ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ! – Kannada News | Spain’s Unstoppable 37 Match Invincible Strea

ಫುಟ್‌ಬಾಲ್ ಕೇವಲ ಒಂದು ಆಟವಲ್ಲ, ಅದೊಂದು ನಿರಂತರ ಹೋರಾಟ. ಅಲ್ಲಿ ದಾಖಲೆಗಳು ಹುಟ್ಟುವುದೇ ಮುರಿಯುವುದಕ್ಕೆ. ಆದರೆ, ಕೆಲವು ದಾಖಲೆಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಅಂತಹದೊಂದು ಅಪರೂಪದ ಇತಿಹಾಸಕ್ಕೆ ಈಗ ಸ್ಪೇನ್ ಫುಟ್‌ಬಾಲ್ ತಂಡ ಸಾಕ್ಷಿಯಾಗಿದೆ. ಕೋಚ್ ಲುಯಿಸ್ ಡಿ ಲಾ ಫ್ಯುಯೆಂಟೆ ಅವರ ಸಾರಥ್ಯದಲ್ಲಿ ಕಲಾತ್ಮಕ ಫುಟ್‌ಬಾಲ್ ಆಡುತ್ತಿರುವ ಸ್ಪೇನ್, ಸತತ 37 ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ಜಾಗತಿಕ ಫುಟ್‌ಬಾಲ್ ಜಗತ್ತನ್ನು ತನ್ನ ಅಂಗೈಯಲ್ಲಿಟ್ಟುಕೊಂಡಿದೆ. ಅಂದರೆ ಸ್ಪೇನ್ ತಂಡವು ಕಳೆದ 37 ಪಂದ್ಯಗಳಲ್ಲಿ ಸೋಲನ್ನೇ ಕಂಡಿಲ್ಲ!

ವಿಶ್ವಕಪ್ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು 2-0 ಅಂತರದಿಂದ ಮಣಿಸಿದ ಸ್ಪೇನ್, ಈಗ ಇಟಲಿಯ ಸಾರ್ವಕಾಲಿಕ ಅಜೇಯ ದಾಖಲೆಯನ್ನು ಸಮಗಟ್ಟಿ ನಿಂತಿದ್ದಾರೆ. ಈ ಮೂಲಕ ಫುಟ್‌ಬಾಲ್ ಸಾಮ್ರಾಜ್ಯದ ಸರ್ವಾಧಿಕಾರಿಯಾಗಲು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಇಟಲಿಯ ಕೋಟೆಗೆ ಲಗ್ಗೆಯಿಟ್ಟ ಸ್ಪೇನ್ ಪಡೆ:

ಸ್ಪೇನ್ ತಂಡದ್ದು ಕೇವಲ ಗೆಲುವಲ್ಲ, ಇತಿಹಾಸದ ಪುನರಾವರ್ತನೆ. 2018 ರಿಂದ 2021ರ ನಡುವೆ ಇಟಲಿ ತಂಡ ಸೃಷ್ಟಿಸಿದ್ದ ಯುರೋಪಿನ ಸಾರ್ವಕಾಲಿಕ ಸುದೀರ್ಘ ಅಜೇಯ (37 ಪಂದ್ಯಗಳು) ದಾಖಲೆಯನ್ನು ಸ್ಪೇನ್ ಈಗ ಸಮಗಟ್ಟಿದೆ. ಈ ಭವ್ಯ ಅಜೇಯ ಹಾದಿಯಲ್ಲಿ ಸ್ಪೇನ್ ತಂಡದ ಅಂಕಿ-ಅಂಶಗಳು ಹೀಗಿವೆ..

  • 28 ಪಂದ್ಯಗಳಲ್ಲಿ ಸ್ಪೇನ್ ತಂಡಕ್ಕೆ ಜಯ
  •  9 ಪಂದ್ಯಗಳು ಡ್ರಾ
  • ಸೋಲಿಲ್ಲದೆ ಸತತ 37 ಪಂದ್ಯ ಮುಗಿಸಿರುವ ಸ್ಪೇನ್.

ಸ್ಪೇನ್ ತಂಡವು ಮಾರ್ಚ್ 22, 2024 ರಂದು ಕೊಲಂಬಿಯಾ ವಿರುದ್ಧ (1-0) ಸೋತ ನಂತರ, ಇದುವರೆಗೆ ಆಡಿದ ಸತತ 37 ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಸೋತಿಲ್ಲ ಎಂಬುದು ವಿಶೇಷ.

ನೇಷನ್ಸ್ ಲೀಗ್ ಫೈನಲ್​ನಲ್ಲಿ ಸೋತಿತ್ತಲ್ಲವೇ?

ಜೂನ್ 8, 2025 ರಂದು ನಡೆದ 2025 UEFA ನೇಷನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ನಿಗದಿತ ಅವಧಿಗೆ ಉಭಯ ತಂಡಗಳು 2-2 ಗೋಲುಗಳ ಸಮಬಲ ಸಾಧಿಸಿದ್ದವು. ಆ ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಪೋರ್ಚುಗಲ್ 5-3 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಫುಟ್‌ಬಾಲ್ ನಿಯಮಗಳ ಪ್ರಕಾರ, ಪೆನಾಲ್ಟಿ ಶೂಟೌಟ್‌ನಲ್ಲಿ ಸೋತರೂ ಅದನ್ನು ಅಧಿಕೃತವಾಗಿ ‘ಡ್ರಾ’ ಎಂದೇ ಪರಿಗಣಿಸಲಾಗುತ್ತದೆ, ‘ಸೋಲು’ ಎಂದು ಲೆಕ್ಕ ಹಾಕುವುದಿಲ್ಲ. ಅಂದರೆ ಪಂದ್ಯದ ಅವಧಿಯಲ್ಲಿ ಸೋತರೆ ಮಾತ್ರ ಅದನ್ನು ಅಧಿಕೃತ ಸೋಲು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನೇಷನ್ ಲೀಗ್​ ಫೈನಲ್​ನಲ್ಲಿ ಪೆನಾಲ್ಟಿ ಶೂಟೌಟ್ ಸೋಲು ಪರಾಜಯದ ಪಟ್ಟಿಗೆ ಸೇರ್ಪಡೆಯಾಗುವುದಿಲ್ಲ.

ಫ್ಯುಯೆಂಟೆ ಮಾಸ್ಟರ್ ಮೈಂಡ್:

ಸ್ಪೇನ್ ತಂಡದ ಈ ಸತತ ಗೆಲುವಿನ ಹಿಂದಿರುವುದು ಕೋಚ್ ಲುಯಿಸ್ ಡಿ ಲಾ ಫ್ಯುಯೆಂಟೆ.  ಫ್ಯುಯೆಂಟೆ ಅವರ ಮಾರ್ಗದರ್ಶನದಲ್ಲಿ ಸ್ಪೇನ್ ತಂಡ ಒಂದು ಸುಂದರ ಕಾವ್ಯದಂತೆ ಆಡುತ್ತಿದೆ.

ಯುವ ಆಟಗಾರರ ವೇಗ ಮತ್ತು ಅನುಭವಿಗಳ ಜಾಣ್ಮೆಯ ಅದ್ಭುತ ಮಿಶ್ರಣವೇ ಈ ತಂಡದ ಶಕ್ತಿ. ಮೈದಾನದ ಪ್ರತಿಯೊಂದು ಮೂಲೆಯಲ್ಲೂ ಚೆಂಡಿನ ಮೇಲೆ ಸಂಪೂರ್ಣ ಹತೋಟಿ ಸಾಧಿಸುವ ಇವರ ಶೈಲಿ, ಅಭಿಮಾನಿಗಳ ಕಣ್ಣಿಗೆ ಹಬ್ಬದಂತಿದೆ. ಫ್ರಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೇನ್ ಆಟಗಾರರು ತೋರಿದ ಚಾಕಚಕ್ಯತೆ ಇದಕ್ಕೆ ಸಾಕ್ಷಿ.

ಇತಿಹಾಸದ ಹೊಸ್ತಿಲಲ್ಲಿ ಸ್ಪೇನ್ ಪಡೆ:

ಈಗ ಇಡೀ ವಿಶ್ವದ ಕಣ್ಣು ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್‌ನ ಮಹಾ ಫೈನಲ್ ಪಂದ್ಯದ ಮೇಲಿದೆ. ಏಕೆಂದರೆ ಫೈನಲ್ ಪಂದ್ಯದಲ್ಲಿ ಸ್ಪೇನ್ ಗೆದ್ದರೆ ಅಥವಾ ಡ್ರಾ ಸಾಧಿಸಿದರೆ, 38 ಪಂದ್ಯಗಳ ಅಜೇಯ ಓಟದೊಂದಿಗೆ ಇಟಲಿಯ ದಾಖಲೆಯನ್ನು ಮುರಿಯಲಿದೆ. ಒಂದು ವೇಳೆ ಫೈನಲ್ ಮ್ಯಾಚ್​ನಲ್ಲಿ ಜಯ ಸಾಧಿಸಿದರೆ ಸತತ 38 ಪಂದ್ಯಗಳನ್ನು ಗೆದ್ದು ವಿಶ್ವಕಪ್ ಎತ್ತಿ ಹಿಡಿದ ಮೊದಲ ತಂಡವೆಂಬ ವಿಶ್ವ ದಾಖಲೆ ಸ್ಪೇನ್ ಪಾಲಾಗಲಿದೆ.

ಇದನ್ನೂ ಓದಿ: ಸಚಿನ್ ದಾಖಲೆ ಧೂಳೀಪಟ: ಕಿಂಗ್ ಕೊಹ್ಲಿ ಹೆಸರಿಗೆ ವಿಶ್ವ ದಾಖಲೆ

ಒಟ್ಟಾರೆಯಾಗಿ ಹೇಳಬೇಕೆಂದರೆ, ಸ್ಪೇನ್ ತಂಡದ ಈ ವಿಜಯಯಾತ್ರೆ ಕೇವಲ ಒಂದು ಅಂಕಿ-ಅಂಶಗಳ ದಾಖಲೆಯಲ್ಲ, ಅದೊಂದು ಆಧುನಿಕ ಫುಟ್‌ಬಾಲ್ ಕ್ರಾಂತಿ. ಸತತ 37 ಪಂದ್ಯಗಳಲ್ಲಿ ಸೋಲೆಂಬುದನ್ನೇ ಕಾಣದೆ ಮುನ್ನುಗ್ಗುತ್ತಿರುವ ‘ಸ್ಪ್ಯಾನಿಷ್’ ಪಡೆ, ಈಗ ಇತಿಹಾಸದ ಅತ್ಯಂತ ಪ್ರಮುಖ ಘಟ್ಟದಲ್ಲಿ ಬಂದು ನಿಂತಿದೆ. ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್‌ನ ಮಹಾ ಫೈನಲ್ ಕೇವಲ ಟ್ರೋಫಿಗಾಗಿ ನಡೆಯುವ ಹೋರಾಟವಲ್ಲ. ಅದು ಸ್ಪೇನ್ ತಂಡವನ್ನು ಫುಟ್‌ಬಾಲ್ ಸಾಮ್ರಾಜ್ಯದ ಅತ್ಯುನ್ನತ ಸಿಂಹಾಸನದಲ್ಲಿ ಕೂರಿಸುವ ಮಹಾ ಪಟ್ಟಾಭಿಷೇಕ ಎಂದೇ ಹೇಳಬಹುದು.

Published On – 12:19 pm, Wed, 15 July 26

Source link

ಹ್ಯಾಂಗ್ ಆಗಲ್ಲ, ಪಾವತಿ ವಿಫಲಗೊಳ್ಳಲ್ಲ,ಇನ್ಮುಂದೆ ರೈಲಿನಲ್ಲಿ ನೀವೇ ಆರಿಸಿಕೊಳ್ಳಿ ನಿಮ್ಮಿಷ್ಟದ ಸೀಟು, ಹೊಸ ವೆಬ್​ಸೈಟ್ ಬಿಡುಗಡೆ ಮಾಡಿದ ಐಆರ್​ಸಿಟಿಸಿ – Kannada News | IRCTC New Website: Faster Train Ticket Booking, Choose Your Seat and More

ನವದೆಹಲಿ, ಜುಲೈ 15: ರೈಲು ಟಿಕೆಟ್(Railway Ticket) ಬುಕ್ ಮಾಡುವಾಗ, ಅದರಲ್ಲೂ ವಿಶೇಷವಾಗಿ ಬೆಳಗ್ಗೆ 10 ಮತ್ತು 11 ಗಂಟೆಯ ‘ತತ್ಕಾಲ್’ ಸಮಯದಲ್ಲಿ ವೆಬ್‌ಸೈಟ್ ಹ್ಯಾಂಗ್ ಆಗಿ, ಪಾವತಿ ವಿಫಲಗೊಂಡು ಕೋಪಗೊಂಡ ಉದಾಹರಣೆಗಳು ನಿಮ್ಮ ಜೀವನದಲ್ಲಿ ನೂರಾರು ಇರಬಹುದು. ಆದರೆ ಇನ್ಮುಂದೆ ಆ ಕಿರಿಕಿರಿ ಇರುವುದಿಲ್ಲ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಇಂದು ತನ್ನ ಸಂಪೂರ್ಣ ಹೊಸ ವಿನ್ಯಾಸದ, ಅಲ್ಟ್ರಾ-ಫಾಸ್ಟ್ ಟಿಕೆಟ್ ಬುಕಿಂಗ್ ವೆಬ್‌ಸೈಟ್ ಅನ್ನು ದೇಶಕ್ಕೆ ಸಮರ್ಪಿಸಿದೆ. ಹೊಸ ಪ್ಲಾಟ್‌ಫಾರ್ಮ್ ಕೇವಲ ನೋಡಲು ಸುಂದರವಾಗಿರದೆ, ಗರಿಷ್ಠ ದಟ್ಟಣೆಯ ಸಮಯದಲ್ಲಿಯೂ ಜಿಟಿ ಜಿಟಿ ಎನ್ನದೆ ಸೂಪರ್ ಫಾಸ್ಟ್ ಆಗಿ ಕೆಲಸ ಮಾಡುವ ಬಲಿಷ್ಠ ತಂತ್ರಜ್ಞಾನವನ್ನು ಹೊಂದಿದೆ.

ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಸಾಮರ್ಥ್ಯ

ಇದುವರೆಗೆ ಇದ್ದ ಹಳೆಯ ವೆಬ್‌ಸೈಟ್ ವ್ಯವಸ್ಥೆಯಲ್ಲಿ ಪ್ರತಿ ನಿಮಿಷಕ್ಕೆ ಕೇವಲ 32,000 ಟಿಕೆಟ್‌ಗಳನ್ನು ಮಾತ್ರ ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತಿತ್ತು. ಆದರೆ ಇಂದಿನಿಂದ ಜಾರಿಗೆ ಬಂದಿರುವ ಹೊಸ ಇಂಟರ್ಫೇಸ್ ಪ್ರತಿ ನಿಮಿಷಕ್ಕೆ ಬರೋಬ್ಬರಿ 1.5 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಬುಕ್ ಮಾಡುವ ಬೃಹತ್ ಸಾಮರ್ಥ್ಯ ಹೊಂದಿದೆ.

ಅಷ್ಟೇ ಅಲ್ಲದೆ, ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಬ್ಯಾಕೆಂಡ್ ಅನ್ನು ನವೀಕರಿಸಲಾಗಿದ್ದು, ಹಿಂದೆ ನಿಮಿಷಕ್ಕೆ 4 ಲಕ್ಷ ಜನರು ಸರ್ಚ್ ಮಾಡಬಹುದಿತ್ತು, ಆದರೆ ಈಗ ನಿಮಿಷಕ್ಕೆ 40 ಲಕ್ಷಕ್ಕೂ ಹೆಚ್ಚು ಜನರು ಒಟ್ಟಿಗೆ ರೈಲುಗಳ ಸೀಟುಗಳ ಲಭ್ಯತೆಯನ್ನು ಪರಿಶೀಲಿಸಿದರೂ ವೆಬ್‌ಸೈಟ್ ಕಿಂಚಿತ್ತೂ ನಿಧಾನವಾಗುವುದಿಲ್ಲ.

ಪ್ರಯಾಣಿಕರ ಮನಗೆಲ್ಲಲಿರುವ 4 ಅದ್ಭುತ ಹೊಸ ಫೀಚರ್‌ಗಳು

ಕೇವಲ ವೇಗವಷ್ಟೇ ಅಲ್ಲ, ಪ್ರಯಾಣಿಕರ ಅನುಕೂಲಕ್ಕಾಗಿ ಈ ಕೆಳಗಿನ ಸೂಪರ್ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.

ಮತ್ತಷ್ಟು ಓದಿ: Train Ticket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕೆ!​

ನಿಮ್ಮಿಷ್ಟದ ಸೀಟು ಆಯ್ಕೆ: ಇದುವರೆಗೆ ಸೀಟುಗಳನ್ನು ಕಂಪ್ಯೂಟರ್ ತಾನಾಗಿಯೇ ಹಂಚುತ್ತಿತ್ತು . ಆದರೆ ಇನ್ಮುಂದೆ ನೀವು ಫ್ಲೈಟ್ ಟಿಕೆಟ್ ಬುಕ್ ಮಾಡುವ ಮಾದರಿಯಲ್ಲೇ, ಲಭ್ಯವಿರುವ ಸೀಟುಗಳ ಪೈಕಿ ನಿಮ್ಮ ನೆಚ್ಚಿನ ಸೀಟನ್ನು ನೀವೇ ಕ್ಲಿಕ್ ಮಾಡಿ ಆಯ್ಕೆ ಮಾಡಿಕೊಳ್ಳಬಹುದು.

ಸಿಂಗಲ್ ಸ್ಕ್ರೀನ್ ಡಿಸ್ಪ್ಲೇ: ಹಿಂದೆ ಸ್ಲೀಪರ್, ಎಸಿ 3-ಟೈರ್, ಎಸಿ 2-ಟೈರ್ ಸೀಟುಗಳನ್ನು ನೋಡಲು ಪ್ರತ್ಯೇಕ ಟ್ಯಾಬ್‌ಗಳನ್ನು ಕ್ಲಿಕ್ ಮಾಡಬೇಕಿತ್ತು. ಈಗ ಒಂದೇ ಪರದೆಯ ಮೇಲೆ ಎಲ್ಲಾ ತರಗತಿಗಳ ಸೀಟುಗಳ ಲಭ್ಯತೆ ಕಾಣಿಸಲಿದೆ.

ಫೇರ್ ಕ್ಯಾಲೆಂಡರ್: ಒಂದು ವೇಳೆ ನಿಮ್ಮ ಪ್ರಯಾಣದ ದಿನಾಂಕ ಫ್ಲೆಕ್ಸಿಬಲ್ ಆಗಿದ್ದರೆ, ಯಾವ ದಿನದಂದು ಟಿಕೆಟ್ ದರ ಕಡಿಮೆ ಇದೆ ಅಥವಾ ಯಾವ ದಿನ ಸೀಟುಗಳು ಖಾಲಿ ಇವೆ ಎಂಬುದನ್ನು ಹೋಲಿಕೆ ಮಾಡಲು ‘ಫೇರ್ ಕ್ಯಾಲೆಂಡರ್’ ನೆರವಾಗಲಿದೆ.

ಕ್ಯಾಪ್ಚಾ ಕಿರಿಕಿರಿ ಮುಕ್ತಿ: ಪದೇ ಪದೇ ಬರುತ್ತಿದ್ದ ಅನಗತ್ಯ ಪಾಪ್-ಅಪ್‌ಗಳು, ಕಣ್ಣಿಗೆ ತೊಂದರೆ ಕೊಡುತ್ತಿದ್ದ ಜಾಹೀರಾತು ಬ್ಯಾನರ್‌ಗಳು ಮತ್ತು ಕಿರಿಕಿರಿ ಉಂಟುಮಾಡುತ್ತಿದ್ದ ಪುನರಾವರ್ತಿತ ‘ಕ್ಯಾಪ್ಚಾ (ಪರಿಶೀಲನೆ’ಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ.

ಪ್ರಾದೇಶಿಕ ಭಾಷೆಗಳ ಬೆಂಬಲ

ಹೊಸ ವೆಬ್‌ಸೈಟ್‌ನಲ್ಲಿ ಕನ್ನಡ ಸೇರಿದಂತೆ ಭಾರತದ ಪ್ರಮುಖ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನು ಮುಂದೆ ವಿದ್ಯಾರ್ಥಿಗಳು, ದಿವ್ಯಾಂಗ ಪ್ರಯಾಣಿಕರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ತಮ್ಮ ರಿಯಾಯಿತಿ ಟಿಕೆಟ್‌ಗಳನ್ನು ಯಾವುದೇ ಕಚೇರಿಗೆ ಅಲೆಯದೆ ಇದೇ ಏಕೀಕೃತ ಡಿಜಿಟಲ್ ವ್ಯವಸ್ಥೆಯ ಮೂಲಕ ಸುಲಭವಾಗಿ ಪಡೆಯಬಹುದು.

ಡಿಜಿಟಲ್ ರೈಲ್ವೆಯತ್ತ ಭಾರತದ ಹೆಜ್ಜೆ

ಈ ವೆಬ್‌ಸೈಟ್ ಉದ್ಘಾಟನೆಯು ಭಾರತೀಯ ರೈಲ್ವೆಯಲ್ಲಿ ನಡೆಯುತ್ತಿರುವ ಬೃಹತ್ ಡಿಜಿಟಲ್ ರೂಪಾಂತರದ ಒಂದು ಭಾಗವಾಗಿದೆ.

ಸೂಪರ್ ಆ್ಯಪ್ ಸದ್ಯದಲ್ಲೇ?: ರೈಲ್ವೆ ಇಲಾಖೆಯ ಆಂತರಿಕ ಮೂಲಗಳ ಪ್ರಕಾರ, ವೆಬ್‌ಸೈಟ್ ನವೀಕರಣದ ಬೆನ್ನಲ್ಲೇ ಐಆರ್‌ಸಿಟಿಸಿ, ಇನ್ಮುಂದೆ ಟಿಕೆಟ್ ಬುಕಿಂಗ್, ಲೈವ್ ಟ್ರೈನ್ ಸ್ಟೇಟಸ್, ಪಿಎನ್ಆರ್ ಚೆಕಿಂಗ್ ಮತ್ತು ರೈಲಿಗೆ ಆಹಾರ ಆರ್ಡರ್ ಮಾಡುವ ಎಲ್ಲಾ ಸೇವೆಗಳನ್ನೊಳಗೊಂಡ ಒಂದೇ ಒಂದು ‘ಸೂಪರ್ ಆ್ಯಪ್’ ಅನ್ನು ಸಹ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಒಟ್ಟಾರೆಯಾಗಿ, ಹಬ್ಬದ ಸೀಸನ್‌ಗಳಲ್ಲಿ ಊರಿಗೆ ಹೋಗಲು ಟಿಕೆಟ್ ಸಿಗದೆ ಪರದಾಡುತ್ತಿದ್ದ ಭಾರತೀಯ ಮಧ್ಯಮ ವರ್ಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಇಂದಿನಿಂದ ಅತ್ಯಂತ ಸುಲಭ ಹಾಗೂ ವಿಶ್ವಾಸಾರ್ಹ ಡಿಜಿಟಲ್ ಹೆದ್ದಾರಿಯನ್ನು ನಿರ್ಮಿಸಿಕೊಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:10 pm, Wed, 15 July 26

Source link

‘ಮೈಸೂರು ದಸರಾದಲ್ಲಿ ಕಂಬಳ ಬೇಡ’: ಯಾಕೆಂಬ ಕಾರಣ ನೀಡಿದ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್! – Kannada News | Mysuru Dasara 2026: Historian Dr. Shelvapillai Iyengar Opposes Kambala Event, Explains Why

ಮೈಸೂರು, ಜುಲೈ 15: ಮೈಸೂರು ದಸರಾದಲ್ಲಿ ಕಂಬಳ ಆಚರಣೆ ಕುರಿತು ಪರ-ವಿರೋಧ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ, ಇತಿಹಾಸ ತಜ್ಞ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಅವರು ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ. 2026ರ ಮೈಸೂರು ದಸರಾದಲ್ಲಿ ಕಂಬಳ ಆಚರಣೆ ಮಾಡುವ ಪ್ರಸ್ತಾಪಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ‘ಟಿವಿ9’ ಜತೆ ಮಾತನಾಡಿದ ಅವರು, ಕಂಬಳವು ಕರಾವಳಿ ಪ್ರದೇಶದ ವಿಶಿಷ್ಟ ಕ್ರೀಡೆಯಾಗಿದ್ದು, ಮೈಸೂರಿನ ಐತಿಹಾಸಿಕ ದಸರಾ ಮಹೋತ್ಸವದ ಭಾಗವಾಗಿರಬಾರದು. ಭಾರತದ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ಅನನ್ಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಉದಾಹರಣೆಗೆ, ದೆಹಲಿಯಲ್ಲಿ ರಾಮಲೀಲಾ, ಬಂಗಾಳದಲ್ಲಿ ದುರ್ಗಾಪೂಜೆ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಯುವಂತೆ, ಮೈಸೂರು ದಸರಾ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದೆ. 1610ರಲ್ಲಿ ವಿಜಯನಗರ ಸಾಮ್ರಾಜ್ಯದಿಂದ ಅಳವಡಿಸಿಕೊಂಡು ಮೈಸೂರು ದಸರಾವನ್ನು ವೈಭವೀಕರಿಸಲಾಗಿದ್ದು, ಇದು ಮೈಸೂರಿನ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಕಂಬಳ ಆಯೋಜಿಸಲು 20-30 ಎಕರೆ ಜಮೀನು, ಅರಣ್ಯನಾಶ ಮತ್ತು ಬಯಲು ಸೀಮೆಯನ್ನು ಗದ್ದೆಯನ್ನಾಗಿ ಪರಿವರ್ತಿಸುವಂತಹ ಪರಿಸರ ಸಮಸ್ಯೆಗಳು ಉಂಟಾಗುತ್ತವೆ. ಅಲ್ಲದೆ, ಸಾರ್ವಜನಿಕ ಹಣವನ್ನು ಬಳಸಿ ಕೇವಲ ಎರಡು ದಿನಗಳ ಕ್ರೀಡೆಗೆ ಇಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲಗಳನ್ನು ವ್ಯಯಿಸುವುದು ಸೂಕ್ತವಲ್ಲ. ಕಂಬಳವನ್ನು ಜಾಗತಿಕವಾಗಿ ಪ್ರಚಾರ ಮಾಡಲು ಕರಾವಳಿ ಪ್ರದೇಶದಲ್ಲೇ ಅದನ್ನು ಆಯೋಜಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಪ್ರತಿಯೊಂದು ಆಚರಣೆಯೂ ಅದರ ಮೂಲ ಸ್ಥಳದಲ್ಲಿಯೇ ಹೆಚ್ಚು ಅರ್ಥಪೂರ್ಣ ಎಂದು ಡಾ. ಅಯ್ಯಂಗಾರ್ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Prasada in Hinduism: ಪೂಜೆಯ ನಂತರ ಪ್ರಸಾದ ವಿತರಿಸುವುದು ಏಕೆ ಮುಖ್ಯ? ಇಲ್ಲಿದೆ ಭಗವದ್ಗೀತೆ ಸಾರುವ ಅಸಲಿ ಮಹತ್ವ! – Kannada News | Prasada in Hinduism: Spiritual Significance and Benefits of Divine Offerings

ಪೂಜೆಯ ನಂತರ ಪ್ರಸಾದ ವಿತರಿಸುವುದು ಏಕೆ ಮುಖ್ಯ?Image Credit source: Getty Images

ಹಿಂದೂ ಧರ್ಮದಲ್ಲಿ ಪೂಜೆ-ಪುನಸ್ಕಾರಗಳಿಗೆ ತನ್ನದೇ ಆದ ಕಟ್ಟುನಿಟ್ಟಿನ ನಿಯಮಗಳಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಪೂಜೆಯ ಕೊನೆಯಲ್ಲಿ ದೇವರಿಗೆ ನೈವೇದ್ಯವನ್ನು ಅರ್ಪಿಸುವುದು ಮತ್ತು ನಂತರ ಅದನ್ನು ‘ಪ್ರಸಾದ’ದ ರೂಪದಲ್ಲಿ ಎಲ್ಲರಿಗೂ ವಿತರಿಸುವುದು. ಪೂಜೆ ಮುಗಿದ ನಂತರ ಪ್ರಸಾದವನ್ನು ಇತರರಿಗೆ ಹಂಚಿ, ತಾವೂ ಸೇವಿಸಿದಾಗ ಮಾತ್ರ ಆ ಪೂಜೆಯು ಸಂಪೂರ್ಣ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ. ಪ್ರಸಾದದ ಸ್ವೀಕಾರದಿಂದ ಮಾನಸಿಕ ಶಾಂತಿ ಮಾತ್ರವಲ್ಲದೆ, ದೈಹಿಕ ಕಾಯಿಲೆಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಶ್ರೀಮದ್ ಭಗವದ್ಗೀತೆಯಲ್ಲೂ ಪ್ರಸಾದದ ಮಹತ್ವವನ್ನು ವಿಶೇಷವಾಗಿ ಒತ್ತಿಹೇಳಲಾಗಿದೆ. ಅಷ್ಟಕ್ಕೂ ಪ್ರಸಾದ ಎಂದರೇನು? ಅದರ ಆಧ್ಯಾತ್ಮಿಕ ಹಿನ್ನೆಲೆ ಏನು? ಎಂಬ ಸಂಪೂರ್ಣ ವಿವರ ಇಲ್ಲಿದೆ.

ಹಿಂದೂ ಸಂಪ್ರದಾಯದಲ್ಲಿ ‘ಪ್ರಸಾದ’ ಎಂದರೇನು?

ಸನಾತನ ಸಂಪ್ರದಾಯದಲ್ಲಿ, ಭಕ್ತರು ದೇವರಿಗೆ ಸಂಪೂರ್ಣ ಭಕ್ತಿ, ಪ್ರೀತಿ ಮತ್ತು ಶುದ್ಧತೆಯಿಂದ ಅರ್ಪಿಸುವ ಪವಿತ್ರ ಆಹಾರವನ್ನು ‘ನೈವೇದ್ಯ’ ಎನ್ನಲಾಗುತ್ತದೆ. ದೇವರಿಗೆ ಅರ್ಪಿಸಿದ ನಂತರ ಅದೇ ಆಹಾರವು ದೇವರ ಆಶೀರ್ವಾದವಾಗಿ ಬದಲಾಗುತ್ತದೆ, ಅದನ್ನೇ ‘ಪ್ರಸಾದ’ ಎನ್ನಲಾಗುತ್ತದೆ. ಧಾರ್ಮಿಕ ನಿಯಮಗಳನ್ನು ಪಾಲಿಸಿ ಅತ್ಯಂತ ಮಡಿ ಹಾಗೂ ಭಕ್ತಿಯಿಂದ ಸಿದ್ಧಪಡಿಸಿದ ನೈವೇದ್ಯವನ್ನು ಮಾತ್ರ ದೇವರು ಪ್ರೀತಿಯಿಂದ ಸ್ವೀಕರಿಸುತ್ತಾನೆ.

ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಮೂಲ:

ಪೂಜೆಯ ಸಮಯದಲ್ಲಿ ದೇವರಿಗೆ ನೈವೇದ್ಯ ಅರ್ಪಿಸುವಾಗ ಪಠಿಸುವ ಮಂತ್ರಗಳು ಆ ಆಹಾರದಲ್ಲಿ ಸಕಾರಾತ್ಮಕ ಕಂಪನಗಳನ್ನು ತುಂಬುತ್ತವೆ. ಇದರಿಂದಾಗಿ ಪ್ರಸಾದವು ಕೇವಲ ಸಾಮಾನ್ಯ ಆಹಾರವಾಗಿರದೆ, ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗುತ್ತದೆ. ಇದನ್ನು ಸ್ವೀಕರಿಸುವುದರಿಂದ ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳು ದೂರವಾಗಿ, ಅಪಾರ ಮಾನಸಿಕ ಶಾಂತಿ ದೊರೆಯುತ್ತದೆ ಹಾಗೂ ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆಗೆ ದಾರಿಯಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಭಗವದ್ಗೀತೆ ಸಾರುವ ಪ್ರಸಾದದ ಮಹಿಮೆ:

ಶ್ರೀಮದ್ ಭಗವದ್ಗೀತೆಯ ಮೂರನೇ ಅಧ್ಯಾಯದ ೧೩ನೇ ಶ್ಲೋಕದಲ್ಲಿ ಭಗವಾನ್ ಶ್ರೀಕೃಷ್ಣನು ಪ್ರಸಾದದ ಮಹತ್ವವನ್ನು ಹೀಗೆ ವಿವರಿಸಿದ್ದಾನೆ:

“ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ |
ಭುಂಜತೇ ತೇ ತ್ವಘಂ ಪಾಪ ಯೇ ಪಚಂತ್ಯಾತ್ಮಕಾರಣಾತ್ ||”

ಈ ಶ್ಲೋಕದ ಅರ್ಥ: ಯಜ್ಞ ಅಥವಾ ಪೂಜೆಯ ಮೂಲಕ ದೇವರಿಗೆ ಮೊದಲು ಅರ್ಪಿಸಿ, ನಂತರ ಉಳಿದ ಆಹಾರವನ್ನು (ಪ್ರಸಾದ) ಸೇವಿಸುವ ಸಜ್ಜನರು ಎಲ್ಲಾ ರೀತಿಯ ಪಾಪಗಳಿಂದ ಮುಕ್ತರಾಗುತ್ತಾರೆ. ಆದರೆ, ಯಾರು ದೇವರಿಗೆ ಅರ್ಪಿಸದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ ಅಥವಾ ತಮಗೋಸ್ಕರ ಮಾತ್ರ ಆಹಾರವನ್ನು ಬೇಯಿಸಿ ತಿನ್ನುತ್ತಾರೋ, ಅವರು ಪಾಪವನ್ನೇ ಉಣ್ಣುತ್ತಾರೆ ಎಂದರ್ಥ.

ಪ್ರಸಾದ ವಿತರಣೆಯು ನಮ್ಮಲ್ಲಿರುವ ಸ್ವಾರ್ಥವನ್ನು ದೂರ ಮಾಡಿ, ಹಂಚಿ ಉಣ್ಣುವ ಉದಾತ್ತ ಗುಣವನ್ನು ಕಲಿಸುತ್ತದೆ. ಆದ್ದರಿಂದಲೇ, ಯಾವುದೇ ಪೂಜೆಯ ನಂತರ ಪ್ರಸಾದವನ್ನು ಮರೆಯದೇ ಇತರರಿಗೆ ವಿತರಿಸಿ, ತಾವೂ ಭಕ್ತಿಯಿಂದ ಸ್ವೀಕರಿಸುವುದು ಧರ್ಮದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:30 am, Wed, 15 July 26

Source link

‘ಪ್ಯಾರಡೈಸ್’ ಸಿನಿಮಾ ಮುಂದೂಡಿಕೆ, ‘ಟಾಕ್ಸಿಕ್’ ಕಾರಣವಾ? – Kannada News | Nani’s The Pradise movie avoids clash with Toxic

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿಯೂ ಸಹ ಬಲು ಅದ್ಧೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ. ಭಾರತದಲ್ಲಿ ಕನ್ನಡ ಸೇರಿದಂತೆ ಇನ್ನೂ ಕೆಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಪ್ರೇಕ್ಷಕರು ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಟೀಸರ್, ಹಾಡು, ಪೋಸ್ಟರ್​​ಗಳು ವೈರಲ್ ಆಗಿದ್ದು, ಸಿನಿಮಾ ಸಹ ಭರ್ಜರಿ ಹಿಟ್ ಆಗುವ ನಿರೀಕ್ಷೆ ಅಭಿಮಾನಿಗಳಿಗಿದೆ. ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿರುವ ಕಾರಣ, ‘ಟಾಕ್ಸಿಕ್’ ಸಿನಿಮಾಕ್ಕೆ ಎದುರಾಗಿ ಹೋಗಲು ಬೇರೆ ಸಿನಿಮಾಗಳು ಹಿಂದೇಟು ಹಾಕುತ್ತಿವೆ.

ಆಗಸ್ಟ್ 24 ರಂದು ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗಲಿದೆ. ಅದೇ ಸಮಯದಲ್ಲಿ ಬಿಡುಗಡೆಗೆ ನಿರ್ಧರಿಸಿದ್ದ ಕೆಲ ಸಿನಿಮಾಗಳು ಇದೀಗ ತಮ್ಮ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ತೆಲುಗಿನ ಸ್ಟಾರ್ ನಟ ನಾನಿ ನಟನೆಯ ‘ಪ್ಯಾರಡೈಸ್’ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿಕ್ಕಿತ್ತು. ಆದರೆ ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.

ನಾನಿಯ ಬಹು ನಿರೀಕ್ಷಿತ ಸಿನಿಮಾ ಆಗಿರುವ ‘ಪ್ಯಾರಡೈಸ್’ ಭಿನ್ನ ಕತೆ, ಭಿನ್ನ ನಿರೂಪಣೆ ಮತ್ತು ಮೇಕಿಂಗ್ ಅನ್ನು ಒಳಗೊಂಡಿದ್ದು, ‘ದಿ ಪ್ಯಾರಡೈಸ್’ ಸಹ ತೆಲುಗಿನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಮಾರ್ಚ್ ತಿಂಗಳಲ್ಲೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿರದ ಕಾರಣ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಬಳಕ ಆಗಸ್ಟ್ 21 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಘೋಷಿಸಲಾಗಿತ್ತು. ಈಗ ಮತ್ತೊಮ್ಮೆ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ಪ್ರಚಾರಕ್ಕೆ ಯಶ್ ಭರ್ಜರಿ ಯೋಜನೆ

ಆಗಸ್ಟ್ 21ರ ಬದಲಿಗೆ ಸಿನಿಮಾ ಅನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆದ ಬರೋಬ್ಬರಿ ಒಂದು ತಿಂಗಳ ಬಳಿಕ ಅಂದರೆ ಸೆಪ್ಟೆಂಬರ್ 24 ರಂದು ‘ಪ್ಯಾರಡೈಸ್’ ಸಿನಿಮಾ ರಿಲೀಸ್ ಆಗಲಿದೆ. ‘ಟಾಕ್ಸಿಕ್’ ಎದುರು ಸ್ಪರ್ಧೆ ತಪ್ಪಿಸಿಕೊಂಡಿರುವುದು ಒಂದು ಜಾಣ ನಿರ್ಧಾರ ಎಂದೇ ಹೇಳಬೇಕು.

ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಅವರುಗಳು ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 24 ರಂದು ಭಾರಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಕೆವಿಎನ್ ನಿರ್ಮಾಣ ಮಾಡಿದ್ದಾರೆ. ಯಶ್ ಸಹ ನಿರ್ಮಾಣವೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಲೋಕ ಅದಾಲತ್‌ನಲ್ಲಿ ಹೊಸ ದಾಖಲೆ: ಶೇ.50 ಟ್ರಾಫಿಕ್‌ ದಂಡದ ಆಫರ್‌ಗೆ 19 ಲಕ್ಷ ಕೇಸ್ ಕ್ಲೋಸ್; ಸರ್ಕಾರಕ್ಕೆ 55 ಕೋಟಿ ಆದಾಯ – Kannada News | Mega Lok Adalat Success: KSLSA’s 50% Traffic Fine Scheme Boosts Revenue and Clears 78 Lakh Cases

ಬೆಂಗಳೂರು, ಜು.15: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (KSLSA) ವಿಶೇಷ ಪ್ರಯತ್ನದ ಫಲವಾಗಿ, ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಪಾವತಿಗೆ ಘೋಷಿಸಿದ್ದ ಶೇಕಡಾ 50 ರಷ್ಟು ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಈ ರಿಯಾಯಿತಿ ಯೋಜನೆಯಡಿ ಒಟ್ಟು 19,13,659 ಸಂಚಾರ ಚಲನ್ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 55 ಕೋಟಿ ರೂಪಾಯಿ ದಂಡದ ಆದಾಯ ಹರಿದುಬಂದಿದೆ.

ಜುಲೈ 11 ರಂದು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ಈ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಬಾರಿ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 78.79 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇದರಲ್ಲಿ 2.54 ಲಕ್ಷ ಬಾಕಿ ಇದ್ದ ಪ್ರಕರಣಗಳು ಹಾಗೂ 76.25 ಲಕ್ಷ ಪೂರ್ವ ವ್ಯಾಜ್ಯ ಪ್ರಕರಣಗಳು ಸೇರಿವೆ.

ಈ ಇಡೀ ಪ್ರಕ್ರಿಯೆಯಲ್ಲಿ ಒಟ್ಟು 3,017 ಕೋಟಿ ರೂಪಾಯಿಗಳಷ್ಟು ಮೊತ್ತದ ವಿವಾದಗಳನ್ನು ಇತ್ಯರ್ಥಪಡಿಸಲಾಗಿದೆ. ಸಂಚಾರ ದಂಡದ ಮೇಲಿನ ಶೇ. 50 ರಷ್ಟು ರಿಯಾಯಿತಿಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಜೂನ್ 21 ರಿಂದ ಜುಲೈ 10 ರವರೆಗೆ ಒಟ್ಟು 20 ದಿನಗಳ ಕಾಲಾವಕಾಶ ನೀಡಲಾಗಿತ್ತು.

ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ವಿವರಗಳನ್ನು ಮಾಧ್ಯಮಗಳಿಗೆ ನೀಡಿದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳು ಹಾಗೂ KSLSA ಕಾರ್ಯಕಾರಿ ಅಧ್ಯಕ್ಷರಾದ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಾರಿಗೆ ಇಲಾಖೆಗೆ ಸಂಬಂಧಿಸಿದ 1,212 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಇಲಾಖೆಗೆ 61.99 ಲಕ್ಷ ರೂಪಾಯಿಗಳನ್ನು ಮರುಪಡೆಯಲಾಗಿದೆ.

ಇದನ್ನೂ ಓದಿ: ಆಲೂಗಡ್ಡೆ ಚಿಪ್ಸ್ ಪ್ರಿಯರೇ ಹುಷಾರ್: ಕೊಳೆತ ಆಲೂಗಡ್ಡೆ, ಗಲೀಜು ನೀರಿಂದ ಚಿಪ್ಸ್ ತಯಾರಿ

ರಾಜ್ಯಾದ್ಯಂತ ಹಿರಿಯ ನಾಗರಿಕರಿಗೆ ಸಂಬಂಧಿಸಿದ 1,948 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಅವರಿಗೆ ನೆರವಾಗಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ನಡೆದ ಮೋಟಾರು ವಾಹನ ಅಪಘಾತ ಪ್ರಕರಣವೊಂದರಲ್ಲಿ ಸಂತ್ರಸ್ತರಿಗೆ ಬರೋಬ್ಬರಿ 2.45 ಕೋಟಿ ರೂಪಾಯಿಗಳ ಭಾರಿ ಮೊತ್ತದ ಪರಿಹಾರವನ್ನು ಒಪ್ಪಂದದ ಮೂಲಕ ಕೊಡಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:35 am, Wed, 15 July 26

Source link

Video: ರೈಲು ಹಳಿ ದಾಟಲು ಕಷ್ಟ ಪಡುತ್ತಿದ್ದ ಮರಿಯಾನೆಗೆ ತಾಯಾನೆ ಸಾಥ್‌, ವೈರಲ್‌ ಆಯ್ತು ದೃಶ್ಯ – Kannada News | Mother elephant prevents baby elephant from falling while crossing railway tracks.

ತಾಯಿಯೇ ಪ್ರೀತಿಯೇ ಹಾಗೆ, ವಿವರಿಸಲು ಪದಗಳೇ ಇಲ್ಲ. ಪ್ರಾಣಿಗಳು ಕೂಡ ತನ್ನ ಕಂದಮ್ಮಗಳ ಮೇಲೆ ಕಾಳಜಿ ವಹಿಸುತ್ತವೆ, ತಪ್ಪು ಮಾಡಿದರೆ ಗದರುತ್ತವೆ. ಇದೀಗ ತಾಯಾನೆ (mother elephant) ತನ್ನ ಮರಿಯನ್ನು ಎಷ್ಟು ಕೇರ್ ಮಾಡುತ್ತದೆ ಎನ್ನುವುದಕ್ಕೆ ಸಾಕ್ಷಿಯೆನ್ನುವಂತಿದೆ ಈ ದೃಶ್ಯ. ಹೌದು, ಮರಿಯಾನೆ ರೈಲು ಹಳಿ ದಾಟಲು ಕಷ್ಟ ಪಡುತ್ತಿದೆ. ಇದೇ ವೇಳೆ ತಾಯಿ ಆನೆ ತನ್ನ ಕಂದಮ್ಮನನ್ನು ರೈಲು ಹಳಿ ದಾಟಿಸಿ ತನ್ನ ಜತೆಗೆ ಕರೆದುಕೊಂಡು ಹೋಗಿರುವ ದೃಶ್ಯವು ನೆಟ್ಟಿಗರ ಗಮನ ಸೆಳೆದಿದೆ.

ಎಲಿಫೆಂಟ್ ಸೆಕ್ಯೂರ್ (elephantssecures) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಆನೆಗಳ ಗುಂಪಿನಲ್ಲಿದ್ದ ಮರಿಯಾನೆಯೊಂದು ರೈಲು ಹಳಿ ದಾಟಲು ಕಷ್ಟ ಪಡುತ್ತಿರುವುದನ್ನು ಕಾಣಬಹುದು. ಈ ಪುಟಾಣಿ ಆನೆಯ ಹಿಂಭಾಗದಲ್ಲಿದ್ದ ತಾಯಾನೆ ತನ್ನ ಕಂದಮ್ಮ ಬೀಳದಂತೆ ತಡೆದಿದೆ. ರೈಲು ಹಳಿ ದಾಟುವುದು ಹೇಗೆಂದು ಮಾರ್ಗದರ್ಶನ ಮಾಡಿದ್ದು, ತನ್ನ ಸೊಂಡಿಲಿನಿಂದ ಮರಿಯಾನೆಯನ್ನು ಮೆಲ್ಲನೆ ಮುಂದಕ್ಕೆ ದೂಡುತ್ತಾ ಹಳಿ ದಾಟಿಸಿರುವುದನ್ನು ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಎದ್ದು ನಿಂತು ನಡೆಯಲು ಪ್ರಯತ್ನಿಸುತ್ತಿದ್ದ ಕಂದಮ್ಮನನ್ನು ಬೀಳದಂತೆ ತಡೆದ ತಾಯಾನೆ

ಈ ವಿಡಿಯೋ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮುದ್ದಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬುದ್ಧಿವಂತ ಆನೆ ಎಂದಿದ್ದಾರೆ. ಇನ್ನೊಬ್ಬರು, ಆನೆಗೆ ಈ ರೈಲ್ವೆ ಟ್ರ್ಯಾಕ್ ಡೇಂಜರ್ಸ್ ಎಂಬುದು ತಿಳಿದಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿತಿನ್ ಗಡ್ಕರಿ ಇಮೇಜ್‌ಗೆ ಧಕ್ಕೆ: E20 ಇಂಧನ ನೀತಿ ವಿರುದ್ಧ ಅಪಪ್ರಚಾರ, ಮನೀಶ್ ಕಶ್ಯಪ್ ಸೇರಿ ನಾಲ್ವರ ವಿರುದ್ಧ ಎಫ್​ಐಆರ್ – Kannada News | Nitin Gadkari E20 Fuel FIR: Manish Kashyap and 3 Influencers Booked for Misinformation

ನಾಗ್ಪುರ, ಜುಲೈ 15: ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು, ಎಥೆನಾಲ್ ಮಿಶ್ರಿತ ಇಂಧನ(E20 Petrol) ನೀತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದಾರಿತಪ್ಪಿಸುವ ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಮನೀಷ್ ಕಶ್ಯಪ್ ಸೇರಿ ನಾಲ್ವರು ಇನ್​ಫ್ಲುಯೆನ್ಸರ್​ಗಳ ವಿರುದ್ಧ ನಾಗ್ಪುರ ಸೈಬರ್ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಮನೀಶ್ ಕಶ್ಯಪ್ ಹೊರತುಪಡಿಸಿ, ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇತರ ಸೋಶಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗಳೆಂದರೆ ‘ದೇಸಿ ಬಾಯ್ಸ್ ಎನ್​ಸಿಆರ್’, ಹರ್ಷಿತ್ ರಥಿ ಮತ್ತು ಅಂಕಲೇಶ್ ಇನ್ವಾಟೆ.

ಯೂಟ್ಯೂಬ್, ಇನ್‌ಸ್ಟಾಗ್ರಾಮ್‌ನಲ್ಲಿ ಸುಳ್ಳು ಸಂದರ್ಶನಗಳ ಗಿಮಿಕ್

ಪೊಲೀಸ್ ಮೂಲಗಳ ಪ್ರಕಾರ, ಈ ನಾಲ್ವರು ಇನ್​ಫ್ಲುಯೆನ್ಸರ್​ಗಳು ಕೇವಲ ವ್ಯೂಸ್ ಮತ್ತು ಫಾಲೋವರ್ಸ್‌ಗಳನ್ನು ಗಳಿಸುವ ಏಕೈಕ ಸ್ವಾರ್ಥ ಉದ್ದೇಶದಿಂದ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ವಿವಾದಾತ್ಮಕ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದರು.

ವಂಚನೆಯ ಆರೋಪ: ಸರ್ಕಾರದ ಎಥೆನಾಲ್ ನೀತಿಯ ನೆಪದಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದ ಹಗರಣ ಮತ್ತು ನಕಲಿ ವಹಿವಾಟುಗಳು ನಡೆಯುತ್ತಿವೆ ಎಂದು ಇವರು ವೀಡಿಯೊಗಳಲ್ಲಿ ಪ್ರತಿಪಾದಿಸಿದ್ದರು.

ನಕಲಿ ಸಂದರ್ಶನಗಳು: ತಮ್ಮ ಸುಳ್ಳು ವೀಡಿಯೊಗಳಿಗೆ ಸಾರ್ವಜನಿಕ ನಂಬಿಕೆ ಸಿಗಲಿ ಎಂಬ ಕಾರಣಕ್ಕೆ, ಇವರು ಸಾಮಾನ್ಯ ನಾಗರಿಕರೊಂದಿಗೆ ನಕಲಿ ಹಾಗೂ ದಾರಿತಪ್ಪಿಸುವ ಸಂದರ್ಶನಗಳನ್ನು ಚಿತ್ರೀಕರಿಸಿ ಪ್ರಸಾರ ಮಾಡಿದ್ದರು. ಈ ಮೂಲಕ ನಿತಿನ್ ಗಡ್ಕರಿ ಅವರ ರಾಜಕೀಯ ಮತ್ತು ಸಾಮಾಜಿಕ ಖ್ಯಾತಿಗೆ ಕಳಂಕ ತರಲು ಪ್ರಯತ್ನಿಸಿದ್ದರು.

ಭಾರತೀಯ ಜನತಾ ಪಕ್ಷದ (BJP) ನಾಗ್ಪುರ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಶಿಶಿರ್ ತ್ರಿಪಾಠಿ ಅವರು ನೀಡಿದ ಔಪಚಾರಿಕ ದೂರಿನ ಆಧಾರದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ಓದಿ: ಇ20 ಪೆಟ್ರೋಲ್, ಭಯಪಡುವ ವಿಚಾರವಾ? ಜನರಿಗೆ ಇರುವ ಸಂದೇಹಗಳೇನು? ಸರ್ಕಾರ ಹೇಳುವುದೇನು? ಇಲ್ಲಿದೆ ಡೀಟೇಲ್ಸ್

ತನಿಖೆಯಲ್ಲಿ ಬಯಲಾಯ್ತು ಸತ್ಯ

ದೂರು ದಾಖಲಾದ ತಕ್ಷಣ ನಾಗ್ಪುರ ಸೈಬರ್ ಸೆಲ್ ಅಧಿಕಾರಿಗಳು ಈ ವೀಡಿಯೊಗಳ ಸತ್ಯಾಸತ್ಯತೆಯ ಬಗ್ಗೆ ತೀವ್ರ ತನಿಖೆ ನಡೆಸಿದರು. ತನಿಖೆಯಲ್ಲಿ ಇನ್​ಫ್ಲುಯೆನ್ಸರ್​ಗಳು ಪ್ರಸಾರ ಮಾಡಿದ ಮಾಹಿತಿಯು ಸಂಪೂರ್ಣವಾಗಿ ಆಧಾರರಹಿತ ಮತ್ತು ಕಲ್ಪಿತ ಎಂಬುದು ಸಾಬೀತಾಗಿದೆ. ಈ ವೀಡಿಯೊಗಳು ಕೇವಲ ಸಂವೇದನೆ ಸೃಷ್ಟಿಸಲು ಮಾಡಿದ ಷಡ್ಯಂತ್ರವಾಗಿದ್ದು, ವೀಡಿಯೊದಲ್ಲಿ ತೋರಿಸಲಾದ ಯಾವುದೇ ಘಟನೆಗಳಿಗೂ ಸಚಿವ ನಿತಿನ್ ಗಡ್ಕರಿ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸೈಬರ್ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಏನಿದು E20 ಇಂಧನ? ಸಚಿವರ ಕನಸಿನ ಯೋಜನೆ ಇದು

ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ವೆಚ್ಚವನ್ನು ಉಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕ್ರಾಂತಿಕಾರಿ ನೀತಿ ಇದು. E20 ಎಂದರೆ ಶೇಕಡಾ 80 ರಷ್ಟು ಪೆಟ್ರೋಲ್ ಮತ್ತು ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಇಂಧನವಾಗಿದೆ. ಈ ಎಥೆನಾಲ್ ಅನ್ನು ಕಬ್ಬು, ಹಾಳಾದ ಧಾನ್ಯಗಳು ಮತ್ತು ಕೃಷಿ ತ್ಯಾಜ್ಯದಿಂದ ಭಾರತದಲ್ಲೇ ಸ್ವದೇಶಿಯಾಗಿ ಉತ್ಪಾದಿಸಲಾಗುತ್ತದೆ.

ರೈತರಿಗೆ ಆರ್ಥಿಕ ಬಲ: ನಿತಿನ್ ಗಡ್ಕರಿ ಅವರು ಮೊದಲಿನಿಂದಲೂ ಎಥೆನಾಲ್ ಬಳಕೆಯನ್ನು ಪ್ರಬಲವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಇದರಿಂದಾಗಿ ದೇಶದ ಕೋಟ್ಯಂತರ ಕಬ್ಬು ಬೆಳೆಯುವ ರೈತರಿಗೆ ನೇರ ಆರ್ಥಿಕ ಲಾಭ ಸಿಗುತ್ತಿದೆ. ಆದರೆ, ಈ ಇಂಧನ ಬಳಕೆಯಿಂದ ವಾಹನಗಳ ಇಂಜಿನ್ ಹಾಳಾಗುತ್ತದೆ ಎಂಬಂತಹ ಸುಳ್ಳು ವದಂತಿಗಳನ್ನು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಡಲಾಗುತ್ತಿತ್ತು. ಸದ್ಯ ಪೊಲೀಸರು ಈ ನಾಲ್ಕು ಇನ್ಫ್ಲುಯೆನ್ಸರ್ಸ್‌ಗಳ ಡಿಜಿಟಲ್ ಖಾತೆಗಳ ತಾಂತ್ರಿಕ ತನಿಖೆ ನಡೆಸುತ್ತಿದ್ದು, ಇದರ ಹಿಂದೆ ಯಾವುದಾದರೂ ರಾಜಕೀಯ ಪಿತೂರಿ ಇದೆಯೇ ಎಂಬ ಕೋನದಲ್ಲೂ ಜಾಲಾಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾಫಿನಾಡಿನಲ್ಲಿ ಬಯಲಾಯ್ತು ಬೃಹತ್‌ ಬ್ಯಾಂಕ್‌ ಹಗರಣ: ಬಡವರ ಖಾತೆ ಬಳಸಿ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್‌ ಮೂಲಕ ಕೋಟ್ಯಂತರ ರೂ. ಅಕ್ರಮ ವಹಿವಾಟು! – Kannada News | Chikkamagaluru Cyber Fraud: Mega Bank Scam Unearths Illicit Cricket Betting Transactions via Fake Accounts

ಕಾಫಿನಾಡಿನಲ್ಲಿ ಬಯಲಾಯ್ತು ಬೃಹತ್‌ ಬ್ಯಾಂಕ್‌ ಹಗರಣ

ಚಿಕ್ಕಮಗಳೂರು, ಜುಲೈ 15: ಸಾಲ ಕೊಡಿಸುವ ಆಮಿಷವೊಡ್ಡಿ ಬಡವರು ಮತ್ತು ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಆಘಾತಕಾರಿ ಹಗರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಾಫಿನಾಡಿನ ಇತಿಹಾಸದಲ್ಲೇ ಇಂತಹ ಬೃಹತ್ ಸೈಬರ್ ವಂಚನೆ ಪ್ರಕರಣ ಇದೇ ಮೊದಲ ಬಾರಿಗೆ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಬಡವರ ಆಧಾರ್ ಕಾರ್ಡ್‌ ದುರ್ಬಳಕೆ

ಕಿಡಿಗೇಡಿಗಳು ದಿನಗೂಲಿ ಮಾಡುವ ಸಾಮಾನ್ಯ ಜನರಿಗೆ ಅಲ್ಪಸ್ವಲ್ಪ ಹಣದ ಆಸೆ ತೋರಿಸಿ, ಲೋನ್ ಕೊಡಿಸುವುದಾಗಿ ನಂಬಿಸಿ ಅವರ ಆಧಾರ್ ಮತ್ತು ಪ್ರಮುಖ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಸುಮಾರು 5 ರಿಂದ 6 ಪ್ರಮುಖ ಖಾಸಗಿ ಬ್ಯಾಂಕ್‌ಗಳ ಸಿಬ್ಬಂದಿಯ ಸಹಕಾರದೊಂದಿಗೆ 2022-23ರ ಅವಧಿಯಲ್ಲಿ ನೂರಾರು ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಲಾಗಿದೆ. ಈ ಖಾತೆಗಳನ್ನು ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್‌ಗಳ ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಳ್ಳಲಾಗಿದೆ ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ. ಕಮಿಷನ್ ಆಸೆಗೆ ಬಿದ್ದ ಕೆಲ ಸ್ಥಳೀಯ ಯುವಕರು ತಲಾ 50ಕ್ಕೂ ಹೆಚ್ಚು ಖಾತೆಗಳನ್ನು ಮಾಡಿಸಿಕೊಟ್ಟಿದ್ದು, ಒಂದೊಂದು ಖಾತೆಯಲ್ಲೂ ಬರೋಬ್ಬರಿ 20 ರಿಂದ 30 ಲಕ್ಷ ರೂಪಾಯಿವರೆಗೆ ಅನುಮಾನಾಸ್ಪದ ವಹಿವಾಟು ನಡೆದಿರುವುದು ಖಾತೆದಾರರನ್ನು ಕಂಗಾಲಾಗಿಸಿದೆ.

ರಾಜಕೀಯ ತಿರುವು ಪಡೆದ ಪ್ರಕರಣ

ಈ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ರಾಜಕೀಯ ತಿರುವು ಪಡೆದುಕೊಂಡಿದೆ. ಪೊಲೀಸರ ವಶದಲ್ಲಿರುವ ಆರೋಪಿಗಳು ಈ ಜಾಲದ ಹಿಂದೆ ಶಂಕರಪುರ ವಾರ್ಡ್‌ನ ನಗರಸಭೆ ಜೆಡಿಎಸ್ ಸದಸ್ಯ ಗೋಪಿ ಶಾಮೀಲಾಗಿದ್ದಾರೆ ಎಂದು ಬಾಯ್ಬಿಟ್ಟಿದ್ದಾರೆ. ಗೋಪಿ ಅವರೇ 50ಕ್ಕೂ ಹೆಚ್ಚು ಖಾತೆಗಳನ್ನು ಮಾಡಿಸಿಕೊಟ್ಟಿದ್ದರು ಎಂಬ ಸ್ಫೋಟಕ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.

ಸಿಬಿಐ, ಇಡಿ ತನಿಖೆಗೆ ಸಿ.ಟಿ.ರವಿ ಆಗ್ರಹ

ಈ ಹಗರಣದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ, ಇದರ ಹಿಂದೆ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಜಾಲ ಅಡಗಿದೆ. ದುಬೈನಿಂದಲೇ ಈ ಜಾಲವನ್ನು ನಿಯಂತ್ರಿಸಲಾಗುತ್ತಿದೆ. ಆದ್ದರಿಂದ ಪ್ರಕರಣದ ಆಳ-ಅಗಲವನ್ನು ಪರಿಗಣಿಸಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ED) ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಈಗಾಗಲೇ ಚಿಕ್ಕಮಗಳೂರಿನ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಜಾಲದಲ್ಲಿ ಭಾಗಿಯಾಗಿರುವ ಪ್ರಭಾವಿಗಳು ಹಾಗೂ ಬ್ಯಾಂಕ್ ಸಿಬ್ಬಂದಿಗಳ ಪೂರ್ಣ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಲೂಗಡ್ಡೆ ಚಿಪ್ಸ್ ಪ್ರಿಯರೇ ಹುಷಾರ್: ಕೊಳೆತ ಆಲೂಗಡ್ಡೆ, ಗಲೀಜು ನೀರಿಂದ ಚಿಪ್ಸ್ ತಯಾರಿ – Kannada News | Unsafe Chips Alert! Devanahalli Bakery Sealed for Using Rotten Potatoes & Filthy Water

ದೇವನಹಳ್ಳಿ, ಜು.15: ನೀವು ಬೇಕರಿಗಳಲ್ಲಿ ಬಾಯಿ ಚಪ್ಪರಿಸಿ ತಿನ್ನುವ ಆಲೂಗಡ್ಡೆ ಚಿಪ್ಸ್ ಎಷ್ಟು ಸುರಕ್ಷಿತ ಗೊತ್ತಾ? ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರಸ್ತೆ ಬದಿಯ ಬೇಕರಿಯೊಂದರಲ್ಲಿ ಸಾರ್ವಜನಿಕರ ಕಣ್ಣೆದುರೇ ಕೊಳೆತ ಆಲೂಗಡ್ಡೆ ಹಾಗೂ ಗಲೀಜು ನೀರನ್ನು ಬಳಸಿ ಚಿಪ್ಸ್ ತಯಾರಿಸುತ್ತಿದ್ದ ಕೃತ್ಯ ಬಯಲಾಗಿದ್ದು, ಅಧಿಕಾರಿಗಳು ತಕ್ಷಣವೇ ಬೇಕರಿಯನ್ನು ಸೀಜ್ ಮಾಡಿದ್ದಾರೆ.

ವಿಜಯಪುರ ಪಟ್ಟಣದ ‘ಶ್ರೀಸಾಯಿರಾಮ್ ಹಾಟ್ ಚಿಪ್ಸ್’ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿಯಾದ ವೆಂಕಟೇಶ್ ಎಂಬ ವ್ಯಕ್ತಿ ತಮ್ಮ ಮಕ್ಕಳಿಗೆ ಇಷ್ಟ ಎಂದು ಈ ಬೇಕರಿಯಲ್ಲಿ ಆಲೂಗಡ್ಡೆ ಚಿಪ್ಸ್ ಖರೀದಿಸಿದ್ದರು. ಆದರೆ, ರಾತ್ರಿ ಈ ಚಿಪ್ಸ್ ತಿಂದಿದ್ದ ಮನೆಯ ಮಕ್ಕಳಿಗೆ ಬೆಳಗಾಗುವಷ್ಟರಲ್ಲಿ ತೀವ್ರವಾದ ಕೆಮ್ಮು ಕಾಣಿಸಿಕೊಂಡಿದೆ.

ಮಕ್ಕಳಿಗೆ ದಿಢೀರನೆ ಕೆಮ್ಮು ಬರಲು ಕಾರಣವೇನು ಎಂದು ವೆಂಕಟೇಶ್ ಅವರು ಚಿಪ್ಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರಲ್ಲಿ ಕಪ್ಪು ಚುಕ್ಕೆಗಳು ಇರುವುದು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡು ಬೇಕರಿಗೆ ಬಂದು ಪರಿಶೀಲಿಸಿದಾಗ ಚಿಪ್ಸ್ ತಯಾರಿಯ ಅಸಲಿ ಕರಾಳ ಮುಖ ಕಣ್ಣಿಗೆ ಬಿದ್ದಿದೆ.

ಇದನ್ನೂ ಓದಿ: ಜಿಬಿಎ ಸ್ಟಿಕ್ಕರ್ ಭೀತಿಗೆ ಗಲ್ಲಿ ಸೇರಿದ ಕಾರುಗಳು: ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ಪಾರ್ಕಿಂಗ್ ಹಾವಳಿ

ಗಲೀಜು ನೀರಿನಲ್ಲಿ ತಯಾರಿ; ಅಧಿಕಾರಿಗಳಿಂದ ಬೇಕರಿ ಸೀಜ್:

ಬೇಕರಿಯ ಒಳಗಡೆ ಅತ್ಯಂತ ಅಸಹ್ಯಕರ ವಾತಾವರಣದಲ್ಲಿ, ಕೊಳೆತು ನಾರುತ್ತಿದ್ದ ಆಲೂಗಡ್ಡೆ ಹಾಗೂ ಗಲೀಜು ನೀರನ್ನು ಬಳಸಿಕೊಂಡು ಚಿಪ್ಸ್ ತಯಾರಿಸುತ್ತಿರುವುದು ಕಂಡುಬಂದಿದೆ. ಇದನ್ನು ನೋಡಿ ತೀವ್ರ ಆಕ್ರೋಶಗೊಂಡ ಸಾರ್ವಜನಿಕರು ತಕ್ಷಣವೇ ಚಿಪ್ಸ್ ಅಂಗಡಿಯ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಬೇಕರಿ ವಿರುದ್ಧ ಸ್ಥಳೀಯರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸಾರ್ವಜನಿಕರ ಸಮ್ಮುಖದಲ್ಲೇ ಕೊಳೆತ ಆಲೂಗಡ್ಡೆಯಿಂದ ತಯಾರಾಗಿದ್ದ ಚಿಪ್ಸ್‌ನ ಸ್ಯಾಂಪಲ್‌ಗಳನ್ನು ಹೆಚ್ಚಿನ ತಪಾಸಣೆಗಾಗಿ ಲ್ಯಾಬ್‌ಗೆ ರವಾನಿಸಿದ್ದಾರೆ. ಜೊತೆಗೆ, ಅಂಗಡಿಯ ಮಾಲೀಕನಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿ, ಬೇಕರಿಯನ್ನು ಸಂಪೂರ್ಣವಾಗಿ ಸೀಜ್ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version