IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿವೆ. 10 ತಂಡಗಳ ನಡುವಣ ಕದನದಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ 4 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ದ್ವಿತೀಯ ಸುತ್ತಿನಲ್ಲಿ, ಅಂದರೆ ಪ್ಲೇಆಫ್ ಸುತ್ತಿನಲ್ಲಿ ಒಟ್ಟು ನಾಲ್ಕು ಮ್ಯಾಚ್ಗಳು ನಡೆಯಲಿದೆ. (PC: IPL)
ಪ್ಲೇಆಫ್ ಸುತ್ತಿನಲ್ಲಿ ಮೊದಲು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಮ್ಯಾಚ್ನಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹಾಗೆಯೇ ಗೆಲ್ಲುವ ತಂಡ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡದೊಡನೆ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲಿದೆ. (PC: IPL)
ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸುತ್ತದೆ. ಅದರಂತೆ ಮೇ 31 ರಂದು ನಡೆಯಲಿರುವ ಫೈನಲ್ನಲ್ಲಿ ಮೊದಲ ಕ್ವಾಲಿಫೈಯರ್ ಹಾಗೂ ದ್ವಿತೀಯ ಕ್ವಾಲಿಫೈಯರ್ನಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿದೆ. ಈ ಎಲ್ಲಾ ನಾಲ್ಕು ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ… (PC: IPL)
ಮೇ 26, ಮಂಗಳವಾರ (ಕ್ವಾಲಿಫೈಯರ್ 1): ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) vs ಗುಜರಾತ್ ಟೈಟನ್ಸ್ (GT) ಸ್ಥಳ: ಎಚ್ಪಿಸಿಎ ಸ್ಟೇಡಿಯಂ, ಧರ್ಮಶಾಲಾ (PC: IPL)
ಮೇ 27, ಬುಧವಾರ (ಎಲಿಮಿನೇಟರ್): ಸನ್ರೈಸರ್ಸ್ ಹೈದರಾಬಾದ್ (SRH) vs ರಾಜಸ್ಥಾನ್ ರಾಯಲ್ಸ್ (RR), ಸ್ಥಳ: ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂ, ಮುಲ್ಲನ್ಪುರ್ (ನ್ಯೂ ಚಂಡೀಗಢ್) (PC: IPL)
ಮೇ 29, ಶುಕ್ರವಾರ (ಕ್ವಾಲಿಫೈಯರ್ 2): ಕ್ವಾಲಿಫೈಯರ್ 1 ರ ಸೋತ ತಂಡ vs ಎಲಿಮಿನೇಟರ್ ಪಂದ್ಯದ ಗೆದ್ದ ತಂಡ, ಸ್ಥಳ: ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂ, ಮುಲ್ಲನ್ಪುರ್ (ನ್ಯೂ ಚಂಡೀಗಢ್) (PC: IPL)
ಮೇ 31, ಭಾನುವಾರ (ಫೈನಲ್ ಮ್ಯಾಚ್): ಕ್ವಾಲಿಫೈಯರ್ 1 ರ ಗೆದ್ದ ತಂಡ vs ಕ್ವಾಲಿಫೈಯರ್ 2 ರ ಗೆದ್ದ ತಂಡ, ಸ್ಥಳ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ (PC: IPL)
ಸಾಮಾನ್ಯವಾಗಿ ಮಲಯಾಳಂ ಚಿತ್ರರಂಗ ಎಂದರೆ ತಕ್ಷಣ ನೆನಪಿಗೆ ಬರುವುದು ಕಂಟೆಂಟ್ ಆಧಾರಿತ ಸಿನಿಮಾಗಳು. ಅಲ್ಲಿ ನೂರು-ಇನ್ನೂರು ಕೋಟಿ ರೂಪಾಯಿಗಳ ಬಿಗ್ ಬಜೆಟ್ ಚಿತ್ರಗಳು ಸಿದ್ಧವಾಗುವುದು ತೀರಾ ವಿರಳ. ಬಹುತೇಕ ಸಿನಿಮಾಗಳು ಅತಿ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿ, ಸಾಕಷ್ಟು ಸದ್ದು ಮಾಡುತ್ತವೆ. ಮಾಲಿವುಡ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವುದಿಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯ ಈಗ ಬದಲಾಗುತ್ತಿದೆ. ಇದಕ್ಕೆ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ (Drishyam 3) ಹೊಸ ಸೇರ್ಪಡೆ.
ನಿರ್ದೇಶಕ ಜೀತು ಜೋಸೆಫ್ ಮತ್ತು ಮೋಹನ್‌ಲಾಲ್ ಕಾಂಬಿನೇಷನ್‌ನ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕೇವಲ ಕಂಟೆಂಟ್ ಬಲದಿಂದಲೇ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾಗಳೇ ಬಾಕ್ಸ್ ಆಫೀಸ್ ಅಲ್ಲಿ ಸೊರಗುತ್ತಿರುವಾಗ ಜಾರ್ಜ್ ಕುಟ್ಟಿ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾನೆ.
ಕೇವಲ 4 ದಿನಕ್ಕೆ 141 ಕೋಟಿ ರೂ. ಗಳಿಕೆ
ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ ದಾಖಲೆಯ ಗಳಿಕೆ ಮಾಡಿದೆ. 4ನೇ ದಿನವಾದ ಭಾನುವಾರ ಒಂದೇ ದಿನ ಭಾರತದಲ್ಲಿ 5,270 ಶೋಗಳಿಂದ ಬರೋಬ್ಬರಿ 13.95 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ 63.34 ಕೋಟಿ ರೂಪಾಯಿ ದಾಟಿದ್ದು, ನೆಟ್ ಕಲೆಕ್ಷನ್ 54.55 ಕೋಟಿ ರೂಪಾಯಿಗೆ ಬಂದು ತಲುಪಿದೆ.
ಕೇರಳ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ‘ದೃಶ್ಯಂ 3’ ಸುನಾಮಿ ಎಬ್ಬಿಸಿದೆ. 4ನೇ ದಿನ ವಿದೇಶದಲ್ಲಿ13.00 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಚಿತ್ರ, ಒಟ್ಟು ಓವರ್‌ಸೀಸ್ ಗ್ರಾಸ್ ಕಲೆಕ್ಷನ್ ಅನ್ನು 78.00 ಕೋಟಿ ರೂಪಾಯಿಗೆ ತಲುಪಿದೆ. ಭಾರತ ಮತ್ತು ವಿದೇಶದ ಗಳಿಕೆಯನ್ನು ಒಟ್ಟುಗೂಡಿಸಿದರೆ, ‘ದೃಶ್ಯಂ 3’ ಕೇವಲ 4 ದಿನಗಳಲ್ಲಿ ವಿಶ್ವದಾದ್ಯಂತ 141.34 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಸ್ಟಾರ್ ವ್ಯಾಲ್ಯೂ ಜೊತೆಗೆ ಗಟ್ಟಿ ಕಥೆಯಿದ್ದರೆ ಸಾಕು, ದೊಡ್ಡ ಬಜೆಟ್ ಇಲ್ಲದಿದ್ದರೂ ಕೋಟಿ ಕೋಟಿ ಲೂಟಿ ಮಾಡಬಹುದು ಎಂಬುದನ್ನು ಮಲಯಾಳಂನ ಈ ಸಣ್ಣ ಬಜೆಟ್ ಸಿನಿಮಾ ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದೆ.
ಬೆಂಗಳೂರು, ಮೇ 25: ರಾಜ್ಯದ ಹಲವೆಡೆ ಇಂದು ಭಾರೀ ಮಳೆಯ (Weather) ಮುನ್ಸೂಚನೆಯಿದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ.ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಮುಖ್ಯಾಂಶಗಳು
ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ.
ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯ ಸಾಧ್ಯತೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಎಲ್ಲೆಲ್ಲಿ ಯೆಲ್ಲೋ ಅಲರ್ಟ್?
ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಪ್ರಾದೇಶಿಕವಾರು ಮಳೆ ಮುನ್ಸೂಚನೆ
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಎಲ್ಲಾ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಸಮಯದಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಬಹುದು. ಭಾರಿ ಮಳೆಯ ಮುನ್ಸೂಚನೆ ಇರುವ ಜಿಲ್ಲೆಗಳನ್ನು ಹೊರತುಪಡಿಸಿ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಲಘುವಾಗಿ ಸಾಧಾರಣ ಮಳೆಯಾಗಲಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ವಿಜಯನಗರ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಭಾಗಗಳಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇರಲಿದೆ.
ಮಳೆ ಮತ್ತು ಗುಡುಗು ಸಿಡಿಲಿನ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಮರದ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಹವಾಮಾನ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಸಾರ್ವಜನಿಕರಲ್ಲಿ ಮನವಿ ಮಾಡಿವೆ.
ನವದೆಹಲಿ, ಮೇ 25: ವಾಹನ ಸವಾರರಿಗೆ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಶಾಕ್ ಸಿಕ್ಕಿದ್ದು, ಕೇಂದ್ರ ಸರ್ಕಾರ11 ದಿನಗಳಲ್ಲಿ 4ನೇ ಬಾರಿ ದರ ಏರಿಕೆ ಮಾಡಿದೆ. ಪೆಟ್ರೋಲ್ ದರ ಲೀಟರ್ಗೆ 2.61 ರೂ. ಮತ್ತು ಡೀಸೆಲ್ 2.71 ರೂ. ಹೆಚ್ಚಳವಾಗಿದೆ. ಪರಿಷ್ಕೃತ ಪೆಟ್ರೋಲ್, ಡೀಸೆಲ್ ದರ ತಕ್ಷಣದಿಂದಲೇ ಜಾರಿಯಾಗಿದ್ದು, ಆ ಮೂಲಕ ದೆಹಲಿಯಲ್ಲಿಯೇ ಲೀಟರ್ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ. ರಾಜಧಾನಿಯಲ್ಲಿಂದು ಲೀಟರ್ ಪೆಟ್ರೋಲ್ ದರ 102.12 ರೂ. ಮತ್ತು ಲೀಟರ್ ಡೀಸೆಲ್ ದರ 95.20 ರೂ. ಆಗಿದೆ.
ಮುಖ್ಯಾಂಶಗಳು
ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಶಾಕ್
11 ದಿನಗಳಲ್ಲಿ 4ನೇ ಬಾರಿ ಇಂಧನ ದರ ಏರಿಕೆ
ಸತತ ಬೆಲೆ ಏರಿಕೆಗೆ ವಾಹನ ಸವಾರರು ಕಂಗಾಲು
ಮೇ 15ರಿಂದ ದರ ಪರಿಷ್ಕರಣೆ ಪುನರಾರಂಭವಾದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಒಟ್ಟು ಸುಮಾರು 7.5 ರೂ. ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ತೈಲ ಮಾರುಕಟ್ಟೆ ಕಂಪನಿಗಳ ಆಮದು ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಈ ದರ ಏರಿಕೆ ಮಾಡಲಾಗಿದೆ. ಈ ಕುರಿತು ಮಾತನಾಡಿರುವ ಸರ್ಕಾರಿ ಸ್ವಾಮ್ಯದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೆಷನ್ ಲಿಮಿಟೆಡ್ ಅಧಿಕಾರಿಗಳು, ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಜಾಗತಿಕ ಕಚ್ಚಾ ತೈಲ ದರ ಏರಿಕೆ ಹಾಗೂ ತೈಲ ಕಂಪನಿಗಳ ನಷ್ಟವೇ ಇಂಧನ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಹಲವು ತಿಂಗಳುಗಳಿಂದ ಉಂಟಾಗಿರುವ ತಡೆ ಮತ್ತು ವ್ಯತ್ಯಯಗಳಿಂದ ಜಾಗತಿಕ ಇಂಧನ ಸಾಗಣೆ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಿದ್ದು, ಮಧ್ಯಪ್ರಾಚ್ಯದಿಂದ ತೈಲ ಮತ್ತು ಅನಿಲವನ್ನು ಆಮದು ಮಾಡುವ ದೇಶಗಳ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಸಂಘರ್ಷದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 65-70 ಡಾಲರ್‌ನಿಂದ 110-115 ಡಾಲರ್‌ಗೆ ಏರಿಕೆಯಾಗಿದೆ. ಭಾರತ ತನ್ನ ಅಗತ್ಯದ ಸುಮಾರು ಶೇಕಡಾ 85 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಆರ್ಥಿಕತೆಯ ಮೇಲೆ ಪರಿಣಾಮ ಹೆಚ್ಚಾಗಿದೆ ಎನ್ನಲಾಗಿದೆ.
ಥಾಣೆ, ಮೇ 25: ಗಂಡ-ಹೆಂಡತಿ ನಡುವಿನ ಸಣ್ಣದೊಂದು ವಿವಾದ ಕೊಲೆ(Murder)ಯಲ್ಲಿ ಅಂತ್ಯಗೊಂಡಿದೆ. ಕೋಪದ ಭರದಲ್ಲಿ ಟಿವಿಯನ್ನೇ ಎತ್ತಿ ಪತ್ನಿ ತಲೆಗೆ ಹೊಡೆದ ಪರಿಣಾಮ ಆಕೆ ಕೂಡಲೇ ಸಾವನ್ನಪ್ಪಿದ್ದಾಳೆ. ಕೊಲೆ ಆರೋಪದ ಮೇಲೆ ಪತಿಯನ್ನು ಬಂಧಿಸಲಾಗಿದೆ. ಆತನಿಗೆ 21 ವರ್ಷ ವಯಸ್ಸು, ಆಕೆಗಿನ್ನು 20 ವರ್ಷ ವಯಸ್ಸಾಗಿತ್ತು.
ಥಾಣೆ ಜಿಲ್ಲೆಯ ಕಲ್ಯಾಣ್ ತಾಲೂಕಿನ ಬಲ್ಯಾನಿ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಕಲ್ಯಾಣ್ ತಾಲೂಕು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮುಖೇಶ್ ಧಾಗೆ ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಸತೀಶ್ ಕಲುರಾಮ್ ವಾಘೆ ಅಲಿಯಾಸ್ ಗುಡ್ಡು (21) ಎಂದು ಗುರುತಿಸಲಾಗಿದೆ. ಈತ ತನ್ನ 20 ವರ್ಷದ ಪತ್ನಿ ಸಾರಿಕಾಳ ನಡತೆಯ ಮೇಲೆ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದಂಪತಿ ಆಗಾಗ ಜಗಳವಾಡುತ್ತಿದ್ದರು.
ಶನಿವಾರ ತಡರಾತ್ರಿಯೂ ಇಬ್ಬರ ನಡುವೆ ಭಾರಿ ಜಗಳ ನಡೆದಿದೆ. ಈ ವೇಳೆ ತೀವ್ರ ಕೋಪಗೊಂಡ ಆರೋಪಿ ಸತೀಶ್, ಮನೆಯಲ್ಲಿದ್ದ ಟೆಲಿವಿಷನ್ ಸೆಟ್ ಅನ್ನು ಪತ್ನಿ ಸಾರಿಕಾಳ ತಲೆಯ ಮೇಲೆ ಬಲವಾಗಿ ಒಡೆದಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ, ನೀರಿನ ಪಾತ್ರೆಯಿಂದಲೂ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಸಾರಿಕಾ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಲ್ಯಾಣ್ ತಾಲೂಕು ಪೊಲೀಸರು, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿ ಪತಿ ಸತೀಶ್ ವಾಘೆನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 103(1) ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು (Amitabh Bachchan) ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಮುಂಬೈನಲ್ಲಿರುವ ತಮ್ಮ ಜುಹು ನಿವಾಸದ ಹೊರ ಭಾಗದಲ್ಲಿ ನೆರೆಯೋ ಅಭಿಮಾನಿಗಳತ್ತ ಕೈ ಬೀಸುತ್ತಾರೆ. ಕೆಲವೊಮ್ಮೆ ಗಿಫ್ಟ್ ಕೂಡ ನೀಡುತ್ತಾರೆ. ಆದರೆ, ಕಳೆದ ಭಾನುವಾರ (ಮೇ 24) ಒಂದು ದುಃಖಕರ ಘಟನೆ ನಡೆದಿದೆ. ತೀವ್ರ ಬಿಸಿಲು ಮತ್ತು ಜನದಟ್ಟಣೆಯಿಂದಾಗಿ ಅಮಿತಾಭ್ ನಿವಾಸದ ಮುಂದೆ ಜಮಾಯಿಸಿದ್ದ ಅಭಿಮಾನಿಯೋರ್ವ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆತಂಕ ಮೂಡಿಸಿದೆ.
ಅಮಿತಾಭ್ ಬಚ್ಚನ್ ಅವರು ಮುಂಬೈನಲ್ಲಿದ್ದರೆ ಪ್ರತಿ ಭಾನುವಾರ ತಮ್ಮ ‘ಜಲ್ಸಾ’ ನಿವಾಸದ ಹೊರಗೆ ಬಂದು ಅಭಿಮಾನಿಗಳಿಗೆ ದರ್ಶನ ನೀಡುವುದನ್ನು ವಾಡಿಕೆಯಾಗಿಸಿಕೊಂಡಿದ್ದಾರೆ. ಭಾನುವಾರವೂ ಬಿಗ್ ಬಿ ಬಿಳಿ ಬಣ್ಣದ ಉಡುಪಿನಲ್ಲಿ ಬಂದು ಕೈಬೀಸುತ್ತಿದ್ದಂತೆ, ಅವರನ್ನು ನೋಡಲು ಮುಗಿಬಿದ್ದಿದ್ದ ಜನಸಾಗರದಲ್ಲಿ ಒಬ್ಬ ಅಭಿಮಾನಿ ಪ್ರಜ್ಞೆ ಕಳೆದುಕೊಂಡಿದ್ದಾನೆ. ತಕ್ಷಣವೇ ಅಲ್ಲಿದ್ದ ಇತರ ಅಭಿಮಾನಿಗಳು ಅವರನ್ನು ಹಿಡಿದುಕೊಂಡು, ನೀರು ನೀಡಿ ಉಪಚರಿಸಿದ್ದಾರೆ. ನಂತರ ಆಸ್ಪತ್ರೆಗೆ ಕರೆದಯೊಯ್ಯಲಾಗಿದೆ ಎನ್ನಲಾಗಿದೆ. ಸದ್ಯ ಆ ಅಭಿಮಾನಿಯ ಆರೋಗ್ಯ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ಅವರು ಮುಂಬೈನ ವಿಐಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಈ ಸುದ್ದಿಯನ್ನು ಅವರ ಆಪ್ತ ಮೂಲಗಳು ಸಂಪೂರ್ಣವಾಗಿ ನಿರಾಕರಿಸಿವೆ. ಅಮಿತಾಭ್ ಅವರು ಪ್ರತಿ ತಿಂಗಳು ನಡೆಸುವ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ನಾನಾವತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ತಪಾಸಣೆ ಮುಗಿಸಿ ಅಂದೇ ಮನೆಗೆ ಮರಳಿದ್ದಾರೆ ಎಂಬ ಸ್ಪಷ್ಟನೆ ಸಿಕ್ಕಿತ್ತು. ಇದನ್ನು ಕೇಳಿದ ಬಳಿಕ ಅಭಿಮಾನಿಗಳು ನಿರಾಳರಾಗಿದ್ದರು.
‘ಕಲ್ಕಿ’ ಸೀಕ್ವೆಲ್‌ನಲ್ಲಿ ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್ ಅವರಿಗೆ ಈಗ ವಯಸ್ಸಾಗುತ್ತಿರುವುದರಿಂದ, ಅವರು ಮೊದಲಿನಂತೆ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಕೆಲಸಗಳನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರದ ಸೀಕ್ವೆಲ್‌ನಲ್ಲಿ ಅಮಿತಾಭ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ.
ಶಿವಮೊಗ್ಗ, ಮೇ 25: ಸರಗಳ್ಳತನ ಪ್ರಕರಣದಲ್ಲಿ ನವ ವಿವಾಹಿತನೋರ್ವ ಅರೆಸ್ಟ್ ಆಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮಂಜುನಾಥ್ ಬಂಧಿತ ಆರೋಪಿಯಾಗಿದ್ದು, ಕಾರಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಈತ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಓರ್ವ ಹೈಟೆಕ್ ಕಳ್ಳ ಎಂಬುದು ಗೊತ್ತಾಗಿದೆ. ಶಿವಮೊಗ್ಗ ತಾಲೂಕಿನ ಅಬ್ಬಲಗೇರಿ ಗ್ರಾಮದಲ್ಲಿ ಮೇ 23ರಂದು ನಡೆದಿದ್ದ ಸರಗಳ್ಳತನ ಪ್ರಕರಣದ ಬೆನ್ನುಬಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಖೆಡ್ಡಾಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.
ಮುಖ್ಯಾಂಶಗಳು
ಸರಗಳ್ಳತನ ಪ್ರಕರಣದಲ್ಲಿ ನವ ವಿವಾಹಿತ ಅರೆಸ್ಟ್
ಶಿವಮೊಗ್ಗದ ಅಬ್ಬಲಗೇರಿಯಲ್ಲಿ ನಡೆದಿದ್ದ ಕಳ್ಳತನ
ಕಾರಲ್ಲಿ ಬಂದು ಯುವತಿ ಸರ ಕದ್ದಿದ್ದ ಆರೋಪಿ
ಅಬ್ಬಲಗೇರಿ ಗ್ರಾಮದಲ್ಲಿ ಕಾರು ನಿಲ್ಲಿಸಿ ಪ್ರೇಮಿಗಳು ಮಾತನಾಡುತ್ತಿದ್ದ ವೇಳೆ ಕಾರಲ್ಲಿ ಬಂದಿದ್ದ ಆರೋಪಿ ಮಂಜುನಾಥ್, ಯುವತಿಯ ಕೊರಳಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ವೇಳೆ ಕಾರಿನ ನಂಬರ್ನ ಜೋಡಿ ಗಮನಿಸಿತ್ತು. ಆ ಆಧಾರದಲ್ಲಿ ಪ್ರೇಮಿಗಳು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸರ ಕಳ್ಳತನದ ಕುರಿತು ದೂರು ನೀಡಿದ್ದರು. ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು, ಹೈಟಕ್ ಕಳ್ಳ ಮಂಜುನಾಥ್ ಮತ್ತು ಆತ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳುವಾದ ಚಿನ್ನದ ಸರವನ್ನೂ ಪತ್ತೆ ಹಚ್ಚಿದ್ದಾರೆ.
ಇನ್ನು ಆರೋಪಿ ಮಂಜುನಾಥ್ ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ನಿವಾಸಿಯಾಗಿದ್ದು, ಕಳೆದ 10 ದಿನಗಳ ಹಿಂದೆಯಷ್ಟೇ ಈತನಿಗೆ ಮದುವೆಯಾಗಿತ್ತು. ಕಳ್ಳತನ ಮಾಡಿ ಶೋಕಿ ಜೀವನ ನಡೆಸುವ ಖಯಾಲಿ ಹೊಂದಿದ್ದ ಈತ ಮದುವೆ ಬಳಿಕವೂ ಅದೇ ಕೆಲಸ ಮುಂದುವರಿಸಿದ್ದ.ಈ ಹಿಂದೆಯೂ ಕೂಡ ಈತ ಇದೇ ರೀತಿ ಪ್ರೇಮಿಗಳನ್ನೇ ಟಾರ್ಗೇಟ್ ಮಾಡಿ ಚಿನ್ನಾಭರಣ ಕಳ್ಳತನ ಮಾಡಿದ್ದನಂತೆ. ಆದರೆ ಆ ವೇಳೆ ಈತನ ವಿರುದ್ಧ ಯಾವುದೇ ಕೇಸ್ ದಾಖಲಾಗಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಪ್ರೇಮಿಗಳು ನೀಡಿದ್ದ ಕಾರಿನ ನಂಬರ್ ಮಾಹಿತಿ ಅಧಾರದಲ್ಲಿ ತನಿಖೆಗಿಳಿದ ಪೊಲೀಸರು ಈತನನ್ನು ಪತ್ತೆ ಮಾಡಿದ್ದು, ಮದುವೆಗೆಂದು ಮಾಡಿದ್ದ ಅಲಂಕಾರ ಕಾರಿಗೆ ಇನ್ನೂ ಹಾಗೇ ಇರುವುದು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಮಾಡಬಾರದ್ದನ್ನು ಮಾಡಲು ಹೋದವನೀಗ ಪತ್ನಿ ಜೊತೆ ಸುಖ ಸಂಸಾರ ನಡೆಸುವ ಬದಲು ಜೈಲು ಪಾಲಾಗಿದ್ದಾನೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಶಿವಲಿಂಗಕ್ಕೆ ಅರಿಶಿಣ ಹಚ್ಚಬಾರದು ಯಾಕೆ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಶಿವಾರಾಧನೆಯಲ್ಲಿ ಅಭಿಷೇಕಕ್ಕೆ ವಿಶೇಷ ಮಹತ್ವವಿದೆ. ಶಿವನಿಗೆ ಹಾಲು, ಮೊಸರು, ತುಪ್ಪ, ಜೇನು, ವಿಭೂತಿ, ಬಿಲ್ವಪತ್ರೆ, ಅಕ್ಷತೆ, ಶುದ್ಧ ನೀರು, ಗಂಗಾಜಲ ಮತ್ತು ಶ್ರೀಗಂಧ ಮುಂತಾದ ಅನೇಕ ದ್ರವ್ಯಗಳಿಂದ ಅಭಿಷೇಕ ಮಾಡಲಾಗುತ್ತದೆ.
ಆದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವಲಿಂಗಕ್ಕೆ ಅರಿಶಿಣ ಅಥವಾ ಅರಿಶಿಣ ಮಿಶ್ರಿತ ನೀರನ್ನು ಅರ್ಪಿಸಬಾರದು. ಹೀಗೆ ಮಾಡಿದರೆ ಪೂಜೆಯ ಸಂಪೂರ್ಣ ಫಲ ದೊರೆಯುವುದಿಲ್ಲ ಎಂದು ಹೇಳಲಾಗುತ್ತದೆ. ಅರಿಶಿಣವು ಮಹಿಳೆಯರಿಗೆ ಪ್ರಿಯವಾದ ಸೌಂದರ್ಯವರ್ಧಕವಾಗಿದ್ದು, ಇದನ್ನು ಲಿಂಗಾಕಾರದ ಶಿವನ ಪುಲ್ಲಿಂಗ ಸ್ವರೂಪಕ್ಕೆ ಅರ್ಪಿಸುವುದು ಸೂಕ್ತವಲ್ಲ. ಬದಲಾಗಿ, ಶಿವಲಿಂಗದ ಕೆಳಗಿರುವ ಪಾಣಿಪೀಠವು ಪಾರ್ವತಿ ದೇವಿಯ ಅಂಶವನ್ನು ಪ್ರತಿನಿಧಿಸುವುದರಿಂದ, ಆ ಭಾಗಕ್ಕೆ ಅರಿಶಿಣವನ್ನು ಅರ್ಪಿಸಬಹುದು. ಶಿವನು ಲಯಕಾರಕ ಮತ್ತು ತಣ್ಣನೆಯ ದ್ರವ್ಯಗಳಿಂದ ಸಂತೃಪ್ತನಾಗುವ ದೇವರು. ಅರಿಶಿಣ ಅರ್ಪಣೆಯು ತಮೋಗುಣವನ್ನು ಹೆಚ್ಚಿಸಿ ಮನಸ್ಸಿನಲ್ಲಿ ವಿಕೃತ ಭಾವನೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆಯಿದೆ ಎಂದು ಗುರೂಜಿ ತಿಳಿಸಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 25, ಸೋಮವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು ಪರಾಭವನಾ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮರತು ಶುಕ್ಲ ಪಕ್ಷ ನವಮಿ, ಪುಬ್ಬ ನಕ್ಷತ್ರ, ಅರ್ಶನ ಯೋಗ, ಕೌಲವ ಕರಣಗಳಿಂದ ಕೂಡಿದೆ.ಇಂದು ರವಿ ವೃಷಭ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯ ಪುಬ್ಬ ನಕ್ಷತ್ರದಲ್ಲಿ ಸಂಚಾರ ಮಾಡುವುದರಿಂದ, ಇದು ಶಿವನ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ. ಶಿವನಾಮ ಜಪಿಸುವವರಿಗೆ ಲಯಕಾರಕನಾಗಿರುವ ಶಿವನು ಶುಭ ಫಲಗಳನ್ನು ನೀಡುತ್ತಾನೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ವ್ಯಾಘಾತ, ಕರಣ : ತೈತಿಲ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:33 – 09:09, ಯಮಗಂಡ ಕಾಲ 10:45 – 12:21, ಗುಳಿಕ ಕಾಲ 13:58 – 15:34.
ಮೇಷ ರಾಶಿ: ಇಂದು ದುಡುಕಿನ ನಿರ್ಧಾರಗಳನ್ನು ತಗೆದುಕೊಂಡು ಸಂಕಟಪಡಬೇಕಾದೀತು. ಸಂಗಾತಿಯೊಂದಿಗೆ ಉತ್ತಮ ಸಂವಾದ ನಡೆಯಲಿದೆ. ಪರರ ಅಸೂಯೆಗೆ ಔಷಧವಿಲ್ಲ. ಆರೋಗ್ಯವನ್ನು ಕಡೆಗಣಿಸಬೇಡಿ, ವಿಶ್ರಾಂತಿಗೆ ಒತ್ತುನೀಡಿ. ದಿನದ ಕೊನೆಗೆ ಒಂದು ಶುಭಸುದ್ದಿ ಕೇಳಲಿದ್ದೀರಿ. ಈ ದಿನ ಸಕಾರಾತ್ಮಕ ವಿಚಾರಕ್ಕೆ ಒತ್ತುಕೊಟ್ಟರೆ ಅದರತ್ತ ಸಾಗುತ್ತಿದೆ. ಮಾನಸಿಕವಾಗಿ ಋುಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿವೆ. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆ ತರುವಿರಿ.
ವೃಷಭ ರಾಶಿ: ಮಾತಿನಿಂದ ಮೆಚ್ಚುಗೆಯು ನಿಮಗೆ ಸಿಗಲಿದೆ. ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಜಾಹೀರಾತು ಕ್ಷೇತ್ರದವರಿಗೆ ಅಪೂರ್ವ ಯೋಜನೆ ಗೊತ್ತಾಗುವುದು. ಕೋಪಗೊಳ್ಳುವ ಬದಲು ಶಾಂತಿಯುತವಾಗಿ ಪರಿಸ್ಥಿತಿಯನ್ನು ಪರಿಹರಿಸಿದರೆ ಉತ್ತಮ. ನಿಮ್ಮೊಳಗೆ ಅಹಂಕಾರದಂತಹ ಪರಿಸ್ಥಿತಿ ಬೆಳೆಯಲು ಬಿಡಬೇಡಿ. ಇಂದು ನೀವು ಸಂತೋಷವಾಗಿರುವುದರಿಂದ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ.
ಮಿಥುನ ರಾಶಿ: ನಿಧಾನವಾಗಿ ಸಾಗುವ ಸಾಗುತ್ತಿರುವ ಕೆಲಸದಿಂದ ಬೇಸರವಾಗಲಿದೆ. ಕೆಲಸದಲ್ಲಿ ಬದಲಾವಣೆ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಯಿಂದ ದೊಡ್ಡ ಕೆಲಸವನ್ನೇ ಬಿಡಬೇಕಾಗುವುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಬಹುದು. ಉದ್ಯೋಗಿಗಳಿಗೆ ಉದ್ಯಮದಲ್ಲಿಉತ್ತಮ ಅವಕಾಶಗಳು ಬರಲಿವೆ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು. ನಿಮ್ಮ ವಸ್ತುವು ಕಳೆದುಹೋಗಬಹುದು. ಯಾವುದೇ ಉದ್ವೇಗಕ್ಕೆ ಒಳಗಾಗುವುದು ಬೇಡ.
ಕರ್ಕಾಟಕ ರಾಶಿ: ನಿಮ್ಮ ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ. ಸ್ನೇಹಿತರಿಂದ ಉತ್ತಮ ಸುದ್ದಿ ಕೇಳಬಹುದು. ಕೆಲವು ನಿರ್ಧಾರಗಳಲ್ಲಿ ಗೊಂದಲ ಉಂಟಾಗಬಹುದು, ಹಿರಿಯರ ಸಲಹೆ ಉಪಯುಕ್ತ. ಆರೋಗ್ಯದಲ್ಲಿ ಸಣ್ಣ ಅಸ್ವಸ್ಥತೆಗಳು ಕಾಣಿಸಬಹುದು. ಬಂಧುಗಳ ಮನೆಯಲ್ಲಿ ಇಂದು ನಿಮ್ಮ ವಾಸವಿರಲಿದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿಯನ್ನು ತೋರಿಸದೇ ಇರುವುದರಿಂದ ಬೈಯ್ಯುವಿರಿ. ನೀವು ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಸ್ಥಾನವನ್ನು ದುರ್ಬಲಗೊಳಿಸಬಹುದು.
ಸಿಂಹ ರಾಶಿ: ನಿರ್ಮಾಣದ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ದುರಾಸೆಯಿಂದ ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ. ಸತ್ಯ ಮತ್ತು ತಾಳ್ಮೆಯಿಂದ ಮಾತ್ರ ಇಂದಿನ ದಿನ ಸುಧಾರಿಸುತ್ತದೆ. ಸಂಜೆಗೆ ಹಿಂದಿನ ನಷ್ಟಗಳನ್ನು ಸರಿದೂಗಿಸಲು ಸಾಧ್ಯವಾಗುತ್ತದೆ. ನಿರಾಶೆ ಕೊನೆಗೊಳ್ಳುತ್ತದೆ ಮತ್ತು ಆಲೋಚನೆಯಲ್ಲಿ ಸಕಾರಾತ್ಮಕತೆ ಬರುತ್ತದೆ. ವೈವಾಹಿಕ ಜೀವನವನ್ನು ಇಂದು ಕೂಡ ಅತ್ಯಂತ ಸಂತೋಷದಿಂದ ಕಳೆಯುವಿರಿ. ಆರೋಗ್ಯದ ವಿಷಯದಲ್ಲಿ ಇಂದು ಸ್ವಲ್ಪ ತೊಂದರೆಯಾಗಬಹುದು. ಉದ್ಯಮಕ್ಕೆ ಹೊಸ ದಿಕ್ಕನ್ನು ಕೊಡುವ ಸಾಧ್ಯತೆ ಇದೆ.
ಕನ್ಯಾ ರಾಶಿ: ಆತ್ಮೀಯರೊಂದಿಗೆ ಸಂತೋಷದ ಕ್ಷಣಗಳ ನಿರೀಕ್ಷೆ. ನೀವು ಆರ್ಥಿಕ, ದೈಹಿಕ ಮತ್ತು ಮಾನಸಿಕ ಶಾಂತಿಯನ್ನು ಪಡೆಯುತ್ತೀರಿ. ಜಾಣ ಮರೆವನ್ನು ತೋರಿಸುವಿರಿ. ನಿಮ್ಮ ವೃತ್ತಿಯಲ್ಲಿ ಪ್ರಸಿದ್ಧರಾಗುತ್ತೀರಿ. ಇನ್ನೊಬ್ಬರ ವಸ್ತುಗಳ ಮೇಲೆ ಬಯಕೆ ಆಗಬಹುದು. ಆಸೆಗಳನ್ನು ಹಿಡಿತದಲ್ಲಿ ಇಡಿ. ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ. ನಿಮ್ಮ ವಿರೋಧಿಗಳಿಗೆ ನೀವು ತಲೆನೋವಾಗಿ ಉಳಿಯುತ್ತೀರಿ. ನಿಮ್ಮ ನೇರ ಮಾತುಗಳು ಇಷ್ಟವಾಗದ ಕಾರಣ ನಿಮ್ಮಿಂದ ಯಾರಾದರೂ ದೂರವಿರಬಹುದು.
ತುಲಾ ರಾಶಿ: ಹಣದ ಖರ್ಚು ನಿಯಂತ್ರಣದಲ್ಲಿ ಇರಲಿದೆ. ಆಪ್ತರೊಂದಿಗೆ ಸಣ್ಣ ವ್ಯಾಜ್ಯ ಸಾಧ್ಯವಿದೆ, ಬುದ್ದಿವಂತಿಕೆಯಿಂದ ಬಗೆಹರಿಸಿ. ಆರೋಗ್ಯ ಸುಧಾರಿತ ಸ್ಥಿತಿಯಲ್ಲಿದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ತುರ್ತು ನಿರ್ಣಯ ಬೇಕಾಗಬಹುದು. ಯಾರ ಅನುಭವವೂ ನಿಮ್ಮ ಗಣನೆಗೆ ಬರದು. ನಿಮ್ಮ ಖರೀದಿಯಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಭೋಗದ ವಿಧಾನಗಳು ಹೆಚ್ಚಾಗುತ್ತವೆ. ಮಕ್ಕಳಿಂದ ಬೇಸರವಾಗುವ ಸಾಧ್ಯತೆ ಇದೆ. ವ್ಯಾಪಾರ, ವ್ಯವಹಾರಗಳ ಮುನ್ನಡೆಗಾಗಿ ಪ್ರಯಾಣದ ಮಾತುಕತೆಯ ಸಾಧ್ಯತೆ ಇರುತ್ತದೆ.
ವೃಶ್ಚಿಕ ರಾಶಿ: ಸಂಗಾತಿಯೊಂದಿಗೆ ಸಮಯ ಕಳೆಯಲು ಅವಕಾಶ ಸಿಗಬಹುದು. ಉಪಾಯದಿಂದ ಗೆಲ್ಲುವ ದಾರಿಯನ್ನು ನೋಡಿ. ಮಕ್ಕಳ ಪ್ರಯತ್ನ ಫಲ ನೀಡಬಹುದು. ದಾಂಪತ್ಯ ಜೀವನದಲ್ಲಿ ಅನ್ನೋನ್ಯತೆ ಇರುತ್ತದೆ. ಕುಟುಂಬದ ಕೀರ್ತಿಯನ್ನು ಬೆಳೆಸುವವರಿದ್ದೀರಿ. ಮನೆಯಲ್ಲಿ ಸಹಕಾರ ಮತ್ತು ಸಂತೋಷದ ವಾತಾವರಣವೂ ಇರುತ್ತದೆ. ಯಾವುದೇ ವೆಚ್ಚದಲ್ಲಿ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ. ಇಲ್ಲದಿದ್ದರೆ ನಷ್ಟವು ನಿಮ್ಮದಾಗುತ್ತದೆ.
ಧನು ರಾಶಿ: ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ನೂತನ ಗೃಹನಿರ್ಮಾಣದ ಕನಸು ಕಾಣುವಿರಿ. ಈ ಸಮಯದಲ್ಲಿ ಆದಾಯ ಹೆಚ್ಚಳ ತರುತ್ತದೆ. ನಿಮ್ಮ ಆತ್ಮವಿಶ್ವಾಸ ಬಲವಾಗಿ ಉಳಿಯುತ್ತದೆ, ವಿಶ್ವಾಸಾರ್ಹ ಜನರೊಂದಿಗೆ ಮಾತ್ರ ಸಂಪರ್ಕದಲ್ಲಿರಿ. ನಕಾರಾತ್ಮಕ ವಿಚಾರಗಳ ಗಮನ ಕೊಟ್ಟು ನಿಮ್ಮ ಸಮಯವು ಹಾಳಾಗುವುದು. ನಿಮ್ಮಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ.
ಮಕರ ರಾಶಿ: ಬದಲಾಗಬೇಕು ಎನ್ನುವ ಹಂಬಲವು ನಿಮ್ಮಲ್ಲಿ ಅತಿಯಾಗುವುದು. ಪ್ರೀತಿಗೆ ಗೆಳೆಯರ ಸಹಾಯ ಸಿಗುವುದು. ಕೆಲವು ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಹಣದ ವ್ಯವಹಾರಗಳಲ್ಲಿ ಲಾಭದ ಸೂಚನೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಯಾವುದೇ ಕೌಟುಂಬಿಕ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಬಹುದು. ವ್ಯಾಪಾರದಲ್ಲಿನ ಹೊಸ ಒಪ್ಪಂದಗಳು ಲಾಭದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ. ಅಮೂಲ್ಯವಾದದ್ದನ್ನು ಕಳೆದುಕೊಳ್ಳುವಿರಿ.
ಕುಂಭ ರಾಶಿ: ಇಂದು ಆರ್ಥಿಕವಾಗಿ ಸ್ವಲ್ಪ ಒತ್ತಡ ಅನುಭವಿಸಬಹುದು ಆದರೆ ಅದು ತಾತ್ಕಾಲಿಕ. ಕೆಲಸದಲ್ಲಿ ಹಿರಿಯರಿಂದ ಶ್ಲಾಘನೆ ದೊರೆಯಬಹುದು. ಮನೆತನದ ಪ್ರತಿಷ್ಠೆಗೆ ಯೋಗ್ಯರೀತಿಯಲ್ಲಿ ವರ್ತಿಸುವಿರಿ. ಸಂಬಂಧಗಳಲ್ಲಿ ಸ್ಪಷ್ಟತೆ ಇಟ್ಟರೆ ಗೊಂದಲ ತಪ್ಪಬಹುದು. ವಾಹನ, ಮನೆ ಸಂಬಂಧಿತ ಕೆಲಸಗಳಿಗೆ ಅನುಕೂಲ. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗ, ವ್ಯವಹಾರಗಳಲ್ಲಿ ಉಲ್ಲಾಸಕರ ವಾತಾವರಣವಿರಲಿದೆ.
ಮೀನ ರಾಶಿ: ನಿಮ್ಮ ಹತ್ತಾರು ಕನಸುಗಳಲ್ಲಿ ಒಂದು ಸಾಕಾರಗೊಳ್ಳುವುದು. ಸುಮ್ಮನಿರುವುದು ಹಲವು ಕಲಹವನ್ನು ತಪ್ಪಿಸುವುದು. ಸಣ್ಣ ವಿಷಯಗಳಿಗೂ ಕೋಪಗೊಳ್ಳುವ ನಿಮ್ಮ ಅಭ್ಯಾಸವನ್ನು ಸುಧಾರಿಸಿ ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿ. ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಳೆಯ ಅನುಭವಗಳನ್ನು ನೆನಪಿಸಿಕೊಳ್ಳಿ. ನೀವು ಯಾವುದೇ ನಿರ್ಧಾರಕ್ಕೆ ಕಟ್ಟುಬೀಳದೇ ಸ್ವತಂತ್ರವಾಗಿ ಇರಲು ಬಯಸುವಿರಿ. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ.