಅವರ ನಟನೆ ಅಭಿಮಾನಿಗಳಿಗೆ ಇಷ್ಟ ಆಗಿದೆ. ರಾಮ್ ಚರಣ್ ನಟನೆ ಬೇರೆಯದೇ ಹಂತದಲ್ಲಿ ಇದೆ ಎಂದು ಅನೇಕರು ಹೇಳಿದ್ದಾರೆ. ಸಿನಿಮಾಟೋಗ್ರಫಿ ಹಾಗೂ ಎಆರ್​ ರೆಹಮಾನ್ ಮ್ಯೂಸಿಕ್ ಅಭಿಮಾನಿಗಳಿಗೆ ಇಷ್ಟ ಆಗುವ ರೀತಿಯಲ್ಲಿ ಇದೆ.

ಇದನ್ನೂ ಓದಿ: ತಮಿಳಿನಲ್ಲಿ ಶಿವರಾಜ್​ಕುಮಾರ್ 4ನೇ ಸಿನಿಮಾಗೆ ಮುಹೂರ್ತ; ಭರ್ಜರಿ ಡಿಮ್ಯಾಂಡ್ 

ಶಿವರಾಜ್‌ಕುಮಾರ್, ಜಾನ್ವಿ ಕಪೂರ್ , ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ಬುಚಿ ಬಾಬು ಸನಾ ಅವರೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗುರುವಾರದಂದು ರಾಘವೇಂದ್ರ ಸ್ವಾಮಿ, ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ – Kannada News

ಬೆಂಗಳೂರು, ಜೂ.4: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 4ರ ಗುರುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಕೃಷ್ಣ ಪಕ್ಷ ಚೌತಿ, ಉತ್ತರಾಷಾಡ ನಕ್ಷತ್ರದಲ್ಲಿ ಚಂದ್ರನ ಸಂಚಾರವಿರುವ ಈ ದಿನದ ಮಹತ್ವವನ್ನು ವಿವರಿಸಿದರು. ಗುರುವಾರದಂದು ಗುರುಗಳ ದರ್ಶನ, ಸ್ಮರಣೆ ಹಾಗೂ ದಾನಗಳು ಬಹಳ ಪ್ರಾಶಸ್ತ್ಯವನ್ನು ಹೊಂದಿದ್ದು, ಪೂಜ್ಯ ರಾಘವೇಂದ್ರ ಸ್ವಾಮಿಗಳು ಮತ್ತು ಶಿರಡಿ ಸಾಯಿಬಾಬಾ ಅವರಂತಹ ಗುರುಗಳನ್ನು ನೆನೆಯಲು ಸಲಹೆ ನೀಡಲಾಯಿತು. ಇದಲ್ಲದೆ, ಈ ದಿನವನ್ನು “ಬಾಲ ದೌರ್ಜನ್ಯ ವಿರೋಧಿ ದಿನ” ಎಂದು ಗುರುತಿಸಲಾಗಿದ್ದು, ಮಕ್ಕಳ ಆರೈಕೆ, ಅನ್ನದಾನ, ಆಶ್ರಯ ನೀಡುವುದರಿಂದ ಭಗವಂತನಿಗೆ ತೃಪ್ತಿ ಸಿಗುತ್ತದೆ ಎಂದು ತಿಳಿಸಿದರು. ಪ್ರತಿಯೊಬ್ಬರೂ ಮಕ್ಕಳ ಸಹಾಯಕ್ಕೆ ನಿಲ್ಲುವ ಸಂಕಲ್ಪ ಮಾಡಿಕೊಳ್ಳುವಂತೆ ಗುರೂಜಿ ಕರೆ ನೀಡಿದರು. ದ್ವಾದಶ ರಾಶಿಗಳಾದ ಮೇಷದಿಂದ ಮೀನದವರೆಗಿನ ಪ್ರತಿಯೊಂದು ರಾಶಿಯವರಿಗೂ ಆ ದಿನದ ಹಣಕಾಸು, ವೃತ್ತಿ, ಆರೋಗ್ಯ, ಪ್ರಯಾಣ, ಅದೃಷ್ಟ ಸಂಖ್ಯೆ, ಅದೃಷ್ಟ ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಒದಗಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ್ದ ಸರ್ಕಾರಿ ಕಟ್ಟಡವೀಗ ಅನೈತಿಕ ಚಟುವಟಿಕೆಗಳ ತಾಣ: ಹೇಳೋರು ಇಲ್ಲ ಕೇಳೋರು ಇಲ್ಲ! – Kannada News

ಪಾಳು ಬಿದ್ದಿರುವ ಕಟ್ಟಡImage Credit source: Tv9 Kannada

ಬಾಗಲಕೋಟೆ, ಜೂನ್​​ 04: ಇಲ್ಲಿನ ನವನಗರ ಯುನಿಟ್ ಎರಡರ ಸೆಕ್ಟರ್ ನಂಬರ್​​ 10ರಲ್ಲಿ ಕೋಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡಿ ನಿರ್ಮಿಸಲಾಗಿರುವ ಸರಕಾರಿ ನರ್ಸರಿ ಶಾಲೆಯ ಕಟ್ಟಡ ಭೂತ ಬಂಗಲೆಯಂತಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಆವರಣದ ಗೇಟ್​​ಗೆ ಕನಿಷ್ಠ ಬೀಗವೂ ಇಲ್ಲದ ಕಾರಣ ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ ಎಂಬಂತಾಗಿದೆ. ಕಿಟಕಿಗಳ ಗಾಜುಗಳು ಚೂರಾಗಿದ್ದರೆ, ಕೊಠಡಿಗಳ ಬಾಗಿಲು ಮುರಿದಿವೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು ನಿರ್ವಹಣೆ ಮಾಡಬೇಕಾದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿರುವ ಬಗ್ಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಕಟ್ಟಡದ ಬಹುತೇಕ ಭಾಗಗಳು ಧ್ವಂಸ

ಆಲಮಟ್ಟಿ ಜಲಾಶಯದಿಂದಾಗಿ ಬಾಗಲಕೋಟೆ ನಗರದ ಬಹುತೇಕ ಪ್ರದೇಶಗಳು ಮುಳುಗಿದ ಬಳಿಕ ಅಲ್ಲಿನ ಸಂತ್ರಸ್ತರಿಗೆ ಸೂರು, ಶಾಲೆ ಸರಕಾರಿ ಕಚೇರಿ ಎಲ್ಲವನ್ನೂ ನವನಗರ ಎಂಬ ಹೊಸ ಸ್ಥಳ ನಿರ್ಮಾಣ ಮಾಡಿ ಸ್ಥಳಾಂತರ‌ ಮಾಡಲಾಗಿದೆ. ಆದರೆ ಯುನಿಟ್ ಎರಡರಲ್ಲಿನ ಕೆಲ ಸರಕಾರಿ ಕಟ್ಟಡಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿಗಿದ್ದು, ಅದಕ್ಕೆ ಜ್ವಲಂತ ಸಾಕ್ಷಿ ಎಂಬಂತಿದೆ ಈ ನರ್ಸರಿ ಶಾಲೆಯ ಕಟ್ಟಡ. ದುರಂತ ಅಂದರೆ ಮಕ್ಕಳ ಶಿಕ್ಷಣಕ್ಕಾಗಿ ನಿರ್ಮಿಸಿದ ಈ ಕಟ್ಟಡದಲ್ಲಿ ಒಂದೇ ಒಂದು ದಿನ ಶಾಲೆ ನಡೆದಿಲ್ಲ‌. ಬಳಕೆಗೂ ಮುನ್ನವೇ ಕಟ್ಟಡದ ಬಹುತೇಕ ಭಾಗಗಳು ಧ್ವಂಸಗೊಂಡಿದ್ದು, ಕಟ್ಟಡದ ಉದ್ದೇಶವೇ ಇದನ್ನು ನಿರ್ಮಿಸಿದವರಿಗೆ ಮರೆತಂದಿದೆ.

ಇದನ್ನೂ ಓದಿ: ಮಹಾಲಿಂಗಪುರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; 13.34 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ವಶ!

ಅಧಿಕಾರಿಗಳು ಹೇಳೋದೇನು?

ಇಷ್ಟೆಲ್ಲ ಆದರೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮಾತ್ರ ಕನಿಷ್ಠ ಇತ್ತ ತಿರುಗಿಯೂ ನೋಡ್ತಿಲ್ಲ. ಹೀಗಾಗಿ ಸಾರ್ವಜನಿಕರ ತೆರಿಗೆ ಹಣ ಇಲ್ಲಿ ಮಣ್ಣು ಪಾಲಾಗಿದೆ. ಇನ್ನು ಈ ಬಗ್ಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳನ್ನು ಕೇಳಿದರೆ, ನಾವು ಆವರಣಕ್ಕೆ ಬೀಗ ಹಾಕಿದ್ದೆವು.  ಗೇಟ್ ಸರಿಪಡಿಸಿದ್ದೆವು. ಜೊತೆಗೆ ಸಿಸಿ ಕ್ಯಾಮರಾಗಳನ್ನು ಕೂಡ ಅಳವಡಿಸಿದ್ದೆವು. ಆದರೆ ಕಿಡಿಕೇಡಿಗಳು ಎಲ್ಲವನ್ನೂ ಜಖಂ ಮಾಡಿದ್ದಾರೆ ಎನ್ನುತ್ತಿದ್ದಾರೆ. ಅಲ್ಲದೆ ಸದ್ಯ ಈ ಕಟ್ಟಡವನ್ನು ಬಾಗಲಕೋಟೆ ಮೆಡಿಕಲ್ ಕಾಲೇಜಿಗೆ ಹಸ್ತಾಂತರ ಮಾಡಿದ್ದೇವೆ. ಮೆಡಿಕಲ್ ಕಾಲೇಜಿನಿಂದ ಇದು ಹುಡುಗರ ಹಾಸ್ಟೆಲ್ ಆಗಿ ಬದಲಾಗಲಿದೆ. ಈಗ ಅವರೇ ಇದರ ದುರಸ್ತಿ ಮಾಡಲಿದ್ದಾರೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯಾದ್ಯಂತ ವಾಯು ಗುಣಮಟ್ಟ ಸುಧಾರಣೆ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ನಿರಾಳ ವಾತಾವರಣ – Kannada News

ಬೆಂಗಳೂರು, ಜೂ.4: ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟವು ‘ಉತ್ತಮ’ (Good) ಹಾಗೂ ‘ಸಾಧಾರಣ’ (Moderate) ಮಟ್ಟದಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರದಿ ಮಾಡಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು ಸರಾಸರಿ AQI 46 ರಿಂದ 65ರ ಆಸುಪಾಸಿನಲ್ಲಿದೆ. ಮಳೆಯ ಸಿಂಚನ ಮತ್ತು ತಂಗಾಳಿಯ ಕಾರಣದಿಂದಾಗಿ ಧೂಳಿನ ಕಣಗಳು ನೆಲಕಚ್ಚಿದ್ದು, ಸಾರ್ವಜನಿಕರು ನಿರಾಳವಾಗಿ ಉಸಿರಾಡುವಂತಾಗಿದೆ.

ಮಂಗಳೂರು, ಮಡಿಕೇರಿ ಮತ್ತು ಹಾಸನ ಜಿಲ್ಲೆಗಳಲ್ಲಿ ನಿರಂತರವಾಗಿ ಮೋಡ ಕವಿದ ವಾತಾವರಣ ಮತ್ತು ಮಳೆಯಾಗುತ್ತಿರುವುದರಿಂದ ಇಲ್ಲಿನ ಗಾಳಿ ಸಂಪೂರ್ಣವಾಗಿ ಶುದ್ಧವಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇಂದು ಸರಾಸರಿ AQI 30 ರಿಂದ 45ರ ಒಳಗಿದ್ದು, ಅತ್ಯುತ್ತಮ ಶ್ರೇಣಿಯಲ್ಲಿದೆ. ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಒಣ ಹವೆ ಮತ್ತು ಬಿಸಿಲು ಹೆಚ್ಚಾಗಿದ್ದರೂ, ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ. ಇಲ್ಲಿನ ಇಂದಿನ ಸರಾಸರಿ AQI 55 ರಿಂದ 75ರ ಆಸುಪಾಸಿನಲ್ಲಿದ್ದು, ‘ಸಾಧಾರಣ’ಮಟ್ಟವನ್ನು ಕಾಯ್ದುಕೊಂಡಿದೆ.

ಉತ್ತರ ಕರ್ನಾಟಕದಲ್ಲಿ ವಾಯು ಗುಣಮಟ್ಟವು ನಿಯಂತ್ರಣದಲ್ಲಿದೆ (ಸಾಧಾರಣ ಮಟ್ಟ). ಹಾಗಾಗಿ ಸಾರ್ವಜನಿಕರು ಧೈರ್ಯವಾಗಿ ಹೊರಾಂಗಣ ಚಟುವಟಿಕೆಗಳನ್ನು ನಡೆಸಬಹುದು. ಆದರೆ, ಶ್ವಾಸಕೋಶದ ತೊಂದರೆ ಅಥವಾ ಅಸ್ತಮಾ ಇರುವಂತಹ ಸೂಕ್ಷ್ಮ ಆರೋಗ್ಯದ ವ್ಯಕ್ತಿಗಳು ಮಧ್ಯಾಹ್ನದ ತೀವ್ರ ಬಿಸಿಲು ಮತ್ತು ಧೂಳಿನ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಒಳಿತು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕರಾವಳಿ-ಮಲೆನಾಡಿಗೆ ಮಳೆ ಸಿಂಚನ, ಉತ್ತರ ಕರ್ನಾಟಕಕ್ಕೆ ಸೂರ್ಯನ ತಾಪ!

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weather Report: ಕರಾವಳಿ-ಮಲೆನಾಡಿಗೆ ಮಳೆ ಸಿಂಚನ, ಉತ್ತರ ಕರ್ನಾಟಕಕ್ಕೆ ಸೂರ್ಯನ ತಾಪ! – Kannada News

ಬೆಂಗಳೂರು, ಜೂ.4:ಕರಾವಳಿಯಿಂದ ಬಯಲು ಸೀಮೆಯವರೆಗೆ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ಬಿಗುವಿನ ವಾತಾವರಣಕ್ಕೆ ಬ್ರೇಕ್ ಬೀಳುವ ಸಮಯ ಬಂದಿದೆ. ರಾಜ್ಯದಲ್ಲಿ ವರುಣದೇವ ಅಬ್ಬರ ಹೆಚ್ಚಾಗಲಿದೆ. ಇಂದು ಮಧ್ಯಾಹ್ನದ ನಂತರ ಕರ್ನಾಟಕದಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುವ (Heavy Rain Forecast) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಒಣಗಿದ ಭೂಮಿಯನ್ನು ಮತ್ತೆ ತಂಪಾಗಿಸಲಿದೆ.

ಇಂದು ಬೆಳಗಿನ ಜಾವದಿಂದಲೇ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಶೇ. 90 ರಷ್ಟು ತೇವಾಂಶ ದಾಖಲಾಗಿದ್ದು, ವಾತಾವರಣದಲ್ಲಿ ಗರಿಷ್ಠ ತಂಪಾದ ಅನುಭವವಾಗುತ್ತಿದೆ. ನೈಋತ್ಯ ದಿಕ್ಕಿನಿಂದ ಬೀಸುತ್ತಿರುವ ತಂಗಾಳಿಯು ಮಧ್ಯಾಹ್ನದ ವೇಳೆಗೆ ತೀವ್ರಗೊಳ್ಳಲಿದ್ದು, ಪಶ್ಚಿಮ ದಿಕ್ಕಿನಿಂದ ಗಂಟೆಗೆ 14 ಮೈಲಿಗೂ ಅಧಿಕ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಇದು ಮುಂಗಾರಿನ ದಟ್ಟ ಮೋಡಗಳು ರಾಜ್ಯದಲ್ಲಿ ಹೆಚ್ಚಿನ ಮಳೆಯ ನೀಡುವ ಸಾಧ್ಯತೆಗಳು ಇದೆ.

ಇನ್ನು ಬೆಳಿಗ್ಗೆಯಿಂದ ಸೂರ್ಯನ ಪ್ರಖರತೆ ಹೆಚ್ಚಾಗಲಿದ್ದು, ಗರಿಷ್ಠ ತಾಪಮಾನವು 31°C ಆಸುಪಾಸಿನಲ್ಲಿರಲಿದೆ. ಯುವಿ ಇಂಡೆಕ್ಸ್ 8 ರಷ್ಟಿರುವುದರಿಂದ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನ ಬೇಗೆ ಜೋರಾಗಿರಲಿದೆ. ಆದರೆ, ಸಂಜೆಯಾಗುತ್ತಿದ್ದಂತೆ ಹವಾಮಾನದಲ್ಲಿ ಬದಲಾವಣೆ ಕಂಡುಬರಲಿದೆ. ರಾಜ್ಯದಾದ್ಯಂತ ಶೇ. 55 ರಷ್ಟು ಮಳೆಯಾಗುವ ಭಾರಿ ಸಾಧ್ಯತೆಯಿದ್ದು, ಕರಾವಳಿ ಜಿಲ್ಲೆಗಳು, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ರಾತ್ರಿಯ ವೇಳೆಗೆ ತಾಪಮಾನವು 24°C ಗೆ ಇಳಿಕೆಯಾಗಲಿದ್ದು, ಮೋಡ ಕವಿದ ತಂಪಾದ ವಾತಾವರಣ ಇರಲಿದೆ.

ಮಂಗಳೂರಿನಲ್ಲಿ ಇಂದು ತೇವಾಂಶದ ಪ್ರಮಾಣ ಶೇ. 85 ಕ್ಕೂ ಅಧಿಕ ದಾಖಲಾಗಿದೆ. ಗರಿಷ್ಠ ತಾಪಮಾನ 32°C ಇರಲಿದ್ದು, ಕರಾವಳಿ ತೀರದಲ್ಲಿ ನೈಋತ್ಯ ದಿಕ್ಕಿನಿಂದ ಬಲವಾದ ಗಾಳಿ ಬೀಸುತ್ತಿದೆ. ಮಧ್ಯಾಹ್ನದ ನಂತರ ಮತ್ತು ಸಂಜೆ ವೇಳೆಗೆ ನಗರದ ಹಲವೆಡೆ ಗುಡುಗು ಸಹಿತ ಭರ್ಜರಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಮಡಿಕೇರಿ ಸೇರಿದಂತೆ ಇಡೀ ಮಲೆನಾಡು ಭಾಗದಲ್ಲಿ ಇಂದು ಅತ್ಯಂತ ಆಹ್ಲಾದಕರ ಹಾಗೂ ತಂಪಾದ ವಾತಾವರಣವಿದೆ. ಇಲ್ಲಿನ ಗರಿಷ್ಠ ತಾಪಮಾನ 26°C ನಿಂದ 28°C ಆಸುಪಾಸಿನಲ್ಲಿದ್ದು, ಕನಿಷ್ಠ ತಾಪಮಾನ 19°C ಗೆ ಕುಸಿದಿದೆ. ದಟ್ಟವಾದ ಮೋಡ ಕವಿದ ವಾತಾವರಣವಿದ್ದು, ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಇದನ್ನೂ ಓದಿ: 11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

ಹಾಸನ ಜಿಲ್ಲೆಯಲ್ಲಿ ಇಂದು ಮಿಶ್ರ ಹವಾಮಾನ ಇರಲಿದೆ. ಹಗಲಿನಲ್ಲಿ ಸ್ವಲ್ಪ ಬಿಸಿಲಿನ ವಾತಾವರಣವಿದ್ದರೂ, ಸಂಜೆಯ ವೇಳೆಗೆ ಹವಾಮಾನ ತಂಪಾಗಲಿದೆ. ಗರಿಷ್ಠ ತಾಪಮಾನ 30°C ಇರಲಿದ್ದು, ಜಿಲ್ಲೆಯ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಹನಿಗಳು ಬೀಳುವ ಮೂಲಕ ಇಳೆಯನ್ನು ತಂಪಾಗಿಸಲಿವೆ. ಕರಾವಳಿ ಮತ್ತು ಮಲೆನಾಡಿಗೆ ಹೋಲಿಸಿದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ (ವಿಜಯಪುರ, ಕಲಬುರಗಿ, ಬಾಗಲಕೋಟೆ, ರಾಯಚೂರು) ಬಿಸಿಲಿನ ಆರ್ಭಟ ಜೋರಾಗಿದೆ. ಇಲ್ಲಿ ಗರಿಷ್ಠ ತಾಪಮಾನ 36°C ಇಂದ 38°C ವರೆಗೆ ದಾಖಲಾಗುವ ಸಾಧ್ಯತೆ ಇದ್ದು, ಯುವಿ ಇಂಡೆಕ್ಸ್ ತೀವ್ರವಾಗಿದೆ. ಆದರೆ, ರಾತ್ರಿಯ ವೇಳೆಗೆ ಒಣ ಹವೆ ಕಡಿಮೆಯಾಗಿ ತಂಗಾಳಿ ಬೀಸುವ ನಿರೀಕ್ಷೆ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version