ಗದಗದಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು – Kannada News | Drought situation across Karnataka: Farmers Tears As Rain deficit At Gadag

ಗದಗ, (ಜುಲೈ 07): ಕರ್ನಾಟಕದ ಪಕ್ಕದ ರಾಜ್ಯಗಳಾದ ಕೇರಳ, ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲದೇ ನಮ್ಮ ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಆದ್ರೆ, ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ವರುಣ ಕೃಪೆ ತೋರಿಸುತ್ತಿಲ್ಲ. ಗದನಲ್ಲೂ ಸಹ ಮುಂಗಾರು ಮಳೆ ಕೈಕೊಟ್ಟಿದ್ದು, ಹೆಸರು, ಗೋವಿನ ಜೋಳ, ಮೆಣಸಿನಕಾಯಿ ಸೇರಿ ಬಿತ್ತಿದ ಹಲವು ಬೆಳೆಗಳು ಒಣಗುತ್ತಿವೆ. ಇದರಿಂದ ರೈತರು ಮಂಡಿಯೂರಿ ಕಣ್ಣೀರಿಟ್ಟಿರುವ ದೃಶ್ಯ ಮನಕಲಕುವಂತಿದೆ. ಮಳೆ ಇವತ್ತು ಬರುತ್ತೆ ನಾಳೆ ಎಂದು ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಸಂಜೀವ ಪಾಂಡ್ರೆ ನೀಡಿದ ಪ್ರತ್ಯಕ್ಷ ವರದಿ‌ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಳ್ತಂಗಡಿ: ಗಡಾಯಿಕಲ್ಲು ಚಾರಣ ಪ್ರಿಯರಿಗೆ ನಿರಾಸೆ; ಜು. 8 ರಿಂದ ಟ್ರೆಕ್ಕಿಂಗ್ ತಾತ್ಕಾಲಿಕ ನಿಷೇಧಿಸಿ ಅರಣ್ಯ ಇಲಾಖೆ ಆದೇಶ – Kannada News | Dakshina Kannada Rains: Gadaikallu Trekking Prohibited for Safety; Landslide Warning

ಬೆಳ್ತಂಗಡಿ, ಜು.7: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ‘ಗಡಾಯಿಕಲ್ಲು’ (Gadaikallu) ಚಾರಣಕ್ಕೆ ಜುಲೈ 8 ರಿಂದ ಜಾರಿಗೆ ಬರುವಂತೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ನಿರಂತರ ಮಳೆಯಿಂದಾಗಿ ಗಡಾಯಿಕಲ್ಲು ಬೆಟ್ಟದ ಕಲ್ಲುಗಳು ಮತ್ತು ಹಾದಿ ವಿಪರೀತ ಜಾರುತ್ತಿರುವುದರಿಂದ ಚಾರಣ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಸಾರ್ವಜನಿಕರ ಹಾಗೂ ಚಾರಣಿಗರ ಪ್ರವೇಶಕ್ಕೆ ಕಡ್ಡಾಯ ನಿಬಂಧನೆ ವಿಧಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಈ ವರ್ಷ ಜೂನ್ 1 ರಂದು ಗಡಾಯಿಕಲ್ಲು ಚಾರಣಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಆದರೆ, ಆರಂಭಗೊಂಡ ಕೆಲವೇ ದಿನಗಳಲ್ಲಿ ಮಳೆಯ ಕಾರಣದಿಂದಾಗಿ ಮೊದಲ ಬಾರಿಗೆ ನಿಷೇಧ ಹೇರಲಾಗಿತ್ತು. ತದನಂತರ ಪರಿಸ್ಥಿತಿ ಸುಧಾರಿಸಿದ್ದನ್ನು ನೋಡಿ ಜೂನ್ 25 ರಂದು ಚಾರಣಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿರುವುದರಿಂದ, ಜುಲೈ 8 ರಿಂದ ಅನ್ವಯವಾಗುವಂತೆ ಮತ್ತೊಮ್ಮೆ ಟ್ರೆಕ್ಕಿಂಗ್‌ಗೆ ಬ್ರೇಕ್ ಹಾಕಲಾಗಿದೆ.

ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ ಹೊನ್ನೆತಾಳು, ಬಿರುನಾನಿಯಲ್ಲಿ ದಾಖಲೆ ಬರೆದ ಮಳೆ

ಮಂಗಳೂರಿನಲ್ಲಿ ಮುಂದಿನ 24 ಗಂಟೆ ಭಾರೀ ಮಳೆ:

ಕರಾವಳಿ ಜಿಲ್ಲೆಯ ಜನತೆಗೆ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದಿನ 24 ಗಂಟೆಗಳ ಅವಧಿಯಲ್ಲಿ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಜಾಗರೂಕರಾಗಿರಲು ಸೂಚಿಸಲಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯ ಅಬ್ಬರ ಅತ್ಯಂತ ತೀವ್ರವಾಗಿರಲಿದ್ದು, ಸುಮಾರು 130 ಮಿ.ಮೀ ನಷ್ಟು ಭಾರಿ ಮಳೆಯಾಗುವ ಸಾಧ್ಯತೆ ಇದೆ. ನಿರಂತರವಾಗಿ ಸುರಿಯಲಿರುವ ಈ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಾಗಿದೆ.

ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ಮತ್ತು ಗುಡ್ಡಗಾಡು ವಲಯಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಎಚ್ಚರಿಸಲಾಗಿದೆ. ಹೀಗಾಗಿ ಘಾಟಿ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಗುಡ್ಡದ ತಪ್ಪಲಿನಲ್ಲಿ ವಾಸಿಸುವ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಕಂದಾಯ ಹಾಗೂ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋರ್ಟ್ ರಾಜಕೀಯ ವೇದಿಕೆಯಲ್ಲ; ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ಡಿಎಂಕೆ ಅರ್ಜಿ ಸ್ವೀಕರಿಸಲು ಸುಪ್ರೀಂ ಕೋರ್ಟ್ ನಕಾರ – Kannada News | Dont Make Court A Political Forum Supreme Court Refuses To Entertain DMK Plea In Karur Stampede Case

ನವದೆಹಲಿ, ಜುಲೈ 7: ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ನಡೆದ ಭೀಕರ ಕಾಲ್ತುಳಿತದ (Karur Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಡಿಎಂಕೆ (DMK) ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಇಂದು (ಜುಲೈ 7) ನಿರಾಕರಿಸಿದೆ. ಈ ವೇಳೆ ನ್ಯಾಯಾಲಯವು ರಾಜಕೀಯ ಪಕ್ಷಗಳಿಗೆ ಕಟು ಎಚ್ಚರಿಕೆಯನ್ನೂ ನೀಡಿದೆ. ಕರೂರ್ ಕಾಲ್ತುಳಿತ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ರಜೆ ಕಾಲದ ಪೀಠವು “ರಾಜಕೀಯ ಲಾಭಕ್ಕಾಗಿ ನ್ಯಾಯಾಲಯವನ್ನು ರಾಜಕೀಯ ವೇದಿಕೆಯನ್ನಾಗಿ ಬಳಸಿಕೊಳ್ಳಬೇಡಿ” ಎಂದು ಡಿಎಂಕೆ ಪಕ್ಷಕ್ಕೆ ನೇರವಾಗಿ ಎಚ್ಚರಿಕೆ ನೀಡಿತು.

ಸಿಬಿಐ ತನಿಖೆ ನಡುವೆ ಹಸ್ತಕ್ಷೇಪ ಬೇಡ:

ಈ ಪ್ರಕರಣದ ತನಿಖೆಯನ್ನು ಈಗಾಗಲೇ ಸುಪ್ರೀಂ ಕೋರ್ಟ್ ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸಿದೆ. ಹೀಗಿರುವಾಗ, ರಾಜಕೀಯ ಪ್ರತಿಸ್ಪರ್ಧಿಯಾದ ಡಿಎಂಕೆ ಸಲ್ಲಿಸಿರುವ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ, ಒಂದು ವೇಳೆ ವಾದ ಮುಂದುವರಿಸಿದರೆ ಅರ್ಜಿಯನ್ನು ವಜಾಗೊಳಿಸಬೇಕಾಗುತ್ತದೆ ಎಂದು ನ್ಯಾಯಪೀಠವು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತವಾಗಿ 41 ಜನ ಮೃತಪಟ್ಟಿದ್ದ ಕರೂರ್​​ನಲ್ಲಿ ಗೆಲ್ಲೋದು ಯಾರು?

ಡಿಎಂಕೆ ಅರ್ಜಿಯಲ್ಲೇನಿತ್ತು?:

ನಟ ಹಾಗೂ ರಾಜಕಾರಣಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಸಚಿವರು ಮತ್ತು ನಾಯಕರು ಈ ಪ್ರಕರಣದ ಕುರಿತು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ತನಿಖೆಯ ದಿಕ್ಕು ತಪ್ಪಿಸುವ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನವಾಗಿದೆ ಎಂದು ಡಿಎಂಕೆ ಆರೋಪಿಸಿತ್ತು. ಅಲ್ಲದೆ, ಮುಖ್ಯಮಂತ್ರಿ ಮತ್ತು ಸಚಿವರು ಈ ಪ್ರಕರಣದ ಬಗ್ಗೆ ಮಾತನಾಡುವುದನ್ನು ತಡೆಯಬೇಕು ಎಂದು ಕೋರಿತ್ತು. ಡಿಎಂಕೆಯ ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ಮುಖ್ಯಮಂತ್ರಿಯವರ ಪ್ರವಾಸದ ವೇಳಾಪಟ್ಟಿಯನ್ನು ಮತ್ತು ಅವರ ಭಾಷಣಗಳನ್ನು ಸುಪ್ರೀಂ ಕೋರ್ಟ್ ನಿಯಂತ್ರಿಸಬೇಕು ಎಂದು ನೀವು ಬಯಸುತ್ತೀರಾ?” ಎಂದು ಪ್ರಶ್ನಿಸಿದರು. “ಅವರು ಭಾಷಣ ಮಾಡಿದರೆ, ಅದಕ್ಕೆ ನೀವೂ ಭಾಷಣದ ಮೂಲಕವೇ ಕೌಂಟರ್ ನೀಡಿ. ಅದನ್ನು ಬಿಟ್ಟು ಕೋರ್ಟ್‌ಗೆ ರಾಜಕೀಯ ತರಬೇಡಿ” ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಕರೂರ್ ಕಾಲ್ತುಳಿತ ಪ್ರಕರಣ; ವಿಜಯ್ ವಿರುದ್ಧ ಹೈಕೋರ್ಟ್ ಆಕ್ರೋಶ, ಎಸ್​ಐಟಿ ತನಿಖೆಗೆ ಆದೇಶ

ನಟ, ರಾಜಕಾರಣಿ ವಿಜಯ್ ಅವರ ಸಚಿವ ಸಂಪುಟದಲ್ಲಿ ಈಗ ಸಚಿವರಾಗಿರುವ ಕೆಲವು ಆರೋಪಿಗಳು ಕರೂರ್ ಕಾಲ್ತುಳಿತದ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿತ್ತು. ವಿಚಾರಣೆಯ ಸಂದರ್ಭದಲ್ಲಿ ಈ ಪ್ರಕರಣದ ತನಿಖೆಯನ್ನು ಈಗಾಗಲೇ ಕೇಂದ್ರೀಯ ತನಿಖಾ ದಳಕ್ಕೆ (CBI) ಹಸ್ತಾಂತರಿಸಲಾಗಿದೆ ಎಂಬುದನ್ನು ನೆನಪಿಸಿ ದ ನ್ಯಾಯಪೀಠವು, ಅರ್ಜಿಯ ಆಧಾರವನ್ನು ಪ್ರಶ್ನಿಸಿತು.”ಈ ಪ್ರಕರಣದಲ್ಲಿ ತಾನೇ ಸ್ವತಃ ಸಿಬಿಐ ತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್, ರಾಜಕೀಯ ಪ್ರತಿಸ್ಪರ್ಧಿಯ ಅರ್ಜಿಯನ್ನು ಹೇಗೆ ಸ್ವೀಕರಿಸಲು ಸಾಧ್ಯ?” ಎಂದು ಸುಪ್ರೀಂ ಕೋರ್ಟ್ ಡಿಎಂಕೆ ಪರ ವಕೀಲರನ್ನು ಕೇಳಿತು. “ನೀವು ಈ ಅರ್ಜಿಯನ್ನು ಇಲ್ಲಿಗೆ ಕೈಬಿಡುವುದು ಒಳಿತು. ಏಕೆಂದರೆ ನಾವು ಇದನ್ನು ವಜಾಗೊಳಿಸುವ ನಿರ್ಧಾರದಲ್ಲಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.

ಏನಿದು ಕರೂರ್ ಕಾಲ್ತುಳಿತದ ಘಟನೆ?:

ಸೆಪ್ಟೆಂಬರ್ 27, 2025ರಂದು ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷದ ಬೃಹತ್ ರ‍್ಯಾಲಿ ನಡೆದಿತ್ತು. ಈ ವೇಳೆ ನಿರೀಕ್ಷೆಗೂ ಮೀರಿದ ಜನಸಂದಣಿ ಸೇರಿದ ಕಾರಣ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 39 ಜನರು ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಈ ದುರಂತವು ತಮಿಳುನಾಡು ರಾಜಕಾರಣದಲ್ಲಿ ತೀವ್ರ ವಿವಾದ ಹಾಗೂ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ರ‍್ಯಾಲಿಯಲ್ಲಿ ಜನರ ಸಂಖ್ಯೆಯು ನಿರೀಕ್ಷೆಗಿಂತ ಗಣನೀಯವಾಗಿ ಹೆಚ್ಚಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು. ಘಟನೆಯ ತನಿಖೆಗಾಗಿ ತನಿಖಾ ಆಯೋಗವನ್ನು ರಚಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಕರಾವಳಿ’ ಸಿನಿಮಾ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು? – Kannada News | Gurudatha Ganiga talks about Karavali movie controversy with Prajwal Devaraj

ಬಿಡುಗಡೆಗೆ ಸಜ್ಜಾಗಿರುವ ‘ಕರಾವಳಿ’ (Karavali) ಸಿನಿಮಾ ತಂಡದ ಕಿರಿಕ್ ಈಗ ಬೀದಿಗೆ ಬಂದಿದೆ. ಈ ಸಿನಿಮಾದ ನಿರ್ದೇಶಕ ಗುರುದತ್ ಗಾಣಿಗ ಮತ್ತು ನಟ ಪ್ರಜ್ವಲ್ ದೇವರಾಜ್ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಗೊತ್ತಾಗಿದೆ. ಈ ಸಿನಿಮಾದ ಟ್ರೇಲರ್ ಪ್ರೀಮಿಯರ್ ವೇಳೆ ಪ್ರಜ್ವಲ್ ಅಭಿಮಾನಿಗಳು ಬಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ರೇಲರ್​ನಲ್ಲಿ ಪ್ರಜ್ವಲ್ ಅವರ ಧ್ವನಿ ಇಲ್ಲ ಎಂಬುದೇ ಫ್ಯಾನ್ಸ್ ಅಸಮಾಧಾನಕ್ಕೆ ಕಾರಣ ಆಗಿದೆ. ಆ ಬಗ್ಗೆ ‘ಟಿವಿ9 ಕನ್ನಡ’ ಜೊತೆ ನಿರ್ದೇಶಕ ಗುರುದತ್ ಗಾಣಿಗ ಅವರು ಮಾತನಾಡಿದ್ದಾರೆ. ಈ ವಿವಾದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಮಾತುಕಥೆ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ತಾವು ಸಿದ್ಧ ಎಂದು ಗುರುದತ್ ಗಾಣಿಗ ಅವರು ಹೇಳಿದ್ದಾರೆ. ಟ್ರೇಲರ್ ಪ್ರೀಮಿಯರ್ ಕಾರ್ಯಕ್ರಮಕ್ಕೆ ಪ್ರಜ್ವಲ್ ದೇವರಾಜ್ ಅವರು ಗೈರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral: ಸಂಬಳ ಹೆಚ್ಚಳಕ್ಕಾಗಿ ಕೆಲಸ ಬದಲಾವಣೆ; ಕೆಲಸಕ್ಕೆ ಸೇರಿದ ಮೂರೇ ತಿಂಗಳಿಗೆ ಜಾಬ್‌ ಕಳೆದುಕೊಂಡ ಉದ್ಯೋಗಿ – Kannada News | An employee who lost their job just three months after joining

ಕೈಯಲ್ಲೊಂದು ಉದ್ಯೋಗ (job) ಇದ್ರೆ ಅದೇನೋ ಧೈರ್ಯ. ಕೆಲಸ ಹೋಗುವ ಸಂದರ್ಭ ಬಂದಾಗ ಎಂತಹರಿಗಾದರೂ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಯದ್ದು ಪರಿಸ್ಥಿತಿ ಕೇಳಿದ್ರೆ ನಿಮಗೆ ಅಯ್ಯೋ ಅನಿಸಬಹುದು. ಹೌದು, ವ್ಯಕ್ತಿಯೊಬ್ಬರು ಸ್ಯಾಲರಿ ಹೈಕ್ ಗಾಗಿ ಜಾಬ್ ಬದಲಾಯಿಸಿದ್ದಾರೆ.  ಇದಾದ ಬಳಿಕ ಕೆಲಸಕ್ಕೆ ಸೇರಿದ ಮೂರೇ ತಿಂಗಳಲ್ಲೇ ಕಂಪನಿಯಿಂದ (company) ಈ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಉದ್ಯೋಗಿ ರೆಡ್ಡಿಟ್‌ನಲ್ಲಿ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಇಂಡಿಯನ್ ವರ್ಕ್ ಪ್ಲೇಸ್ (r/IndianWorkplace) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿಯೊಬ್ಬರು ವೃತ್ತಿ ಜೀವನದ ಕುರಿತು ಬರೆದುಕೊಂಡಿದ್ದಾರೆ. ಕೆಲಸಕ್ಕೆ ಸೇರಿದ ಮೂರೇ ತಿಂಗಳಿಗೆ ನನ್ನನ್ನು ಕೆಲಸದಿಂದ ತೆಗೆದು ಹಾಕಲಾಯಿತು ಎಂದು ಶೀರ್ಷಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಈ ಪೋಸ್ಟ್ ನಲ್ಲಿ ನಾನು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಶೇಕಡಾ 30 ರಷ್ಟು ಸಂಬಳದ ಏರಿಕೆಗೆ ಬೇರೆಂದೂ ಕಂಪನಿಗೆ ಕೆಲಸಕ್ಕೆ ಸೇರಿಕೊಂಡೆ. ಕೆಲಸದ ಕಾರಣಕ್ಕೆ ಬೇರೆ ಕಡೆಗೆ ಸ್ಥಳಾಂತರಗೊಂಡೆ. ವಿಮಾನಗಳು, ಸಾಗಣೆದಾರರು, ಪ್ಯಾಕರ್‌ಗಳು ಮತ್ತು ಬ್ರೋಕರೇಜ್ ಶುಲ್ಕಗಳು ಸೇರಿದಂತೆ ಸ್ಥಳಾಂತರ ಖರ್ಚು ವೆಚ್ಚಗಳನ್ನು ಕಂಪನಿ ನೋಡಿಕೊಂಡಿತ್ತು.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

Got laid off in 3 months from my job after relocating!
by
u/Dharmocracy0593 in
IndianWorkplace

ಹೊಸ ಪರಿಸರ, ಕಂಪನಿಯ ವಾತಾವರಣಕ್ಕೆ ಹೊಂದಿಕೊಂಡು ಮಾರ್ಕೆಟಿಂಗ್ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದೆ. ಹೀಗಿರುವಾಗ ಕೆಲಸಕ್ಕೆ ಸೇರಿದ ಮೂರೇ ತಿಂಗಳಿಗೆ ಕಂಪನಿ ತನ್ನ ಶೇಕಡಾ 15 ರಷ್ಟು ಉದ್ಯೋಗಿ ಗಳನ್ನು ಕೆಲಸದಿಂದ ತೆಗೆದು ಹಾಕುವುದಾಗಿ ತಿಳಿಸಿತು. ಹಿರಿಯ ಇಂಜಿನಿಯರ್‌ಗಳು, ಉನ್ನತ ಸಂಸ್ಥೆಗಳಿಂದ ಹೊಸ ಪದವೀಧರರು, ಅನುಭವಿ ವೃತ್ತಿಪರರು ಸೇರಿದಂತೆ ಅನೇಕರು ಉದ್ಯೋಗ ಕಳೆದುಕೊಂಡರು, ಅವರಲ್ಲಿ ನಾನು ಸೇರಿಕೊಂಡೆ ಎಂದು ಕಹಿ ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಂದು ಕಾಲೇಜ್ ಫೀಸ್ ಕಟ್ಟಲು ದುಡ್ಡಿಗಾಗಿ ಪರದಾಟ, ಇಂದು ಕೋಟಿ ರೂ ಸಂಪಾದನೆ; ಇದು ಬೆಂಗಳೂರು ಸಾಫ್ಟ್‌ವೇರ್ ಇಂಜಿನಿಯರ್‌ನ ಕಥೆ

ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕೆಲಸದಿಂದ ವಜಾಗೊಳಿಸುವುದು ಹೊಸದೇನಲ್ಲ, ಎಲ್ಲದಕ್ಕೂ ತಯಾರಾಗಿರಬೇಕು ಎಂದಿದ್ದಾರೆ. ಇನ್ನೊಬ್ಬರು, ಇಲ್ಲಿ ನಿಮ್ಮನ್ನು ಮಾತ್ರ ಗುರಿ ಮಾಡಿಲ್ಲ. ನಿಮ್ಮನ್ನು ಸೇರಿಸಿ ಅನೇಕರನ್ನು ಕೆಲಸದಿಂದ ತೆಗೆದು ಹಾಕಿದೆ. ಹೀಗಾಗಿ ನೀವು ಈ ನಿರ್ಧಾರವನ್ನು ಸ್ವೀಕರಿಸಿ ಮುಂದೆ ಸಾಗಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಾವು ಅಂದುಕೊಂಡಂತೆ ಏನು ಆಗಲ್ಲ, ಹೀಗಾಗಿ ಬಂದದ್ದನ್ನು ಸ್ವೀಕರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:14 pm, Tue, 7 July 26

Source link

Agniveervayu Recruitment 2026: ಭಾರತೀಯ ವಾಯುಪಡೆಯಲ್ಲಿ ನೇಮಕಾತಿ; 12ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ! – Kannada News | IAF Agniveervayu Recruitment 2026: Apply Online Now for Indian Air Force Jobs

ಅಗ್ನಿವೀರವಾಯು ನೇಮಕಾತಿImage Credit source: Getty Images

ದೇಶಸೇವೆಯ ಕನಸು ಹೊಂದಿರುವ ಯುವಕ-ಯುವತಿಯರಿಗೆ ಭಾರತೀಯ ವಾಯುಪಡೆ (Indian Air Force) ಸಿಹಿಸುದ್ದಿ ನೀಡಿದೆ. ಅಗ್ನಿವೀರವಾಯು (Agniveervayu) ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 6ರ ಬೆಳಿಗ್ಗೆ 11 ಗಂಟೆಯಿಂದ ಜುಲೈ 26ರ ರಾತ್ರಿ 11 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು iafrecruitment.edcil.co.in ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ನೇಮಕಾತಿಯ ಆನ್‌ಲೈನ್ ಪರೀಕ್ಷೆಯು 2026ರ ಸೆಪ್ಟೆಂಬರ್ 22 ಮತ್ತು 23ರಂದು ನಡೆಯಲಿದೆ. ಪ್ರಕಟಣೆಯ ಪ್ರಕಾರ, 2005ರ ಜುಲೈ 1ರಿಂದ 2010ರ ಜನವರಿ 1ರ ನಡುವೆ ಜನಿಸಿದ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ದೈಹಿಕ ಸಾಮರ್ಥ್ಯ, ವೈದ್ಯಕೀಯ ಮಾನದಂಡಗಳು ಹಾಗೂ ಇತರ ನಿಯಮಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸುವುದು ಕಡ್ಡಾಯ. ಅರ್ಜಿ ಶುಲ್ಕ 550 ರೂ ಮತ್ತು ಜಿಎಸ್‌ಟಿ ನಿಗದಿಪಡಿಸಲಾಗಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಆರಂಭ: 06 ಜುಲೈ 2026 (ಬೆಳಿಗ್ಗೆ 11:00)
  • ಅರ್ಜಿ ಸಲ್ಲಿಸಲು ಕೊನೆಯ ದಿನ: 26 ಜುಲೈ 2026 (ರಾತ್ರಿ 11:00)
  • ಆನ್‌ಲೈನ್ ಪರೀಕ್ಷೆ: 22 ಮತ್ತು 23 ಸೆಪ್ಟೆಂಬರ್ 2026
  • ಅಧಿಕೃತ ವೆಬ್‌ಸೈಟ್:iafrecruitment.edcil.co.in

ಇದನ್ನೂ ಓದಿ: ನೀಟ್ ಇಲ್ಲದೆಯೂ ವೈದ್ಯಕೀಯ ಲೋಕಕ್ಕೆ ಎಂಟ್ರಿ; 12ನೇ ತರಗತಿ ಅಂಕಗಳ ಆಧಾರದ ಮೇಲೆ ಸಿಗಲಿದೆ ಅಡ್ಮಿಷನ್!

ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ: ಭಕ್ತರ ನಂಬಿಕೆ ಮರಳಿ ಪಡೆಯಲು ಟ್ರಸ್ಟ್ ಯತ್ನ – Kannada News | Ayodhya Ram Mandir Trust Reveals Financial Accounts Amidst Donation Theft Controversy

ಅಯೋಧ್ಯೆ, ಜುಲೈ 07: ಅಯೋಧ್ಯೆ ರಾಮಮಂದಿರದ ಹುಂಡಿ ದೇಣಿಗೆ ಕಳ್ಳತನ ವಿವಾದದ ನಡುವೆ, ರಾಮಮಂದಿರ ಟ್ರಸ್ಟ್ ತನ್ನ ಸಂಪೂರ್ಣ ಹಣಕಾಸು ಲೆಕ್ಕಪತ್ರವನ್ನು ಬಹಿರಂಗಪಡಿಸಿದೆ. ಭಕ್ತರಿಂದ ಸಂಗ್ರಹವಾದ ಒಟ್ಟು 3,264 ಕೋಟಿ ರೂ. ದೇಣಿಗೆಯಲ್ಲಿ, 2,370 ಕೋಟಿ ರೂ. ಮಂದಿರ ನಿರ್ಮಾಣಕ್ಕೆ ಬಳಕೆಯಾಗಿದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ಉಳಿದ ಹಣ ಬ್ಯಾಂಕ್ ಖಾತೆಗಳಲ್ಲಿ ಸುರಕ್ಷಿತವಾಗಿದೆ ಎಂದು ಮಾಹಿತಿ ನೀಡಿದೆ.

ಈವರೆಗೆ ದಾನವಾಗಿ ಬಂದ ಬೆಳ್ಳಿ ಆಭರಣಗಳನ್ನು ಕರಗಿಸಿ ಬಿಸ್ಕೆಟ್ ರೂಪದಲ್ಲಿ ಇಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ. ರಾಮಮಂದಿರದ ಹುಂಡಿ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಿಂದ ಭಕ್ತರ ನಂಬಿಕೆಗೆ ಧಕ್ಕೆಯಾಗಿದ್ದು, ಅದನ್ನು ಮರಳಿ ಗಳಿಸುವ ಪ್ರಯತ್ನದಲ್ಲಿ ಟ್ರಸ್ಟ್ ಈ ಲೆಕ್ಕಪತ್ರವನ್ನು ಜನರ ಮುಂದಿಟ್ಟಿದೆ.

ಇದೇ ವೇಳೆ, ಟ್ರಸ್ಟ್‌ನ ಮಾಜಿ ಪ್ರಮುಖ ಚಂಪತ್ ರಾಯ್ ಐಷಾರಾಮಿ ಟೊಯೋಟಾ ವೆಲ್ಫೈರ್ ಕಾರಿನಲ್ಲಿ ಓಡಾಡುತ್ತಿದ್ದದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಅವರ ಪಾತ್ರದ ಕುರಿತು ಅನುಮಾನಗಳಿದ್ದು, ತನಿಖೆ ನಡೆಯುವ ಸಾಧ್ಯತೆ ಇದೆ. ಭಕ್ತರ ಪ್ರಶ್ನೆಗಳಿಗೆ ಉತ್ತರಿಸಲು ಟ್ರಸ್ಟ್ ಪಾರದರ್ಶಕತೆ ಕಾಯ್ದುಕೊಳ್ಳಲು ಮುಂದಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಮಾಯಣ’ ಹಕ್ಕು ಖರೀದಿಸಲು ಹಿಂದೇಟು? ವಿತರಕರಿಗೆ ಕಾಡುತ್ತಿರುವ ಭಯವೇನು? – Kannada News | Production house hesitant to buy Ramayana movie release rights

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ, ನಟಿಯರು ನಟಿಸಿ ಭಾರಿ ದೊಡ್ಡ ಮೊತ್ತದಲ್ಲಿ ನಿರ್ಮಾಣ ಮಾಡಿರುವ ‘ರಾಮಾಯಣ’ ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿದೆ. ಸಿನಿಮಾ ಬಿಡುಗಡೆ ಹತ್ತಿರ ಬರುತ್ತಿದ್ದಂತೆ ಸಿನಿಮಾದ ನಿರ್ಮಾಪಕರಿಗೆ ಹೊಸ ತಲೆ ನೋವು ಶುರುವಾಗಿದೆ. ‘ರಾಮಾಯಣ’ ಸಿನಿಮಾದ ಬಿಡುಗಡೆಗೆ ವಿತರಕರು ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ. ವಿತರಕರಿಗೆ ಹೊಸ ಭಯವೊಂದು ಶುರುವಾಗಿದೆ.

‘ರಾಮಾಯಣ’ ಚಿತ್ರದ ಮೊದಲ ಭಾಗವು ಈ ವರ್ಷದ ದೀಪಾವಳಿಗೆ, ಅಂದರೆ ನವೆಂಬರ್ 6 ರಂದು ಬಿಡುಗಡೆಯಾಗಲಿದೆ. ಈಗ ಹರಿದಾಡುತ್ತಿರುವ ಕೆಲ ಸುದ್ದಿಗಳ ಪ್ರಕಾರ ‘ರಾಮಾಯಣ’ ಸಿನಿಮಾದ ನಿರ್ಮಾಪಕರು ಕೆಲವು ಪ್ರಮುಖ ನಿರ್ಮಾಣ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಂಪನಿಗಳನ್ನು ಆಹ್ವಾನಿಸಿ, ಚಿತ್ರದ ಕೆಲವು ತುಣುಕುಗಳನ್ನು ಪ್ರದರ್ಶಿಸಿದ್ದು. ಸಿನಿಮಾದ ಬಿಡುಗಡೆ ಹಕ್ಕುಗಳಿಗಾಗಿ ಖರೀದಿಗೆ ಮನವಿ ಮಾಡಿದ್ದರಂತೆ. 500 ಕೋಟಿ ರೂಪಾಯಿಯ ಹರಾಜಿಗೆ ನಿರ್ಮಾಪಕರು ಯೋಜನೆ ಹಾಕಿದ್ದರು. ಆದರೆ ನಿರ್ಮಾಣ ಸಂಸ್ಥೆಯೊಂದು ಕೇವಲ 250 ಕೋಟಿ ರೂಪಾಯಿ ಆಫರ್ ನೀಡಿದೆ ಎನ್ನಲಾಗುತ್ತಿದೆ.

‘ರಾಮಾಯಣ’ ಚಿತ್ರವನ್ನು ಬರೋಬ್ಬರಿ 4,000 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ (ಎರಡು ಭಾಗಗಳಿಗೆ) ನಿರ್ಮಿಸಲಾಗುತ್ತಿದೆ ಎಂದು ಸ್ವತಃ ನಿರ್ಮಾಪಕ ನಮಿತ್ ಮಲ್ಹೋತ್ರಾ ಅಧಿಕೃತವಾಗಿ ಘೋಷಿಸಿದ್ದಾರೆ. ಇಂತಹ ಬೃಹತ್ ಚಿತ್ರದ ಹಕ್ಕುಗಳನ್ನು ಕೇವಲ 250 ಕೋಟಿ ರೂಪಾಯಿಗೆ ಆಫರ್ ನೀಡಿರುವುದು ಆಶ್ಚರ್ಯಕರವಾಗಿದೆ. ಸಿನಿಮಾಕ್ಕೆ ದೊಡ್ಡ ಹೈಪ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಈ ಹಿನ್ನೆಡೆ ಎದುರಾಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ‘ರಾಮಾಯಣ’ ಕುರಿತು ಸಿನಿಮಾ ಬಂದಾಗೆಲ್ಲ ಜನ ಹೆಚ್ಚು ಕಟುವಾಗಿ ಸಿನಿಮಾವನ್ನು ವಿಮರ್ಶಿಸುತ್ತಾರೆ. ಸಿನಿಮಾದ ಬಗ್ಗೆ ತಕರಾರು ತೆಗೆಯುವವರ ಸಂಖ್ಯೆ ಹೆಚ್ವಚಾಗುತ್ತದೆ. ಸ್ವಲ್ಪವೇ ಎಚ್ಚರ ತಪ್ಪಿದರೂ ಸಹ ಸಿನಿಮಾ ಇಡೀ ದೇಶದಾದ್ಯಂತ ಅಧಿಕೃತ ಅಥವಾ ಅನಧಿಕೃತವಾಗಿ ನಿಷೇಧಕ್ಕೆ ಒಳಪಡುವ ಅಪಾಯವೂ ಇದೆ. ಇದೇ ಕಾರಣಕ್ಕೆ ವಿತರಕರು ಅದರಲ್ಲೂ ದೊಡ್ಡ ದೊಡ್ಡ ಸಂಸ್ಥೆಗಳೇ ಸಿನಿಮಾದಿಂದ ದೂರ ಉಳಿಯುತ್ತಿವೆ.

ಇದನ್ನೂ ಓದಿ:ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಸ್ಟಾರ್ ನಟ ರಣ್​​ಬೀರ್ ಕಪೂರ್: ಸಿನಿಮಾ ಯಾವುದು?

ಈ ಹಿಂದೆ ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ಸಹ ರಾಮಾಯಣ ಕತೆ ಆಧರಿತವಾಗಿ ಬಿಡುಗಡೆ ಆಗಿತ್ತು. ಆದರೆ ಸಿನಿಮಾಕ್ಕೆ ಸಾಕಷ್ಟು ಟೀಕೆಗಳು ಎದುರಾಗಿದ್ದವು. ಸಿನಿಮಾದ ವಿರುದ್ಧ ಹಲವಾರು ಕಡೆ ಪ್ರಕರಣಗಳು ದಾಖಲಾದವು. ಖುದ್ದು ನ್ಯಾಯಾಲಯವೇ ಸಿನಿಮಾವನ್ನು ಟೀಕೆ ಮಾಡಿತ್ತು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯವಾಗಿ ಫ್ಲಾಫ್ ಆಯ್ತು. ಅದೇ ಭಯ ಈಗ ನಿರ್ಮಾಪಕರಿಗೂ ಕಾಡುತ್ತಿದ್ದು, ‘ರಾಮಾಯಣ’ ಸಿನಿಮಾದ ವಿತರಣೆ ಹಕ್ಕು ಖರೀದಿಗೆ ಭಯ ಪಡುತ್ತಿದ್ದಾರೆ.

‘ರಾಮಾಯಣ’ ಸಿನಿಮಾವನ್ನು ಎರಡು ಭಾಗದಲ್ಲಿ ನಿರ್ಮಾಣ ಆಗಿದ್ದು, ರಣ್​​ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ, ಯಶ್ ಅವರು ಸಿನಿಮಾಣಲ್ಲಿ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ, ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಕಾಜಲ್ ಅಗರ್ವಾಲ್, ಸನ್ನಿ ಡಿಯೋಲ್ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ-ನಟಿಯರಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಮತ್ತು ಯಶ್ ಅವರು ಸಹ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನಿತೇಶ್ ತಿವಾರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Report: ಕಳೆದ 24 ಗಂಟೆಯಲ್ಲಿ ಹೊನ್ನೆತಾಳು, ಬಿರುನಾನಿಯಲ್ಲಿ ದಾಖಲೆ ಬರೆದ ಮಳೆ – Kannada News | Karnataka Weather Update: Shimoga’s Honnethalu and Kodagu’s Birunani Record Highest Rainfall of 178.5 mm on July 6

ಬೆಂಗಳೂರು, ಜುಲೈ 07: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಈ ಭಾಗದಲ್ಲಿನ ನದಿ ಮತ್ತು ಜಲಪಾತಗಳಿಗೆ ಜೀವಕಳೆ ಮರಳಿ ಬಂದಿದ್ದು, ಗಾಳಿ ಮಳೆ ಹಲವೆಡೆ ಸಾಲು ಸಾಲು ಅನಾಹುತಗಳನ್ನೂ ಸೃಷ್ಟಿಸಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ ಸುರಿದ ವರ್ಷಧಾರೆಯ ಮಾಹಿತಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದೆ. ಆ ಪ್ರಕಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಮತ್ತು ಕೊಡಗಿನ ವಿರಾಜಪೇಟೆಯ ಬಿರುನಾನಿಯಲ್ಲಿ ಅತಿ ಹೆಚ್ಚು, ಅಂದರೆ ತಲಾ 178.5 ಮಿ.ಮೀ. ಮಳೆಯಾಗಿದೆ.

ಕರ್ನಾಟಕದಲ್ಲಿ ಜುಲೈ 6ರಂದು ಅಧಿಕ ಮಳೆಯಾದ ಸ್ಥಳಗಳು

ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸೋವಿನಕೊಪ್ಪದಲ್ಲಿ 177 ಮಿ.ಮೀ, ಬೆಳಗಾವಿಯ ಖಾನಾಪುರದಲ್ಲಿ 141 ಮಿ.ಮೀ, ದಕ್ಷಿಣ ಕನ್ನಡದ ಬೆಳ್ತಂಗಡಿಯ ಮಲವಂತಿಗೆಯಲ್ಲಿ 130 ಮಿ.ಮೀ, ಉಡುಪಿಯ ಕುಂದಾಪುದ ಮಡಾಮಕ್ಕಿಯಲ್ಲಿ 102.5 ಮಿ.ಮೀ, ಧಾರವಾಡದ ಅಳ್ತಾವರ 1ರಲ್ಲಿ 38 ಮಿ.ಮೀ, ಹಾವೇರಿಯ ಹಾನಗಲ್​​ನ ಬೈಚವಳ್ಳಿಯಲ್ಲಿ 37 ಮಿ.ಮೀ, ಚಿಕ್ಕಮಗಳೂರಿನ ಮೂಡಿಗೆರೆಯ ಬೆಟ್ಟಗೆರೆಯಲ್ಲಿ 160.5 ಮಿ.ಮೀ, ಹಾಸನದ ಸಕಲೇಶಪುರದ ಕ್ಯಾಮನಹಳ್ಳಿಯಲ್ಲಿ 139 ಮಿ.ಮೀ, ದಾವಣಗೆರೆಯ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ 23 ಮಿ.ಮೀ ಮಳೆಯಾಗಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ವರುಣಾರ್ಭಟ! ಉಡುಪಿ, ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್​, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಹಾಗೆಯೇ ವಿಜನಗರ ಜಿಲ್ಲೆಯ ಹರಪ್ಪನಹಳ್ಳಿ ಪುಣಬಘಟ್ಟದಲ್ಲಿ 22 ಮಿ.ಮೀ, ಗದಗದ ನರಗುಂದ ತಾಲೂಕಿನ ರಡ್ಡೆರ​​ನಾಗನೂರಲ್ಲಿ 12.5 ಮಿ.ಮೀ, ಕೊಪ್ಪಳದ ಕಿನ್ನಾಳದಲ್ಲಿ 24 ಮಿ.ಮೀ, ಚಾಮರಾಜನಗರದ ಉಮ್ಮತ್ತೂರಲ್ಲಿ 15.5 ಮಿ.ಮೀ, ಬಳ್ಳಾರಿಯ ಸಂಡೂರಿನಲ್ಲಿ 13 ಮಿ.ಮೀ, ವಿಜಯಪುರದ ಚಡಚಣದ ಬರಡೊಲದಲ್ಲಿ 13 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೆಲಸ ಕೊಟ್ಟ ಮಾಲೀಕನಿಗೆ ನೌಕರನಿಂದಲೇ ಕೋಟಿ ರೂ. ನಾಮ; ಪ್ರೇಯಸಿ ಜೊತೆ ಸೇರಿ ಜರಿ ದಾರ ಕದ್ದ ಖದೀಮ ಜಹಿದ್ ಖಾನ್ – Kannada News | Bengaluru Rural: Employees swindle employer of 1 Cr raw materials. Police inaction alleged

ದೊಡ್ಡಬಳ್ಳಾಪುರ, ಜು.7: ತನಗೆ ಕೆಲಸ ಕೊಟ್ಟು ಸಾಕಿ ಸಲಹಿದ ಮಾಲೀಕನಿಗೆ ಇಬ್ಬರು ನಂಬಿಕಸ್ಥ ನೌಕರರು ಸೇರಿ ಕೋಟ್ಯಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಬೆಳಕಿಗೆ ಬಂದಿದೆ. ಮಾಲೀಕನ ಅನುಪಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಕೆಲಸಗಾರ ಮತ್ತು ಆತನ ಪ್ರೇಯಸಿಯಾಗಿದ್ದ ಅಕೌಂಟೆಂಟ್ ಮಹಿಳೆ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಕಚ್ಚಾ ವಸ್ತುಗಳನ್ನು ಕದ್ದು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದೊಡ್ಡಬಳ್ಳಾಪುರ ನಗರದಲ್ಲಿ ಉದ್ಯಮಿ ಮಹಮದ್ ಅಪನ್ ಎಂಬುವರು ಸೀರೆ ನೇಯುವ ಮಗ್ಗಗಳಿಗೆ ಬೇಕಾಗುವ ಜರಿ ದಾರ ಸೇರಿದಂತೆ ವಿವಿಧ ಕಚ್ಚಾ ವಸ್ತುಗಳನ್ನು ಮಾರಾಟ ಮಾಡುವ ದೊಡ್ಡ ಅಂಗಡಿಯನ್ನು ನಡೆಸುತ್ತಿದ್ದರು. ಈ ಅಂಗಡಿಯಲ್ಲಿ ಜಹಿದ್ ಖಾನ್ ಎಂಬಾತ ಕೆಲಸಗಾರನಾಗಿದ್ದ ಹಾಗೂ ಅಪ್ಶಿನ್ ಎಂಬ ಮಹಿಳೆ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಇವರಿಬ್ಬರ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮಾಲೀಕ ಮಹಮದ್ ಅಪನ್ ಅವರು ಅಂಗಡಿಯಲ್ಲಿ ಇಲ್ಲದ ಸಮಯವನ್ನು ನೋಡಿಕೊಂಡು, ಇವರಿಬ್ಬರು ಸೇರಿ ಬರೋಬ್ಬರಿ ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಜರಿ ದಾರ ಹಾಗೂ ಇತರ ಕಚ್ಚಾ ವಸ್ತುಗಳನ್ನು ಯಾರಿಗೂ ತಿಳಿಯದಂತೆ ಖದ್ದಾಗಿ ಅವರೇ ಬೇರೆಯವರಿಗೆ ಮಾರಾಟ ಮಾಡಿ ಹಣ ಜೇಬಿಗೆ ಇಳಿಸಿಕೊಂಡಿದ್ದಾರೆ ಎಂದು ಪೊಲೀಸ್​​​​ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತನ್ನ ಅಂಗಡಿಯಲ್ಲಿ ಕೋಟಿ ಕೋಟಿ ಮೌಲ್ಯದ ವಸ್ತುಗಳು ಕಳ್ಳತನವಾಗಿರುವುದನ್ನು ಪತ್ತೆಹಚ್ಚಿದ ಮಾಲೀಕ ಮಹಮದ್ ಅಪನ್, ಆರೋಪಿಗಳಾದ ಜಹಿದ್ ಖಾನ್ ಮತ್ತು ಅಪ್ಶಿನ್ ವಿರುದ್ಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ನೀಡಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ಹುಂಡಿ ಎಣಿಕೆ ಲೂಟಿ ಮಧ್ಯೆ ಅನುಮಾನಕ್ಕೆ ಎಡೆ ಮಾಡಿಕೊಟ್ಟ ಅಂಜನಾದ್ರಿ ಹುಂಡಿ ಎಣಿಕೆ

ಆದರೆ ದೂರು ದಾಖಲಾಗಿ ದಿನಗಳೇ ಕಳೆದರೂ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಲೀಕ ಮಹಮದ್ ಅಪನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರೂಪಾಯಿ ಕಳೆದುಕೊಂಡು ಕಂಗಾಲಾಗಿರುವ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಪೊಲೀಸ್ ಉನ್ನತಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version