Trees Cut Down At Bengaluru: ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ! – Kannada News | Development vs Environment: 19,000 Trees Cut Down in Bengaluru Over Last Three Years

ಬೆಂಗಳೂರು, ಜುಲೈ 14: ಬೆಂಗಳೂರು, ಹಿಂದೆ ಗಾರ್ಡನ್ ಸಿಟಿ ಎಂದೇ ಖ್ಯಾತಿ ಪಡೆದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನಗರದ ಅಭಿವೃದ್ಧಿ ಕಾಮಗಾರಿಗಳ ನಿಟ್ಟಿನಲ್ಲಿ ಹಸಿರು ಪರಿಸರ ನಾಶವಾಗುತ್ತಿದೆ.ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಂದಾಜು 19 ಸಾವಿರ ಮರಗಳಿಗೆ ಕೊಡಲಿ ಬಿದ್ದಿದೆ ಎಂದು ವರದಿಯಾಗಿದ್ದು, ಈ ಸಂಖ್ಯೆ ಪರಿಸರ ಪ್ರೇಮಿಗಳು ಮತ್ತು ನಾಗರಿಕರಲ್ಲಿ ತೀವ್ರ ಆತಂಕ ಹುಟ್ಟಿಸಿದೆ.

ಹೊಸ ಮೆಟ್ರೋ ಮಾರ್ಗಗಳು, ರಸ್ತೆ ವಿಸ್ತರಣೆಗಳು, ಮೇಲ್ಸೇತುವೆಗಳು ಮತ್ತು ಇತರ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಸಾವಿರಾರು ಮರಗಳನ್ನು ತೆರವುಗೊಳಿಸಲಾಗಿದೆ. ಇದರಲ್ಲಿ 7,683 ಮರಗಳು ನೇರವಾಗಿ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಲಿಯಾಗಿವೆ. ಉಳಿದ ಮರಗಳನ್ನು ಖಾಸಗಿ ಅಭಿವೃದ್ಧಿ ಕಾಮಗಾರಿಗಳು, ಅಪಾಯಕಾರಿ ಮರಗಳ ತೆರವು ಮತ್ತು ಇತರ ಕಾರಣಗಳಿಗಾಗಿ ಕಡಿಯಲಾಗಿದೆ. ಪ್ರತಿ ವರ್ಷ ಸಾವಿರಾರು ಮರಗಳು ಕಣ್ಮರೆಯಾಗುತ್ತಿರುವುದು ನಗರದ ಪರಿಸರ ಸಮತೋಲನಕ್ಕೆ ದೊಡ್ಡ ಹೊಡೆತವಾಗಿದೆ. ಅಭಿವೃದ್ಧಿ ಯೋಜನೆಗಳು ಅನಿವಾರ್ಯವಾದರೂ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು ಅತಿ ಮುಖ್ಯ ಎಂದು ಪರಿಸರತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಮಾಲಿನ್ಯ ಮುಕ್ತ ಹಾದಿಯಲ್ಲಿ ಬೆಂಗಳೂರು; ವಾಯುಗುಣಮಟ್ಟದಲ್ಲಿ ಬಾಗಲಕೋಟೆ ಉತ್ತಮ, ಬೇಲೂರು ಕಳಪೆ! – Kannada News | Bengaluru AQI Today: Air Quality Improves Across Karnataka Due to Monsoon Rains

ಬೆಂಗಳೂರು, ಜುಲೈ 14: ಕಳೆದ ಹಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (AQI) ಉತ್ತಮವಾಗಿದೆ. ಇಂದೂ ಸಹ ಬೆಳಗಾವಿ, ಬಾಗಲಕೋಟೆ ಜೊತೆಗೆ ಇನ್ನೂ ಹಲವು ಜಿಲ್ಲೆಗಳಲ್ಲಿ ಏರ್ ಕ್ವಾಲಿಟಿ ಸುಧಾರಿಸಿದೆ. ರಾಜ್ಯದಲ್ಲಿ ಸುರಿದ ಮುಂಗಾರು ಮಳೆಯಿಂದಾಗಿ ಗರಿಷ್ಠ ಮಟ್ಟದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿದ್ದು, ಮಳೆಗಾಲ ಮುಗಿಯುವವರೆಗೂ ವಾಯು ಗುಣಮಟ್ಟ ಉತ್ತಮವಾಗಿಯೇ ಇರಲಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ವಾಯು ಗುಣಮಟ್ಟದ ಸ್ಥಿತಿ

ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 67ರಷ್ಟಿದ್ದು, ಇದು ಮಧ್ಯಮ ವಿಭಾಗಕ್ಕೆ ಸೇರುತ್ತದೆ. ನಗರದ ಪ್ರಮುಖ ಮಾಲಿನ್ಯಕಾರಕವಾಗಿ PM10 ಕಣಗಳು ಕಂಡುಬಂದಿವೆ. ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ವಾಯು ಗುಣಮಟ್ಟ ಈ ಕೆಳಗಿನಂತಿದೆ.

  • ಮಾರತ್ತಹಳ್ಳಿ ಮತ್ತು ಬಿಟಿಎಂ ಲೇಔಟ್: ಇಲ್ಲಿ AQI ಮಟ್ಟವು 67 ರಿಂದ 71 ರ ಆಸುಪಾಸಿನಲ್ಲಿದ್ದು, ಮಧ್ಯಮ ಗುಣಮಟ್ಟವನ್ನು ಹೊಂದಿದೆ.
  • ಸಿಲ್ಕ್ ಬೋರ್ಡ್ (ಎಚ್‌ಎಸ್‌ಆರ್ ಲೇಔಟ್): ವಾಹನ ಸಂಚಾರ ದಟ್ಟಣೆ ಹೆಚ್ಚಿರುವ ಈ ಪ್ರದೇಶದಲ್ಲಿ ಮಾಲಿನ್ಯದ ಮಟ್ಟ ಕೊಂಚ ಹೆಚ್ಚಾಗಿ ಕಂಡುಬಂದಿದೆ.
  • ನಿಮ್ಹಾನ್ಸ್ ಮತ್ತು ಜಯನಗರ: ಈ ಭಾಗಗಳಲ್ಲಿ ಹಸಿರು ವಲಯ ಹೆಚ್ಚಿರುವುದರಿಂದ ಗಾಳಿಯ ಗುಣಮಟ್ಟವು ತುಲನಾತ್ಮಕವಾಗಿ ಅತ್ಯುತ್ತಮವಾಗಿದೆ.

ಬೆಂಗಳೂರಿನ ಇಂದಿನ ಗಾಳಿಯು ಸಾಮಾನ್ಯ ಜನರಿಗೆ ಸುರಕ್ಷಿತವಾಗಿದ್ದರೂ, ಉಸಿರಾಟದ ತೊಂದರೆ ಇರುವವರು ಹಾಗೂ ಸೂಕ್ಷ್ಮ ಆರೋಗ್ಯ ಹೊಂದಿರುವವರು ದೀರ್ಘಕಾಲದ ಹೊರಾಂಗಣ ಚಟುವಟಿಕೆಗಳ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಒಳ್ಳೆಯದು.

ಕರ್ನಾಟಕದ ಇತರ ಪ್ರಮುಖ ನಗರಗಳ AQI ವಿವರ

ಬಾಗಲಕೋಟೆಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಸುಧಾರಿತವಾಗಿದ್ದು, ಉತ್ತಮ ಶ್ರೇಣಿಯಲ್ಲಿದೆ. ಬೆಳಗಾವಿ ಮತ್ತು ಬಳ್ಳಾರಿ ನಗರಗಳಲ್ಲಿ ಕೈಗಾರಿಕಾ ಚಟುವಟಿಕೆಗಳಿದ್ದರೂ, ಇಂದಿನ AQI ಮಧ್ಯಮ ಮಟ್ಟದಲ್ಲಿ ದಾಖಲಾಗಿದೆ. ಭದ್ರಾವತಿಯಲ್ಲಿ ಇಲ್ಲಿಯೂ ಗಾಳಿಯ ಗುಣಮಟ್ಟ ಮಧ್ಯಮ ಶ್ರೇಣಿಯಲ್ಲೇ ಮುಂದುವರಿದಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಗಾಳಿಯ ಗುಣಮಟ್ಟ ಕೊಂಚ ಕುಸಿದಿದ್ದು,ಕಳಪೆ ಮಟ್ಟವನ್ನು ತಲುಪಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟಿಟಿಗೆ ಬರ್ತಿದೆ ಸಮಂತಾ ನಟನೆಯ ಸೂಪರ್ ಹಿಟ್ ಸಿನಿಮಾ ‘ಮಾ ಇಂಟಿ ಬಂಗಾರಂ’ – Kannada News | Ma Inti Bangaram OTT Release: Samantha’s Blockbuster Telugu Film Streams July 17 on Hotstar

ಎಷ್ಟೇ ದೊಡ್ಡ ಯಶಸ್ಸು ಕಂಡರೂ ಒಟಿಟಿಗೆ ಬರೋದಕ್ಕೆ ಕೆಲವು ಸಿನಿಮಾಗಳು ವಿಳಂಬ ಮಾಡೋದಿಲ್ಲ. ಅದಕ್ಕೆ ಈಗ ‘ಮಾ ಇಂಟಿ ಬಂಗಾರಂ’ ಸಿನಿಮಾ ಹೊಸ ಸೇರ್ಪಡೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಸಮಂತಾ (Samantha) ವೃತ್ತಿಜೀವನದಲ್ಲೇ ಇದು ಅತಿ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಮಹಿಳಾ ಪ್ರಧಾನ ತೆಲುಗು ಸಿನಿಮಾಗಳಲ್ಲೇ ಇದು ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರ ಈಗ ಒಟಿಟಿಗೆ ಕಾಲಿಡಲು ರೆಡಿ ಆಗಿದೆ.

‘ಮಾ ಇಂಟಿ ಬಂಗಾರಂ’ ಸಿನಿಮಾ ಜೂನ್ 19ರಂದು ಥಿಯೇಟರ್​​ನಲ್ಲಿ ರಿಲೀಸ್ ಆಯಿತು. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಭಾರೀ ಮೆಚ್ಚುಗೆ ಸಿಕ್ಕಿತು. ತೆಲುಗಿನಲ್ಲಿ ಮಹಿಳಾ ಪ್ರಧಾನ ಸಿನಿಮಾ ಒಂದು 100 ಕೋಟಿ ರೂಪಾಯಿ ಸೇರಿದ್ದು ಇದೇ ಮೊದಲು ಅನ್ನೋದು ವಿಶೇಷ. ಈಗ ಚಿತ್ರದ ಒಟಿಟಿ ದಿನಾಂಕ ಲಾಕ್ ಆಗಿದೆ.

‘ಮ ಇಂಟಿ ಬಂಗಾರಂ’ ಚಿತ್ರವನ್ನು ಜಿಯೋ ಹಾಟ್‌ಸ್ಟಾರ್ ಒಟಿಟಿ ಮೂಲಕ ಜುಲೈ 17ರಿಂದ ವೀಕ್ಷಣೆ ಮಾಡಬಹುದಾಗಿದೆ. ಈಗ ಕೇವಲ ತೆಲುಗು ಆವೃತ್ತಿ ಮಾತ್ರ ಸ್ಟ್ರೀಮಿಂಗ್ ಆಗಲಿದೆ. ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನು ಘೋಷಿಸಿಲ್ಲ.

ಚಿತ್ರದ ಕಥೆ ಮತ್ತು ತಾರಾಗಣ

ಸಮಂತಾ ಈ ಚಿತ್ರದಲ್ಲಿ ಸ್ವರ್ಣ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಆಕೆ ತನ್ನ ಹಳೆಯ ಜೀವನವನ್ನು ಮರೆತು ನೆಮ್ಮದಿಯ ಸಂಸಾರ ನಡೆಸಲು ಬಯಸುತ್ತಾಳೆ. ಆಕೆ ಭೂತಕಾಲದಲ್ಲಿ ಓರ್ವ ಪ್ರೋಫೇಷನಲ್ಕಿಲ್ಲರ್ ಆಗಿರುತ್ತಾಳೆ. ಹಳೆಯ ಶತ್ರುಗಳು ಮತ್ತೆ ಎದುರಾದಾಗ ಕುಟುಂಬವನ್ನು ರಕ್ಷಿಸಲು ಆಕೆ ಮತ್ತೆ ಅಖಾಡಕ್ಕೆ ಇಳಿಯುತ್ತಾಳೆ.

ಇದನ್ನೂ ಓದಿ: ಅಡೆತಡೆ ಮೀರಿ 100 ಕೋಟಿ ಕ್ಲಬ್ ಸೇರಿದ ಸಮಂತಾ ನಟನೆಯ ಮಾ ಇಂಟಿ ಬಂಗಾರಂ 

ಈ ಚಿತ್ರವನ್ನು ಬಿ. ವಿ. ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಗುಲ್ಶನ್ ದೇವಯ್ಯ, ದಿಗಂತ್ ಮಂಚಾಲೆ ಮತ್ತು ಗೌತಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾ ಥಿಯೇಟರ್​​ನಲ್ಲಿ ಯಶಸ್ವಿಯಾಗಿ ರನ್ ಮಾಡುವಾಗಲೇ ಒಟಿಟಿಗೆ ಬರುತ್ತಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂದು ಆಷಾಢ ಅಮಾವಾಸ್ಯೆ: ಈ ದಿನದ ವಿಶೇಷ ಸಹಿತ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Ashadha Amavasya Horoscope 14 July 2026: Daily Rashi Bhavishya for All 12 Zodiac Signs by Dr Basavaraj Guruji

ಇಂದು ಜುಲೈ 14, 2026 ರ ಮಂಗಳವಾರ, ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಕೃಷ್ಣಪಕ್ಷ ಅಮಾವಾಸ್ಯೆ ತಿಥಿ ಮತ್ತು ಪುನರ್ವಸು ನಕ್ಷತ್ರ ಇದ್ದು, ಈ ದಿನದ ದೈನಂದಿನ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ವಿಶೇಷವಾಗಿ ಇದು ಆಷಾಢ ಅಮಾವಾಸ್ಯೆ ದಿನವಾಗಿದ್ದು, ಗೋಪೂಜೆ ಮತ್ತು ದಾನಕ್ಕೆ ಮಹತ್ವ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಅಮಾವಾಸ್ಯೆಯಂದು ಗೋಪೂಜೆ ಮಾಡುವುದು ಕರ್ಮ ಫಲಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಲಾಗಿದೆ. ರವಿ ಮತ್ತು ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ರೈತರು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಗೋವುಗಳಿಗೆ ಅಲಂಕಾರ ಮಾಡಿ, ಮಣ್ಣಿನ ಗೋವುಗಳನ್ನು ಪೂಜಿಸುವ ಸಂಪ್ರದಾಯವಿದೆ. ವಿವಾಹ, ಸಂತಾನ, ಕೌಟುಂಬಿಕ ಕಲಹಗಳು ಮತ್ತು ಭೂಮಿಯ ವಿವಾದಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಈ ಅಮಾವಾಸ್ಯೆ ಬಹಳ ಪ್ರಬಲವಾಗಿದೆ ಎಂದು ಗುರೂಜಿ ಹೇಳಿದ್ದಾರೆ. ಜಪ, ತಪ ಮತ್ತು ದಾನಕ್ಕೆ ಇದು ಅತ್ಯಂತ ಶುಭ ದಿನ ಎಂದು ಅವರು ಹೇಳಿದ್ದಾರೆ. ಜತೆಗೆ, ದ್ವಾದಶ ರಾಶಿಗಳಾದ ಮೇಷದಿಂದ ಮೀನದವರೆಗಿನ ರಾಶಿಗಳ ಫಲಾಫಲ, ಹಣಕಾಸು, ವೃತ್ತಿ, ಸಂಬಂಧಗಳು ಮತ್ತು ಆರೋಗ್ಯದ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಿದ್ದಾರೆ.

Source link

Horoscope Today 14 July : ನಿಮ್ಮ ರಾಶಿಯ ರಹಸ್ಯಗಳು ಇಂದು ಬಹಿರಂಗ – Kannada News | Daily Horoscope 14 July 2026: What the Stars Foretell for Your Zodiac Sign

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ನಿಜ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿಯ ಮಂಗಳವಾರದಂದು ಶತ್ರುಗಳ ಜಯ, ದಿನಾಂತ್ಯದಲ್ಲಿ ಶುಭವಾರ್ತೆ, ಪ್ರಯಾಣಕ್ಕೆ ತಯಾರಿ, ಪ್ರತಿಜ್ಞೆ, ಮುಂಗಡದಿಂದ ಪಾವತಿ, ಅಪಘಾತ ಸೂಚನೆ, ಕಾರ್ಯಸಾಧನೆಗೆ ಪ್ರಯತ್ನ, ಪ್ರಭಾವ ಬಳಕೆ ಇವೆಲ್ಲ ಈ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ನಿಜ ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಧ್ರುವ, ಕರಣ : ಶಕುನಿ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:37 – 17:13, ಯಮಗಂಡ ಕಾಲ 09:14 – 10:50, ಗುಳಿಕ ಕಾಲ 12:25 – 14:01

ಮೇಷ ರಾಶಿ :

ಯಾರೇ ಪ್ರೀತಿಯಿಂದ ಏನನ್ನೇ ಕೊಟ್ಟರೂ ಅದನ್ನು ಸ್ವೀಕರಿಸಿ.‌ ನೀವು ಇಂದು ಆಲಂಕಾರಿಕ ವಸ್ತುಗಳನ್ನು ಹೆಚ್ಚು ಖರೀದಿಸುವಿರಿ. ಆಯ್ಕೆಗಳ ವಿಚಾರದಲ್ಲಿ ಗೊಂದಲದಲ್ಲಿ ಇರಬೇಕಾಗಬಹುದು. ಶತ್ರುಗಳ ಪರಾಜಯವನ್ನು ಕಂಡು ಸಂತಸಪಡುವಿರಿ. ಇಂದು ಹೆಚ್ಚು ಹುಡುಗಾಟದ ಮಾನಸಿಕತೆ ಇರಲಿದೆ ಶರೀರದಲ್ಲಿ ಅಸಮತೋಲನವು ಇರಲಿದೆ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ದುರಭ್ಯಾಸವು ಹೆಚ್ಚಾಗುವ ಸಾಧ್ಯತೆ ಇದೆ. ಸ್ನೇಹಿತರ ವಿವಾಹ ಸಮಾರಂಭದಲ್ಲಿ ಖುದ್ದಾಗಿ ಭಾಗಿಯಾಗುವಿರಿ.

ವೃಷಭ ರಾಶಿ :

ನಿಮಗೆ ಆತ್ಮವಿಶ್ವಾಸವನ್ನು ಪಡೆಯಲು ಮತ್ತು ನಿಮ್ಮ ಆಲೋಚನೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇನ್ನೊಬ್ಬರಿಗೆ ಹೋಲಿಸುವುದು ಅಪಮಾನವಾಗವುದು. ಇಂದು ನಿಮ್ಮ ವ್ಯಕ್ತಿತ್ವದ ಸ್ಪಷ್ಟ ಚಿತ್ರಣವನ್ನು ನಿಮ್ಮವರಿಗೆ ತೋರಿಸುವಿರಿ. ವಿದೇಶ ಪ್ರಯಾಣವನ್ನು ಮಾಡುವವರು ಹೆಚ್ಚು ಸಿದ್ಧತೆಯಲ್ಲಿ ತೊಡಗುವರು. ದಿನಾಂತ್ಯವು ಬಹಳ ಆನಂದದಲ್ಲಿ ಮುಕ್ತಾಯವಾಗುವುದು. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು.

ಮಿಥುನ ರಾಶಿ :

ನೀವು ಮತ್ತು ನಿಮ್ಮ ಸಂಗಾತಿ ಉತ್ತಮ ಸಮಯವನ್ನು ಹೊಂದಿರುತ್ತೀರಿ. ಇಂದು ನೀವು ಕುಟುಂಬದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಏರಿಸುವಿರಿ. ಬೇಡವಾದ ಸಂಗತಿಗಳೇ ನಿಮ್ಮ ಕಿವಿಗೆ ಬೀಳಬಹುದು. ನಿಮ್ಮ ಸಾಧನೆಗೆ ಗೌರವ ಸಿಗಲಿದೆ. ಸಣ್ಣ ಆದಾಯವನ್ನೂ ಕಡೆಗಣಿಸುವುದು ಬೇಡ. ನಿಮ್ಮ ಉಳಿತಾಯಕ್ಕೆ ಬೆಲೆ ಇಂದು ಬರುವುದು. ಹೊಸ ಪರಿಚಯವು ಅತಿಯಾಗಿ ಆಪ್ತವಾಗಬಹುದು. ಯಾರ ಜೊತೆಗೂ ನೇರವಾದ ಮಾತುಗಳನ್ನು ಆಡದೇ ಕುಹಕವಾಡುವಿರಿ.‌

ಕರ್ಕಾಟಕ ರಾಶಿ :

ಇಂದು ಮನೆಯ ಕಾರ್ಯವನ್ನು ನಿರ್ವಹಿಸಲು ಸಮರ್ಥರಾಗುವುದಿಲ್ಲ. ನೀವು ಇಂದು ದಿನದ ಚಟುವಟಿಕೆಗಳನ್ನು ಬದಲಾಯಿಸುವ ಮನಸ್ಸು ಮಾಡುವಿರಿ. ವೃತ್ತಿಜೀವನವು ನಿಮ್ಮನ್ನು ಕೈಬೀಸಿ ಕರೆದರೂ ನಿಮ್ಮಲ್ಲಿ ನಿರಾಸಕ್ತಿ ಇರುವುದು. ಸಾಲದ ಬಗ್ಗೆ ಹೆಚ್ಚು ಚಿಂತೆ ಮಾಡುವಿರಿ. ರಾಜಕಾರಣಿಗಳು ಅತ್ಯಂತ ಸಂತೋಷದಿಂದ ಇರುವ ದಿನವಾಗಿದೆ. ಭಾವುಕರಾಗುವ ಸಂದರ್ಭವು ಬರಬಹುದು. ಬೇಕೆಂದೇ ನಿಮ್ಮನ್ನು ಕೆಣಕಬಹುದು.

ಸಿಂಹ ರಾಶಿ :

ನೀವು ಇಂದು ಪ್ರಾಮಾಣಿಕತೆಯ ಫಲವನ್ನು ಕಾಣಲಿದ್ದೀರಿ. ಸಂಗಾತಿಯಿಂದ ಶುಭಸಮಾಚಾರವು ಬರಲಿದೆ. ಸಿಟ್ಟಿಂದ ಕೆಲಸವನ್ನು ಸಾಧಿಸಲಾಗದು. ವಾಹನದಿಂದ ಜಾರುವಿರಿ. ಅಪಾಯದ ಯಾವದೇ ಲಕ್ಷಣ ಕಾಣಿಸದು. ತಾಳ್ಮೆ ಮತ್ತು ಕ್ರಮಬದ್ಧ ತಂತ್ರದಿಂದ ಸಾಧ್ಯವಾಗುವುದು. ಮನೋರಂಜನೆಯನ್ನು ಇಷ್ಟಪಡುವಿರಿ. ಅಪರಿಚಿತರಿಗೆ ಮಾಡಿದ ಸಹಾಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಿಮ್ಮ ಭದ್ರತೆಯಲ್ಲಿ‌ ಲೋಪವಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ :

ನಿಮಗೆ ಆರ್ಥಿಕತೆಯಲ್ಲಿ ಸ್ಪಷ್ಟತೆ ಅವಶ್ಯವಾಗಿ ಬೇಕು. ಕಷ್ಟವೇ ನಿಮಗೆ ಎತ್ತರಕ್ಕೇರುವ ಸಾಧನವಾಗಲಿದೆ. ಕೆಲಸದ ತಪ್ಪನ್ನು ಯಾರಮೇಲೂ ಹಾಕದೇ ನೀವೇ ಸರಿ ಮಾಡಿಕೊಳ್ಳುವಿರಿ. ಪ್ರೇಮವ್ಯವಹಾರದಲ್ಲಿ ಸಿಕ್ಕಿಕೊಂಡು ಒದ್ದಾಡುವಿರಿ. ಮುದ್ರಣದ ವಿಚಾರದಲ್ಲಿ ಸರಿಯಾದ ನಿರ್ಧಾರ ಪಡೆಯಲಾಗದು. ಅನುಕರಣೆಯಿಂದ ನಿಮಗೆ ಅಪಾಯ ಸಾಧ್ಯತೆ ಇದೆ. ಬಂಧುಗಳ ಸಹಾಯವನ್ನು ಪಡೆದು ನೆಮ್ಮದಿಯಿಂದ ಇರಿ. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎನ್ನುವುದು ನಿಜವಾದರೂ, ಅದಕ್ಕೂ ವಿಧಾನವಿದೆ.

ತುಲಾ ರಾಶಿ :

ನಿಮ್ಮನ್ನು ಭೇಟಿ ಮಾಡಲು ಇಂದು ಆಪ್ತರು ಬರಬಹುದು. ಕೆಲಸದ ಕ್ಷೇತ್ರದಲ್ಲಿ ನೀವಂದುಕೊಂಡಂತೆ ಆಗಲಿದೆ. ಮನೆಯ ಕೆಲಸ ಕಾರ್ಯಗಳು ಪರ್ವತಾಕಾರದಲ್ಲಿ ತೋರುವುದು. ಆರಂಭದ ಗೊಂದಲೂ ಆದೀತು. ವಾಹನ ಖರೀದಿಗೆ ಪರ ಊರಿಗೆ ಹೋಗುವಿರಿ. ಶತ್ರುಗಳ ಮಸಲತ್ತು ನಿಮಗೆ ಗೊತ್ತಾಗಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುವಿರಿ. ಇಂದು ಹೆಚ್ಚು ನಗುತ್ತ ಸಂತೋಷದಿಂದ ಇರುವಿರಿ. ಯಾವುದೇ ಗೌಪ್ಯವನ್ನು ನೀವು ಬಿಟ್ಟುಕೊಡಲಾರಿರಿ. ಅಯಾಚಿತ ಭಾಗ್ಯದಿಂದ ಖುಷಿಯಾಗಲಿದೆ.

ವೃಶ್ಚಿಕ ರಾಶಿ :

ನಿಮಗೆ ಉದ್ಯೋಗಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ಸ್ವಂತ ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡುವಿರಿ.‌ ಇಂದಿನ ನಿಮ್ಮ ಸುತ್ತಲಿನ ವಾತಾವರಣ ಕಿರಿಕಿರಿ ತರಿಸುವುದು. ಅಂದುಕೊಂಡ ಕೆಲಸವು ಪೂರ್ಣವಾಗುವುದು. ಅಪರಿಚಿತ ಕೆಲಸದಲ್ಲಿ ಮುನ್ನುಗ್ಗಲು ಭಯಪಡುವಿರಿ. ನಿಮ್ಮ ವರ್ತನೆಯು ಅಹಂಕಾರದಂತೆ ತೋರೀತು. ಮಕ್ಕಳಿಗೆ ಜವಾಬ್ದಾರಿಯನ್ನು ಕೊಡಲು ಹಿಂಜರಿಯುವಿರಿ. ಕಷ್ಟವಾದರೂ ಸಾಲದ ಮರುಪಾವತಿಯನ್ನು ಮಾಡವಿರಿ.

ಧನು ರಾಶಿ :

ಹೊರಗೆ ಹೋಗುವ ಎಲ್ಲ ಕೆಲಸಕ್ಕೂ ವಿರಾಮ ಕೊಟ್ಟು ಮನೆಯಲ್ಲಿ ಇದ್ದು ಆನಂದವನ್ನು ಪಡೆಯುವಿರಿ. ಯಾರದೋ ಯೋಜನೆಯನ್ನು ನೀವು ಬಳಸಿಕೊಂಡು ಪ್ರಸಿದ್ಧಿ ಪಡೆಯುವಿರಿ. ಭವಿಷ್ಯದ ಸಂಗಾತಿಯನ್ನು ಮನೆಯವರಿಗೆ ಪರಿಚಯಿಸುವಿರಿ. ಎಲ್ಲವನ್ನೂ ಕಳೆದುಕೊಂಡೆ ಎಂಬ ನೋವು ನಿಮ್ಮನ್ನು ಅಕಾರ್ಯದಲ್ಲಿ ತೊಡಗುವಂತೆ ಮಾಡೀತು. ಆರ್ಥಿಕ ಅಸಮತೋಲನವನ್ನು ಸರಿದೂಗಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಕೊಟ್ಟ ಹಣವನ್ನು ನೀವು ಪುನಃ ಕೇಳುವುದರಿಂದ‌ ಕಲಹವಾಗಬಹುದು.

ಮಕರ ರಾಶಿ :

ಸಂಗಾತಿಯು ಸ್ಪಂದಿಸುತ್ತಿಲ್ಲ ಸರಿಯಾಗಿ ಎಂಬ ವಿಚಾರದಲ್ಲಿ ಬೇಸರವಿರಲಿದೆ. ಮಾಧ್ಯಮದಲ್ಲಿ ಇರುವವರಿಗೆ ಒಳ್ಳೆಯ ವಿಚಾರಗಳು ತಮ್ಮ ಪ್ರಚಾರಕ್ಕೆ ಸಿಗುವುದು. ಖರ್ಚುಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಅಪರಿಚಿತರು ನಿಮ್ಮ ಸ್ನೇಹದ ನೆಪದಲ್ಲಿ ಬರಬಹುದು. ಬೇಕಾದಷ್ಟು ಅವಕಾಶವಿದ್ದರೂ ನೀವು ಬಳಸಿಕೊಳ್ಳದೇ ಸುಮ್ಮನಾಗುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಒತ್ತಡವು ಬರಬಹುದು.

ಕುಂಭ ರಾಶಿ :

ಕಾರ್ಯದ ಸ್ಥಳದಿಂದ ಒಳ್ಳೆಯ ಸುದ್ದಿಗಳು ಬರಲಿವೆ. ಇಂದು ಭೂಮಿಗೆ ಸಂಬಂಧಿಸಿದಂತೆ ಲಾಭ ಪಡೆಯುವಿರಿ. ಇಂದು ನಿಮ್ಮ ಸ್ವಂತ ಆಲೋಚನೆಗಳಿಂದ ಮುಂದುವರಿಯಿರಿ. ಇನ್ನೊಬ್ಬರ ಮಾತಿಗೂ ಬೆಲೆ ಇರಲಿ. ಸಂಗಾತಿಯನ್ನು ದ್ವೇಷಿಸುವಿರಿ. ವ್ಯಾಪಾರದಲ್ಲಿ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ.‌ ಹೆಚ್ಚಿನ ನಿರೀಕ್ಷೆಯಲ್ಲಿ ಇರುವುದು ಬೇಡ. ನಿಮ್ಮ ಅನುಕೂಲತೆಗೆ ತಕ್ಕಂತೆ ಇಂದಿನ ದಿನವನ್ನು ಇಟ್ಟುಕೊಳ್ಳಿ. ಸಂಗಾತಿಯ ಅನಪೇಕ್ಷಿತ ಆಸೆಗಳನ್ನು ದೂರ ಮಾಡುವಿರಿ.

ಇದನ್ನೂ ಓದಿ: ವಾರ ಭವಿಷ್ಯ ಜುಲೈ 12-18, 2026: ಆರೋಗ್ಯ, ಆರ್ಥಿಕತೆ, ವಿದ್ಯಾಭ್ಯಾಸ ಎಲ್ಲ ರಾಶಿಗಳ ಭವಿಷ್ಯ

ಮೀನ ರಾಶಿ :

ಇಂದು ನಿಮ್ಮ ನೋವನ್ನು ಯಾರ ಜೊತೆಯೂ ಹಂಚಿಕೊಳ್ಳಲು ಹೋಗುವುದಿಲ್ಲ. ಕಷ್ಟವಾದರೂ ಕೆಲಸವನ್ನು ಮಾಡಬೇಕಾದೀತು. ಹಿಂಸೆಯ ಸ್ವಭಾವವು ನಿಮಗೆ ಇಷ್ಟವಾಗದು. ವಿದ್ಯಾಭ್ಯಾಸದಿಂದ ಗಮನ ಬೇರೆಡೆಗೆ ಹೋಗುವ ಸಾಧ್ಯತೆ. ಹೂಡಿಕೆಯಲ್ಲಿ ನಿಮಗೆ ಗೊದಲವಾಗಬಹುದು. ಅಪರೂಪದ ಬಂಧುಗಳ ಭೇಟಿಯಾಗಲಿದೆ. ಇನ್ನೊಬ್ಬರ ಜವಾಬ್ದಾರಿಯನ್ನು ನೀವು ಕಸಿದುಕೊಳ್ಳುವ ಆಲೋಚನೆ ಮಾಡುವಿರಿ. ಬೇರೆ ಕಾರ್ಯದಿಂದಾಗಿ ನಿಮ್ಮ ಮುಖ್ಯ‌ ಕಾರ್ಯವು ಹಿಂದುಳಿಯುವುದು.

-ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:41 am, Tue, 14 July 26

Source link

ಬಿಡದಿ ಟೌನ್​ಶಿಪ್​ ಯೋಜನೆ ವಿವಾದ: ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಎಂದ ಪ್ರಹ್ಲಾದ್​​ ಜೋಶಿ – Kannada News | Bidadi Township Row: Pralhad Joshi Terms Women’s ‘Broom Protest’ as Warning Bell to Karnataka Government

ಪ್ರಹ್ಲಾದ್​​ ಜೋಶಿImage Credit source: PTI and Tv9 Kannada

ಬೆಂಗಳೂರು, ಜುಲೈ 13: ಟೌನ್​ಶಿಪ್​ ಯೋಜನೆ ಸಂಬಂಧ ಬಿಡದಿಗೆ ಸರ್ವೆಗೆಂದು ಹೋಗಿದ್ದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆ ಏಟು ನೀಡಿರುವ ಸಂಬಂಧ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು, ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಇದು ಭೂಮಿತಾಯಿ ಉಳಿಸಿಕೊಳ್ಳಲು ಅನ್ನದಾತರ ಒಡಲ ಆಕ್ರೋಶವಾಗಿದ್ದು, ಬಿಡದಿ ರೈತರ ಹೋರಾಟ ಕೇವಲ ಒಂದು ಸಾಮಾನ್ಯ ಪ್ರತಿಭಟನೆಯಲ್ಲ. ಟೌನ್‌ಶಿಪ್ ನೆಪದಲ್ಲಿ ಜಮೀನು ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಅತಿರೇಕದ್ದು ಎಂದವರು ಕಿಡಿ ಕಾರಿದ್ದಾರೆ.

‘ಸರ್ಕಾರದ ಧೋರಣೆ ಖಂಡನೀಯ’

ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆಯಲ್ಲಿ ಮುನ್ನುಗ್ಗುತ್ತಿರುವುದು ದುರಾಡಳಿತದ ಪರಮಾವಧಿ. ರೈತರ ಒಪ್ಪಿಗೆಯಿಲ್ಲದೆ ಅವರ ಜೀವನಾಧಾರವಾಗಿರುವ ಭೂಮಿಯನ್ನೇ ಕಿತ್ತುಕೊಂಡು ಮಾಡುವ ಟೌನ್‌ಶಿಪ್ ಅಭಿವೃದ್ಧಿ ಯಾರ ಉದ್ಧಾರಕ್ಕಾಗಿ? ರೈತರನ್ನು ಹೆದರಿಸಿ, ಬೆದರಿಸಿ ಜಮೀನು ವಶಪಡಿಸಿಕೊಳ್ಳಲು ಯತ್ನಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ. ಪೊಲೀಸ್ ಬಲ ಬಳಸಿ ಜಮೀನು ಕಿತ್ತುಕೊಳ್ಳಬಹುದು ಎಂದುಕೊಂಡಿದ್ದರೆ ಅದು ಭ್ರಮೆ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಇನ್ನಾದರೂ ಕಣ್ತೆರೆದುಕೊಳ್ಳಬೇಕಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಮನಗರದಲ್ಲಿ ಭುಗಿಲೆದ್ದ ಟೌನ್​​ಶಿಪ್ ಕಿಚ್ಚು; ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರಿಂದ ಪೊರಕೆ ಸೇವೆ

ಎಕ್ಸ್​​​ ಪೋಸ್ಟ್​​ ಮೂಲಕ ಅಶೋಕ್​​ ಕಿಡಿ

ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಆರ್​.ಅಶೋಕ್ ಹೇಳಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಸಕರ್ಕರದ ಧೋರಣೆ ಖಂಡಿಸಿರುವ ಅವರು, ರೈತರ ಧ್ವನಿಯನ್ನು ಆಲಿಸುವ ಬದಲು ಪೊಲೀಸರ ಬಲಪ್ರಯೋಗ ಮತ್ತು ಅಧಿಕಾರಿಗಳ ದಬ್ಬಾಳಿಕೆಯ ಮೂಲಕ ಜೆಎಂಸಿ ಸರ್ವೆ ನಡೆಸಲು ಸರ್ಕಾರ ಮುಂದಾಗಿರೋದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದದ್ದು. ಅಭಿವೃದ್ಧಿ ಎಂದರೆ ರೈತರ ಬದುಕನ್ನು ಬಲಿ ಕೊಡುವುದಲ್ಲ. ಯಾವುದೇ ಯೋಜನೆಯೂ ರೈತರ ವಿಶ್ವಾಸ, ಒಪ್ಪಿಗೆ ಮತ್ತು ನ್ಯಾಯಯುತ ಪರಿಹಾರದ ಆಧಾರದ ಮೇಲೆಯೇ ಜಾರಿಯಾಗಬೇಕು. ರೈತರ ಹಕ್ಕುಗಳನ್ನು ಕಡೆಗಣಿಸುವ ಏಕಪಕ್ಷೀಯ ಧೋರಣೆ ಕೈಬಿಡಬೇಕು. ರಾಜ್ಯ ಸರ್ಕಾರ ಕೂಡಲೇ ರೈತರ ಮೇಲಿನ ದಬ್ಬಾಳಿಕೆಯನ್ನು ನಿಲ್ಲಿಸಿ, ಟೌನ್‌ಶಿಪ್ ಯೋಜನೆ ಕುರಿತು ರೈತರೊಂದಿಗೆ ಮುಕ್ತ ಸಂವಾದ ನಡೆಸಬೇಕು. ಅನ್ನದಾತರ ಹಕ್ಕು ಮತ್ತು ಬದುಕಿನ ರಕ್ಷಣೆಗೆ ನಾವು ರೈತರೊಂದಿಗೆ ನಿಲ್ಲುತ್ತೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:27 pm, Mon, 13 July 26

Source link

ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಮೊದಲ ಬಾರಿ ಕಡಲ ಡ್ರೋನ್ ದಾಳಿ – Kannada News | Us military releases footage of sea drones attack in combat against iran for the first time

ಟೆಹ್ರಾನ್, ಜುಲೈ 13: ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ಉಲ್ಬಣಗೊಂಡಿರುವ ಬೆನ್ನಲ್ಲೇ ಅಮೆರಿಕ ಸೇನೆಯು ಇರಾನ್‌ನಲ್ಲಿರುವ (Iran War) ಜಲಾಂತರ್ಗಾಮಿ ಮತ್ತು ಯುದ್ಧನೌಕೆಗಳ ನಿರ್ವಹಣಾ ಕೇಂದ್ರದ ಮೇಲೆ ಭಾರಿ ದಾಳಿ ನಡೆಸಿದೆ. ಅಮೆರಿಕ ಈ ದಾಳಿಯ ವಿಡಿಯೋ ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಅಮೆರಿಕ ಪಡೆಗಳು ಯುದ್ಧ ಕಾರ್ಯಾಚರಣೆಯಲ್ಲಿ ಅತ್ಯಾಧುನಿಕ ‘ಸೀ ಡ್ರೋನ್’ ಅಥವಾ ಸ್ವಯಂಚಾಲಿತ ಕಡಲ ಡ್ರೋನ್‌ಗಳನ್ನು ಬಳಸಿರುವುದು ಈ ದಾಳಿಯ ವಿಶೇಷತೆಯಾಗಿದೆ.

ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಅಮೆರಿಕ ಪಡೆಗಳು ಭಾನುವಾರ ಇರಾನ್‌ನ ಅತ್ಯಂತ ನಿರ್ಣಾಯಕ ಜಲಮಾರ್ಗವಾಗಿರುವ ‘ಬಂದರ್ ಅಬ್ಬಾಸ್’ ಪೋರ್ಟ್ ಮೇಲೆ ದಾಳಿ ನಡೆಸಿವೆ. ಮೂರು ‘ಕೋರ್ಸೇರ್’ ಹೆಸರಿನ ಒನ್-ವೇ ಅಟ್ಯಾಕ್ ಕಡಲ ಡ್ರೋನ್‌ಗಳನ್ನು ಬಳಸಿ ಇರಾನ್‌ನ ಜಲಾಂತರ್ಗಾಮಿ ಮತ್ತು ಹಡಗುಗಳ ರಿಪೇರಿ ಹಾಗೂ ನಿರ್ವಹಣಾ ಕೇಂದ್ರವನ್ನು ಯಶಸ್ವಿಯಾಗಿ ಧ್ವಂಸಗೊಳಿಸಲಾಗಿದೆ ಎಂದು ತಿಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೆಲವೊಮ್ಮೆ ಮಕ್ಕಳು ತಪ್ಪು ಮಾಡುತ್ತಾರೆ; ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿದಾರ ಪೇಪರ್ ಎಸೆತ ಘಟನೆಗೆ ಸಿಜೆಐ ಸೂರ್ಯ ಕಾಂತ್ ಪ್ರತಿಕ್ರಿಯೆ – Kannada News | Children sometimes act unexpectedly CJI Surya Kant Breaks Silence After Petitioner Abuses Him and Throws Papers In Supreme Court

ನವದೆಹಲಿ, ಜುಲೈ 13: ಸುಪ್ರೀಂ ಕೋರ್ಟ್ (Supreme Court) ಒಳಗಡೆಯೇ ಅರ್ಜಿದಾರರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ವಿರುದ್ಧ ಅತ್ಯಂತ ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದಿಸಿದ ಹಾಗೂ ಗಾಳಿಯಲ್ಲಿ ದಾಖಲೆ ಪತ್ರಗಳನ್ನು ತೂರಿದ ಆಘಾತಕಾರಿ ಘಟನೆ ನಡೆದಿತ್ತು. ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಶಿಕ್ಷಿಸುವ ಬದಲು, ದೊಡ್ಡ ಗುಣ ಪ್ರದರ್ಶಿಸಿರುವ ಸಿಜೆಐ ಸೂರ್ಯ ಕಾಂತ್, ಸಾಂವಿಧಾನಿಕ ಸಂಸ್ಥೆಗಳ ಘನತೆಯನ್ನು ಎತ್ತಿಹಿಡಿಯುವ ಅಗತ್ಯವನ್ನು ಒತ್ತಿಹೇಳಿದ್ದಾರೆ.

ತಮ್ಮ ವಿರುದ್ಧ ನಡೆದ ನಿಂದನೆಯ ಘಟನೆಯನ್ನು ಹಗುರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಯುವಕರು ಕೆಲವೊಮ್ಮೆ ಇಂತಹ ವರ್ತನೆಗಳಲ್ಲಿ ತೊಡಗುತ್ತಾರೆ. ಆದರೆ ದೇಶದ ಸಾಂವಿಧಾನಿಕ ಸಂಸ್ಥೆಗಳ ಗೌರವ ಮತ್ತು ಘನತೆಯನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಜೆಐ ಸೂರ್ಯಕಾಂತ್, “ಈ ವಿಷಯವನ್ನು ದೊಡ್ಡದು ಮಾಡದೆ ಬಿಟ್ಟುಬಿಡಿ. ಮಕ್ಕಳು ಕೆಲವೊಮ್ಮೆ ಈ ರೀತಿ ಮಾಡಿಬಿಡುತ್ತಾರೆ. ದೊಡ್ಡವರಾದ ನಾವು ಅದನ್ನೇ ಮನಸಿನಲ್ಲಿಟ್ಟುಕೊಳ್ಳಬಾರದು. ಸಾಂವಿಧಾನಿಕ ಸಂಸ್ಥೆಗಳ ಮರ್ಯಾದೆ, ಘನತೆಯನ್ನು ನಾವು ಕಾಪಾಡಿಕೊಳ್ಳಬೇಕು. ಇದು ನಮ್ಮೆಲ್ಲರ ಜವಾಬ್ದಾರಿ ಮತ್ತು ಪ್ರತಿಯೊಬ್ಬರೂ ಇದನ್ನು ನಿಭಾಯಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಹೈಡ್ರಾಮಾ; ನ್ಯಾಯಮೂರ್ತಿಗಳನ್ನು ನಿಂದಿಸಿ, ಪೇಪರ್ ಎಸೆದ ಅರ್ಜಿದಾರ

ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು?:

ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಸ್ವತಃ ತಾನೇ ವಾದ ಮಂಡಿಸುತ್ತಿದ್ದ ಅರ್ಜಿದಾರರೊಬ್ಬರು ಇದ್ದಕ್ಕಿದ್ದಂತೆ ದಾಖಲೆ ಪತ್ರಗಳ ಕಂತೆಗಳನ್ನು ಗಾಳಿಯಲ್ಲಿ ತೂರಿ ಎಸೆದಿದ್ದಲ್ಲದೆ, ಸಿಜೆಐ ಸೂರ್ಯ ಕಾಂತ್ ಅವರ ವಿರುದ್ಧ ಅತ್ಯಂತ ಅಸಂಸದೀಯ ಹಾಗೂ ನಿಂದನಾತ್ಮಕ ಭಾಷೆಯನ್ನು ಬಳಸಿದ್ದರು. ಲಕ್ನೋ ಮೂಲದ ಪ್ರಬಲ್ ಪ್ರತಾಪ್ ಎಂದು ಗುರುತಿಸಲಾದ ಆ ವ್ಯಕ್ತಿಯನ್ನು ತಕ್ಷಣವೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಕೋರ್ಟ್ ರೂಮ್‌ನಿಂದ ಹೊರಗೆ ಎಳೆದುಕೊಂಡು ಹೋಗಿ ಪೊಲೀಸರ ವಶಕ್ಕೆ ಒಪ್ಪಿಸಿದರು. ಆದರೆ, ಆತನ ವರ್ತನೆಯು ಅಸಂಬದ್ಧ ಮತ್ತು ಮಾನಸಿಕ ಅಸ್ಥಿರತೆಯಿಂದ ಕೂಡಿದಂತೆ ಕಂಡುಬಂದಿದ್ದರಿಂದ, ಕೋರ್ಟ್ ಆತನ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ನಂತರ ಬಿಡುಗಡೆ ಮಾಡಲು ಅನುಮತಿಸಿತು.

ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್​​ನ ಗೋಹತ್ಯೆ ನಿಷೇಧ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

ಕಪ್ಪು ಕೋಟು ಮತ್ತು ಬಿಳಿ ಶರ್ಟ್ ಧರಿಸಿದ್ದ ಪ್ರಬಲ್ ಪ್ರತಾಪ್, ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠದ ಮುಂದೆ ತನ್ನ ಪ್ರಕರಣದ ವಾದ ಮಂಡಿಸಲು ನಿಂತಿದ್ದರು. ವಾದದ ಆರಂಭದಲ್ಲೇ ಆತ ನ್ಯಾಯಾಧೀಶರನ್ನು ಸಂಬೋಧಿಸಲು ಬಳಸಿದ ಪದಗಳು ಎಲ್ಲರನ್ನೂ ಬೆಚ್ಚಿಬೀಳಿಸಿದವು. ನ್ಯಾಯಾಧೀಶರನ್ನು “ನ್ಯಾಯಾಂಗದ ನೌಕರರೇ ಎಂದು ಕರೆದ ಆತ, “ಲಕ್ನೋದ ವಿಕಾಸ್ ನಗರದ ಎಸಿಪಿ ಮತ್ತು ಡುಪ್ಲೆಕ್ಸ್ ಟೆಕ್ನಾಲಜೀಸ್ ಸರ್ವಿಸಸ್ ಲಿಮಿಟೆಡ್ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸುವಂತೆ ನಾನು ನಿಮಗೆ ಆದೇಶಿಸುತ್ತೇನೆ!” ಎಂದರು.

ಆತನ ಮಾತುಗಳನ್ನು ಕೇಳಿ ತಕ್ಷಣವೇ ತಡೆದ ನ್ಯಾಯಾಧೀಶರು, “ನೀವು ನಮಗೆ ಆದೇಶ ನೀಡುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ಆದರೆ ಪ್ರತಾಪ್ ಅದಕ್ಕೆ ನೇರ ಉತ್ತರ ನೀಡದೆ ತನ್ನ ವಾದವನ್ನು ಮುಂದುವರಿಸಿದರು. ನನ್ನ ಕಡೆಯಿಂದ ಇಷ್ಟೇ ಹೇಳಬೇಕಾಗಿರುವುದು. ಉಳಿದ ಎಲ್ಲಾ ದಾಖಲೆಗಳು ರೆಕಾರ್ಡ್‌ನಲ್ಲಿವೆ” ಎಂದು ಹೇಳಿ ತನ್ನ ಬಳಿ ಇದ್ದ ಕಾಗದಪತ್ರಗಳನ್ನು ನ್ಯಾಯಪೀಠದತ್ತ ಎಸೆದರು. ಇದರಿಂದ ಕೋರ್ಟ್​ನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಅವರು ಸಿಜೆಐ ವಿರುದ್ಧವೂ ಜೋರಾಗಿ ನಿಂದನಾತ್ಮಕ ಮಾತುಗಳನ್ನು ಆಡಲು ಶುರುಮಾಡಿದರು. ತಕ್ಷಣ ಕೋರ್ಟ್‌ರೂಮ್ ಒಳಗಿದ್ದ ದೆಹಲಿ ಪೊಲೀಸ್ ಸಿಬ್ಬಂದಿ ಪ್ರತಾಪ್‌ನನ್ನು ವಶಕ್ಕೆ ಪಡೆದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಭೈರತಿ ಸುರೇಶ್​​ ರಿಯಾಲಿಟಿ ಚೆಕ್ ವೇಳೆ ಉದ್ಧಟತನ: ಬಿಎಂಟಿಸಿ ಬಸ್ ಕಂಡಕ್ಟರ್ ಅಮಾನತು – Kannada News | BMTC Bus Conductor Suspended After Rude Behaviour During Minister Byrathi Suresh’s Reality Check

ಬಿಎಂಟಿಸಿ ಬಸ್ ಕಂಡಕ್ಟರ್ ಅಮಾನತುImage Credit source: tv9 kannada

ಬೆಂಗಳೂರು, ಜುಲೈ 13: ಇತ್ತೀಚೆಗೆ ಸಾರಿಗೆ ಸಚಿವ ಭೈರತಿ ಸುರೇಶ್ (Minister Byrathi Suresh)​​ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಸಂಚರಿಸುವ ಮೂಲಕ ರಿಯಾಲಿಟಿ ಚೆಕ್​ ಮಾಡಿದ್ದರು. ಈ ವೇಳೆ “ಚಿಲ್ಲರೆ ಕೊಡಿ, ಇಲ್ಲದಿದ್ದರೆ ಬಸ್‌ನಿಂದ ಕೆಳಗೆ ಇಳಿಯಿರಿ” ಎಂದಿದ್ದ ಚಾಲಕ ಕಂ ನಿರ್ವಾಹಕನನ್ನು ಬಿಎಂಟಿಸಿ ನಿಗಮ ಇದೀಗ ಅಮಾನತು (suspended) ಮಾಡಿದೆ. ರಾಮಕೃಷ್ಣ ಟಿ.ಜಿ ಅಮಾನತು ಆದ ಬಿಎಂಟಿಸಿ ಸಿಬ್ಬಂದಿ.

ನಡೆದಿದ್ದೇನು?

ಜುಲೈ 11ರಂದು ರಾತ್ರಿ ಸುಮಾರು 9:30ರ ವೇಳೆಗೆ ಸಾರಿಗೆ ಸಚಿವ ಭೈರತಿ ಸುರೇಶ್, ಹೆಬ್ಬಾಳದಿಂದ ಭೂಪಸಂದ್ರಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ ಏರಿದ್ದರು. ಈ ವೇಳೆ ಟಿಕೆಟ್‌ಗಾಗಿ ಸಚಿವರು ಹಣ ನೀಡಿದಾಗ ಚಾಲಕ ಕಂ ನಿರ್ವಾಹಕ ರಾಮಕೃಷ್ಣ ಟಿ.ಜಿ. 6 ಚಿಲ್ಲರೆ ನೀಡುವಂತೆ ಕೇಳಿದ್ದಾರೆ. ಸಚಿವರು ತಮ್ಮ ಬಳಿ ಚಿಲ್ಲರೆ ಇಲ್ಲ ಎಂದಿದ್ದಾರೆ. ಆಗ ನಿರ್ವಾಹಕ ಚಿಲ್ಲರೆ ನೀಡದಿದ್ದರೆ ಬಸ್‌ನಿಂದ ಇಳಿಯುವಂತೆ ಉದ್ಧಟತನದಿಂದ ವರ್ತಿಸಿದ್ದಾರೆ.

ಯುಪಿಐ ವ್ಯವಸ್ಥೆ ಇದ್ದರೂ ಮಾಹಿತಿ ನೀಡದ ಸಿಬ್ಬಂದಿ

ಬಿಎಂಟಿಸಿ ಬಸ್‌ಗಳಲ್ಲಿ 2024ರಿಂದಲೇ ಯುಪಿಐ ಮೂಲಕ ಡಿಜಿಟಲ್ ಟಿಕೆಟ್ ಪಾವತಿ ವ್ಯವಸ್ಥೆ ಜಾರಿಯಲ್ಲಿದ್ದು, ಪ್ರಸ್ತುತ ಸಂಸ್ಥೆಯ ಒಟ್ಟು ಟಿಕೆಟ್ ಆದಾಯದಲ್ಲಿ ಸುಮಾರು 53% ರಷ್ಟು ಯುಪಿಐ ಮೂಲಕವೇ ಸಂಗ್ರಹವಾಗುತ್ತಿದೆ. ಹೀಗಿರುವಾಗ ಸಾರ್ವಜನಿಕರಿಗಾಗಲಿ, ಸಚಿವರಿಗಾಗಲಿ ಯುಪಿಐ ಪಾವತಿ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವಲ್ಲಿ ನಿರ್ವಾಹಕ ಸಂಪೂರ್ಣ ವಿಫಲರಾಗಿದ್ದಾರೆ. ಕಂಡಕ್ಟರ್‌ನ ಈ ವರ್ತನೆಯಿಂದಾಗಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆಯ ವಿರುದ್ಧ ನಕಾರಾತ್ಮಕ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ನಿಗಮ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ ನಿರ್ವಾಹಕ ರಾಮಕೃಷ್ಣರನ್ನ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸಚಿವರ ಸೂಚನೆ ಬೆನ್ನಲ್ಲೇ ಬಸ್ ನಿಲುಗಡೆಗೆ ಅವಕಾಶ

ಇನ್ನು ಸಚಿವರ ರಿಯಾಲಿಟಿ ಚೆಕ್ ವೇಳೆ ಜಯಮಹಲ್ ರಸ್ತೆ, ಫನ್ ವರ್ಲ್ಡ್ ಸಮೀಪ ಪ್ರಯಾಣಿಕರೊಬ್ಬರು ಕೈ ಸನ್ನೆ ಮಾಡಿ ನಿಲ್ಲಿಸಲು ಸೂಚಿಸಿದರೂ ಬಸ್ ನಿಲ್ಲಿಸದೆ ಹೋಗಿರುವುದನ್ನು ಸಚಿವರು ಗಮನಿಸಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಸಚಿವ ನಿರ್ದೇಶನದ ಮೇರೆಗೆ, ಫನ್ ವರ್ಲ್ಡ್ ಸಮೀಪ ಅಧಿಕೃತ ಬಸ್ ನಿಲುಗಡೆಯನ್ನು ಇಂದಿನಿಂದಲೇ ಜಾರಿಗೆ ತರಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs ENG: ಭಾರತ- ಇಂಗ್ಲೆಂಡ್‌ ಪಂದ್ಯಕ್ಕೆ ಮಳೆ ಅಡ್ಡಿ? ಹೇಗಿರಲಿದೆ ಹವಾಮಾನ? – Kannada News | India vs England ODI: Birmingham Weather, Pitch Report and Head to Head Preview

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 14, ಮಂಗಳವಾರ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ( Edgbaston) ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಉಭಯ ತಂಡಗಳು ಕೂಡ ಈ ಸರಣಿಗಾಗಿ ಸಕಲ ತಯಾರಿ ಮಾಡಿಕೊಂಡಿವೆ. ಅಲ್ಲದೆ ಆತಿಥೇಯ ಇಂಗ್ಲೆಂಡ್‌ ಕೂಡ ಈ ಸರಣಿಯ ಮೊದಲ ಪಂದ್ಯಕ್ಕಾಗಿ ತನ್ನ ಆಡುವ ಹನ್ನೊಂದರ ಬಳಗವನ್ನು ಸಹ ಪ್ರಕಟಿಸಿದೆ. ಆದರೆ ಟಿ20 ಸರಣಿಯ ಮೊದಲ ಪಂದ್ಯದಂತೆ ಏಕದಿನ ಸರಣಿಯ ಮೊದಲ ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಹವಾಮಾನ ಇಲಾಖೆ ನೀಡಿರುವ ವರದಿ ಅಭಿಮಾನಿಗಳನ್ನು ನಿರಾಳರನ್ನಾಗಿಸಿದೆ.

ಬರ್ಮಿಂಗ್‌ಹ್ಯಾಮ್‌ ಹವಾಮಾನ ಹೇಗಿರಲಿದೆ?

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆ ಕೇವಲ ಶೇ. 1 ರಷ್ಟು ಮಾತ್ರ. ಇದರರ್ಥ ಈ ಪಂದ್ಯಕ್ಕೆ ಮಳೆಯಾಗುವ ಸಾಧ್ಯತೆ ಇಲ್ಲ. ಈ ಪಂದ್ಯದ ಸಮಯದಲ್ಲಿ ಮೋಡ ಕವಿದ ವಾತಾವರಣವಿರುತ್ತದೆ. ಇದರಿಂದ ಆಟಗಾರರು ಮೈದಾನದಲ್ಲಿ ಬಿಸಿಲಿನ ಬೇಗೆಯಲ್ಲಿ ಬಳಲುವ ಅವಕಶ್ಯಕತೆ ಇಲ್ಲ.

ಪಿಚ್ ಯಾರಿಗೆ ಸಹಕಾರಿ?

ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ರನ್ ಗಳಿಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಆಟ ಮುಂದುವರೆದಂತೆ, ಇದು ನಿಧಾನಗೊಳ್ಳುತ್ತದೆ, ಸ್ಪಿನ್ನರ್‌ಗಳು ಮತ್ತು ಬೌಲರ್‌ಗಳಿಗೆ ಕೊಂಚ ನೆರವು ಸಿಗಲಿದೆ. ಆದಾಗ್ಯೂ, ಮೊದಲು ಬ್ಯಾಟಿಂಗ್ ಮಾಡುವ ತಂಡವು ದೊಡ್ಡ ಮೊತ್ತವನ್ನು ಗಳಿಸಬಹುದು. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್‌ ಆಯ್ದುಕೊಳ್ಳುವ ಸಾಧ್ಯತೆಗಳಿವೆ.

IND vs ENG: ಏಕದಿನ ಸರಣಿಯಲ್ಲಿ 7 ದಾಖಲೆಗಳ ಮೇಲೆ ಕಣ್ಣಿಟ್ಟ ಕಿಂಗ್ ಕೊಹ್ಲಿ

ಉಭಯ ತಂಡಗಳ ಮುಖಾಮುಖಿ

ಭಾರತ ಮತ್ತು ಇಂಗ್ಲೆಂಡ್ ಇದುವರೆಗೆ 110 ಏಕದಿನ ಪಂದ್ಯಗಳನ್ನು ಆಡಿವೆ. ಈ ಪೈಕಿ ಭಾರತ 61 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 44 ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳು ಟೈ ಆಗಿದ್ದರೆ, ಮೂರು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇಂಗ್ಲೆಂಡ್‌ನಲ್ಲಿ ಭಾರತದ ಪ್ರದರ್ಶನಕ್ಕೆ ಸಂಬಂಧಿಸಿದಂತೆ, ಭಾರತ ಇದುವರೆಗೆ 86 ಏಕದಿನ ಪಂದ್ಯಗಳನ್ನು ಆಡಿದ್ದು, 45 ಗೆದ್ದಿದ್ದರೆ, 37 ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ಟೈ ಆಗಿದೆ, ಮತ್ತು ಮೂರು ಡ್ರಾ ಆಗಿದೆ. ಭಾರತ ಇದುವರೆಗೆ ಬರ್ಮಿಂಗ್ಹ್ಯಾಮ್‌ನಲ್ಲಿ 12 ಏಕದಿನ ಪಂದ್ಯಗಳನ್ನು ಆಡಿದ್ದು, ಎಂಟು ಪಂದ್ಯಗಳಲ್ಲಿ ಗೆದ್ದಿದ್ದರೆ, ನಾಲ್ಕು ಪಂದ್ಯಗಳಲ್ಲಿ ಸೋತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version