ಐಪಿಎಸ್, ಸೈನಿಕ, ಗುಪ್ತಚರ ಅಧಿಕಾರಿ ಹೆಸರಿನಲ್ಲಿ ವಂಚನೆ; ಉತ್ತರಾಖಂಡದ ಐಎಎಸ್​ ಆಫೀಸರ್ ಮಗನ ಬಂಧನ – Kannada News | Former IAS Officers Son Arrested For posed as IPS Officer, RAW And Army Officials In Uttarakhand

ಡೆಹ್ರಾಡೂನ್, ಜುಲೈ 16: ಸರ್ಕಾರದ ಉನ್ನತ ಅಧಿಕಾರಿಗಳು, ಐಪಿಎಸ್ ಅಧಿಕಾರಿ ಹಾಗೂ ದೇಶದ ಪ್ರತಿಷ್ಠಿತ ಗುಪ್ತಚರ ಸಂಸ್ಥೆ ‘ರಾ’ (RAW) ಏಜೆಂಟ್ ಎಂದು ಸೋಗು ಹಾಕಿಕೊಂಡು ಸಾರ್ವಜನಿಕರಿಂದ ಲಕ್ಷಾಂತರ ರೂ. ಹಣ ವಂಚಿಸುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮಗನನ್ನು ಉತ್ತರಾಖಂಡದ (Uttarakhand) ಡೆಹ್ರಾಡೂನ್ ಪೊಲೀಸರು ಬಂಧಿಸಿದ್ದಾರೆ. ಉತ್ತರಾಖಂಡದ ಮಾಜಿ ಮುಖ್ಯ ಕಾರ್ಯದರ್ಶಿ ಎಸ್. ರಾಮಸ್ವಾಮಿ ಅವರ ಮಗ ಯಶವರ್ಧನ್ ಬಂಧಿತ ಆರೋಪಿಯಾಗಿದ್ದು, ಇಂದು ಮುಸ್ಸೋರಿ ರಸ್ತೆಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ಆತನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಬಳಿಯಿದ್ದ ನಕಲಿ ದಾಖಲೆಗಳು ಮತ್ತು ವಸ್ತುಗಳನ್ನು ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಆತನಿಂದ 5 ನಕಲಿ ಗುರುತಿನ ಚೀಟಿಗಳು ಮತ್ತು 8 ವಿಸಿಟಿಂಗ್ ಕಾರ್ಡ್‌ಗಳು, ಪೊಲೀಸ್ ಮತ್ತು ಸೇನೆಗೆ ಸೇರಿದ 25 ಅಧಿಕೃತ ಲೋಗೋಗಳು, ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗೆ ಸೇರಿದ 3 ಜೊತೆ ಸಮವಸ್ತ್ರಗಳು ಹಾಗೂ ನಕಲಿ ಮೆಡಲ್ ರಿಬ್ಬನ್‌ಗಳು, ಒಂದು ಲ್ಯಾಪ್‌ಟಾಪ್ ಹಾಗೂ ವೈರ್‌ಲೆಸ್ ಸೆಟ್ (ವಾಕಿ-ಟಾಕಿ)ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಮೊಬೈಲ್​ನಿಂದ ಹೊಡೆದು ಗಂಡನನ್ನು ಕೊಂದ ಹೆಂಡತಿ! ಅಚ್ಚರಿಯಾದರೂ ಇದು ಸತ್ಯ

ಆರೋಪಿ ಯಶವರ್ಧನ್ ತನ್ನ ತಂದೆಯ ಪ್ರಭಾವ ಬಳಸಿಕೊಂಡು ಹಾಗೂ ಈ ನಕಲಿ ಸಮವಸ್ತ್ರ, ಐಡಿ ಕಾರ್ಡ್‌ಗಳನ್ನು ತೋರಿಸಿ ತಾನು ಉನ್ನತ ಹುದ್ದೆಯಲ್ಲಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದ. ಸರ್ಕಾರಿ ಕೆಲಸ ಕೊಡಿಸುವುದು, ಕಂಪನಿಗಳ ನೋಂದಣಿ ಪ್ರಕ್ರಿಯೆಯನ್ನು ಬೇಗನೆ ಮುಗಿಸುವುದು ಹಾಗೂ ಸರ್ಕಾರಿ ಟೆಂಡರ್‌ಗಳನ್ನು ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.

ಯುಪಿಎಸ್‌ಸಿ ಫೇಲ್ ಆಗಿದ್ದ:

ಪೊಲೀಸ್ ವಿಚಾರಣೆ ವೇಳೆ ಆರೋಪಿ ಯಶವರ್ಧನ್ ತನ್ನ ತಂದೆ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಾಗ ಅಧಿಕಾರಿಗಳಿಗಿದ್ದ ಗೌರವ ಮತ್ತು ಪ್ರಭಾವವನ್ನು ನೋಡಿ ಬೆಳೆದಿದ್ದರಿಂದ ತನಗೂ ಐಎಎಸ್​ ಅಥವಾ ಐಪಿಎಸ್ ಆಗಬೇಕೆಂಬ ತೀವ್ರ ಆಸೆ ಇತ್ತು ಎಂದು ಹೇಳಿದ್ದಾನೆ. ಇದಕ್ಕಾಗಿ ಆತ ಹಲವು ವರ್ಷಗಳ ಕಾಲ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ಇದರಿಂದ ನಿರಾಶೆಗೊಂಡು, ಸಮಾಜದಲ್ಲಿ ಸುಲಭವಾಗಿ ಪ್ರಭಾವ ಮತ್ತು ಹಣ ಗಳಿಸಲು ಈ ರೀತಿ ನಕಲಿ ಅಧಿಕಾರಿಯ ಸೋಗು ಹಾಕಲು ಪ್ರಾರಂಭಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರೇಜ್ ಆಫ್ ಕಂಬಳ’ ಹಾಡಿನಿಂದ ಕುತೂಹಲ ಹೆಚ್ಚಿಸಿದ ‘ಕರಾವಳಿ’ ಸಿನಿಮಾ ತಂಡ – Kannada News | Prajwal Devaraj Raj B Shetty starrer Karavali movie new song Rage of Kambala released

ಹಲವು ಕಾರಣಗಳಿಂದಾಗಿ ‘ಕರಾವಳಿ’ (Karavali) ಸಿನಿಮಾ ನಿರೀಕ್ಷೆ ಮೂಡಿಸಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ (Raj B. Shetty) ಮುಂತಾದವರು ನಟಿಸಿರುವ ಈ ಸಿನಿಮಾದ ಹಾಡುಗಳು ಗಮನ ಸೆಳೆಯುತ್ತಿವೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳನ್ನು ನೋಡಿದ ಬಳಿಕ ಸಿನಿಮಾ ಮೇಲಿನ ಹೈಪ್ ಇನ್ನಷ್ಟು ಹೆಚ್ಚಾಗಿದೆ. ಈಗ ಇನ್ನೊಂದು ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡು ಸಖತ್ ಅಗ್ರೆಸಿವ್ ಆಗಿದೆ ಎಂಬುದು ವಿಶೇಷ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಜೊತೆ ಸಂಪದಾ, ಸುಷ್ಮಿತಾ, ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ಕರಾವಳಿ ಭಾಗದ ಕಥೆ ಇರಲಿದೆ. ಆದ್ದರಿಂದ ನಿರೀಕ್ಷೆ ಮನೆ ಮಾಡಿದೆ. ಈಗಾಗಲೇ ಟ್ರೇಲರ್ ಹೇಗಿದೆ ಎಂಬುದನ್ನು ಜನರು ನೋಡಿದ್ದಾರೆ. ಜುಲೈ 24ಕ್ಕೆ ಅದ್ದೂರಿಯಾಗಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ನಡುವೆ ಚಿತ್ರತಂಡದಿಂದ ಪವರ್ ಫುಲ್ ಆಗಿರುವ ಕವರ್ ಸಾಂಗ್ ರಿಲೀಸ್ ಮಾಡಲಾಗಿದೆ. ದೊಡ್ಡ ಪರದೆಯಲ್ಲಿ ಈ ಸಾಂಗ್ ನೋಡಲು ಸಿನಿಪ್ರಿಯರು ಕಾದಿದ್ದಾರೆ.

ಆನಂದ್ ಶ್ರೀರಾಜ್ ಗಾಯನದ ಹಾಡು:

‘Rage of Kambala’ ಎಂಬ ಶೀರ್ಷಿಕೆಯಲ್ಲಿ ರಿಲೀಸ್ ಆಗಿರುವ ‘ಓಡಾ…’ ಗೀತೆಗೆ ಖ್ಯಾತ ಗಾಯಕ ಆನಂದ್ ಶ್ರೀರಾಜ್ ಅವರು ಧ್ವನಿ ನೀಡಿದ್ದಾರೆ. ಮಲಯಾಳಂನ ಸೂಪರ್ ಹಿಟ್ ಸಿನಿಮಾಗಳಾದ ‘ಕಿಂಗ್ ಆಫ್ ಕೋಥ’, ‘ಎಂಪರಾನ್’ ಮುಂತಾದ ಸಿನಿಮಾದ ಹಾಡುಗಳು ಅವರ ಕಂಠದಲ್ಲಿ ಮೂಡಿಬಂದು ಜನಮನ ಗೆದ್ದಿವೆ. ಈಗ ಅವರು ‘ಕರಾವಳಿ’ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ನೀಡಿದ್ದಾರೆ.

ಕುತೂಹಲ ಹೆಚ್ಚಿಸಿದ ಹೊಸ ಗೀತೆ:

ಈ ಹಾಡಿಗೆ ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ಸಚಿನ್ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಕಥೆಯ ಯಾವ ಹಂತದಲ್ಲಿ ಈ ಹಾಡು ಬರಲಿದೆ ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ತಾಂತ್ರಿಕವಾಗಿ ಈ ಸಿನಿಮಾ ಸಖತ್ ಅದ್ದೂರಿಯಾಗಿ ಮೂಡಿದೆ ಎಂಬುದಕ್ಕೆ ಈ ಹಾಡು ಕೂಡ ಸಾಕ್ಷಿಯಾಗಿದೆ.

ಇದನ್ನೂ ಓದಿ: ‘ಕರಾವಳಿ’ ಕಿರಿಕ್: ಪ್ರಜ್ವಲ್​ಗೆ ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇಕೆ? ವಿವರಿಸಿದ ಚಿತ್ರತಂಡ

ಜಯಪ್ರಿಯ ಗಾಯಕರ ಸಂಗಮ:

‘ಕರಾವಳಿ’ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜನಪ್ರಿಯ ಗಾಯಕರಾದ ಸಿದ್ ಶ್ರೀರಾಮ್, ಸಾಯಿ ವಿಗ್ನೇಶ್, ಆಬಿ, ಬಿ. ಜಯಶ್ರೀ ಮತ್ತು ಆನಂದ್ ಶ್ರೀರಾಜ್ ಅವರ ಕಂಠದಲ್ಲಿ ಈ ಸಿನಿಮಾದ ಹಾಡುಗಳು ಮೂಡಿಬಂದಿವೆ. ಈಗಾಗಲೇ ಬಿಡುಗಡೆ ಆಗಿರುವ ‘ಮುದ್ದು ಗುಮ್ಮ..’ ಹಾಗೂ ‘ಸೋಲ್ ಆಫ್ ಕರಾವಳಿ’ ಹಾಡುಗಳು ಜನರಿಗೆ ಇಷ್ಟ ಆಗಿವೆ. ಈಗ ‘ರೇಜ್ ಆಫ್ ಕಂಬಳ’ ಕೂಡ ಸೇರ್ಪಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಥಾಣೆಯಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು – Kannada News | 1 Dead, several injured as crane collapses onto vehicles in Thane

ಮುಂಬೈ, ಜುಲೈ 16: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರೋಡ್ ಪ್ರದೇಶದಲ್ಲಿ ಇಂದು ಸಂಜೆ ಭೀಕರ ಅಪಘಾತವೊಂದು ಸಂಭವಿಸಿದೆ. ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಳವಡಿಸಲಾಗಿದ್ದ ಬೃಹತ್ ಕ್ರೇನ್ ನಿಯಂತ್ರಣ ತಪ್ಪಿ ಕೆಳಗಡೆ ನಿಲ್ಲಿಸಲಾಗಿದ್ದ ಹಲವು ವಾಹನಗಳ ಮೇಲೆ ಉರುಳಿಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತವು ಮೀರಾ ರೋಡ್‌ನಲ್ಲಿರುವ ನಿರ್ಮಾಣ ಹಂತದ ಬಹುಮಹಡಿ ಕಟ್ಟಡವೊಂದರಲ್ಲಿ ನಡೆದಿದೆ. ಕ್ರೇನ್ ಅನ್ನು ಕಟ್ಟಡದ 13ನೇ ಮಹಡಿಯಲ್ಲಿ ನಿಲ್ಲಿಸಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೆ, ತಾಂತ್ರಿಕ ದೋಷದಿಂದ ಅದು ಭೀಕರ ಶಬ್ದದೊಂದಿಗೆ ನೇರವಾಗಿ ಕೆಳಗೆ ಬಿದ್ದಿದೆ.

ಆ ಕಟ್ಟಡದ ಕೆಳಗೆ ಹಾಗೂ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಹಲವು ಕಾರು ಮತ್ತು ಬೈಕ್​ಗಳ ಮೇಲೆ ಈ ದೈತ್ಯ ಕ್ರೇನ್ ಬಿದ್ದಿದೆ. ಇದರ ತೀವ್ರತೆಗೆ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಕ್ರೇನ್ ಬಿದ್ದ ರಭಸಕ್ಕೆ ಸ್ಥಳದಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನಗಳಲ್ಲಿದ್ದ ಹಾಗೂ ಹತ್ತಿರದಲ್ಲಿದ್ದ ಇನ್ನು ಕೆಲವು ನಾಗರಿಕರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಭೇಟಿ ನೀಡಿದ್ದು, ವಾಹನಗಳ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ನಾಳೆ ಪ್ರಧಾನಿ ಮೋದಿ ಚಾಲನೆ; ಇದರ ವಿಶೇಷತೆ ಒಂದೆರಡಲ್ಲ! – Kannada News | PM Narendra Modi To Launch India’s First Hydrogen Powered Train in Haryana Tomorrow

ಚಂಡೀಗಢ, ಜುಲೈ 16: ಭಾರತೀಯ ರೈಲ್ವೆ ಇತಿಹಾಸದಲ್ಲಿ ನಾಳೆ (ಜುಲೈ 17) ಮತ್ತೊಂದು ಸುವರ್ಣ ಅಧ್ಯಾಯ ಸೃಷ್ಟಿಯಾಗಲಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ತಯಾರಾಗಿರುವ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ (Hydrogen-powered train) ನಾಳೆ ಹರಿಯಾಣದ ಜಿಂದ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಹಸಿರು ನಿಶಾನೆ ತೋರಿಸಲಿದ್ದಾರೆ. ಚೆನ್ನೈನ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಲ್ಲಿ (ICF) ವಿನ್ಯಾಸಗೊಳಿಸಲಾದ ಈ ರೈಲಿನ ಉದ್ಘಾಟನೆಯೊಂದಿಗೆ, ಪರಿಸರಸ್ನೇಹಿ ರೈಲು ಸಾರಿಗೆಗಾಗಿ ಹೈಡ್ರೋಜನ್ ತಂತ್ರಜ್ಞಾನ ಬಳಸುತ್ತಿರುವ ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕದಂತಹ ವಿಶ್ವದ ಆಯ್ದ ದೇಶಗಳ ಸಾಲಿಗೆ ಭಾರತವೂ ಸೇರಲಿದೆ. ಈ ಪ್ರತಿ ರೈಲಿಗೆ ಸುಮಾರು 80 ಕೋಟಿ ವೆಚ್ಚವಾಗಲಿದೆ.

ಈ ರೈಲಿನ ವಿಶೇಷತೆಯೇನು?:

ಪರಿಸರ ಮಾಲಿನ್ಯ ಮುಕ್ತ ಮತ್ತು ಇಂಧನ ದಕ್ಷತೆಯ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯ ಈ ಪ್ರಾಯೋಗಿಕ ಯೋಜನೆ ದೇಶದ ಮೂಲಸೌಕರ್ಯ ರಂಗದಲ್ಲಿ ದೊಡ್ಡ ಮೈಲಿಗಲ್ಲಾಗಿದೆ. ಸಾಂಪ್ರದಾಯಿಕ ಡೀಸೆಲ್ ರೈಲುಗಳಿಗಿಂತ ಈ ಹೈಡ್ರೋಜನ್ ರೈಲುಗಳು ಅತ್ಯಂತ ಶಬ್ದರಹಿತವಾಗಿ ಚಲಿಸಲಿವೆ. ಘಟಕದಲ್ಲಿ ಹೈಡ್ರೋಜನ್ ಸೋರಿಕೆ ಪತ್ತೆಹಚ್ಚುವ ಯಂತ್ರಗಳು ಮತ್ತು ಜ್ವಾಲೆ ಪತ್ತೆಹಚ್ಚುವ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, ಧೂಳು ಕುಳಿತುಕೊಳ್ಳದಂತೆ ಇವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತದೆ. ಇಲ್ಲಿ ನಿಯೋಜಿಸಲಾದ ಸಿಬ್ಬಂದಿ ಮತ್ತು ರೈಲು ಚಾಲಕರಿಗೆ ಕಟ್ಟುನಿಟ್ಟಾದ ವಿಶೇಷ ತರಬೇತಿ ನೀಡಿ ಸಾಮರ್ಥ್ಯ ಪ್ರಮಾಣಪತ್ರಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಜುಲೈ 17 ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಜಾಗತಿಕವಾಗಿ ಚಲಿಸುವ ಬಹುತೇಕ ಹೈಡ್ರೋಜನ್ ರೈಲುಗಳು ಕೇವಲ 2ರಿಂದ 4 ಬೋಗಿಗಳನ್ನು ಹೊಂದಿದ್ದು, ಸಣ್ಣ ಪ್ರಾದೇಶಿಕ ಮಾರ್ಗಗಳಲ್ಲಿ ಮಾತ್ರ ಸಂಚರಿಸುತ್ತವೆ. ಆದರೆ, ಭಾರತದ ಈ ಹೊಸ ರೈಲು 10 ಬೋಗಿಗಳನ್ನು ಹೊಂದಿದ್ದು, ವಿಶ್ವದ ಅತಿ ದೊಡ್ಡ ಹೈಡ್ರೋಜನ್ ಚಾಲಿತ ಪ್ರಯಾಣಿಕ ರೈಲುಗಳಲ್ಲಿ ಒಂದಾಗಿದೆ. ಈ ಯೋಜನೆಯ ಅಂಗವಾಗಿ ದೇಶದ ಅತಿ ದೊಡ್ಡ ರೈಲ್ವೆ ಹೈಡ್ರೋಜನ್ ಸಂಗ್ರಹಣೆ ಮತ್ತು ಇಂಧನ ಮರುಪೂರಣ ಘಟಕವನ್ನು ಹರಿಯಾಣದ ಜಿಂದ್‌ನಲ್ಲಿ ಸ್ಥಾಪಿಸಲಾಗಿದೆ. ಈ 10 ಬೋಗಿಗಳ ರೈಲು ಗಂಟೆಗೆ 75 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಆದರೆ, ಇದನ್ನು ಗರಿಷ್ಠ 110 ಕಿಲೋಮೀಟರ್ ವೇಗದಲ್ಲಿಯೂ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಬೋಗಿಗಳ ವಿನೂತನ ವಿನ್ಯಾಸ:

ಈ ರೈಲಿನಲ್ಲಿ ಎರಡು ಹೈಡ್ರೋಜನ್ ಡ್ರೈವಿಂಗ್ ಪವರ್ ಕಾರ್‌ಗಳು (DPCs) ಮತ್ತು 8 ಟ್ರೈಲರ್ ಕೋಚ್‌ಗಳು (TCs) ಇರಲಿದ್ದು, ಏಕಕಾಲಕ್ಕೆ ಸುಮಾರು 2,600 ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದು. ಪ್ರತಿ ಪವರ್ ಕಾರ್‌ನಲ್ಲಿ ಇಂಧನ ಕೋಶಗಳು, ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿಗಳು ಮತ್ತು ಹೈಡ್ರೋಜನ್ ಸಂಗ್ರಹಣಾ ಸಿಲಿಂಡರ್‌ಗಳನ್ನು ಅಳವಡಿಸಲಾಗಿದೆ. ಈ ರೈಲು 89 ಕಿಲೋಮೀಟರ್ ಉದ್ದದ ಜಿಂದ್-ಸೋನಿಪತ್ ಪ್ರತ್ಯೇಕ ರೈಲು ಮಾರ್ಗದಲ್ಲಿ ಸಂಚರಿಸಲಿದೆ.

ರೈಲಿನ ವೇಳಾಪಟ್ಟಿ:

ಈ ರೈಲು ತನ್ನ ನಿಯಮಿತ ಸೇವೆಯ ಅವಧಿಯಲ್ಲಿ ಜಿಂದ್ ರೈಲು ನಿಲ್ದಾಣದಿಂದ ಬೆಳಿಗ್ಗೆ 7.40ಕ್ಕೆ ಹೊರಟು, ಬೆಳಿಗ್ಗೆ 9.40ಕ್ಕೆ ಸೋನಿಪತ್ ತಲುಪಲಿದೆ. ಈ ರೈಲು ತನ್ನ ಪ್ರಯಾಣದ ಅವಧಿಯಲ್ಲಿ ಜಿಂದ್ ಸಿಟಿ, ಪಾಂಡು ಪಿಂಡಾರಾ, ಲಲಿತ್ ಖೇರಾ, ಭಾಂಬೇವಾ, ಇಶಾಪುರ್ ಖೇರಿ, ಬುಟಾನಾ, ಖಾಂದ್ರೈ, ಗೋಹಾನಾ, ರಾಭ್ರಾ, ಲಾತ್, ಮೋಹಾನಾ ಹರಿಯಾಣ ಮತ್ತು ಬರ್ವಾಸ್ನಿ ಸೇರಿದಂತೆ ಒಟ್ಟು 12 ನಿಲ್ದಾಣಗಳನ್ನು ಕವರ್ ಮಾಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:44 pm, Thu, 16 July 26

Source link

ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಅನುಮಾನಾಸ್ಪದ ಘಟನೆ: ಸ್ಪ್ರೇ ಮಾಡಿ ಓಡಿಹೋದ ಅನಾಮಿಕ – Kannada News | Mystery Spray at Indiranagar Metro Station: BMRCL Hunts for Anonymous Suspect

ಇಂದಿರಾನಗರ ಮೆಟ್ರೋ‌ ನಿಲ್ದಾಣImage Credit source: tv9 kannada

ಬೆಂಗಳೂರು, ಜುಲೈ 16: ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಒಂದಾದ ಇಂದಿರಾನಗರ ಮೆಟ್ರೋ ಸ್ಟೇಷನ್ ಬಳಿ ಗುರುವಾರ ಸಂಜೆ ಭೀತಿ ಮೂಡಿಸುವಂತಹ ಅನುಮಾನಾಸ್ಪದ ಘಟನೆಯೊಂದು ನಡೆದಿದೆ. ಮೆಟ್ರೋ ನಿಲ್ದಾಣದ ಹೊರಗಿನ ಆವರಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಏನೋ ಸ್ಪ್ರೇ ಮಾಡಿ ಸ್ಥಳದಿಂದ ಓಡಿ ಹೋಗಿರುವ ಘಟನೆ ನಡೆದಿದೆ. ಸದ್ಯ ಅಪರಿಚಿತ ವ್ಯಕ್ತಿಗಾಗಿ ಬಿಎಂಆರ್​ಸಿಎಲ್​ (BMRCL) ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ನಡೆದಿದ್ದೇನು?

ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟ ಪರ್ಪಲ್ ಲೈನ್ ವ್ಯಾಪ್ತಿಗೆ ಬರುವ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಸಂಜೆ 7:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕಚೇರಿ ಮುಗಿಸಿ ಮನೆಗೆ ಮರಳುವ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದ ಸಮಯದಲ್ಲಿ ಈ ಕೃತ್ಯ ನಡೆದಿದೆ.

ಪ್ರಯಾಣಿಕರಲ್ಲಿ ಆತಂಕ: ಮೂಗು ಮುಚ್ಚಿಗೊಂಡು ಓಡಾಟ

ಅನಾಮಿಕ ವ್ಯಕ್ತಿ ಸ್ಪ್ರೇ ಮಾಡಿದ ಬಳಿಕ ಸುತ್ತಮುತ್ತ ಹೊಗೆ ಆವರಿಸಿದರಿಂದ ಅಲ್ಲಿದ್ದ ಸಾರ್ವಜನಿಕರು ಹಾಗೂ ಪ್ರಯಾಣಿಕರು ಉಸಿರಾಡಲು ತೊಂದರೆಯಾಗಿ ಮೂಗು ಮುಚ್ಚಿಕೊಂಡು ಆತಂಕದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ವ್ಯಕ್ತಿ ಏನು ಸ್ಪ್ರೇ ಮಾಡಿದ ಮತ್ತು ಯಾವ ಉದ್ದೇಶಕ್ಕಾಗಿ ಇಂತಹ ಕೃತ್ಯ ಎಸಗಿದ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಮತ್ತೊಂದು ಹೊಸ ಟ್ರೇನ್: ಹೆಬ್ಬಗೋಡಿ ಡಿಪೋ ತಲುಪಿದ 14ನೇ ಡ್ರೈವರ್ ಲೆಸ್ ರೈಲು

ಇನ್ನು ಈ ದಿಢೀರ್​​ ಘಟನೆಯಿಂದಾಗಿ ಇಂದಿರಾನಗರ ಮೆಟ್ರೋ‌ ನಿಲ್ದಾಣದ ಆವರಣದಲ್ಲಿ ಕೆಲಕಾಲ ಸಾರ್ವಜನಿಕರು ತೀವ್ರ ಗಾಬರಿಗೊಂಡಿದ್ದರು. ಕೂಡಲೇ ಅಲರ್ಟ್​ ಆದ ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಸ್ಪ್ರೇ ಮಾಡಿ ಪರಾರಿಯಾಗಿರುವ ಆ ಅನಾಮಿಕ ವ್ಯಕ್ತಿಗಾಗಿ ನಿಲ್ದಾಣ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs ENG: ಕೈಕೊಟ್ಟ ಆಲ್‌ರೌಂಡರ್​ಗಳು; ಅಲ್ಪ ಮೊತ್ತಕ್ಕೆ ಕುಸಿದ ಟೀಂ ಇಂಡಿಯಾ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 233 ರನ್​ಗಳಿಗೆ ಆಲೌಟ್ ಆಗಿದೆ. ತಂಡಕ್ಕೆ ಉತ್ತಮ ಆರಂಭ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಆಲ್‌ರೌಂಡರ್​ಗಳ ಕಳಪೆ ಬ್ಯಾಟಿಂಗ್​ನಿಂದಾಗಿ ಈ ಪಂದ್ಯದಲ್ಲಿ ಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗದೆ 44 ಓವರ್​ಗಳಿಗೆ ಆಲೌಟ್ ಆಯಿತು. ತಂಡದ ಪರ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕದ ಇನ್ನಿಂಗ್ಸ್ ಆಡಿದರು.

Source link

ಬಹಿರಂಗವಾಗಿ ವಿಜಯ್, ತ್ರಿಷಾ ಬಗ್ಗೆ ಹಾಸ್ಯ ಮಾಡಿದ ಮಲಯಾಳಂ ನಟ; ವಿಡಿಯೋ ವೈರಲ್ – Kannada News | Dhyan Sreenivasan jokes on CM Vijay Trisha Krishnan Navya Nair in Visitor Movie promotion

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಹಾಗೂ ನಟಿ ತ್ರಿಷಾ ಕೃಷ್ಣನ್ ನಡುವಿನ ಸ್ನೇಹ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಇದೀಗ ಮಲಯಾಳಂನ ಖ್ಯಾತ ನಟ ಧ್ಯಾನ್ ಶ್ರೀನಿವಾಸನ್ (Dhyan Sreenivasan) ಅವರು ಈ ಜೋಡಿಯ ಕಾಲೆಳೆಯುವ ಮೂಲಕ ಸಖತ್ ಸುದ್ದಿಯಾಗಿದ್ದಾರೆ. ತಮ್ಮ ಮುಂಬರುವ ‘ವಿಸಿಟರ್’ (Visitor) ಸಿನಿಮಾದ ಪ್ರಚಾರದ ವೇಳೆ ಧ್ಯಾನ್ ಮಾಡಿದ ತಮಾಷೆಯಿಂದಾಗಿ ಹಲವರಿಗೆ ಅಚ್ಚರಿ ಆಗಿದೆ.

‘ನಾನು ಕೇರಳದ ಮುಖ್ಯಮಂತ್ರಿ ಆಗ್ತೀನಿ’

ಕಾರ್ಯಕ್ರಮದಲ್ಲಿ ಮಾತನಾಡಿದ ಧ್ಯಾನ್, ‘ಇತ್ತೀಚೆಗೆ ನಾನು ಸಿನಿಮಾಗಳಿಗಿಂತ ಹೆಚ್ಚಾಗಿ ಸ್ಟೇಜ್ ಶೋಗಳು ಮತ್ತು ಜಾಹೀರಾತುಗಳ ಕಡೆ ಗಮನ ಹರಿಸುತ್ತಿದ್ದೇನೆ. ನಾನು ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮವೊಂದನ್ನು ಮಾಡುತ್ತಿದ್ದಾಗ, ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾದರು. ಅದನ್ನು ನೋಡಿ ನಾನು ಮುಂದಿನ 15 ವರ್ಷಗಳ ಕಾಲ ಅವರ ಹಾದಿಯನ್ನೇ ಅನುಸರಿಸಲು ನಿರ್ಧರಿಸಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಮುಂದುವರಿದು ಮಾತನಾಡಿದ ಅವರು, ‘ನನ್ನ ಗೆಳೆಯ ಅಜು ವರ್ಗೀಸ್ ನನಗೆ ಮೊದಲು ಕಲಾವಿದರ ಸಂಘದ ಪ್ರೆಸಿಡೆಂಟ್ ಆಗು, ಆಮೇಲೆ ಸಮಾಜ ಸೇವೆ ಮಾಡಿ ಜನರನ್ನು ಒಲಿಸಿಕೊಂಡು ಸಿಎಂ ಆಗು ಎಂದು ಸಲಹೆ ನೀಡಿದ್ದ. ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಫೋನ್ ಮಾಡಿ, ಕಲಾವಿದರ ಸಂಘದಲ್ಲಿ ಭಾರಿ ವಿವಾದಗಳು ನಡೆಯುತ್ತಿವೆ. ನೀನು ಸಿಎಂ ಅಥವಾ ಪ್ರೆಸಿಡೆಂಟ್ ಯಾವುದೂ ಆಗಬೇಡ. ನಿನಗೆ ಗವರ್ನರ್ ಹುದ್ದೆಯೇ ಬೆಸ್ಟ್. ಅಲ್ಲಿ ಅಷ್ಟಾಗಿ ಕೆಲಸ ಇರಲ್ಲ ಅಂತ ಕಾಲೆಳೆದಿದ್ದ’ ಎಂದಾಗ ಪ್ರೇಕ್ಷಕರು ನಗೆಗಡಲಲ್ಲಿ ಮುಳುಗಿದರು.

ನವ್ಯಾ ನಾಯರ್ ಮುಂದಿನ ಸೀಟಿನಲ್ಲಿ ಕಣ್ಣೀರು ಹಾಕ್ತಾರೆ:

ಅಷ್ಟಕ್ಕೇ ನಿಲ್ಲಿಸದ ಧ್ಯಾನ್ ಶ್ರೀನಿವಾಸನ್, ತಮ್ಮ ‘ವಿಸಿಟರ್’ ಸಿನಿಮಾದ ನಾಯಕಿ ನವ್ಯಾ ನಾಯರ್ ಅವರ ಕಾಲೆಳೆದರು. ‘ನಾವು ತುಂಬಾ ವರ್ಷಗಳ ನಂತರ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ನವ್ಯಾಗೆ ಈಗ ಮದುವೆಯಾಗಿ ಒಬ್ಬ ಮಗನಿದ್ದಾನೆ. ಆದರೂ ಪರವಾಗಿಲ್ಲ, ನಾನು ಕೇರಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ನವ್ಯಾ ನಾಯರ್ ಮುಂದಿನ ಸಾಲಿನಲ್ಲಿ ಸೀರೆ ಧರಿಸಿ, ಕಣ್ಣಲ್ಲಿ ಆನಂದ ಬಾಷ್ಪ ಸುರಿಸುತ್ತಾ ಕುಳಿತುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದರು.

ಇದಕ್ಕೆ ನವ್ಯಾ ನಾಯರ್ ಕೂಡ ಅಷ್ಟೇ ತಮಾಷೆಯಾಗಿ ಪ್ರತಿಕ್ರಿಯಿಸಿ, ‘ಚಿಂತೆ ಮಾಡಬೇಡ ಧ್ಯಾನ್, ನೀನು ಸಿಎಂ ಆದಾಗ ನಿನ್ನ ಆಸೆಯಂತೆಯೇ ನಾನು ಗ್ರೀನ್ ಬಾರ್ಡರ್ ಇರುವ ಬಿಳಿ ಸೀರೆ ಮತ್ತು ವಜ್ರದ ಹಾರ ಧರಿಸಿ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುತ್ತೇನೆ. ಕಣ್ಣೀರು ಹಾಕುತ್ತಾ ನಿನ್ನ ಪರವಾಗಿ ಜಯಘೋಷ ಕೂಗುತ್ತೇನೆ. ಆದರೆ ನನಗೆ ಮುಂಭಾಗದ ಸಾಲಿನಲ್ಲಿ ಸೀಟು ಬುಕ್ ಮಾಡ್ತೀಯಾ ತಾನೇ?’ ಎಂದು ಕಾಲೆಳೆದರು.

ಇದನ್ನೂ ಓದಿ: ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’

ವಿಜಯ್ ಅವರಲ್ಲಿ ಕ್ಷಮೆ ಕೇಳಿದ ಗೆಳೆಯ ಅಜು:

ಧ್ಯಾನ್ ಶ್ರೀನಿವಾಸನ್ ಅವರ ಈ ಮಾತುಗಳ ನಂತರ ಸ್ಟೇಜ್‌ಗೆ ಬಂದ ಅಜು ವರ್ಗೀಸ್ ಅವರು ತಮಿಳು ನಟ ವಿಜಯ್ ಅವರಲ್ಲಿ ನೇರವಾಗಿಯೇ ಕ್ಷಮೆ ಕೇಳಿದರು. ‘ಒಂದು ವಿಷಯಂತೂ ಗ್ಯಾರಂಟಿ, ಇನ್ಮುಂದೆ ನಾನು ತಮಿಳುನಾಡಿಗೆ ಕಾಲಿಡಲು ಸಾಧ್ಯವಿಲ್ಲ. ನನ್ನ ಪ್ರೀತಿಯ ಸಿಎಂ ವಿಜಯ್ ಸರ್, ನನ್ನ ಈ ಹುಚ್ಚು ಗೆಳೆಯನನ್ನು ದಯವಿಟ್ಟು ಕ್ಷಮಿಸಿ. ಅವನಿಗೆ ತಲೆ ಕೆಟ್ಟಿದೆ, ನಾನೇನೂ ಮಾಡಲು ಸಾಧ್ಯವಿಲ್ಲ’ ಎಂದು ಮನವಿ ಮಾಡಿಕೊಂಡರು.

ಈ ರೀತಿ ತಮಾಷೆ ಮಾಡಲು ಕಾರಣ ಏನು?

ಧ್ಯಾನ್ ಶ್ರೀನಿವಾಸನ್ ಅವರ ಈ ತಮಾಷೆಗೆ ಕಾರಣ ಇದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವದಂತಿಗಳ ನಡುವೆಯೇ, ತ್ರಿಷಾ ಜೊತೆಗಿನ ವಿಜಯ್ ಸ್ನೇಹ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇತ್ತೀಚೆಗೆ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ, ತ್ರಿಷಾ ಅವರು ವಿಜಯ್ ಅವರ ತಂದೆ-ತಾಯಿಯ ಜೊತೆ ಮುಂಭಾಗದ ಸಾಲಿನಲ್ಲಿ ಕುಳಿತುಕೊಂಡು ಭಾವುಕರಾಗಿದ್ದರು. ಇದೇ ಘಟನೆಯನ್ನು ಧ್ಯಾನ್ ಶ್ರೀನಿವಾಸನ್ ಈಗ ತಮ್ಮದೇ ಶೈಲಿಯಲ್ಲಿ ಅಣಕಿಸಿದ್ದು, ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs ENG: ಹಿಟ್​ಮ್ಯಾನ್ ಅಲ್ಲ, ಟೆಸ್ಟ್ ಮ್ಯಾನ್..! ಏನಾಯ್ತು ರೋಹಿತ್ ಶರ್ಮಾ? – Kannada News | Rohit Sharma’s Struggle: Can He Secure 2027 World Cup Spot Amidst Poor Form?

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಲುವಾಗಿ ಹೋರಾಟ ನಡೆಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾಗೆ ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 79 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಲಯ ಕಂಡುಕೊಳ್ಳುವ ಸುಳಿವು ನೀಡಿದ್ದ ರೋಹಿತ್ ಶರ್ಮಾಗೆ ಇಂಗ್ಲೆಂಡ್‌ ಪ್ರವಾಸ ದುಃಸ್ವಪ್ನವಾಗಿ ಕಾಡುತ್ತಿದೆ. ಹೊಡಿಬಡಿ ಆಟದ ಮೂಲಕ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಡುತ್ತಿದ್ದ ರೋಹಿತ್​ಗೆ ಇಂಗ್ಲೆಂಡ್‌ ನೆಲದಲ್ಲಿ ಮುಕ್ತವಾಗಿ ರನ್ ಕಲೆಹಾಕಲು ಸಾಧ್ಯವಾಗುತ್ತಿಲ್ಲ.

ಒತ್ತಡಕ್ಕೆ ಸಿಲುಕಿದ ರೋಹಿತ್

ಹೀಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಕೇವಲ 11 ರನ್‌ಗಳಿಗೆ ಔಟಾಗಿದ್ದ ರೋಹಿತ್ ಎರಡನೇ ಪಂದ್ಯದಲ್ಲಿ ಕೇವಲ 26 ರನ್ ಗಳಿಸುವಲ್ಲಿ ಯಶಸ್ವಿಯಾದರು. ಮತ್ತೊಮ್ಮೆ ಸೆಟ್ ಆದ ನಂತರ ವಿಕೆಟ್ ಕಳೆದುಕೊಂಡಿದ್ದು ರೋಹಿತ್ ಅವರ ಕಳಪೆ ಫಾರ್ಮ್​ಗೆ ಹಿಡಿದ ಕೈಗನ್ನಡಿಯಾಗಿತ್ತು. ಅದರಲ್ಲೂ ಕಾರ್ಡಿಫ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್​ಗೆ ಸತತ 10 ಎಸೆತಗಳಿಗೆ ರನ್​ ಕಲೆಹಾಕಲು ಸಾಧ್ಯವಾಗಲಿಲ್ಲ. ಇದರಿಂದ ಒತ್ತಡಕ್ಕೆ ಸಿಲುಕಿದ ರೋಹಿತ್ ಇಲ್ಲದ ಶಾಟ್ ಆಡಲು ಯತ್ನಿಸಿ ವಿಕೆಟ್ ಕೈಚೆಲ್ಲಿದರು.

ಶೇ. 29.1 ರಷ್ಟು ಕಳಪೆ ಶಾಟ್‌

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಆರಂಭದಿಂದಲೂ ಪ್ರತಿಯೊಂದು ರನ್​ಗೆ ಸಾಕಷ್ಟು ಹೆಣಗಾಟ ನಡೆಸಿದರು. ಹೀಗಾಗಿ ರೋಹಿತ್ ಈ ಪಂದ್ಯದಲ್ಲಿ ಬರೋಬ್ಬರಿ 47 ಎಸೆತಗಳನ್ನು ಎದುರಿಸಿ ಕೇವಲ 26 ರನ್ ಕಲೆಹಾಕಿದರು. ಈ ಹಿಂದೆ ರೋಹಿತ್ ಆಟವನ್ನು ನೋಡಿದವರಿಗೆ ಅವರ ಈ ಹೋರಾಟ ನಿಜಕ್ಕೂ ಅಚ್ಚರಿ ಮೂಡಿಸಿತು. ಕಾರ್ಡಿಫ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಶೇ. 29.1 ರಷ್ಟು ಕಳಪೆ ಶಾಟ್‌ ಆಡಿದರು . 2014 ರ ನಂತರ ರೋಹಿತ್ ಶರ್ಮಾ ಅವರ ಕಳಪೆ ಶಾಟ್‌ಗಳ ಶೇಕಡಾವಾರು ಇಷ್ಟೊಂದು ಹೆಚ್ಚಿರುವುದು ಇದೇ ಮೊದಲು. ರೋಹಿತ್ ಇದೇ ರೀತಿಯ ಆಟವನ್ನು ಮುಂದುವರಿಸಿದರೆ, 2027 ರ ವಿಶ್ವಕಪ್‌ವರೆಗೆ ಅವರು ತಂಡದಲ್ಲಿ ಉಳಿಯುವುದು ಕಷ್ಟಕರವಾಗಿರುತ್ತದೆ.

ರೋಹಿತ್ ಶರ್ಮಾ ಹೋರಾಟ

ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಪ್ರದರ್ಶನ ತೀರ ಕಳಪೆಯಾಗಿದೆ. 2026 ರಲ್ಲಿ ರೋಹಿತ್ ಆಡಿರುವ ಎಂಟು ಇನ್ನಿಂಗ್ಸ್‌ಗಳಲ್ಲಿ ಕೇವಲ 241 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 30.12 ಆಗಿದ್ದು ಕೇವಲ ಒಂದು ಅರ್ಧಶತಕವನ್ನು ಮಾತ್ರ ಬಾರಿಸಿದ್ದಾರೆ. ಇಂಗ್ಲೆಂಡ್ ಏಕದಿನ ಸರಣಿಯ ಸಮಯದಲ್ಲಿ, ಮುಖ್ಯ ಕೋಚ್ ಗೌತಮ್ ಗಂಭೀರ್ ರೋಹಿತ್ ಅವರನ್ನು ಮುಕ್ತವಾಗಿ ಆಡುವಂತೆ ಕೇಳಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಎರಡೂ ಇನ್ನಿಂಗ್ಸ್‌ಗಳಲ್ಲಿ ನಿಧಾನಗತಿಯ ಇನ್ನಿಂಗ್ಸ್‌ ಆಡುವ ಮೂಲಕ ರೋಹಿತ್ ಒತ್ತಡಕ್ಕೆ ಸಿಲುಕಿ ತಮ್ಮ ವಿಕೆಟ್ ಕೈಚೆಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ, ಒಟ್ಟು 90ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ – Kannada News | Major surgery In health Department, Karnataka Government Transfers 40 Officers

ಬೆಂಗಳೂರು, (ಜುಲೈ 16): ರಾಜ್ಯ ಸರ್ಕಾರದ ಸಾರ್ವತ್ರಿಕ ವರ್ಗಾವಣೆ ನಡೆಯುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. 9 ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು, ಓರ್ವ ಅಪರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ, ಮೂವರು ಜಿಲ್ಲಾ ಸರ್ಜನ್​​, ಇಲಾಖೆಯ 8 ಉಪನಿರ್ದೇಶಕರು, 8 ಪ್ರಾಂಶುಪಾಲರು ಮತ್ತಯ 42 ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು, 21 THOಗಳು ಸೇರಿ 90ಕ್ಕೂ ಹೆಚ್ಚು ಅಧಿಕಾರಿಗಳನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

40 ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ

ಕರ್ನಾಟಕ 40 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 40 RFO ಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಇಂದು (ಜುಲೈ 16) ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ವಿಧಾನಸೌಧ, ಸಚಿವಾಲಯಗಳಿಗೂ ತಟ್ಟಿದ ಬರಗಾಲದ ಬಿಸಿ: ನೀರು, ವಿದ್ಯುತ್‌ ಉಳಿತಾಯಕ್ಕೆ ಕಟ್ಟುನಿಟ್ಟಿನ ಸೂಚನೆ

ವರ್ಗಾವಣೆಗೊಂಡಿದ್ದ ಇಬ್ಬರು IPS ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ

ವರ್ಗಾವಣೆಗೊಂಡಿದ್ದ ಇಬ್ಬರು IPS ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿಶಾ ಜೇಮ್ಸ್, ಮಾನೆ ಸ್ವಪ್ನಿಲ್ ತುಕಾರಾಮ್ ಅವರಿಗೆ ಸ್ಥಳ ನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ. ನಿಶಾ ಜೇಮ್ಸ್- ಪೊಲೀಸ್ ವರಿಷ್ಠಾಧಿಕಾರಿ (ಗುಪ್ತಚರ ಇಲಾಖೆ), ಮಾನೆ ಸ್ವಪ್ನಿಲ್ ತುಕಾರಾಮ್ ಅವರನ್ನು ಕಲಬುರಗಿ ಇಂಟೆಲಿಜೆನ್ಸ್ ಎಸ್​ಪಿಯಾಗಿ ನಿಯೋಜನೆ ಮಾಡಲಾಗಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾಗಿದ್ದ ದಿವ್ಯಾ ಪ್ರಭು ಜಿ.ಆರ್.ಜೆ. ಅವರನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಇದರೊಂದಿಗೆ, ಅವರು ತಮ್ಮ ಹಿಂದಿನ ಹುದ್ದೆಯಾದ ಗ್ರಾಮೀಣಾಭಿವೃದ್ಧಿ ಆಯುಕ್ತ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ಸಹ ಮುಂದುವರಿಸಲಿದ್ದಾರೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಪಿ. ರುದ್ರಪ್ಪಯ್ಯ ಅವರನ್ನು ವರ್ಗಾವಣೆ ಮಾಡಲಾಗಿದ್ದು, ತೆರವಾಗಿದ್ದ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ನೇಮಕ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನಸೌಧ, ಸಚಿವಾಲಯಗಳಿಗೂ ತಟ್ಟಿದ ಬರಗಾಲದ ಬಿಸಿ: ನೀರು, ವಿದ್ಯುತ್‌ ಉಳಿತಾಯಕ್ಕೆ ಕಟ್ಟುನಿಟ್ಟಿನ ಸೂಚನೆ – Kannada News | Karnataka Government Offices: Vidhana Soudha Enforces Strict Water and Power Saving Measures Amid Drought

ಬೆಂಗಳೂರು, ಜುಲೈ 16: ರಾಜ್ಯದ ಯಾವ ದಿಕ್ಕಿಗೆ ಹೋದರೂ ನೀರಿಲ್ಲ. ಕಳೆದ ವಾರ ಅಲ್ಪ ಸ್ವಲ್ಪ ಮಳೆಯಾದರೂ (Rain) ರಾಜ್ಯದ ಜಲಾಶಯಗಳು ತುಂಬುವಷ್ಟು ಒಳ ಹರಿವು ಬಂದಿಲ್ಲ. ಸದ್ಯ ರಾಜ್ಯದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ವಿಧಾನಸೌಧ ಮತ್ತು ಸಚಿವಾಲಯಗಳಿಗೂ ಬರಗಾಲದ ಬಿಸಿ ತಟ್ಟಿದ್ದು, ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಗಟ್ಟುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಗುರುವಾರ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್​ರಿಂದ ಕಟ್ಟುನಿಟ್ಟಿನ ಆದೇಶ

ದೇಶದಲ್ಲಿ ಎಲ್‌ನಿನೋ ಹವಾಮಾನ ವೈಪರೀತ್ಯದಿಂದಾಗಿ ಮಳೆಯ ಕೊರತೆ ಉಂಟಾಗಿದ್ದು, ಕೃಷಿ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಬರಗಾಲದ ಬಿಸಿ ಈಗ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಮತ್ತು ವಿಕಾಸಸೌಧಕ್ಕೂ ತಟ್ಟಿದೆ. ಸರ್ಕಾರಿ ಕಚೇರಿಗಳಲ್ಲಿ ನೀರು ಮತ್ತು ವಿದ್ಯುತ್ ಪೋಲಾಗುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಜಿ. ಪರಮೇಶ್ವರ್ ಪತ್ರ, ತಕ್ಷಣ ನೆರವಿಗೆ ಮನವಿ

ಇತ್ತೀಚಿನ ದಿನಗಳಲ್ಲಿ ಕಚೇರಿ ಸಮಯ ಮುಗಿದ ನಂತರವೂ ವಿದ್ಯುತ್ ದೀಪ, ಫ್ಯಾನ್, ಕಂಪ್ಯೂಟರ್ ಹಾಗೂ ಎಸಿ ಸಾಧನಗಳನ್ನು ಆಫ್ ಮಾಡದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಸಚಿವಾಲಯದ ಎಲ್ಲಾ ಇಲಾಖೆಗಳು, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಪಾಲಿಸಬೇಕಾದ ನಿರ್ದೇಶನಗಳನ್ನು ನೀಡಿದ್ದಾರೆ.

ಪ್ರಮುಖ ನಿರ್ದೇಶನಗಳು ಮತ್ತು ನಿಯಮಗಳು

  • ನೈಸರ್ಗಿಕ ಬೆಳಕಿನ ಬಳಕೆ: ಸಚಿವಾಲಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನೈಸರ್ಗಿಕ ಬೆಳಕನ್ನು ಬಳಸಬೇಕು. ಕಚೇರಿಗಳ ಕಿಟಕಿಗಳನ್ನು ಪೂರ್ತಿ ತೆರೆದಿಟ್ಟು, ಅಗತ್ಯವಿದ್ದಾಗ ಮಾತ್ರ ದೀಪ ಮತ್ತು ಫ್ಯಾನ್‌ಗಳನ್ನು ಆನ್ ಮಾಡಬೇಕು.
  • ಸಂಜೆ 6 ಗಂಟೆಯ ನಂತರ ಕಠಿಣ ನಿಗಾ: ಪ್ರತಿ ಮಹಡಿಯ ಕಾವಲುಗಾರರು ಮತ್ತು ಭದ್ರತಾ ಸಿಬ್ಬಂದಿ ಸಂಜೆ 6 ಗಂಟೆಯ ನಂತರ ಅನಗತ್ಯ ವಿದ್ಯುತ್ ದೀಪಗಳನ್ನು ನಂದಿಸಲಾಗಿದೆಯೇ ಹಾಗೂ ಬೆಳಿಗ್ಗೆ 6ಗಂಟೆಗೆ ಆಫ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.
  • ಸ್ವಿಚ್-ಆಫ್ ಕಡ್ಡಾಯ: ಸಚಿವರು ಮತ್ತು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ ಹಾಗೂ ಕಚೇರಿ ವೇಳೆ ಮುಕ್ತಾಯವಾದ ನಂತರ ವಿದ್ಯುತ್ ಸಂಪರ್ಕದ ಎಲ್ಲಾ ಸ್ವಿಚ್‌ಗಳನ್ನು ಕಡ್ಡಾಯವಾಗಿ ಆಫ್ ಮಾಡಬೇಕು. ಕಚೇರಿಗೆ ಬೀಗ ಹಾಕುವ ಮುನ್ನ ಇದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆಪ್ತ ಕಾರ್ಯದರ್ಶಿಗಳು ಮತ್ತು ಭದ್ರತಾ ಸಿಬ್ಬಂದಿಯದ್ದಾಗಿರುತ್ತದೆ.
  • AC ತಾಪಮಾನ ನಿಯಂತ್ರಣ: ಅಧಿಕಾರಿಗಳ ಕಚೇರಿಗಳಲ್ಲಿನ AC ಕಡ್ಡಾಯವಾಗಿ 24-26°C ತಾಪಮಾನದಲ್ಲೇ ಬಳಸಬೇಕು.
  • ತಂತ್ರಜ್ಞಾನದ ಅಳವಡಿಕೆ: ಸಾಂಪ್ರದಾಯಿಕ ದೀಪಗಳ ಬದಲಿಗೆ ದೀರ್ಘಕಾಲ ಬಾಳಿಕೆ ಬರುವ ಎಲ್‌ಇಡಿ ದೀಪಗಳನ್ನು ಅಳವಡಿಸುವುದು ಹಾಗೂ ಕಾರಿಡಾರ್‌ಗಳು, ವಿಶ್ರಾಂತಿ ಕೊಠಡಿಗಳು ಮತ್ತು ಸಭಾಂಗಣಗಳಲ್ಲಿ ಚಲನಶೀಲ ಸಂವೇದಕಗಳನ್ನು ಅಳವಡಿಸಲು ಸೂಚಿಸಲಾಗಿದೆ.
  • ನೀರು ಪೋಲಾಗುವುದಕ್ಕೆ ಬ್ರೇಕ್: ಶೌಚಾಲಯ ಹಾಗೂ ಕಚೇರಿಗಳಲ್ಲಿ ನಲ್ಲಿಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ನೀರಿನ ಹರಿವು ಕಡಿಮೆ ಮಾಡಲು ವಾಟರ್ ಏರೇಟರ್‌ಗಳನ್ನು ಅಳವಡಿಸಲಾಗುವುದು ನಲ್ಲಿಗಳಲ್ಲಿ ಸೋರಿಕೆಯಿದ್ದರೆ ತಕ್ಷಣ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಬೇಕು.

ಇದನ್ನೂ ಓದಿ: Karnataka Weather Update: ಬೆಂಗಳೂರಿಗರಿಗೆ ಕೊನೆಗೂ ತಂಪೆರೆದ ವರುಣ; ರಾಜ್ಯದ ಹಲವೆಡೆಯೂ ಮಳೆ ಮುನ್ಸೂಚನೆ

ಪ್ರಸ್ತುತ ಹವಾಮಾನ ವೈಪರೀತ್ಯದಿಂದಾಗಿ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಮತ್ತು ನೀರಿನಂತಹ ಅತ್ಯಮೂಲ್ಯ ಸಂಪನ್ಮೂಲಗಳನ್ನು ಅಪವ್ಯಯ ಮಾಡದೆ ಮಿತವಾಗಿ ಬಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಆದೇಶವನ್ನು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲಿನಿ ರಜನೀಶ್ ಆದೇಶಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version