ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕ್ಷಿಪಣಿ ಅಬ್ಬರ: ಯುಎಇ ತೈಲ ನೌಕೆಗಳ ಮೇಲೆ ದಾಳಿ, ಓರ್ವ ಭಾರತೀಯ ಸಾವು – Kannada News | Iran Missile Attack in Hormuz: UAE Oil Tankers Hit, Indian Sailor Killed Amid US Blockade

ಟೆಹ್ರಾನ್, ಜುಲೈ 14: ಮಧ್ಯಪ್ರಾಚ್ಯದಲ್ಲಿ ಜಾಗತಿಕ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ಇರಾನ್ ತನ್ನ ಉಗ್ರ ಸ್ವರೂಪವನ್ನು ಪ್ರದರ್ಶಿಸುತ್ತಿದೆ. ಸೋಮವಾರ ರಾತ್ರಿ ಓಮನ್ ದೇಶದ ಕಡಲ ಗಡಿಯೊಳಗೆ ಚಲಿಸುತ್ತಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್​​ಗೆ ಸೇರಿದ ಎರಡು ಬೃಹತ್ ತೈಲ ಟ್ಯಾಂಕರ್ ಹಡಗುಗಳ ಮೇಲೆ ಇರಾನ್ ಸೇನೆ ಕ್ರೂಸ್ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರೆ ಎಂಟು ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ಯುಎಇ ದೇಶದ ಹೆಮ್ಮೆಯ ತೈಲ ಹಡಗುಗಳಾದ ‘ಮೊಂಬಾಸಾ’ ಮತ್ತು ‘ಅಲ್ ಬಹಿಯಾ’ ಹಾರ್ಮುಜ್ ಜಲಸಂಧಿಯ ದಕ್ಷಿಣದ ಪ್ರಮುಖ ಹಡಗು ಮಾರ್ಗದ ಮೂಲಕ ಹಾದುಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ದಾಳಿಗೊಳಗಾದ ‘ಮೊಂಬಾಸಾ’ ಟ್ಯಾಂಕರ್‌ನಲ್ಲಿದ್ದ ಒಬ್ಬ ಭಾರತೀಯ ನಾವಿಕ ಸಾವನ್ನಪ್ಪಿದ್ದು, ಗಾಯಗೊಂಡ ಎಂಟು ಸಿಬ್ಬಂದಿಗಳ ಪೈಕಿ ಆರು ಮಂದಿ ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳಾಗಿದ್ದಾರೆ.

ಹಡಗುಗಳಿಗೆ ಭಾರಿ ಹಾನಿ: ಕ್ಷಿಪಣಿ ಬಿದ್ದ ತಕ್ಷಣ ಎರಡೂ ಬೃಹತ್ ಹಡಗುಗಳಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿತು. ಆದರೆ, ಹಡಗಿನಲ್ಲಿದ್ದ ಸಿಬ್ಬಂದಿ ಪ್ರಾಣದ ಹಂಗು ತೊರೆದು ಸಮಯಪ್ರಜ್ಞೆಯಿಂದ ಬೆಂಕಿಯನ್ನು ಹತೋಟಿಗೆ ತಂದಿದ್ದರಿಂದ ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ಮಾರ್ಗದಲ್ಲಿ ಸಂಭವಿಸಬಹುದಾಗಿದ್ದ ಮಹಾ ವಿನಾಶವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಎಕ್ಸ್​ ಪೋಸ್ಟ್​

ಇದು ವಿಶ್ವಸಂಸ್ಥೆಯ ನಿಯಮದ ಉಲ್ಲಂಘನೆ: ಯುಎಇ ಆಕ್ರೋಶ

ಈ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಯುಎಇ ವಿದೇಶಾಂಗ ಸಚಿವಾಲಯ (MoFA), ಮೃತಪಟ್ಟ ಭಾರತೀಯ ನಾವಿಕನ ಕುಟುಂಬಕ್ಕೆ ಹಾಗೂ ಭಾರತ ಸರ್ಕಾರಕ್ಕೆ ತನ್ನ ಸಂತಾಪವನ್ನು ಸೂಚಿಸಿದೆ. “ಇರಾನ್‌ನ ಈ ಉದ್ಧಟತನವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ನಿರ್ಣಯ 2817 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇರಾನ್ ತಕ್ಷಣ ತನ್ನ ಎಲ್ಲಾ ಯುದ್ಧ ಚಟುವಟಿಕೆಗಳನ್ನು ನಿಲ್ಲಿಸಿ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕು. ನಮ್ಮ ಸಾರ್ವಭೌಮತ್ವದ ಮೇಲಿನ ಈ ದಾಳಿಗೆ ಪ್ರತಿಯಾಗಿ ಪ್ರತೀಕಾರ ತೀರಿಸಿಕೊಳ್ಳುವ ಸಂಪೂರ್ಣ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ” ಎಂದು ಯುಎಇ ಇರಾನ್‌ಗೆ ಖಡಕ್ ಎಚ್ಚರಿಕೆ ನೀಡಿದೆ.

ಮತ್ತಷ್ಟು ಓದಿ: ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ಹಾರ್ಮುಜ್ ಜಲಸಂಧಿಯಲ್ಲಿ 3 ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರ

ಇಂದಿನಿಂದ ಇರಾನ್‌ಗೆ ಅಮೆರಿಕದ ಜಲ ದಿಗ್ಬಂಧನ

ಈ ರಕ್ತಪಾತದ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಕ್ಷಣದ ಆದೇಶ ಹೊರಡಿಸಿದ್ದು, ಇಂದಿನಿಂದಲೇ ಇರಾನಿನ ಬಂದರುಗಳಿಗೆ ಬರುವ ಮತ್ತು ಅಲ್ಲಿಂದ ಹೋಗುವ ಎಲ್ಲಾ ಹಡಗುಗಳ ಮೇಲೆ ಅಮೆರಿಕದ ನೌಕಾಪಡೆ (CENTCOM) ಕಠಿಣ ಕಡಲ ದಿಗ್ಬಂಧನವನ್ನು ಮರುಸ್ಥಾಪಿಸುತ್ತಿದೆ ಎಂದು ಪ್ರಕಟಿಸಿದ್ದಾರೆ.

ಈ ಹಿಂದೆ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಏರ್ಪಟ್ಟಿದ್ದ ಮಧ್ಯಂತರ ಒಪ್ಪಂದವು ಇರಾನ್‌ನ ಈ ದಾಳಿಯಿಂದ ಸಂಪೂರ್ಣವಾಗಿ ಮುರಿದುಬಿದ್ದಿದೆ. ತಾನು ಇರಾನ್ ಬಂದರುಗಳನ್ನು ಮಾತ್ರ ಬ್ಲಾಕ್ ಮಾಡುವುದಾಗಿ ಮತ್ತು ಈ ಮಾರ್ಗದಲ್ಲಿ ಹಾದುಹೋಗುವ ಇತರ ದೇಶಗಳ ವಾಣಿಜ್ಯ ಹಡಗುಗಳ ಸುರಕ್ಷತೆಗಾಗಿ ಅಮೆರಿಕ ಇನ್ಮುಂದೆ ‘ವಿಶೇಷ ಟೋಲ್ ಶುಲ್ಕ’ ವಿಧಿಸಲಿದೆ ಎಂದು ಟ್ರಂಪ್ ಹೊಸ ನೀತಿಯನ್ನು ಪ್ರಕಟಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ

ಯುದ್ಧದ ತೀವ್ರತೆ: ಜಾಗತಿಕ ತೈಲದ ಐದನೇ ಒಂದು ಭಾಗವನ್ನು ಸಾಗಿಸುವ ಹಾರ್ಮುಜ್ ಜಲಸಂಧಿಯನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಲವಂತವಾಗಿ ಮುಚ್ಚಿದ್ದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ 140 ಮಿಲಿಟರಿ ನೆಲೆಗಳ ಮೇಲೆ ಭೀಕರ ಬಾಂಬ್ ದಾಳಿ ನಡೆಸಿತ್ತು. ಸದ್ಯ ಈ ಕ್ಷಿಪಣಿ ದಾಳಿಯು ಇಡೀ ಕೊಲ್ಲಿ ಪ್ರದೇಶವನ್ನು ಜಾಗತಿಕ ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ.

ಭಾರತಕ್ಕೆ ಭಾರಿ ತಲೆನೋವು: ಭಾರತೀಯ ನಾವಿಕ ಸಾವನ್ನಪ್ಪಿರುವುದು ಮತ್ತು ಹಲವರು ಗಾಯಗೊಂಡಿರುವುದು ಭಾರತಕ್ಕೆ ಕಳವಳ ಮೂಡಿಸಿದೆ. ಭಾರತವು ತನ್ನ ಇಂಧನ ಭದ್ರತೆಗಾಗಿ ಈ ಮಾರ್ಗವನ್ನೇ ಅವಲಂಬಿಸಿರುವುದರಿಂದ, ಅಮೆರಿಕ ಮತ್ತು ಇರಾನ್ ನಡೆಸುತ್ತಿರುವ ಈ ಜಿದ್ದಾಜಿದ್ದಿನ ‘ಸುಂಕದ ಸಮರ’ ಹಾಗೂ ಕಡಲ ಯುದ್ಧವು ಜಾಗತಿಕ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿ, ಭಾರತದಲ್ಲೂ ಆರ್ಥಿಕ ಒತ್ತಡವನ್ನು ಹೆಚ್ಚಿಸುವ ಭೀತಿ ಮೂಡಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka Weather Forecast: ಮುಂಗಾರು ದುರ್ಬಲ, ಇಂದು-ನಾಳೆ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ – Kannada News | Karnataka Weather Forecast for 14 and 15 July 2026: IMD Predicts Light Rain and Strong Winds Across Several Districts

ಬೆಂಗಳೂರು, ಜುಲೈ 14: ಕರ್ನಾಟಕದಲ್ಲಿ ಮುಂಗಾರು (Monsoon Rain) ದುರ್ಬಲಗೊಂಡಿದ್ದು, ಮಳೆಯ ಅಬ್ಬರ ತಗ್ಗಿದೆ. ಆದಾಗ್ಯೂ, ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಜುಲೈ 14 ಹಾಗೂ 15 ರಂದು ಸಾಧಾರಣ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರ ಮುನ್ಸೂಚನೆ (Weather Forecast) ನೀಡಿದೆ.

ಉತ್ತರ ಕರ್ನಾಟಕದಲ್ಲಿ ಮಳೆಯಾಗುತ್ತಾ?

ಉತ್ತರ ಒಳನಾಡು ಕರ್ನಾಟಕದ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಒಂದೆರಡು ಕಡೆ ಸಾಧಾರಣ ಮಳೆಯೊಂದಿಗೆ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಜೊತೆಗೆ ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕಡಿಮೆ ಇದ್ದರೂ, ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ

ದಕ್ಷಿಣ ಒಳನಾಡು ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯೊಂದಿಗೆ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಅಲ್ಲದೆ ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ಜುಲೈ 15ಕ್ಕೆ ಎಲ್ಲೆಲ್ಲಿ ಮಳೆಯಾಗಲಿದೆ?

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜುಲೈ 15 (ಬುಧವಾರ) ಕೂಡ ರಾಜ್ಯದ ಕೆಲ ಭಾಗಗಳಲ್ಲಿ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಒಂದೆರಡು ಕಡೆ ಮಳೆಯಾಗುವ ನಿರೀಕ್ಷೆಯಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲೂ ಒಂದೆರಡು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಆದರೆ ಗಾಳಿಯ ವೇಗ ಹೆಚ್ಚಿರುವ ಸಾಧ್ಯತೆ ಇರುವುದರಿಂದ ರೈತರು, ವಾಹನ ಸವಾರರು ಹಾಗೂ ಹೊರಾಂಗಣ ಕೆಲಸ ಮಾಡುವವರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಭಾಷೆಯಲ್ಲಿ ಮಿಂಚಿ ತಾಯ್ನಾಡಿನಲ್ಲಿ ಸೋಲುತ್ತಿದ್ದಾರಾ ಸ್ಟಾರ್ ನಟ ಪೃಥ್ವಿರಾಜ್? – Kannada News | Prithviraj Sukumaran: Why His Malayalam Films Are Failing Despite Rajamouli Varanasi Hype

ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರರಂಗದ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರು. ಸದ್ಯ ಅವರು ಎಸ್‌ಎಸ್‌ ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರದಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಸ್ವಂತ ಚಿತ್ರರಂಗದಲ್ಲಿ ಮಾತ್ರ ಅವರ ಮಾರುಕಟ್ಟೆ ಕೊಂಚ ಮಂಕಾದಂತೆ ಕಾಣುತ್ತಿದೆ. ಅವರ ಹೊಸ ಸಿನಿಮಾ ‘ಐ, ನೋಬಡಿ’ ಇತ್ತೀಚೆಗಷ್ಟೇ ತೆರೆಕಂಡಿದೆ. ಈ ಚಿತ್ರ ಬೇರೆ ಭಾಷೆಗೂ ಡಬ್ ಆಗಿ ಬಿಡುಗಡೆಯಾಗಿತ್ತು. ಆದರೆ ಡಬ್ ಆದ ಭಾಷೆಗಳಲ್ಲಿ ಸಿನಿಮಾ ಅಟ್ಟರ್ ಫ್ಲಾಪ್ ಹಾದಿಯಲ್ಲಿದೆ. ಮಲಯಾಳಂನಲ್ಲೂ ಕೂಡ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿಲ್ಲ.

ಇತ್ತೀಚಿನ ಸಿನಿಮಾಗಳ ಸರಣಿ ಸೋಲು

ಪೃಥ್ವಿರಾಜ್ ಯಾವಾಗಲೂ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಬಿಡುಗಡೆಯಾದ ಅವರ ಸೋಲೋ ಸಿನಿಮಾಗಳು ಯಶಸ್ಸು ಕಂಡಿಲ್ಲ. ‘ಪಲ್ಲಿಚಟ್ಟಂಬಿ’ ಮತ್ತು ‘ಸರ್ಜಮೀನ್’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರಾಸೆ ಮೂಡಿಸಿವೆ. ಈ ಸಿನಿಮಾಗಳಲ್ಲಿ ಅವರ ನಟನೆಗೆ ಒಳ್ಳೆಯ ಹೆಸರು ಬಂದರೂ ಸಹ ಚಿತ್ರಗಳು ಗಳಿಕೆಯಲ್ಲಿ ಹಿಂದೆ ಬಿದ್ದಿವೆ.

ಮಾರುಕಟ್ಟೆ ಬಗ್ಗೆ ಗಮನ ಹರಿಸಬೇಕಾದ ಸಮಯ

ಪೃಥ್ವಿರಾಜ್ ಬಹುಭಾಷಾ ನಟನಾಗಿ ಬೇರೆ ಭಾಷೆಗಳಲ್ಲಿ ದೊಡ್ಡ ಯಶಸ್ಸು ಪಡೆಯುತ್ತಿದ್ದಾರೆ. ಆದರೆ ಸ್ವಂತ ಮಲಯಾಳಂ ಚಿತ್ರರಂಗದಲ್ಲಿ ಅವರ ಸಿನಿಮಾಗಳು ಹಿನ್ನಡೆ ಅನುಭವಿಸುತ್ತಿವೆ. ಅವರು ಕೇವಲ ನಟನಷ್ಟೇ ಅಲ್ಲದೆ ಒಬ್ಬ ಯಶಸ್ವಿ ನಿರ್ದೇಶಕ ಹಾಗೂ ನಿರ್ಮಾಪಕ ಕೂಡ ಹೌದು.

ವಿಶ್ಲೇಷಕರ ಪ್ರಕಾರ, ಪೃಥ್ವಿರಾಜ್ ಈಗ ತಮ್ಮ ಮಲಯಾಳಂ ಸಿನಿಮಾಗಳ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ. ಕೇವಲ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವ ಬದಲು ಕಥೆಗಳ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗಿದೆ.

ಇದನ್ನೂ ಓದಿ: ‘ಈಗ’ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ

ರಾಜಮೌಳಿ ಅವರ ‘ವಾರಣಾಸಿ’ ಸಿನಿಮಾ ಬಿಡುಗಡೆಯಾದಾಗ ಪೃಥ್ವಿರಾಜ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡುವುದು ಖಚಿತ. ಆದರೆ ಆ ಸಿನಿಮಾ ತೆರೆಗೆ ಬರಲು ಇನ್ನೂ ಸಾಕಷ್ಟು ಸಮಯವಿದೆ. ಅಲ್ಲಿಯವರೆಗೆ ಅವರು ತಮ್ಮ ಮಲಯಾಳಂ ಮಾರುಕಟ್ಟೆಯನ್ನು ಗಟ್ಟಿಗೊಳಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಗರಣದ ಬೆನ್ನಲ್ಲೇ ದೊಡ್ಡ ನಿರ್ಧಾರ: ರಾಮ ಮಂದಿರ ‘CEO’ ಹುದ್ದೆಗೆ ಅರ್ಜಿ ಆಹ್ವಾನಿಸಿದ ಟ್ರಸ್ಟ್ – Kannada News | Ram Mandir CEO: Ayodhya Trust Hires Chief for Transparency and Security Reforms

ಅಯೋಧ್ಯೆ, ಜುಲೈ 14: ಇತ್ತೀಚೆಗಷ್ಟೇ ರಾಮ ಮಂದಿರ(Ram Mandir)ದಲ್ಲಿ ಭಕ್ತರು ಅರ್ಪಿಸಿದ ಕೋಟ್ಯಂತರ ರೂಪಾಯಿ ದೇಣಿಗೆ ಹಣವನ್ನು ನೌಕರರೇ ವ್ಯವಸ್ಥಿತವಾಗಿ ಲೂಟಿ ಮಾಡಿದ ಘಟನೆ ಬಯಲಿಗೆ ಬಂದ ತಕ್ಷಣ ಎಚ್ಚೆತ್ತುಕೊಂಡ ರಾಮ ಜನ್ಮಭೂಮಿ ಟ್ರಸ್ಟ್​ ಮಂದಿರದ ಇಡೀ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಮುಂದಾಗಿದೆ. ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಟ್ರಸ್ಟ್​​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಟ್ರಸ್ಟ್​ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ವಿಶೇಷ ತನಿಖಾ ತಂಡ ಕಳ್ಳತನದ ತನಿಖೆ ನಡೆಸಿ ಈಗಾಗಲೇ ಎಂಟು ಜನರನ್ನು ಜೈಲಿಗಟ್ಟಿರುವ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿರುವುದು ಭಾರಿ ಮಹತ್ವ ಪಡೆದುಕೊಂಡಿದೆ. ಆಯ್ಕೆಯಾಗುವ ಸಿಇಒ ಆರಂಭದಲ್ಲಿ 3 ವರ್ಷಗಳ ಒಪ್ಪಂದದ ಅವಧಿಗೆ ನೇಮಕಗೊಳ್ಳಲಿದ್ದು, ಇಡೀ ಮಂದಿರದ ಆಡಳಿತವನ್ನು ನೋಡಿಕೊಳ್ಳುತ್ತಾ ಟ್ರಸ್ಟ್​ನ ಪ್ರಧಾನ ಕಾರ್ಯದಶರ್ಶಗೆ ವರದಿ ಒಪ್ಪಿಸಬೇಕಾಗುತ್ತದೆ.

ರಾಮನ ಭಕ್ತರಿಗಷ್ಟೇ ಚಾನ್ಸ್, ಇಲ್ಲಿದೆ ವಯಸ್ಸು, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ
ಮಂದಿರದ ಪವಿತ್ರತೆ ಮತ್ತು ಭದ್ರತೆಯನ್ನು ಕಾಯಬಲ್ಲ ಅತ್ಯಂತ ದಕ್ಷ ಅಧಿಕಾರಿಯನ್ನು ಹುಡುಕಲು ಟ್ರಸ್ಟ್ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

ವಯಸ್ಸು ಮತ್ತು ಅನುಭವ: ಅಭ್ಯರ್ಥಿಯ ವಯಸ್ಸು 50 ರಿಂದ 70 ವರ್ಷದೊಳಗಿರಬೇಕು. ದೊಡ್ಡ ಸಾರ್ವಜನಿಕ ಸಂಸ್ಥೆ, ಬ್ಯಾಂಕ್ ಅಥವಾ ಕಂಪನಿಗಳಲ್ಲಿ ಕನಿಷ್ಠ 20 ವರ್ಷಗಳ ವ್ಯವಸ್ಥಾಪಕ ಅನುಭವ ಕಡ್ಡಾಯ. ಸಾಮಾನ್ಯ ಆಡಳಿತ, ಹಣಕಾಸು, ಕಾನೂನು, ಭದ್ರತೆ ಮತ್ತು ಐಟಿ (IT) ಕ್ಷೇತ್ರಗಳ ಜ್ಞಾನವಿರಬೇಕು.

ಮತ್ತಷ್ಟು ಓದಿ: ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು

ಧಾರ್ಮಿಕ ನಂಬಿಕೆ: ಅರ್ಜಿದಾರರು ಕಡ್ಡಾಯವಾಗಿ ಹಿಂದೂ ಧರ್ಮದ ಸಕ್ರಿಯ ಅನುಯಾಯಿ ಹಾಗೂ ಶ್ರೀರಾಮನ ಭಕ್ತರಾಗಿರಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅತ್ಯುತ್ತಮ ಪ್ರಾವೀಣ್ಯತೆ ಇರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಸಕ್ತರು ತಮ್ಮ ಪ್ರೊಫೈಲ್ ಅನ್ನು ಜುಲೈ 18, 2026 ರ ಶನಿವಾರ ಸಂಜೆ 4 ಗಂಟೆಯೊಳಗೆ searchcommittee.srjbt@gmail.com ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಸಂಬಳ ಮತ್ತು ಇತರೆ ಸವಲತ್ತುಗಳನ್ನು ಮುಖಾಮುಖಿ ಚರ್ಚೆಯ ಮೂಲಕ ನಿರ್ಧರಿಸಲಾಗುತ್ತದೆ.

ಎಕ್ಸ್​ ಪೋಸ್ಟ್​

ಕಳ್ಳತನ ತಡೆಯಲು ಜೇಬಿಲ್ಲದ ಬಟ್ಟೆ ಮತ್ತು ಬ್ಯಾಂಕ್ ಬದಲಾವಣೆ

ವಿಶ್ವದ ಮೂಲೆ ಮೂಲೆಗಳಿಂದ ಬರುವ ಕೋಟ್ಯಂತರ ರಾಮಭಕ್ತರ ನಂಬಿಕೆಗೆ ದ್ರೋಹವಾಗಬಾರದು ಎಂಬುದು ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ. ಕಾಣಿಕೆ ಹಣ ಎಣಿಸುವ ಸಿಬ್ಬಂದಿಗಳಿಗೆ ಇನ್ಮುಂದೆ ಜೇಬಿಲ್ಲದ ವಿಶೇಷ ಸಮವಸ್ತ್ರಗಳನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಬಿಗಿಗೊಳಿಸಲಾಗುತ್ತಿದೆ.

ಖಾಸಗಿ ಬ್ಯಾಂಕುಗಳ ಪ್ರವೇಶ: ಸದ್ಯ ಮಂದಿರದ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿರ್ವಹಿಸುತ್ತಿದೆಯಾದರೂ, ಅವರ ಭದ್ರತಾ ಲೋಪದಿಂದಲೇ ಕಳ್ಳತನ ನಡೆದಿದೆ ಎಂದು ಟ್ರಸ್ಟ್ ಆರೋಪಿಸಿದೆ. ಹೀಗಾಗಿ, ಇನ್ಮುಂದೆ ಹಣದ ಠೇವಣಿಗಾಗಿ ದೇಶದ ಪ್ರಮುಖ ಖಾಸಗಿ ವಲಯದ ಹೈಟೆಕ್ ಬ್ಯಾಂಕುಗಳ ತಂತ್ರಜ್ಞಾನ ಮತ್ತು ಸೇವೆಗಳನ್ನು ಬಳಸಿಕೊಳ್ಳಲು ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿ ಅವರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಹೊಸ ಸಿಇಒ ನೇಮಕದೊಂದಿಗೆ ರಾಮ ಮಂದಿರದ ಆಡಳಿತ ಶೈಲಿ ಸಂಪೂರ್ಣ ಕಾರ್ಪೊರೇಟ್ ಮಾದರಿಗೆ ಬದಲಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:53 am, Tue, 14 July 26

Source link

ಯಾದಗಿರಿಯಲ್ಲಿ 16 ಸಾವಿರಕ್ಕೂ ಹೆಚ್ಚು ಗರ್ಭಧಾರಣೆಗಳ ಮುಂದಿನ ಮಾಹಿತಿಯೇ ಇಲ್ಲ! ತಜ್ಞರ ಸಮಿತಿ ವರದಿಯಲ್ಲಿ ಆಘಾತಕಾರಿ ಅಂಶ ಬಯಲು – Kannada News | Yadgir Pregnancy Tracking Gaps Raise Concern: Expert Panel Flags Missing Follow up in Over 16,000 Cases

ಯಾದಗಿರಿ ಜಿಲ್ಲಾಸ್ಪತ್ರೆ (ಸಾಂದರ್ಭಿಕ ಚಿತ್ರ)Image Credit source: tv9

ಯಾದಗಿರಿ, ಜುಲೈ 14: ಯಾದಗಿರಿ (Yadgir) ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 53,595 ಮಹಿಳೆಯರು ಗರ್ಭಧಾರಣೆ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ 35,424 ಮಹಿಳೆಯರಿಗೆ ಹೆರಿಗೆ ಆಗಿದ್ದು, 2,055 ಪ್ರಕರಣಗಳಲ್ಲಿ ಗರ್ಭಪಾತ ದಾಖಲಾಗಿದೆ. ಆದರೆ ಉಳಿದ 16,116 ಗರ್ಭಧಾರಣೆ ಪ್ರಕರಣಗಳ ಅಂತಿಮ ಫಲಿತಾಂಶ ಅಥವಾ ಮುಂದಿನ ಮಾಹಿತಿ ದಾಖಲೆಗಳಲ್ಲಿ ಲಭ್ಯವಾಗಿಲ್ಲ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಗರ್ಭಧಾರಣೆ ಮೇಲ್ವಿಚಾರಣೆ ಕುರಿತಂತೆ ಕೇಳಿಬಂದಿದ್ದ ಆರೋಪಗಳ ಹಿನ್ನೆಲೆಯಲ್ಲಿ ಅಂದಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯಮಟ್ಟದ ಬಹುಶಿಸ್ತೀಯ ತಜ್ಞರ ಸಮಿತಿಯನ್ನು ರಚಿಸಿದ್ದರು. ಸಮಿತಿ ಕಳೆದ ಏಪ್ರಿಲ್ 6ರಿಂದ 10ರವರೆಗೆ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿ, 74 ಪುಟಗಳ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅನೇಕ ಆಘಾತಕಾರಿ ಅಂಶಗಳು ಬಯಲಾಗಿವೆ.

ವರದಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 53,595 ಮಹಿಳೆಯರು ಗರ್ಭಧಾರಣೆ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ 35,424 ಮಹಿಳೆಯರಿಗೆ ಹೆರಿಗೆ ಆಗಿದ್ದು, 2,055 ಪ್ರಕರಣಗಳಲ್ಲಿ ಗರ್ಭಪಾತ ದಾಖಲಾಗಿದೆ. ಆದರೆ ಉಳಿದ 16,116 ಗರ್ಭಧಾರಣೆ ಪ್ರಕರಣಗಳ ಅಂತಿಮ ಫಲಿತಾಂಶ ಅಥವಾ ಮುಂದಿನ ಮಾಹಿತಿ ದಾಖಲೆಗಳಲ್ಲಿ ಲಭ್ಯವಾಗಿಲ್ಲ. ಈ ಅಂಶವೇ ಆರೋಗ್ಯ ಇಲಾಖೆಯ ಮೇಲ್ವಿಚಾರಣಾ ವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಸಾಧ್ಯತೆ

ವರದಿಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಸಾಧ್ಯತೆ, ಬಾಲಗರ್ಭಿಣಿಯರಲ್ಲಿ ಗರ್ಭಪಾತ, ಶಿಶು ಮರಣ ಪ್ರಮಾಣ ಹೆಚ್ಚಿರುವುದು ಹಾಗೂ ಗರ್ಭಧಾರಣೆಗಳ ಸಮರ್ಪಕ ಅನುಸರಣೆ (Follow-up) ಕೊರತೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ. ಗರ್ಭಧಾರಣೆಯ 12 ವಾರಗಳ ಬಳಿಕ ಕೆಲವು ಕಡೆ ಅಕ್ರಮವಾಗಿ ಭ್ರೂಣದ ಲಿಂಗ ಪತ್ತೆ ಪರೀಕ್ಷೆ ನಡೆಸಲಾಗುತ್ತಿರುವ ಸಾಧ್ಯತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. ಅಲ್ಲದೆ, ಗರ್ಭಧಾರಣೆ ವೇಳೆ ನೀಡುವ ನೋಂದಣಿ ದಾಖಲೆಗಳನ್ನು ನಾಶಪಡಿಸಲಾಗುತ್ತಿದೆ ಹಾಗೂ ಗರ್ಭಪಾತ ಮಾತ್ರೆಗಳ ದುರ್ಬಳಕೆ ನಡೆಯುತ್ತಿರುವ ಆರೋಪಗಳನ್ನೂ ವರದಿ ಉಲ್ಲೇಖಿಸಿದೆ.

ಬಾಲ್ಯ ವಿವಾಹ ಹೆಚ್ಚಳ

ಇನ್ನೊಂದು ಆತಂಕಕಾರಿ ಅಂಶವೆಂದರೆ, ಜಿಲ್ಲೆಯಲ್ಲಿ 18 ವರ್ಷ ತುಂಬುವ ಮೊದಲೇ ಶೇ 33.2ರಷ್ಟು ಮಹಿಳೆಯರ ವಿವಾಹ ನಡೆಯುತ್ತಿರುವುದು. ಇದರಿಂದ ಬಾಲ್ಯ ಗರ್ಭಧಾರಣೆಗಳ ಪ್ರಮಾಣ ಹೆಚ್ಚುತ್ತಿರುವ ಸಾಧ್ಯತೆಯನ್ನೂ ವರದಿ ಪ್ರಸ್ತಾಪಿಸಿದೆ. ಅವಿವಾಹಿತೆಯರ ಗರ್ಭಪಾತ ಪ್ರಕರಣಗಳಲ್ಲಿ ಕುಟುಂಬದವರು ಮಾಹಿತಿ ನೀಡದಿರುವುದು ತನಿಖೆಗೆ ಅಡ್ಡಿಯಾಗುತ್ತಿದೆ ಎಂದು ವರದಿ ಹೇಳಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಹೇಳುವುದೇನು?

ಆದರೆ, ಈ ಆರೋಪಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಬಿರಾದಾರ್ ತಳ್ಳಿಹಾಕಿದ್ದಾರೆ. ವೈದ್ಯಕೀಯ ಕಾರಣಗಳಿಂದಲೇ ಗರ್ಭಪಾತಗಳು ನಡೆದಿವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಗರ್ಭಪಾತದ ಪ್ರಮಾಣ ಶೇ 4.6 ಇದ್ದರೆ, ಯಾದಗಿರಿ ಜಿಲ್ಲೆಯಲ್ಲಿ ಅದು ಕೇವಲ ಶೇ 2.7 ಮಾತ್ರ ಇದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಂಡ್ಯ ಹೆಣ್ಣು ಭ್ರೂಣ ಪತ್ತೆ, ಹತ್ಯೆ: ಕಾರಿನಲ್ಲಿ ಸ್ಕ್ಯಾನಿಂಗ್ ಮಾಡುತ್ತಿದ್ದ ಆರು ಮಂದಿ ಬಂಧನ

ಈ ನಡುವೆ ತಜ್ಞರ ಸಮಿತಿಯ ವರದಿ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಸ್ಪಷ್ಟೀಕರಣದ ನಡುವೆ ವ್ಯತ್ಯಾಸ ಕಂಡುಬಂದಿದ್ದು, ಈ ವಿಚಾರದಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾರುಖ್ ನನ್ನ ಕಾಲು ನೆಕ್ಕುತ್ತಿದ್ದಾರೆ ಎಂದಿದ್ದ ಆಮಿರ್ ಖಾನ್; ಇಲ್ಲಿದೆ ಅಸಲಿ ಕಥೆ – Kannada News | Aamir Khan Shah Rukh Dog Controversy: The Truth Behind Bollywood Infamous Feud

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಹಿಂದೊಮ್ಮೆ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ‘ಶಾರುಖ್ ನನ್ನ ಕಾಲು ನೆಕ್ಕುತ್ತಿದ್ದಾನೆ. ನಾನು ಅವನಿಗೆ ಬಿಸ್ಕತ್ ಹಾಕುತ್ತಿದ್ದೇನೆ’ ಎಂದು ಆಮಿರ್ ಹೇಳಿದ್ದರು. ಇದನ್ನು ಕೇಳಿ ಶಾರುಖ್ ಖಾನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಅಸಲಿಗೆ ಆಮಿರ್ ಖಾನ್ ಮಾತನಾಡಿದ್ದು ನಟ ಶಾರುಖ್ ಬಗ್ಗೆ ಅಲ್ಲ. ಅದು ಅವರ ಮನೆಯಲ್ಲಿದ್ದ ನಾಯಿಯ ಹೆಸರಾಗಿತ್ತು.

2008ರಲ್ಲಿ ನಡೆದ ಘಟನೆ ಇದು

ಆಮಿರ್ ಖಾನ್ 2008ರಲ್ಲಿ ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ‘ನಾನು ಪಂಚಗನಿಯಲ್ಲಿ ಕುಟುಂಬದೊಂದಿಗೆ ಕೂತಿದ್ದೇನೆ. ಶಾರುಖ್ ನನ್ನ ಕಾಲು ನೆಕ್ಕುತ್ತಿದ್ದಾನೆ. ನಾನು ಅವನಿಗೆ ಬಿಸ್ಕತ್ ನೀಡುತ್ತಿದ್ದೇನೆ’ ಎಂದು ಬರೆದಿದ್ದರು. ತಕ್ಷಣವೇ ಆಮಿರ್ ಖಾನ್ ಸ್ಪಷ್ಟನೆ ಕೂಡ ನೀಡಿದ್ದರು. ‘ಶಾರುಖ್ ಎಂಬುದು ನಮ್ಮ ಮನೆಯ ನಾಯಿಯ ಹೆಸರು. ಅದಕ್ಕೆ ನಾನು ಹೆಸರಿಟ್ಟಿಲ್ಲ. ಆ ಮನೆಯನ್ನು ನಾನು ಖರೀದಿಸುವ ಮುನ್ನವೇ ಕೇರ್‌ಟೇಕರ್ಸ್ ಆ ನಾಯಿಗೆ ಆ ಹೆಸರು ಇಟ್ಟಿದ್ದರು’ ಎಂದು ವಿವರಿಸಿದ್ದರು.

ನಾಯಿಗೆ ‘ಶಾರುಖ್’ ಎಂದು ಹೆಸರಿಟ್ಟಿದ್ದು ಯಾಕೆ?

ಕೆಲವು ವರ್ಷಗಳ ಹಿಂದೆ ನಟ ಶಾರುಖ್ ಖಾನ್ ಅದೇ ಮನೆಯಲ್ಲಿ ಜಾಹೀರಾತು ಶೂಟಿಂಗ್ ಮಾಡಿದ್ದರು. ಅದೇ ದಿನ ಕೇರ್‌ಟೇಕರ್ಸ್ ಒಂದು ನಾಯಿ ಮರಿಯನ್ನು ತಂದಿದ್ದರು. ನೆಚ್ಚಿನ ನಟನ ನೆನಪಿಗಾಗಿ ಅದಕ್ಕೆ ಶಾರುಖ್ ಎಂದು ಹೆಸರಿಟ್ಟಿದ್ದರು.

ವಿವಾದಕ್ಕೆ ಆಮಿರ್ ಖಾನ್ ಕ್ಷಮೆ

ಈ ಬರಹದಿಂದ ಅಭಿಮಾನಿಗಳ ಭಾವನೆಗೆ ಧಕ್ಕೆಯಾಗಿತ್ತು. ಹೀಗಾಗಿ ಆಮಿರ್ ಖಾನ್ ಮಾಧ್ಯಮಗಳ ಮುಂದೆ ಕ್ಷಮೆ ಕೇಳಿದ್ದರು. ‘ನಾನು ಕೇವಲ ತಮಾಷೆಗಾಗಿ ಹಾಗೆ ಬರೆದಿದ್ದೆ. ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಟ ಶಾರುಖ್ ಖಾನ್, ‘ನನ್ನ ಹೆಸರಿನ ಮೇಲೆ ನನಗೆ ಯಾವುದೇ ಕಾಪಿರೈಟ್ ಇಲ್ಲ. ಜನರು ಪ್ರೀತಿಯಿಂದ ಹೆಸರಿಡುತ್ತಾರೆ’ ಎಂದು ಸರಳವಾಗಿ ತೇಲಿಬಿಟ್ಟಿದ್ದರು.

ಇದನ್ನೂ ಓದಿ: ಕಬೀರ್ ಬೇಡಿಯಿಂದ ಆಮಿರ್ ಖಾನ್‌ವರೆಗೆ; ಮೂರು ಬಾರಿ ಮದುವೆಯಾದ ಬಾಲಿವುಡ್ ತಾರೆಯರಿವರು

ಈಗ ಇಬ್ಬರೂ ಆಪ್ತ ಸ್ನೇಹಿತರು

ಕಳೆದ ವರ್ಷ ಈ ಘಟನೆಯನ್ನು ಆಮಿರ್ ಖಾನ್ ನೆನಪಿಸಿಕೊಂಡಿದ್ದಾರೆ. ‘ಆ ಸಮಯದಲ್ಲಿ ನಮ್ಮಿಬ್ಬರ ನಡುವೆ ತಮಾಷೆಯ ಪೈಪೋಟಿ ಇತ್ತು. ಪ್ರಶಸ್ತಿ ಸಮಾರಂಭಗಳಲ್ಲಿ ಶಾರುಖ್ ಕೂಡ ನನ್ನ ಕಾಲೆಳೆಯುತ್ತಿದ್ದರು. ಆದರೆ ಈಗ ನಾವಿಬ್ಬರೂ ತುಂಬಾ ಆಪ್ತ ಸ್ನೇಹಿತರಾಗಿದ್ದೇವೆ’ ಎಂದು ಆಮಿರ್ ಖಾನ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:43 am, Tue, 14 July 26

Source link

Corona Virus Returns: ಆಂಧ್ರಪ್ರದೇಶಗಲ್ಲಿ ಕೊರೊನಾಗೆ ಇಬ್ಬರು ಬಲಿ; ಕರ್ನಾಟಕಕ್ಕೆ ಮತ್ತೆ ಒಕ್ಕರಿಸಲಿದೆಯೇ ಕೋವಿಡ್ ಮಹಾಮಾರಿ? – Kannada News | Covid Fear Returns: Coronavirus Cases Rise to 32 in Karnataka, High Alert After Andhra Deaths

ಬೆಂಗಳೂರು, ಜುಲೈ 14: ನಾಲ್ಕು ವರ್ಷಗಳ ಹಿಂದೆ ಜಗತ್ತನ್ನೇ ನಡುಗಿಸಿದ್ದ ಹೆಮ್ಮಾರಿ ಕೊರೊನಾ (Corona) ಈಗ ಮತ್ತೆ ಅಬ್ಬರಿಸಲು ಹೊಂಚು ಹಾಕುತ್ತಿದೆ. ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಕೊವಿಡ್ ಆತಂಕ ಸೃಷ್ಟಿಸಿದ್ದು, ಕರ್ನಾಟಕದ ಗಡಿಯಲ್ಲೂ ಆತಂಕದ ನೆರಳು ಆವರಿಸಿದೆ. ರಾಜ್ಯದಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಜನರಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಆಂಧ್ರದ ಕಡಪಾದಲ್ಲಿ ಇಬ್ಬರ ಬಲಿ!

ಕಳೆದ ಮೂರು ವರ್ಷಗಳ ಹಿಂದೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಚೀನಾದ ವುಹಾನ್ ವೈರಸ್ ರೂಪಾಂತರದ ಭೀತಿ ಈಗ ಮತ್ತೆ ಶುರುವಾಗಿದೆ. ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಕೋವಿಡ್‌ಗೆ ಇಬ್ಬರು ಬಲಿಯಾಗಿರುವ ಸುದ್ದಿ ವೈರಲ್ ಆಗಿದ್ದು, ಎಂಟು ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹೊಸ ರೂಪಾಂತರದ ಶಂಕೆಯಿಂದಾಗಿ ರೋಗಿಗಳ ಐದು ಸ್ಯಾಂಪಲ್‌ಗಳನ್ನು ಪುಣೆಯ ಎನ್‌ಐವಿ (NIV) ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿಗಾಗಿ ಅಲ್ಲಿನ ಆರೋಗ್ಯ ಇಲಾಖೆ ಕಾಯುತ್ತಿದೆ.

ರಾಜ್ಯದಲ್ಲಿ ಹೆಚ್ಚಿದ ಕೋವಿಡ್ ಪ್ರಕರಣಗಳು!

ನೆರೆರಾಜ್ಯದ ಭೀತಿಯ ಬೆನ್ನಲ್ಲೇ ಕರ್ನಾಟಕದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ಜೂನ್ ತಿಂಗಳಲ್ಲಿ ಕೇವಲ 14 ಪಾಸಿಟಿವ್ ಪ್ರಕರಣಗಳಿದ್ದರೆ, ಜುಲೈನ ಕಳೆದ ಹತ್ತು ದಿನಗಳಲ್ಲಿಯೇ ಈ ಸಂಖ್ಯೆ 32ಕ್ಕೆ ತಲುಪಿದೆ. ಒಟ್ಟು 193 ಶಂಕಿತರನ್ನು ಪರೀಕ್ಷೆಗೆ ಒಳಪಡಿಸಿದಾಗ 32 ಜನರಲ್ಲಿ ಸೋಂಕು ದೃಢಪಟ್ಟಿದೆ.

ಇದನ್ನೂ ಓದಿ ಆಂಧ್ರದಲ್ಲಿ ಮತ್ತೆ ಕೋವಿಡ್ ಆತಂಕ: 2022 ರ ನಂತರ ಮೊದಲ ಸಾವು ದಾಖಲು, ಕಡಪದಲ್ಲಿ ಇಬ್ಬರು ಬಲಿ, ನಾಲ್ವರಿಗೆ ಪಾಸಿಟಿವ್

ಆತಂಕ ಬೇಡ ಎಂದ ಆರೋಗ್ಯ ಇಲಾಖೆ ಆಯುಕ್ತರು

ಈ ಕೋವಿಡ್ ಆತಂಕದ ಕುರಿತು ಸ್ಪಷ್ಟನೆ ನೀಡಿರುವ ಆರೋಗ್ಯ ಇಲಾಖೆ ಆಯುಕ್ತರಾದ ಗುರುದತ್ತ್ ಹೆಗಡೆ, ಕಡಪಾದಲ್ಲಿ ಸಂಭವಿಸಿರುವ ಸಾವುಗಳು ಶಂಕಿತ ಪ್ರಕರಣಗಳಾಗಿವೆ. ಈ ಬಗ್ಗೆ ಆಂಧ್ರ ಸರ್ಕಾರದೊಂದಿಗೆ ನಾವು ಮಾಹಿತಿ ಪಡೆಯುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಸದ್ಯ ಪತ್ತೆಯಾಗಿರುವ ಪ್ರಕರಣಗಳು ಅಷ್ಟೊಂದು ಗಂಭೀರವಾಗಿಲ್ಲ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕಡ್ಡಾಯ ಪರೀಕ್ಷೆ ನಡೆಸಿದಾಗ ಮಾತ್ರ ಲಕ್ಷಣ ರಹಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ, ಆರೋಗ್ಯ ಇಲಾಖೆ ದಿನನಿತ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಧೈರ್ಯ ತುಂಬಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಮವಾರದ ಪರೀಕ್ಷೆಯಲ್ಲಿ ಗೆದ್ದ ‘ಧಮಾಲ್ 4’; ನಾಲ್ಕು ದಿನಕ್ಕೆ 100 ಕೋಟಿ ಕಲೆಕ್ಷನ್ – Kannada News | Dhamal 4 Box Office: 100 Crore in 4 Days Passes Monday Test, Sets Global Record

ಸಾಮಾನ್ಯವಾಗಿ ವಾರಾಂತ್ಯದ ಭರ್ಜರಿ ಗಳಿಕೆಯ ನಂತರ ದೊಡ್ಡ ಸಿನಿಮಾಗಳಿಗೆ ಸೋಮವಾರದ ದಿನ ಅತ್ಯಂತ ನಿರ್ಣಾಯಕವಾಗಿರುತ್ತದೆ. ಬಾಲಿವುಡ್‌ನ ಬಹುನಿರೀಕ್ಷಿತ ಕಾಮಿಡಿ ಎಂಟರ್‌ಟೈನರ್ ಚಿತ್ರ ‘ಧಮಾಲ್ 4’ ಸೋಮವಾರವೂ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದೆ. ವಾರದ ದಿನಗಳಲ್ಲೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಕೇವಲ ನಾಲ್ಕೇ ದಿನಗಳಲ್ಲಿ ಈ ಸಿನಿಮಾ ಜಾಗತಿಕವಾಗಿ 100 ಕೋಟಿ ರೂಪಾಯಿ ಗಳಿಕೆಯ ಗಡಿಯನ್ನು ದಾಟಿ ಹೊಸ ದಾಖಲೆ ಬರೆದಿದೆ.

ಸೋಮವಾರದ ಗಳಿಕೆ ಎಷ್ಟು?

ನಾಲ್ಕನೇ ದಿನವಾದ ಸೋಮವಾರ ಭಾರತದಾದ್ಯಂತ ಒಟ್ಟು 10,598 ಶೋಗಳಿಂದ ಈ ಚಿತ್ರ ಬರೋಬ್ಬರಿ 8.35 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ವೀಕ್‌ಡೇಸ್‌ನಲ್ಲಿ ಈ ಮಟ್ಟದ ಕಲೆಕ್ಷನ್ ಮಾಡಿರುವುದು ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುದೀರ್ಘ ಕಾಲ ಓಡುವ ಮುನ್ಸೂಚನೆಯನ್ನು ನೀಡಿದೆ. ಇದು ತಂಡದ ಖುಷಿ ಹೆಚ್ಚಿಸಿದೆ.

4 ದಿನಗಳ ಒಟ್ಟು ಕಲೆಕ್ಷನ್ ವಿವರ

ಭಾರತದಲ್ಲಿ ಈ ಚಿತ್ರ 73.35 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಹಾಗೂ 87.85 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ವಿದೇಶಿ ಮಾರುಕಟ್ಟೆಯ ಗಳಿಕೆ 14.50 ಕೋಟಿ ರೂಪಾಯಿ ಆಗಿದ್ದು, ವಿಶ್ವದಾದ್ಯಂತ ಒಟ್ಟು ಗಳಿಕೆ 102.35 ಕೋಟಿ ರೂಪಾಯಿ ಗಳಿಸಿದೆ.

ಧಮಾಲ್ ಸಿನಿಮಾದಲ್ಲಿ ಫೇಮಸ್ ಎಂದರೆ ಮೈಂಡ್​​ಲೆಸ್ ಕಾಮಿಡಿ. ಅದು ಈ ಚಿತ್ರದಲ್ಲೂ ಮುಂದುವರಿದಿದೆ. ನಿಧಿ ಹುಡುಕುವ ಥೀಮ್​​ನೊಂದಿಗೆ ಸಿನಿಮಾ ಸಾಗಿದೆ. ಈ ರೀತಿಯ ಮೈಂಡ್​​ಲೆಸ್ ಕಾಮಿಡಿಯನ್ನು ಕೆಲವರು ಇಷ್ಟಪಟ್ಟಿಲ್ಲ. ಹೀಗಾಗಿ, ಚಿತ್ರವನ್ನು ಟೀಕಿಸುವ ಕೆಲಸ ಮಾಡಿದ್ದಾರೆ. ಇನ್ನೂ ಕೆಲವರು ಚಿತ್ರವನ್ನು ಬಹುವಾಗಿ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: ‘ಧಮಾಲ್ 4’ ಟ್ರೇಲರ್ : ಅಜಯ್ ದೇವಗನ್ ಗ್ಯಾಂಗ್‌ನಿಂದ ಮತ್ತೆ ಕಾಮಿಡಿ ಹಂಗಾಮಾ

ಅಜಯ್ ದೇವಗನ್, ರಿತೇಶ್​ ದೇಶ್​​ಮುಖ್​, ಅರ್ಷದ್ ವಾರ್ಸಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ರವಿ ಕಿಶನ್ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಅಂಜಲಿ ಆನಂದ್ ಸೇರಿದಂತೆ ಮೊದಲಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾರ್ಮುಜ್ ಜಲಸಂಧಿಯಲ್ಲಿ ಮಹಾ ಸುಂಕದ ಸಮರ, ಟ್ರಂಪ್ ಅವರ ಶೇ.20 ಶುಲ್ಕದ ಬೇಡಿಕೆಗೆ ಇರಾನ್ ಕೌಂಟರ್ – Kannada News | Hormuz Strait Tariff War: Trump’s 20 percent Fee Sparks Iran Counter and Global Oil Crisis

ಟೆಹ್ರಾನ್, ಜುಲೈ 14: ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿ(Hormuz Strait)ಯ ನಿಯಂತ್ರಣ ಮತ್ತು ಸುಂಕದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ಇರಾನ್ ನಡುವೆ ತೀವ್ರ ಮಾತಿನ ಚಕಿಮಕಿ ನಡೆದಿದೆ. ಜಲಸಂಧಿಯ ಮೂಲಕ ಹಾದು ಹೋಗುವ ವಿಶ್ವದ ಎಲ್ಲಾ ವಾಣಿಜ್ಯ ಹಡಗುಗಳ ಸರಕುಗಳ ಮೇಲೆ ಬರೋಬ್ಬರಿ ಶೇ.20ರಷ್ಟು ಸುರಕ್ಷತಾ ಶುಲ್ಕ ವಿಧಿಸುವ ಟ್ರಂಪ್ ಯೋಜನೆ ಬಗ್ಗೆ ಇರಾನ್ ತಮಾಷೆ ಮಾಡಿದೆ.

ಇದಕ್ಕೆ ಎಕ್ಸ್​​ ಪೋಸ್ಟ್​ ಮೂಲಕ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅರಘ್ಚಿ, ‘‘ಅಮೆರಿಕ ಅಧ್ಯಕ್ಷರು ಹೇಳಿದ್ದು ಸರಿಯಾಗಿದೆ. ಜಲಸಂಧಿಯ ಕಾವಲುಗಾರರಿಗೆ ಶುಲ್ಕ ಸಿಗಬೇಕು. ಆದರೆ ಅಮೆರಿಕಕ್ಕೆ ಅಲ್ಲ, ಇರಾನ್ ಯಾವಾಗಲೂ ಈ ಜಲಸಂಧಿಯ ನಿಜವಾದ ರಕ್ಷಕ ಮತ್ತು ಶಾಶ್ವತ ಕಾವಲುಗಾರ, ಟ್ರಂಪ್ ಕೇಳುತ್ತಿರುವ ಶೇ.20ರಷ್ಟು ಶುಲ್ಕ ತೀರಾ ಹೆಚ್ಚಾಯಿತು, ನಾವು ಇಷ್ಟು ಆಸೆಬುರುಕರಲ್ಲ, ನಾವು ನ್ಯಾಯಯುತವಾಗಿ ಸುಂಕ ವಸೂಲಿ ಮಾಡುತ್ತೇವೆ’’ ಎಂದು ತಿರುಗೇಟು ಕೊಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ, ಇಂದಿನಿಂದ ಅಮೆರಿಕವನ್ನು ಅಧಿಕೃತವಾಗಿ ‘ಹಾರ್ಮುಜ್ ಜಲಸಂಧಿಯ ರಕ್ಷಕ’ ಎಂದು ಕರೆಯಲಾಗುತ್ತದೆ ಎಂದು ಘೋಷಿಸಿದ್ದರು. ಈ ಅಸ್ಥಿರ ಜಾಗಕ್ಕೆ ಭದ್ರತೆ ನೀಡಲು ತಗಲುವ ವೆಚ್ಚಕ್ಕಾಗಿ ಜಲಸಂಧಿಯ ಮೂಲಕ ಸಾಗುವ ಎಲ್ಲಾ ವಾಣಿಜ್ಯ ಸರಕುಗಳ ಮೇಲೆ ಶೇ. 20 ರಷ್ಟು ಸುಂಕ ವಿಧಿಸಲು ಮತ್ತು ಈ ಪ್ರಕ್ರಿಯೆಯನ್ನು ತಕ್ಷಣವೇ ಜಾರಿಗೆ ತರಲು ಮಿಲಿಟರಿಗೆ ಆದೇಶಿಸಿದ್ದಾರೆ.

ಮತ್ತಷ್ಟು ಓದಿ: ಇರಾನ್‌ನಿಂದ ಹಾರ್ಮುಜ್ ಜಲಸಂಧಿ ಬಂದ್, ಹಡಗಿನ ಮೇಲೆ ದಾಳಿ ಬೆನ್ನಲ್ಲೇ ಅಮೆರಿಕದಿಂದ ಭೀಕರ ಪ್ರತೀಕಾರ

ಇಂದಿನಿಂದ ಕಠಿಣ ದಿಗ್ಬಂಧನ ಆರಂಭ

ಈ ಆದೇಶದ ಬೆನ್ನಲ್ಲೇ ಅಮೆರಿಕದ ಸೆಂಟ್ರಲ್ ಕಮಾಂಡ್ , ಜುಲೈ 14 ರಂದು ಸಂಜೆಯಿಂದ ಇರಾನಿನ ಬಂದರುಗಳಿಗೆ ಪ್ರವೇಶಿಸುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ಸಮುದ್ರ ಸಂಚಾರದ ಮೇಲೆ ಹಡಗು ತಡೆ ದಿಗ್ಬಂಧನವನ್ನು ಪುನರಾರಂಭಿಸುವುದಾಗಿ ಪ್ರಕಟಿಸಿದೆ. ಈ ಜಲಮಾರ್ಗದಲ್ಲಿ ಸಂಚರಿಸುವ ಎಲ್ಲಾ ನೌಕೆಗಳು ಕಡ್ಡಾಯವಾಗಿ ಅಮೆರಿಕ ನೌಕಾಪಡೆಯ ಸೂಚನೆಗಳನ್ನು ಪಾಲಿಸಬೇಕು ಮತ್ತು ಬ್ರಿಡ್ಜ್ ಚಾನೆಲ್ 16 ರ ಮೂಲಕ ಸಂಪರ್ಕದಲ್ಲಿರಬೇಕು ಎಂದು ಎಚ್ಚರಿಸಿದೆ.

ಏನಿದು ಹಳೇ ಒಪ್ಪಂದದ ರಗಳೆ?

ಕಳೆದ ಜೂನ್ 18 ರವರೆಗೆ ಅಮೆರಿಕ ಇರಾನ್ ಮೇಲೆ ಇಂತಹದ್ದೇ ದಿಗ್ಬಂಧನ ಹೇರಿತ್ತು. ಆದರೆ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ನಡೆದ ರಹಸ್ಯ ಮಾತುಕತೆಯ ನಂತರ ಮಧ್ಯಂತರ ಒಪ್ಪಂದ ಏರ್ಪಟ್ಟು ಅದನ್ನು ಹಿಂಪಡೆಯಲಾಗಿತ್ತು. ಇರಾನ್ ಪ್ರಕಾರ, ಆ ಒಪ್ಪಂದದಂತೆ ತನಗೆ ಜಲಸಂಧಿಯ ಸಂಚಾರ ನಿಯಂತ್ರಿಸುವ ಮತ್ತು ತೆರಿಗೆ ವಿಧಿಸುವ ಹಕ್ಕಿದೆ.

ಆದರೆ ಅಮೆರಿಕ ಮಾತ್ರ ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಸಮುದ್ರ ಸಂಚಾರ ಎಲ್ಲರಿಗೂ ಮುಕ್ತವಾಗಿದ್ದು, ಇರಾನ್‌ನ ಒಪ್ಪಂದ ಮುಗಿದ ಕಥೆ ಎಂದು ವಾದಿಸುತ್ತಿದೆ. ಇಬ್ಬರು ಬಲಿಷ್ಠ ನಾಯಕರ ಈ ಜಿದ್ದಾಜಿದ್ದಿನ ನಡುವೆ ಜಾಗತಿಕ ವ್ಯಾಪಾರಸ್ಥರು ಸಮುದ್ರದ ಮಧ್ಯೆ ಸಿಲುಕಿ ತತ್ತರಿಸುವಂತಾಗಿದೆ.

ಜಾಗತಿಕ ಮಾರುಕಟ್ಟೆಯ ನಡುಕ ಮತ್ತು ಭಾರತದ ಮೇಲಿನ ಪ್ರಭಾವ

ಹಾರ್ಮುಜ್ ಜಲಸಂಧಿಯು ಭೂಮಿಯ ಮೇಲಿನ ಅತ್ಯಂತ ಸೂಕ್ಷ್ಮ ಮತ್ತು ಕಾವಲು ಕಾಯಲ್ಪಡುವ ಜಲಮಾರ್ಗವಾಗಿದೆ. ಜಗತ್ತಿನ ಒಟ್ಟು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ (LNG) ಐದನೇ ಒಂದು ಭಾಗ (20%) ಕೇವಲ ಈ ಕಿರಿದಾದ ಜಲಸಂಧಿಯ ಮೂಲಕವೇ ಜಗತ್ತಿಗೆ ಸರಬರಾಜಾಗುತ್ತದೆ.

ಭಾರತಕ್ಕೆ ಭಾರಿ ಪೆಟ್ಟು: ಭಾರತವು ತನ್ನ ಕಚ್ಚಾ ತೈಲದ ಬಹುಪಾಲು ಭಾಗವನ್ನು ಸೌದಿ ಅರೇಬಿಯಾ, ಇರಾಕ್ ಮತ್ತು ಯುಎಇ ದೇಶಗಳಿಂದ ಇದೇ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ. ಒಂದು ವೇಳೆ ಟ್ರಂಪ್ ಹೇಳಿದಂತೆ ಶೇ. 20 ರಷ್ಟು ಶುಲ್ಕ ಜಾರಿಯಾದರೆ ಅಥವಾ ಇರಾನ್ ಜಲಸಂಧಿಯನ್ನು ಯುದ್ಧದ ಕಾರಣಕ್ಕೆ ಮುಚ್ಚಿಹಾಕಿದರೆ, ಜಾಗತಿಕವಾಗಿ ತೈಲ ಬೆಲೆಗಳು ಮತ್ತೊಮ್ಮೆ ಗಗನಕ್ಕೇರಲಿವೆ.

ಇದು ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಿ ಭಾರಿ ಹಣದುಬ್ಬರ ಸೃಷ್ಟಿಸುವ ಆತಂಕವಿದೆ. 2026ರ ಫೆಬ್ರವರಿ 28 ರಂದು ಇರಾನ್ ಸುಪ್ರೀಂ ನಾಯಕ ಅಲಿ ಖಮೇನಿ ಸಾವಿನ ನಂತರ ಆರಂಭವಾದ ಈ ಸಂಘರ್ಷ ಈಗ ಜಾಗತಿಕ ಆರ್ಥಿಕತೆಯನ್ನೇ ಬುಡಮೇಲು ಮಾಡುವ ಹಂತಕ್ಕೆ ತಲುಪಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:25 am, Tue, 14 July 26

Source link

Trees Cut Down At Bengaluru: ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ! – Kannada News | Development vs Environment: 19,000 Trees Cut Down in Bengaluru Over Last Three Years

ಬೆಂಗಳೂರು, ಜುಲೈ 14: ಬೆಂಗಳೂರು, ಹಿಂದೆ ಗಾರ್ಡನ್ ಸಿಟಿ ಎಂದೇ ಖ್ಯಾತಿ ಪಡೆದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನಗರದ ಅಭಿವೃದ್ಧಿ ಕಾಮಗಾರಿಗಳ ನಿಟ್ಟಿನಲ್ಲಿ ಹಸಿರು ಪರಿಸರ ನಾಶವಾಗುತ್ತಿದೆ.ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಂದಾಜು 19 ಸಾವಿರ ಮರಗಳಿಗೆ ಕೊಡಲಿ ಬಿದ್ದಿದೆ ಎಂದು ವರದಿಯಾಗಿದ್ದು, ಈ ಸಂಖ್ಯೆ ಪರಿಸರ ಪ್ರೇಮಿಗಳು ಮತ್ತು ನಾಗರಿಕರಲ್ಲಿ ತೀವ್ರ ಆತಂಕ ಹುಟ್ಟಿಸಿದೆ.

ಹೊಸ ಮೆಟ್ರೋ ಮಾರ್ಗಗಳು, ರಸ್ತೆ ವಿಸ್ತರಣೆಗಳು, ಮೇಲ್ಸೇತುವೆಗಳು ಮತ್ತು ಇತರ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಸಾವಿರಾರು ಮರಗಳನ್ನು ತೆರವುಗೊಳಿಸಲಾಗಿದೆ. ಇದರಲ್ಲಿ 7,683 ಮರಗಳು ನೇರವಾಗಿ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಲಿಯಾಗಿವೆ. ಉಳಿದ ಮರಗಳನ್ನು ಖಾಸಗಿ ಅಭಿವೃದ್ಧಿ ಕಾಮಗಾರಿಗಳು, ಅಪಾಯಕಾರಿ ಮರಗಳ ತೆರವು ಮತ್ತು ಇತರ ಕಾರಣಗಳಿಗಾಗಿ ಕಡಿಯಲಾಗಿದೆ. ಪ್ರತಿ ವರ್ಷ ಸಾವಿರಾರು ಮರಗಳು ಕಣ್ಮರೆಯಾಗುತ್ತಿರುವುದು ನಗರದ ಪರಿಸರ ಸಮತೋಲನಕ್ಕೆ ದೊಡ್ಡ ಹೊಡೆತವಾಗಿದೆ. ಅಭಿವೃದ್ಧಿ ಯೋಜನೆಗಳು ಅನಿವಾರ್ಯವಾದರೂ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು ಅತಿ ಮುಖ್ಯ ಎಂದು ಪರಿಸರತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version