ಏರ್ ಇಂಡಿಯಾದ ಎಲ್ಲ ಪೈಲಟ್‌ಗಳಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ – Kannada News | Air India mandatory Drugs tests for all pilots after after Phuket Delhi Incident

ನವದೆಹಲಿ, ಆಗಸ್ಟ್ 13: ಆಕಾಶದಲ್ಲಿ ಹಾರಾಡುವಾಗಲೇ ತೀವ್ರ ಗಾಳಿಯ ಅಡಚಣೆಗೆ (ಟರ್ಬುಲೆನ್ಸ್) ಒಳಗಾಗಿದ್ದ ಏರ್ ಇಂಡಿಯಾ (Air India) ವಿಮಾನದ ಮುಖ್ಯ ಪೈಲಟ್ ಡ್ರಗ್ಸ್ ಸೇವಿಸಿ ವಿಮಾನ ಹಾರಿಸುತ್ತಿದ್ದರು ಎಂಬ ಶಾಕಿಂಗ್ ವಿಷಯ ಹೊರಬಿದ್ದ ಬೆನ್ನಲ್ಲೇ, ಏರ್ ಇಂಡಿಯಾ ತನ್ನ ಎಲ್ಲಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಸೇವನೆ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಪ್ರಯಾಣಿಕರ ಭದ್ರತೆ ಮತ್ತು ವೈಮಾನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಏರ್ ಇಂಡಿಯಾ ಆಡಳಿತ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎರಡೂ ಸಂಸ್ಥೆಗಳು ತಮ್ಮ ಪೈಲಟ್‌ಗಳಿಗೆ ಆಂತರಿಕ ಸಂದೇಶ ರವಾನಿಸಿದ್ದು, ವಿಮಾನಯಾನ ರಂಗದ ಪ್ರಸ್ತುತ ನಿಯಮಾವಳಿಗಳ ಅಡಿಯಲ್ಲಿ ಅನುಮತಿಸದ ಯಾವುದೇ ಮಾದಕ ವಸ್ತುಗಳು ಅಥವಾ ಔಷಧಗಳ ಸೇವನೆಗೆ ಸಂಬಂಧಿಸಿದಂತೆ ಸ್ಕ್ರೀನಿಂಗ್ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿವೆ. ಈ ಪರೀಕ್ಷೆಗಳು ಕಡ್ಡಾಯವಾಗಿದ್ದು, ಆಗಸ್ಟ್ 13ರಿಂದ ಆರಂಭವಾಗಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಆಕಾಶದಿಂದ 300 ಅಡಿ ಕುಸಿದ ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ; 14 ಜನರಿಗೆ ಗಾಯ

ವಿಮಾನಯಾನ ಸಚಿವಾಲಯದ ನಿಯಮಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಪ್ರತಿ ವರ್ಷ ತಮ್ಮ ಒಟ್ಟು ವಿಮಾನ ಸಿಬ್ಬಂದಿಯಲ್ಲಿ ಕನಿಷ್ಠ ಶೇ. 10ರಷ್ಟು ಸಿಬ್ಬಂದಿಗೆ ಸೈಕೋಆಕ್ಟಿವ್ ಮಾದಕದ್ರವ್ಯ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ. ವಿಮಾನಯಾನ ಕ್ಷೇತ್ರದ ಸುರಕ್ಷತಾ ಮಾನದಂಡಗಳನ್ನು ಎತ್ತಿಹಿಡಿಯಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಮತ್ತು ಇತರ ಪಾಲುದಾರರಲ್ಲಿ ವಿಶ್ವಾಸ ಮೂಡಿಸಲು ಈ ನಿರ್ಧಾರ ಅಗತ್ಯವಾಗಿತ್ತು ಎಂದು ಏರ್ ಇಂಡಿಯಾ ಹೇಳಿದೆ.

ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾದ A320neo ವಿಮಾನ ಹಾರಾಟದ ಮಧ್ಯದಲ್ಲಿಯೇ ಇದ್ದಕ್ಕಿದ್ದಂತೆ ಸುಮಾರು 300 ಅಡಿ ಎತ್ತರದಿಂದ ಕೆಳಕ್ಕೆ ಕುಸಿದಿತ್ತು. ಈ ವಿಮಾನದ ಕ್ಯಾಪ್ಟನ್ ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಹೀಗಾಗಿ, ಏರ್ ಇಂಡಿಯಾ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ; ವಿಮಾನದ ಇಂಧನ ಸ್ವಿಚ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಸಂಸತ್​ಗೆ ಸರ್ಕಾರ ಮಾಹಿತಿ

ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ದೇಹದಲ್ಲಿ ಅಪಾಯಕಾರಿ ಮಟ್ಟದ ಡ್ರಗ್ಸ್ ಅಂಶಗಳು ಪತ್ತೆಯಾದ ತಕ್ಷಣವೇ ಅವರ ಹಾರಾಟದ ಲೈಸೆನ್ಸ್ ರದ್ದುಗೊಳಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಸ್ತುತ ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಈ ಗಂಭೀರ ಲೋಪದ ನಂತರ ಏರ್ ಇಂಡಿಯಾ ತನ್ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಪೈಲಟ್ (ಕ್ಯಾಪ್ಟನ್ ಹಾಗೂ ಕೋ-ಪೈಲಟ್)ಗೂ ಮಾದಕ ದ್ರವ್ಯ ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ಹಾರಾಟಕ್ಕೂ ಮುನ್ನ ಮತ್ತು ನಂತರ ನಡೆಸುವ ಆಲ್ಕೋಹಾಲ್ ಪರೀಕ್ಷೆಯ ಜೊತೆಗೆ ಇನ್ಮುಂದೆ ಅತ್ಯಾಧುನಿಕ ಟಾಕ್ಸಿಕಾಲಜಿ ಡ್ರಗ್ ಟೆಸ್ಟ್ ಕಡ್ಡಾಯವಾಗಲಿದೆ.

ಈ ಘಟನೆಯ ಕುರಿತು ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ತನಿಖೆಯನ್ನು ಚುರುಕುಗೊಳಿಸಿದ್ದು, ಒಂದು ತಿಂಗಳೊಳಗೆ ಮಧ್ಯಂತರ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ. ಫ್ರೆಂಚ್ ತನಿಖಾ ಸಂಸ್ಥೆ (BEA) ಹಾಗೂ ಏರ್‌ಬಸ್ ಕಂಪನಿಯ ನೆರವಿನೊಂದಿಗೆ ಬ್ಲ್ಯಾಕ್ ಬಾಕ್ಸ್ (FDR ಹಾಗೂ CVR) ದತ್ತಾಂಶಗಳನ್ನು ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಕಾಯ್ದೆಯೊಂದಿಗೆ ಕರ್ನಾಟಕದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ಯಾ? – Kannada News | Governmnet To Plan Break RSS activities With New Bill Karnataka State Public Places and Access Regulation Bill 2026

ಬೆಂಗಳೂರು, (ಆಗಸ್ಟ್ 13):  ಕರ್ನಾಟಕದಲ್ಲಿ ಕಾಂಗ್ರೆಸ್ (Karnataka) ವರ್ಸಸ್ ಆರ್​​​​ಎಸ್​​​ಎಸ್​​​ (RSS) ಸಂಘರ್ಷಕ್ಕೆ ಮತ್ತೊಂದು ವೇದಿಕೆ ಸಿದ್ಧವಾಗುವ ಲಕ್ಷಣಗಳು ಕಾಣುತ್ತಿವೆ. ಹೌದು…  ‘ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ–2026’ ಕಾಯ್ದೆಯನ್ನು (Karnataka State Public Places and Access Regulation Bill 2026) ಜಾರಿಗೆ ತರಲು ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಕಾಯ್ದೆ ಕುರಿತು ಇಂದಿನ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದು, ವಿಧೇಯಕಕ್ಕೆ ಅನುಮೋದನೆ ಸಹ ದೊರೆತಿದೆ. ಹೌದು….ಇದೆ ಅಧಿವೇಶನಲ್ಲಿ ವಿಧೇಯಕ ಮಂಡನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ವಿಧೇಯಕದ ಮೂಲಕ ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ಸಂಘಟನೆ ಅಥವಾ ಸಂಸ್ಥೆ ಕಾರ್ಯಕ್ರಮ ಆಯೋಜಿಸುವ ಸಂದರ್ಭದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರೊಂದಿಗೆ ಸಾರ್ವಜನಿಕವಾಗಿ ಆರ್ ಎಸ್ ಎಸ್ ನಡೆಸುವ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ವರ್ಸಸ್ ಆರ್​​ಎಸ್​​​​​​ಎಸ್​​ ನಡುವಿನ ಕಾಳಗ ಶುರುವಾಗುವ ಸಾಧ್ಯತೆಗಳಿವೆ.

ಏನಿದು ವಿಧೇಯಕ?

ವಿಶೇಷವಾಗಿ ಆರ್‌ಎಸ್‌ಎಸ್‌ನ ಪಥಸಂಚಲನ, ಸಾರ್ವಜನಿಕ ಕಾರ್ಯಕ್ರಮಗಳು, ಸಭೆಗಳು ಹಾಗೂ ಇತರೆ ಚಟುವಟಿಕೆಗಳಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಈ ವಿಧೇಯಕ ಮಹತ್ವ ಪಡೆದುಕೊಂಡಿದೆ. ಸಾರ್ವಜನಿಕ ಸ್ಥಳಗಳ ಬಳಕೆ, ಕಾರ್ಯಕ್ರಮಗಳ ಆಯೋಜನೆ ಮತ್ತು ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣಾಧಿಕಾರ ನೀಡುವ ಅಂಶಗಳು ವಿಧೇಯಕದಲ್ಲಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: RSS ಚಟುವಟಿಕೆ ನಿರ್ಬಂಧಿಸಲು ಮುಂದಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ: ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ಆಯೋಜನೆಗೆ ಅನುಮತಿ ನಿರಾಕರಿಸಿದ ವಿಚಾರ ಈ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಅನುಮತಿ ನಿರಾಕರಣೆಯನ್ನು ಪ್ರಶ್ನಿಸಿ ಆರ್‌ಎಸ್‌ಎಸ್‌ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿತ್ತು. ನಂತರ ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ಪಥಸಂಚಲನಕ್ಕೆ ಅವಕಾಶ ನೀಡಿತ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಸಂಘಟನೆಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ವ್ಯವಸ್ಥೆ ಕುರಿತು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ಚರ್ಚೆ ತೀವ್ರಗೊಂಡಿತ್ತು. ಸಾರ್ವಜನಿಕ ಆಸ್ತಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಕಾರ್ಯಕ್ರಮ ನಡೆಸುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 2025ರಲ್ಲೇ ಆದೇಶ ಹೊರಡಿಸಿತ್ತು. ಈ ಆದೇಶದಡಿ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿ ಪಡೆಯುವ ವ್ಯವಸ್ಥೆ ಜಾರಿಗೊಂಡಿತ್ತು.

ವಿಧೇಯಕದ ಮೂಲಕ RSS ಚಟುವಟಿಕೆಗಳಿಗೆ ಬ್ರೇಕ್?

ಇದೀಗ ಕಾನೂನು ರೂಪ ನೀಡುವ ನಿಟ್ಟಿನಲ್ಲಿ ‘ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ–2026’ ತರಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು, ಸಂಚಾರಕ್ಕೆ ಅಡ್ಡಿಯಾಗದಂತೆ ನಿಯಂತ್ರಿಸುವುದು ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವುದು ವಿಧೇಯಕದ ಪ್ರಮುಖ ಉದ್ದೇಶಗಳಾಗಿರಬಹುದು. ಆದ್ರೆ, ಆರ್‌ಎಸ್‌ಎಸ್‌ ಚಟುವಟಿಕೆಗಳ ಹಿನ್ನೆಲೆಯಲ್ಲಿ ವಿಧೇಯಕದ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ. ವಿಧೇಯಕವು ಕೇವಲ ಆರ್‌ಎಸ್‌ಎಸ್‌ಗೆ ಮಾತ್ರ ಅನ್ವಯವಾಗುತ್ತದೆಯೇ ಅಥವಾ ಎಲ್ಲಾ ಸಂಘಟನೆಗಳು, ಸಂಸ್ಥೆಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಮಾನವಾಗಿ ಅನ್ವಯವಾಗುತ್ತದೆಯೇ ಎಂಬುದು ವಿಧೇಯಕದ ಅಂತಿಮ ರೂಪದ ಬಳಿಕ ಸ್ಪಷ್ಟವಾಗಲಿದೆ.

ಇದೇ ಅಧಿವೇಶನಲ್ಲಿ ವಿಧೇಯಕ ಮಂಡನೆಗೆ ಸಂಪುಟ ಒಪ್ಪಿಗೆ

ಇಂದಿನ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕದ ಪ್ರಮುಖ ಅಂಶಗಳ ಕುರಿತು ಚರ್ಚೆ ಆಗಿದ್ದು, ಇದೇ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹೀಗಾಗಿ ವಿಧೇಯಕದ ಅಂತಿಮ ಸ್ವರೂಪ, ಸಾರ್ವಜನಿಕ ಪ್ರದೇಶಗಳ ವ್ಯಾಪ್ತಿ ಹಾಗೂ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ನಿಯಮಗಳ ಬಗ್ಗೆ ಸಭೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ, ಆರ್ ಎಸ್ ಎಸ್ ಬಗ್ಗೆಯೇ ಪೂರ್ವಾಗ್ರಹ ಪೀಡಿತವಾಗಿ ಇದು ಮಾಡುವಂತಹದ್ದು. ಆ ವಿಧೇಯಕ ಬಂದ ಬಳಿಕ ಅದರಲ್ಲಿ ಏನೇನು ಅಂಶಗಳಿವೆ ಅಂತಾ ನೋಡಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ಇಂದು ಶಾಖೆಗಳು ನಡೆಯುತ್ತಿವೆ. ದೇಶಭಕ್ತ ಪ್ರಜೆಗಳನ್ನು ನಿರ್ಮಿಸುವ, ಸಂಸ್ಕಾರ ಕೊಡುವ ಕೆಲಸ ಆರ್ ಎಸ್ ಎಸ್ ಮಾಡುತ್ತಿದೆ. ದೇಶದಲ್ಲಿ ಬಾಂಬ್ ಹಾಕುವ, ಚಳವಳಿ ಮಾಡಲು ಪ್ರೇರೇಪಿಸುವ ಜನರ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಇಲ್ಲ. ಒಂದು ಒಳ್ಳೆಯ ಕೆಲಸ ಮಾಡಲು ಅಡಚಣೆ ಮಾಡುವ ಹಿನ್ನೆಲೆಯಲ್ಲಿ ಈ ವಿಧೇಯಕ ತರುತ್ತಿದ್ದಾರೆ ಖಂಡಿತವಾಗಿಯೂ ಆ ವಿಧೇಯಕಕ್ಕೆ ನಾವು ವಿರೋಧ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ಸಂದರ್ಭಗಳಲ್ಲಿ ನಿಮ್ಮ ಜೊತೆ ನಿಲ್ಲುವವರೇ ನಿಜವಾದ ಸ್ನೇಹಿತ – Kannada News | Chanakya Niti: Chanakya says that true friends are like this

ಈ ಜಗತ್ತಿನಲ್ಲಿರುವ ನಿಷ್ಕಲ್ಮಶ ಸಂಬಂಧಗಳಲ್ಲಿ ಸ್ನೇಹವೂ (Friendship) ಒಂದು. ಸ್ನೇಹಿತರು ಯಾವಾಗಲೂ ನಮಗೆ ಹೆಗಲಾಗಿರುತ್ತಾರೆ. ಆದರೆ ಎಲ್ಲಾ ಸ್ನೇಹಿತರು ಒಳ್ಳೆಯವರು ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಫ್ರೆಂಡ್‌ಶಿಪ್‌ ಹೆಸರಲ್ಲಿ ಜೀವನವನ್ನೇ ಹಾಳು ಮಾಡುವವರಿದ್ದಾರೆ. ಹಾಗಾಗಿ ಇಂದಿನ ಈ ಜಗತ್ತಿನಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅದರಲ್ಲೂ ಒಬ್ಬ ವ್ಯಕ್ತಿ ಈ ಕೆಲವೊಂದು ಕಠಿಣ ಪರಿಸ್ಥಿತಿಗಳಲ್ಲಿ ನಿಮ್ಮ ಜೊತೆ ನಿಂತಿದ್ದಾನೆ ಎಂದಾದರೆ ಆತನೇ ನಿಜವಾದ ಸ್ನೇಹಿತ ಎಂದು ಚಾಣಕ್ಯರು ಒತ್ತಿ ಹೇಳಿದ್ದಾರೆ. ಹಾಗಿದ್ದರೆ ನಿಜವಾದ ಸ್ನೇಹಿತನಲ್ಲಿ ಯಾವೆಲ್ಲಾ ಗುಣಗಳಿರುತ್ತವೆ ಎಂಬುದನ್ನು ನೋಡೋಣ ಬನ್ನಿ.

ಈ ಪರಿಸ್ಥಿತಿಗಳಲ್ಲಿ ಜೊತೆ ನಿಲ್ಲುವವನೇ ನಿಜವಾದ ಸ್ನೇಹಿತ:

ದೊಡ್ಡ ಬಿಕ್ಕಟ್ಟಿನ ಸಮಯದಲ್ಲಿ ಜೊತೆ ನಿಲ್ಲುವವರು: ಏನಾದರೂ ಸಮಸ್ಯೆಗಳು ಎದುರಾದಾಗ ಈತ ನಮ್ಮ ಬಳಿ ಸಹಾಯ ಕೇಳಿದರೆ ಏನು ಮಾಡೋದು ಎಂದು ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಮ್ಮಿಂದ ದೂರ ನಿಲ್ಲುವವರೇ ಹೆಚ್ಚು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕಾನೂನು ಹೋರಾಟ ಇತ್ಯಾದಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾರೊಬ್ಬನಾದರೂ ನಿಮ್ಮ ಜೊತೆ ನಿಂತರೆ ಆತನೇ ನಿಮ್ಮ ನಿಜವಾದ ಸ್ನೇಹಿತನಾಗಿರುತ್ತಾರೆ. ಹೌದು ನಿಜವಾದ ಫ್ರೆಂಡ್‌ ನಿಮ್ಮನ್ನು ಯಾವುದೇ ಸಂದರ್ಭದಲ್ಲೂ ಕೈ ಬಿಡೋದಿಲ್ಲ.

ಅನಾರೋಗ್ಯ: ನೀವು ಅನಾರೋಗ್ಯ ಅಥವಾ ದೈಹಿಕ ಕಾಯಿಲೆಯಿಂದ ಬಳಲುತ್ತಿರುವ ಕಠಿಣ ಪರಿಸ್ಥಿತಿಯಲ್ಲಿ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಒಬ್ಬರು ನಿಮ್ಮ ಆರೈಕೆಗಾಗಿ ಬಂದು, ಆತ ನಿಮ್ಮ ಜೊತೆ ನಿಂತರೆ ಆತನೇ ನಿಜವಾದ ಸ್ನೇಹಿತ ಎಂದಿದ್ದಾರೆ ಚಾಣಕ್ಯ.

ಆರ್ಥಿಕ ಸಂಕಷ್ಟ: ಆರ್ಥಿಕ ಸಂಕಷ್ಟ ಎದುರಾದಾಗ ನಮಗೆ ಸಹಾಯ ಮಾಡುವವರಿಗಿಂದ ನಮ್ಮನ್ನು ಟೀಕಿಸುವವರೇ ಹೆಚ್ಚಿರುತ್ತಾರೆ. ಹೀಗಿರುವಾಗ ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಿಮ್ಮ ಕೈ ಹಿಡಿದು ನಡೆಯುವವನು ನಿಮ್ಮ ನಿಜವಾದ ಸ್ನೇಹಿತ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಇದನ್ನೂ ಓದಿ: ಮಹಿಳೆಯರು ತಮ್ಮ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಬಾರದು

ಶತ್ರುಗಳ ತೊಂದರೆ ನೀಡುವ ಸಮಯದಲ್ಲಿ: ಶತ್ರುಗಳು ನಿಮಗೆ ತೊಂದರೆ ನೀಡಲು ಪ್ರಯತ್ನಿಸಿದಾಗ, ಯಾವುದೇ ಭಯವಿಲ್ಲದೆ ನಿಮ್ಮ ಜೊತೆಯಾಗಿ ನಿಲ್ಲುವವನೇ ನಿಮ್ಮ ನಿಜವಾದ ಸ್ನೇಹಿತ ಎಂದಿದ್ದಾರೆ ಚಾಣಕ್ಯ.

ಅಂತ್ಯಕ್ರಿಯೆ ಅಥವಾ ಸ್ಮಶಾನದಲ್ಲಿ: ಜೀವನದ ಕೊನೆಯ ಹಂತದಲ್ಲಿ ಅಥವಾ ಕುಟುಂಬದಲ್ಲಿ ಯಾವುದೇ ಮರಣ ಸಂಭವಿಸಿದ ಸಮಯದಲ್ಲಿ ಸ್ಮಶಾನದವರೆಗೂ ನಿಮ್ಮೊಂದಿಗೆ ಇರುವ ವ್ಯಕ್ತಿಯನ್ನು ನಿಮ್ಮ ನಿಜವಾದ ಸ್ನೇಹಿತ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿ-ರೈಡ್ ಟಿಪ್ಸ್ ಬಂದ್‌: ಓಲಾ, ಉಬರ್, ರ‍್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್ – Kannada News | Cab Booking Rules Changed: Ola, Uber, Other Apps Can’t Ask You to Tip Before Your Ride

ನವದೆಹಲಿ, ಆಗಸ್ಟ್ 13: ಆನ್ಲೈನ್​ನಲ್ಲಿ ಕ್ಯಾಬ್ ಅಥವಾ ಆಟೋ ಬುಕ್ ಮಾಡುವ ಮುನ್ನವೇ ಚಾಲಕರಿಗೆ ‘ಟಿಪ್ಸ್’ ನೀಡುವಂತೆ ಒತ್ತಾಯಿಸುವ ವ್ಯವಸ್ಥೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಓಲಾ, ಉಬರ್, ರ‍್ಯಾಪಿಡೋ ಸೇರಿದಂತೆ ಎಲ್ಲಾ ರೈಡ್-ಹೇಲಿಂಗ್ (Ride-hailing) ಆ್ಯಪ್‌ಗಳಿಂದ ‘ಪ್ರಿ-ರೈಡ್ ಟಿಪ್ಸ್’ (Pre-ride tips) ಅಥವಾ ಮುಂಗಡ ಟಿಪ್ಸ್ ನೀಡುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶಿಸಿದೆ.

ಓಲಾ, ಊಬರ್ ಸೇರಿದಂತೆ ಎಲ್ಲಾ ಕ್ಯಾಬ್ ಬುಕಿಂಗ್ ಆ್ಯಪ್​ಗಳಲ್ಲಿ ಕ್ಯಾಬ್ ಬುಕಿಂಗ್ ಮಾಡುವಾಗ ತತ್​ಕ್ಷಣಕ್ಕೆ ಡ್ರೈವರ್​ಗಳಿಂದ ರಿಕ್ವೆಸ್ಟ್ ಸ್ವೀಕೃತಿ ಆಗದೇ ಇದ್ದಾಗ, ವಿವಿಧ ಪ್ರಮಾಣದ ಟಿಪ್ಸ್ ನೀಡಿ ಪ್ರಯತ್ನಿಸುವಂತೆ ಕೇಳಲಾಗುತ್ತದೆ. ಟಿಪ್ಸ್ ಕೊಟ್ಟರೆ ಡ್ರೈವರ್​ಗಳು ರೈಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಬಹುದು ಎಂದು ಗ್ರಾಹಕರನ್ನು ಪ್ರಲೋಬಿಸಲಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಗ್ರಾಹಕರು ಟಿಪ್ಸ್ ಸೇರಿಸಿ ಬುಕ್ ಮಾಡುತ್ತಾರೆ. ಸರ್ಕಾರ ಈಗ ಕಡಿವಾಣ ಹಾಕಲು ಹೊರಟಿರುವುದು ಇದನ್ನೆಯೇ. ಸರ್ಕಾರದ ಹೊಸ ನಿಯಮಗಳು ಏನು ಹೇಳುತ್ತವೆ ನೋಡೋಣ:

ಇದನ್ನೂ ಓದಿ: ಕರ್ನಾಟಕದಲ್ಲಿ ಬಹಳ ಹೆಚ್ಚಾಗುತ್ತಿವೆ ಎಲೆಕ್ಟ್ರಿಕ್ ಸ್ಕೂಟರ್, ಬೈಕುಗಳು; ರಾಜ್ಯದ ಇವಿ ನೀತಿಗಳೇ ಇದಕ್ಕೆ ಕಾರಣವಾ?

  • ಬುಕಿಂಗ್‌ಗೂ ಮುನ್ನ ಟಿಪ್ಸ್ ಕೇಳುವಂತಿಲ್ಲ: ಕ್ಯಾಬ್ ಅಥವಾ ಆಟೋ ಬೇಗ ಸಿಗಬೇಕು ಎಂಬ ಕಾರಣಕ್ಕೆ ಗ್ರಾಹಕರಿಂದ ಮುಂಗಡವಾಗಿ ಟಿಪ್ಸ್ ಆಫರ್ ಮಾಡಿಸುವ ಅಥವಾ ಕೇಳುವ ಯಾವುದೇ ಮೆಸೇಜ್/ಆಪ್ಷನ್ ಆ್ಯಪ್‌ನಲ್ಲಿ ಕಾಣಿಸುವಂತಿಲ್ಲ.
  • ಮೋಟಾರು ವಾಹನ ಮಾರ್ಗಸೂಚಿ ಉಲ್ಲಂಘನೆ: ‘ಮೋಟಾರು ವಾಹನ ಅಗ್ರಿಗೇಟರ್ ಗೈಡ್‌ಲೈನ್ಸ್ 2025’ (Motor Vehicle Aggregator Guidelines 2025) ಪ್ರಕಾರ, ಮುಂಗಡವಾಗಿ ಹೆಚ್ಚುವರಿ ಹಣ ಅಥವಾ ಟಿಪ್ಸ್ ಕೇಳುವುದು ನಿಯಮಬಾಹಿರ ಮತ್ತು ಅನುಚಿತ ವ್ಯಾಪಾರ ವಹಿವಾಟು (Unfair Trade Practice) ಎಂದು ಸರ್ಕಾರ ಸ್ಪಷ್ಟಪಡಿಸಿದೆ.
  • ಸವಾರಿ ಮುಗಿದ ನಂತರವಷ್ಟೇ ಅವಕಾಶ: ಚಾಲಕರ ಸೇವೆಗೆ ಮೆಚ್ಚಿ ಟಿಪ್ಸ್ ನೀಡುವುದಾದರೆ, ಅದು ಸಂಪೂರ್ಣವಾಗಿ ಪ್ರಯಾಣ (Ride) ಮುಗಿದ ನಂತರವಷ್ಟೇ ಸಾಧ್ಯವಾಗಲಿದೆ. ಅಲ್ಲದೆ, ಇದು ಸಂಪೂರ್ಣ ಗ್ರಾಹಕರ ಐಚ್ಛಿಕ ನಿರ್ಧಾರವಾಗಿರುತ್ತದೆ.
  • ಸಂಪೂರ್ಣ ಮೊತ್ತ ಚಾಲಕನಿಗೆ: ಪ್ರಯಾಣಿಕರು ಕೊಡುವ ಟಿಪ್ಸ್‌ನಿಂದ ಯಾವುದೇ ಕಂಪನಿಯು ಕಮಿಷನ್ ಕಟ್ ಮಾಡುವಂತಿಲ್ಲ, ಸಂಪೂರ್ಣ ಹಣ ಚಾಲಕನಿಗೇ ತಲುಪಬೇಕು.

ಇದನ್ನೂ ಓದಿ: ಏರ್​ಟೆಲ್​ನ ಜನಪ್ರಿಯ 299 ರೂ ಪ್ಲಾನ್ ರದ್ದು; ಕನಿಷ್ಠ ಅನ್​ಲಿಮಿಟೆಡ್ ಡೇಟಾ ಪ್ಲಾನ್ ಈಗ 349 ರೂ

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾರಣವೇನು?

ಇತ್ತೀಚಿನ ದಿನಗಳಲ್ಲಿ ಓಲಾ, ಉಬರ್ ಮತ್ತು ರ‍್ಯಾಪಿಡೋದಂತಹ ಆ್ಯಪ್‌ಗಳು ಕ್ಯಾಬ್ ಹುಡುಕುವಾಗ “ಟಿಪ್ ಸೇರಿಸಿ, ಬೇಗನೆ ರೈಡ್ ಬುಕ್ ಮಾಡಿ” (Add a tip for faster pickup) ಎಂಬಂತಹ ಸಂದೇಶಗಳನ್ನು ನೀಡುತ್ತಿದ್ದವು. ಇದರಿಂದಾಗಿ ಹೆಚ್ಚುವರಿ ಹಣ (ಟಿಪ್) ನೀಡದಿದ್ದರೆ ರೈಡ್‌ಗಳು ರದ್ದಾಗುವ ಅಥವಾ ಚಾಲಕರು ಸ್ವೀಕರಿಸದೇ ಇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಯಾಣಿಕರ ದೂರುಗಳನ್ನು ಪರಿಗಣಿಸಿದ ಕೇಂದ್ರ ಸರ್ಕಾರ, ಗ್ರಾಹಕರ ಮೇಲೆ ಮಾನಸಿಕ ಒತ್ತಡ ಹೇರುವ ಈ ವ್ಯವಸ್ಥೆಯನ್ನು ರದ್ದುಗೊಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿರ್ಮಲಾ ಸೀತಾರಾಮನ್​​ ಇರುವ ವಿಡಿಯೋ ಲಿಂಕ್ ಒತ್ತಿ ಲಕ್ಷಾಂತರ ರೂ ಕಳೆದುಕೊಂಡ ಹಾವೇರಿ ವ್ಯಕ್ತಿ – Kannada News | Haveri Man Loses Lakhs After Clicking AI Generated Video Link Featuring Nirmala Sitharaman

ಸೈಬರ್​ ಪೊಲೀಸ್​ ಠಾಣೆImage Credit source: tv9 kannada

ಹಾವೇರಿ, ಆಗಸ್ಟ್​​ 13: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ (Social Media) ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ರೀಲ್ಸ್‌ಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋಗಳನ್ನು ಹರಿಬಿಟ್ಟು ಸಾರ್ವಜನಿಕರಿಂದ ಲಕ್ಷಾಂತರ ರೂ ಹಣ ದೋಚುವ ಜಾಲ ಸಕ್ರಿಯವಾಗಿದೆ. ಇಂತಹದ್ದೇ ಎಐ ವಿಡಿಯೋ ಲಿಂಕ್ ಒಂದನ್ನು ನಂಬಿ ಹಾವೇರಿಯ ನಿವಾಸಿಯೊಬ್ಬರು ಬರೋಬ್ಬರಿ 22 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದು, ಈ ಸಂಬಂಧ ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಕ್ಷಾಂತರ ರೂ ಲಾಭದ ಆಮಿಷ

ಸೈಬರ್ ವಂಚಕರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರಂತಹ ಗಣ್ಯ ವ್ಯಕ್ತಿಗಳ ಎಐ ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ‘bxb ಮಾರ್ಕೆಟ್’ ಹೆಸರಿನ ಜಾಹೀರಾತಿನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿದಂತೆ ನಕಲಿ ವಿಡಿಯೋ ಸೃಷ್ಟಿಸಲಾಗಿತ್ತು.

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆ ಮಾತು ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ

ಕೇವಲ 22 ಸಾವಿರ ರೂ ಹೂಡಿಕೆ ಮಾಡಿದರೆ ಡಬಲ್, ತ್ರಿಬಲ್ ಲಾಭ ಬರಲಿದ್ದು, 25 ಲಕ್ಷ ರೂಪಾಯಿವರೆಗೆ ಹಣ ಗಳಿಸಬಹುದು ಎಂದು ಆಮಿಷ ಒಡ್ಡಲಾಗಿತ್ತು. ಇದನ್ನು ನಂಬಿದ ಸಂತ್ರಸ್ತರು, ಎಐ ವಿಡಿಯೋದಲ್ಲಿದ್ದ ಟ್ರೇಡಿಂಗ್ ಟೆಲಿಗ್ರಾಮ್ ಲಿಂಕ್ ಬಳಸಿ ಆರ್‌ಟಿಜಿಎಸ್ ಹಾಗೂ ಐಎಂಪಿಎಸ್ ಮೂಲಕ ಹಂತ ಹಂತವಾಗಿ ಒಟ್ಟು 22 ಲಕ್ಷ ರೂ ಹಣ ವರ್ಗಾಯಿಸಿ ಯಾವುದೇ ಲಾಭ ಸಿಗದೆ ಸಂಪೂರ್ಣ ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ.

ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಪ್ರತಿಕ್ರಿಯಿಸಿದ್ದು, “ಸಾರ್ವಜನಿಕರು ಮೊಬೈಲ್‌ಗೆ ಬರುವ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಒತ್ತಬಾರದು. ಯಾರೇ ಕರೆ ಮಾಡಿ ಕೇಳಿದರೂ ಒಟಿಪಿ ಹಂಚಿಕೊಳ್ಳುವುದು ಅಥವಾ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿ ಮೋಸ ಹೋಗಬಾರದು,” ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಕಠಿಣ ಕ್ರಮಕ್ಕೆ ಸ್ಥಳೀಯರು ಆಗ್ರಹ

ಈ ಕುರಿತು ಸ್ಥಳೀಯರಾದ ರಮೇಶ ಕಡಕೋಳ ಎನ್ನುವವರು ಪ್ರತಿಕ್ರಿಯಿಸಿದ್ದು, “ಸೈಬರ್ ವಂಚಕರು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಗಣ್ಯರ ವಿಡಿಯೋಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಸಾರ್ವಜನಿಕರು ಹಣದ ಆಸೆಗೆ ಬಿದ್ದು ಹಣ ಕಳೆದುಕೊಳ್ಳಬಾರದು. ಕೇಂದ್ರ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇಂತಹ ಫೇಕ್ ವಿಡಿಯೋಗಳನ್ನು ಹರಿಬಿಡುವ ಸೈಬರ್ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಬೇಕು ಮತ್ತು ಇಂತಹ ವಂಚನೆಯ ಆ್ಯಪ್‌ಗಳನ್ನು ತಕ್ಷಣವೇ ನಿಷೇಧಿಸಬೇಕು,” ಎಂದು ಆಗ್ರಹಿಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮೌನ ವಹಿಸಿದ್ದೇಕೆ? ಕೊನೆಗೂ ಕಾರಣ ತಿಳಿಸಿದ ಸೋನು ನಿಗಮ್ – Kannada News | Why Sonu Nigam refused to speak about Neet Paper leak and Gen Z Student Protest

ನೀಟ್ (NEET) ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದ ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಅವರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಟೀಕೆಗಳಿಗೆ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ‘ಕ್ಲಿಷ್ಟಕರ ಪ್ರಶ್ನೆಯಿಂದ ತಪ್ಪಿಸಿಕೊಳ್ಳುವುದು ನನ್ನ ಉದ್ದೇಶವಾಗಿರಲಿಲ್ಲ. ಬದಲಿಗೆ ಯಾವಾಗ ಮತ್ತು ಎಲ್ಲಿ ಮಾತನಾಡಬೇಕು ಎಂಬ ವಿವೇಚನೆ ನನ್ನದಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ಬಾಂಬೆ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೋನು ನಿಗಮ್, ಮಾಧ್ಯಮಗೋಷ್ಠಿಯ ಕನಿಷ್ಠ ಶಿಷ್ಟಾಚಾರದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ‘ಮುಂಬೈನಲ್ಲಿ ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ನೆಲೆಸಿರುವ ನನಗೆ ಮಾಧ್ಯಮಗೋಷ್ಠಿಯ ಮೂಲಭೂತ ನಿಯಮ ಗೊತ್ತಿದೆ. ನಾವು ಭಾಗವಹಿಸಿದ ಕಾರ್ಯಕ್ರಮದ ಮುಖ್ಯ ವಿಷಯಕ್ಕೆ ಮಾತ್ರ ಬದ್ಧವಾಗಿರಬೇಕು’ ಎಂದು ಹೇಳಿದ್ದಾರೆ.

‘ನನ್ನ ಗುರು ಪಂಕಜ್ ಉದಾಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಾಗ ರಾಜಕೀಯ ವಿಷಯಗಳನ್ನು ಮಾತನಾಡುವುದು ನನ್ನ ದೃಷ್ಟಿಯಲ್ಲಿ ಗೌರವವಲ್ಲ. ಮಾಧ್ಯಮಗಳೂ ಅದೇ ಗೌರವವನ್ನು ಕಾಯ್ದುಕೊಳ್ಳುತ್ತವೆ ಎಂದು ಭಾವಿಸುತ್ತೇನೆ. ಜೊತೆಗೆ, ಸಂಪೂರ್ಣ ಮಾಹಿತಿ ಇಲ್ಲದ ಯಾವುದೇ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು ಎಂದು ನನ್ನ ತಂದೆಗೆ ಮಾತು ಕೊಟ್ಟಿದ್ದೇನೆ’ ಎಂದು ಸೋನು ನಿಗಮ್ ತಿಳಿಸಿದ್ದಾರೆ.

‘ನನ್ನ ಮೊಬೈಲ್‌ನಲ್ಲಿ ಸೋಶಿಯಲ್ ಮೀಡಿಯಾ ಆ್ಯಪ್‌ಗಳೇ ಇಲ್ಲ. ನನ್ನ ಜೀವನವೇ ಸಂಗೀತ ಮತ್ತು ಭಕ್ತಿ. ಜೀವನದಲ್ಲಿ ಹಲವು ಬಾರಿ ಧೈರ್ಯದಿಂದ ಧ್ವನಿ ಎತ್ತಿದ್ದೇನೆ. ಧಾರ್ಮಿಕ ಸ್ಥಳಗಳಲ್ಲಿ ಮೈಕ್, ಲೌಡ್‌ಸ್ಪೀಕರ್ ಬಳಕೆಯ ವಿರುದ್ಧದ ಹೋರಾಟದಿಂದ ಹಿಡಿದು, ಕಲಾವಿದರಿಗೆ ರಾಯಲ್ಟಿ ಹಕ್ಕಿನವರೆಗೂ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಲು ಒಂಟಿಯಾಗಿ ನಿಂತು ಹೋರಾಡಿದ್ದೇನೆ. ಈಗ ಇತರರು ಧೈರ್ಯದಿಂದ ಮುಂದೆ ಬಂದು ಸಮಾಜಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ತೋರಿಸಲಿ. ಅವರು ಕೇವಲ ಸೋಶಿಯಲ್ ಮೀಡಿಯಾ ಟ್ರೋಲರ್‌ಗಳಾಗದೆ ನಿಜವಾದ ಹೋರಾಟಗಾರರಾಗಲಿ’ ಎಂದು ಸೋನು ನಿಗಮ್ ಸವಾಲು ಎಸೆದಿದ್ದಾರೆ.

ಇದನ್ನೂ ಓದಿ: ‘ನರಗಳು ಬ್ಲಾಕ್ ಆಗಿವೆ’; ಆರೋಗ್ಯದ ಬಗ್ಗೆ ಸೋನು ನಿಗಮ್ ಆತಂಕಕಾರಿ ಮಾಹಿತಿ

ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷೆಯ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗೆ ಮತ್ತು ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹುಮಾ ಖುರೇಷಿ, ಸೋನಾಕ್ಷಿ ಸಿನ್ಹಾ, ಸಲ್ಮಾನ್ ಖಾನ್ ಹಾಗೂ ಆಲಿಯಾ ಭಟ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದರು. ತೀವ್ರ ಪ್ರತಿಭಟನೆಯ ಬೆನ್ನಲ್ಲೇ ಜುಲೈ 25ರಂದು ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ​ ಕೇಸಿಗೆ ಬಿಗ್ ಟ್ವಿಸ್ಟ್​: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಸಿಪಿ – Kannada News | Electricity DCP Clarify about obscene videos Found In Prajwal Revanna Mobile And Pen drive at jail

ಬೆಂಗಳೂರು, (ಆಗಸ್ಟ್ 13): ಅತ್ಯಾಚಾರ ಪ್ರರಕರಣದಲ್ಲಿ ಜೀವಾವಧಿ ಶಿಕ್ಷಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Pralwal Revanna) ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು…ಸಿಸಿಬಿ ಪೊಲೀಸರು (CCB Police) ದಾಳಿ ಮಾಡಿದಾಗ ಪ್ರಜ್ವಲ್ ರೇವಣ್ಣ ಸೆಲ್​​​​​ನಲ್ಲಿ ಮೊಬೈಲ್, ಪೆನ್​​ಡ್ರೈವ್ ಹಾಗೂ ಡೈರಿ ಪತ್ತೆಯಾಗಿದ್ದು, ಮೊಬೈಲ್​​​​, ಪೆನ್​​​​ಡ್ರೈವ್​​ ಪರಿಶೀಲನೆ ಮಾಡಿದಾಗ ಅಶ್ಲೀಲ ವಿಡಿಯೋಗಳು ಸಿಕ್ಕಿವೆ ಎನ್ನಲಾಗಿತ್ತು. ಆದ್ರೆ, ಇದನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಪ್ರಜ್ವಲ್ ಬ್ಯಾರಕ್‌ನಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿ ವಿಡಿಯೋಗಳು ಇಲ್ಲ ಎಂದು ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಸಿಟಿ ಡಿಸಿಪಿ ಎಂ.ನಾರಾಯಣ ಸ್ಪಷ್ಟಪಡಿಸಿದ್ದಾರೆ.

ಪೆನ್​​​ಡ್ರೈವ್​​​​ನಲ್ಲಿ ವಿಡಿಯೋಗಳಿಲ್ಲ

ಈ ಸಂಬಂಧ ಮಾಧ್ಯಮಗಳಿ ಪ್ರತಿಕ್ರಿಯಿಸಿರುವ ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಸಿಟಿ ಡಿಸಿಪಿ ಎಂ.ನಾರಾಯಣ,
ಆಗಸ್ಟ್‌ 11ರಂದು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ನಡೆದಿದ್ದು, ಆ ವೇಳೆ ಹೈಸೆಕ್ಯೂರಿಟಿ ಸೆಲ್‌ನಲ್ಲಿ ನಿಷೇಧಿತ ವಸ್ತು ಪತ್ತೆಯಾಗಿವೆ. ರೆಡ್ಮಿ ಫೋನ್‌, ಚಾರ್ಜರ್, ಸಿಮ್, ಪೆನ್‌ಡ್ರೈವ್, ಡೇರಿ ಪತ್ತೆ ಆಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸಿಸಿಬಿ ದೂರು ದಾಖಲಿಸಿದೆ. ಆದ್ರೆ, ಪೆನ್‌ಡ್ರೈವ್‌ನಲ್ಲಿ ವಿಡಿಯೋಗಳಿವೆ ಎಂಬ ವರದಿ ಸತ್ಯಕ್ಕೆ ದೂರುವಾದುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಸೆಲ್​​​​​​​ನಲ್ಲಿ ಸಿಕ್ಕ ಮೊಬೈಲ್, ಪೆನ್​​​​ಡ್ರೈವ್​​​​​ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ

ಜೈಲಿನಲ್ಲಿ ಸಿಕ್ಕ ನಿಷೇಧಿತ ವಸ್ತುಗಳನ್ನ ಸೀಜಿಂಗ್ ಮಾಡಿದ್ದು, ಸೀಲ್‌ ಮಾಡಿ ತನಿಖಾಧಿಕಾರಿಗಳಿಗೆ ನೀಡಲಾಗಿದೆ. ಆರೋಪಿಗಳು ಮೊಬೈಲ್‌ಫೋನ್‌ನ ಪಾಸ್‌ವರ್ಡ್‌ ಸಹ ಹೇಳಿಲ್ಲ. ಫೋನ್‌ ಯಾರು ಬಳಸುತ್ತಿದ್ದರೆಂದು ತನಿಖೆಯಲ್ಲಿ ಗೊತ್ತಾಗಲಿದೆ. ಮೊಬೈಲ್‌ಫೋನ್ ಹೇಗೆ ಜೈಲಿನೊಳಗೆ ಬಂತೆಂದು ತನಿಖೆ ನಡೆಸುತ್ತೇವೆ. ಸೀಲ್ಡ್‌ ಕವರ್‌ನಲ್ಲಿರುವ ನಿಷೇಧಿತ ವಸ್ತುಗಳನ್ನು FSLಗೆ ಕಳಿಸಲಾಗುತ್ತೆ ಎಂದರು.

ಪ್ರಜ್ವಲ್ ರೇವಣ್ಣನನ್ನು ವಿಚಾರಣೆಗೊಳಪಡಿಸಿಲ್ಲ

ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರೈನನ್ನು ವಿಚಾರಣೆ ನಡೆಸಿಲ್ಲ. ಟೆಕ್ನಿಕಲ್ ಸಾಕ್ಷ್ಯದಾರಗಳು ಬಂದ ಬಳಿಕ ಆರೋಪಿಗಳ ವಿಚಾರಣೆ ನಡೆಯುತ್ತೆ. ಬಳಿಕ ಪಾಸ್‌ವರ್ಡ್, ಸಿಡಿಆರ್ ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತೆ. ರೆಡ್ಮಿ ಮೊಬೈಲ್‌ ಬಳಸಿದ್ರೆ ಸಿಗ್ನಲ್‌ ಸಿಗುತ್ತೆಂದು ಕೈದಿಗಳು ತಿಳಿದುಕೊಂಡಿದ್ರು. ಜೈಲಿನಲ್ಲಿ ಜಾಮರ್ ಇದ್ದರೂ 2G, 3G ನೆಟ್‌ವರ್ಕ್‌ಗಳು ಸಿಗುತ್ತಿವೆ. ಭದ್ರತಾ ದೃಷ್ಟಿಯಿಂದ ರೆಡ್ಮಿ ಕಂಪನಿಗೂ ಕೂಡ ಪತ್ರ ಬರೆಯುತ್ತೇವೆ. ಈಗಾಗಲೇ ಜೈಲಿನಲ್ಲಿ ಈ ಹಿಂದೆ ಸಿಕ್ಕ ಸಿಮ್‌ಕಾರ್ಡ್‌ ಪರಿಶೀಲಿಸಲಾಗಿದ್ದು, ಎಲ್ಲವೂ ಫೇಕ್ ಐಡಿ ಮೂಲಕ ತೆಗೆದುಕೊಂಡಿದ್ದಾರೆ. ಎಲ್ಲದರ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಇನ್ನು ಈ ಪ್ರಕರಣದ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ವಿಭಾಗ ಪೊಲೀಸರು ತನಿಖೆ ನಡೆಸ್ತಿದ್ದಾರೆ, ಜೈಲು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕೂಡ ತನಿಖೆ ನಡೆಸುವಂತೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ.

ಒಟ್ಟಿನಲ್ಲಿ ಜೈಲಿನಲ್ಲಿ ಮೊಬೈಲ್ ಸಿಕ್ಕ ಪ್ರಕರಣ ಸಂಚಲನ ಸೃಷ್ಟಿಸಿದ್ದು,ಜೈಲನ್ನು ಸರಿಪಡಿಸಲು ಸಾಧ್ಯವೇ ಇಲ್ಲವೇನೊ ಎಂಬ ವಾತಾವರಣ ಸೃಷ್ಟಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

AUS vs BAN: ಕಾಂಗರೂಗಳ ನಾಡಲ್ಲಿ ಇತಿಹಾಸ ನಿರ್ಮಿಸಿದ ಬಾಂಗ್ಲಾ ವೇಗಿ

Source link

ಮಳೆಗಾಲದಲ್ಲಿ ಗರ್ಭಿಣಿಯರು ಏಕೆ ಹೆಚ್ಚು ಎಚ್ಚರಿಕೆ ವಹಿಸಬೇಕು! ಡಾ. ಅನುಷಾ ಹೇಳಿರುವ ಸಿಂಪಲ್ ಟಿಪ್ಸ್ ನಿಮಗಾಗಿ – Kannada News | Monsoon Health Tips for Pregnancy: How to Protect Mother and Baby From Infections

ಮಳೆಗಾಲವು ಬೇಸಿಗೆಯ ಬಿಸಿಯಿಂದ ನೆಮ್ಮದಿಯನ್ನು ನೀಡುವುದರ ಜೊತೆಗೆ ಸೋಂಕುಗಳು, ಸೊಳ್ಳೆಗಳಿಂದ ಹರಡುವ ರೋಗಗಳು, ಆಹಾರ ಮಾಲಿನ್ಯ ಹಾಗೂ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳಿಂದ ಗರ್ಭಿಣಿಯರು ಈ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆ ಇರುತ್ತದೆ. ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸುವುದರಿಂದ ಮಳೆಗಾಲದಲ್ಲಿಯೂ ಸುರಕ್ಷಿತ ಹಾಗೂ ಆರೋಗ್ಯಕರ ಗರ್ಭಧಾರಣೆಯನ್ನು ಕಾಪಾಡಿಕೊಳ್ಳಬಹುದು. ಈ ಕುರಿತು, ಎಸ್.ಡಿ.ಎಂ. ಆಯುರ್ವೇದ ಸಂಸ್ಥೆ ಮತ್ತು ಆಸ್ಪತ್ರೆಯ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ಅನುಷಾ ಎಂ ಅವರು ಹೆಚ್ಚಿನ ವಿವರಣೆ ನೀಡಿದ್ದು ಯಾವ ರೀತಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.

ಸುರಕ್ಷಿತ ಆಹಾರ ಸೇವನೆ:

ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳವಣಿಗೆ ಹೆಚ್ಚಾಗುವುದರಿಂದ ಆಹಾರಜನ್ಯ ಸೋಂಕುಗಳ ಅಪಾಯವೂ ಹೆಚ್ಚಿರುತ್ತದೆ. ಆದ್ದರಿಂದ ಗರ್ಭಿಣಿಯರು ಯಾವಾಗಲೂ ತಾಜಾ, ಚೆನ್ನಾಗಿ ಬೇಯಿಸಿದ ಆಹಾರವನ್ನು ಸೇವಿಸಬೇಕು. ಹಳಸಿದ ಅಥವಾ ಮರುಬಿಸಿ ಮಾಡಿದ ಆಹಾರ, ರಸ್ತೆ ಬದಿಯ ಆಹಾರ, ಬೇಯಿಸದ ಸಲಾಡ್‌ಗಳು ಹಾಗೂ ಹೊರಗೆ ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮೊದಲು ಚೆನ್ನಾಗಿ ತೊಳೆಯಬೇಕು.

ಸುರಕ್ಷಿತ ಮತ್ತು ಶುದ್ಧವಾಗಿರುವ ನೀರನ್ನು ಕುಡಿಯಿರಿ:

ಕಲುಷಿತ ನೀರು ಹೊಟ್ಟೆ ಮತ್ತು ಕರುಳಿನ ಸೋಂಕುಗಳಿಗೆ ಕಾರಣವಾಗಬಹುದು. ಇದು ನಿರ್ಜಲೀಕರಣ ಹಾಗೂ ಪೌಷ್ಟಿಕಾಂಶದ ಕೊರತೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ ಕುದಿಸಿದ, ಶುದ್ಧೀಕರಿಸಿದ ಅಥವಾ ಫಿಲ್ಟರ್ ನೀರನ್ನು ಮಾತ್ರ ಕುಡಿಯಿರಿ. ದಿನಕ್ಕೆ ಸುಮಾರು 2–3 ಲೀಟರ್ ನೀರು ಕುಡಿಯುವ ಮೂಲಕ ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಿ.

ಸೊಳ್ಳೆಗಳಿಂದ ಹರಡುವ ರೋಗಗಳಿಂದ ರಕ್ಷಿಸಿಕೊಳ್ಳಿ:

ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತವೆ. ಇವು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಪೂರ್ಣ ತೋಳಿನ ಬಟ್ಟೆ ಧರಿಸಿ, ಸೊಳ್ಳೆ ಪರದೆ ಬಳಸಿರಿ, ಗರ್ಭಿಣಿಯರು ಸುರಕ್ಷಿತವಾದ ಸೊಳ್ಳೆ ನಿವಾರಕಗಳನ್ನು ಬಳಸಿ ಹಾಗೂ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.

ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ:

ಸಾಬೂನು ಮತ್ತು ನೀರಿನಿಂದ ಆಗಾಗ ಕೈ ತೊಳೆಯಿರಿ. ಮಳೆಯಲ್ಲಿ ನೆನೆದ ಬಟ್ಟೆ ಮತ್ತು ಪಾದರಕ್ಷೆಗಳನ್ನು ತಕ್ಷಣ ಬದಲಾಯಿಸಿ. ಪಾದಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ಇದರಿಂದ ಸೋಂಕುಗಳನ್ನು ತಡೆಗಟ್ಟಬಹುದು.

ಜಾರಿ ಬೀಳದಂತೆ ಜಾಗೃತ ವಹಿಸಿರಿ:

ಜಾರದ ತಳವಿರುವ ಆರಾಮದಾಯಕ ಪಾದರಕ್ಷೆಗಳನ್ನು ಧರಿಸಿ. ಎಚ್ಚರಿಕೆಯಿಂದ ನಡೆಯಿರಿ. ನೀರು ತುಂಬಿರುವ ಅಥವಾ ಅಸಮತಟ್ಟಾದ ರಸ್ತೆಗಳ ಮೇಲೆ ನಡೆಯುವುದನ್ನು ತಪ್ಪಿಸಿ.

ಪೌಷ್ಟಿಕ ಆಹಾರ ಸೇವಿಸಿ:

ಪ್ರೋಟೀನ್, ಕಬ್ಬಿಣಾಂಶ, ಕ್ಯಾಲ್ಸಿಯಂ, ಫೋಲಿಕ್ ಆಸಿಡ್, ವಿಟಮಿನ್‌ಗಳು ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವ ಸಮತೋಲನ ಆಹಾರವು ತಾಯಿಯ ಆರೋಗ್ಯ ಮತ್ತು ಮಗುವಿನ ಬೆಳವಣಿಗೆಗೆ ಅತ್ಯಂತ ಅಗತ್ಯ.

ಸೋಂಕಿನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:

ಜ್ವರ, ನಿರಂತರ ವಾಂತಿ, ಅತಿಸಾರ, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ, ಕೆಮ್ಮು, ಉಸಿರಾಟದ ತೊಂದರೆ ಅಥವಾ ಚರ್ಮದ ಮೇಲಿನ ದದ್ದುಗಳಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ನಿಯಮಿತ ತಪಾಸಣೆ:

ವೈದ್ಯರು ನಿಗದಿಪಡಿಸಿದ ತಪಾಸಣೆಗಳನ್ನು ತಪ್ಪದೆ ಮಾಡಿಸಿಕೊಳ್ಳಿ.

ದೈಹಿಕ ಚಟುವಟಿಕೆಯನ್ನು ಮುಂದುವರಿಸಿ:

ವೈದ್ಯರ ಸಲಹೆಯಂತೆ ಮನೆಯೊಳಗೆ ಲಘು ವ್ಯಾಯಾಮ, ನಡೆ ಅಥವಾ ಗರ್ಭಿಣಿಯರಿಗಾಗಿ ಸೂಕ್ತವಾದ ಯೋಗಾಭ್ಯಾಸ ಮಾಡಬಹುದು. ಭಾರೀ ಮಳೆಯ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳನ್ನು ತಪ್ಪಿಸಿ.

ಸಾಕಷ್ಟು ವಿಶ್ರಾಂತಿ ಪಡೆಯಿರಿ:

ಸಾಮಾನ್ಯವಾಗಿ ಸಾಕಷ್ಟು ನಿದ್ರೆ ಮತ್ತು ನಿಯಮಿತ ವಿಶ್ರಾಂತಿ ಗರ್ಭಾವಸ್ಥೆಯಲ್ಲಿ ಅತ್ಯಂತ ಮುಖ್ಯ. ಇದು ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ.

ನೆನಪಿರಲಿ ಇಂದು ನೀವು ವಹಿಸುವ ಸ್ವಲ್ಪ ಹೆಚ್ಚುವರಿ ಕಾಳಜಿಯೇ ನಾಳೆ ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕೆ ಭದ್ರ ಅಡಿಪಾಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೇತಾಜಿ​​ಗೆ ಅವಮಾನಿಸಿದ ಬಿಜೆಪಿ ಸಂಸದ ಅನಂತ ಮಹಾರಾಜ್; ‘ಬಂಗ ವಿಭೂಷಣ’ ಪ್ರಶಸ್ತಿ ಹಿಂಪಡೆದ ಪಶ್ಚಿಮ ಬಂಗಾಳ ಸರ್ಕಾರ – Kannada News | West Bengal government withdraws Banga Bibhushan award fromn BJP MP Ananta Maharaj For Insulting Netaji

ಕೊಲ್ಕತ್ತಾ, ಆಗಸ್ಟ್ 13: ನಿನ್ನೆಯಷ್ಟೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಆ ಆದೇಶದ 24 ಗಂಟೆಯೊಳಗೆ ಬಿಜೆಪಿಯ ಸಂಸದರ ವಿರುದ್ಧವೇ ಬಂಗಾಳ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ತಮ್ಮದೇ ಪಕ್ಷದ ಸಂಸದ ಅನಂತ ಮಹಾರಾಜ್ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subas Chandra Bose) ಅವರ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಯ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಬಂಗ ವಿಭೂಷಣ’ವನ್ನು ಪಶ್ಚಿಮ ಬಂಗಾಳ ಸರ್ಕಾರ ಇಂದು ವಾಪಾಸ್ ಪಡೆದು ರದ್ದುಗೊಳಿಸಿದೆ.

ಸಂಸದರು, ಶಾಸಕರು ಹಾಗೂ ಸರ್ಕಾರಿ ಅಧಿಕಾರಿಗಳು ಎಲ್ಲರಿಗೂ ಕಾನೂನು ಒಂದೇ ಎಂದು ಬಂಗಾಳದ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯು ಇಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. “2026ರ ಫೆಬ್ರವರಿ 21ರಂದು ನಾಗೇಂದ್ರ ರಾಯ್ ಅಲಿಯಾಸ್ ಅನಂತ ಮಹಾರಾಜ್ ಅವರಿಗೆ ಪ್ರಧಾನ ಮಾಡಲಾಗಿದ್ದ ಬಂಗ ವಿಭೂಷಣ ಪ್ರಶಸ್ತಿಯನ್ನು ಪಶ್ಚಿಮ ಬಂಗಾಳ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ವಾಪಾಸ್ ಪಡೆಯುತ್ತದೆ ಮತ್ತು ರದ್ದುಗೊಳಿಸುತ್ತದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪಾಕ್ ಉಗ್ರರ ಹಿಟ್​ಲಿಸ್ಟ್​ನಲ್ಲಿ ಬಂಗಾಳದ ಸಿಎಂ; ಜಂತರ್ ಮಂತರ್ ಪ್ರತಿಭಟನೆಯೊಳಗೆ ನುಸುಳಲು ಯತ್ನಿಸಿತ್ತು ಜೈಶ್

ಅಲ್ಲದೆ, ಅನಂತ ಮಹಾರಾಜ್ ಇನ್ಮುಂದೆ ತಮ್ಮನ್ನು ಬಂಗ ವಿಭೂಷಣ ಪುರಸ್ಕೃತರು ಎಂದು ಗುರುತಿಸಿಕೊಳ್ಳುವಂತಿಲ್ಲ ಹಾಗೂ ಪ್ರಶಸ್ತಿಗೆ ಸಂಬಂಧಿಸಿದ ಯಾವುದೇ ಗೌರವ, ಸವಲತ್ತು ಅಥವಾ ಸೌಲಭ್ಯಗಳನ್ನು ಪಡೆಯುವಂತಿಲ್ಲ ಎಂದು ನಿರ್ದೇಶಿಸಲಾಗಿದೆ. ಸಂಬಂಧಪಟ್ಟ ಎಲ್ಲಾ ಅಧಿಕೃತ ದಾಖಲೆಗಳು ಮತ್ತು ಬಂಗ ವಿಭೂಷಣ ಪುರಸ್ಕೃತರ ಪಟ್ಟಿಯಿಂದ ಅವರ ಹೆಸರನ್ನು ತಕ್ಷಣವೇ ತೆಗೆದುಹಾಕಲು ಮತ್ತು ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ನೇತಾಜಿಯನ್ನು ‘ಯುದ್ಧ ಅಪರಾಧಿ’ ಎಂದಿದ್ದ ಅನಂತ ಮಹಾರಾಜ್:

ಅನಂತ ಮಹಾರಾಜ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು “ಯುದ್ಧ ಅಪರಾಧಿ” (War Criminal) ಎಂದು ಕರೆದಿದ್ದರಲ್ಲದೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಅವರ ನಾಯಕತ್ವ ಹಾಗೂ ಆಜಾದ್ ಹಿಂದ್ ಫೌಜ್‌ನ ಪಾತ್ರವನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಪರಾಕ್ರಮ ದಿನ ಆಚರಿಸುವುದರ ಹಿಂದಿದೆ ಈ ಕಾರಣ

ಇದಕ್ಕೂ ಮುನ್ನ ಬುಧವಾರ ಮಾತನಾಡಿದ್ದ ಮುಖ್ಯಮಂತ್ರಿ ಸುವೇಂಧು ಅಧಿಕಾರಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವವರ ವಿರುದ್ಧ ಬಂಧನವೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಉತ್ತರ ಬಂಗಾಳದ ಹಲವು ಶಾಸಕರು ಮತ್ತು ಸಚಿವರು ಈ ಕುರಿತು ದೂರು ನೀಡಿದ್ದಾರೆ ಎಂದಿದ್ದರು. “ನೇತಾಜಿ ಬಗ್ಗೆ ತಪ್ಪು ಮಾಹಿತಿ ಹರಡುವ ಮತ್ತು ಮೀಮ್ಸ್‌ಗಳನ್ನು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು, ಅವರನ್ನು ಬಂಧಿಸಲಾಗುವುದು” ಎಂದು ಹೇಳಿದ್ದರು.

ಅನಂತ ಮಹಾರಾಜ್ ಯಾರು?:

ಅನಂತ ಮಹಾರಾಜ್ ಎಂದೇ ಪ್ರಸಿದ್ಧರಾಗಿರುವ ನಾಗೇಂದ್ರ ರಾಯ್ ಜುಲೈ 2023ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರು ‘ಗ್ರೇಟರ್ ಕೂಚ್ ಬಿಹಾರ್ ಪೀಪಲ್ಸ್ ಅಸೋಸಿಯೇಷನ್’ ನಾಯಕ ಹಾಗೂ ಉತ್ತರ ಬಂಗಾಳದ ರಾಜಬಂಶಿ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಈ ಹಿಂದೆ ಅವರು ಪ್ರತ್ಯೇಕ ಕೂಚ್ ಬಿಹಾರ್ ರಾಜ್ಯಕ್ಕೆ ಆಗ್ರಹಿಸುತ್ತಿದ್ದರಾದರೂ, ರಾಜ್ಯಸಭಾ ಸಂಸದರಾದ ನಂತರ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದರು.

ಕೋಲ್ಕತ್ತಾದಲ್ಲಿ ನಡೆದ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯ ಸಂದರ್ಭದಲ್ಲಿ, 2026ರ ಫೆಬ್ರವರಿ 21ರಂದು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನಂತ ಮಹಾರಾಜ್ ಅವರಿಗೆ ಬಂಗ ವಿಭೂಷಣ ಪ್ರಶಸ್ತಿ ಪ್ರಧಾನ ಮಾಡಿದ್ದರು. ಪಶ್ಚಿಮ ಬಂಗಾಳ ರಾಜ್ಯಕ್ಕೆ ನೀಡಿದ ವಿಶೇಷ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version