ನಿಮ್ಮಂತ ಕೋಚ್ ನಮಗೆ ಬೇಡ: ಗಂಭೀರ್​ನ ಅಣಕಿಸಿದ ​ಐಸ್‌ಲ್ಯಾಂಡ್ ಕ್ರಿಕೆಟ್ – Kannada News | Iceland Cricket Trolls Team India Coach Gautam Gambhir

ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಆಘಾತಕಾರಿ ಸೋಲನುಭವಿಸಿದೆ. ಮೊದಲ ಮ್ಯಾಚ್​ನಲ್ಲಿ 34 ರನ್​ಗಳಿಂದ ಸೋತಿದ್ದ ಟೀಮ್ ಇಂಡಿಯಾ ದ್ವಿತೀಯ ಪಂದ್ಯದಲ್ಲಿ 1 ರನ್​ನಿಂದ ಸೋಲೊಪ್ಪಿಕೊಂಡಿದೆ. ಈ ಎರಡು ಸೋಲುಗಳೊಂದಿಗೆ ಭಾರತ ತಂಡವು ಇದೇ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಸರಣಿ ಸೋತಂತಾಗಿದೆ. ಈ ಸೋಲಿನ ಬೆನ್ನಲ್ಲೇ ಐಸ್‌ಲ್ಯಾಂಡ್ ಕ್ರಿಕೆಟ್ ವ್ಯಂಗ್ಯಭರಿತ ಪೋಸ್ಟ್​ವೊಂದು ಹಂಚಿಕೊಂಡು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಕಾಲೆಳೆದಿದ್ದಾರೆ.

ಐಸ್‌ಲ್ಯಾಂಡ್ ಕ್ರಿಕೆಟ್ ಪೋಸ್ಟ್:

ಕ್ರಿಕೆಟ್ ಅಂಗಳದಲ್ಲಿ ನಡೆಯುವ ಕೆಲ ಸನ್ನಿವೇಶಗಳಿಗೆ ತಮ್ಮ ಚುರುಕಾದ ಹಾಸ್ಯಪ್ರಜ್ಞೆಯ ಮೂಲಕ ಪ್ರತಿಕ್ರಿಯಿಸುವ ಐಸ್‌ಲ್ಯಾಂಡ್ ಕ್ರಿಕೆಟ್ ಸೋಷಿಯಲ್ ಮೀಡಿಯಾ ಖಾತೆಯ ಅಡ್ಮಿನ್ ಈ ಬಾರಿ ಗುರಿಯಾಗಿಸಿದ್ದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರನ್ನು.

“ನಾವು ಗೌತಮ್ ಗಂಭೀರ್ ಅವರನ್ನು ನಮ್ಮ ಕೋಚಿಂಗ್ ಸಿಬ್ಬಂದಿಗೆ ಸೇರಿಸಿಕೊಳ್ಳಲು ಬಯಸುವುದಿಲ್ಲ ಎಂದು ಖಚಿತಪಡಿಸುತ್ತೇವೆ. ಆದರೆ ಅವರಲ್ಲಿ ಅದ್ಭುತ ಪ್ರತಿಭೆಯಂತೂ ಇದೆ. ಅಂತಹ ಸ್ಟಾರ್ ಭಾರತೀಯ ಆಟಗಾರರನ್ನು ಇಟ್ಟುಕೊಂಡು, ಐರ್ಲೆಂಡ್‌ನಲ್ಲಿ ಇಂತಹ ರಿಸಲ್ಟ್ ತರುವುದು ನಿಜಕ್ಕೂ ಸಾಮಾನ್ಯ ವಿಷಯವಲ್ಲ!” ಎಂದು ಐಸ್​ಲ್ಯಾಂಡ್ ಕ್ರಿಕೆಟ್, ಟೀಮ್ ಇಂಡಿಯಾ​ ಕೋಚ್​ ಅನ್ನು ಕಾಲೆಳೆದಿದ್ದಾರೆ.

ಇತಿಹಾಸ ಬರೆದ ಐರ್ಲೆಂಡ್

  • ಚಾರಿತ್ರಿಕ ಕ್ಲೀನ್ ಸ್ವೀಪ್: ಬೆಲ್‌ಫಾಸ್ಟ್‌ನ ಸ್ಟೋರ್ಮಾಂಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ಸರಣಿಯ ಎರಡೂ ಪಂದ್ಯಗಳನ್ನು ಗೆದ್ದ ಐರ್ಲೆಂಡ್, ಭಾರತದ ವಿರುದ್ಧ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿ ಜಯಿಸಿ ಇತಿಹಾಸ ಬರೆದಿದೆ.
  • ವಿಶ್ವ ದಾಖಲೆಗೆ ಬ್ರೇಕ್: ಈ ಗೆಲುವಿನೊಂದಿಗೆ ಐರ್ಲೆಂಡ್ ತಂಡವು ಭಾರತ ತಂಡದ ವಿಶ್ವ ದಾಖಲೆಯ ದ್ವಿಪಕ್ಷೀಯ ಸರಣಿ ಗೆಲುವಿಗೆ ಬ್ರೇಕ್ ಹಾಕಿದೆ. ಅಂದರೆ ಟೀಮ್ ಇಂಡಿಯಾ ಕಳೆದ 3 ವರ್ಷಗಳಲ್ಲಿ ಸತತವಾಗಿ ಬರೋಬ್ಬರಿ 16 ಸರಣಿ ಗೆದ್ದುಕೊಂಡಿತ್ತು. ಇದೀಗ ಈ ಸರಣಿ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.

ಫ್ಯಾನ್ಸ್ ‘ಗಂಭೀರ’ ಆಕ್ರೋಶ:

ಟೀಮ್ ಇಂಡಿಯಾದ  ಹೀನಾಯ ಪ್ರದರ್ಶನಕ್ಕೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೇ ಕಾರಣ ಎಂದು ಕ್ರಿಕೆಟ್ ಪ್ರೇಮಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಗಂಭೀರ್ ಅವರ ಅತಿಯಾದ ಪ್ರಯೋಗಗಳು,  ಆಟಗಾರರ ಆಯ್ಕೆ ಹಾಗೂ ಸ್ಪೆಷಲಿಸ್ಟ್ ಬ್ಯಾಟರ್‌ಗಳ ಬದಲಿಗೆ ಅತಿಯಾಗಿ ಆಲ್‌ರೌಂಡರ್‌ಗಳ ಮೇಲೆ ನಂಬಿಕೆ ಇಟ್ಟಿದ್ದೇ ಈ ಐತಿಹಾಸಿಕ ಮುಖಭಂಗಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ ವಿಶ್ವ ದಾಖಲೆಯ ನಾಗಾಲೋಟಕ್ಕೆ ಬ್ರೇಕ್!

ಒಟ್ಟಾರೆಯಾಗಿ ಟೀಮ್ ಇಂಡಿಯಾ ಅನಿರೀಕ್ಷಿತವಾಗಿ ಐರ್ಲೆಂಡ್ ವಿರುದ್ಧ ಸೋತಿದೆ. ಈ ಸೋಲಿನ ಬೆನ್ನಲ್ಲೇ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಲು ಸಜ್ಜಾಗಿದೆ. ಈ ಸರಣಿ ಮೂಲಕ ಟೀಮ್ ಇಂಡಿಯಾ ಟೀಕಾಗಾರರಿಗೆ ಪ್ರತ್ಯುತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.

Source link

ಚನ್ನಪಟ್ಟಣದ ದೇವರಹಳ್ಳಿ ಗ್ರಾಮದಲ್ಲಿ ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ: ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ – Kannada News | Outrage in Channapatna After Miscreants Set Nadaprabhu Kempegowda Banner on Fire in Devarahalli

ರಾಮನಗರ, ಜೂನ್ 29: ನಾಡಪ್ರಭು ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿದ ಚನ್ನಪಟ್ಟಣ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ರಾಜ್ಯಾದ್ಯಂತ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ, ಸಂಭ್ರಮದಿಂದ ಆಚರಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಜೂನ್ 27ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಗಿತ್ತು. ಈ ಜಯಂತಿ ಆಚರಣೆಯ ಭಾಗವಾಗಿ ಗ್ರಾಮದಲ್ಲಿ ಬ್ಯಾನರ್ ಅಳವಡಿಸಲಾಗಿತ್ತು. ಕಿಡಿಗೇಡಿಗಳ ಈ ಕೃತ್ಯದ ಪರಿಣಾಮವಾಗಿ ಕೆಂಪೇಗೌಡರ ಭಾವಚಿತ್ರವಿದ್ದ ಬ್ಯಾನರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯನ್ನು ಸ್ಥಳೀಯ ಗ್ರಾಮಸ್ಥರು ಮತ್ತು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ತಪ್ಪಿತಸ್ಥರನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಅಭಿವೃದ್ಧಿ ಪ್ಯಾಕೇಜ್​ನಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೇ ಸಿಂಹಪಾಲು: ತಾರತಮ್ಯದ ಆರೋಪ ಮಾಡಿದ ಪ್ರತಿಪಕ್ಷ ಬಿಜೆಪಿ – Kannada News | Bengaluru Grant Allocation: Congress MLA Constituencies Secure Big Share, BJP Alleges Fund Diversion

ಬೆಂಗಳೂರು, ಜೂನ್ 29: ಬೆಂಗಳೂರಿನ (Bengaluru) ಸರ್ವತೋಮುಖ ಅಭಿವೃದ್ಧಿಗಾಗಿ ಬಿಡುಗಡೆ ಮಾಡಲಾಗಿರುವ ಒಟ್ಟು 2,000 ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್ ಹಂಚಿಕೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ (Congress) ಶಾಸಕರ ಕ್ಷೇತ್ರಗಳಿಗೇ ಭರಪೂರ ಅನುದಾನ ಹರಿದುಬಂದಿದೆ. ಸರ್ಕಾರದ ಈ ನಡೆಗೆ ಪ್ರತಿಪಕ್ಷ ಬಿಜೆಪಿ (BJP) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅನುದಾನ ಹಂಚಿಕೆಯಲ್ಲಿ ರಾಜಕೀಯ ಮಾಡಲಾಗಿದೆ ಎಂದು ಆರೋಪಿಸಿದೆ. ಬಿಡುಗಡೆಯಾಗಿರುವ ಅನುದಾನದ ಪೈಕಿ ಅತ್ಯಧಿಕ ಮೊತ್ತವನ್ನು ಬಾಚಿಕೊಂಡ ಮೊದಲ ನಾಲ್ಕೂ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಶಾಸಕರ ಪ್ರಾತಿನಿಧ್ಯ ಹೊಂದಿರುವ ಕ್ಷೇತ್ರಗಳೇ ಆಗಿವೆ.

ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?

ಅನುದಾನ ಹಂಚಿಕೆಯ ಸಂಪೂರ್ಣ ವಿವರಗಳನ್ನು ಗಮನಿಸುವುದಾದರೆ, ಶಿವಾಜಿನಗರ ಕ್ಷೇತ್ರಕ್ಕೆ ಬರೋಬ್ಬರಿ 80 ಕೋಟಿ ರೂ. ಹಾಗೂ ಬ್ಯಾಟರಾಯನಪುರ ಕ್ಷೇತ್ರಕ್ಕೆ 80 ಕೋಟಿ ರೂ. ಮೀಸಲಿಡಲಾಗಿದೆ. ಗಾಂಧಿನಗರ ಮತ್ತು ಚಾಮರಾಜಪೇಟೆ ಕ್ಷೇತ್ರಗಳಿಗೆ ಕ್ರಮವಾಗಿ 73 ಕೋಟಿ ರೂ. ಮತ್ತು 71.5 ಕೋಟಿ ರೂ. ಮಂಜೂರು ಮಾಡಲಾಗಿದೆ. ಇನ್ನುಳಿದಂತೆ ಬೊಮ್ಮನಹಳ್ಳಿ ಕ್ಷೇತ್ರಕ್ಕೆ 60 ಕೋಟಿ ರೂ. ಬಿಡುಗಡೆಯಾಗಿದ್ದರೆ, ಬಿಟಿಎಂ ಲೇಔಟ್, ಯಶವಂತಪುರ, ಶಾಂತಿನಗರ ಮತ್ತು ಮಹದೇವಪುರ ಕ್ಷೇತ್ರಗಳಿಗೆ ತಲಾ ಸುಮಾರು 50 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಹಣ ಒದಗಿಸಲಾಗಿದೆ.

ಬೆಂಗಳೂರು ಉತ್ತರಕ್ಕೆ ಸಿಂಹಪಾಲು

ಜಿಬಿಎ ವ್ಯಾಪ್ತಿಯ ವಲಯವಾರು ಹಂಚಿಕೆಯಲ್ಲಿ ಉತ್ತರ ವಲಯಕ್ಕೆ ಸಿಂಹಪಾಲು ಅಂದರೆ 466.5 ಕೋಟಿ ರೂ. ಸಿಕ್ಕಿದೆ. ಪಶ್ಚಿಮ ವಲಯಕ್ಕೆ 415 ಕೋಟಿ ರೂ., ದಕ್ಷಿಣ ವಲಯಕ್ಕೆ 328 ಕೋಟಿ ರೂ. ಹಾಗೂ ಮಧ್ಯ ವಲಯಕ್ಕೆ 311.5 ಕೋಟಿ ರೂ. ಹಂಚಿಕೆಯಾಗಿದೆ. ಆದರೆ, ಅತ್ಯಂತ ಕಡಿಮೆ ಅಂದರೆ ಕೇವಲ 110 ಕೋಟಿ ರೂ. ಅನುದಾನವನ್ನು ಪೂರ್ವ ವಲಯಕ್ಕೆ ನೀಡಲಾಗಿದೆ. ಈ ಪೂರ್ವ ವಲಯದಲ್ಲಿ ವೈಟ್‌ಫೀಲ್ಡ್, ಬೆಳ್ಳಂದೂರು, ವರ್ತೂರು, ಪಣತ್ತೂರು, ಕಾಡುಗೋಡಿ, ಹೂಡಿ ಮತ್ತು ಕುಂದಲಹಳ್ಳಿ ನಂತಹ ಪ್ರಮುಖ ಐಟಿ ಹಬ್‌ಗಳು ಸೇರಿವೆ. ಇಲ್ಲಿನ ನಿವಾಸಿಗಳು ನಿರಂತರವಾಗಿ ರಸ್ತೆಗಳ ದುಸ್ಥಿತಿ, ಮಳೆ ನೀರಿನ ಪ್ರವಾಹ, ತೀವ್ರ ಟ್ರಾಫಿಕ್ ದಟ್ಟಣೆ ಹಾಗೂ ಮೂಲಸೌಕರ್ಯಗಳ ಕೊರತೆಯ ಬಗ್ಗೆ ದೂರು ನೀಡುತ್ತಲೇ ಇದ್ದರೂ ಅತಿ ಕಡಿಮೆ ಅನುದಾನ ನೀಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಯಾವೆಲ್ಲ ಕಾಮಗಾರಿಗಳಿಗೆ ಅನುದಾನ?

ಈ ಒಟ್ಟು 2,000 ಕೋಟಿ ರೂ. ಪ್ಯಾಕೇಜ್‌ನಲ್ಲಿ ರಸ್ತೆ, ಚರಂಡಿ ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ 1,631 ಕೋಟಿ ರೂ. ಮೀಸಲಿಡಲಾಗಿದೆ. ಇನ್ನುಳಿದ 369 ಕೋಟಿ ಮೊತ್ತವನ್ನು ನಾಗರಿಕ ಮೂಲಸೌಕರ್ಯ, ವಿಶೇಷ ಯೋಜನೆಗಳು, ಉದ್ಯಾನಗಳು, ಸಮುದಾಯ ಭವನಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಕ್ರೀಡಾ ಮೂಲಸೌಕರ್ಯ, ಮಾರುಕಟ್ಟೆಗಳು ಹಾಗೂ ಕೆರೆಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ.

ಬಿಜೆಪಿ ನಾಯಕರ ಗಂಭೀರ ಆರೋಪ

ಈ ಹಂಚಿಕೆಯ ಬೆನ್ನಲ್ಲೇ ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ನಾಯಕರು, ‘ಈ ಅನುದಾನದ ಬಹುದೊಡ್ಡ ಭಾಗವನ್ನು ಬೆಂಗಳೂರಿನ ರಸ್ತೆ ಅಭಿವೃದ್ಧಿಗೆಂದು ತೋರಿಸಿ, ಅದರಲ್ಲಿನ ಸುಮಾರು 369 ಕೋಟಿ ರೂಪಾಯಿಗಳನ್ನು ರಸ್ತೆ ಕಾಮಗಾರಿಗಳ ಬದಲಾಗಿ ಕಾಂಗ್ರೆಸ್ ಶಾಸಕರ ಕಚೇರಿಗಳು, ಸಮುದಾಯ ಭವನಗಳು, ಬಹುಉದ್ದೇಶ ಕಟ್ಟಡಗಳು ಹಾಗೂ ಉದ್ಯಾನಗಳ ನಿರ್ಮಾಣಕ್ಕೆ ನಿಯಮಬಾಹಿರವಾಗಿ ತಿರುಗಿಸಲಾಗುತ್ತಿದೆ (ಡೈವರ್ಟ್ ಮಾಡಲಾಗುತ್ತಿದೆ)’ ಎಂದು ನೇರ ಆರೋಪ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೂನ್ 30 ಡೈಡ್​ಲೈನ್: ಎಲ್​ಪಿಜಿ ಇಕೆವೈಸಿ, ಐಟಿಆರ್ ಪರಿಶೀಲನೆ ಇತ್ಯಾದಿ ಹಣಕಾಸು ಕಾರ್ಯಗಳಿಗೆ ನಾಳೆಯ ಗಡುವು – Kannada News | E KYC to ITR scrutiny, financial tasks to be done by 2026 June 30th

ಇನ್ಕಮ್ ಟ್ಯಾಕ್ಸ್ ರಿಟರ್ನ್Image Credit source: Getty Images

ನವದೆಹಲಿ, ಜೂನ್ 29: ಈ ತಿಂಗಳ ಕೊನೆಯ ದಿನಾಂಕವು (ಜೂನ್ 30) ಸಾಮಾನ್ಯ ನಾಗರಿಕರಿಗೆ ಮತ್ತು ಉದ್ಯಮಿಗಳಿಗೆ ಪ್ರಮುಖವಾಗಿದೆ. ಈ ದಿನಾಂಕದೊಳಗೆ ಕೆಲವು ಪ್ರಮುಖ ಹಣಕಾಸು ಮತ್ತು ತೆರಿಗೆ ಸಂಬಂಧಿತ ಕೆಲಸಗಳನ್ನು (Financial tasks) ಮುಗಿಸದಿದ್ದರೆ, ಜುಲೈ 1ರಿಂದ ಆರ್ಥಿಕ ನಷ್ಟ ಅಥವಾ ಕಾನೂನು ತೊಂದರೆಗಳನ್ನು ಎದುರಿಸಬೇಕಾಗಬಹುದು. ಎಲ್​ಪಿಜಿ ಗ್ಯಾಸ್​ಗೆ ಸಬ್ಸಿಡಿ ಪಡೆಯುತ್ತಿರುವವರು, ಆ ಸೌಲಭ್ಯ ಮುಂದುವರಿಸಲು ಇಕೆವೈಸಿ ಮಾಡುವುದು ಸೇರಿದಂತೆ ಕೆಲ ಪ್ರಮುಖ ಹಣಕಾಸು ಕಾರ್ಯಗಳಿಗೆ ನಾಳೆಯೇ (ಜೂನ್ 30, ಮಂಗಳವಾರ) ಡೆಡ್​ಲೈನ್ ಇದೆ. ಇಂಥ ಕಾರ್ಯಗಳ್ಯಾವುವು ಎನ್ನುವ ಮಾಹಿತಿ ಇಲ್ಲಿದೆ:

ಎಲ್‌ಪಿಜಿ ಗ್ಯಾಸ್ ಇ-ಕೆವೈಸಿ (LPG e-KYC) ಕಡ್ಡಾಯ

ನೀವು ಎಲ್‌ಪಿಜಿ ಸಿಲಿಂಡರ್ ಬಳಸುತ್ತಿದ್ದು, ಸಬ್ಸಿಡಿ (Subsidy) ಪಡೆಯುತ್ತಿದ್ದರೆ ಜೂನ್ 30ರೊಳಗೆ ಇ-ಕೆವೈಸಿ (ಬಯೋಮೆಟ್ರಿಕ್ ಪರಿಶೀಲನೆ) ಮಾಡಿಸುವುದು ಕಡ್ಡಾಯವಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳು ಮತ್ತು ಸಬ್ಸಿಡಿ ಪಡೆಯುತ್ತಿರುವ ಇತರ ಸಾಮಾನ್ಯ ಗ್ರಾಹಕರು ಇದನ್ನು ಮಾಡಿಸಬೇಕು.

ಇದನ್ನೂ ಓದಿ: ಹೂಡಿಕೆಗೆ ಯಾವ ಷೇರುಗಳನ್ನು ಆಯ್ದುಕೊಳ್ಳಬೇಕು ಎನ್ನುವ ಗೊಂದಲವಾ? ಗಮನಿಸಬೇಕಾದ 10 ಅಂಶಗಳಿವು

ಈ ಗಡುವಿನೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಗ್ಯಾಸ್ ಸಬ್ಸಿಡಿ ಹಣ ಜಮೆಯಾಗುವುದು ಕಾಯಂ ಆಗಿ ಸ್ಥಗಿತಗೊಳ್ಳಬಹುದು. ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಅಥವಾ ಮೊಬೈಲ್ ಆಪ್ ಮೂಲಕ ಇದನ್ನು ಸುಲಭವಾಗಿ ಮಾಡಬಹುದು. ಈಗಾಗಲೇ ಈ ಆರ್ಥಿಕ ವರ್ಷದಲ್ಲಿ ಕೆವೈಸಿ ಮಾಡಿಸಿರುವ ಸಬ್ಸಿಡಿ ರಹಿತ ಗ್ರಾಹಕರಿಗೆ ಇದು ಅನ್ವಯಿಸುವುದಿಲ್ಲ.

ಆದಾಯ ತೆರಿಗೆ ರಿಟರ್ನ್ಸ್ ಪರಿಶೀಲನೆಯ ಗಡುವು

ಹೊಸ ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 31 ಆಗಿದ್ದರೂ, ಈಗಾಗಲೇ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿರುವವರಿಗೆ ಜೂನ್ 30 ಪ್ರಮುಖ ದಿನವಾಗಿದೆ.

ಆದಾಯ ತೆರಿಗೆ ಇಲಾಖೆಯು ಸಲ್ಲಿಕೆಯಾದ ರಿಟರ್ನ್ಸ್‌ಗಳಲ್ಲಿ ಯಾವುದೇ ವ್ಯತ್ಯಾಸ ಅಥವಾ ತಪ್ಪುಗಳನ್ನು ಪತ್ತೆಹಚ್ಚಲು ಮತ್ತು ಸೆಕ್ಷನ್ 143(2) ಅಡಿಯಲ್ಲಿ ಸ್ಕ್ರುಟಿನಿ ನೋಟಿಸ್ (Scrutiny Notice) ಜಾರಿ ಮಾಡುತ್ತದೆ. ನಿಮ್ಮ ಫಾರ್ಮ್ 26AS, AIS ಅಥವಾ ಬ್ಯಾಂಕ್ ವಹಿವಾಟುಗಳ ದಾಖಲೆಗಳಲ್ಲಿ ವ್ಯತ್ಯಾಸಗಳಿದ್ದರೆ ಇಲಾಖೆಯಿಂದ ವಿಚಾರಣೆಯ ನೋಟಿಸ್ ಬರಬಹುದು. ಆದ್ದರಿಂದ ತೆರಿಗೆದಾರರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಜೂನ್ 30ರವರೆಗೂ ಅವಕಾಶ ಇರುತ್ತದೆ. ಹೀಗಾಗಿ, ಇದು ಮುಖ್ಯವಾಗಿದೆ.

ಇದನ್ನೂ ಓದಿ: ಮುಂಬರುವ ವರ್ಷಗಳಲ್ಲಿ ಬಹಳ ಬಳಕೆಯಾಗುವ ಟಾಪ್-10 ತಂತ್ರಜ್ಞಾನಗಳು; ಡಬ್ಲ್ಯುಇಎಫ್​ನಿಂದ ಪಟ್ಟಿ ಬಿಡುಗಡೆ

ಉದ್ಯಮಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ತ್ರೈಮಾಸಿಕ ಮುಕ್ತಾಯ

ಜೂನ್ 30 ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ (ಏಪ್ರಿಲ್-ಜೂನ್ – Quarterly End) ಕೊನೆಯ ದಿನವಾಗಿದೆ. ಹೀಗಾಗಿ ವ್ಯಾಪಾರಸ್ಥರು ತಮ್ಮ ಖಾತೆಗಳ ಪುಸ್ತಕಗಳನ್ನು ನವೀಕರಿಸಬೇಕಾಗುತ್ತದೆ. ಜುಲೈ ತಿಂಗಳಲ್ಲಿ ಸಲ್ಲಿಸಬೇಕಾದ ಜಿಎಸ್‌ಟಿ (GST) ರಿಟರ್ನ್ಸ್, ಟಿಡಿಎಸ್ (TDS) ಮತ್ತು ಟಿಸಿಎಸ್ (TCS) ಸ್ಟೇಟ್‌ಮೆಂಟ್‌ಗಳನ್ನು ಸಕಾಲದಲ್ಲಿ ಸಿದ್ಧಪಡಿಸಿಕೊಳ್ಳಲು ಜೂನ್ 30ರ ಒಳಗಿನ ಲೆಕ್ಕಾಚಾರಗಳು ಬಹಳ ಮುಖ್ಯವಾಗಿವೆ.

ಕೊನೆಯ ಕ್ಷಣದ ಗಡಿಬಿಡಿ ಮತ್ತು ದಂಡವನ್ನು ತಪ್ಪಿಸಲು ಈ ಎಲ್ಲಾ ಪ್ರಮುಖ ಆರ್ಥಿಕ ಜವಾಬ್ದಾರಿಗಳನ್ನು ಗಡುವಿನ ಒಳಗಾಗಿಯೇ ಪೂರ್ಣಗೊಳಿಸುವುದು ಉತ್ತಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:43 am, Mon, 29 June 26

Source link

ಮುಂದಿನ ಚಿತ್ರದಲ್ಲಿ ಯಶ್​ಗೆ ಪೊಲೀಸ್ ಪಾತ್ರ? ಐಎಂಡಿಬಿಯಲ್ಲಿ ಲೀಕ್ ಆಯ್ತು ಕಥೆ – Kannada News | Yash’s Next Film: IMDb Leak Reveals Plot and Cast — Narthan and Tripti Dimri in Talks

ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಹೊಸ ಹೊಸ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ಸದ್ಯ ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಅವರ ಮುಂದಿನ ಬಹುನಿರೀಕ್ಷಿತ ಚಿತ್ರದ ಬಗ್ಗೆ ಅತ್ಯಂತ ಕುತೂಹಲಕಾರಿ ಮಾಹಿತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಜನಪ್ರಿಯ ಸಿನಿಮಾ ಡೇಟಾಬೇಸ್ ಜಾಲತಾಣವಾದ ಐಎಂಡಿಬಿ ಪುಟವೊಂದರಲ್ಲಿ ಯಶ್ ಅವರ ಮುಂಬರುವ ಚಿತ್ರದ ಕಥಾಹಂದರ ಹಾಗೂ ತಾರಾಗಣದ ವಿವರಗಳು ಲೀಕ್ ಆಗಿದ್ದು, ಪ್ರೇಕ್ಷಕರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಐಎಂಡಿಬಿಯಲ್ಲಿ ಲೀಕ್ ಆದ ಕಥೆ ಏನು?

ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಯಶ್ ಅವರ ಮುಂದಿನ ಚಿತ್ರವು ಪಕ್ಕಾ ಆ್ಯಕ್ಷನ್ ಹಾಗೂ ಎಮೋಷನಲ್ ಕಥಾಹಂದರವನ್ನು ಹೊಂದಿರಲಿದೆಯಂತೆ. ಐಎಂಡಿಬಿಯಲ್ಲಿ ಚಿತ್ರದ ಕಥೆಯ ಬಗ್ಗೆಯೂ ಬರೆಯಲಾಗಿದೆ. ‘ವೈಯಕ್ತಿಕ ಕಾರಣಗಳಿಂದಾಗಿ ಭಾರತೀಯ ಸೇನೆಯನ್ನು ತೊರೆಯುವ ಮಿಲಿಟರಿ ಅಧಿಕಾರಿ, ನಂತರ ಸ್ಥಳೀಯ ಪೊಲೀಸ್ ಪಡೆಗೆ ಸೇರಲು ನಿರ್ಧರಿಸುತ್ತಾನೆ. ತನ್ನ ಜೀವನದ ಯಾವುದೇ ಸವಾಲುಗಳಲ್ಲೂ ಸೋಲನ್ನೇ ಕಾಣದ ಒಬ್ಬ ‘ಕ್ರೇಜಿ ಮತ್ತು ಮ್ಯಾಡ್ ಪೊಲೀಸ್’ ಅಧಿಕಾರಿಯ ಕಥೆಯೇ ಚಿತ್ರದ ಹೈಲೈಟ್ ಎಂದು ಬರೆಯಲಾಗಿದೆ.

ನರ್ತನ್ ನಿರ್ದೇಶನ; ತೃಪ್ತಿ ದಿಮ್ರಿ ನಾಯಕಿ?

ಈ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ಭರವಸೆಯ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಹಾಗೂ ಸದ್ಯ ಬಾಲಿವುಡ್‌ನ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ತೃಪ್ತಿ ದಿಮ್ರಿ ಯಶ್ ಅವರಿಗೆ ನಾಯಕಿಯಾಗಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಇದು ನಿಜವೇ? ಮೂಡಿದೆ ಪ್ರಶ್ನೆ

‘ಟಾಕ್ಸಿಕ್’ ಸಿನಿಮಾ ಅಧಿಕೃತವಾಗಿ ಸೆಟ್ಟೇರುವುದಕ್ಕೂ ಮೊದಲು, ಯಶ್ ಮತ್ತು ನಿರ್ದೇಶಕ ನರ್ತನ್ ಜೋಡಿ ಹೊಸ ಸಿನಿಮಾ ಮಾಡಬೇಕಿತ್ತು ಎನ್ನುವುದು ಗಾಂಧಿನಗರದ ಹಳೆಯ ಸತ್ಯ. ಆದರೆ, ಕಾರಣಾಂತರಗಳಿಂದಾಗಿ ಆ ಪ್ರಾಜೆಕ್ಟ್ ಮುಂದೂಡಲ್ಪಟ್ಟು, ಯಶ್ ‘ಟಾಕ್ಸಿಕ್’ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಈಗ ಐಎಂಡಿಬಿಯಲ್ಲಿ ಕಾಣಿಸಿಕೊಂಡಿರುವ ಈ ಲೈನ್ ನೋಡಿ, ‘ನರ್ತನ್ ಮತ್ತು ಯಶ್ ಸಿನಿಮಾ ಈಗ ಮತ್ತೆ ಸೆಟ್ಟೇರುತ್ತಿದೆಯೇ?’ ಅಥವಾ ಇದು ಕೇವಲ ವದಂತಿಯೇ ಎನ್ನುವ ಪ್ರಶ್ನೆ ಮತ್ತು ಕುತೂಹಲ ಅಭಿಮಾನಿಗಳಲ್ಲಿ ದಟ್ಟವಾಗಿದೆ. ಕೆಲವರು ಐಎಂಡಿಬಿ ಪೇಜ್​​ನ ಫೇಕ್ ಆಗಿ ಎಡಿಟ್ ಮಾಡಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾದ ವಿಶ್ವ ದಾಖಲೆಯ ನಾಗಾಲೋಟಕ್ಕೆ ಬ್ರೇಕ್! – Kannada News | India Taste T20I Series Defeat For First Time In 1,050 Days

ಟೀಮ್ ಇಂಡಿಯಾದ ವಿಶ್ವ ದಾಖಲೆಯ ನಾಗಾಲೋಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಬ್ರೇಕ್ ಹಾಕಿರುವುದು ಮತ್ಯಾರೂ ಅಲ್ಲ, ಐರ್ಲೆಂಡ್ ತಂಡ. ಬೆಲ್​ಫಾಸ್ಟ್​ನಲ್ಲಿ ನಡೆದ ಭಾರತದ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯನ್ನು ಐರ್ಲೆಂಡ್ ತಂಡವು 2-0 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಭಾರತದ ಸತತ 16 ಟಿ20 ಸರಣಿಗಳ ಅಜೇಯ ನಾಗಾಲೋಟಕ್ಕೆ ಐರ್ಲೆಂಡ್ ಬ್ರೇಕ್ ಹಾಕಿದೆ.

ಆಗಸ್ಟ್ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಸೋಲಿನ ನಂತರ, ಟೀಮ್ ಇಂಡಿಯಾ ಕಳೆದ 1,050 ದಿನಗಳಿಂದ (ಸುಮಾರು 3 ವರ್ಷಗಳು) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ಒಂದು ದ್ವಿಪಕ್ಷೀಯ ಸರಣಿಯನ್ನು ಸೋತಿರಲಿಲ್ಲ. ಈ ವಿಶ್ವ ದಾಖಲೆ ಇದೀಗ ಕೊನೆಗೊಂಡಿದೆ.

ಸಾರ್ವಕಾಲಿಕ ದಾಖಲೆ:

ಟಿ20 ಇತಿಹಾಸದಲ್ಲಿ ಐಸಿಸಿ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳ ಪೈಕಿ ಭಾರತ ತಂಡದ ಈ 16 ಸರಣಿಗಳ ಅಜೇಯ ನಾಗಾಲೋಟವೇ ಅತ್ಯುನ್ನತ ವಿಶ್ವ ದಾಖಲೆಯಾಗಿದೆ. ಇದಕ್ಕೂ ಮುನ್ನ ಪಾಕಿಸ್ತಾನ್ ತಂಡ 2016 ರಿಂದ 2018 ರ ಅವಧಿಯಲ್ಲಿ ಸತತ 11 ಸರಣಿಗಳನ್ನು ಗೆದ್ದುಕೊಂಡಿದ್ದರು.

ಆದರೆ 2023 ರಿಂದ ಸರಣಿ ಗೆಲುವಿನ ನಾಗಾಲೋಟ ಶುರು ಮಾಡಿದ್ದ ಟೀಮ್ ಇಂಡಿಯಾ ಸತತ 16 ಸರಣಿಗಳಲ್ಲಿ ಜಯಭೇರಿ ಬಾರಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ, ಐಸಿಸಿ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳ ಪೈಕಿ ಸತತವಾಗಿ ಅತ್ಯಧಿಕ ಸರಣಿ ಗೆದ್ದ ತಂಡವೆಂಬ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಈ ವಿಶ್ವ ದಾಖಲೆಯ ಓಟವು ಕೊನೆಗೊಂಡಿದೆ. ಸತತ 16 ಸರಣಿಗಳನ್ನು ಗೆದ್ದುಕೊಂಡಿದ್ದ ಟೀಮ್ ಇಂಡಿಯಾ 17ನೇ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಮುಗ್ಗರಿಸಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾ ಹೊಸ ಆರಂಭ ಪಡೆಯಬೇಕಿದೆ.

ಇದನ್ನೂ ಓದಿ: ಮೆಸ್ಸಿ ಪಡೆಗೆ ರತ್ನಗಂಬಳಿ: ಅರ್ಜೆಂಟೀನಾ ಫೈನಲ್ ಹಾದಿ ಸುಲಭ!

ಭಾರತ ಇಂಗ್ಲೆಂಡ್ ಸರಣಿ ಯಾವಾಗ?

ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ಜುಲೈ 1 ರಿಂದ ಶುರುವಾಗಲಿದೆ. ಇಂಗ್ಲೆಂಡ್​ನಲ್ಲಿ ಜರುಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನಾಡಲಿದೆ. ಈ ಐದು ಮ್ಯಾಚ್​ಗಳ ಮೂಲಕ ಭಾರತ ತಂಡವು ಗೆಲುವಿನ ಲಯಕ್ಕೆ ಮರಳಬೇಕಾದ ಅನಿವಾರ್ಯತೆ ಇದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ vs ಇಂಗ್ಲೆಂಡ್ ಟಿ20 ಸರಣಿ ವೇಳಾಪಟ್ಟಿ 2026:

ಪಂದ್ಯ ದಿನಾಂಕ (2026) ಕ್ರೀಡಾಂಗಣ (ಸ್ಥಳ) ಸಮಯ (ಭಾರತೀಯ ಕಾಲಮಾನ)
1ನೇ ಟಿ20 ಜುಲೈ 1, ಬುಧವಾರ ರಿಸರ್‌ಸೈಡ್ ಗ್ರೌಂಡ್, ಚೆಸ್ಟರ್-ಲೆ-ಸ್ಟ್ರೀಟ್ ರಾತ್ರಿ 10:00 ಗಂಟೆಗೆ
2ನೇ ಟಿ20 ಜುಲೈ 4, ಶನಿವಾರ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ ರಾತ್ರಿ 7:00 ಗಂಟೆಗೆ
3ನೇ ಟಿ20 ಜುಲೈ 7, ಮಂಗಳವಾರ ಟ್ರೆಂಟ್ ಬ್ರಿಡ್ಜ್, ನಾಟಿಂಗ್‌ಹ್ಯಾಮ್ ರಾತ್ರಿ 10:00 ಗಂಟೆಗೆ
4ನೇ ಟಿ20 ಜುಲೈ 9, ಗುರುವಾರ ಕೌಂಟಿ ಗ್ರೌಂಡ್, ಬ್ರಿಸ್ಟಲ್ ರಾತ್ರಿ 10:00 ಗಂಟೆಗೆ
5ನೇ ಟಿ20 ಜುಲೈ 11, ಶನಿವಾರ ದಿ ರೋಸ್ ಬೌಲ್ (ಯುಟಿಲಿಟಾ ಬೌಲ್), ಸೌತಾಂಪ್ಟನ್ ರಾತ್ರಿ 7:00 ಗಂಟೆಗೆ

ಈ ಐದು ಮ್ಯಾಚ್​ಗಳ ಸರಣಿ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿಯು ಜುಲೈ 14 ರಿಂದ ಶುರುವಾಗಲಿದೆ.

Published On – 11:49 am, Mon, 29 June 26

Source link

ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು! – Kannada News | Karnataka Rain Update: Gokarna Temple Submerged Amid Heavy Rain; North Karnataka Faces Drought Scare

ಬೆಂಗಳೂರು, ಜೂನ್ 29: ರಾಜ್ಯದಲ್ಲಿ ಒಂದೆಡೆ ವರುಣನ ಆರ್ಭವಿದ್ದರೆ, ಇನ್ನೊಂದೆಡೆ ಬರಗಾಲದ ಆತಂಕ ಎದುರಾಗಿದೆ. ಕಾರವಾರ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಗೋಕರ್ಣದಲ್ಲಂತೂ ನಿರಂತರ 36 ಗಂಟೆಗಳ ಮಳೆಗೆ ಗೋಕರ್ಣದ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನೀರು ನುಗ್ಗಿ, ಆತ್ಮಲಿಂಗವೂ ಜಲಾವೃತವಾಗಿದೆ. ಗೋಕರ್ಣದ ಬೀದಿಗಳು ಹಾಗೂ ಅಂಗಡಿಗಳು ನೀರಿನಿಂದ ಆವೃತವಾಗಿ ಭಕ್ತರು, ವ್ಯಾಪಾರಿಗಳು ಪರದಾಡಿದರು. ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿಯೂ ಹೊಳೆಯಂತಾಗಿತ್ತು.

ಆದರೆ ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟು ಬರಗಾಲದ ಆತಂಕ ಶುರುವಾಗಿದೆ. ಕೊಪ್ಪಳ, ಬೀದರ್ ಸೇರಿ ಹಲವು ಜಿಲ್ಲೆಗಳಲ್ಲಿ ಇನ್ನೂ ಮಳೆಗಾಗಿ ರೈತರು ಆಕಾಶ ನೋಡುತ್ತಾ, ಒಣ ಭೂಮಿಯಲ್ಲೇ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಮಳೆಯಿಲ್ಲದಿದ್ದರೆ ಬೆಳೆಯಿಲ್ಲ, ಬೆಳೆಯಿಲ್ಲದಿದ್ದರೆ ಹೊಟ್ಟೆಗೆ ಕೂಳಿಲ್ಲದಂತಹ ಪರಿಸ್ಥಿತಿ ಎದುರಾಗಬಹುದೆಂಬ ಭಯ ರೈತರನ್ನು ಕಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಟ್ಕಾ, ಪಾನ್ ಮಸಾಲಾದಲ್ಲಿ ಡ್ರಗ್ಸ್ ಪತ್ತೆಯಾದ್ರೆ ಸಂಪೂರ್ಣ ಬ್ಯಾನ್: ಸಿಎಂ ಡಿಕೆ ಶಿವಕುಮಾರ್ ಕಠಿಣ ಎಚ್ಚರಿಕೆ – Kannada News | CM DK Shivakumar Warns: Says Karnataka Will Ban Pan Masala and Gutka if Narcotics, Drugs Found In Products

ಬೆಂಗಳೂರು, ಜೂನ್ 29: ಗುಟ್ಕಾ ಮತ್ತು ಪಾನ್ ಮಸಾಲಾದಂಥ ತಂಬಾಕು ಉತ್ಪನ್ನಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಾದಕ ದ್ರವ್ಯಗಳು ಇರುವುದು ಪತ್ತೆಯಾದರೂ ಸಹ ರಾಜ್ಯದಲ್ಲಿ ಅವುಗಳನ್ನು ತಕ್ಷಣವೇ ನಿಷೇಧಿಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ‘ನಶಾ ಮುಕ್ತ್ ಭಾರತ್ (ಮಾದಕವಸ್ತು ಮುಕ್ತ ಭಾರತ)’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಕರಿಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಕಂದಾಯ ನಷ್ಟವಾದ್ರೂ ಪರವಾಗಿಲ್ಲ, ಆರೋಗ್ಯ ಮುಖ್ಯ: ಡಿಕೆಶಿ

ಕೆಲವರು ಪಾನ್ ಮಸಾಲಾ ಹಾಗೂ ಗುಟ್ಕಾ ಸೇವಿಸಿ ಕಿಕ್ ಅಥವಾ ಅಮಲು ಪಡೆದುಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದ ಡಿಕೆ ಶಿವಕುಮಾರ್, ‘ನಾನು ಎಲ್ಲಾ ತಯಾರಕರಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಈ ಉತ್ಪನ್ನಗಳ ನಿಷೇಧದಿಂದ ಸರ್ಕಾರಕ್ಕೆ ಸುಮಾರು 100 ಕೋಟಿ ರೂಪಾಯಿಗಳಷ್ಟು ಕಂದಾಯ ನಷ್ಟವಾಗಬಹುದು. ಆದರೆ, ಜನರ ಜೀವ ಹಾಗೂ ಯುವ ಪೀಳಿಗೆಯ ಭವಿಷ್ಯದ ಮುಂದೆ ನಮಗೆ ಹಣ ಮುಖ್ಯವಲ್ಲ. ನಿಮ್ಮ ಉತ್ಪನ್ನಗಳಲ್ಲಿ ಸಣ್ಣ ಪ್ರಮಾಣದ ಡ್ರಗ್ಸ್ ಮಿಶ್ರಣ ಮಾಡಿರುವುದು ಕಂಡುಬಂದರೂ ಸಹ ಇಡೀ ಕರ್ನಾಟಕದಲ್ಲಿ ಇವುಗಳ ಮಾರಾಟವನ್ನು ನಿಷೇಧಿಸಲು ನಾನು ಹಿಂಜರಿಯುವುದಿಲ್ಲ. ತಯಾರಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗಣ್ಯರ ಉಪಸ್ಥಿತಿ: ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ

ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಮಾದಕವಸ್ತುಗಳ ಚಟವು ಕುಟುಂಬಗಳು, ಸಮುದಾಯಗಳು ಹಾಗೂ ದೇಶದ ಭವಿಷ್ಯಕ್ಕೆ ದೊಡ್ಡ ಆತಂಕ ತಂದೊಡ್ಡಿದೆ ಎಂದು ಕಳವಳ ವ್ಯಕ್ತಪಡಿಸಿದರು. ಬಲವಾದ ಇಚ್ಛಾಶಕ್ತಿಯಿಂದ ಮಾತ್ರ ಇಂತಹ ಪಿಡುಗನ್ನು ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಂಗಳೂರಲ್ಲಿ ಡ್ರಗ್ಸ್ ಬೇಟೆ: 5.67 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, ಕೊಕೇನ್ ಜಪ್ತಿ, ಉಗಾಂಡಾ ಮಹಿಳೆ ಸೇರಿ ಮೂವರ ಬಂಧನ

ಇದೇ ಸಂದರ್ಭದಲ್ಲಿ ಆರ್ ಜಿ ಯುಹೆಚ್ ಎಸ್ ವಿಶ್ವವಿದ್ಯಾಲಯ ಸಂಯೋಜಿತ ಕಾಲೇಜುಗಳ 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು, ‘ನಶಾ ಮುಕ್ತ್ ಭಾರತ್’ ನಿರ್ಮಾಣದ ರಾಯಭಾರಿಗಳಾಗಿ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:44 am, Mon, 29 June 26

Source link

ರಾಮಮಂದಿರ ಕಾಣಿಕೆ ಲೂಟಿ ಪ್ರಕರಣದಲ್ಲಿ ಸ್ಫೋಟಕ ಟ್ವಿಸ್ಟ್!: ಬ್ಯಾಂಕ್ ಉದ್ಯೋಗಿಗಳಿಗೆ 3 ತಿಂಗಳ ಹಿಂದೆಯೇ ಸಿಕ್ಕಿತ್ತು ಕಳ್ಳತನದ ಸುಳಿವು – Kannada News | Ram Mandir Donation Theft: Trust Officials Resign Amidst SBI’s Unheeded Warning

ಅಯೋಧ್ಯಾ, ಜೂ.29: ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಭಕ್ತರು ಸಮರ್ಪಿಸಿದ ಕೋಟ್ಯಂತರ ರೂಪಾಯಿ ಕಾಣಿಕೆ ಹಣದ ಕಳ್ಳತನ ಪ್ರಕರಣದ ತನಿಖೆಯಲ್ಲಿ ಈಗ ದಿನಕ್ಕೊಂದು ಸ್ಫೋಟಕ ಸತ್ಯಗಳು ಬಿಚ್ಚಿಕೊಳ್ಳುತ್ತಿವೆ. ಸುಮಾರು ಮೂರು ತಿಂಗಳ ಹಿಂದೆಯೇ ಕಾಣಿಕೆ ಹಣ ದುರುಪಯೋಗವಾಗುತ್ತಿರುವ ಶಂಕೆ ವ್ಯಕ್ತಪಡಿಸಿ, ಹಣ ಎಣಿಕೆ ಮಾಡುವ ಸಿಬ್ಬಂದಿಯನ್ನು ಬದಲಾಯಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಿಫಾರಸು ಮಾಡಿತ್ತು. ಆದರೆ, ಟ್ರಸ್ಟ್‌ನ ಪ್ರಭಾವಿ ಪದಾಧಿಕಾರಿಗಳ ಹಸ್ತಕ್ಷೇಪದಿಂದಾಗಿ ಬ್ಯಾಂಕ್ ಅಧಿಕಾರಿಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗಿತ್ತು ಎಂಬ ಭೀಕರ ಸತ್ಯ ಈಗ ಬೆಳಕಿಗೆ ಬಂದಿದೆ.

ರಾಮಮಂದಿರದ ಕಾಣಿಕೆ ಎಣಿಕೆ ಪ್ರಕ್ರಿಯೆಗಾಗಿ ಎಸ್‌ಬಿಐ ಬ್ಯಾಂಕ್ ಒಂದು ಔಟ್‌ಸೋರ್ಸಿಂಗ್ ಕಂಪನಿಯ ಮೂಲಕ ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ರಮಾಶಂಕರ್ ಮಿಶ್ರಾ, ಅವನೀಶ್ ಮತ್ತು ಕರುಣೇಶ್ ಶುಕ್ಲಾ ಸೇರಿದಂತೆ ಹಲವರನ್ನು ನೇಮಕ ಮಾಡಿತ್ತು. ಇವರಿಗೆ ಬ್ಯಾಂಕ್ ಸಂಬಳ ನೀಡುತ್ತಿತ್ತಾದರೂ, ಈ ಇಡೀ ಸಿಬ್ಬಂದಿ ವರ್ಗವು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸದಸ್ಯ ಡಾ. ಅನಿಲ್ ಮಿಶ್ರಾ ಅವರ ಆಪ್ತರು ಹಾಗೂ ಸಂಬಂಧಿಕರಾಗಿದ್ದರು.

ಮೂರು ತಿಂಗಳ ಹಿಂದೆ ಬ್ಯಾಂಕ್ ಇವರನ್ನು ತೆಗೆದುಹಾಕಲು ಮುಂದಾದಾಗ, ಈ ಇಬ್ಬರು ಪದಾಧಿಕಾರಿಗಳು ತಮ್ಮ ಅಧಿಕಾರವನ್ನು ಬಳಸಿ ಸಿಬ್ಬಂದಿಯ ರಕ್ಷಣೆಗೆ ನಿಂತಿದ್ದರು. ಪರಿಣಾಮವಾಗಿ ಯಾರಿಗೂ ತೊಂದರೆಯಾಗದೆ ಕಾಣಿಕೆ ಹಣದ ಲೂಟಿ ಅವಿರತವಾಗಿ ಸಾಗಿತ್ತು. ಪ್ರಸ್ತುತ ಪೊಲೀಸರು ಟಿನ್ನು ಯಾದವ್ ಸೇರಿದಂತೆ ಒಟ್ಟು 8 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾಣಿಕೆ ಕಳ್ಳತನ ಪ್ರಕರಣ ಕೇವಲ ಔಟ್‌ಸೋರ್ಸಿಂಗ್ ಸಿಬ್ಬಂದಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಎಣಿಕೆಯ ಮೇಲ್ವಿಚಾರಣೆ ನಡೆಸಬೇಕಿದ್ದ ಇಬ್ಬರು ಬ್ಯಾಂಕ್ ಉದ್ಯೋಗಿಗಳೂ ಈ ಲೂಟಿಯಲ್ಲಿ ನೇರವಾಗಿ ಶಾಮೀಲಾಗಿದ್ದರು. ಇವರ ಸಂಪೂರ್ಣ ಸಮ್ಮತಿಯೊಂದಿಗೇ ಭಕ್ತರ ಹಣವನ್ನು ದೋಚಲಾಗುತ್ತಿತ್ತು ಎಂಬುದಕ್ಕೆ ವಿಶೇಷ ತನಿಖಾ ತಂಡಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಶೀಘ್ರದಲ್ಲೇ ಈ ಇಬ್ಬರು ಬ್ಯಾಂಕ್ ಸಿಬ್ಬಂದಿಯನ್ನೂ ಪೊಲೀಸರು ಬಂಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಮಜಾ ಮಾಡಲು ಹೋಗಿ ಹೆಣವಾಗಿ ಮರಳಿದ ಪ್ರವಾಸಿಗ; 10 ಅಡಿ ಎತ್ತರದಿಂದ ಸ್ವಿಮ್ಮಿಂಗ್ ಪೂಲ್‌ಗೆ ಜಂಪ್ ಮಾಡಿದ ಯುವಕ ಸ್ಥಳದಲ್ಲೇ ಸಾವು

ಮತ್ತೊಂದೆಡೆ, ಪ್ರಕರಣದ ಗಂಭೀರತೆ ಅರಿತು ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಈ ಬೆಳವಣಿಗೆಯ ನಡುವೆ ಜ್ಯೋತಿರ್ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಟ್ರಸ್ಟ್ ವಿರುದ್ಧ ಭಾರಿ ವಾಗ್ದಾಳಿ ನಡೆಸಿದ್ದಾರೆ. “ರಾಮಮಂದಿರದ ಕಾಣಿಕೆ ಹಣದ ಏರುಪೇರು ಆಗಲು ಮುಖ್ಯವಾಗಿ ಟ್ರಸ್ಟ್‌ನ ಕೋಷಾಧಿಕಾರಿ ಗೋವಿಂದ ದೇವ್ ಗಿರಿ ಅವರೇ ಮೊದಲ ಜವಾಬ್ದಾರರು. ಅದರ ನಂತರ ಅಲ್ಲಿನ ಎಲ್ಲಾ ಕೆಲಸಗಳಲ್ಲಿ ಸಕ್ರಿಯರಾಗಿದ್ದ ಅನಿಲ್ ಮಿಶ್ರಾ ಅವರ ಹೊಣೆಗಾರಿಕೆ ಬರುತ್ತದೆ. ಈ ಲೂಟಿಯಲ್ಲಿ ಚಂಪತ್ ರಾಯ್ ಅವರ ಜವಾಬ್ದಾರಿ ಮೂರನೇ ನಂಬರ್‌ನಲ್ಲಿದೆ. ಹೀಗಿದ್ದರೂ ನೀವು ಕೇವಲ ಚಂಪತ್ ರಾಯ್ ಅವರನ್ನು ಮೊದಲ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಯಾವ ನ್ಯಾಯ?” ಎಂದು ಪ್ರಶ್ನಿಸುವ ಮೂಲಕ ತನಿಖೆಯ ದಿಕ್ಕಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮಮಂದಿರದ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಈ ಆರ್ಥಿಕ ಹಗರಣದ ತನಿಖೆಯನ್ನು ಯೋಗಿ ಆದಿತ್ಯನಾಥ್ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಹಲವು ಪ್ರಭಾವಿಗಳ ಬಂಧನವಾಗುವ ಮುನ್ಸೂಚನೆ ಸಿಕ್ಕಿದೆ ಎಂದು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮೇಜರ್ ಟ್ವಿಸ್ಟ್; ಶಾನ್ವಿ-ತರುಣ್ ಮದುವೆ – Kannada News | Naa Ninna Bidalare: Shanvi Tarun Marriage Shocks Sharath! Revenge Twist in Zee Kannada Serial

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ನಾ ನಿನ್ನ ಬಿಡಲಾರೆ’ ಈಗ ಅತ್ಯಂತ ಕುತೂಹಲಕಾರಿ ತಿರುವೊಂದನ್ನು ಪಡೆದುಕೊಂಡಿದೆ. ಇಷ್ಟು ದಿನ ಕಥಾನಾಯಕ ಶರತ್ ಮತ್ತು ತರುಣ್ ನಡುವೆ ನಡೆಯುತ್ತಿದ್ದ ಜಗಳ ಹಾಗೂ ಈರ್ಷ್ಯೆ ಈಗ ಮದುವೆಯ ರೂಪ ಪಡೆದು ಇಡೀ ಕುಟುಂಬಕ್ಕೆ ಶಾಕ್ ನೀಡಿದೆ. ಇತ್ತೀಚಿನ ಪ್ರೋಮೊದಲ್ಲಿ ಶರತ್‌ನ ತಂಗಿ ಶಾನ್ವಿ ಹಾಗೂ ತರುಣ್ ಇಬ್ಬರೂ ಮದುವೆಯಾಗಿ ಮನೆಗೆ ಬರುವ ಮೂಲಕ ಎಲ್ಲರಿಗೂ ಆಘಾತ ನೀಡಿದ್ದಾರೆ. ಆದರೆ, ಈ ಮದುವೆಯ ಹಿಂದೆ ಪ್ರೀತಿಗಿಂತ ಹೆಚ್ಚಾಗಿ ದ್ವೇಷ ಅಡಗಿದೆ ಎನ್ನುವುದು ಪ್ರೇಕ್ಷಕರಿಗೆ ಮಾತ್ರ ತಿಳಿದಿರುವ ರಹಸ್ಯ.

ಶರತ್‌ಗೆ ಪಾಠ ಕಲಿಸಲು ಶಾನ್ವಿ ಬಾಳಿಗೆ ಬಂದ ತರುಣ್

ಧಾರಾವಾಹಿಯಲ್ಲಿ ಶರತ್ ಹಾಗೂ ತರುಣ್ ಯಾವಾಗಲೂ ಒಬ್ಬರನ್ನೊಬ್ಬರು ಕಂಡರೆ ಆಗದ ಶತ್ರುಗಳು. ಸದಾ ಇಬ್ಬರ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಶರತ್‌ನ ಅತಿಯಾದ ಕೋಪ ಮತ್ತು ಅಹಂಕಾರಕ್ಕೆ ಹೇಗಾದರೂ ಮಾಡಿ ದೊಡ್ಡ ಪಾಠ ಕಲಿಸಲೇಬೇಕು ಎಂದು ತರುಣ್ ನಿರ್ಧರಿಸಿದ್ದಾನೆ. ಇದಕ್ಕಾಗಿ ಆತ ಆರಿಸಿಕೊಂಡ ದಾರಿಯೇ ಶರತ್‌ನ ಮುದ್ದಿನ ತಂಗಿ ಶಾನ್ವಿ. ತಾನು ತುಂಬಾ ಒಳ್ಳೆಯವನಂತೆ ನಾಟಕವಾಡಿ, ಶಾನ್ವಿಯ ಮನಸ್ಸು ಗೆದ್ದು ಈಗ ಆಕೆಯನ್ನು ಮದುವೆಯಾಗಿ ಶರತ್ ಎದುರೇ ಬಂದು ನಿಂತಿದ್ದಾನೆ.

ಮದುವೆಯ ಪ್ರೋಮೊದಲ್ಲಿ ಹೈ ಡ್ರಾಮಾ:

ಬಿಡುಗಡೆಯಾಗಿರುವ ಹೊಸ ಪ್ರೋಮೊದಲ್ಲಿ, ತರುಣ್ ಮತ್ತು ಶಾನ್ವಿ ಮದುವೆಯ ಮಾಲೆ ಧರಿಸಿ ಕೈ ಕೈ ಹಿಡಿದು ಶರತ್‌ನ ಮನೆಗೆ ಪ್ರವೇಶ ಮಾಡುತ್ತಾರೆ. ಇದನ್ನು ಕಂಡು ಇಡೀ ಕುಟುಂಬವೇ ಶಾಕ್​ಗೆ ಒಳಗಾಗುತ್ತದೆ. ತಂಗಿಯ ಈ ನಿರ್ಧಾರದಿಂದ ಕೋಪೋದ್ರಿಕ್ತನಾಗುವ ಶರತ್, ತರುಣ್‌ನ ಶರ್ಟ್ ಹಿಡಿದು ‘ನನ್ನ ತಂಗಿ ಜೀವನ ಹಾಳು ಮಾಡ್ತೀಯಾ?’ ಎಂದು ಆಕ್ರೋಶ ಹೊರಹಾಕುತ್ತಾನೆ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ

ಆದರೆ ಅಣ್ಣನ ಮಾತಿಗೆ ಅಡ್ಡಿಪಡಿಸುವ ಶಾನ್ವಿ, ‘ಸಾಕು ನಿಲ್ಲಿಸು ಅಣ್ಣ, ನಾನೇ ಇಷ್ಟಪಟ್ಟು ಇವರನ್ನು ಮದುವೆಯಾಗಿದ್ದೀನಿ’ ಎಂದು ತರುಣ್ ಪರವಾಗಿ ನಿಲ್ಲುತ್ತಾಳೆ. ಈ ಮಾತು ಕೇಳಿ ಶರತ್ ತೀವ್ರವಾಗಿ ನೊಂದರೆ, ಹಿನ್ನೆಲೆಯಲ್ಲಿ ನಿಂತಿರುವ ತರುಣ್ ತನ್ನ ಪ್ಲಾನ್ ವರ್ಕೌಟ್ ಆಗಿದ್ದಕ್ಕೆ ಮನಸಲ್ಲೇ ನಗುತ್ತಿರುವುದು ಕಾಣಿಸುತ್ತದೆ.

ತನ್ನ ತಂಗಿಯನ್ನೇ ದಾಳವಾಗಿಸಿಕೊಂಡು ಶರತ್‌ನ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಲು ಬಂದಿರುವ ತರುಣ್‌ನ ಅಸಲಿ ಮುಖ ಶಾನ್ವಿಗೆ ಯಾವಾಗ ತಿಳಿಯಲಿದೆ? ತಂಗಿಯ ಜೀವನವನ್ನು ತರುಣ್‌ನಿಂದ ಶರತ್ ಹೇಗೆ ಉಳಿಸುತ್ತಾನೆ? ಎಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕಿದೆ. ಈ ಕುತೂಹಲಕಾರಿ ಸಂಚಿಕೆಗಳು ಜೀ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version