International Olympic Day 2026: ಒಲಿಂಪಿಕ್ ದಿನವನ್ನು ಏಕೆ ಆಚರಿಸಲಾಗುತ್ತದೆ ಅದರ ಮಹತ್ವವೇನು? – Kannada News | International Olympic Day 2026: Why is Olympic Day celebrated and what is its significance?

ಅಂತಾರಾಷ್ಟ್ರೀಯ ಒಲಿಂಪಿಕ್‌ ದಿನImage Credit source: vecteezy

ಕ್ರೀಡೆಯು (Sports) ನಮ್ಮನ್ನು ಫಿಟ್‌ ಆಗಿರಿಸುವುದರ ಜೊತೆಗೆ, ದೈಹಿಕ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಮಾನಸಿಕ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ಅಷ್ಟೇ ಅಲ್ಲದೇ ನಿಯಮಿತವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಮನಸ್ಥಿತಿ ಸುಧಾರಿಸುತ್ತದೆ, ಶಿಸ್ತು, ಆತ್ಮವಿಶವಾಸ ಮತ್ತು ಸಾಮಾಜಿಕ ಕೌಶಲ್ಯಗಳು ಬೆಳೆಯುತ್ತವೆ. ಹಾಗಾಗಿ ಯುವಜನರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಲು , ಕ್ರೀಡಾ ಮೌಲ್ಯವನ್ನು ಬೆಳೆಸಲು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಜೂನ್‌ 23 ರಂದು ಅಂತಾರಾಷ್ಟ್ರೀಯ ಒಲಿಂಪಿಕ್‌ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ಒಲಿಂಪಿಕ್ ದಿನದ ಇತಿಹಾಸವೇನು?

1894 ರ ಜೂನ್ 23 ರಂದು, ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಸೋರ್ಬೊನ್ನೆ (ಪ್ಯಾರಿಸ್) ನಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ರಚಿಸಲಾಯಿತು. ಆಧುನಿಕ ಕ್ರೀಡೆಗಳನ್ನು ಸಂಘಟಿಸುವುದು, ಉತ್ತೇಜಿಸುವುದು ಈ ಸಮಿತಿಯ ಉದ್ದೇಶವಾಗಿತ್ತು. ಬಳಿಕ  ಆಧುನಿಕ ಒಲಿಂಪಿಕ್ ಕ್ರೀಡಾಕೂಟದ ಸ್ಥಾಪನೆಯ ಸ್ಮರಣಾರ್ಥವಾಗಿ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು ಅಂತಾರಾಷ್ಟ್ರೀಯ ಒಲಿಂಪಿಕ್ ದಿನವನ್ನು ಆಚರಿಸಲು ಮುಂದಾಯಿತು. 1948 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಒಲಿಂಪಿಕ್‌ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಒಲಿಂಪಿಕ್ ದಿನದ ಮಹತ್ವವೇನು?

  • ಒಲಿಂಪಿಕ್ ದಿನವು ಕ್ರೀಡೆ, ಆರೋಗ್ಯ ಮತ್ತು ಒಗ್ಗಟ್ಟಿನ ಆಚರಣೆಯಾಗಿದೆ.
  • ಕ್ರೀಡೆಗಳ ಮೂಲಕ, ನಾವು ಉತ್ತಮ ಭವಿಷ್ಯದತ್ತ ಸಾಗಬಹುದು ಹಾಗಾಗಿ ಈ ದಿನವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಮತ್ತು ಏಕತೆ ಮತ್ತು ಸ್ನೇಹವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
  • ಅಂತಾರಾಷ್ಟ್ರೀಯ ಒಲಿಂಪಿಕ್ ದಿನವು ಕ್ರೀಡೆಗಳ ಕಡೆಗೆ ಸಮರ್ಪಣೆ, ಗೌರವ ಮತ್ತು ಸಮಾನತೆಯ ಮನೋಭಾವವನ್ನು ಅಳವಡಿಸಿಕೊಳ್ಳಲು ನಮಗೆ ಸ್ಫೂರ್ತಿ ನೀಡುತ್ತದೆ.
  • ಅಂತಾರಾಷ್ಟ್ರೀಯ ಒಲಿಂಪಿಕ್ ದಿನವು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲು ಮತ್ತು ಅವರ ಸಾಧನೆಗಳನ್ನು ಆಚರಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಮತ್ತು ಈ ದಿನವು ಯುವಜನರು ತಮ್ಮ ಕ್ರೀಡಾ ಕನಸುಗಳನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತದೆ.

ಇದನ್ನೂ ಓದಿ: ಯೋಗಾಭ್ಯಾಸ ಮಾಡಲು ಸರಿಯಾದ ಸಮಯ ಯಾವುದು? ಇದರ ಪ್ರಯೋಜನಗಳೇನು?

ಕ್ರೀಡೆಗಳ ಆರೋಗ್ಯ ಪ್ರಯೋಜನಗಳು:

  • ಕ್ರೀಡೆಗಳು ಬೊಜ್ಜಿನ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಹೊರಾಂಗಣ ಆಟಗಳು ದೈಹಿಕ ವ್ಯಾಯಾಮವನ್ನು ಒದಗಿಸುತ್ತವೆ, ಇದು ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಕ್ರೀಡೆಗಳು ಹೃದಯರಕ್ತನಾಳದ ಸದೃಢತೆಯನ್ನು ಹೆಚ್ಚಿಸುವಲ್ಲಿಯೂ ಸಹಕಾರಿಯಾಗಿವೆ.
  • ಮೂಳೆಗಳು, ಸ್ನಾಯುಗಳು ಮತ್ತು ಆರೋಗ್ಯಕರ ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
  • ಉತ್ತಮ ದೈಹಿಕ ಸಮನ್ವಯ ಮತ್ತು ಸಮತೋಲನವನ್ನು ಅಭಿವೃದ್ಧಿಪಡಿಸಲು ಕ್ರೀಡೆಗಳು ಅತ್ಯಗತ್ಯ.
  • ನಿದ್ರೆ, ಮಾನಸಿಕ ಆರೋಗ್ಯ ಪ್ರಯೋಜನಗಳು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಕ್ರೀಡೆಗಳು ವಿಶೇಷ ಪಾತ್ರ ವಹಿಸುತ್ತವೆ ಎಂದು ಪರಿಗಣಿಸಲಾಗಿದೆ.
  • ಕ್ರೀಡೆಗಳು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕ್ರೀಡೆಗಳನ್ನು ಆಡುವುದರಿಂದ ಆತಂಕ ಮತ್ತು ಖಿನ್ನತೆಯನ್ನು ತಡೆಯಲು ಸಹಾಯವಾಗುತ್ತದೆ. ಆಟಗಳನ್ನು ಆಡುವುದರಿಂದ ಸಾಮಾಜಿಕ ಕೌಶಲ್ಯಗಳು ಸುಧಾರಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಸಿ ಜನರಲ್ ಆಸ್ಪತ್ರೆಯಲ್ಲಿ ಔಷಧಿ ಕೊರತೆ: ಬಡ ರೋಗಿಗಳ ಪರದಾಟ – Kannada News | Medicine Shortage Hit KC General Hospital In Bengaluru Patients Forced To Buy From Private Stores

ಕೆಸಿ ಜನರಲ್ ಆಸ್ಪತ್ರೆ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಜೂನ್ 23: ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆಸರೆಯಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳೇ ಇದೀಗ ರೋಗಿಗಳಿಗೆ ನಿರಾಸೆ ಮೂಡಿಸುತ್ತಿವೆ. ಬೆಂಗಳೂರು (Bengaluru) ನಗರದ ಪ್ರತಿಷ್ಠಿತ ಕೆಸಿ ಜನರಲ್ ಆಸ್ಪತ್ರೆಗೆ (KC General Hospital) ಬರುವ ನೂರಾರು ರೋಗಿಗಳಿಗೆ ಸರಿಯಾದ ಚಿಕಿತ್ಸೆಯೇನೋ ಸಿಗುತ್ತಿದೆ, ಆದರೆ ವೈದ್ಯರು ಬರೆದುಕೊಡುವ ಉಚಿತ ಔಷಧಿಗಳು ಮಾತ್ರ ಲಭ್ಯವಾಗುತ್ತಿಲ್ಲ. ಆಸ್ಪತ್ರೆಯ ಸಿಬ್ಬಂದಿ ‘ಸ್ಟಾಕ್ ಇಲ್ಲ’ ಎಂದು ಹೇಳುತ್ತಿದ್ದು, ಇದರಿಂದ ರೋಗಿಗಳು ಮತ್ತು ಅವರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಾಂಶಗಳು

  • ಉಚಿತ ಔಷಧಿ ವಿಭಾಗದಲ್ಲಿ ತೀವ್ರ ಸ್ಟಾಕ್ ಕೊರತೆ.
  • ಮಕ್ಕಳ ವಿಟಮಿನ್ ಡಿ ಸಿರಪ್‌ಗಳೂ ಲಭ್ಯವಿಲ್ಲ.
  • ಖಾಸಗಿ ಅಂಗಡಿಗಳಲ್ಲಿ ದುಬಾರಿ ಹಣಕ್ಕೆ ಖರೀದಿ.

ಹೊರಗಡೆ ಖರೀದಿಸುವಂತೆ ರೋಗಿಗಳಿಗೆ ಸೂಚನೆ

ಔಷಧಿ ಸಿಗದ ಬಗ್ಗೆ ಆಸ್ಪತ್ರೆಗೆ ಬರುವ ನೂರಾರು ಬಡ ರೋಗಿಗಳು ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ನಡೆಸಿ ಚೀಟಿ ಬರೆದುಕೊಟ್ಟರೆ, ಅಲ್ಲಿನ ಫಾರ್ಮಸಿಯಲ್ಲಿ ಅಗತ್ಯವಿರುವ ಮಾತ್ರೆ ಹಾಗೂ ಸಿರಪ್‌ಗಳು ಸಿಗುತ್ತಿಲ್ಲ. ಮಕ್ಕಳ ಪ್ರಮುಖ ವಿಟಮಿನ್ ಡಿ ಸಿರಪ್ ಸೇರಿದಂತೆ ಪ್ರಾಣರಕ್ಷಕ ಔಷಧಿಗಳ ಕೊರತೆ ಎದ್ದು ಕಾಣಿಸುತ್ತಿದೆ. ಆಸ್ಪತ್ರೆ ಸಿಬ್ಬಂದಿ ನಮ್ಮಲ್ಲಿ ಸ್ಟಾಕ್ ಇಲ್ಲ, ಹೊರಗಡೆಯೇ ಕೊಂಡುಕೊಳ್ಳಿ ಎಂದು ಉಡಾಫೆಯಾಗಿ ಹೇಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಾಗದಂತೆ ನಿರಂತರವಾಗಿ ಸ್ಟಾಕ್ ಇಡಲಾಗಿದೆ ಎಂದು ಹೇಳಿಕೆ ನೀಡುವ ಆರೋಗ್ಯ ಇಲಾಖೆಯ ನೈಜ ಸ್ಥಿತಿಗೆ ಕೆಸಿ ಜನರಲ್ ಆಸ್ಪತ್ರೆಯ ಸದ್ಯದ ಪರಿಸ್ಥಿತಿಯೇ ಸಾಕ್ಷಿಯಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನಸಾಮಾನ್ಯರಿಗೆ ಹೊರಗಿನ ಮೆಡಿಕಲ್ ಶಾಪ್‌ಗಳಲ್ಲಿ ನೂರಾರು ರೂಪಾಯಿ ನೀಡಿ ಮಾತ್ರೆಗಳನ್ನು ಖರೀದಿಸುವುದು ಭರಿಸಲಾಗದ ಹೊರೆಯಾಗಿದೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವವರಿಗೆ ಯುಟಿ ಖಾದರ್ ಬಿಗ್ ಗಿಫ್ಟ್! ದೂರುಗಳ ನಿವಾರಣೆಗೆ ಬರಲಿದೆ 24×7 ಹೆಲ್ಪ್‌ಲೈನ್

ನೂತನ ಆರೋಗ್ಯ ಸಚಿವರು ಕೂಡಲೇ ಈ ಗಂಭೀರ ಸಮಸ್ಯೆಯತ್ತ ಗಮನಹರಿಸಿ, ಬಡವರ ಆಸ್ಪತ್ರೆಯಲ್ಲಿ ಉಚಿತ ಔಷಧಿಗಳ ಸಮರ್ಪಕ ಸರಬರಾಜಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hindu Traditions: ಊಟ ಮಾಡಿದ ತಟ್ಟೆಯಲ್ಲೇ ಕೈ ತೊಳೆಯಬಾರದು ಅನ್ನೋದೇಕೆ? ಕಾರಣ ಇಲ್ಲಿದೆ – Kannada News | Why Not Wash Hands in Plate? Preserve Lakshmi, Health and Peace: Hindu Traditions

ಊಟದ ತಟ್ಟೆಯಲ್ಲೇ ಕೈ ತೊಳೆಯಬೇಡಿImage Credit source: Getty Images

ಮನೆಗಳಲ್ಲಿ ಹಿರಿಯರು ಸಾಮಾನ್ಯವಾಗಿ ಹೇಳುವ ಒಂದು ನಿಯಮವಿದೆ, “ಊಟ ಮಾಡಿದ ಅದೇ ತಟ್ಟೆಯಲ್ಲಿ ಕೈ ತೊಳೆಯಬೇಡಿ” ಎಂಬುದು. ಹಲವರು ಇದನ್ನು ಕೇವಲ ಹಳೇಕಾಲದ ಮೂಢನಂಬಿಕೆ ಎಂದು ನಿರ್ಲಕ್ಷಿಸುವುದುಂಟು. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಇದರ ಹಿಂದೆ ಆಧ್ಯಾತ್ಮಿಕ, ಜ್ಯೋತಿಷ್ಯ ಮತ್ತು ವೈಜ್ಞಾನಿಕ ಕಾರಣಗಳಿವೆ. ನಮ್ಮ ಸಂಸ್ಕೃತಿಯಲ್ಲಿ ಅನ್ನವನ್ನು ‘ಪರಬ್ರಹ್ಮ’ (ಅನ್ನದಾತ) ಎಂದು ಗೌರವಿಸಲಾಗುತ್ತದೆ. ಹಾಗಾದರೆ, ತಟ್ಟೆಯಲ್ಲೇ ಕೈ ತೊಳೆಯುವುದರಿಂದ ಆಗುವ ನಷ್ಟಗಳೇನು? ಇದರ ಹಿಂದಿನ ಅಸಲಿ ಕಾರಣಗಳೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಲಕ್ಷ್ಮಿ ಮತ್ತು ಅನ್ನಪೂರ್ಣ ದೇವಿಗೆ ಮಾಡುವ ಅವಮಾನ:

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಆಹಾರದ ಪ್ರಧಾನ ದೇವತೆ ಅನ್ನಪೂರ್ಣ ದೇವಿ. ಹಾಗೆಯೇ, ಸಂಪತ್ತಿನ ದೇವತೆಯಾದ ಲಕ್ಷ್ಮಿಯು ಅನ್ನವಿರುವಲ್ಲಿ ವಾಸಿಸುತ್ತಾಳೆ ಎಂಬ ನಂಬಿಕೆಯಿದೆ. ನಾವು ಆಹಾರ ಸೇವಿಸಿದ ತಟ್ಟೆಯಲ್ಲೇ ಕೈ ತೊಳೆದರೆ, ಅದು ಅನ್ನಕ್ಕೆ ಹಾಗೂ ದೇವತೆಗೆ ಮಾಡುವ ಅಪಚಾರ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅನ್ನಪೂರ್ಣ ಮತ್ತು ಲಕ್ಷ್ಮಿ ದೇವಿಯರು ಅಸಮಾಧಾನಗೊಂಡು, ಆ ಮನೆಯಲ್ಲಿ ಆಹಾರ ಮತ್ತು ಸಂಪತ್ತಿನ ಸಮೃದ್ಧಿ ಕ್ರಮೇಣ ಕಡಿಮೆಯಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ.

ದೇವತೆಗಳಿಗೆ ಮತ್ತು ನವಗ್ರಹಗಳಿಗೆ ಅಗೌರವ:

ಪೂಜೆ ಹಾಗೂ ಯಜ್ಞಗಳ ಸಂದರ್ಭದಲ್ಲಿ ದೇವತೆಗಳಿಗೆ ಅನ್ನವನ್ನೇ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಆದ್ದರಿಂದ ಆಹಾರವನ್ನು ಅತ್ಯಂತ ಪವಿತ್ರವೆಂದು ಭಾವಿಸಲಾಗುತ್ತದೆ. ಅಂತಹ ಪವಿತ್ರ ತಟ್ಟೆಯಲ್ಲೇ ಎಂಜಲು ಕೈ ತೊಳೆಯುವುದು ದೇವತೆಗಳಿಗೆ ಮಾಡುವ ಅಗೌರವವಾಗಿದೆ.

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಧಾನ್ಯ ಅಥವಾ ಆಹಾರ ಪದಾರ್ಥವು ಒಂದು ನಿರ್ದಿಷ್ಟ ಗ್ರಹವನ್ನು ಪ್ರತಿನಿಧಿಸುತ್ತದೆ (ಉದಾಹರಣೆಗೆ: ಅಕ್ಕಿ ಚಂದ್ರನನ್ನು ಪ್ರತಿನಿಧಿಸುತ್ತದೆ). ತಟ್ಟೆಯಲ್ಲಿ ಕೈ ತೊಳೆಯುವುದರಿಂದ ನವಗ್ರಹಗಳ ಕೆಟ್ಟ ದೃಷ್ಟಿ ಅಥವಾ ದೋಷಗಳು ನಮ್ಮನ್ನು ಕಾಡಬಹುದು ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ನಕಾರಾತ್ಮಕ ಶಕ್ತಿಗಳ ಪ್ರವೇಶ:

ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಆಹಾರವಿದ್ದ ಪಾತ್ರೆಯಲ್ಲಿ ಕೈ ತೊಳೆಯುವುದರಿಂದ ಉಂಟಾಗುವ ಅಶುದ್ಧತೆಯು ಮನೆಯೊಳಗೆ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಇದು ಮನೆಯ ಪ್ರಶಾಂತ ವಾತಾವರಣವನ್ನು ಕೆಡಿಸಿ, ಕುಟುಂಬದ ಸದಸ್ಯರ ಮಾನಸಿಕ ಶಾಂತಿಯ ಮೇಲೆ ಪರಿಣಾಮ ಬೀರಬಹುದು.

ಆರೋಗ್ಯದ ಹಿಂದಿರುವ ವೈಜ್ಞಾನಿಕ ಕಾರಣ:

ಕೇವಲ ಆಧ್ಯಾತ್ಮ ಮಾತ್ರವಲ್ಲ, ವಿಜ್ಞಾನ ಮತ್ತು ಆರೋಗ್ಯ ತಜ್ಞರು ಕೂಡ ತಟ್ಟೆಯಲ್ಲಿ ಕೈ ತೊಳೆಯುವುದನ್ನು ವಿರೋಧಿಸುತ್ತಾರೆ. ಊಟ ಮಾಡಿದ ನಂತರ ತಟ್ಟೆಯಲ್ಲೇ ಕೈ ತೊಳೆಯುವಾಗ, ಕೈಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಕೊಳಕು ನೀರಿನೊಂದಿಗೆ ತಟ್ಟೆಯಲ್ಲೇ ಉಳಿಯುತ್ತವೆ. ಒಂದು ವೇಳೆ ಆ ಪಾತ್ರೆಯನ್ನು ಸರಿಯಾಗಿ ತೊಳೆದು ಸ್ವಚ್ಛಗೊಳಿಸದಿದ್ದರೆ, ಮುಂದಿನ ಬಾರಿ ಅದರಲ್ಲಿ ಊಟ ಮಾಡುವಾಗ ಆ ಜೀವಾಣುಗಳು ದೇಹವನ್ನು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದಲೇ, ನೈರ್ಮಲ್ಯದ ದೃಷ್ಟಿಯಿಂದ ವಾಶ್‌ ಬೇಸಿನ್ ಅಥವಾ ಪ್ರತ್ಯೇಕ ಜಾಗದಲ್ಲಿ ಕೈ ತೊಳೆಯುವುದು ಅತ್ಯಂತ ಸೂಕ್ತ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:22 am, Tue, 23 June 26

Source link

ಸಿರಾಜ್​ರನ್ನು ಕೈ ಬಿಟ್ಟಿದ್ದೇಕೆ? ಟೀಮ್ ಇಂಡಿಯಾ ಮಾಜಿ ಆಟಗಾರನ ಪ್ರಶ್ನೆ – Kannada News | Why Was Siraj Dropped? Former India Cricketer Questions Selectors

ಇಂಗ್ಲೆಂಡ್​ ವಿರುದ್ಧದ ಸರಣಿಗೆ ಭಾರತ ಏಕದಿನ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಕಾಣಿಸಿಕೊಂಡಿಲ್ಲ ಎಂಬುದೇ ಅಚ್ಚರಿ. ಈ ಮೊದಲು ಟಿ20 ತಂಡಕ್ಕೆ ಆಯ್ಕೆಯಾಗಿದ್ದ ಸಿರಾಜ್ ಅವರನ್ನು ವಿಶ್ರಾಂತಿಯ ಕಾರಣ ಹೊರಗುಳಿಯುವಂತೆ ಸೂಚಿಸಲಾಗಿತ್ತು. ಅದರಂತೆ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಿಂದ ಸಿರಾಜ್ ಹೊರಗುಳಿದಿದ್ದಾರೆ. ಆದರೆ ಇದೀಗ ಏಕದಿನ ಸರಣಿಗೆ ಪ್ರಕಟಿಸಲಾದ ತಂಡದಿಂದ ಅವರನ್ನು ಕೈ ಬಿಡಲಾಗಿದೆ. ಆಯ್ಕೆಗಾರರ ಈ ನಿರ್ಧಾರಕ್ಕೆ ಭಾರತ ತಂಡದ ಮಾಜಿ ನಾಯಕ ಜಿ.ಆರ್. ವಿಶ್ವನಾಥ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಸೇರಿದಂತೆ ಹಲವು ದಿಗ್ಗಜರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದರುವ ಕೃಷ್ಣಮಾಚಾರಿ ಶ್ರೀಕಾಂತ್, ಯಾವುದೇ ರೀತಿಯಲ್ಲೂ ನೋಡಿದರೂ ಹರ್ಷಿತ್ ರಾಣಾ ಅವರಿಗಿಂತ ಮೊಹಮ್ಮದ್ ಸಿರಾಜ್ ಉತ್ತಮ ಆಯ್ಕೆಯಾಗಿದ್ದರು ನೇರವಾಗಿ ಹೇಳಿದ್ದಾರೆ.

ಏಕೆಂದರೆ ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ಚೆಂಡು ಸ್ವಿಂಗ್ ಆಗುತ್ತದೆ. ಈ ಹಿಂದೆ ಅಲ್ಲಿನ ಪಿಚ್​ಗಳಲ್ಲಿ ಆಡಿದ ಅನುಭವ ಸಿರಾಜ್​ಗೆ ಇದೆ. ಹೀಗಾಗಿ ಅವರಂತಹ ಅನುಭವಿ ಬೌಲರ್ ಟೀಮ್ ಇಂಡಿಯಾಗೆ ಅಗತ್ಯವಿತ್ತು ಎಂದು ಶ್ರೀಕಾಂತ್ ವಾದಿಸಿದ್ದಾರೆ.

ನನ್ನ ಪ್ರಕಾರ ಮೊಹಮ್ಮದ್ ಸಿರಾಜ್ ತಂಡದಲ್ಲಿರಬೇಕಿತ್ತು. ಇಲ್ಲಿ ಗುರ್ನೂರ್ ಬ್ರಾರ್​ರನ್ನು ಆಯ್ಕೆ ಮಾಡಿರುವುದು ಹೊಸಬರನ್ನು ಪ್ರೋತ್ಸಾಹಿಸುವ ಒಂದು ಮಾರ್ಗವಾಗಿದೆ. ಆದರೆ ಏಕದಿನ ಪಂದ್ಯಗಳಲ್ಲಿ ಅರ್ಷದೀಪ್ ಸಿಂಗ್ ಪ್ರದರ್ಶನ ಅಷ್ಟಕ್ಕಷ್ಟೇ. ಅವರ ಆಯ್ಕೆ ಯಾಕೆ? ಎಂದು ಶ್ರೀಕಾಂತ್ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ ಸಿರಾಜ್ ಅವರನ್ನು ಕೇವಲ ‘ಟೆಸ್ಟ್ ಸ್ಪೆಷಲಿಸ್ಟ್’ ಆಗಿ ಬಿಂಬಿಸಿ, ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ದೂರ ಇಡುತ್ತಿರುವುದು ಸರಿಯಲ್ಲ ಎಂಬುದನ್ನು ಕೂಡ ಕೃಷ್ಣಮಾಚಾರಿ ಶ್ರೀಕಾಂತ್ ಒತ್ತಿ ಹೇಳಿದ್ದಾರೆ.

ಕೃಷ್ಣಮಾಚಾರಿ ಶ್ರೀಕಾಂತ್ ಹೀಗೆ ಹೇಳಲು ಮುಖ್ಯ ಕಾರಣ, ಸಿರಾಜ್ ಅವರನ್ನು ಟಿ20 ಸರಣಿಗೆ ಆಯ್ಕೆ ಮಾಡಿ ಆ ಬಳಿಕ ತಂಡದಿಂದ ಕೈ ಬಿಟ್ಟಿರುವುದು. ಇಲ್ಲಿ ಟಿ20 ಸರಣಿಗಳಿಂದ ಕೈ ಬಿಡಲು ನೀಡಿದ ಕಾರಣ ವಿಶ್ರಾಂತಿ. ಈ ವಿಶ್ರಾಂತಿಯ ಬಳಿಕ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಬೇಕಿತ್ತಲ್ವಾ? ಎಂಬ ಪ್ರಶ್ನೆಯನ್ನು ಇದೀಗ ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳು ಮುಂದಿಡುತ್ತಿದ್ದಾರೆ.

ಇಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈ ಬಿಟ್ಟು ಆಯ್ಕೆ ಮಾಡಿರುವುದು ಹರ್ಷಿತ್ ರಾಣಾ ಅವರನ್ನು. ಅಂದರೆ 2026ರ ಟಿ20 ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಹರ್ಷಿತ್ ಕಳೆದ 4 ತಿಂಗಳುಗಳಿಂದ ಒಂದೇ ಒಂದು ಸ್ಪರ್ಧಾತ್ಮಕ ಪಂದ್ಯವಾಡಿಲ್ಲ. ಇದಾಗ್ಯೂ ಅವರನ್ನು ಟಿ20 ಹಾಗೂ ಏಕದಿನ ಸರಣಿಗಳಿಗೆ ಯಾವ ಮಾನದಂಡದ ಮೇಲೆ ಆಯ್ಕೆ ಮಾಡಿದ್ದೀರಿ ಎಂಬ ಪ್ರಶ್ನೆಗೆ ಬಿಸಿಸಿಐ ಕಡೆಯಿಂದ ಯಾವುದೇ ಉತ್ತರವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಇಂಗ್ಲೆಂಡ್‌ನಂತಹ ಸ್ವಿಂಗ್ ಮತ್ತು ಸೀಮ್ ಬೌಲಿಂಗ್‌ಗೆ ಸಹಕಾರಿಯಾದ ಪಿಚ್‌ಗಳಲ್ಲಿ ಮೊಹಮ್ಮದ್ ಸಿರಾಜ್ ಅವರಂತಹ ಅನುಭವಿ ಬೌಲರ್​ನನ್ನು ಕೈಬಿಟ್ಟಿರುವುದು ತಪ್ಪು ನಿರ್ಧಾರ ಎನ್ನಬಹುದು. ಇಲ್ಲಿ ಭವಿಷ್ಯದ ಹಿತದೃಷ್ಟಿಯಿಂದ ತಂಡ ಕಟ್ಟುತ್ತಿದ್ದರೂ, ತಂಡಕ್ಕೆ ಪಂದ್ಯ ಗೆಲ್ಲಿಸಿಕೊಡಬಲ್ಲ ಅನುಭವಿ ಆಟಗಾರರ ಅಗತ್ಯವಿರುತ್ತದೆ ಎಂಬ ವಿಚಾರವನ್ನು ಬಿಸಿಸಿಐ ಆಯ್ಕೆ ಸಮಿತಿ ಮರೆತಂತಿದೆ.

ಇದನ್ನೂ ಓದಿ: ಅದು ಮುಗಿದ ಅಧ್ಯಾಯ… ಎಲ್ಲಾ ಅಂತೆ-ಕಂತೆಗಳಿಗೆ ಬ್ರೇಕ್ ಹಾಕಿದ ವಿರಾಟ್ ಕೊಹ್ಲಿ

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್.

Published On – 8:58 am, Tue, 23 June 26

Source link

ವಿಜಯ್ ಬರ್ತ್‌ಡೇ ದಿನವೂ ಇಲ್ಲ ‘ಜನ ನಾಯಗನ್’ ಅಪ್‌ಡೇಟ್; ಸಿನಿಮಾ ಆಸೆಯನ್ನೇ ಕೈಬಿಟ್ಟಿತೇ ಚಿತ್ರತಂಡ? – Kannada News | CM Vijay’s ‘Jananaayagan’ Film Update Missing on his Birthday: Political Focus Delays Release

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಜೂನ್ 22ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಅವರ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾದಿಂದ ಏನಾದರೂ ಒಂದು ಅಪ್‌ಡೇಟ್ ಬರಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಚಿತ್ರತಂಡದಿಂದ ಯಾವುದೇ ಅಪ್‌ಡೇಟ್ ಬಂದಿಲ್ಲ. ವಿಜಯ್​ ಅವರಿಗೆ ಕೆವಿಎನ್ ಕಡೆಯಿಂದ ಕೇವಲ ಒಂದು ವಿಶ್ ಸಿಕ್ಕಿದೆ ಅಷ್ಟೇ. ಹೀಗಾಗಿ ಈ ಸಿನಿಮಾದ ಮೇಲಿನ ಆಸೆಯನ್ನು ಚಿತ್ರತಂಡದವರು ಸಂಪೂರ್ಣವಾಗಿ ಬಿಟ್ಟರೇ ಎಂಬ ಅನುಮಾನ ಈಗ ಮೂಡಿದೆ.

‘ಜನ ನಾಯಗನ್’ ಸಿನಿಮಾ ಜನವರಿ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ತಂಡದವರು ಸೆನ್ಸಾರ್​​ಗೆ ಅಪ್ಲೈ ಮಾಡಿದ್ದು ಕಳೆದ ವರ್ಷ ಡಿಸೆಂಬರ್​​ನಲ್ಲಿ. ಆದರೆ ಸೆನ್ಸಾರ್ ಪ್ರಮಾಣ ಪತ್ರ ಸಿಗದ ಕಾರಣಗಳಿಂದ ಸಿನಿಮಾ ಮುಂದೂಡಲ್ಪಟ್ಟಿತು. ವಿಜಯ್ ಮುಖ್ಯಮಂತ್ರಿಯಾದ ಮೇಲಾದರೂ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರದ ಬಿಡುಗಡೆ ಆಗಬಹುದು ಎಂದುಕೊಂಡಿದ್ದರು. ಅದೂ ಆಗಿಲ್ಲ. ಕೊನೆಪಕ್ಷ ವಿಜಯ್ ಜನ್ಮದಿನಕ್ಕೆ ಚಿತ್ರದ ರಿಲೀಸ್ ದಿನಾಂಕ ಪ್ರಕಟಿಸಬಹುದು ಎಂದು ಅಭಿಮಾನಿಗಳು ನಂಬಿದ್ದರು. ಆದರೆ ಪ್ರೊಡಕ್ಷನ್ ಹೌಸ್‌ನಿಂದ ಈ ಬಗ್ಗೆ ಪೋಸ್ಟ್ ಬಂದಿಲ್ಲ.

ಸಿನಿಮಾದಿಂದ ದೂರ ಸರಿದ ಸಿಎಂ ವಿಜಯ್:

ಚುನಾವಣೆ ಮುಗಿದ ಮೇಲೂ ವಿಜಯ್ ಅವರು ‘ಜನ ನಾಯಗನ್’ ಚಿತ್ರದ ನಿರ್ಮಾಪಕರ ಜೊತೆ ಉತ್ತಮ ಒಡನಾಟದಲ್ಲೇ ಇದ್ದಾರೆ. ಆದರೂ ಸಿನಿಮಾ ಬಗ್ಗೆ aವರು ಮಾತನಾಡುತ್ತಿಲ್ಲ. ಜನರು ತಮ್ಮನ್ನು ಒಬ್ಬ ಗಂಭೀರ ಮತ್ತು ಪೂರ್ಣಾವಧಿ ರಾಜಕಾರಣಿಯಾಗಿ ಮಾತ್ರ ನೋಡಬೇಕು ಎಂದು ಅವರು ಬಯಸುತ್ತಿದ್ದಾರೆ ಎನ್ನಲಾಗಿದೆ. ಇನ್ನು, ಸೆನ್ಸಾರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿಲ್ಲ. ಇದು ಕೂಡ ಸಿನಿಮಾ ವಿಳಂಬಕ್ಕೆ ಕಾರಣ.

ಇದನ್ನೂ ಓದಿ: ವಿಜಯ್ ನಗುವನ್ನು ಕಿತ್ತುಕೊಂಡಿತು ಆ ಸಾವು; ಸಂಪೂರ್ಣವಾಗಿ ಬದಲಾದ ದಳಪತಿ

ಬಿಡುಗಡೆ ಮತ್ತಷ್ಟು ವಿಳಂಬ

ವಿಜಯ್ ಅವರು ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಸಿನಿಮಾ ಕಾರ್ಯಕ್ರಮಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ತಮ್ಮ ಉಪಸ್ಥಿತಿಯಿಂದಾಗಿ ರಾಜಕೀಯಕ್ಕೆ ಯಾವುದೇ ಧಕ್ಕೆ ಬರಬಾರದು ಎಂಬುದು ಅವರ ಉದ್ದೇಶವಾಗಿದೆ. ‘ಜನ ನಾಯಗನ್’ ಸಿನಿಮಾ ಭವಿಷ್ಯದಲ್ಲಿ ಚಿತ್ರಮಂದಿರಗಳಿಗೆ ಬರುವುದು ಖಚಿತವಾದರೂ, ಅದು ತೆರೆಗೆ ಬರಲು ಇನ್ನು ಸಾಕಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಚಿತ್ರತಂಡದವರು ಸಿನಿಮಾ ಮೇಲಿನ ಆಸೆಯನ್ನು ಸಂಪೂರ್ಣವಾಗಿ ಕೈ ಬಿಟ್ಟಂತೆಯೂ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ – Kannada News | Kanakapura Senior Seer Sri Mummadi Nirvana Swamiji Passes Away at 84; CM D.K. Shivakumar to Pay Last Respects

ರಾಮನಗರ, ಜೂನ್ 23: ಕನಕಪುರ ದೇಗುಲ ಮಠದ ಹಿರಿಯ ಶ್ರೀಗಳಾದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಗಳು 84ನೇ ವಯಸ್ಸಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಹಲವು ದಶಕಗಳ ಕಾಲ ಸಮಾಜಕ್ಕೆ ಸತ್ಕಾರ್ಯಗಳ ಮೂಲಕ ಸೇವೆ ಸಲ್ಲಿಸಿ ಜನಾನುರಾಗಿಗಳಾಗಿದ್ದ ಶ್ರೀಗಳ ನಿಧನಕ್ಕೆ ಭಕ್ತ ಸಮೂಹ ಕಂಬನಿ ಮಿಡಿದಿದೆ. ಶ್ರೀಗಳ ಅಂತಿಮ ದರ್ಶನ ಪಡೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಕಪುರ ದೇಗುಲ ಮಠಕ್ಕೆ ಇಂದು ಬೆಳಗ್ಗೆ 10 ಗಂಟೆಗೆ ಭೇಟಿ ನೀಡಲಿದ್ದಾರೆ. ಮೃತರ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿ, ಅಂತಿಮ ದರ್ಶನ ಪಡೆಯಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ, ಅಭಿಷೇಕ್ ಬ್ಯಾನರ್ಜಿ ಅಮಾನತು, ಅರೂಪ್ ರಾಯ್ ಹೊಸ ಮುಖ್ಯಸ್ಥ – Kannada News | TMC: Mamata Banerjee Ousted, Abhishek Suspended, Arup Roy New President

ಕೋಲ್ಕತ್ತಾ, ಜೂನ್ 23: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರಿ ಆಲಿಕಲ್ಲು ಮಳೆ ಸುರಿದಂತಾಗಿದೆ. ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ಎದುರು ಸೋಲುಂಡಿರುವ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಒಳಗೆ ಹೊಗೆಯಾಡುತ್ತಿದ್ದ ಆಂತರಿಕ ಕಲಹವು ಈಗ ಸ್ಫೋಟಗೊಂಡಿದ್ದು, ಬಂಡಾಯ ನಾಯಕರು ದೀರ್ಘಕಾಲದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ(Mamata Banerjee) ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದಾರೆ. ಇದರ ಜೊತೆಗೆ ಮಮತಾ ಅವರ ಸೋದರಸಬಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನೂ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಕೋಲ್ಕತ್ತಾದ ನ್ಯೂಟೌನ್‌ನಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಬಂಡಾಯ ಬಣದ ತರಾತುರಿಯ ವಿಶೇಷ ಸಭೆಯಲ್ಲಿ ಈ ಐತಿಹಾಸಿಕ ಮತ್ತು ಆಘಾತಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರುತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಶಿಬಿರವು ಮಮತಾ ಬ್ಯಾನರ್ಜಿ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ಟಿಎಂಸಿಯ ಹೊಸ ಅಖಿಲ ಭಾರತ ಅಧ್ಯಕ್ಷರನ್ನಾಗಿ ಘೋಷಿಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯವೈಖರಿ ವಿರುದ್ಧ ಅಸಮಾಧಾನಗೊಂಡಿದ್ದ ಬಂಡಾಯ ನಾಯಕರು, ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ನಿರ್ಣಯಕ್ಕೆ ಸರ್ವಾನುಮತದಿಂದ ಸಹಿ ಹಾಕಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಮರಳಿ ತರಲು 20 ಸದಸ್ಯರ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (NWC) ರಚಿಸಲಾಗಿದೆ. ಇದರಲ್ಲಿ ಹಿರಿಯ ನಾಯಕ ಫಿರ್ಹಾದ್ ಹಕೀಮ್ ಸೇರಿದಂತೆ 12 ಪ್ರಮುಖ ನಾಯಕರನ್ನು ಸೇರಿಸಿಕೊಳ್ಳಲಾಗಿದೆ.

ವಿಧಾನಸಭೆಯಲ್ಲಿ ಬಜೆಟ್ ಮಂಡನೆಯಾದ ತಕ್ಷಣವೇ ಬಂಡಾಯ ನಾಯಕರು ರಹಸ್ಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಋತಬ್ರತಾ ಬ್ಯಾನರ್ಜಿ, ಫಿರ್ಹಾದ್ ಹಕೀಮ್, ಅರೂಪ್ ರಾಯ್, ಜಾವೇದ್ ಖಾನ್ ಮತ್ತು ರತಿನ್ ಘೋಷ್ ಸೇರಿದಂತೆ ಹಲವು ಶಾಸಕರು ಮತ್ತು ಮುಖಂಡರು ಭಾಗವಹಿಸಿದ್ದರು. ತಾವುಗಳೇ ಅಸಲಿ ತೃಣಮೂಲ ಕಾಂಗ್ರೆಸ್ ಎಂದು ಈ ಬಣ ಹೇಳಿಕೊಂಡಿದೆ.

ಮತ್ತಷ್ಟು ಓದಿ: ಟಿಎಂಸಿ ಬಿಕ್ಕಟ್ಟಿನ ನಡುವೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ

ಪಕ್ಷದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದ ಮಮತಾ ಬ್ಯಾನರ್ಜಿ ಅವರನ್ನೇ ಕುರ್ಚಿಯಿಂದ ಇಳಿಸಿರುವ ಈ ನಡೆ ಇಡೀ ದೇಶದ ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿದೆ. ಆದರೆ, ಈ ಭಾರಿ ಬಂಡಾಯದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಲಿ ಅಥವಾ ಅವರ ಅಧಿಕೃತ ಟಿಎಂಸಿ ನಾಯಕತ್ವವಾಗಲಿ ತಕ್ಷಣಕ್ಕೆ ಯಾವುದೇ ಔಪಚಾರಿಕ ಪ್ರತಿಕ್ರಿಯೆ ನೀಡಿಲ್ಲ.
ಮುಂಬರುವ ದಿನಗಳಲ್ಲಿ ಈ ಆಂತರಿಕ ಯುದ್ಧವು ಕೋರ್ಟ್ ಮೆಟ್ಟಿಲೇರುವ ಅಥವಾ ಮಮತಾ ಬ್ಯಾನರ್ಜಿ ಅವರ ಸರ್ಕಾರಕ್ಕೇ ಕಂಟಕ ತರುವ ಸಾಧ್ಯತೆಗಳಿದ್ದು, ಪಶ್ಚಿಮ ಬಂಗಾಳದ ರಾಜಕೀಯ ಭವಿಷ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Tuesday Beliefs: ಮಂಗಳವಾರ ಹೊಸ ಕೆಲಸ ಆರಂಭಿಸಬಾರದೇ? ಶಾಸ್ತ್ರಗಳು ಹೇಳುವುದೇನು? – Kannada News | Tuesday Beliefs and Misconceptions: Uncover the Truth! Is it Inauspicious or Holy?

ಮಂಗಳವಾರ ಮತ್ತು ಹನುಮದ್ ಭಕ್ತಿImage Credit source: poojn.in

ನಮ್ಮ ಸಮಾಜದಲ್ಲಿ ವಾರದ ಒಂದೊಂದು ದಿನಕ್ಕೂ ಒಂದೊಂದು ರೀತಿಯ ನಂಬಿಕೆಗಳಿವೆ. ಅದರಲ್ಲಿಯೂ ಮಂಗಳವಾರ ಎಂದರೆ ಸಾಕು, ಅನೇಕರಲ್ಲಿ ಒಂದು ರೀತಿಯ ಅಂಜಿಕೆ ಅಥವಾ ಹಿಂಜರಿಕೆ ಇರುತ್ತದೆ. “ಮಂಗಳವಾರ ಯಾವುದೇ ಹೊಸ ಕೆಲಸ ಶುರು ಮಾಡಬಾರದು, ಅದು ಶುಭವಲ್ಲ” ಎಂಬ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಆದರೆ, ಈ ನಂಬಿಕೆಯ ಹಿಂದೆ ಇರುವುದು ಸತ್ಯವೇ ಅಥವಾ ಕೇವಲ ತಪ್ಪು ಕಲ್ಪನೆಯೇ? ಇದರ ಹಿಂದಿನ ವಾಸ್ತವವನ್ನು ಇಲ್ಲಿ ತಿಳಿದುಕೊಳ್ಳಿ.

ತಪ್ಪು ಕಲ್ಪನೆಗೆ ಕಾರಣವೇನು? ಹಿರಿಯರ ಮಾತು ಬದಲಾದದ್ದು ಹೇಗೆ?

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಹೇಳುತ್ತಿದ್ದ ಮಾತುಗಳನ್ನು ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದೇ ಈ ಎಲ್ಲ ಗೊಂದಲಗಳಿಗೆ ಮುಖ್ಯ ಕಾರಣ. ಹಿರಿಯರು, “ಮಂಗಳವಾರದಂದು ಯಾವುದೇ ನಿಷ್ಪ್ರಯೋಜಕ ಮತ್ತು ಕೆಟ್ಟ ಕೆಲಸಗಳನ್ನು ಮಾಡಬೇಡಿ” ಎಂದು ಹೇಳಿದ್ದರು. ಅಂದರೆ, ದಿನದ ಮಹತ್ವವನ್ನು ಅರಿತು ಒಳ್ಳೆಯ ಕೆಲಸಗಳಿಗೆ ಆದ್ಯತೆ ನೀಡಿ ಎಂಬುದು ಅವರ ಆಶಯವಾಗಿತ್ತು.

ಆದರೆ, ಕಾಲಕ್ರಮೇಣ ಜನರು ಇದನ್ನು “ಮಂಗಳವಾರವೇ ಒಳ್ಳೆಯ ದಿನವಲ್ಲ” ಎಂದು ತಪ್ಪಾಗಿ ಭಾವಿಸಿದರು. ಕೊನೆಗೆ, ಇದು ಎಷ್ಟು ವಿಕೋಪಕ್ಕೆ ಹೋಯಿತೆಂದರೆ, ಮಂಗಳವಾರ ದೆವ್ವ-ಭೂತಗಳು ಸಂಚರಿಸುವ ದಿನ ಎಂಬ ಅನಗತ್ಯ ಭಯವೂ ಜನರ ಮನಸ್ಸಿನಲ್ಲಿ ಮನೆಮಾಡಿತು.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ವಿಜ್ಞಾನ ಮತ್ತು ಆಧ್ಯಾತ್ಮದ ಸಕಾರಾತ್ಮಕ ದೃಷ್ಟಿಕೋನ:

ನಾವು ನಂಬಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ವಾಸ್ತವವು ಸಂಪೂರ್ಣವಾಗಿ ಭಿನ್ನವಾಗಿದೆ. ಮಂಗಳವಾರ ಅತ್ಯಂತ ಪ್ರಶಸ್ತವಾದ ದಿನ ಎಂದು ಆಧ್ಯಾತ್ಮಿಕ ಚಿಂತನೆಗಳು ತಿಳಿಸುತ್ತವೆ. ಈ ದಿನದಂದು ನಾವು ಮಾಡುವ ಶುಭ ಕಾರ್ಯಗಳು, ಹೂಡಿಕೆಗಳು ಮತ್ತು ಖರೀದಿಗಳು ಅದೃಷ್ಟ ಹಾಗೂ ಜೀವನದಲ್ಲಿ ಬೆಳವಣಿಗೆಯನ್ನು ತರುತ್ತವೆ. ಹಿರಿಯರ ನಂಬಿಕೆಗಳ ಪ್ರಕಾರ, ನೀವು ಮಂಗಳವಾರ ಬ್ಯಾಂಕಿನಲ್ಲಿ ಸ್ವಲ್ಪ ಹಣವನ್ನು ಠೇವಣಿ ಇಟ್ಟರೆ, ಶೀಘ್ರದಲ್ಲೇ ನಿಮಗೆ ಮತ್ತೆ ಹೆಚ್ಚಿನ ಹಣವನ್ನು ಉಳಿಸುವ ಅಥವಾ ಠೇವಣಿ ಇಡುವ ಸುವರ್ಣ ಅವಕಾಶಗಳು ಸಿಗುತ್ತವೆ.

ಮಂಗಳವಾರ ಮತ್ತು ಹನುಮದ್ ಭಕ್ತಿ:

ಹಿಂದೂ ಧರ್ಮ ಮತ್ತು ಸಂಪ್ರದಾಯದಲ್ಲಿ ಮಂಗಳವಾರಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಏಕೆಂದರೆ ಈ ದಿನವನ್ನು ಶ್ರೀ ಆಂಜನೇಯನಿಗೆ (ಹನುಮಂತನಿಗೆ) ಸಮರ್ಪಿಸಲಾಗಿದೆ. ಈ ದಿನ ಹನುಮಂತನನ್ನು ಭಕ್ತಿಯಿಂದ ಆರಾಧಿಸುವುದರಿಂದ, ಹನುಮಾನ್ ಚಾಲೀಸಾ ಪಠಿಸುವುದರಿಂದ ಮತ್ತು ಸಿಂಧೂರ ಪೂಜೆ ಮಾಡುವುದರಿಂದ ಮನಸ್ಸಿನ ಭಯ ದೂರವಾಗುತ್ತದೆ. ಜೀವನದಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಶತ್ರುಗಳ ಕಾಟ ಮತ್ತು ನಕಾರಾತ್ಮಕ ದೃಷ್ಟಿಗಳಿಂದ ರಕ್ಷಣೆ ಸಿಗುತ್ತದೆ ಎಂದು ಆಧ್ಯಾತ್ಮಿಕ ಗ್ರಂಥಗಳು ಸ್ಪಷ್ಟಪಡಿಸುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಎಂಟಿಸಿ ಪ್ರಯಾಣಿಕರಿಗೆ ಬೆಲೆ ಏರಿಕೆ ಬರೆ: ದೀರ್ಘ ಪ್ರಯಾಣದ ಬಸ್ ಪಾಸ್ ದರ ಇಂದಿನಿಂದ ದುಬಾರಿ – Kannada News | BMTC Bus pass price Hike: Introduces Extended Area Pass For Rs 1500, Clarifies No Hike In Regular Monthly Bus Pass

ಬಿಎಂಟಿಸಿ ಬಸ್​ಗಳು (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜೂನ್ 23: ಬಿಎಂಟಿಸಿ ಬಸ್​ಗಳ (BMTC Buses) ಕಾರ್ಯವ್ಯಾಪ್ತಿ ವಿಸ್ತರಿಸಲ್ಪಟ್ಟಿರುವುದರಿಂದ ದೀರ್ಘ ಪ್ರಯಾಣದ ಬಸ್ ಪಾಸ್ ದರವನ್ನು 1200 ರೂ.ನಿಂದ 1500 ರೂ.ಗೆ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ಇಂದಿನಿಂದಲೇ (ಜೂನ್ 23) ಜಾರಿಗೆ ಬರುತ್ತಿದೆ. ಆದರೆ, ಸಾಮಾನ್ಯ ಮಾಸಿಕ ಬಸ್ ಪಾಸಿನ ದರ 1200 ರೂ. ಮುಂದುವರಿಯಲಿದೆ. ಬೆಂಗಳೂರಿನ ಹೊರವಲಯದ ಜಿಲ್ಲೆ ಹಾಗೂ ತಾಲೂಕುಗಳಿಗೆ ಪ್ರಯಾಣಿಸುವವರಿಗಾಗಿ ‘ವಿಸ್ತಾರ ಮಾಸಿಕ ಪಾಸ್ (Extended Area Pass)’ ಪರಿಚಯಿಸಲಾಗುತ್ತಿದ್ದು, ಅದಕ್ಕೆ ದರ 1500 ರೂ. ನಿಗದಿಪಡಿಸಲಾಗಿದೆ. ಟಿಕೆಟ್ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿರುವ ಬೆನ್ನಲ್ಲೇ ಈ ದರ ಏರಿಕೆ ಮಾಡಿರುವುದು ಪ್ರಯಾಣಿಕರಲ್ಲಿ ಗೊಂದಲ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಸಾಮಾನ್ಯ ಮಾಸಿಕ ಪಾಸಿನ ದರ 1200 ರೂ. ಯಥಾಸ್ಥಿತಿ.
  • ದೂರದ ಊರುಗಳ ಪ್ರಯಾಣಕ್ಕೆ 1500 ರೂ. ವಿಸ್ತಾರ ಪಾಸ್.
  • ಎಸಿ ಬಸ್ ಪಾಸ್ ದರ 2500 ರೂ.ಗೆ ಏರಿಕೆ ಸಂಭವ.

ಕಾರ್ಯಾಚರಣೆ ವ್ಯಾಪ್ತಿ ಹೆಚ್ಚಳವೇ ಕಾರಣ

ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಪ್ರಭಾಕರ್ ರೆಡ್ಡಿ ಅವರ ಪ್ರಕಾರ, ಈ ಹಿಂದೆ ಬೆಂಗಳೂರು ನಗರ ಕೇಂದ್ರದಿಂದ ಕೇವಲ 40 ರಿಂದ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು, ಈಗ ಸರ್ಕಾರದ ಆದೇಶದಂತೆ 65 ರಿಂದ 70 ಕಿಲೋಮೀಟರ್ ದೂರದ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ ಮತ್ತು ಮಾಲೂರು ವರೆಗೂ ಸಂಚಾರ ವಿಸ್ತರಿಸಿವೆ. ಈ ವಿಸ್ತರಿತ ಪ್ರದೇಶಗಳಲ್ಲಿ ಸಂಚರಿಸುವ ಸಾರ್ವಜನಿಕರ ಅನುಕೂಲಕ್ಕಾಗಿ 1500 ರೂಪಾಯಿಯ ವಿಸ್ತಾರ ಮಾಸಿಕ ಪಾಸ್ ನೀಡಲಾಗುತ್ತಿದೆ. ನಗರದ ಒಳಗಡೆ ಪ್ರಯಾಣಿಸುವವರಿಗೆ ಹಳೆಯ 1200 ರೂಪಾಯಿಯ ಪಾಸುಗಳೇ ಸಿಗಲಿವೆ.

ಎಸಿ ಬಸ್ ಪಾಸ್ ದರವೂ ಏರಿಕೆ ಸಾಧ್ಯತೆ

ಇದೇ ವೇಳೆ ಬಿಎಂಟಿಸಿಯ ವಜ್ರ (AC) ಬಸ್ಸುಗಳ ಮಾಸಿಕ ಪಾಸ್ ದರವನ್ನು ಸಹ ಹೆಚ್ಚಿಸಲು ನಿಗಮ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಸದ್ಯ 2000 ರೂಪಾಯಿ ಇರುವ ಎಸಿ ಬಸ್ ತಿಂಗಳ ಪಾಸನ್ನು 2500 ರೂಪಾಯಿಗೆ ಏರಿಕೆ ಮಾಡಲು ಪ್ಲಾನ್ ಮಾಡಲಾಗುತ್ತಿದೆ. ಒಂದು ಕಡೆ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ನೀಡಲಾಗುತ್ತಿದ್ದು, ಸಂಸ್ಥೆಯನ್ನು ಆರ್ಥಿಕ ನಷ್ಟದಿಂದ ಬಚಾವ್ ಮಾಡಲು ಪುರುಷ ಸಾರ್ವಜನಿಕರ ಮೇಲೆ ಪರೋಕ್ಷವಾಗಿ ಹೊರೆ ಹೊರಿಸಲಾಗುತ್ತಿದೆ ಎಂದು ಬಿಎಂಟಿಸಿ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾನು ಬಾಲ್ಯದಲ್ಲಿ ತುಂಬಾ ಕಷ್ಟ ಅನುಭವಿಸಿದ್ದೆ, ನನ್ನ ಮಗುವಿಗೆ ಹಾಗೆ ಆಗಬಾರದು’; ಸಮಂತಾ – Kannada News | Samantha’s Emotional Vow: Overcoming Childhood Hardships for Child’s Luxurious Future

ಟಾಲಿವುಡ್ ನಟಿ ಸಮಂತಾ ಅವರ ಕಂಬ್ಯಾಕ್ ಭರ್ಜರಿಯಾಗಿ ನಡೆದಿದೆ. ಅವರ ನಿರ್ಮಾಣ ಹಾಗೂ ನಟನೆಯ ‘ಮಾ ಇಂಟಿ ಬಂಗಾರಂ’ ಚಿತ್ರವು (Maa Inti Bangaram) ಜೂನ್ 19 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ 4 ದಿನಗಳಲ್ಲಿ ಈ ಸಿನಿಮಾ ವಿಶ್ವಾದ್ಯಂತ ಒಟ್ಟು 46.04 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರದ ಪ್ರಚಾರದ ವೇಳೆ ಸಮಂತಾ ಬೇಬಿ ಬಂಪ್ ಫೋಟೋಗಳು ವೈರಲ್ ಆಗಿವೆ. ಈ ವೇಳೆ ಸಮಂತಾ ಈ ಹಿಂದೆ ಮಾಡಿದ್ದ ಕಾಮೆಂಟ್‌ಗಳು ಈಗ ಎಲ್ಲೆಡೆ ಸದ್ದು ಮಾಡುತ್ತಿವೆ.

ಸಮಂತಾ ತಮಗೆ ಹುಟ್ಟುವ ಮಕ್ಕಳ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ‘ನನ್ನ ಮಗುವೇ ನನ್ನ ಪ್ರಪಂಚ. ಕೆಲಸ ಮಾಡುವ ಮತ್ತು ಮಕ್ಕಳನ್ನು ಹಾಗೂ ಮನೆಯ ಜವಾಬ್ದಾರಿಗಳನ್ನು ನೋಡಿಕೊಳ್ಳುವ ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಬಾಲ್ಯದಲ್ಲಿ ನಾನು ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದೆ. ಅಂತಹ ಬಾಲ್ಯವನ್ನು ಕಳೆದವರೆಲ್ಲರೂ ತಮ್ಮ ಮಕ್ಕಳಿಗೆ ಐಷಾರಾಮಿ ಜೀವನವನ್ನು ನೀಡಲು ಬಯಸುತ್ತಾರೆ. ಈಗ ನಾನು ಅದನ್ನೇ ನಿರ್ಧರಿಸಿದ್ದೇನೆ’ ಎಂದು ಸಮಂತಾ ಹೇಳಿದ್ದರು.

‘ನನಗೆ ಮಕ್ಕಳಾದ ನಂತರ, ನಾನು ಅವರನ್ನು ಕೆಲವು ವರ್ಷಗಳ ಕಾಲ ಎಲ್ಲೂ ಬಿಟ್ಟು ಹೋಗುವುದಿಲ್ಲ. ನಾನು ಅವರನ್ನು ನನ್ನ ಎಲ್ಲವೂ ಎಂದು ಪ್ರೀತಿಯಿಂದ ನೋಡಿಕೊಳ್ಳುತ್ತೇನೆ’ ಎಂದು ಹೇಳಿದ್ದರು. ಸಮಂತಾ ಅವರ ಈ ಹಳೆಯ ಮಾತುಗಳು ಈಗ ವೈರಲ್ ಆಗುತ್ತಿದೆ. ಸಮಂತಾ-ರಾಜ್ ಶೀಘ್ರದಲ್ಲೇ ಸಿಹಿ ಸುದ್ದಿ ಘೋಷಿಸಲಿ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮಗು ಜನಿಸಿದ ಬಳಿಕ ಅವರು ಸಿನಿಮಾ ರಂಗದಿಂದ ದೂರ ಇರುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ‘ಮಾ ಇಂಟಿ ಬಂಗಾರಂ’ ಹಾಗೂ ‘ಕಾಕ್‌ಟೇಲ್ 2’ ಚಿತ್ರಗಳ ಗಳಿಕೆ ಎಷ್ಟು?

ಇನ್ನು ಸಿನಿಮಾದ ಕಲೆಕ್ಷನ್ ವಿಚಾರಕ್ಕೆ ಬಂದರೆ, ‘ಮಾ ಇಂಟಿ ಬಂಗಾರಂ’ ನಾಲ್ಕನೇ ದಿನ ಭಾರತದಲ್ಲಿ 4.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದು, ದೇಶದ ಒಟ್ಟು ಗ್ರಾಸ್ ಕಲೆಕ್ಷನ್ 31.44 ಕೋಟಿ ರೂಪಾಯಿ ತಲುಪಿದೆ. ಇನ್ನು ವಿದೇಶಗಳಲ್ಲಿ 4ನೇ ದಿನ 1.00 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟು ಓವರ್‌ಸೀಸ್ ಕಲೆಕ್ಷನ್ 14.60 ಕೋಟಿ ರೂಪಾಯಿಆಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ದಿಗಂತ್, ಶ್ರೀಮುಖಿ ಮತ್ತು ಗೌತಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version